ನನ್ನ ಜೀವ ಈಗಲೋ ಮತ್ತೋ ಎಂಬಂತೆ ಇದೆ. ಒಂದು ವೇಳೆ ನಾನು ಬದುಕಿದ್ದರೆ ಎಂದಾದರೂ ಈ ಜನ್ಮದಲ್ಲಿ ನಿನಗೆ ದರ್ಶನ ಕೊಡದೆ ಹೋಗಲಾರೆ. ಆದರೆ ನಿನ್ನ ಮುಂದಿನ ಸ್ಥಿತಿ ಏನೆಂದು ನಿಶ್ಚಯ ಮಾಡಿಕೋ. ನೀನು ಚಿಕ್ಕವಳಾದುದರಿಂದ ಪುಸ್ತಕದಲ್ಲೋದಿದ ಅಂಶಗಳನ್ನು ಗಿಳಿ ಹೇಳಿದಂತೆ ಹೇಳುತ್ತೀ. ದೊಡ್ಡದೊಡ್ಡ ಯೋಚನೆಗಳು ಯೋಚನೆಗಳೇ. ಅವನ್ನು ಅನುಸರಿಸಲು ಬಹಳ ಕಷ್ಟವಿದೆ. ನೀನು ಈಗ ಚಿಕ್ಕವಳು. ಇನ್ನು ಕೆಲವು ವರ್ಷಗಳು ಸಂದಾಗ ನಿನಗೆ ಪುರುಷಾಪೇಕ್ಷೆ ಬಂದೀತು. ನಿನ್ನಿಂದ ಏಕಾಕಿನಿಯಾಗಿರಲು ಸಾಧ್ಯವೇ? ನೀನು ನನ್ನಲ್ಲಿ ಹೇಳಿದ ಮಾತನ್ನು ಇಟ್ಟುಕೊಳ್ಳುವೆಯಾ? ಕಮೆ!
ಡಾ.ಜನಾರ್ದನ ಭಟ್ ಸಾದರಪಡಿಸುವ ಓಬಿರಾಯನಕಾಲದ ಕಥಾ ಸರಣಿಯಲ್ಲಿ ಎಸ್. ಯು. ಪಣಿಯಾಡಿ ಬರೆದ ಕತೆ “ಸತೀ ಕಮಲೆ”

 

ಮದುವೆಯಾಗಿ ಎಂಟು ದಿನಗಳಲ್ಲಿ ಉಮೇಶನಿಗೊಂದು ತಂತಿ ಬಂತು: ‘ಕೂಡಲೇ ಹೊರಟು ಬರಬೇಕು’ – ಎಂದು. ಹೊರಡಲು ಸನ್ನಾಹ ಮಾಡಿದನು. ಅವನು ರಾಜಕೀಯ ಚಳವಳಕ್ಕೆ ಸೇರಿದ್ದಾನೆಂದು ಕಮಲೆಗೆ ಹೊರತು ಬೇರೆ ಯಾರಿಗೂ ಗೊತ್ತಿರಲಿಲ್ಲ. ಹೊರಡುವ ಮುನ್ನಾದಿನ ಕಮಲೆಯೊಡನೆ ಮನಬಂದಂತೆ ತುಂಬ ಮಾತಾಡಬೇಕೆಂದು ಸಂಜೆಯಾಗುವಾಗ ಅವಳ ಕೋಣೆಗೆ ಹೋದ. ಮದುವೆಯಾದ ಮೇಲೆ ಅವಳ ಕೋಣೆಗೆ ಹೋಗುವುದು ಇದೇ. ಹೋದ ಕೂಡಲೇ ಎದ್ದು ನಿಂತಳು. ಇದುವರೆಗೆ ಎದ್ದವಳಲ್ಲ. ಗಂಡನಿಗೆ ಗೌರವ ಕೊಡಬೇಕೆಂದು ಇಂದು ಎದ್ದಳು. ಅವಳ ಸಂತೋಷವನ್ನು ನೋಡಿ ಉಮೇಶನಿಗೆ ನಗು ಬಂತು. ‘ಹೀಗೂ ಗೌರವ ಕೊಡಲು ತೊಡಗಿದೆಯಾ’ ಎಂದು ಹೇಳಿ, ಎದುರಿನಲ್ಲಿ ಬೇರೆ ಕುರ್ಚಿಯಿದ್ದರೂ ಅವಳ ಕುರ್ಚಿಯಲ್ಲಿ ಕುಳಿತುಕೊಂಡ. ಅವಳು ಬೇರೆ ಕುರ್ಚಿಯಲ್ಲಿ ಕುಳಿತುಕೊಂಡಳು. ಉಮೇಶ ಕುರ್ಚಿಯಿಂದೆದ್ದು ನೆಲದಲ್ಲಿ ಹಾಸಿದ ಹಾಸಿಗೆಯ ಮೇಲೆ ಕುಳಿತುಕೊಂಡ. ದಾರಿಯಿಲ್ಲದೆ ಅವಳೂ ಹಾಸಿಗೆಯಲ್ಲೇ ಕುಳಿತುಕೊಳ್ಳಬೇಕಾಯಿತು. ಅವಳ ಗಲ್ಲವನ್ನು ಹಿಡಿದು, ‘ಯಾರು ಬುದ್ದಿವಂತರು?’ ಎಂದು ಕೇಳಿದ. ‘ನೀವೇ’ ಎಂದು ಹೇಳಿದಳು. ‘ಏನು ಕಮೆ?’ ‘ಅಲ್ಲ, ನೀನೇ’. ಅವಳನ್ನು ಎತ್ತಿ ಮಡಿಲಿನಲ್ಲಿ ಕುಳ್ಳಿರಿಸಿಕೊಂಡು ಹೇಳಿದ-

‘ಕಮೆ, ನಿನ್ನ ಅಪೇಕ್ಷೆ ಪ್ರಕಾರ ಮದುವೆಯಾಯಿತು. ಇನ್ನು ನಿನ್ನನ್ನು ಯಾವಾಗ ನೋಡುವುದೋ ಏನೋ. ತಂತಿ ಬಂದಿದೆ. ನಾಳೆ ಬೆಳಗ್ಗೆ ಹೊರಡುತ್ತೇನೆ. ನಾನು ಹೇಳಿದ್ದೆಲ್ಲಾ ನೆನಪಿದೆಯಲ್ಲವೆ? ಇದನ್ನು ಯಾರಲ್ಲೂ ಹೇಳಬೇಡ. ನನ್ನನ್ನು ಹೋಗಲಿಕ್ಕೇ ಬಿಡಲಿಕ್ಕಿಲ್ಲ.’

‘ಹೇಳುವುದಿಲ್ಲ. ಕಾಗದ ಬರೆಯಲು ಮಾತ್ರ ಮರೆಯಬೇಡ. ಆದಷ್ಟು ಬೇಗ ಬರುವಂತೆ ಕೆಲಸ ಮುಗಿಸು.’

‘ಆಗಲಿ, ಇಗೋ, ಒಂದು ಮಾತು ಹೇಳುತ್ತೇನೆ; ಸೆರಗಿನಲ್ಲಿ ಗಂಟು ಹಾಕಿಕೋ. ಎಷ್ಟು ದೊಡ್ಡ ಕೆಲಸವಿದ್ದರೂ ನಿನಗಿಂತಲೂ ಸುಂದರಿ, ಹೆಚ್ಚು ಕಲಿತ, ದೊಡ್ಡ ಶ್ರೀಮಂತ ಹುಡುಗಿ ಸಿಕ್ಕುವ ಸಂದರ್ಭವಿದ್ದರೂ ನಿನ್ನ ಸಾಹಜಿಕ ಕೋಮಲ ಅನುರಾಗಕ್ಕೂ, ನಿನಗಾರೂ ಗತಿಯಿಲ್ಲವೆಂಬುದಕ್ಕೂ ವಶವಾಗಿ ನಿನ್ನ ಮಾತಿನ ಪ್ರಕಾರ ಮದುವೆ ಮಾಡಿಕೊಂಡುದು. ನನ್ನ ತಂದೆತಾಯಿಯರಿಗೆ ನಾನೊಬ್ಬನೇ ಮಗ. ನೀನು ಹೆಂಡತಿ. ಬೇಕಾದ ಸಂಪತ್ತಿದೆ. ಯಾರೊಬ್ಬನ ಹಂಗಿಲ್ಲದೆ ಸಂತೋಷದಲ್ಲಿ ಕಾಲಕ್ಷೇಪ ಮಾಡಬಹುದು. ಇದರಲ್ಲೆಲ್ಲ ಇದ್ದ ಮೋಹಪಾಶವನ್ನು ಕಡಿದು ದೇಶಕ್ಕಾಗಿ ಜೀವಕೊಡಲು ತಯಾರಾಗಿದ್ದೇನೆ – ಕೊಡುವ ಸಮಯ ಬಂದರೆ.

ನೀನು ಕೊಟ್ಟ ಕೈಭಾಷೆಯನ್ನು ನಂಬಿ ಮದುವೆ ಮಾಡಿಕೊಂಡೆ. ಇಗೋ! ಜಾಗ್ರತೆ! ನಾನು ವೀರಕೋಟಿಯಲ್ಲಿ ಸೇರಿದವನು. ನೀನೂ ವೀರ ರಮಣಿಯಾಗಬೇಕು. ಒಂದು ಪಕ್ಷಕ್ಕೆ ನಾನು ಮೃತಪಟ್ಟರೆ, ನಿನಗೆ ಪ್ರಾಯಬಂದಾಗ ನೀನೂ ದೇಶಕ್ಕಾಗಿಯೇ ಕೆಲಸ ಮಾಡಬೇಕು. ಪ್ರಾಪಂಚಿಕ ವಿಷಯಗಳ ಮೇಲೆ ಮೋಹಿಸಬೇಡ. ಪಾತಿವ್ರತ್ಯಕ್ಕೆ ಇಷ್ಟೂ ಕುಂದು ಬರಬಾರದು. ಪಾತಿವ್ರತ್ಯ, ಬ್ರಹ್ಮಚರ್ಯಗಳಿಗಾಗಿ ಜೀವವನ್ನೂ ಕೊಡಬೇಕು. ಇನ್ನೊಬ್ಬನ ಹಾಸಿಗೆಯಲ್ಲಿ ಮಲಗಿಕೊಳ್ಳಬೇಕೆಂದು ಒಂದು ಕ್ಷಣವೂ ಈ ಮನಸ್ಸಿನಲ್ಲಿ ಗ್ರಹಿಸಬೇಡ. ಹಾಗೆ ಗ್ರಹಿಸಿದರೆ ಅಲ್ಲಿಗೇ ನಿನ್ನ ಪಾತಿವ್ರತ್ಯ ಮುಗಿಯಿತು. ಜಾಗ್ರತೆ! ಕಮೆ! ಮೋಸ ಬೀಳಬೇಡ. ಹಾಳಾಗಬೇಡ, ಹಾಳು ಮಾಡಬೇಡ. ನೀನು ಒಂದೂವರೆ ವರ್ಷದ ಮಗುವಾಗಿ ನಮ್ಮ ಮನೆಗೆ ಬಂದಂದಿನಿಂದೀಚೆಗೆ ನನ್ನ ಹೃದಯದಲ್ಲಿ ನೀನಿದ್ದೆ. ತಪ್ಪಬೇಡ.’

‘ಉಮಾ, ನನ್ನ ಮಾನಕ್ಕೆ ಸ್ವಲ್ಪವಾದರೂ ಹಾನಿ ಬರುವ ಸಂದರ್ಭ ಇದ್ದರೆ ರಜಪೂತ ಸ್ತ್ರೀಯರಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ.’

‘ಭೇಷ್, ಭೇಷ್, ಕಮೆ! ಮೆಚ್ಚಿದೆ, ಇಗೋ, ತೆಗೆದುಕೋ’ ಎಂದು ಸುಮಾರು ನೂರು ರೂಪಾಯಿ ಬೆಲೆಬಾಳುವ ಎರಡು ಕಡೆಯಲ್ಲಿ ಬಾಯಿಯಿರುವ ಚೂರಿಯನ್ನು (ಬಾಂಕ್) ಕೊಟ್ಟು ಹೇಳಿದ: ‘ಮನುಷ್ಯಮಾತ್ರನಿಗೆ ಗೊತ್ತಾಗದಂತೆ ಇದು ನಿನ್ನ ಕೈಯಲ್ಲಿರಬೇಕು. ಇದನ್ನು ಬಿಟ್ಟು ಎಲ್ಲಿಗೂ ಹೋಗಬಾರದು. ಇದರಲ್ಲಿ ಜೀವಕಳೆಯಿದೆ. ಹಿಂದೂ ರಮಣಿಯರ ಪಾತಿವ್ರತ್ಯ ಸಂರಕ್ಷಣೆಗಾಗಿ ಮೂರು ಜನರನ್ನು ಆಹುತಿ ತೆಗೆದುಕೊಂಡಿದೆ. ಜಾಗ್ರತೆ, ನಿನ್ನ ಮಾನಹೋಗುವ ಸಮಯದಲ್ಲಿ ಇದನ್ನು ಉಪಯೋಗಿಸಬೇಕು. ನಿನ್ನಲ್ಲಿ ಹೆಚ್ಚು ಹೇಳುವಂತಹುದು ಇಲ್ಲ. ನೀನು ಬೆಳೆದ ಹಾಗೆ ನಿನಗೆ ಎಲ್ಲ ಗೊತ್ತಾಗುತ್ತದೆ. ಒಂದೇ ಮಾತು ಹೇಳುತ್ತೇನೆ – ‘ಹಾಳಾಗಬೇಡ, ಹಾಳು ಮಾಡಬೇಡ.’

ಇಬ್ಬರ ಮುಖವೂ ವೀರಾವೇಶದಿಂದ ಉರಿಯುತ್ತಿದೆ. ಪ್ರಾಯ ಹತ್ತೇ ವರ್ಷವಾದರೂ ಆ ಹುಡುಗಿಯ ವೀರಾವೇಶವನ್ನು ನೋಡಿ ಉಮೇಶನಿಗೆ ಸಂತೋಷವಾಯಿತು. ತುಂಬ ಹೊತ್ತು ಪರಸ್ಪರ ಮುಖಗಳನ್ನು ನೋಡಿಕೊಂಡರು. ಕೊನೆಗೆ ಮೆಲ್ಲಮೆಲ್ಲನೆ ಸಣ್ಣಸಣ್ಣ ನಗುಗಳು ಹೊರಟುವು. ಇಬ್ಬರೂ ಅಪ್ಪಿಕೊಂಡು ಮುತ್ತಿಟ್ಟುಕೊಂಡರು. ಉಮೇಶ ಬುದ್ದಿವಂತನಾದುದರಿಂದ ಮುತ್ತಿಡುವಾಗ ಸಾಧ್ಯವಾದಷ್ಟು ತನ್ನ ಬಾಯಿಯಿಂದ ಅವಳ ಬಾಯಿಗೆ ಗಾಳಿ ತುಂಬಿ ಹೊಟ್ಟೆಯವರೆಗೆ ತುಂಬುವಂತೆ ಮಾಡಿದ. ಎಷ್ಟು ಮುತ್ತಿಟ್ಟರೂ ಅವರಿಗೆ ತೃಪ್ತಿಯಾಗಲಿಲ್ಲ. ಆಯಾಸಪಟ್ಟರು. ಕತ್ತಲಾದಾಗ ಕೋಣೆಯನ್ನು ಬಿಟ್ಟುಹೋದ.

ಮರುದಿನ ಹೊತ್ತಾರೆ ‘ಮದ್ರಾಸ್ ಮೆಯಿಲ್’ ಹಿಡಿದು ಹೊರಟುಹೋದನು. ಕಲ್ಕತ್ತಕ್ಕೆ ಹೋದಮೇಲೆ ಆಗಾಗ ಕ್ಷೇಮ ಸಮಾಚಾರಕ್ಕೆ ಮಾತ್ರ ಕಾಗದ ಬರೆಯುತ್ತಿದ್ದ. ಆದರೆ ಒಂದು ದಿನ ಅವಳು ಶಾಲೆಯಲ್ಲಿರುವಾಗ ಅವಳ ಶಾಲೆಯ ಮೇಲು ವಿಳಾಸಕ್ಕೆ ಒಂದು ಪತ್ರ ಬಂತು. ಏನುಂಟೆಂದು ತಿಳಿಯಬೇಕೆಂದಿದ್ದರೂ ಅಲ್ಲಿ ಒಡೆದು ನೋಡಲು ಅನುಕೂಲವಾಗಲಿಲ್ಲ. ಶಾಲೆ ಬಿಟ್ಟ ಕೂಡಲೇ ಬೇಗನೆ ಮನೆಗೆ ಹೋಗಿ ತನ್ನ ಕೋಣೆಯಲ್ಲಿ ಆ ಕಾಗದವನ್ನು ಒಡೆದು ನೋಡಿದಳು.

ಇದರಲ್ಲಿ ಜೀವಕಳೆಯಿದೆ. ಹಿಂದೂ ರಮಣಿಯರ ಪಾತಿವ್ರತ್ಯ ಸಂರಕ್ಷಣೆಗಾಗಿ ಮೂರು ಜನರನ್ನು ಆಹುತಿ ತೆಗೆದುಕೊಂಡಿದೆ. ಜಾಗ್ರತೆ, ನಿನ್ನ ಮಾನಹೋಗುವ ಸಮಯದಲ್ಲಿ ಇದನ್ನು ಉಪಯೋಗಿಸಬೇಕು. ನಿನ್ನಲ್ಲಿ ಹೆಚ್ಚು ಹೇಳುವಂತಹುದು ಇಲ್ಲ. ನೀನು ಬೆಳೆದ ಹಾಗೆ ನಿನಗೆ ಎಲ್ಲ ಗೊತ್ತಾಗುತ್ತದೆ. ಒಂದೇ ಮಾತು ಹೇಳುತ್ತೇನೆ – ‘ಹಾಳಾಗಬೇಡ, ಹಾಳು ಮಾಡಬೇಡ.’

ಮಜಪುರ
ತಾ-4-10-1907
ಪ್ರಿಯ ಕಮೆ,
ನಿನ್ನ ಮೇಲೆ ಪ್ರೀತಿಯಿಂದ ಹೇಳುವ ಕೊನೆಯ ನಾಲ್ಕು ಮಾತುಗಳು. ನಾನು ಎಂತಹ ದೊಡ್ಡ ಕೆಲಸಕ್ಕೆ ಕೈಹಾಕಿದ್ದೇನೆಂದು ನಿನಗೆ ಗೊತ್ತೇ ಇದೆ. ಕಲ್ಕತ್ತದಿಂದ ಇಲ್ಲಿಗೆ ಬಂದು ಹತ್ತು ಹನ್ನೆರಡು ದಿನಗಳಾದವು. ಶಿಷ್ಟಪರಿಪಾಲನೆಗೆ ಬೇಕಾಗಿ ದುಷ್ಟಸಂಹಾರಮಾಡಿ ನಮ್ಮ ಮನಸ್ತಾಪವನ್ನು ಆದಷ್ಟು ಕಡಮೆ ಮಾಡಿ ವ್ರತವನ್ನು ಮುಗಿಸಬೇಕೆಂದು ನಾವೆಲ್ಲರೂ ನಿಶ್ಚಯ ಮಾಡಿ ಕೆಲಸಕ್ಕೆ ತೊಡಗಿದೆವು. ನಾವು ಪ್ರಾರಂಭಿಸುವಾಗ ಹೇಗೋ ಸರಕಾರದವರಿಗೆ ನಮ್ಮ ಗುಪ್ತಕಾರ್ಯಕ್ರಮ ತಿಳಿದುಹೋಯಿತು. ಈಗ ನಮ್ಮನ್ನು ಹುಡುಕಲು ತೊಡಗಿದ್ದಾರೆ. ನಮ್ಮ ಪೈಕಿಯಲ್ಲಿ ಹಲವು ಜನರನ್ನು ಹಿಡಿದಿದ್ದಾರೆ. ನಮ್ಮ ಜಾಗವನ್ನೇ ಆಕ್ರಮಣ ಮಾಡಿದ್ದಾರೆ. ಆದುದರಿಂದ ನಾವು ಒಬ್ಬೊಬ್ಬರು ಒಂದೊಂದು ಕಡೆಗೆ ಓಡಬೇಕಾಯಿತು.

ನನ್ನ ಆಪ್ತಸ್ನೇಹಿತ ಉಮೇಶ ರೈ ನಿನ್ನೆ ಆತ್ಮಹತ್ಯವನ್ನು ಮಾಡಿಕೊಳ್ಳದೆ ನಿರ್ವಾಹವಿರಲಿಲ್ಲ. ನನ್ನ ಜೀವವೂ ಇನ್ನು ಮೇಲೆ ಈ ಲೋಕದಲ್ಲಿರಲಾರದೆಂದು ನಂಬಿಕೆ. ಸರ್ಕಾರದವರು ಹಿಡಿಯದೆ ಬಿಡರು. ಅವರ ಕೈಗೆ ಬಿದ್ದು ಮಾನವನ್ನು ಕಳೆದುಕೊಳ್ಳುವುದರಿಂದ ಆತ್ಮಹತ್ಯೆಯೇ ಉತ್ತಮವೆಂದು ನಮ್ಮ ಮತ. “ಸತಾಂ ಮಾನೇ ಮ್ಲಾನೇ ಮರಣಮಥವಾ ದೂರಸರಣಂ” ಎಂದು ದೊಡ್ಡವರ ಉಪದೇಶ. ಆದ್ದರಿಂದ ನನ್ನ ಜೀವ ಈಗಲೋ ಮತ್ತೋ ಎಂಬಂತೆ ಇದೆ. ಒಂದು ವೇಳೆ ನಾನು ಬದುಕಿದ್ದರೆ ಎಂದಾದರೂ ಈ ಜನ್ಮದಲ್ಲಿ ನಿನಗೆ ದರ್ಶನ ಕೊಡದೆ ಹೋಗಲಾರೆ. ಆದರೆ ನಿನ್ನ ಮುಂದಿನ ಸ್ಥಿತಿ ಏನೆಂದು ನಿಶ್ಚಯ ಮಾಡಿಕೋ. ನೀನು ಚಿಕ್ಕವಳಾದುದರಿಂದ ಪುಸ್ತಕದಲ್ಲೋದಿದ ಅಂಶಗಳನ್ನು ಗಿಳಿ ಹೇಳಿದಂತೆ ಹೇಳುತ್ತೀ. ದೊಡ್ಡದೊಡ್ಡ ಯೋಚನೆಗಳು ಯೋಚನೆಗಳೇ. ಅವನ್ನು ಅನುಸರಿಸಲು ಬಹಳ ಕಷ್ಟವಿದೆ. ನೀನು ಈಗ ಚಿಕ್ಕವಳು. ಇನ್ನು ಕೆಲವು ವರ್ಷಗಳು ಸಂದಾಗ ನಿನಗೆ ಪುರುಷಾಪೇಕ್ಷೆ ಬಂದೀತು. ನಿನ್ನಿಂದ ಏಕಾಕಿನಿಯಾಗಿರಲು ಸಾಧ್ಯವೇ? ನೀನು ನನ್ನಲ್ಲಿ ಹೇಳಿದ ಮಾತನ್ನು ಇಟ್ಟುಕೊಳ್ಳುವೆಯಾ? ಕಮೆ! ಸಾಯುವವರೆಗೆ ಬ್ರಹ್ಮಚರ್ಯದಲ್ಲಿರುವುದು ಪ್ರೀತಿಯ ಲಕ್ಷಣ. ಇಡೀ ಹಿಂದುಸ್ಥಾನದಲ್ಲಿ ಅನುರಾಗಶಾಸ್ತ್ರ ಪ್ರಕಾರವೇ ಎಲ್ಲ ಸ್ತ್ರೀಯರು ವೈಧವ್ಯವನ್ನು ಅನುಭವಿಸುತ್ತಾರೆ. ಹೆಚ್ಚು ಜನರ ಸಮ್ಮತಿ ಇದ್ದುದರಿಂದ ಕೊನೆಗೆ ಧರ್ಮಶಾಸ್ತ್ರದಲ್ಲಿ ಸೇರಿತು. ಕಾಲ ಕ್ರಮದಲ್ಲಿ ಪ್ರೀತಿ ಕಡಮೆಯಾದುದರಿಂದ ಸುಧಾರಕರ ಅವಶ್ಯಕತೆ ಬೇಕಾಯಿತು.

ಇಗೋ ನಾನು ಹೇಳುವುದಿಷ್ಟೆ. ನಿನಗೆ ಪ್ರಾಯ ಬರುವವರೆಗೆ ಯಾವ ಕೆಲಸಕ್ಕೂ ಕೈಹಾಕಬೇಡ. ನೀನು ಹೇಳಿದ ಮಾತನ್ನು ಇಟ್ಟುಕೊಳ್ಳಲು ಆಗುವುದಾದರೆ ಹಾಗೆಯೇ ಇರು. ನನಗೆ ಸಂತೋಷವೇ. ಒಂದು ವೇಳೆ ಬ್ರಹ್ಮಚರ್ಯದಲ್ಲಿರಲು ಆಗಲಿಲ್ಲವಾದರೆ ನನ್ನನ್ನು ಮರೆತುಬಿಡು. ಬೇರೆ ಯಾರನ್ನಾದರೂ ಮದುವೆ ಮಾಡಿಕೋ. ನೀನು ಹೇಗಿದ್ದರೂ ನನಗೆ ಸಂತೋಷವೇ. ಆದರೆ ವಿಧವೆಯೆಂದು ಹೆಸರಿಟ್ಟುಕೊಂಡು, ನನ್ನ ಹೆಂಡತಿಯೆಂದು ಹೇಳಿಕೊಂಡು ವಿಟರನ್ನು ಮಾತ್ರ ಕರೆಯಬೇಡ. ಇದರಷ್ಟು ಕೆಟ್ಟದು ಬೇರೇನೂ ಇಲ್ಲ. ಬ್ರಹ್ಮಚರ್ಯದಲ್ಲಿರಲು ಸಾಧ್ಯವಿಲ್ಲದಿದ್ದರೆ ಬೇರೆ ಮದುವೆ ಮಾಡಿಕೋ. ಒಳ್ಳೆಯದೋ ಕೆಟ್ಟದೋ ಎಂದು ವಿಚಾರಿಸಬೇಡ. ಜನಗಳ ಮಾತಿಗೆ ಕಿವಿಕೊಡಬೇಡ. ಬ್ರಹ್ಮಚಾರಿಣಿಯೆಂದೂ ಪತಿವ್ರತೆಯೆಂದೂ ಹೆಸರಿಟ್ಟುಕೊಂಡು ಕೆಟ್ಟ ಕೆಲಸ ಮಾಡಿದರೆ, ಆದರಷ್ಟು ನೀಚಕೃತ್ಯ ಬೇರೇನೂ ಇಲ್ಲ. ಯಾವುದನ್ನೂ ಅವಸರದಲ್ಲಿ ಮಾಡಬೇಡ. ಕಲಿತುಕೊಂಡಿರು. ನಿನಗೆ ಪ್ರಾಯ ಬರುವಾಗ ಯಾವುದನ್ನಾದರೂ ನಿಶ್ಚಯ ಮಾಡು. ಇದರೊಂದಿಗೆ ನನ್ನ ಭಾವಚಿತ್ರವನ್ನೂ ಕಳುಹಿಸಿದ್ದೇನೆ. ಇದನ್ನೂ ಈ ಪತ್ರವನ್ನೂ ನಿನ್ನ ಜೊತೆಗೇ ಇಟ್ಟುಕೊಂಡಿರು. ನಾನು ಕೊಟ್ಟ ಚೂರಿಯನ್ನು ಬಿಟ್ಟಿರಬೇಡ.

ನೀನು ಮದುವೆ ಮಾಡಿಕೊಳ್ಳುವ ಸಂದರ್ಭ ಬಂದರೆ, ಈ ಪತ್ರವನ್ನೂ ಭಾವಚಿತ್ರವನ್ನೂ ಹರಿದುಹಾಕು; ಚೂರಿಯನ್ನು ತುಂಡುಮಾಡಿ ಹಾಕು – ಆಮೇಲೆ ಅವೆಲ್ಲಾ ನಿನಗೆ ಬೇಡ. ಕಮೆ, ಬ್ರಹ್ಮಚರ್ಯವೂ ಪಾತಿವ್ರತ್ಯವೂ ಬಹಳ ಕಷ್ಟ. ಒಂದು ಕ್ಷಣವಾದರೂ ಪರಪುರುಷ ಸಂಸರ್ಗ ಮಾಡಬೇಕೆಂದು ಯೋಚನೆ ಬಂದರೆ ಅದರ ಹಣೆಬರಹ ಮುಗಿಯಿತು. ಜಾಗರೂಕತೆಯಲ್ಲಿರು. ನೀನು ಸಾಯುವವರೆಗೆ ನನ್ನ ಹೆಂಡತಿಯಾಗಿರಬೇಕಾದರೆ, ನಿನ್ನ ಕರ್ತವ್ಯವೇನೆಂದರೆ – ನಾನು ವೀರನಾಗಿ ನನ್ನ ಪ್ರಾಣವನ್ನು ದೇಶಕಾರ್ಯಕ್ಕೆ ಹೇಗೆ ಸಮರ್ಪಿಸುತ್ತೇನೋ ಹಾಗೆಯೇ ನೀನೂ ವೀರ ರಮಣಿ ಎಂಬ ಹೆಸರನ್ನು ಸಾರ್ಥಕ ಮಾಡಿ ನಿನ್ನ ಪ್ರಾಣವನ್ನೂ ದೇಶಕ್ಕೆ ಕೊಡಬೇಕು. ನಿನ್ನ ಭವಿಷ್ಯವನ್ನು ಯೋಚಿಸಿ ನಿಶ್ಚಯಮಾಡು. ಅವಸರಿಸಬೇಡ. ಕಮೆ, ನಿನ್ನ ಮೇಲಿನ ಪ್ರೀತಿಯಿಂದ ನನಗೆ ತುಂಬ ವ್ಯಸನವಾಗುತ್ತಿದೆ. ಆದರೆ ನಿನ್ನ ಮೇಲಿರುವ ಪ್ರೀತಿಯಿಂದ ನೂರು ಪಾಲು ಹೆಚ್ಚು ದೇಶದ ಮೇಲಿದೆ. ಹೆಂಡತಿಯ ಮಾತು ಕೇಳಿ ತಾಯಿಯನ್ನು ಮನೆಯಿಂದ ಹೊರಗಟ್ಟುವ ಮಗ ನಾನಲ್ಲ. ಆದುದರಿಂದ ಎಲ್ಲರಿಗೂ ಮಾತೃದೇಶವಾದ ಹಿಂದೂ ಸ್ಥಾನದ ಕ್ಷೇಮಕ್ಕೆ ನನ್ನ ಪ್ರಾಣವನ್ನು ಕೊಡುತ್ತೇನೆ.

ಕಮೆ, ನನ್ನ ಹೆಂಡತಿಯಾಗಿರುವವರೆಗೆ ‘ವಂದೇಮಾತರಂ’ ಗೀತವನ್ನು ಮರೆಯಬೇಡ. ಗೀತಾಪಾರಾಯಣವನ್ನು ಮಾಡು. ಇನ್ನು ಸಾಕು, ಇಗೋ – ಒಂದೇ ಮಾತು – ಹಾಳಾಗಬೇಡ, ಹಾಳುಮಾಡಬೇಡ.
ಇತಿ ನಿನ್ನ ಸರ್ವಸ್ವ,
ಉಮೇಶ.
ಪಾಪ! ಕಮಲೆಯ ತಲೆಯ ಮೇಲೆ ಕಲ್ಲನ್ನು ಹಾಕಿದಂತಾಯಿತು. ಅತ್ತಳು, ಹೊರಳಿದಳು. ಏನು ಮಾಡುವುದು! ಬೇರೆ ಯಾರಿಗೂ ಗೊತ್ತಾಗಬಾರದೆಂದು ಆದಷ್ಟು ಅಳುವನ್ನು ತಡೆದುಕೊಂಡಳು. ತೊಡೆಯ ಮೇಲೆ ಮುಂಗೈಯಿಟ್ಟು, ಅಂಗೈಯ ಮೇಲೆ ತಲೆಯಿಟ್ಟು ಕುಳಿತುಕೊಂಡಳು. ವ್ಯಸನದಲ್ಲಿ ಅವಳ ತಲೆಗೆ ಏನೂ ಕಾಣಲಿಲ್ಲ. ಕಣ್ಣೀರು ಮಾತ್ರ ಧಾರಾಕಾರವಾಗಿ ಇಳಿಯುತ್ತಿತ್ತು. ಇಷ್ಟರಲ್ಲಿ ಸುಂದರರಾಯರು ಕ್ಲಬ್ಬಿನಿಂದ ಬಂದರು. ನೇರವಾಗಿ ಕಮಲೆಯ ಕೋಣೆಗೆ ಹೋಗಿ ‘ಅಯ್ಯೋ ಮಗಳೆ, ನಿನ್ನ ಹಣೆಬರಹವೇ’ ಎಂದು ಹೇಳಿದರು. ಕಮಲೆಗೆ ಏನೆಂದು ಗೊತ್ತಾಗಲಿಲ್ಲ. ಅವರ ಮುಖವನ್ನೆ ನೋಡಿದಳು. ಅವರಿಗೆ ಕಣ್ಣೀರು ಬಂತು. ಕಮಲೆಯನ್ನು ಅಪ್ಪಿಕೊಂಡು ಉಮೇಶ ತೀರಿಕೊಂಡನೆಂದು ಹೇಳಿದರು. ಅತ್ತಳು, ಅತ್ತಳು. ಯಾರು ತಡೆಯುವವರು? ಕಾವೇರಮ್ಮನೂ ಬಂದು ಸುದ್ದಿಯನ್ನು ಕೇಳಿ ಅಳತೊಡಗಿದರು. ಇದನ್ನೆಲ್ಲ ನೋಡಿ ಸುಂದರರಾಯರೂ ಅತ್ತರು.

ಇದ್ದ ಒಬ್ಬ ಮಗ ಸತ್ತುಹೋದ, ಸತ್ತೇಹೋದ. ಮಗಳಂತೆಯೇ ಸಾಕುತ್ತಿದ್ದ ಹುಡುಗಿಯೂ ಸತ್ತಂತೆಯೇ. ಯಾರಿಗೆ ವ್ಯಸನವಾಗದು? ಮೂವರೂ ಅತ್ತರೆ ಯಾರು ಸಮಾಧಾನ ಮಾಡುವವರು? ಸುಂದರರಾಯರು ಆದಷ್ಟು ಸಹಿಸಿಕೊಂಡು ಅವರನ್ನು ಸಮಾಧಾನಪಡಿಸಲು ತೊಡಗಿದರು. ಅವರು ಅಂದಿನ ವರ್ತಮಾನ ಪತ್ರಿಕೆಯಲ್ಲಿ ಉಮೇಶರಾಯ ಮೂರನೇ ತಾರೀಕಿನಂದು ಆತ್ಮಹತ್ಯೆ ಮಾಡಿಕೊಂಡನೆಂದು ನೋಡಿದರು. ಅದರಲ್ಲಿಯೇ ‘ಅವನು ಮಂಗಳೂರಿನವನೆಂದೂ ಕಲ್ಕತ್ತದಲ್ಲಿ ಕಲಿತುಕೊಂಡಿದ್ದವನೆಂದೂ ಮಜಪುರ ಬಾಂಬು ಗಲಾಟೆಯಲ್ಲಿ ಸೇರಿದ್ದವನೆಂದೂ ಸರ್ಕಾರದವರು ಹಿಡಿಯಲು ಬಂದಾಗ ಸಿಕ್ಕಲಾಗದೆಂದು ನದಿಯಲ್ಲಿ ಬಿದ್ದ ಪ್ರಾಣವನ್ನು ತೆಗೆದುಕೊಂಡನೆಂದೂ’ ಇತ್ತು. ಹೆಣವಾದರೂ ಸಿಕ್ಕುವುದೇ ಎಂದು ಕೂಡಲೇ ತಂತಿಕೊಟ್ಟು ವಿಚಾರಿಸಿದರು. ಆದರೆ ಏನೂ ಪ್ರಯೋಜನವಾಗಲಿಲ್ಲ. ಕೊನೆಗೆ ಸಂಸ್ಕಾರವನ್ನು ಕ್ರಮಪ್ರಕಾರ ಮಾಡಿದರು.

(ಮೂಲ ತುಳು ಕಾದಂಬರಿ – ‘ಸತೀ ಕಮಲೆ’ಯ ಕನ್ನಡ ಅನುವಾದದಿಂದ ಆರಿಸಿದ ಭಾಗ. ಅನುವಾದಕರು : ಡಾ. ಪಾದೇಕಲ್ಲು ವಿಷ್ಣು ಭಟ್ಟ.)
ಎಸ್. ಯು. ಪಣಿಯಾಡಿ

ಸ್ವಾತಂತ್ರ್ಯ ಹೋರಾಟಗಾರರೆಂದೇ ಖ್ಯಾತರಾಗಿರುವ ಉಡುಪಿ ಪಣಿಯಾಡಿಯ ಶ್ರೀನಿವಾಸ ಉಪಾಧ್ಯಾಯರು (ಎಸ್. ಯು. ಪಣಿಯಾಡಿ : 1897 – 1959) ಸಂಸ್ಕೃತ ವಿದ್ವಾಂಸರು; ಉಡುಪಿಯ ಅನಂತೇಶ್ವರ ದೇವಸ್ಥಾನದ ಅರ್ಚಕ ಮನೆತನದವರು. ಬರೋಡದಲ್ಲಿ ಲೈಬ್ರೇರಿಯನ್ ಆಗಿದ್ದ ಎಸ್. ಯು. ಪಣಿಯಾಡಿಯವರು ಗಾಂಧೀಜಿಯವರ ಕರೆಗೆ ಓಗೊಟ್ಟು ಕೆಲಸ ತೊರೆದು ಉಡುಪಿಗೆ ಬಂದು ಸಮಾಜ ಸುಧಾರಣೆ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡವರು. ತುಳು ಭಾಷೆ ಹಾಗೂ ಸಾಹಿತ್ಯದ ಪುನರುತ್ಥಾನವೂ ಅವರ ಕಾರ್ಯಗಳಲ್ಲಿ ಒಂದಾಗಿತ್ತು. ಅವರು ತುಳುನಾಡ ಛಾಪಖಾನೆ ಎಂಬ ಪ್ರೆಸ್ಸು ಮತ್ತು ‘ಅಂತರಂಗ’ ಎಂಬ ಪತ್ರಿಕೆಗಳನ್ನೂ ನಡೆಸುತ್ತಿದ್ದರು. ಅವರ ಖಾದಿ ಭಂಡಾರದಲ್ಲಿ ಸೇಲ್ಸ್ಮನ್ ಆಗಿದ್ದ ಪಾ. ವೆಂ. ಆಚಾರ್ಯರು ನಂತರ ಅವರ ‘ಅಂತರಂಗ’ ಪತ್ರಿಕೆಯ ಮೂಲಕ ಪತ್ರಿಕಾರಂಗಕ್ಕೆ ಕಾಲಿಟ್ಟದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇವರ ಪತ್ನಿ ಭಾರತೀ ಬಾಯಿ ಪಣಿಯಾಡಿಯವರು ಕೂಡಾ ಸ್ವಾತಂತ್ರ್ಯ ಹೋರಾಟಗಾರ್ತಿ ಹಾಗೂ ಕತೆಗಾರ್ತಿ. ಅವರ ಕತೆಯೂ ಈ ಸಂಪುಟದಲ್ಲಿದೆ.

ಪಣಿಯಾಡಿಯವರ ‘ಸತೀ ಕಮಲೆ’ (1936) ತುಳುವಿನ ಮೊದಲನೆಯ ಸಾಮಾಜಿಕ ಕಾದಂಬರಿ. ಇದರ ಒಂದು ಭಾಗವನ್ನು ಇಲ್ಲಿ ಕೊಡಲಾಗಿದೆ. ತುಳುವಿನಿಂದ ಕನ್ನಡಕ್ಕೆ ಅನುವಾದಿಸಿದವರು ಡಾ. ಪಾದೇಕಲ್ಲು ವಿಷ್ಣು ಭಟ್ಟರು.