”ನಾರಾಯಣ ರಂಗನಾಥ ಶರ್ಮ ಹೆಸರು ಬಹಳ ಉದ್ದವಾಯಿತೆಂದು ಅದನ್ನು ಮೊಟಕಿಸಿ ನಾ. ಕಸ್ತೂರಿ ಎಂದು ಇಟ್ಟುಕೊಂಡರು. ಅವರು ಕನ್ನಡ ಕಲಿತ ಮೇಲೆ ಅವರನ್ನು ಕನ್ನಡದಲ್ಲಿ ಬರೆಯಿರಿ ಎಂದು ಬಿಡದೆ ಪ್ರೋತ್ಸಾಹಿಸಿ ಬೆನ್ನು ತಟ್ಟಿದವರು ರಾಷ್ಟ್ರಕವಿ ಕುವೆಂಪುರವರು. ತಮ್ಮನ್ನು ತಾವೇ ಸೋಮಾರಿ ಎಂದು ಕರೆದುಕೊಂಡ ಕಸ್ತೂರಿ ಸ್ನೇಹಿತರ ಉತ್ತೇಜನದಿಂದ ಕನ್ನಡದಲ್ಲಿ ಬಹಳಷ್ಟು ಬರೆದರು.ನನ್ನ ಕವನಗಳ ಯೋಗ್ಯತೆಯನ್ನು ಮೊದಲು ಗುರುತಿಸಿದವರು ನಾ. ಕಸ್ತೂರಿ ಎಂದು ಕುವೆಂಪು ಹೇಳಿಕೊಂಡಿದ್ದಾರೆ.”
ಹಿರಿಯ ಬರಹಗಾರ ಮತ್ತು ಬ್ಲಾಗರ್ ಇ. ಆರ್. ರಾಮಚಂದ್ರನ್ ಬರೆಯುವ ನಾ. ಕಸ್ತೂರಿಯವರ ಬದುಕು ಬರಹಗಳ ಕುರಿತ ನುಡಿಚಿತ್ರದ ಮೊದಲ ಕಂತು.

 

ಒಂದು ಭಾಷೆಯಲ್ಲಿ ಏನೇನು ಬರೆಯಬಹುದು? ಎಷ್ಟು ಬರೆಯಬಹುದು? ಗದ್ಯ, ಪದ್ಯ, ನಾಟಕ, ವಿಮರ್ಶೆ, ಹಾಸ್ಯ, ವಿಡಂಬನೆ. ಇದರ ಮೇಲೆ ಮಕ್ಕಳಿಗೆ ಪುಸ್ತಕ, ಅರ್ಥಕೋಶ… ಇಷ್ಟು ಬರೆಯುವುದಕ್ಕೆ  ಮಾತೃಭಾಷೆಯಾದರೂ ಒಂದು ಜೀವಮಾನ ಸಾಲದು. ಇದಕ್ಕೆ ಇನ್ನೊಂದಿಷ್ಟು ಅನರ್ಥಕೋಶಾನೂ ಸೇರಿಸಿ. ಇವುಗಳನ್ನೆಲ್ಲ ಬರೆದವರಿಗೆ  ಹುಟ್ಟಿ ಸುಮಾರು ಇಪ್ಪತ್ತು ವರ್ಷಗಳಾದ ಮೇಲೂ ಈ ಭಾಷೆಯ ಗಂಧವೂ ಇರಲಿಲ್ಲ! ಕಲಿಯುವುದು ಇರಲಿ ಕನ್ನಡದ ಲಿಪಿಗಳೂ ಸಹ ಅವರಿಗೆ ಗೊತ್ತಿರಲಿಲ್ಲ.  ಅಂಥವರು ಮೇಲೆ ಹೇಳಿದಂತೆ ಗದ್ಯ-ಪದ್ಯ-ವಿಮರ್ಶೆಯ ಜೊತೆಗೆ ಹೊಸ ಗಾದೆಗಳು ಮತ್ತು ಅನರ್ಥಕೋಶವನ್ನೂ ತಾವು ಕಲಿತ ಹೊಸ ಭಾಷೆಯಲ್ಲಿ ರಚಿಸಿದರು!

ನೆರೆ ಪ್ರಾಂಥ ಕೇರಳದಿಂದ ಮನೆಯವರನ್ನೆಲ್ಲಾ ಕರೆದುಕೊಂಡು ಮೈಸೂರಿಗೆ ಬಂದು, ಕನ್ನಡದಲ್ಲಿ ಅ, ಆ, ಇ, ಈ ಇಂದ ಕಲಿತು ಆ ಭಾಷೆಯ ಉನ್ನತಿಗೆ ಏನೇನೂ ಮಾಡಬೇಕೋ ಅದನ್ನೆಲ್ಲವನ್ನೂ ಮಾಡಿದವರು ಯಾರು? ಇವರೇ ನಮ್ಮ ಇಂದಿನ ಬಹು ಭಾಷಾ ಹಾಗೂ ಹಾಸ್ಯ ತಜ್ಞ,  ನಾ. ಕಸ್ತೂರಿ. ಓದುಗರನ್ನ ನಕ್ಕು ನಲಿಸುವುದೇ ಅವರ ಧ್ಯೇಯವಾಗಿತ್ತು. ಅದಕ್ಕಾಗಿ ಅವರು ಏನೇನು ಮಾಡಬೇಕೋ ಅದೆಲ್ಲವನ್ನೂ ಮಾಡಿದರು,  ವಿವಿಧ ರೂಪ ತಾಳಿದರು, ಬೇರೆ ಬೇರೆ ವೇಷ ಹಾಕಿದರು. ಬಣ್ಣ ಕಟ್ಟಿದರು.

ನಾ. ಕಸ್ತೂರಿ ಅವರು ಕನ್ನಡದಲ್ಲಿ ಏನನ್ನು ಕಂಡಿದ್ದರು ಎಂದರೆ, ದೀಪಾವಳಿ ಹಬ್ಬಕ್ಕೆ ಬೇಕಾದ ಡಬ್ಬಿ ತುಂಬ ಇರೋ ಪಟಾಕಿಗಳು. ಹಾಸ್ಯದ ಸರ ಮಾಲೆ ಅಂತ ನನಗನ್ನಿಸುತ್ತೆ. ಅಲ್ಲದೇ ಅವೆಲ್ಲವನ್ನೂ ಅವರೇ ತುಂಬಿದ್ದರು. ಬೀಗದ ಕೈ ಪಟಾಕಿಯಿಂದ ಹಿಡಿದು ಕುದುರೆ ಪಟಾಕಿ, ಆನೆ ಪಟಾಕಿ, ಸುರು ಸುರು ಬತ್ತಿ, ಬಣ್ಣ ಬಣ್ಣದ ಮತಾಪು. ಮೇಲೆ ಹಾರುವ ಏರೋ ಪ್ಲೇನು, ಭೂಚಕ್ರ, ವಿಷ್ಣು ಚಕ್ರ.. ಅಲ್ಲಲ್ಲಿ ಸಣ್ಣ ಬಾಂಬುಗಳು… ಒಂದೇ ಎರಡೇ.. ಇದೆಲ್ಲವನ್ನೂ ಅವರು ತಮ್ಮ ಹಾಸ್ಯದ ಊದುಕಡ್ಡಿಯಿಂದ ಹತ್ತಿಸಿ ಓದುತ್ತಿದ್ದಂತೆಯೇ ಓದುಗರಿಗೆ ದೀಪಾವಳಿಯ ಅನುಭವ ಮಾಡಿಸುತ್ತಿದ್ದರು.

ನಮ್ಮ ಹಳೆಯ ಗಾದೆಗಳನ್ನು ತಿರುಗ ಮುರುಗ ಮಾಡಿ, ಮೇಲಿಂದ ಕೆಳಗೆ ಜಾಲಾಡಿಸಿ, ಪಕ್ಕಕ್ಕೆ ಕೊಂಚ ಹೊರಳಿಸಿ ಕೊಂಚ ಅದರ ಬಾಲವನ್ನು ತಿರುಚಿ ಮತ್ತೆ ನಮಗೇ ಬಡಿಸಿದರು! ಈ ಹೊಸ ಗಾದೆ ಇಂದಿನ ನಮ್ಮ ಬಾಳಿಗೆ/ ಪೀಳಿಗೆಗೆ ಪಕ್ಕ ಹೇಳಿ ಮಾಡಿಸಿದಂತೆ ಇದೆ! ನೀವೇ ನೋಡಿ!

ಅವರು ಹುಟ್ಟು ಹಾಕಿದ ಕೆಲವು  ಗಾದೆಗಳು :

ಹಿಗ್ಗುವುದೂ ಬೇಡ, ತಗ್ಗುವುದೂ ಬೇಡ, ಮಗ್ಗದ ಸೀರೆಯೇ ಸಾಕು.
ಸ್ವರ್ಗದಲ್ಲಿ ಮುಸುರೆ ತಿಕ್ಕುವುದಕ್ಕಿಂತ ನರಕದಲ್ಲಿ ನಾಯಕಿಯಾಗಿರುವುದೇ ಮೇಲು
ಅಡುಗೆ ರುಚಿ ಬಡಿಸುವವನಿಗೇ ಗೊತ್ತು
ಮಕ್ಕಳಿಗೆ ಶಿಶುವಿಹಾರ, ದೊಡ್ಡವರಿಗೆ ಉಪಕಾರ
ಸೀರೆ ನೋಡಿ ಸೀಟ್ ಹಾಕಿ, ವಾಲೆ ನೋಡಿ ಮಾಲೆ ಹಾಕಿ
ಪಾಪಿ ಬಸ್ಸಿಗೆ ಹೋದರೆ ಮೊಣಕಾಲು ಮಡಿಸಲೂ ಜಾಗವಿಲ್ಲ.
ಗುರುವಿಗೆ ಬೇಕಾದದ್ದು ಉರು ಮಂತ್ರ.
ಮೂರು ಕೊರ್ಟು ಹತ್ತಿ ಮೂರು ನಾಮ ಮೆತ್ತಿಸಿಕೊಂಡ.
ಸಿನಿಮಾ ತಾರೆ ಪುರಾಣ ಊರಿಗೆಲ್ಲ ಪ್ರಾಣ.

ಅವರ ಬರಹದ ಸ್ವಲ್ಪ ಸ್ಯಾಂಪಲ್ ನೋಡಿ:

ಈರ! ಲೋ! ಗಿಡಗಳಿಗೆ ಏಕೆ ನೀರ್ಬಿಡಲಿಲ್ಲ?
ಪೂರಾ ಮಳೆ ಬೀಳ್ತಿದೆ.
ದಡ್ಡ! ಕೊಡೆ ಹಿಡಿದು ನೀರೆರೆಯೋ ಬೇಗ- ಸರ್ವಜ್ಞ

ಕೈ ಬೆರಳ ಉಗುರನು ಗಂಡ ಜಗಿಯುವುದು ನೋಡಿ
ತಿದ್ದಿದವಳು ಚಾಳಿಯನು, ಬಲುಬೇಗ ಮಡದಿ –ಅವನ
ಬಾಯ್ ಡೆಂಚರನು, ಪುಡಿ ಮಾಡಿ – ಸರ್ವಜ್ಞ

ಗದ್ಯವನ್ನು ಪದ್ಯಕ್ಕೆ ಹೇಗೆ ತಿರುಗಿಸುವುದು? ಅದನ್ನೂ ನಾ. ಕಸ್ತೂರಿ ತೋರಿಸಿಕೊಟ್ಟರು. ‘ಒಂದು ದಿನ ನಾನು ಬುಟ್ಟಿ ಹೊತ್ತುಕೊಂಡು ಮೆಣಸಿನಕಾಯಿ ತರಲು ಮಾರ್ಕೆಟ್ಟಿಗೆ ಹೋದೆ. ದಾರಿಯಲ್ಲಿ ಸುಬ್ಬು ಸಿಕ್ಕಿದ. ಅವನು ಆಯುರ್ವೇದ ಪಂಡಿತ. ಮೆಣಸಿನಕಾಯಿ, ಮೈಗೆ ಒಳ್ಳೆಯದಲ್ಲ, ಎಂದ. ಕೊಂಚ ದೂರ ಮುಂದೆ ಹೋದೆ. ಹಬ್ಬು ಸಿಕ್ಕಿದ. ಅವನು ಮಲೆನಾಡಿನವ. ಮೆಣಸಿನಕಾಯಿಗಿಂತ ಮೆಣಸೇ ಲೇಸೆಂದ…’ ಇದನ್ನು ನಾ. ಕಸ್ತೂರಿ ಪದ್ಯವನ್ನಾಗಿ ಮಾಡಿ ತೋರಿಸಿದರು.

ಒಂದು ದಿನ ನಾನು ಬುಟ್ಟಿಯನು ಹೊತ್ತು ನಡೆದೆ ಮಾರ್ಕೆಟ್ಟಿನಾ ದಾರಿಯಲಿ
ತರಲು ಮೆಣಸಿನಕಾಯಿ; ದಾರಿಯಲಿ ಸಿಕ್ಕಿದಂ ಸುಬ್ಬು ಎಂಬಾತಂ
ಅವನೊಬ್ಬ ವೈದ್ಯನ್; ಚರಕ ಶಿಷ್ಯಗಣ ಶ್ರೇಷ್ಟನವ
ಬೇಡೆಂದ, ಮೈಗೆ ಕೆಡುಕೆಂದ. ತರಕೂಡದೆಂದ, ಹಿಡಿದೆನ್ನ.
ಹೋದೆ ನಾ ಕೊಂಚ ದೂರವದೇ, ರಸ್ತೆಯಲಿ. ಬಂದನಾ ಹಬ್ಬು,
ತುಸು ಮೊಬ್ಬು, ಕೊಬ್ಬವಗೆ, ಮಲೆನಾಡಿನವ ತಾನೆಂದು…..

ಅವರ ಅನರ್ಥಕೋಶಕ್ಕೆ ಕೊನೆಯೇ ಇರಲಿಲ್ಲ..

ಅನೀತಿ : ಆಯಾ ಕಾಲಕ್ಕೆ ಹೊಸದೆನಿಸುವ ನಡತೆ
ಅನುಕಾರಣ : ಒಂದು ಕಾರಿನ ಹಿಂದೆ ಮತ್ತೊಂದು ಹೋಗುವಿಕೆ.
ಇವತ್ತು: ನಾಳೆ ಏನಪ್ಪಾ ಗತಿ ಎಂದು ನಿನ್ನೆ ಪೇಚಾಡಿದೆವೆಲ್ಲಾ, ಆ ನಾಳೆ.

ಮುಂದೆ ಆಕಾಶವಾಣಿ ಬೆಂಗಳೂರು ಕೇಂದ್ರದ ಪ್ರೋಗ್ರಾಂ ಆಫೀಸರಾಗಿ ಕೆಲಸ ಮಾಡಿದ ನಾ. ಕಸ್ತೂರಿ ಕಿವಿಯ ವಿಚಾರ ಬರೆಯುತ್ತಾ ಹೀಗೆ ಬರೆದರು, ‘ನಾವಂತೂ ಕಿವಿಯಿಂದ ಕೆಟ್ಟಿರುವಷ್ಟು ಮತ್ತೆ ಯಾವ ಇಂದ್ರಿಯದಿಂದಲೂ ಕೆಟ್ಟಿಲ್ಲವೆನ್ನಬಹುದು. ಲೋಕದಲ್ಲಿ ಸಂಗೀತದಿಂದಾಗಿರುವ ಹಿಂಸೆಗೆಲ್ಲಾ ಕಿವಿಯೇ ಕಾರಣ. ಕೋಗಿಲೆಯ ಮೇಲೆ ಹಲವು ಭಾಷೆಗಳಲ್ಲಿ ಕವಿಗಳು ರಚಿಸಿರುವ ಕಗ್ಗದ ಕಂತೆಗಳಿಗೆಲ್ಲ ಕಿವಿಯೇ ಮೂಲ; ರೇಡಿಯೋ ಎಂಬ ಶಾಂತಿ ಧ್ವಂಸಕ ಯಂತ್ರಕ್ಕೂ ಕಿವಿಯೇ ಆಧಾರ. ಅಲ್ಲದೆ ಈ ಶತಮಾನದ ಭಾರಿ ಸಾಂಕ್ರಾಮಿಕ ರೋಗವಾಗಿರುವ ಭಾಷಣ ಜಾಡ್ಯಕ್ಕೂ ನಮ್ಮ ಕಿವಿಗಳೇ ಪ್ರೇರಕ!’

***

ನಾರಾಯಣ ಕಸ್ತೂರಿ ರಂಗನಾಥ ಶರ್ಮ, 25 ಡಿಸೆಂಬರ್ 1897ರಲ್ಲಿ ಕೇರಳದ ತ್ರಿಪುನ್ನತ್ತರ ಗ್ರಾಮದಲ್ಲಿ ಎರ್ನಾಕುಲಂ ಜಿಲ್ಲೆಯಲ್ಲಿ ಹುಟ್ಟಿದರು. ಅವರ ತಂದೆ ಕಸ್ತೂರಿ ರಂಗನಾಥ ಶರ್ಮ. ಅವರ ಮಾತೃ ಭಾಷೆ ತಮಿಳು, ಓದಿ ಶಿಕ್ಷಣ ಪಡೆದದ್ದು ಮಲೆಯಾಳಂನಲ್ಲಿ.  ಅವರು ಹುಟ್ಟಿದಾಗ ಅವರ ಕೈ ಕಾಲಿನಲ್ಲಿ ತಲಾ ಆರು ಬೆಟ್ಟುಗಳಿದ್ದವು! ಒಟ್ಟು 20 ರ ಬದಲು 24 ಬೆಟ್ಟುಗಳಿದ್ದವು. ಇದ್ಯಾವುದೋ ಅನಿಷ್ಟ, ಒಳ್ಳೆಯ ಸೂಚಕವಲ್ಲ ಎಂದು ಅವರ ಅಜ್ಜಿ ಕತ್ತರಿಯಿಂದ ಅವರ ಹೆಚ್ಚುವರಿ ಬೆರಳುಗಳನ್ನು ಕತ್ತರಿಸಿಬಿಟ್ಟರು! ಅದು ಅಜ್ಜಿ ನನಗೆ ಮಾಡಿದ ‘ಸಿಸೇರಿಯನ್’ ಆಪರೇಷನ್ ಎಂದು ಮುಂದೆ ನಕ್ಕು ಹೇಳಿಕೊಂಡರು ಕಸ್ತೂರಿ! ಅದರಿಂದ ಬಾವಾಗಿ, ಕೀವಾಗಿ ವಾಸಿ ಮಾಡಲು ಅಜ್ಜಿ ತಿರುಪತಿ ತಿಮ್ಮಪ್ಪನಿಗೆ ಮೊರೆಬಿದ್ದು ಕೊನೆಗೆ ಪಾರಾದರು ಕಸ್ತೂರಿ. ಆದರೆ ಹುಟ್ಟಿ ಐದು ವರ್ಷದಲ್ಲೇ ಕಸ್ತೂರಿ ತಮ್ಮ ತಂದೆಯನ್ನು ಕಳೆದುಕೊಂಡರು. ತೀರ ಬಡತನದಲ್ಲಿದ್ದ ಕುಟುಂಬದವರು ಅವರನ್ನು ಓದಿಸಲು ಬಹಳ ಕಷ್ಟಪಟ್ಟರು.

ನಾ, ಕಸ್ತೂರಿಯವರ  ಮಗಳು ಪದ್ಮ ಬಾಲಚಂದ್ರನ್ ಹೇಳುತ್ತಾರೆ, ‘ಆರ್ಥಿಕ ಬಡತನದಲ್ಲಿದ್ದ ಅವರ ಅಜ್ಜ ಅವರನ್ನು ವೇದ ಕಲಿಯುವುದಕ್ಕೆ ಕಳಿಸಲು ಯೋಚಿಸಿದ್ದರು. ಆದರೆ ಅವರ ಅಜ್ಜಿ ಗೆ ನಾ. ಕಸ್ತೂರಿ ಇಂಗ್ಲಿಷನ್ನು ಕಲಿಯಬೇಕೆಂದು ಆಸೆ ಇತ್ತು. ಅವರ ತಾಯಿ ತನ್ನ ಒಡವೆಗಳನ್ನು ಮಾರಿ ನಾ. ಕಸ್ತೂರಿಗೆ ಮುಂದೆ ಕಲಿಸಲು ಶುರು ಮಾಡಿದರು. ಮಿಡಲ್ ಸ್ಕೂಲ್ ಆದ ಮೇಲೆ ಅವರಿಗೆ ಸ್ಕಾಲರ್ಷಿಪ್ ದೊರೆತು ಎರ್ನಾಕುಲಂ ಮಹಾರಾಜ ಕಾಲೇಜಿನಲ್ಲಿ ಓದಿ ಇಂಟರ್ ಮೀಡಿಯೇಟ್ ತನಕ ಓದಿದರು. ಆಮೇಲೆ ಅವರು ತಿರುವನಂತಪುರ ಮಹಾರಾಜ ಕಾಲೇಜಿನಲ್ಲಿ ಓದಿ ಬಿ.ಎ. (ಆನರ್ಸ್) ಪದವಿಯನ್ನು ಪಡೆದರು. ಅವರ ಅಜ್ಜ ತೀರಿಕೊಂಡ ನಂತರ ಕಸ್ತೂರಿ ಶಾಲೆಯೊಂದರಲ್ಲಿ ಅಧ್ಯಾಪಕನಾಗಿ ಸೇರಿ ಸಂಜೆ ಲಾ ಓದುವುದಕ್ಕೆ ಶುರು ಮಾಡಿದರು. ಬ್ಯಾಚಲರ್ಸ್ ಆಫ್ ಲಾ ಮತ್ತು ಮಾಸ್ಟರ್ಸ್ ಇನ್ ಆರ್ಟ್ಸ್  ಯೂನಿವರ್ಸಿಟಿ ಆಫ್ ಟ್ರಿವೇಡ್ರಂನಲ್ಲಿ ಮಾಡಿದರು.

ಜಾಹೀರಾತಿನ ಮೂಲಕ ಮೈಸೂರಿನ ಡಿ.ಬಿ.ಸಿ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ಸೇರಿ, ನಂತರ ಭನುಮೈಯ ಕಾಲೇಜಿನಲ್ಲಿ ಇಂಗ್ಲಿಷ್ ಮತ್ತು ಇತಿಹಾಸ ಹೇಳಿಕೊಡುತ್ತಿದ್ದರು.  ಮೈಸೂರಿಗೆ ಬಂದು ಕನ್ನಡದಲ್ಲಿ ಅ, ಆ, ಇ, ಈ, ಯಿಂದ ಶುರು ಮಾಡಿದ ಕಸ್ತೂರಿ, ಆವಾಗಲೇ ಕನ್ನಡದಲ್ಲಿ ನಾಟಕಗಳನ್ನು ಬರೆದು ವಿದ್ಯಾರ್ಥಿಗಳೊಂದಿಗೆ ಸೇರಿ ನಾಟಕವನ್ನು ಆಡುತ್ತಿದ್ದರು. ಬಹಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು.  ರಾಮಕೃಷ್ಣ ಆಶ್ರಮದಲ್ಲಿ ಸೇವೆಗೆ ಸೇರಿದ ಕಸ್ತೂರಿ ಹಿರಿಯ ಕವಿ ಬಿ.ಎಂ.ಶ್ರೀ ಅವರ ಜೊತೆ ಬಹಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ವಯಸ್ಕರ ಶಿಕ್ಷಣ ಪ್ರಸಾರ, ದಲಿತರಿಗಾಗಿ ಶಿಕ್ಷಣ, ಬಾಲಬೋಧೆ ಪದ್ಯಗಳ ರಚನೆ, ಹಳ್ಳಿಗಳಲ್ಲಿ ಹರಿಕೀರ್ತನೆ ಹೇಳಿಕೊಡುವುದಲ್ಲದೇ ತಾವೇ ಸ್ವತಃ ಹರಿದಾಸರ ವೇಷ ಧರಿಸಿ, ಹಾಡು, ಕೀರ್ತನೆ ನಾಟಕದಲ್ಲಿ ಪಾತ್ರ ವಹಿಸಿದರು. ರಾಮಕೃಷ್ಣ ಆಶ್ರಮದ ಸ್ಕೂಲಿನಲ್ಲಿ 18 ವರ್ಷ ಸೆಕ್ರೆಟರಿಯಾಗಿ ಸೇವೆ ಸಲ್ಲಿಸಿದರು. 1928ರಲ್ಲಿ ಮೈಸೂರಿನ ಇಂಟರ್ ಮಿಡಿಯೇಟ್ ಕಾಲೇಜಿನಲ್ಲಿ ಇತಿಹಾಸದ ಅಧ್ಯಾಪಕರಾಗಿ ಸೇರಿದರು. ಕನ್ನಡದ ಸೇವೆ ಆಗಲಿಂದಲೇ ಶುರುವಾಯಿತು. ಅರ್ಥಕೋಶದಿಂದ ಸೃಷ್ಟಿಯಾಯಿತು ಅನರ್ಥಕೋಶ!

ಅನರ್ಥಕೋಶ :

ಉಗುಳುನಗೆ: ಮಾತನಾಡಿದಾಗ ಮಂತ್ರ ಪುಷ್ಪದಂತೆ ನಗೆಯಾಡಿದಾಗಲೂ ಉಗುಳು ಪುಷ್ಪ.
ಉಭಯಸಂಕಟ: ತುಪ್ಪದ ಕೊಡದ ಮೇಲಣ ಇಲಿ, ಹೊಡೆಯೋಣವೇ? ಬೇಡವೆ?
ಕಂತುವರಾಳಿ: ಕಂತು ಕಂತಾಗಿ ಸಾಲ ತೀರಿಸಬೇಕಾಗಿ ಬಂದಾಗ ನಾವು ಎಳೆಯುವ ರಾಗ. (ಪಂತುವರಾಳಿ ರಾಗದಿಂದ ಬಂದದ್ದು)
ಕೆಮ್ಮು: ಒಂದು ರೀತಿಯ ಗುಪ್ತ ಭಾಷೆ.
ಗೊರಕೆ: ಆತ್ಮಾನಂದ, ಇತರರಿಗೆ ಇನ್ನೂ ಹೆಚ್ಚು ಆನಂದ.
ಚೀರ್ತನೆ: ಕೆಟ್ಟ ಶಾರೀರದವರು ಮಾಡುವ ಕೀರ್ತನೆ.
ನಶ್ಯಾಹಾರಿ: ಮೂಗಿನಿಂದ ಆಹಾರ ಮುಕ್ಕುವವ.
ಪಕ್ಕಸಾಲಿಗ: ಪಕ್ಕದಲ್ಲೇ ಮನೆಮಾಡಿಕೊಂಡು, ಸದಾ ಸಾಲ ಕೇಳುವವ.

 

‘ಸದಾ ನಮ್ಮ ಮನೆಯಲ್ಲಿ ನಾವು ಜಗಳಾಡುವುದು, ಬಡಿದಾಡುವುದು, ಇವೆಲ್ಲ ಪಕ್ಕದ ಮನೆಯವರಿಗೆ ಕೇಳಿಸುತ್ತೆ, ಚೆನ್ನಾಗಿರೋಲ್ಲ’ ಅಂತ ಹೇಳಿ ಮೈಲಾರಿ ಗೋಡೆಯಲ್ಲಿದ್ದ ಕಿಟಕಿಯನ್ನು ಇಟ್ಟಿಗೆ ಗಾರೆ ಹಾಕಿ ಮುಚ್ಚಿದ. ಅವನ ಹೆಂಡತಿ, ‘ಅದು ಸರಿ! ಪಕ್ಕದ ಮನೆಯಲ್ಲಾಗೋ ಜಗಳಾನ ಇನ್ನು ಮೇಲೆ ನಾವು ಕೇಳಿ ಸಂತೋಷಪಡುವ ಹಾಗಿಲ್ಲವಲ್ಲ. ಪೂರ್ತಿ ಮುಚ್ಚಬೇಡಿ. ಅಂಗೈಯಗಲದಷ್ಟು ತೂತು ಇರಿಸಿ..’ ಅಂದಳು.

ಹಸುಳೆ ಮಕ್ಕಳ ಹಿಂಡಿ ಹಿಸಿದು ಪ್ರಾಡಿಜಿಯ ಮಾಡಿ
ಕಸಿದು ಕಾಸನು ತಿಂಬ, ನರಮನುಜ-
ರಸುರರೇ ಅಕ್ಕು, ಸರ್ವಜ್ಞ.

ಕಸ್ತೂರಿಯವರು ನಾರಾಯಣ ರಂಗನಾಥ ಶರ್ಮ ಹೆಸರು ಬಹಳ ಉದ್ದವಾಯಿತೆಂದು ಅದನ್ನು ಮೊಟಕಿಸಿ ನಾ. ಕಸ್ತೂರಿ ಎಂದು ಇಟ್ಟುಕೊಂಡರು. ಅವರು ಕನ್ನಡ ಕಲಿತ ಮೇಲೆ ಅವರನ್ನು ಕನ್ನಡದಲ್ಲಿ ಬರೆಯಿರಿ ಎಂದು ಬಿಡದೆ ಪ್ರೋತ್ಸಾಹಿಸಿ ಬೆನ್ನು ತಟ್ಟಿದವರು ಯೂನಿವರ್ಸಿಟಿಯ ಸಹೋದ್ಯೋಗಿ ರಾಷ್ಟ್ರಕವಿ   ಕುವೆಂಪು ರವರು. ಸ್ವಾಭಾವಿತವಾಗಿ ತಮ್ಮನ್ನು ತಾವೇ ಸೋಮಾರಿ ಎಂದು ಕರೆದುಕೊಂಡ ಕಸ್ತೂರಿ ಸ್ನೇಹಿತರ ಉತ್ತೇಜನದಿಂದ ಕನ್ನಡದಲ್ಲಿ ಬೇರೆ ಬೇರೆ ರೀತಿ ಸೇವೆ ಸಲ್ಲಿಸಿದರು. ನನ್ನ ಕವನಗಳ ಯೋಗ್ಯತೆಯನ್ನು ಮೊದಲು ಗುರುತಿಸಿದವರು ನಾ. ಕಸ್ತೂರಿ ಎಂದು ಕುವೆಂಪು ಹೇಳಿಕೊಂಡಿದ್ದಾರೆ. ಅವರಿಬ್ಬರ ಸ್ನೇಹ ಅಪೂರ್ವ. ಒಟ್ಟಿಗೆ ನಾಲ್ಕು ಜಾಗಕ್ಕೆ ಹೋಗಿ ಜೊತೆಯಲ್ಲಿದ್ದು ಪಕ್ವವಾದ ಸ್ನೇಹ ಅವರಿಬ್ಬರದ್ದು.

ಮಹಾರಾಜ ಕಾಲೇಜಿನ ವಾರ್ಷಿಕ ದಿನಗಳಲ್ಲಿ ಬಹಳಷ್ಟು ನಾಟಕಗಳನ್ನೂ ಬರೆದು ಅದನ್ನು ಆಡಿಸಿದರು ನಾ.ಕ. ‘ಹೆಡ್ ಮಾಸ್ತರ ಮಗಳು’ ನಾಟಕ ಕಾಶಿಯ ಮಹಾರಾಜರ ಮುಂದೆ ಆಡಿದರು. 1930 -40ರ ಯುಗವನ್ನು ‘ಕಸ್ತೂರಿ ಯುಗ, ನಾಟಕದ ಯುಗ’ ಎಂದು ಕರೆಯಬಹುದೆಂದು ಅವರ ಮಿತ್ರ ಎ.ಆರ್. ಕೃಷ್ಣ ಶಾಸ್ತ್ರಿ ಹೇಳಿದ್ದರು. ಹಾಗೆಯೇ ಇನ್ನೊಂದು ಕಡೆ ಏ.ಎನ್. ಮೂರ್ತಿರಾಯರು ಕಸ್ತೂರಿಯವರ ಹುಮ್ಮಸ್ಸು, ವರ್ಚಸ್ಸು ನೋಡಿ, ‘ಕಸ್ತೂರಿನಾ? ಏನಾದರೂ ನಾಟಕವನ್ನೋ, ಕೀರ್ತನೆಯನ್ನೋ ಮಾಡಿಕೊಂಡು ಎಲ್ಲಿಯೋ ಅಧ್ಯಕ್ಷನಾಗಿ ಇರುತ್ತಾನೆ!’ ಅಂತ ಹೇಳಿದ್ಧರು.

ನಾ. ಕಸ್ತೂರಿ ‘ಅ’ ಇಂದ ಹಿಡಿದು, ‘ಷ’ ವರೆಗೂ ಅನರ್ಥಕೋಶವನ್ನು ಹೆಣೆದವರು.

ವಧು: ನಾವು ಮಾವನಿಂದ ಹೊಡೆದ ಮೊದಲ ವಸ್ತು.
ಶಸ್ತ್ರಕ್ರಿಯೆ: ಹಣದ ಗಂಟನ್ನು ವೈದ್ಯರು ಹೊರ ತೆಗೆಯುವ ರೀತಿ.
ಸಮಾರಂಪ: ಸಾಮಾನ್ಯವಾಗಿ ಸಮಾರಂಭಗಳಲ್ಲಿ ಹೀಗಾಗುವುದೇ ಹೆಚ್ಚು.
ಸೊಟ್ಟಹಾಸ: ಮುಖ ಸೊಟ್ಟಗೆ ತಿರುಗಿಸಿ ಮಂದಹಾಸ ಬೀರುವುದು.
ಹೊಟ್ಟೆನೋವು: ತುಂಬಿದ ಹೊಟ್ಟೆಯ ಪಶ್ಚಾತ್ತಾಪ.
ವಯಸ್ಸು: ಲೆಕ್ಕ ಹಾಕ್ತಾ ಹಾಕ್ತಾ ದುಃಖ ಜಾಸ್ತಿ; ಇದರ ಬೆಳವಣಿಗೆಯ ನಾಲ್ಕು ಹಂತಗಳು: ಹುಡುಗು, ಪಿಡುಗು, ಗುಡುಗು, ನಡುಗು
ಉಳಿತಾಯ: ನಮಗೆ ಸಾಲ ಕೊಡಬೇಕಾದವರು ಮಾಡಬೇಕಾದ ಕರ್ತವ್ಯ.
ಉಸ್ಸಪ್ಪ: ಎಲ್ಲಾ ನೆಂಟರೂ ಕೈ ಬಿಟ್ಟಾಗ, ನಮಗೊದಗುವುದು.

ಕೀರೇಹಳ್ಳಿಗೆ ಒಂದು ಸಲ ಯಾರೋ ಬೆಂಗಳೂರಿನಿಂದ ಬಂದರು. ಸ್ಕೂಲಿಗೆ ಹೋಗಿ ಹುಡುಗರ ಆಟಪಾಟ ನೋಡಿದರು. ಅಲ್ಲಿ ನಿಂತಿದ್ದ ಒಬ್ಬ ಹುಡುಗನನ್ನ , ‘ಲೋ! ಒಂದು ಎಮ್ಮೆ ಒಂದು ದಿನಕ್ಕೆ ಎರಡು ಸೇರು ಹಾಲು ಕೊಟ್ಟರೆ, ತಿಂಗಳಿಗೆ ಎಷ್ಟು ಸೇರಾಯಿತು’ ಎಂದು ಕೇಳಿದರು. ಅವನು ‘ಸುಮಾರು ನೂರು ಸೇರು’ ಅಂತ ಹೇಳಿದ. ಅವರಿಗೆ ರೇಗಿತು. ನಿನಗೆ ಲೆಕ್ಕವೇ ಗೊತ್ತಿಲ್ಲ. ಮೂವತ್ತೆರಡಲ ಅರವತ್ತು ಅಲ್ಲವೇನೋ’ ಅಂತ ಗದರಿದರು. ಅದಕ್ಕೆ ಆ ಹುಡುಗ. ನಿಮಗೆ ಹಾಲು ಮಾರುವ ವಿಷಯ ಗೊತ್ತಿಲ್ಲ. ಸುಮ್ಮನಿರಿ’ ಎಂದ.

***

ಖ್ಯಾತ ವ್ಯಂಗ ಚಿತ್ರಕಾರ ಆರ್. ಕೆ. ಲಕ್ಷ್ಮಣ್ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾಗ ಅವರ ಪ್ರತಿಭೆಯನ್ನು ಕಂಡುಹಿಡಿದ ನಾ. ಕಸ್ತೂರಿ ಅವರ  ಚಿತ್ರಗಳನ್ನು ಮೊಟ್ಟ ಮೊದಲಿಗೆ ಕೊರವಂಜಿ ಪತ್ರಿಕೆಗೆ ಕಳುಹಿಸಲು ಪ್ರೋತ್ಸಾಹಿಸಿದ್ದರು. ಅಲ್ಲಿಂದ ಮುಂದೆ ಬೊಂಬಾಯಿಯ ಟೈಮ್ಸ್ ಆಫ್ ಇಂಡಿಯ ಪತ್ರಿಕೆಗೆ ‘ಯು ಸೆಡ್ ಇಟ್’ ಅನ್ನುವ ನಾಮಾಂಕಿತದಲ್ಲಿ ಅವರು ಬಿಡಿಸಿದ ಚಿತ್ರಗಳು ಮುದ್ರಣವಾಗತೊಡಗಿದವು. ಮುಂದೆ ಆರ್.ಕೆ. ಲಕ್ಷ್ಮಣ್ ಜಗತ್ ಪ್ರಸಿದ್ಧರಾದರು.

ನಾ. ಕಸ್ತೂರಿ ಮೈಸೂರಿನಲ್ಲಿದ್ದಾಗ ಅವರ ಕಾಲೇಜಿನ ಸಹೋದ್ಯೋಗಿ, ತಲೆ ಮೆದುಳಿನ ಶಾಸ್ತ್ರದ ಪ್ರೊಫೆಸರ್ ಆಫ್ ಸೈಕಿಯಾಟ್ರಿ ಎಮ್. ವಿ. ಗೋಪಾಲಸ್ವಾಮಿ ಅವರು ಫಿಲಿಪ್ಸ್ ಕಂಪನಿಯಿಂದ  ಒಂದು ರೇಡಿಯೋ ಟ್ರಾನ್ಸ್‍ ಮೀಟರ್ ಹಾಕಿ ಅದರಲ್ಲಿ ಖಾಸಗಿ ರೇಡಿಯೋ ಸ್ಟೇಷನ್ ಚಲಾಯಿಸಲು ಶುರು ಮಾಡಿದರು. ಇದು ಬಹುಷಃ ಭಾರತದಲ್ಲಿ ಮೊದಲ ಬಾರಿಗೆ ಮಾಡಿದ ಪ್ರಯತ್ನ ಅದು. ಇದನ್ನು ಸ್ವಲ್ಪ ವರ್ಷಗಳಾದ ಮೇಲೆ ಅದನ್ನು ಮೈಸೂರಿನ ಸರ್ಕಾರ ನಡೆಸುವುದಕ್ಕೆ ಕೊಟ್ಟರು. ಆ ಬಾನುಲಿ ನಿಲಯಕ್ಕೆ ‘ಆಕಾಶವಾಣಿ’ ಎಂಬ ಹೆಸರು ಹೇಗೆ ಬಂತೆಂದು ಸುಮಾರು ಚರ್ಚೆಯ ವಿಷಯವಾಗಿತ್ತು. ಕೊನೆಗೆ ನಾಲ್ಕೈದು ಸ್ನೇಹಿತರು – ಗೋಪಾಲಸ್ವಾಮಿ, ನಾ. ಕಸ್ತೂರಿ, ಮತ್ತಿತರರು ಇದರ ವಿಷಯ ಮಾತನಾಡುತ್ತಿದ್ದಾಗ, ಕಸ್ತೂರಿ ತಾಯಿ, ಕಸ್ತೂರಿ ಅದನ್ನು ‘ಆಕಾಶವಾಣಿ’ ಎಂದು ಕರೆಯೋಣ ಎಂದು ಹೇಳಿದ್ದನ್ನು ಅವರು ಕೇಳಿಸಿಕೊಂಡರಂತೆ. ಇದನ್ನು ಡಾ. ಎಚ್. ಕೆ. ರಂಗನಾಥ್ ಪುಷ್ಟೀಕರಿಸಿದ್ದಾರೆ. ಏನೇ ಇರಲಿ,  ಭಾರತದ ಎಲ್ಲಾ ಬಾನುಲಿ ಕೇಂದ್ರಗಳೂ ‘ಆಕಾಶವಾಣಿ’ ಎಂದು ಕರೆಯುವ  ಪದ ನಮ್ಮ ಮೈಸೂರಿನಲ್ಲಿ ಉದ್ಭವವಾಯಿತು! ಅವರ ಹಾಸ್ಯ ಉದ್ಭವವಾಗುತ್ತಿದ್ದದ್ದೂ ನಿತ್ಯ ನಡೆಯುವ ಸಂಗತಿಗಳಿಂದಲೇ!

***

ಗುರುತು ಸಿಕ್ಕದೆ ಎಷ್ಟು ಜನ ನಮ್ಮನ್ನು ಬೆನ್ನುತಟ್ಟಿ, ಆಮೇಲೆ ಮುಖ ನೋಡಿದಮೇಲೆ, ‘ಅಯ್ಯೋ ಇದು ನೀವಾ! ನೀವು ನಾನು ಬೇರೆ ಯಾರೋ ಎಂದುಕೊಂಡು ಬಿಟ್ಟೆ. ಸಾರಿ’ ಎಂದು ಹೇಳಿ ಓಡುವವರನ್ನು ನೋಡಿದ್ದೇವೆ. ಇದು ನಮ್ಮೆಲ್ಲ ಜೀವನದಲ್ಲಿ ಆಗಿಯೇ ಆಗಿರುತ್ತೆ. ಆದರೆ ಇದು ನಾ.ಕಸ್ತೂರಿಗೆ ಅವರಿಗೆ ಕಂಡಿದ್ದು ಬೇರೆಯ ರೀತಿನೇ! ಹಾಗಾದಾಗ,  ‘ನನ್ನನ್ನು ಇದುವರೆಗೂ ಯಾರೂ ಗಣ್ಯವ್ಯಕ್ತಿಗಳಾದ ಮಂತ್ರಿ, ಕಲೆಕ್ಟರ್, ಪೋಲೀಸ್ ಇನ್ಸ್ಪೆಕ್ಟರ್, ರೇಷನಿಂಗ್ ಆಫಿಸರ್. ಅಡ್ವೊಕೇಟ್ ಇತ್ಯಾದಿಯೆಂದು ಮೋಸ ಹೋಗಿಯೇ ಇಲ್ಲ. ನಿಜವಾದ ಮಂತ್ರಿಯಾಗಲು ದೇವರು ಹಣೆಯಲ್ಲಿ ಬರೆಯಲಿಲ್ಲ, ಬೆನ್ನಲ್ಲೂ ಬರೆಯಲಿಲ್ಲವೇ? ಅಪ್ಪಿ ತಪ್ಪಿ ಒಬ್ಬನ ಮೆಳ್ಳಗಣ್ಣಿಗಾದರೂ ಹಾಳು ಬೆನ್ನು, ಮಂತ್ರಿಯ ಬೆನ್ನ ಹಾಗೆ ಕಾಣಿಸಬಾರದೆ? ಅಗಲಕ್ಕೇನೂ ಕಡಿಮೆ ಇಲ್ಲ, ಹಾಳಾದ್ದಕ್ಕೆ! ಅವಲಕ್ಷಣ ಜಾತಕ, ಪ್ರತಿಭಾವಂತರಾದ ಒಬ್ಬರ ಬೆನ್ನ ಹಾಗೂ ಇಲ್ಲ, ಹಾಳಾದ್ದು; ಅನೇಕರು ಸಾಲವನ್ನು ವಾಪಸ್ಸು ಕೊಡದೆ ಕಣ್ಣು ಮರೆಸಿ ಓಡಾಡುತ್ತಿದ್ದ ಗೆಳೆಯ ಅಂದುಕೊಂಡ್ರು; ಯಾರೂ ಸಾಲ ಕೊಟ್ಟ ಸಾಹುಕರ ಅಂದುಕೊಂಡಿರಲಿಲ್ಲ ಎಂಥ ದೌರ್ಭಾಗ್ಯ!

ಜೀವನವೆಲ್ಲಾ ಮೇಷ್ಟ್ರಾದ ನಾ.ಕ. ಬರೀತಾರೆ; “ಕ್ಷಮಿಸಿ! ತಮ್ಮನ್ನು ನಮ್ಮೂರ ಶಾಲಾ ಮಾಸ್ತರೂ ಅಂತ ತಿಳಿದೆ ಎಂದು ಯಾರೋ ನಡು ರಸ್ತೆಯಲಿ ಹೇಳಿದರು…. ಅಂದು ನನಗೆ ನಿದ್ರೆ ಹೇಗೆ ಬರುತ್ತೆ?  ಊಟ ಹೇಗೆ ಸೇರುತ್ತೆ? ನನ್ನನ್ನು ಇನ್ಸಪೆಕ್ಟರ್ ಅಂತ ಕರೀಬಹುದಾಗಿತ್ತು, ಹೆಡ್ಮಾಸ್ಟರ್ ಅಂತಾನು ಕರೀಬಹುದಾಗಿತ್ತು. ಹಾಗಾಗಲಿಲ್ಲ.. ಶಾಲಾ ಮಾಸ್ತರು ಎಂದರು.”

 

(ಮುಂದುವರಿಯುವುದು)