ಜಮೀನ್ದಾರರ ಮಗನಿಗೆ ಆರು ತಿಂಗಳ ಗಾಂಧಿ ಶಿಕ್ಷೆಯಾಯಿತೆಂದು ಒಂದು ಕ್ಷಣದೊಳಗೆ ಊರಿಗೆ ಊರೇ ಮಾತಾಡತೊಡಗಿತು. ಬೆಂಗಳೂರಿನಿಂದ ರಾಯರಿಗೆ ಬೇಕಾದವರು ಕೊಟ್ಟ ತಂತಿ ಆಗತಾನೇ ಬಂದಿತೆಂದು ಜನರು ಆಡಿಕೊಂಡರು. ಅದನ್ನು ಕೇಳಿ ಕೇಶವಯ್ಯನವರು ತಲೆದೂಗಿ ತನ್ನಷ್ಟಕ್ಕೆ ನುಡಿದರು : ಪ್ರವಾಹದಲ್ಲಿ ಯಾವುದು ತಾನೇ ಕೊಚ್ಚಿಹೋಗುವುದಿಲ್ಲ? ಅದಕ್ಕಾಗಿ ಅಳಬೇಕಾಗಿಲ್ಲ. ಹೆಮ್ಮೆ ಪಡಬೇಕು. ನಮ್ಮವರ ಕಡೆಯಿಂದ ಇಷ್ಟಾದರೂ ಸೇವೆಸಂದಿತಲ್ಲ – ಎಂದು ಅಭಿಮಾನ ಪಡಬೇಕು. ನನಗೆ ಈ ಮೊದಲೇ ಗೊತ್ತು – ಕೃಷ್ಣಸ್ವಾಮಿ ಚಲೋ ಹುಡುಗನಪ್ಪ ಚಲೋ ಹುಡುಗ! ಸಾರ್ಥಕವಾಯಿತು.
ಡಾ. ಜನಾರ್ದನ ಭಟ್ ಸಾದರಪಡಿಸುವ ಓಬಿರಾಯನ ಕಾಲದ ಕಥಾಸರಣಿಯಲ್ಲಿ ಎಸ್. ವೆಂಕಟರಾಜ ಬರೆದ ಕತೆ “ಗಾಂಧಿ ಮಂದಿ”

 

ಗಾಂಧಿಯಂತೆ – ಗಾಂಧಿ! ಇವರ ಮನೀ ಹಾಳಾಗ! ಈ ಪೇಟೆ ನಾಯಿಗಳು ನಮಗೆ ಬುದ್ಧಿ ಹೇಳಲಿಕ್ಕೆ ಹಳ್ಳಿಗೆ ಬಂದಿದ್ದಾವೆ. ನಮ್ಮನ್ನಾಳೋ ರಾಜನಿಗೆ ಎದುರು ನಿಂತು ರಾಜದ್ರೋಹದ ಪಾಪ ಕಟ್ಟಿಕೊಂಡು ಮತ್ತೆ ಇವುಗಳು ಸ್ವರಾಜ್ಯಗಳಿಸಿಕೊಳ್ಳುತ್ತಾವಂತೆ – ಸ್ವರಾಜ್ಯ! ಜಾತಿ ಬೇಡ – ನೀತಿಬೇಡ. ಬ್ರಾಹ್ಮಣನೂ ಒಂದೇ ಹೊಲೆಯನೂ ಒಂದೇ – ಈ ಕಳ್ಳ ಸೂಳಾ ಮಕ್ಕಳಿಗೆ! ಇವರ ಸ್ವರಾಜ್ಯಕ್ಕೆ ಬೆಂಕಿ ಹಾಕಿದರು. ಪೇಟೆಯಲ್ಲಿ ಬೇಳೆ ಬೇಯದ್ದಕ್ಕೆ ತಲೆಮರೆಸಿಕೊಂಡು ಈಗ ಹಳ್ಳಿಗೆ ಬಂದು ಉಪದೇಶಕ್ಕೆ ತೊಡಗಿದ್ದಾವೆ. ನಮಗೇನೂ ಬುದ್ಧಿಯಿಲ್ಲ ಬೋಳುತಲೆ ಎಂತ ಎಣಿಸಿಕೊಂಡಿದ್ದಾವೋ ಏನೋ ಈ ಮಂಗಗಳು. ಇವರ ಅಪ್ಪನಿಗೆ ಬುದ್ಧಿ ಹೇಳಿ ಕಳುಹಿಸಲಿಕ್ಕೆ ನಮಗೆ ಗೊತ್ತಿದೆ! ಇವರ ಹಲ್ಲು ಸೊಂಟ ಮುರಿಸಿ ಮುರಿಕಟ್ಟಿ ಹಳ್ಳಿಯಿಂದ ಹೊರಗೆ ಹಾಕಿಸಲಿಕ್ಕೆ ಗೊತ್ತಿದೆ. ಇವರ ಈ ಎಲ್ಲಾ ವೇಷಗಳು ಪೇಟೆಯಲ್ಲಿ ನಡೀತದಂತ ನಮ್ಮಲ್ಲಿ ಖರ್ಚಾಗಲಾರವು. ಹತ್ತು ಆಳುಕೂಡಿಸಿ ಅವರನ್ನೆಲ್ಲಾ ಹೊರಗೆ ದಬ್ಬಿಸಿ ಬಿಡಬೇಕು – ಎಂದು ಧರ್ಮನ ಹಳ್ಳಿಯ ಜಮೀನ್ದಾರ ಶ್ರೀನಿವಾಸರಾಯರು ತಮ್ಮ ಶ್ಯಾನುಭಾಗರಿಗೆ ಕಟ್ಟಪ್ಪಣೆ ಕೊಡಿಸಿದರು.

ಶ್ರೀನಿವಾಸರಾಯರು ಹಳೆಯ ಸಂಪ್ರದಾಯದ ಮನುಷ್ಯ. ಮನುಷ್ಯನ ಮಟ್ಟದ ಏರುತಗ್ಗುಗಳಲ್ಲಿ ಆಚಾರ ರೂಢಿಗಳ ಕೀಳು ಮೇಲ್ಮೆಗಳಲ್ಲಿ ಅವರಿಗೆ ಅಚಲವಾದ ವಿಶ್ವಾಸವಿದ್ದಿತು. ಈ ಅರುವತ್ತು ವರ್ಷಗಳ ಆಯುಷ್ಯದ ತನಕವೂ ಅದೇ ಸಂಸ್ಕಾರವು ಅವರ ಎದೆಹಿಡಿದು ಊದಿ ಅವರನ್ನು ಉಬ್ಬಿಸುತಿದ್ದಿತು. ಅಂತಹ ಉಬ್ಬುವಿಕೆಯಿಂದಾಗಿ ಅವರು ತನ್ನ ಜಮೀನ್ದಾರಿಕೆಯ ರಾಜ್ಯದಲ್ಲಿ ಪೇಟೆಯಿಂದ ಸಹಸಾ ಬಂದ ಹತ್ತು ಮಂದಿ ಸ್ವಯಂ ಸೇವಕರ ದಾಳಿಯನ್ನು ಸಹಿಸಲಿಲ್ಲ. ಬಂದ ಆ ಲವಡೀ ಮಕ್ಕಳಾದರೂ ಮಾಡಿದುದೇನು? ಅಲ್ಲಿಯ ಗಡಂಗಿನ ಮುಂದೆ ಪಿಕೆಟಿಂಗ್! ಶ್ರೀನಿವಾಸ ರಾಯರಿಗೆ ನಿಜವಾಗಿಯಾದರೆ ಗಾಂಧಿಯ ಮೇಲೇನೂ ವಿಶೇಷ ಆಕ್ರೋಶವಿರಲಿಲ್ಲ. ಒಂದು ಬಿಳಿಟೋಪಿ ಏರಿಸಿ ಗೋಣೀತಟ್ಟಿನ ದಪ್ಪ ಅಂಗಿ ಹಾಕಿ ಸುತ್ತಾಡಿದ್ದರೆ ಅವರದೇನೂ ಆಕ್ಷೇಪವಿರುತಿದ್ದಿಲ್ಲ. ಆದರೆ ಆ ಮುಂಜಾನೆ ಮನೆ ಆಳು ಬೋರನು ಬಂದವನೇ ಆ ಹಿಂದಿನ ದಿನ ಬಿಳಿ ಟೋಪಿಯವರು ಗಡಂಗಿನ ಮುಂದೆ ಪತಾಕೆ ಹಿಡಿದು ನಿಂತು ತಡೆಯುತ್ತಿದ್ದರು ಎಂದಿದ್ದ. ಅದನ್ನು ಕೇಳಿದೊಡನೆಯೇ ಅವರು ಕಿಡಿಕಿಡಿಯಾದರು. ಅವರ ಹೆಂಡತಿ ಹದಿನೈದು ವರ್ಷಗಳ ಹಿಂದೆ ಸತ್ತಂದಿನಿಂದಲೂ ಅವರಿಗೆ ಮದ್ಯದ ಮೇಲೆ ವಿಶೇಷ ಮಮತೆ ಬಿದ್ದಿದ್ದಿತು. ಹೆಂಡತಿಯ ಆಂತರಿಕ ಸ್ಥಾನ ಗೌರವಗಳಲ್ಲಿ ಅದನ್ನಿರಿಸಿ ಅವರು ದಿನಾ ಸಾಕ್ಷಾತ್ಕರಿಸುತಿದ್ದರು. ಆದುದರಿಂದಲೇ ಬೆಳಗಿನ ಆ ವರ್ತಮಾನದಿಂದಾಗಿ ಅವರ ಆಕ್ರೋಶವು ಕೆರಳಿದ್ದಿತು.

ಕುಡಿಯೋದಂತೆ – ಕುಡಿಯೋದು! ಏಕೆ ಕುಡಿಯಬಾರದಂತೆ? ಕುಡಿದು ಕುಡಿದೇ ಹಿಂದಿನವರು ಋಷಿಗಳಾಗಿದ್ದಾರೆ. ಹಾಗೆ ಕುಡಿಯುವುದಕ್ಕಾಗಿಯೇ ಅವರು ಯಜ್ಞ ಯಾಗ ಮಾಡುತಿದ್ದುದು. ದೇವತೆಗಳೆಲ್ಲಾ ಸುರೆ ಕುಡಿದು ಕುಡಿದು ಸುರರಾಗಿ ಹೋದರು. ಅದು ಸಿಕ್ಕದೆ ಹೋದುದರಿಂದ ದೈತ್ಯರು ಅಸುರರಾದರು. ಈಗ ಕುಡೀಬಾರದು ಅನ್ನುವ ಈ ಲವಡೀ ಮಕ್ಕಳು ಅಂದೇ ಹುಟ್ಟಿ ಬಲರಾಮನಿಗೆ ಬುದ್ಧಿ ಹೇಳಬೇಕಿದ್ದಿತು. ನಾನೇನೂ ಬಲರಾಮನಿಗೆ ಬಿಟ್ಟುಕೊಡುವ ಮನುಷ್ಯನಲ್ಲ! ಇವರಿಗೆಲ್ಲಾ ಒಮ್ಮೆ ಕಪಾಲಮೋಕ್ಷ ಮಾಡಿಸದಿದ್ದರೆ ಮತ್ತೇಕೆ ಇರೋದು ನಾನಿಲ್ಲಿ? ನಮ್ಮ ಸರಕಾರವೇ ಕುಡೀ ಕುಡೀ ಅಂತ ಗುತ್ತಿಗೆ ಹಾಕಿಸಿ ಜನರಿಗೆ ಧಾರಾಳ ತುಂಬಿಸಿ ತುಂಬಿಸಿ ಕೊಡುತಿರುವಾಗ ಇವರು ಯಾರಯ್ಯ ಕೇಳಲಿಕ್ಕೆ? ನಾವು ಬೇಕಾದಾಗ ಬೇಕಾದ್ದು ಕುಡಿದೇವಲ್ಲ? ಬೆಳಿಗ್ಗೆ ಕಾಫಿ – ಮತ್ತೆ ಗಂಜಿ – ಪರಮಾನ್ನ – ಹಾಲು ಮೊಸರು – ಹೆಂಡ ಏನು ಬೇಕಾದರೂ ಕುಡಿದೇವಲ್ಲ! ಇವರಿಗೇನು ಬಂತು ಕಷ್ಟ? ಅಧಿಕ ಪ್ರಸಂಗಿಗಳು. ಗಾಂಧಿಯೇಕೆ ಹೇಳಿಯಾನು ಕುಡೀಬಾರದೂಂತ? ಏನೋ ಕುಡಿದು ನಿಮ್ಮ ನಿಮ್ಮೊಳಗೆ ಜಗಳ ಮಾಡಿಕೊಳ್ಳಬೇಡಿ ಎಂತ ಹೇಳಿರಬಹುದು. ಒಂದು ದಿವಸ ಅವನೇ ಬಂದು ಈ ಎಲ್ಲಾ ಜನರಿಗೂ ಚೆನ್ನಾಗಿ ಕುಡಿಸಿ ಈ ಬಿಳಿ ಮುಖದವರ ಮೇಲೆ ಬಿಟ್ಟು – ಬಿಡಲಿ – ಅದೇ ದಿವಸವೇ ಸ್ವರಾಜ್ಯ!

ಕೆಳಗಡೆಯ ಗದ್ದಲ ಕೇಳಿ ಮೇಲುಪ್ಪರಿಗೆಯಿಂದ ಕೃಷ್ಣಸ್ವಾಮಿಯು ಮೆಲ್ಲನೆ ಕೆಳಗಿಳಿದು ಬಂದನು. ಅವನನ್ನು ಕಂಡೊಡನೆ ಶ್ರೀನಿವಾಸರಾಯರು ಕೈಯೆತ್ತಿ – ಹೇಳಿದರು – ಎಲೋ ಹುಚ್ಚು ಮುಂಡೆ! ನೀನೆಲ್ಲಿಯಾದರೂ ಅವರ ಕಡೆ ಸೇರಿದಿಯಾದರೆ ಜಾಗ್ರತೆ! ನಿಮ್ಮ ಗಾಂಧಿ ಗೀಂಧಿ ಎಲ್ಲ ಒಂದೇ ದಿವಸಕ್ಕೆ ಪಿತ್ತಯಿಳಿಸಿಬಿಟ್ಟೇನು!

ಕೃಷ್ಣಸ್ವಾಮಿಗೆ ಅದೇನೆಂದು ಅರ್ಥವಾಗಲಿಲ್ಲ. ಅವನು ಮುಖ ಮುಖ ನೋಡುತ್ತ ನಿಂತಿದ್ದ.

ಶ್ರೀನಿವಾಸರಾಯರು ಮತ್ತೊಮ್ಮೆ ದುರದುರನೆ ನೋಡಿ ಹೇಳಿದರು – ಸತ್ಯ ಹೇಳು, ನೀನೆಲ್ಲಿಯಾದರು ಆ ಕೋತಿಗಳನ್ನೆಲ್ಲಾ ಇಲ್ಲಿಗೆ ಬರಲಿಕ್ಕೆ ಹೇಳಿದ್ದೀಯಾ?

ಯಾವ ಕೋತಿಗಳು?

ನಿನ್ನ ಜಾತಿಯವುಗಳು! ತಲೆ ಮೇಲೆ ಗಾಂಧೀ ಟೋಪಿ ಹಾಕಿ ಬೊಬ್ಬೆ ಹಾಕುತ್ತಾ ಅಡ್ಡಾಡುತ್ತಾವಲ್ಲ ಅವೇ!

ಇಲ್ಲ, ನಾನು ಯಾರನ್ನೂ ಬರಲಿಕ್ಕೆ ಹೇಳಲಿಲ್ಲಪ್ಪ.

ಹಾ – ಹಾಗಾದರೆ ಚೆನ್ನಾಯ್ತು. ಅಲ್ಲವಾದರೆ ತಿಳಿದೀತು ಬಗೆ! ಅವುಗಳೊಂದಿಗೆ ಎಲ್ಲಿಯಾದರೂ ಕೂಡಿದಿ ಎಂದರೆ ನಾನೇನೂ ಸರಕಾರಕ್ಕೆ ದ್ರೋಹ ಮಾಡಿ ಪಾಪ ಕಟ್ಟಿಕೊಳ್ಳಲಿಕ್ಕಿಲ್ಲ . ಇನ್ನು ಆ ಗಾಂಧೀ ಕೇಶವಯ್ಯ- ಅವನೆಲ್ಲಿಯಾದರೂ ಸೇರಿದ್ದರೆ ಚೆನ್ನಾಗಿ ಬುದ್ಧಿ ಕಲಿಸಿಯೇನು!

ಇಲ್ಲ. ಅವರಿಗೆ ಗೊತ್ತೇಯಿಲ್ಲ.

ಅದು ಹೇಗೆ ನಿನಗೆ ಗೊತ್ತು? ನಿನಗೂ ಅವರಿಗೂ ಬಹಳ ಹತ್ತಿರ ಎಂತ ತೋರುತ್ತದೆ. ತಿಳಿದುಕೋ – ಅಂಥವರ ಮಾತಿಗೆಲ್ಲಿಯಾದರೂ ಮರುಳಾಗಿ ತಲೆ ಕೆಡಿಸಿಕೊಂಡಿ ಎಂದರೆ ಮತ್ತೆ ನನ್ನನ್ನು ಅಪ್ಪ ಎಂತ ತಿಳಿಕೊಳ್ಳಬೇಡ. ನನಗೆ ಎಲ್ಲಾ ಗೊತ್ತಿದೆ. ನೀನು ಬರುತ್ತಾ ಬರುತ್ತಾ ರಾಯರ ಕತ್ತೆಯಾಗುತ್ತಾಯಿದ್ದಿ. ನನಗೇನು ಕೇಶವಯ್ಯ- ಅವನ ಮಗಳು ಈ ಕತೆ ಗೊತ್ತಿಲ್ಲ ಎಂತ ಭಾವಿಸಿದ್ದಿಯಾ? ಎಲ್ಲಾ ಗೊತ್ತು. ಮುಂದೆ ಎಲ್ಲಿಯಾದರೂ ಅವರ ಮನೆಯ ಕಡೆ ಹೋದಿ ಎಂದರೆ ನಿಮ್ಮೆಲ್ಲರನ್ನೂ ಥಳಿಸಿಬಿಟ್ಟೇನು!

ಕೃಷ್ಣಸ್ವಾಮಿ ಏನನ್ನೂ ಆಡಲಿಲ್ಲ. ಅದು ಮಾತಾಡುವ ಹೊತ್ತಲ್ಲವೆಂಬುದು ಅವನಿಗೆ ತಿಳಿದಿದ್ದಿತು. ತಂದೆಯ ಮನಸ್ಸಿನ ಏರಿಳಿತಗಳನ್ನೆಲ್ಲಾ ಅವನು ಚೆನ್ನಾಗಿ ಗ್ರಹಿಸಿದ್ದನು. ಆದರೆ ಕೇಶವಯ್ಯ ಮತ್ತು ಅವರ ಮಗಳು ಇವರ ಕುರಿತು ತನ್ನನ್ನು ಹೊಂದಿಸಿ ತಂದೆಯು ಹೀಗೆ ಒಮ್ಮಿಂದೊಮ್ಮೆಗೆ ಕಟ್ಟುನಿಟ್ಟಿನಿಂದ ಮಾತಾಡುವನೆಂದು ಅವನು ಎಣಿಸಿದ್ದಿಲ್ಲ. ಅದು ಆಕಸ್ಮಿಕವಾಗಿ ಸಿಡಿದು ಉರಿಕಾರಿ ಹೊರಹೊಮ್ಮಿದಂತಾದುದಕ್ಕಾಗಿ ಅವನು ಖೇದಗೊಂಡನು. ಆದರೂ ಮರುಮಾತಾಡದೆ ಮುಖ ಕೆಳಗಿಟ್ಟು ಎಂದು ಕ್ಷಣ ನಿಂತಿದ್ದು ಮತ್ತೆ ಉಪ್ಪರಿಗೆ ಏರಿದನು.

ಶ್ರೀನಿವಾಸರಾಯರು ಸ್ವಲ್ಪಹೊತ್ತು ಗುಡುಗುಡಿಸುತಿದ್ದು ಮತ್ತೆ ಬೋರನನ್ನು ಕರೆದು ಹೇಳಿದರು – ‘ಲೋ – ನಾಳೇನೇ ರಿಪೋರ್ಟು ಕೊಡುತ್ತೇನೆ. ಪೇಟೆಗೆ ಕೊಂಡುಹೋಗಿ ಹತ್ತು ಪೋಲಿಸು ತಂದು ಆ ಕತ್ತೆಗಳಿಗೆಲ್ಲಾ ಬೇಡಿಹಾಕಿಸಬೇಕು’ ಎಂದು ಅಷ್ಟು ಹೊತ್ತು ಮಾತಾಡಿದ ಶ್ರಮ ಪರಿಹಾರಕ್ಕಾಗಿ ಸ್ವಲ್ಪ ಹೊತ್ತು ಎದೆಹಿಡಿದುಕೊಂಡು ಕುಳಿತು ಮತ್ತೆ ಹಿಂಗಡೆಯ ಬೀರುವಿನಲ್ಲಿದ್ದ ಬಾಟ್ಲಿಯೊಂದರ ತಲೆಹಾರಿಸಿ ಅದನ್ನು ಗಂಟಲಿಗಿಳಿಸಿಕೊಂಡರು. ತುಸು ಹೊತ್ತು ಆಕಡೆ ಈ ಕಡೆ ಅಡ್ಡಾಡುತಿದ್ದು ಮತ್ತೆ ಆರಾಮ ಕುರ್ಚಿಯಲ್ಲಿ ಕೈಕಾಲು ಬಿಟ್ಟು ಕುಳಿತು ಒಮ್ಮೆ ಅಬ್ಬರಿಸಿದರು.

… ನಾವು ಕುಡಿದೇ ಕುಡಿತೇವೆ. ಬೇಕಾದಾಗ ಬೇಕಾದ್ದು ಕುಡಿದೇವಲ್ಲ! ಯಾರಯ್ಯ ಕೇಳುವವರು? ಇದು ಧರ್ಮನ ಹಳ್ಳಿ. ಇಲ್ಲಿಯ ಧರ್ಮರಾಜ ನಾನೇ! ನಾನೇ ಧರ್ಮರಾಜ! ನಮ್ಮಲ್ಲಿ ಯಾರಿಗಾದರೂ ಒಂದೇ ನ್ಯಾಯ. ಬೇಕಾದವರು ಬೇಕಾದಷ್ಟು ಕುಡೀಬಹುದು. ಹಾಂ! ಇದು ಧರ್ಮನ ಹಳ್ಳಿಯ ಧರ್ಮಶಾಲೆ ಧರ್ಮಶಾ-ಲೆ! – ಎನ್ನುತಿದ್ದು ಮತ್ತೆ ನಾಲಗೆ ತಡವರಿಸುತ್ತ -ಧ-ರ್ಮ-ಶಾಲೆ -ಡರಂ-ಶಾಲೆ- ಡರಂ-ಶಾ-ಲೆ-!- ಎಂದು ಅಲ್ಲೇ ಒರಗಿಬಿಟ್ಟರು.

***********************

ಶ್ರೀನಿವಾಸರಾಯರ ಸಿಡುಕಿನ ಸ್ವಭಾವವು ಯಾರಿಗೆ ತಾನೇ ತಿಳಿದಿಲ್ಲ? ಧರ್ಮನಹಳ್ಳಿಯು ಒಂದು ಹಳ್ಳಿ ಮಾತ್ರವಾದರೂ ಯಾವಾಗಲೂ ಅವರ ಸಿಡುಕಿನಿಂದಾಗಿ ಬೆಚ್ಚನೆ ಕಾದಿರುತಿದ್ದಿತು. ಅಲ್ಲೇ ಅವರ ಮೂರು ಸಹಸ್ರ ರೂಪಾಯಿಗಳ ಕಂದಾಯ ತೆರುವ ಜಮೀನು ಇದ್ದಿತು. ಅವರೇ ಅಲ್ಲಿನ ಊರಗೌಡರು. ಅವರ ವಾಕ್ಯ ಅಲ್ಲಿ ವೇದವಾಕ್ಯವಾಗಿದೆ. ಜನರು ಅವರ ಪ್ರತಾಪದ ಪ್ರಖರತೆಯ ಮುಂದೆ ನಿಲ್ಲಲು ಅಂಜಿ ಹಿಂಜರಿಯುತಿದ್ದರು. ಆ ಪ್ರತಾಪವು ಅಲ್ಲಿಂದ ಎಂಟು ಮೈಲು ದೂರದಲ್ಲಿರುವ ಪೇಟೆಯ ತನಕವೂ ಹಬ್ಬಿದೆ. ಆದರೆ ಶ್ರೀನಿವಾಸರಾಯರು ನ್ಯಾಯಬಾಹಿರರಲ್ಲ. ಸಿಡುಕು ಕಳೆದ ಮೇಲೆ ಅವರನ್ನು ಸಮದಾರಿಯಲ್ಲಿ ಸೆಳೆದೊಯ್ಯುವುದು ಬಹಳ ಸುಲಭವಿದ್ದಿತು.

ರಾಯರ ಹೆಂಡತಿ ಇರುವ ತನಕ ಅವರ ಸ್ವಭಾವವು ಇಷ್ಟು ಒರಟಾಗಿದ್ದಿಲ್ಲ. ಅವರ ಕಠೋರ ವೃತ್ತಿಯಲ್ಲೂ ಒಂದು ನಯವಿದ್ದಿತು. ಆದರೆ ಆ ಮಾತಾಯಿ ಹಲವು ವರ್ಷಗಳ ಹಿಂದೆಯೇ ಒಬ್ಬ ಮಗನನ್ನು ಮಾತ್ರ ಮುಂದಿಟ್ಟು ತೀರಿಹೋಗಿದ್ದಳು. ರಾಯರು ಬೇರೆ ಮದುವೆಯಾಗಿದ್ದಿಲ್ಲ. ಮದುವೆಯಾಗಬೇಕೆಂದಿದ್ದರೆ ಅವರಿಗೇನೂ ಅದೊಂದು ಕಷ್ಟದ ಕೆಲಸವಾಗುತಿದ್ದಿಲ್ಲ. ಅವರ ಧನ-ದೌಲತ್ತು-ಮರ್ಯಾದೆಗಳಿಗೆ ಮನಸೋತು ಎಷ್ಟೋ ಸಂಬಂಧ ತಾನೇ ತಾನೇ ಮುನ್ನುಗ್ಗಿ ಬಂದಿದ್ದಿತು. ಆದರೂ ಅವರು ಮದುವೆಯಾಗಿದ್ದಿಲ್ಲ. ಅದು ಅವರ ಹೆಂಡತಿಯ ಮೇಲಣ ಪ್ರೀತಿ, ಆ ಸಂತತಿಯ ಮೇಲಣ ಸಚ್ಚಿಂತನೆ. ಆದರೆ ಅಂತಹ ಪ್ರೀತಿಯ ಬಿಗಿತವು ಕಳೆದು ಬಾಳು ನಿರಾಲವಾದಾಗ ಅವರ ನೆಲೆಗಾಗಿ ಸುರೆಯ ಸೇವನೆಯ ಚಟವು ಹೊಕ್ಕಿಕೊಂಡಿತು. ಅಂದಿನಿಂದ ಅವರ ವೃತ್ತಿಯ ಮೇಲಣ ನಯವು ಕಳೆದುಹೋಗಿ ಅದು ಒರಟಾಗಿ ಸುತ್ತಲೂ ಸಿಡಿಯುತಿದ್ದಿತು.

ಅಂತಹ ಸಿಡುಕನ್ನು ಕೃಷ್ಣಸ್ವಾಮಿಯು ನಿನ್ನೆ ಮೊನ್ನೆಯಿಂದಲ್ಲ – ಚಿಕ್ಕಂದಿನಿಂದಲೂ ಕಾಣುತ್ತ ಬಂದಿರುವನು. ಅದರಿಂದಲೇ ಅಂತಹ ಸಂದರ್ಭಗಳನ್ನು ಬೇಕಾದಂತೆ ಹೊಂದಿಸಿಕೊಂಡು ಹೋಗುವ ಸಹನೆಯನ್ನು ಅವನು ಕಂಡುಕೊಂಡಿದ್ದನು. ಆದುದರಿಂದಲೇ ಅವನು ಈ ತನಕವೂ ತಂದೆಯ ಮನಸ್ಸನ್ನು ಕಿಂಚಿತ್ತು ನೋಯಿಸಿದ್ದಿಲ್ಲ – ಅಂತಹ ಸ್ವಭಾವವು ನೋವಿನಿಂದಲೇ ತೊಡಗಿ ಅಲ್ಲಿ ಅಭ್ಯಾಸವಾಗಿ ನಿಂತಿದೆ ಎಂಬುದು ಅವನಿಗೆ ಗೊತ್ತು. ಹೀಗಿರುತ್ತ ಅದನ್ನು ಮತ್ತಷ್ಟು ನೋಯಿಸಹೋದರೆ ಅದು ಅದರ ಶಕ್ತಿಗೂ ಮೀರಿ ಅನರ್ಥಕ್ಕೆ ಕಾರಣವಾದೀತೆಂಬುದು ಅವನ ಸಿದ್ಧಾಂತವಾಗಿದ್ದಿತು. ಆದುದರಿಂದಲೇ ಯಾವುದಕ್ಕೂ ಮರು ಮಾತಾಡದೆ ತಂದೆಯನ್ನು ಒಲಿಸಿದ್ದನು. ತಂದೆಯು ಮಗನ ಮುಂದೆ ಎರಡು ಬಿರುಮಾತಾಡಿದರೆ ಅವರ ಉದ್ದೇಶವು ಅಸಾಧುವಲ್ಲ. ಅದು ಸ್ವಾರ್ಥವಲ್ಲ. ಮಗನ ಅಭ್ಯುದಯದ ಹಿತಾಕಾಂಕ್ಷೆ. ಅಂತಹ ಆಕಾಂಕ್ಷೆಯು ಮನುಷ್ಯನನ್ನು ಒಮ್ಮೆ ಅಳಿಸುವುದು – ಒಮ್ಮೆ ನಗಿಸುವುದು – ಮತ್ತೊಮ್ಮೆ ರೇಗಿಸುವುದು.
ಇವೆಲ್ಲವುಗಳ ಅಂತರಾರ್ಥವೂ ಒಂದೇ. ಅದು ತನ್ನ ಕರುಳಿನ ಕಡೆಗೆ ಹೃದಯವು ಹಬ್ಬಿಸುವ ಪ್ರೀತಿ. ಅಂತಹ ಪ್ರೀತಿಯ ಉತ್ಕಟತೆಯಿಂದಾಗಿ ಮಗನು ಹಲವೊಮ್ಮೆ ದಿಙ್ಮೂಡನಾಗಬಹುದು. ಆದರೆ ವಿವೇಕದಿಂದ ಅವುಗಳ ಹಾಸುಹೊಕ್ಕನ್ನು ಹರಹಿದಾಗ ಕಾಣಲಿರುವುದು ತಂದೆಯ ನಿರತಿಶಯವಾದ ಪುತ್ರವಾತ್ಸಲ್ಯವು ಮಾತ್ರ. ಆಗ ಅಂತಹ ರಂಗಿಗೆ ಅಪಾರ್ಥವನ್ನು ಕಲ್ಪಿಸಿ ಬೇಸರಿಸುವ ಮಕ್ಕಳು ಎಷ್ಟು ಮಂದಿ ಇಲ್ಲ? ಸಿಡುಕಿನೊಂದಿಗೆ ಸಿಡುಕು ಕೂಡಿಹೋಗುವುದಿಲ್ಲ. ಸಹನೆಯೊಂದೇ ಸಿಡುಕಿನೊಂದಿಗೆ ಕೂಡಿ ಅದನ್ನು ತಕ್ಕೈಸುವುದು. ಆ ಸಹನೆಯಿಂದಲೇ ಕೃಷ್ಣಸ್ವಾಮಿಯು ಐದು ವರ್ಷಗಳಲ್ಲೇ ತಾಯನ್ನು ಕಳಕೊಂಡ ದುರ್ದೈವಿಯಾಗಿದ್ದರೂ ತಂದೆಯೊಡನೆ ಕೂಡಿ ಬೆಳೆದಿರುವನು. ತಂದೆಯು ತಾಯಂತೆ ನಗುತ್ತ ನಗುತ್ತ ಹಾಲುಣಿಸಲಾರ. ಅನುನಯದಿಂದ ಬೇಡಿ ಹಿತವೆಸಗಲಾರ. ಅವನದು – ಆಜ್ಞೆ – ಆದೇಶ. ಆದರೆ ಅವುಗಳ ಉದ್ದೇಶವು ಒಂದೇ ತಾನೆ? ತಾಯಿಯ ಪ್ರೇಮ ಹೃದಯದೊಡನೆ ಕೂಡಿ ಹರಿಯಬಹುದು. ತಂದೆಯದು ದೇಹದೊಡನೆ ಮಾತ್ರ ಕೂಡಲಿದೆ. ತಾಯಿಯು ಪ್ರಕೃತಿಯ ಅಂತಃಸೃಷ್ಟಿ. ತಂದೆಯಿಂದಾಗಿ ಮಗನು ಎಲ್ಲವನ್ನೂ ಹೊಂದಿದ್ದರೂ ತಾಯಿಯ ಅಂತಃಕರಣದ ಲಾಲನೆಗಾಗಿ ಕಣ್ಣೀರು ಸುರಿಸದಿರಲಾರ.

ನಮ್ಮ ಸರಕಾರವೇ ಕುಡೀ ಕುಡೀ ಅಂತ ಗುತ್ತಿಗೆ ಹಾಕಿಸಿ ಜನರಿಗೆ ಧಾರಾಳ ತುಂಬಿಸಿ ತುಂಬಿಸಿ ಕೊಡುತಿರುವಾಗ ಇವರು ಯಾರಯ್ಯ ಕೇಳಲಿಕ್ಕೆ? ನಾವು ಬೇಕಾದಾಗ ಬೇಕಾದ್ದು ಕುಡಿದೇವಲ್ಲ? ಬೆಳಿಗ್ಗೆ ಕಾಫಿ – ಮತ್ತೆ ಗಂಜಿ – ಪರಮಾನ್ನ – ಹಾಲು ಮೊಸರು – ಹೆಂಡ ಏನು ಬೇಕಾದರೂ ಕುಡಿದೇವಲ್ಲ! ಇವರಿಗೇನು ಬಂತು ಕಷ್ಟ? ಅಧಿಕ ಪ್ರಸಂಗಿಗಳು.

ಕೃಷ್ಣಸ್ವಾಮಿಯು ಉಪ್ಪರಿಗೆಯೇರಿ ಹಾಗೆಯೇ ಖಿನ್ನನಾಗಿ ಕುಳಿತಿದ್ದನು. ದೇಶ ದೇಶಗಳಲ್ಲಿ 1942 ರ ಸ್ವತಂತ್ರಾಂದೋಲನವು ಕಾಳ್ಗಿಚ್ಚಿನಂತೆ ಹಬ್ಬುತಿದ್ದಿತು. ಅದರಲ್ಲಿ ಆತ್ಮಾರ್ಪಣೆಗಾಗಿ ಯಾವನು ಹಾರಿಲ್ಲ? ಹಿರಿಯನೇನು – ಕಿರಿಯನೇನು – ಎಲ್ಲರೂ ತಮ್ಮ ತಮ್ಮ ಭಾಗಗಳನ್ನು ಆಹುತಿ ಹೊಯ್ದಿದ್ದರು. ಅದೇ ಆಶಂಕೆಯು ಮಗನ ಮೇಲೂ ಮೂಡಿ ತಂದೆಯು ಗದರಿಸುವುದು ಸಹಜ. ಆ ಮಾತನ್ನು ಕಣ್ಣೀರು ಸುರಿಸಿ ಹೇಳಲು ಅವನ ತಾಯಿಯಿದ್ದಿಲ್ಲ. ಆದುದರಿಂದ ತಂದೆಯೇ ಅದನ್ನು ತನ್ನ ಸ್ವಭಾವಕ್ಕನುಗುಣವಾಗಿ ಇನ್ನೊಂದು ವಿಧದಿಂದ ಪೂರೈಸಬೇಕಾಯಿತು.

**********************

ನಲ್ವತ್ತೆರಡರ ಅಗೋಸ್ತು ತಿಂಗಳ ಮೊದಲಿಗೆ ದೇಶಕ್ಕೆ ದೇಶವೇ ಕಾವಲಿಯಂತೆ ಕಾದು ಬೆಂಕಿಯುರಿಯತೊಡಗಿತು. ಕಾಂಗ್ರೆಸ್ ಕಾರ್ಯಕರ್ತರ – ಪೂಜ್ಯ ಬಾಪೂಜಿಯ ಚಲೇಜಾವ್ ನಿರ್ಣಯದಿಂದಾಗಿ ದೇಶದಲ್ಲಿ ಕ್ಷೋಭೆಯೆದ್ದು ಕಾಳ್ಗಿಚ್ಚಿನಂತೆ ಹಬ್ಬಿತು. ಸಂಕ ಕಂಬಿಗಳೆಲ್ಲ ಕಡಿದು ಹಾಕಲ್ಪಟ್ಟುವು. ಸರಕಾರವು ಒಮ್ಮಿಂದೊಮ್ಮೆಗೆ ಸ್ತಬ್ಧವಾದಂತಾಗಿ ಕಚೇರಿಗಳೆಲ್ಲಾ ಲೂಟಿ ಮಾಡಲ್ಪಟ್ಟುವು. ಕಡಿವಾಣ ಬಿಟ್ಟಿದ್ದ ಕುದುರೆಯಂತೆ ಆಗಿನ ಸ್ವಾತಂತ್ರ್ಯದ ರಥವೂ ಯಾವ ಕಡೆಗೆ ನಡೆದಿದ್ದಿತೆಂಬುದೇ ಗೋಚರವಿದ್ದಿಲ್ಲ.

ದೇಶದ ಹೋರಾಟದ ಕರೆಯು ಮೈಸೂರು ಸೀಮೆಯನ್ನೂ ಮುಟ್ಟದಿರಲಿಲ್ಲ. ಮೈಸೂರಿನ ಚಿನ್ನದ ಗಣಿಯಿಂದ – ಮೈಸೂರಿನ ಗಂಧದ ಗುಡಿಯಿಂದ – ಮೈಸೂರಿನ ನಂದನವನಗಳಿಂದ ಜನಜನತೆಯ ಸಿಡಿದು ಮೇಲೆದ್ದಿತು. ಗಡಂಗುಗಳೆಲ್ಲ ಮುಚ್ಚಲ್ಪಟ್ಟವು. ರಾಷ್ಟ್ರವು ಸಿಪಾಯಿಗಳ ರಾಜ್ಯವಾಯಿತು. ಆದರೆ ಆ ಕರೆಗೆ ಓಕೊಡದವನಾವನು? ಶಾಲಾಮಕ್ಕಳು ಶಾಲೆಯುಳಿದು ಬೀದಿಯ ಮೇಲೆ ಸಾಮ್ರಾಜ್ಯ ನಾಶಕ್ಕಾಗಿ ಬೊಬ್ಬಿಟ್ಟವು. ಅದರ ಪರಿಣಾಮವಾಗಿ ಕೈಮುರಿದು ತಲೆಯೊಡೆದು ರಕ್ತಕಾರಿದ ದೃಶ್ಯ ಸೀಮೆಯ ಚರಿತ್ರೆಯನ್ನು ಕೆಂಪುಗೊಳಿಸಿತು. ದೇಶಮಾತೆಯ ರೂಕ್ಷ ಲಲಾಟದಲ್ಲಿ ಅದೇ ಒಂದು ರಕ್ತ ಕುಂಕುಮವಾಗಿ ಶೋಭಿಸಿತು. ಆದರೂ ಆ ಹೋರಾಟವು ಸಾಗುತಲೇಯಿದ್ದಿತು!

ನವರಾತ್ರಿಯ ಉತ್ಸವದ ಸಂತೋಷದ ಸುಖಪ್ರಸವದ ವೇದನೆಯು ಇನ್ನೂ ಕಳೆದಿದ್ದಿಲ್ಲ. ಕೃಷ್ಣಸ್ವಾಮಿಯು ಊರಿನಿಂದ ಬೆಂಗಳೂರು ಸೇರಿ ಮೂರು ತಿಂಗಳೂ ಕಳೆದಿದ್ದಿಲ್ಲ. ಆಗ ಬೆಂಗಳೂರಿನ ಕಾಲೇಜಿನ ಅಖಂಡ ವಿದ್ಯಾರ್ಥಿ ಸಂಘವು ರಾಜ್ಯದ ದಬ್ಬಾಳಿಕೆಗಳನ್ನು ಪ್ರತಿಷೇಧಿಸಿ ಠರಾವು ಮಂಡಿಸಿತು. ಅದರ ನಿಷೇಧಾರ್ಥವಾಗಿ ವಿದ್ಯಾರ್ಥಿಗಳ ವಾಕ್ ಸ್ವಾತಂತ್ಯಕ್ಕಾಗಿ ಮೆರವಣಿಗೆ ಹೊರಡಿಸಿತು. ಆಗ ಎಲ್ಲರ ರಕ್ತವೂ ಕುದಿದಿದ್ದಿತು. ಬಡವರು ಬಲ್ಲಿದರು ಎಂಬ ಭೇದವಿದ್ದಿಲ್ಲ. ಎಲ್ಲರ ಉದ್ದೇಶವೂ ದೇಶದ ಸ್ವಾತಂತ್ರ್ಯಸೇವೆ!

ಸೇವೆಯ ಮುಂದೆ ಲಾಠಿಯೇನು – ಗುಂಡೇನು – ಗುಡುಗಾಟವೇನು? ಶಕ್ತಿಯನ್ನು ಪ್ರತಿಗಾಮಿಶಕ್ತಿಯು ಎಂದಿಗೂ ಹಿಂದೆ ದಬ್ಬಲಾರದು. ಹೊಡೆ ಹೊಡೆದಷ್ಟು ಅದು ಚೆಂಡಿನಂತೆ ಪುಟಿಪುಟಿದು ಹಾರುವುದು ಆ ವೇಳೆಯಲ್ಲಿ ಎಷ್ಟೋ ವಿದ್ಯಾರ್ಥಿಗಳ ದಿಗ್ಬಂಧವಾಯಿತು. ಅವರಲ್ಲಿ ಕೃಷ್ಣಸ್ವಾಮಿಯೂ ಒಬ್ಬನು.

ಅದಕ್ಕಾಗಿ ಕೃಷ್ಣಸ್ವಾಮಿಯ ಕಳವಳಗೊಳ್ಳಲಿಲ್ಲ. ಅದು ಅವನು ನಿರ್ಧಾರವಾಗಿ ಇಟ್ಟಿದ್ದ ಹೆಜ್ಜೆ. ಅದನ್ನು ಹಿಂದೆಗೆಯುವ ಪ್ರಸಂಗವೇ ಇದ್ದಿಲ್ಲ. ಅದಕ್ಕಾಗಿ ದುಃಖಿಸುವ ಅಥವಾ ಕ್ಷಮೆ ಕೇಳುವ ವಿಚಾರವೇ ಇದ್ದಿಲ್ಲ. ಸತ್ಯವು ಎಂದಿಗೂ ಸಾಯಲಾರದೆಂದು ಕೇಶವಯ್ಯನವರು ಹೇಳುತ್ತಿದ್ದ ಮಾತು ಅವನಿಗೆ ಗಂಭೀರವಾಗಿ ಕೇಳಿಸುತಿದ್ದಿತು. ಶಾರದೆ ಆ ಶಾರದೆ! ಪಾಪ ಆ ಹೆಣ್ಣುಮಗಳು ಜನರ ಸೇವೆಗಾಗಿ ಎಷ್ಟು ಕಷ್ಟ ಪಡುತಿದ್ದಿಲ್ಲ? ಸೇವೆಯಲ್ಲಿ ಅವಳು ಏನು ಸುಖವನ್ನು ಕಂಡಿರುವಳು? ಹಾಗಾದರೆ ಆದೇ ಆತ್ಮ ಸುಖವು ತನಗೂ ನಿಲುಕಲಾರದೆ? ಸುಖವೂ ಶಾಶ್ವತವಾಗಿರುವುದು ಭೋಗದಲ್ಲಿಯಲ್ಲ – ತ್ಯಾಗದಲ್ಲಿ! ವಿಶ್ವದಲ್ಲಿಯ ಭೋಗ ಮೂರ್ತಿಗಳು ಬಾಳಿಬದುಕಿಲ್ಲ. ಆದರೆ ತ್ಯಾಗಮೂರ್ತಿಗಳು ಮಾತ್ರ ಯುಗ ಯುಗಗಳ ಮೇಲೂ ಚಿರಸ್ಮರಣೀಯರಾಗಿರುವರು. ಅಂತಹ ತ್ಯಾಗದ ವಿಶ್ವರೂಪದಲ್ಲಿ ಅವನದೂ ಒಂದು ಸೇವೆಯು ಮಳಲ ಕಣವಾಗಿ ಮುಂದಿನ ಸಚ್ಚರಿತ್ರೆಯ ತಳಹದಿಗೆ ಒದಗಿ ಬರಲಾರದೆ?

ಈ ಹುರುಪಿನ ಪ್ರಚೋದನೆಯಿಂದಾಗಿ ಅವನು ಶಾರದೆಗೆ ಒಂದು ಕಾಗದ ಬರೆದನು. ಶಾರದೆಗೆ ಕಾಗದ ಬರೆಯಲು ಆಗಲಾಗ ತಾನು ಯೋಗ್ಯನೆಂಬ ಹುಮ್ಮಸವೇ ಅದಕ್ಕೆ ಕಾರಣವಿದ್ದಿತೋ ಏನೋ!

ಪ್ರಿಯಳಾದ ಶಾರದಾದೇವಿಗೆ –

ಈ ಕಾಗದವು ಕೈ ಸೇರುವ ವೇಳೆಗೆ ನಾನು ಪ್ರಾಯಶಃ ಜೈಲಿನೊಳಗಿರಬಹುದು. ಅದಕ್ಕಾಗಿ ನೀನು ಸಂತೋಷಪಡಬೇಕೇ ಹೊರತು ದುಃಖಿಸಬಾರದು. ಕಾರಣ – ಈ ಬಂದೀವಾಸದಲ್ಲಿ ನನಗೆ ತುಂಬಾ ಹೆಮ್ಮೆಯಿದೆ. ಆದರೆ ನೀನು ಕೇಳಿ ದುಃಖಿಯಾದಿಯೆಂದು ತಿಳಿದು ಬಂದರೆ ಮಾತ್ರ ನನಗೆ ಅನಂತ ಯಾತನೆಯಾಗಲಿದೆ. ಮೊನ್ನೆ ಮೊನ್ನೆ ಇಲ್ಲಿ ನಡೆದ ಮೆರವಣಿಗೆಯ ಪ್ರಕರಣವನ್ನು ನೀನು ನಿನ್ನ ತಂದೆಯ ಮುಖಾಂತರ ಪತ್ರಿಕೆ ಗಳಿಂದ ತಿಳಿದಿರಬಹುದು. ಆ ವರ್ತಮಾನ ಅದರ ಒಂದು ಭಾಗ ಮಾತ್ರ. ಅದೆಂತೇಯಿರಲಿ. ನಾನು ಅದಕ್ಕಾಗಿ ನಾಚುವುದಿಲ್ಲ. ನನ್ನ ಕಿಂಚಿತ್ ಸೇವೆಯು ನಮ್ಮ ದೇಶಕ್ಕೆ ಕೂಡಿಬಂದಿತಲ್ಲ – ಎಂಬ ಅಭಿಮಾನದಿಂದ ನನ್ನ ಎದೆಯು ತುಂಬಿ ಬಂದಿದೆ.

ಆ ದಿನ ನಾನು ನಿನ್ನನ್ನು ಕೊನೆಯದಾಗಿ ಕಂಡಾಗ ನೀನು ಹೇಳಿದ ಮಾತು ಇನ್ನೂ ನೆನಪಿನಲ್ಲಿದೆ – ನೀವೇನು ಈ ಕಡೆಯಿಂದ ತಪ್ಪಿಸಿಕೊಂಡು ಓಡುತಿದ್ದೀರಿ! – ಈ ಕಡೆ ಬಂದ ಮೇಲೆ ನನ್ನ ಮನಸ್ಸೇ ನಾಚಿ ಅಣಕಿಸುತಿದ್ದಿತು. ನಾನು ಹೇಡಿ – ಅಂಜುಬುರುಕ! ಸಂದರ್ಭಗಳನ್ನು ಇದಿರಿಸಲಾರದೆ ಈ ಕಡೆ ಓಡಿಬಂದವನು. ಆದರೆ ಕೊನೆಗೆ ಆ ಮಾತೇ ನನಗೆ ಮಾರ್ಗದರ್ಶಿಯಾಯಿತು. ಆದುದರಿಂದಲೇ ನನ್ನ ಈ ಪರೀಕ್ಷಾ ಕಾಲದಲ್ಲಿ ನಾನು ಅಂಬಲಿಲ್ಲ. ನಿನ್ನ ಹೆಸರನ್ನು ಧ್ಯಾನಿಸಿ ಧ್ಯಾನಿಸಿ ಧೈರ್ಯಗೊಂಡಿದ್ದೇನೆ. ನಿನ್ನ ರೂಪವು ನನ್ನ ಮುಂದೆ ಮುಂದೆ ನಡೆದು ಇಂತಹ ಬಿಕ್ಕಟ್ಟನ ಪ್ರಸಂಗದಲ್ಲೂ ನನ್ನನ್ನು ಹುರಿದುಂಬಿಸಿರುವುದು. ಆ ನಿನ್ನ ಉಪಕಾರವನ್ನು ನಾನು ಹೇಗೆ ತೀರಿಸಲಿ?

ಶಾರೀ – ಈಗ ನನ್ನ ಮನಸ್ಸು ಹೇಳುತ್ತಿದೆ – ಬಡವರ ಬಡವನಾಗಿರುವುದು ಎಷ್ಟು ಸಂತೋಷ! ನಮ್ಮ ಜಗದ್ಗುರು ಗಾಂಧೀಜಿಯ ಆ ಪರಮ ಮಂತ್ರ – ಆ ದರಿದ್ರ ನಾರಾಯಣನ ಸೇವೆಯೊಂದೇ ಇಂದಿನ ತುಮುಲ ಜಗತ್ತಿಗೆ ತಾರಕ ಮಂತ್ರವಾಗಿದೆ! ಅಂತಹ ಭಾಗ್ಯ ನನಗೂ ಲಭಿಸಿತಲ್ಲ – ಇದೇ ನನ್ನ ಪುಣ್ಯ!

ನಿಜವಾಗಿಯೂ ನನ್ನ ಶಾರಿಯು ಇದಕ್ಕಾಗಿ ಅಳಲಾರಳೆಂದು ನಾನು ಖಚಿತವಾಗಿ ತಿಳಿದಿದ್ದೇನೆ. ನನ್ನ ಶಾರಿಯು ಅತ್ತರೆ ನಾನೆಲ್ಲಿ – ನನ್ನ ನಿರ್ಧಾರವೆಲ್ಲಿ?

ಹೆಚ್ಚೇನು ಬರೆಯಲಿ? ಮೊತ್ತ ಮೊದಲಿಗೆ ನಿನಗೆ ಕಾಗದ ಬರೆಯುವ ಈ ಸುಮುಹೂರ್ತಕ್ಕಾಗಿ ನಾನು ತುಂಬಾ ಸಂತುಷ್ಟನಾಗಿದ್ದೇನೆ. ಪೂಜ್ಯರಾದ ಕೇಶವಯ್ಯನವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳನ್ನು ತಿಳಿಸಿಬಿಡು.

ಬೆಂಗಳೂರು ಬಾಕಿ ಸಂಗತಿ ಮುಖತಃ
28-11-1943 ಇತಿ
ನಿನ್ನವನಾದ – ಸ್ವಾಮಿ.

ಈ ಕಾಗದವು ಶಾರದೆಯ ಕೈ ಸೇರಿದಾಗ ಅವಳು ಬೆಚ್ಚಿಬಿದ್ದಳು. ಆ ಕಡೆ ಈ ಕಡೆ ಲಕೋಟೆಯನ್ನು ತಿರುಗಿಸಿ ಅದರ ಮೇಲಣ ಬೆಂಗಳೂರಿನ ಮುದ್ರೆಯನ್ನು ಓದಿಕೊಂಡಳು. ಓದಿ ಚಿಗರೆಯಂತೆ ನೆಗೆದು ತೋಪಿನ ಕಡೆ ಓಡಿಹೋದಳು. ಬಹಳ ಹೊತ್ತಿನ ತನಕ ಅವಳು ಹಿಂದೆ ಬರಲಿಲ್ಲ.

ಅವಳ ಆ ದಿನದ ಅಸಂಬದ್ಧ ಸ್ವರೂಪವನ್ನು ಕಂಡು ಕೇಶವಯ್ಯನವರು ಕೇಳಿದರು ಏನು ಶಾರದಮ್ಮ ತುಂಬಾ ಕಾತರಗೊಂಡಿದ್ದಿ? ಏನಾಯಿತು? ಮೈ ಚೆನ್ನಾಗಿಲ್ಲವೆ?

ಏನಿಲ್ಲ ಅಪ್ಪ, ಎಲ್ಲಿ? ಚೆನ್ನಾಗಿದ್ದೇನಲ್ಲ!

ಮರುದಿನ ಮುಂಜಾವ ಕೇಶವಯ್ಯನವರಿಗೆ ಇದರ ನೆಲೆಯನ್ನು ಕಂಡು ಹಿಡಿಯಲು ಕಷ್ಟವಾಗಲಿಲ್ಲ. ಕಾರಣ – ಆದಿನ ಬೆಳಿಗ್ಗೆ ರಾಯರ ಮನೆಯ ಕಡೆಯಿಂದ ಭಾರೀ ಗದ್ದಲವಾಗುತಿದ್ದಿತು. ಶ್ರೀನಿವಾಸರಾಯರು ತುಪಾಕಿ ಹೊಡೆದಂತೆ ತಮ್ಮ ಉಚ್ಚ ಕಂಠದಿಂದ ಒಂದೇ ಸಮನೆ ಆರ್ಭಟಿಸುತ್ತಿದ್ದರು. ಆ ಆರ್ಭಟವು ಹಳ್ಳಿ ಮೀರಿ ಕಾಡಿನತ್ತ ಪ್ರತಿಧ್ವನಿಸುತಿದ್ದಿತು.

– ಆ ಮುಠ್ಠಾಳ! ಅವನ ಹಣೆಬರಹ ನನಗೆ ಈ ಮೊದಲೇ ತಿಳಿದಿತ್ತು. ಆ ಮೂರು ಕಾಸಿನ ರಾಜಬಂದಿ ನನ್ನ ಮಗನೇ ಅಲ್ಲ. ಇಂದಿನಿಂದ ನನಗೆ ಮಗನಿಲ್ಲವೆಂದೇ ತಿಳಿದು ಕೊಂಡಿದ್ದೇನೆ –

ಜಮೀನ್ದಾರರ ಮಗನಿಗೆ ಆರು ತಿಂಗಳ ಗಾಂಧಿ ಶಿಕ್ಷೆಯಾಯಿತೆಂದು ಒಂದು ಕ್ಷಣದೊಳಗೆ ಊರಿಗೆ ಊರೇ ಮಾತಾಡತೊಡಗಿತು. ಬೆಂಗಳೂರಿನಿಂದ ರಾಯರಿಗೆ ಬೇಕಾದವರು ಕೊಟ್ಟ ತಂತಿ ಆಗತಾನೇ ಬಂದಿತೆಂದು ಜನರು ಆಡಿಕೊಂಡರು. ಅದನ್ನು ಕೇಳಿ ಕೇಶವಯ್ಯನವರು ತಲೆದೂಗಿ ತನ್ನಷ್ಟಕ್ಕೆ ನುಡಿದರು : ಪ್ರವಾಹದಲ್ಲಿ ಯಾವುದು ತಾನೇ ಕೊಚ್ಚಿಹೋಗುವುದಿಲ್ಲ? ಅದಕ್ಕಾಗಿ ಅಳಬೇಕಾಗಿಲ್ಲ. ಹೆಮ್ಮೆ ಪಡಬೇಕು. ನಮ್ಮವರ ಕಡೆಯಿಂದ ಇಷ್ಟಾದರೂ ಸೇವೆಸಂದಿತಲ್ಲ – ಎಂದು ಅಭಿಮಾನ ಪಡಬೇಕು. ನನಗೆ ಈ ಮೊದಲೇ ಗೊತ್ತು – ಕೃಷ್ಣಸ್ವಾಮಿ ಚಲೋ ಹುಡುಗನಪ್ಪ ಚಲೋ ಹುಡುಗ! ಸಾರ್ಥಕವಾಯಿತು. ಆ ತಂದೆಯ ಜನ್ಮ ಸಾರ್ಥಕವಾಯಿತು!
(ಧರ್ಮಶಾಲೆ – ಕಾದಂಬರಿಯ ಭಾಗ : 1955)

**********************

ಟಿಪ್ಪಣಿಗಳು:
1. ಸಾಂತ್ಯಾರು ವೆಂಕಟರಾಜ
‘ಕವಿರಾಜ ಹಂಸ’ ಎಂಬ ಬಿರುದು ಪಡೆದಿದ್ದ ಉಡುಪಿ ಜಿಲ್ಲೆಯ ಬಹುಮುಖ್ಯ ಸಾಹಿತಿಗಳಲ್ಲೊಬ್ಬರಾದ ಎಸ್. (ಸಾಂತ್ಯಾರು) ವೆಂಕಟರಾಜರು (1913-1988) ಮೂವತ್ತರ ದಶಕದಿಂದಲೇ ಕತೆಗಳನ್ನು ಬರೆಯಲು ಪ್ರಾರಂಭಿಸಿದ್ದರು; ಅಂದಿನ ಅವಿಭಜಿತ ದಕ್ಷಿಣ ಕನ್ನಡದ ಶ್ರೇಷ್ಠ ಕತೆಗಾರರೆಂದು ಮಾನ್ಯರಾಗಿದ್ದರು. ‘ಆಕಾಶಗಂಗೆ’ (1945) ಮತ್ತು ‘ಸಪ್ತಸಾಗರ’ (1947) ಅವರ ಪ್ರಕಟಿತ ಕಥಾಸಂಕಲನಗಳು.
ಅವರ ಹಲವು ಕತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿ, ಸಂಕಲಿತವಾಗದೆ ಉಳಿದಿವೆ. ಪ್ರಸ್ತುತ ಕತೆ ಅವರದೇ ಆದ ‘ವೀರಭೂಮಿ’ ಮಾಸಿಕದಲ್ಲಿ ಪ್ರಕಟವಾಗಿತ್ತು. ವೆಂಕಟರಾಜರು ಸಾಂತ್ಯಾರು, ಬೈರಂಪಳ್ಳಿ, ಬೆಳ್ಳರ್ಪಾಡಿ ಗ್ರಾಮಗಳ ಪಟೇಲರಾಗಿದ್ದರು. ತಮ್ಮ ‘ಮಾನಸಗಂಗೆ’ ಕವನ ಸಂಕಲನಕ್ಕಾಗಿ ರಾಜ್ಯಪ್ರಶಸ್ತಿ ಪಡೆದಿದ್ದ ಅವರು 7 ಕವನಸಂಕಲನಗಳು, 3 ಕಾದಂಬರಿಗಳು, 8 ನಾಟಕಗಳು, 54 ಕತೆಗಳು, ಸಂಪಾದಕೀಯ ಲೇಖನಗಳು, ಲಲಿತಪ್ರಬಂಧಗಳು, ಅಂಕಣ ಬರಹಗಳು ಮುಂತಾಗಿ ಎಲ್ಲ ಬಗೆಯ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ.
2. ಹಿನ್ನೆಲೆ
ಮುಂದಿನ ಕೆಲವು ಗದ್ಯ ಕಥಾನಕಗಳು ಅಥವಾ ಅವುಗಳ ಭಾಗಗಳು ಉಡುಪಿಯ ಲೇಖಕರ ಬರಹಗಳು. ಅವುಗಳ ಹಿನ್ನೆಲೆಯಲ್ಲಿ ಉಡುಪಿಯ ಭಾಗದ ಸ್ವಾತಂತ್ರ್ಯ ಹೋರಾಟದ ಅನುಭವವಿದೆ. ಈಗ ಪ್ರತ್ಯೇಕ ಜಿಲ್ಲೆಯಾಗಿರುವ ಉಡುಪಿ ಆಗ ದಕ್ಷಿಣ ಕನ್ನಡದ ಭಾಗವಾಗಿದ್ದರೂ, ಸಾಂಸ್ಕೃತಿಕವಾಗಿ ಮಂಗಳೂರಿಗಿಂತ ಭಿನ್ನವಾದ ಅಸ್ಮಿತೆಯನ್ನು ಹೊಂದಿತ್ತು. ಅದನ್ನು ಸಮಗ್ರವಾಗಿ ಗಮನಿಸಲು ಹೋಗದೆ, ಸ್ವಾತಂತ್ರ್ಯ ಹೋರಾಟ – ಅದರಲ್ಲೂ ಗಾಂಧೀ ಚಳುವಳಿಯ ಕಾಲದ ಬಗ್ಗೆ ಮಾತ್ರ – ಇಲ್ಲಿ ಕೆಲವು ಮಾಹಿತಿಯನ್ನು ಕೊಡಲಾಗಿದೆ.
ಉಡುಪಿಯಲ್ಲಿ ಸ್ವಾತಂತ್ರ್ಯ ಹೋರಾಟ : ಉಡುಪಿಯಲ್ಲಿ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದವರು ‘ಉಡುಪಿಯ ಗಾಂಧಿ’ ಎಂದು ಕರೆಯಲ್ಪಡುತ್ತಿದ್ದ ಸಾಂತ್ಯಾರು ಅನಂತಪದ್ಮನಾಭ ಭಟ್ಟರು, ಎಸ್. ಯು. ಪಣಿಯಾಡಿಯವರು, ಕೆ. ಕೆ. ಶೆಟ್ಟರು ಮತ್ತು ಹೊನ್ನಯ್ಯ ಶೆಟ್ಟರು.
ಸಾಂತ್ಯಾರು ಅನಂತಪದ್ಮನಾಭ ಭಟ್ಟರು ಸಾಹಿತಿ ಸಾಂತ್ಯಾರು ವೆಂಕಟರಾಜರ ತಂದೆ. ವೆಂಕಟರಾಜರ ಕುಟುಂಬದವರು ಪಟೇಲರಾಗಿದ್ದೂ ಸ್ವಾತಂತ್ರ್ಯ ಹೋರಾಟವನ್ನು ಬೆಂಬಲಿಸಿದ್ದವರು. ಅವರ ಅಜ್ಜ ವೆಂಕಟಸುಬ್ಬಾ ಭಟ್ಟರು ಹೊರಗಿನ ಜನರಿಗೆ ತಿಳಿಯದಂತೆ ಕಾಂಗ್ರೆಸ್ ಚಳುವಳಿಗೆ (ಅಂದರೆ ಸ್ವಾತಂತ್ರ್ಯ ಹೋರಾಟಕ್ಕೆ) ಗುಪ್ತವಾಗಿ ಧನ ಸಹಾಯ ಮಾಡುತ್ತಿದ್ದರು. ಪಟೇಲರಾಗಿದ್ದ ಅವರು ವ್ಯಕ್ತವಾಗಿ ಅಂತಹ ಸಹಾಯ ಮಾಡುವುದು ಸಾಧ್ಯವಿರಲಿಲ್ಲ.
ಸಾಂತ್ಯಾರು ಅನಂತ ಪದ್ಮನಾಭ ಭಟ್ಟರು (1884 – 1948) ‘ಉಡುಪಿಯ ಗಾಂಧಿ’ಯೆಂದೇ ಪ್ರಸಿದ್ಧರಾಗಿದ್ದವರು. ಅನಂತ ಪದ್ಮನಾಭ ಭಟ್ಟರು ತೀರಿಕೊಂಡಾಗ ‘ಅಂತರಂಗ’ ಪತ್ರಿಕೆಯಲ್ಲಿ ಪ್ರಕಟವಾದ ವರದಿ ರೂಪದ ಶ್ರದ್ಧಾಂಜಲಿ (ಉಡುಪಿ ಗಾಂಧಿ ಇನ್ನಿಲ್ಲ!) ಅವರ ಬದುಕನ್ನು ಹೀಗೆ ಕ್ರೋಢೀಕರಿಸಿದೆ: “ಇದೇ ತಾ. 13-05-1948ನೇ ಗುರುವಾರ ಶ್ರೀ ಸಾಂತ್ಯಾರು ಅನಂತ ಪದ್ಮನಾಭ ಭಟ್ಟರು ಕಾಯಬಿಟ್ಟರು… ಭಟ್ಟರದು ಸಾಂತ್ಯಾರಿನ ದೊಡ್ಡ ವರ್ಗದಾರ ಮನೆತನ. ಆಸುಪಾಸಿನಲ್ಲೆಲ್ಲಾ ವಿಶೇಷ ಗೌರವ, ಪ್ರತಿಷ್ಠೆ ಗಳಿಸಿದ್ದ ಕುಲ; ಊರ ಪಟೇಲಿಕೆಯೂ ಇದ್ದಿತು. ಇವರ ತಂದೆ ಶ್ರೀಮಂತಿಕೆಗೂ, ಘನತೆ ಗಾಂಭೀರ್ಯಗಳಿಗೂ ಪ್ರಸಿದ್ಧರಿದ್ದು ಉಡುಪಿಯ ಅಷ್ಟಮಠಗಳಲ್ಲೊಂದರ ಏಜಂಟರಾಗಿದ್ದರು. ಇವರೊಬ್ಬನೇ ಮಗ ತಾರುಣ್ಯದಲ್ಲಿ ಆಡಂಬರದ ಜೀವನ ನಡೆಸುತ್ತಿದ್ದರೆಂದು ಕೇಳುತ್ತೇವೆ. ಮಹಾತ್ಮಾಜೀಯ ಪ್ರಥಮ ಸ್ವಾತಂತ್ರ್ಯ ಸಮರ- ಅಸಹಕಾರ ಚಳುವಳಿ – ಆರಂಭವಾದೊಡನೆಯೇ ಎಲ್ಲವನ್ನೂ ಬಿಟ್ಟುಕೊಟ್ಟು ಅದರಲ್ಲಿ ಸೇರಿಕೊಂಡರು…. ಅಂದಿನಿಂದ ಸಾಯುವವರೆಗೂ ಇವರು ‘ಸಾಂತ್ಯಾರು ಭಟ್ಟ’ರೂ ಅಲ್ಲ ‘ಸಾಂತ್ಯಾರು ಪಟೇಲ’ರೂ ಅಲ್ಲ ‘ಗಾಂಧೀ ಭಟ್ಟರು’!
ದೇಶಸೇವೆಗಾಗಿ ಇವರು ತನ್ನ ಪಟೇಲಿಕೆ ಬಿಟ್ಟದ್ದಿದೆ; ಮತ್ತೊಮ್ಮೆ ಸರಕಾರದಿಂದ ಇವರ ಪಟೇಲಿಕೆ ರದ್ದಾಗಿದ್ದಿತು. ಜೈಲು ವಾಸವನ್ನನುಭವಿಸಿದ್ದರು. ಮಿಕ್ಕೆಲ್ಲಾ ಕಡೆಗಳಲ್ಲಿ ಇಂತಹ ಶಾಲೆಗಳು ಮಾಯವಾದ ಮೇಲೂ ಉಳಿದಿದ್ದ ರಾಷ್ಟ್ರೀಯ ಶಾಲೆಗಳೆಂದರೆ ಶ್ರೀ ಸಾಂತ್ಯಾರು ಅನಂತ ಪದ್ಮನಾಭ ಭಟ್ಟರು ಸ್ಥಾಪಿಸಿ, ನಡೆಯಿಸಿಕೊಂಡು ಬಂದವುಗಳೇ. ತನ್ನ ಊರಲ್ಲಿ ಆಶ್ರಮದಂತಹ ಆಶ್ರಯ ಸ್ಥಾನಕೊಟ್ಟು ಹರಿಜನ ಹುಡುಗಿಯರನ್ನೂ ಸಾಕಿದ್ದರು. ಖಾದೀ ತಯಾರೀ ಮಗ್ಗಗಳನ್ನಿಟ್ಟಿದ್ದರು. ಕಾಂಗ್ರೆಸಿನ ಸ್ವಾತಂತ್ರ್ಯ ಚಳುವಳಿಗಳ ವೇಳೆ ಉಡುಪಿ ತಾಲೂಕಿನಲ್ಲಿ ಅವುಗಳ ಬೆಂಗೋಲಾಗಿ ದುಡಿದಿದ್ದವರು ಶ್ರೀಯುತ ಭಟ್ಟರು. ಹೆಚ್ಚೇನು, ಕೆಲವೇ ಮಂದಿ ಅಗ್ರಗಣ್ಯ ರಾಷ್ಟ್ರ ಪ್ರಮುಖರ ಯಥಾಪ್ರತಿ ಸ್ಥಳೀಯ ಬಿಂಬವಾಗಿದ್ದರೆನ್ನಬೇಕು – ನಮ್ಮೀ ಭಟ್ಟರು….. ತಕ್ಲಿಯು ಅವರ ಕೈಯ ಆರನೇ ಬೆರಳಾಗಿಯೆ ನೇತಾಡಿಕೊಂಡಿತ್ತು.
ಸ್ವತಃ ತಾನು ನೂತ ನೂಲಿನ ಖಾದಿಯನ್ನಲ್ಲದೆ ಬೇರಾವುದನ್ನೂ – ಚರಕ ಸಂಘದ ಸರ್ಟಿಫಿಕೇಟು ಪಡೆದು ಬಂದ ವಸ್ತ್ರವನ್ನು ಕೂಡಾ – ಅವರು ಉಡುತ್ತಿರಲಿಲ್ಲ. ಗಾಂಧೀ ಭಕ್ತರಾದ ಮೇಲೆ ಸ್ವಂತ ಕೈಪಾಕದ್ದೇ ಊಟ – ಅದೂ ಕೆಲವು ನಿಯಮ ನಿರ್ಬಂಧಗಳನ್ನು ಹಾಕಿಕೊಂಡ ಫಲಹಾರ… ಮೊಣಕಾಲ ಮೇಲಿನ ಮಡೀ ಬೈರಾಸು, ಬಿಳೀ ಖಾದಿ ಜುಬ್ಬ, ತಲೆಯಲ್ಲೊಂದು ಬಿಳೀ ಟೋಪಿ – ಒಮ್ಮೊಮ್ಮೆ ಕಂಠದ ಸುತ್ತ ಬಿಳೀ ಬೈರಾಸು – ಕೈಯಲ್ಲೊಂದು ತಕಲಿ – ಮಳೆಗಾಲದಲ್ಲಿ ಓಲೇ ಕೊಡೆ – ಈ ವೇಷವಿನ್ನು ದಕ್ಷಿಣ ಕನ್ನಡದಲ್ಲಿ ಕಾಣಸಿಗುವಂತಿಲ್ಲ. ಗಾಂಧೀ ತತ್ವಗಳ ಕಡೆಗೆ ಹೃದಯವನ್ನು ಮಾರ್ಪಡಿಸುವುದಕ್ಕಾಗಿ ಯಾವ ಹಿರಿಯ ವ್ಯತ್ಯಾಸವನ್ನೂ ನೋಡದೆ, ಊಟದ ಹೊತ್ತು ಮೀರಿ ಜೀರ್ಣವಾಗುವ ಹೊತ್ತಿನವರೆಗೂ ಹಸನ್ಮುಖದಿಂದ ಶಾಂತ ಗಂಭೀರ ಸ್ವರದಿಂದ ಮುಖಾಮುಖಿ ಮಾತನಾಡುತ್ತಾ ಕುಳಿತುಕೊಳ್ಳಬಲ್ಲ ಮಹಾನುಭಾವರು ಇನ್ನು ದೊರೆಯುವಂತಿಲ್ಲ. ಕಾರಣ “ಉಡುಪಿ ಗಾಂಧಿ” – ಶ್ರೀ ಸಾಂತ್ಯಾರು ಅನಂತ ಪದ್ಮನಾಭ ಭಟ್ಟರು – ಇನ್ನಿಲ್ಲ!”
ಅನಂತ ಪದ್ಮನಾಭ ಭಟ್ಟರು ಪೆರ್ಡೂರ ಸಮೀಪದ ಸಾಂತ್ಯಾರು, ಬೈರಂಪಳ್ಳಿ ಹಾಗೂ ಬೆಳ್ಳರ್ಪಾಡಿ ಗ್ರಾಮಗಳ ಆನುವಂಶಿಕ ಪಟೇಲರಾಗಿದ್ದರು. 1921ರಲ್ಲಿ ಗಾಂಧೀಜಿಯವರ ರಾಷ್ಟ್ರೀಯ ಆಂದೋಲನಕ್ಕೆ ಧುಮುಕಿದರು ಮತ್ತು ಅಸಹಕಾರ ಹಾಗೂ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಅವರನ್ನು 1921ರಲ್ಲಿ ಬ್ರಿಟಿಷ್ ಸರಕಾರ ಸೇವೆಯಿಂದ ವಜಾಗೊಳಿಸಿತು. ಅವರ ಜೀವಿತಾವಧಿಯಲ್ಲಿ ಈ ಕುಟುಂಬದ ಯಾರಿಗೂ ಪಟೇಲಿಕೆಯನ್ನು ಕೊಡಬಾರದೆಂದು ಆದೇಶಿಸಲಾಗಿತ್ತು. ಉಪ್ಪಿನ ಸತ್ಯಾಗ್ರಹದ ಕಾಲದಲ್ಲಿ ಭಟ್ಟರು ರೂ. 500/- ದಂಡ ಪಡೆದಿದ್ದರು. ಅದನ್ನವರು ಪಾವತಿಸಲು ನಿರಾಕರಿಸಿ 6 ವಾರಗಳ ಸಜೆಯನ್ನು ಅನುಭವಿಸಿದ್ದರು. ಅಸಹಕಾರ ಚಳುವಳಿಗಾಗಿ 1933 ರಲ್ಲಿ ಮತ್ತೊಮ್ಮೆ ಮೂರು ತಿಂಗಳ ಶಿಕ್ಷೆ ಅನುಭವಿಸಿ ದಂಡದ ಹಣವಾದ ರೂ. 500/- ಕಟ್ಟಲು ನಿರಾಕರಿಸಿದ ಕಾರಣ ಅವರ ಆಸ್ತಿಯ ಭಾಗವನ್ನು ಹರಾಜು ಹಾಕಲಾಗಿತ್ತು. ಅನಂತ ಪದ್ಮನಾಭ ಭಟ್ಟರು ತಮ್ಮ 1933ರಲ್ಲಿ ಜೈಲುವಾಸದ ಸಂದರ್ಭದಲ್ಲಿ ಅದೇ ಜೈಲಿನಲ್ಲಿದ್ದ ರಾಜಾಜಿಯವರಿಗೆ ಆತ್ಮೀಯರಾಗಿದ್ದರು.
ಶ್ರೀ ಸಾಂತ್ಯಾರು ಅನಂತ ಪದ್ಮನಾಭ ಭಟ್ಟರು ತಮ್ಮ ಸ್ವಂತ ಖರ್ಚಿನಲ್ಲಿ ಮೂರು ರಾಷ್ಟ್ರೀಯ ಶಾಲೆಗಳನ್ನು ನಡೆಸುತ್ತಿದ್ದರು. ಸಾಂತ್ಯಾರಿನಲ್ಲಿ ತಿಲಕಾಶ್ರಮ ಎಂಬ ಆಶ್ರಮವನ್ನು ನಡೆಸುತ್ತಿದ್ದರು. 1945ರಲ್ಲಿ ಕಸ್ತೂರ್ಬಾ ಸ್ಮಾರಕ ಸಮಿತಿಯ ವತಿಯಿಂದ ಎಚ್. ನಾರಾಯಣ ರಾವ್ ಎಂಬವರು ಬಂದು ಈ ಸಂಸ್ಥೆಗಳಿಗೆ ಭೇಟಿ ನೀಡಿ ತಿಲಕಾಶ್ರಮವನ್ನು ಸಮಿತಿಯ ಶೈಕ್ಷಣಿಕ ಮತ್ತು ಆರೋಗ್ಯ ಕೇಂದ್ರವನ್ನಾಗಿ ಪರಿಗಣಿಸಲು ಶಿಫಾರಸು ಮಾಡಿದ್ದರು. ಈ ವರದಿಯಲ್ಲಿ ಅವರು, 1921ರಲ್ಲಿ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದ್ದ ರಾಷ್ಟ್ರೀಯ ಶಾಲೆಗಳೆಲ್ಲ ಮುಚ್ಚಿದ್ದರೂ ಶ್ರೀ ಸಾಂತ್ಯಾರು ಅನಂತ ಪದ್ಮನಾಭ ಭಟ್ಟರು ಮೂರು ಶಾಲೆಗಳನ್ನು ಅತ್ಯುತ್ತಮವಾಗಿ ನಡೆಸಿಕೊಂಡು ಬರುತ್ತಿದ್ದುದನ್ನು ಶ್ಲಾಘಿಸಿದ್ದಾರೆ. ಸಾಂತ್ಯಾರಿನ ತಿಲಕಾಶ್ರಮದಲ್ಲಿ ಒಂದು, ದೊಂಡೇರಂಗಡಿ ಮತ್ತು ಬೆಳ್ಳರ್ಪಾಡಿಗಳಲ್ಲಿ ಒಂದೊಂದು ಪ್ರಾಥಮಿಕ ಶಾಲೆಗಳನ್ನು ಭಟ್ಟರು ನಡೆಸುತ್ತಿದ್ದು ಅವು ಗಾಂಧೀ ಸಿದ್ಧಾಂತದ ರಾಷ್ಟ್ರೀಯ ಶಿಕ್ಷಣವನ್ನು ನೀಡುತ್ತಿದ್ದವು. ಭಟ್ಟರ ಮನೆಯಲ್ಲಿ ಕೈಮಗ್ಗವಿದ್ದು ಅದರಿಂದ ಬಟ್ಟೆ ತಯಾರಿಸಲಾಗುತ್ತಿತ್ತು. ಭಟ್ಟರು ಊರಿನಲ್ಲಿ ಸಹಕಾರ ಸಂಘವನ್ನು ಸ್ಥಾಪಿಸಿದ್ದರು. ಶಾಂತಿನಿಕೇತನದಲ್ಲಿ ಶಿಕ್ಷಣ ಪಡೆದ ಕಾಂಗ್ರೆಸಿಗರಾದ ಕೆ.ಕೆ. ಶೆಟ್ಟಿ ಮತ್ತು ನವಯುಗದ ಹೊನ್ನಯ್ಯ ಶೆಟ್ಟರು ತಿಲಕಾಶ್ರಮದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
ವೆಂಕಟರಾಜರ ‘ಗಾಂಧಿ ಮಂದಿ’ (‘ಧರ್ಮಶಾಲೆ’ ಕಾದಂಬರಿಯ ಭಾಗ) ಯಲ್ಲಿ ಬರುವ ಊರಗೌಡ ಶ್ರೀನಿವಾಸ ರಾಯರು ಆ ಕಾಲದ ಬ್ರಿಟಿಷರ ಪರವಾದ ಪಟೇಲರ ಪ್ರತಿನಿಧಿಯಾಗಿದ್ದಾರೆ. ‘ರಾಯರು’ ಅನ್ನುವುದು ಬ್ರಾಹ್ಮಣ ಜಾತಿವಾಚಕ ಶಬ್ದವಲ್ಲ ಮತ್ತು ಕಾರಂತರಾದಿಯಾಗಿ ಈ ಶಬ್ದದ ಬಳಕೆಯ ಬಗ್ಗೆ ಕೆಳಗಿನ ಟಿಪ್ಪಣಿಯನ್ನು ನೋಡಬಹುದು. ಮುಂದೆ ಕೊಡಲಿರುವ ‘ಜಮಾಬಂದಿ’ ಎಂಬ ಕತೆಯಲ್ಲಿ ಬರುವ ಸ್ವಾತಮ್ತ್ರ್ಯ ಹೋರಾಟಗಾರರ ಪರವಾಗಿದ್ದ ಪಟೇಲರು ವೆಂಕಟರಾಜರ ತಂದೆಯವರೇ ಎನ್ನುವುದು ಸ್ಪಷ್ಟ. ಅಂತಹವರು ಜಿಲ್ಲೆಯಲ್ಲಿ ಅವರು ಮಾತ್ರವೇ!
ಜಾತಿಯಲ್ಲ, ವರ್ಗ :
ನವೋದಯದ ಸಾಹಿತಿಗಳು ಯಾವುದೇ ಒಂದು ಜಾತಿಯನ್ನು ಹೀಗಳೆಯುವ ಅಥವಾ ವೈಭವೀಕರಿಸುವ ತಪ್ಪನ್ನು ಮಾಡುವುದಿಲ್ಲ ಎನ್ನುವುದು ಇಂದಿನ ಸಾಹಿತಿಗಳಿಗೆ ಅಧ್ಯಯನಯೋಗ್ಯವಾದ ವಿಷಯವಾಗಿದೆ. ಕಾರಂತರು, ಕಡೆಂಗೋಡ್ಲು ಶಂಕರ ಭಟ್ಟರು, ವೆಂಕಟರಾಜರು ಮುಂತಾದವರು ಮೇಲುವರ್ಗ – ಕೆಳ ವರ್ಗ ಎಂಬ ಅಂತರ ಸಮಾಜದಲ್ಲಿದ್ದುದನ್ನು ಗಮನಿಸಿ ಪ್ರಗತಿಶೀಲ ಹಾಗೂ ಸುಧಾರಣಾವಾದಿ ಕತೆ, ಕಾದಂಬರಿಗಳನ್ನು ಬರೆದಿದ್ದಾರೆ. ಕಾರಂತರು ಒಂದು ಕತೆಯಲ್ಲಿ ಹೇಳುವ ಈ ಮಾತು ಅಂದಿನವರು ಸಮಾಜವನ್ನು ಸರಿಯಾಗಿ ಗ್ರಹಿಸಿದ್ದುದಕ್ಕೆ ಸಾಕ್ಷಿಯಾಗಿದೆ : “ಊರಿನಲ್ಲಿ ದೊಡ್ಡವರು ಬಡವರು ಎಂಬ ಎರಡು ಜಾತಿಯ ಜನರು.”
ನವೋದಯ ಸಾಹಿತಿಗಳು ಸಮಾಜ ವ್ಯವಸ್ಥೆಯ ಬಗ್ಗೆ ಒಂದು ಸ್ಪಷ್ಟವಾದ ನಿಲುವನ್ನು ಹೊಂದಿದ್ದರು. ಅವರು ವರ್ಗವನ್ನು ಗುರುತಿಸುತ್ತಿದ್ದರಲ್ಲದೆ ಜಾತಿಯನ್ನಲ್ಲ. ಶಿವರಾಮ ಕಾರಂತರ ಹಲವು ಕತೆಗಳಲ್ಲಿ ‘ರಾಯರು’ ಎಂಬ ಶೋಷಕ ಪಾತ್ರ ಬರುತ್ತದೆ. ಈ ಪಾತ್ರಗಳು ಬೇರೆ ಬೇರೆ ವ್ಯಕ್ತಿಗಳನ್ನು ಸೂಚಿಸುತ್ತವೆ. ಇವರನ್ನು ಒಂದು ನಿರ್ದಿಷ್ಟ ಜಾತಿಯ ಮೂಲಕ ಗುರುತಿಸಬಾರದು ಎಂಬ ಕಾರಣಕ್ಕಾಗಿ ಕಾರಂತರು ‘ರಾಯರು’ ಎಂಬ ಶಬ್ದವನ್ನು ಬಳಸುತ್ತಿದ್ದರು. ಈ ‘ರಾಯರು’ ಜಮೀನುದಾರೀ ವರ್ಗದಿಂದ ಬಂದು, ಶ್ರೀಮಂತಿಕೆಯ ಕಾರಣದಿಂದ ಉನ್ನತ ಶಿಕ್ಷಣವನ್ನು ಪಡೆದು, ವಕೀಲರು, ವೈದ್ಯರು, ಸರಕಾರೀ ಅಧಿಕಾರಿಗಳು ಮುಂತಾಗಿ ವೈಟ್ ಕಾಲರ್ ಉದ್ಯೋಗದಲ್ಲಿ ಇರುತ್ತಾರೆ. ಅವರೀಗ ನೇರವಾಗಿ ಶೋಷಕರೆಂದು ಕಾಣಿಸಿಕೊಳ್ಳುತ್ತಿಲ್ಲ – ಆದರೆ ಜನಸಾಮಾನ್ಯರ ಜತೆಗೆ ದಣಿ – ಸೇವಕ ಸಂಬಂಧವನ್ನು ಮಾತ್ರ ಉಳಿಸಿಕೊಂಡಿರುತ್ತಾರೆ. ಈ ಸಂಪುಟದಲ್ಲಿರುವ ‘ಹೋಳಿಗೆ’ ಕತೆಯ ಸುಬ್ಬರಾಯರನ್ನು ಉದಾಹರಣೆಗಾಗಿ ಗಮನಿಸಬಹುದು. ಕಾರಂತರ ‘ಹಸಿವು’ ಕತೆಯ ರಾಯರು, ‘ಕಳ್ಳ ಫಕೀರ’ ಕತೆಯ ವೆಂಕಟ ರಾಯರು, (ಈ ಕತೆಯ ಬಡವನಾದ ಫಕೀರನ ಮಟ್ಟಿಗೆ “ಊರಿನಲ್ಲಿ ದೊಡ್ಡವರು ಬಡವರು ಎಂಬ ಎರಡು ಜಾತಿಯ ಜನರು” ಎಂದು ಕಾರಂತರು ಹೇಳಿದ್ದಾಗಿದೆ) ‘ಬಬ್ಬು ಸಾಕ್ಷಿ’ ಕತೆಯ ಶೇಷಗಿರಿ ರಾಯರು ಇತ್ಯಾದಿ ಉದಾಹರಣೆಗಳನ್ನು ಗಮನಿಸಬಹುದು.
ಎಸ್. ವೆಂಕಟರಾಜರೂ ‘ರಾಯರು’ ಎಂಬ ಗೌರವ – ಅಂತಸ್ತು ಸೂಚಕವನ್ನು ಬಳಸುತ್ತಾರೆ. ಉದಾಹರಣೆಗೆ – ಶಂಕರರಾಯರು, ವಿಶ್ವನಾಥ ರಾಯರು (ಕತೆ – ಹಣೆಬರಹ), ಮಂಗಳೂರಿನ ಶ್ರೀಮಂತ ಆನಂದರಾಯರು (ಹಾಗಾದರೆ), ಧರ್ಮಪರಾಯಣ ನಾರಾಯಣ ರಾಯರು (ಧರ್ಮಶಾಲೆ) ಇತ್ಯಾದಿ ಹಲವಾರು ಪಾತ್ರಗಳನ್ನು ಗಮನಿಸಬಹುದು. ವೆಂಕಟರಾಜರು ಬ್ರಾಹ್ಮಣ ಪಾತ್ರಗಳೆಂದು ತಿಳಿಸಬೇಕಿದ್ದರೆ ಸ್ಪಷ್ಟವಾಗಿ ಶಾಸ್ತ್ರಿಗಳು, ತಂತ್ರಿಗಳು (ಉದಾ. ‘ಸ್ವಾನುಭವ’ ಕತೆ) ಮುಂತಾದ ಬ್ರಾಹ್ಮಣ ಕುಲನಾಮಗಳನ್ನೇ ಬಳಸುತ್ತಿದ್ದರು. ಇನ್ನೂ ಒಂದು ಒಳ್ಳೆಯ ಉದಾಹರಣೆಯನ್ನು ಈ ಸಂಪುಟದಲ್ಲಿ ಕೊಟ್ಟಿರುವ ‘ಉದ್ಧಾರ’ ಕಿರುಪ್ರಹಸನ.