ಬೇರೆಬೇರೆ ದೇಶಗಳಿಂದ ತಂದಿಟ್ಟು ಬೆಳೆದ ಸಸ್ಯಸಂಪತ್ತಿಗೆ ಹೋಲಿಸಿದರೆ ಆಸ್ಟ್ರೇಲಿಯಾದ ಸ್ವಾಭಾವಿಕ, ದೇಶೀಯ ಹೂಗಳು ಇಲ್ಲಿ ಹೆಚ್ಚಾಗಿ ಜನಜನಿತವಾಗಿಲ್ಲ. ಕಾರಣ ನಿಮಗೆ ಹೊಳೆದಿರಬಹುದು. ಸಮಾಜವು ವಸಾಹತುಶಾಹಿ ಆಡಳಿತದಲ್ಲಿ ಇಲ್ಲಿನ ಎಲ್ಲವನ್ನೂ ಇಲ್ಲವಾಗಿಸುವ ಮನೋಭಾವವನ್ನಿಟ್ಟುಕೊಂಡು ದೇಶೀಯ ಹೂಹಣ್ಣುಗಳನ್ನು ಮೂಲೆಗೊತ್ತಿತ್ತು. ಕಳೆದೆರಡು ದಶಕಗಳಲ್ಲಿ ಬದಲಾವಣೆ ಗಾಳಿಗೆ ಶಕ್ತಿಬಂದಿದೆ. ಈಗ ಸರಕಾರಗಳು ಮತ್ತು ತೋಟಗಾರಿಕೆ ಸಮುದಾಯಗಳು ದೇಶೀಯ ಸಸ್ಯಸಂಪತ್ತಿನ ಮೌಲ್ಯವನ್ನು ಚೆನ್ನಾಗಿ ಪ್ರಚಾರ ಮಾಡುತ್ತಿದ್ದಾರೆ.
ಡಾ. ವಿನತೆ ಶರ್ಮಾ ಬರೆಯುವ ‘ಆಸ್ಟ್ರೇಲಿಯಾ ಪತ್ರ’

 

‘ಏನೋ ನಿರೀಕ್ಷೆ ಸೃಷ್ಟಿಯಲ್ಲೆಲ್ಲ ಹೂಗಳ ಪರೀಕ್ಷೆ ದುಂಬಿಗಳಿಗೆಲ್ಲ ಬಂದನೊ ವಸಂತ …’ ಲಕ್ಷ್ಮೀನಾರಾಯಣ ಭಟ್ಟರ ಕವಿತೆ ಕಾಡುತ್ತಿದೆ. ಸರಸರ ದಾಪುಗಾಲು ಹಾಕುತ್ತಾ ಓಡುತ್ತಿರುವ ದಿನಗಳನ್ನು ಒಮ್ಮೆ ಜಗ್ಗಿ ನಿಲ್ಲಿಸಲೇ ಎನ್ನುವ ಬಯಕೆ. ಕಾಲವನ್ನು ಒಂದು ಕ್ಷಣ ನಿಲ್ಲಿಸಿದರೆ ನಿಂಬೆ ಮರದ ಚಿಗುರನ್ನು, ಚಿಗುರೆಲೆಗಳ ನಡುವೆ ಅರಳುವ ಬಿಳಿಹೂವನ್ನು, ಹೂಗುಚ್ಛಕ್ಕೆ ಮುತ್ತಿಕ್ಕುವ ದುಂಬಿಯನ್ನು ನೋಡುತ್ತಾ ಮೈಮರೆಯಬಹುದು. ಹಿತವಾದ ವಸಂತ ಋತುವಿನ ಎಳೆ ಬಿಸಿಲನ್ನು ಸವಿಯುತ್ತ ದುಂಬಿಯ ಮಧುರ ಝೇಂಕಾರವನ್ನು ಆಲಿಸುತ್ತ ತಲೆದೂಗಬಹುದು.

ಆಹಾ ವಸಂತ! ಅರೆರೆ, ಐದು ತಿಂಗಳ ಹಿಂದೆ ಈ ನಿಂಬೆ ಮರ ಕೊಂಬೆಕೊಂಬೆಗಳಲ್ಲಿ ಹಸಿರು ಹಳದಿ ಹಣ್ಣುಗಳನ್ನು ಏರಿಸಿಕೊಂಡು ಪೂರ್ಣ ಫಲವತಿಯಾಗಿ ಕಣ್ತುಂಬಿತ್ತು. ಈಗ ನೋಡಿದರೆ, ಅದ್ಯಾವ ಮಾಯೆಯೋ, ತನ್ನ ಮಾಸಿದ ಗಾಢ ಕಡು ಹಸಿರು ಎಲೆಗಳ ನಡುವೆ ಅಲ್ಲಲ್ಲಿ ಕಂದು ಬಣ್ಣದ ಚಿಗುರೆಲೆಗಳನ್ನು ಸೇರಿಸಿಕೊಂಡುಬಿಟ್ಟಿದೆ. ನಡುನಡುವೆ ಬಿಳಿ ಹೂಗುಚ್ಛದ ಅಲಂಕಾರ ಬೇರೆ. ಹೊಸದಾಗಿ ಮೊತ್ತಮೊದಲ ಬಸಿರು ತಳೆದಂತೆ ಕಾಣುತ್ತಿದೆ ಎಂದು ನನ್ನ ಭ್ರಾಂತು. ದೇಹಕ್ಕೆ ವಯಸ್ಸಾಗಿ ಮತ್ತೊಂದು ಬಸಿರನ್ನು ಬರಮಾಡಿಕೊಳ್ಳಲಾಗದ ನನ್ನಲ್ಲಿ ಕವಿಯ ಮುಂದಿನ ಸಾಲುಗಳು ರಿಂಗಣಿಸುತ್ತಿವೆ- ‘ನೆನಪುಗಳ ಜೋಲಿಯಲಿ ತೂಗುವುದು ಮನಸು ಕಟ್ಟುವುದು ಮಾಲೆಯಲಿ ಹೊಸ ಹೊಸಾ ಕನಸು ನನಸಾಗದಿದ್ದರೂ ಕನಸಿಗಿದೆ ಘನತೆ ತೈಲ ಯಾವುದೆ ಇರಲಿ ಉರಿಯುವುದು ಹಣತೆ’. ಆಹಾ ಹೌದು, ಕನಸಿಗಿದೆ ಘನತೆ! ವಸಂತ ಬಂದಾಗ ನಮ್ಮಂಗಳದ ನಿಂಬೆ ಮರ ಮಾಡುತ್ತಿರುವಂತೆ ಹಳೆತನದ ಮುಸುಕಿನಲ್ಲಿ ಎಲ್ಲರಲ್ಲೂ ಎಲ್ಲವಲ್ಲೂ ಹೊಸತನ ಬಂದುಬಿಟ್ಟರೆ!

ನಿಮ್ಮೂರು ಮಾನ್ಸೂನ್ ಮಳೆಯಲ್ಲಿ ಅದ್ದಿಕೊಂಡು ನೆನೆದು ತೊಪ್ಪೆಯಾಗಿದ್ದಾಗ ನಮ್ಮೂರಿನಲ್ಲಿ ವಸಂತಾಗಮನವಾಗಿದೆ. ದಕ್ಷಿಣಗೋಳದಲ್ಲಿರುವ ಆಸ್ಟ್ರೇಲಿಯದಲ್ಲಿ ಋತುಗಳು ಉತ್ತರಗೋಳಕ್ಕೆ ವಿರುದ್ಧವಾಗಿ ಜರುಗುತ್ತವೆ. ಈ ವಾರದಿಂದ ನಮ್ಮಲ್ಲಿ ವಸಂತ ಋತುವಿನ ಕ್ಯಾಲಂಡರ್ ಶುರುವಾಗಿದೆ. ಕ್ಯಾಲಂಡರ್ ದಿನಾಂಕ ಬರುವ ಮುನ್ನವೇ ಪ್ರಕೃತಿ ಮಾತೆ ‘spring is in the air’ ಎನ್ನುವ ಸಂದೇಶವನ್ನು ಕಳಿಸಿದ್ದಳು. ಕಳೆದ ತಿಂಗಳು ಆಗಸ್ಟಿನಲ್ಲೇ ಜಾಜಿಹೂ ಬಳ್ಳಿ ವಯ್ಯಾರದಿಂದ ಬಿಳಿಸೀರೆ ಉಟ್ಟುಕೊಂಡು ಹಿತ್ತಲಿನ ತುಂಬಾ ತನ್ನ ಘಮದ ಸೆರಗನ್ನು ಹರಡಿದ್ದಳು. ಹೂಗಳನ್ನು, ಕೈತೋಟಗಳನ್ನು ಪ್ರೀತಿಸುವ ಈ ದೇಶದ ಬಹಳಷ್ಟು ಜನ ಜಾಜಿಬಳ್ಳಿಯನ್ನು ಬೆಳೆದು ಹೂಘಮವನ್ನು ಆನಂದಿಸುತ್ತಾರೆ. ವಸಂತ ಋತು ಬಂದಾಗ ನಮ್ಮ ಆಸ್ಟ್ರೇಲಿಯಾದ ಮನೆಗಳಿಗೆ ಕನ್ನಡದ ಕವಿ ಸತ್ಯಾನಂದ ಪಾತ್ರೋಟರವರ ‘ಮನಸು-ಕನಸುಗಳಲ್ಲಿ ಜಾಜಿ ಮಲ್ಲಿಗೆ’ ಎನ್ನುವ ಸಾಲು ಬಹಳ ಸಲ್ಲುತ್ತದೆ.

ಬೇರೆಬೇರೆ ದೇಶಗಳಿಂದ ತಂದಿಟ್ಟು ಬೆಳೆದ ಸಸ್ಯಸಂಪತ್ತಿಗೆ ಹೋಲಿಸಿದರೆ ಆಸ್ಟ್ರೇಲಿಯಾದ ಸ್ವಾಭಾವಿಕ, ದೇಶೀಯ ಹೂಗಳು ಇಲ್ಲಿ ಹೆಚ್ಚಾಗಿ ಜನಜನಿತವಾಗಿಲ್ಲ. ಕಾರಣ ನಿಮಗೆ ಹೊಳೆದಿರಬಹುದು. ಸಮಾಜವು ವಸಾಹತುಶಾಹಿ ಆಡಳಿತದಲ್ಲಿ ಇಲ್ಲಿನ ಎಲ್ಲವನ್ನೂ ಇಲ್ಲವಾಗಿಸುವ ಮನೋಭಾವವನ್ನಿಟ್ಟುಕೊಂಡು ದೇಶೀಯ ಹೂಹಣ್ಣುಗಳನ್ನು ಮೂಲೆಗೊತ್ತಿತ್ತು. ಕಳೆದೆರಡು ದಶಕಗಳಲ್ಲಿ ಬದಲಾವಣೆ ಗಾಳಿಗೆ ಶಕ್ತಿಬಂದಿದೆ. ಈಗ ಸರಕಾರಗಳು ಮತ್ತು ತೋಟಗಾರಿಕೆ ಸಮುದಾಯಗಳು ದೇಶೀಯ ಸಸ್ಯಸಂಪತ್ತಿನ ಮೌಲ್ಯವನ್ನು ಚೆನ್ನಾಗಿ ಪ್ರಚಾರ ಮಾಡುತ್ತಿದ್ದಾರೆ.

ಅದ್ಯಾವ ಮಾಯೆಯೋ, ತನ್ನ ಮಾಸಿದ ಗಾಢ ಕಡು ಹಸಿರು ಎಲೆಗಳ ನಡುವೆ ಅಲ್ಲಲ್ಲಿ ಕಂದು ಬಣ್ಣದ ಚಿಗುರೆಲೆಗಳನ್ನು ಸೇರಿಸಿಕೊಂಡುಬಿಟ್ಟಿದೆ. ನಡುನಡುವೆ ಬಿಳಿ ಹೂಗುಚ್ಛದ ಅಲಂಕಾರ ಬೇರೆ. ಹೊಸದಾಗಿ ಮೊತ್ತಮೊದಲ ಬಸಿರು ತಳೆದಂತೆ ಕಾಣುತ್ತಿದೆ ಎಂದು ನನ್ನ ಭ್ರಾಂತು.

ದೇಶೀಯ ಗಿಡಮರಗಳ ಬಗ್ಗೆ ಮಾತನಾಡುವಾಗ ನನಗೆ ತಕ್ಷಣಕ್ಕೆ ನೆನಪಾಗುವುದು ವಾಟಲ್ ಮರದ ಅಚ್ಚ ಹಳದಿ ಬಣ್ಣದ ಹೂ. Wattle ಮರವು acacia ಜಾತಿಗೆ ಸೇರಿದ್ದು. ಹೆಚ್ಚು ನೀರು, ಆರೈಕೆ ಬಯಸದ ಜಾತಿಯ ಗಿಡ್ಡನೆ, ಒಣಕಲು ಮರ. ಆದರೆ ಹೂ ಬಿಟ್ಟಾಗ ಅಬ್ಬಾ, ಅದೆಂಥ ಸೌಂದರ್ಯ ಅದಕ್ಕೆ. ಇಡೀ ಬಡಾವಣೆಯಲ್ಲಿ ಒಂದು ವಾಟಲ್ ಮರ ಹೂ ಬಿಟ್ಟಿದ್ದರೆ ಅದನ್ನೇ ದಾರಿದೀಪವನ್ನಾಗಿಸಿಕೊಂಡು ನಡೆಯಬಹುದು. ಚಳಿಗಾಲ ಮುಗಿಯುವ ಸೂಚನೆಯೆಂದರೆ ವಾಟಲ್ ಹೂ ಕಾಣಿಸುವುದು. ಆಗ ಒಳನಾಡಿನ ಚಳಿಯನ್ನು ಸಹಿಸಿಕೊಂಡಿದ್ದ ಜನರಿಗೆ ಆಹಾ ವಸಂತಋತು ಬಂತು ಎನ್ನುವ ಹರ್ಷವುಂಟಾಗುತ್ತದೆ. ಅನಾಮಿಕ ಆಸ್ಟ್ರೇಲಿಯನ್ ಒಬ್ಬರು ಅದರ ಬಗ್ಗೆ ಹೀಗೆ ಬರೆದಿದ್ದಾರೆ: It blazes gold upon the earth heralds the passing of winter and the hope and joy of spring to come.

ವಾಟಲ್ ಮರಗಳಲ್ಲೇ ಹಲವಾರು ವಿಧಗಳಿವೆ. ಅವಲ್ಲಿ ಹೆಚ್ಚು ಪ್ರಸಿದ್ಧಿಯಾದದ್ದು ಗೋಲ್ಡನ್ ವಾಟಲ್ (Acacia pycnantha), ನಾನು ಹೇಳಿದ ಹಳದಿ ಹೂ. ಇದು ಆಸ್ಟ್ರೇಲಿಯ ದೇಶದ ರಾಷ್ಟ್ರೀಯ ಹೂ ಸಂಕೇತ. ವಾಟಲ್ ಎನ್ನುವುದು ಈ ದೇಶದ ಅಬೊರಿಜಿನಲ್ ಜನರಿಗೆ ಬಹುಪ್ರಿಯ. ವಾಟ್ಟಲ್ ಬರೀ ಮರ ಮತ್ತು ಹೂ ಅಷ್ಟೇ ಎಲ್ಲ, ಕೆಲ ಪ್ರಾಣಿವರ್ಗಕ್ಕೂ ಸಂಬಂಧಿಸಿದ್ದು. ಕೆಲವು ಆಹಾರವಾಗಿ ಬಳಸಲ್ಪಡುತ್ತದೆ. ಮತ್ತು, ಅವರ ಸಂಪ್ರದಾಯದಲ್ಲಿ ವಾಟಲ್ ಹಾಸುಹೊಕ್ಕಾಗಿದೆ.

(ಊಡ್ಜೆರೂ ನೂನುಕ್ಕೋಲ್)

ಹೀಗೆಯೆ ಗಿಡ, ಮರ, ಹೂ, ವಸಂತ ಎಂದೆಲ್ಲ ಮಾತನಾಡುತ್ತಾ, ಅಬೊರಿಜಿನಲ್ ಆಸ್ಟ್ರೇಲಿಯನ್ನರ ಬಗ್ಗೆ ಮಾತನಾಡುವಾಗ ಊಡ್ಜೆರೂ ನೂನುಕ್ಕೋಲ್ (Oodgeroo Noonuccal) ನೆನಪಿಗೆ ಬರುತ್ತಾರೆ. ಈಕೆ ಮಹಾನ್ ಕವಿಯಿತ್ರಿ, ತನ್ನ ಜನರಿಗಾಗಿ ಹೋರಾಡಿದ ಹೋರಾಟಗಾರ್ತಿ. ಹಲವಾರು ಸಾಧನೆಗಳಿಗಾಗಿ ಹೆಸರಾದವರು. ಇವರ ಬಗ್ಗೆ ನಾನು ಈ ಹಿಂದೆ ‘ಕೆಂಡಸಂಪಿಗೆ’ ಯಲ್ಲಿ ಬರೆದಿದ್ದೆ. ನೀಲಗಿರಿ ಮರದ ಬಗ್ಗೆ ಅವರು ಬರೆದ Municipal Gum ಕವಿತೆ ಹೀಗಿದೆ:

Gumtree in the city street
Hard bitumen around your feet
Rather you should be
In the cool world of leafy forest halls
And wild bird calls

ತಮ್ಮ ಅಬೊರಿಜಿನಲ್ ಜನರ ನೋವು, ತುಳಿಯುವಿಕೆ ಮತ್ತು ಅವಮಾನಗಳ ಬಗ್ಗೆ ಅವರು ಬರೆದ ಕವಿತೆಗಳನ್ನು ಓದುತ್ತಿದ್ದರೆ ವಸಂತ ಋತುವಿನ ಉಲ್ಲಾಸ ಮಾಯವಾಗಿ ನಾನು ಕೂಡ ಒಂದು ಮುನಿಸಿಪಲ್ ಗಮ್ ಟ್ರೀ ಆಗಿಬಿಟ್ಟಂತೆ ಅನಿಸುತ್ತದೆ. ಹಾಗನಿಸುವುದು ಅಸಹಜವಲ್ಲ. ಅಥವಾ, ಈಗ ಮಾತ್ರ ಹಾಗನಿಸಬೇಕಾ, ಬೇರೆಲ್ಲಾ ಕಾಲದಲ್ಲಿ ಅನ್ನಿಸಬಾರದಾ ಎಂದು ನೀವು ಕೇಳಬಹುದು. ನಾನು ಹೇಳುತ್ತಿರುವುದು ಈ ಅಸಹಜ ಕೊರೋನ ಕಾಲದಲ್ಲಿ ಏಳುತ್ತಿರುವ ಸಹಜ ಭಾವನೆಗಳು, ಅನಿಸಿಕೆಗಳು. ಹೋದ ತಿಂಗಳು ನನ್ನ ಆನ್ಲೈನ್ ತರಗತಿಯಲ್ಲಿ ವಿದ್ಯಾರ್ಥಿನಿಯೊಬ್ಬಳು ಮುನಿಸಿಕೊಂಡಿದ್ದಳು. ಯಾಕಮ್ಮ ಮುನಿಸು ಎಂದು ಕೇಳಿದರೆ, ‘ಈ ಲಾಕ್ ಡೌನ್ ದಿನಗಳಲ್ಲಿ ನನ್ನ ತಲೆ ಕೆಡುತ್ತಿದೆ. ಪೂರ್ಣಾವಧಿ ನೌಕರಿ ಮನೆಯಿಂದ, ಚಿಕ್ಕ ಎರಡು ಮಕ್ಕಳು ಮತ್ತು ಗಂಡ ಮನೆಯೊಳಗೆ, ನಾನೋ ಮನೆಯಿಂದಲೇ ಕೆಲಸ ಮಾಡಿಕೊಂಡು ಓದುತ್ತಿದ್ದೀನಿ. ಇಷ್ಟೆಲ್ಲಾ ರಗಳೆಗಳ ನಡುವೆ ಈ ದರಿದ್ರ ಕಷ್ಟಕರವಾದ ಅಸೈನ್ಮೆಂಟ್ ಬೇರೆ’ ಎಂದಳು. ಬೇರೆ ತೀವ್ರ ಪದಗಳನ್ನು ಪಕ್ಕಕ್ಕಿಟ್ಟು ಅವಳು ಬೇಸರಿಸಿದಳು ಅನ್ನೋಣ. ಎದ್ದುಹೋಗಿ ಜಾಜಿ ಹೂ ಮೂಸುತ್ತಾ ನಕ್ಷತ್ರ ನೋಡುತ್ತಾ ನಿಲ್ಲೋಣವೆನಿಸಿತು. ಆದರೆ ಅವಳು ಮತ್ತು ನಾನು ಇಬ್ಬರೂ ಮುನಿಸಿಪಲ್ ಗಮ್ ಟ್ರೀ ಎಂದೆನಿಸಿ ನನಗೆ ತೋಚಿದ ರೀತಿಯಲ್ಲಿ ಸಮಾಧಾನ ಮಾಡಿದೆ.

ಇದನ್ನೆಲ್ಲಾ ಬರೆಯುತ್ತಿರುವಾಗ ನಿಂಬೆ ಗಿಡ ಕವಿತೆ ನಾಲಿಗೆಯ ಮೇಲೆ ಕುಣಿಯುತ್ತಿದೆ. ಬಿ ಆರ್ ಲಕ್ಷ್ಮಣ್ ರಾಯರ ಕವಿತೆ ‘ನಿಂಬೆ ಗಿಡ ತುಂಬಾ ಚೆಂದ, ನಿಂಬೆಯ ಹೂವು ತುಂಬಾ ಸಿಹಿ, ಆದರೆ ನಿಂಬೆಯ ಹಣ್ಣು ಕಂದ ತಿನ್ನಲು ಬಹಳ ಹುಳಿ ಕಹಿ’. ಅದೊಂದು ಕಾಲದ ಬೆಂಗಳೂರಿನಲ್ಲಿ ಚಿಕ್ಕ ಪೋರ್ಟಬಲ್ ಟೇಪ್ ರೆಕಾರ್ಡರಿನಲ್ಲಿ ಟಿ ಸೀರೀಸ್ ಕ್ಯಾಸೆಟ್ ‘ಸುಬ್ಬಾ ಭಟ್ಟರ ಮಗಳೆ’ ಹಾಕಿಕೊಂಡು ಕೇಳಿದ್ದೆ ಕೇಳಿದ್ದು. ಆಕಾಶದ ಸೀರೆಯನ್ನು, ಜಾಜಿಹೂವಿನ ಸೆರಗನ್ನು, ನಿಂಬೆಹೂವಿನ ಬೆರಗನ್ನು, ದುಂಬಿ ಝೇಂಕಾರವನ್ನು ನೆನೆಯಬೇಕು. ನೆನೆಯುತ್ತಲೇ ಇರಬೇಕು.


ಮುನಿಸಿಪಲ್ ಗಮ್ ಟ್ರೀ ಕೂಡ ಎತ್ತರೆತ್ತರಕ್ಕೆ ಬೆಳೆಯುತ್ತದೆಯಲ್ಲವೆ. ಚಳಿ ಕಳೆದು ವಸಂತ ಬರುತ್ತದೆ. ಮರುವರ್ಷ ಮತ್ತೆ ಚಳಿ ಬಂದೇಬರುತ್ತದೆ. ಓಡುತ್ತಿರುವ ದಿನಗಳನ್ನು ಯಾಕೆ ನಿಲ್ಲಿಸಬೇಕು? ದಿನಗಳೊಡನೆ ನಾನೂ, ನನ್ನೊಡನೆ ಕಾಲ, ಜಾಜಿ, ಘಮ, ದುಂಬಿ ಎಲ್ಲವೂ ನಡೆಯುತ್ತಿವೆ ಅಲ್ಲವೆ. ಎಲ್ಲಾ ಭಾವನೆಗಳಿಗೂ ಇದೆ ಅವುಗಳದ್ದೇ ಘನತೆ!