ಸಿನಿಮಾದ ಆರಂಭ ಮುಂಜಾನೆಯಿಂದ ಕ್ಯಾಮೆರಾ ಮೇಲಿಂದ ಕೆಳಗೆ ಪ್ಯಾನ್ ಆದರೆ ಸಿನಿಮಾದ ಅಂತ್ಯದಲ್ಲಿ ಮುಸ್ಸಂಜೆ ಮುಗಿದು ಕತ್ತಲು ಹರಿದು ದೀಪವೊಂದು ಆರಿ ಕತ್ತಲಾಗುತ್ತದೆ. ಕ್ಯಾಮೆರಾ ನಿಧಾನಕ್ಕೆ ಮೇಲಕ್ಕೆ ಪ್ಯಾನ್ ಆಗಿ ನಿಲ್ಲುತ್ತದೆ. ಕತೆ ಎಲ್ಲಿ ಶುರುವಾಯ್ತೊ ಅಲ್ಲೇ ಕೊನೆಯಾಗಿದೆ. ಫೋಟೋ ತೆಗೆಸಲು ಹೊರಟ ದುರ್ಗ್ಯಾ ನಮ್ಮೆಲ್ಲರಲ್ಲೂ ಕೂತುಬಿಡುತ್ತಾನೆ. ಇದು ನಿರ್ದೇಶಕರ ಮೊದಲ ಸಿನಿಮಾ ಅಂದಾಗ ಎಲ್ಲರಿಂದ ಓಹ್! ಎಂಬ ಉದ್ಘಾರ ಬರಲಿಕ್ಕೆ ಅವರು ಮೊದಲ ಸಿನಿಮಾದಲ್ಲೇ ಸಿನಿಮಾವನ್ನ ನಿರ್ವಹಿಸಿರುವ ರೀತಿಯೇ ಕಾರಣ.
ಉತ್ಸವ್‌ ಗೋನವಾರ ನಿರ್ದೇಶನದ “ಫೋಟೋ” ಸಿನಿಮಾದ ಕುರಿತು ಜಯರಾಮಾಚಾರಿ ಬರಹ

ಕಡೆಯ ಹತ್ತು ನಿಮಿಷದಲ್ಲಾಗಲೇ ನನ್ನ ಕಣ್ಣು ತುಂಬಿ ಹನಿಗಳು ಕೆನ್ನೆ ಜಾರಿ ಹೋಗಿದ್ದವು. ಒಂದು ಕಡೆ ದೀಪ ಹಚ್ಚಿದರೆ ಮತ್ತೊಂದು ಕಡೆ ದೀಪ ಆರಿ ಹೋಗಿತ್ತು. ಎಂಡ್ ಕ್ರೆಡಿಟ್ ರೋಲ್ ಆಗ್ಬೇಕಾದರೆ ಇದ್ದ ಮೌನವೇ ಎಲ್ಲವನ್ನ ಹೇಳುತ್ತಿತ್ತು. ಆ ಕತ್ತಲಲ್ಲಿ ಅದೆಷ್ಟು ಜೀವಗಳು ಬಿಕ್ಕಿದವೋ ಗೊತ್ತಿಲ್ಲ.

ನನಗಂತೂ ಸಿನಿಮಾ ಮುಗಿದ ಮೇಲೆ ಒಂದು ಭಯಂಕರ ಮೌನದ ಸಹವಾಸ ಬೇಕು ಅನಿಸುತ್ತಿತ್ತು. ಥಿಯೇಟರ್ ಲಿ ನೋಡಿದ್ರೆ ಬಹುಶಃ ಮನೆಗೆ ಬಂದ ಮೇಲೂ ಭಾರವಾದ ನೋವೊಂದು ಹೊತ್ತುಕೊಂಡು ಸುಮ್ಮನೆ ಕೂತುಬಿಡುತ್ತಿದ್ದೆನೇನೋ.

(ಉತ್ಸವ್‌ ಗೋನವಾರ)

ಸಿನಿಮಾ ಮುಗಿದ ಮೇಲೆ ನಡೆದ ಚರ್ಚೆ ಟೋಟಲ್ಲಿ ಬುಲ್ ಶಿಟ್! ಕಡೆಯಲ್ಲಿ ಮಂಸೋರೆ ಹೇಳಿದ ಅಭಿಪ್ರಾಯ ನಿಜ “ಇದು ವಿಮರ್ಶೆ ಮಾಡ್ತಾ ಕೂರುವ ಸಿನಿಮಾವಲ್ಲ, ಉತ್ಸವ್ ಯೂ ಆರ್ ಬೆಸ್ಟ್… ಯೂ ಆರ್ ಬೆಸ್ಟ್… ಯೂ ಆರ್ ಬೆಸ್ಟ್”

ಸಿನಿಮಾದ ಆರಂಭ ಮುಂಜಾನೆಯಿಂದ ಕ್ಯಾಮೆರಾ ಮೇಲಿಂದ ಕೆಳಗೆ ಪ್ಯಾನ್ ಆದರೆ ಸಿನಿಮಾದ ಅಂತ್ಯದಲ್ಲಿ ಮುಸ್ಸಂಜೆ ಮುಗಿದು ಕತ್ತಲು ಹರಿದು ದೀಪವೊಂದು ಆರಿ ಕತ್ತಲಾಗುತ್ತದೆ. ಕ್ಯಾಮೆರಾ ನಿಧಾನಕ್ಕೆ ಮೇಲಕ್ಕೆ ಪ್ಯಾನ್ ಆಗಿ ನಿಲ್ಲುತ್ತದೆ. ಕತೆ ಎಲ್ಲಿ ಶುರುವಾಯ್ತೊ ಅಲ್ಲೇ ಕೊನೆಯಾಗಿದೆ. ಫೋಟೋ ತೆಗೆಸಲು ಹೊರಟ ದುರ್ಗ್ಯಾ ನಮ್ಮೆಲ್ಲರಲ್ಲೂ ಕೂತುಬಿಡುತ್ತಾನೆ.

ಇದು ನಿರ್ದೇಶಕರ ಮೊದಲ ಸಿನಿಮಾ ಅಂದಾಗ ಎಲ್ಲರಿಂದ ಓಹ್! ಎಂಬ ಉದ್ಘಾರ ಬರಲಿಕ್ಕೆ ಅವರು ಮೊದಲ ಸಿನಿಮಾದಲ್ಲೇ ಸಿನಿಮಾವನ್ನ ನಿರ್ವಹಿಸಿರುವ ರೀತಿಯೇ ಕಾರಣ. ಉತ್ಸವ್‌ ಕನ್ನಡ ಚಿತ್ರರಂಗಕ್ಕೊಂದು ಹೊಸ ಭರವಸೆ.

ಆದರೆ ಈ ಭರವಸೆ ಮಧ್ಯೆಯೇ ಈ ಸಿನಿಮಾವನ್ನ ಬೇರೆ ರೀತೀಲಿ ಮೆರೆಸಿ ತಮ್ಮ ಅಜೆಂಡಾಗಳಿಗೆ ಆಹಾರವಾಗಿಸಿ ಉತ್ಸವ್‌ ಅವರನ್ನು ಉತ್ಸವಮೂರ್ತಿ ಮಾಡುವ ಅಪಾಯ ಕೂಡ ಇದೆ. ಆ ಅಪಾಯ ಅವರನ್ನು ತಾಕದೇ ಸಿನಿಮಾ ಗೆಲ್ಲಲಿ. ಯಾವ ಕಡೆಯೂ ವಾಲದೇ ಇರುವುದನ್ನು ತೋರಿಸುವ ರೀತಿಯೇ ನನಗೆ ಅನನ್ಯವೆನ್ನಿಸ್ತು.

ಕ್ಯಾಮರ ವರ್ಕ್ ನಿಗದಿತ ಬಡ್ಜೆಟಿನಲ್ಲೇ ಅದೆಷ್ಟು ಪರಿಣಾಮಕಾರಿಯಾಗಿದೆ. ವೈಡ್‌ ಶಾಟುಗಳು, ಬ್ಯಾರೆನ್ ಲ್ಯಾಂಡಿನ ಖಾಲಿತನ, ದುರ್ಗ್ಯಾನ ಕಣ್ಣಲ್ಲಿನ ಹೊಳಪು ನಗುವಿನ ಕ್ಲೋಸ್ ಅಪ್, ಮೂವ್‌ಮೆಂಟುಗಳಲ್ಲೇ ಒಂದು ಟೆನ್ಷನ್ ಕ್ರಿಯೇಟ್ ಮಾಡಿರೋ ರೀತಿ ಅದ್ಭುತ. ಅವರ ಮುಂದಿನ ಸಿನಿಮಾಗಳ ಮೇಲೆ ಸಿನಿಮಾ ರಸಿಕರು ಆರಾಮಾಗಿ ಕಣ್ಣಿಡಬಹುದು.

ಚಿತ್ರದುದ್ದಕ್ಕೂ ಪ್ರತಿ ನಟರ ನಟನೆ ಅದ್ಭುತ! ಅದನ್ನು ಸವಿವರವಾಗಿ, ಪ್ರತ್ಯೇಕವಾಗಿ ವಿವರಿಸಬೇಕಿಲ್ಲ.

ನೆನ್ನೆ ಪರಿಚಿತರಾಗಿ ಇವತ್ತಿಗೆ ಅಪರಿಚಿತರಂತೆ ಬದುಕುವ ಸದಾ ಕೃತಕ ನಗೆ ಹೊತ್ತು ಓಡಾಡುವ ಈ ಕಾಲದಲ್ಲಿ ಮಾನವೀಯತೆ ಸಾರೋದು ಎಲ್ಲ ಕಲೆಗಳ ಬೆನ್ನಿಗೆ ಬಿದ್ದ ಕರ್ತವ್ಯ ಕೂಡ ಹೌದು. ಫೋಟೋ ಸಿನಿಮಾ, ಅದನ್ನು ನೋಡಿದ ನಮ್ಮನ್ನು ಸ್ವಲ್ಪ ಮಟ್ಟಿಗಾದರೂ ಮಾನವೀಯತೆಯ ಒರೆಗೆ ಹಚ್ಚಿದೆ ಎಂಬ ಬಲವಾದ ನಂಬಿಕೆ ನನ್ನದು.

ಕೊರೋನಾ ಲಾಕ್ ಡೌನ್ ಟೈಮಲ್ಲಿ ಉಳ್ಳವರು ಬದುಕಿದ್ದ ರೀತಿಯೇ ಬೇರೆ… ದಿನಕ್ಕೊಂದು ತಿಂಡಿ ಮಾಡಿ ‘ತಿಂಡಿ ಚಾಲೆಂಜ್’… ದಿನಕ್ಕೊಂದು ಸೀರೆ ಉಟ್ಟು ‘ಸೀರೆ ಚಾಲೆಂಜ್’… ಅಂತ ಸಿಕ್ಕ ಅಮೂಲ್ಯ ಸಮಯವನ್ನು ಕೊಲ್ಲುವುದಕ್ಕೆ ನಾನಾರೀತಿ ಚಾಲೆಂಜ್‌ಗಳ ಮೊರೆ ಹೊಕ್ಕು, ಜಗತ್ತಿನಲ್ಲಿ ಏನೂ ದುರ್ಘಟನೆಗಳು ಸಂಭವಿಸುತ್ತಿಲ್ಲ.. ಎಲ್ಲವೂ ಸೌಖ್ಯ ಎನ್ನುವಂತೆ ಇದ್ದುಬಿಟ್ಟಿದ್ದರು. ಆದರೆ ಅದೇ ಸಮಯದಲ್ಲಿ ಏನೂ ಇಲ್ಲದವರು, ನಿರ್ಗತಿಕರು, ಹಳ್ಳಿಯಿಂದ ಕೆಲಸ ಹುಡುಕಿಕೊಂಡು ಮಹಾನಗರಗಳಿಗೆ ಬಂದ ವಲಸಿಗರು, ದಿನಗೂಲಿ ನೌಕರಿ ಮಾಡುವವರು ಆ ದಿನಗಳಲ್ಲಿ ತಮ್ಮ ಬದುಕನ್ನು ದೂಡಿದ ರೀತಿಯೇ ಬೇರೆ… ಖುದ್ದು ಕರ್ನಾಟಕ ಸರ್ಕಾರದ ಕೊರೋನಾ ನಿರ್ವಹಣಾ ಕೇಂದ್ರದಲ್ಲಿ ಕೆಲಸ ಮಾಡಿದ ನಾನು ಇವೆರಡನ್ನೂ ಕಂಡಿದ್ದೇನೆ. ನಮ್ಮ ಸಲಹಾ ಕೇಂದ್ರಕ್ಕೆ ಆಹಾರಕ್ಕೆ… ಸೂರಿಗೆ… ಬರುತ್ತಿದ್ದ ಕರೆಗಳ ದೈನ್ಯ ಧ್ವನಿಗಳು ನನಗಿನ್ನೂ ಕಿವಿಯಲ್ಲಿ ಹಾಗೇ ಉಳಿದುಕೊಂಡಿದೆ. ಇಂಥ ಘಟನೆಗಳೇ ಫೋಟೋ ಚಿತ್ರದ ಹೂರಣ…

ಈ ಸಿನಿಮಾವನ್ನು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೋಡಲು ಮಿಸ್ ಮಾಡಿಕೊಂಡವರು ಈಗ ಮತ್ತೆ ದೊಡ್ಡ ತೆರೆಯಲ್ಲಿ ನೋಡುವ ಅವಕಾಶ ಇದೆ. ಇದೇ ತಿಂಗಳು ಫೋಟೋ ಚಿತ್ರವನ್ನು ಮತ್ತಷ್ಟು ಜನಕ್ಕೆ ತಲುಪಿಸುವ ಸಲುವಾಗಿ ಒಂದಷ್ಟು ಸದಭಿರುಚಿಯ ಪ್ರೇಕ್ಷಕರು ಸೇರಿ ಪ್ರದರ್ಶನ ಏರ್ಪಡಿಸಿದ್ದಾರೆ. ತಪ್ಪದೆ ಹೋಗಿ ನೋಡಿ.

ಪ್ರದರ್ಶನದ ವಿವರಗಳು:
(ದಿನಾಂಕ – 23/04/2023, ಸಮಯ- ಬೆಳಗ್ಗೆ 10.30, ಸ್ಥಳ- ರಾಜಕುಮಾರ ಭವನ, ಚಾಮರಾಜಪೇಟೆ, ಬೆಂಗಳೂರು- 04, ಇಲ್ಲಿ ಟಿಕೇಟ್‌ ಕಾಯ್ದಿರಿಸಬಹುದು)