ಡಾರ್ಕ್ ಹ್ಯೂಮರ್ ನಮ್ಮ ಸಮಾಜದಲ್ಲಿ ಬೆಳೆಯದಿರುವುದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದು ಮೇಲ್ ಸಮುದಾಯದ ಜನರು ಡಾರ್ಕ್ ಹ್ಯೂಮರ್ ಅನ್ನು ಸಹಿಸಿಕೊಳ್ಳುವಷ್ಟು ಹೃದಯ ವೈಶಾಲ್ಯ ಹೊಂದಿರದಿರುವುದು. ಎರಡನೆಯದು ಕೆಲ ಸಮುದಾಯಗಳು ಡಾರ್ಕ್ ಹ್ಯೂಮರ್ ತಡೆದುಕೊಳ್ಳುವಷ್ಟು ಸಾಮಾಜಿಕ ಬಲಿಷ್ಠತೆ ಪಡೆಯದಿರುವುದು. ಜಾತಿ, ಧರ್ಮ, ಲಿಂಗ, ಭೂಗೋಳ, ಸಮಾಜ, ವೇಷಭೂಷಣ, ಪ್ರಾಣಿದಯೆ, ನಿಷೇಧಗಳು ಇತ್ಯಾದಿಗಳನ್ನು ಫಿಲ್ಟರ್ ಮಾಡುತ್ತಾ ಬಂದರೆ ಡಾರ್ಕ್ ಹ್ಯೂಮರ್ ಗೆ ಗುರಿಯಾಗಿ ಉಳಿಯುವುದು ಮೇಲ್ಜಾತಿಯ ಗಂಡಸು ಮಾತ್ರ!
ಶ್ರೀಹರ್ಷ ಸಾಲಿಮಠ ಅಂಕಣ

 

ಕನ್ನಡದಲ್ಲಿ ಡಾರ್ಕ್ ಹ್ಯೂಮರ್ ಪ್ರಯೋಗಗಳು ಕಡಿಮೆ ಎನ್ನಿಸುತ್ತದೆ. ಡಾರ್ಕ್ ಹ್ಯೂಮರ್ ಎಂದರೆ ನಿಷಿದ್ಧವಾದ ವಿಷಯದ ಬಗ್ಗೆ ಹಾಸ್ಯ ಮಾಡುವುದು. ಹಾಸ್ಯ ಬಿಟ್ಟು ಬೇರೆಲ್ಲಾ ರಸಗಳು ಹಾಸ್ಯವನ್ನು ಉಕ್ಕಿಸಿದರೆ ಅದು ಡಾರ್ಕ್ ಹ್ಯೂಮರ್. ಕಥೆಯ ಭಾವ ಕರುಣ ರಸವಾಗಿದ್ದು ಓದುಗರಲ್ಲಿ ಅಥವಾ ಕೇಳುಗರಲ್ಲಿ ಹಾಸ್ಯವನ್ನು ಉಕ್ಕಿಸಿದರೆ ಅದು ಡಾರ್ಕ್ ಹ್ಯೂಮರ್. ಈ ಮುಂಚೆ ನಿರ್ಧರಿಸಲಾದ ಪೂರ್ವಾಗ್ರಹಗಳು ಸಭ್ಯತೆ ಅಸಭ್ಯತೆಗಳ ಎಲ್ಲೆಯನ್ನು ದಾಟಿ ಮಾಡುವ ಹಾಸ್ಯವೆ ಡಾರ್ಕ್ ಹ್ಯೂಮರ್.

ಶರಣರ ಕೆಲವು ವಚನಗಳಲ್ಲಿ ಡಾರ್ಕ್ ಹ್ಯೂಮರ್ ನ ಕೆಲವು ಛಾಯೆಗಳು ಕಂಡುಬರುತ್ತವೆ. ಕುಂ ವೀರಭದ್ರಪ್ಪನವರು ಹಸಿವನ್ನು ಬಣ್ಣಿಸುವಾಗ “ಬೇಧಿಯಾದರೆ ಹೊಟ್ಟೆ ಖಾಲಿಯಾಗುತ್ತಲ್ಲಾ ಎಂದು ಸಂಕಟಪಡುವನು”, “ಮತ್ತೊಬ್ಬ ಸಣ್ಣ ಹುಡುಗ ತನಗಿಂತ ಎರಡು ತೊಲ ಹೆಚ್ಚು ಬೇಧಿ ಮಾಡಿದ್ದಾನಲ್ಲಾ” ಎಂದು ವ್ಯಥೆಪಡುವುದನ್ನು ವರ್ಣಿಸುವುದು ಈ ರೀತಿಯ ಡಾರ್ಕ್ ಹ್ಯೂಮರ್ ನ ವ್ಯಾಪ್ತಿಯಲ್ಲಿ ಬರುತ್ತವೆ.

ಡಾರ್ಕ್ ಹ್ಯೂಮರ್ ಎಂದರೆ ನಗೆಯನ್ನು ಉಕ್ಕಿಸುವುದರ ಜೊತೆಗೆ ಸಣ್ಣ ಕಸಿವಿಸಿಯನ್ನು ಸಹ ಕೇಳುಗರಲ್ಲಿ ಉಂಟುಮಾಡಬೇಕು. ನಗೆ ಇರುಸು ಮುರುಸಿನ ಜೊತೆಗೆ ಬರಬೇಕು. ಬಹುತೇಕ ಡಾರ್ಕ್ ಹ್ಯೂಮರ್ ಗಳು ಸಾವು, ಒಂಟಿತನ, ಮುದುಕರು, ಚಿಕ್ಕ ಮಕ್ಕಳ ಸುತ್ತ ಇರುತ್ತವೆ. ಯಾವುಗಳ ಸುತ್ತ ತಮಾಷೆ ಸಲ್ಲದು ಎಂಬ ಸಾಮಾಜಿಕ ನಿಷೇಧಗಳಿವೆಯೋ ಅಲ್ಲಿಂದ ಡಾರ್ಕ್ ಹ್ಯೂಮರ್ ಹುಟ್ಟುತ್ತದೆ. ಶೃಂಗಾರ ರಸದಲ್ಲಿ ಹುಟ್ಟುವ ಡಾರ್ಕ್ ಹ್ಯೂಮರ್ ನಲ್ಲಿ ಅಶ್ಲೀಲತೆಗೂ ಕೊಂಚ ಜಾಗವುಂಟು. ಒಂದು ಪದದಲ್ಲಿ ಡಾರ್ಕ್ ಹ್ಯೂಮರ್ ಎಂದರೆ Brutal! ಕ್ರೌರ್ಯ ಮತ್ತು ಒರಟುತನ ಎಂಬುದು ಡಾರ್ಕ್ ಹ್ಯೂಮರ್ ನ ಸ್ಥಾಯಿಭಾವ.

ಒಂದು ಉದಾಹರಣೆ ಕೊಡುವುದಾದರೆ,

ನಾನು ಮತ್ತು ನನ್ನ ಹೆಂಡತಿ ಮಕ್ಕಳು ಬೇಡ ಅಂತ ನಿರ್ಧರಿಸಿದ್ದೇವೆ.
ಯಾರಿಗಾದರೂ ಬೇಕಿದ್ದಲ್ಲಿ ನಿಮ್ಮ ಮನೆಯ ಮುಂದೆ ಬಿಟ್ಟು ಹೋಗುವೆವು.

ಇನ್ನೊಂದು

ಒಬ್ಬ ಹೆಣ್ಣುಮಗಳು ಪದೇ ಪದೇ ಹೊಟ್ಟೆ ನೋವು ಬಂದು ವೈದ್ಯರ ಬಳಿ ಹೋದಳು.
ವೈದ್ಯರು ಹಲವು ಟೆಸ್ಟ್ ಗಳನ್ನು ಮಾಡಿಸಿ ನೋಡಿ ಹೀಗೆ ಕೇಳಿದರು,
“ನಿಮಗೆ ನ್ಯಾಪಿ ಮತ್ತು ಡೈಪರ್ ಗಳನ್ನು ಬದಲಿಸುವುದು ಇಷ್ಟವೇ?”
ಆಕೆ (ಖುಷಿಯಿಂದ) “ಓಹೊ.. ನಾನು ತಾಯಿಯಾಗಲಿದ್ದೇನೆಯೇ?” .
“ಇಲ್ಲ.. ನಿಮಗೆ ಕರುಳಿನ ಕ್ಯಾನ್ಸರ್ ಇದೆ”

ಒಬ್ಬ ಲೈಬ್ರರಿಗೆ ಹೋಗಿ “ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ” ಎಂಬ ಪುಸ್ತಕ ಇದೆಯೇ ಅಂತ ಕೇಳಿದ.
“ಇದೆ. ಆದರೆ ಕೊಡುವುದಿಲ್ಲ. ಯಾಕೆಂದರೆ ಅದನ್ನು ನೀನು ವಾಪಸು ತಂದುಕೊಡುವುದಿಲ್ಲ.”

ಡಾರ್ಕ್ ಹ್ಯೂಮರ್ ಬರೆಯುವವರ ಐಕ್ಯೂ ಕೊಂಚ ಹೆಚ್ಚಿರುತ್ತದೆ ಅಂತ ಕೆಲವು ಮನಶಾಸ್ತ್ರಜ್ಞರು ಹೇಳುತ್ತಾರೆ. ಡಾರ್ಕ್ ಹ್ಯೂಮರ್ ಗಾಗಿ ಇಂಡಿಯಾದಲ್ಲಿ ಸಿಗುವಷ್ಟು ಸರಕು ಬೇರಾವ ದೇಶದಲ್ಲೂ ಸಿಗುವುದಿಲ್ಲ. ಆದರೆ ಅತಿಯಾದ ಬೌದ್ಧಿಕ ಸೂಕ್ಷ್ಮತೆಯಿಂದಾಗಿ ಇಲ್ಲಿ ಸಾಹಿತ್ಯದ ಇದೊಂದು ಕವಲು ಬೆಳೆಯಲೇ ಇಲ್ಲ ಎನ್ನಬಹುದು. ನಾನು ಕೆಲವು ವರ್ಷಗಳ ಹಿಂದೆ ಹೀಗೆ ಬರೆದಿದ್ದೆ,

“ಸಿಸೇರಿಯನ್ ನಿಂದ ಹುಟ್ಟಿದವರನ್ನು ಅಯೋನಿಜರು ಎಂದು ಕರೆಯಬಹುದು.”

ಇದನ್ನು ಓದಿ ಕೆಲವರು ಸಹಜವಾಗಿಯೇ ಉರಿದುಬಿದ್ದರು. ಆದರೆ ಅದೇ ಜನ ತ್ರೀ ಇಡಿಯಟ್ಸ್ ನ ಚತುರ್ ರಾಮಲಿಂಗಮ್ ನ “ಬಲಾತ್ಕಾರ್” ಭಾಷಣಕ್ಕೆ ಬಿದ್ದು ಬಿದ್ದು ನಕ್ಕರು. ಈ ಭಾಷಣ ದಾರಿ ತಪ್ಪಿ ಕೆಟ್ಟು ಕೆರ ಹಿಡಿದ ಡಾರ್ಕ್ ಹ್ಯೂಮರ್ ನ ಒಂದು ಉದಾಹರಣೆ. ಡಾರ್ಕ್ ಹ್ಯೂಮರ್ ಅನ್ನು ಒಪ್ಪಿಕೊಳ್ಳುವ ಮನಃಸ್ಥಿತಿ ಕನ್ನಡ ಓದುವ ಜನರಲ್ಲಿ ಇನ್ನೂ ಬಂದಿಲ್ಲ ಎಂದೇ ಹೇಳಬಹುದು. ಬಹಳ ಸುಲಭವಾಗಿ ಮನನೋಯಿಸಿಕೊಳ್ಳುವ ದುಶ್ಚಟವೊಂದು ಜನರಲ್ಲಿ ಮನೆ ಮಾಡಿರುವವರೆಗೆ ಇದು ಅಸಾಧ್ಯ.

ಹಿಂದೆ ನಾನು ಮಾಡಿದ ಕೆಲವು ಡಾರ್ಕ್ ಹ್ಯೂಮರ್ ನ ಪ್ರಯೋಗಗಳು ತೀವ್ರ ಪ್ರತಿರೋಧವನ್ನು ಎದುರಿಸಿವೆ. ಶ್ರೀನಿವಾಸ ವೈದ್ಯರು ನನ್ನ ಪ್ರಯೋಗವನ್ನೋದಿ “ಇದನ್ನು ನಿಜಕ್ಕೂ ಪ್ರಿಂಟ್ ಮಾಡಬೇಕೇನ್ರೀ?” ಅಂತ ಅಂತ ಕಣ್ಣು ಕೆಂಪಾಗಿಸಿಕೊಳ್ಳಲು ಪ್ರಯತ್ನಿಸಿದ್ದರು. ನಾನು ಬಹಳ ಪ್ರೀತಿಯಿಂದ ಬರೆದಿದ್ದ ಬರಹವದು! ಹದಿವಯಸ್ಸಿಗೆ ಕಾಲಿಡುತ್ತಿರುವ ಹುಡುಗನೊಬ್ಬ ಮೈಥುನ ನಿರತ ಜೋಡಿಗಳನ್ನು ಹುಡುಕಿಕೊಂಡು ರಾತ್ರಿಯ ಹೊತ್ತು ಹೊರಡುವ ಕಲ್ಪನೆಯೇ ಅವರಿಗೆ ಆಘಾತ ತರಿಸಿತ್ತು. ನಿಜ ಹೇಳಬೇಕೆಂದರೆ ಅದು ಕಲ್ಪನೆಯಾಗಿರಲಿಲ್ಲ. ಆ ರೀತಿಯ ವ್ಯಕ್ತಿಗಳು ನಿಜವಾಗಿಯೂ ಇದ್ದಾರೆ. ಒಂದು ಸಾಂಸ್ಕೃತಿಕ ಕವಚದಲ್ಲಿ ಬೆಳೆದುಬಂದ ಜನಗಳ ಅತಿ ದೊಡ್ಡ ಕೊರತೆಯೇ ಇದು. ತನಗೆ ಗೊತ್ತಿಲ್ಲದ್ದು ಜಗತ್ತಿನಲ್ಲಿ ಇರಲು ಸಾಧ್ಯವೇ ಇಲ್ಲ ಎಂಬ ಗಟ್ಟಿ ನಂಬಿಕೆ ಜೊತೆಗೆ ಸಮಾಜದಲ್ಲಿ ಹುಟ್ಟಿನ ಕಾರಣದಿಂದ ಬಿಟ್ಟಿಯಾಗಿ ಪಡೆದ ಗೌರವದಿಂದ ಹುಟ್ಟಿದ ಅಹಂಕಾರ. ಇವು ಹೊಸ ಪ್ರಯೋಗಗಳನ್ನು ಆಗಗೊಡುವುದಿಲ್ಲ.

ಮತ್ತೊಬ್ಬ ವಿಮರ್ಶಕರು ನನ್ನ ಬರಹದಲ್ಲಿ ಸಾಮಾಜಿಕ ಬದ್ಧತೆಯ ಕೊರತೆ ಇದೆ ಎಂದು ಅವಲತ್ತುಕೊಂಡಿದ್ದರು. ಡಾರ್ಕ್ ಹ್ಯೂಮರ್ ನಲ್ಲಿ ಕರುಣ ರಸವೇನಿದ್ದರೂ ಪೋಷಕ ಪಾತ್ರ ಮಾತ್ರ! ಸಾಮಾಜಿಕ ಬದ್ಧತೆ ಎಂದರೆ ಕರುಣ ರಸ ಉಕ್ಕಿಸುವ ಗೋಳು ಮಾತ್ರ ಎಂಬುದು ಅವರ ಅಭಿಪ್ರಾಯದಂತಿತ್ತು. ಅದರಲ್ಲೂ ಲಿಂಗಾಯತ ಓಣಿಯಲ್ಲಿ ದಲಿತವರ್ಗದವನೊಬ್ಬ ಮನೆ ಕೊಂಡುಕೊಳ್ಳುವುದು ಶುದ್ಧ ಸುಳ್ಳು ಎಂಬುದಾಗಿ ಬರೆದಿದ್ದರು. “ಬೇಕಿದ್ದರೆ ನಿಮಗೆ ಅಗ್ರಹಾರದಲ್ಲಿ ಮನೆ ಕೊಂಡುಕೊಂಡ ದಲಿತರನ್ನು ತೋರಿಸುತ್ತೇನೆ ಬನ್ನಿ” ಅಂತ ಅವರಿಗೆ ನಾನು ಸವಾಲು ಹಾಕಬೇಕಾಯಿತು. ಕಡೆಗೆ ನೀವು ಇನ್ನೂ ಹೆಚ್ಚು ಓದಬೇಕು. ಓದಿದರೆ ಯಾವ ರೀತಿ ಬರೆಯಬೇಕು ಎಂಬುದರ ಪರಿಕಲ್ಪನೆ ಬೆಳೆಯುತ್ತದೆ. ಆ ಆಧಾರದ ಮೇಲೆ ಕತೆಗಳನ್ನು ಬೆಳೆಸಬೇಕು ಅಂದರು. ನನ್ನ ಸಂಗ್ರಹದಲ್ಲಿದ್ದ ಮೂರು ಸಾವಿರ ಪುಸ್ತಕಗಳು ನನ್ನ ಕಡೆ ನೋಡಿ ಗಹಗಹಿಸಿ ನಕ್ಕಂತಾಯಿತು.

ಮತ್ತೊಂದು ಸಂದರ್ಭದಲ್ಲಿ ಅವರೇ ಮಾತಾಡುತ್ತಾ “ನೋಡಿ ನನಗೆ ಪುಸ್ತಕಗಳನ್ನು ಓದುವುದು ಅಂದರೆ ಆಗುವುದಿಲ್ಲ. ಸಂಗ್ರಹಿಸಿ ಇಟ್ಟುಕೊಳ್ಳುವುದು ಮಾತ್ರ ನನಗಿಷ್ಟ. ಪುಸ್ತಕ ಓದುವುದು ಸೃಜನಶೀಲತೆಯನ್ನು ಕೊಲ್ಲುತ್ತದೆ” ಅಂತ ಹೇಳಿದರು. ಈಗ ನನ್ನ ಬರಹವನ್ನು ಕೊಂದಿದ್ದು, ನಾನು ಪುಸ್ತಕ ಓದಿದ್ದೋ ಅಥವಾ ಓದದಿದ್ದದ್ದೋ ಎಂಬ ಗೊಂದಲವೇ ಒಂದು ದೊಡ್ಡ ಡಾರ್ಕ್ ಹ್ಯೂಮರ್ ಆಗಿ ಹೋಯಿತು.

ಡಾರ್ಕ್ ಹ್ಯೂಮರ್ ಎಂದರೆ ನಗೆಯನ್ನು ಉಕ್ಕಿಸುವುದರ ಜೊತೆಗೆ ಸಣ್ಣ ಕಸಿವಿಸಿಯನ್ನು ಸಹ ಕೇಳುಗರಲ್ಲಿ ಉಂಟುಮಾಡಬೇಕು. ನಗೆ ಇರುಸು ಮುರುಸಿನ ಜೊತೆಗೆ ಬರಬೇಕು.

ಡಾರ್ಕ್ ಹ್ಯೂಮರ್ ನಮ್ಮ ಸಮಾಜದಲ್ಲಿ ಬೆಳೆಯದಿರುವುದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದು ಮೇಲ್ ಸಮುದಾಯದ ಜನರು ಡಾರ್ಕ್ ಹ್ಯೂಮರ್ ಅನ್ನು ಸಹಿಸಿಕೊಳ್ಳುವಷ್ಟು ಹೃದಯ ವೈಶಾಲ್ಯ ಹೊಂದಿರದಿರುವುದು. ಎರಡನೆಯದು ಕೆಲ ಸಮುದಾಯಗಳು ಡಾರ್ಕ್ ಹ್ಯೂಮರ್ ತಡೆದುಕೊಳ್ಳುವಷ್ಟು ಸಾಮಾಜಿಕ ಬಲಿಷ್ಠತೆ ಪಡೆಯದಿರುವುದು. ಜಾತಿ, ಧರ್ಮ, ಲಿಂಗ, ಭೂಗೋಳ, ಸಮಾಜ, ವೇಷಭೂಷಣ, ಪ್ರಾಣಿದಯೆ, ನಿಷೇಧಗಳು ಇತ್ಯಾದಿಗಳನ್ನು ಫಿಲ್ಟರ್ ಮಾಡುತ್ತಾ ಬಂದರೆ ಡಾರ್ಕ್ ಹ್ಯೂಮರ್ ಗೆ ಗುರಿಯಾಗಿ ಉಳಿಯುವುದು ಮೇಲ್ಜಾತಿಯ ಗಂಡಸು ಮಾತ್ರ! ಇದು ಬಿಟ್ಟರೆ ಬಹಳ ಲಿಂಗ ತಟಸ್ಥ, ಜಾತಿ ತಟಸ್ಥ, ರಾಜಕೀಯ ತಟಸ್ಥ ನಗೆಹನಿಗಳನ್ನು ಹುಟ್ಟುಹಾಕಬೆಕಾಗುತ್ತದೆ. ಇದು ಅಪಾರ ಸೃಜನಶೀಲತೆ ಬೇಡುವ ಕಡುಕಷ್ಟದ ಕೆಲಸ.

ಇವೆಲ್ಲರ ನಡುವೆಯೂ ಕನ್ನಡದಲ್ಲಿ ಡಾರ್ಕ್ ಹ್ಯೂಮರ್ ಅಲ್ಲೊಂದಿಲ್ಲೊಂದು ಕಾಣುತ್ತವೆ. ಬಿ ಆರ್ ಲಕ್ಷ್ಮಣರಾವ್ ಅವರ “ಜಾಲಿ ಬಾರಿನಲ್ಲಿ ಕೂತು ಪೋಲಿ ಗೆಳೆಯರು” ಇದಕ್ಕೆ ಅತ್ಯುತ್ತಮ ಉದಾಹರಣೆ. ಕ್ಯಾಬರೆ ನೃತ್ಯ ಅಶ್ಲೀಲವೆನ್ನಿಸಿದ್ದ ಕಾಲಘಟ್ಟದಲ್ಲಿ ಅದಕ್ಕೆ ಹಾಸ್ಯದ ಆಯಾಮವೊಂದನ್ನು ಒದಗಿಸಿ ಜನಪ್ರಿಯವಾಗಿಸಿದ್ದು ಡಾರ್ಕ್ ಹ್ಯೂಮರ್ ನ ಶಕ್ತಿಯ ಉದಾಹರಣೆ. ಕಾಫ್ಕಾನ ಮೆಟಾಮಾರ್ಫಾಸಿಸ್ ಕತೆಯ ಕೊನೆಯಲ್ಲಿ ಗ್ರೆಗರ್ ನ ಕೋಣೆಯನ್ನು ಸ್ವಚ್ಛಗೊಳಿಸಲು ಬಂದ ಕೆಲಸದಾಕೆ ಆತನಿಗೆ ಪೊರಕೆಯ ಮುಖಾಂತರ ಕಚಗುಳಿ ಇಟ್ಟು ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಆತ ಸತ್ತನೆಂಬ ಸುದ್ದಿಯನ್ನು ತಿಳಿಸಲು “Go and look it’s croaked; it’s lying there absolutely crooked.” ಅಂತ ಉದ್ಗರಿಸುತ್ತಾಳೆ. ಮನುಷ್ಯ ಸತ್ತನೆಂಬ ಸುದ್ದಿಯನ್ನು ಕೀಟ ಸತ್ತಿತೆಂಬ ಸುದ್ದಿಯೊಂದಿಗೆ ಸಮೀಕರಿಸಿ ಶ್ಲೇಷೆಯ ಮುಖಾಂತರ ಕಾಫ್ಕಾ ಹೇಳುತ್ತಾನೆ.

ಕೆಲಸ ವರ್ಷಗಳ ಹಿಂದೆ ಕನ್ನಡದ ಫೇಸ್ ಬುಕ್ ಟ್ರೋಲ್ ಪೇಜ್ ಒಂದು ಕೈಗೆ ಗಾಯವಾಗಿದ್ದರ ಬಗ್ಗೆ ರಂಪ ಮಾಡುವ ಹುಡುಗಿಯರನ್ನು ಕುಚೋದ್ಯ ಮಾಡುತ್ತಾ “ತಿಂಗಳಿಗೆ ಮೂರು ದಿನ ರಕ್ತ ಸುರಿಯುತ್ತೆ ಆ ಸಮಯದಲ್ಲಿ ನೋವಾಗೋಲ್ವಾ” ಎಂಬರ್ಥದ ಜೋಕ್ ಅನ್ನು ಪೋಸ್ಟ್ ಮಾಡಿದ್ದರು. ಇದು ತೀವ್ರತರವಾದ ಆಕ್ರೋಶಕ್ಕೆ ಕಾರಣವಾಗಿ ಕೆಲವೇ ತಾಸುಗಳಲ್ಲಿ ಆ ಜೋಕನ್ನು ಅಳಿಸಿ ಆ ಪೇಜ್ ನವರು ಕ್ಷಮೆ ಕೇಳಿದರು. ನಿಜ ಹೇಳಬೇಕೆಂದರೆ ಪಾಶ್ಚಾತ್ಯ ದೇಶಗಳಲ್ಲಿ ಈ ರೀತಿಯ ನಗೆಹನಿಗಳು ಸರ್ವೇ ಸಾಮಾನ್ಯ. ಗಂಡಸಿಗೆ ಬಹುತೇಕ ಸಮಾನ ಪ್ರಾತಿನಿಧ್ಯ ಹೊಂದಿರುವ ದೇಶಗಳಲ್ಲಿ ಈ ರೀತಿಯ ನಗೆಹನಿಗಳನ್ನು ಬರಮಾಡಿಕೊಳ್ಳುವುದಕ್ಕೂ ಇವತ್ತಿಗೂ ಹೆಣ್ಣುಮಕ್ಕಳ ಪ್ರಾತಿನಿಧ್ಯಕ್ಕಾಗಿ ಹೋರಾಡುತ್ತಿರುವ ಭಾರತದಂತಹ ದೇಶಗಳು ಬರಮಾಡಿಕೊಳ್ಳುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಹಾಗಾಗಿ ಕಪ್ಪು ನಗೆಹನಿಗಳನ್ನು ಹುಟ್ಟುಹಾಕುವ ಮುಂಚೆ ಸಾಕಷ್ಟು ಬಾರಿ ಯೋಚಿಸಬೇಕಾಗುತ್ತದೆ. ಈ ರೀತಿಯ ನಗೆಹನಿಗಳು ದುರ್ಬಲ ವರ್ಗವನ್ನು ಗುರಿಯಾಗಿಸಿಕೊಳ್ಳುವದರಿಂದ ಕೆಲಸಮುದಾಯದ ಸಧ್ಯದ ಸಾಮಾಜಿಕ ಸ್ಥಾನಮಾನಗಳಿಗೆ ಚ್ಯುತಿ ಉಂಟುಮಾಡುವ ಅಪಾಯವೂ ಇದೆ.

ಅನೇಕರಿಗೆ ತಾವು ಮಾಡುವ ನಗೆಹನಿಗಳು ಕಪ್ಪು ಬಣ್ಣದವು ಅಂತ ಗೊತ್ತಿರುವುದಿಲ್ಲ. ಉದಾಹರಣೆಗೆ ನಾವು ಚಿಕ್ಕಂದಿನಿಂದ ಕೇಳಿಕೊಂಡು ಬಂದ ಈ ನಗೆಹನಿ,

ಶಾಲೆಗೆ ಬೆಂಕಿ ಬಿದ್ದಿತ್ತು. ಮಕ್ಕಳೆಲ್ಲಾ ಖುಷಿಯಿಂದ ಕುಣಿದು ಕುಪ್ಪಳಿಸುತ್ತಿದ್ದರೆ ಒಬ್ಬ ಹುಡುಗ ಮಾತ್ರ ಅಳುತ್ತಾ ಕೂತಿದ್ದ. ಆತನನ್ನು ನೋಡಿ ಮೆಚ್ಚಿದ ಮೇಷ್ಟ್ರು “ಇಷ್ಟು ಜನರಲ್ಲಿ ನೀನಾದರೂ ಶಾಲೆಯನ್ನು ಪ್ರೀತಿಸುವವನಿದ್ದೀಯಲ್ಲಪ್ಪಾ.. ಬಹಳ ಖುಷಿಯಾಯಿತು” ಅಂದರು.

ಆ ಹುಡುಗ “ಶಾಲೆ ಸುಟ್ಟು ಹೋದರೇನು ಮೇಷ್ಟ್ರೇ, ನೀವು ಇನ್ನೂ ಇದ್ದೀರಲ್ಲ… ಮತ್ತೆ ಕಟ್ಟುತ್ತೀರಿ ಅಂತ ಅಳುತ್ತಿದ್ದೇನೆ” ಅಂದ.

ಒಬ್ಬ ಪ್ಯಾರಾಶೂಟ್ ಅಂಗಡಿಗೆ ಹೋಗಿ ಕೇಳಿದ “ನಿಮ್ಮ ಪ್ಯಾರಾಶೂಟ್ ಗುಣಮಟ್ಟ ಒಳ್ಳೆಯದಿದೆಯಾ?”
ಅಂಗಡಿಯವ ಹೇಳಿದ “ಖಂಡಿತಾ ಹೌದು ಸರ್.. ಇಲ್ಲಿಯವರೆಗೂ ಇದು ಬಿಚ್ಚಿಕೊಂಡಿಲ್ಲ ಅಂತ ಯಾರೂ ಕಂಪ್ಲೇಂಟ್ ಮಾಡಿಲ್ಲ.”

ಸೂಕ್ತವಾಗಿ ಬಳಸಿಕೊಂಡರೆ ಡಾರ್ಕ್ ಹ್ಯೂಮರ್ ಎಂಬುದು ಪ್ರಬಲ ಸಾಹಿತ್ಯಿಕ ಆಯುಧ. ನಮ್ಮ ಜೀವನದ ಭಾರವನ್ನು, ಸಾಮಾಜಿಕ ಸ್ಥಾನಮಾನಗಳನ್ನು ಬೇರೆಯದೇ ಕಣ್ಣಿನಿಂದ ಹಗುರ ಮನಸ್ಸಿನಿಂದ ನೋಡುವಂತೆ ಮಾಡುತ್ತದೆ. ಸಧ್ಯದ ಪರಿಸ್ಥಿತಿಯಲ್ಲಿ ಎಡಬಲಗಳಲ್ಲಿ ಹಂಚಿಹೋಗಿರುವ ಯುವಬರಹಗಾರರಲ್ಲಿ ಡಾರ್ಕ್ ಹ್ಯೂಮರ್ ಅನ್ನು ಪ್ರಯೋಗಿಸುವಷ್ಟು ಎಂಟೆದೆ ಇರುವವರು ಯಾರಾದರೂ ಇದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಶಂಬು ಬಳಿಗಾರರ ‘ತೊಗರಿ ತಿಪ್ಪ’ ಜಾನಪದ ಕಥಾವಾಚನದಲ್ಲಿ ಮತ್ತೊಂದು ಡಾರ್ಕ್ ಹ್ಯೂಮರ್ ನ ಪ್ರಸಂಗ ಬರುತ್ತದೆ.

ಒಂದೂರಿನಲ್ಲಿ ಜಮೀನ್ದಾರ ದಪ್ಪಗಿದ್ದ.
ತಿಪ್ಪ ಒಂದು ದಿನ ಆತನನ್ನು ನೋಡಿ ಕಿಸಕ್ಕನೆ ನಕ್ಕ.
ಜಮೀನುದಾರರು ತಿಪ್ಪನ್ನನು ಹಿಡಿದು “ಯಾಕೋ ತಿಪ್ಪ ನಕ್ಕೆ?” ಅಂತ ಕೇಳಿದರು.
“ಏನಿಲ್ರೀ ನೀವು ಮನಿ ಒಳಾಗ ಸತ್ತ ಹೋದರ ನಿಮ್ಮನ್ನ ಹೆಂಗ ಹೊರಗ ಕರ್ಕೊಂಡು ಬರ್ತಾರ. ಬಾಗಿ ನೋಡಿದರ ಆಟು ಸಣ್ಣದೈತಿ ನೀವು ಇಷ್ಟು ದಪ್ಪ ಅದೀರಿ” ಅಂದ.

ಜಮೀನುದಾರ ಸಿಟ್ಟು ಬಂದು ತಿಪ್ಪನನ್ನು ಮರಕ್ಕೆ ಕಟ್ಟಿ ಹಾಕಿ ಅವರಪ್ಪನಿಗೆ ಹೇಳಿ ಕಳಿಸಿದ.
ತಿಪ್ಪನ ಅಪ್ಪ ಬಂದು ವಿಚಾರ ಏನೆಂದು ತಿಳಿದು,
“ಕ್ಷಮಾ ಮಾಡ್ರಿ.. ಅವನಿಗೆ ನಾನು ಬುದ್ದಿ ಹೇಳ್ತಿನಿ” ಅಂತ ಅಂದು ಮಗನ ಕಡೆ ತಿರುಗಿ
“ಲೇ ತಿಪ್ಪಾ.. ಅಷ್ಟು ಗೊತ್ತಾಗಲ್ಲೇನಲೆ ಜಮೀನುದಾರರು ಒಳಾಗ ಸತ್ರ ಅವರ ಕೈ ಕಾಲು ತುಂಡು ತುಂಡು ಮಾಡಿ ಹೆಣ ಹೊರಗ ತರ್ತಾರ” ಅಂದ.

ಜಮೀನುದಾರನಿಗೆ ಮತ್ತಷ್ಟು ರೇಗಿ ಹೋಯಿತು. ತಿಪ್ಪನ ಅಪ್ಪನನ್ನು ಕಟ್ಟಿ ಹಾಕಿ ಅವನ ಅಪ್ಪನನ್ನು ಕರೆತರಲು ಕಳಿಸಿದ.

ತಿಪ್ಪನ ಅಜ್ಜ ಬಂದು ಮಕ್ಕಳ ಸ್ಥಿತಿ ನೋಡಿ ವಿಷಯ ತಿಳಿದುಕೊಂಡು “ಅವರಿಗೆ ನಾನು ಬುದ್ದಿ ಹೇಳ್ತಿನ್ರಿ” ಅಂತ ಗಲ್ಲ ಗಲ್ಲ ಬಡಿದು ಕೇಳಿಕೊಂಡು,
“ಲೇ ಧಣೇರು ಸತ್ರ ಕೈ ಕಾಲು ಯಾಕ ತುಂಡು ಮಾಡಬೇಕು? ಮುಂದಿನ ಬಾಗಲ ಒಡದು ಅಗಲ ಮಾಡಿದರ ಇಡೇ ಹೆಣಾ ಹಂಗ ಹೊರಾಗ ತರಬೋದು”
ಅಂತ ಅಂದ!

ನಮ್ಮ ಜನಪದರಲ್ಲಿ ಸಾವನ್ನು, ಲೈಂಗಿಕತೆಯನ್ನು ಜೀವನದ ಸಹಜ ಭಾಗವಾಗಿ ಸ್ವೀಕರಿಸಿದ ಈ ರೀತಿಯ ಕಪ್ಪು ಹಾಸ್ಯ ಹೇರಳವಾಗಿ ಕಂಡುಬರುತ್ತದೆ. ಬಿಳಿಗಿರಿರಂಗನ ಕಾವ್ಯ ಇರಬಹುದು, ನಂಜುಂಡ ದೇವೀರಿ ಚಾಮುಂಡಿಯರ ಕಳ್ಳ ಸಂಬಂಧಗಳಿರಬಹುದು ಎಲ್ಲವೂ ಜನಪದರಿಗೆ ಹಾಸ್ಯದ ವಸ್ತುಗಳೇ! ದೇವರನ್ನು ಭಯದಿಂದ ದೂರವಿಟ್ಟು ನೋಡದೆ ಗೆಳೆಯನಂತೆ ಕಂಡು ತಮ್ಮ ನಂಬುಗೆಗಳೊಂದಿಗೆ ಸಹಬಾಳ್ವೆ ನಡೆಸಿದವರು ಅವರು. ನಮ್ಮ ಜನಪದದಲ್ಲಿರುವ ಡಾರ್ಕ್ ಹ್ಯೂಮರ್ ದೇ ಒಂದು ವಿಶೇಷ ಅಧ್ಯಾಯ ಬರೆಯಬಹುದು. ಅದನ್ನು ಮತ್ತೊಮ್ಮೆ ಬರೆಯುತ್ತೇನೆ. ನಮ್ಮ ಪರಂಪರೆಯಲ್ಲೇ ಹಾಸು ಹೊಕ್ಕಾಗಿರುವ ಡಾರ್ಕ್ ಹ್ಯೂಮರನ್ನು ಅಷ್ಟೇ ಜತನದಿಂದ ಮುಂದೆ ದಾಟಿಸುವ ಜವಾಬ್ದಾರಿ ನಮ್ಮ ಮೇಲಿದೆ.