ಕಂಬಾರರ ಕಾವ್ಯವನ್ನು ಬಹಳ ಗಮನವಿಟ್ಟು ನೋಡಿದರೆ, ಶಿವಾಪುರವನ್ನು ಒಳಗಿನಿಂದಲೇ ಪೂರ್ಣವಾಗಿ ಬರಡಾಗಿಸಿರುವುದು ಅಲ್ಲಿನ ಜಮೀನುದಾರಿ ಮೌಲ್ಯಗಳು, ಪ್ರಕೃತಿ ಸಹಜ ಕಾಮ-ಫಲವಂತಿಕೆಯನ್ನು ನಾಶಪಡಿಸಿರುವ ಪಿತೃಪ್ರಧಾನ ವ್ಯವಸ್ಥೆಯ ಮೌಲ್ಯಗಳೇ ಅನಿಸುತ್ತದೆ. ಯಾಕೆಂದರೆ ಶಿವಾಪುರದ ಪಾರಂಪರಿಕ ಸಮೃದ್ಧತೆಯನ್ನು ಮೂರ್ತವಾದ ವಿವರಗಳಲ್ಲಿ, ಬಹಳ ಆಪ್ಯಾಯಮಾನವಾಗಿ ಹಿಡಿಯುವ ಕಂಬಾರರು ಆಧುನಿಕತೆಯ ವಿನಾಶಕಾರಿ ಸ್ವರೂಪವನ್ನು ಅಷ್ಟೇ ಮೂರ್ತವಾಗಿ ಹಿಡಿದಂತೆ ಕಾಣುವುದಿಲ್ಲ. ಚಂದ್ರಶೇಖರ ಕಂಬಾರರ ಕಾವ್ಯದ ಕುರಿತು ಸಿರಾಜ್ ಅಹ್ಮದ್ ಬರೆದಿದ್ದಾರೆ. 

ಕಂಬಾರರ ಬಹಳ ಪರಿಣಾಮಕಾರಿಯಾದ ‘ಹೇಳತೇನ ಕೇಳ’ ಕಾವ್ಯದಲ್ಲಿ ಗೌಡನ ವೇಷ ಧರಿಸಿ ಬಂದ ರಾಕ್ಷಸ ಶಿವಾಪುರದಲ್ಲಿ ನಡೆಸುವ ಹಲವು ಅನಾಹುತಗಳಿಗಿಂತ ಮೊದಲು, ಅಲ್ಲಿನ ಹಸಿರು ನಂಬಿಕೆಯ ದ್ಯೋತಕವಾದ ಆಲದ ಮರವನ್ನು ಕಡಿದ ಪ್ರಸಂಗದ ಉಲ್ಲೇಖ ಬರುತ್ತದೆ. ಆಲದ ಮರವನ್ನು ಕಡಿದ ದಿನವೇ ಸಮಷ್ಟಿ ಪ್ರಜ್ಞೆಯ ಕುರುಹಾಗಿದ್ದ ಕರಿಯಜ್ಜನ ಸಾವಿನೊಂದಿಗೆ ಶಿವಾಪುರದ ಸಾಮುದಾಯಿಕ ಬದುಕಿನ ವಿಘಟನೆಯ ವಿದ್ಯಮಾನವೂ ಶುರುವಾಗುತ್ತದೆ. ತಬ್ಬಲಿಯಾದ ರಾಮಗೊಂಡ ಕರಿಯಜ್ಜನನ್ನು ನೆನೆಸಿಕೊಂಡು ಅಳುತ್ತ, ಶಿವಾಪುರದ ಅನಾಹುತ ಪರಂಪರೆಗಳಿಗೆ ಕಾರಣವಾದ ರಾಕ್ಷಸಗೌಡನನ್ನು ಬಯ್ಯಲು ಹೊರಟಾಗ ಅವನು ಎಷ್ಟು ವಿಹ್ವಲನಾಗಿದ್ದಾನೆ ಎಂದರೆ, ಆ ಸ್ಥಿತಿಯನ್ನು ‘ಅಕ್ಷರ ಹಿಡೀಲಿಲ್ಲ ಶಬ್ದದೊಳಗೆ’ ಎಂದು ಕಂಬಾರರು ವಿವರಿಸುತ್ತಾರೆ.

ಸಮುದಾಯಗಳ ವಿಘಟನೆ, ಸಂಬಂಧಗಳು-ನಂಬಿಕೆಗಳ ಕರುಳಬಳ್ಳಿಯ ನಂಟುಗಳು ಹರಿದು ಚೂರಾಗುವ ಯಾತನಾಮಯ ಸ್ಥಿತಿಯನ್ನು ಸ್ಥಿರೀಕೃತ ಅನುಭವಗಳಿಗೆ ಸಂಕೇತವಾದ ‘ಅಕ್ಷರಗಳಲ್ಲಿ’ ವಿವರಿಸಲಾಗದ ಸಂದಿಗ್ಧವನ್ನು ಕಂಬಾರರ ಕಾವ್ಯ ಬಹಳ ಮೊದಲೇ ಗ್ರಹಿಸಿದೆ. ಅದಕ್ಕೆ ಉತ್ತರವೆಂಬಂತೆ ಸಾಮುದಾಯಿಕ ಲಯಗಳು, ಹಾಡುಗಳ ಮೂಲಕ ಇಂಥ ನೋವುಗಳಿಗೆ ದನಿಯಾಗುವ ಪ್ರಯತ್ನ ಮಾಡಿದೆ. ಈ ಕಾರಣದಿಂದಲೇ ಕಂಬಾರರ ಕಾವ್ಯ ತನ್ನ ಸಮುದಾಯದ ಹಾಡನ್ನು ಮೊದಲಿಂದ ಹಿಡಿದು ಇಲ್ಲಿಯವರೆಗೂ ತೆರಪಿಲ್ಲದ ಸ್ವರದಲ್ಲಿ ಅನೂಚಾನವಾಗಿ ಹಾಡುತ್ತಲೇ ಬಂದಿದೆ. ಕಂಬಾರರ ಕಾವ್ಯವನ್ನು ಓದುವಾಗ ಹಾಡು ಕುಣಿತ ನೃತ್ಯಗಳೆಲ್ಲ ಸೇರಿದ ದೊಡ್ಡ ಮೇಳವೊಂದರ ನಡುವೆ ಕಳೆದುಹೋದ ಅನುಭವವಾಗುವುದು ಈ ದೃಷ್ಟಿಯಿಂದಲೇ.

ಹಾಗೆ ನೋಡಿದರೆ ಕಂಬಾರರು ಮೊದಲಿನಿಂದ ಹೇಳುತ್ತಿರುವುದು ಒಂದೇ ಮಾತನ್ನೇ-‘ಹೇಳತೇನ ಕೇಳ’. ‘ಹೇಳತೇನ ಕೇಳ’ದ ಸ್ಥಿತಿ-ಸಂಕಷ್ಟವನ್ನು ನಾಟಕ ಕಾದಂಬರಿಗಳೆಂಬ ಹಲವು ಸಾಹಿತ್ಯ ರೂಪಗಳ ಮೂಲಕ ಕಂಬಾರರು ನಮಗೆ ಕೇಳಿಸುತ್ತಲೇ ಬಂದಿದ್ದಾರೆ. ಅವರ ಒಟ್ಟು ಬರಹಗಳು ಅಖಂಡವಾದ ಸ್ಮೃತಿ ಸಂಚಯದಂತಿದ್ದು ಅದರ ನಿರೂಪಣೆಯನ್ನು ವಿವಿಧ ಭಾಗಗಳಲ್ಲಿ ಓದಿಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಯಾಕೆಂದರೆ, ಮೂಲಭೂತವಾಗಿ ಕಂಬಾರರ ಬರಹ ಕಾಲದೇಶಗಳ- ಸಾಹಿತ್ಯ ಪ್ರಕಾರಗಳ ವರ್ಗೀಕರಣವನ್ನು ಒಪ್ಪದೇ ಅವುಗಳ ನಡುವಿನ ಸೃಜನಶೀಲ ಸಂಯೋಜನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಈ ಕಾರಣದಿಂದ ಅವರ ‘ಹೇಳತೇನ ಕೇಳ’ದಿಂದ ಆರಂಭವಾದ ಅವರ ಬರಹಗಳನ್ನು ಹಲವು ಅನುಭವ ಲೋಕಗಳ ಅಖಂಡರೂಪವೆಂಬಂತೆ ಗ್ರಹಿಸಬಹುದಾಗಿದೆ. ಈಗಾಗಲೇ ಹಲವರು ಗುರುತಿಸಿದಂತೆ ಅವರ ಬರಹದಲ್ಲಿ ಆಧುನಿಕ ಅನಾಧುನಿಕಗಳು ಒಟ್ಟಿಗೇ ಬರುವುದಾಗಲೀ, ಪುರಾಣ ವರ್ತಮಾನವಾಗುವ-ವರ್ತಮಾನವೇ ಪುರಾಣವಾಗುವುದು ಸಮಸ್ಯಾತ್ಮಕವಾಗಿ ಕಾಣುವುದಿಲ್ಲ. ಅವರು ನೆಹರೂ ಬಗೆಗಿನ ಕಟಕಿಯನ್ನು ಡೊಳ್ಳಿನ ಹಾಡಾಗಿಯೂ ಬರೆಯಬಲ್ಲರು. ಮಂದಾರ ಮರವೊಂದು ಆಕಾಶದ ಸ್ಪೇಸಿನಾಚೆಯ ಕೈಲಾಸಕ್ಕೂ ಹೇಗೆ ಹಬ್ಬಿದೆಯೆಂದು ತೋರಿಸಲೂ ಬಲ್ಲರು. ಕಂಬಾರರ ಕೃತಿಗಳ ಮುಖ್ಯ ಗುಣವನ್ನು ಕನ್ನಡ ವಿಮರ್ಶೆ ಈಗಾಗಲೇ ಸ್ಪಷ್ಟವಾಗಿ ಗುರುತಿಸಿದೆ. ತಮ್ಮ ಸಾಹಿತ್ಯ ಸಿದ್ಧಿಯ ದೃಷ್ಟಿಯಿಂದ ಈಗಾಗಲೇ ಕಂಬಾರರು ಶಿಖರಸದೃಶ ನೆಲೆಗೆ ಸೇರಿರುವ ಈ ಹೊತ್ತಿನಲ್ಲಿ ಅದನ್ನು ಮತ್ತೊಮ್ಮೆ ಪರಿಶೀಲಿಸುವ ಅಗತ್ಯವೂ ಇದೆ.

ಕಾಲದೇಶಗಳನ್ನು ಅಖಂಡವಾಗಿ ಗ್ರಹಿಸುವ ಮನೋಧರ್ಮದಿಂದಲೇ ಕಂಬಾರರ ಬರಹದಲ್ಲಿ ಸಾಮುದಾಯಿಕ ಅನುಭವಗಳು ಬಹಳ ಸಮೃದ್ಧವಾಗಿ ಮೂಡಿಬಂದಿವೆ. ಇದರಿಂದ ಅವರ ಕಾವ್ಯಲೋಕದಲ್ಲಿ ಆಧುನಿಕತೆ, ಜನಪದ, ಪೌರಾಣಿಕತೆ, ಸ್ಥಳೀಯತೆ, ವಿಶ್ವಾತ್ಮಕತೆಯ ಎಲ್ಲ ಚಹರೆಗಳೂ ಮೈದಳೆಯುತ್ತ ಬಹುಮುಖಿಯಾದ ಅನುಭವವನ್ನು ನೀಡುತ್ತವೆ ಎಂದು ಕಂಬಾರರ ಕುರಿತ ಅಧ್ಯಯನಗಳು ತಿಳಿಸುತ್ತವೆ. ಮೇಲ್ನೋಟಕ್ಕೆ ನವ್ಯ ಕಾವ್ಯದಿಂದ ಬಹಳ ಭಿನ್ನವಾಗಿ ಕಾಣುವ ಕಂಬಾರರ ಕಾವ್ಯ ಆಳದಲ್ಲಿ ನವ್ಯಕಾವ್ಯದ ಪ್ರಮುಖ ಕಾಳಜಿಗಳನ್ನು ಇತ್ತೀಚಿನವರೆಗೆಯೂ ಪೂರ್ಣವಾಗಿ ಬಿಟ್ಟುಕೊಟ್ಟಂತೆ ಕಾಣುವುದಿಲ್ಲ. ಆದರೆ ನವ್ಯಕಾವ್ಯವು ಹುಡುಕಾಟದಲ್ಲಿದ್ದ ಅಸ್ತಿತ್ವದ ಪ್ರಶ್ನೆಗಳು, ವ್ಯಕ್ತಿತ್ವದ ಒಳಗಿನ ಬಿರುಕುಗಳನ್ನು ಸಮುದಾಯಗಳ, ಜನಪದ ನಂಬಿಕೆಗಳ ವಿಶಾಲಭಿತ್ತಿಯಲ್ಲಿ ಪರೀಕ್ಷಿಸಲು ತೊಡಗಿದ್ದರಿಂದ ಕಂಬಾರರ ಕಾವ್ಯಕ್ಕೆ ದೊಡ್ಡ ಹರಹು ತಾನಾಗಿಯೇ ಒದಗಿಬಂದಿದೆ. ಹಾಗೆಯೇ ವಸಾಹತುಶಾಹಿ, ಆಧುನಿಕತೆಗಳ ಹಲವು ವಿದ್ಯಮಾನಗಳನ್ನು ಪರೀಕ್ಷಿಸುವ ಕಂಬಾರರ ಕಾವ್ಯ ಚರಿತ್ರೆಯ ಪ್ರಶ್ನೆಗಳಿಗೆ ಮುಖಾಮುಖಿಯಾಗಿಯೂ-ಚರಿತ್ರೆಗೆ ಅಡಿಯಾಳಾಗಿಲ್ಲ ಎಂಬುದು ಬಹಳ ಮುಖ್ಯಸಂಗತಿಯಾಗಿದೆ ಎಂಬುದೇನೋ ನಿಜ. ಆದರೆ ಇದಕ್ಕೆ ಮುಂದುವರಿಕೆಯಾಗಿ, ಆಧುನಿಕ ಚರಿತ್ರೆಯ ಎಷ್ಟು ಬಗೆಯ ಆಯಾಮಗಳಿಗೆ ಕಂಬಾರರ ಕಾವ್ಯ ಮೈಯಾಗಿ ನಿಂತಿದೆ ಎಂಬ ಪ್ರಶ್ನೆಯನ್ನೂ ಕೇಳಬೇಕಾಗಿದೆ.

ರಾಜೇಂದ್ರ ಚೆನ್ನಿಯವರು ಕಂಬಾರರ ಸೃಜನಶೀಲತೆಯ ಸಮೃದ್ಧ ಪರಿಕರಗಳು ಜನಪದ ಲೋಕಗಳಿಂದ ಒಡಮೂಡಿದ್ದರೂ ಅದನ್ನು ವಿಶ್ಲೇಷಿಸಿರುವ ದೃಷ್ಟಿಕೋನ ಆಧುನಿಕ ಚಿಂತನೆಗಳ ಮೂಲದಿಂದಲೇ ಬಂದಿದೆ ಎನ್ನುತ್ತಾರೆ. ಈ ಮಾತು ಮೇಲ್ನೋಟಕ್ಕೆ ಸಮೃದ್ಧವಾಗಿ ಕಾಣುವ ಕಂಬಾರರ ಲೋಕ ಎಷ್ಟು ಸ್ತರಗಳ ನಡುವೆ ಹಾದುಬಂದಿದೆ ಎಂಬುದನ್ನು ಸೂಚಿಸುತ್ತದೆ. ಮೇಲ್ನೋಟಕ್ಕೆ ಹಲವು ಅನುಭವ ಲೋಕಗಳು, ಬದುಕಿನ ವಿನ್ಯಾಸಗಳು, ಲಯಗಳ ನಡುವೆ ಬಹಳ ಲೀಲಾಜಾಲವಾಗಿ ಓಡಾಡುವಂತೆ ಕಂಡರೂ ಕಂಬಾರರ ಸಂವೇದನೆ ಪರಂಪರೆಯ ಕೆಲವು ಆಯಾಮಗಳನ್ನು ಮಾತ್ರ ಬಹಳ ಸಂಕೀರ್ಣವಾಗಿ ಗ್ರಹಿಸಿದೆ. ಶಿವಾಪುರವು ನಂಬಿಕೆಗಳು, ಆಚರಣೆಗಳು, ಹೊಳೆ, ಹಸಿರು, ಕಾಡು ಹಕ್ಕಿಗಳಿಂದ ಸಮೃದ್ಧವಾಗಿದ್ದರೂ ಅದು ಆಳದಲ್ಲಿ ಹೊಸದನ್ನು ಸೃಷ್ಟಿಸಲಾಗದೆ ಬರಡಾಗಿದೆ-ನಿರ್ವೀರ್ಯವಾಗಿದೆ ಎಂಬುದನ್ನು ಕಂಬಾರರು ಹಲವಾರು ಕವನಗಳು ಹಾಗೂ ನಾಟಕಗಳಲ್ಲಿ ಬಹಳ ಅದ್ಭುತವಾಗಿ ಕಾಣಿಸಿದ್ದಾರೆ. ಆಳವಾದ ದೈವಿಕ ಶ್ರದ್ಧೆ, ಸಮೃದ್ಧ ಪ್ರಾಕೃತಿಕ ಪರಿಸರ, ದೈವ-ಪ್ರಕೃತಿ-ಮನುಷ್ಯರ ನಡುವಿನ ಸಾವಯವ ಸಂಬಂಧಗಳ ನಡುವೆಯೂ ಅಲ್ಲಿನ ಗಂಡು ಹೆಣ್ಣುಗಳ ಸಂಬಂಧಗಳು ಅತೃಪ್ತ ನೆಲೆಯಲ್ಲಿರುವುದರಿಂದ ಕಂಬಾರರು ಕಾಣಿಸುತ್ತಿರುವ ಸಮೃದ್ಧತೆಯ ಲೋಕದ ಒಳಗೇ ತೀವ್ರ ಅತೃಪ್ತಿಯ, ಅಸಹಜ ಕಾಮನೆಗಳ, ದಮನಕಾರಿಯಾದ ಹಿಂಸಾತ್ಮಕವಾದ ಲೋಕವೂ ಇದೆ. ಇದಕ್ಕೆ ಉದಾಹರಣೆಗಳನ್ನು ಹೇಳತೇನ ಕೇಳ, ರಾಮಾಯಣವೂ ಗೋದೂಬಾಯಿಯೂ, ನವಿಲೇ ನವಿಲೇ- ಮೊದಲಾದ ಕವನಗಳಲ್ಲಿ ಕಾಣಬಹುದು.

ಇನ್ನೊಂದು ಕಡೆ ಶಿವಾಪುರದ ಪಾರಂಪರಿಕ ಸಮೃದ್ಧಿಯ ಲೋಕದ ಹೊಸ್ತಿಲಿಗೆ ವಸಾಹತುಶಾಹಿ ಆಧುನಿಕತೆಗಳ ಸಂಕೇತಗಳಾದ ಸ್ಕೂಲು ಇವೇ ಮೊದಲಾದವುಗಳು ಬಂದು ನಿಂತಿರುವ ಉದಾಹರಣೆಗಳನ್ನು ಅವರ ಕಾವ್ಯದಲ್ಲಿ ಕಾಣಬಹುದು. ಆದರೆ ಕಂಬಾರರ ಕಾವ್ಯವನ್ನು ಬಹಳ ಗಮನವಿಟ್ಟು ನೋಡಿದರೆ, ಶಿವಾಪುರವನ್ನು ಒಳಗಿನಿಂದಲೇ ಪೂರ್ಣವಾಗಿ ಬರಡಾಗಿಸಿರುವುದು ಅಲ್ಲಿನ ಜಮೀನುದಾರಿ ಮೌಲ್ಯಗಳು, ಪ್ರಕೃತಿ ಸಹಜ ಕಾಮ-ಫಲವಂತಿಕೆಯನ್ನು ನಾಶಪಡಿಸಿರುವ ಪಿತೃಪ್ರಧಾನ ವ್ಯವಸ್ಥೆಯ ಮೌಲ್ಯಗಳೇ ಅನಿಸುತ್ತದೆ. ಯಾಕೆಂದರೆ ಶಿವಾಪುರದ ಪಾರಂಪರಿಕ ಸಮೃದ್ಧತೆಯನ್ನು ಮೂರ್ತವಾದ ವಿವರಗಳಲ್ಲಿ, ಬಹಳ ಆಪ್ಯಾಯಮಾನವಾಗಿ ಹಿಡಿಯುವ ಕಂಬಾರರು ಆಧುನಿಕತೆಯ ವಿನಾಶಕಾರಿ ಸ್ವರೂಪವನ್ನು ಅಷ್ಟೇ ಮೂರ್ತವಾಗಿ ಹಿಡಿದಂತೆ ಕಾಣುವುದಿಲ್ಲ. ಹಾಗಾಗಿ ಕಂಬಾರರು ಶಿವಾಪುರವನ್ನು ತಾವು ಕಳೆದುಕೊಂಡ ಅಥವಾ ಕಟ್ಟಿಕೊಳ್ಳಬೇಕಾದ ಕನಸಿನ ಲೋಕದ ಹಾಗೆ ಚಿತ್ರಿಸಿದ್ದಾರೆಯೇ ಹೊರತು ಅದನ್ನು ನಿತ್ಯ ವಾಸ್ತವದ ಬೀದಿಗಳಲ್ಲಿ ಹಾದು ಹೋಗುತ್ತಿರುವ ಅನುಭವದಂತೆ ಚಿತ್ರಿಸಲು ಸಾಧ್ಯವಾಗಿಲ್ಲ. ಇದಕ್ಕೆ ಅಪವಾದವಾಗಿ ಗಂಗವ್ವ ಗಂಗಾಮಾಯಿ, ಮಂದಾರ ಮರ, ಏ ಕುರುಬರಣ್ಣಾ, ಇಟ್ಟಿಗೆಯ ಪಟ್ಟಣ ಮೊದಲಾದ ಕವಿತೆಗಳನ್ನು ಹೆಸರಿಸಬಹುದು. ಹಾಗಿದ್ದರೂ ಕಂಬಾರರ ಕೇಂದ್ರ ಪ್ರಜ್ಞೆ ಶಿವಾಪುರವನ್ನು ಕಾಲದೇಶಗಳ ಹಲವು ವಿದ್ಯಮಾನಗಳ ನಡುವೆಯೂ ಬದಲಾಗದ ಅಥವಾ ಬದಲಾಗದೇ ಉಳಿಯಬಹುದಾದ, ರಮ್ಯ-ಸ್ಥಿರ ಜಗತ್ತಿನ ರೂಪದಲ್ಲಿಯೇ ದರ್ಶಿಸುತ್ತದೆ. ‘ಹೇಳತೇನ ಕೇಳ’ ಸಂಕಲನಕ್ಕೆ ಬರೆದ ಮುನ್ನುಡಿಯಲ್ಲಿ ಅಡಿಗರು ಕಂಬಾರರು ಸಮಕಾಲೀನ ಜಗತ್ತಿನ ಸಂದಿಗ್ಧವನ್ನು ಹೇಳಲು ಕೇವಲ ಬಹು ಮಾರ್ಮಿಕವಾದ ಕತೆಯನ್ನು ಹೇಳುತ್ತಿದ್ದಾರೋ ಅಥವಾ ಅದಕ್ಕೆ ಸಂವಾದಿಯಾಗಿ ಬಹು ಅರ್ಥವಲಯಗಳನ್ನು ದರ್ಶಿಸುವ ಸಾರ್ಥಕ ಪ್ರತಿಮೆಯಾಗಿ ರೂಪಿಸುತ್ತಿದ್ದಾರೋ ಎಂಬ ಪ್ರಶ್ನೆ ಇಂದಿಗೂ ಬಹು ಪ್ರಸ್ತುತವಾಗಿ ಕಾಣುವುದು ಇದೇ ಕಾರಣಕ್ಕಾಗಿ. ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಆಧುನಿಕತೆಯ ವಿಕಾರಗಳನ್ನು ಹೇಳುವಾಗ ‘ದಿಲ್ಲಿಯೆಂಬ ಕ್ಯಾಬರಿ’, ಅಮೇರಿಕಾದ ರಾಜ-ರಾಣಿಯರು, ಬೆಂಗಳೂರನ್ನು ಕುರಿತ ಹಲವಾರು ಸಿಟಿಯ ಪದ್ಯಗಳು ವ್ಯಂಗ್ಯ ಲೇವಡಿಯ ಧಾಟಿಯನ್ನು ಮೀರಿದ ನೆಲೆಯಲ್ಲಿ ಬಹಳ ದಟ್ಟವಾದ ಅನುಭವವನ್ನು ನೀಡುವುದಿಲ್ಲ.

ಕಂಬಾರರ ಸಮೃದ್ಧವಾದ ಶಿವಾಪುರದ ಕುರಿತು ಒಂದೆರಡು ಮಾತುಗಳನ್ನು ಹೇಳಿ ಅವರ ಆಧುನಿಕತೆಯ ನಿರೂಪಣೆಯನ್ನು ಕುರಿತು ಇನ್ನೂ ಕೆಲವು ಮಾತುಗಳನ್ನು ಸೇರಿಸಬೇಕಾಗಿದೆ. ಬಹಳ ವಿಚಿತ್ರವಾದ ಸಂಗತಿಯೇನೆಂದರೆ ಶಿವಾಪುರದಲ್ಲಿ ಜಮೀನ್ದಾರಿ ಅಧಿಕಾರ, ಕಾಮದ ತೀವ್ರತೆಗಳನ್ನು ಈಡೇರಿಸಿಕೊಳ್ಳಲು ಗಂಡು ಹೆಣ್ಣಿನ ನಡುವೆ ನಡೆಯುವ ಸಂಘರ್ಷಗಳು, ನಂಬಿಕೆಗಳು-ಆಧುನಿಕತೆಗಳ ನಡುವಿನ ಸಂಘರ್ಷವನ್ನು ಹೊರತು ಪಡಿಸಿದರೆ, ಭಾರತೀಯ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿರುವ ಧರ್ಮ, ಜಾತಿ, ಪ್ರಭುತ್ವದ ರಾಜಕೀಯ ಅಧಿಕಾರದ ಕಾರಣದಿಂದ ನಡೆದಿರುವ/ನಡೆಯುತ್ತಿರುವ ಸಂಘರ್ಷಗಳ ಪ್ರಸ್ತಾಪ ಬರುವುದೇ ಇಲ್ಲ. ಶಿವಾಪುರದ ಪಾರಂಪರಿಕ ನಂಬಿಕೆಗಳ ಲೋಕ ಸಾಂಸ್ಥಿಕ ಧರ್ಮಗಳು, ಹಸಿವು, ಜಾತಿ-ಜಾತಿಗಳ ನಡುವಿನ ಕಾದಾಟಗಳ ಆಚೆ ಇರುವ ದ್ವೀಪವೋ ಅಥವಾ ಅದನ್ನು ಮೀರಿದ ಭೂಭಾಗವೋ ಸ್ಪಷ್ಟವಾಗುವುದಿಲ್ಲ. ಹಾಗಾಗಿಯೇ ಕಂಬಾರರ ಕಾವ್ಯ ಶಿವಾಪುರದ ಸಮೃದ್ಧ ಜಗತ್ತನ್ನು ಕುರಿತು ಹಾಡುವಾಗ ಹಲವು ಸ್ವರತಾಳ ಮಾಧುರ್ಯಗಳ ಮೇಳದಂತೆ ಕಾಣಿಸಿದರೆ, ಆಧುನಿಕತೆಯ ಅಪಾಯಗಳನ್ನು ಕುರಿತು ಹೇಳುವಾಗ ವಿಷಾದದ ಏತತಾರಿಯನ್ನು ಕೇಳಿದ ಅನುಭವವಾಗುತ್ತದೆ.

ಇದನ್ನೇ ಮುಂದುವರಿಸಿ ಹೇಳುವುದಾದರೆ ಕಂಬಾರರು ಆಧುನಿಕ ಸಮಾಜದ ಪ್ರಜಾಪ್ರಭುತ್ವದ ಮಾದರಿಗಳನ್ನು, ಅದರಿಂದ ಶಿವಾಪುರದಂಥ ಸಂಪ್ರದಾಯಸ್ಥ ಸಮಾಜದಲ್ಲಿ ಉಂಟಾದ ವಿಷಮತೆಗಳನ್ನು ಗಮನವಿಟ್ಟು ನೋಡಿದಂತೆ ಕಾಣುವುದಿಲ್ಲ. ಅವರ ವಿಶ್ಲೇಷಣೆ ಅಲ್ಲಿನ ಜಮೀನ್ದಾರಿ ಅಧಿಕಾರವನ್ನು ವಿಮರ್ಶಿಸುವಲ್ಲಿ ವಿರಮಿಸುತ್ತದೆಯೇ ಹೊರತು ಹಲವು ಬಗೆಯ ರಾಜಕೀಯ ಅಧಿಕಾರಗಳ ನಡುವೆ ನಲುಗಿ ಹೋಗುತ್ತಿರುವ ಆಧುನಿಕ ಭಾರತವನ್ನು ತೋರಿಸುವಂತೆ ಕಾಣುವುದಿಲ್ಲ. ಈ ಕಾರಣದಿಂದಲೇ ಕಂಬಾರರ ಶಿವಾಪುರವು ಚರಿತ್ರೆಯ ಇಕ್ಕಟ್ಟುಗಳಿಂದ ಹೊರತಾದ ರಮ್ಯದ್ವೀಪದಂತೆ ಕಾಣುತ್ತದೆ. ಆದ್ದರಿಂದ ಕಂಬಾರರ ಕಾವ್ಯವು ಕುವೆಂಪು, ಅಡಿಗ, ಲಂಕೇಶ್, ಅನಂತಮೂರ್ತಿಯವವರ ಬರಹಗಳಂತೆ ಮುಂದಿನ ತಲೆಮಾರುಗಳ ಮೇಲೆ ಆಳವಾಗಿ ಪ್ರಭಾವ ಬೀರಿಲ್ಲ. ಸಮುದಾಯದ ಹಾಡನ್ನು ಹಾಡಿಯೂ ಕಂಬಾರರ ಕಾವ್ಯವನ್ನು ಅವರ ಮುಂದಿನ ತಲೆಮಾರು ಅದನ್ನು ತಮ್ಮದೇ ಎಂಬಂತೆ ಸಂಭ್ರಮಿಸಿಲ್ಲ. ಯಾಕೆಂದರೆ ಅದು ನಿಜವಾದ ಅರ್ಥದಲ್ಲಿ ಆಧುನಿಕ ಸಮಾಜವು ಒಳಗೊಂಡಿರುವ ಜಾತಿ, ಧರ್ಮ, ರಾಜಕೀಯ ಅಧಿಕಾರಗಳ ತೀವ್ರವಿಮರ್ಶೆಯಲ್ಲಿ ತೊಡಗಿಲ್ಲ.