ಮಹಾತ್ಮಾ ಗಾಂಧೀಜಿಯವರು ಕೂಡಾ ಮಾತೃಭಾಷೆಯ ಶಿಕ್ಷಣವೇ ಹೆಚ್ಚು ಪರಿಣಾಮಕಾರಿ ಎಂಬುದನ್ನು ಒತ್ತಿ ಹೇಳಿದ್ದಾರೆ. ಆದರೆ ಸರಕಾರ ಕೂಡಾ ಒಂದೆಡೆಯಿಂದ ಕನ್ನಡದ ಉದ್ಧಾರದ ಮಾತುಗಳನ್ನಾಡುತ್ತಿದ್ದಂತೆ ಇನ್ನೊಂದು ಕಡೆಯಿಂದ ಆಂಗ್ಲಮಾಧ್ಯಮ ಶಾಲೆಗಳನ್ನು ಪ್ರೋತ್ಸಾಹಿಸುತ್ತಾ ಕನ್ನಡ ಶಾಲೆಗಳನ್ನು ಮುಚ್ಚುವಲ್ಲಿ ಪರೋಕ್ಷವಾಗಿ ಸಹಕರಿಸುತ್ತಿದೆ. ಇಂತಹ ದಿನಮಾನದಲ್ಲಿ ದಟ್ಟ ಕಾನನದ ಮಧ್ಯೆ ಇರುವ ಪುಟ್ಟ ಗ್ರಾಮದ ಸರಕಾರಿ ಶಾಲೆಯೊಂದರ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಅಕ್ಷತಾ ಕೃಷ್ಣಮೂರ್ತಿಯವರು ತನ್ನ ಶಾಲೆ ಮತ್ತು ಮಕ್ಕಳ ಕತೆಯನ್ನು ಹೇಳುವುದರ ಜೊತೆಗೆ ಆ ಪ್ರದೇಶದ ಪ್ರಕೃತಿಯ ಮನೋಹರ ನೋಟವನ್ನೂ, ಅಲ್ಲಿನ ಜನಜೀವನವನ್ನೂ ನಮ್ಮ ಕಣ್ಣಿಗೆ ಕಟ್ಟುವಂತೆ ತಮ್ಮ ‘ಇಸ್ಕೂಲು’ ಕೃತಿಯಲ್ಲಿ ಸೊಗಸಾಗಿ ಓದುಗರ ಮುಂದಿಟ್ಟಿದ್ದಾರೆ.
ಅಕ್ಷತಾ ಕೃಷ್ಣಮೂರ್ತಿಯವರ “ಇಸ್ಕೂಲು” ಕೃತಿಯ ಕುರಿತು ಸದಾನಂದ ನಾರಾವಿ ಬರಹ

ಮಾತೃಭಾಷೆಯಲ್ಲಿ ಶಿಕ್ಷಣ ದೊರೆತಾಗಲೇ ಮಗು ಅದನ್ನು ಸುಲಭವಾಗಿ ಗ್ರಹಿಸಿಕೊಳ್ಳಬಹುದು. ಅದಕ್ಕಾಗಿ ಪ್ರಾಥಮಿಕ ಶಿಕ್ಷಣವಾದರೂ ಮಾತೃಭಾಷೆಯಲ್ಲಿಯೇ ಸಿಗಬೇಕೆಂಬುದು ಎಲ್ಲ ಶಿಕ್ಷಣ ತಜ್ಞರು ಮತ್ತು ಮನೋವಿಜ್ಞಾನಿಗಳು ಹೇಳುವ ಮಾತು. ಹೊಸ ಶಿಕ್ಷಣ ನೀತಿಯಲ್ಲಿ ಕೂಡಾ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಮಹಾತ್ಮಾ ಗಾಂಧೀಜಿಯವರು ಕೂಡಾ ಮಾತೃಭಾಷೆಯ ಶಿಕ್ಷಣವೇ ಹೆಚ್ಚು ಪರಿಣಾಮಕಾರಿ ಎಂಬುದನ್ನು ಒತ್ತಿ ಹೇಳಿದ್ದಾರೆ. ಆದರೆ ದುರ್ದೈವದ ಸಂಗತಿಯೆಂದರೆ ಇಂಗ್ಲೀಷಿನ ವ್ಯಾಮೋಹದಿಂದಾಗಿ ಇಂದು ಕನ್ನಡದ ಬಗ್ಗೆ ಕೀಳರಿಮೆ ಬೆಳೆಯುತ್ತಿದೆ. ಸರಕಾರ ಕೂಡಾ ಒಂದೆಡೆಯಿಂದ ಕನ್ನಡದ ಉದ್ಧಾರದ ಮಾತುಗಳನ್ನಾಡುತ್ತಿದ್ದಂತೆ ಇನ್ನೊಂದು ಕಡೆಯಿಂದ ಆಂಗ್ಲಮಾಧ್ಯಮ ಶಾಲೆಗಳನ್ನು ಪ್ರೋತ್ಸಾಹಿಸುತ್ತಾ ಕನ್ನಡ ಶಾಲೆಗಳನ್ನು ಮುಚ್ಚುವಲ್ಲಿ ಪರೋಕ್ಷವಾಗಿ ಸಹಕರಿಸುತ್ತಿದೆ.

(ಅಕ್ಷತಾ ಕೃಷ್ಣಮೂರ್ತಿ)

ಇಂತಹ ದಿನಮಾನದಲ್ಲಿ ದಟ್ಟ ಕಾನನದ ಮಧ್ಯೆ ಇರುವ ಪುಟ್ಟ ಗ್ರಾಮದ ಸರಕಾರಿ ಶಾಲೆಯೊಂದರ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಅಕ್ಷತಾ ಕೃಷ್ಣಮೂರ್ತಿಯವರು ತನ್ನ ಶಾಲೆ ಮತ್ತು ಮಕ್ಕಳ ಕತೆಯನ್ನು ಹೇಳುವುದರ ಜೊತೆಗೆ ಆ ಪ್ರದೇಶದ ಪ್ರಕೃತಿಯ ಮನೋಹರ ನೋಟವನ್ನೂ, ಅಲ್ಲಿನ ಜನಜೀವನವನ್ನೂ ನಮ್ಮ ಕಣ್ಣಿಗೆ ಕಟ್ಟುವಂತೆ ತಮ್ಮ ‘ಇಸ್ಕೂಲು’ ಕೃತಿಯಲ್ಲಿ ಸೊಗಸಾಗಿ ಓದುಗರ ಮುಂದಿಟ್ಟಿದ್ದಾರೆ. ಉತ್ತಮ ಶಿಕ್ಷಕಿಯಾಗಿ, ಶಾಲಾ ಮಕ್ಕಳಿಗೆ ಮಾತೆಯಾಗಿ, ಆ ಊರಿನವರಿಗೆ ಮಗಳಾಗಿ ತನ್ನ ಜೀವನಾನುಭವಗಳನ್ನು “ತುಷಾರ” ಮಾಸಪತ್ರಿಕೆಯಲ್ಲಿ ಅಂಕಣ ಬರಹವಾಗಿ ನೀಡುತ್ತಾ ಬಂದಿದ್ದು ಈಗ ಅದು ಕೃತಿ ರೂಪದಲ್ಲಿ ನಮ್ಮ ಮುಂದಿದೆ. ಶಿಕ್ಷಕಿಯಾಗಿ, ಲೇಖಕಿಯಾಗಿ ಅವರ ಗಾಢ ಅನುಭವಗಳು ಇಲ್ಲಿ ರಸವತ್ತಾಗಿ ಮೂಡಿಬಂದಿವೆ. ಶಾಲೆ ಅನ್ನುವುದು ಇಲ್ಲಿ ಪಠ್ಯದ ಬೋಧನೆಗಷ್ಟೇ ಸೀಮಿತವಾಗಿಲ್ಲ. ಇಲ್ಲಿ ಸರಕಾರ ನಿಗದಿಪಡಿಸಿದ ಸಿದ್ಧ ಮಾದರಿಗಳನ್ನಷ್ಟೇ ಮಕ್ಕಳಿಗೆ ಬೋಧಿಸದೆ ಮಕ್ಕಳ ಕಲಿಕೆಗೆ, ಮನೋವಿಕಾಸಕ್ಕೆ ಪೂರಕವಾದ ಅನೇಕ ಚಟುವಟಿಕೆಗಳನ್ನು ಪ್ರಯೋಗಿಸಿರುವುದನ್ನು ಗಮನಿಸಬಹುದಾಗಿದೆ. ಇಲ್ಲಿ ಮಕ್ಕಳೊಂದಿಗಿನ ರಸಮಯ ಕ್ಷಣಗಳೊಂದಿಗೆ, ರೋಚಕ ಘಟನೆಗಳು, ಆತಂಕದ ಗಳಿಗೆಗಳು, ಹೃದಯ ಮೀಟುವ ಭಾವಪೂರ್ಣ ಸಂಗತಿಗಳೆಲ್ಲವೂ ಹೃದ್ಯವಾಗಿ ದಾಖಲಾಗಿವೆ.

ಸರಕಾರದ ನೀತಿಯಿಂದಾಗಿ ಒಂದೊಂದೇ ಕನ್ನಡ ಶಾಲೆಗಳು ಜೀವ ಕಳೆದುಕೊಳ್ಳುತ್ತಿದ್ದು ಇರುವ ಕನ್ನಡ ಶಾಲೆಗಳನ್ನು ಉಳಿಸುವುದೇ ಇಂದು ಸವಾಲಿನ ಕಾರ್ಯವಾಗಿದೆ. ವೈಭವದಿಂದ ಮೆರೆದು ನಾಡಿಗೆ ನೂರಾರು ಸಾಧಕರನ್ನು ನೀಡಿದ ಕನ್ನಡ ಶಾಲೆಗಳ ದುಃಸ್ಥಿತಿ ಕಂಡು ಕಣ್ಣೀರು ಹರಿಸಿದ ಶಿಕ್ಷಕರನ್ನು ಕಂಡು ನಾನು ಕೂಡಾ ಮರುಗಿದ್ದೇನೆ. ಶತಮಾನ ಕಂಡ ಅನೇಕ ಶಾಲೆಗಳೂ ಇಂದು ಮುಚ್ಚಿ ಹೋಗಿರುವುದು ಕನ್ನಡದ ಪಾಲಿಗೆ ದುರಂತವೇ ಸರಿ. ಆಂಗ್ಲರ ದಾಸ್ಯದಿಂದ ಮುಕ್ತರಾಗಿ ನಾವು ಸ್ವಾತಂತ್ರವನ್ನೇನೋ ಗಳಿಸಿದ್ದೇವೆ. ಆದರೆ ಇನ್ನೂ ನಾವು ಭಾಷೆಯ ಪಾರತಂತ್ರ್ಯದಲ್ಲಿಯೇ ಇದ್ದೇವೆ. ನಮ್ಮದೇ ಮಾತೃಭಾಷೆ ಮತ್ತು ದೇಶದ ಇತರ ಭಾಷೆಗಳನ್ನು ಗೌರವಿಸದೆ ಇಂಗ್ಲೀಷ್ ಭಾಷೆಯನ್ನು ಮೆರೆಸುತ್ತಿದ್ದೇವೆ. “ಇಂಗ್ಲೀಷ್ ವ್ಯಾಮೋಹ ಬಿಡಿ ನಿಮ್ಮ ಭಾಷೆಯ ಬಗ್ಗೆ ಅಭಿಮಾನ ಪಡಿ” ಎಂದು ಪಾಶ್ಚಾತ್ಯರು ಹೇಳಿದರೂ ನಾವಿಂದು ಕೇಳುವ ಸ್ಥಿತಿಯಲ್ಲಿಲ್ಲ. ಇಂಗ್ಲೀಷ್ ಭಾಷಾ ಜ್ಞಾನ ಇಂದು ಖಂಡಿತಾ ಅವಶ್ಯ ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅದರ ಜೊತೆಯಲ್ಲಿ ನಮ್ಮ ಮಾತೃಭಾಷೆಯ ಜ್ಞಾನ ಕೂಡ ಅಷ್ಟೇ ಮುಖ್ಯವಾದುದು. ಆ ಸೌಲಭ್ಯ ಇಂದು ಮಕ್ಕಳಿಗೆ ದೊರಕುತ್ತಿರುವುದು ಸರಕಾರಿ ಮತ್ತು ಖಾಸಗಿ ಅನುದಾನಿತ ಶಾಲೆಗಳಲ್ಲಿ ಅನ್ನುವುದನ್ನು ಅಲ್ಲಗಳೆಯಲಾಗದು.

ಇದರ ಜೊತೆಗೆ ರಾಜ್ಯದಲ್ಲಿ ಅನೇಕ ಖಾಸಗಿ ವಿದ್ಯಾಸಂಸ್ಥೆಗಳು ಸರಕಾರದ ನೆರವಿಲ್ಲದೆಯೂ ಅತ್ಯುತ್ತಮ ದರ್ಜೆಯ ಕನ್ನಡ ಶಾಲೆಗಳನ್ನು ನಡೆಸುತ್ತಿವೆ. ಭಾಷೆ ಮತ್ತು ಸಂಸ್ಕೃತಿ ಒಂದಕ್ಕೊಂದು ಬೆಸೆದುಕೊಂಡಿರುವುದರಿಂದ ಭಾಷೆಯ ಅವನತಿ ಅಂದರೆ ಅದು ಒಂದು ಸಂಸ್ಕೃತಿಯ ಅವನತಿಯೂ ಹೌದು. ಈ ನಿಟ್ಟಿನಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕನ್ನಡ ಶಾಲೆಗಳ ಶಿಕ್ಷಕರ ಕೊಡುಗೆ ಅನನ್ಯವಾದುದು. ಇಂತಹ ಕಾಲಘಟ್ಟದಲ್ಲಿ ಕನ್ನಡ ಶಾಲೆಯ ಉಳಿವಿಗಾಗಿ ಮನಪೂರ್ವಕವಾಗಿ ದುಡಿಯುತ್ತಿರುವ ಅನೇಕ ಶಿಕ್ಷಕರಲ್ಲಿ ಅಕ್ಷತಾ ಕೃಷ್ಣಮೂರ್ತಿಯವರೂ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಕೃತಿಯಲ್ಲಿ “ರಾಧಕ್ಕೋರು” ಆಗಿರುವ ಅಕ್ಷತಾ ಕೃಷ್ಣಮೂರ್ತಿಯವರಂತಹ ಶಿಕ್ಷಕರು ನಮ್ಮ ನಾಡಿನ ಹೆಮ್ಮೆ ಅನ್ನಬಹುದು. ಇಂತಹ ಶಿಕ್ಷಕರ ಸಂಖ್ಯೆ ವೃದ್ಧಿಯಾಗಲಿ ಉಳಿದ ಕನ್ನಡ ಶಾಲೆಗಳಾದರೂ ಅಳಿಯದೆ ಉಳಿದು ಬೆಳಗಲಿ ಎಂದು ಹಾರೈಸೋಣ.

ಈ ಕೃತಿಯನ್ನು ಅವರು ಜೋಯಿಡಾದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಮತ್ತು ಎಲ್ಲಾ ಕನ್ನಡ ಶಾಲೆಗಳ ಮಕ್ಕಳಿಗೆ ಅರ್ಪಿಸಿದ್ದಾರೆ. ಇದು ಕೂಡಾ ಅವರ ಕನ್ನಡ ಪ್ರೀತಿಯನ್ನು ಸೂಚಿಸುತ್ತದೆ. ಸಂದರ್ಭನುಸಾರ ಅನೇಕ ಚಿತ್ರಗಳನ್ನು ಇಲ್ಲಿ ಬಳಸಿಕೊಂಡಿರುವುದು ಕೂಡಾ ಕೃತಿಯನ್ನು ಒಂದು ಅಪೂರ್ವ ದಾಖಲಾತಿಯೆನ್ನುವಂತೆ ರೂಪಿಸುವಲ್ಲಿ ನೆರವಾಗಿವೆ. ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಕೃತಿಯನ್ನು ಮೆಚ್ಚಿ ಸೊಗಸಾದ ಮುನ್ನುಡಿ ಬರೆದಿದ್ದು ಬೆಂಗಳೂರಿನ ಜನಪ್ರಕಾಶನ ಇದನ್ನು ಪ್ರಕಟಿಸಿದೆ.

ಶಿಕ್ಷಕರು, ಶಿಕ್ಷಣ ಪ್ರೇಮಿಗಳು ಮತ್ತು ಕನ್ನಡದ ಅಭಿಮಾನಿಗಳೆಲ್ಲರೂ ಓದಬೇಕಾದ ಈ ಕೃತಿಯನ್ನು ಸರಕಾರವು ಎಲ್ಲ ಶಾಲಾ ಗ್ರಂಥಾಲಯಗಳಿಗೆ ಹಾಗೂ ಸಾರ್ವಜನಿಕ ಗ್ರಂಥಾಲಯಗಳಿಗೆ ದೊರೆಯುವಂತೆ ಮಾಡಿದರೆ ಒಳ್ಳೆಯದು.

(ಕೃತಿ: ಇಸ್ಕೂಲು (ಸರಕಾರಿ ಶಾಲೆಯ ಟೀಚರ್‌ ಹೇಳುವ ಕತೆ), ಲೇಖಕರು: ಅಕ್ಷತಾ ಕೃಷ್ಣಮೂರ್ತಿ, ಪ್ರಕಾಶಕರು: ಜನ ಪ್ರಕಾಶನ, ಬೆಲೆ: 200/-)