ಜೂನ್ ತಿಂಗಳ ಮಧ್ಯಭಾಗದಲ್ಲಿ ಒಂದು ದಿನ ಪಕ್ಕದ ಜಮೀನಿಂದ ಜನ ಖುಷಿಯಾಗಿ ಕೂಗಾಡುವುದು, ಗುಂಡು ಹಾರಿಸುವುದು ಕೇಳಿಸಿತು. ಏನೆಂದು ನೋಡುವುದಕ್ಕೆ ಹೋದೆ. ಬಾವಿಯಲ್ಲಿ ನೀರು ಚಿಮ್ಮಿತ್ತು. ಆ ಒಳ್ಳೆಯ ಸುದ್ದಿ ಕೇಳಿದ ತಕ್ಷಣ ಜಮೀನಿನ ಯಜಮಾನ ಸಂಭ್ರಮಪಡುವುದಕ್ಕೆಂದು ರಯೀಸ್ ನಿಂದ ಬಂದಿದ್ದ. ಖುಷಿಯಲ್ಲಿ ಆಕಾಶಕ್ಕೆ ಗುಂಡು ಹಾರಿಸುತಿದ್ದ. ಗಾಳಿಯಲ್ಲಿ ಮದ್ದಿನ ಪುಡಿಯ ಘಾಟಿತ್ತು. ಸಂಪ್ರದಾಯಕ್ಕೆ ತಕ್ಕ ಹಾಗೆ ಬಾವಿ ತೋಡುವವನಿಗೆ, ಅವನ ಕೈಯಾಳುಗಳಿಗೆ ಬಹುಮಾನ, ಉಡುಗೊರೆಗಳನ್ನು ಕೊಟ್ಟ. ಬಾವಿಯಲ್ಲಿ ನೀರು ಬಂದದ್ದರಿಂದ ಅವನು ತನ್ನ ಜಮೀನಿನಲ್ಲಿ ಇತರ ಕಟ್ಟಡಗಳ ನಿರ್ಮಾಣದ ಯೋಜನೆ ಮುಂದುವರೆಸಬಹುದಾಗಿತ್ತು.
ಓ.ಎಲ್. ನಾಗಭೂಷಣಸ್ವಾಮಿ ಅನುವಾದಿಸಿದ ಒರ್ಹಾನ್ ಪಮುಕ್ ಬರೆದ ‘The Red-Haired Woman’ ಕಾದಂಬರಿಯ ಆಯ್ದ ಭಾಗ ನಿಮ್ಮ ಓದಿಗೆ

 

ಅವತ್ತೊಂದು ದಿನ ಸ್ಕೂಲಿನಿಂದ ಬಂದೆ. ಯಾವುದೋ ಕುತೂಹಲ ನನ್ನನ್ನು ಅಪ್ಪ ಅಮ್ಮರ ಬೆಡ್ ರೂಮಿಗೆ ದಬ್ಬಿಕೊಂಡು ಹೋಯಿತು. ಡ್ರಾನಲ್ಲಿದ್ದ, ವಾರ್ಡ್ರೋಬಿನಲ್ಲಿದ್ದ ಅಪ್ಪನ ಎಲ್ಲ ವಸ್ತುಗಳು, ಅಂಗಿಗಳು ಕಾಣೆಯಾಗಿದ್ದವು. ಅಪ್ಪನ ತಂಬಾಕಿನ ಘಾಟು, ಕೊಲೋನ್ ಪರಿಮಳ ಮಾತ್ರ ಕೋಣೆಯಲ್ಲಿ ಇನ್ನೂ ಸುಳಿದಾಡುತಿದ್ದವು. ಅಮ್ಮನಾಗಲೀ ನಾನಾಗಲೀ ಅಪ್ಪನ ವಿಚಾರ ಮಾತಾಡಲಿಲ್ಲ. ಅಪ್ಪನ ಚಿತ್ರ ಆಗಲೇ ಮಸುಕಾಗಿ ಮನಸಿನಿಂದ ಮರೆಯಾಗುತಿತ್ತು.

ನಾನೂ ಅಮ್ಮನೂ ಆಪ್ತಮಿತ್ರರಾದೆವು. ಹಾಗಿದ್ದರೂ ಸಾಹಿತಿಯಾಗಬೇಕೆಂಬ ನನ್ನ ಆಸೆಯನ್ನು ಅವಳು ಜೋಕ್ ಅಂತಲೇ ತಿಳಿದಿದ್ದಳು. ಮೊದಲನೆಯದಾಗಿ ಒಳ್ಳೆಯ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆಯಬೇಕಾಗಿತ್ತು, ಅದಕ್ಕಾಗಿ ಪ್ರವೇಶ ಪರೀಕ್ಷೆ ಎದುರಿಸಲು ವಿಶೇಷ ತರಬೇತಿ ಪಡೆಯಬೇಕಾಗಿತ್ತು. ಹಾಗೆ ಪಡೆಯುವುದಕ್ಕೆ ಬೇಕಾಗುವಷ್ಟು ದುಡ್ಡು ಸಂಪಾದಿಸಬೇಕಾಗಿತ್ತು. ಪುಸ್ತಕದಂಗಡಿಯವನು ನನಗೆ ಕೊಡುತಿದ್ದ ಸಂಬಳದಿಂದ ಅಮ್ಮನಿಗೆ ಸಮಾಧಾನವಾಗಿರಲಿಲ್ಲ. ಹೈಸ್ಕೂಲಿನ ಎರಡನೆಯ ವರ್ಷ ಮುಗಿದ ನಂತರ ಬೇಸಗೆಯಲ್ಲಿ ನಾವು ಇಸ್ತಾಂಬುಲ್ ನಿಂದ ಗೇಬ್ಸೆಗೆ ಹೋದೆವು. ನಮ್ಮ ದೊಡ್ಡಮ್ಮನ, ಅಮ್ಮನ ಅಕ್ಕನ ಮನೆಯಲ್ಲಿ, ಅವರು ತೋಟದಲ್ಲಿ ಹೊಸದಾಗಿ ಕಟ್ಟಿಸಿದ್ದ ಔಟ್ ಹೌಸಿನಲ್ಲಿ ನಾವು ಇರುವುದಕ್ಕೆ ವ್ಯವಸ್ಥೆ ಆಗಿತ್ತು. ದೊಡ್ಡಪ್ಪ ನನಗೊಂದು ಕೆಲಸ ಕೊಡಿಸಬೇಕಾಗಿತ್ತು; ಬೇಸಗೆಯ ಅರ್ಧದಷ್ಟು ಸಮಯ ಆ ಕೆಲಸ ಮಾಡಿ ಆಮೇಲೆ ಬೆಶಿಕ್ತಾಶ್ ನ ಡೆನಿಝ್ ಪುಸ್ತಕದಂಗಡಿಯ ಕೆಲಸ ಮುಂದುವರೆಸಬಹುದು, ಟ್ಯುಟೋರಿಯಲ್ ಗೂ ಹೋಗಬಹುದು ಅಂದುಕೊಂಡಿದ್ದೆ. ಬೆಶಿಕ್ತಾಶ್ ನಲ್ಲಿ ಬಿಡಬೇಕಲ್ಲಾ ಎಂದು ಎಷ್ಟು ಬೇಜಾರು ಮಾಡಿಕೊಂಡಿದ್ದೆ ಅನ್ನುವುದು ಡೆನಿಝ್ ಗೆ ಗೊತ್ತಿತ್ತು. ನನಗೆ ಇಷ್ಟಬಂದಾಗ ಬಂದು ಪುಸ್ತಕದಂಗಡಿಯಲ್ಲಿ ರಾತ್ರಿ ಕಳೆಯಬಹುದು ಎಂದು ಹೇಳಿದ್ದ.

ನಮ್ಮ ದೊಡ್ಡಪ್ಪನಿಗೆ ಗೇಬ್ಸೆಯ ಹೊರವಲಯದಲ್ಲಿ ಚೆರಿ, ಜೊತೆಗೆ ಅಂಜೂರದ ತೋಪು ಇತ್ತು. ಆ ತೋಟ ಕಾಯುವ ಕೆಲಸ ನನಗೆ ಕೊಟ್ಟ. ಒಂದು ಶೆಡ್ಡು, ಅದರಲ್ಲೊಂದು ಮುರುಕಲು ಮೇಜು-ಅದು ನನ್ನ ಕೆಲಸದ ಜಾಗ. ಇಲ್ಲಿ ಬೇಕಾದಷ್ಟು ಸಮಯ ಇರುತ್ತದೆ, ಕೂತು ಓದಬಹುದು ಅಂದುಕೊಂಡಿದ್ದೆ. ಅಂದುಕೊಂಡದ್ದು ತಪ್ಪಾಗಿತ್ತು. ಅದು ಚೆರಿ ಹಣ್ಣಿನ ಕಾಲ. ರಾಶಿ ರಾಶಿ ಕಾಗೆಗಳು ಕರ್ಕಶವಾಗಿ ಸದ್ದು ಮಾಡುತ್ತ ಹಣ್ಣಿನ ಮರಗಳ ಮೇಲೆ ಎರಗುತಿದ್ದವು. ಪಕ್ಕದ ಜಮೀನಿನಲ್ಲಿ ಇದ್ದ ಕಟ್ಟಡ ಕೆಲಸಗಾರರ ಮಕ್ಕಳ ಗುಂಪು ಹಣ್ಣು ಕದಿಯಲು ಸದಾ ಹೊಂಚು ಹಾಕುತಿತ್ತು.

ನಮ್ಮ ತೋಟದ ಪಕ್ಕದ ಜಮೀನಿನಲ್ಲಿ ಬಾವಿ ತೋಡುತಿದ್ದರು. ಒಂದೊಂದು ಸಲ ಅಲ್ಲಿಗೆ ಹೋಗಿ ಬಾವಿ ತೋಡುವುದನ್ನು ನೋಡುತಿದ್ದೆ. ಸಲಿಕೆ, ಪಿಕಾಸಿ ಹಿಡಿದು ತೋಡಿದ ಮಣ್ಣನ್ನು ಇಬ್ಬರು ಕೈಯಾಳುಗಳು ಎತ್ತಿ ಖಾಲಿ ಮಾಡುತಿದ್ದರು.

ಕೈಯಾಳುಗಳು ರಾಟೆಯ ಹಿಡಿ ತಿರುಗಿಸುತ್ತಾ ಬಕೆಟ್ಟಿನ ತುಂಬ ಮಣ್ಣನ್ನು ಮೇಲೆಳೆದುಕೊಂಡು ತಳ್ಳುಗಾಡಿಗೆ ಬಗ್ಗಿಸಿಕೊಳ್ಳುವಾಗ ಖುಷಿಯಾಗುವ ಹಾಗೆ ಕಿರುಗುಟ್ಟುವ ಸದ್ದು ಹುಟ್ಟುತಿತ್ತು. ಚಿಕ್ಕವನು, ಸುಮಾರು ನನ್ನ ವಯಸ್ಸಿನವನು, ಗಾಡಿಯನ್ನು ದಬ್ಬಿಕೊಂಡು ಮಣ್ಣನ್ನು ದೂರದಲ್ಲಿ ಸುರಿದು ಬರುತ್ತಿದ್ದ; ದೊಡ್ಡವನು ರಾಟೆಯ ಹತ್ತಿರವೇ ಇದ್ದು ‘ಬಕೆಟ್ಟು ಬಂತೂ,’ ಎಂದು ನೆಲದಾಳದಲ್ಲಿ ತೋಡುತಿದ್ದವನ್ನು ಕೂಗಿ ಎಚ್ಚರಿಸಿ ಮತ್ತೆ ಖಾಲಿ ಬಕೆಟ್ಟು ಕೆಳಗೆ ಇಳಿಸುತಿದ್ದ.

ಬಾವಿ ತೋಡುವವನು ಹಗಲು ಹೊತ್ತಿನಲ್ಲಿ ಕಣ್ಣಿಗೇ ಬೀಳುತ್ತಿರಲಿಲ್ಲ. ಅವನನ್ನು ಮೊದಲು ನೋಡಿದಾಗ ಆಗ ತಾನೇ ಮಧ್ಯಾಹ್ನದ ಊಟ ಮುಗಿಸಿ ಸಿಗರೇಟು ಸೇದುತ್ತ ಇದ್ದ. ತೆಳ್ಳಗೆ ಎತ್ತರವಾಗಿದ್ದ, ನೋಡುವುದಕ್ಕೆ ಚೆನ್ನಾಗಿದ್ದ-ನಮ್ಮ ಅಪ್ಪನ ಹಾಗೇ. ಅಪ್ಪ ಸಹಜವಾಗಿಯೇ ಶಾಂತವಾಗಿ, ನಗುನಗುತ್ತ ಇದ್ದರೆ, ಈ ಬಾವಿ ತೋಡುವವನು ರೇಗಾಡುತಿದ್ದ. ಕೆಲಸದ ಹುಡುಗರನ್ನ ಎಷ್ಟೋ ಸಾರಿ ಬೈಯುತಿದ್ದ. ನನ್ನೆದುರಿಗೆ ಬೈಯಿಸಿಕೊಂಡರೆ ಹುಡುಗರಿಗೆ ಕಸಿವಿಸಿ ಆದೀತೆಂದು ಉಸ್ತಾದ ನೆಲದ ಮೇಲೆ ಇರುವಾಗೆಲ್ಲ ಅವರ ಕಣ್ಣಿಗೆ ಬೀಳದೆ ಮರೆಯಾಗಿರುತಿದ್ದೆ.

(ಒರ್ಹಾನ್ ಪಮುಕ್)

ಜೂನ್ ತಿಂಗಳ ಮಧ್ಯಭಾಗದಲ್ಲಿ ಒಂದು ದಿನ ಪಕ್ಕದ ಜಮೀನಿಂದ ಜನ ಖುಷಿಯಾಗಿ ಕೂಗಾಡುವುದು, ಗುಂಡು ಹಾರಿಸುವುದು ಕೇಳಿಸಿತು. ಏನೆಂದು ನೋಡುವುದಕ್ಕೆ ಹೋದೆ. ಬಾವಿಯಲ್ಲಿ ನೀರು ಚಿಮ್ಮಿತ್ತು. ಆ ಒಳ್ಳೆಯ ಸುದ್ದಿ ಕೇಳಿದ ತಕ್ಷಣ ಜಮೀನಿನ ಯಜಮಾನ ಸಂಭ್ರಮಪಡುವುದಕ್ಕೆಂದು ರಯೀಸ್ ನಿಂದ ಬಂದಿದ್ದ. ಖುಷಿಯಲ್ಲಿ ಆಕಾಶಕ್ಕೆ ಗುಂಡು ಹಾರಿಸುತಿದ್ದ. ಗಾಳಿಯಲ್ಲಿ ಮದ್ದಿನ ಪುಡಿಯ ಘಾಟಿತ್ತು. ಸಂಪ್ರದಾಯಕ್ಕೆ ತಕ್ಕ ಹಾಗೆ ಬಾವಿ ತೋಡುವವನಿಗೆ, ಅವನ ಕೈಯಾಳುಗಳಿಗೆ ಬಹುಮಾನ, ಉಡುಗೊರೆಗಳನ್ನು ಕೊಟ್ಟ. ಬಾವಿಯಲ್ಲಿ ನೀರು ಬಂದದ್ದರಿಂದ ಅವನು ತನ್ನ ಜಮೀನಿನಲ್ಲಿ ಇತರ ಕಟ್ಟಡಗಳ ನಿರ್ಮಾಣದ ಯೋಜನೆ ಮುಂದುವರೆಸಬಹುದಾಗಿತ್ತು. ನಗರದಲ್ಲಿದ್ದ ನೀರು ಸರಬರಾಜು ಯೋಜನೆ ಇನ್ನೂ ಹೊರವಲಯದ ಗೇಬ್ಸ್ ಗೆ ಮುಟ್ಟಿರಲಿಲ್ಲ.

ಮುಂದೆ ಒಂದಷ್ಟು ದಿನ ಉಸ್ತಾದನು ಕೆಲಸದ ಹುಡುಗರ ಮೇಲೆ ಕೂಗಾಡಿದ್ದು ಕೇಳಲೇ ಇಲ್ಲ. ಒಂದು ದಿನ ಮಧ್ಯಾಹ್ನ ಕುದುರೆ ಗಾಡಿಗಳಲ್ಲಿ ಸಿಮೆಂಟಿನ ಮೂಟೆ, ಕಬ್ಬಿಣದ ಸರಳುಗಳು ಬಂದವು. ಉಸ್ತಾದ್ ಬಾವಿಯ ಬದಿಗಳಿಗೆಲ್ಲ ಕಾಂಕ್ರೀಟು ಹಾಕಿ, ಲೋಹದ ಮುಚ್ಚಳ ಹೊದಿಸಿದ. ಅವನು, ಅವನ ಕೈಯಾಳುಗಳು ಒಳ್ಳೆಯ ಮೂಡಿನಲ್ಲಿದ್ದುದರಿಂದ ಅವರ ಜೊತೆ ಹೆಚ್ಚು ಕಾಲ ಕಳೆಯುತಿದ್ದೆ.

ಅವತ್ತೊಂದು ದಿನ ಸುಮ್ಮನೆ ಬಾವಿಯ ಹತ್ತಿರ ಹೋದೆ. ಯಾರೂ ಇರುವುದಿಲ್ಲ ಅಂದುಕೊಂಡಿದ್ದೆ. ಬಾವಿ ತೋಡುವ ಉಸ್ತಾದ್ ಮಹಮದ್ ಆಲಿವ್ ಮರದ ಹಿಂದಿನಿಂದ ತಟ್ಟನೆ ಕಾಣಿಸಿಕೊಂಡ. ಬಾವಿಗೆ ಜೋಡಿಸಿದ್ದ ಎಲೆಕ್ಟ್ರಿಕ್ ಪಂಪಿನ ಒಂದು ಭಾಗ ಅವನ ಕೈಯಲ್ಲಿತ್ತು.

‘ಬಾವಿ ಕೆಲಸದ ಮೇಲೆ ಇಂಟರೆಸ್ಟ್ ಇರುವ ಹಾಗಿದೆಯಲ್ಲಾ ಹುಡುಗಾ!’ ಅಂದ.

ಜೂಲ್ಸ್ವರ್ನ್ ನ ‘ಭೂಗರ್ಭ ಯಾತ್ರೆ’ ಕಾದಂಬರಿಯಲ್ಲಿ ಜಗತ್ತಿನ ಒಂದು ತುದಿಯಲ್ಲಿ ಕೆಳಕ್ಕಿಳಿದು ಇನ್ನೊಂದು ತುದಿಯಲ್ಲಿ ಹೊರಬಂದ ಜನರ ನೆನಪಾಗುತ್ತಿತ್ತು.

`ಕುಕುಕ್ಸೆಮೆಸ್ ನ ಆಚೆ ಇನ್ನೊಂದು ಬಾವಿ ತೋಡುವುದಕ್ಕೆ ಹೋಗುತಿದ್ದೇನೆ. ಈ ಹುಡುಗರು ಬರಲ್ಲವಂತೆ. ನೀನು ಬರತೀಯಾ?’
ನಾನು ಹಿಂಜರಿಯುತ್ತಿರುವುದನ್ನು ನೋಡಿ, ಬಾವಿ ತೋಡುವವನ ಜೊತೆ ಸರಿಯಾಗಿ ಕೆಲಸ ಮಾಡಿದರೆ ಸಿಗುವ ಕೂಲಿ ತೋಟದ ಕಾವಲುಗಾರನ ಸಂಬಳದ ನಾಲ್ಕರಷ್ಟು ಇರುತ್ತದೆ, ಕೆಲಸ ಹತ್ತು ದಿನದಲ್ಲಿ ಮುಗಿಯುತ್ತದೆ, ಆಮೇಲೆ ಮನೆಗೆ ಹೋಗಬಹುದು ಅಂದ.

ಸಾಯಂಕಾಲ ಮನೆಗೆ ಹೋಗಿ ಅಮ್ಮನಿಗೆ ಹೇಳಿದರೆ, ‘ಬಿಲ್ ಕುಲ್ ಆಗಲ್ಲ. ನೀನು ಯೂನಿವರ್ಸಿಟಿಗೆ ಹೋಗತೀಯ, ಬಾವಿ ತೋಡುವುದಕ್ಕಲ್ಲ,’ ಅಂದುಬಿಟ್ಟಳು.

ಜಾಸ್ತಿ ದುಡ್ಡು ಬೇಗ ಸಂಪಾದಿಸಬಹುದು ಅನ್ನುವ ವಿಚಾರ ನನ್ನ ತಲೆಯಲ್ಲಿ ಕೂತುಬಿಟ್ಟಿತ್ತು. ದೊಡ್ಡಪ್ಪನ ತೋಟದಲ್ಲಿ ಎರಡು ತಿಂಗಳು ದುಡಿದರೆ ಸಿಗುವಷ್ಟು ದುಡ್ಡು ಎರಡೇ ವಾರದಲ್ಲಿ ಸಿಗತ್ತೆ, ಪ್ರವೇಶಪರೀಕ್ಷೆಗೆ ಸಿದ್ಧವಾಗುವುದಕ್ಕೆ ತರಬೇತಿಶಾಲೆಗೆ ಹೋಗುವುದಕ್ಕೆ, ನಾನು ಓದಬೇಕೆಂದಿರುವ ಪುಸ್ತಕಗಳನ್ನೆಲ್ಲ ಓದುವುದಕ್ಕೆ ಸಮಯ ಸಿಗುತ್ತದೆ ಅಂದೆ. ಕೊನೆಗೆ ಬಡಪಾಯಿ ಅಮ್ಮನನ್ನು ಹೆದರಿಸಿದೆ:
‘ಹೋಗುವುದಕ್ಕೆ ಬಿಡದಿದ್ದರೆ ಮನೆ ಬಿಟ್ಟು ಓಡಿಹೋಗುತೇನೆ,’ ಅಂದೆ.

‘ಹುಡುಗ ಕಷ್ಟಪಟ್ಟು ದುಡಿದು ದುಡ್ಡು ಸಂಪಾದನೆ ಮಾಡಬೇಕು ಅಂದುಕೊಂಡರೆ ಅದಕ್ಕೆ ಅಡ್ಡಿ ಮಾಡಬೇಡ. ಆ ಬಾವಿ ತೋಡುವವನು ಯಾರೋ ನಾನು ವಿಚಾರಿಸಿ ನೋಡತೇನೆ,’ ಅಂದ ದೊಡ್ಡಪ್ಪ.

ಬಾವಿ ತೋಡುವವನು ಹಗಲು ಹೊತ್ತಿನಲ್ಲಿ ಕಣ್ಣಿಗೇ ಬೀಳುತ್ತಿರಲಿಲ್ಲ. ಅವನನ್ನು ಮೊದಲು ನೋಡಿದಾಗ ಆಗ ತಾನೇ ಮಧ್ಯಾಹ್ನದ ಊಟ ಮುಗಿಸಿ ಸಿಗರೇಟು ಸೇದುತ್ತ ಇದ್ದ. ತೆಳ್ಳಗೆ ಎತ್ತರವಾಗಿದ್ದ, ನೋಡುವುದಕ್ಕೆ ಚೆನ್ನಾಗಿದ್ದ-ನಮ್ಮ ಅಪ್ಪನ ಹಾಗೇ. ಅಪ್ಪ ಸಹಜವಾಗಿಯೇ ಶಾಂತವಾಗಿ, ನಗುನಗುತ್ತ ಇದ್ದರೆ, ಈ ಬಾವಿ ತೋಡುವವನು ರೇಗಾಡುತಿದ್ದ.

ದೊಡ್ಡಪ್ಪ ಲಾಯರು. ಟೌನ್ ಹಾಲ್ ಹತ್ತಿರ ಇದ್ದ ತನ್ನ ಆಫೀಸಿನಲ್ಲಿ ಬಾವಿತೋಡುವವನ ಮತ್ತೆ ಅಮ್ಮನ ಮೀಟಿಂಗು ಏರ್ಪಾಟು ಮಾಡಿದ. ಬಾವಿ ತೋಡುವವನು ಇನ್ನೊಬ್ಬ ಕೈಯಾಳನ್ನು ನೇಮಿಸಿಕೊಳ್ಳಬೇಕು, ಬಾವಿಯೊಳಕ್ಕೆ ಇಳಿಯುವ ಕೆಲಸ ಏನಿದ್ದರೂ ಅವನದ್ದು, ನನ್ನನ್ನು ಇಳಿಸಬಾರದು ಎಂದು ನನ್ನ ಗೈರು ಹಾಜರಿಯಲ್ಲಿ ಮೂರೂ ಜನ ತೀರ್ಮಾನಕ್ಕೆ ಬಂದರು. ನನ್ನ ದಿನದ ಕೂಲಿ ಎಷ್ಟಿರುತ್ತದೆ ಅನ್ನುವ ಮಾಹಿತಿಯನ್ನು ದೊಡ್ಡಪ್ಪ ಕೊಟ್ಟ. ಒಂದೆರಡು ಅಂಗಿ, ಜಿಮ್ ಗೆ ನಾನು ಹಾಕಿಕೊಂಡು ಹೋಗುತಿದ್ದ ರಬ್ಬರ್ ಶೂಗಳನ್ನು ನಮ್ಮಪ್ಪನ ಹಳೆಯ ಸೂಟ್ ಕೇಸಿಗೆ ತುಂಬಿಕೊಂಡು ಸಿದ್ಧನಾದೆ.

ನಾನು ಹೊರಡುವ ದಿನ ಮಳೆ ಬರುತಿತ್ತು. ನನ್ನನ್ನು ಕೆಲಸದ ಜಾಗಕ್ಕೆ ಕರಕೊಂಡು ಹೋಗುವ ಮಿನಿಲಾರಿ ಎಷ್ಟು ಹೊತ್ತಾದರೂ ಬರುತ್ತಲೇ ಇಲ್ಲ ಅನಿಸುತಿತ್ತು. ಸೋರುವ ಚಾವಣಿಯ ಔಟ್ ಹೌಸಿನಲ್ಲಿ ನಾವು ಕಾಯುತ್ತಿರುವಾಗ ಅಮ್ಮ ನನ್ನನ್ನು ಮತ್ತೆ ಮತ್ತೆ ಅಪ್ಪಿಕೊಂಡು ಅತ್ತಳು. ಇನ್ನೊಂದು ಸಾರಿ ಯೋಚನೆ ಮಾಡಿ ನೋಡು. ನೀನು ಇಲ್ಲದೆ ಇರಲಾರೆ. ಈಗ ನಮಗೆ ಬಡತನ ಅನ್ನುವುದು ನಿಜ, ಆದರೂ ಬಾವಿ ತೋಡುವ ಕೆಲಸಕ್ಕೆ ಹೋಗುವುದು ಬೇಕಾಗಿಲ್ಲ, ಅಂತೆಲ್ಲ ಹೇಳಿದಳು.

ಸೂಟ್ ಕೇಸು ಹಿಡಿದುಕೊಂಡು, ಅಪ್ಪನನ್ನು ವಿಚಾರಣೆಗೆ ಕರಕೊಂಡು ಹೋಗುವಾಗ ಅವನ ಮುಖದಲ್ಲಿರುತಿದ್ದಂಥ ಉದ್ಧಟತನವನ್ನೇ ನನ್ನ ಮುಖದ ಮೇಲೂ ತಂದುಕೊಂಡು, ಅಣಕಿಸುವ ದನಿಯಲ್ಲಿ, ‘ಯೋಚನೆ ಮಾಡಬೇಡ, ನಾನು ಬಾವಿಗೆ ಇಳಿಯಲ್ಲ,’ ಅನ್ನುತ್ತ ಮನೆಯಿಂದ ಹೊರಬಿದ್ದೆ. ನಮ್ಮನ್ನು ಕರಕೊಂಡು ಹೋಗುವ ಮಿನಿಲಾರಿ ಉದ್ದನೆಯ ಮೀನಾರಿನ ಹಳೆಯ ಮಸೀದಿಯ ಹಿಂದೆ ಇದ್ದ ಖಾಲಿ ಜಾಗದಲ್ಲಿ ಕಾಯುತಿತ್ತು. ಉಸ್ತಾದ್ ಮಹಮದ್ ಕೈಯಲ್ಲಿ ಸಿಗರೇಟು ಹಿಡಿದು, ಮುಖದ ಮೇಲೆ ನಗು ತಂದುಕೊಂಡು, ನನ್ನ ಬಟ್ಟೆ, ನಾನು ನಡೆಯುವ ರೀತಿ, ನನ್ನ ಸೂಟ್ ಕೇಸು ಎಲ್ಲವನ್ನೂ ಸ್ಕೂಲು ಮಾಸ್ಟರನ ಹಾಗೆ ಗಮನಿಸುತ್ತ ನಿಂತಿದ್ದ.

‘ಹೊತ್ತಾಯಿತು, ಹತ್ತು,’ ಅಂದ. ನಮಗೆ ಬಾವಿ ತೋಡುವ ಕೆಲಸ ಕೊಟ್ಟಿದ್ದ ವ್ಯಾಪಾರಸ್ಥ ಹೆಯರಿ ಬೇ ಕಳಿಸಿದ್ದ ಡ್ರೈವರು ಮತ್ತು ಮಹಮದ್ ರ ಮಧ್ಯೆ ನಾನು ಕೂತೆ. ಸುಮಾರು ಒಂದು ಗಂಟೆಯಷ್ಟು ಹೊತ್ತು ಮೌನವಾಗಿ ದಾರಿ ಸಾಗಿತು.

ಬಾಸ್ಫರಸ್ ಸೇತುವೆ ದಾಟುವಾಗ ಎಡಕ್ಕೆ ಹೊರಳಿ ಇಸ್ತಾಂಬುಲ್ ನಗರವನ್ನು ನೋಡಿದೆ, ಕಬತಾಶ್ ಹೈ ಸ್ಕೂಲು, ಜೊತೆಗೆ ಬೆಶಿಕ್ತಾಶ್ ನ ಇನ್ನು ಯಾವ ಯಾವ ಕಟ್ಟಡ ಗುರುತಿಸಲು ಆಗುತ್ತದೆಯೋ ನೋಡಿದೆ.

‘ಯೋಚನೆ ಮಾಡಬೇಡ, ತುಂಬ ದಿನ ಆಗಲ್ಲ. ನಿನ್ನ ಪರೀಕ್ಷೆ ಹೊತ್ತಿಗೆ ವಾಪಸ್ಸು ಹೋಗಬಹುದು,’ ಅಂದ ಉಸ್ತಾದ್ ಮಹಮದ್. ನಮ್ಮಮ್ಮನೂ ದೊಡ್ಡಪ್ಪನೂ ನನ್ನ ವಿಷಯ ಎಲ್ಲ ಹೇಳಿದ್ದಾರೆ ಅನ್ನುವುದು ಗೊತ್ತಾಗಿ ಖುಷಿಯಾಯಿತು. ಈ ಮನುಷ್ಯನನ್ನು ನಂಬಬಹುದು ಅಂದುಕೊಂಡೆ. ಸೇತುವೆ ದಾಟಿದ ಮೇಲೆ ನಾವು ಇಸ್ತಾಂಬುಲ್ ನ ಟ್ರಾಫಿಕ್ಕಿನಲ್ಲಿ ಸಿಕ್ಕಿಬಿದ್ದೆವು. ನಾವು ಊರು ಬಿಟ್ಟು ಹೊರಕ್ಕೆ ಬರುವಷ್ಟರಲ್ಲಿ ಸೂರ್ಯ ಆಗಲೇ ಮುಳುಗುತಿದ್ದ. ಬರೆ ಹಾಕಿದ ಹಾಗೆ ಬಿಸಿಲು ಸುಡುತಿತ್ತು.

ಊರಾಚೆಗೆ ಅಂದೆ; ನನ್ನ ಓದುಗರು ಗೊಂದಲಕ್ಕೆ ಗುರಿಯಾಗುವುದು ಬೇಡ. ಆ ಕಾಲದಲ್ಲಿ ಇಸ್ತಾಂಬುಲ್ ನ ಜನಸಂಖ್ಯೆ ಈಗಿರುವ ಹಾಗೆ ಹದಿನೈದು ಮಿಲಿಯನ್ ಇರಲಿಲ್ಲ, ಐದು ಮಿಲಿಯನ್ ಇತ್ತು. ಹಳೆಯ ಊರಿನ ಕೋಟೆ ಗೋಡೆ ದಾಟಿದರೆ ಸಾಕು, ಮನೆಗಳು ಕಡಮೆಯಾಗುತಿದ್ದವು, ಚಿಕ್ಕವಾಗುತಿದ್ದವು, ಬಡತನ ಎದ್ದು ಕಾಣುತಿತ್ತು. ಫ್ಯಾಕ್ಟರಿ, ಪೆಟ್ರೋಲ್ ಬಂಕುಗಳು ಅಲ್ಲೊಂದು ಇಲ್ಲೊಂದು ಕಾಣುತಿದ್ದವು. ಅಪರೂಪಕ್ಕೆ ಒಂದೊಂದು ಹೋಟೆಲು.
ರೈಲು ಹಾದಿಯ ಪಕ್ಕದಲ್ಲೇ ಸ್ವಲ್ಪ ಹೊತ್ತು ಸಾಗಿದ ನಮ್ಮ ಟ್ರಕ್ಕು, ಕತ್ತಲಿಳಿಯುತಿದ್ದ ಹಾಗೆ ಬೇರೆ ದಿಕ್ಕಿಗೆ ಹೊರಳಿತು. ಬೂಯಿಕ್ಸಗ್ಮೆಸ್ ಕೆರೆಯನ್ನು ನಾವಾಗಲೇ ದಾಟಿದ್ದೆವು. ಒಂದಷ್ಟು ಸೈಪ್ರಸ್ ಮರ, ಕಾಂಕ್ರೀಟು ಗೋಡೆ, ಸ್ಮಶಾನ, ಖಾಲಿಜಾಗಗಳನ್ನು ನೋಡಿದೆ… ಎಷ್ಟೋ ಹೊತ್ತಿನವರೆಗೆ ಎಷ್ಟೇ ತಿಣುಕಿದರೂ ಏನೇನೂ ಕಾಣುತ್ತಿರಲಿಲ್ಲ. ನಾವು ಎಲ್ಲಿದ್ದೀವೋ ತಿಳಿಯಲಿಲ್ಲ. ಜನ ಊಟಕ್ಕೆ ಕೂತಿದ್ದ ಮನೆಗಳಿಂದ ಕಿತ್ತಳೆ ಬಣ್ಣದ ಬೆಳಕು ಕಾಣುತಿತ್ತು. ಆಗಾಗ ಫ್ಯಾಕ್ಟರಿಗಳ ನಿಯಾನ್ ಬೆಳಕು. ಬೆಟ್ಟ ಹತ್ತುತಿತ್ತು ಟ್ರಕ್ಕು. ದೂರದಲ್ಲಿ ಮಿಂಚು. ಆಕಾಶವನ್ನು ಬೆಳಗಿತು. ಆದರೂ ನಾವು ಹೋಗುತಿದ್ದ ಖಾಲಿಜಾಗವನ್ನು ಬೆಳಗುವಷ್ಟು ಬೆಳಕು ಎಲ್ಲೂ ಇರಲಿಲ್ಲ. ಆಗೀಗ ಯಾವುದಾದರೂ ನಿಗೂಢವಾದ ಬೆಳಕು ಕೊನೆಯಿರದ ಬಂಜರು ಭೂಮಿಯನ್ನು, ನಿರ್ಜನವಾದ ವಿಶಾಲವಾದ ಬಯಲನ್ನು ತೋರುತಿತ್ತು. ಮತ್ತೆ ಅರ್ಧ ಕ್ಷಣದಲ್ಲಿ ಎಲ್ಲವೂ ಕತ್ತಲಲ್ಲಿ ಕಳೆದುಹೋಗುತಿದ್ದವು.

ಕೊನೆಗೆ ಎಲ್ಲೋ ಯಾವುದೋ ನಿರ್ಜನ ಜಾಗದಲ್ಲಿ ನಿಂತೆವು. ಬೆಳಕು, ದೀಪ, ಮನೆ ಏನೂ ಕಾಣಲಿಲ್ಲ ನನಗೆ. ನಮ್ಮ ಟ್ರಕ್ಕು ಕೆಟ್ಟು ನಿಂತಿರಬೇಕು ಅಂದುಕೊಂಡೆ.

‘ಎಲ್ಲಿ, ಕೈ ಹಾಕು, ಇವನ್ನೆಲ್ಲ ಇಳಿಸೋಣ,’ ಅಂದ ಉಸ್ತಾದ್ ಮಹಮದ್.

ಮರದ ದಿಮ್ಮಿ, ರಾಟೆಯ ಬಿಡಿ ಭಾಗ, ಪಾತ್ರೆ, ಬಾಣಲಿ, ಹಂಚು, ಕೆಲಸದ ಉಪಕರಣಗಳನ್ನೆಲ್ಲ ಒರಟು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಪೇರಿಸಿದ್ದರು. ಎರಡು ಹಾಸಿಗೆಗಳನ್ನು ಹಗ್ಗದಲ್ಲಿ ಬಿಗಿದು ಕಟ್ಟಿದ್ದರು. ‘ದೇವರು ಒಳ್ಳೆಯದು ಮಾಡಲಿ,’ ಅಂದು ಡ್ರೈವರು ಹೊರಟುಹೋದ. ಕತ್ತಲು ಎಷ್ಟೊಂದಿದೆ ಅನ್ನುವುದು ಗೊತ್ತಾಗಿ ಭಯವಾಯಿತು.

ದೂರದಲ್ಲಿ ಎಲ್ಲೋ ಮತ್ತೆ ಮಿಂಚು. ನಮ್ಮ ಹಿಂದೆ ಇದ್ದ ಆಕಾಶ ಸ್ವಚ್ಛವಾಗಿತ್ತು, ಚುಕ್ಕೆ ಥಳಥಳಿಸುತಿದ್ದವು. ಮತ್ತೂ ದೂರದಲ್ಲಿ ಇಸ್ತಾಂಬುಲ್ ದೀಪಗಳ ಪ್ರಭೆ ನಸು ಹಳದಿಯಾಗಿ ಮೋಡಗಳಿಂದ ಪ್ರತಿಫಲಿಸುತಿತ್ತು.

ಮಳೆ ಬಿದ್ದು ನೆಲ ವದ್ದೆಯಾಗಿತ್ತು. ಅಲ್ಲಲ್ಲಿ ನೀರು ನಿಂತಿತ್ತು. ಒಣಗಿದ ಒಂದಷ್ಟಗಲ ನೆಲ ಹುಡುಕಿ ನಮ್ಮ ವಸ್ತುಗಳನ್ನೆಲ್ಲ ಅಲ್ಲಿಟ್ಟೆವು.

ಉಸ್ತಾದ್ ಮಹಮದ್ ಮರದ ಕಂಬ ನೆಟ್ಟು ಟೆಂಟು ಹಾಕುವ ಕೆಲಸ ಶುರುಮಾಡಿದ. ಆಗಲಿಲ್ಲ. ಹಗ್ಗಗಳನ್ನು ಎಳೆಯಬೇಕಾಗಿತ್ತು. ಎಳೆದ ಹಗ್ಗ ಕಟ್ಟುವುದಕ್ಕೆ ನೆಲದ ಮೇಲೆ ಗೂಟ ಹೊಡೆಯಬೇಕಿತ್ತು. ಗೂಟ ಎಲ್ಲಿ ಹೊಡೆದಿದ್ದೇವೆ ಅನ್ನುವುದು ಕಗ್ಗತ್ತಲಲ್ಲಿ ಗೊತ್ತಾಗುತ್ತಲೇ ಇರಲಿಲ್ಲ. ರಾತ್ರಿಯಷ್ಟೆ ಕಪ್ಪಾಗಿದ್ದ ಭಯ ನನ್ನ ಮನಸ್ಸನ್ನು ತುಂಬಿತ್ತು. ‘ಇದನ್ನ ಎಳಿ, ಅದನ್ನಲ್ಲ,’ ಅಂತ ಉಸ್ತಾದ್ ಮಹಮದ್ ಸುಮ್ಮನೆ ಏನೇನೂ ಅನ್ನುತಿದ್ದ.

ಗೂಬೆ ಕೂಗಿದ್ದು ಕೇಳಿದೆವು. ಮಳೆ ನಿಂತಿದೆಯಲ್ಲ, ಟೆಂಟು ಯಾಕೆ ಹಾಕಬೇಕು ಅಂದುಕೊಂಡೆ. ಆದರೂ ಉಸ್ತಾದ್ ಮಹಮದ್ ನ ತೀರ್ಮಾನಕ್ಕೆ ಬೆಲೆಕೊಟ್ಟೆ. ನಮ್ಮನ್ನೆಲ್ಲ ಸುತ್ತಿಕೊಂಡಿದ್ದ ಕತ್ತಲೆಯ ಹಾಗೆ ಟೆಂಟಿನ ದಪ್ಪನೆಯ ವದ್ದೆ ಬಟ್ಟೆ ತಾನೂ ಸುರುಳಿ ಸುತ್ತಿಕೊಳ್ಳುತಿತ್ತು.

ಟೆಂಟು ಹಾಕಿ, ನಮ್ಮ ಹಾಸುಗೆ ಉರುಳಿಸಿಕೊಳ್ಳುವ ಹೊತ್ತಿಗೆ ಮಧ್ಯರಾತ್ರಿ ಕಳೆದಿತ್ತು. ಮಳೆಯ ಮೋಡ ಚದುರಿ ನಕ್ಷತ್ರ ಹೊಳೆಯುತಿದ್ದವು. ಹತ್ತಿರದಲ್ಲೆ ಎಲ್ಲೋ ಚೀರುತಿದ್ದ ಚಿಮ್ಮಂಡಿ ಮಿಡತೆಯ ಸದ್ದು ಕೇಳಿ ಸಮಾಧಾನವಾಯಿತು. ಹಾಸಿಗೆಯ ಮೇಲೆ ಮಲಗಿದ ತಕ್ಷಣ ನಿದ್ರೆ ಬಂತು.

(ಮೂಲ: ಒರ್ಹಾನ್ ಪಮುಕ್, ಕನ್ನಡಕ್ಕೆ: ಓ.ಎಲ್. ನಾಗಭೂಷಣಸ್ವಾಮಿ, ಬೆಲೆ: 250/, ಪ್ರಕಾಶನ: ಅಭಿನವ, ಬೆಂಗಳೂರು, ಮೊದಲ ಮುದ್ರಣ: 2020)