”ಚಟಚಟನೆ ನೀರ ಸೀಳಿಂದ ಬೆಳ್ಳಿ ಮೀನು ಹಾರಿಹಾರಿ ಅತ್ತಇತ್ತ ಬೆಳ್ಳಿ ನಕ್ಷತ್ರದಂತೆ ನಮ್ಮ ಕಣ್ಣಿಂದ ಜಾರುತ್ತಿದ್ದವು. ಒಂದು ಮೀನು ಐದು ಅಡಿ ದೂರದಿಂದ ಹಾರಿ ದೋಣಿಯೊಳಗೆ ಬಿತ್ತು. ಚೋಟುದ್ದ ಮೀನು ಮಾರುದ್ದ ಹಾರುವ ಚಂದವೇ…. ದೇವರು ಈ ಸಣ್ಣ ಜೀವಿಗಳ ಉಳಿವಿಗೆ ಎಂಥ ಶಕ್ತಿ ಕೊಟ್ಟಿದ್ದಾನಪ್ಪ!ಹೀಗೆ ಹಕ್ಕಿಗಳನ್ನೂ ಮೀನನ್ನೂ ಹಾರಿಸುತ್ತ ನಿರಾಳವಾಗಿ ಪ್ರಶಾಂತವಾಗಿ ದೋಣಿ ಚಲಿಸುತಿತ್ತು.ನೀರ ಕಾಗೆಗಳು ನೀರಲ್ಲಿ ಮುಳುಗಿ ಮೈಯೊದರಿ ಆಕೊಂಬೆಯಿಂದ ಈ ಕೊಂಬೆಗೆ ತಾರಾಡುತ್ತ ಬಿಸಿಲ ಹುಡುಕುತ್ತಿದ್ದವು”
ಸುಜಾತಾ ತಿರುಗಾಟ ಕಥನ.

 

ಉಡುಪಿಯ ದೈವಗಳೆಲ್ಲ ನಮ್ಮನ್ನು ಅವುಗಳ ನೆಲೆಗೆ ಇದ್ದಕ್ಕಿದ್ದಂತೆ ಕರೆದಂತಾಗಿ ನಾವು ಹೊರಟು ನಿಂತೆವು. ನಾವು ನಮ್ಮ ಸ್ನೇಹಿತರ ಮನೆಯಲ್ಲಿ ಕೋರಿರೋಟಿ ಹಾಗೂ ಕಾಯಿ ಕಡೆದು ಮಾಡಿದ ಕೋಳಿ ಸಾರು ಉಂಡು ಅವರೊಂದಿಗೆ ಅಲ್ಲಿ ಇಲ್ಲಿ ಸುತ್ತಿ ಸಂಜೆ ನಿರಿಗೆ ನಿರಿಗೆಯಾಗಿ ಹರಿದು ಬರುತ್ತಿದ್ದ ಅಲೆ ಅಲೆಯುವ ಕಡಲ ಅಲೆಯನ್ನು ಕಾಣುತ್ತ ಮಕ್ಕಳಂತೆ ಹೊಯಿಗೆಯಲ್ಲಿ ಕೈಕಾಲು ಮುಳುಗಿಸುತ್ತ, ಅದರ ನುಣ್ಣನೆ ಮಯ್ಯಿಗೆ ಮರುಳಾಗುತ್ತ ದಡದಲ್ಲಿ ಕುಳಿತಿದ್ದೆವು. ಉಡುಪಿಯ ಶಕ್ತಿದೇವತೆಗಳ ಪದತಲದಲ್ಲಿ ಮಲ್ಪೆಯ ಬೀಚಿನಲ್ಲಿ ಗಾಳಿಪಟಗಳು ಕನಸಿನಂತೆ ಹಾರುತ್ತಿದ್ದವು.

ಕಡಲ ಹಕ್ಕಿಗಳಾಗಿದ್ದ ಗಾಳಿಪಟ

ಎರಡು ಮೂರು ಯುವಕರ ಗುಂಪು ನೀರಿನಲೆಯ ಸೆಳೆತಕ್ಕೆ ಪುಳಕಗೊಂಡು ಮುಂದೆ ಮುಂದೆ ಹಾಯುತ್ತಿದ್ದವು. ಆಗ ನಾವು ಆತಂಕದಿಂದ ಕತ್ತಲಲ್ಲಿ ಕಣ್ಣಿಟ್ಟು ಅವರನ್ನು ಗಮನಿಸುತ್ತಿದ್ದೆವು. ಕಡಲಲೆಯು ಬೆಳ್ನೊರೆ ಚಾಪೆ ಸುತ್ತುತ್ತಾ ದಡಕ್ಕೆ ಢಿಕ್ಕಿ ಹೊಡೆದು ಮತ್ತೆ ಅಳಿಯುತ್ತಾ ನಡೆದಂತೆ ಈ ಹುಡುಗರು ದಡದಲ್ಲಿ ಅದರೊಟ್ಟಿಗೆ ಸಾಗುತ್ತಿದ್ದರು. ಮೃದು ಮರಳಿಗೆ ನಮ್ಮ ಕೈ ಕಾಲುಗಳು ತೂರಿಕೊಳ್ಳುವುದು ಅನಾಯಾಸವಾಗಿ ನಡೆಯುತಿತ್ತು. ಪಕ್ಕದಲ್ಲಿ ಸಾಕಾಗಿ ಬಂದ ಯುವಕರು ಒಬ್ಬನನ್ನು ಮಲಗಿಸಿ ಕತ್ತಿನವರೆಗೂ ಮರಳಲ್ಲಿ ಹೂತು ಝಲ್ಲನೆದ್ದು ಮರಳ ಮೈ ಕೊಡವಿ ನಗುತ್ತಿದ್ದರು. ಮಕ್ಕಳೆರಡು ಪುಟ್ಟ ಮೊಲಗಳಂತೆ ಕುಪ್ಪಳಿಸಿ ಹೋಗಿ ನೀರಿಗೆ ಎದೆಯೊಡ್ಡುತ್ತಿದ್ದರು.

ತಲೆ ಮೇಲೆತ್ತಿದೆವು. ಯಕ್ಷಗಾನದ ಮುಖವಾಡಕ್ಕೆ ಬಣ್ಣಬಣ್ಣದ ರೆಕ್ಕೆ ಕಟ್ಟಿ ಹಾರಲು ಬಿಟ್ಟಿದ್ದರು. ಉಳಿದಂತೆ ರಾಮನೂ ಹಕ್ಕಿಯಂತೆ ಬಾಲ ಕಟ್ಟಿಕೊಂಡು ಹನುಮಂತನಂತೆ ಮೇಲೇರಿದ್ದ. ಹಾವು, ಗರುಡ, ಬೆಕ್ಕು, ಹುಲಿಗಳೆಲ್ಲ ನೆಲದ ಮೇಲಿಂದ ಮೇಲೆಮೇಲೆ ನೂರಾರು ಗಾಳಿಪಟಗಳಾಗಿ… ಹಿಡಿದವರ ಸೂತ್ರಕ್ಕನುಗುಣವಾಗಿ ಹಾರುತ್ತಿದ್ದವು. ಅವು ತಮ್ಮ ಬಾಲ ಅಲ್ಲಾಡಿಸುತ್ತ ಎಲ್. ಈ. ಡಿ ಬಲ್ಬ್ ಗಳನ್ನು ತಮ್ಮ ಮೊಗದಲ್ಲಿ ಧರಿಸಿ ಹಾರುತ್ತಿದ್ದರೆ ನಕ್ಷತ್ರಗಳು ಅಲ್ಲಿಗೆ ಇಳಿದುಬಂದು ತ್ರಿಶಂಕು ಸ್ವರ್ಗವೊಂದನ್ನು ಸೃಷ್ಟಿಸಿದ್ದವು.

ಅದನ್ನು ಪದೇ ಪದೇ ನೋಡುತ್ತ ನಯವಾದ ಮರಳ ಮೇಲೆ ಕೈಯಾಡಿಸುತ್ತ ಕಡಲ ಕತ್ತಲ ಮೌನದ ಮೊರೆ ಕೇಳುವಾಗಲೇ ಮೈಕಾಸುರನು ಹೊಸವರುಷದ ಆಗಮನವನ್ನು ಸಾರುತ್ತ ಅಲ್ಲೊಂದು ಝಗಮಗಿಸುವ ದೀಪಗಳಡಿಯಲ್ಲಿ ಮ್ಯೂಸಿಕ್ ಬ್ಯಾಂಡ್ ನಡೆಯುತಿತ್ತು. ಕಡಲ ಗಾಳಿಯ ಬಡಿತಕ್ಕೆ ಕೊಳಲ ಸ್ವರ ಚಿಲ್ಲನ್ನ ಚಿತ್ರಾನ್ನವಾಗಿ ತೂರಿ ಬರುತಿತ್ತು. ಫೋಕಸ್ ಲೈಟಿನ ಬೆಳಕು ಕಡಲಾಚೆ ಬದಿಯ ದಡವನ್ನು ಆಗಾಗ ಹುಡುಕುತಿತ್ತು. ರಾತ್ರಿ ರಂಗೇರುವ ಕಾಲಕ್ಕೆ ನಾವು ರೂಮಿಗೆ ಬಂದು ಪವಡಿಸಿದೆವು.

ದೋಣಿಯಾನ

ಬೆಳಗಾಯಿತು. ನಿಗದಿಯಂತೆ ಒಂದು ಸುಂದರ ಪಯಣ. ಕಡಲವ್ವನ ಮಡಿಲಲ್ಲಿ ದೋಣಿಯೇರಿ ಹೊರಟೆವು. ಒಂದು ಗಂಟೆಗೂ ಹೆಚ್ಚಿನ ಪಯಣ. ಅಲ್ಲಿಯವರೇ ಆದ ಸ್ನೇಹಿತರ ಮೂಲಕ ಕಡಲ ನಡುಗಡ್ಡೆಗೆ ಬಂದಿಳಿದೆವು. ಫೋನಿನ ಕರೆಗೆ ಸಂಪಣ್ಣ ಬಂದರು. ಗಟ್ಟಿಮುಟ್ಟು ದೇಹ. ಅವರ ನಡುವೆ ತುಳುವಿನಲ್ಲಿ ಮಾತುಕತೆ ಸಾಗುತಿತ್ತು. ದೋಣಿ ಅಳಿವೆಯ ನೀರಿನಲ್ಲಿ ಕಟ್ಟುಬಿಚ್ಚಿ ನೀರ ಸೀಳಿ ಮುನ್ನುಗ್ಗುತ್ತ ನಮ್ಮನ್ನು ನೀರ ಮೇಲೆ ತೇಲಿಸುತಿತ್ತು. ಹೆಚ್ಚು ಜನರಿಲ್ಲದ ಮೌನಯಾನ. ಬಿಸಿಲ ಕೋಲನ್ನು ಗರಿಗೆದರಿ ತೂರಿಬಿಡಲು ಸೂರ್ಯದೇವ ತೆಂಗುಕಂಗುಗಳಾಚೆ ಕಣ್ಣುಕೊಟ್ಟು ಹೊಂಚುಹಾಕುತ್ತಿದ್ದ. ಹಕ್ಕಿಗಳು ಕೊಂಬೆಯ ಮೇಲೆ ಬಿಸಿಲು ಬರುವುದನ್ನೇ ಕಾಯುತ್ತ ಗೂಡಿಂದ ಹೊರಬಂದು ತಪಸ್ಸಿಗೆ ಕೂತಿದ್ದೆವು. ನೀಲಹಕ್ಕಿ ಮೀನಬೇಟೆಗೆ ಅತ್ತಿಂದಿತ್ತ ಹಾರಾಡುತ್ತ ಕೊಕ್ಕು ಮಸೆಯುತ್ತಿದ್ದವು. ನಡುಗಡ್ಡೆಯಂಚಿನ ಮರದ ನೀರ ಮೇಲೆ ಹರಡಿದ ಟೊಂಗೆಗಳ ಮೇಲೆ ಹಕ್ಕಿ ಮೈ ಮುದುರಿ ಕುಳಿತಿದ್ದವು. ಸಣ್ಣ ಹಕ್ಕಿಗಳಷ್ಟೇ ಅತ್ತಿತ್ತ ಹಾರಾಡುತ್ತಿದ್ದವು.

ಗರುಡಾಳು ದೇವರುಗಳು ತಮ್ಮ ಬಿಳಿ ತಲೆಗಳ ದೆಸೆಯಿಂದ ಮರದ ನೆತ್ತಿಯ ಮೇಲೆ ಕಾಣುತ್ತಿದ್ದವು. ದಟ್ಟ ಮರದ ಗುಂಪಲ್ಲಿ ಏನೂ ಕಾಣಿಸದೆ ಇದು ನಡುಗುಡ್ಡೆ ಅಂಚಿನ ನೋಟ ಮಾತ್ರವಾಗಿತ್ತು. ಅಲ್ಲೊಂದು ಉದ್ದ ನುಲಿವ ಕತ್ತಿನ ಬೆಳ್ಳಕ್ಕಿ ಕತ್ತು ಕೊಂಕಿಸಿ ಕುಳಿತಿತ್ತು. ಅದರ ಪಕ್ಕದಲ್ಲೇ ಇನಿತು ದೂರದಲ್ಲಿ ಅಂಥದ್ದೇ ಉದ್ದ ಕತ್ತಿನ ಕಪ್ಪಕ್ಕಿ ಅದರ ನೆರಳಂತೆ ಮೈ ಮುದುರಿ ಕುಳಿತಿತ್ತು. ದೋಣಿ ಸಾಗಿದಾಗ ಎರಡೂ ಎಚ್ಚೆತ್ತು ಮನಬಿಚ್ಚಿ ನೀರಮೇಲೆ ಸಾಗಿ ದೂರ ಸರಿದವು. ಬೆಳಕು ನೆರಳಂತೆ. ಹಗಲು ರಾತ್ರಿಯಂತೆ. ಒಂದೇ ದೇಹದ ನೆರಳಂತೆ.

ಚಟಚಟನೆ ನೀರ ಸೀಳಿಂದ ಬೆಳ್ಳಿ ಮೀನು ಹಾರಿಹಾರಿ ಅತ್ತಇತ್ತ ಬೆಳ್ಳಿ ನಕ್ಷತ್ರದಂತೆ ನಮ್ಮ ಕಣ್ಣಿಂದ ಜಾರುತ್ತಿದ್ದವು. ಒಂದು ಮೀನು ಐದು ಅಡಿ ದೂರದಿಂದ ಹಾರಿ ದೋಣಿಯೊಳಗೆ ಬಿತ್ತು. ಚೋಟುದ್ದ ಮೀನು ಮಾರುದ್ದ ಹಾರುವ ಚಂದವೇ…. ದೇವರು ಈ ಸಣ್ಣ ಜೀವಿಗಳ ಉಳಿವಿಗೆ ಎಂಥ ಶಕ್ತಿ ಕೊಟ್ಟಿದ್ದಾನಪ್ಪ! ಹೀಗೆ ಹಕ್ಕಿಗಳನ್ನೂ ಮೀನನ್ನೂ ಹಾರಿಸುತ್ತ ನಿರಾಳವಾಗಿ ಪ್ರಶಾಂತವಾಗಿ ದೋಣಿ ಚಲಿಸುತಿತ್ತು. ನೀರ ಕಾಗೆಗಳು ನೀರಲ್ಲಿ ಮುಳುಗಿ ಮೈಯೊದರಿ ಆಕೊಂಬೆಯಿಂದ ಈ ಕೊಂಬೆಗೆ ತಾರಾಡುತ್ತ ಬಿಸಿಲ ಹುಡುಕುತ್ತಿವು. ಬಿಸಿಲಗಣ್ಣು ರಜವಾಗುತಿತ್ತು.

ಮರುಳೋ ಮರಳು

ಇಂದು ಸಧ್ಯ…. ಮರಳೆಂಬುದು ಚಿನ್ನದ ಬಣ್ಣದ ಚಿನ್ನವಾಗಿದೆ. ಮೂರು ನಾಕು ತಲೆಮಾರಿಗೆ ಗಟ್ಟಿಮುಟ್ಟಾದ ಊರಗಲ ಮನೆ ಕಟ್ಟಿಕೊಳ್ಳುವ ನಮ್ಮಾಸೆಗಳಿಗೆ ಈ ಹೊಳೆಗಳು, ಅಳಿವೆಗಳ ಹೊಟ್ಟೆ ಬಗೆವ ನಾವು ಮರುಳರೋ? ಮರಳೇ ಒಂದು ಮರುಳೋ ತಿಳಿಯದಾಗಿದೆ. ಲೈಸೆನ್ಸ್ ಹೊತ್ತ ಹತ್ತಾರು ದೋಣಿಗಳು ಚಟುವಟಿಕೆಯಿಂದ ಉದ್ದಾನೆ ಕಬ್ಬಿಣದ ಸ್ಟ್ಯಾಂಡ್ ಅಡ್ಡ ಹಾಕಿಕೊಂಡು ದೋಣಿಗಳನ್ನು ನಡುನೀರಿನಲ್ಲಿ ನಿಲ್ಲಿಸಿಕೊಂಡಿದ್ದವು. ಅಂಚಿನಲ್ಲಿ ಮರಳು ತೆಗೆಯುವಂತಿಲ್ಲ. ಇಲ್ಲಿಯ ಜನರ ಕೈಲಿ ನಡು ಮಧ್ಯದ ನೀರಲ್ಲಿ ಉಸಿರುಕಟ್ಟಿ ಮುಳುಗು ಹಾಕುವುದು ಸಾಧ್ಯವಾಗದೆ ಒರಿಸ್ಸಾದ ಗಟ್ಟಿಮುಟ್ಟಾದ ಆಳುಗಳು ಇಲ್ಲಿ ಬಂದು ದುಡಿಯುತ್ತಿದ್ದಾರೆ.

ದೋಣಿಯ ಪಕ್ಕದಲ್ಲಿ ಎರಡಾಳು ಉದ್ದದ ಕಬ್ಬಿಣದ ಸ್ಟ್ಯಾಂಡ್ ಕಾಲೂರುತ್ತದೆ. ಅದರ ಮೇಲಿಂದ ನಿಮಿಷಕ್ಕೂ ಹೆಚ್ಚು ಉಸಿರುಗಟ್ಟುವ ಆಳುಗಳು ಮುಳುಗು ಹಾಕಿ ಕಬ್ಬಿಣದ ಬಕೆಟ್ ನಲ್ಲಿ ಮರಳು ಬಗೆದು ಮೇಲೆತ್ತುತ್ತಾರೆ. ಮೇಲಿರುವವರು ಅದನ್ನೆತ್ತಿ ಗುಪ್ಪೆ ಹಾಕುತ್ತಾರೆ. ದೋಣಿ ತುಂಬಿದಾಗ ದಡದಲ್ಲಿ ನಿಂತ ಲಾರಿಗೆ ಚಿಮ್ಮು ಹಿಡಿಕೆಯ ಮೊರಗಳಲ್ಲಿ ಆಳುಗಳು ಮರಳನ್ನು ಮೇಲೇರಿಸುತ್ತಾರೆ. ಹತ್ತಾರು ದೋಣಿಗಳು ಹತ್ತಾರು ಲಾರಿಗಳನ್ನು ತುಂಬಿದಾಗ ಒರಿಸ್ಸಾದ ಆಳುಮಕ್ಕಳಿಗೆ ಅವರ ಶಕ್ತಿ ಅನುಸಾರ ದಿನಕ್ಕೆ ಸಾವಿರ ಹಣ ಎಣಿಕೆಯಾಗುತ್ತದೆ.

ಊರಲ್ಲಿ ನೂರರ ನೋಟು ಕಾಣಲು ಕಷ್ಟವಿದ್ದ ಕಾರಣ ಇವರೆಲ್ಲ ಇಲ್ಲಿಗೆ ಗುಳೆ ಬಂದಿದ್ದಾರೆ. ಆ ಗಡ್ಡೆಗಳಲ್ಲಿದ್ದ ಮೊಗವೀರರ ಬೀಡೀಗ ಲಾರಿಗಳಿಂದ ತುಂಬಿತ್ತು. ದೋಣಿಯಾನಕ್ಕೂ ಜನ ಬರುವುದರಿಂದ ಮೀನು ಹಿಡಿಯುವ ಕಾಯಕವೀಗ ಅವರಿಗೆ ಅನಿವಾರ್ಯವಲ್ಲ. ಒಳ್ಳೆ ಮೀನುಗಳೆಲ್ಲ ದೊಡ್ದ ಮೀನುಗಾರರ ಸೊತ್ತಾಗಿವೆ. ಅವು ಹೊರಗಡೆಗೆ ರಫ್ತಾಗುತ್ತವೆ.

 

ದೋಣಿ ಅಳಿವೆಯ ನೀರಿನಲ್ಲಿ ಕಟ್ಟುಬಿಚ್ಚಿ ನೀರ ಸೀಳಿ ಮುನ್ನುಗ್ಗುತ್ತ ನಮ್ಮನ್ನು ನೀರ ಮೇಲೆ ತೇಲಿಸುತಿತ್ತು. ಹೆಚ್ಚು ಜನರಿಲ್ಲದ ಮೌನಯಾನ. ಬಿಸಿಲ ಕೋಲನ್ನು ಗರಿಗೆದರಿ ತೂರಿಬಿಡಲು ಸೂರ್ಯದೇವ ತೆಂಗುಕಂಗುಗಳಾಚೆ ಕಣ್ಣುಕೊಟ್ಟು ಹೊಂಚುಹಾಕುತ್ತಿದ್ದ. ಹಕ್ಕಿಗಳು ಕೊಂಬೆಯ ಮೇಲೆ ಬಿಸಿಲು ಬರುವುದನ್ನೇ ಕಾಯುತ್ತ ಗೂಡಿಂದ ಹೊರಬಂದು ತಪಸ್ಸಿಗೆ ಕೂತಿದ್ದೆವು.

ಇಲ್ಲೀಗ ಮನೆಯೊಳಗೂ ಮನೆ ಹೊರಗೂ ಮೀನ ಘಮಲು ಕಡಿಮೆಯಾಗುತ್ತಿದೆ. ಕಡಲ ಗಾಳಿಯಲ್ಲಿ ತೂರಿಬರುತ್ತಿದ್ದ ಮೀನಿನ ಉಪ್ಪುಮೈ ವಾಸನೆ ನಿಧಾನಗತಿಯಲ್ಲಿ ಇಳಿಯುತ್ತಿದೆ. ಹಣ ಹರಿದಾಟವಿರುವುದನ್ನು ಅವರ ಮನೆಗಳ ವಿವಿಧ ವಿನ್ಯಾಸಗಳು ತೋರುತ್ತವೆ. ‘ಖಾರ ಕಡೆದಿಟ್ಟು ಮೀನು ಹಿಡಿದು ಬಾ’ ಎಂದು ಬಯ್ಯುತ್ತಿದ್ದ ಹೆಂಡಿರೀಗ ಕಾರು ಬೈಕ್ ಹತ್ತಿ ಪ್ಯಾಟೆಗೆ ಹೋಗುವುದರಿಂದ ಹೋಟೆಲ ಹೊಸರುಚಿಗಳು ಮೀನು ಪೇಟೆಯಲ್ಲಿ ಹಾಗೂ ಮೀನುಗಾರರ ಮನೆಯಲ್ಲಿ ಗಲಾಟೆಯನ್ನು ತಗ್ಗಿಸಿವೆ. ಅಕ್ಷರಸ್ಥರಾದ ಮಕ್ಕಳಿಗೆ ಈ ಬಲೆ ಬೀಸುವ ಹಾಗೂ ಬಲೆ ಎಳೆಯುವ ಶ್ರಮವೇಕೆ?

ಸಮುದ್ರದ ಅಂಚಿನಲ್ಲಿ ಮೀನು ಮರಿಗಳನ್ನು ಹೊತ್ತ ಪ್ಲಾಸ್ಟಿಕ್ ನೆಟ್ಟಿನ ಮನೆಗಳು ಗೂಟ ಹೂದು ಕೂರುತ್ತವೆ. ಮೀನು ಸಾಕಾಣಿಕೆಯ ವಿಧಾನ ಈ ಗೂಡಿನಲ್ಲಿ ಈಗ ಹೊಸ ಮಾದರಿಯಲ್ಲಿ ಶುರುವಾಗಿದೆ. ಮೀನು ಮರಿಗಳನ್ನು ಹೊತ್ತ ಈ ಗೂಡುಗಳು ವರುಷ ಕಾಲ ನೀರಿನಲ್ಲಿ ಮುಳುಗಿರುತ್ತವೆ. ಸಮುದ್ರದ ನೀರಿನ ಸಖ್ಯ ಇದ್ದರೂ ಅವು ಅದರೊಳಗೇ ಈಜಬೇಕು. ಥೇಟ್! ಅಕ್ವೇರಿಯ್ಂ ನಲ್ಲಿದ್ದಂತೆಯೇ… ವರುಷ ಕಾಲದಲ್ಲಿ ಮೂರು ನಾಕು ಕೆ. ಜಿ. ಹಣದ ತಕ್ಕಡಿ ತೂಗುವ ಇವು ಮೀನೋದ್ಯಮವನ್ನು ಬೆಳೆಸುತ್ತವೆ. ಜೀವಜಾಲವೇ ಉದ್ಯಮವಾಗಿ ಬೆಳೆವ ಕಾಲವಿದು.

ಹೆದ್ದಾರಿಯಂಚಿಗೆ ಬಂದು ಕೂತ ಹಳ್ಳಿಗಳಂತೆಯೇ ಈ ಮೀನುಗಳು ನಡುಮಧ್ಯದ ತಿರುಳನ್ನು ಅರಿಯದೆ ಕಷ್ಟದ ಅರಿವನ್ನು ಹೊಸಕಿ ಹಾಕಿ…. ಬುದ್ದಿವಂತ ಮನುಷ್ಯನ ಮೆದುಳನ್ನು ಇನ್ನಷ್ಟು ಚುರುಕುಗೊಳಿಸುತ್ತವೆಯೇ? ನನಗೆ ತಿಳಿಯದು. ಈ ಮಂಕು ಮೀನುಗಳು ಅದು ಹೇಗೆ ಮೆದುಳನ್ನು ಜಾಗೃತಗೊಳಿಸುವುವೋ ಗೊತ್ತಿಲ್ಲ. ಬಣ್ಣಬಣ್ಣದ ಮಸಾಲೆಯಿಂದ ಚಾಪಲ್ಯವಂತೂ ಎಚ್ಚೆತ್ತುಕೊಳ್ಳುತ್ತದೆ ನಿಜ…. ಅನ್ನಿಸುತ್ತದೆ.

ರಥಬೀದಿಯ ಹೋಟೆಲ್ಲು

ಹಸಿದ ಹೊಟ್ಟೆಗೆ ರಥ ಬೀದಿಯ ಗೆಳೆಯರೊಬ್ಬರು ಸಣ್ಣ ಗೂಡಂಗಡಿಯಂಥ ಹೋಟೇಲ್ಲಲ್ಲಿ ಬೆಳಗಿನ ತಿಂಡಿ ತಿನ್ನಿಸಿದರು. ಚಿಕ್ಕ ಹೋಟೆಲ್ಲಿನ ಅಪ್ಪಟ ಉಡುಪಿಯ ರಥ ಬೀದಿಯ ಸ್ವಾದ. ಬೇರೆ ದೊಡ್ಡ ಹೋಟೆಲ್ಲಿಗಿಂತ ಭಿನ್ನವಾಗಿತ್ತು. ಅಲ್ಲಿನ ರುಚಿ ಚೆನ್ನಾಗಿದ್ದರೂ ಅಲ್ಲಿನ ಕೆಲಸದ ಎಳೇ ಹುಡುಗಿಗೆ ಮುಂದೆ ತಿಂಡಿಯಿಟ್ಟು ತಮಾಷೆಯ ಹಂಗಿನ ಮಾತನಾಡುತ, ನಗುತ್ತಿದ್ದ ಮನುಷ್ಯರ ಅಭಿರುಚಿಗೆ ಜೀವ ಛುಳ್ ಅನ್ನಿಸಿತು. ದೂರದ ಹುಬ್ಬಳ್ಳಿಯಿಂದ ಇಲ್ಲಿ ಕೆಲಸಕ್ಕೆ ಬಂದ ಆ ಎಳೇ ಪೋರಿ ಹಂಗರಣೆಯ ಒಗ್ಗರಣೆಗೆ ಮಾತಾಡದೆ ತುತ್ತನ್ನು ಬಾಯಿಗೆ ಹಾಕಿಕೊಳ್ಳುತಿತ್ತು.

ನಾವು ಹೋಗುವಾಗ ಬರುವಾಗ ಊರಾಡುವ ಶ್ರೀ ಕೃಷ್ಣನ ರಥಗಳು ಬಣ್ಣದ ಬಟ್ಟೆಯ ಸಿಂಗಾರ ಕಟ್ಟಿಕೊಂಡು ಸಜ್ಜಾಗುತ್ತಿದ್ದವು. ಎರಡು ಸಿದ್ಧವಾಗಿದ್ದು, ಇನ್ನೊಂದು ತಡಿಕೆಯ ಬೆತ್ತಲೆಯಲ್ಲೇ ಇತ್ತು. ಒಳಗೆ ನಮ್ಮ ಗೊಲ್ಲ ಕೃಷ್ಣ ಅದ್ಯಾವ ಸಿಂಗಾರ ಮಾಡಿಸಿಕೊಳ್ಳುತ್ತಿದ್ದನೋ ಜನರ ದರುಶನಕ್ಕೆ, ತಿಳಿಯಲಿಲ್ಲ. ನಾವು ನಿರ್ಮಿತಿ ಕೇಂದ್ರದ ರೂಮು ಸೇರಿ ಹೊರ ಹೊರಡುವ ತಯ್ಯಾರಿ ಮಾಡಿಕೊಂಡೆವು.

ಮಣ್ಣಪಾಲ

ಉಡುಪಿಯೆಂಬುದು ಹಿಂದೆ ಹಳೆ ಹೆಂಚಿನ ಹಾಗೂ ಮರದ ಮನೆಗಳ ಇಕ್ಕಟ್ಟಿನ ಬೀದಿಗಳ ಪೇಟೆಯಾಗಿತ್ತು. ಈಗದು ಮಣಿಪಾಲದಿಂದಾಚೆಗೂ ವಿಸ್ತರಿಸಿಕೊಂಡು ಹೊಸ ಕಟ್ಟಡಗಳ ಹೊಸ ಕಲಾವಿದರ, ಶಿಕ್ಷಣ ಸಂಸ್ಥೆಗಳ ಊರಾಗಿ ನಿಂತಿದೆ. ಹಾಗೆಯೇ ವಾಣಿಜ್ಯವಾಗಿ, ಕಟ್ಟಡ ವಿನ್ಯಾಸದಲ್ಲೂ ಪ್ರಗತಿ ಹಾಗೂ ಅಚ್ಛುಕಟ್ಟುತನವಿದೆ. ತಮ್ಮ ಪರಿಸರವನ್ನು, ತಮ್ಮ ಮೂಲವನ್ನು ಉಳಿಸಿಕೊಂಡೇ ಇಲ್ಲಿಯ ಜನ ಹೊಸ ಪ್ರಯೋಗಗಳಿಗೆ ಕೈ ಹಾಕುವುದೊಂದು ಮೆಚ್ಚುವ ಸಂಗತಿಯಾಗಿದೆ. ಜಾಗತೀಕರಣದ ನಡುವೆಯೂ ಹಳೆಯ ನೆನಪಿನೊಂದಿಗೆ ಥಳುಕು ಹಾಕಿಕೊಳ್ಳುವ ತಮ್ಮ ಕಲೆಯನ್ನು ರುಚಿಯನ್ನು ಹಿರಿದೆಂದೇ ನಂಬುವ ಉಡುಪಿಯ ಜನರಿಗೆ ತಮ್ಮ ವೈವಿದ್ಯಮಯ ನಡೆನುಡಿಯ ಬಗ್ಗೆ ಹೆಮ್ಮೆಯಿದೆ. ಬಹುತ್ವವನ್ನು ಗೌರವಿಸಿ ಉಳಿಸಿರುವುದು ಇವರ ತಾಯಿ ಭಾಷೆ ‘ತುಳು’ ಇಲ್ಲಿರುವ ಎಲ್ಲ ಪ್ರತಿಯೊಂದು ಜನಾಂಗವನ್ನೂ ಹಾಗೆಯೇ ಪ್ರತಿಯೊಂದು ಕಲೆಯನ್ನೂ ಒಂದುಗೂಡಿಸುವುದು ಈ ಆಡು ಭಾಷೆಯೇ…. ಎಲ್ಲಿಂದ ಎಲ್ಲಿಗೆ ಹೋದರೂ ಅವರು ತಮ್ಮ ಭಾಷೆಯನ್ನಾಡುತ್ತ ಪಕ್ಕದಲ್ಲಿರುವವರನ್ನು ಮರೆತುಬಿಡುತ್ತಾರೆ.


ಆ ಕಾಲಕ್ಕೆ ಉಪಯೋಗಕ್ಕೆ ಬಾರದ ಮಣ್ಣಹೊಂಡವಾಗಿದ್ದ ‘ಮಣ್ಣಪಾಲ’ ಕಾಲಾನಂತರ ‘ಮಣಿಪಾಲ’ವಾಗಿ ಉನ್ನತ ಶಿಕ್ಷಣ ಕೇಂದ್ರವಾಗಿ, ಬ್ಯಾಂಕುಗಳ ಉಗಮವಾಗಿ, ವೈದ್ಯಕೀಯ ಶಿಕ್ಷಣ ಹಾಗೂ ಸೌಲಭ್ಯಕ್ಕೆ ಹೆಸರಾಯಿತು. ಅಲ್ಲಿ ಬ್ಯಾಂಕಿನ ಉದ್ಯೋಗಿಯಾಗಿದ್ದ ವಿಜಯನಾಥ ಶೆಣೈ ಎಂಬುವರ ಗೀಳಿಂದ ಆರು ಎಕರೆಯಲ್ಲಿ ರಾಜ್ಯಾದ್ಯಂತ ಬಿದ್ದುಹೋಗುತ್ತಿದ್ದ ಗತವೈಭವದ ಹಾಗೂ ಜನಜೀವನದ ಮನೆಮುಂಗಟ್ಟುಗಳು, ವಾಸ್ತುಶಿಲ್ಪದ ವಿಶೇಷ ಮನೆಮಾರುಗಳು ಎಚ್ಚೆತ್ತು ಇಲ್ಲಿ ಬಂದು ತಳವೂರಿ ನಿಂತವು.

ಹಿಂದಿನಿಂದಲೂ ಪ್ರತಿಬಾರಿ ಅವರ ‘ಹೆರಿಟೇಜ್ ವಿಲ್ಲೇಜ್’ ಭೇಟಿಗೆ ನಾವು ಹೋದಾಗ ಗೇಟೆದುರಿನ ಕುಂಜೂರು ಮನೆಯ ಮುಂದೆ ಕುಳಿತು ಕಾಯುತ್ತಿದ್ದ…. ಬಂದೊಡನೆ ಎಳನೀರು ಕೊಟ್ಟು ನಗುತ್ತ ಉಪಚರಿಸುತ್ತಿದ್ದ ವಿಜಯನಾಥರವರ ಜಾಗದಲ್ಲಿ ಅವರ ಕೋಲು…. ನುಗುಚಿ ಹೋದ ಒಡೆಯನ ಕೈ ಮರೆತು ಕುಳಿತಿತ್ತು.

ಅವರ ನಂತರದ ಹೊಣೆಗಾರಿಕೆಯನ್ನು ಹೊತ್ತಿರುವ ಹರೀಶ್ ಹಾಗೂ ರಾಜೇಶ್ ಪೈರವರನ್ನು ಭೇಟಿಯಾಗಿ ಅವರನ್ನು ನೆನೆಸಿಕೊಂಡು ಮಾತನ್ನಾಡಿ ಬರುವಾಗ, ನನ್ನ ಮಗನಿಗೆ ಅಗುಳಿ ಹಾಕಿ ತೆಗೆಯಲು ಹೇಳಿ ನಗುತ್ತಿದ್ದ ನಂತರ ಹಳೆಕಾಲದವರ ತಂತ್ರಗಾರಿಕೆಯನ್ನು ಅವನಿಗೆ ಪರಿಚಯಿಸುತ್ತಿದ್ದ ಅವರ ಹೆಮ್ಮೆ ನೆನಪಿಗೆ ಬಂತು. ಅದು ಭಾರವಾಗಿ ಕಣ್ಣು ತುಂಬಿತ್ತು.

ಅಂದು ಬೊಟ್ಟು ಮಾಡಿ ಅವರು ತೋರುತ್ತಿದ್ದ ಮಣ್ಣಪಾಲದ ಕೆರೆ ಇಂದು ನಿರ್ಮಿತಿ ಕೇಂದ್ರದವರ ಆಸಕ್ತಿಯಿಂದ ಸರಕಾರದ ಅನುಮತಿಯ ಮೇರೆಗೆ ಗಿಡಮರಗಳ ಹಸಿರೊದ್ದು ನೀರಂಚಿನ ದಾರಿಯಲ್ಲಿ ಜನ ನೆಮ್ಮದಿಯ ವಾಕಿಂಗ್ ಮಾಡುತ್ತಿದ್ದಾರೆ. ಕೆರೆಯಂಚಲ್ಲಿರುವ ಕೇಂದ್ರದ ಕಟ್ಟಡ ಸಹಾ ಕತ್ತೆತ್ತಿ ನೋಡುವಂತಿದೆ. ಹಳೆ ಬೇರು, ಹೊಸ ಚಿಗುರು ಕೂಡಿರಲು ಮರ ಸೊಬಗೆಂಬಂತೆ….. ಜಾಗತೀಕರಣದಲ್ಲೂ ಪ್ರಜ್ಞಾವಂತ ಜನ ಹೀಗೆ ಎಚ್ಚೆತ್ತುಕೊಳ್ಳಲಿ, ತಮ್ಮ ನೆಲೆ ನಡೆ ನುಡಿ ಕಲೆಯನ್ನು ಉಳಿಯಗೊಡಲಿ. ಕಿರಿಯರು ಇದನ್ನು ನೋಡಿ ಕಲಿಯಲಿ. ಪರಿಶ್ರಮ ಹಾಗೂ ಅಚ್ಚುಕಟ್ಟುತನಕ್ಕೆ ಸೌಂದರ್ಯವಿದೆ. .