ತೋಟದಲ್ಲಿ ತೆಂಗಿನ ಸೋಗೆಗಳು ಬಿದ್ದಿದ್ದರೆ ಅವುಗಳನ್ನು ಎಳೆದುಕೊಂಡು ಬಂದು ಪಟೇಲರ ಅಂಗಳಕ್ಕೆ ಹಾಕುವುದು, ಹಸಿ ಮಡಲುಗಳನ್ನು ಹೆಣೆದು ಚಪ್ಪರಕ್ಕಾಗುವ ತಡಿಕೆಗಳನ್ನು ತಯಾರಿಸುವುದು, ಒಣಗಿದ ಮಡಲುಗಳನ್ನು ಕಡಿದು ಸೂಟೆಗಳನ್ನು ತಯಾರಿಸುವುದು, ಬಿಸಿನೀರ ಒಲೆಗೆ ಇಡಲು ಅನುಕೂಲವಾಗುವಂತೆ ಸೋಗೆಗಳನ್ನು ತುಂಡುಮಾಡಿ ಕೊತ್ತಳಿಗೆಗಳನ್ನು ತಯಾರಿಸಿ ಬಚ್ಚಲು ಮನೆಯಲ್ಲಿ ಪೇರಿಸಿಡುವುದು ಇತ್ಯಾದಿ ಕೆಲಸಗಳನ್ನು ಪಟೇಲರ ಮನೆಗೆ ಸಹಾಯ ಕೇಳಿ ಬರುವ ಹಳ್ಳಿಗರು ಅವರಾಗಿಯೇ ಮಾಡುತ್ತಿದ್ದರು.
ಡಾ. ಜನಾರ್ದನ ಭಟ್ ಸಾದರಪಡಿಸುವ ಓಬಿರಾಯನಕಾಲದ ಕಥಾಸರಣಿಯಲ್ಲಿ ಅವರೇ ಬರೆದ ಕಥೆ “ಪುಂಡಗೋಳಿಯ ಕ್ರಾಂತಿ”

 

ಅದು ಎರಡನೆಯ ಮಹಾಯುದ್ಧದ ಕಾಲ. ನಮ್ಮ ದೇಶವನ್ನು ಬ್ರಿಟಿಷರು ಆಳುತ್ತಿದ್ದರು. ಅವರು ಯುದ್ಧದಲ್ಲಿ ತೊಡಗಿಕೊಂಡಿದ್ದ ಕಾರಣ ಯುದ್ಧದ ಬಿಸಿ ನೇರವಾಗಿ ನಮ್ಮ ಜನತೆಗೆ ತಟ್ಟಿತು.

ಎಲ್ಲ ಊರುಗಳಂತೆ ದಕ್ಷಿಣ ಕನ್ನಡದ ನಡುಕಣಿ ಎಂಬ ಹಳ್ಳಿಯ ಜನತೆ ಕೂಡಾ ಇನ್ನಿಲ್ಲದಂತೆ ಪಾಡುಪಡುತ್ತಿದ್ದರು. ಜನ ಊಟಕ್ಕೆ ಅಕ್ಕಿಯಿಲ್ಲದೆ ಒದ್ದಾಡುತ್ತಿದ್ದರು. ದೊಡ್ಡ ದೊಡ್ಡ ಜಮೀನುದಾರರು ಕೂಡಾ ತಮ್ಮ ಮನೆ ಖರ್ಚಿಗೆ ಬೇಕಾದಷ್ಟು ಅಕ್ಕಿ ಮುಡಿಗಳನ್ನು ಇಟ್ಟುಕೊಂಡು ಉಳಿದ ಅಕ್ಕಿಗಳನ್ನು ಬ್ರಿಟಿಷರ ಸರಕಾರಕ್ಕೆ ಲೆವಿ ಅಂತ ಕೊಡಬೇಕಿತ್ತು. ಅದಕ್ಕೆ ಸರಕಾರ ನಿಗದಿಪಡಿಸಿದಷ್ಟೇ ಬೆಲೆ. ಸರಕಾರದ ಅನುಮತಿಯಿಲ್ಲದೆ ಜನರು ಔತಣ ಕೂಟಗಳನ್ನು ನಡೆಸುವಂತಿರಲಿಲ್ಲ. ಮದುವೆ, ಉಪನಯನಗಳಿಗೆ ಇಪ್ಪತ್ತೈದು ಮಂದಿಗಿಂತ ಹೆಚ್ಚಿನವರಿಗೆ ಊಟ ಹಾಕುವಂತಿರಲಿಲ್ಲ. ದೇವಸ್ಥಾನಗಳ ಜಾತ್ರೆಗಳಲ್ಲಿ ಸಾರ್ವಜನಿಕ ಅನ್ನ ಸಂತರ್ಪಣೆ ನಿಂತುಹೋಯಿತು.

ಬ್ರಿಟಿಷ್ ಸರಕಾರ ನಮ್ಮ ದೇಶದ ಪ್ರಜೆಗಳನ್ನು ಈ ರೀತಿಯ ಕಷ್ಟಗಳಿಗೆ ಗುರಿಮಾಡಿದ್ದು ಒಂದುಕಡೆ ಇದ್ದೇ ಇತ್ತು. ಅದರ ಜತೆಗೆ ಯುದ್ಧ ಫಂಡಿಗೆ ಎಲ್ಲಾ ಜನರು ಸಹಾಯ ಮಾಡಬೇಕೆಂದು ಸೂಚನೆ ಹೊರಡಿಸಿ ಪಟೇಲರುಗಳಿಗೆ ಫಂಡಿಗೆ ಹಣ ಸಂಗ್ರಹಿಸುವ ಜವಾಬ್ದಾರಿ ನೀಡಿದರು. ಯುದ್ಧ ಫಂಡಿಗೆ ಹಣ ಸಂಗ್ರಹಿಸಲು ಲಾಟರಿ ಟಿಕೆಟುಗಳನ್ನು ಕೂಡಾ ಮುದ್ರಿಸಿದ್ದರು. ಅವುಗಳನ್ನು ಪಟೇಲರು ತಮ್ಮ ತಮ್ಮ ಊರುಗಳಲ್ಲಿ ಮಾರಾಟ ಮಾಡಿ ಸರಕಾರಕ್ಕೆ ಹಣ ಕಟ್ಟಬೇಕಾಗಿತ್ತು.

ನಡುಕಣಿಯ ಪಟೇಲ ವೆಂಕಟರಮಣಯ್ಯನವರು ಬ್ರಿಟಿಷ್ ಸರಕಾರದ ನೌಕರರಾಗಿದ್ದರೂ ಗಾಂಧೀಜಿಯವರ ಅಭಿಮಾನಿಯಾಗಿದ್ದರು. ಶ್ರೀಮಂತರಾಗಿದ್ದ ಅವರು ತಮ್ಮ ಊರಿನ ಬಡವರಿಗೆ ಹಲವು ವಿಧದಿಂದ ಸಹಾಯ ಮಾಡುತ್ತಿದ್ದರು. ತಹಸೀಲ್ದಾರರ ಕಛೇರಿಯಲ್ಲಿ ಮಾರಾಟಕ್ಕೆ ಕೊಟ್ಟಿದ್ದ ಲಾಟರಿ ಟಿಕೇಟುಗಳನ್ನು ಅವರು ತಮ್ಮ ಊರಿನವರಿಗೆ ಮಾರಾಟ ಮಾಡುವ ಗೋಜಿಗೆ ಹೋಗದೆ ಒಳಗೆ ತೆಗೆದಿಟ್ಟಿದ್ದರು. ಊಟಕ್ಕಿಲ್ಲದ ಜನರಿಗೆ ಲಾಟರಿ ಟಿಕೇಟು ಮಾರುವುದು ಹೇಗೆ? ಅಲ್ಲದೆ ಅವರು ಬ್ರಿಟಿಷರ ಯುದ್ಧಕ್ಕೆ ನಾವೇಕೆ ಹಣ ಕೊಡಬೇಕು ಎಂಬ ಮನೋಭಾವದವರು. ಬ್ರಿಟಿಷರ ಯುದ್ಧದ ಫಂಡಿಗೆ ಊರಿನ ಬಡವರಿಂದ ಹಣ ಸಂಗ್ರಹಿಸುವುದು ಅನೈತಿಕವೆಂದೇ ಭಾವಿಸಿದ್ದರು.

ಬೇರೆ ಕೆಲವು ಊರಿನ ಪಟೇಲರಂತೆ ಅವರೇ ಆ ಟಿಕೇಟುಗಳ ಹಣವನ್ನು ಸರಕಾರಕ್ಕೆ ಕಟ್ಟಿಬಿಟ್ಟು ಸುಮ್ಮನಿರಬಹುದಿತ್ತು. ಆದರೆ ಆ ದಾರಿ ಹಿಡಿಯಲು ಅವರ ಮನಸ್ಸು ಒಪ್ಪಲಿಲ್ಲ. ಊಳಿಗದ ಚಾಕರಿ ಇನ್ನು ಸಾಕು ಎಂದು ನಿರ್ಧರಿಸಿಯೇ ಅವರು ತಾಲೂಕ್ ಕಛೇರಿಯ ಅಧಿಕಾರಿಗಳೊಂದಿಗೆ ಯುದ್ಧವನ್ನು ವಿರೋಧಿಸಿ ಬಿಸಿಬಿಸಿ ಚರ್ಚೆ ಮಾಡಿಯೂ ಇದ್ದರು. ಅದರ ಪರಿಣಾಮವಾಗಿ ಅವರಿಗೆ ಒಂದು ದಿನ ಒಂದು ನೋಟೀಸು ಬಂತು. ಅದರಲ್ಲಿ ಹೀಗಿತ್ತು :

“ನಡುಕಣಿ ಗ್ರಾಮದ ಪಠೇಲ ಶ್ರೀ ಎನ್. ವೆಂಕಟರಮಣಯ್ಯನವರ ಮೇಲೆ ಉಡುಪಿ ತಾಲ್ಕು ತಹಸಿಲದಾರ್ರವರು ಏರ್ಪಡಿಸಿದ ಚಾರ್ಜು.

ಅ) ನೀವು ಪಠೇಲರಾಗಿ ಯುದ್ಧದ ಸಂಬಂಧ ಗವರ್ಮೆಂಟಿಗೆ ಸಹಾಯ ಮಾಡುವುದರ ಬದಲಿಗೆ ಈ ಕೆಳಗಿನ ರೀತಿಯಲ್ಲಿ ಅಸಹಕಾರ ತೋರಿಸಿದ್ದರಿಂದ ನೀವು ಪಠೇಲಿಕೆ ಕೆಲಸ ನೋಡಲಿಕ್ಕೆ ಅಯೋಗ್ಯರಾಗಿರುತ್ತೀರಿ.

ಆ) ಗ್ರಾಮದಲ್ಲಿ ಪ್ರಚುರಗೊಳಿಸುವರೆ ಮದ್ರಾಸ್ ಗವರ್ಮೆಂಟಿನವರು ಹೊರಡಿಸಿದ ಪೋಸ್ಟರ್ಸ್ ಮತ್ತು ಕರಪತ್ರ ವಗೈರೆ ಪ್ರಕಟಣೆಗಳನ್ನು ನಿಮ್ಮ ಗ್ರಾಮಗಳಲ್ಲಿ ಪ್ರಚುರಗೊಳಿಸುವಗೋಸ್ಕರ ನಾವು ನಿಮಗೆ ಆಗಿಂದಾಗ್ಗೆ ಕಳುಹಿಸಿಕೊಟ್ಟಿರುತ್ತಾ ನೀವು ಗ್ರಾಮದಲ್ಲಿ ಅವುಗಳನ್ನು ಪ್ರಚಾರ ಮಾಡದೆ ಕಟ್ಟಿ ಇಟ್ಟಿರುತ್ತೀರಿ. ಮತ್ತು ಹಾಗೆ ಕಟ್ಟಿ ಇಟ್ಟುಕೊಂಡದ್ದಾಗಿ ಜಮಾಬಂದಿ ಆಫೀಸರ್ರ ಮುಂದೆ ಒಪ್ಪಿಕೊಂಡಿರುತ್ತೀರಿ.

ಇ) ನಿಮಗೆ ಮಾರಾಟ ಮಾಡಬೇಕೆಂಬ ಆದೇಶದೊಂದಿಗೆ ಕೊಟ್ಟಿದ್ದ ಟಿಕೇಟು ಬುಕ್ಕುಗಳನ್ನು ವಾಪಾಸು ಮಾಡಿದ್ದೀರಿ.

ಈ) ಯುದ್ಧಕ್ಕೆ ಯಾವ ರೀತಿಯಿಂದಲೂ ಸಹಾಯ ಮಾಡಬಾರದಾಗಿ ಕುಂದಾಪುರ ರೆವೆನ್ಯೂ ಡಿವಿಜನಲ್ ಆಫೀಸರ್ರ ಕೂಡೆ ಚರ್ಚಿಸಿ ಯುದ್ಧ ನಿಷೇಧಕ ಅಭಿಪ್ರಾಯವನ್ನು ಪ್ರಚಾರ ಮಾಡಿರುತ್ತೀರಿ.

ಈ ಚಾರ್ಜುಗಳನ್ನು ನಿಮ್ಮ ಮೇಲೆ ಸಾಬೀತು ಮಾಡಿ ನಿಮ್ಮನ್ನು ಪಠೇಲಿಕೆ ಕೆಲಸದಿಂದ ಯಾಕೆ ಡಿಸ್ಮಿಸ್ ಮಾಡಬಾರದೆಂಬುದಕ್ಕೆ ನೀವು ಬರಹ ಮೂಲಕ ಉದಾಹರಣೆಯನ್ನು ನಮ್ಮ ಮುಂದೆ ದಾಕ್ಲು ಮಾಡತಕ್ಕದ್ದು. ಮತ್ತು ಈ ಚಾರ್ಜು ನಾಮೆ ನಿಮಗೆ ಜಾರಿಯಾದಂದಿನಿಂದ ಎರಡನೇ ಹೇಳಿಕೆ ಕೊಡುವವರೆಗೆ ನಿಮ್ಮನ್ನು ಪಠೇಲಿಕೆ ಕೆಲಸದಿಂದ ಅಮಾನತು ಮಾಡಲಾಗಿದೆ.

ನಡುಕಣಿ ಗ್ರಾಮದ ಪಟೇಲರಾಗಿ ಕುದರಾಡಿಯ ಗ್ರಾಮ ಪಟೇಲರಾದ ರಾಮದಾಸ ಪ್ರಭುಗಳನ್ನು ನೇಮಿಸಿರುವುದರಿಂದ ಅವರಿಗೆ ಚಾರ್ಜು ಕೊಡಲು ನಿಮಗೆ ತಿಳಿಸಲಾಗಿದೆ.”

ಈ ಪತ್ರವನ್ನು ಕುದರಾಡಿಯ ಉಗ್ರಾಣಿ ಪಟೇಲರಿಗೆ ತಂದು ಕೊಟ್ಟು, ಪತ್ರ ಬಟವಾಡೆ ಆಗಿದೆ ಎಂದು ಅವರ ಸಹಿ ಪಡೆದುಕೊಂಡು ಹೊರಟುಹೋದ. ಪಟೇಲರು ಆದೇಶವನ್ನು ಓದಿ ನಸುನಕ್ಕು ಚಾವಡಿಯಲ್ಲಿ ಕುಳಿತು ವಿರಾಮವಾಗಿ ಎಲೆಯಡಿಕೆ ಹಾಕಿಕೊಂಡರು. ಬ್ರಿಟಿಷರು ಈ ದೇಶದಿಂದ ಹೊರಟುಹೋಗಿ, ನಮ್ಮದೇ ಆದ ಗಾಂಧೀರಾಜ್ಯ ಸ್ಥಾಪನೆಯಾಗುವುದಕ್ಕೆ ಹೆಚ್ಚು ಸಮಯ ಬೇಡ ಎನ್ನುವ ಭರವಸೆ ಅವರಿಗೆ ಇತ್ತು.

******

ಯುದ್ಧ ಮುಂದುವರಿಯಿತು. ಹಣ ಕೊಟ್ಟರೂ ಅಕ್ಕಿ ಸಿಗದ ಪರಿಸ್ಥಿತಿ ತಲೆದೋರಿತು. ಬಂಡಸಾಲೆಯ ವ್ಯಾಪಾರಿಗಳು ಕಳ್ಳಕೈಯಲ್ಲಿ ಅಕ್ಕಿ ಮುಡಿಗಳನ್ನು ಕೊಂಡುಕೊಂಡು ದಾಸ್ತಾನು ಮಾಡಿ ಭಾರೀ ಬೆಲೆಗೆ ಅಕ್ಕಿಯನ್ನು ಮಾರುತ್ತಿದ್ದರು. ಅಂಥ ವ್ಯಾಪಾರಿಗಳ ಬಂಡಸಾಲೆಗಳು ಮಂಗಳೂರು, ಮೂಲ್ಕಿ, ಕಟಪಾಡಿ ಮತ್ತು ಉಡುಪಿ ಮುಂತಾದ ದೊಡ್ಡ ಪಟ್ಟಣಗಳಲ್ಲಿದ್ದವು. ಶ್ರೀಮಂತರು ಲೆವಿ ಅಧಿಕಾರಿಗಳ ಕಣ್ಣು ತಪ್ಪಿಸಿ ಅಕ್ಕಿ ಮುಡಿಗಳನ್ನು ಬೇರೆ ಕಡೆಗಳಲ್ಲಿ ಅಡಗಿಸಿಟ್ಟು ಆಮೇಲೆ ಗುಟ್ಟಿನಲ್ಲಿ ಬಂಡಸಾಲೆಯವರಿಗೆ ಮಾರುತ್ತಿದ್ದರು.

ನಡುಕಣಿಯ ಮಾಜಿ ಪಟೇಲ ವೆಂಕಟರಮಣಯ್ಯನವರು ತಮ್ಮ ಮನೆಯ ಹಿಂದಿನ ಹಾಡಿಯಲ್ಲಿದ್ದ ಒಂದು ಹಳು ಮುಚ್ಚಿದ್ದ ಹೊಂಡದಲ್ಲಿ ಐವತ್ತು ಅಕ್ಕಿಮುಡಿಗಳನ್ನು ರಹಸ್ಯವಾಗಿ ಇಡಿಸಿದ್ದರು. ಆ ಹೊಂಡವನ್ನು ಕಂಡುಹುಡುಕಿದ್ದವನು ಅವರ ನಂಬಿಗಸ್ಥ ಬಂಟ ಬೂದ ಪೂಜಾರಿ.

ಲೆವಿ ಅಧಿಕಾರಿಗಳು ಊರೂರಿಗೆ ತಿರುಗಿ ಅಕ್ಕಿಮುಡಿ ಲೆಕ್ಕ ಹಾಕಿ ಲೆವಿ ನಿಗದಿ ಮಾಡುತ್ತಾರೆ ಎಂದು ತಿಳಿದ ಮೇಲೆ ವೆಂಕಟರಮಣಯ್ಯನವರು ತಮ್ಮ ಕೆಲವು ಅಕ್ಕಿಮುಡಿಗಳನ್ನು ಅಡಗಿಸಿಡಲು ತೀರ್ಮಾನಿಸಿದರು. ಅವರಿಗೆ ಅವುಗಳನ್ನು ಕಳ್ಳಕೈಯಲ್ಲಿ ಮಾರಿ ಹಣ ಸಂಪಾದನೆ ಮಾಡುವ ಉದ್ದೇಶ ಇರಲಿಲ್ಲ. ಅವರಿಗೆ ಮನೆಯಲ್ಲಿ ಸಮಾರಾಧನೆಗಳನ್ನು ಮಾಡಿ ಊಟ ಹಾಕುವುದೆಂದರೆ ಖುಷಿ. ಈಗ ಅದಕ್ಕೆ ಸರಕಾರ ಕಡಿವಾಣ ಹಾಕಿತ್ತು. ವೆಂಕಟರಮಣಯ್ಯನವರು ಅದರ ಬದಲು ಊಟಕ್ಕಿಲ್ಲದವರಿಗೆ ಅಕ್ಕಿಯನ್ನು ದಾನ ನೀಡುತ್ತಿದ್ದರು. ಅಕ್ಕಿ ಬೇಡಿಕೊಂಡು ಬರುವ ಯಾರಿಗೂ ಇಲ್ಲ ಅಂತ ಹೇಳಬಾರದು ಎನ್ನುವುದು ಅವರು ತಮ್ಮ ಮನೆಯಲ್ಲಿ ಮಾಡಿಕೊಂಡಿದ್ದ ನಿಯಮ.

ವೆಂಕಟರಮಣಯ್ಯನವರ ಬಳಿ ಊಟಕ್ಕೆ ಅಕ್ಕಿಯಿಲ್ಲ ಎಂದು ಕೇಳಿಕೊಂಡು ಬರುವವರಿಗೆಲ್ಲ ಅವರು ಒಂದು ಪಾವು ಎರಡು ಪಾವು ಅಕ್ಕಿ ಕೊಟ್ಟು ಕಳಿಸುತ್ತಿದ್ದರು. ಜನರು ಕೂಡಾ ಸತ್ಯವಂತರೂ ಧರ್ಮನಿಷ್ಠರೂ ಆಗಿದ್ದ ಕಾಲವದು. ಅವರೆಲ್ಲ ಪಟೇಲರ ಮನೆ, ತೋಟ, ಗದ್ದೆಗಳಲ್ಲಿ ಏನಾದರೂ ಕೆಲಸವಿದ್ದರೆ ತಾವೇ ಹುಡುಕಿ ಸ್ವಲ್ಪ ಹೊತ್ತು ಮಾಡಿಹೋಗುತ್ತಿದ್ದರು. ಉದಾಹರಣೆಗೆ ತೋಟದಲ್ಲಿ ತೆಂಗಿನ ಸೋಗೆಗಳು ಬಿದ್ದಿದ್ದರೆ ಅವುಗಳನ್ನು ಎಳೆದುಕೊಂಡು ಬಂದು ಪಟೇಲರ ಅಂಗಳಕ್ಕೆ ಹಾಕುವುದು, ಹಸಿ ಮಡಲುಗಳನ್ನು ಹೆಣೆದು ಚಪ್ಪರಕ್ಕಾಗುವ ತಡಿಕೆಗಳನ್ನು ತಯಾರಿಸುವುದು, ಒಣಗಿದ ಮಡಲುಗಳನ್ನು ಕಡಿದು ಸೂಟೆಗಳನ್ನು ತಯಾರಿಸುವುದು, ಬಿಸಿನೀರ ಒಲೆಗೆ ಇಡಲು ಅನುಕೂಲವಾಗುವಂತೆ ಸೋಗೆಗಳನ್ನು ತುಂಡುಮಾಡಿ ಕೊತ್ತಳಿಗೆಗಳನ್ನು ತಯಾರಿಸಿ ಬಚ್ಚಲು ಮನೆಯಲ್ಲಿ ಪೇರಿಸಿಡುವುದು ಇತ್ಯಾದಿ ಕೆಲಸಗಳನ್ನು ಪಟೇಲರ ಮನೆಗೆ ಸಹಾಯ ಕೇಳಿ ಬರುವ ಹಳ್ಳಿಗರು ಅವರಾಗಿಯೇ ಮಾಡುತ್ತಿದ್ದರು.

ಈಗ ಲೆವಿಯವರಿಗೆ ಅಕ್ಕಿ ಮುಡಿ ಸಿಕ್ಕಬಾರದೆಂದು ನಿರ್ಧರಿಸಿದ ಪಟೇಲರು ತಮ್ಮ ನಂಬಿಗೆಯ ಬಂಟನಾದ ಬೂದನನ್ನು ಕರೆದು ಅವನ ಜತೆ ಅಕ್ಕಿ ಮುಡಿಗಳನ್ನು ಎಲ್ಲಿ ಅಡಗಿಸಿಡಬಹುದೆಂದು ಕೇಳಿದರು. ಆಗ ಅವನು ಕಾಡು ಹಂದಿಗಳು ಅಡಗಿಕೊಳ್ಳುವ ಹೊಂಡವೊಂದು ಮೇಲಿನ ಕಾಡಿನಲ್ಲಿದೆ ಎಂದು ತಿಳಿಸಿದ್ದ. ಆ ಹೊಂಡದಲ್ಲಿ ಐವತ್ತು ಅಕ್ಕಿಮುಡಿಗಳನ್ನು ಯಾರಿಗೂ ತಿಳಿಯದಂತೆ ಹೊತ್ತುಕೊಂಡು ಹೋಗಿ ಹಾಕುವ ಕೆಲಸವನ್ನು ಪಟೇಲರು ಬೂದನಿಗೇ ಒಪ್ಪಿಸಿದರು. ಎರಡು ಮೂರು ದಿನಗಳ ಒಳಗೆ ಯಾರೂ ಇಲ್ಲದ ಹೊತ್ತಿನಲ್ಲಿ ಅವನು ಆ ಕೆಲಸವನ್ನು ಮಾಡಿ ಮುಗಿಸಿದ.

“ಇನ್ನು ಮುಡಿಗಳನ್ನು ತೆಗೆಯಬೇಕಾದರೆ ಪೊದರುಗಳನ್ನು ಕಡಿದೇ ತೆಗೆಯಬೇಕಾದೀತು” ಎಂದ ಬೂದ.

“ತೆಗೆಯಲಿಕ್ಕೆ ಕಷ್ಟವಾದಷ್ಟು ನಮಗೆ ಒಳ್ಳೆಯದು. ಈಗ ಆ ಕಳ್ಳರಿಗೆ ಸಿಗದಿದ್ದರೆ ಸಾಕು. ನಾವು ತೆಗೆಯುವಾಗ ರಾಜಾರೋಷವಾಗಿ ತೆಗೆಯುವ” ಎಂದರು ಪಟೇಲರು.

ಅದಾದ ಒಂದೇ ವಾರದಲ್ಲಿ ಲೆವಿ ಅಧಿಕಾರಿಗಳು ಬಂದೇ ಬಿಟ್ಟರು. ಉಳಿದವರೆಲ್ಲ ಚಾವಡಿಯಲ್ಲಿ ಕುಳಿತಿದ್ದಾಗ, ಅವರಲ್ಲಿ ಒಬ್ಬ ‘ನಾನು ಬ್ರಾಹ್ಮಣ, ಒಳಗೆ ಬರಬಹುದಲ್ಲವೇ’ ಎನ್ನುತ್ತ ಸೀದಾ ಒಳಗೆ ಹೋಗಿ ಕುತ್ತಟ್ಟದಲ್ಲಿದ್ದ ಅಕ್ಕಿ ಮುಡಿಗಳನ್ನು ಲೆಕ್ಕ ಹಾಕಿಕೊಂಡು ಬಂದ. ಅವರ ಮುಖ್ಯಸ್ಥ ಆ ಲೆಕ್ಕವನ್ನು ಕೇಳಿ,
“ಏನು, ಇಷ್ಟು ದೊಡ್ಡ ಆಸ್ತಿಯಲ್ಲಿ ಇಷ್ಟೇ ಹುಟ್ಟುವಳಿಯಾ?” ಎಂದು ಗಟ್ಟಿಯಾಗಿ ಆಶ್ಚರ್ಯ ವ್ಯಕ್ತಪಡಿಸಿದ.

ಈಗ ಪಟೇಲರಾಗಿದ್ದ ರಾಮದಾಸ ಪ್ರಭುಗಳು ಲೆವಿ ಅಧಿಕಾರಿಗಳಿಗೆ ಮೊದಲೇ ಸೂಚನೆ ಕೊಟ್ಟಿದ್ದರು – ವೆಂಕಟರಮಣಯ್ಯನವರಿಗೆ ಬಹಳ ಹುಟ್ಟುವಳಿ ಇದೆ, ಅವರಿಗೆ ದೊಡ್ಡ ಮಟ್ಟದಲ್ಲಿ ಲೆವಿ ಹಾಕಿ ಎಂದು. ಹಾಗಾಗಿ ಲೆವಿ ಅಧಿಕಾರಿಗಳು ವೆಂಕಟರಮಣಯ್ಯನವರ ಅಕ್ಕಿ ದಾಸ್ತಾನಿನ ಬಗ್ಗೆ ದೊಡ್ಡ ನಿರೀಕ್ಷೆ ಇಟ್ಟುಕೊಂಡು ಬಂದಿದ್ದರು. ಇಲ್ಲಿ ನೋಡಿದರೆ ಪರಿಸ್ಥಿತಿ ತದ್ವಿರುದ್ಧ!

“ಉಳಿದ ಅಕ್ಕಿಯೇನಾಯಿತು ಸ್ವಾಮೀ?” ಎಂದು ಲೆವಿ ಆಫೀಸರು ಕೇಳಿದ.

“ಯಾವ ಉಳಿದ ಅಕ್ಕಿ? ನೀವು ಕೊಟ್ಟಿಟ್ಟಿರುವ ಅಕ್ಕಿಯೇನಾದರೂ ಉಂಟಾ?” ಎಂದು ಪಟೇಲರು ಕಣ್ಣುಕೆಂಪಗಾಗಿಸಿಕೊಂಡು ಕೇಳಿದಾಗ ಆಫೀಸರು ಒಳಗಿಂದೊಳಗೆ ಬೆವರಿದ್ದ.

“ಹಾಗಲ್ಲ ಸ್ವಾಮೀ, ನಮ್ಮ ಬಳಿ ಇಷ್ಟು ದೊಡ್ಡ ಹಿಡುವಳಿಗೆ ಇಷ್ಟೇ ಅಕ್ಕಿ ಬರಬೇಕು ಅಂತ ಲೆಕ್ಕವಿರುತ್ತದಲ್ಲ. ಆ ಲೆಕ್ಕದಲ್ಲಿ ನಿಮ್ಮ ಆಸ್ತಿಗೆ ಇಲ್ಲಿರುವ ಅಕ್ಕಿ ಕಡಿಮೆಯಾಯಿತು ಎಂದು ಹೇಳಿದೆ ಅಷ್ಟೆ” ಎಂದ.

“ನಮ್ಮಲ್ಲಿ ಉತ್ಪತ್ತಿಗಿಂತ ಹೆಚ್ಚು ಖರ್ಚೂ ಇರುತ್ತದೆ. ಇಲ್ಲಿ ಒಂದು ದಿನ ಇದ್ದು ನೋಡಿ. ನಮ್ಮ ಮನೆಯಲ್ಲಿ ನಿತ್ಯ ಹೊರಗಿನ ಅತಿಥಿಗಳು ಊಟಕ್ಕೆ ಇರುತ್ತಾರೆ. ನೀವು ಕೂಡಾ ಮಧ್ಯಾಹ್ನದ ಮುಂಚೆ ಬಂದರೆ ಇಲ್ಲಿಂದ ಊಟಮಾಡದೆ ಹೋಗುವಂತಿಲ್ಲ. ಇದು ನಮ್ಮ ಪದ್ಧತಿ. ಇದನ್ನು ನಾವು ಅಂಗ್ರೇಜಿಯವರ ಮರ್ಜಿಗನುಸಾರವಾಗಿ ಬದಲಾಯಿಸಲಿಕ್ಕೆ ಆಗುತ್ತದಾ? ನಮ್ಮ ನಮ್ಮ ಮನೆಗಳಲ್ಲಿ ನಮ್ಮ ನಮ್ಮ ಮನೆದೇವರಿದ್ದಾರಲ್ಲ ಸ್ವಾಮೀ? ನಮ್ಮ ಮನೆಯ ಕುತ್ತಟ್ಟ ಮಾತ್ರ ನೋಡುವುದಲ್ಲ ನೀವು, ಭಟ್ರೇ, ನೀವು ಒಳಗೆ ಹೋಗಿ ನಮ್ಮ ದೇವರಕೋಣೆಯನ್ನೂ ನೋಡಿ ಬನ್ನಿ. ಅಲ್ಲಿದ್ದಾನಲ್ಲ ಗಣಪತಿ, ಅವನು ಸಾಮಾನ್ಯದವನಲ್ಲ. ನಿತ್ಯ ನೈವೇದ್ಯ ಆಗಬೇಕು ಅವನಿಗೆ. ಮತ್ತೆ ಅಲ್ಲಿ ಇನ್ನೊಂದು ಸಣ್ಣ ದೇವಿಯ ವಿಗ್ರಹವಿದೆ. ಅವಳ ಕೈಯಲ್ಲಿರುವುದು ಸೌಟು. ಅನ್ನಪೂರ್ಣೇಶ್ವರಿಯ ವಿಗ್ರಹವದು. ಅದಕ್ಕಾಗಿಯೇ ನಮ್ಮ ಮನೆಯಲ್ಲಿ ಯಾರಾದರೂ ಹೊರಗಿನ ಅತಿಥಿಗಳು ಊಟಕ್ಕೆ ಇದ್ದರೆ ಮಾತ್ರ ನಮಗೆ ಸಮಾಧಾನ. ಇದೆಲ್ಲ ನಿಮ್ಮ ಸರಕಾರಕ್ಕೆ ಗೊತ್ತುಂಟಾ? ನೀವೆಲ್ಲ ಇರುವುದು ಯಾಕೆ ಹೇಳಿ? ನಮ್ಮ ಜನರ ರೀತಿ ನೀತಿಗಳನ್ನು ಅರಿತುಕೊಂಡು ಸರಕಾರಕ್ಕೆ ಹೀಗೆ ಹೀಗೆ ಎಂದು ತಿಳಿವಳಿಕೆ ಕೊಡಬೇಕು. ಅದು ಬಿಟ್ಟು ನೀವೇ ಬ್ರಿಟಿಷರಂತೆ ಜರ್ಬು ತೋರಿಸಿದರೆ ಹೇಗೆ? ಏನಂತ ಎಣಿಸಿದ್ದೀರಿ?” ಎಂದು ಬಿಸಿಮಾತಾಡಿದಾಗ ಲೆವಿ ಅಧಿಕಾರಿಗಳು ಬೆದರಿ ಪೆಚ್ಚಾಗಿ ಹೋದರು.

ಲೆವಿ ಅಧಿಕಾರಿಗಳು ಯೋಚಿಸಿದಂತೆ ವೆಂಕಟರಮಣಯ್ಯನವರ ಮನೆಯಲ್ಲಿ ಲೆವಿ ಸಂಗ್ರಹವಾಗಲಿಲ್ಲ.

******

ಯುದ್ಧ ಮತ್ತೂ ಮುಂದುವರಿಯುತ್ತಲೇ ಇತ್ತು. ಎಲ್ಲರಿಗೂ ಕಷ್ಟ! ಕಷ್ಟ! ಕಷ್ಟ! ಆಗ ನಡುಕಣಿಯಲ್ಲಿ ಒಂದು ಘಟನೆ ನಡೆಯಿತು.
ಕಟಪಾಡಿಯ ಸಾಹುಕಾರರೊಬ್ಬರು ನಡುಕಣಿಯ ಮೂಲಕ ಕಳ್ಳಕೈಯ ಅಕ್ಕಿಮುಡಿಗಳನ್ನು ಎತ್ತಿನಗಾಡಿಯಲ್ಲಿ ಹೇರಿಕೊಂಡು ಹೋಗಲಿದ್ದಾರೆ ಎನ್ನುವ ಸುದ್ದಿ ನಡುಕಣಿಯ ಜನರಿಗೆ ತಲುಪಿತು.

ತಕ್ಷಣ ರಂಗ ಮೂಲ್ಯ ಎಂಬ ಬುಡುಒಕ್ಕಲಿನವನ ನೇತೃತ್ವದಲ್ಲಿ ನಡುಕಣಿಯ ಕೆಲವರು ಬಡವರು ರಹಸ್ಯವಾಗಿ ಒಂದು ಕೂಟ ಕಟ್ಟಿದರು. ಸಾಹುಕಾರ ಅಕ್ಕಿಯ ಗಾಡಿಯನ್ನು ನಡುಕಣಿಯ ಹೊರವಲಯದಲ್ಲಿರುವ ಪುಂಡಗೋಳಿಯ ಬಳಿ ತಡೆದು ಲೂಟಿ ಮಾಡಬೇಕೆನ್ನುವುದೇ ಅವರ ಸಂಕಲ್ಪ.

ಅಕ್ಕಿ ಮುಡಿಗಳನ್ನು ಲೂಟಿ ಮಾಡಲು ಅಲ್ಲಿ ಸೇರಿದ್ದವರ ಪೈಕಿ ಎಲ್ಲ ಜಾತಿಯ ಬಡವರೂ ಇದ್ದರು. ವಿಶೇಷವೆಂದರೆ ಅವರ ಜತೆಗೆ ಸುಬ್ರಾಯ ಸರಳಾಯರು ಎಂಬ ವೇದ ಓದಿದ ಸಾತ್ವಿಕ ಮನುಷ್ಯನೂ ಇದ್ದರು. ಅವರು ಆ ಊರಿನ ದೇವಸ್ಥಾನದ ಪೂಜೆಯ ಹಕ್ಕಿನ ವಂಶದವರು. ಈಗ ಮಾತ್ರ ಕಾರಣಾಂತರದಿಂದ ಅಡಿಗೆಯವರಾಗಿ ದುಡಿಯುತ್ತಿದ್ದರು. ಊರಿನಲ್ಲಿ ಯಾವ ಸಮಾರಾಧನೆಯೂ ನಡೆಯದ ಕಾರಣ ಅವರಿಗೆ ಅಡಿಗೆಯ ಕೆಲಸವೇ ಸಿಕ್ಕಲಿಲ್ಲ. ಹಾಗಾಗಿ ಅವರ ಮನೆಯಲ್ಲಿಯೂ ನಿತ್ಯ ಒಲೆ ಉರಿಯದ ಸ್ಥಿತಿ ಬಂದಿತ್ತು.

ಸುಬ್ರಾಯರು ಅಕ್ಕಿ ಲೂಟಿ ಮಾಡಿಕೊಳ್ಳುವವರ ಜತೆ ಸೇರಿಕೊಳ್ಳಲು ರಂಗ ಮೂಲ್ಯನೇ ಕಾರಣ. ಅವನಿಗೆ ಸುಬ್ರಾಯರ ಸಂಸಾರದ ಪಾಡು ತಿಳಿಯದ್ದೇನಲ್ಲ. ಹಿಂದಿನ ದಿನ ಸಂಜೆಯ ಹೊತ್ತು ಅವನು ಸುಬ್ರಾಯರ ಮನೆಗೆ ಬಂದು ಅವರನ್ನು ಆಚೆಗೆ ಕರೆದು ಹೇಳಿದ್ದ : “ಭಟ್ರೇ, ನಾನೊಂದು ಹೇಳುತ್ತೇನೆ. ನಿಮಗೆ ಕೂಡಾ ಕಷ್ಟ ಅನ್ನುವುದು ನನಗೆ ಗೊತ್ತಾಗುತ್ತದೆ. ನಾವು ನಾಳೆ ಕಳ್ಳಕೈಯ ಅಕ್ಕಿ ಮುಡಿ ಲೂಟಿ ಮಾಡಲು ಹೋಗುತ್ತಿದ್ದೇವೆ. ನಮ್ಮ ಊರಿನಲ್ಲಿ ನಾವು ಬೆವರು ಸುರಿಸಿ ಬೆಳೆಸಿದ ಅಕ್ಕಿ ಪರೆಂಗಿಯವರಿಗೆ ಸೇರುವುದನ್ನು ನಾವು ಸಹಿಸುವುದಿಲ್ಲ. ಏನು ಬೇಕಾದರೂ ಆಗಲಿ. ನೀವು ಕೂಡಾ ನಾಳೆ ಬೆಳಗ್ಗೆ ಪುಂಡಗೋಳಿಯ ಬಳಿ ಬನ್ನಿ.”

ಸುಬ್ರಾಯರು ಬಹಳಷ್ಟು ಯೋಚಿಸಿ ಕೊನೆಗೆ ತಾನು ಕೂಡಾ ರಂಗ ಮೂಲ್ಯನ ಜತೆಗೆ ಹೋಗುವುದೇ ಸೂಕ್ತ ಅಂತ ತೀರ್ಮಾನಿಸಿದ್ದರು. ಸುಬ್ರಾಯರಿಗಿಂತಲೂ ಕಷ್ಟದಲ್ಲಿ ನಡುಕಣಿಯ ಇತರ ಬಡವರಿದ್ದರು. ಅಂತಹ ಹಲವಾರು ಜನ ಅಲ್ಲಿ ಸೇರಿದ್ದರು. ಸುಬ್ರಾಯರಂತೆ ಯಾರ ಸುದ್ದಿಗೂ ಹೋಗದ ಕೊಡಪಟ್ಟೆ ಶೇಷಪ್ಪ ಎಂಬ ಬಡ ಯುವಕನೂ ಅವರ ಜತೆಗೆ ಬಂದಿದ್ದ. ಶೇಷಪ್ಪ ಮತ್ತು ಅವನ ವೃದ್ಧೆ ತಾಯಿ ಒಂದು ಕಮ್ಮಾರಸಾಲೆ ನಡೆಸುತ್ತಿದ್ದರು.

ಕಟಪಾಡಿಯ ಸಾಹುಕಾರರ ಗಾಡಿ ನಡುಕಣಿ ಊರಿನ ಮೂಲಕ ಹಾದು ಹೋಗುತ್ತದೆ ಎಂದು ಗೊತ್ತಾಗಿದ್ದ ದಿನ ಹದಿನೆಂಟು ಜನ ಬೆಳಗ್ಗಿನಿಂದಲೇ ಪುಂಡಗೋಳಿ ಎಂಬ ಸ್ಥಳದಲ್ಲಿ ಮರಗಳ ಮರೆಯಲ್ಲಿ ಸದ್ದು ಮಾಡದೆ ಕಾದು ಕುಳಿತಿದ್ದರು. ಸುಬ್ರಾಯರು ತಮ್ಮ ಜತೆಗೆ ಇದ್ದುದು ಅವರಿಗೆಲ್ಲ ನೂರಾನೆಯ ಬಲ ಬಂದಂತಾಗಿತ್ತು. ಸುಬ್ರಾಯರು ಕೂಡಾ ತಮ್ಮ ಕೃತ್ಯವನ್ನು ಒಪ್ಪಿ ತಾವೂ ಸೇರಿಕೊಳ್ಳುವುದೆಂದರೆ ತಮ್ಮದು ನ್ಯಾಯೋಚಿತ ಹೋರಾಟ ಎಂದೇ ಜನರಿಗೆ ಅನಿಸಿಬಿಟ್ಟಿತು.

ಪುಂಡಗೋಳಿ ಸಾಮಾನ್ಯವಾಗಿ ಜನ ಓಡಾಡುವ ಸ್ಥಳವಲ್ಲ. ನಡುಕಣಿಯ ಪೇಟೆ ಅನ್ನಬಹುದಾದ ಮಂಜನ ಗೂಡಂಗಡಿ, ಮತ್ತು ಇತ್ತೀಚೆಗೆ ಪ್ರಾರಂಭವಾದ ಮುಕುಂದ ಕಮ್ತಿಯ ದಿನಸಿ ಅಂಗಡಿಯಿದ್ದ ಪದವು ಸ್ಥಳದಿಂದ ಉತ್ತರಕ್ಕೆ ಹೋಗುವ ರಸ್ತೆ ಮುಂದೆ ಇಪ್ಪತ್ತು ಮೈಲು ದೂರದ ಕಟಪಾಡಿಯಲ್ಲಿ ಮುಖ್ಯ ರಸ್ತೆಯನ್ನು ಸೇರುತ್ತದೆ. ಆ ರಸ್ತೆಯಲ್ಲಿ ಒಂದು ಮೈಲು ದೂರದಲ್ಲಿ ಸಿಗುವ ಸ್ಥಳವೇ ಪುಂಡಗೋಳಿ. ಅಲ್ಲಿ ಮಾರ್ಗದ ಬದಿಯಲ್ಲಿ ಒತ್ತೊತ್ತಾಗಿ ನಿಂತಿದ್ದ ಮರಗಳ ನಡುವೆ ಬೆಟ್ಟದಂತೆ ಮೇಲೆದ್ದು ನಿಂತಿದ್ದ ಬೃಹದಾಕಾರದ ಗೋಳಿ ಮರವೇ ಪುಂಡಗೋಳಿ. ನಡುಕಣಿಯ ಹೆಚ್ಚಿನ ಭೂತ, ಪ್ರೇತ, ಪಿಶಾಚಿಗಳು ಅದರಲ್ಲಿ ಅಥವಾ ಸುತ್ತುಮುತ್ತಲಿನ ಮರಗಳಲ್ಲಿ ವಾಸವಾಗಿದ್ದವು. ಅವುಗಳಿಗೆಲ್ಲ ನಾಯಕನಾಗಿ ಒಂದು ಬಬ್ಬರ್ಯ ಉಂಟೆಂದು ಜನ ಹೇಳುತ್ತಿದ್ದರು.

ಬಬ್ಬರ್ಯ ಭಾರೀ ಕಾರಣಿಕದ ದೈವ. ತನ್ನನ್ನು ರಕ್ಷಿಸು ಎಂದು ಭಯಭಕ್ತಿಯಿಂದ ಪ್ರಾರ್ಥಿಸಿಕೊಂಡರೆ ಎಂತಹ ಕಷ್ಟವನ್ನಾದರೂ ಪರಿಹರಿಸಬಲ್ಲ ಶಕ್ತಿ ಬಬ್ಬರ್ಯನಿಗಿತ್ತು.

ಪುಂಡಗೋಳಿಯ ಬಳಿ ರಾತ್ರಿ ಹೊತ್ತು ಹೋಗುವ ಜನರಿಗೆ ಸಾಲು ಸಾಲು ಸೂಟೆಗಳು ಕಾಣಿಸಿಕೊಂಡುದಿದೆ. ಅವುಗಳು ಭೂತ ಪರಿವಾರ ಸ್ನಾನಕ್ಕೆ ಹೋಗುವಾಗ ಹಿಡಿದುಕೊಳ್ಳುವ ಸೂಟೆಗಳು. ಯಾರಾದರೂ ಧೈರ್ಯ ಮಾಡಿ ಆ ಸೂಟೆಗಳನ್ನು ದೂರದಿಂದಲೇ ಹಿಂಬಾಲಿಸಿದರೆ ಅವುಗಳು ಒಂದು ಮೈಲು ದೂರದ ಮಜ್ಜಲ ಕೆರೆಯವರೆಗೆ ಹೋಗಿ ಆ ಕೆರೆಯೊಳಗೆ ಇಳಿಯುವುದನ್ನು ಕಾಣಬಹುದಿತ್ತು. ನಂತರ ಆ ಸೂಟೆಗಳು ಕಾಣುತ್ತಿರಲಿಲ್ಲ. ಆಗ ಭೂತಗಳು ಸ್ನಾನದಲ್ಲಿ ತೊಡಗಿವೆ ಅಂತ ಅರ್ಥ. ಮತ್ತೊಂದೋ ಎರಡೋ ಗಂಟೆಯ ನಂತರ ಮತ್ತೆ ಸೂಟೆಗಳು ಜಗ್ಗನೆ ಬೆಳಗುತ್ತವೆ. ಭೂತಗಳು ಹೋದ ದಾರಿಯಲ್ಲೇ ಹಿಂದೆ ಬಂದು ಪುಂಡಗೋಳಿಯನ್ನು ಸೇರಿಕೊಳ್ಳುತ್ತವೆ. ಹಾಗೆ ಹೋಗುವ ಭೂತಗಳ ಮೆರವಣಿಗೆಯ ಎದುರು ಬರಬಾರದು. ಅದಕ್ಕಾಗಿ ಜನ ರಾತ್ರಿ ಹೊತ್ತು ಪುಂಡಗೋಳಿಯ ಕಡೆಗೆ ಸುಳಿಯುತ್ತಿರಲಿಲ್ಲ.

ಹಗಲು ಹೊತ್ತು ಕೂಡಾ ಆ ದಾರಿಯಲ್ಲಿ ನಡೆದುಕೊಂಡು ಹೋಗುವವರ ಮೇಲೆ ಕುಲೆಗಳು ಹೊಯಿಗೆ ಬೀಸಾಡುತ್ತಿದ್ದವು. ಬಬ್ಬರ್ಯನನ್ನು ಪ್ರಾರ್ಥಿಸಿಕೊಂಡು ಹೋದರೆ ಕುಲೆಗಳು ಹೊಯಿಗೆಯನ್ನು ಕೂಡಾ ಬೀಸಾಡುವುದಿಲ್ಲ ಎಂಬ ನಂಬಿಕೆಯೂ ಇತ್ತು.

ಬೇರೆ ಕೆಲವು ಊರಿನ ಪಟೇಲರಂತೆ ಅವರೇ ಆ ಟಿಕೇಟುಗಳ ಹಣವನ್ನು ಸರಕಾರಕ್ಕೆ ಕಟ್ಟಿಬಿಟ್ಟು ಸುಮ್ಮನಿರಬಹುದಿತ್ತು. ಆದರೆ ಆ ದಾರಿ ಹಿಡಿಯಲು ಅವರ ಮನಸ್ಸು ಒಪ್ಪಲಿಲ್ಲ. ಊಳಿಗದ ಚಾಕರಿ ಇನ್ನು ಸಾಕು ಎಂದು ನಿರ್ಧರಿಸಿಯೇ ಅವರು ತಾಲೂಕ್ ಕಛೇರಿಯ ಅಧಿಕಾರಿಗಳೊಂದಿಗೆ ಯುದ್ಧವನ್ನು ವಿರೋಧಿಸಿ ಬಿಸಿಬಿಸಿ ಚರ್ಚೆ ಮಾಡಿಯೂ ಇದ್ದರು. ಅದರ ಪರಿಣಾಮವಾಗಿ ಅವರಿಗೆ ಒಂದು ದಿನ ಒಂದು ನೋಟೀಸು ಬಂತು.

ಇಂತಹ ಪುಂಡಗೋಳಿಯ ಮರಗಳ ಮರೆಯಲ್ಲಿ ನಿಂತ ರಂಗಮೂಲ್ಯ ಮತ್ತು ಅವನ ಗುಂಪಿನವರು ಮೊದಲು ಬಬ್ಬರ್ಯ ದೈವವನ್ನು ಭಕ್ತಿಯಿಂದ ಪ್ರಾರ್ಥಿಸಿಕೊಂಡು ತಮ್ಮ ಕೆಲಸ ಸರಿಯಾಗಿ ನಡೆಯಲಿ, ಮುಂದೆ ಇದರಿಂದ ನಮಗಾಗಲೀ ನಮ್ಮ ಹೆಂಡತಿ ಮಕ್ಕಳಿಗಾಗಲೀ ತೊಂದರೆ ಬಾರದಿರಲಿ ಎಂದು ಪ್ರಾರ್ಥಿಸಿಕೊಂಡರು.

ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಗಾಡಿಯೊಂದು ನಡುಕಣಿಯ ಕಡೆಯಿಂದ ಬರುತ್ತಿರುವ ಶಬ್ದ ಕೇಳಿ ಬರತೊಡಗಿತು. ನಡುಕಣಿಯ ಅಂಗಡಿಗಳಿದ್ದ ಪದವಿನಿಂದ ಗಾಡಿ ಇಳಿಜಾರಿನಲ್ಲಿ ಬರುತ್ತಿದ್ದಾಗ ವೇಗವನ್ನು ತಡೆಯಲು ಚಕ್ರಗಳ ಹಿಂದೆ ಕಟ್ಟಿದ್ದ ಮರದ ಕೊರಡು ಚಕ್ರಗಳು ವೇಗವಾಗಿ ತಿರುಗದಂತೆ ಹಿಡಿದಿಡುವಾಗ ಉಂಟಾಗುತ್ತಿದ್ದ ಕಿರೀಂ ಕಿರೀಂ ಶಬ್ದದಿಂದ ರಂಗ ಮೂಲ್ಯನ ಕಡೆಯವರಿಗೆ ಗಾಡಿ ಬರುತ್ತಿದೆ ಎಂಬ ಸೂಚನೆ ಸಿಕ್ಕಿತು. ನಂತರ ಗಾಡಿಗೆ ಕಟ್ಟಿದ್ದ ಗೆಜ್ಜೆಯ ಘಲ್ ಘಲ್ ಶಬ್ದ ಮತ್ತು ಎತ್ತುಗಳ ಕುತ್ತಿಗೆಯ ಗೆಜ್ಜೆಯ ಕಿಣಿಕಿಣಿ ಶಬ್ದಗಳು ಗಾಡಿ ಸಮೀಪಕ್ಕೆ ಬಂದಿರುವುದನ್ನು ಸೂಚಿಸಿದವು.
ರಂಗ ಮೂಲ್ಯ ಕೈಯಲ್ಲಿದ್ದ ದೊಣ್ಣೆಯನ್ನು ಗಾಳಿಯಲ್ಲಿ ಆಡಿಸಿ “ಗೋವಿಂದಾನ್ ಗೋವಿಂದಾ” ಎಂದು ಕೂಗಿದ. ಉಳಿದವರೂ “ಗೋವಿಂದಾನ್ ಗೋವಿಂದಾ” ಎಂದು ಕೂಗಿಕೊಂಡು ರಸ್ತೆಯತ್ತ ಓಡಿದರು. ಎಲ್ಲರ ಹಿಂದಿನಿಂದ ಸುಬ್ರಾಯರೂ ಹೋದರು. ರಂಗ ಮೂಲ್ಯ ರಸ್ತೆಯಲ್ಲಿದ್ದ ಗಾಡಿಯ ಎದುರಿಗೆ ಹೋಗಿ ಎತ್ತುಗಳ ಕೊರಳ ಮೇಲಿದ್ದ ಅಡ್ಡಪಟ್ಟಿಗೆ ಕೈಹಾಕಿದಾಗ ಎತ್ತುಗಳು ನಿಂತವು. ರಂಗ ಮೂಲ್ಯ ಗಾಡಿಯವನಿಗೆ ಹೊಡೆಯಲು ದೊಣ್ಣೆಯನ್ನು ಎತ್ತಿದೊಡನೆ ಅವನು ಗಡಗಡ ನಡುಗಿ ಕೈಮುಗಿಯುತ್ತಾ “ದಮ್ಮಯ್ಯ” ಎಂದನು. “ಹಾಗಾದರೆ ಇಳಿದು ಓಡಿ” ಎಂದು ರಂಗ ಮೂಲ್ಯ ಗಾಡಿಯವನಿಗೂ ಗಾಡಿಯ ಪಕ್ಕದಲ್ಲಿ ನಡೆದುಕೊಂಡು ಬರುತ್ತಿದ್ದ ಅವನ ಸಹಾಯಕನಿಗೂ ಗದರಿಸಿದಾಗ ಅವರಿಬ್ಬರೂ ಗಾಡಿಯನ್ನು ಬಿಟ್ಟು ಓಡಿ ಹೋದರು. ಅವರಿಬ್ಬರೂ ದೂರದಲ್ಲಿ ಮರೆಯಲ್ಲಿ ನಿಂತು ಮುಂದಾಗುವುದನ್ನು ನೋಡುತ್ತಿದ್ದರು.

ರಂಗ ಮೂಲ್ಯ ಅಬ್ಬರಿಸಿದ, “ನೋಡುವುದೇನು? ಎಲ್ಲರೂ ಒಂದೊಂದು ಅಕ್ಕಿ ಮುಡಿಯನ್ನು ಹೊತ್ತುಕೊಂಡು ಹೋಗಿ. ಎಲ್ಲಿಯಾದರೂ ಅಡಗಿಸಿಡಿ.”
ನಡುಕಣಿಯ ವೀರರು ಒಬ್ಬರ ತಲೆಗೆ ಇನ್ನೊಬ್ಬರಂತೆ ಅಕ್ಕಿ ಮುಡಿಗಳನ್ನು ಏರಿಸಿಕೊಂಡು ಬೇಗಬೇಗನೇ ನಡೆದುಕೊಂಡು ತಮ್ಮ ತಮ್ಮ ಮನೆಗಳತ್ತ ಹೆಜ್ಜೆ ಹಾಕಿದರು. ಸುಬ್ರಾಯರು ಸ್ವಲ್ಪ ದೂರದಲ್ಲಿ ಏನು ಮಾಡುವುದೆಂದು ತಿಳಿಯದೆ ನಿಂತಿದ್ದರು. ರಂಗ ಮೂಲ್ಯ ಅವರನ್ನು ನೋಡಿ, “ಏನು ಭಟ್ರೇ, ಉತ್ಸವ ನೋಡುವುದಾ? ಬನ್ನಿ ಇಲ್ಲಿ” ಎಂದು ಅವರನ್ನು ಬಳಿಗೆ ಕರೆದು ಅವರ ತಲೆಗೂ ಒಂದು ಮುಡಿಯನ್ನು ಹೇರಿಯೇ ಬಿಟ್ಟ. ಕೊನೆಗೆ ತಾನೊಬ್ಬನೇ ಉಳಿದಾಗ ಒಂದು ಅಕ್ಕಿ ಮುಡಿಯನ್ನು ಲೀಲಾಜಾಲವಾಗಿ ಎರಡೂ ಕೈಗಳಿಂದ ಮೇಲೆತ್ತಿ ತನ್ನ ಮುಂಡಾಸು ಕಟ್ಟಿದ್ದ ತಲೆಯ ಮೇಲಿರಿಸಿಕೊಂಡು ದೊಣ್ಣೆ ಬೀಸಿಕೊಂಡು ಸುಬ್ರಾಯರ ಹಿಂದಿನಿಂದ ಹೆಜ್ಜೆ ಹಾಕಿದ.

ರಂಗ ಮೂಲ್ಯನ ಆಜಾನುಬಾಹು ದೇಹ ಮತ್ತು ದೊಡ್ಡ ಮೀಸೆ ನೋಡಿಯೇ ಹೆದರಿದ್ದ ಗಾಡಿಯವರು ಎಲ್ಲರೂ ಹೋದರೆಂದು ಖಾತ್ರಿಯಾದ ಮೇಲೆ ತಮ್ಮ ಗಾಡಿಯ ಬಳಿಗೆ ಹಿಂದಿರುಗಿದರು. ಅದರಲ್ಲಿದ್ದ ಇಪ್ಪತ್ತು ಅಕ್ಕಿ ಮುಡಿಗಳಲ್ಲಿ ಎರಡು ಹಾಗೆಯೇ ಉಳಿದಿದ್ದವು. ಹಾಗಾದರೆ ಲೂಟಿಯವರು ಹದಿನೆಂಟು ಜನ ಇರಬೇಕು. ಗಾಡಿಯವರು, ತಾವು ಪ್ರತಿಭಟಿಸದೆ ಸುಮ್ಮನೆ ಓಡಿ ಹೋದದ್ದು ಒಳ್ಳೆಯದಾಯಿತು ಅಂತ ಎಣಿಸಿ ಬೇಗಬೇಗನೆ ಗಾಡಿಯನ್ನು ಕಟಪಾಡಿಯ ಕಡೆಗೆ ಹೊಡೆದುಕೊಂಡು ಹೋಗಿ ಬಂಡಸಾಲೆಯ ಧನಿಗಳಿಗೆ ನಡೆದ ಸಂಗತಿಯನ್ನು ವರದಿ ಮಾಡಿದರು. ಹದಿನೆಂಟು ಮಂದಿಯೂ ಮೀಸೆ ಬಿಟ್ಟುಕೊಂಡು, ಮುಂಡಾಸು ಕಟ್ಟಿಕೊಂಡು, ದೊಣ್ಣೆ ಹಿಡಿದುಕೊಂಡಿದ್ದರು, ತಮ್ಮನ್ನು ಕೊಲ್ಲಲು ಬಂದರು ಎಂದು ಅವರು ಹೇಳಿದ್ದರಿಂದ ಬಂಡಸಾಲೆಯವರು ಇವರನ್ನು ಹೆಚ್ಚು ಗದರದೆ ಬಿಟ್ಟರು.

ಇತ್ತ ಅಕ್ಕಿ ಮುಡಿಗಳನ್ನು ಹೊತ್ತುಕೊಂಡು ಬಂದವರು ರಂಗಮೂಲ್ಯನ ಸೂಚನೆಯಂತೆ ಅಕ್ಕಿ ಮುಡಿಗಳನ್ನು ಎಲ್ಲೆಲ್ಲಿಯೋ ಪೋಲೀಸರಿಗೆ ಸಿಕ್ಕದ ಹಾಗೆ ಅಡಗಿಸಿಟ್ಟು ಸ್ವಲ್ಪ ದಿನಗಳ ಕಾಲ ಊರುಬಿಟ್ಟು ಓಡಿಹೋದರು. ಅಕ್ಕಪಕ್ಕದ ಊರುಗಳಲ್ಲಿದ್ದ ತಮ್ಮ ತಮ್ಮ ಸಂಬಂಧಿಕರ ಮನೆಗಳಿಗೆ ಹೋಗಿ ಅಡಗಿಕೊಂಡರು. ಅವರ ಪೈಕಿ ಸಾತ್ವಿಕ ಸ್ವಭಾವದವರಾದ ಸುಬ್ರಾಯರು ಮತ್ತು ಶೇಷಪ್ಪ ಬಹಳ ಕಾಲ ಊರು ಬಿಟ್ಟು ದೇಶಾಂತರ ಹೋಗಬೇಕಾಗಿ ಬಂದುದು ಒಂದು ದುರಂತ.

ಸುಬ್ರಾಯರು ಅಕ್ಕಿ ಮುಡಿಯನ್ನು ತಮ್ಮ ಮನೆಯವರೆಗೆ ಬಹಳ ಕಷ್ಟದಿಂದ ಹೊತ್ತುಕೊಂಡು ಬಂದು ತಮ್ಮ ಮಡದಿ ಸರಸ್ವತಕ್ಕನ ಸಹಾಯದಿಂದ ಅದನ್ನು ಇಳಿಸಿದರು. ಅದನ್ನು ಎಲ್ಲಿ ಅಡಗಿಸಿಡುವುದೆಂದು ಯೋಚಿಸಿ ತಮ್ಮ ಅಡಿಗೆ ಮನೆಯ ಕಣಕೋಡಿಯಲ್ಲಿ ಇಟ್ಟು ಅದು ಕಾಣದಂತೆ ಅದರ ಮೇಲೆ ಕಟ್ಟಿಗೆ ಮತ್ತು ಅಡರಿನ ರೆಂಬೆಗಳನ್ನು ಜಾಣತನದಿಂದ ಪೇರಿಸಿದರು. ಆದರೂ ಅವರಿಗೆ ಧೈರ್ಯ ಬರಲಿಲ್ಲ. ಪೋಲೀಸರು ಮನೆಗೆ ಬಂದು ಒಳಗೆ ಹುಡುಕಿದರೆ ಅಕ್ಕಿ ಮುಡಿಯನ್ನು ಹುಡುಕಿ ತೆಗೆಯುವುದು ಎಷ್ಟು ಹೊತ್ತಿನ ಕೆಲಸ? ಆದರೆ ಗಂಡಸರು ಮನೆಯಲ್ಲಿಲ್ಲದಿದ್ದರೆ ಒಂದು ವೇಳೆ ಪೋಲೀಸರು ಸುಮ್ಮನೆ ಹೋದರೂ ಹೋಗಬಹುದು.

ಸುಬ್ರಾಯರು ಹೇಳಿದರು, “ನಾಳೆ ನಾಡಿದ್ದರಲ್ಲಿ ಪೋಲೀಸರು ಊರಿಗೆ ಬಂದು ಮನೆ ಮನೆಯನ್ನು ಹುಡುಕುವುದು ಖಂಡಿತ. ನಮ್ಮ ಮನೆಗೂ ಬಂದು ಹುಡುಕಿದಾಗ ನಾನು ಸಿಕ್ಕಿಬಿದ್ದರೆ ಜೈಲು ಶಿಕ್ಷೆಯಾಗಬಹುದು. ಆದ್ದರಿಂದ ನಾನು ಊರು ಬಿಟ್ಟು ಒಂದೆರಡು ತಿಂಗಳು ಎಲ್ಲಾದರೂ ಹೋಗಿ ಬರಬೇಕೆಂದು ಇದ್ದೇನೆ. ಮಂತ್ರಾಲಯಕ್ಕೆ ಹೋದರೂ ಆದೀತು ಅಂತ ಉಂಟು. ಅಲ್ಲಿ ಸ್ವಲ್ಪ ಸಮಯ ರಾಯರನ್ನು ಕುರಿತು ತಪಸ್ಸು ಮಾಡಿಕೊಂಡಿದ್ದರೆ ನಮ್ಮ ಕಷ್ಟಗಳೂ ಪರಿಹಾರ ಆದಾವು. ನೀನು ಇಲ್ಲೇ ಇರುತ್ತೀಯಾ ಹೇಗೆ?”

“ನಾನೊಬ್ಬಳೇ ಇಲ್ಲಿ ಹೇಗಿರಲಿ? ಪೋಲೀಸರು ಬಂದರೆ ನಾನು ಹೆಣ್ಣು ಹೆಂಗಸು ಏನು ಉತ್ತರ ಕೊಡುವುದು ಅವರಿಗೆ? ನಾನು ಅಲೆವೂರಿಗೆ ಅಣ್ಣನ ಮನೆಗೆ ಹೋಗುತ್ತೇನೆ” ಎಂದು ಸರಸ್ವತಕ್ಕ ಹೇಳಿದರು.

ಸುಬ್ರಾಯರು, “ಹಾಗಾದರೆ ನಾನು ನಿನ್ನನ್ನು ಅಲೆವೂರಿನಲ್ಲಿ ಬಿಟ್ಟು ಮಂತ್ರಾಲಯದ ಕಡೆಗೆ ಹೋಗುತ್ತೇನೆ” ಎಂದು ಹೇಳಿದರು.

“ನೀವು ನಿಮ್ಮ ಗೆಳೆಯ ಶಂಕರರಾಯನ ಹತ್ತಿರ ಗುಟ್ಟಿನಲ್ಲಿ ವಿಷಯ ತಿಳಿಸಿ ಬನ್ನಿ. ಅವನು ನಂಬಿಗಸ್ಥ. ಅವನು ಅಕ್ಕಿಯನ್ನು ಕೊಂಡುಹೋಗಿ ನಾವು ಬರುವವರೆಗೆ ಜಾಗ್ರತೆಯಾಗಿ ಅಡಗಿಸಿಡಲಿ, ಸ್ವಲ್ಪ ಅವನೂ ಉಪಯೋಗಿಸಲಿ” ಎಂದು ಸರಸ್ವತಕ್ಕ ಹೇಳಿದರು.

ಸುಬ್ರಾಯರು ತಕ್ಷಣ ಊರಿನ ದೇವಸ್ಥಾನದಲ್ಲಿ ಶಾಂತಿಯ ಕೆಲಸ ಮಾಡುತ್ತಿದ್ದ ಶಂಕರ ರಾಯನ ಮನೆಗೆ ಹೋಗಿ ಅವನಿಗೆ ವಿಷಯವನ್ನು ತಿಳಿಸಿದರು. ನಡೆದುದೆಲ್ಲವನ್ನೂ ವಿವರಿಸಿ, “ಶಂಕರಾ, ನಮ್ಮ ಮನೆಯ ಕಣಕೋಡಿಯಲ್ಲಿ ಆ ಅಕ್ಕಿ ಮುಡಿ ಉಂಟು. ನಾವು ಬರುವವರೆಗೆ ಅದು ಉಳಿಯಲಿಕ್ಕಿಲ್ಲ. ಹೆಗ್ಗಣಗಳು ತಿಂದು ಮುಗಿಸಿಯಾವು. ನೀನು ಅದನ್ನು ಇಲ್ಲಿನ ಗಲಾಟೆ ಎಲ್ಲ ತಣ್ಣಗಾದ ಮೇಲೆ ನಿನ್ನ ಮನೆಗೆ ತೆಗೆದುಕೊಂಡು ಹೋಗಿ ಉಪಯೋಗಿಸು. ನಿನಗೆ ಕೂಡಾ ಕಷ್ಟವಲ್ಲವೇ. ನಾಳೆ ಬೆಳಿಗ್ಗೆ ನಾಲ್ಕೈದು ಗಂಟೆಯ ಹೊತ್ತಿಗೆ ನಮ್ಮ ಮನೆಯ ಬಳಿಗೆ ಬರುತ್ತೀಯಾ? ನಿನ್ನ ಕೈಯಲ್ಲಿ ಬೀಗದ ಕೈ ಕೊಟ್ಟು ಹೋಗುತ್ತೇವೆ” ಎಂದರು.

ಶಂಕರರಾಯ ಕೆಲವು ದಿನಗಳ ನಂತರ ಬಂದು ಅವರು ಇಟ್ಟಿದ್ದ ಅಕ್ಕಿಮುಡಿಯನ್ನು ತನ್ನ ಮನೆಗೆ ಸಾಗಿಸಲು ಒಪ್ಪಿಕೊಂಡ.

ಮರುದಿನ ಬೆಳಗ್ಗೆ ಸೂರ್ಯೋದಯವಾಗುವ ಮುನ್ನವೇ ಸುಬ್ರಾಯರೂ, ಸರಸ್ವತಕ್ಕನೂ ತಮಗೆ ಬೇಕಾದ ಬಟ್ಟೆ ಬರೆಗಳನ್ನು ಚೀಲಗಳಲ್ಲಿ ತುಂಬಿಸಿಕೊಂಡು, ಮನೆಗೆ ಬೀಗ ಹಾಕಿದರು. ಶಂಕರರಾಯ ಅಷ್ಟು ಹೊತ್ತಿಗಾಗಲೇ ಅವರ ಮನೆಯ ಬಳಿಗೆ ಬಂದಿದ್ದ. ಬೀಗದ ಕೈಯನ್ನು ಅವನ ಕೈಯಲ್ಲಿಟ್ಟು ಗಂಡ ಹೆಂಡತಿ ಉಡುಪಿಯ ಕಡೆಗೆ ನಡೆಯತೊಡಗಿದರು.

ಸುಬ್ರಾಯರು ಮಡದಿಯನ್ನು ಅವಳ ತವರು ಮನೆಯಲ್ಲಿ ಅಂದರೆ ತಮ್ಮ ಭಾವ ಅಲೆವೂರಿನ ಮುದ್ದು ಭಟ್ಟರ ಮುಳಿಹುಲ್ಲು ಹೊದಿಸಿದ ಬಡ ಮನೆಯಲ್ಲಿ ಬಿಟ್ಟವರು ಅಲ್ಲಿ ಒಂದು ದಿನ ವಿಶ್ರಾಂತಿ ತೆಗೆದುಕೊಂಡರು.

ಮರುದಿನ ಸೂರ್ಯೋದಯಕ್ಕಿಂತ ಮೊದಲೇ ಸ್ನಾನ ಮುಗಿಸಿ, ಜಪ ಮಾಡಿದ ಸುಬ್ರಾಯರಿಗೆ ಮುದ್ದು ಭಟ್ಟರ ಹೆಂಡತಿ ದೋಸೆ ಮಾಡಿ ಹಾಕಿದರು. ಅಂತಹ ಬಡತನದಲ್ಲೂ ಅವರು ದೋಸೆಗೆ ಅಕ್ಕಿ ಮತ್ತು ಉದ್ದನ್ನು ಹೇಗೆ ಹೊಂದಿಸಿಕೊಂಡರು ಎಂದು ಸುಬ್ರಾಯರಿಗೆ ಆಶ್ಚರ್ಯವಾಯಿತು. ನಂತರ ಸುಬ್ರಾಯರು ಕಾಲ್ನಡಿಗೆಯಲ್ಲೇ ಮಂತ್ರಾಲಯಕ್ಕೆ ಹೊರಟಾಗ ಸರಸ್ವತಕ್ಕನ ಕಣ್ಣುಗಳಿಂದ ಎರಡು ಹನಿ ಕಣ್ಣೀರು ಫಳಕ್ಕನೆ ಜಾರಿದವು. ಮಂತ್ರಾಲಯದ ರಾಯರು ಕಣ್ಣು ತೆರೆದರೆ ತಮ್ಮ ಕಷ್ಟಗಳೆಲ್ಲ ಕರಗಿ ಕಾಲ ಮೇಲೆ ಕಾಲು ಹಾಕಿ ಕುಳಿತು ತಿನ್ನುವ ಕಾಲ ಬಂದೀತು.

ವೆಂಕಟರಮಣಯ್ಯನವರಿಗೆ ಕಳ್ಳ ಕೈಯ ಅಕ್ಕಿಯನ್ನು ತಮ್ಮ ಊರಿನವರು ದೋಚಿದ ವಿಷಯ ತಿಳಿದು ಆಶ್ಚರ್ಯ ಆಯಿತು. ಆ ತಂಡದಲ್ಲಿ ಅಡಿಗೆಯ ಸುಬ್ರಾಯರೂ ಇದ್ದರೆಂದು ಕೇಳಿ ಅವರಿಗೆ ಪಾಪ ಅಂತ ಕಂಡಿತು. ಅವರಿಗೆ ಅಷ್ಟು ಕಷ್ಟ ಇದೆ ಎನ್ನುವುದು ತನಗೆ ತಿಳಿಯಲಿಲ್ಲವಲ್ಲ ಎಂದು ಮರುಗಿದರು.

ನಡುಕಣಿಯಲ್ಲಿ ಅಕ್ಕಿ ಲೂಟಿ ಮಾಡಿದ ವಿಷಯದಲ್ಲಿ ಕಟಪಾಡಿಯ ಸಾಹುಕಾರರು ಪೋಲೀಸರಿಗೆ ದೂರು ಕೊಟ್ಟಿರಲಿಲ್ಲ. ಯಾಕೆಂದರೆ ಅವರದೇ ಕಳ್ಳ ವ್ಯವಹಾರ. ಅವರು ಲೂಟಿಯಾದ ಅಕ್ಕಿ ಮುಡಿಗಳನ್ನು ಮರು ಸಂಪಾದಿಸಲು ಒಂದು ಉಪಾಯ ಮಾಡಿದರು. ನಾಟಕದ ಕಂಪೆನಿಯಿಂದ ಪೋಲೀಸ್ ವೇಷ ತರಿಸಿ, ನಾಲ್ಕು ಜನ ಗಟ್ಟಿಮುಟ್ಟಾದ ಆಳುಗಳಿಗೆ ಪೋಲೀಸ್ ವೇಷ ಹಾಕಿಸಿ ನಡುಕಣಿಗೆ ಅಕ್ಕಿ ತಲಾಷ್ ಮಾಡಲು ಕಳಿಸಿಕೊಟ್ಟರು. ಹಾಗೆ ವೇಷ ಧರಿಸಿ ನಡುಕಣಿಗೆ ಬಂದವರಲ್ಲಿ ಇಬ್ಬರು ಗಾಡಿಯ ಆಳುಗಳೇ ಆಗಿದ್ದರು!

ಆ ಪೋಲೀಸ್ ಆಳುಗಳು ನಡುಕಣಿಗೆ ಬಂದು ಜನರನ್ನು ಬೆದರಿಸಿ ಅಕ್ಕಿಲೂಟಿ ಮಾಡಿದವರ ಹೆಸರುಗಳನ್ನು ಹಾಗೂ ಅವರ ಮನೆಗಳೆಲ್ಲಿವೆಯೆಂದು ಕೇಳುತ್ತಾ ಹುಡುಕಾಡಿದರು. ಅವರಿಗೆ ತಿಮ್ಮಪ್ಪ ಕುಲಾಲ್ ಎಂಬವನ ಮನೆಯ ಹಿಂದಿನ ಹಾಡಿಯಲ್ಲಿ ಒಂದು ಮುಡಿ ಅಕ್ಕಿ ಸಿಕ್ಕಿತು.
ತಿಮ್ಮಪ್ಪ ಇತರರಂತೆ ಊರುಬಿಟ್ಟು ಹೋಗಿರಲಿಲ್ಲ. ಅವನ ಮನೆಗೆ ಯಾರಾದರೂ ಬರಬೇಕಾದರೆ ಎದುರಿನ ಬೈಲಿನಲ್ಲಿ ನಡೆದುಕೊಂಡು ಬರಬೇಕು. ಹಾಗೆ ಬರುವವರು ಒಂದು ಫರ್ಲಾಂಗ್ ದೂರದಲ್ಲಿ ಬೈಲು ಇಳಿಯುವಾಗಲೇ ತಿಮ್ಮಪ್ಪನ ಮನೆಗೆ ಕಾಣಿಸುತ್ತಾರೆ. ಹಾಗೆ ಕಾಣಿಸಿದ ಕೂಡಲೇ ಅವನು ಮನೆಯ ಹಿಂದಿನ ಕಾಡಿಗೆ ಓಡಿಹೋಗಿ ಅಡಗಿಕೊಳ್ಳುವುದು ಅಂತ ಅವನ ಯೋಜನೆಯಾಗಿತ್ತು.

ಯೋಜನೆಯಂತೆ ತಿಮ್ಮಪ್ಪ ‘ಪೋಲೀಸರು’ ಬಂದಾಗ ಓಡಿಹೋಗಿ ಮನೆಯ ಹಿಂದಿನ ಕಾಡಿನಲ್ಲಿ ಅಡಗಿಕೊಂಡ. ಆದರೆ ಪೋಲೀಸರು ಬಂದು ಗದರಿದಾಗ ಮನೆಯ ಹೆಂಗಸರು ಗಡಗಡ ನಡುಗುತ್ತಾ ಬಾಯಿಬಿಟ್ಟರು. ಅವರು ಪಾಪ ಅದುವರೆಗೆ ನಿಜ ಪೋಲೀಸರನ್ನಾಗಲೀ ಸುಳ್ಳು ಪೋಲೀಸರನ್ನಾಗಲಿ ಕಂಡಿರಲಿಲ್ಲ. ಮನೆಯ ಅಜ್ಜಿಯೇ, “ಬಲೆ ಮಗಾ” (ಬನ್ನಿ ಮಕ್ಕಳೆ) ಎಂದು ದಂಟೆ ಊರುತ್ತಾ ‘ಪೋಲೀಸರನ್ನು’ ಕರೆದುಕೊಂಡು ಹೋಗಿ ಮನೆಯ ಹಿಂದೆ ಕಾಡಿನ ಅಂಚಿನಲ್ಲಿ ದೊಡ್ಡ ಬಲ್ಲೆಯೊಂದರಲ್ಲಿ ಅಡಗಿಸಿಟ್ಟಿದ್ದ ಅಕ್ಕಿ ಮುಡಿಯನ್ನು ತೋರಿಸಿಕೊಟ್ಟಿತು. ಆ ಕಳ್ಳ ಪೋಲೀಸಿನವರು ಗೆದ್ದವರಂತೆ ಆ ಒಂದು ಅಕ್ಕಿ ಮುಡಿಯನ್ನು ಎತ್ತಿಕೊಂಡು ಹೋದರು.

ಮತ್ತೆ ಹೆಚ್ಚು ಹೊತ್ತು ನಿಲ್ಲದೆ, ಬಂದದ್ದಕ್ಕೆ ಒಂದು ಮುಡಿಯಾದರೂ ಸಿಕ್ಕಿತಲ್ಲ ಎಂದು ಆದಷ್ಟು ಬೇಗನೆ ಕಟಪಾಡಿಯ ಕಡೆಗೆ ಗಾಡಿಬಿಟ್ಟರು!

ಈ ಕತೆಯ ಕೊನೆ ಮಾತ್ರ ದುರಂತವೋ, ಹಾಸ್ಯವೋ ತಿಳಿಯದ ಹಾಗೆ ಇದೆ.

ನಡುಕಣಿಯ ಪುಂಡಗೋಳಿಯ ಬಳಿ ಕಳ್ಳ ಸಂತೆಯ ಅಕ್ಕಿ ಮುಡಿ ಎಳೆದೊಯ್ದ ವೀರರ ಪೈಕಿ ಒಬ್ಬನಾದ ಕೊಡಪಟ್ಟೆ ಶೇಷಪ್ಪ ಕೂಡಾ ಪೋಲೀಸ್ ದಾಳಿಯಿಂದ ತಪ್ಪಿಸಿಕೊಂಡು ಅಡಗಲೆಂದು, ಸುಬ್ರಾಯರ ಹಾಗೆ, ಬಹಳ ದೂರ ಹೋದ.

ಅವನು ಮೊದಲು ಪಕ್ಕದ ಊರಾದ ಕುದರಾಡಿಯಲ್ಲಿದ್ದ ತನ್ನ ಭಾವನ ಮನೆಯ ಅಟ್ಟದಲ್ಲಿ ಎರಡು ದಿನ ಕಳೆದ. ಆಗ ಅಲ್ಲಿಗೆ ಒಂದು ಸುದ್ದಿ ಬಂತು – ಪೋಲೀಸರು ನಡುಕಣಿಗೆ ಬಂದು ಮನೆ ಮನೆಗಳಲ್ಲಿ ವಿಚಾರಣೆ ನಡೆಸುತ್ತಿದ್ದಾರೆ ಎಂದು. ಇನ್ನು ಆ ಪೋಲೀಸರು ಓಡಿಹೋದವರ ಸಂಬಂಧಿಕರ ಮನೆಗೆ ಬಾರದೆ ಇರಲಿಕ್ಕಿಲ್ಲ ಎಂದು ಅವನಿಗೆ ಖಚಿತವಾಯಿತು. ಅವನು ಅಲ್ಲಿಂದಲೇ ಘಟ್ಟಕ್ಕೆ ಹೋಗಿ ಅಡಗಿಕೊಳ್ಳುವ ನಿರ್ಧಾರ ಮಾಡಿ ಭಾವನಿಗೆ ಹಾಗೆ ಹೇಳಿದ.

“ನೀನು ಘಟ್ಟಕ್ಕೆ ಹೋದರೆ ಅಲ್ಲಿ ನಿನ್ನ ತಾಯಿಗೆ ಯಾರು ಮಾರಾಯ?” ಎಂದು ಭಾವ ಕೇಳಿದ.

“ಅವಳು ಹೇಗಾದರೂ ಸ್ವಲ್ಪ ದಿನ ಸುಧಾರಿಸಿಯಾಳು. ಅವಳಿಗೆ ಕಬ್ಬಿಣದ ಕೆಲಸ ಎಲ್ಲ ಗೊತ್ತಿದೆ. ನಾನು ಇದ್ದರೂ ನಮಗೆ ಸಿಗುವ ಉತ್ಪತ್ತಿ ಅಷ್ಟೇ. ನಾನು ಘಟ್ಟಕ್ಕೆ ಹೋಗಿ ಸ್ವಲ್ಪ ದಿನ ಎಲ್ಲಾದರೂ ಗೌಡರ ತೋಟದಲ್ಲಿ ಕೆಲಸ ಮಾಡಿ ನಾಲ್ಕು ಕಾಸು ಸಂಪಾದನೆ ಮಾಡಿಕೊಂಡು ಬರುತ್ತೇನೆ. ಅಷ್ಟು ಹೊತ್ತಿಗೆ ಊರಿನ ಗಲಾಟೆ ತಣ್ಣಗಾಗುತ್ತದೆ. ಅಮ್ಮನಿಗೆ ನಾನು ಹಾಡಿಯಲ್ಲಿ ಅಕ್ಕಿ ಮುಡಿ ಅಡಗಿಸಿಟ್ಟಿರುವ ಜಾಗ ಗೊತ್ತುಂಟು. ಗಲಾಟೆ ಕಡಿಮೆಯಾದ ಮೇಲೆ ಅವಳು ಅದನ್ನು ತರಿಸಲಿ. ನೀವು ಅವಳಿಗೆ ನಾನು ಘಟ್ಟಕ್ಕೆ ಹೋದ ವಿಷಯ ಹೇಳುವಾಗ ಅದನ್ನೂ ಹೇಳಿ” ಎಂದು ಶೇಷಪ್ಪ ಭಾವನನ್ನು ಒಪ್ಪಿಸಿದ.

ಮರುದಿನ ಬೆಳಗ್ಗೆ ಶೇಷಪ್ಪ ಕಡಂದಲೆಯ ದಾರಿಯಾಗಿ ಮೂಡುಬಿದರೆಗೆ ಹೋದ. ಅಲ್ಲಿನ ಪೋಲೀಸ್ ಸ್ಟೇಶನಿನ ಎದುರಿನಿಂದಲೇ ಅವನು ಹಾದುಹೋಗಬೇಕಿತ್ತು. ಆಗ ಅವನಿಗೆ ಎದೆ ಡವಡವ ಅನ್ನುತ್ತಿತ್ತು. ತಲೆಗೆ ಮುಂಡಾಸು ಕಟ್ಟಿಕೊಂಡು ಬೇಗಬೇಗನೆ ನಡೆದು ಅಲ್ಲಿಂದ ಪಾರಾಗಿ ವೇಣೂರಿನತ್ತ ನಡೆದ. ಸಂಜೆ ವೇಣೂರು ತಲುಪಿ ಅಲ್ಲಿ ತನ್ನ ತಾಯಿಯ ತಂಗಿಯ ಮನೆಯನ್ನು ಹುಡುಕಿ ಅಲ್ಲಿ ವಿಶ್ರಾಂತಿ ತೆಗೆದುಕೊಂಡ. ಊರಿನ ಲಪಡಾ ಯಾವುದನ್ನೂ ಹೇಳದೆ ತಾನು ಘಟ್ಟಕ್ಕೆ ಕೆಲಸ ಹುಡುಕಿಕೊಂಡು ಹೊರಟದ್ದು ಎಂದು ಅವರ ಬಳಿ ಹೇಳಿದ. ಅವನ ಚಿಕ್ಕಮ್ಮ “ನಮ್ಮ ಭಾವನವರ ಮಗ ಶಿವರಾಮ ಮೂಡಿಗೆರೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ನೀನು ಅವನ ಜತೆಗೆಯೇ ಕೆಲಸಕ್ಕೆ ಸೇರು, ನಿಲ್ಲಲು ಮನೆ ಕೂಡಾ ಉಂಟು ಅಲ್ಲಿ” ಎಂದಾಗ ಶೇಷಪ್ಪನಿಗೆ ತನ್ನ ಗುರಿ ಸ್ಪಷ್ಟವಾಯಿತು. “ನಾನು ಮೂಡಿಗೆರೆಯಲ್ಲಿ ಶಿವರಾಮಣ್ಣನ ಜತೆಗೆ ಕೆಲಸಕ್ಕೆ ಸೇರಿದ್ದೇನೆ ಎಂಬ ವಿಷಯವನ್ನು ಯಾವಾಗಾದರೂ ಅಮ್ಮನಿಗೆ ಹೇಳಿಕಳಿಸಿ” ಎಂದು ಚಿಕ್ಕಮ್ಮನಿಗೆ ಹೇಳಿದ. ಮತ್ತೆ ಎರಡು ದಿನದ ಬಳಿಕ ಅವನು ಮೂಡಿಗೆರೆಯ ಶಿವರಾಮನ ಆಶ್ರಯಕ್ಕೆ ಹೋಗಿಬಿದ್ದ. ಅವನು ಮತ್ತೆ ಊರಿಗೆ ಬಂದದ್ದು ಎರಡು ವರ್ಷಗಳ ನಂತರ – ಎರಡನೆಯ ಮಹಾಯುದ್ಧ ಮುಗಿದ ಮೇಲೆಯೇ!

ಮತ್ತೂ ಎರಡು ವರ್ಷ ಕಳೆದಿದ್ದರೆ ಭಾರತಕ್ಕೆ ಸ್ವಾತಂತ್ರ್ಯವೇ ಸಿಕ್ಕಿಬಿಡುತ್ತಿತ್ತು! ಕೊಡಪಟ್ಟೆ ಶೇಷಪ್ಪ ಬುದ್ಧಿವಂತನಾಗಿದ್ದರೆ ‘ಸ್ವಾತಂತ್ರ್ಯ ಯೋಧ’ ಎಂದು ಸರ್ಟಿಫಿಕೇಟ್ ಮಾಡಿಸಿಕೊಂಡು ಜೀವನಪೂರ್ತಿ ಆರಾಮವಾಗಿ ಕಾಲ ಕಳೆಯಬಹುದಿತ್ತು. ಆಗ ‘ಪುಂಡಗೋಳಿಯ ಕ್ರಾಂತಿ’ಯೂ ನಮ್ಮ ಮಕ್ಕಳ ಪಾಠಪುಸ್ತಕಗಳಲ್ಲಿ ಸೇರಿಕೊಳ್ಳುತ್ತಿತ್ತು!

(‘ಉತ್ತರಾಧಿಕಾರ’ (2007) ಕಾದಂಬರಿಯಿಂದ ಆರಿಸಿ,
ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಸಣ್ಣಕತೆಯಂತೆ ನೀಡಲಾಗಿದೆ.)

******

ಈ ಕತೆಯ ಹಿನ್ನೆಲೆ: ಎರಡನೆಯ ವಿಶ್ವಯುದ್ಧದ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಅಕ್ಕಿ, ಸಕ್ಕರೆ, ಸೀಮೆ ಎಣ್ಣೆ ಮುಂತಾದ ಜೀವನಾವಶ್ಯಕ ವಸ್ತುಗಳು ಸಿಗದೆ ಬದುಕು ಬಹಳ ದುಸ್ತರವಾಗಿತ್ತು. ಅದನ್ನು ಕೂಡಾ ಕತೆಗಾರರು ತಮ್ಮ ಕೃತಿಗಳಲ್ಲಿ ಚಿತ್ರಿಸಿದ್ದಾರೆ.
ಈ ಕಥಾಸರಣಿಯ ಸಂಪಾದಕನ (ಬಿ. ಜನಾರ್ದನ ಭಟ್) ‘ಉತ್ತರಾಧಿಕಾರ’ ಕಾದಂಬರಿಯಲ್ಲಿ ದ್ವಿತೀಯ ಮಹಾಯುದ್ಧ ಕಾಲದಲ್ಲಿ ಜನರಿಗೆದುರಾಗಿದ್ದ ಕಷ್ಟಗಳ ವರ್ಣನೆಯಿದೆ. ‘ಪುಂಡಗೋಳಿಯ ಕ್ರಾಂತಿ’ ಎಂದು ಕರೆಯಬಹುದಾದ ಕಥಾನಕವೊಂದು ಇದರಲ್ಲಿದ್ದು, ಜನಸಾಮಾನ್ಯರಲ್ಲಿ ಎದ್ದಿದ್ದ ಹಾಹಾಕಾರ, ಕಳ್ಳಸಂತೆಯ ವ್ಯಾಪಾರಿಯೊಬ್ಬ ಅಕ್ಕಿ ಮೂಟೆಗಳನ್ನು ಸಾಗಿಸುವಾಗ ಬಡವರ ಗುಂಪೆಂದು ಸರಕಾರದ ಭಯವನ್ನೂ ಮೆಟ್ಟಿನಿಂತು ಅಕ್ಕಿಯ ಮುಡಿಗಳನ್ನು ದರೋಡೆಮಾಡಿದ ಘಟನೆಯ ವರ್ಣನೆಯಿದೆ. ಇದು ನಿಜವಾಗಿಯೂ ನಡೆದ ಘಟನೆಯನ್ನು ಆಧರಿಸಿದೆ.
ಫ್ರಾನ್ಸಿಸ್ ದಾಂತಿಯವರ ‘ರಾಯರ ಬಾವಿ (?)’ ಇದೇ ಕಾಲಘಟ್ಟದಲ್ಲಿ ಉಳ್ಳವರು ಅಕ್ಕಿಮುಡಿಯನ್ನು ಅಡಗಿಸಿಡುವ ಸನ್ನಿವೇಶವನ್ನು ದಾಖಲಿಸಿರುವ ಕತೆಯಾಗಿದೆ. ಸಿಕಂದರ್ ಕಾಪು ಅವರ ‘ಬಾಟ್ಲಿವಾಲ!’ ಕತೆ ಸೀಮೆ ಎಣ್ಣೆ ಸಿಗದೆ ಬಡವರು ಪರದಾಡುತ್ತಿದ್ದುದನ್ನು ದಾಖಲಿಸಿದೆ.