ದಿನವಿಡೀ ದುಡಿದರೂ ಅವನಿಗೆ ಸಿಗುವುದು ಎರಡು ಪಾವು ಅಕ್ಕಿ ಮಾತ್ರ. ಇದರಲ್ಲಿ ಅವನ ಕರುಳುಬಳ್ಳಿಗಳಾದ ಚನಿಯ, ಗುರುವ, ಬೆಳ್ಳಿ, ಕಾಳ, ನೀಲ ಇವರಿಗೆ ಗಂಜಿಯಾಗಬೇಕು. ಉಳಿದರೆ ಬಾಡು ಎಂಬ ನಾಯಿಗೆ ಆಹಾರ. ಇಲ್ಲದಿದ್ದರೆ ಉಪವಾಸ. ಎರಡು ಎತ್ತುಗಳು ಇವನ ಕನಸನ್ನು ಪೋಷಿಸುತ್ತಿರುವ ಜೀವಗಳು. ಬದುಕಿನಲ್ಲಿ ತಾನೆಂದಾದರೊಂದು ದಿನ ನಾಲ್ಕು ಗೇಣಿ ಭೂಮಿಯ ಒಡೆಯನಾಗಬಹುದೆಂಬ ಆಸೆ ಇನ್ನೂ ಕಮರಿಲ್ಲ. ಹಾಂ! ಮರೆತೆ… ದಿನವಿಡೀ ದುಡಿದ ಹೆಗಲುಗಳ ನೋವ ನೀಗಲು ಬಿರುಮ ಪೂಜಾರಿಯ ಹೆಂಡದಂಗಡಿಯಿದೆ… ಜೊತೆಗೆ ಶಿವನ ಕೈಲಿರುವ ಡಮರುಗ ದುಡಿ ಇದ್ದೇ ಇದೆ… ಡಮ…. ಡಮ್ಮ ಡಕ್… ಡಕ್ಕ.
ಡಾ. ಲಕ್ಷ್ಮಣ ವಿ.ಎ. ಅಂಕಣ

 

ನಾನ್ ಅಕ್ಯಾಡೆಮಿಕ್ ಬರಹಗಾರನೊಬ್ಬನ ಓದಿನ ಪ್ರವಾಸ ಕಥನ ಬಲು ರೋಚಕವಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಸಾಹಿತ್ಯದ ವಾತಾವರಣವಿಲ್ಲದ ಕತೆ ಕವಿತೆಯೆಂದರೆ ಗಂಧ ಗಾಳಿ ಇಲ್ಲದ, ಓದೆಂದರೆ ಕೇವಲ ಡಾಕ್ಟರಿಕೆ ಮಾಸ್ತರಿಕೆ, ಎಂಜಿನೀಯರಿಕೆ, ಏನೂ ಆಗಲಿಲ್ಲವೆಂದರೆ ದನದ ಆಸ್ಪತ್ರೆಯಲ್ಲಿ ಗುಮಾಸ್ತನಾಗುವುದು ನಮ್ಮ ಉತ್ತರ ಕರ್ನಾಟಕದ ಹಳ್ಳಿಯ ಕಡೆಗಿನ ಪರಮೋಚ್ಚ ಉದ್ದೇಶ. ಸರಕಾರೀ ನೌಕರೀ ಗಿಟ್ಟಿಸಿಕೊಳ್ಳುವುದೆಂದರೆ ಮೋಕ್ಷ ಪ್ರಾಪ್ತಿಯಾದಂತೆ.

ಅಷ್ಟಕ್ಕೂ ಜೀವನವೆಂದರೆ ಧರ್ಮಾರ್ಥ ಕಾಮ ಮೋಕ್ಷಾಣಂ ಅಲ್ಲವೇ? ಇದರಲ್ಲಿ ಕವಿ ಕಾವ್ಯ ಕತೆ ಎಲ್ಲಿ ಬರಲು ಸಾಧ್ಯ? ಸಾಹಿತ್ಯ ಸಂಗೀತ ನಾಟ್ಯ ಇದೇನಿದ್ದರೂ ಎರಡೊತ್ತಿನ ಊಟಕ್ಕೆ ಗ್ಯಾರಂಟಿ ಇರುವವರ ಕಾಲಕ್ಷೇಪಕ್ಕೆ ಕಂಡುಕೊಂಡಿರುವ ಸೋಮಾರಿಗಳ ಕೆಲಸ. ಪುರುಷನಿಗೆ ಉದ್ಯೋಗವೇ ಲಕ್ಷಣ… ಹೀಗೆ ಉದ್ಯೋಗವಿಲ್ಲದ ಪುರುಷನಿಗೆ ಹೆಣ್ಣು ಕೊಟ್ಟು ಮದುವೆ ಮಾಡುವ ಮಾತು ಹಾಗಿರಲಿ, ಹೆಣ್ಣು ನೋಡಲೂ ಕರೆದುಕೊಂಡು ಹೋಗುವುದಿಲ್ಲ. ಈ ಹೊತ್ತಿನವರೆಗೂ ಯಾವ ತಂದೆ ತಾಯಿಯೂ ತನ್ನ ಮಕ್ಕಳಿಗೆ ನೀನು ಕವಿಯಾಗು ಲೇಖಕನಾಗು ಕತೆಗಾರನಾಗು ಎಂದು ಮನಸು ಪೂರ್ತಿ ಹಾರೈಸಿ ಶಾಲೆಗೆ ಕಳುಹಿಸಿರುವುದಿಲ್ಲ. ಈ ಅರ್ಧಮರ್ಧ ಓದಿದವರ ಕಷ್ಟ ಹೇಗೆಂದರೆ ಪೂರ್ಣ ಅಂಕಗಳು ಬಂದಿರುವುದಿಲ್ಲ, ವ್ಯವಹಾರಿಕ ಕುಶಲತೆ ಇರುವುದಿಲ್ಲ ಕೊನೆಗೆ ಮಾತಿನಿಂದ ಗೆಲ್ಲುವ ವಾಕ್ಪಟುತ್ವವೂ ಇರುವುದಿಲ್ಲ. ಹೀಗಾಗಿ ಇತ್ತ ಇವರಿಗೆ ತಮ್ಮ ಕುಲಕಸುಬು ಕೃಷಿ ಮಾಡಲೂ ಬರುವುದಿಲ್ಲ, ಹೀಗಾಗಿ ಈ ಅಂತರ್ ಪಿಶಾಚಿಗಳಂತಹ ಪುರುಷಪುಂಗವರ ಕತೆ ಯಾವ ವೈರಿಗೂ ಬೇಡ.

ನಿಮಗೆ ಗೊತ್ತಿರಲಿ ಬೆಂಗಳೂರಿನ ಮಧ್ಯಮ ಪ್ರಮಾಣದ ರಿಯಲ್ ಎಸ್ಟೇಟ್ ಕುಳಗಳಿದ್ದಾರಲ್ಲ ಅವರು ಯಾರೂ ಹತ್ತನೇಯ ತರಗತಿ ಪಾಸಾಗಿದ್ದು ಕಾಣೆ, ಆದರೆ ಅವರ ಮಾತೇನು! ನಡೆಯ ಗತ್ತೇನು! ವ್ಯವಹಾರ ಕುಶಲತೆ ಏನು ಬಾಯಿ ಬಿಟ್ಟರೆ ಬಣ್ಣದ ಮಾತುಗಳು. ಮೈ ತುಂಬ ಚಿನ್ನದ ಆಭರಣಗಳಿಂದ ತುಂಬಿಕೊಂಡ ಸಾಕ್ಷಾತ್ ಲಕ್ಷೀ ಪತಿಗಳು. ಈ ದಿನಗಳಲ್ಲಿ ಅವರು ಕೋಟಿ ಲೆಕ್ಕದಲ್ಲಿ ಬಾಳುತ್ತಿರುವುದಕ್ಕೆ ಕಾರಣ ಅವರ ಓದಲ್ಲ, ಯಾವ ವಿಶ್ವವಿದ್ಯಾಲಯದ ಡಿಗ್ರಿಯೂ ಅಲ್ಲ. ಅದು ಕೇವಲ ಅವರ ವ್ಯವಹಾರ ಕುಶಲತೆ, ಒಂಚೂರು ಕುಟಿಲತೆ, ಸ್ವಲ್ಪ ಭಾವುಕತೆ…. ಇದೆಲ್ಲದರ ಸಮ್ಮಿಶ್ರಭಾವವೇ ಇವರ ಉದ್ಯಮದ ಮೂಲದ್ರವ್ಯ. ಹೀಗಾಗಿ ಈ ಮಾತಿನ ಮಲ್ಲರು ಎಂತಹ ಬರಗಾಲದಲ್ಲೂ ಹುಲುಸಾದ ಬೆಳೆ ತೆಗೆಯುತ್ತಾರೆ.

ಒಬ್ಬ ಕನ್ನಡ ಶಾಲೆಯ ಮಾಸ್ತರನೊ ಎರಡನೇಯ ದರ್ಜೆಯ ಪ್ರಾಮಾಣಿಕ ಗುಮಾಸ್ತನೋ ತನ್ನ ಜೀವಮಾನವಿಡೀ ಸಂಪಾದನೆ ಮಾಡಿದರೂ ಬೆಂಗಳೂರಿನಲ್ಲೊಂದು ಸೈಟು ತೆಗೆಯಲು ಸಾಧ್ಯವಿಲ್ಲ. ಹಾಗಿದ್ದರೆ ಕಷ್ಟಪಟ್ಟು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಓದಿ ಪ್ರಯೋಜನವೇನು? ಕಾರ್ಪೋರೆಟ್ ಗುಲಾಮರಾಗಬೇಕಾ? ಅಥವ ಯಾವುದೋ ಕಂದಾಯ ಇಲಾಖೆಯಲ್ಲಿ ಫೈಲುಗಳ ನಡುವೆ ಜೀವನ ಸವೆಸಬೇಕಾ? ಇಲ್ಲ ಊರಿನಲ್ಲಿ ಎರಡು ಎಕರೆ ಜಮೀನು ನೋಡಿಕೊಂಡು ಮದುವೆಯಾಗದೇ ತನ್ನ ಪುರುಷಾರ್ಥಕ್ಕೊಂದು ಬೆಲೆ ಸಿಗದೆ ಜೀವನಪೂರ್ತಿ ಜಿಗುಪ್ಸೆಯಲ್ಲೇ ಬದುಕಬೇಕಾ? ಸರಕಾರಿ ನೌಕರೀಯೆಂಬ ಸಾಸಿವೆ ಕಾಳಿನ ಸುಖಕ್ಕೆ ಸಾಗರದಷ್ಟು ದುಃಖ ಹರಿಸಿದವರು ಎಷ್ಟು ಜನ ಇಲ್ಲ? ಒಂದು ಓದಬೇಕು ಇಲ್ಲ ಮರಳಿ ಇವರ ಮೂಲಕಸುಬಿಗೆ ಅಂಟಿಕೊಳ್ಳಬೇಕು. ಮಧ್ಯಂತರ ನೇತಾಡಿದವರು ಬದುಕಿನ ಕುಣಿಕೆಗೆ ಕೊರಳು ಕೊಟ್ಟಂತೆಯೇ ಸರಿ.

ಹೀಗಾಗಿ ನಾನು ಓದಿದ ಪರಿಸರದಲ್ಲಿ ಸಿಲ್ಯಾಬಸ್ ಬಿಟ್ಟು ಬೇರೆ ಏನಾದರೂ ಓದಿದರೆ ಇವನು “ದಾರಿ ತಪ್ಪಿದವನು” ಎಂಬ ಕಳಂಕ ನಮ್ಮ ತಲೆಗೆ ಗ್ಯಾರಂಟಿ. ಇನ್ನು ನಾಟಕ ಸಿನೇಮಾ ಸಿಗರೇಟು ಬೀಡಿ ಹೆಂಡ ಹುಡುಗಿ ಅಂತ ಹಿಂದೆ ಬಿದ್ದರಂತೂ ನಮ್ಮ ಹೆಸರಿನಲ್ಲೂ ಹರಿಯುವ ನದಿಗೆ ಎಳ್ಳು ಬೆಲ್ಲ ಹಾಕಿ ಪಿಂಡದಾನವ ಮಾಡಿ, ಇದ್ದೊಬ್ಬ ಮಗ ಸತ್ತು ಹೋದ ಎಂದು ಕನವವರಿಸುವರೇ…

ನಡುವೆ ಈ ಇನ್ನಿಲ್ಲದಂತೆ ಕತೆ ಕವನ ಸಾಹಿತ್ಯದ ಪ್ರೀತಿಯನ್ನು ಕಾಪಿಟ್ಟುಕೊಂಡು ಕಾಪಿ ಬರಹದ ಪುಸ್ತಕದ ಮಧ್ಯ ಕಾರಂತರ ಬಾಲ ಮಂಗಳ ಪುಸ್ತಕ ಓದುವುದರ ಥ್ರಿಲ್ಲು, ಪಿಯೂಸಿ ಪುಸ್ತಕದ ನಡುವೆ ರತಿವಿಜ್ಞಾನದ ಪುಸ್ತಕ ಓದುವುದರ ಮಜಾ ಎಷ್ಟು ಜನರಿಗೆ ಸಿಕ್ಕಿರುತ್ತದೆ? ಹಾಂ! ಅಂದಹಾಗೆ ರತಿ ವಿಜ್ಞಾನ ಕೇವಲ ಲೈಂಗಿಕ ಉದ್ರೇಕಕ್ಕೆ ಮಾತ್ರ ಅಲ್ಲ, ಅದರಲ್ಲೂ ಕೊಂಚ ಕೊಂಚ ಶೃಂಗಾರ ಸಾಹಿತ್ಯ ಇರುತ್ತದೆ. ಯಾರೋ ಪ್ರಸಿದ್ಧ ಲೇಖಕರು ಅಡ್ಡ ಹೆಸರು ಇಟ್ಟುಕೊಂಡು ಬರೆದ ಬರಹಗಳು. ಅಷ್ಟಕ್ಕೂ ನಾವು ವಾತ್ಸಾಯನದ ನಾಡಿನವರಲ್ಲವೇ? ಶೃಂಗಾರವನ್ನು ದೇವಾಲಯದ ಭಿತ್ತಿ ಚಿತ್ರಗಳ ಮೇಲೂ ಜನರಲ್ ಬೋಗಿಯ ರೇಲ್ವೇ ಟಾಯ್ಲೆಟ್ಟಿನಲ್ಲಿ ಅಶ್ಲೀಲ ಬರಹಗಳನ್ನೂ ಏಕಕಾಲಕ್ಕೆ ಓದಿ ರೋಮಾಂಚಿತರಾದವರು.

ಹೌದು! ಇದರಲ್ಲಿ ಮಡಿ ಯಾವುದು? ಗುಡಿಯ ಮೇಲಿನ ಚಿತ್ರಭಿತ್ತಿಯದಾ? ಮೈಲಿಗೆ ಯಾವುದು.. ರೇಲ್ವೇ ಟಾಯ್ಲೆಟ್ಟಿನದಾ? ಶೃಂಗಾರಕ್ಕೂ ಅಶ್ಲೀಲತೆಗೂ ಒಂದೆಳೆದಾರದ ವ್ಯತ್ಯಾಸ ಇರುತ್ತದೆ ಅಷ್ಟೇ. ಕಲೆಯ ಹೆಸರಿನಲ್ಲಿ ಡಬ್ಬಲ್ ಮೀನಿಂಗ್ ಡೈಲಾಗಿನ ನಾಟಕ, ಸಿನೇಮಾಕ್ಕೂ, “ಬ್ಯಾಂಡಿಟ್ ಕ್ವೀನ್” ಎಂಬ ಚಂಬಲ್ ರಾಣಿಯನ್ನು ತೆರೆಯ ಮೇಲೆ ಅತ್ಯಾಚಾರ ನಡೆಸುವ ಠಾಕೂರರ ದೃಶ್ಯಕ್ಕೂ ದೌರ್ಜನ್ಯಕ್ಕೂ ವ್ಯತ್ಯಾಸವಿದೆ. ಇಲ್ಲಿ ನಿಜವಾದ ಕಲೆ ಯಾವುದೆಂಬುದನ್ನು ವಿವರಿಸಬೇಕಾಗಿಲ್ಲ.

ಸರಕಾರಿ ನೌಕರೀಯೆಂಬ ಸಾಸಿವೆ ಕಾಳಿನ ಸುಖಕ್ಕೆ ಸಾಗರದಷ್ಟು ದುಃಖ ಹರಿಸಿದವರು ಎಷ್ಟು ಜನ ಇಲ್ಲ? ಒಂದು ಓದಬೇಕು ಇಲ್ಲ ಮರಳಿ ಇವರ ಮೂಲಕಸುಬಿಗೆ ಅಂಟಿಕೊಳ್ಳಬೇಕು. ಮಧ್ಯಂತರ ನೇತಾಡಿದವರು ಬದುಕಿನ ಕುಣಿಕೆಗೆ ಕೊರಳು ಕೊಟ್ಟಂತೆಯೇ ಸರಿ.

ನಾನೂ ಕೂಡ ನಾನ್ ಅಕ್ಯಾಡೆಮಿಕ್ ಓದುಗ. ಮೊದಲಿಗೆ ಸೆಳೆದದ್ದು ಲಂಕೇಶ ಪತ್ರಿಕೆ, ಅಲ್ಲಿ ಲಂಕೇಶರ ಪ್ರಖರ ಟೀಕೆಗಳು, ಮೆಚ್ಚುಗೆಗಳು ಅವರು ಬರೆಯುತ್ತಿದ್ದ ಸಿನೇಮಾ ವಿಮರ್ಶೆಗಳು, ಯಾವ ಯಾವದೋ ದೇಶದ ಸಿನೇಮಾಗಳನ್ನು ವಿಸಿ ಆರ್ ಗಳಲ್ಲಿ ನೋಡಿ ಅದರ ಬಗ್ಗೆ ಮನಮುಟ್ಟುವಂತೆ ಬರೆಯುವುದು… ಆಹಾ! ಬರೆದರೆ ಲಂಕೇಶರಂತೆ ಬರೆಯಬೇಕು ಎಂದು ಅನಿಸಿದ್ದು ಸುಳ್ಳಲ್ಲ. ಧಾರವಾಡದಲ್ಲಿದ್ದೂ ನಮಗೆ ಸಾಹಿತಿಗಳ ಮನೆಯ ದಾರಿಯು ಕಾಣಬಾರದೆಂದು ಕಣ್ಕಾಪುಕಟ್ಟಿದ ನಮ್ಮ ಹಿನ್ನೆಲೆ, ಓಡಬೇಕು ಓಡಿ ಕಾಲು ಸೋಲುವವರೆಗೆ ಓಡಬೇಕು, ಓದಬೇಕು ಏನಾದರೊಂದಾಗಲು ಓದಬೇಕು.. ಡಾಕ್ಟರ್, ಇಂಜಿನಿಯರ್, ಮಾಸ್ತರ, ಕೊನೆಗೆ ಗುಮಾಸ್ತ ಏನಾದರೂ ಆಗು ಮೊದಲು ನೌಕರನಾಗು. ಸಂಬಳ ತರುವ ನೌಕರನಾಗು… ಎನ್ನುವ ಹುಚ್ಚು ತುಂಬಿದ ತಲೆಯಲ್ಲಿ ಇದೊಂದು ಇತ್ತಲ್ಲ ಈ “ಇತರೇ” ಓದುವ ಹುಚ್ಚು… ಆ ಪತ್ರಿಕೆಯಲ್ಲಿ ಬರೆಯುತ್ತಿದ್ದ ಚಂದ್ರಶೇಖರ ಆಲೂರು ಸರ್, ಅಬ್ದುಲ್ ರಶೀದ್ ಸರ್, ಹರಟೆ ಕಟ್ಟೆಯ ಚಂದ್ರೇಗೌಡರು, ನೀಲು, ಒಂದೇ ಎರಡೇ… ಆಮೇಲೆ ಹಾಯ್ ಬೆಂಗಳೂರ್ ನಲ್ಲಿ ಜಯಂತ್ ಕಾಯ್ಕಿಣಿ ಎಂಬ ಮ್ಯಾಗ್ನೆಟ್, ಜೋಗಿ ಸರ್ ರವರ ಜಾನಕಿ ಕಾಲಂ… ಅಲ್ಲಿಂದ ಬೆಳೆದ ಪುಸ್ತಕದ ಹುಚ್ಚು ನಂತರ ತೇಜಸ್ವಿ, ಚಿತ್ತಾಲರು, ಅನಂತಮೂರ್ತಿ, ದೇವನೂರು, ಶಿವರಾಮ ಕಾರಂತರು, ಹೀಗೆ ಒಬ್ಬರ ಹಿಂದೆ ಒಬ್ಬರು… ಇವರೆಲ್ಲ ಮುಗಿದ ಮೇಲೆ ಕಂಬಾರರು, ಕಾರ್ನಾಡರು ಮತ್ತು ಚೋಮ. ಕಾರಂತರ ಈ ಚೋಮ ಸಿಗದೇ ಹೋಗಿದ್ದರೆ ನಾನು ಬಹುಶಃ ಕಾದಂಬರಿಗಳನ್ನು ಓದುತ್ತಲೇ ಇರಲಿಲ್ಲ.

******

(ಪಿ. ಲಂಕೇಶ್)

ಚೋಮ ನನ್ನ ಅಂತಃಸಾಕ್ಷಿಯನ್ನು ಕೆಣಕುತ್ತಲೇ ಇರುತ್ತಾನೆ ಸದಾಕಾಲ. 1931 ರಲ್ಲಿ ಕಾರಂತರು ಬರೆದ ಈ ಪುಸ್ತಕದ ಬೆಲೆ ಕೇವಲ ಮೂವತ್ತೈದು ರೂಪಾಯಿ. ಅವಡುಗಚ್ಚಿ ಕುಳಿತರೆ ಒಂದೇ ರಾತ್ರಿಯಲ್ಲಿ ಓದಿ ಮುಗಿಸಬಹದಾದ ಸಂಕಟವಿದೆ. ಚೋಮನ ಸಂಭ್ರಮವೂ ಇದೆ. ನಿನ್ನೆ ಪುಸ್ತಕ ದಿನ ಅಂದಾಗ ಯಾಕೋ ಪುಸ್ತಕ ಬಹಳ ಕಾಡಿತು. ಶಿವರಾಮ ಕಾರಂತರ “ಚೋಮ” ನನ್ನ ಕೈ ಹಿಡಿದು ಕನ್ನಡ ಪುಸ್ತಕ ಪ್ರಪಂಚದ ಬಾಗಿಲ ತನಕ ಬಂದು ಬೀಗವನ್ನ ನನ್ನ ಕೈಗೆ ಕೊಟ್ಟು ನನ್ನೆದೆಯೊಳಗೆ ನಿರಂತರ ದುಡಿ ಬಡಿಯುತ್ತಿರುವ ಜೀವಿ.

ಇಲ್ಲ! ಸಾಧ್ಯವಿಲ್ಲ!!… ಪುಸ್ತಕದ ಮುಂದಿನ ಪುಟ ತಿರುವಲಾರೆ. ಕಣ್ಣು ಮಂಜು ಮಂಜು… ಅಸಾಧ್ಯ ನೋವೊಂದು ಮನಕಲುಕಿ ಎಂತಹ ಕಲ್ಲು ಹೃದಯ ಕೂಡ ಕರಗುವ ಸಮಯ ಪುಸ್ತಕ ಮಡಿಚಿಟ್ಟು ಚೋಮನ ಹಳವಂಡಗಳಿಗೆ ಕಣ್ಣೀರಾಗಿದ್ದೇನೆ. ವಿಚಿತ್ರ ಸೆಳೆತಕ್ಕೊಳಗಾಗಿ ಪುಸ್ತಕ ಬರಸೆಳೆದು ಚೋಮನನ್ನು ಇಂಚಿಂಚಾಗಿ ಎದೆಗಿಳಿಸಿಕೊಂಡಿದ್ದೇನೆ. ಇಪ್ಪತ್ತೈದು ವರ್ಷಗಳ ಹಿಂದೆ ನಾನು ಆಸ್ಪತ್ರೆಯೊಂದರ ಐ.ಸಿ.ಯು.ನಲ್ಲಿ ಕೆಲಸ ಮಾಡಬೇಕಾದರೆ ರೋಗಿಯೊಬ್ಬರ ಕಡೆಯವರು ಕೊಟ್ಟ ಪುಸ್ತಕವದು, ಆಸ್ಪತ್ರೆಯ ಆಕ್ರಂದನ ಜೀವ ಹೋಗುತ್ತಿರುವ ರೋಗಿಯ ಕೊನೆಯ ಆಕ್ರಂದನದಂತೆ ಚೋಮನ ದುಡಿಯ ಸದ್ದು ನನ್ನನ್ನು ಕಲಕಿದೆ. ಹೀಗೆ ಅಮೂಲ್ಯ ಸಾಹಿತ್ಯದ ಪುಸ್ತಕವೊಂದು ಆಸ್ಪತ್ರೆಯ ಐ.ಸಿ.ಯು. ಬಾಗಿಲಿನಿಂದ ನನ್ನ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರವೇಶಿಸಿದ್ದು ಕಾಕತಾಳೀಯವೆಂದೇ ಹೇಳಬಲ್ಲೆ.

ಶಿವನ ಡಂಗುರದಂತಿರುವ ದುಡಿ ಚೋಮನಿಗೆ ಖುಷಿಯಲ್ಲೂ, ನೋವಿನಲ್ಲೂ ಅದೇ ತೀವ್ರತೆಯಲ್ಲಿ ಬಡಿದು ಭೋಗನಹಳ್ಳಿಯ ಸಾಹುಕಾರ ಸಂಕಪ್ಪಯ್ಯನವರ ನೆಮ್ಮದಿ ಹಾಳು ಮಾಡಿದ್ದಾನೆ. ಆದರೂ ಅವರಿಗೆ ಚೋಮನ ಮೇಲೆ ವಿಶೇಷವಾದ ಪ್ರೀತಿಯಿದೆ.

ದಿನವಿಡೀ ದುಡಿದರೂ ಅವನಿಗೆ ಸಿಗುವುದು ಎರಡು ಪಾವು ಅಕ್ಕಿ ಮಾತ್ರ. ಇದರಲ್ಲಿ ಅವನ ಕರುಳುಬಳ್ಳಿಗಳಾದ ಚನಿಯ, ಗುರುವ, ಬೆಳ್ಳಿ, ಕಾಳ, ನೀಲ ಇವರಿಗೆ ಗಂಜಿಯಾಗಬೇಕು. ಉಳಿದರೆ ಬಾಡು ಎಂಬ ನಾಯಿಗೆ ಆಹಾರ. ಇಲ್ಲದಿದ್ದರೆ ಉಪವಾಸ. ಎರಡು ಎತ್ತುಗಳು ಇವನ ಕನಸನ್ನು ಪೋಷಿಸುತ್ತಿರುವ ಜೀವಗಳು. ಬದುಕಿನಲ್ಲಿ ತಾನೆಂದಾದರೊಂದು ದಿನ ನಾಲ್ಕು ಗೇಣಿ ಭೂಮಿಯ ಒಡೆಯನಾಗಬಹುದೆಂಬ ಆಸೆ ಇನ್ನೂ ಕಮರಿಲ್ಲ. ಹಾಂ! ಮರೆತೆ… ದಿನವಿಡೀ ದುಡಿದ ಹೆಗಲುಗಳ ನೋವ ನೀಗಲು ಬಿರುಮ ಪೂಜಾರಿಯ ಹೆಂಡದಂಗಡಿಯಿದೆ… ಜೊತೆಗೆ ಶಿವನ ಕೈಲಿರುವ ಡಮರುಗ ದುಡಿ ಇದ್ದೇ ಇದೆ… ಡಮ…. ಡಮ್ಮ ಡಕ್… ಡಕ್ಕ.

ಇವನ ಹಣೆಬರಹ ನೋಡಿ, ಇವನ ಸುತ್ತ ಸುಳ್ಳು ಲೆಕ್ಕ ಬರೆವ ಶೆರೆಗಾರ ಮನ್ವೇಲ. ಇವರಿಬ್ಬರ ಮಕ್ಕಳನ್ನು ಕಳಸದ ಹತ್ತಿರವಿರುವ ಕಾಫೀ ತೋಟದಲ್ಲಿ ಜೀತಕ್ಕಿದ್ದಾರೆ. ಸಾಲ ತೀರುವ ಮಾತು ಹಾಗಿರಲಿ, ಇದ್ದ ಸಾಲಕ್ಕೂ ಬಡ್ಡಿಯ ಬಾಲ ಸೇರಿದೆ. ಎಷ್ಟಾದರೂ ವಯಸ್ಸಿಗೆ ಬಂದ ಮಕ್ಕಳಲ್ಲವೇ? ಗುರುವ ಕೊಕ್ಕಡದ ಅನ್ಯಜಾತೀಯ ಹುಡುಗಿಯನ್ನು ಮದುವೆಯಾಗಲು ರಾತ್ರೋ ರಾತ್ರಿ ಓಡಿಹೋಗಿದ್ದಾನೆ. ಚನಿಯ ಜೋಲು ಮೋರೆ ಹಾಕಿಕೊಂಡು ಹಟ್ಟಿಗೆ ಬಂದು ಜ್ವರ ಪೀಡಿತನಾಗಿ ಮಲಗಿ ಮರುದಿನ ಚಿಕಿತ್ಸೆ ದೊರಕದೆ ಸತ್ತು ಹೋಗುತ್ತಾನೆ… ಸತ್ತ ಹೆಣದ ಮುಂದೆಯೂ ದುಡಿ ಬಡಿಯುವುದೆಂದರೇನು……? ಡಮ… ಡಮ್ಮ… ಡಕ ಢಕ್ಕ್…. ಚೋಮ ಅರೆ ಹುಚ್ಚನಂತಾಡತೊಡಗಿದ. ಸಂಕಪ್ಪಯ್ಯನವರ ಬಳಿಯ ಕೆಲಸಕ್ಕೂ ಸಂಚಕಾರ ತಂದುಕೊಂಡ.

ಗಂಜಿಗೇನು ಗತಿ? ಸಂಕಪ್ಪಯ್ಯನವರು ಉದಾರಿಗಳು. ಅವನು ಬರದಿದ್ದರೂ ಅವನ ಪಾಲಿನ ಕೂಲಿಯನ್ನು ಬೆಳ್ಳಿಗೆ ಕೊಡತೊಡಗಿದರು. ಆದರೆ ಸಾಹುಕಾರರು ಅಪ್ಪಿತಪ್ಪಿಯೂ ಕೂಡ ಚೋಮನ ಆಸೆಯಾದ ಭೂಮಿಯನ್ನು ಕೊಡಲಾರರು. ಕುಲೀನರು ಭೂಮಿಗೆ ಒಡೆಯರಾದರೆ ಜನ ಅವರ ಬಗ್ಗೆ ಏನೆಂದುಕೊಂಡಾರು?

ಜನ ನೂರು ಮಾತನಾಡಿದರೇನು? ಮನ್ವೇಲನ ಇಪ್ಪತ್ತೈದು ರೂಪಾಯಿಯ ಕಳ್ಳ ಲೆಕ್ಕ ತೀರಿಸಲೇಬೇಕಲ್ಲವೇ? ಈ ಬಾರಿಯ ಕಳಸದ ಕಾಫೀ ತೋಟಕೆ ದುಡಿಯಲು ಬೆಳ್ಳಿ ಮತ್ತು ನೀಲ ಅಣಿಯಾಗಿದ್ದಾರೆ.. ಅಪ್ಪನ ಕಣ್ಣಾಲಿಗಳಲ್ಲಿ ಅಶ್ರುಧಾರೆ… ದುಡಿಮೆಯಿದೆಯಲ್ಲ ಜೊತೆಗೆ ಒಂದಿಷ್ಟು ನೀರು ಬೆರೆಸಿದ ಹೆಂಡ ಡಮ… ಡಮ್ಮ ಢಕ ಢಕ್ಕ.

ಮುಂದೆ ಕಳಸದ ಕಾಫೀ ತೋಟದಲ್ಲಿ ಮಿಂಗೇಲ ದೊರೆಗಳು ಮನ್ವೆಲ ಇಬ್ಬರೂ ಸುಂದರಿಯಾದ ಬೆಳ್ಳಿಯನ್ನು ದೈಹಿಕವಾಗಿ ಬಳಸಿಕೊಳ್ಳುತ್ತಾರೆ. ಭಯಗೊಂಡ ಬೆಳ್ಳಿ ವಾಪಸು ಹಟ್ಟಿಗೆ ಬರುತ್ತಾಳೆ. ಇವರ ಸಾಲ ಹೀಗೆ ಈ ಬಗೆಯಲ್ಲಿ ತೀರುತ್ತದೆ. ನೀಲನ ಸಾವಿಗೆ ನೀವು ಮರಗುವಿರಾದರೆ ಆತ ನೀರಲ್ಲಿ ಮುಳುಗಿ ಸತ್ತ….. ಅವನನ್ನು ಉಳಿಸುವ ಅವಕಾಶಗಳಿದ್ದವಾದರೂ ಅಸ್ಪೃಶ್ಯತೆ ಅಡ್ಡ ಬಂತು. ದಲಿತನ ಮೈ ಮುಟ್ಟುವುದೆಂತು?!

ಚೋಮ ಈಗ ನಿಜವಾಗಿಯೂ ಹುಚ್ಚನಾದ. ಬೆಳ್ಳಿ ಕೂಡಾ ಯಾವುದೋ ಅನಿವಾರ್ಯವಾತೆಗೊಳಗಾಗಿ ಮನ್ವೇಲನ ತೆಕ್ಕೆಯಲ್ಲಿ ಮೈ ಮರೆತಳು. ಚೋಮನ ಪಾಲಿಗೆ ಇದೊಂದು ನೋಡುವುದು ಬಾಕಿಯಿತ್ತೇನೋ. ಅಲ್ಲಿಗೆ ಎಲ್ಲ ಮುಗಿದಂತಾಯ್ತಲ್ಲ?

ಹಟ್ಟಿಯ ಎತ್ತುಗಳನ್ನು ಕಾಡಿಗಟ್ಟಿ ಬಂದ, ಸಾಹುಕಾರನ ಹೊಲದ ನಾಲ್ಕು ಸಾಲು ಉತ್ತಿಬಂದ, ನೇಗಿಲು ಮುರಿದು ಬೆಂಕಿ ಹಾಕಿ ಸುಡುತ್ತ ದುಡಿ ಬಡಿದ ನೋಡಿ…. ಜೀವ ಹೋಗುತ್ತಿರುವ ಪ್ರಾಣಿಯ ಕೊನೆಯ ಚೀತ್ಕಾರದಂತೆ… ಅಲ್ಲಿಗೆ ಕತೆ ಮುಗಿಯಿತು.. ಸಂಕಟ ಮುಂದುವರೆಯುತ್ತದೆ.

ಚೋಮ ನನ್ನೆದೆಯ ಬಡಿತದಲ್ಲಿ ಅಂದಿನಿಂದ… ಡಮ….ಢಮ್ಮ ಢಕ..ಢಕ್ಕ.