‘ದೇಶ ಸುತ್ತು ಕೋಶ ಓದು’ ಎಂಬುದು ಹಿರಿಯರ ನಾಣ್ಣುಡಿ.  ನಾಣ್ಣುಡಿ ಎಂದಮೇಲೆ ಅದೆಂದೂ ಸುಳ್ಳಾಗುವ ಮಾತಿಲ್ಲವಲ್ಲ. ಓದಿನ ಬಲವು ಸುತ್ತಾಟವನ್ನು ಇನ್ನಷ್ಟು ಆಪ್ತವಾಗಿಸುತ್ತದೆ. ಸುತ್ತಾಟದ ಅನುಭವವು ಓದಿಗೆ  ಮತ್ತಷ್ಟು ಪ್ರೇರಣೆ ನೀಡುತ್ತದೆ. ಹೀಗೆ ಪರಸ್ಪರ ಪೂರಕವಾಗಿರುವ ಇವು ಒಟ್ಟಾಗಿ ಮನುಷ್ಯನ ವ್ಯಕ್ತಿತ್ವವನ್ನು ವಿಕಾಸಗೊಳಿಸುತ್ತವೆ. ಓದು ಮತ್ತು ಪ್ರವಾಸವನ್ನು ಏಕಕಾಲಕ್ಕೇ ಇಷ್ಟಪಡುವ ಗಿರಿಧರ್ ಗುಂಜಗೋಡು, ತಮ್ಮ ಓದಿನ ಹಿನ್ನೆಲೆಯನ್ನಿಟ್ಟುಕೊಂಡು ಬರಹಗಳನ್ನು ಬರೆಯಲಿದ್ದಾರೆ.  ಪುಸ್ತಕಗಳ ಓದಿನ  ಹೂರಣಕ್ಕಷ್ಟೇ ಸೀಮಿತವಾಗದೇ ವಿಸ್ತಾರವಾದ ಹರವಿನೊಂದಿಗೆ ಅವರು ಬರೆಯುವ ‘ಓದುವ ಸುಖ’ ಎಂಬ ಅಂಕಣ ಇನ್ನು ಮುಂದೆ ಹದಿನೈದು ದಿನಗಳಿಗೊಮ್ಮೆ ಕೆಂಡಸಂಪಿಗೆಯಲ್ಲಿ ಪ್ರಕಟವಾಗಲಿದೆ. 

 

ನನ್ನ ಹುಟ್ಟೂರಿನ ತಾಲೂಕು ಕೇಂದ್ರವಾದ ಸಿದ್ದಾಪುರದ ಹಳೆ ಬಸ್ಟಾಂಡಿನ ಎದುರು ಹೆರ್ಲೇಕರ್ ಅನ್ನುವವರ ಒಂದು ಪುಸ್ತಕದ ಅಂಗಡಿಯಿತ್ತು. ಅಲ್ಲಿ ನಿಯತಕಾಲಿಕೆಗಳು ಮಾತ್ರವಲ್ಲದೇ ಅನೇಕ ಕನ್ನಡ ಸಾಹಿತ್ಯದ ಪುಸ್ತಕಗಳು ಲಭ್ಯವಿದ್ದವು. ಚಿಕ್ಕಂದಿನಲ್ಲಿ ಬಾಲಮಂಗಳ, ಚಂಪಕ ಇತ್ಯಾದಿ ಪುಸ್ತಕಗಳನ್ನೂ ಆಮೇಲೆ ತೇಜಸ್ವಿ, ಭೈರಪ್ಪ, ರವಿ ಬೆಳಗೆರೆ ಇತ್ಯಾದಿ ಲೇಖಕರ ಪುಸ್ತಕಗಳನ್ನೂ ಅಲ್ಲೇ ಕೊಂಡುಕೊಳ್ಳುತ್ತಿದ್ದೆ.

ಆಗ ನಾನು ಎಂಟನೆಯೋ ಒಂಭತ್ತನೆಯೋ ತರಗತಿಯಲ್ಲಿದ್ದೆ ಅನ್ನಿಸುತ್ತದೆ, ಒಂದು ದಿನ ಅಲ್ಲಿ ತೇಜಸ್ವಿಯವರ ನಾನು ಅದುವರೆಗೂ ಓದಿರದ ಮಿಲೇನಿಯಂ ಸರಣಿಯ ಯಾವುದಾದರೂ ಪುಸ್ತಕವನ್ನು ಕೊಂಡುಕೊಳ್ಳಲು ಹೋಗಿದ್ದೆ. ಆದರೆ ಅಂದು ನಾನು ಬಯಸಿದ ಪುಸ್ತಕಗಳು ಇರಲಿಲ್ಲ. ಇದ್ದ ಪುಸ್ತಕಗಳನ್ನು ನಾನಾಗಲೇ ಓದಿ ಮುಗಿಸಿದ್ದೆ. ಆಗ ಅಲ್ಲಿ ಪುಸ್ತಕ ಪ್ರಕಾಶನದ್ದೇ ಇನ್ನೊಂದು ಪುಸ್ತಕ ಕಂಡಿತು. ಲೇಖಕರ ಹೆಸರಿನಲ್ಲಿ (ಅಂದರೆ ಅನುವಾದಕರ) ‘ಪ್ರದೀಪ ಕೆಂಜಿಗೆ’ ಅಂತ ಆ ದಿನದವರೆಗೂ ಹೆಸರೇ ಕೇಳಿರದ ಲೇಖಕನ ಹೆಸರನ್ನು ನೋಡಿ ಬೇಸರವಾದರೂ ‘ಅದ್ಭುತ ಯಾನ’ ಅನ್ನುವ ಹೆಸರು ಕುತೂಹಲ ಕೆರಳಿಸಿದ ಕಾರಣ ಧೈರ್ಯ ಮಾಡಿ ತೆಗೆದುಕೊಂಡೆ. ಅಮೇಲೆ ಅವರು ಅನೇಕ ವಿಷಯಗಳಲ್ಲಿ ತೇಜಸ್ವಿಯವರ ಜೊತೆಗಾರರಾಗಿದ್ದರು ಮತ್ತು ಪ್ಯಾಪಿಲಾನ್ ಸರಣಿಯಲ್ಲೂ ಅವರ ಕೊಡುಗೆ ಬಹಳ ಎಂದು ತಿಳಿದು ಬಂದಿತು.

ನನಗೆ ಚಿಕ್ಕಂದಿನಿಂದಲೂ ತಿರುಗಾಟವೆಂದರೆ ಸಿಕ್ಕಾಪಟ್ಟೆ ಇಷ್ಟ. ಕಾಲ್ನಡಿಗೆಯಲ್ಲಿ ಸುತ್ತುವುದೇ ಆಗಿರಲಿ ಇಲ್ಲಾ ವಾಹನಗಳಲ್ಲಿ ಪ್ರಯಾಣಿಸುವುದೇ ಆಗಿರಲಿ. ಎಲ್ಲೆಂದರಲ್ಲಿ ತಿರುಗುವ ನನ್ನ ಈ ಅಭ್ಯಾಸದಿಂದ ಅಮ್ಮನಿಗೆ ಸಿಕ್ಕಾಪಟ್ಟೆ ಕಷ್ಟ ಕೊಟ್ಟಿದೀನಿ. ಅದೂ ಅಲ್ಲದೇ ನಾನು ದೊಡ್ಡವನಾದಮೇಲೆ ಕೆಎಸ್‌ಆರ್‌ಟಿಸಿ ಡ್ರೈವರ್ ಆಗಬೇಕೆಂದು ಬಹುದೊಡ್ಡ ಕನಸನ್ನು ಕಾಣುತ್ತಿದ್ದೆ. ಈಗಲೂ ಬಸ್ ಡ್ರೈವರುಗಳು, ರೈಲು ಚಾಲಕರು, ಪೈಲೆಟ್‌ಗಳು ಇತ್ಯಾದಿ ಚಾಲಕ ಉದ್ಯೋಗದವರನ್ನು ಕಂಡರೆ ಏನೋ ಒಂಥರಾ ಆಕರ್ಷಣೆ. ಅಮೆರಿಕಾದಲ್ಲಿದ್ದಾಗ ಸಿಕ್ಕಿದ್ದ ಓಡಾಟದ ಹುಚ್ಚಿರುವ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬ ಕೆಲಸ ಬಿಟ್ಟು ಲಾರಿ ಖರೀದಿಸಿ ತಿರುಗಾಟವನ್ನೂ ಹಣವನ್ನೂ ಎರಡನ್ನೂ ಒಟ್ಟಿಗೇ ಸಂಪಾದಿಸ್ತಾ ಇದೀನಿ ಅಂದ ಹೇಳಿದ್ದ. ಇರಲಿ, ವಿಷಯಾಂತರ ಬೇಡ. ನನ್ನ ಈ ಚಟದಿಂದಲೇ ಟ್ರಾವೆಲ್ ಸ್ಟೋರಿಗಳಿಂದ ಬಹುಬೇಗ ಆಕರ್ಷಿತನಾಗುತ್ತೇನೆ. ಅದೂ ಅಲ್ಲದೇ ಆಗಷ್ಟೇ ಮಹಾ ಪಲಾಯನ ಓದಿದ ನೆನಪು ಕೂಡಾ ಮನಸ್ಸಲ್ಲಿ ಹಸಿಯಾಗಿತ್ತು.

ಕನ್ನಡ ಓದುಗರಿಗೆ ‘ಅದ್ಭುತಯಾನ’ ಪುಸ್ತಕ ತೀರಾ ಅಪರಿಚಿತವೇನಲ್ಲ. ಓದುಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುವ ಪುಸ್ತಕಗಳನ್ನು ಕೊಟ್ಟ ಪ್ರಕಾಶನದಿಂದ ಪ್ರಕಣೆಗೊಂಡ ಕಾರಣ ಹಲವರು ಅದನ್ನು ಖರೀದಿಸಿದರೆ ಅದರ ಅದ್ಭುತ ಕಥಾನಕ ಕೇಳಿ ಇನ್ನೂ ಹಲವರು ತೆಗೆದುಕೊಂಡರು.

ಇದು ನಾರ್ವೆ ದೇಶದ ಥಾರ್ ಹೈಡ್ರಾಲ್ ಅನ್ನುವ ಅದ್ಭುತ ಸಾಹಸಿ ‘ಸುಮ್ಮನಿರಲಾರದೇ ಇರುವೆ ಬಿಟ್ಟಕೊಂಡರು’ ಅನ್ನುವಂತೆ ಪ್ಯಾಸಿಫಿಕ್ ಬುಡಕಟ್ಟಿನ ಕೆಲ ಸಂಸ್ಕೃತಿಗಳಿಗೂ ಮತ್ತು ದಕ್ಷಿಣ ಅಮೆರಿಕಾದ ದೇಶಗಳ ಕೆಲ ಬುಡಕಟ್ಟಿನ ಜನರ ಸಂಸ್ಕೃತಿಗಳಿಗೂ ಇರುವ ಸಾಮ್ಯತೆಗಳನ್ನು ಗುರುತಿಸಿ ಈ ಜನರು ಹತ್ತಿರದ ಆಸ್ಟ್ರೇಲಿಯಾದಿಂದಲೋ ಇಲ್ಲಾ ನ್ಯೂಗಿನಿಯಾ ಕಡೆಯಿಂದಲೋ ವಲಸೆ ಬರಲಿಲ್ಲ. ಬದಲಾಗಿ, ಸುಮಾರು ೭೦೦೦ ಕಿಲೋಮೀಟರುಗಳ ದೂರದ, ಆದರೆ ಅಂದಿನವರಿಗೆ ಕನಸಿನಲ್ಲೂ ಊಹಿಸಲು ಆಗದಷ್ಟು ದೂರದಲ್ಲಿರುವ ದಕ್ಷಿಣ ಅಮೆರಿಕಾದಿಂದ ತೆಪ್ಪಗಳ ಮೂಲಕ ಬಂದರು ಎಂಬುದನ್ನು ಸ್ವತಃ ಪ್ರಯಾಣಿಸಿ ಸಾಧಿಸಹೊರಟ ಕತೆಯದು. ಪ್ರಯಾಣದ ಸಿದ್ಧತೆ, ಸಹವರ್ತಿಗಳ ಪರಿಚಯ, ಪ್ರಾಯೋಜಕರ ಹುಡುಕಾಟ, ತೆಪ್ಪವನ್ನು ನಿರ್ಮಿಸಲು ಈಕ್ವೆಡಾರ್‌ನ ನಿತ್ಯಹರಿದ್ವರ್ಣದ ಕಾಡುಗಳಲ್ಲಿ ತೆಪ್ಪಕ್ಕೆ ಬೇಕಾಗುವ ಮರಗಳನ್ನು ಕಡಿಯುವುದರಿಂದ ಮೊದಲ್ಗೊಂಡು ಕೊಟ್ಟಕೊನೆಗೆ ಶಾಂತಸಾಗರದ ಪೂರ್ವ ಭಾಗದಲ್ಲಿನ ತಾಹಿತಿ ದ್ವೀಪ ಸಮುಚ್ಛಯದ ನಡುಗಡ್ಡೆಯೊಂದನ್ನು ತಲುಪುವವರೆಗಿನ ಪ್ರತಿ ಕ್ಷಣವೂ ರೋಚಕವೇ (ಆ ಜನವಸತಿಯಿಲ್ಲದ ಚಿಕ್ಕ ದ್ವೀಪವನ್ನು ಈಗ ಕೋನ್‌ಟಿಕಿ ದ್ವೀಪವೆಂದೇ ಕರೆಯುತ್ತಾರಂತೆ).

ಅವರು ಸಾಧಿಸಹೊರಟಿದ್ದು ಬಲ್ಸಾ ಮರದ ತೆಪ್ಪದಲ್ಲಿ ಅಷ್ಟು ದೂರದ ಪ್ರಾಯಾಣ ಸಾಧ್ಯ ಎಂಬುದನ್ನು. ಹಾಗಂತ ಆಹಾರ, ವಿಚಾರ ಎಲ್ಲವನ್ನೂ ಆಗಿನ ರೀತಿಯಲ್ಲಿ ಮಾಡಿದರು ಅಂತ ಅಲ್ಲ. ಕಡಲಿನಲ್ಲಿ ಸಿಗುವ ಆಹಾರಗಳೊಟ್ಟಿಗೆ (ಕಡಲಿನಲ್ಲಿ ಏನೇನು ಆಹಾರ ಸೇವಿಸಿದರು ಅನ್ನುವುದನ್ನು ಇಲ್ಲಿ ಹೇಳುವುದಿಲ್ಲ. ಅದನ್ನು ಪುಸ್ತಕ ಓದುವಾಗಲೇ ಓದಿ ಆನಂದಿಸಿ) ಹೊರಡುವಾಗ ಸಾಮಾನ್ಯವಾದ ಆಹಾರವನ್ನು ತೆಗೆದುಕೊಂಡು ಹೋಗಿದ್ದರು. ಅಲ್ಲದೇ ಸುರಕ್ಷತೆಗಾಗಿ ಹೊರಜಗತ್ತಿನೊಡನೆ ಸಂಪರ್ಕದಲ್ಲಿರಲು ರೇಡಿಯೋ ಉಪಕರಣಗಳನ್ನು ಕೂಡಾ.

‘ಪ್ರದೀಪ ಕೆಂಜಿಗೆ’ ಅಂತ ಆ ದಿನದವರೆಗೂ ಹೆಸರೇ ಕೇಳಿರದ ಲೇಖಕನ ಹೆಸರನ್ನು ನೋಡಿ ಬೇಸರವಾದರೂ ‘ಅದ್ಭುತ ಯಾನ’ ಅನ್ನುವ ಹೆಸರು ಕುತೂಹಲ ಕೆರಳಿಸಿದ ಕಾರಣ ಧೈರ್ಯ ಮಾಡಿ ತೆಗೆದುಕೊಂಡೆ.

ಇದೇನು ಈ ಮನುಷ್ಯ ಓದುವ ಮೊದಲೇ ಕ್ಲೈಮ್ಯಾಕ್ಸನ್ನೂ ಹೇಳಿ ರಸಭಂಗ ಮಾಡಿಬಿಟ್ಟ ಅಂತ ಪುಸ್ತಕ ಓದಿಲ್ಲದವರು ದಯವಿಟ್ಟು ಬೈದುಕೊಳ್ಳಬೇಡಿ. ಈ ರೀತಿಯ ಪುಸ್ತಕಗಳಲ್ಲಿ ಮೊದಲು ಏನಾಯಿತು ಅಥವಾ ಕೊನೆಗೆ ಏನಾಯಿತು ಅನ್ನುವುದಕ್ಕಿಂತ ಅಲ್ಲಿ ಬರುವ ಚಿತ್ರಣಗಳು ಬಹುಮುಖ್ಯವಾಗುತ್ತವೆ. ಅಂದರೆ ನಾವೊಂದು‌ ಹೊಸ ಜಾಗಕ್ಕೆ ಹೋಗುತ್ತಿರುವಾಗ ಅದರ ಗಮ್ಯದ ಬಗ್ಗೆ ಅರಿವಿದ್ದರೂ ಅದನ್ನು ತಲುಪಲು ಹೊರಟಿರುವ ದಾರಿ ಹೊಸದಾಗಿದ್ದರೆ ಇರುವ ಕುತೂಹಲವನ್ನು ಮತ್ತು ರೋಚಕತೆಯನ್ನು ಪ್ರತಿ ಪುಟದಲ್ಲಿಯೂ ಈ ಪುಸ್ತಕ ಕೊಡುತ್ತದೆ.

ಇಂತಹ ಪುಸ್ತಕಗಳನ್ನು ಆಗ ಅಂದರೆ ೧೫-೨೦ ವರ್ಷಗಳ ಮೊದಲು ಓದುವುದಕ್ಕೂ ಮತ್ತು ಈಗ ಓದುವುದಕ್ಕೂ ಒಂದು ಬಹುಮುಖ್ಯವಾದ ವ್ಯತ್ಯಾಸವಿದೆ. ಸರಿಯಾಗಿ ಅಂತರ್ಜಾಲದ ವ್ಯವಸ್ಥೆಯಿರದ ಆ ಸಮಯದಲ್ಲಿ ಪ್ರತಿಯೊಂದು ಪಾತ್ರಗಳನ್ನೂ, ಅಲ್ಲಿ ಬರುವ ಪ್ರತಿ ಪ್ರದೇಶ, ಸಸ್ಯ, ಮೀನು ಇತ್ಯಾದಿಗಳನ್ನು ನಮ್ಮ ಕಲ್ಪನೆಯಲ್ಲಿ ನಾವೇ ಸೃಷ್ಟಿಕೊಳ್ಳಬೇಕಾಗಿತ್ತು. ಈ ಪುಸ್ತಕ ಬರೀ ಉದಾಹರಣೆಯಷ್ಟೇ. ಈ ಮಾದರಿಗಳ ಯಾವುದೇ ಪುಸ್ತಕಗಳ ವಿಷಯದಲ್ಲಿ ಕೂಡಾ ಸತ್ಯ.

ಒಂದು ಉದಾಹರಣೆ ತೆಗೆದುಕೊಳ್ಳೋಣ. ಅಲ್ಲಿ ಬಲ್ಸಾ ಅನ್ನುವ ಒಂದು ಮರದ ಉದಾಹರಣೆ ಬರುತ್ತದೆ. ತೆಪ್ಪ ಮಾಡಲು ಬಹಳ ಅನುಕೂಲಕರವಾದಂತಹ ಹಗುರವಾದ ಆದರೆ ಗಟ್ಟಿಯಾದ ಮರ. ನನಗೆ ಅದನ್ನು ಹೇಗೆ ಕಲ್ಪಿಸಿಕೊಳ್ಳಬೇಕೆಂದು ತಿಳಿಯದೇ ಕೊನೆಗೆ ನಮ್ಮ ಕಡೆ ಬೆಳೆಯುವ ಮದ್ದಾಲೆ ಅಥವಾ ಹಾಲೆ ಮರವನ್ನು ಕಲ್ಪಿಸಿಕೊಂಡಿದ್ದೆ. ಅದೇ ರೀತಿ ಅಲ್ಲಿ ಬರುವ ಮೀನುಗಳು, ಹವಳದ ದಿಬ್ಬಗಳು, ದ್ವೀಪಗಳು ಇತ್ಯಾದಿ ಸಂಗತಿಗಳನ್ನು ಕೂಡಾ ನನ್ನದೇ ರೀತಿಯಲ್ಲಿ ಕಲ್ಪಿಸಿಕೊಂಡಿದ್ದೆ. ಅದು ತಪ್ಪು ಅಂತ ಅಲ್ಲ. ಯಾವುದೇ ಪುಸ್ತಕ ಓದುವುದೆಂದರೆ ನಮ್ಮದೇ ಒಂದು ಪ್ರಪಂಚ ಸೃಷ್ಟಿಸಿ ಅದರೊಳಗೆ ಜೀವಿಸುವುದೇ ಆದರೂ ನಾವು ನಮ್ಮ ಮನಸಲ್ಲಿ ಇನ್ನೂ ಚಂದದ ಚಿತ್ರಣ ಕಟ್ಟಿಕೊಳ್ಳಬಹುದು ಅಂತ ಅಷ್ಟೇ. ನೀವೇ ನೋಡಿ ನೀವು ಮಲೆನಾಡಿಗರಾಗಿದ್ದರೆ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಪ್ರಪಂಚವನ್ನು ಬಹುಬೇಗ ಬಹು ಸುಂದರವಾಗಿ ಕಟ್ಟಿಕೊಳ್ಳಬಹುದು. ಬಯಲುಸೀಮೆಯವರಾದರೆ ಅದು ಸಾಧ್ಯವಿಲ್ಲ ಅಂತ ಅಲ್ಲ, ಚೂರು ಕಷ್ಟಪಡಬೇಕು ಅಷ್ಟೇ. ಅದೇ ರೀತಿ ಮಲೆನಾಡಿಗರಿಗೆ ಹಳೆ‌ ಮೈಸೂರಿನ ಅಥವಾ ಬಯಲುಸೀಮೆಯ ಚಿತ್ರಣ‌ ಮನಸ್ಸೊಳಗೆ ಕಟ್ಟಿಕೊಳ್ಳುವುದು ಸ್ವಲ್ಪ ಕಷ್ಟ.

ಕೆಲ ತಿಂಗಳುಗಳ ಹಿಂದೆ ಊರಿಗೆ ಹೋಗಿದ್ದಾಗ ಈ ಪುಸ್ತಕವನ್ನು ಹುಡುಕಿದ್ದೆ, ಆದರೆ ಸಿಕ್ಕಿರಲಿಲ್ಲ. ನೆನಪಿದ್ದಷ್ಟೂ ಮಾಹಿತಿಗಳಿಂದ ಅನೇಕ ವಿಷಯಗಳನ್ನು ತಡಕಾಡಿದಾಗ ಅನೇಕ ಕುತೂಹಲಕರ ಮಾಹಿತಿಗಳು ಸಿಕ್ಕವು. ನಂಬಿ ನನ್ನನ್ನು, ಈ ಪುಸ್ತಕದಲ್ಲಿ ಬಂದಿರುವ ವಿಷಯಗಳಾದ ಜನಾಂಗೀಯ ವಲಸೆ, ವಸಾಹತು ಪೂರ್ವ ದಕ್ಷಿಣ ಅಮೆರಿಕಾ ಭೂಖಂಡದ ಸಂಸ್ಕೃತಿ, ಕಡಲಯಾನ, ಅಲ್ಲಿ ಬರುವ ಮೀನುಗಳ ವಿವರ, ಫೆಸಿಫಿಕ್ ದ್ವೀಪಗಳ ಸಂಸ್ಕೃತಿ ಇತ್ಯಾದಿಗಳ ಕುರಿತು ಹುಡುಕಹೊರಟರೆ ಬೆಟ್ಟದಷ್ಟು ಮಾಹಿತಿಗಳು ಸಿಗುತ್ತಾ ಹೋಗುತ್ತವೆ. ಅಂದು ಬರೀ ಥಾರ್ ಹೈಡ್ರಾಲ್ ಮತ್ತು ಅವರ ಗೆಳೆಯರ ಸಾಹಸಮಯ ಯಾತ್ರೆಯ ಕಥಾನಕದಂತೆ ಕಂಡಿದ್ದರೆ ಈಗ ಯಾವುದೋ ಒಂದು ವಿಶ್ವಕೋಶವನ್ನೇ ತನ್ನೊಡಲಲ್ಲಿ ತುಂಬಿಕೊಂಡ‌ ದೊಡ್ಡ ಹೊತ್ತಿಗೆಯಂತೆ ಕಾಣುತ್ತಿದೆ. ಅದರಲ್ಲೂ ಆಂತ್ರಪಾಲಜಿಯನ್ನು ಆಸಕ್ತಿಯನ್ನಾಗಿ ಬೆಳೆಸಿಕೊಂಡವರಿಗೆ ಅನೇಕ‌ ವಿಷಯಗಳ ಬಗೆಗೆ ಓದಲು ಅಡಿಪಾಯ ಹಾಕಿಕೊಡುತ್ತದೆ. ಉದಾಹರಣೆಗೆ ಈಸ್ಟರ್ ದ್ವೀಪದ ಬಗ್ಗೆ ಅತ್ಯಮೂಲ್ಯವಾದ ಮಾಹಿತಿ ಕೊಟ್ಟಿದ್ದಾರೆ.

ಈ ಯಾತ್ರೆ‌ ಮುಂದೆ ಅನೇಕ ಸಾಹಸಿಗಳಿಗೆ ಅವರು ಹೋದ ಮಾರ್ಗಗಳಲ್ಲಿ ಹೋಗಲು ಪ್ರೇರಣೆ‌ ನೀಡಿತು. ಅದು ಮಾತ್ರವಲ್ಲ ಪ್ರಪಂಚದ ಬೇರೆ ಬೇರೆ ಮಾರ್ಗಗಳಲ್ಲಿ ತೆಪ್ಪದ ಮೂಲಕ ಸಾಹಸಿ ನಾವಿಕರು ಯಾತ್ರೆ ಮಾಡಿದ್ದಾರೆ. ಅಂತರ್ಜಾಲದಲ್ಲಿ ತಡಕಾಡಿದರೆ ಇವರ ಈ ಸಾಹಸಯಾತ್ರೆಯ ಅನೇಕ ಸಾಕ್ಷ್ಯಚಿತ್ರಗಳು ಕಾಣಸಿಗುತ್ತವೆ. ಅದೂ ಅಲ್ಲದೇ ೨೦೧೨ರಲ್ಲಿ ಕೋನ್-ಟಿಕಿ ಅಂತ ಇಂಗ್ಲಿಷ್ ಮತ್ತು ನಾರ್ವೇಜಿಯನ್ ಭಾಷೆಗಳಲ್ಲಿ ಚಲನಚಿತ್ರ ಕೂಡಾ ಬಂದಿದೆ. ಅಂದು ಹೈಡ್ರಾಲ್ ಅವರ ಮನಸ್ಸಲ್ಲಿ ಹುಟ್ಟಿದ ಚಿಕ್ಕ ಕುತೂಹಲ ಮುಂದೆ ಎಷ್ಟು ಜನರಿಗೆ ಸ್ಪೂರ್ತಿ ಕೊಟ್ಟಿತು ನೋಡಿ.

೧೯೯೫ರ ನಂತರ ಹುಟ್ಟಿದ ಪುಸ್ತಕಪ್ರಿಯರಿಗೆ ಈ ಪುಸ್ತಕದ ಪರಿಚಯವಿದೆಯೋ ಇಲ್ಲವೋ ಗೊತ್ತಿಲ್ಲ, ಓದಿಲ್ಲದಿದ್ದರೆ ದಯವಿಟ್ಟು ಓದಿ. ಓದಿಗೂ ವಯಸ್ಸಿಗೂ ಸಂಬಂಧ ಖಂಡಿತ ಇಲ್ಲ, ಆದರೆ ಇದಾಗಲೀ ಅಥವಾ ಮಿಲೇನಿಯಂ ಸರಣಿಯ ಪುಸ್ತಕಗಳಾಗಲೀ ೨೦ ರ ಪ್ರಾಯದ ಒಳಗೆ ಓದಿ‌ ಮುಗಿಸಬೇಕಾದವುಗಳು. ನಾನು ಇದರ ಮರು ಓದನ್ನು ಯಾವಾಗ ಶುರುಮಾಡುತ್ತೀನಿ ಅಥವಾ ಶುರುಮಾಡುತ್ತೇನೋ ಇಲ್ಲವೋ ಗೊತ್ತಿಲ್ಲ. ಆದರೆ ಮತ್ತೆ ಓದಬೇಕಾದಷ್ಟು ಅಗತ್ಯವೇ ಇಲ್ಲದಷ್ಟು ಸಶಕ್ತವಾಗಿ ನಿರೂಪಿಸಲ್ಪಟ್ಟಿದ್ದರಿಂದ ಮತ್ತೆ ಓದಬೇಕೆಂದು ಅನ್ನಿಸುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಓದುವವರು ಇಲ್ಲಿ ಬರುವ ವಿವರಗಳನ್ನು ಆ ಕ್ಷಣವೇ ಸ್ವಲ್ಪ ಅಂತರ್ಜಾಲದಲ್ಲಿ ತಡಕಾಡಿ, ಚಿತ್ರಸಮೇತ ನೋಡಿಕೊಂಡು ಓದುತ್ತಾ ಹೋದರೆ ಇನ್ನೂ ರಸವತ್ತಾಗಿರುತ್ತದೆ.