ಮೆರವಣಿಗೆಯಲ್ಲಿ ಕಾಣುವ ಮದುಮಗನ ಹಾಗೆ ಹಣೆಗೆ ಬಾಸಿಂಗವನ್ನು ಕಟ್ಟಿದಂತೆ ಅಲಂಕಾರಹೊಂದಿ, ಕೊರಳಿಗೆ ಘಂಟಾಮಣಿಗಳ ಸರವನ್ನು ತೊಟ್ಟುಕೊಂಡು, ಗಂಭೀರವಾಗಿ ಸವಾರಿಗಾಡಿಯನ್ನು ಎಳೆವ, ಬೆನ್ನಮೇಲೆ ಮದುಮಗನ ರೇಶ್ಮೆದುಪ್ಪಟದ ಬದಲು ಗೋಣಿಚೀಲವನ್ನು ಹೊದೆದುಕೊಂಡು, ಒಂದು ಕಣ್ಣನ್ನು ಬಂಡಿಯಾಳಿನ ಬಲಗೈಯ ಮೇಲೂ, ಮತ್ತೊಂದನ್ನು ನಡೆವ ಮಾರ್ಗದ ಮೇಲೂ ಇಟ್ಟು, ತಟಪಟವೆಂದು, ಒಡೆಯನ ‘ಓಓ’ ಗಳಿಗೆ ತಾಳ ಹಾಕುತ್ತ ನಡೆವ, ಆ ಬಂಡಿಯೆತ್ತಿನ ಯುಗವೇ ಮಾಯವಾಗಿದೆ. 
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವಓಬೀರಾಯನ ಕಾಲದ ಕತೆಗಳುಸರಣಿಯಲ್ಲಿ ಎಂ. ಎನ್. ಕಾಮತ್ ರವರು ಬರೆದ ಕತೆಬೊಗ್ಗು ಮಹಾಶಯಈ ಭಾನುವಾರದ ನಿಮ್ಮ ಓದಿಗೆ

 

ನಮ್ಮೂರಿಗೆ ಮುನ್ಸಿಫ್ ಕೋರ್ಟು ಮರಳಿ ಬಂದಿತು! ………….
ಎಂದರೆ, ನಮ್ಮೂರಲ್ಲಿ ಇದ್ದ ಮುನ್ಸಿಫ್ ಕೋರ್ಟನ್ನು ಇಪ್ಪತ್ತು ವರ್ಷಗಳ ಹಿಂದೆ, ಹದಿನೆಂಟು ಮೈಲು ದೂರದ ಮತ್ತೊಂದೂರಿಗೆ ಒಯ್ದಿದ್ದರು. ಅಂದಿನಿಂದ ಇಂದಿನವರೆಗೂ, ಪೇಟೆಯಲ್ಲಿ ವ್ಯಾಪಾರವೂ, ಜನರಲ್ಲಿ ಉತ್ಸಾಹವೂ, ಮುಖದಲ್ಲಿ ಗಾಂಭೀರ್ಯವೂ ಕುಂದುತ್ತ ಬಂದು, ಅಂದಿನಿಂದಾದ ಎರಡು ಖಾನೆಸುಮಾರಿಗಳಲ್ಲಿ ಜನಸಂಖ್ಯೆ ಕಡಿಮೆಯಾಗಿಯೇ ಏರಿದಂತೆ ತೋರಿಬಂದಿದ್ದಿತು. ಮುನ್ಸಿಫ್ ಕೋರ್ಟು ವರ್ಗವಾದ ಕೂಡಲೇ, ಹಲವು ಮನೆಗಳೂ ಖಾಲಿಯಾದುವು; ವಕೀಲರು ಆ ಮತ್ತೊಂದೂರ ವಕೀಲರಿಗೆ ಏಜಂಟರೇ ಮಾತ್ರವಾದರು; ವಕೀಲ ಗುಮಾಸ್ತರೂ ಬಂಡಸಾಲೆಗಳಲ್ಲಿ ಗುಮಾಸ್ತರಾದರು; ಕಕ್ಷಿಗಾರರಿಗೆ ಕೋರ್ಟು ಸಮಯಕ್ಕೆ ಸರಿಯಾಗಿ ಅನ್ನ ಹಾಕುತ್ತಿದ್ದ, ಮತ್ತು ಉಳಿದ ಸಮಯದಲ್ಲೆಲ್ಲ ಕಕ್ಷಿಗಾರರಿಗೆ ನಿರಾತಂಕವಾದ ರಂಗಸ್ಥಳವಾಗಿದ್ದ, ಕೆಲವು ಹೊಟೇಲುಗಳು ಮಾಯವಾದುವು; ಅತ್ತಿತ್ತ ಓಡಾಡುವ ಬಿಟ್ಟೀ ಆಳುಗಳು ಊರು ಬಿಟ್ಟರು; ದೇವಸ್ಥಾನಕ್ಕೆ ಲಭಿಸುತ್ತಿದ್ದ ಕಾಣಿಕೆ, ಪೂಜೋತ್ಸವ ಕಾಲಗಳಲ್ಲಿ ನೆರೆಯುತ್ತಿದ್ದ ಜನಸಮೂಹ, ಎರಡೂ ಕುಂದಿದುದರಿಂದ ಊರ ಸಿರಿಯೇ ಮ್ಲಾನವಾಯಿತು. ಇಪ್ಪತ್ತು ವರ್ಷಗಳವರೆಗೆ ಇಂತಹದೊಂದು ಕ್ಷಯ ರೋಗದಿಂದ ನರಳುತಿದ್ದ ನಮ್ಮೂರಿಗೆ, ಆಕಸ್ಮಿಕವಾಗಿ ಗುಣ ತೋರುವಂತಹ ಸಂಘಟನೆಯೊಂದು ನಡೆಯಿತು. ಆ ಸಂಘಟನೆಯಿಂದಾಗಿ ಮುನ್ಸಿಫ್ ಕೋರ್ಟು ನಮ್ಮೂರಿಗೆ ಮರಳಿ ಬಂತು.

ಅವೇ ಇಪ್ಪತ್ತು ವರ್ಷಗಳಲ್ಲಿ ನಮ್ಮೂರಿನವರಿಗೂ ಮತ್ತೊಂದೂರಿನವರಿಗೂ ಬಹಳ ಸ್ಪರ್ಧೆ ಸೆಣಸಾಟಗಳು, ಚಿಕ್ಕ ದೊಡ್ಡ ಪಿತೂರಿಗಳು, ವರ್ಷಕ್ಕೊಮ್ಮೆ ಊರೆಲ್ಲ ಸುಟ್ಟುಹೋಗುವ ಅಭ್ಯಾಸವು ನಮ್ಮೂರಿಗಿದ್ದಿತು. ಇದರಿಂದಾಗಿ ಕೋರ್ಟು ಮತ್ತೊಂದೂರಿಗೆ ವರ್ಗವಾದುದೆಂದು ಅಲ್ಲಿನವರು ಹೇಳುತ್ತ, ನಮ್ಮೂರನ್ನು ‘ಸುಟ್ಟೂರು’ ಎಂದು ನಾಮಕರಣ ಮಾಡಿದರು. ಮತ್ತೊಂದೂರಲ್ಲಿ ದೇವಳದ ಅರ್ಚಕರಿಗೂ ಮೊಕ್ತೇಸರರಿಗೂ ಪ್ರತಿ ವರ್ಷವೂ ಕಾಳಗವಿದ್ದುದರಿಂದ ಊರವರ ವಾಗ್ವಾದದಿಂದ ದೇವರನ್ನು ಸಂರಕ್ಷಿಸುವುದಕ್ಕಾಗಿ ತಮ್ಮ ಕೋರ್ಟು ಅತ್ತ ವರ್ಗವಾಗಿದ್ದಿತೆಂದು ನಮ್ಮೂರವರು ಹೇಳುತ್ತ, ಇತ್ತಂಡದವರು ಹಣವನ್ನು ದೇವಸ್ಥಾನದ ಭಂಡಾರದಿಂದ ಖರ್ಚು ಮಾಡುತ್ತಿದ್ದ ಕಾರಣ ದೇವರು ದಿವಾಳಿಯಾಗುತ್ತ ಬರುತ್ತಿರಲು ಮತ್ತೊಂದೂರಿಗೆ ‘ಕೆಟ್ಟೂರು’ ಎಂದು ನಮ್ಮೂರವರು ಹೆಸರಿಟ್ಟರು. ಸುಟ್ಟೂರು, ಕೆಟ್ಟೂರು ಇವೆರಡು ಊರುಗಳಲ್ಲಿನ ಮನೆತನಗಳು ಎಷ್ಟೋ ನೆಂಟಸ್ತಿಕೆಯುಳ್ಳವಾಗಿದ್ದವು; ಈಗ ಸೊಸೆ ತವರೂರಿಗೆ ಹೋಗವುದಕ್ಕಿಲ್ಲ, ಅಳಿಯನಿಗೆ ಮಾವನ ಮನೆಯ ಉಪಚಾರಗಳಿಲ್ಲ ಎಂಬಂತಾಯಿತು. ಮತ್ತೊಂದೂರಿನ ಅಕ್ಕಿ ನಮ್ಮೂರಲ್ಲೇ ಬಹಳವಾಗಿ ಮಾರಾಟವಾಗುತ್ತಿತ್ತು; ಈಗ ನಮ್ಮೂರವರು, ಅಲ್ಲಿನ ಅಕ್ಕಿಯನ್ನು ಬಹಳ ಉಷ್ಣವೆಂದು, ಅದು ನಾಲ್ವತ್ತೆಂಟು ಸೇರಿನ ಮುಡಿಯಾಗಿದ್ದರೂ ಅದನ್ನು ಕನಿಷ್ಠ ಬೆಲೆಗೆ ಕೇಳಿ ಅದು ಮಾರಾಟವಾಗದಂತೆ ನೋಡಿಕೊಂಡರು. ನಮ್ಮೂರಿನ ಮುಖ್ಯ ಕೈಗಾರಿಕೆಯಾದ ಹಪ್ಪಳ ಸಾಟುಗಳನ್ನು (ಅವನ್ನು ತಯಾರಿಸುವಾಗ ಅವುಗಳಲ್ಲಿ ಬೆವರು, ಉಗುಳು ಇತ್ಯಾದಿಗಳು ಬೆರೆತರೂ ತಿಳಿಯದಷ್ಟು ಅಜಾಗರೂಕ ಮೂರ್ಖರು ನಮ್ಮೂರವರೆಂದು) ಮತ್ತೊಂದೂರಿನವರು ಬಹಿಷ್ಕರಿಸಿದರು. ಇಂತಹ ಹಲವು ಪೀಕಲಾಟಗಳು ಎರಡೂ ಊರುಗಳಲ್ಲಿದ್ದುವು. ಆದರೂ ಅದೊಂದು ವಿಚಿತ್ರ ಘಟನೆಯಿಂದ ನಮ್ಮೂರಿಗೆ ಮುನ್ಸಿಫ್ ಕೋರ್ಟು ಮರಳಿ ಬಂದಿತು.

ನಮ್ಮೂರ ದೇವಸ್ಥಾನದ ಸುತ್ತಲಿನ ಜೋಯಿಸರೊಬ್ಬರ ಮನೆಯೊಳಗೆ ಹತ್ತಿರದ ಸೌತೆ ಬೆಳೆವ ಹಿತ್ತಲಿನಿಂದ ಒಂದು ರಾತ್ರಿ ನರಿಗಳು ನುಗ್ಗಿರಲು, ಅವು ಮತ್ತೊಂದೂರಿನ ನರಿಗಳೆಂದಾಯಿತು. ಮತ್ತೊಂದೂರಿನಲ್ಲಿ ಕೆಲವು ದನಗಳಿಗೆ ಹುಚ್ಚು ನಾಯಿಯೊಂದು ಕಚ್ಚಲು, ಆ ನಾಯಿ ನಮ್ಮೂರದೆಂದು ಅಲ್ಲಿನವರ ದೂರ. ಮೇಷ ಮಾಸದಲ್ಲಿ ನಮ್ಮೂರಲ್ಲಿ ಆಣೆಕಲ್ಲ ಮಳೆ ಒಂದು ವರ್ಷ ಸುರಿಯಲು, ಮತ್ತೊಂದೂರಿನವರು ಮಾಡಿದ ಮಾಟದ ಫಲವಿದು ಎಂದು ಇಲ್ಲಿನವರ ಆಕ್ಷೇಪ; ಪ್ರತಿವರ್ಷ ಊರೆಲ್ಲ ಸುಡುವವರು ಸ್ವಲ್ಪ ನೀರನ್ನು ಕೂಡಿಸಿಡಲೆಂದು ತಾವು ಈ ಆಣೆಕಲ್ಲ ಮಳೆ ಕಳುಹಿದ್ದುದು ನಿಜವೆಂದು ಮತ್ತೊಂದೂರವರ ಸಮಾಧಾನ. ಇವೆರಡು ಊರುಗಳ ಎಲ್ಲೆಯಲ್ಲಿ ಹುಲಿಯ ಹಾವಳಿ, ಸರ್ಪಗಳ ಕಾಟ, ಸನ್ನಿಪಾತ ಸಿಡುಬುಗಳ ವ್ಯಾಪನ ಇದ್ದಲ್ಲಿ ಒಂದೂರಿನವರು ಮತ್ತೊಬ್ಬರನ್ನು ಅದರ ಮೂಲ ಕಾರಣರೆಂದು ಇಪ್ಪತ್ತು ವರ್ಷವೂ ಶಪಿಸದೇ ಇರಲಿಲ್ಲ. ಆದರೂ, ನಮ್ಮೂರಿಗೆ ಕೊನೆಗೆ ಹೇಗೋ ಮುನ್ಸಿಫ್ ಕೋರ್ಟು ಮರಳಿ ಬಂದಿತು.

ಅದು ಹೇಗೆ ಬಂದಿತು?

ಮತ್ತೊಂದೂರಿನ ಕೋರ್ಟ್ ಇನ್ಸ್ಪೆಕ್ಷನಿಗಾಗಿ ಜಿಲ್ಲಾ ಜಡ್ಜರವರು ಬಂದಿದ್ದು, ವಿಮರ್ಶೆ ಮುಗಿಸಿ ಹೊರಡುವಾಗ, ಅವರ ಬಟ್ಲರನು, “ಖಾವಂದರೇ! ಹೇಗೂ ಮಂಗ್ಳೂರಿಗೆ ಹಿಂತಿರುಗಬೇಕು; ಅತಿ ಪುರಾತನ ದೇವಸ್ಥಾನಗಳೂ ವಿವಿಧ ಸೃಷ್ಟಿ ವೈಚಿತ್ರ್ಯಗಳೂ ಇದ್ದು, ಇಂಗ್ಲೆಂಡಿನ ಒಂದು ತುಂಡೇ ಎಂಬಂತೆ, ಹಿಂದಣ ದೊರೆಗಳಲ್ಲಿ ಹಲವರು ಕಂಡುಕೊಂಡಾಡಿದ ನಮ್ಮೂರ ಮಾರ್ಗವಾಗಿ ಹಿಂದೆರಳೋಣವೇ? ದೂರವೂ ಒಂದೇ, ಸಮಯವೂ ಒಂದೇ; ಸ್ವಲ್ಪ ಅಡ್ಡಾಡಿದ ಹಾಗಾಯಿತು. ಅಲ್ಲಿಯೇನೂ ಕೋರ್ಟು ಇಲ್ಲ. ಇಷ್ಟು ದಿನ ಕೋರ್ಟಿನಿಂದ ಕೋರ್ಟಿಗೆ ಸಂದರ್ಶನ ಮಾಡಿ ಬಳಲಿರುವುದಕ್ಕೆ ಪ್ರತ್ಯಕ್ಷ ಇಂಗ್ಲೆಂಡನ್ನು ನೋಡಿದಂತಹ ಸಂತೋಷ ಸಂತೃಪ್ತಿಗಳು ಖಾವಂದರಿಗಾಗುವುವು ಎಂದು ಹೇಳಿಕೊಂಡನು. ದೊರೆಗಳೂ ಕುತೂಹಲಚಿತ್ತರಾಗಿ ಆಗಬಹುದೆಂದು, ಶನಿವಾರ ಸಂಜೆ ಅಲ್ಲಿಂದ ಹೊರಟು ರವಿವಾರ ಬೆಳಿಗ್ಗೆ ನಮ್ಮೂರಿಗೆ ದಯಮಾಡಿಸಿದರು. ದೊರೆಗಳ ಬಂಗಲೆಯಿರುವಲ್ಲಿ ನಮ್ಮೂರ ದೇವಸ್ಥಾನದ ಕಾರ್ತಿಕ ಹುಣ್ಣಿಮೆಯ ಮಹೋತ್ಸವಗಳ ಸಂಭ್ರಮವೆಲ್ಲ ನಡೆಯುತಿದ್ದಿತು. ಬಟ್ಲರನು ನಮ್ಮೂರವನೇ. ಅವನು ದೇವಸ್ಥಾನದ ಮೊಕ್ತೇಸರರಿಗೆ ದೊರೆಗಳು ಜಿಲ್ಲಾ ಜಡ್ಜರೆಂಬುದನ್ನು ತಿಳಿಸಿ, ಅವರನ್ನು ಹೇಗೂ ಮಾಡಿ ನಮ್ಮೂರವರು ಒಲಿಸಿಕೊಳ್ಳಬೇಕೆಂದನು. ಇಪ್ಪತ್ತು ವರ್ಷದಿಂದ ಕಾಯುತ್ತಿದ್ದವರಿಗೆ ‘ಅತ್ಯಪೂರ್ವ ಸಂದರ್ಭ’ವೊಂದು ಈಗ ದೊರೆಯಿತು. ಪೂಜಾ ವಿಗ್ರಹಕ್ಕೆ ಸಲ್ಲತಕ್ಕ ವೈಭವಾಡಂಬರಗಳಿಂದ ದೊರೆಗಳನ್ನು ಬಹುಮಾನಿಸಿ ಎದುರುಗಾಣಿಸಿಕೊಂಡು, ‘ವನಭೋಜನ’ದಲ್ಲಿ ದೇವರಿಗೆ ಅಭಿಷೇಕವಾಗುವಲ್ಲಿಗೆ ಕರೆದೊಯ್ದು, ಶತಮಾನಗಳಿಂದಲೂ ತೊಡಿಸಿಲ್ಲದಷ್ಟು ಆಭರಣಗಳನ್ನು ಪೂಜಾವಿಗ್ರಹಕ್ಕೆ ತೊಡಿಸಿ ದರ್ಶನದ ಪಾತ್ರಿಯಿಂದ, ‘‘ದೊರೆಗಳು ಖಂಡಿತವಾಗಿಯೂ ಸದ್ಯದಲ್ಲಿಯೇ ಹಾಯ್ ಕೋರ್ಟ್ ಜಡ್ಜರಾಗುವರು” ಎಂಬ ಮಾತನ್ನು ನುಡಿಸಿ, ಪ್ರಸಾದಗಳನ್ನು ದೊರೆಗಳಿಗೊಪ್ಪಿಸಿ, ಊರ ಜನರ ಭಕ್ತಿಶಕ್ತಿಗಳೆರಡನ್ನೂ ದೊರೆಗಳಿಗೆ ತಿಳಿದುಬರುವಂತೆ ಸಲ್ಲಿಸಿದರು. ಬಟ್ಲರನಂತೂ ಅಂದು ಜಡ್ಜ್ ದೇವತೆಯ ಉಪಾಸನೆಯನ್ನು ಊರವರು ಒಪ್ಪಿಸಿದ್ದ ಷೋಡಶೋಪಚಾರಗಳ ಮೂಲಕ ನೆರವೇರಿಸಿದನು. ಜಡ್ಜರು ಪ್ರಸನ್ನವದನರಾಗಿ, ಇಲ್ಲಿಂದ ಕೋರ್ಟುನ್ನು ಮತ್ತೊಂದೂರಿನ ಶ್ಮಶಾನಕ್ಕೆ ಒಯ್ದದ್ದು ಸರಿಯಾಗಲಿಲ್ಲ; ಇಲ್ಲಿದ್ದರೆ ಊರ ಹೊರಗಾಗಿ, ಯಾವ ಗಲಭೆಯೂ ಇಲ್ಲದೆ, ಎತ್ತರ ಬೆಟ್ಟಗಳು, ದೂರದ ಕಾಡುಗಳು, ಅಲ್ಲಲ್ಲಿ ಕಾಣುವ ಕೆರೆಗಳು, ಇತಿಹಾಸ ಪ್ರಸಿದ್ಧ ಕಟ್ಟಡಗಳು, ಮೊದಲಾದುವುಗಳ ನಿರ್ಬಾಧಕವಾದ ವಾತಾವರಣದಲ್ಲಿ ಆ ಸಂಪನ್ನ ಜನತೆಗೆ ನ್ಯಾಯವು ಸುಲಭವಾಗಿ ದೊರೆಯುವಂತಾದೀತು ಎಂದು ಮೇಲಣ ಆಫೀಸರರಿಗೆ ವರದಿ ಬರೆಯುತ್ತ ಮತ್ತೊಂದೂರು ಕೋರ್ಟಿನ ವಿಮರ್ಶೆಯನ್ನು ಈ ಶಿಫಾರಸಿಗೆ ಅನುಕೂಲವಾಗುವಂತೆ ಮಾಡಿದರು.

ಮೂರ್ಛಿತವಾದ ದೇಹದಲ್ಲಿ ಪುನಃ ಚೇತನವು ಸಂಚಾರ ಹೊಂದಿದಂತೆ ನಮ್ಮೂರು ಲವಲವಿಸಿ ತವಕದಿಂದ, ಸುಪ್ರಸನ್ನತೆಯಿಂದ, ಮೆರೆಯಿತು. ಹೋದ ಶ್ವಾಸವೆಲ್ಲ ಮರಳಿ ತುಂಬತೊಡಗಿತು. ವಕೀಲರು ಹೊಸ ಅಂಗಿಗಳನ್ನು ಹೊಲಿಸಿದರು. ಗುಮಾಸ್ತರು ಅಂಗಡಿ ಚಾವಡಿಗಳಿಂದ ವಕೀಲ ಚಾವಡಿಗಳಿಗೆ ಬಂದರು. ಮತ್ತೊಂದೂರಿನಿಂದ ಎಷ್ಟೋ ನೌಕರರು ಇತ್ತ ಬಂದು ಇಲ್ಲಿನ ಬಿಡಾರಗಳಾವುವೂ ಮುಚ್ಚಿರದಂತೆ ನೋಡಿದರು. ಪ್ರತಿ ಶನಿವಾರವೂ ಸಂತೆಗೆ ಪ್ರಾರಂಭವಾಯಿತು. ದೇವಸ್ಥಾನದ ನಗಾರಿಯ ಧ್ವನಿಯು ನಾಲ್ಕು ಮಡಿ ಹೆಚ್ಚಿತು. ದರ್ಶನಪಾತ್ರಿಯ ಗೌರವವು ಹೆಚ್ಚಿ ಅವನ ಬಾಯಿಯಿಂದ ಕನ್ನಡ ಮಾತು ಹೊರಡತೊಡಗಿ, ಮನೆಗೊಬ್ಬರಂತೆ ತಿರುಪತಿಗೆ ಯಾತ್ರಿಕರಾಗಿ ಹೊರಡುವಂತಾಯಿತು. ನಮ್ಮೂರಲ್ಲಿ ಮೊದಲೇ ಎರಡು ವಿದ್ಯಾಶಾಲೆಗಳು, ರಿಜಿಸ್ತ್ರಿ ಆಫೀಸು, ಲೋಕಲ್ ಫಂಡಿನ ಆಫೀಸು, ಫೋರೆಸ್ಟ್ ರೇಂಜರರ ಆಫೀಸು, ಸಬ್ ಮೆಜಿಸ್ಟ್ರೇಟರ ಕಚೇರಿ, ಲೋಕಲ್ ಫಂಡಿನ ಆಸ್ಪತ್ರೆ, ಇಷ್ಟೆಲ್ಲ ಇದ್ದಿತು. ಈಗ ಮುನ್ಸಿಫ್ ಕೋರ್ಟು ಮರಳಿ ಬಂದಿತು. ಇವೆಲ್ಲ ಸೇರಿ ನಮ್ಮೂರು ಬಹಳ ಹೆಮ್ಮೆಯ ಊರೆಂದಾಯಿತು! ಮತ್ತೊಂದೂರಿನ ಪ್ರಸ್ತಾವವನ್ನೇ ಅಂತರಂಗದಲ್ಲಾಗಲಿ, ಬಹಿರಂಗವಾಗಿಯಾಗಲಿ ಯಾರೂ ಎತ್ತುತಿರಲಿಲ್ಲ.

ಆವೂರಿಗೂ ನಮ್ಮೂರಿಗೂ ಮೂರು ಗಾವುದ ಹಾದಿ. ಆ ಕಾಲದ ರಸ್ತೆಗಳಲ್ಲಿ ಅಡ್ಡಾಡಿದವರಿಗೇ ಆ ಹಾದಿಯ ಸುಖ ಗೊತ್ತು. ಅದರಲ್ಲೂ ಬೇಸಿಗೆಯ ಬೇಗೆಯಲ್ಲಿ ಬೇರೆ; ಮಳೆಗಾಲದ ಇರುಳಲ್ಲಿ ಕೆಸರುಗದ್ದೆಯಂತೆ ತೋರುವಾಗ ಬೇರೆ. ಇಂತಹ ಮಾರ್ಗದಲ್ಲಿ ಎರಡೆತ್ತಿನ ಗಾಡಿ ಹತ್ತಿ ರಾತ್ರಿ ಸವಾರಿ ಮಾಡಲಿದ್ದರೆ, ಅದರಲ್ಲೂ ಜತೆಯಲ್ಲಿ ನವವಧು, ಬಳಿಯಲ್ಲಿ ಭಾವ, ರಾತ್ರಿಯಲ್ಲಿ ಹುಣ್ಣಿಮೆಯ ಬೆಳ್ದಿಂಗಳು ಇರುವಾಗ, ನೂರು ಸೂಡಿ ಬೈಹುಲ್ಲಿನ ಹಾಸಿಗೆಯ ಮೇಲೆ ಚೊಕ್ಕವಾಗಿ ಬಿಡಿಸಿದ ಕೇದಗೆಗರಿಯ ಚಾಪೆಯ ಮೇಲಿನ ಆಸನಶಯನಗಳ ವೈಭವ, ಒಂದು ಸಲ ಇಳಿಜಾರು ದೊರೆತೊಡನೆ ಬಂಡಿಯಾಳು ಗಾಡಿ ನಿಲ್ಲಿಸಿ, ಅದರಡಿಯಲ್ಲಿ ಒಂದು ಹಗ್ಗಕ್ಕೆ ಸಿಕ್ಕಿಸಿದ ತುಂಡುಕೋಲನ್ನು ತಿರುಪಿ ಚಕ್ರಗಳಿಗೊಂದು ಮರದ ತುಂಡು ಒತ್ತುವಂತೆ ಮಾಡುವ ವಿಧಾನದಿಂದ ಪುನಃ ಎತ್ತುಗಾಡಿಯೆಳೆದೊಡನೆ ಸವಾರಿಮಾಡುವವರ ದೇಹದಲ್ಲೆಲ್ಲ ಒಂದು ಬಗೆಯ ವಿದ್ಯುತ್ತು ಹರಿದಂತಾಗುವ ರೋಮಾಂಚನಕಾರಿ ಚಮತ್ಕಾರ, ಎತ್ತಿಗೆ ಹುರುಳಿಯಿಡಲು ಅದನ್ನು ಬೇಯಿಸುವ ಖಾಲಿ ಡಬ್ಬಿಗಳು ಗಾಡಿಯ ಕೆಳಗೆ ತೂಗುತ್ತ ಅತ್ತಿತ್ತ ಗೂಟಗಳಿಗೆ ತಗಲಿ ಆಗುವ ಜಾಗಟೆಯ ನಿನಾದಾನಂದ, ನಿದ್ರಿಸಿದಲ್ಲಿ ತೂಕಡಿಸುವ ಹಾಗೆಯೇ ಕಿವಿಯನ್ನು ಇರಿಯುವ ‘ಬೀರಿ’ಯ ಉರುಳಾಟದ ಚೀತ್ಕೃತಿಯ, ಯಾವ ಇಲೆಕ್ಟಿಕ್ ಹೋರ್ನಿಗಿಂತಲೂ ಹೆಚ್ಚಾಗಿ ಆರ್ಭಟಿಸುತ್ತ ಭೂತಗಳನ್ನು ಉಚ್ಚಾಟನೆಗೊಳಿಸಿ, ದಾರಿಯುದ್ದಕ್ಕೂ ಇರುವ ಕಾಡುಗಳಲ್ಲಿನ ಹುಲಿಗಳಲ್ಲಿ ದಿಗಿಲನ್ನು ಹಬ್ಬಿಸುವ ವೈಚಿತ್ರ್ಯ, ಆ ಹೋರ್ನಿನ ಜತೆಗೆ ಸಮತಾನವಾಗಿ ಬಂಡಿಯಾಳಿನ ‘ಓಓ’ ಪಲ್ಲವಿಯ ಆಲಾಪನೆ, ತಾಸಿಗೆ ಮೂರು ಮೈಲುಗಳ ಸರಾಸರಿಯ ನಡಿಗೆಯಿಂದ ಊರಿಂದೂರಿಗೆ ಸೇರುವ ವಿಲಾಸ, ಇದನ್ನೆಲ್ಲ ಬಲ್ಲವರೇ ಬಲ್ಲರು, ಪರಮಾತ್ಮನನ್ನು ಬಲ್ಲವರ ಹಾಗೆ! ಮೆರವಣಿಗೆಯಲ್ಲಿ ಕಾಣುವ ಮದುಮಗನ ಹಾಗೆ ಹಣೆಗೆ ಬಾಸಿಂಗವನ್ನು ಕಟ್ಟಿದಂತೆ ಅಲಂಕಾರಹೊಂದಿ, ಕೊರಳಿಗೆ ಘಂಟಾಮಣಿಗಳ ಸರವನ್ನು ತೊಟ್ಟುಕೊಂಡು, ಗಂಭೀರವಾಗಿ ಸವಾರಿಗಾಡಿಯನ್ನು ಎಳೆವ, ಬೆನ್ನಮೇಲೆ ಮದುಮಗನ ರೇಶ್ಮೆದುಪ್ಪಟದ ಬದಲು ಗೋಣಿಚೀಲವನ್ನು ಹೊದೆದುಕೊಂಡು, ಒಂದು ಕಣ್ಣನ್ನು ಬಂಡಿಯಾಳಿನ ಬಲಗೈಯ ಮೇಲೂ, ಮತ್ತೊಂದನ್ನು ನಡೆವ ಮಾರ್ಗದ ಮೇಲೂ ಇಟ್ಟು, ತಟಪಟವೆಂದು, ಒಡೆಯನ ‘ಓಓ’ ಗಳಿಗೆ ತಾಳ ಹಾಕುತ್ತ ನಡೆವ, ಆ ಬಂಡಿಯೆತ್ತಿನ ಯುಗವೇ ಮಾಯವಾಗಿದೆ. ಮೋಟರಿನಲ್ಲೀಗ ನೂರು ಮೈಲುಗಳನ್ನು ಮೂರು ತಾಸುಗಳಲ್ಲೇ ದಾಟುವಾಗಲಾದರೂ ಅಂದಿನ ಸವಾರಿಗಾಡಿಯ ಪ್ರಯಾಣದ ನೂರು ಮಾರಿನೊಳಗೊದಗುತಿದ್ದ ಸುಖಾನುಭವವು ನಮಗೆ ಈಗ ದೊರೆಯಲಾರದು; ಮೋಟರಿನ ಯುಗ ಮೇಲಾಟದ ಯುಗ, ಬಂಡಿಯ ಯುಗ, ದಂಡಿಗೆಯ ಯುಗ.

ನಮ್ಮೂರಿಗೆ ಮುನ್ಸಿಫ್ ಕೋರ್ಟು ಮರಳಿ ಬರುತ್ತಲೇ ಹೊಸ ಮುನ್ಸಿಫರು ನೇಮಕಹೊಂದಿ ಬಂದರು. ಬಹು ಲಕ್ಷಣವುಳ್ಳವರು; ಸಾಧು; ದೇವಧರ್ಮ ಪಕ್ಷಪಾತಿಗಳು; ಸತ್ಯವನ್ನು ಶೋಧಿಸುವುದರಲ್ಲಿ ಚಾಣಾಕ್ಷರು; ವಯಸ್ಸು ಮೂವತ್ತೈದು; ಎಂ.ಎಲ್; ಆಗಲೇ ಅದು ಮೊದಲನೇ ಸಲ ಹುದ್ದೆ ಪಡೆದವರೆಂದು ಜತೆಯಲ್ಲಿ ತಮ್ಮ ತೀರ್ಥರೂಪರವರನ್ನು (ಸುಮಾರು ಅರುವತ್ತು ವಯಸ್ಸು) ಮಾತ್ರ ಕರೆದುತಂದಿದ್ದರು. ಹೆಚ್ಚಿನ ಆಡಂಬರದವರಲ್ಲ; ದವಲತ್ತಿನವರಲ್ಲ. ಒಂದು ಸಾಲಿಗ್ರಾಮ, ತಿರುಪತಿ ವೆಂಕಟರಮಣನದೊಂದು ಚಿನ್ನದ ಪ್ರತಿಮೆ, ಅದರ ಅಲಂಕಾರಗಳು, ಪೂಜಾಸಾಮಗ್ರಿಗಳು, ಎರಡು ಸಲಕ್ಕೆ ಬೇಕಾಗುವಷ್ಟು ಉಡುಪು, ಇಬ್ಬರಿಗೆ ಬೇಕಾಗುವಷ್ಟು ಹಾಸು, ಎರಡು ಕೊಡೆಗಳು, ಎರಡು ಊರುಗೋಲುಗಳು ಇಷ್ಟೇ ಅವರ ಸೊತ್ತು. ಮತ್ತೊಂದು ಪೆಟ್ಟಿಗೆಯಲ್ಲಿ ತುಂಬ ಗ್ರಂಥಗಳು; ದಪ್ಪವಾದವು, ಎಂ.ಎಲ್. ಪರೀಕ್ಷೆಗಾಗಿ ಮುನ್ಸಿಫರು ಓದಿದ ಗ್ರಂಥಗಳು; ಇತರ ಗ್ರಂಥಗಳಲ್ಲಿ ತತ್ವಜ್ಞಾನಕ್ಕೂ, ಬ್ರಹ್ಮಜ್ಞಾನ (Theosophy)ಕ್ಕೂ ಸಂಬಂಧಪಟ್ಟ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಯವು.

ರಾಯರು ಚಿತ್ತೈಸುವರೆಂದು ತಿಳಿಯುತ್ತಲೇ ದೇವಸ್ಥಾನದ ಬಿರುದಾವಳಿಗಳಿಂದ ಹಿಲಾಲು, ದೀವಟಿಗೆ, ಬೆತ್ತ, ಛತ್ರ, ಚಾಮರ, ದಂಡಿಗೆ ಮೊದಲಾದುವುಗಳಿಂದ ದೇವಸ್ಥಾನದ ಹತ್ತು ಸಮಸ್ತರೂ, ಕೋರ್ಟಿನ ನೌಕರರೂ, ವಕೀಲರುಗಳೂ, ಇತರ ಸರಕಾರಿ ಹುದ್ದೇದಾರರೂ ಅವರನ್ನು ಎದುರುಗಾಣಿಸಿಕೊಂಡು, ದೇಗುಲದ ಸೇವೆಯ ವಾದ್ಯಗಾರರ ಸಂಗೀತದೊಡನೆ ಅವರ ನಿಲಯಕ್ಕೆ ಸಂಭ್ರಮವಾಗಿ ತಂದು ತಲಪಿಸಿದರು. ನಮ್ಮೂರ ಜನರಲ್ಲಿ ಎಲ್ಲ ಗಣನೀಯರಾದವರ ಪರಿಚಿತಿ ಮಾಡಿಕೊಂಡ ಬಳಿಕ ರಾಯರು ತಮ್ಮ ನಿತ್ಯದ ದೇವಾರಾಧನೆಗೂ ಪಿತೃದೇವನ ಶುಶ್ರೂಷೆಗೂ ಮನವೊಲಿದರು. ಭೋಜನಾನಂತರದಲ್ಲಿ ಬ್ರಹ್ಮಜ್ಞಾನವನ್ನೋದುತ್ತ ಕುಳಿತರು.

ನಮ್ಮೂರವರ ಲಕ್ಷಣವೆಂದರೆ, ಒಂದು ಆಣೆಯನ್ನು ಒಂದು ರೂಪಾಯಿಯಷ್ಟು ಸೂಕ್ಷ್ಮವಾಗಿ ವ್ಯಯಿಸುವುದು. ಪ್ರತಿಯೊಂದು ಮರವನ್ನು ಕಲ್ಪವೃಕ್ಷವೆಂದು ಇವರು ಪ್ರತ್ಯಕ್ಷವಾಗಿ ತೋರಿಸಿಕೊಡುವವರು. ಒಂದು ಬಾಳೆಹಣ್ಣಿನಿಂದ ಮೂರು ಬಗೆಯ ರುಚಿಕರವಾದ ಪಲ್ಯ ಮಾಡುವವರು. ಯುಗಾದಿಯ ದಿನ ಮಾತ್ರವಲ್ಲದೆ ಮತ್ತೆಂದೂ ಹೊಸ ಬಟ್ಟೆಬರೆಗಳನ್ನು ಕೊಂಡುಕೊಳ್ಳದವರು. ಇಂತಹವರಲ್ಲಿ, ಈ ದಿವ್ಯ ಸಾಮಾನ್ಯತೆಯುಳ್ಳ ಮುನ್ಸಿಫರು ನೆಲೆಗೊಳ್ಳುವಂತಾದುದು ಅಪೂರ್ವ ಪುಣ್ಯದ ಫಲ. ನ್ಯಾಯಸ್ಥಾನದಲ್ಲಂತೂ ಬಲು ನಮ್ರರಾಗಿ, ಶಾಂತರಾಗಿ, ಮೃದುನುಡಿ ವಿನಯಾದಿಗಳಿಂದ ಕೋರ್ಟಿನಲ್ಲಿ ವ್ಯವಹಾರವಿರುವ ಸಮಸ್ತರನ್ನೂ ಒಲಿಸಿಕೊಂಡರು. ಕೋರ್ಟಿನಲ್ಲಾದರೂ ವ್ಯಾಜ್ಯದಲ್ಲಿ ಅವಗುಣ ಹೊಂದಿದ ಕಕ್ಷಿಗಾರರು ಸಹ ರಾಯರ ನ್ಯಾಯಬುದ್ಧಿಯನ್ನು ಕೊಂಡಾಡುತ್ತಿದ್ದರೇ ವಿನಾ, ಒಂದೇ ಒಂದು ಎದುರುಮಾತು ರಾಯರ ವಿಚಾರದಲ್ಲಿ ಊರಲ್ಲಿ ಕೇಳಿಸುತ್ತಿರಲಿಲ್ಲ.

ವಿದ್ಯೆಯಲ್ಲಿ ಹೆಚ್ಚಾಗಿ ಬ್ರಾಹ್ಮಣರೇ ಮುಂದರಿದ ಆ ಕಾಲದಲ್ಲಿ ನಮ್ಮೂರ ಸರಕಾರಿ ಆಫೀಸುಗಳಲ್ಲೆಲ್ಲ ಬ್ರಾಹ್ಮಣರೇ ಅಧಿಕಾರಿಗಳಾಗಿಯೂ ನೌಕರರಾಗಿಯೂ ಇದ್ದರು. ರಾಯರು ಕ್ಲಪ್ತವಾಗಿ ಹನ್ನೊಂದು ಘಂಟೆಗೆ ಕೋರ್ಟಿನಲ್ಲಿ ಸಿಂಹಾಸನವನ್ನೇರುವರು. ಐದು ಹೊಡೆದಾಗ ಅಂದಿನ ವಿಚಾರಣೆಯನ್ನು ಅಲ್ಲೇ ಮುಗಿಸಿ, ಕೆಳಗಿಳಿದು ಕೋರ್ಟನ್ನು ಮುಚ್ಚಿಸಿ, ಸ್ವಲ್ಪ ಲಘು ಆಹಾರವನ್ನು ಸ್ವೀಕರಿಸಿ ದೇವಸ್ಥಾನದ ಮಾಳಿಗೆಯೊಂದರಲ್ಲಿ ಆಸೀನರಾಗುವರು. ಅಧಿಕಾರಿ ವರ್ಗದವರೇ ಮೊದಲಾಗಿ, ಅಂಗಡಿಗಾರರು, ಮೊಕ್ತೇಸರರು, ವಕೀಲರು, ಉಪಾಧ್ಯಾಯರು ಇತ್ಯಾದಿ ಎಲ್ಲರೂ ಅತ್ತ ಬರುವರು. ಚಿಕ್ಕದೊಂದು ಸಭೆಯಂತಾಗುವುದು. ರಾಯರು ಅಂದಿನ ವೃತ್ತಾಂತ ಪತ್ರಿಕೆಯಿಂದ ಪ್ರಪಂಚದ ವಿಚಾರಗಳನ್ನು ಸಭಿಕರಿಗೆ ತಿಳಿಸಿ, ಕ್ರಮೇಣ ಥಿಯೊಸೊಫಿಯ (ಬ್ರಹ್ಮಜ್ಞಾನದ) ವಿಚಾರ ಮಾತನಾಡುವರು. ಎಂ.ಎಲ್. ಪಾಸಾದ, ಇಂಗ್ಲಿಷ್ ಬಲ್ಲ ರಾಯರು ಶಾಸ್ತ್ರವನ್ನು ಜ್ಞಾನಕ್ಕೆ ಸರಿಯಾಗಿ ಹೊಂದಿಸಿಕೊಂಡು ವಿವರಿಸುವಾಗ ಸಭಿಕರು ಬಾಯ್ತೆರೆದು ಸೈಯೆನ್ನುವರು. ಅಂತೂ ಅಲ್ಲಿಂದಲೇ ಒಂದು ಬ್ರಹ್ಮಜ್ಞಾನ ಸಂಘದ ಶಾಖೆಯನ್ನು ಸ್ಥಾಪಿಸುವಂತೆ ಸರ್ವಾನುಮೋದಿತವಾದ ಸೂಚನೆ ಹೊರಟಿತು.

ಮೂರ್ಛಿತವಾದ ದೇಹದಲ್ಲಿ ಪುನಃ ಚೇತನವು ಸಂಚಾರ ಹೊಂದಿದಂತೆ ನಮ್ಮೂರು ಲವಲವಿಸಿ ತವಕದಿಂದ, ಸುಪ್ರಸನ್ನತೆಯಿಂದ, ಮೆರೆಯಿತು. ಹೋದ ಶ್ವಾಸವೆಲ್ಲ ಮರಳಿ ತುಂಬತೊಡಗಿತು. ವಕೀಲರು ಹೊಸ ಅಂಗಿಗಳನ್ನು ಹೊಲಿಸಿದರು. ಗುಮಾಸ್ತರು ಅಂಗಡಿ ಚಾವಡಿಗಳಿಂದ ವಕೀಲ ಚಾವಡಿಗಳಿಗೆ ಬಂದರು.

ಕೋರ್ಟು ಕಛೇರಿಗಳಲ್ಲಿ ವ್ಯವಹರಿಸುತ್ತಿದ್ದ ವಕೀಲರೆಲ್ಲರೂ ಮೆಂಬರರಾದರು. ಅಧಿಕಾರಿಗಳಾಗಿದ್ದ ಬ್ರಾಹ್ಮಣರಂತೂ ಮುಂದಾಗಿ ಸಂಘವನ್ನು ಸೇರಿಕೊಂಡರು. ಬಾಂಧವ್ಯದ ಮಾತು ಎಂದ ಬಳಿಕ, ಇತರ ಜಾತಿಗಳವರೂ ಸದಸ್ಯರಾಗಲು ಹಿಂತೆಗೆಯಲಿಲ್ಲ. ದೇವಸ್ಥಾನಕ್ಕೆ ಹೋಗುತ್ತಿದ್ದವರ ಸಂಖ್ಯೆ ಬಹಳವಾಯಿತು. ದೇವಸ್ಥಾನವೂ ವಿನಿಯೋಗಗಳಲ್ಲಿ ಶುದ್ಧವಾಗಲೂ, ಭಕ್ತರಿಗೆ ಆಕರ್ಷಕವಾಗಲೂ ತೊಡಗಿತು. ಊರಲ್ಲಿ ತಿಂಗಳಿಗೆ ಇಪ್ಪತ್ತೈದು ರೂಪಾಯಿ ಉತ್ಪನ್ನ ಅಥವಾ ವೇತನವುಳ್ಳ ಪ್ರತಿಯೊಬ್ಬನೂ ಥಿಯೊಸೊಫಿಸ್ಟನಾದನು. ವಾಮನ ಪಂಡಿತನ ಭಗವದ್ಗೀತೆಯನ್ನು ನಾಲ್ಕು ತಿಂಗಳ ತನಕ ಪ್ರತಿನಿತ್ಯ ಓದಿ ಅರ್ಥಹೇಳಲು ಒಂದು ವ್ಯವಸ್ಥೆಯಾದುದರಿಂದ ಆ ವರ್ಷದಲ್ಲಿ ಮಳೆಗಾಲವು ಹೇಗೆ ಕಳೆಯಿತೆಂದು ಯಾರಿಗೂ ತಿಳಿಯದಂತಾಯಿತು. ಹಿಂದೂ ಧರ್ಮಶಾಸ್ತ್ರದ ಗ್ರಂಥಗಳಲ್ಲಿ ಒಂದೆರಡು, ಅಥವಾ ಎನಿ ಬೆಸೆಂಟರು ಆಗಲೇ ಪ್ರಕಟಿಸಿದ ಭಗವದ್ಗೀತೆಯ ಪುಸ್ತಕದ ಒಂದು ಪ್ರತಿಯು, ಪ್ರತಿಯೊಂದು ಮನೆಯಲ್ಲೂ ಉತ್ತಮ ಸ್ಥಾನವನ್ನು ಅಲಂಕರಿಸಿತು.

ಜಿಲ್ಲಾ ಜಡ್ಜರು ಈ ಕೋರ್ಟಿನ ಕೆಲಸವನ್ನೆಲ್ಲ ತನಿಖೆ ಮಾಡಿ ಅತ್ಯುತ್ತಮವಾಗಿದೆ ಎಂದು ಹೇಳುತ್ತ, ತಾವು ಟೆನ್ನಿಸ್ ಪ್ರಿಯರಾದುದರಿಂದ ಕೋರ್ಟಿನಲ್ಲಿನ ಪರಿಶ್ರಮದಿಂದ ಮೆದುಳು ದಣಿದವರಿಗೆ ಆಡುವುದಕ್ಕಾಗಿ ಒಂದು ಟೆನ್ನಿಸ್ ಕೋರ್ಟನ್ನೂ ಇಲ್ಲಿ ತೆರೆದರೆ ಉತ್ತಮವೆಂದು ಮುನ್ಸಿಫರಿಗೆ ಸೂಚಿಸಿದರು.

ಮಾರನೆಯ ದಿನವೇ, ಅತ್ತಿತ್ತ ಚಲಾವಣೆಯಾಗುತ್ತಿದ್ದ ಗಾಡಿಗಳನ್ನೂ ಎತ್ತುಗಳನ್ನೂ ಕೋರ್ಟು ಅಂಗಳದಲ್ಲಿ ರಾತ್ರಿ ವೇಳೆ ಇನ್ನು ಇರಬಾರದಾಗಿ ಅಪ್ಪಣೆ ಕೊಡಿಸಿ ಅಲ್ಲೇ ಟೆನ್ನಿಸ್ ಕೋರ್ಟನ್ನು ನಿರ್ಮಾಣ ಮಾಡಲಾಯಿತು. ಮುನ್ಸಿಫರೂ, ಡಾಕ್ಟರರೂ, ಹೆಡ್ ಮಾಸ್ತರರೂ, ಬಿ.ಎ., ಬಿ.ಎಲ್. ಕಲಿತ ವಕೀಲರೂ, ಕಾಲೇಜು ತರಗತಿಗಳಲ್ಲಿ ಕಲಿತು ರಜಾ ಕಾಲದಲ್ಲಿ ಮನೆಗೆ ಮರಳಿದ್ದ ಹಲವು ವಿದ್ಯಾರ್ಥಿಗಳೂ, ಎಲ್ಲರೂ ಒಂದೊಂದು ಬೇಟನ್ನು ಹಿಡಿದುಕೊಂಡು ಅದೊಂದು ಬಗೆಯ ಟೆನ್ನಿಸ್ ಆಟವನ್ನು ಸಾಯಂಕಾಲ ಆಡುವ ವ್ಯವಸ್ಥೆಯಾಯಿತು. ದೀಪ ಹಚ್ಚುವ ವೇಳೆ, ಸಾಯಂ ಸಂಧ್ಯೆಯ ಹೊತ್ತಿಗೆ, ಎಲ್ಲರೂ ದೇವಸ್ಥಾನಕ್ಕೆ ತೆರಳಿ, ಅಲ್ಲಿ ಬ್ರಹ್ಮಜ್ಞಾನ ಸಂಘದ ಆಶ್ರಯದಲ್ಲಿ ಒಂದು ತಾಸನ್ನಾದರೂ ಕಳೆದು ಮನೆಗೆ ಮರಳುವಂತಾಯಿತು. ಹೀಗೆ ಮುನ್ಸಿಫ್ ಕೋರ್ಟು ಮರಳಿ ಬಂದಂದಿನಿಂದ ದೇಹಾರೋಗ್ಯವೂ ಮಾನಸಿಕ ಆರೋಗ್ಯವೂ ಬೆಳೆಯಲು ಉತ್ತಮವಾದ ಅವಕಾಶವುಂಟಾಯಿತು.

ಇದೇ ರೀತಿಯಾಗಿ ಒಂದು ಸಂವತ್ಸರವು ಕಳೆಯಿತು. ಇಪ್ಪತ್ತು ವರ್ಷಗಳಲ್ಲಿ ನಮ್ಮೂರು ಅನುಭವಿಸಿದ್ದ ಸಂಕಷ್ಟಗಳೆಲ್ಲವೂ ಇದೊಂದು ಸಂವತ್ಸರದೊಳಗಾಗಿ ಮಾಯವಾಗಿ, ಆ ಸಂಕಷ್ಟಗಳು ಉಂಟಾಗಿಸಿದ್ದ ಗಾಯಗಳೂ ಮಾಯುತ್ತ ಬಂದುವು. ಆದರೆ ಅಷ್ಟರಲ್ಲೇ ರಾಯರಿಗೆ ಯಾವುದೋ ಒಂದು ತೆಲುಗು ಜಿಲ್ಲೆಗೆ ವರ್ಗವಾಯಿತು! ನಮ್ಮೂರು ಅಸಹನೀಯವಾದ ಸಂತಾಪ ತಳೆಯಿತು. ಆದರೆ ಹೊಸ ರಾಯರು ಸಹ ಬ್ರಹ್ಮಜ್ಞಾನಿಗಳು, ಟೆನ್ನಿಸ್ ಪ್ರಿಯರು ಎಂಬುದನ್ನು ತಿಳಿದು ಆ ಸಂತಾಪವು ಕಡಿಮೆಯಾಯಿತು. ಅಂತೂ ಇಬ್ಬರೂ ರಾಯರುಗಳನ್ನು ತಮ್ಮೊಡನೆ ಕುಳ್ಳಿರಿಸಿಕೊಂಡು ಊರ ಮುಖಂಡರು (ಬ್ರಹ್ಮಜ್ಞಾನಿಗಳೇ ಮೊದಲಾಗಿ) ಒಂದು ಫೋಟೋ ಚಿತ್ರವನ್ನೆತ್ತಿಸಿಕೊಂಡರು. ರಾಯರು ವರ್ಗವಾದ ಪರವೂರಿಗೆ ಹೊರಡುವುದೆಂದಾಯಿತು.

ಇಂದು ಹೊರಡದೆ ಉಪಾಯವಿಲ್ಲ. ರಾಯರು ಬರುವಾಗ ತಂದುದೇನೋ ಅದನ್ನೆಲ್ಲ ಮೂಟೆ ಕಟ್ಟಿದ್ದಾಯಿತು. ಅಮಾವಾಸ್ಯೆಯಾದರೇನು? ಸವಾರಿಗಾಡಿ ಸಿದ್ಧವಾಗಿರುವಾಗ ಊರಿಂದ ಹೊರಡಲು ಹೆದರಬೇಕೆ? ಊರ ಹತ್ತು ಸಮಸ್ತರು, ಬ್ರಹ್ಮಜ್ಞಾನ ಸಂಘದ ಸದಸ್ಯರು, ದೇವಸ್ಥಾನದ ಮೊಕ್ತೇಸರರು, ಮುಖ್ಯ ವರ್ತಕರು ಇತ್ಯಾದಿಯಾಗಿ ಸಮಸ್ತರೂ ಅವರನ್ನು ಊರ ಗೇಟಿನ ತನಕ ಕಳುಹಿಸಿಕೊಟ್ಟರು. ರಾತ್ರಿಯೂಟವಾದ ಬಳಿಕ ತಾನೇ ಹೊರಟುದು! ಅದರಲ್ಲೂ ಅವರಿವರೊಡನೆ ಮಾತನಾಡುತ್ತ, ಬ್ರಹ್ಮಜ್ಞಾನ ಸಂಘವನ್ನು ಸರ್ವರೂ ಕಾಪಾಡಿ ಬರಬೇಕೆಂದು ಹೇಳಿ, ಪ್ರತಿಯೊಬ್ಬರಿಂದ ವಾಗ್ದಾನ ಪಡೆದು ಮುನ್ನಡೆವಾಗ, ಅದು ಅಮಾವಾಸ್ಯೆಯೆಂಬುದು ತಿಳಿಯದವರಿಗೂ ಚೆನ್ನಾಗಿ ತಿಳಿದು ಬರುವಂತಿದ್ದಿತು. ಹೇಗೋ ರಾಯರೂ ಅವರ ತೀರ್ಥರೂಪರೂ ಸವಾರಿ ಗಾಡಿಯಲ್ಲಿ ಮಂಗಳೂರನ್ನು ಸೇರಿ ಅಲ್ಲಿಂದ ಹೊಸ ಊರಿಗೆ ಪ್ರಯಾಣ ಮಾಡುವುದಕ್ಕಾಗಿ ಮುಂಬರಿದರು.

ನಮ್ಮೂರಿನಿಂದ ಮೂರು ಗಾವುದ ದೂರದಲ್ಲಿರುವ ಆವೂರನ್ನು ಹಾದು ಮಂಗಳೂರಿಗೆ ಗಾಡಿ ಚಲಿಸುವುದು. ಆವೂರಿಗೆ ತಲುಪಲು ಇನ್ನೆರಡು ಮೈಲುಗಳಿವೆ; ಅಷ್ಟರಲ್ಲಿ, ಗಾಡಿಯ ಬದಿಯಲ್ಲಿ ಯಾರೋ ಸುಳಿದಂತಾಯಿತು. ಅದಾದ ಐದೇ ನಿಮಿಷಗಳಲ್ಲಿ ಗಾಡಿಯ ಎಡ ಚಕ್ರವು ತಪ್ಪಿತು; ಗಾಡಿ ವಾಲುತ್ತ ದಡಲ್ಲನೆ ಮಾರ್ಗದ ಮೇಲೆ ಬಿದ್ದಿತು! ಅದೊಂದು ಚಕ್ರಕ್ಕೆ ಸಿಕ್ಕಿಸಿದ ಕೀಲೇ ಇದ್ದಿಲ್ಲ! ಗಾಡಿಯೊಳಗೆ ಕೂತಿದ್ದವರು ಆಕಾಶದ ಮೇಲೆ ಮಲಗಿದ್ದಂತೆ ಭಾವಿಸುವಂತಾಯಿತು! ಅವರಿಗೆ ಇತರ ಯಾವ ಪೆಟ್ಟೂ ಆಗದಂತೆ 250 ಸೂಡಿ ಬೈಹುಲ್ಲಿನ ಹಾಸೇ ಅವರನ್ನು ಕಾಪಾಡಿತು. ಗಾಡಿಯವನು ಎತ್ತುಗಳ ಕೊರಳ ಹಗ್ಗವನ್ನು ಬಿಡಿಸಿದನು. ತನ್ನದೊಂದು ಕೈಯಲ್ಲಿ ಬಾರುಕೋಲನ್ನೂ ಮತ್ತೊಂದರಲ್ಲಿ ಒಂದು ಕತ್ತಿಯನ್ನೂ ಧರಿಸಿದನು. ಗಾಡಿಗೆ ತೂಗಿದ್ದ ಲಾಟಾನು ಆಗ ಒಡೆದು ಹೋಗಿದ್ದಿತು. ಎತ್ತೆತ್ತಲೂ ಕತ್ತಲು!

ಗಾಡಿಯಿಂದ ಸಾಮಾನಿನ ಎರಡು ಗಂಟುಗಳನ್ನು ಗಾಡಿಯವನು ಹೊತ್ತನು; ಪೂಜಾದೇವರ ಕರಡಿಗೆಯನ್ನು (ಸುಮಾರು 2000 ರೂಪಾಯಿಯ ಸೊತ್ತು) ರಾಯರೇ ಹಿಡಿದುಕೊಂಡರು; ತೀರ್ಥರೂಪರು, ಪಾಪ, ಹಣ್ಣು ಮುದುಕರು, ರಾಯರ ಕೈ ಹಿಡಿದು ಮುಂಬರಿದರು. ದೂರದಲ್ಲಿ ಕಾಣುತಿದ್ದ ದೀಪದ ಕಡೆಗೆ ಗಾಡಿಯವನು ಅವರನ್ನು ಕರೆದೊಯ್ದನು. ಎತ್ತುಗಳು ಅವನ ಬೆನ್ನಹಿಂದೆಯೇ, ಗುಲಾಮರಂತೆ ಕಾಲಿಟ್ಟುವು. ಎಂತೂ, ದೀಪವಿರುವಲ್ಲಿಗೆ ಎಲ್ಲರೂ ಬಂದು ತಲಪಿದರು.

ಅದು ಆವೂರು ಭಾಗವತರ ಅಂಗಡಿಯ ದೀಪದ ಬೆಳಕಾಗಿದ್ದಿತು. ಪ್ರಯಾಣಿಕರನ್ನು ಕಾಣುತ್ತಲೇ, ಅಲ್ಲಿದ್ದ ನಾಲ್ಕಾರು ಜನಗಳನ್ನು ಸರಿಯ ಹೇಳಿ, ಕಂಬಳಿ ಹಾಸಿದನು. ಪ್ರಯಾಣಿಕರು ಕಂಬಳಿಯ ಮೇಲೆ ಕೂತರು; ತಮ್ಮ ಸಾಮಾನನ್ನು ಅಲ್ಲೇ ಮಡಗಿದರು.

ಮಾತು ನಡೆಯಿತು. ಗಾಡಿಯವನು ಎಲ್ಲವನ್ನೂ ವಿವರಿಸಿದನು. ಗಾಡಿಗೊಂದು ಕೀಲನ್ನು ಒದಗಿಸಿದರೆ, ಮತ್ತೊಂದು ಲಾಟಾನೂ ದೊರೆತರೆ, ಅವನು ಪ್ರಯಾಣಿಕರನ್ನು ಸುರಕ್ಷಿತವಾಗಿ ಮಂಗಳೂರಿಗೆ ಕೊಂಡೊಯ್ಯುವನಂತೆ. ಆದರೆ,

ಆದರೆ, ಅಂದೇ ಆ ಅಂಗಡಿಯ ಜಗಲಿಯ ಮೇಲೆ, ಆವೂರಲ್ಲಿ ಹರಡಿದ್ದ ಒಂದು ವಾರ್ತೆಯ ಪ್ರಸ್ತಾವವೂ ಚರ್ಚೆಯೂ ನಡೆದಿದ್ದಿತು. ಮೂರು ವರ್ಷಗಳ ಹಿಂದೆ ಕಣ್ಣಾನೂರು ಜೈಲಿಗೆ ರವಾನೆಯಾಗಿದ್ದ ಕೇಡಿ ಬೊಗ್ಗುವು ಅದೇ ವಾರದಲ್ಲಿ ಬಿಡುಗಡೆ ಹೊಂದಿ ಆವೂರಿಗೆ ಬಂದಿದ್ದಾನೆಂದೂ, ನಿನ್ನೆ ಮೊನ್ನೆ ಒಂದೆರಡು ಕಳವುಗಳಾಗಿದ್ದುವೆಂದೂ, ಇನ್ನು ಸರ್ವರೂ ಅತಿ ಜಾಗರೂಕತೆಯಿಂದಿರಬೇಕೆಂದೂ, ಅಲ್ಲಿ ಎಲ್ಲರಲ್ಲಿ ದಿಗಿಲು ಉಂಟಾಗಿದ್ದಿತು. ಅಮಾವಾಸ್ಯೆಯೇ ಕನ್ನ ಹಾಕುವವರಿಗೆ ಅತ್ಯಪೂರ್ವ ಸಂದರ್ಭವೆಂದೂ, ಅದೇ ರಾತ್ರಿ ಅವನು ಎಲ್ಲಿಯಾದರೂ ಕಳವು ಅಥವಾ ದರೋಡೆ ಮಾಡದೆ ಇರನೆಂದೂ ಮಾತು ನಡೆದಿದ್ದಿತು. ಬೊಗ್ಗು ಆವೂರಿನವನಲ್ಲ; ಆದರೆ ಮಂಗಳೂರಿನಿಂದ ತನ್ನೂರಿಗೆ ಹೋಗುವಾಗ, ಅವನ ಪದ್ಧತಿಯಂತೆ ಆವೂರಲ್ಲಿ ತನ್ನ ಕೈಚಳಕ ತೋರಿಸದೆ ಇರಲಾರನೆಂದು ಎಲ್ಲರೂ ನಂಬಿದ್ದರು. ಹೀಗಾಗಿ, ಭಾಗವತರು, ಪ್ರಯಾಣಿಕರಿಗೆ ಪ್ರಯಾಣ ಮಾಡುವುದಕ್ಕಾಗಲಿ, ತನ್ನಲ್ಲಿರುವುದಕ್ಕಾಗಲಿ, ಯಾವ ಅಭಿಪ್ರಾಯವನ್ನೂ ಸೂಚಿಸದೆ ಮೌನವಾಗಿದ್ದರು. ಗಾಡಿಯವನು ಏನು ಮಾಡುವುದಕ್ಕೂ ದಿಕ್ಕು ತೋಚದಾದನು. ರಾಯರು, “ಎಲ್ಲವೂ ದೈವೇಚ್ಛೆ”, ಎಂದು ಸುಮ್ಮನಾದರು. ರಾಯರ ತೀರ್ಥರೂಪರು, ‘ನಾವಿಲ್ಲೇ ಬಿದ್ದುಕೊಳ್ಳುವ. ಇದೊಂದು ಕರಡಿಗೆ ಪೂಜಾವಿಗ್ರಹದ್ದು. ಅದನ್ನು ತಲೆಗಿಂಬಾಗಿಟ್ಟುಕೊಳ್ಳೋಣ’ ಎಂದರು. “ಹಾಗಿದ್ದರೆ, ಪಠೇಲರಲ್ಲಿ (ನನ್ನ ಪರಿಚಿತಿಯುಳ್ಳವರು) ನಾನು ಇಂದು ರಾತ್ರಿ ಕಳೆದು, ಬೆಳಿಗ್ಗೆ ಗಾಡಿ ದುರಸ್ತಿ ಮಾಡಿಕೊಂಡು ಇತ್ತ ಬರುವೆನು” ಎಂದು ಗಾಡಿಯವನು ಅರಿಕೆ ಮಾಡಿಕೊಂಡು, ಇನ್ನು ಅಲ್ಲಿರದೆ, ಸಮಾಧಾನಚಿತ್ತರಾದ ರಾಯರ ಅಪ್ಪಣೆ ಪಡೆದು ಹೊರಟನು. ಎತ್ತುಗಳನ್ನು ಅಂಗಡಿಗೆ ಸಮೀಪವಾಗಿ ಬೆಳೆದ ಎರಡು ಮರಗಳಿಗೆ ಕಟ್ಟಿದ್ದಾಯಿತು. ಭಾಗವತರು ಪ್ರಯಾಣಿಕರಿಗೆ ಒಂದು ದೀಪವನ್ನು ತಂದಿಟ್ಟು, ಏನಾದರೂ ಸಿಹಿಯಾಳ, ಬಾಳೆಹಣ್ಣು, ಅವಲಕ್ಕಿ ಇತ್ಯಾದಿ ಬೇಕಾಗಬಹುದೋ ನೋಡೋಣ ಎಂದು ಕೂತರು. ಹೀಗೆ ಜಗಲಿಯಲ್ಲಿ ಉಳಿದವರೆಂದರೆ ಇವರೇ ಮೂವರು.

ಪ್ರಯಾಣಿಕರು ಯಾರು ಏನೆಂಬುದು ಭಾಗವತರಿಗೆ ಗಾಡಿಯವನಿಂದ ತಿಳಿದೇ ಇದ್ದಿತು. ನಡುರಾತ್ರಿಗೆ ಸಮೀಪವಾಗಿ ಬರುತಿತ್ತು. ‘ಇನ್ನು ಇವರು ನಿದ್ದೆ ಹೋಗಲಿ. ಹತ್ತಿರವೇ ತಾನೂ ಇರುವೆನು. ತನಗೂ ಬೆಂಬಲಕ್ಕೆ ಇವರಾದರು. ಎಲ್ಲಿಯಾದರೂ ಕೇಡಿಯು ಇಲ್ಲಿಗೆ ಬಂದರೆ? ಗಾಡಿಯ ಚಕ್ರದ ಕೀಲನ್ನು ಕಿತ್ತವನಾರು? ಅವನೇ ಆಗಿರಬೇಕು! ಮುನ್ಸಿಫರು ಪ್ರಯಾಣ ಮಾಡುವ ಸೋವು ಅವನಿಗೆ ತಿಳಿದಿರಬೇಕು’ ಇತ್ಯಾದಿಯಾಗಿ ಭಾಗವತರು ಭಾವಿಸಿದರು. ಇನ್ನು ಭಾಗವತರೂ ನಿದ್ದೆ ಹೋಗುವುದೆಂದಾಯಿತು; ರಾಯರೂ ಮುದುಕನೂ ಮಲಗಿಕೊಂಡಿದ್ದರು.

ಅಷ್ಟರಲ್ಲಿ ನಡು ಹರೆಯದ, ಕಿರುದೋತರವನ್ನುಟ್ಟ, ತುಂಡಂಗಿತೊಟ್ಟ, ತಲೆಗೊಂದು ಮುಟ್ಟಾಳೆಯನ್ನಿಟ್ಟುಕೊಂಡ, ಗಟ್ಟಿಮುಟ್ಟಾದ, ಧಾಂಡಿಗನೊಬ್ಬನು ಅತ್ತ ಬಂದನು. ಅವನು ಬರುತ್ತಲೇ, ಮೂವರು ಎದ್ದು ಕೂತರು.

ಭಾಗವತರು : “ಯಾರೋ ಅದು?’’
ಬಂದವನು : “ನಾನು”.
ಭಾಗವತರು : “ನಾನು” ಎಂದರೆ?’’
ಬಂದವನು : “ನನ್ನ ಗುರುತಿಲ್ಲವೇ? ನಾನು ಬೊಗ್ಗು”.
ಭಾಗವತರು : “ಏನು ಬೇಕು? ಸಿಹಿಯಾಳ, ಎಲೆ, ಅಡಿಕೆ, ಅವಲಕ್ಕಿ?’’
ಬಂದವನು : “ಅವುಗಳಿಗಾಗಿ ಇಲ್ಲಿಗೆ ಬರಬೇಕೆ? ಮುರಿದ ಗಾಡಿಯಲ್ಲಿದ್ದ ಪ್ರಯಾಣಿಕರು ಇಲ್ಲಿಗೆ ಬಂದುದನ್ನು ತಿಳಿದು, ಇತ್ತ ಬಂದೆ.’’
ರಾಯರು : “ನಮ್ಮಿಂದೇನಾಗಬೇಕು? ಅಥವಾ ನೀನೊಂದು ಹೊಸ ಗಾಡಿ ತರುವೆಯೋ ನಮ್ಮ ಸವಾರಿಗೆ? ಹಾಗಿದ್ದರೆ ಉಪಕಾರ”.
ಬಂದವನು (ನಕ್ಕು) : “ಗಾಡಿಸವಾರಿಯ ಮಾತು ಹಾಗಿರಲಿ. ನಿಮ್ಮ ಬಳಿಯಿರುವ ಹಣವನ್ನು ಇತ್ತ ಕೊಡಿ. ಹಾಗಾದಲ್ಲಿ ತೊಂದರೆ ಇಲ್ಲದೆ, ನಾನು ಹಿಂದೆ ಹೋಗುವೆನು. ಬೇಕಾದಾಗ ಗಾಡಿ ಮಾಡಿಕೊಂಡು ಸವಾರಿ ಮಾಡಿರಿ. ನನ್ನ ಅಡ್ಡಿಯಿಲ್ಲ”.

ರಾಯರು : “ನಮ್ಮ ಬಳಿಯಲ್ಲಿ ಹಣವೇನೂ ಇಲ್ಲವಷ್ಟೆ! ಹಣವನ್ನು ಮೊದಲೇ ನಾವು ಹೋಗುವಲ್ಲಿಗೆ ಕಳುಹಿಸಿದ್ದೇವೆ. ಅಮಾವಾಸ್ಯೆ ರಾತ್ರಿ ಪ್ರಯಾಣ ಮಾಡುವವರು, ನಾವಿಬ್ಬರೇ ಇರುತ್ತಾ, ಹಣದ ಕಂಟಕವನ್ನೂ ಕಟ್ಟಿಕೊಳ್ಳುವೆವೇ? ನಿನಗೆ ಅಷ್ಟು ತಿಳಿಯದೇ? ಇದೋ, ಇದು ನಮ್ಮ ಬಟ್ಟೆ, ಹಾಸುಗೆ, ಇತ್ಯಾದಿ. ಇದು ಪುಸ್ತಕಗಳ ಪೆಟ್ಟಿಗೆ. ಇದು ದೇವರ ಪೂಜೆಯ ಕರಡಿಗೆ.’’

ಬಂದವನು ಒಂದೊಂದನ್ನೇ ಕಣ್ಣಿಟ್ಟು ನೋಡುತ್ತಿದ್ದನು. ಈಗ, ಕರಡಿಗೆಯ ಮೇಲೆ ಕಣ್ಣೂರಿದನು. ಅವನ ದೃಷ್ಟಿಯು ಮುಂದಕ್ಕೆ ಚಲಿಸಲಿಲ್ಲ. ಟಪ್ಪನೆ ಅದನ್ನು ಕಸುಕೊಂಡನು. ಕರಡಿಯೊಳಗೆ ಇದ್ದ ಚಿನ್ನದ ವಿಗ್ರಹ, ಅದರ ರತ್ನಾಭರಣಾದಿಗಳು ಎಲ್ಲವನ್ನೂ ನೋಡಿದನು.

ಭಾಗವತರು : “ಅದೋ, ಬೊಗ್ಗು, ನೀನು ಇತರ ಕಳ್ಳರ ಹಾಗೆ ಕಳ್ಳನಲ್ಲ ಎನ್ನುತ್ತಾರೆ. ದೇವರು, ಧರ್ಮ, ಬಡವರು, ಅನಾಥರು, ಮೊದಲಾದವರಲ್ಲಿ ವಿಶೇಷ ಶ್ರದ್ಧೆಯುಳ್ಳವನಂತೆ. ಊಟ ಹಾಕಿದವರನ್ನು ಮರೆವವನಲ್ಲವಂತೆ. ಧನಿಗಳನ್ನು ಕದ್ದು ದರಿದ್ರರಿಗೆ ಧನ ಕೊಡುವವನಂತೆ. ಅದು ದೇವರ ವಿಗ್ರಹ, ದೇವರ ಆಭರಣಗಳು. ಅವನ್ನು ಕೊಳ್ಳೆಹೊಡೆಯುವುದೇ? ಇಗೋ, ಹೊಟ್ಟೆತುಂಬ ಬೇಕಾದಷ್ಟನ್ನು ನಿನಗೆ ಕೊಡುವೆ. ತಿನ್ನು. ಅವರು ಸರಕಾರದ ಹುದ್ದೇದಾರರು. ಸುಳ್ಳಾಡುವವರಲ್ಲ. ಇವರು ನಾಲ್ಕು ಊರಲ್ಲಿ ಸತ್ಯವಾದಿ ನ್ಯಾಯಶೀಲರೆಂದು ಹೆಸರ್ಗೊಂಡ ಮುನ್ಸಿಫರು. ಇವರು ಅವರ ತಂದೆ. ಮುದುಕರು. ಇಂತಹವರನ್ನು ನೋಯಿಸಬೇಡ. ನಿನ್ನ ಹೆಸರಿನ ಕೀರ್ತಿ ಉಳಿಯಲಿ. ಇಷ್ಟು ವರ್ಷಗಳಿಸಿದ ಹೆಸರನ್ನು ಈಗ ಕಳೆದುಕೊಳ್ಳಬೇಡ. ಅವರದನ್ನು ಅವರಿಗೆ ಕೊಡು. ನಿನಗೆ ಬೇಕಾದುದನ್ನು ಹೊಟ್ಟೆ ತುಂಬ ತಿನ್ನು. ಹಾಗೆ ಬೇಕಾದರೆ ಒಂದು ವರಹ ನಾನೇ ನಿನ್ನ ಸದ್ಯದ ಖರ್ಚಿಗೆ ಕೊಡುತ್ತೇನೆ. ಅಥವಾ ಇಲ್ಲಿಯೇ ಬೇಕಾದರೆ ಮಲಗು. ನಮಗೇನೂ ಬೇಸರವಿಲ್ಲ. ನೀನು ಇತ್ತ ಬರುವೆಯೆಂದು ನಾವು ತಿಳಿದೇ ಇದ್ದೆವು. ಹುಂ.’’

ಭಾಗವತರ ಮಾತು ಕೇಳುತ್ತ ಈ ಕೇಡಿಯು ಇನ್ನಷ್ಟು ಕಠಿಣಚಿತ್ತನಾದನು. ಅವನ ಮಾತುಗಳು ಕರ್ಕಶವಾಗಿ ಹೊರಟುವು: “ನೀವು ಹೇಳಿದ್ದೆಲ್ಲ ನಿಜ, ಆದರೆ ಈಗಲ್ಲ, ಹಿಂದೆ. ನಾನು ಕೇಡಿಯೆಂದು ತಿಳಿದಂದಿನಿಂದ ನನ್ನ ಮೇಲೆ ಇಲ್ಲದ ಅಪರಾಧ ಹೊರಿಸಿ ಜೈಲುಪಾಲು ಮಾಡುತ್ತಿರುವರು. ಈಗ ದೇವಧರ್ಮ ನೋಡುವುದಕ್ಕಿಲ್ಲ. ಬಲಿಷ್ಠನೇ ಗೆಲ್ಲುವನು. ಈ ದೊಣ್ಣೆಯೊಂದೇ ನನಗೆ ದೇವರು. ಈ ದೊಣ್ಣೆಯೊಂದಿದ್ದರೆ ಹೊಟ್ಟೆಯು ಗತಿಗೇಡದು. ಈ ಕರಡಿಗೆ ನನಗೆ ಬೇಕು. ದೇವರು ಧರ್ಮ ಎಂದು ನಂಬಿ ಹಾಳಾದೆ. ಇದರಲ್ಲಿದ್ದುದು ನನಗೆ ನಾಲ್ಕು ವರ್ಷಕ್ಕೆ ಸಾಕು. ಅರಸನಂತೆ ಬಾಳಬಹುದು. ಈಗ ನಡುರಾತ್ರಿಯಾಯಿತು. ಇನ್ನಿಷ್ಟರಲ್ಲೇ ಮರಳುವೆನು. ಆದರೆ ಒಮ್ಮೆಲೇ ಕಠಿನವೆನಿಸಲಾರೆನು. ನೋಡೋಣ; ಇವರನ್ನು ಬಿಟ್ಟರೂ ನನ್ನ ಮೇಲೆ ರುಜುವಾತು ಬಲವಾಗುವುದು. ಆದರೂ ಹೊಸ ಗಾಡಿಯನ್ನು ಕಾದಿದ್ದಂತೆ ಇವರೆಂದರಲ್ಲ? ಹೋಗಲಿ, ಇನ್ನೊಂದು ತಾಸಿನೊಳಗಾಗಿ ಇವರು ಹೊಸ ಗಾಡಿ ತರಲಿ. ಇವರಿಗೆ ಅಪಾಯವೇನೂ ಇಲ್ಲದಂತೆ ಇವರು ಗಾಡಿ ಹತ್ತಿ ಹೋಗಬಹುದು. ನಾನು ಈ ಕರಡಿಗೆಯೊಡನೆ ಮರೆಯಾಗುವೆನು. ಇಲ್ಲದಿದ್ದಲ್ಲಿ ಇವರಿಗೆ ಇಲ್ಲೇ ಬಿದ್ದು ಸಾಯುವ ಹಾಗೆ ಬಡೆಯುವೆನು. ನೀವ್ಯಾರೂ ಮಾತೆತ್ತ ಕೂಡದು. ಅತ್ತಿತ್ತ ಹೋಗಲೂ ಕೂಡದು. ಅಂಗಡಿಯವರೇ! ನೀವು ಈ ಊರಲ್ಲಿ ಪರಿಚಿತರು. ನೀವು ಗಾಡಿ ತರಹೋದರೆ ಪಠೇಲರಲ್ಲಿಗೆ ಅಥವಾ ಇನ್ನೆಲ್ಲಿಗಾದರೂ ಹೋಗಿ ಜನಕೂಡಿಸಿ ತರುವಿರಿ. ಈ ಮುದುಕರಾಗಲಿ ಇವರಾಗಲಿ ಹೋಗಲಿ. ಅವರಿಗೊಂದು ಲಾಟಾನು ಕೊಡಿರಿ. ಒಬ್ಬರು ಹೋಗಲಿ. ಇನ್ನೊಬ್ಬರು ಇಲ್ಲಿ ಇರಲಿ. ಒಂದು ತಾಸಿನೊಳಗೆ ಗಾಡಿ ತಂದರೆ ಅವರಿಬ್ಬರೂ ಸುರಕ್ಷಿತವಾಗಿ ಹೊರಡಲಿ. ಗಾಡಿ ಇಲ್ಲವಾದರೂ ಮರಳದೆ ಇದ್ದರೆ, ಇಲ್ಲಿ ಉಳಿದವರ ಕಾಲು ಮುರಿದು ಹಾಕುವೆನು. ಗಾಡಿ ಇಲ್ಲದೆ ಮರಳಿದರೆ ನೀವು ಮೂವರನ್ನೂ ಇಲ್ಲಿ ಮರಗಳಿಗೆ ಕಟ್ಟಿಹಾಕಿ ಬಾಯಲ್ಲಿ ಬಟ್ಟೆ ತುರುಕಿಸಿಟ್ಟು ಬಾಯಿಕಟ್ಟಿ ಹೊರಡುವೆನು. ಹುಂ, ಇಷ್ಟೆ ನನ್ನ ದಯೆ” ಎಂದು ಕರಾಳ ನಗುವಿನಿಂದ ತಿಳಿಸಿದನು. ಆಕಾಶವನ್ನು ನೋಡಿ, “ಅಲ್ಲೇ ಕಾಣುವ ಆ ದೊಡ್ಡ ನಕ್ಷತ್ರವು ಇನ್ನೊಂದು ತಾಸಿನಲ್ಲಿ ನೆತ್ತಿಗೆ ಬರುವುದು. ಅಷ್ಟರಲ್ಲಿ ಬರಲಿ. ಇಲ್ಲದಿದ್ದಲ್ಲಿ ನಾನು ಹೇಳಿದಂತೆ ಖಂಡಿತವಾಗಿಯೂ ಮಾಡುವೆನು” ಎಂದನು.

ಇನ್ನು ಇವರೇನು ಮಾಡಬಹುದು? ಎಲ್ಲರೂ ಅವಾಕ್ಕಾದರು. ರಾಯರ ಬ್ರಹ್ಮಜ್ಞಾನಕ್ಕೆ ಈಗಲೇ ಪರೀಕ್ಷೆಯ ಕಾಲ. ವಿಧಿ, ಕರ್ಮಫಲ, ಎಲ್ಲವನ್ನೂ ಈಗಲೇ ಪರೀಕ್ಷೆ ಮಾಡಬೇಕೆಂದರು. ಕೇಡಿಯ ಮಾತಿಗೆ ಒಪ್ಪಿದರು. ವೃದ್ಧ ಪಿತನಿಗೆ ಸಮಾಧಾನ ಹೇಳಿ, ಒಂದು ಲಾಟಾನನ್ನು ಉರಿಸಿಕೊಂಡು, ಭಾಗವತರಿಗೆ ಶಾಂತರಾಗಿದ್ದು ಕೇಡಿಗೆ ಬೇಕಾದ ಆಹಾರವನ್ನು ಕೊಡಹೇಳಿ, “ಒಂದು ತಾಸಿನೊಳಗೆ ನನ್ನಂತಹವನು ಬಲು ವೇಗವಾಗಿ ನಡೆದರೂ ಈ ರಾತ್ರಿ ಕಾಲದಲ್ಲಿ ಮೂರು ಮೈಲಿಗೆ ಮಿಕ್ಕಿ ಹೋಗಲಾರನು. ಆದುದರಿಂದ ಇಲ್ಲಿಂದ ಒಂದೂವರೆ ಮೈಲುವರೆಗೆ ಹೋಗುವೆನು. ಗಾಡಿಯೊಂದು ದೈವೇಚ್ಛೆಯಿಂದ ದೊರೆತರಾಯಿತು. ಇಲ್ಲವಾದಲ್ಲಿ, ಹೀಗೆಯೇ ಹಿಂತಿರುಗುವೆನು. ಸುಮ್ಮನೆ ವೃದ್ಧರನ್ನು ಗಂಡಾಂತರಕ್ಕೀಡುಮಾಡುವುದೇ? ಅಂತೂ, ಮಹಾರಾಯಾ, ನಾನು ಬರುತ್ತೇನೆ; ಗಾಡಿ ದೊರೆಯಲಿ, ಇಲ್ಲದಿರಲಿ, ನಾನು ಬರುವ ತನಕ ಮಾತ್ರ ಇವರನ್ನು ಪೀಡಿಸಬೇಡ; ಬಂದ ತರುವಾಯ, ನಿನಗೆ ದೇವರು ಬುದ್ಧಿಕೊಡುವಂತೆ ಮಾಡು”, ಎನ್ನುತ್ತಾ, “ಅಯ್ಯಾ, ನಾವು ಇಷ್ಟು ವರ್ಷವೂ ನಮ್ಮ ಸರ್ವಸ್ವವೆಂದು ಪೂಜಿಸಿದ ದೇವರ ದಯೆ ನಮ್ಮನ್ನು ಕಾಪಾಡುವುದು; ಇದರಲ್ಲಿ ಸಂದೇಹವಿಲ್ಲ. ನನಗೆ ಆಶೀರ್ವಾದವಿರಲಿ”, ಎಂದು ತಂದೆಗೆ ಶರಣು ಬಂದು, ಕೇಡಿಯ ಕೈಗಳಲ್ಲಿದ್ದ ದೇವರ ಕರಡಿಗೆಯನ್ನು ವಂದಿಸಿ, ರಾಯರು ಹೊರಟರು.

ಇತ್ತ ಕೇಡಿಯು ಇವರೊಡನೆ ಮಾತಾಡದೆ ವೀಳೆಯ ಜಗಿಯುತ್ತ, ಇವರಿಬ್ಬರೂ ಮಾತಾಡದಂತೆಯೂ ಪರಸ್ಪರ ಆಡಿಕೊಳ್ಳದಂತೆಯೂ (ಅಂಗಡಿಯ ಹಿಂದೆಯೇ ಮನೆಯಿದೆಯಷ್ಟೆ) ಎಚ್ಚರವಿಟ್ಟು, ಒಂದು ಕೈಯಲ್ಲಿ ಕರಡಿಗೆಯನ್ನೂ ಮತ್ತೊಂದರಲ್ಲಿ ತನ್ನ ಲಾಥಿಯನ್ನೂ ಹಿಡಿದುಕೊಂಡೇ ಕೂತಿದ್ದು, ಆಗಾಗ ಆಕಾಶ ನೋಡುತ್ತ, ಆ ದೊಡ್ಡ ನಕ್ಷತ್ರವು ನೆತ್ತಿಗೆ ಬರುವುದನ್ನು ಕಾಯುತ್ತಲೇ ಇದ್ದನು. ವೃದ್ಧರು ಮಂಕುಹಿಡಿದಂತಿದ್ದರಾದರೂ ದೇವರಲ್ಲಿ ವಿಶ್ವಾಸವನ್ನಿಟ್ಟುದನ್ನು ನೋಡಿ, ಭಾಗವತರಿಗೂ ಈ ಸಂದರ್ಭಕ್ಕೊಪ್ಪುವ ಭಾರತದೊಳಗಣ ನಾನಾ ಪದ್ಯಗಳು ನೆನಪಾದವು. ಆದರೆ ಪ್ರಯೋಗಿಸಿದರೆ ತಲೆಗೆ ಪೆಟ್ಟಾಗುವುದೆಂದು ಸುಮ್ಮನಿರಬೇಕಾಯಿತು.

ರಾಯರು ಲಾಟಾನು ಹಿಡಿದು ಹೊರಟು ಮಾರ್ಗಕ್ಕೆ ಬಂದವರೇ ನಮ್ಮೂರ ಕಡೆಗೆ ಧಾವಿಸಿದಂತೆ ಕಾಲಿಟ್ಟರು. ಟೆನ್ನಿಸ್ ಆಟದ ಅಭ್ಯಾಸದಿಂದ ಇದು ಸುಲಭವಾಯಿತಲ್ಲದೆ, ರಾಯರು ಸಿಂಹಾಸನದಲ್ಲೂ ರಾಯರು, ಇತರ ವೇಳೆಯಲ್ಲೂ ರಾಯರಾಗಿಯೇ ಇದ್ದಿದ್ದರೆ, ಇದು ಸಾಧ್ಯವಾಗುತ್ತಿರಲಿಲ್ಲ. ಕಗ್ಗತ್ತಲು ಕಾಡು, ಒಬ್ಬಂಟಿಗರೇ ಭವಿಷ್ಯದ ಸಂಕಷ್ಟವೆಲ್ಲವನ್ನು ನೆನೆದು ಗೀತಾಪಾಠ ಹೇಳುತ್ತ ಧೈರ್ಯದಿಂದ ಮುನ್ನಡೆದರು; ಆಗಾಗ ಓಡಿದರು. ಒಂದು ಮೈಲು ಸಾಗಿತು. ದಾರಿಯುದ್ದಕ್ಕೂ, ಸಾಲು ಮರಗಳೂ ಅವುಗಳ ಹಿಂದೆ ಕಾಡೂ ಹೊರತು, ಒಂದು ಅಂಗಡಿಯೂ ಇಲ್ಲ. ಅಲ್ಲೇ ಒಂದು ಭೂತದ ಗುಡಿ. ಅದಕ್ಕೆ ಬಾಗಿಲುಗಳಿಲ್ಲ. ದೊಡ್ಡದೊಂದು ಹುತ್ತವು ಎತ್ತರಕ್ಕೆ ಬೆಳೆದಿರಲು ಅದಕ್ಕೆ ಒತ್ತಾಗಿ ಒಂದಾಳೆತ್ತರದ ಗೋಡೆಗಳನ್ನಿಟ್ಟು ಕಟ್ಟಿದ ಗುಡಿ! ಉದ್ದವಾದೊಂದು ಹುಲಿಯ ಬೊಂಬೆಯಿದೆ, ಅದರ ಬಣ್ಣ ಮಾಸಿ ಹೋಗಿದೆ. ಲಾಟಾನಿನ ಬೆಳಕಿಗೆ ಅದು ಒಂದು ಬಗೆಯಾಗಿ, ವಿಕಟವಾಗಿ, ವಿಕಾರವಾಗಿ, ಅಸಹ್ಯವಾಗಿ ಕಾಣುತ್ತಿದೆ. ರಾಯರು ಪಕ್ಕನೆ ದಿಗಿಲುಗೊಂಡರು. ಮೆಲ್ಲನೆ ಗರ್ಜಿಸಿದಂತಾಯಿತು. ರಾಯರ ಕಾಲು ತಡೆಯಿತು. ಘರ್ಜನೆ ಕರ್ಕಶವಾಗಿದ್ದಿತು; ಹತ್ತಿರಕ್ಕೆ ಬಂದಂತಾಯಿತು. ಇನ್ನಷ್ಟು ಕಾಲದಲ್ಲಿ ದಾರಿಯಲ್ಲಿ ತನಗೆದುರಾಗಿ ಗರ್ಜನೆ ಸಮೀಪಕ್ಕೆ ಬರುತ್ತಿದೆ. ಗುಡಿಯಾಚೆಗೆ ಮಾರ್ಗವು ಅರ್ಧವೃತ್ತದಂತಾಗಿ ತಿರುಗಿದೆ. ಜನರ ಸುಳಿದಾಟವಿಲ್ಲ. ಗರ್ಜನೆ ತೀರ ಹತ್ತಿರದಿಂದ ಕೇಳಿಸಿತು. ಓಹೋ, ಅದೊಂದು ಗಾಡಿ, ಎರಡೆತ್ತಿನ ಗಾಡಿ, ಗಾಡಿ ತುಂಬ ಹುಲ್ಲಿದೆ. ಗಾಡಿಗೆ ಲಾಟಾನು ಮಾತ್ರವಿಲ್ಲ. ಗಾಡಿಯವನು ಧೀರನು, ಒಡ್ಡಾಳು. ಕೈಕೋಲಿನಿಂದ ಹೊಡೆಯದೆಯೇ, ಆ ಇಳಿಜಾರಿನಲ್ಲಿ ಎತ್ತನ್ನು ಮೆಲ್ಲನೆ ನಡೆಯಿಸುತ್ತಾನೆ. ಗರ್ಜನೆಯು ‘ಬೀರಿ’ಯ ಧ್ವನಿ.

ರಾಯರ ಲಾಟಾನನ್ನು ಕಂಡು, ಗಾಡಿ ನಿಂತಿತು. ರಾಯರಿಗೆ ಈಗ ತಾನೇಕೆ ಅತ್ತ ಬಂದುದೆಂದು ಮನಸ್ಸಿನಲ್ಲಿ ಹೊಳೆಯಿತು. “ಮಹಾರಾಯಾ, ನನ್ನನ್ನು ಸ್ವಲ್ಪ ಉಳಿಸಬಾರದೇ? ದೇವರೇ ನಿನ್ನನ್ನು ಕಳುಹಿಸಿದನು. ನನ್ನೊಡನೆ ಬರುವೆಯಾ? ನಮ್ಮ ಗಾಡಿ ಚಕ್ರಕಳಚಿ ಇಲ್ಲಿ ಒಂದೇ ಮೈಲುದೂರದಲ್ಲಿ ಬಿದ್ದಿದೆ. ನನ್ನ ಮುದಿ ತಂದೆಯವರೂ ನಾನೂ ಪ್ರಯಾಣಿಕರಾಗಿದ್ದೆವು. ಗಾಡಿಯವನು ಪಠೇಲರಲ್ಲಿ ಉಳಿದು ಬೆಳಿಗ್ಗೆ ಬರುವೆನೆಂದು ಹೋದನು. ಆದರೆ ನಮ್ಮನ್ನು ಒಬ್ಬ ಕೇಡಿಯು ಆತಂಕಿಸಿ ನಮ್ಮ ಪೂಜೆಯ ದೇವರನ್ನು ಸೆಳಕೊಂಡಿದ್ದಾನೆ. ಅದನ್ನಂತೂ ಕೊಡುವುದಿಲ್ಲವಂತೆ. ಅವನು ಪ್ರಸಿದ್ಧ ಕೇಡಿ ಬೊಗ್ಗುವಂತೆ. ಈ ವಾರವೇ ಬಿಡುಗಡೆ ಹೊಂದಿ ಕಣ್ಣಾನೂರಿನಿಂದ ಇತ್ತ ಬಂದವನಂತೆ. ನಾನು ಗಾಡಿಯನ್ನು ಈ ತಾಸಿನೊಳಗೆ ತಂದರೆ, ನಾವು ಮುಂದರಿಯಬಹುದಂತೆ; ಇಲ್ಲದಿದ್ದಲ್ಲಿ, ನಮ್ಮನ್ನು ಹೆಡಮುರಿ ಕಟ್ಟಿ, ದೇವರ ಕರಡಿಗೆಯೊಡನೆ ಅವನು ಮಾಯವಾಗುವನಂತೆ. ಹಿಂದೆ ಹೋಗದಿದ್ದರೆ ನನ್ನ ತಂದೆಯವರನ್ನು ಕೊಂದು ಹಾಕುವನಂತೆ. ದೇವಧರ್ಮಗಳ ಮೇಲೆ ಅವನ ವಿಶ್ವಾಸ ಹಿಂದೆ ಇದ್ದುದು ಇನ್ನಿಲ್ಲವಂತೆ. ಅಲ್ಲೇ ಇರುವ ಅಂಗಡಿಜಗಲಿಯ ಮೇಲೆ ಇದ್ದಾನೆ. ನಾವು ಪೂಜೆ ಮಾಡಿದ ದೇವರು ನಮ್ಮನ್ನು ಕಾಪಾಡುವನಾದರೆ ಕಾಪಾಡಲೆಂದು ಇತ್ತ ಗಾಡಿ ಹುಡುಕಿ ಬಂದೆ. ಈ ಅಮಾವಾಸ್ಯೆಯ ಕಗ್ಗತ್ತಲಿನ ನಡುರಾತ್ರಿಗೆ ನೀನು ಹೇಗೋ ಎದುರಾದೆ. ದೇವರೇ ನಿನ್ನನ್ನು ನಮ್ಮ ರಕ್ಷಣೆಗಾಗಿ ಕಳುಹಿಸಿದನು” ಎಂದು ಗಾಡಿಯವನನ್ನು ನಮಸ್ಕರಿಸಿ ರಾಯರು ಆನಂದಬಾಷ್ಪಗಳನ್ನು ಸುರಿಸಿದರು.

ಇಷ್ಟು ಮಾತುಗಳನ್ನು ರಾಯರು ಕ್ಷಣಾರ್ಧದಲ್ಲೆಂಬಂತೆ ಗಾಡಿಯವನಿಗೆಂದರು. ಗಾಡಿಯವನೂ ಸಹಸಂತಾಪದಿಂದಲೋ ಎಂಬಂತೆ ಕಣ್ಣೀರು ಮಿಡಿದನು. ರಾಯರನ್ನು ಕೂಡಲೇ ಗಾಡಿಯಲ್ಲಿ ಕುಳ್ಳಿರಿಸಿ, ಎತ್ತುಗಳನ್ನು ಓಡುವಂತೆ ಪ್ರೇರೇಪಿಸಿದನು. ಗಾಡಿಯು, ಕವುಚಿಬಿದ್ದ ಇವರ ಗಾಡಿಯನ್ನು ದಾಟಲು, ಗಾಡಿಯವನು ದೂರದಿಂದಲೇ ಅಂಗಡಿಯಲ್ಲಿ ಉರಿಯುತ್ತಿದ್ದ ದೀಪದ ಬೆಳಕನ್ನು ಕಂಡು, ಅಲ್ಲಿಗೇ ತಾವು ಹೋಗುವುದೆಂದು ತಿಳಿದುಕೊಂಡ ಕೂಡಲೇ, ರಾಯರಿಗೆ ಗಾಡಿಯೆತ್ತುಗಳ ಹಗ್ಗ ಹಿಡಿದು ಅಲ್ಲೇ ನಿಲ್ಲುವಂತೆ ಹೇಳಿ, ಲಾಟಾನನ್ನು ಅಲ್ಲೇ ಕಿರಿದುಮಾಡಿ ಗಾಡಿಗೆ ಕಟ್ಟಿಕ್ಕಿ, ತಾನೊಬ್ಬನೇ ಅಂಗಡಿಯ ಕಡೆಗೆ ನಡೆದನು.

ಅಮಾವಾಸ್ಯೆಯೇ ಕನ್ನ ಹಾಕುವವರಿಗೆ ಅತ್ಯಪೂರ್ವ ಸಂದರ್ಭವೆಂದೂ, ಅದೇ ರಾತ್ರಿ ಅವನು ಎಲ್ಲಿಯಾದರೂ ಕಳವು ಅಥವಾ ದರೋಡೆ ಮಾಡದೆ ಇರನೆಂದೂ ಮಾತು ನಡೆದಿದ್ದಿತು. ಬೊಗ್ಗು ಆವೂರಿನವನಲ್ಲ; ಆದರೆ ಮಂಗಳೂರಿನಿಂದ ತನ್ನೂರಿಗೆ ಹೋಗುವಾಗ, ಅವನ ಪದ್ಧತಿಯಂತೆ ಆವೂರಲ್ಲಿ ತನ್ನ ಕೈಚಳಕ ತೋರಿಸದೆ ಇರಲಾರನೆಂದು ಎಲ್ಲರೂ ನಂಬಿದ್ದರು. ಹೀಗಾಗಿ, ಭಾಗವತರು, ಪ್ರಯಾಣಿಕರಿಗೆ ಪ್ರಯಾಣ ಮಾಡುವುದಕ್ಕಾಗಲಿ, ತನ್ನಲ್ಲಿರುವುದಕ್ಕಾಗಲಿ, ಯಾವ ಅಭಿಪ್ರಾಯವನ್ನೂ ಸೂಚಿಸದೆ ಮೌನವಾಗಿದ್ದರು.

ಇವನೋ ಯಾವನೋ ಯಾವುದೋ ಸಾಮಾನಿಗಾಗಿ ಬಂದಿದ್ದವನೆಂದು ಅಂಗಡಿಯವರು ತಿಳಿದರು; ಆದರೆ ಕೇಡಿಯ ಕೈಯ ಕೋಲನ್ನು ನೋಡಿ ಮಾತೆತ್ತಲಾರದಾದರು.

ಗಾಡಿಯವನು : “ಸ್ವಾಮೀ, ನನಗೆ ಅರ್ಧಾಣೆಯ ವ್ಯಾಪಾರ ಕೊಡಿರಿ” ಎಂದು ಅರ್ಧಾಣೆಯನ್ನು ಅಂಗಡಿಯವರ ಬಳಿಗೆ ಬಿಸುಟನು.
ಕೇಡಿ : “ಈಗ ವ್ಯಾಪಾರವಿಲ್ಲ. ಅಂಗಡಿಯವರು ಕೊಡಲಾರರು”.

ಗಾಡಿಯವನು : “ನೆಂಟರು ಮನೆಗೆ ಬಂದು ಬಿಟ್ಟಿದ್ದಾರೆ; ಉಪಚಾರ ಮಾಡಬೇಡವೇ? ನನ್ನ ಮಗ, ಹಾಳು ಹುಡುಗ, ಸಂಜೆಗೇ ವೀಳೆಯ ತಾರದೆ ಮೋಸ ಮಾಡಿದ. ಇರಲಿ. ಅವರೇಕೆ ಸಾಮಾನು ಕೊಡಬಾರದು?’’

ಕೇಡಿ : “ನನ್ನಪ್ಪಣೆ ಹಾಗೆ!’’

ಗಾಡಿಯವನು : “ನಿಮ್ಮಪ್ಪಣೆ! ಎಂದರೆ, ನೀವು….?’’

ಕೇಡಿ : “ಫಟಿಂಗಾ! ನನ್ನ ಗುರುತಿಲ್ಲವೇ? ನಾನು ಕೇಡಿ ಬೊಗ್ಗು. ಇವರಲ್ಲಿಗೆ ಬಂದವರು ಅವರ ಸೊತ್ತನ್ನೇ ನನ್ನ ಕೂಡೆ ಇಟ್ಟು ಗಾಡಿ ತರಲು ಹೋಗಿದ್ದಾರೆ. ಒಂದು ತಾಸಿನ ವಾಯಿದೆ. ಆ ನಕ್ಷತ್ರ ನಡು ನೆತ್ತಿಗೆ ಬರುವವರೆಗೆ ಕಾದು, ನಂತರ ಈ ಮುದುಕನ ಕಾಲುಮುರಿದು, ಇವರಿಬ್ಬರನ್ನೂ ಮರಗಳಿಗೆ ಕಟ್ಟಿಕ್ಕಿ ಈ ಸೊತ್ತಿನೊಂದಿಗೆ ನಾನು ಮರೆಯಾಗುವೆನು, ಎಂದು ನನ್ನ ಶರ್ತ; ಅವರೆಲ್ಲರೂ ಒಪ್ಪಿದ್ದಾರೆ. ಈಗ ನೀನೂ ಬಂದೆ; ನಿನ್ನನ್ನು ಕಟ್ಟಿಹಾಕದೆ ನಿರ್ವಾಹವಿಲ್ಲ. ಶರ್ತದಂತೆ ಮಾಡದವನು ಬೊಗ್ಗುವೇ?’’

ಗಾಡಿಯವನು : “ಹಾಗಿದ್ದರೆ, ಅಂಗಡಿಯವರ ಬದಲಾಗಿ ನೀವೇ ಅಲ್ಲೇ ಇರುವ ಒಂದು ಕಟ್ಟು ವೀಳೆಯದೆಲೆ, ಇಷ್ಟು ಸುಣ್ಣ, ಒಂದು ಹೊಗೆಸೊಪ್ಪಿನ ತುಂಡು, ಮೂರು ಅಡಿಕೆ, ಇತ್ತ ಬಿಸಾಡಿ. ನಾನು ಹೋಗುವೆನು. ನಾನೇಕೆ ನಿಮ್ಮೊಳಗಣ ಮಾತಿಗೆ ಭಂಗ ತರಬೇಕು? ನನ್ನ ನೆಂಟರು ಎಷ್ಟು ಕಾಯುವರೋ?’’

ಕೇಡಿ : “ಸುಡು ನಿನ್ನ ನೆಂಟರನ್ನು; ಇಲ್ಲಿಂದ ಹೊರಟವನೇ ನಿನ್ನಲ್ಲಿಗೆ ಬರುತ್ತೇನೆ. ಆ ಮೇಲೆ ಅಲ್ಲಿಯೂ ನನ್ನ ಪರಾಕ್ರಮ ನೋಡುವೆ”.
ಗಾಡಿಯವನು : “ನಿಮ್ಮ ಪರಾಕ್ರಮ ನಮಗೇಕೆ ತೋರಿಸುವಿರಿ? ನಾವು ತೀರ ಬಡವರು. ಅಥವಾ, ಅತ್ತ ಬರುವಿರಾದರೂ ನಾವೇನೂ ತಮ್ಮಂತಹ ಬಲಿಷ್ಠರನ್ನು ತಡೆವೆವೇ? ಅರ್ಧಾಣೆಯ ವ್ಯಾಪಾರ ಕೊಡಿರಿ. ದಮ್ಮಯ್ಯ”.

ಕೇಡಿ : “ಸಾಕು, ಹೊಲಸು ಮಾತಾಡಬೇಡ. ನಿಲ್ಲಲ್ಲಿ ಸುಮ್ಮನೆ. ಈ ನಕ್ಷತ್ರವು ನೆತ್ತಿಗೆ ಬಂತು. ಇನ್ನು ಈ ಮುದುಕನ ಕಾಲು ಮುರಿದು ಇವರಿಬ್ಬರನ್ನೂ ಮರಕ್ಕೆ ಕಟ್ಟುವುದನ್ನು ನೋಡು. ಸುಮ್ಮನಿರು. ಮಾತಾಡಿ ಗುಲ್ಲೆಬ್ಬಿಸಬೇಡ. ನನ್ನ ಕೆಲಸ ಕೆಟ್ಟೀತು. ನಿನ್ನನ್ನು ಕೊಂದೇ ಹಾಕುವೆನು”.
ಹೀಗೆಂದು ಕೇಡಿಯು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ಬಲವಾದ ಒಂದು ಏಟನ್ನು ವೃದ್ಧರ ಕಾಲಿಗೆ ಕೊಡಲು ದೊಣ್ಣೆ ಎತ್ತಿದನು.

ಆದರೆ, ಎತ್ತಿದ ದೊಣ್ಣೆ ಗಾಡಿಯವನ ಎಡಗೈಯೊಳಗೆ, ಗಾಡಿಯವನ ಕೈಯಲ್ಲಿದ್ದ ಕೋಲು ಕೇಡಿಯ ಕುತ್ತಿಗೆಗೆ, ಹೇಗೆ ಬಿತ್ತೋ ಭಾಗವತರಿಗೆ ತಿಳಿಯಲೇ ಇಲ್ಲ. ಇದಾದ ಬಳಿಕ ಕೇಡಿಯನ್ನು ಗಾಡಿಯವನು ಒಂದು ಸಲ ಹಿಂದಣಿಂದ ತನ್ನ ತೋಳುಗಳಿಂದ ಬಿಗಿಯಾಗಿ ಒತ್ತಿ ಹಿಡಿದು, ಅವನ ಬಾಯಲ್ಲಿ ಅರ್ಧ ಕಟ್ಟು ವೀಳೆಯದೆಲೆ ತುರುಕಿಸಿ, ತನ್ನ ಎಲ ವಸ್ತ್ರದಿಂದ ಅವನ ಬಾಯಿಯನ್ನು ಬಲವಾಗಿ ಬಿಗಿದು ಹಿಂದಲೆಗೆ ಗಂಟಿಕ್ಕಿದನು. ಬೆನ್ನ ನಡುವೆ ಒಮ್ಮೆ ಗುದ್ದಿ, ಅವನ ಎರಡೂ ಕೈಗಳನ್ನು ಆತನ ಕೈಯಲ್ಲಿದ್ದ ಹಗ್ಗದಿಂದಲೇ ಬೆನ್ನಹಿಂದಕ್ಕೆ ಕಟ್ಟಿದನು. ಅವನನ್ನು ಕೆಡವಿ, ಅಲ್ಲೇ ಕಟ್ಟಿದ್ದ ಎತ್ತುಗಳಲ್ಲಿ ಒಂದರ ಹಗ್ಗ ಬಿಚ್ಚಿ ಕಾಲುಗಳೆರಡನ್ನೂ ಕಟ್ಟಿಕ್ಕಿದನು. ಆ ಬಳಿಕ, ಅವನನ್ನು ನೆಲಕ್ಕೆ ಒರಗಿಸಿ, ತಪ್ಪಿಸಿಕೊಳ್ಳಲು ಯತ್ನಿಸಿದರೆ ಕೊಂದಿಕ್ಕುವೆನೆಂದನು. ಭಾಗವತರು ಈಗ ಪರಾಕ್ರಮಿಗಳಾಗಿ, ಕೇಡಿಯು ಬಿದ್ದಲ್ಲಿಗೆ ಬಂದು ಅವನ ಎದೆಗೆ ಚೆನ್ನಾಗಿ ಎರಡು ಗುದ್ದಿದರು. ಅನಂತರ, ಗಾಡಿಯವನು ವೃದ್ಧರ ಕೈಯಲ್ಲಿ ದೇವರ ಕರಡಿಗೆಯನ್ನು ಇಟ್ಟು, ಭಾಗವತರಿಂದ ಅವರ ಪುಸ್ತಕಗಳ ಕಟ್ಟನ್ನು ಹೊರಿಸಿ, ತಾನು ಬಟ್ಟೆಗಳ ಮತ್ತು ಹಾಸುಗೆಯ ಮೂಟೆಯನ್ನು ಹೊತ್ತುಕೊಂಡು, ವೃದ್ಧರನ್ನು ತನ್ನ ಕೈಕೊಟ್ಟು ನಡಿಸಿ, ಜಾಗ್ರತೆಯಾಗಿ ರಸ್ತೆಯಲ್ಲಿದ್ದ ಬಂಡಿಯ ಬಳಿಗೆ ಬಂದನು. ಅಲ್ಲಿ, ತಂದ ಹೇರುಗಳನ್ನು ಗಾಡಿಯಲ್ಲಿರಿಸಿ, ವೃದ್ಧರನ್ನು ರಾಯರೊಡನೆ ಬಿಟ್ಟು, ಭಾಗವತರೊಡನೆ ಅವರ ಮನೆಗೆ ಮರಳಿದನು. ನೆಲದ ಮೇಲೆ ಬಿದ್ದುಕೊಂಡು ಉರುಡಾಡುತ್ತಿದ್ದ ಕೇಡಿಯ ಕಾಲು ಕಟ್ಟುಗಳನ್ನು ಬಿಚ್ಚಿ, ಅವನ ಕಾಲು ಹಗ್ಗಗಳನ್ನು ಬೆನ್ನಹಿಂದಣ ಕೈಕಟ್ಟಿಗೆ ಬಿಗಿದು, ಭಾಗವತರನ್ನು ಮನೆಯೊಳಗೆ ಹೋಗಬಿಟ್ಟು, ಕೇಡಿಯನ್ನು ರಾಯರ ಕವಚಿಬಿದ್ದ ಗಾಡಿಗೆ ಕೊಂಡೊಯ್ದು ಅದರೊಳಗೆ ಒರಗಿಸಿ, ಇತರರೂ ಸುಲಭವಾಗಿ ಬಿಡಿಸಲಾರದ ರೀತಿಯಲ್ಲಿ ಅವನನ್ನು ಚೆನ್ನಾಗಿ ಬಿಗಿದುಬಿಟ್ಟನು.

ರಾಯರ ಬಳಿಗೆ ಈ ಗಾಡಿಯವನು ಬಂದನು. ಗಾಡಿಯೊಳಗೆ ಹುಲ್ಲು ಹಾಸಿ, ಚಾಪೆ ಸರಿಗೊಳಿಸಿ, ರಾಯರೂ ಅವರ ತೀರ್ಥರೂಪರೂ ಸವಾರಿಯಾಗುವಂತೆ ಕೇಳಿಕೊಂಡು, ಅವರನ್ನು ಕುಳ್ಳಿರಿಸಿಕೊಂಡು ಗಾಡಿಯನ್ನು ಮಂಗಳೂರಿನ ಕಡೆಗೆ ಓಡಿಸಿದನು. “ರಾಯರೇ, ನಾಳೆ ಪಠೇಲರ ಮನೆಯಿಂದ ನಿಮ್ಮ ಗಾಡಿಯವನು ತನ್ನ ಗಾಡಿ ಸರಿಮಾಡಲು ಹೋಗುವಾಗಲೇ ಕೇಡಿ ಬೊಗ್ಗುವು ಅದರೊಳಗೆ ಕಟ್ಟಲ್ಪಟ್ಟು ಬಿದ್ದಿರುವುದರಿಂದ ಆತನಿಗೆ ಕಠಿನ ಶಿಕ್ಷೆ ದೊರೆವುದೆಂದು ನನಗೆ ವಿಶ್ವಾಸವಿದೆ. ಇನ್ನು ಕೆಲವರ್ಷಗಳ ತನಕ ಈತನ ಬಾಧೆ ಈ ಊರಿಗೆ ತಗಲದು” ಎಂದು ಗಾಡಿಯವನೆಂದುದಕ್ಕೆ ರಾಯರು ನಕ್ಕರು.

ಗಾಡಿಯು ಬೆಳಗಾಗುವ ಹೊತ್ತಿಗೆ, ಮಂಗಳೂರಿಂದ ನಾಲ್ಕು ಮೈಲು ದೂರವಾಗಿದ್ದಿತು. ಅದು ಉಷಃಕಾಲ. ರಾತ್ರಿಯಲ್ಲಿ ನಿದ್ದೆ ಇರಲಿ, ಇಲ್ಲದಿರಲಿ, ಈ ಮುಹೂರ್ತದ ತಂಗಾಳಿ ಎಂತಹವನಲ್ಲೂ ನವಚೇತನವನ್ನುಂಟುಮಾಡುವುದು. ನಕ್ಷತ್ರಗಳು ಒಂದೊಂದಾಗಿ ಅಡಗತೊಡಗಿದುವು. ಪ್ರಾತಃಸ್ಮರಣೆಗೆ ಪಂಚಪತಿವ್ರತೆಯರ ಸ್ತೋತ್ರವಾಗಲೆಂದೇನೋ, ಹಕ್ಕಿಗಳಲ್ಲಿ ಒಂದು ‘ಸೀ-ತಾ’ ಎನ್ನುವುದು; ಆಗ ಕೇಳಿಸುವುವೆಲ್ಲವೂ ಪಂಚಮಸ್ವರಗಳ ಇಂಚರಗಳೇ. ದೂರದಲ್ಲಿರುವ ಆ ಕಡಲನ್ನು ನೋಡಿರಿ; ಆಕಾಶವು ಕೆಳಕ್ಕಿಳಿಯುತ್ತ ಬಂದಂತೆ, ವಾಯುರೂಪದಿಂದ ದ್ರವರೂಪವಾಯಿತೋ ಎನ್ನಿಸುವಂತಿದೆ. ಮೋಡಗಳನ್ನು ನೋಡಿರಿ; ಯಾವ ಯಾವ ಸ್ವರ್ಗ ವಾಸಿಗಳು ರಾತ್ರಿಯಲ್ಲಿ ಪವಡಿಸಿದ ಹಾಸುಗೆಗಳೋ ಎನ್ನುವಂತಿದೆ. ಸೂರ್ಯಕಿರಣಗಳು ಬೆಳ್ಳಗಾಗಿ ತೋರುವುವಾದರೆ, ಈ ಮೋಡಗಳಲ್ಲಿ ಆ ಬಿಳುಪಿನೊಳಗೆ ಸೇರಿರುವ ಇತರ ಬಣ್ಣಗಳೆಲ್ಲ ಒಂದೊಂದಾಗಿ ಕ್ಷಣಕ್ಕೊಮ್ಮೆ ತೋರುತ್ತಿವೆ. ಭೂಮಿಯು ನಿರ್ಜೀವ ಪದಾರ್ಥ, ಜಡ ಮಣ್ಣು ಎಂದು ಹೇಳುವವರು ಬೆಳಗ್ಗಿನ ಜಾವದಲ್ಲಿ ಅವಳ ಸೊಬಗನ್ನು ಕಂಡರೆ, ಅವಳಲ್ಲಿ ಚೇತನವು ಮಿತಿಮೀರಿರುವುದರಿಂದಲೇ ವಿರುದ್ಧ ಭಾವದಿಂದ ಜಡವಾಗಿ ಕಾಣುವಳೋ ಎಂದು ಭಾಸವಾಗುವಂತಿದೆ. ಸೂರ್ಯನನ್ನು ಬರಿಗಣ್ಣಿಂದ ನೋಡಬೇಕಾದರೆ ಆಗ ತಾನೇ. ಮನುಷ್ಯನ ಮಹತ್ವವು ಆಗಣ ಆತನ ನೆರಳಲ್ಲೇ ವ್ಯಕ್ತ, ಅದೆಷ್ಟು ದೂರ! ಎಷ್ಟು ಭೂಭಾಗವನ್ನೂ ಇತರ ಸೃಷ್ಟಿಪದಾರ್ಥಗಳನ್ನೂ ತನ್ನ ಆಶ್ರಯದಲ್ಲಿ ಇರಗೊಡಿಸಬಲ್ಲುದು! ಸೃಷ್ಟಿಯ ಸೊಬಗು, ಮನುಷ್ಯನ ಮಹತ್ವ, ವಿಶ್ವದಲ್ಲಿನ ಪ್ರತಿಯೊಂದರಲ್ಲಿರುವ ಚೇತನದ ಪ್ರಕಾಶ, ಜೀವನದ ಉದ್ದೇಶ, ಎಲ್ಲವನ್ನೂ ಪ್ರಾತಃಕಾಲದಲ್ಲಿ ಪಂಚಭೂತಗಳು ಮೌನವಾಗಿ ಸಾರದೆ ಇಲ್ಲ. ಬ್ರಹ್ಮಜ್ಞಾನಿಗಳೂ ಧರ್ಮಪ್ರಾಣರೂ ಇಂತಹ ಪ್ರಾತಃಕಾಲದಲ್ಲಿ, ಎಷ್ಟೇ ಗಾಢನಿದ್ರೆಯು ಆಗ ಅವರಿಗೆ ಅವಶ್ಯಕವಾಗಿದ್ದರೂ, ಎಚ್ಚತ್ತುಕೊಳ್ಳದೆ ಇರಲಾರರು. ರಾಯರೂ ಅವರ ತೀರ್ಥರೂಪರೂ ರಾಮನಾಮಸ್ಮರಣೆಯೊಡನೆ ಕಣ್ತೆರೆದೆದ್ದು ಕೂತರು.

ಗಾಡಿಯವನು : “ಸ್ವಾಮಿ, ಸುಖ ನಿದ್ದೆ ಮಾಡಿದಿರಾ?’’
ಇಬ್ಬರೂ : “ಹೌದು, ನಿನ್ನ ಉಪಕಾರ.’’
ಗಾಡಿಯವನು : “ಉಪಕಾರದ ಮಾತಿರಲಿ. ಗಾಡಿಯವನ ಕೆಲಸವೇ ಇಷ್ಟು. ಅಷ್ಟೇ ಮಾಡಿದೆನು. ರಾಯರು ತಂದ ಗಾಡಿಯವನು ಗಾಡಿಯವನಲ್ಲ. ತಮ್ಮನ್ನು ಆತನು ಪಠೇಲರಲ್ಲಿಗೇತಕ್ಕೆ ಕೊಂಡೊಯ್ಯಲಿಲ್ಲ? ಈಗ, ಆ ಕೇಡಿಯ ಮೇಲೆ ಆಗುವ ಮೊಕದ್ದಮೆಯಲ್ಲಿ ಕೆಲ ತಿಂಗಳು ಅತ್ತಿತ್ತ ಓಡಾಡುತ್ತ ಇರಲಿ. ಹಃ! ಹಃ!’’

ರಾಯರು : “ಇನ್ನೆಷ್ಟಿದೆ ಮಂಗಳೂರಿಗೆ?’’
ಗಾಡಿಯವನು : “ಇಲ್ಲೇ, ನಾಲ್ಕು ಮೈಲು, ಒಂದು ತಾಸಿನ ದಾರಿ.’’
ರಾಯರು : “ಅಲ್ಲಿಗೆ ಸೂರ್ಯೋದಯಕ್ಕೆ ಸರಿಯಾಗಿ ತಲಪುವಂತಾಯ್ತು.’’
ಗಾಡಿಯವನು : “ಆದರೆ, ಸ್ವಾಮಿ, ನಾನು ಮಾತ್ರ ಆ ‘ಗೇಟ’ನ್ನು ದಾಟಿ ಮಂಗಳೂರಿಗೆ ಬರಲಾರೆ.’’
ರಾಯರು : “ಗೇಟಿನ ‘ಫೀಸ’ನ್ನು ನಾವು ತೆರುತ್ತೇವೆ.’’

ಗಾಡಿಯವನು : “ಫೀಸಿಗಾಗಿ ಅಲ್ಲ, ನನಗೆ ಅಲ್ಲಿಗೆ ಹೋಗಲು ಆತಂಕವಿದೆ. ನಾನು ನಿನ್ನೆ, ನೀವು ಹೋಗಬೇಕಾಗಿದ್ದ ಆ ಪಠೇಲರಲ್ಲೇ, ಗಾಡಿಯೊಡನೆ ಇರಬೇಕಾಗಿತ್ತು. ಈ ಗಾಡಿ ಅವರದು. ನಮ್ಮೂರಿನಿಂದ ಅವರ ಮನೆಗೇ ಈ ಗಾಡಿಯಲ್ಲೇ ನಾನು ರಾತ್ರಿಯಲ್ಲಿ ತಲಪಿದ್ದರೆ ನನಗೆ ಹೆಚ್ಚಿನ ಪ್ರಯೋಜನವಿತ್ತು.’’

ರಾಯರು : “ಅದೆಷ್ಟು, ಅದೆಷ್ಟು? ಅದರ ಇಮ್ಮಡಿ ನಾನೇ ಕೊಡುವೆನು.’’
ಗಾಡಿಯವನು : “ಹಣದ ಮಾತೇ ಅಲ್ಲ. ಅದು ಬೇರೆ; ಈಗ, ನಾನು ತಮ್ಮನ್ನು ಈ ಗಾಡಿಯಲ್ಲಿ ಕೂಡ್ರಿಸಿ, ಇಲ್ಲಿಯತನಕ ತಂದು ಮುಟ್ಟಿಸಿದುದಕ್ಕೂ, ದಾರಿಯಲ್ಲಿ ಆ ಕೇಡಿ ಬೊಗ್ಗುವಿನಿಂದಾದ ವಿಪತ್ತಿನಲ್ಲಿ ನಾನು ತಮಗೆ ನೆರವಾದುದಕ್ಕೂ, ಪಠೇಲರಿಗೆ ಒಂದು ಪತ್ರ ಬರೆದುಕೊಟ್ಟರೆ ಸರಿ. ಗಾಡಿಯ ಬಾಡಿಗೆ ಕೊಟ್ಟುದರಲ್ಲಿ, ಗಾಡಿಯ ಯಜಮಾನರಾದ ಆ ಪಠೇಲರಿಗೆಷ್ಟು ಎಂದು ತಿಳಿಸಿರಿ. ಉಳಿದುದೆಲ್ಲ ಈ ಎತ್ತುಗಳಿಗೆ! ನನಗೆ ಒಂದು ಕಾಸೂ ಅಗತ್ಯವಿಲ್ಲ.’’

ರಾಯರು ಅವಾಕ್ಕಾದರು. ಇವನಿಗೆ ಬೇಕಾದಂತೆ ಪತ್ರ ಬರೆದು ಕೊಟ್ಟರು. ಐದು ರೂಪಾಯಿಗಳು ಬಾಡಿಗೆಗೆ; ಒಂದು ರೂಪಾಯಿ ಎತ್ತುಗಳಿಗೆ, ತಮ್ಮದೊಂದು ದುಪ್ಪಟಿ ಗಾಡಿಯವನಿಗೆ, ಕೊಟ್ಟಾಯಿತು.

ಅಷ್ಟರಲ್ಲಿ ಮಂಗಳೂರಿಗೆ ಹೋಗುವ ಗಾಡಿಗಳು ಒಂದೊಂದಾಗಿ ಬರ ಹತ್ತಿದುವು. ಅವುಗಳಲ್ಲಿ ಒಂದನ್ನು ರಾಯರಿಗಾಗಿ ಬಾಡಿಗೆಗೆ ನಿಷ್ಕರ್ಷಿಸಿ, ಗಾಡಿಯವನು ಇಬ್ಬರಿಗೂ ನಮಸ್ಕಾರ ಮಾಡಿ, ತಾನು ಬಂದ ದಾರಿಯಲ್ಲೇ ಹಿಂತಿರುಗಿದನು.

ಯಥಾ ಕಾಲದಲ್ಲಿ ರಾಯರು ಮಂಗಳೂರಿಗೂ, ಅಲ್ಲಿಂದ ತಮಗೆ ವರ್ಗವಾದ ಊರಿಗೂ ತಲುಪಿದರು. ಕವಚಿಬಿದ್ದ ಗಾಡಿಯಲ್ಲಿ ಕಟ್ಟಿಕ್ಕಿದ ಕೇಡಿಗೆ ಏಳು ವರ್ಷದ ಕಠಿನ ಸಜೆಯಾಯಿತು. ಆ ಮೊಕದ್ದಮೆಯ ವಾರ್ತೆಯನ್ನು ಪತ್ರಿಕೆಯಲ್ಲಿ ರಾಯರು ಓದಿದರು.

ಆಗ ತಾನೇ ಅವರಿಗೆ ಗೊತ್ತು, ತಮ್ಮನ್ನು ‘ಕೇಡಿ ಬೊಗ್ಗು’ ಎಂಬವನ ಬಾಯಿಯಿಂದ ತಪ್ಪಿಸಿ, ಮಂಗಳೂರಿಗೆ ತಲಪಿಸಿದ ಎರಡನೆಯ ಗಾಡಿಯವನು, ಅಂದಿನ ರಾತ್ರಿಯೊಳಗೆ ಆವೂರ ಪಠೇಲರಲ್ಲಿ ತನ್ನ ವಸತಿಯ ಹಾಜರಿ ಕೊಡಬೇಕಾಗಿದ್ದ, ಕಣ್ಣಾನೂರಿನಿಂದ ಬಿಡುಗಡೆ ಹೊಂದಿದ ಬೊಗ್ಗು ಮಹಾಶಯನೆಂದು!

ಟಿಪ್ಪಣಿ:
ನವೋದಯದ ಪ್ರಾರಂಭದ ಘಟ್ಟದ ಪ್ರಮುಖ ಕತೆಗಾರ ಎಂ. ಎನ್. ಕಾಮತ್ (ಮುಂಡ್ಕೂರು ನರಸಿಂಹ ಕಾಮತ್: 1883-1940) ಅವರು ಉಡುಪಿ ಜಿಲ್ಲೆಯ ಮುಂಡ್ಕೂರಿನಲ್ಲಿ ಹುಟ್ಟಿದರು. ಇವರು ಮಾಸ್ತಿಯವರ ಜತೆಜತೆಯಲ್ಲಿಯೇ ಕತೆ ಬರೆಯಲು ಪ್ರಾರಂಭಿಸಿದರು. ಮಾಸ್ತಿಯವರಂತೆ ಕಾಮತರ ಮೊದಲ ಕತೆಯೂ ಮೈಸೂರಿನ ‘ಮಧುರವಾಣಿ’ ಪತ್ರಿಕೆಯಲ್ಲಿ 1911 ಅಥವಾ 1912ರಲ್ಲಿ ಪ್ರಕಟವಾಯಿತು. ಅವರ ಕಥಾಸಂಕಲನಗಳು “ಅಂದಿನ ಆವೂರು” (1918) ಮತ್ತು ‘ಹತ್ತರೊಡನೆ ಹನ್ನೊಂದು’ (1935). ಕಾಮತರು ಕನ್ನಡದ ಆದ್ಯ ಕತೆಗಾರರಲ್ಲಿ ಒಬ್ಬರು. 1940 ರಲ್ಲಿ ಬೆಂಗಳೂರಿನಲ್ಲಿ ನಡೆದ ಸಣ್ಣಕತೆಗಾರರ ಸಮ್ಮೇಳನದ ಅಧ್ಯಕ್ಷರಾಗಿ ಅವರು ಆಯ್ಕೆಯಾಗಿದ್ದರು. ಪ್ರಸ್ತುತ ಕತೆಯನ್ನು ಕಾಮತರ ‘ಅಂದಿನ ಆವೂರು’ ಸಂಕಲನದಿಂದ ಆರಿಸಲಾಗಿದೆ.
ಕಾಮತರು ಮುಂಬೈ ಮತ್ತು ಕಲ್ಕತ್ತಗಳಲ್ಲಿ ‘ರೋಸ್ ಆಂಡ್ ಕಂಪೆನಿ’ ಎಂಬ ಸಂಗೀತ ಉಪಕರಣಗಳ ಅಂಗಡಿಯಲ್ಲಿ ಕೆಲಸಕ್ಕಿದ್ದರು. ನಂತರ ಮೂಲ್ಕಿ ಹಾಗೂ ಮಂಗಳೂರುಗಳಲ್ಲಿ ಅಧ್ಯಾಪಕರಾಗಿ ಸೇವೆಸಲ್ಲಿಸಿದರು. ಅವರು ಹಲವಾರು ಕವಿತೆಗಳನ್ನು, ನಾಟಕಗಳನ್ನು, ಲಲಿತಪ್ರಬಂಧಗಳನ್ನು ಬರೆದಿದ್ದಾರೆ. ಕರಾವಳಿಯ ಬಹುಮುಖ್ಯ ಸಾಹಿತಿಗಳಲ್ಲಿ ಕಾಮತರೂ ಒಬ್ಬರು.
ಕಾಮತರು ಸುಮಾರು 1918 ರಲ್ಲಿ ಬರೆದ ‘ಕದ್ದವರು ಯಾರು’ ಎನ್ನುವ ಕತೆ ವಸಾಹತು ಕಾಲದ ಸಮಾಜ ವ್ಯವಸ್ಥೆ ಹೇಗಿತ್ತು ಮತ್ತು ಬ್ರಿಟಿಷ್ ಆಡಳಿತಗಾರರನ್ನು ಸಮಾಜ ಹೇಗೆ ನೋಡುತ್ತಿತ್ತು ಎನ್ನುವುದರ ಒಂದು ಅಮೂಲ್ಯ ದಾಖಲೆಯಾಗಿದೆ. ಈ ಕತೆ ಕನ್ನಡದ ಒಂದು ಮುಖ್ಯ ಕತೆಯಾಗಿಯೂ ಪ್ರಸಿದ್ಧವಾಗಿದೆ. ಪ್ರಾರಂಭದಲ್ಲಿ ಆ ಊರಿಗೆ ಕಲೆಕ್ಟರರು ಬಂದಿರುವ ವಿಚಾರ ಬರುತ್ತದೆ. ಅವರು ಬಂದುದೇಕೆಂದು ಯಾರಿಗೂ ತಿಳಿಯದು. ಜನ ಹೀಗೆಲ್ಲಾ ಊಹಿಸುತ್ತಾರೆ : ಸಂಜೆ ಹೊತ್ತಿಗೆ ಕೆಲವರು ಎಮ್ಮೆಗಳನ್ನು ಯಾವುದೋ ಊರಿನಿಂದ ಈ ಗ್ರಾಮದ ಹಾದಿಯಾಗಿ ಸಾಗಿಸಿ ಮಾರುವರಂತೆ, ಅವರು ಕಳ್ಳರೆಂದು ಅವರನ್ನು ಹಿಡಿಯಲು ತಾವೇ ದಯಪಾಲಿಸಿದ್ದಾರೆ, ಹಲವು ಬೇನಾಮೀ ಅರ್ಜಿಗಳು ಪಟೇಲರ ವಿಷಯವಾಗಿ ಕಲೆಕ್ಟರರಿಗೆ ತಲುಪಿರಲು ಅವುಗಳ ಅವುಗಳ ವಿಚಾರಣೆಗಾಗಿ ಸ್ವತಃ ಚಿತ್ತೈಸಿದ್ದಾರೆ – ಇತ್ಯಾದಿ ವದಂತಿಗಳು ಹರಡುತ್ತವೆ. ಇವುಗಳನ್ನು ಓದಿದರೆ ಸಾಮಾನ್ಯರಿಗೆ ಕಲೆಕ್ಟರರು ಬರುವುದರಿಂದ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂಬ ಸಂಭ್ರಮವೇ ಇರುವುದು ತಿಳಿಯುತ್ತದೆ.
ದೊರೆಗಳು ತಮ್ಮ ಬಟ್ಲರನನ್ನು ಸಂತೆಗೆ ಕಳುಹಿಸಿ ಎಲ್ಲ ಸಾಮಾನುಗಳನ್ನು ನಗದಾಗಿ ಕ್ರಯಕ್ಕೆ ಕೊಂಡು ತರಲು ತಿಳಿಸಿರುತ್ತಾರೆ. ಇದರಿಂದ ಬೇರೆ ಅಧಿಕಾರಿಗಳು ಪುಕ್ಕಟೆ ಸರಬರಾಜು ಮಾಡಿಸಿಕೊಳ್ಳುತ್ತಿದ್ದರೆಂದು ಸೂಚಿಸಿದಂತಾಗಿದೆ. ಈ ಕತೆ ಬ್ರಿಟಿಷ್ ಅಧಿಕಾರಿಗಳ ಶಿಸ್ತು, ನ್ಯಾಯಪರತೆಯ ಜತೆಗೆ ನೇಟಿವ್ ಅಧಿಕಾರಿಗಳ ಕಿರುಕುಳಕ್ಕೂ ಉದಾಹರಣೆಯಾಗಬಹುದಾದ ಕತೆಯಾಗಿದೆ. ಈ ಕತೆಯಲ್ಲಿ ಪಟೇಲರು ಬಂಟ ಜನಾಂಗದವರು, ಬ್ರಾಹ್ಮಣ ಶಾನುಭೋಗರು ಅವರ ಹಂಗಿನಲ್ಲಿರುವವರು, ಅವರು ಚಾಲಗೇಣಿ ಚೀಟುಗಳನ್ನು ಪಟೇಲರ ಪರವಾಗಿ ಫ್ಯಾಬ್ರಿಕೇಟ್ ಮಾಡಿ ಒಕ್ಕಲಿನ ರೈತರನ್ನು ಶೋಷಿಸುತ್ತಾರೆ ಎಂಬ ವಿಷಯಗಳನ್ನು ಕತೆಗಾರರು ಸೂಚಿಸಿದ್ದಾರೆ. ಶಾನುಭೋಗರು ಉಗ್ರಾಣಿಯ ಪತ್ನಿಯ ಜತೆಗೆ ಹೊಂದಿರಬಹುದಾದ ಅನೈತಿಕ ಸಂಬಂಧ, ಮುದುಕ ಅಥವಾ ಮಧ್ಯವಯಸ್ಕರಾದ ಶಾನುಭೋಗರು ಹದಿಹರೆಯದ ಬಡ ಹುಡುಗಿಯನ್ನು ಮದುವೆಯಾಗಿರುವುದು ಮುಂತಾದ ಹಲವಾರು ಕಥಾಸೂಕ್ಷ್ಮಗಳು ಈ ಕತೆಯಲ್ಲಿದ್ದು ಪ್ರಸ್ತುತ ಅಧ್ಯಯನಕ್ಕೆ ಅದರ ವಿವೇಚನೆ ಅತಿವ್ಯಾಪ್ತಿಯದಾಗುತ್ತದೆ.
ಈ ಕತೆಯಲ್ಲಿ ಆ ಊರಿನ ಪಟೇಲರ ಹೆಂಡತಿಯ ಗೆಜ್ಜೆ ಟೀಕು ಎಂಬ ಕೊರಳ ಚಿನ್ನದ ಆಭರಣ ಕಾಣೆಯಾಗುತ್ತದೆ. ತನ್ನ ಜತೆಗೆ ಸ್ನಾನಕ್ಕೆ ಬಂದಿದ್ದ ಶಾನುಭೋಗರ ಹೆಂಡತಿಯೇ ಅದನ್ನು ಕದ್ದಿದ್ದಾಳೆಂದು ಪಟೇಲರ ಹೆಂಡತಿ ಆಪಾದಿಸುತ್ತಾಳೆ. ಪಟೇಲರ ಅವಕೃಪೆಗೆ ಪಾತ್ರರಾಗಬಾರದೆಂದು ಶಾನುಭೋಗರು ಮನೆಗೆ ಬಂದು ತನ್ನ ಹೆಂಡತಿಯನ್ನು ಅಂಗಳದಲ್ಲಿ ಬಿಸಿಲಿನಲ್ಲಿ ನಿಲ್ಲಿಸಿ ಹೊಡೆಯುತ್ತಾರೆ. ಊಟ ಹಾಕದೆ ರಾತ್ರಿ ಕೊಟ್ಟಿಗೆಯಲ್ಲಿ ಕುಳ್ಳಿರಿಸಿ ಮರುದಿನ ಮಂತ್ರವಾದಿಯಿಂದ ಅವಳಿಗೆ ಬರೆಹಾಕಿಸುತ್ತಾರೆ. ಅಷ್ಟರಲ್ಲಿ ಊರಿಗೆ ಬಂದಿದ್ದ ಕಲೆಕ್ಟರರು ಅಲ್ಲಿಗೆ ಬಂದು ಈ ಕ್ರೌರ್ಯವನ್ನು ನಿಲ್ಲಿಸುತ್ತಾರೆ. ತಮ್ಮ ಆಳಿಗೆ ಸಿಕ್ಕಿದ್ದ ಗೆಜ್ಜೆಟೀಕನ್ನು ತೋರಿಸಿ ಅದನ್ನು ಪಟೇಲರ ಹೆಂಡತಿಯೇ ಮರೆತು ಬಂದಿದ್ದಳೆಂದು ತಿಳಿಸಿ ಮಂತ್ರವಾದಿಯನ್ನು ಅರೆಸ್ಟ್ ಮಾಡಿಸುತ್ತಾರೆ. ಶಾನುಭೋಗರಿಗೆ ಎಚ್ಚರಿಕೆ ಕೊಟ್ಟು ಪಟೇಲರನ್ನು ಬದಲಾಯಿಸಲು ಹುಕುಂ ಮಾಡುತ್ತಾರೆ.
ಕತೆಯ ಕೊನೆಗೆ ಕಲೆಕ್ಟರರು ನಿರಪರಾಧಿನಿಯಾದ ನಾಗಮ್ಮನನ್ನು ರಕ್ಷಿಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿದ ಮೇಲೆ, “ದೊರೆಗಳು ಎಷ್ಟು ಚೆನ್ನಾಗಿ ನ್ಯಾಯ ತೀರಿಸಿದರು! ಬ್ರಿಟಿಷರಲ್ಲಿರುವ ನ್ಯಾಯ ಬುದ್ಧಿಯ ಮಂತ್ರಬಲವು ಎಂತ ಮಂತ್ರವಾದವನ್ನೂ ಗೆಲ್ಲುವುದಲ್ಲವೇ?” ಎಂದು ಶಾನುಭಾಗರು ಪಟೇಲರಿಗೂ, ಪಟೇಲರು ಶಾನುಭಾಗರಿಗೂ ಹೇಳುತ್ತಿರುವಾಗ ಒಕ್ಕಲುಗಳು ಕೇಳುತ್ತ ವಿಸ್ಮಿತರಾಗಿದ್ದರು.”
ಈ ಕತೆಯಲ್ಲಿ ಪಟೇಲರು ಅನಕ್ಷರಸ್ಥ ಶ್ರೀಮಂತರು, ಗುತ್ತಿನವರು. ಶಾನುಭಾಗರು ಅವರ ಹಂಗಿನಲ್ಲಿರುವವರು; ಒಕ್ಕಲಿನವರ ಚಾಲಗೇಣಿ ಚೀಟುಗಳನ್ನು ತಾವೇ ಬರೆದು, ಅದಕ್ಕೆ ತಾವೇ ಅವರ ಪರವಾಗಿ ಬಲಗೈ ಹೆಬ್ಬೆಟ್ಟು ಒತ್ತುವವರು ಎನ್ನುವುದನ್ನು ಎಂ. ಎನ್. ಕಾಮತರು ದಾಖಲಿಸಿದ್ದಾರೆ. ಊರಿನ ಪಟೇಲರು – ಶಾನುಭೋಗರು ಸೇರಿ ಹಳ್ಳಿಯವರನ್ನು ಹೇಗೆ ವಂಚಿಸುತ್ತಿದ್ದರು ಎನ್ನುವುದನ್ನೂ ದಾಖಲಿಸುವ ಕತೆ ಇದು.