ನಮ್ಮ ಕೆಳಗಿನ ಲೋಕದಲ್ಲಿ ಕೋವಿಡ್-೧೯ ಎಂಬ ವಿಷಯದಲ್ಲೀಗ ಬಗೆಬಗೆಯ ವಾಗ್ವಾದಗಳು. ಲಸಿಕೆ-ಪರ ಮತ್ತು ವಿರೋಧಗಳ ಜನರು ನೇರಾನೇರ ಎರಡು ಗುಂಪುಗಳಲ್ಲಿದ್ದಾರೆ. ಅವರನ್ನು ಬಿಟ್ಟು ರಾಜಕೀಯದಲ್ಲಿ, ವ್ಯಾಪಾರಸ್ಥರಲ್ಲಿ, ಪರಿಸರ ಸಂರಕ್ಷಣೆ ಹಿತಾಸಕ್ತಿ ಗುಂಪು, ಮಾನವ ಹಕ್ಕುಗಳ ಪ್ರತಿಪಾದಕರು, ಶಾಲಾಶಿಕ್ಷಕರು ಮತ್ತು ಅವರ ಯೂನಿಯನ್, ಆರೋಗ್ಯಸೇವಾ ಸಿಬ್ಬಂದಿ ವರ್ಗ, ತಂದೆತಾಯಂದಿರು, ಶಾಲಾ ಮಕ್ಕಳು, ಎಲ್ಲರೂ ಈ ವಾದ-ಪ್ರತಿವಾದಗಳಲ್ಲಿ ಸೇರಿಕೊಂಡುಬಿಟ್ಟಿದ್ದಾರೆ. ವರದಿಗಾರರು, ಸುದ್ದಿವಾಹಿನಿಗಳಿಗಂತೂ ಪರಮ ಸಂತೋಷ. ಯಾಕೆಂದರೆ ನಾಡಿನಲ್ಲಿ ನಡೆಯುತ್ತಿರುವ ಸದ್ಯದ ರಾಜಕಾರಣದಲ್ಲಿ ದಿನಕ್ಕೊಂದು ಕತೆ, ದಿನಕ್ಕೊಬ್ಬ ರಾಜ ಎಂಬಂತಾಗಿದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” 

 

ಹೊಸವರ್ಷ ೨೦೨೨ರ ಈ ಆರಂಭದಲ್ಲಿ,  ಕೋವಿಡ್-೧೯ರ ಹೊಸರೂಪ ಓಮಿಕ್ರೋನ್ ಆಸ್ಟ್ರೇಲಿಯಾದ ಸರಕಾರಗಳನ್ನು ತಬ್ಬಿಬ್ಬು ಮಾಡುತ್ತಾ ಇಬ್ಬಂದಿಗೆ ನೂಕಿದೆ. ಇಲ್ಲಿ ಕ್ರಿಸ್ಮಸ್ ಹಬ್ಬದಿಂದ ಆರಂಭವಾಗುವ ರಜೆದಿನಗಳು ಹೊಸವರ್ಷದ ವಾರಾಂತ್ಯಕ್ಕೆ ಮುಗಿಯುತ್ತವೆ. ಜನವರಿ ಒಂದನೆ ತಾರೀಖು ರಜೆ ದಿನವಾದ್ದರಿಂದ ಅದು ‘ಲಾಂಗ್ ವೀಕೆಂಡ್’ ಸೋಮವಾರಕ್ಕೆ ಮುಗಿದು, ಬಹುತೇಕ ಜನರು ಕೆಲಸಗಳಿಗೆ ಹಿಂದಿರುಗಿದ್ದಾರೆ. ಶಾಲಾಮಕ್ಕಳಿಗೆ ಜನವರಿ ೨೬ ‘ಆಸ್ಟ್ರೇಲಿಯಾ ಡೇ’ ತನಕವೂ ಬೇಸಿಗೆ ರಜೆ ಇರುವುದರಿಂದ ಕೆಲ ತಂದೆತಾಯಂದಿರು ತಮ್ಮ ವಾರ್ಷಿಕ ರಜೆಯನ್ನು ಮುಂದುವರೆಸಿರಬಹುದು. ಈ ಇಡೀ ಬೇಸಿಗೆ ಸಮಯದ ದೀರ್ಘ ರಜೆಯ ಕಾಲದಲ್ಲಿ ಹೆಚ್ಚಿನ ಮಂದಿ ಮನೆಯಿಂದ ಹೊರಗೆ ಕಾಲ ಕಳೆಯುತ್ತಾರೆ. ಡಿಸೆಂಬರ್ ೨೬ ರ Boxing Day ದಿನ ಶುರುವಾಗುವ ಎಲ್ಲ ತರಹದ ಸರಕುಗಳ ರಿಯಾಯಿತಿ ಮಾರಾಟ ಜನವರಿ ಮೊದಲ ವಾರದಲ್ಲೂ ಮುಂದುವರೆಯುತ್ತದೆ. ಈ ಮಾರಾಟ ಜನರನ್ನು ಮೋಡಿಗೊಳಿಸಿ ಅವರು ದಿನವೆಲ್ಲ ಅಂಗಡಿಮಳಿಗೆಗಳಲ್ಲಿ ಕಳೆಯುವಂತೆ ಮಾಡುತ್ತದೆ. ಅನೇಕರು ಮುಂದಿನ ಕ್ರಿಸ್ಮಸ್ ಹಬ್ಬಕ್ಕೆಂದು ಈಗಿನ ರಿಯಾಯಿತಿ ಮಾರಾಟದಲ್ಲಿ ಉಡುಗೊರೆಗಳನ್ನು ಕೊಳ್ಳುತ್ತಾರೆ. ವರ್ಷಾಂತ್ಯದ ಕೊಳ್ಳುವಿಕೆಗೆಂದು ಹಣ ಕೂಡಿಟ್ಟವರಿಗೆ ಇನ್ನಿಲ್ಲದ ಸಂಭ್ರಮ! ಇವರಲ್ಲಿ ಅನೇಕರು ಜನವರಿ ತಿಂಗಳ ಕೊನೆಗೆ ಮತ್ತು ಫೆಬ್ರವರಿ ತಿಂಗಳಲ್ಲಿ ಡಾಕ್ಟರರ ಮೊರೆ ಹೋಗುತ್ತಾರಂತೆ. ಇನ್ನೇನಿಲ್ಲ, ಕೊಳ್ಳುಬಾಕತನದ ಹುಚ್ಚು ಇಳಿದು, ಪರ್ಸು/ಜೇಬು ಖಾಲಿಯಾಗಿ, ಮಕ್ಕಳು ಶಾಲೆಗೆ ಹಿಂದಿರುಗಿ ಮಾಮೂಲು ಜೀವನ ಮುಖಕ್ಕೆ ರಾಚುತ್ತದೆ. ಇದ್ದಕ್ಕಿದ್ದಂತೆ ತಮ್ಮ ಬದುಕೇ ಖಾಲಿಯಾದಂತೆ, ಅದಕ್ಕೆ ಏನೇನೂ ಅರ್ಥವಿಲ್ಲವೆಂಬಂತೆ ಖಿನ್ನರಾಗಿ ಈ ಶಾಪರ್ಸ್, ಡಾಕ್ಟರರ ಬಳಿ ಗೋಳು ತೋಡಿಕೊಳ್ಳಲು ಓಡುತ್ತಾರಂತೆ. ಬರಿ ಡಾಕ್ಟರರಲ್ಲ, ಸೈಕಾಲಜಿಸ್ಟ್, ಕೌನ್ಸೆಲ್ಲರ್ ಗಳಿಗೂ ಡಿಮ್ಯಾಂಡ್ ಏರುತ್ತದೆ.

ಪ್ರತಿವರ್ಷವೂ ಜನರ ಕಥೆ ಇದೇ ಆಗಿತ್ತು. ಆದರೆ ಕೋವಿಡ್-೧೯ ಬಂದಾಗಲಿಂದ ಕಥೆಗಳ ಆಯಸ್ಸಿಗೆ ಆದಿ-ಅಂತ್ಯಗಳಿಲ್ಲದೆ ಹೇಗೆ ಮುಂದುವರೆಯಬೇಕೊ ತಿಳಿಯದೆ ಅವುಗಳ ಆತ್ಮಕ್ಕೆ ಧಕ್ಕೆಯಾಗಿದೆ. ಇಡೀ ವರ್ಷ ಸರಕಾರಗಳು ಕೊರೋನ ವೈರಸ್ಸಿನ ಸೋಂಕು ತಡೆಗಟ್ಟಲು ವಿವಿಧ ಕ್ರಮಗಳನ್ನು ಜರುಗಿಸಿದ್ದು ವರ್ಷಾಂತ್ಯದಲ್ಲಿ ಅವೆಲ್ಲವೂ ಸಡಿಲವಾಗಿವೆ. ಸೀಸನ್ಸ್ ಗ್ರೀಟಿಂಗ್ಸ್ ಹೇಳುತ್ತ ನಲಿದಾಡುವ ಜನರಿಗೆ ಸೋಂಕು ತಡೆಗಟ್ಟಲು ‘ಮನೆಯೊಳಗಡೆಯೇ ಇರಿ’ ಎಂದು ಹೇಳುವುದು ಹೇಗೆ? ಜನರು ವಸ್ತುಗಳನ್ನು ಕೊಳ್ಳದಿದ್ದರೆ ವ್ಯಾಪಾರಕ್ಕೆ ಮತ್ತಷ್ಟು ಹಾನಿ. ಅವರು ಪ್ರವಾಸ ಸ್ಥಳಗಳಿಗೆ ಹೋಗದಿದ್ದರೆ ಪ್ರವಾಸೋದ್ಯಮಕ್ಕೆ ದೊಡ್ಡ ಪೆಟ್ಟು. ನಾಲ್ಕಾರು ತಿಂಗಳುಗಳು ಲಾಕ್ ಡೌನಿನಲ್ಲಿದ್ದು ನವೆಂಬರಿನಿಂದ ನಕ್ಕುನಲಿಯುತ್ತಿರುವ ಸಿಡ್ನಿ ಮತ್ತು ಮೆಲ್ಬೋರ್ನ್ ನಗರನಿವಾಸಿಗಳನ್ನು ನೋಡಿ ಸಂತೋಷಪಡುವುದಾ ಅಥವಾ ಅವರಿಗೆ ಕೋವಿಡ್-೧೯ರ ನಿರ್ಬಂಧನೆಗಳನ್ನು ಪುನಃಪುನಃ ನೆನಪಿಸುತ್ತಾ ದುಃಖಕ್ಕೆ ದೂಡಬೇಕಾ?

ನಮ್ಮ ರಾಣಿರಾಜ್ಯದಲ್ಲಿ ಎರಡು ಲಸಿಕೆಗಳನ್ನು ಹಾಕಿಸಿಕೊಂಡಿದ್ದರೆ ಮಾತ್ರ ಹೋಟೆಲ್, ಕೆಫೆ, ಸಿನಿಮಾಮಂದಿರ ಇತ್ಯಾದಿ ಕಡೆ ಪ್ರವೇಶ. ಕಾಂಟಾಕ್ಟ್ ಟ್ರೇಸಿಂಗ್ ಚೆಕ್ ಇನ್ ಕಡ್ಡಾಯ. ಲಸಿಕೆ ಹಾಕಿಸಿಕೊಂಡಿದ್ದರ ಪುರಾವೆ ತೋರಿಸಲೇಬೇಕು. ಮುಖಕ್ಕೆ ಮಾಸ್ಕ್ ಇರಲೇಬೇಕು. ಬೂಸ್ಟರ್ ಡೋಸ್ ಬುಕ್ ಮಾಡಿದ್ದೀರಾ ಎಂದು ಕೇಳುತ್ತಾರೆ. ಇವೆಲ್ಲದರ ನಡುವೆ ಓಮಿಕ್ರೋನ್ ಸೋಂಕು ಹರಡುತ್ತಲೇ ಇದೆ. ಮುಂದಿನ ವಾರ ಮತ್ತಷ್ಟು ನಿರ್ಬಂಧನೆಗಳನ್ನು ಜಾರಿಗೆ ತರುವ ಮಾತುಗಳು ಕೇಳಿಬರುತ್ತಿವೆ.

ಸೀಸನ್ಸ್ ಗ್ರೀಟಿಂಗ್ಸ್ ಹೇಳುತ್ತ ನಲಿದಾಡುವ ಜನರಿಗೆ ಸೋಂಕು ತಡೆಗಟ್ಟಲು ಮನೆಯೊಳಗಡೆಯೇ ಇರಿ ಎಂದು ಹೇಳುವುದು ಹೇಗೆ? ಜನರು ವಸ್ತುಗಳನ್ನು ಕೊಳ್ಳದಿದ್ದರೆ ವ್ಯಾಪಾರಕ್ಕೆ ಮತ್ತಷ್ಟು ಹಾನಿ. ಅವರು ಪ್ರವಾಸ ಸ್ಥಳಗಳಿಗೆ ಹೋಗದಿದ್ದರೆ ಪ್ರವಾಸೋದ್ಯಮಕ್ಕೆ ದೊಡ್ಡ ಪೆಟ್ಟು.

ನಮ್ಮ ಕೆಳಗಿನ ಲೋಕದಲ್ಲಿ ಕೋವಿಡ್-೧೯ ಎಂಬ ವಿಷಯದಲ್ಲೀಗ ಬಗೆಬಗೆಯ ವಾಗ್ವಾದಗಳು. ಲಸಿಕೆ-ಪರ ಮತ್ತು ವಿರೋಧಗಳ ಜನರು ನೇರಾನೇರ ಎರಡು ಗುಂಪುಗಳಲ್ಲಿದ್ದಾರೆ. ಅವರನ್ನು ಬಿಟ್ಟು ರಾಜಕೀಯದಲ್ಲಿ, ವ್ಯಾಪಾರಸ್ಥರಲ್ಲಿ, ಪರಿಸರ ಸಂರಕ್ಷಣೆ ಹಿತಾಸಕ್ತಿ ಗುಂಪು, ಮಾನವ ಹಕ್ಕುಗಳ ಪ್ರತಿಪಾದಕರು, ಶಾಲಾಶಿಕ್ಷಕರು ಮತ್ತು ಅವರ ಯೂನಿಯನ್, ಆರೋಗ್ಯಸೇವಾ ಸಿಬ್ಬಂದಿ ವರ್ಗ, ತಂದೆತಾಯಂದಿರು, ಶಾಲಾ ಮಕ್ಕಳು, ಎಲ್ಲರೂ ಈ ವಾದ-ಪ್ರತಿವಾದಗಳಲ್ಲಿ ಸೇರಿಕೊಂಡುಬಿಟ್ಟಿದ್ದಾರೆ. ವರದಿಗಾರರು, ಸುದ್ದಿವಾಹಿನಿಗಳಿಗಂತೂ ಪರಮ ಸಂತೋಷ. ಯಾಕೆಂದರೆ ನಾಡಿನಲ್ಲಿ ನಡೆಯುತ್ತಿರುವ ಸದ್ಯದ ರಾಜಕಾರಣದಲ್ಲಿ ದಿನಕ್ಕೊಂದು ಕತೆ, ದಿನಕ್ಕೊಬ್ಬ ರಾಜ ಎಂಬಂತಾಗಿದೆ. ರಾಜ್ಯಸರ್ಕಾರಗಳು ಅವರದ್ದೇ ಹಾಡು ಹಾಡುತ್ತಿದ್ದರೆ ಕೇಂದ್ರದ ಹಾಡಿನಲ್ಲಿ ಬರೇ ಅಪಶ್ರುತಿಯೇ ಕೇಳುತ್ತಿದೆ.

ಕಳೆದ ವರ್ಷ ೨೦೨೧ರ ಏಪ್ರಿಲ್, ಮೇ ತಿಂಗಳಲ್ಲಿ ಎಲ್ಲರಿಗೂ ಮೊದಲ ವ್ಯಾಕ್ಸಿನ್ ಲಭ್ಯ ಎಂದಿದ್ದರು. ಆದರೆ ಅಕ್ಟೋಬರ್ ತಿಂಗಳಿನಲ್ಲೂ ಇನ್ನೂ ಮೊದಲ ವ್ಯಾಕ್ಸಿನ್ ಪಡೆಯದೇ ಇದ್ದವರೇ ಹೆಚ್ಚು. ಎರಡನೇ ಬಾರಿ ದೀರ್ಘಾವಧಿ ಲಾಕ್ ಡೌನ್ ಆದಾಗ ಲಸಿಕೆಯಲ್ಲಿ ನಂಬಿಕೆಯಿಟ್ಟ ಸಿಡ್ನಿ ಮತ್ತು ಮೆಲ್ಬೋರ್ನ್ ಜನರು ಶಿಸ್ತಿನಿಂದ ಲಸಿಕೆಯ ಎರಡೂ ಡೋಸ್ ಪಡೆಯಲು ಶತಾಯಗತಾಯ ಪ್ರಯತ್ನಿಸಿದರೂ ಎಡವಟ್ಟುಗಳೇ ಜಾಸ್ತಿ. ಲಸಿಕೆ ಪಡೆಯಲು ಬುಕಿಂಗ್ ಮಾಡುವುದರಿಂದ ಹಿಡಿದು ಲಸಿಕೆ ಹಾಕಿಸಿಕೊಳ್ಳುವತನಕ. ಕಡೆಗೂ ವರ್ಷಾಂತ್ಯದಲ್ಲಿ ದೇಶಮಟ್ಟದಲ್ಲಿ ಲಸಿಕೆ ಪಡೆದ ವಯಸ್ಕರು ೯೦% ದಾಟಿದ್ದು ಸಮಾಧಾನವಾಗಿತ್ತು.

ಮುಂದಿನ ವರ್ಷ ಬೂಸ್ಟರ್ ಬರಲಿ, ಸದ್ಯಕ್ಕೆ ನಾವೆಲ್ಲಾ ಕ್ಷೇಮ ಎಂದುಕೊಳ್ಳುವಷ್ಟರಲ್ಲಿ ಓಮಿಕ್ರೋನ್ ಹಾಯ್ ಎಂದಿತು. ಮತ್ತೆ ಸಾವಿರಾರು ಜನರು ಕೋವಿಡ್ ಪಾಸಿಟಿವ್ ಎಂದಾಗ ಎಲ್ಲರಿಗೂ ಕಕ್ಕಾಬಿಕ್ಕಿ, ಗೊಂದಲ. ಕಣ್ಣು ಕಟ್ಟಿ ಕಾಡಿಗೆ ಬಿಟ್ಟಂತಾಗಿದೆ. ಎರಡು ಡೋಸ್ ನಿಂದ ಏನೂ ಪ್ರಯೋಜನ ಆಗಲಿಲ್ಲವೇ?! ಮತ್ತೆ ಟೆಸ್ಟ್ ಮಾಡಿಸಿಕೊಳ್ಳಲು ಜನ ಕ್ಯೂ ನಿಂತಿದ್ದಾರೆ. ಪಾಸಿಟಿವ್ ಆದವರು ಮತ್ತೆ ದೂರವುಳಿಯಬೇಕು. ಆದರೆ ಪಾಸಿಟಿವ್ ಆದ ಆರೋಗ್ಯಸೇವೆ ಸಿಬ್ಬಂದಿ ತಮ್ಮ ಸೇವೆಯಲ್ಲಿ ನಿರತರಾಗಿದ್ದಾರೆ. ಬೇರೆ ದಾರಿಯೇ ಇಲ್ಲವಂತೆ. ಆಸ್ಪತ್ರೆಗಳ ಐಸಿಯೂ ಗಳಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಅಲ್ಲೊಂದು ಇಲ್ಲೊಂದು ಸಾವಾಗುತ್ತಿದೆ. ಇಷ್ಟರ ಮಧ್ಯೆ ಕೇಂದ್ರ ಸರ್ಕಾರವು ‘ಸೋಂಕಿನ ಸಂಶಯವಿದ್ದರೆ ತಕ್ಷಣಕ್ಕೆ ಹೋಗಿ ರಾಪಿಡ್ ಆಂಟಿಜೆನ್ ಟೆಸ್ಟ್ ಮಾಡಿಸಿಕೊಳ್ಳಿ, ಅದು ನಿಮ್ಮದೇ ಜವಾಬ್ದಾರಿ ಮತ್ತು ನಿಮ್ಮದೇ ಖರ್ಚುವೆಚ್ಚ. ಡಾಕ್ಟರ್ ಬಳಿ ಅಥವಾ ಆಸ್ಪತ್ರೆಗೆ ಹೋಗಬೇಡಿ. ಸೋಂಕಿದ್ದರೆ ಅದೇನೆಲ್ಲ ಮಾಡಬೇಕೆಂದು ಹೇಳಿದ್ದೇವೋ ಅವನ್ನು ಮಾಡಿಕೊಂಡು ಮನೆಯಲ್ಲಿರಿ’ ಎಂದು ಹೇಳಿದೆ. ನಂತರ ಮನಸ್ಸು ಬದಲಾಯಿಸಿ, ಉಚಿತ ರಾಪಿಡ್ ಟೆಸ್ಟ್ ಕಿಟ್ ಗಳು ಕಡಿಮೆ ಆದಾಯವುಳ್ಳವರಿಗೆ ಮಾತ್ರ ಸಿಗುತ್ತದೆ, ಎಂದು ಕೇಂದ್ರ ಸರಕಾರ ಹೇಳಿದಾಗ ಇದೇನಿದು ಎಂದು ಜನ ಕೇಳುತ್ತಿದ್ದರೆ, ಅದಾಗಲೇ ಮಳಿಗೆಗಳಲ್ಲಿ RAT ಕಿಟ್ ಗಳು ಮಿಂಚಿನಂತೆ ಮಾರಾಟವಾಗುತ್ತಿವೆ. ಹೋದ ವರ್ಷ ಟಾಯ್ಲೆಟ್ ಪೇಪರ್ ಮಾರಾಟ ಹೀಗೆ ಮಿಂಚಿನ ವೇಗದಲ್ಲಿ ಆಗಿತ್ತು, ಎಂದು ಜನ ಆಡಿಕೊಳ್ಳುತ್ತಿದ್ದಾರೆ.

(ನೊವಾಕ್ ಜೋಕೊವಿಚ್‌)

ಅರವತ್ತೈದು ವರ್ಷ ವಯಸ್ಸಿಗೂ ಕಿರಿಯರಾದವರು ಅವರಿಗೆ ಸೋಂಕು ತಗುಲಿದ ಪಾಸಿಟಿವ್ ಸುದ್ದಿ ತಿಳಿದರೆ ಏನೂ ಮಾಡಲಾಗದೆ ಮನೆಯಲ್ಲೇ ಇದ್ದು ತಮ್ಮನ್ನು ತಾವು ಆರೈಕೆ ಮಾಡಿಕೊಳ್ಳುವ ಸ್ಥಿತಿ. ಎಲ್ಲವೂ ಅಯೋಮಯವಾಗಿದೆ. ಓಮಿಕ್ರೋನ್ ಉರುಳುರುಳಿ ನಗಾಡುತ್ತಿದೆ.

ದೇಶಾದ್ಯಂತ ಸೋಂಕು ತಗುಲಿದ ಜನರ ಸಂಖ್ಯೆ ಐವತ್ತು ಲಕ್ಷಕ್ಕೆ ಬರುತ್ತಿದೆ. ಸಂಖ್ಯೆಗಿಂತಲೂ ಹೆಚ್ಚು ಪರಿಣಾಮವಿರುವುದು ಇದರ ನೋವು ಭರಿಸಬೇಕಾದವರು ಯಾರು ಎಂಬುದರಲ್ಲಿ. ಇವರೆಲ್ಲ ಸಾಮಾನ್ಯ ಜನರು. ಅವರ ಕೆಲಸಕಾರ್ಯಗಳು ನಿಲ್ಲುತ್ತವೆ. ಸರಕಾರದಿಂದ ಯಾವುದೇ ಸಹಾಯವಿಲ್ಲ, ಗೋಳು ಕೇಳುವವರು ಯಾರೂ ಇಲ್ಲವೆಂದಾಗ ರಾಜಕೀಯ ಅರಾಜಕತೆ ಕಾಣಿಸುತ್ತದೆ. ಇದಕ್ಕೆ ‘ಪಾಂಡೆಮಿಕ್ ಪಾಲಿಟಿಕ್ಸ್’ ಎಂದು ಹೆಸರು ಬಂದಿದೆ.

ಈ ನಡುವೆ ರೋಚಕ ವಿಷಯವೆಂದರೆ ಖ್ಯಾತ ಟೆನಿಸ್ ಪಟು ನೊವಾಕ್ ಜೋಕೊವಿಚ್‌ ಆಸ್ಟ್ರೇಲಿಯಾದಲ್ಲಿ ದೊಡ್ಡ ಸುದ್ದಿಯಾಗಿದ್ದಾರೆ. ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯದಲ್ಲಿ ಆಡಲು ಕಳೆದ ಬುಧವಾರ ಬಂದರು. ಅವರೇ ಹೇಳಿಕೊಂಡಿದ್ದಂತೆ ಲಸಿಕೆ ಹಾಕಿಸಿಕೊಳ್ಳದಿರುವ ಅವರಿಗೆ ಆಸ್ಟ್ರೇಲಿಯನ್ ಸರಕಾರದಿಂದ ವೀಸಾ ರಿಯಾಯ್ತಿ ಸಿಕ್ಕಿತ್ತಂತೆ. ಕೇಂದ್ರ ಸರಕಾರ ಹೇಳಿದ್ದಂತೆ ಆಸ್ಟ್ರೇಲಿಯನ್ ಕಾನೂನಿನಂತೆ ನೊವಾಕ್ ಬಳಿ ‘ಒಪ್ಪಿಕೊಳ್ಳುವಂಥ ಆಧಾರವಿದ್ದರೆ’ ಅವರು ದೇಶದೊಳಗೆ ಬರಬಹುದು. ಸರಿ, ಅದನ್ನು ನಂಬಿಕೊಂಡು ಅವರೇನೋ ಮೆಲ್ಬೋರ್ನ್ ನಗರಕ್ಕೆ ಬಂದರು. ಅವರ ಬಳಿ ಇದ್ದ ‘ಒಪ್ಪಿಕೊಳ್ಳುವಂಥ ಆಧಾರ’ ವನ್ನು ಪರೀಕ್ಷಿಸಿದ ಗಡಿರಕ್ಷಣಾ ಸಿಬ್ಬಂದಿ ಅದನ್ನು ಮನ್ನಿಸಲಿಲ್ಲ. ವಿಕ್ಟೋರಿಯಾ ರಾಜ್ಯ ಸರಕಾರ ಕೇಂದ್ರವನ್ನು ‘ವೀಸಾ ಮನ್ನಿಸುವಂತೆ’ ಕೇಳಿಕೊಂಡಿತು. ಅಷ್ಟರಲ್ಲಿ ದೇಶದ ಜನತೆಗೆ ವಿಷಯ ಗೊತ್ತಾಗಿ, ನಮ್ಮನ್ನು ಗಮನಿಸದೆ ನಮಗೆ ನಾಮ ಹಾಕಿ, ಖ್ಯಾತನಾಮರಿಗೆ ಮಣೆ ಹಾಕುತ್ತೀರಾ ಎಂದು ಗುಲ್ಲೆದ್ದಿತ್ತು. ಕೇಂದ್ರ ಸರಕಾರ ‘ರೂಲ್ಸ್ ಎಂದರೆ ರೂಲ್ಸ್’ ಎಂದು ಉಚ್ಛರಿಸಿ ನೊವಾಕ್ ವಾಪಸ್ ಹೋಗಬೇಕೆಂದು ಆಜ್ಞಾಪಿಸಿದೆ. ಇದು ಮೊನ್ನೆ ಗುರುವಾರದ ಸುದ್ದಿ. ಟೆನಿಸ್ ಲೋಕದಲ್ಲಿ ಮಾರುತವೆದ್ದಿದೆ. ವಿಶ್ವಮಟ್ಟದ ಸುದ್ದಿಯಾಗಿದೆ. ಈಗ ಬರಿಯ ದೇಶದ ಜನರಷ್ಟೇ ಕೇಳುತ್ತಿಲ್ಲ, ಜಗತ್ತಿನ ಜನರು ಕೇಳುತ್ತಿದ್ದಾರೆ- ಈ ಕೆಳಗಿನ ಲೋಕದಲ್ಲಿ ನಡೆಯುತ್ತಿರುವುದಾದರೂ ಏನು ಕತೆ!