ಒಂದು ದಿನ ಸಂಜೆ ಬುಡುಗೊಚ್ಚ ಕೊಪ್ಪಲಿನ ಮೆದೆಯಲ್ಲಿ ಹುಲ್ಲು ಹಿರಿಯುತ್ತಿದ್ದನಂತೆ. ಆಗ ಆಕಾಶದ ಕಡೆಯಿಂದ ಬೆಳ್ಳನೆಯ ಬೆಳಕೊಂದು ಇಳುಕಂಡು ಬಂದು ಅವನೆದುರಿನ ಬೇಲಿಯನ್ನು ಹೊಕ್ಕಿತ್ತಂತೆ. ಕಣ್ಮುಚ್ಚಿ ಬಿಡುವುದರೊಳಗೆ ಆ ಬೆಳಕು ಬೇಲಿಯನ್ನೆಲ್ಲಾ ಆವರಿಸಿಕೊಂಡು ಆ ಇಡೀ ಬೇಲಿಯನ್ನು ಬೆಳಗಿಸತೊಡಗಿತ್ತಂತೆ. ಗಾಬರಿಗೊಂಡ ಬುಡುಗೊಚ್ಚ ಹುಲ್ಲು ಹಿರಿಯುವುದನ್ನು ಬಿಟ್ಟು ಬೇಲಿಯನ್ನೇ ದಿಟ್ಟಿಸತೊಡಗಿದ್ದನಂತೆ. ಆಗ ಆ ಬೆಳಕು ಕ್ರಮೇಣ ಮಂದವಾಗುತ್ತಾ ಹೋಗಿ ಕಡೆಗೆ ಪೂರಾ ಮಾಯವಾಗಿ ಮರು ಚಣವೇ ಆ ಬೇಲಿಯಲ್ಲಿ ಪುಟಾಣಿ ಹಸಿರು ಎಲೆಗಳು ಮೂಡತೊಡಗಿದ್ದವಂತೆ.
ಎಸ್.‌ ಗಂಗಾಧರಯ್ಯ ಬರೆದ ‘ಮಣ್ಣಿನ ಮುಚ್ಚಳ’ ಹೊಸ ಕಥಾ ಸಂಕಲನಕ್ಕೆ ಬರೆದುಕೊಂಡಿರುವ ಮಾತುಗಳು

 

ನಾನು ಚಿಕ್ಕವನಿದ್ದಾಗ ನಮ್ಮ ಮನೆಯ ಪಕ್ಕ ಕುಂಟಜ್ಜಿ ಅನ್ನುವ ಅಜ್ಜಿ ಇತ್ತು. ಆ ಅಜ್ಜಿಗೆ ಮತ್ತೇನೋ ಹೆಸರಿತ್ತು. ಆದರೆ ಪೋಲಿಯೋ ಕಾರಣಕ್ಕೋ ಏನೋ ಎರಡೂ ಕಾಲುಗಳು ಕುಡುಗೋಲಿನಂತೆ ಬಾಗಿದ್ದ ಕಾರಣಕ್ಕೆ ಆ ಅಜ್ಜಿಗೆ ಕುಂಟಜ್ಜಿ ಅನ್ನುವ ಅಡ್ಡ ಹೆಸರೇ ಖಾಯಮ್ಮಾಗಿಹೋಗಿತ್ತು. ಕುಂಟಜ್ಜಿ ಎದ್ದು ನಡೆಯುವಂತೆಯೇ ಇರಲಿಲ್ಲ. ಮನೆಯ ಪಡಸಾಲೆಯಲ್ಲಿ ಸದಾ ಅಂಗಳಕ್ಕೆ ಮುಖ ಮಾಡಿ ಕೂತಿರುತ್ತಿತ್ತು. ದಣಿವರಿಯದಂತೆ ಕಥೆಗಳನ್ನು ಹೇಳುತ್ತಿದ್ದ ಕಾರಣಕ್ಕೆ ಅಜ್ಜಿಯ ಹತ್ತಿರ ಬೆಳಗು ಬೈಗುಗಳಲ್ಲಿ ಮಕ್ಕಳ ದಂಡೇ ಇರುತ್ತಿತ್ತು. ಅಜ್ಜಿ ಮಕ್ಕಳಿಗೆಲ್ಲಾ ಥರಾವರಿ ಕಥೆಗಳನ್ನು ಹೇಳುತ್ತಿತ್ತು. ಆ ಒಂದೊಂದು ಕಥೆ ತಿಂಗಳುಗಳಾದರೂ ಮುಗಿಯುತ್ತಿರಲೇ ಇಲ್ಲ. ರಾಜಕುಮಾರಿ ರಾಜಕುಮಾರ ಮಂತ್ರವಾದಿ ರಾಜ ರಾಣಿಯರ ಕಾಲ್ಪನಿಕ ಕಥೆಗಳಿಂದ ಹಿಡಿದು ಕಾಟಣ್ಣ ಮೋಟಣ್ಣರವರೆಗಿನ ಹಾಗೂ ದೆವ್ವದ ಕಥೆಗಳನ್ನು ಹೇಳುತ್ತಿತ್ತು. ಯಾವ ಚಣದಲ್ಲೇ ಆಗಲಿ ಕಥೆ ಹೇಳಲು ಕೇಳಿದರೆ ಸಾಕು ಆ ಚಣವೇ ಶುರುವಿಟ್ಟುಕೊಂಡು ಬಿಡುತ್ತಿತ್ತು. ಕಥೆ ಹೇಳುವ ಮುನ್ನ ಅಜ್ಜಿ ನಮ್ಮನ್ನೆಲ್ಲಾ ತನ್ನೆದುರಿಗೆ ಕಾಣುತ್ತಿದ್ದ ಕೊಪ್ಪಲಿನ ಬೇಲಿಯಲ್ಲಿದ್ದ ಅತ್ತಿಯ ಮರವನ್ನು ದಿಟ್ಟಿಸಲು ಹೇಳುತ್ತಿತ್ತು. ಅಜ್ಜಿಯೂ ಆ ಮರವನ್ನೇ ದಿಟ್ಟಿಸುತ್ತಾ ಅಗಾ ನೋಡು ಅಲ್ಲಿ ಅಂತ ಹೇಳಲು ಪ್ರಾರಂಭಿಸುತ್ತಿತ್ತು. ಮಕ್ಕಳಾದ ನಾವೆಲ್ಲಾ ಆ ಮರವನ್ನೇ ದಿಟ್ಟಿಸುತ್ತಿದ್ದೆವು. ಅಜ್ಜಿ ಹೇಳತೊಡಗುತ್ತಿದ್ದ ಪಾತ್ರಗಳೆಲ್ಲಾ ನಮಗಾಗ ಆ ಅತ್ತಿಯ ಮರದಿಂದ ಇಳಿದು ಬರುತ್ತಿರುವಂತೆ ಭಾಸವಾಗುತ್ತಿತ್ತು. ಅಜ್ಜಿಯ ಆ ರಂಗ ಸ್ಥಳದಿಂದ ಹುಟ್ಟಿ ಬರುತ್ತಿದ್ದ ಪಾತ್ರಗಳು ಅವುಗಳು ಹುಟ್ಟಿಸುತ್ತಿದ್ದ ಪುಳಕ ಅವುಗಳ ಮೂಲಕ ಹರವಿಕೊಳ್ಳುತ್ತಿದ್ದ ಕಥಾ ಲೋಕ ಈ ಚಣವೂ ರೋಮಾಂಚನ ಹುಟ್ಟಿಸುತ್ತದೆ.

ಇದೇ ರೀತಿ ನನ್ನನ್ನು ತನ್ನ ಕಥೆಗಳ ಮೂಲಕ ತದಿಗಾಲಲ್ಲಿ ಕೂರಿಸುತ್ತಿದ್ದ ಮತ್ತೊಂದು ಅಜ್ಜಿ ಇತ್ತು. ಆ ಅಜ್ಜಿ ಇದ್ದದ್ದು ನನ್ನ ಹಳ್ಳಿಗೆ ಹತ್ತಾರು ಮೈಲಿ ದೂರದಲ್ಲಿದ್ದ ನನ್ನ ಅಪ್ಪನ ತಂಗಿಯ ಮನೆಯಲ್ಲಿ. ಆ ಮನೆಯಲ್ಲಿ ನನ್ನ ವಾರಿಗೆಯವನೊಬ್ಬ ಹುಡುಗ ಇದ್ದದ್ದರಿಂದ ಬೇಸಿಗೆ ರಜೆ ಬಂತೆಂದರೆ ತಿಂಗಳುಟ್ಟಲೇ ಆ ಊರಿನಲ್ಲಿರುತ್ತಿದ್ದೆ. ಆ ಅಜ್ಜಿ ಆ ಕಂಬಸಾಲಿನ ಮನೆಯ ಜಗಲಿಯಲ್ಲೇ ಮಲಗುತ್ತಿತ್ತು. ನಾವಿಬ್ಬರೂ ಕಥೆಗಳನ್ನು ಕೇಳಿಕೊಂಡು ಅಜ್ಜಿಯ ಜೊತೆ ಅಲ್ಲಿಯೇ ಮಲಗಿಬಿಡುತ್ತಿದ್ದೆವು. ಬೆಳಗಾಗುತ್ತಿದ್ದಂತೆ ಅಜ್ಜಿ ಒಂದು ಹೊರೆ ಹಸಿ ಜೋಳದ ಕಡ್ಡಿಯನ್ನು ಹೋರಿ ಕರುಗಳಿಗೆ ತಿನ್ನಿಸತೊಡಗುತ್ತಿತ್ತು. ಆಗಲೂ ಅಜ್ಜಿಯೊಂದಿಗೇ ಏಳುತ್ತಿದ್ದ ನಾವು ರಾತ್ರಿ ಅರ್ಧಂಬರ್ದ ಹೇಳಿದ್ದ ಕಥೆಯನ್ನು ಮುಗಿಸಲು ದುಂಬಾಲು ಬೀಳುತ್ತಿದ್ದೆವು. ಆ ಹೋರಿ ಕರುಗಳು ಒಂದೊಂದೇ ಜೋಳದ ಕಡ್ಡಿಯನ್ನು ನೊರನೊರನೆ ಜಗಿಯುತ್ತಿದ್ದರೆ ಅಜ್ಜಿ ಒಂದಾದ ಮೇಲೆ ಒಂದರಂತೆ ಇಡೀ ಹೊರೆ ಮುಗಿಯುವವರೆಗೂ ಅವುಗಳ ದವಡೆಗಳಿಗೆ ಗಿಡುಗುತ್ತಿತ್ತು. ಹಾಗೆಯೇ ನಮಗೆ ಕಥೆಯನ್ನೂ ಹೇಳುತ್ತಿತ್ತು. ಆ ಕಥೆಗಳು ಹಾಗೂ ಆ ಸಪ್ಪೆ ಕಡ್ಡಿಯ ಘಮಲು ಈಗಲೂ ನೆನಪಾಗಿ ಮೈ ಜುಮ್ಮೆನಿಸುತ್ತವೆ.

ಕಥೆ ಹೇಳುವ ಮುನ್ನ ಅಜ್ಜಿ ನಮ್ಮನ್ನೆಲ್ಲಾ ತನ್ನೆದುರಿಗೆ ಕಾಣುತ್ತಿದ್ದ ಕೊಪ್ಪಲಿನ ಬೇಲಿಯಲ್ಲಿದ್ದ ಅತ್ತಿಯ ಮರವನ್ನು ದಿಟ್ಟಿಸಲು ಹೇಳುತ್ತಿತ್ತು. ಅಜ್ಜಿಯೂ ಆ ಮರವನ್ನೇ ದಿಟ್ಟಿಸುತ್ತಾ ಅಗಾ ನೋಡು ಅಲ್ಲಿ ಅಂತ ಹೇಳಲು ಪ್ರಾರಂಭಿಸುತ್ತಿತ್ತು. ಮಕ್ಕಳಾದ ನಾವೆಲ್ಲಾ ಆ ಮರವನ್ನೇ ದಿಟ್ಟಿಸುತ್ತಿದ್ದೆವು. ಅಜ್ಜಿ ಹೇಳತೊಡಗುತ್ತಿದ್ದ ಪಾತ್ರಗಳೆಲ್ಲಾ ನಮಗಾಗ ಆ ಅತ್ತಿಯ ಮರದಿಂದ ಇಳಿದು ಬರುತ್ತಿರುವಂತೆ ಭಾಸವಾಗುತ್ತಿತ್ತು.

ಇವರಿಬ್ಬರಿಗಿಂತಲೂ ಭಿನ್ನವಾದ ಕಥಾ ಮಾಂತ್ರಿಕನೊಬ್ಬ ನನ್ನ ಹಳ್ಳಿಯಲ್ಲಿದ್ದ. ಅವನ ಹೆಸರು ಬುಡುಗೊಚ್ಚ ಅಂತ. ಅವನ ನಿಜವಾದ ಹೆಸರು ಈಗಲೂ ಗೊತ್ತಿಲ್ಲ. ಕುಳ್ಳಗೆ ದಡಿ ಕಣ್ಣುಗಳ ಹಣೆಗೆ ಸದಾ ಅಗಲ ಕುಂಕುಮವಿಟ್ಟುಕೊಳ್ಳುತ್ತಿದ್ದ ನೂರಾರು ತೇಪೆ ಹಾಕಿದ್ದ ಕೋಟು ಹಾಕಿಕೊಳ್ಳುತ್ತಿದ್ದ ಬುಡುಗೊಚ್ಚ ನಮಗೆ ನಿಜವಾಗಿಯೂ ಅವನು ಹೇಳುತ್ತಿದ್ದ ಕಥೆಗಳ ಮಂತ್ರವಾದಿಯ ಥರವೇ ಕಂಡು ಭಯ ಹುಟ್ಟಿಸುತ್ತಿದ್ದ. ಆ ಕಥೆಗಳನ್ನು ಈಗ ನೆನಪಿಸಿಕೊಂಡರೆ ಮಾರ್ಕ್ವೆಜ್‌ನ ಮಾಂತ್ರಿಕ ವಾಸ್ತವತೆಯ ಕಥೆಗಳು ನೆನಪಿಗೆ ಬರುತ್ತವೆ. ಅವನ ಕಥಾ ಲೋಕದ ವಿಶೇಷ ಅಂದರೆ ಅಲ್ಲಿ ರಾಜ ರಾಣಿ ಮಂತ್ರವಾದಿಗಳಿಗಿಂತಲೂ ಪ್ರಾಣಿ ಪಕ್ಷಿಗಳು ಕಾಡು ಮೇಡುಗಳು ಹೂ ಹಣ್ಣುಗಳು ಪಾತ್ರಗಳಾಗಿರುತ್ತಿದ್ದವು. ಅವನನ್ನ ಇದೇನು? ಇದ್ಯಾಕೆ ಹಿಂಗೆ? ಅಂತ ಕೇಳಿದರೆ ಸಾಕು ಅದಕ್ಕೊಂದು ಕಥೆಯನ್ನೇ ಹೇಳಿಬಿಡುತ್ತಿದ್ದ. ಒಮ್ಮೆ ಅಕಸ್ಮಾತ್ತಾಗಿ ಅವನ ಮನೆಯಲ್ಲಿ ಕುಂಭವೊಂದರ ತುಂಬಾ ಇದ ಬೆಳ್ಳಿ ರೂಪಾಯಿಗಳ ಬಗ್ಗೆ ಕೇಳಿದ್ದೆ. ತಗೋ ಅದಕ್ಕೊಂದು ಕಥೆ ಕಟ್ಟಿದ್ದ ಬುಡುಗೊಚ್ಚ.

ಒಂದು ದಿನ ಸಂಜೆ ಬುಡುಗೊಚ್ಚ ಕೊಪ್ಪಲಿನ ಮೆದೆಯಲ್ಲಿ ಹುಲ್ಲು ಹಿರಿಯುತ್ತಿದ್ದನಂತೆ. ಆಗ ಆಕಾಶದ ಕಡೆಯಿಂದ ಬೆಳ್ಳನೆಯ ಬೆಳಕೊಂದು ಇಳುಕಂಡು ಬಂದು ಅವನೆದುರಿನ ಬೇಲಿಯನ್ನು ಹೊಕ್ಕಿತ್ತಂತೆ. ಕಣ್ಮುಚ್ಚಿ ಬಿಡುವುದರೊಳಗೆ ಆ ಬೆಳಕು ಬೇಲಿಯನ್ನೆಲ್ಲಾ ಆವರಿಸಿಕೊಂಡು ಆ ಇಡೀ ಬೇಲಿಯನ್ನು ಬೆಳಗಿಸತೊಡಗಿತ್ತಂತೆ. ಗಾಬರಿಗೊಂಡ ಬುಡುಗೊಚ್ಚ ಹುಲ್ಲು ಹಿರಿಯುವುದನ್ನು ಬಿಟ್ಟು ಬೇಲಿಯನ್ನೇ ದಿಟ್ಟಿಸತೊಡಗಿದ್ದನಂತೆ. ಆಗ ಆ ಬೆಳಕು ಕ್ರಮೇಣ ಮಂದವಾಗುತ್ತಾ ಹೋಗಿ ಕಡೆಗೆ ಪೂರಾ ಮಾಯವಾಗಿ ಮರು ಚಣವೇ ಆ ಬೇಲಿಯಲ್ಲಿ ಪುಟಾಣಿ ಹಸಿರು ಎಲೆಗಳು ಮೂಡತೊಡಗಿದ್ದವಂತೆ. ಮತ್ತೂ ಮುಂದುವರೆದು ಆ ಹಸಿರು ಎಲೆಗಳ ನಡುವೆ ಮಲ್ಲಿಗೆಯ ಮೊಗ್ಗುಗಳೂ ಮೂಡುತ್ತಾ ಅಗಾಇಗಾ ಅನ್ನುವುದರೊಳಗೆ ಆ ಇಡೀ ಬೇಲಿಯೇ ಮೊಗ್ಗಿನ ಹಾರದಂತಾಗಿತ್ತಂತೆ. ಮೆಲ್ಲಗೆ ಆ ಮೊಗ್ಗುಗಳೆಲ್ಲಾ ಪೂರಾ ಅರಳಿಬಿಟ್ಟಿದ್ದವಂತೆ. ಅದನ್ನೆಲ್ಲಾ ನೋಡುತ್ತಾ ಬೆದರಿ ನಿಂತಿದ್ದ ಬುಡುಗೊಚ್ಚನನ್ನು ಕಂಡು, `ಅಯ್ಯೋ ಯಾಕಿಂಗೆ ಹೆದರುತ್ತಿದ್ದೀಯಾ? ಇನ್ನು ಮುಂದೆ ನಾವು ಹಿಂಗೆ ಚಂದ್ರನ ಬೆಳಕಿನಲ್ಲಿ ಅರಳುತ್ತೇವೆ’ಅಂದಿದ್ದವಂತೆ ಆ ಹೂಗಳು. ಹೀಗೆ ಹೂಗಳು ಮಾತನಾಡುವುದನ್ನು ಎಂದೂ ಕಾಣದಿದ್ದ ಕೇಳದಿದ್ದ ಬುಡುಗೊಚ್ಚ ಇದು ದೆವ್ವಗಳ ಆಟವೇ ಇರಬೇಕು ಅಂತ ಮತ್ತೂ ಹೆದರಿ ಗಡಗಡನೆ ನಡುಗತೊಡಗಿದ್ದನಂತೆ. ಅದನ್ನು ಕಂಡ ಹೂಗಳು `ನಾವು ದೆವ್ವ ರಾಕ್ಷಸ ಏನೂ ಅಲ್ಲ’ ಅನ್ನಲು ಬುಡುಗೊಚ್ಚ `ಹಾಗಾದಲ್ಲಿ ನೀವ್ಯಾರು?’ ಅಂದಿದ್ದನಂತೆ. ಆಗ ಆ ಹೂಗಳು, `ಒಂದು ದಿನ ಪಾರ್ವತಿ ಪರಮೇಶ್ವರರು ಆಕಾಶದಲ್ಲಿ ತಿರುಗಾಡುತ್ತಿರುವಾಗ ಪಾರ್ವತಿ ಮಾತೆಯ ಮುಡಿಯಿಂದ ಒಂದು ಹೂ ಕೆಳಕ್ಕೆ ಬೀಳುತ್ತದೆ. ಅದನ್ನು ಕಂಡ ಆ ದೇವಿ ಆ ಒಂದು ಹೂ ಸಾವಿರವಾಗಿ ಹೂವಾಗಿ ಸರತಿಯ ಪ್ರಕಾರ ಬಡವರ ಹಿತ್ತಲಿನ ಬೇಲಿಯಲ್ಲಿ ಅರಳುತ್ತಾ ಅವರನ್ನು ಸಂಪನ್ನರಾಗಿ ಮಾಡಬೇಕೆಂದು ಆಶೀರ್ವದಿಸುತ್ತಾಳೆ. ಅಲ್ಲದೆ ಅದೇ ತಾಯಿ ನಮಗೆ ಮಾತುಗಳನ್ನೂ ಕರುಣಿಸುತ್ತಾಳೆ,’ ಅಂದಿದ್ದವಂತೆ. ಅಂದಿನಿಂದ ತಿಂಗಳ ಬೆಳಕಿನ ರಾತ್ರಿಗಳಲ್ಲಿ ಬಡುಗೊಚ್ಚ ಆ ಹೂಗಳ ಜೊತೆ ಮಾತಾಡುತ್ತಿದ್ದನಂತೆ.

ಹಿಂಗಿರುವಾಗ ಒಂದು ದಿನ ಆ ಹೂಗಳಿಗೆ ಬುಡುಗೊಚ್ಚನ ಮೇಲೆ ಅಪಾರ ಪ್ರೀತಿಯುಕ್ಕಿ, ` ಎಲೈ ಮನುಜ, ನಿನಗೇನು ಬೇಕು ಕೇಳು ಈಗಿಂದೀಗಲೇ ಕೊಡುತ್ತೇವೆ,’ ಅಂದವಂತೆ. ಏನು ಕೇಳಬೇಕೆಂದು ಗೊಂದಲಕ್ಕೆ ಬಿದ್ದ ಬುಡುಗೊಚ್ಚನನ್ನು ಕಂಡು, `ನಿನ್ನ ಬೊಗಸೆಗೆ ಆಗುವಷ್ಟು ನಮ್ಮಲ್ಲಿ ಯಾರನ್ನೇ ಆಗಲಿ ಹಿಡಿದು`ಮಾತಾಡ್ ಮಾತಾಡ್ ಮಲ್ಲಿಗೆ’ಅಂದರೆ ಸಾಕು ನಿನ್ನ ಕೈಯ್ಯಲ್ಲಿರುವ ಹೂಗಳೆಲ್ಲಾ ಬೆಳ್ಳಿ ನಾಣ್ಯಗಳಾಗಿ ಬಿಡುತ್ತವೆ’ಅಂದಿದ್ದವಂತೆ. ಅವತ್ತಿನಿಂದ ಬುಡುಗೊಚ್ಚ ತನಗೆ ಬೇಕಾದಾಗಲೆಲ್ಲಾ ಹಾಗೆ ಅನ್ನುತ್ತಿದ್ದನಂತೆ. ಆಗ ಆ ಹೂಗಳೆಲ್ಲಾ ಬೆಳ್ಳಿ ನಾಣ್ಯಗಳಾಗುತ್ತಿದ್ದವಂತೆ! ಹಂಗೆ ಸಿಕ್ಕ ನಾಣ್ಯಗಳನ್ನೆಲ್ಲಾ ಕುಂಭಕ್ಕೆ ತುಂಬಿ ಇಟ್ಟಿದ್ದನಂತೆ! ಇಂಥ ಅದೆಷ್ಟೋ ಕಥೆಗಳನ್ನು ಅವನಿಂದ ಕೇಳಿದ್ದೇನೆ.
ಈಗ ನೆನೆದರೆ ಅಕ್ಷರಗಳೇ ಗೊತ್ತಿಲ್ಲದ ಇವರುಗಳೊಳಗೆ ಅದೆಷ್ಟು ಕಥೆಗಳು ಗೂಡು ಕಟ್ಟಿದ್ದವು ಹಾಗೂ ನಾನು ಓದಿರುವ ಯಾವುದೇ ಶ್ರೇಷ್ಠ ಲೇಖಕನಿಗಿಂತ ಇವರುಗಳು ಯಾವುದರಲ್ಲಿ ಕಡಿಮೆ? ಅಂತ ಅನಿಸುತ್ತದೆ. ನಾನು ಮಿಡ್ಲ್ ಸ್ಕೂಲ್ ಮುಗಿಸುವ ಹೊತ್ತಿಗೆ ಈ ಮೂವರೂ ತೀರಿಕೊಂಡಿದ್ದರು. ಆದರೆ ಆ ಹೊತ್ತಿಗಾಗಲೇ ಕಥೆಗಳ ಬಗ್ಗೆ ಯಾವತ್ತಿಗೂ ಮಾಸದ ತುಡಿತವೊಂದನ್ನು ನನ್ನೊಳಗಿಟ್ಟು ಹೋಗಿದ್ದರು. ಇಂಥದ್ದೊಂದು ಲೋಕ ನನಗೆ ಸಿಗದೇ ಹೋಗಿದ್ದರೆ ಇವರುಗಳು ಕಥೆಯ ಮಾಂತ್ರಿಕ ಚಾಪೆಯಲ್ಲಿ ಕೂರಿಸಿಕೊಂಡು ನನ್ನನ್ನು ತೇಲಿಸದೇ ಹೋಗಿದ್ದರೆ ಬಹುಶಃ ನನ್ನೊಳಗೊಬ್ಬ ಕಥೆಗಾರ ಮುಖ ತೋರಿಸುತ್ತಿದ್ದನೋ ಇಲ್ಲವೋ ಗೊತ್ತಿಲ್ಲ. ಹೀಗೆ ಎಳವೆಯಲ್ಲಿ ನನ್ನನ್ನು ಕಥಾ ಕಣಿವೆಯಲ್ಲಿ ನಡೆದಾಡಿಸಿದ ಈ ಮನಸುಗಳಿಗೆ ನನ್ನ ಮೊದಲ ಪ್ರಣಾಮಗಳು ಸಲ್ಲುತ್ತವೆ. ಅಂತೆಯೇ ಮುಂದಿನ ದಿನಗಳಲ್ಲಿ ಓದಿನ ಗೀಳಿಗೆ ಬಿದ್ದ ನನ್ನನ್ನು ಅನುಗಾಲವೂ ಕೈ ಹಿಡಿದು ನಡೆಸುತ್ತಿರುವ ಈ ನೆಲದ ಹಾಗೂ ಲೋಕದ ಬೇರೆ ಬೇರೆ ಭಾಷೆಯ ಮಹಾ ಲೇಖಕರಿಗೂ ನಾನಿಲ್ಲಿ ಋಣಿಯಾಗಿದ್ದೇನೆ.

ಈ ಬಗೆಯ ಅಪರಿಮಿತ ಲೋಕವೊಂದನ್ನು ನನಗೆ ಕರುಣಿಸಿದ್ದ ಹಳ್ಳಿಗಳಿಂದು ಹಿಂದಿನ ಹಳ್ಳಿಗಳಾಗಿ ಉಳಿದಿಲ್ಲ. ಅವುಗಳೆಲ್ಲಾ ಈಗ ನಗರಗಳ ಆತ್ಮವನ್ನು ತೊಟ್ಟು ಕೂತಿವೆ. ಕೃಷಿ ಬದುಕು ಯಂತ್ರೀಕರಣಗೊಳ್ಳುತ್ತಲೇ ಆ ಬದುಕು ಆವರೆವಿಗೂ ಎದೆಯಲ್ಲಿ ಕಾಪಿಟ್ಟುಕೊಂಡಿದ್ದ ಜಾನಪದ ಲೋಕ ಮೆಲ್ಲಗೆ ಮರೆಯಾಗುತ್ತಿದೆ. ಜೊತೆಗೆ ದೇಸೀ ಕಥನ, ಕುಂಬಾರಿಕೆ, ಬುಟ್ಟಿ ಹೆಣೆಯುವಿಕೆ, ಚಮ್ಮಾರಿಕೆ, ಕಮ್ಮಾರಿಕೆ, ದಲ್ಲಾಳಿಕೆ, ನಾಟಿ ವೈದ್ಯ ಪದ್ಧತಿ ಮುಂತಾದ ಹಳ್ಳಿಗಳ ಅಪ್ಪಟ ಸ್ವಾವಲಂಬನೆಯ ಕಸುಬುಗಳು ಕಣ್ಮರೆಯಾಗುವುದರೊಂದಿಗೆ ಅವುಗಳ ಜೊತೆಗಿದ್ದ ದೇಸೀ ಜ್ಞಾನ ಹಾಗೂ ಆ ಕಸುಬುಗಳು ಪೊರೆದ ನುಡಿ ಸಂಪತ್ತೂ ಅಳಿಯತೊಡಗಿದೆ. ಹಾಗಾಗಿ ನನಗೆ ಹಾಗೂ ನನ್ನ ವಾರಿಗೆಯರಿಗೆ ಸಿಗುತ್ತಿದ್ದ ಆ ಲೋಕ ಈಗಿನ ಮಕ್ಕಳಿಗೆ ಸಿಕ್ಕುತ್ತಿಲ್ಲ ಅನ್ನುವ ವಿಷಾದ ಯಾವಾಗಲೂ ಅನಿಸುವಂತೆ ಇದನ್ನು ಬರೆಯುತ್ತಿರುವ ಈ ಚಣದಲ್ಲೂ ಅನಿಸುತ್ತಿದೆ.

(ಕೃತಿ: ಮಣ್ಣಿನ ಮುಚ್ಚಳ (ಕಥಾ ಸಂಕಲನ), ಲೇಖಕರು: ಎಸ್.‌ ಗಂಗಾಧರಯ್ಯ, ಪ್ರಕಾಶಕರು: ಪಲ್ಲವ ಪ್ರಕಾಶನ, ಬೆಲೆ: 180/-)