ಭಾನುವಾರ ದಿನಸಿ ಶಾಪಿಂಗ್ ಮಾಡುವಾಗ ಎಂದಿಗಿಂತ ಯಾಕೋ ಹೆಚ್ಚಿನ ಜನರಿದ್ದರು. ಎಲ್ಲರಲ್ಲಿಯೂ ಒಂದು ಬಗೆಯ ಅಸಹಜ ಗಡಿಬಿಡಿ, ಅಸಹನೆ ಇದ್ದಂತಿತ್ತು. ಮಾರ್ಕೆಟ್ಟಿನ ಐಲ್‌ ತುಂಬಾ ಜನ ಸಂದಣಿ. ಅಡ್ಡಾದಿಡ್ಡಿ ನಿಲ್ಲಿಸಿಕೊಂಡ ಟ್ರಾಲಿಗಳು, ಓಡಾಡಲು ಕಷ್ಟವೇ ಆಗುವಂತಿತ್ತು. ಇದ್ದಕ್ಕಿದ್ದ ಹಾಗೆ ಈ ಗೊಂದಲದ ನಡುವಲ್ಲಿ ಒಂದು ದನಿ “ಕಮೀಲಿಯಾ! ಕಮೀಲಿಯಾ!” ಎಂದು ಕೂಗುವುದು ಕೇಳಿತು. ಆ ದನಿಯಲ್ಲಿದ್ದ ಆತಂಕ, ಭಯ ಎಲ್ಲರನ್ನೂ ಹಿಡಿದು ಅಲುಗಾಡಿಸುವಂತಿತ್ತು. ಎಲ್ಲ ಸ್ತಬ್ಧರಾಗಿ ಅತ್ತಿತ್ತ ನೋಡ ತೊಡಗಿದರು. ಯಾರು ಯಾರನ್ನು ಕಳಕೊಂಡಿದ್ದಾರೆ? ಯಾರಿಗಾಗಿ ಹುಡುಕುತ್ತಿದ್ದಾರೆ?

“ಕಮೀಲಿಯಾ! ಕಮೀಲಿಯಾ!” ಎಂಬ ಕೂಗು ಮಾರ್ಕೆಟ್ಟಿನ ಅತ್ತಿಂದಿತ್ತ ಓಡಾಡುತ್ತಲೇ ಇತ್ತು. ಕೂಗು ಬಂದತ್ತ ಹೋಗಿ ನೋಡಿದರೆ ಒಬ್ಬ ವಯಸ್ಸಾದ ಹೆಂಗಸು. ಬಾಚಿರದ ಕೆಂಚು ಕೂದಲು. ಚಳಿಗೆ ಮಾಸಿದ ಬಣ್ಣಬಣ್ಣ ಚೌಕವಿರುವ ಕೋಟು. ಕೈಯಲ್ಲಿ ಎಳೆದುಕೊಂಡು ಹೋಗುವಂತ ಎರಡು ಚಕ್ರದ ಪುಟ್ಟ ಟ್ರಾಲಿ. ಅತ್ತಿತ್ತ ಆತಂಕದಿಂದ ನೋಡುತ್ತಾ ಸಣ್ಣ ಮಗುವನ್ನು ಹುಡುಕುತ್ತಿರುವಂತೆ ಕಂಡಿತು. ಮಾರ್ಕೆಟ್ಟಿನ ಐಲ್‌ನಲ್ಲಿ ಓಡಾಡಿಕೊಂಡಿದ್ದು ಮಕ್ಕಳು ಒಂದು ಕ್ಷಣ ಕಣ್ಣಿಗೆ ಕಾಣದಂತಾಗುವುದು ಸಾಮಾನ್ಯ. ಇದು ಎಲ್ಲರಿಗೂ ಒಂದಲ್ಲ ಒಂದು ಸಲ ಆಗಿರುವ ಅನುಭವವೇ. ಆದರೆ ಅದಕ್ಕೆ ಇಷ್ಟು ಜೋರಾಗಿ ಕೂಗುವುದು ಅಸಹಜವೇ. ಕೆಲವರು ಮುಸಿಮುಸಿ ನಗುತ್ತಿದ್ದರು. ಮಾರ್ಕೆಟ್ಟಿನ ಕೆಲಸಗಾರರು ಆಕೆಯನ್ನು ಸಂತೈಸಲು, ಸಹಾಯ ಮಾಡಲು ಮುಂದಾಗಿ ಪ್ರಶ್ನೆ ಕೇಳುತ್ತಿದ್ದರು.

ಅಲ್ಲಿ ಕೆಲಸ ಮಾಡುವ ಒಬ್ಬ ಸಣ್ಣ ವಯಸ್ಸಿನ ಹುಡುಗಿ ಕಿಲಕಿಲ ನಗುತ್ತಾ ಅವಳಿಂದ ಹಿಂದಿರುಗಿದಳು. ದೂರದಲ್ಲಿ ಅವಳು ಬಿಟ್ಟು ಬಂದಿದ್ದ ಗಾಡಿಯನ್ನು ತಂದು ಕೈಗೆ ಕೊಟ್ಟರು. ದೂರದಲ್ಲಿ ಯಾರನ್ನೋ ಕಂಡವಳಂತೆ ಅವಳು ಮತ್ತೆ ಜೋರಾಗಿ “ಕಮೀಲಿಯಾ!” ಎಂದು ಕೂಗುತ್ತಾ ಓಡಿದಳು. ದನಿಯಲ್ಲಿ ತಟ್ಟನೆ ತೋರಿದ ಸಮಾಧಾನ ಭಾವ “ಸಿಕ್ಕೆಯಲ್ಲಾ” ಎಂಬ ಒಳದನಿ ಎಲ್ಲರ ಕತ್ತನ್ನೂ ತಿರುಗಿಸಿತು. ಓಡಿ ಆ ಹೆಂಗಸು ತನ್ನ ಮಗಳನ್ನು ಅಪ್ಪಿಕೊಂಡಳು. ಆದರೆ ಆ ಮಗಳು ಪುಟ್ಟ ಮಗುವೇನೂ ಅಲ್ಲ. ಆ ಮಗಳಿಗೂ ಒಂದು ಪುಟ್ಟ ಮಗುವಿತ್ತು. ಮಗುವನ್ನು ಗಾಡಿಯಲ್ಲಿ ಕೂಡಿಸಿಕೊಂಡು ಶಾಪಿಂಗ್ ನಿರತಳಾಗಿದ್ದಳು ಅಷ್ಟೆ. ಪುಟ್ಟ ಮಗು ಮಿಕಮಿಕ ನೋಡುತ್ತಿತ್ತು. ಆ ಅಜ್ಜಿಗೆ ಒಂದು ಗಳಿಗೆ ಲೋಕದಲ್ಲಿ ಎಲ್ಲವನ್ನೂ ಕಳಕೊಂಡವರಂತೆ ಅನಿಸಿರಬೇಕು. ಅವಳು ಮಗಳನ್ನು ಅಪ್ಪಿಕೊಂಡಾಗ ಎಷ್ಟೋ ವರ್ಷದ ನಂತರ ಸಿಕ್ಕವರನ್ನು ಅಪ್ಪಿಕೊಂಡಂತಿತ್ತು. ಮಗಳು ಕೈಬೆರಳು ಮಾಡಿ ಅವಳಿಗೆ ಏನೋ ತಾಕೀತು ಮಾಡುತ್ತಿದ್ದಳು.

ಯಾಕೋ ಆ ಕೂಗು ಒಂದೆರಡು ದಿನ ನನ್ನ ಮನಸ್ಸಿನಲ್ಲಿ ಹಾಗೇ ಕೂತು ಬಿಟ್ಟಿತು. ಜನ ನಿಬಿಡವಾದ ಜಾತ್ರೆಯಲ್ಲೋ, ಬಸ್‌ ಸ್ಟಾಂಡಿನಲ್ಲೋ, ರೈಲು ನಿಲ್ದಾಣದಲ್ಲೋ ತನ್ನವರು ಕಣ್ತಪ್ಪಿಹೋದರೆ ಆಗುವ ಅನುಭವ ಯಾರಿಗೂ ವಿವರಿಸಬೇಕಾಗಿಲ್ಲ. ಲೋಕದಲ್ಲಿ ತನಗೆ ಹತ್ತಿರದವರನ್ನು ಕಳದುಕೊಳ್ಳುವ ಭಯ ಆ ಕೂಗಿನಲ್ಲಿತ್ತು. ಬಹುಶಃ ಅದು ವಯಸ್ಸಿಗೆ ಸಹಜವಾದ ಭಯವಿರಬಹುದು. ಅಥವಾ ಮಾನಸಿಕ ಸ್ವಾಸ್ಥ್ಯ ತಪ್ಪಿದವರ ಅಳಲಿರಬಹುದು. ಆ ತಾಯಿಯ ಭಯವನ್ನು ನೋಡಿದವರಿಗೆ ಅದು ಸಾಮಾನ್ಯವಲ್ಲ ಎಂದು ತಟ್ಟನೆ ತಿಳಿಯುವಂತಿತ್ತು.

ಮಾನಸಿಕ ಅಸ್ವಾಸ್ಥ್ಯ ಕಣ್ಣಿಗೆ ಕಾಣದ ಕಾಯಿಲೆ. ಹಲವು ಬಾರಿ ನಗೆಪಾಟಲಿಗೆ ಈಡಾಗುವ ಸಂಗತಿ. ಹಾಗಾಗಿಯೇ ಅದನ್ನು ಮುಚ್ಚಿಡುವ ಪ್ರಯತ್ನಗಳೂ ಹೆಚ್ಚು. ಆದ್ದರಿಂದ ಅದರ ನಿವಾರಣೆಗೆ ಬೇಕಾದ ಜನಬಲ, ಹಣಬಲ ದೊರಕಿಸುವುದೂ ಕಷ್ಟವೇ. ಹಾಗೆ ಮನಸ್ಸಿನ ಕಾಯಿಲೆಗೆ ತುತ್ತಾದವರು ಹಿಂಸೆ, ಮಾದಕ ದ್ರವ್ಯ ಇನ್ನಿತರ ವ್ಯಸನಗಳಿಗೆ ತುತ್ತಾಗುವುದು ಸುಲಭ. ತಮ್ಮ ಪ್ರೀತಿ ಪಾತ್ರರನ್ನು, ನಲ್ಲ-ನಲ್ಲೆಯರನ್ನು ಕ್ರೂರವಾಗಿ ಬಡಿದು ಕೊಂದ ಹಲವಾರು ನಿದರ್ಶನಗಳಿವೆ. ಮಾನಸಿಕ ತೊಂದರೆ ಅಲ್ಲದೆ ಅಂತಹ ನಡವಳಿಕೆಗೆ ಬೇರೆ ಉತ್ತರ ವಿರಳ. ಒಳಗೊಳಗೇ ಕುದಿದು ಕಟ್ಟೆವಡೆದು ಬದುಕಿನ ದಾರಿ ತಪ್ಪಿಹೋದ ನಿದರ್ಶನಗಳು ಇವೆ. ಇವಕ್ಕೆಲ್ಲಾ ನಮ್ಮ ಪ್ರತಿಕ್ರಿಯೆ ಏನು? ಹಿಂಸೆ ಹಾಗು ಮಾದಕ ದ್ರವ್ಯಗಳು ನೈತಿಕ ಮಟ್ಟದಲ್ಲಿ ತಟ್ಟನೆ ನಮ್ಮ ಪ್ರತಿಕ್ರಿಯೆಗೆ ಸಿಕ್ಕಿಬಿಡುತ್ತವೆ. ಹಾಗಾಗಿಯೇ ಕಾನೂನುಗಳು ಪ್ರಪಂಚಾದ್ಯಂತ ಅವನ್ನು ಕ್ರಿಮಿನಲೈಸ್ ಮಾಡಿಬಿಟ್ಟಿವೆ. ಆದರೆ ಅವುಗಳ ಜಾಲದಿಂದ ತಪ್ಪಿಸುವ ಹಾದಿಯ ಕಡೆ ಹೆಚ್ಚು ಗಮನ ಹರಿಸಿಯೇ ಇಲ್ಲ.

ಕಾಯಿಲೆಯ ಎಳೆತನದಲ್ಲೇ – “ಅರ್ಲಿ ಇಂಟರ್ವೆಂಶನ್” ಕ್ರಮವನ್ನೂ ಹಾಗು ಅವರಿಗೆ “ಬೆಂಬಲಿತ ವಸತಿ”ಯನ್ನು ಸಿದ್ಧಗೊಳಿಸುವಲ್ಲಿ ಆಸ್ಟ್ರೇಲಿಯಾ ಎಂಬತ್ತು ತೊಂಬತ್ತರಲ್ಲಿ ಮುಂಚೂಣಿಯಲ್ಲಿದ್ದ ದೇಶ. ಯೌವ್ವನದ ಸೈಕಾಸಿಸ್ ಪ್ರಸಂಗಗಳನ್ನು ಮೊದಲೇ ಪತ್ತೆ ಹಚ್ಚಿ ಚಿಕಿತ್ಸೆಗೆ ಒಡ್ಡುವುದು ತುಂಬಾ ಪರಿಣಾಮಕಾರಿಯಾಗಿದೆ. ಹಾಗೆಯೇ ಚಿಕಿತ್ಸೆಗೆ ಒಳಪಟ್ಟವರಿಗೆ ಅಗತ್ಯವಾದ ಸಿದ್ಧ ವಸತಿಯಿಂದ ಎಷ್ಟೇ ಪ್ರಾಣಹಾನಿಗಳು ತಪ್ಪಿವೆ. ಇವುಗಳಿಂದ ಎಷ್ಟೋ ಜನ ಲಾಭವನ್ನೂ ಪಡೆದು ಈಗ ಸ್ವಸ್ಥ ಜೀವನ ನಡಿಸುತ್ತಿದ್ದಾರೆ. ಆದರೆ ಕಳೆದ ಹತ್ತಾರು ವರ್ಷಗಳಲ್ಲಿ ಮಾನಸಿಕ ಸ್ವಾಸ್ಥ್ಯಕ್ಕೆ ಸರ್ಕಾರಗಳು ಸಲ್ಲಬೇಕಾದಷ್ಟು ಹಣ ಹಾಗು ಸವಲತ್ತು ಕೊಡದೆ ಒಂದು ಬಗೆಯಲ್ಲಿ ಈ ದೇಶ ಹಿಂದುಳಿದಂತೆ ಆಗಿದೆ. ಯುವಜನರಲ್ಲಿ ಆತ್ಮಹತ್ಯೆ ಒಂದು ಪಿಡುಗಾಗಿ ಕಾಡುತ್ತಿದೆ. ಈ ಸಲದ ಚುನಾವಣೆಯಲ್ಲೂ ಅದರ ಬಗ್ಗೆ ಟೋಕನ್ ಆಸ್ಥೆಯಷ್ಟೇ ತೋರುತ್ತಿದ್ದಾರೆ. ಮಾನಸಿಕ ತೊಂದರೆಯ ತೊಳಲಾಟಕ್ಕೆ ಒಳಗಾಗದವರ ಅಳವಿಗೆ ಅದರ ಕ್ರೂರತೆ ಸಿಕ್ಕದೇ ಹೋಗುವುದೇ ಇದಕ್ಕೆ ಕಾರಣವಿರಬಹುದು. “ಕಮೀಲಿಯಾ!” ಎಂಬ ಕೂಗು ತಟ್ಟಬೇಕಾದ ಮನಸ್ಸುಗಳನ್ನು ತಟ್ಟದೆ, ತೆರೆಯಬೇಕಾದ ಬಾಗಿಲು ತೆರೆಯದೆ ಆತಂಕದ ಪರಿಸ್ಥಿತಿ ರೂಪುಗೊಂಡಿದೆ ಎಂಬುದಂತೂ ನಿಜ.