ತರಗತಿಯಿಂದ ತರಗತಿಗೆ ಹಾರಿ ಅದೇ ಶಾಲೆಯಲ್ಲಿ ಕೂತವರಿಗೆ ಒಂದು ರೂಮಿನ ಬದಲಾವಣೆ ಅಷ್ಟೇ.. ತರಗತಿಯಿಂದ ಉಸಿರು ಬಿಗಿ ಹಿಡಿದು ಹಾರಿ ಜಿಗಿದು ಮತ್ತೆಲ್ಲೊ ಮತ್ಯಾವ ಶಾಲೆ, ಕಾಲೇಜಿನ ರೂಮಿನಲ್ಲೊ ಇಲ್ಲಿ ಕಿತ್ತುಕೊಂಡು ಬಂದ ಓದಿನ ಗಿಡವನ್ನು ಅಲ್ಲಿ ನೆಟ್ಟು ಪೋಷಿಸಬೇಕು. ಕಿತ್ತು ನಡೆಯುವ ಹೊತ್ತಲ್ಲಿ ಗಂಟಲಿಗೆ ಬಂದು ಆತು ಕೂತುಕೊಳ್ಳುತ್ತಲ್ಲಾ ಆ ದುಃಖ ಮತ್ತು ಅದನ್ನು ನುಂಗಿ ಸಾಯಿಸಿ ಸಾಯಿಸಿ ನಗಬೇಕಲ್ಲ ಆ ಸಂಕಟ, ಮತ್ತು ಪಿಳಿಪಿಳಿ ಕಣ್ಣುಗಳಿಂದ ಬಂದೇ ಬಿಡುತ್ತಲ್ಲ ಆ ಪವಿತ್ರ ಕಣ್ಣೀರು.. ಓ ಎಂತ ಪಾಪಿಷ್ಟ ಗಳಿಗೆ ಅದು.
ಸದಾಶಿವ ಸೊರಟೂರು ಬರೆದ ಪ್ರಬಂಧ ನಿಮ್ಮ ಓದಿಗೆ

ಚಳಿ‌ ಕಳೆದು ಬಿಸಿಲು ಹುಟ್ಟುವ ಕಾಲಕ್ಕೆ ಮಾರ್ಚ್ ಮೆಲ್ಲಗೆ ಮೊಳೆತು ಬಿಡುತ್ತದೆ. ಓದಿನ ವರ್ಷವೊಂದು ಏದುಸಿರು ಬಿಡುತ್ತಾ ಕೊನೆ ದಿನಗಳನ್ನು ಎಣಿಸುತ್ತಿರುತ್ತದೆ. ಈ ಮಾರ್ಚ್ ಎಲ್ಲಾ ಮಕ್ಕಳ ಮನಸ್ಸಿನೊಳಗೆ ಪರೀಕ್ಷೆಯ ಒಂದೊಂದು ಬೀಜ ಬಿತ್ತಿ ಗತ್ತಿನ ಮೇಷ್ಟ್ರಂತೆ ನಿಂತು ನೋಡುತ್ತದೆ. ಅದೊಂದು ಮರ್ಸಿಲೆಸ್ ಮಾರ್ಚ್. ಮಕ್ಕಳ ಮನಸ್ಸಿನ ಗಲಿಬಿಲಿ, ಪೋಷಕರು ಎದೆ ಬಡಿತ ಊರ ಬೀದಿಯಲ್ಲೂ ಕೇಳಿಸುತ್ತದೆ. ಬರೀ ಪರೀಕ್ಷೆಯ ಕಾರಣಕ್ಕೆ ಮಾರ್ಚ್ ಈ ರೀತಿ ವರ್ತಿಸಿದರೆ ಅದನ್ನು ಕ್ಷಮಿಸಬಹುದಿತ್ತು. ಆದರೆ ಅದು ಒಂದೊಂದೇ ಬ್ಯಾಚನ್ನು ತರಗತಿ ಕೋಣೆಯಿಂದ ಹೊರ ಹಾಕುತ್ತದೆ. ಮತ್ತೇನೊ, ಮತ್ತೆ ಯಾವುದೊ ಕಲಿಸುವ ಕೋಣೆ ಹುಡುಕಿಕೊಂಡು ಕಲಿಯುವ ಹಕ್ಕಿಗಳು ಹೊರಟು ನಿಲ್ಲುತ್ತವೆ. ಒಂದರ ಅಂತ್ಯ ಇನ್ನೊಂದರ ಆರಂಭ ಎಂಬುದು ಯಾವ ವಿವರಣೆಯಿಲ್ಲದೆ ಪ್ರತಿ ಹಕ್ಕಿಯೂ ಸಲೀಲವಾಗಿ ಅರ್ಥ ಮಾಡಿಕೊಳ್ಳುತ್ತದೆ. ಕೂಡಿ ಕಲಿತ, ಕೂಡಿ ಹಾಡಿದ, ಕೂಡಿ ಆಡಿದ, ಕೂಡಿಯೇ ಉಂಡ, ಕೂಡಿ‌ಕೂಡಿಯೇ ತರ್ಲೆಮಾಡಿದ, ಕೂಡ ಕುಟುಂಬದಂತೆ ಜಗಳ ಮಾಡಿದ ಎಲ್ಲಾ ಕೂಡಾಟಗಳು ಕಳಚಿಕೊಂಡು ಕಲಿತಿದ್ದನ್ನು ಎದೆಗೆ ಅವುಚಿಕೊಂಡು ಹಾರಿ ಹೊರಡಲೇಬೇಕಾದ ದರ್ದು ಎಲ್ಲಾ ಹಕ್ಕಿಗಳ ಪಾಲಿನ ಅನಿವಾರ್ಯದ ಕಡುಕಷ್ಟ.

ತರಗತಿಯಿಂದ ತರಗತಿಗೆ ಹಾರಿ ಅದೇ ಶಾಲೆಯಲ್ಲಿ ಕೂತವರಿಗೆ ಒಂದು ರೂಮಿನ ಬದಲಾವಣೆ ಅಷ್ಟೇ.. ತರಗತಿಯಿಂದ ಉಸಿರು ಬಿಗಿ ಹಿಡಿದು ಹಾರಿ ಜಿಗಿದು ಮತ್ತೆಲ್ಲೊ ಮತ್ಯಾವ ಶಾಲೆ, ಕಾಲೇಜಿನ ರೂಮಿನಲ್ಲೊ ಇಲ್ಲಿ ಕಿತ್ತುಕೊಂಡು ಬಂದ ಓದಿನ ಗಿಡವನ್ನು ಅಲ್ಲಿ ನೆಟ್ಟು ಪೋಷಿಸಬೇಕು. ಕಿತ್ತು ನಡೆಯುವ ಹೊತ್ತಲ್ಲಿ ಗಂಟಲಿಗೆ ಬಂದು ಆತು ಕೂತುಕೊಳ್ಳುತ್ತಲ್ಲಾ ಆ ದುಃಖ ಮತ್ತು ಅದನ್ನು ನುಂಗಿ ಸಾಯಿಸಿ ಸಾಯಿಸಿ ನಗಬೇಕಲ್ಲ ಆ ಸಂಕಟ, ಮತ್ತು ಪಿಳಿಪಿಳಿ ಕಣ್ಣುಗಳಿಂದ ಬಂದೇ ಬಿಡುತ್ತಲ್ಲ ಆ ಪವಿತ್ರ ಕಣ್ಣೀರು.. ಓ ಎಂತ ಪಾಪಿಷ್ಟ ಗಳಿಗೆ ಅದು. ಆರನೇ ತರಗತಿಯಿಂದ ಪದವಿ ಮತ್ತು ಅದರಾಚೆಗಿನ ತರಗತಿಗಳೂ ವ್ಯಾಪಿಸಿಕೊಂಡ ಮರ್ಸಿಲೆಸ್ ಮಾರ್ಚಿನ ಈ ಕ್ಷಣಗಳು ಕೊಲ್ಲುವಷ್ಟು ಚೆಂದ ಮತ್ತು ಬದುಕುವಷ್ಟು ಕ್ರೂರ.

“ನಾಳೆ ನಿಮಗೊಂದು ಸೆಂಡ್ ಆಫ್ ಇದೆ‌ ಮಕ್ಕಳೇ.. ಇಡೀ ದಿ‌ನ ನಿಮ್ಮದೆ. ಬ್ಯಾಗು ಪುಸ್ತಕ ತರುವುದು ಬೇಡ. ಪಾಠಗಳ ಕಾಟ ಇಲ್ಲ. ಬಣ್ಣದ ಉಡುಗೆ ನಿಮ್ಮ ಇಷ್ಟದ್ದು. ರುಚಿಯಾದ ಸಿಹಿ ಊಟ, ಚೆಂದದ ಗ್ರೂಫ್ ಪೋಟಾ, ಫಂಕ್ಷನ್ ಇದೆ ನೀವು ಮಾತಾಡಬಹುದು..” ಎಂದು ಹೆಡ್ ಮಾಸ್ತಾರು ಒಂದೊಂದು ಮಾತು ಉದುರಿಸುತ್ತಿದ್ದರೆ ಮಕ್ಕಳ ಕಣ್ಣಲ್ಲಿ ದೀಪ ಉರಿಯುತ್ತದೆ. ನಮಗೂ ಈ ಶಾಲೆಯಲ್ಲಿ ಕೊನೆ ದಿನ ಬಂತಾ ಎಂಬ ಸಣ್ಣ ದಿಗಿಲು ಎದೆಯಲ್ಲಿ ಹೊತ್ತಿಕೊಳ್ಳುತ್ತದೆ.

ಮರುದಿನ ಶಾಲೆ ಹೂ ಮುಡಿಯುತ್ತದೆ. ಅಂಗಳದ ತುಂಬಾ ನಕ್ಷತ್ರ. ಕಂಬಗಳು ಮಾವಿನ ತೋಪು. ಅಡುಗೆ ಮನೆ ಘಮಘಮ, ಪೋರಿಯ ಕೆನ್ನೆಯ ಮೇಲಿನ ಘಮಿಸುವ ಪೌಡರು ಗಾಳಿಯೊಂದಿಗೆ ಬೆರೆತು ಶಾಲೆಯ ಮೂಲೆಯಲ್ಲೂ ತಬ್ಬುತ್ತದೆ. ಕೋಣೆ ಕೋಣೆಗೂ ಹಬ್ಬದ ಹುರುಪು. ಪೋರರ ಇಸ್ತ್ರಿ ಮಾಡಿದ ಅಂಗಿಯ ಗೆರೆಗಳು ಅಲ್ಲೆಲ್ಲಾ ಒಂದು ನವಿರು ಗತ್ತು ಕರುಣಿಸುತ್ತವೆ. ಮಕ್ಕಳು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಸುಮ್ಮನೆ ಓಡಾಡಿ ಸಂಭ್ರಮ ಹೆಚ್ಚಿಸುತ್ತಾರೆ. ಸದಾ‌ ಕೂರುತ್ತಿದ್ದ ತನ್ನ ಬೆಂಚಿನ ಜಾಗವನ್ನು ಸುಮ್ಮನೆ ನೇವರಿಸುತ್ತಾರೆ. ಕಾರಿಡಾರಿನಲ್ಲಿ ಇನ್ನೂ ಕೆಲವು ದಿನಗಳಲ್ಲಿ ಆ ಜಾಗಕ್ಕೆ ಮಾಜಿಯಾಗುವ ತಮ್ಮ ಹೆಜ್ಜೆಗಳನ್ನು ಪೋಲು ಮಾಡದೆ ಇಡುತ್ತಾರೆ.

ಸೆಲ್ಪಿಗಳ ಭರಾಟೆ, ಇಷ್ಟದ ಮೇಷ್ಟ್ರುಗಳ ಬಳಿ ಒಂದೊಳ್ಳೆ ಸಾಲಿನೊಂದಿಗೆ ಸಹಿ, ‘ನೆನಪಿರಲಿ ಸರ್..’ ಅನ್ನುವ ಎದೆಯಾಳದ ಮೆಲುದನಿ, ಮರೆಯಲು ಸಾಧ್ಯವೇ ಆಗದ ಕಿರುಕಾಣಿಕೆ, ಒರೆಸಿದರೂ ಜಾರುವ ಕಣ್ಣೀರು, ಕಾರಣವಿಲ್ಲದೆ ಮೂಡುವ ನಗು, ಖುಷಿಯೊ-ಬೇಸರವೊ ಎಂಬುದು ಕೂಡ ತಿಳಿಯದ ಮುಗ್ಧ ಸಡಗರ ಇವೆಲ್ಲಾ ಊರಿನ ತೇರಿಗೆ ನೆರೆಯುವ ನೂರೆಂಟು ಸಂಭ್ರಮದಂತೆ ಒಂದರ ಹಿಂದೆ ಒಂದು ಸಾಲುಗಟ್ಟುತ್ತವೆ.

ನಡುಬಿಸಿಲು ಪಕ್ಕಕ್ಕೆ ಸರಿಯುತ್ತಿದ್ದಂತೆ ತಣ್ಣನೆಯ ರೂಮಿನಲ್ಲಿ ಒಂದು ಪುಟಾಣಿ ಸಭೆ ಹಿತವಾಗಿ ಅರಳುತ್ತದೆ. ಉಂಡ ಸಿಹಿ ಊಟ ಗುಳುಗುಳು ಅನ್ನುತ್ತಾ ಕಚಗುಳಿ‌ ನೀಡುತ್ತದೆ. ಬಣ್ಣ ಬಣ್ಣದ ಬಟ್ಟೆಗಳಿಂದ ಜನಿಸಿದ ಒಂದು ಕಿನ್ನರ ಲೋಕ ಮೈಮುರಿಯುತ್ತದೆ. ಹಾಡು, ನೃತ್ಯಗಳು ಸೊಗಸುಗೈಯುತ್ತವೆ. ಪುಟ್ಟ ಬಾಯಿ ಪೋರರಿಂದ ಹಿಡಿದು ಪದವಿಯ ಯುವತಿಯರು ಅವರವರ ಅನುಭವಗಳನ್ನು ಅವರವರು ಉಂಡಂತೆ ಸವಿ ಬಡಿಸುತ್ತಾರೆ. ಸ್ಟ್ರಿಕ್ಟ್‌ ಪ್ರಿನ್ಸಿಪಾಲ್, ಕ್ಲೋಸ್ಲಿ ಕನ್ನಡ ಮೇಷ್ಟ್ರು, ಸದಾ ಬೆತ್ತ ಹಿಡಿಯುವ ಗಣಿತ ಮಿಸ್, ನಗು-ನಗುತ್ತಲೇ ಪಾಠ ಮುಗಿಸುವ ಸಮಾಜ ಸರ್, ಟೂರಲ್ಲಿ ಹಕ್ಕಿಯಾಗಿದ್ದು, ಟೆಸ್ಟ್‌ನಲ್ಲಿ ಡುಮ್ಕಿ ಹೊಡೆದದ್ದು, ಕ್ಯಾಂಪಲ್ಲಿ ಕದ್ದು ಮಲಗಿದ್ದು, ಅಪ್ಪ ಬಂದು ‘ನಾಲ್ಕು ಬಾರ್ಸಿ ಇವನಿಗೆ..’ ಅಂದಿದ್ದು.. ಓಹ್ ಎಷ್ಟೊಂದು ಸತ್ಯಗಳು‌ ಸುಂದರ ಸುರಳಿಯಾಗಿ ಬಿಚ್ಚಿಕೊಳ್ಳುತ್ತವೆ. ಎಲ್ಲಾ ಮೇಷ್ಟ್ರುಗಳು ಒಬ್ಬೊಬ್ಬರಾಗಿ ಎದ್ದು ನಿಂತು ನಾಳೆ ಬದುಕು ಹೀಗೆ, ನೀವು ಹೀಗಿರಬೇಕು ಅನ್ನುವ ಒಂದೊಂದು ನೀತಿ ಹೇಳುತ್ತಿದ್ದರೆ ಕೊನೆಯ ಬೆಂಚಿನ ತರ್ಲೆಯೊಬ್ಬ ಸರ್ ಇಲ್ಲೂ ಕೊಯ್ಯಬೇಡಿ ಪ್ಲೀಸ್ ಸರ್ ಅಂದಾಗ ಒಂದು ನಗು ಝಗ್ಗನೇ ಹೊತ್ತುತ್ತದೆ.

ಅಡುಗೆ ಮನೆ ಘಮಘಮ, ಪೋರಿಯ ಕೆನ್ನೆಯ ಮೇಲಿನ ಘಮಿಸುವ ಪೌಡರು ಗಾಳಿಯೊಂದಿಗೆ ಬೆರೆತು ಶಾಲೆಯ ಮೂಲೆಯಲ್ಲೂ ತಬ್ಬುತ್ತದೆ. ಕೋಣೆ ಕೋಣೆಗೂ ಹಬ್ಬದ ಹುರುಪು. ಪೋರರ ಇಸ್ತ್ರಿ ಮಾಡಿದ ಅಂಗಿಯ ಗೆರೆಗಳು ಅಲ್ಲೆಲ್ಲಾ ಒಂದು ನವಿರು ಗತ್ತು ಕರುಣಿಸುತ್ತವೆ. ಮಕ್ಕಳು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಸುಮ್ಮನೆ ಓಡಾಡಿ ಸಂಭ್ರಮ ಹೆಚ್ಚಿಸುತ್ತಾರೆ. ಸದಾ‌ ಕೂರುತ್ತಿದ್ದ ತನ್ನ ಬೆಂಚಿನ ಜಾಗವನ್ನು ಸುಮ್ಮನೆ ನೇವರಿಸುತ್ತಾರೆ.

ಅಲ್ಲಲ್ಲಿ ಭಾವುಕ ಕ್ಷಣ, ನಗೆ ಚಟಾಕಿ, ಹಿಡಿ ಸಿಟ್ಟು, ಚಿಟಿಕೆ ಮುನಿಸು, ಹೋಗಲೇಬೇಕಾದ ಬೇಸರ, ಕಲಿತ ಧನ್ಯತೆ, ಕಲಿಸಿದ ಸಾರ್ಥಕತೆ, ಕ್ಲಾಸಲ್ಲಿ ಕೂಡಾಡಿದ ತರಲೆಗಳು ಹೀಗೆ ಎಲ್ಲವನ್ನೂ ಕಂಡು ದೇವರೂ ದೂರ‌ ನಿಂತು‌ ಮೂಕನಾಗುತ್ತಾನೆ. ನಡೀರಿ ಗ್ರೂಪ್ ಫೋಟೊಕ್ಕೆ ಅಂದಾಗ ಮೇಷ್ಟ್ರು ಮತ್ತು ಮಕ್ಕಳ ಮನಸ್ಸಿನಲ್ಲಿ‌ ಒಂದೇ ಬಾರಿಗೆ ಕಡಲುಕ್ಕುತ್ತದೆ. ಪ್ರತಿ ಬ್ಯಾಚನ್ನು ಮೊದಲ ಬ್ಯಾಚ್ ಅನ್ನುವಂತೆ ಕಳುಹಿಸುವ ಮೇಷ್ಟ್ರಗಳ ತಾಯ್ತನ ಕಡಿಮೆಯೇ ಆಗುವುದಿಲ್ಲ ಎಂಬುದು ಎಂತಹ ಸೋಜಿಗ!

ಗ್ರೂಪ್ ಫೋಟೋ…

ಅಂದಿನ ದಿನವೇ ಹಾಗೆ; ಅಳು ನಗು ಬೆರೆತ ಹಾಗೆ! ಇನ್ನಿಲ್ಲಿ ಇರಲಾರೆನೆಂಬ ನೋವು, ಮುಂದಿನ ದಿನಗಳಲ್ಲಿ ಕಾಲೇಜು ಅಂಗಳದಲ್ಲಿ ನಡೆದಾಡುವ ಪುಳಕ. ಈ ದಿನಗಳು ಹಸುರಾಗಿರಲಿ ಎಂಬ ಚಡಪಡಿಕೆ. ಗೋಡೆಯ ಮೊಳೆಗೆ ಜೋತು ಬಿದ್ದೊ, ಶೋಕೆಸಿನೊಳಗೆ ಕೂತೊ ದಿನದಲ್ಲಿ ಒಮ್ಮೆಯಾದರೂ ಮಕ್ಕಳ ನೆನಪಿನ ಸುಳಿಗೆ ಒಂದು ಕಲ್ಲು ಎಸೆದು ಚಂದದ ಅಲೆಗಳನ್ನು ಎಬ್ಬಿಸುತ್ತಲೇ ಉಳಿಯುವ ಗ್ರೂಪ್ ಫೋಟೊ ಅರ್ಧ ಬದುಕಿನ ಬಂಧು.

ನಾಳೆ ದೊಡ್ಡವರಾದ ಮೇಲೆ ‘ಇದರಲ್ಲಿ ನಾನು ಎಲ್ಲಿದೀನಿ ಹೇಳು?’ ಅಂತ ಪಕ್ಕದಲ್ಲಿ ಮಗುವನ್ನು ಕೂರಿಸಿಕೊಂಡು ಅವರು ಕೇಳುತ್ತಾ ಕೂತಾಗ ಅವರ ಮಗು ಅವರನ್ನು ಗುರುತಿಸುವ ಬದಲು ಅವರ ಗೆಳತಿ ಕಾವ್ಯಳನ್ನೊ, ಆಶಾಳನ್ನೊ ಅಥವಾ ಮೂಲೆ ಮನೆಯ ಸೀನನ್ನನೊ ಗುರುತಿಸಿದಾಗ ನಕ್ಕು ‘ನೋಡು… ನೋಡು ನಾನಿಲ್ಲಿ…’ ಅಂತ ಹೇಳುತ್ತಾ ನೆನಪಿಗೆ ಜಾರುತ್ತಾರೆ. ಬರೀ ಒಂದೇ ಒಂದು ಕ್ಷಣಕ್ಕೆ ಇಡೀ ಓದಿನ ದಿನಗಳಿಗೆ ಕರೆದೊಯ್ಯುವ ಮಂತ್ರದಂಡ ಅದು. ಎರಡು ಜಡೆ ಮತ್ತು ಯೂನಿಫಾರಂನಲ್ಲಿ ಅವರ ಫೋಟೊ, ಪೊಯೆಮ್ ಕಲಿಯದೆ ಹೋಗಿದಕ್ಕೆ ಹೊಡೆಯುತ್ತಿದ್ದ ಇಂಗ್ಲಿಷ್ ಮೇಷ್ಟ್ರಿರಿರುತ್ತಾರೆ. ತುಂಬಾ ಇಷ್ಟವಾಗುತ್ತಿದ್ದ ಕನ್ನಡ ಲೆಕ್ಚರ್, ಗದರುತ್ತಿದ್ದ ಪ್ರಿನ್ಸಿಪಾಲ್, ಪದೇ ಪದೇ ನೋಟ್ಸ್ ಕೇಳೊ ನೆಪದಲ್ಲಿ ಲವ್ ಲೆಟರ್ ಕೊಟ್ಟ ಆ ಹುಡುಗ, ಇಷ್ಟದ ಹುಡುಗಿ ಕಾವ್ಯ ಎಲ್ಲರೂ ಇರುತ್ತಾರೆ. ಜೀವನವೀಡಿ ಜತನ ಮಾಡಬಹುದಾದ ಒಂದು ನೆನಪಿನ‌ ಖಜಾನೆಯಂತ ಒಂದು ತುಣುಕು ಫೋಟೊಕ್ಕೆ ಆ ಸಂಜೆ ಸಾಕ್ಷಿಯಾಗುತ್ತದೆ.

ಇಳಿ ಸಂಜೆಗೆ ಸೂರ್ಯ ಬಾಡುತ್ತಾನೆ. ಮಕ್ಕಳ‌ ಮನಸ್ಸು ಮುದುಡುತ್ತದೆ. ಮೇಷ್ಟ್ರು ಗಂಟಲು‌ ಬಿಗಿಯುತ್ತದೆ. ಭಾರದ ಹೆಜ್ಜೆ ಹೊತ್ತು‌ ಮಕ್ಕಳು ಮನೆಕಡೆ ಹೆಜ್ಜೆ ಹಾಕುತ್ತಾರೆ. ಮೇಷ್ಟ್ರು ಮೆಟ್ಟಿಲುಗಳ ಮೇಲೆ ನಿಂತು ಅವರನ್ನೇ ನೋಡುತ್ತಾರೆ. ಹಿಂದಿರುಗಿ ನೋಡಿದ ಮಕ್ಕಳ ಕಣ್ಣಲ್ಲಿ ಶಾಲೆ ಮತ್ತು ಮಾಸ್ತರಗಳು ಮಸುಕು ಮಸುಕಾಗಿ‌ ಕಾಣುತ್ತಾರೆ. ಅಲ್ಲೆಲ್ಲೊ‌ ದೂರದಲ್ಲಿ‌ ನಿಂತ ಪುಟ್ಟ ದೇವರು ಕಣ್ಣೊರಸಿಕೊಳ್ಳುತ್ತಾನೆ. ಕಣ್ಣು ತುಂಬಿದ ಹಾದಿ ಮನೆ ಕಡೆ ಸಾಗುತ್ತದೆ.