ಹಿಂದಿನ ದಿನ ಹೇಳಿದ ಕಥೆಯ ಸಣ್ಣ ಸಣ್ಣ ಸಂಗತಿಗಳನ್ನೂ ನೆನಪಿಟ್ಟುಕೊಂಡು ಒಬ್ಬರು ಇನ್ನೊಬ್ಬರಿಗೆ ಹೀಗೆ ಮಾಡು ಎಂದು ನಿರ್ದೇಶನ ಮಾಡುತ್ತಾ ಪಾತ್ರಗಳಾಗಿ ಅಭಿನಯಿಸುವ ಆಟ ಬಹಳ ಸೊಗಸಾಗಿ ನಡೆದಿತ್ತು. ಅವರಲ್ಲಿ ಮೂವರು ಐದು ವರ್ಷ ಆಸುಪಾಸಿನ ಮಕ್ಕಳು. ಅವರಿಗಿನ್ನೂ ಶಾಲೆಯಲ್ಲಿ ಕಲಿಸುವ ಅಕ್ಷರಾಭ್ಯಾಸವೇ ಆಗಿಲ್ಲ. ಆದರೂ ಕಥೆಯನ್ನು ಸೂಕ್ಷ್ಮವಾಗಿ ಕೇಳಿಸಿಕೊಳ್ಳುವ, ನೆನಪಿಟ್ಟುಕೊಳ್ಳುವ, ಮತ್ತೆ ಅಲ್ಲಿ ಸಂದರ್ಭಕ್ಕೆ ಬೇಕಾದ ಸಂಭಾಷಣೆಯನ್ನು ತಾವೇ ಸೃಷ್ಟಿಸಿಕೊಳ್ಳುವ ಕೌಶಲ ಅವರಿಗೆ ಅದಾಗಲೇ ಬಂದಿತ್ತು.
‘ಗಣಿತ ಮೇಷ್ಟರ ಶಾಲಾ ಡೈರಿ’ಯಲ್ಲಿ ಅರವಿಂದ ಕುಡ್ಲ ಇಂದಿನ ಬರಹ

ಇದು 2020 ನೇ ಇಸವಿಯ ಕಥೆ. ಜಗತ್ತನ್ನೇ ಆವರಿಸಿದ ಮಹಾಮಾರಿ ಕೊರೊನಾದಿಂದಾಗಿ ಲಾಕ್‌ ಡೌನ್‌ ಎಂಬ ಗೃಹಬಂಧನ ಶಿಕ್ಷೆಯನ್ನು ನಾವೆಲ್ಲ ಎದುರಿಸಬೇಕಾಯಿತು. ರಜೆ ಸಿಕ್ಕಿದರೆ ಊರಿಗೆ ಹೋಗುತ್ತಿದ್ದ ನಾವು ಈ ಲಾಕ್‌ ಡೌನ್‌ ನಿಂದಾಗಿ ನಮ್ಮ ಬಾಡಿಗೆ ಮನೆಯಲ್ಲಿಯೇ ಉಳಿದುಕೊಂಡೆವು. ಶಾಲೆಯಲ್ಲಿ ನಡೆದಿದ್ದ ಶೌಚಾಲಯ ನಿರ್ಮಾಣ ಕಾಮಗಾರಿಗೆ ನೀರು ಹಾಕಲು ನಾನು ನಿತ್ಯವೂ ಶಾಲೆಗೆ ಹೋಗಿ ಬರುತ್ತಿದ್ದೆ. ಇಂಟರ್ನೆಟ್‌ ಯುಗದ ಹೊಸ ಅವತಾರಗಳ ಪರಿಚಯವೂ ಆಗತೊಡಗಿತ್ತು. ಬಹಳಕಾಲದಿಂದ ಮಾತನಾಡದೇ ಉಳಿದಿದ್ದ ಸ್ನೇಹಿತರ ಜೊತೆ ಫೋನಿನಲ್ಲಿ ಮಾತನಾಡಿಯೂ ಆಯ್ತು. ದಿನ ಕಳೆಯಲು ಇನ್ನು ಏನು ಮಾಡುವುದು ಎಂಬ ಪರಿಸ್ಥಿತಿ ಉಂಟಾಗಿತ್ತು. ಓದಬೇಕು ಎಂದು ಬಾಕಿ ಉಳಿಸಿದ್ದ ಹಲವಾರು ಪುಸ್ತಕಗಳನ್ನು ಒಂದೊಂದಾಗಿ ಕೈಗೆತ್ತಿಕೊಂಡು ಓದಲಾರಂಭಿಸಿದೆ. ಓದಿ ಓದಿ ತಲೆಯಲ್ಲೇನಾದರೂ ಹುಳ ಹೊಕ್ಕರೆ ಅದರ ಬಗ್ಗೆ ಬರೆದು ಬಿಡಬೇಕು ಅನಿಸುತ್ತಿತ್ತು. ಹಾಗೆ ಅನಿಸಿದ್ದನ್ನು ಪುಸ್ತಕವೊಂದರಲ್ಲಿ ಬರೆಯಲಾರಂಭಿಸಿದೆ.

ಹಕ್ಕಿ ವೀಕ್ಷಣೆಯ ನನ್ನ ನೆಚ್ಚಿನ ಹವ್ಯಾಸಕ್ಕೆ ಹೆಚ್ಚಿನ ಸಮಯ ಮೀಸಲಿಟ್ಟೆ ಮತ್ತು ದಿನ ದಿನವೂ ಕಂಡ ಹಕ್ಕಿಯ ಚಿತ್ರ ತೆಗೆದು ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪುಟ್ಟ ವಿವರಣೆಯೊಂದಿಗೆ ಬರೆಯಲು ಪ್ರಾರಂಭಿಸಿದೆ. ಅದುವರೆಗೂ ಅಂತಹ ರಜೆಯನ್ನು ಕಂಡಿರದ ನನ್ನ ಮಡದಿಯೂ ಹಲವು ಬಗೆಯ ಸಂಡಿಗೆಗಳನ್ನು ತಯಾರಿಸಿ ತಾನೂ ಸಮಯವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಳು. ನಮ್ಮಿಬ್ಬರ ಈ ಕೆಲಸದ ನಡುವೆ ನಮ್ಮ ಪುಟ್ಟ ಮಗಳು ನಮಗಿಂತಲೂ ಹೆಚ್ಚು ತನ್ನದೇ ಕೆಲಸದಲ್ಲಿ ಮಗ್ನಳಾಗಿದ್ದಳು. ಅವಳು ಅಷ್ಟೊಂದು ಮುಳುಗುವ ಕೆಲಸ ಏನಪ್ಪಾ ಎಂದರೆ ಆಟ ಆಟುವುದು. ನಾವಿರುವ ಬಾಡಿಗೆ ಮನೆಗಳ ಸಮೂಹದಲ್ಲಿ ಒಂದೆರಡು ವರ್ಷ ಹೆಚ್ಚು ಕಡಿಮೆಯ ನಾಲ್ಕು ಮಕ್ಕಳಿದ್ದರು. ಅವರು ಯಾವ ಹೊತ್ತಿಗೆ ಯಾರ ಮನೆಯಲ್ಲಿ ಯಾವ ಆಟ ಆಡುತ್ತಾ ಕಾಲ ಕಳೆಯುತ್ತಿದ್ದರು ಎನ್ನುವುದನ್ನು ಹೇಳಲಿಕ್ಕೇ ಸಾಧ್ಯವಿಲ್ಲ. ನಮಗೆ ಹಿರಿಯರಿಗೆ ಯಾವ ದಿನ ಯಾವ ಹೊತ್ತಿಗೆ, ಹಾಲು ಮತ್ತು ದಿನಸಿ ಸಾಮಾನು ತರಲು ಹೋಗಬೇಕು ಎಂಬ ಚಿಂತೆಯಾದರೆ ಮಕ್ಕಳಿಗೆ ಅದ್ಯಾವ ಪರಿವೆಯೂ ಇರಲಿಲ್ಲ. ಆಟ ಆಡಿ ಸುಸ್ತಾದರೆ ಯಾರದ್ದೋ ಮನೆಯಲ್ಲಿ ಕಾರ್ಟೂನು ನೋಡುತ್ತಾ ಅಲ್ಲೇ ನಿದ್ದೆ ಹೋದದ್ದೂ ಇದೆ. ಊಟ ಒಬ್ಬರ ಮನೆಯಲ್ಲಾದರೆ, ತಿಂಡಿ ಇನ್ನೊಬ್ಬರ ಮನೆಯಲ್ಲಿ. ದಿನಕ್ಕೊಮ್ಮೆ ಸ್ನಾನ ಮಾಡಿಸಲು ಮಕ್ಕಳನ್ನು ಹುಡುಕಿ ನಾವೇ ಕರೆತಂದು ಸ್ನಾನ ಮಾಡಿಸಬೇಕು. ಇಲ್ಲವಾದರೆ ಅದರ ಪರಿವೆಯೂ ಇರುತ್ತಿರಲಿಲ್ಲ.

ಮಕ್ಕಳು ಟಿವಿ ಮತ್ತು ಮೊಬೈಲಿನ ಗೀಳಿಗೆ ಅಂಟಿಕೊಳ್ಳಬಾರದು ಎಂದು ಟೀಚರ್‌ ಆಗಿರುವ ನನ್ನಾಕೆ ಪ್ರತಿದಿನ ಒಂದು ಹೊತ್ತು ಮಕ್ಕಳನ್ನು ಕೂಡಿಸಿಕೊಂಡು ಅವರಿಗೆ ಕಥೆ ಹೇಳುತ್ತಿದ್ದಳು. ಮಕ್ಕಳಿಗೂ ಕಥೆ ಎಂದರೆ ಬಹಳ ಇಷ್ಟ. ಕಥೆ ಹೇಳುತ್ತೇನೆ ಎಂದು ಕರೆದರೆ ಓಡೋಡಿ ಬರುತ್ತಿದ್ದರು. ಕಥೆ ಹೇಳುವಾಗ ಬರುವ ಸನ್ನಿವೇಶಗಳನ್ನು ಅವರು ಯೋಚಿಸಿ ಅದು ಮುಖದಲ್ಲಿ ಅರಳುವುದನ್ನು ನೋಡುವುದೇ ಒಂದು ಚಂದ. ಆ ಖುಷಿಗಾಗಿ ಕಥೆಯನ್ನು ಓದಿಯಾದರೂ ಹೇಳುತ್ತಿದ್ದೆವು. ಅವರಿಗೆ ಇಷ್ಟವಾದ ಕಥೆಗಳನ್ನು ಮರುದಿನ ಮತ್ತೆ ಹೇಳಿಸುತ್ತಿದ್ದರು. ಮುಂದೇನಾಗುತ್ತದೆ ಎಂದು ತಿಳಿದಿದ್ದ ಕಾರಣ ಅದರ ಭಾವ ಮೊದಲೇ ಅವರ ಮುಖದಲ್ಲಿ ಬಂದುಬಿಡುತ್ತಿತ್ತು. ಅದನ್ನು ನೆನೆದು ಅವರು ಸಂತೋಷ ಪಡುವುದನ್ನು ನೋಡುವುದೇ ಒಂದು ಚಂದ. ನಮ್ಮ ಸಂಗ್ರಹದ ಕಥೆಗಳು ಖಾಲಿಯಾದಾಗ ಯೂಟ್ಯೂಬ್‌ ಮೊರೆ ಹೋಗಿ ಅವರಿಗೆ ಕಥೆ ತೋರಿಸುತ್ತಿದ್ದೆವು. ಕೊನೆಗೆ ಆ ಕಥೆಯನ್ನು ನಾವು ಇನ್ನೊಮ್ಮೆ ಹೇಳಬೇಕಾಗುತ್ತಿತ್ತು. ಜೊತೆಗೆ ಅದರ ಬಗ್ಗೆ ನೂರಾರು ಪ್ರಶ್ನೆಗಳು. ಅವಕ್ಕೆಲ್ಲ ಉತ್ತರ ಕೊಡಬೇಕು.

ಒಂದು ದಿನ ಮನೆಯ ಹಿತ್ತಲಿನಲ್ಲಿ ಮಕ್ಕಳು ಜೋರಾಗಿ ಮಾತನಾಡಿಕೊಳ್ಳುವುದು ಕೇಳಿಸಿತು. ನಿಧಾನವಾಗಿ ಹೋಗಿ ನೋಡಿದರೆ ಹಿಂದಿನ ದಿನ ಹೇಳಿದ ಪಂಚತಂತ್ರದ ಕಥೆಯನ್ನು ಮಕ್ಕಳು ತಾವೇ ಪಾತ್ರವಾಗಿ ಆಡುತ್ತಿದ್ದರು. ಅವರಿಗೆ ತಿಳಿಯದಂತೆ ಅವರ ಆಟವನ್ನು ಗಮನಿಸುತ್ತಾ ಕುಳಿತೆ. ಹಿಂದಿನ ದಿನ ಹೇಳಿದ ಕಥೆಯ ಸಣ್ಣ ಸಣ್ಣ ಸಂಗತಿಗಳನ್ನೂ ನೆನಪಿಟ್ಟುಕೊಂಡು ಒಬ್ಬರು ಇನ್ನೊಬ್ಬರಿಗೆ ಹೀಗೆ ಮಾಡು ಎಂದು ನಿರ್ದೇಶನ ಮಾಡುತ್ತಾ ಪಾತ್ರಗಳಾಗಿ ಅಭಿನಯಿಸುವ ಆಟ ಬಹಳ ಸೊಗಸಾಗಿ ನಡೆದಿತ್ತು. ಅವರಲ್ಲಿ ಮೂವರು ಐದು ವರ್ಷ ಆಸುಪಾಸಿನ ಮಕ್ಕಳು. ಅವರಿಗಿನ್ನೂ ಶಾಲೆಯಲ್ಲಿ ಕಲಿಸುವ ಅಕ್ಷರಾಭ್ಯಾಸವೇ ಆಗಿಲ್ಲ. ಆದರೂ ಕಥೆಯನ್ನು ಸೂಕ್ಷ್ಮವಾಗಿ ಕೇಳಿಸಿಕೊಳ್ಳುವ, ನೆನಪಿಟ್ಟುಕೊಳ್ಳುವ, ಮತ್ತೆ ಅಲ್ಲಿ ಸಂದರ್ಭಕ್ಕೆ ಬೇಕಾದ ಸಂಭಾಷಣೆಯನ್ನು ತಾವೇ ಸೃಷ್ಟಿಸಿಕೊಳ್ಳುವ ಕೌಶಲ ಅವರಿಗೆ ಅದಾಗಲೇ ಬಂದಿತ್ತು. ಅವರೆಲ್ಲರಿಗೂ ವಯಸ್ಸಿನಲ್ಲಿ ಒಂದೊಂದು ವರ್ಷ ಅಂತರವಿತ್ತು. ಶಾಲೆಯಲ್ಲಾದರೆ ಅವರೆಲ್ಲಾ ಬೇರೆಬೇರೆ ತರಗತಿಯಲ್ಲಿ ಇರಬೇಕಾಗಿತ್ತು. ಆದರೆ ವಠಾರದಲ್ಲಿ ಅವರೆಲ್ಲರದ್ದೂ ಒಂದೇ ತರಗತಿ. ಅವರೆಲ್ಲ ವಯಸ್ಸಿನ ತೊಂದರೆ ಇಲ್ಲದೆ ಒಟ್ಟಾಗಿ ಕಲಿಯುತ್ತಾರೆ. ಭಾಷಾ ಕೌಶಲಗಳಾದ ಆಲಿಸುವುದು ಮತ್ತು ಮಾತನಾಡುವುದನ್ನು ಬಹಳ ಲೀಲಾಜಾಲವಾಗಿ ಅವರು ಮಾಡುತ್ತಿದ್ದರು. ಮೊದಲನೆಯ ಅವಧಿಗೆ ಕನ್ನಡ, ಎರಡನೆಯ ಅವಧಿಗೆ ಗಣಿತ ಎಂಬ ಕಾಲದ ಬಂಧನ ಇರಲಿಲ್ಲ. ನೀನು ಎರಡನೆಯ ತರಗತಿ, ನೀನು ಒಂದನೆಯ ತರಗತಿ, ಆದ್ದರಿಂದ ನೀನು ಇದನ್ನು ಕಲಿಯಬೇಕು, ನೀನು ಇದನ್ನು ಈಗಾಗಲೇ ಕಲಿತಿರಬೇಕು ಎಂಬ ಯಾವುದೇ ಕಟ್ಟುಪಾಡುಗಳು ಇರಲಿಲ್ಲ. ಅದರ ಜೊತೆಗೆ ತಿಂಗಳ ಕೊನೆಗೆ ಪರೀಕ್ಷೆ ಇದೆ, ಅದರಲ್ಲಿ ಅಂಕ ಗಳಿಸಬೇಕು ಎಂಬ ಒತ್ತಡವೂ ಇಲ್ಲ.

ನಮಗೆ ಹಿರಿಯರಿಗೆ ಯಾವ ದಿನ ಯಾವ ಹೊತ್ತಿಗೆ, ಹಾಲು ಮತ್ತು ದಿನಸಿ ಸಾಮಾನು ತರಲು ಹೋಗಬೇಕು ಎಂಬ ಚಿಂತೆಯಾದರೆ ಮಕ್ಕಳಿಗೆ ಅದ್ಯಾವ ಪರಿವೆಯೂ ಇರಲಿಲ್ಲ. ಆಟ ಆಡಿ ಸುಸ್ತಾದರೆ ಯಾರದ್ದೋ ಮನೆಯಲ್ಲಿ ಕಾರ್ಟೂನು ನೋಡುತ್ತಾ ಅಲ್ಲೇ ನಿದ್ದೆ ಹೋದದ್ದೂ ಇದೆ. ಊಟ ಒಬ್ಬರ ಮನೆಯಲ್ಲಾದರೆ, ತಿಂಡಿ ಇನ್ನೊಬ್ಬರ ಮನೆಯಲ್ಲಿ.

ಆದರೂ ಮಕ್ಕಳು ಸಹಜವಾಗಿ ಕಲಿಯುತ್ತಿದ್ದರು. ಹೀಗೆ ಸಹಜವಾಗಿಯೇ ಕಲಿಯುವ ಮಕ್ಕಳಿಗೆ ಸಿಲೆಬಸ್‌, ಪೀರಿಯಡ್‌, ಪರೀಕ್ಷೆ, ಅಂಕಗಳು ಎಂಬ ಕಟ್ಟುಪಾಡುಗಳನ್ನು ಹಾಕಿದವರು ನಾವು ಹಿರಿಯರು. ಈ ವಯಸ್ಸಿಗೆ, ಈ ತರಗತಿ. ಈ ತರಗತಿಗೆ ಇದನ್ನು ಕಲಿಯಬೇಕು. ಕಲಿತದ್ದನ್ನು ಅಳೆಯುವುದು ಬರವಣಿಗೆಯ ಪರೀಕ್ಷೆಯಿಂದ. ಹಾಗಾಗಿ ಆದಷ್ಟು ಬೇಗ ಬರೆಯಲು ಕಲಿಯಬೇಕು. ಎಲ್ಲ ವ್ಯಕ್ತಿಗಳೂ ಒಂದೇ ರೀತಿ ಇಲ್ಲದಿದ್ದರೂ, ಒಂದು ವರ್ಷದಲ್ಲಿ ಅವರು ಕಲಿಯಬೇಕಾದದ್ದು ನಿಗದಿತ. ಕಲಿಯದಿದ್ದರೆ ದಡ್ಡ, ಕಲಿತರೆ ಬುದ್ಧಿವಂತ ಎಂಬ ಬಿರುದು. ಪಾಠಪುಸ್ತಕಗಳೇ ಸರ್ವಸ್ವ ಎಂದು ತಿಳಿದ ಸಮಾಜದಿಂದ ಬೇರೆ ಏನನ್ನು ನಿರೀಕ್ಷೆ ಮಾಡಲು ಸಾಧ್ಯ.

ತರಗತಿ, ಸಿಲೆಬಸ್‌, ಪೀರಿಯಡ್‌, ಪರೀಕ್ಷೆ ಎಲ್ಲವೂ ವ್ಯವಸ್ಥೆಯ ಅನುಕೂಲಕ್ಕಾಗಿ ಇರುವುದು. ಯಾವ ತರಗತಿಗೆ, ಯಾವ ವಿಷಯವನ್ನು ಬೋಧಿಸಲು, ಎಷ್ಟು ವಿದ್ಯಾರ್ಥಿಗಳಿಗೆ, ಎಷ್ಟು ಶಿಕ್ಷಕರು ಇರಬೇಕು, ಅವರು ವರ್ಷದಲ್ಲಿ ಎಷ್ಟು ಪಾಠ ಮಾಡಿ ಮುಗಿಸಬೇಕು, ಮಾಡಿದ ಪಾಠವನ್ನು ಮಕ್ಕಳು ನೆನಪು ಇಟ್ಟುಕೊಂಡಿದ್ದಾರೆಯೇ ಎಂದು ತಿಳಿಯಲು ಪರೀಕ್ಷೆಯೇ ಹೊರತು, ಮಗು ವಿಷಯವನ್ನು ಹೇಗೆ ಕಲಿಯುತ್ತಾನೆ, ಹೇಗೆ ಬಳಸುತ್ತಾನೆ ಎಂದು ತಿಳಿಯಲು ಈ ವ್ಯವಸ್ಥೆಯಿಂದ ಕಷ್ಟಸಾಧ್ಯ. ಈ ಕಲಿಕೆಗೆ ಮೂಲವಸ್ತುವೇ ಪಾಠಪುಸ್ತಕ, ಅದರಲ್ಲಿರುವ ವಿಷಯವನ್ನು ಮಕ್ಕಳಿಗೆ ದಾಟಿಸುವುದು ಶಿಕ್ಷಕನ ಕೆಲಸ, ಅವುಗಳ ನಡುವಿನಿಂದ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ವಿದ್ಯಾರ್ಥಿಯ ಕೆಲಸ ಎಂಬುದು ನಾವೆಲ್ಲ ನಂಬಿರುವ ಸತ್ಯ.

ಪ್ರತಿಯೊಬ್ಬ ಮಗುವೂ ತನ್ನದೇ ಆದ ರೀತಿಯಲ್ಲಿ, ತನ್ನದೇ ವೇಗದಲ್ಲಿ ವಿಷಯಗಳನ್ನು, ಕೌಶಲಗಳನ್ನು ಕಲಿಯುತ್ತಾನೆ. ಎಲ್ಲವನ್ನೂ ಕೇವಲ ಬರವಣಿಗೆಯ ಪರೀಕ್ಷೆಯಿಂದ ಅಳೆಯಲು ಸಾಧ್ಯ ಇಲ್ಲ. ಈಜುವುದು ಹೇಗೆ, ಮರ ಹತ್ತುವುದು ಹೇಗೆ, ಮನೆ ಕಟ್ಟುವುದು ಹೇಗೆ, ವಾಹನ ಚಲಾಯಿಸುವುದು ಹೇಗೆ, ಹಾಳಾದರೆ ವಸ್ತುವನ್ನು ರಿಪೇರಿ ಮಾಡುವುದು ಹೇಗೆ, ಅನ್ನ ಸಾರು ಮಾಡುವುದು ಹೇಗೆ ಮೊದಲಾದ ಅನೇಕ ವಿಷಯಗಳನ್ನು ಮಾಡಿಯೇ ನೋಡಬೇಕು. ಆದರೆ ನಮ್ಮ ಈಗಿನ ವ್ಯವಸ್ಥೆಯಲ್ಲಿ ಅವುಗಳನ್ನು ಬರೆದು ತೋರಿಸಬೇಕು. ಆಗಲೇ ಅಂಕ ಸಿಗುವುದು.

ಮಗು ಕಲಿತು ಅಂಕ ಪಡೆದು, ನಾಳೆ ಒಳ್ಳೆಯ ಉದ್ಯೋಗ ಹಿಡಿದು, ಕೈತುಂಬಾ ದುಡಿಯುವ ಕೂಲಿಯಾಗಬೇಕು ಎಂದು ಈಗ ಅದರ ಬಾಲ್ಯವನ್ನು, ಕಲಿಕೆಯ ಸ್ವಾತಂತ್ರ್ಯವನ್ನು, ಸಂತೋಷವನ್ನು ಕಿತ್ತುಕೊಳ್ಳುವ ಹಕ್ಕು ಪೋಷಕರು ಮತ್ತು ಸಮಾಜಕ್ಕೆ ಇದೆಯೇ ಎಂದು ನಾವು ಯೋಚಿಸಬೇಕಿದೆ.