ಈ ಕಡೆ ನೀರು ಕುಡಿಯೋಣ ಎಂದರೆ ಒಂದು ಹನಿ ನೀರೂ ಗುಡಿಯಲ್ಲಿ ಇರಲಿಲ್ಲ. ಬಿಟ್ಟರೆ ಕಲ್ಯಾಣಿ ನೀರು, ಅದರಲ್ಲಿ ನಾಯಿ ಸತ್ತ ವಾಸನೆ. ನೆನ್ನೆ ಅದರಲ್ಲೇ ಸ್ನಾನ ಮಾಡಿದೆ ಅಲ್ಲವೇ? ಅದನ್ನೇ ಕುಡಿದೇ ಅಲ್ಲವೇ? ಆಗಲೇ ಇದು ಬಿದ್ದಿತ್ತೋ, ರಾತ್ರಿ ಬಿದ್ದಿತ್ತೋ? ಎಂದು ಪದ್ದಣ್ಣ ಅಂದಾಜಿಸುವಾಗ ವಾಕರಿಕೆ ಒತ್ತರಿಸಿಕೊಂಡುಬಂತು. ಹಾಗೇ ತೆವಳಿಕೊಂಡು ಪೆದ್ದಂಪಲ್ಲಿಯ ಬ್ರಾಹ್ಮಣನ ಮನೆಗೆ ಹೋಗಿ ಕುಡಿಯಲು ನೀರು ಕೇಳಿದ. ಅವರು ಒಂದು ಚೊಂಬು ನೀರು ಕೊಟ್ಟರು, ಅದು ಸರಿಯೇ, ಆದರೆ ಇನ್ನೊಂದು ಲೋಟ ಕುಡಿಯಲಿಕ್ಕೆ ನೀರು ಕೊಡಿ ಎಂದಾಗ ಇಲ್ಲವೇ ಇಲ್ಲ ಎಂದುಬಿಟ್ಟರು.
ಕರಣಂ ಪವನ್ ಪ್ರಸಾದ್ ಬರೆದ ಹೊಸ ಕಾದಂಬರಿ ‘ರಾಯಕೊಂಡ’ ದ ಒಂದು ಭಾಗ ನಿಮ್ಮ ಓದಿಗೆ

 

ನಾಯಿ ಸತ್ತು ಬಿದ್ದಿದೆ. ಅದರಲ್ಲೂ ದೇವರ ಕಲ್ಯಾಣಿಯಲ್ಲಿ! ರೆಡ್ಡಿಯ ಆಳುಗಳು ನೀರು ತೆಗೆದುಕೊಳ್ಳಲಿಕ್ಕೆ ಬರುತ್ತಾರೆs ಎಂದು ಪದ್ದಣ್ಣ ಮೊದಲಿಗೆ ನೆನೆಸಿಕೊಂಡ. ಇಲ್ಲ ಇಂದು ಶನಿವಾರ ಅವರು ಬರೋಲ್ಲ ಇನ್ನು ಬರುವುದು ಸೋಮವಾರವೇ ಎಂದು ನೆನಪಾದ ಮೇಲೆ ಎದೆಯ ಬಡಿತ ಸ್ವಲ್ಪ ಕಡಿಮೆಯಾಯಿತು. ಏನು ಮಾಡಬೇಕೆಂದೇ ಪದ್ದಣ್ಣನಿಗೆ ತೋಚಲಿಲ್ಲ. ನಾಯಿಯ ಹೆಣವನ್ನೇ ಆ ಕಡೆಯಿಂದ ಈ ಕಡೆಯಿಂದ ಎಲ್ಲಾ ಕಡೆಯಿಂದಲೂ ನೋಡಿದ. ಹಗ್ಗವನ್ನು ಹಾಕಿ ತೆಗೆದುಬಿಡಲೇ? ಎಂದು ಯೋಚಿಸಿದ. ಆಗಲೇ ಶುರುವಾದದ್ದು ಧರ್ಮ ಸಂಕಟ. ಬೇರೆ ಪ್ರಾಣಿಯಾಗಿದ್ದರೆ ಸರಿ, ನಾಯಿ ಹೆಣ ತೆಗೆಯುವವನು ಚಾಂಡಾಲರು ಮಾತ್ರ. ಬ್ರಾಹ್ಮಣನಾಗಿ ಸತ್ತ ನಾಯಿ ತೆಗೆದರೆ ಅಪರಾಧ! ಬೇರೆ ಜಾತಿಯವರು ತೆಗೆಯುತ್ತಾರೆ ಎಂದರೆ ಸತ್ತನಾಯಿಯನ್ನು ಅದೂ ದೇವರ ಕಲ್ಯಾಣಿಯಲ್ಲಿ ಯಾರು ತೆಗೆಯುತ್ತಾರೆ ಎಂದು ಪದ್ದಣ್ಣನಲ್ಲಿ ಹರಡಿತು. ಸ್ನಾನ ಆಗದಿದ್ದರೂ ಪರವಾಗಿಲ್ಲ ದೇವಸ್ಥಾನ ತೆರೆಯುವ ಮೊದಲು ಈ ಸತ್ತನಾಯಿಯನ್ನು ತೆಗೆಸಬೇಕು ಎಂದು ತೀರ್ಮಾನಿಸಿ ದಾಸು ಜನರ ತಾಂಡಾದ ಕಡೆಗೆ ನಡೆದ.

ಈಗ ತಾನೆ ಪೆದ್ದಂಪಲ್ಲಿಯ ಜನರು ಊರಿನ ಕಡೆಯ ಕುಂಟೆಯಲ್ಲಿ ತೊಳೆದುಕೊಳ್ಳುತ್ತಿದ್ದರು. ದಾಸು ಜನರು ಈ ಕಡೆಯ ಕುಂಟೆಯಲ್ಲಿ ತೊಳೆದುಕೊಳ್ಳುತ್ತಿದ್ದರು. ದಾಸು ಜನರನ್ನು ಇವರು ಊರಿಗೆ ಸೇರಿಸದೆ ಇರಬಹುದು. ಆದರೆ ಈ ಎರಡೂ ಕುಂಟೆಯ ನೀರು ಒಂದು ತಗ್ಗಿನಲ್ಲಿ ಸೇರುತ್ತಿತ್ತು. ಇಬ್ಬರ ಹೇಲಿನ ನೀರು ಕೂಡಿಯೇ ಕೂಡುತ್ತಿತ್ತು. ಈ ಬಗ್ಗೆ ಯಾರೂ ಯೋಚಿಸಿಯೇ ಇರಲಿಲ್ಲ. ಒಂದರ್ಥದಲ್ಲಿ ಆ ತಗ್ಗುಪ್ರದೇಶ ಸರ್ವಕುಂಡಿ ತೀರ್ಥ ಸಂಗಮವಾಗಿತ್ತು.

ತಾಂಡಾಕ್ಕೆ ಹೋಗುವ ದಾರಿಯಲ್ಲಿಯೇ ಪದ್ದಣ್ಣನ ವಯಸ್ಸಿನವನೇ ಆದ ದಾಸು ಜನರ ಚಿಟ್ಟಿ ಸಿಕ್ಕ. ಅವನೂ ಸಹ ಆಗತಾನೇ ಪೊಟರೆಗಳ ಹಿಂದೆ ಮಾಡಿ, ಕುಂಟೆಗೆ ಹೋಗಿ ತೊಳೆದುಕೊಂಡು, ಲುಂಗಿಯಲ್ಲಿ ಒದ್ದೆಯನ್ನು ಸವರಿಕೊಂಡು ಬರುತ್ತಿದ್ದ. “ಲೇ ಚಿಟ್ಟಿ, ಲೇಯ್ ಚಿಟ್ಟಿ, ಇಕ್ಕಡ್ ರಾ”, ಚಿಟ್ಟಿಗೆ ಮಾತು ಕೇಳಿಸಿದರೂ ದೂರದಿಂದಲೇ ಏನು ಎಂದು ಕೈ ಮಾಡಿದ. “ಆಹ್ ನೀಯಬ್ಬ. ರಾ ಇಕ್ಕಡ” ಎಂದು ಮತ್ತೊಮ್ಮೆ ಪದ್ದಣ್ಣ ಗದರಿದ. ಸ್ವಲ್ಪ ದೂರದಲ್ಲಿ ನಿಂತು ಚಿಟ್ಟಿ “ಏಮನ್ನಾ?” ಎಂದ. “ವಾಡು ಉರುವಯ್ಯಾ ಎಕ್ಕಡರಾ?” ಎಂದೊಡನೆ ತೋರಿಸುವುದಾಗಿ ಹೇಳುತ್ತಾ ಚಿಟ್ಟಿ ಪದ್ದಣ್ಣನನ್ನು ಜೊತೆ ಮಾಡಿಕೊಂಡು ತಾಂಡಾ ಕಡೆಗೆ ಹೋದ. ಇಬ್ಬರ ಮಧ್ಯೆ ಐದು ಅಡಿ ಅಂತರವಿತ್ತು. ತಾಂಡಾದ ದಿನ್ನೆಯ ಮೇಲೆ ನಿಂತು, ಉರುವಯ್ಯನ ಮನೆ ಯಾವುದು ಎಂದು ಅಂದಾಜಿಸುತ್ತಿದ್ದ.

(ಕರಣಂ ಪವನ್ ಪ್ರಸಾದ್)

ದಾಸು ಜನರ ತಾಂಡಾಕ್ಕೆ ಯಾರೂ ಹೋಗುತ್ತಿರಲಿಲ್ಲ. ಬರಲೂ ಆ ಜನರೂ ಬಿಡುತ್ತಿರಲಿಲ್ಲ. ಅದರಲ್ಲೂ ಬ್ರಾಹ್ಮಣ ಪದ್ಮನಾಭ ಎಂದಿಗೂ ಒಳಗೆ ಕಾಲಿಡುತ್ತಿರಲಿಲ್ಲ. ಬ್ರಾಹ್ಮಣರೂ-ರಾಜರು(ಕ್ಷತ್ರಿಯರು) ತಾಂಡಾಕ್ಕೆ ಬಂದರೆ ಮನೆ ಅದೃಷ್ಟ ಹೋಗಿ ವಕ್ರ ಬಡ್ಕೋತದೆ ಎಂಬುದು ಅವರ ನಂಬಿಕೆ. ಜೀತ-ಕೂಲಿ ಇವೇ ಆ ಜನರ ಕಸುಬು. ಯಾರು ಏನೇ ಹೇಳಿದರೂ ಮಾಡಿಕೊಡುತ್ತಾರೆ. ಬೇರೆ ಜಾತ್ಯಸ್ಥರ ಜೊತೆ ಮಾತುಕತೆ ಇದ್ದರೂ ಆ ದಿನ್ನೆಯ ಮೇಲೆಯೇ ಐದು ಅಡಿ ದೂರದಲ್ಲಿ. ದಿನ್ನೆಯ ಮೇಲಿದ್ದ ಪದ್ದಣ್ಣನಿಗೆ ಉರುವಯ್ಯನನ್ನು ಚಿಟ್ಟಿ ಮನೆಯಿಂದ ಈಚೆ ಕರೆದುಕೊಂಡು ಬಂದಿದ್ದು ಕಾಣಿಸಿತು.

“ಹೋಯ್ ಚಿಟ್ಟಿ… ಹೊಯ್ ಉರುವಯ್ಯೋ. ಈ ಪಕ್ಕ ಆಹ್. ಇಕ್ಕಡ ಚೂಡು. ರಾ” ಎಂದು ಪದ್ದಣ್ಣ ಕೂಗಿದ. ಉರುವಯ್ಯನದು ನಲವತ್ತರ ವಯಸ್ಸು. ಸೆಟ್ಟಿಪಾಳ್ಯದಲ್ಲಿ ಕೂಲಿ ಮಾಡುತ್ತಾನೆ. ಗಟ್ಟಿಮುಟ್ಟಾದ ದೇಹ. ಸ್ವಲ್ಪ ಗೂನು ಸೊಂಟ. ಹಲ್ಲುಗಳು ಗಾಢ ಹಳದಿ. ಅದರ ಮಧ್ಯೆ ಕಂದು ಬಣ್ಣದ ಗೆರೆಗಳು. ರಾತ್ರಿ ಇಳಿಸಿದ ಈಚಲದ ಹೆಂಡ ಅವನ ಕಣ್ಣನ್ನು ಇನ್ನೂ ಕೆಂಪಗೇ ಇರಿಸಿತ್ತು. ಹೀಗೀಗೆ ನಾಯಿ ಸತ್ತು ಬಿದ್ದಿದೆ. ಆದಷ್ಟು ಬೇಗ ಅದನ್ನು ತೆಗೆಯಬೇಕು. ಊರಿನವರಿಗೆ ತಿಳಿದರೆ ಸರಿ ಇರೊಲ್ಲ. ಒಂದು ಮಾತು; ನೀನು ಇದನ್ನು ಯಾರಿಗೂ ಹೇಳಬಾರದು ಗೊತ್ತಾಯ್ತ? ಎಂದು ಬಗೆ ಬಗೆಯಾಗಿ ವಿವರವನ್ನು, ಕೆಲಸವನ್ನು ಹೇಳಿ, ನಿನಗೆ ಇನಾಮು ಎಂದು ಸಣ್ಣ ಮೂಟೆ ಮಾವಿನಕಾಯಿ, ಅಕ್ಕಿ-ಬೇಳೆ, ಒಂದು ಕಾಸು ನೀಡುತ್ತೇನೆಂದು ಹೇಳಿದ. ವಿನಮ್ರನಾಗಿ ಕೇಳಿಸಿಕೊಂಡ ಉರುವಯ್ಯ “ಮೀರು ಎಲಾ ಚೆಪ್ತೆ ಅಲಾ ಸಾಮೋರು” ಎನ್ನುತ್ತಾ ಚಿಟ್ಟಿಗೆ ಹಗ್ಗ ಮತ್ತು ಪಟ್ಟಿ ತೆಗೆದುಕೊಂಡು ಬರಲು ಹೇಳಿದ.

ಉರುವಯ್ಯ ಕಲ್ಯಾಣಿಗೆ ಬರುವಷ್ಟಲ್ಲಿ ಏಳು ಗಂಟೆ ಆಗಿಹೋಗಿತ್ತು. ಜನ ಬಂದುಬಿಟ್ಟರೆ ಹೇಗೆ ಎಂಬ ಭಯದಲ್ಲಿ ದೇವಸ್ಥಾನದ ಮುಂದೆಯೇ ಪದ್ದಣ್ಣ ಕಾವಲಿಗೆ ನಿಂತ. ಕಲ್ಯಾಣಿಗೆ ಜಿಗಿದ ಉರುವಯ್ಯ ಸತ್ತನಾಯಿಗೆ ಹಗ್ಗ ಕಟ್ಟಿ, ಮೇಲಕ್ಕೆ ಬಂದು ಅದನ್ನು ಒಂದು ಮೆಟ್ಟಿಲಿಗೆ ಎಳೆದುಕೊಂಡು, ತನ್ನ ಭುಜಕ್ಕೆ ಎತ್ತಿಕೊಂಡು, ಮೆಟ್ಟಿಲನ್ನು ನಿಧಾನವಾಗಿ ಏರಿ ನೆಲದಲ್ಲಿ ಸತ್ತ ನಾಯಿಯನ್ನು ಉರುಳಿಸಿ “ಸಾಮೋರು” ಎಂದು ಕೂಗಿದ. ದಢಕ್ಕನೇ ಓಡಿಬಂದ ಪದ್ದಣ್ಣ. ಸತ್ತ ನಾಯಿ ಮೇಲೆ ಬಂದದ್ದನ್ನು ನೋಡಿ ಸಮಾಧಾನ ಮಾಡಿಕೊಂಡ. ವಾಸನೆ ಮಾತ್ರ ಹೇಳತೀರದಾಗಿತ್ತು. ತಕ್ಷಣವೇ ಈ ಸತ್ತನಾಯಿಯನ್ನು ಜಾಲಿ ಮುಳ್ಳಿನ ಬಯಲಿಗೆ ಹಾಕು ಎಂದು ಆದೇಶ ನೀಡಿ, ಗುಡಿಯಲ್ಲಿ ಇಟ್ಟಿದ್ದ ಅಕ್ಕಿ-ಬೇಳೆಯನ್ನು ಒಂದು ವಸ್ತ್ರದಲ್ಲಿ ಕಟ್ಟಿ ಉರುವಯ್ಯನ ಕೈಗಳಿಗೆ ಎಸೆದ. ಪದ್ದಣ್ಣ ನಾಳೆ ಮಧ್ಯಾಹ್ನ ಯಾರೂ ಇರದೇ ಇರುವಾಗ ಬಂದು ಮಾವಿನಕಾಯಿ, ಕಾಸು ಇಸ್ಕೋ ಎಂದು ಉರುವಯ್ಯನಿಗೆ ತಾಕೀತು ಮಾಡಿದ. ಉರುವಯ್ಯನ ಪಕ್ಕದಲ್ಲೇ ನಿಂತಿದ್ದ ಚಿಟ್ಟಿ ಮುಖ ಮುಖ ನೋಡುತ್ತಿದ್ದ. “ನೀಕು ಇಸ್ತಾನ್ರ…” ಎಂದು ಪದ್ದಣ್ಣ ಹೇಳಿದ ಮೇಲೆ ಇಬ್ಬರೂ ಅಲ್ಲಿಂದ ಹೊರಟರು. ಪುನಃ ಕಲ್ಯಾಣಿಯನ್ನು ಪದ್ದಣ್ಣ ಗಮನಿಸಲಿಲ್ಲ. ಗುಡಿಯ ಒಳಗಿದ್ದ ತಂಬಿಗೆ ನೀರಿಗೆ ಅರಿಶಿನ ಹಾಕಿ ಮೈಮೇಲೆ ಪ್ರೋಕ್ಷಣೆ ಮಾಡಿಕೊಂಡು ಶುದ್ಧಿ ಮಾಡಿಕೊಂಡು ದೇವರ ಪೂಜೆ ಮುಗಿಸಿದ.

ನೆನ್ನೆಯದೇ ಅಲಂಕಾರವಿತ್ತು. ಇನ್ನೇನು ಹೆಚ್ಚು ಮುಟ್ಟಲೇ ಇಲ್ಲ. ಒಂದಿಬ್ಬರು ಮಾತ್ರ ಗುಡಿಗೆ ಬಂದು ಹೋದರು. ಹನ್ನೊಂದರ ವೇಳೆಗೆ ಗುಡಿಯ ಬಾಗಿಲು ಮುಂದಿಟ್ಟು ಕಲ್ಯಾಣಿಯ ಮೇಲೆ ಪದ್ದಣ್ಣ ನಿಂತಾಗ ನೀರೆಲ್ಲ ಸತ್ತ ನಾಯಿಯ ವಾಸನೆಯನ್ನೇ ಹಿಡಿದುಕೊಂಡು ಅದನ್ನೇ ಪಸರಿಸುತ್ತಿತ್ತು. ಇದನ್ನು ಶುದ್ಧಿ ಮಾಡುವುದು ಹೇಗೆ ಎಂಬ ದೊಡ್ಡ ತಲೆನೋವು ಪದ್ದಣ್ಣನಿಗೆ ಎದುರಾಯಿತು. ಆಗಲೇ ಆದ ದೊಡ್ಡ ಪ್ರಮಾದ(!?) ಅವನಿಗೆ ಅರಿವಾಗಿದ್ದು. ಅದೇನೆಂದರೆ ದಾಸು ಜನರನ್ನು ಪದ್ದಣ್ಣ ದೇವರ ಕಲ್ಯಾಣಿಗೆ ಇಳಿಸಿಬಿಟ್ಟಿದ್ದ! ಅಯ್ಯೋ ಶಿವನೇ ನನ್ನ ಬುದ್ಧಿಗೆ ಬರಲೇ ಇಲ್ಲವಲ್ಲ, ಶ್ವಪಚರನ್ನ ದೇವರ ಕಲ್ಯಾಣಿಗೆ ಇಳಿಸಿಬಿಟ್ಟೆನಲ್ಲ! ಎಂದು ತನ್ನಲ್ಲೇ ಗೋಳಾಡಿಕೊಂಡು ತಕ್ಷಣವೇ ರಾಯಕೊಂಡಕ್ಕೆ ಹೋಗಿ ಸೋದರಮಾವ ನಾರಾಯಣ ಭಟ್ಟನಿಗೆ ವಿಷಯ ಹೇಳಿ ಪರಿಹಾರ ಹುಡುಕಬೇಕು ಎಂದುಕೊಂಡು ಗಡಿಬಿಡಿಯಲ್ಲಿ ಸೈಕಲ್ ಏರಿದ.

*******

“ಏನ್ ಮಾಡೋದು ನಿನ್ನ ಪಿಂಡ, ಹೋಗಿ ಹೋಗಿ ಶ್ವಪಚಮುಂಡೇಮಕ್ಳನ್ನ ಕಲ್ಯಾಣಿ ಒಳಗೆ ಬಿಟ್ಟಿದ್ದೀಯಲ್ಲೋ. ನಿನಗೆ ತಲೇಲಿ ಬುದ್ಧಿ ಇದೆಯಾ? ಲದ್ದಿ ಇದೆಯಾ? ಆ ರೆಡ್ಡಿಗಳಿಗೆ ಗೊತ್ತಾದ್ರೆ ನಮ್ಮ ತಲೆ ತೆಗಿತಾರೆ ಅಷ್ಟೇ. ಮಾಡೋದೆಲ್ಲಾ ಮಾಡಿ, ಬಂದುಬಿಟ್ಟ ಈಗ ಏನು ಮಾಡೋದು ಮಾವ ಅನ್ಕಂಡು, ದಡ್ಡಮುಂಡೇದೆ”

“ನೀವು ತೆಗಿತಿದ್ರ ನಾಯೀನ? ಯಾರು ತೆಗಿತಿದ್ರು? ಅವರ ಕೈಯಲ್ಲೇ ತೆಗಿಸಬೇಕಿತ್ತು. ನಾನಾ ಹೇಳ್ದೆ ನಾಯಿಗೆ ಕಲ್ಯಾಣೀಲಿ ಬಿದ್ದು ಸಾಯಿ ಅಂತ?”

“ಎದುರು ವಾದಿಸ್ತೀಯಾ? ಭಲೆಭಲೇ… ಹೋಗಲೀ ಇನ್ನೂ ಯಾರಿಗೂ ಗೊತ್ತಾಗಿಲ್ಲ ತಾನೇ?”

“ಇಲ್ಲ”

“ಒಳ್ಳೇದು, ನೀನು ಇಲ್ಲೇ ಕೂತಿರು, ನಾನು ಈಗಲೇ ಬರ್ತೀನಿ”

ಎಂದ ನಾರಾಯಣ ಭಟ್ಟ ಮನೆಯವರಿಗೆ ತಿಳಿಯದಂತೆ ಪಿಸುಗುಟ್ಟುತ್ತಾ, ಸಿದ್ಧವಾಗಿ ಬಂದು, “ನಾನು ಹಿಂದೇನೆ ಬರ್ತೀನಿ, ನೀನು ನಿಮ್ಮ ಮನೆ ಮುಂದೆ ಹೋಗಬೇಡ, ಹಿಂದಿನ ಬೀದಿಯಿಂದ ಹೋಗು. ಗೊತ್ತಾಯ್ತ ಹೋಗು” ಎಂದು ಪದ್ದಣ್ಣನನ್ನು ಸೈಕಲ್ಲಿನಲ್ಲಿ ಮುಂದೆ ಕಳಿಸಿ, ತಾನೂ ಹಿಂದೆ ಇನ್ನೊಂದು ಸೈಕಲ್ ಏರಿದ. ಮಧ್ಯಾಹ್ನ ಮೂರರ ಬಿಸಿಲದು. ನಾರಾಯಣ ಭಟ್ಟ ತನ್ನ ಕಿವಿಯಾದಿಯಾಗಿ ತಲೆಗೆ ಬಟ್ಟೆ ಕಟ್ಟಿಕೊಂಡು, ಪೆಡಲನ್ನು ಒತ್ತುತ್ತಿದ್ದ. ಬಟ್ಟೆಯ ತುದಿಯೆಲ್ಲಾ ಒದ್ದೆಯಾಗಿ ಸೋರುತ್ತಿದ್ದವು. ಪದ್ದಣ್ಣನ ಮೈಮೇಲೆ ಎದ್ದಿದ್ದ ಕೆಂಪು ಚಿಬ್ಬಲು ರಣವಾಗಿ ಸೂರ್ಯನ ಕಿರಣಗಳು ರಕ್ತವನ್ನು ಹೀರುತ್ತಿದೆಯೋ ಎಂಬಂತೆ ನರಳಾಡುತ್ತಾ ಪೆಡಲನ್ನು ಒತ್ತುತ್ತಿದ್ದ. ಬೆವರನ್ನು ಒರೆಸಿಕೊಳ್ಳುವ ಹಾಗೂ ಇಲ್ಲ, ಒರೆಸಿಕೊಂಡರೆ ಚರ್ಮ ಕಿತ್ತುಬರುವಂಥ ಯಾತನೆ. ಕಣ್ಣುಗಳ ಬದಿಯಲ್ಲಿನ ನರಗಳು ಪಟಪಟ ಎಂದು ಬಡಿದುಕೊಳ್ಳುತ್ತಿದೆ. ಪೂರ್ತಿ ರೆಪ್ಪೆ ತೆರೆವಂತೆಯೂ ಇಲ್ಲ ಬಿಸಿಲಿನ ಅಲೆಗಳು ಬಂಡೆಗಳಿಗೆ ಅಪ್ಪಳಿಸಿ ಮುಖಕ್ಕೆ ರಾಚುತ್ತವೆ. ಒಂದು ಕಡೆ ತಡೆಯಲಾಗದೇ ಪದ್ದಣ್ಣ ನಿಲ್ಲಿಸಿ ಪಕ್ಕಕ್ಕೆ ಉರುಳೇಬಿಟ್ಟ.

ಸತ್ತ ನಾಯಿ ಮೇಲೆ ಬಂದದ್ದನ್ನು ನೋಡಿ ಸಮಾಧಾನ ಮಾಡಿಕೊಂಡ. ವಾಸನೆ ಮಾತ್ರ ಹೇಳತೀರದಾಗಿತ್ತು. ತಕ್ಷಣವೇ ಈ ಸತ್ತನಾಯಿಯನ್ನು ಜಾಲಿ ಮುಳ್ಳಿನ ಬಯಲಿಗೆ ಹಾಕು ಎಂದು ಆದೇಶ ನೀಡಿ, ಗುಡಿಯಲ್ಲಿ ಇಟ್ಟಿದ್ದ ಅಕ್ಕಿ-ಬೇಳೆಯನ್ನು ಒಂದು ವಸ್ತ್ರದಲ್ಲಿ ಕಟ್ಟಿ ಉರುವಯ್ಯನ ಕೈಗಳಿಗೆ ಎಸೆದ.

ಪೆದ್ದಂಪಲ್ಲಿಯಿಂದ ರಾಯಕೊಂಡಕ್ಕೆ, ಈಗ ತಕ್ಷಣ ಪುನಃ ರಾಯಕೊಂಡದಿಂದ ಪೆದ್ದಂಪಲ್ಲಿಗೆ. ಬಿಸಿಲಿನಲ್ಲಿ ಸೈಕಲ್ ತುಳಿದ ಪರಿಣಾಮವದು. ಹಿಂದೆಯೇ ಬಂದ ನಾರಾಯಣ ಭಟ್ಟ ಸೈಕಲ್ ಮೇಲೆ ಕುಳಿತುಕೊಂಡೇ “ಏಯ್, ಎದ್ದೇಳೋ… ನನಗೆಷ್ಟೋ ವಯಸ್ಸು? ನಾನೇ ತುಳೀತಿಲ್ವ, ಎದ್ದೇಳು. ಏನೂ ಆಗಲ್ಲ, ರಾಯಕೊಂಡದ ಗಂಡಸಾಗಿ ಬಿಸಿಲಿಗೆ ಹೆದರ್ತಿಯಲ್ಲೋ” ಎಂದು ಗದರಿದ. ನಾನು ಹಿಂದೆಯೇ ಬರುತ್ತೇನೆ, ತಾವು ಹೋಗಿ ಎಂಬಂತೆ ಕೈ ಸನ್ನೆ ಮಾಡಿದ ಪದ್ದಣ್ಣ ನಿಧಾನವಾಗಿ ಸೈಕಲನ್ನು ತುಳಿಯುತ್ತಾ ಹೊರಟ. ಪೆದ್ದಂಪಲ್ಲಿ ಸೇರುವ ಹೊತ್ತಿಗೆ ಆರು ದಾಟಿತ್ತು. ಮೊದಲೇ ಸೇರಿದ್ದ ನಾರಾಯಣ ಭಟ್ಟ ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸುತ್ತಿದ್ದ. ಅತಿ ನಿಧಾನವಾಗಿ ತಲುಪಿದ ಪದ್ದಣ್ಣನನ್ನು ಗುರುಗುರು ನೋಡುತ್ತ “ಇಪ್ಪುಡು ವಸ್ತುನ್ನಾವು ಹಾ?” ಎಂದು ಜೋರಾಗಿ ಗದರಿ. “ನೋಡು ನಾನೊಂದು ಉಪಾಯ ಮಾಡಿದ್ದೀನಿ, ನೀನು ಗುಡಿ ತೆಗೆದು ಪೂಜೆ ಮಾಡು, ಯಾವನ್ನೂ ಕಲ್ಯಾಣಿ ಕಡೆ ಬಿಡಬೇಡ. ವಾಸನೆ ಬರದಿರ ಇರೋ ತರ ಕಲ್ಯಾಣಿ ಸುತ್ತ ಈಗಲೇ ಧೂಪ ಹಾಕು. ಗುಡಿ ಬೇಗ ಮುಚ್ಚಿಬಿಡು. ನಾನು ಈಗ ಕೊತ್ತಪಾಳ್ಯಕ್ಕೆ ಹೋಗಿ, ರಾತ್ರಿ ಬರ್ತೀನಿ, ನೀನು ಇಲ್ಲೇ ಇರು.”

ಆಯಾಸದಲ್ಲೂ ಪದ್ದಣ್ಣ “ಯಾಕೆ?” ಎಂದ. “ಮುಚ್ಕೊಂಡು ನಾನು ಹೇಳಿದ್ದು ಮಾಡೋ, ದಫೇದಾರ ಇವನು ಎಲ್ಲಾ ವರದಿ ಒಪ್ಪಿಸಬೇಕು” ಎಂದವನೇ ನಾರಾಯಣ ಭಟ್ಟ ಕೊತ್ತಪಾಳ್ಯಕ್ಕೆ ಸೈಕಲ್ ತಿರುಗಿಸಿದ.

ಈ ಕಡೆ ನೀರು ಕುಡಿಯೋಣ ಎಂದರೆ ಒಂದು ಹನಿ ನೀರೂ ಗುಡಿಯಲ್ಲಿ ಇರಲಿಲ್ಲ. ಬಿಟ್ಟರೆ ಕಲ್ಯಾಣಿ ನೀರು, ಅದರಲ್ಲಿ ನಾಯಿ ಸತ್ತ ವಾಸನೆ. ನೆನ್ನೆ ಅದರಲ್ಲೇ ಸ್ನಾನ ಮಾಡಿದೆ ಅಲ್ಲವೇ? ಅದನ್ನೇ ಕುಡಿದೇ ಅಲ್ಲವೇ? ಆಗಲೇ ಇದು ಬಿದ್ದಿತ್ತೋ, ರಾತ್ರಿ ಬಿದ್ದಿತ್ತೋ? ಎಂದು ಪದ್ದಣ್ಣ ಅಂದಾಜಿಸುವಾಗ ವಾಕರಿಕೆ ಒತ್ತರಿಸಿಕೊಂಡುಬಂತು. ಹಾಗೇ ತೆವಳಿಕೊಂಡು ಪೆದ್ದಂಪಲ್ಲಿಯ ಬ್ರಾಹ್ಮಣನ ಮನೆಗೆ ಹೋಗಿ ಕುಡಿಯಲು ನೀರು ಕೇಳಿದ. ಅವರು ಒಂದು ಚೊಂಬು ನೀರು ಕೊಟ್ಟರು, ಅದು ಸರಿಯೇ, ಆದರೆ ಇನ್ನೊಂದು ಲೋಟ ಕುಡಿಯಲಿಕ್ಕೆ ನೀರು ಕೊಡಿ ಎಂದಾಗ ಇಲ್ಲವೇ ಇಲ್ಲ ಎಂದುಬಿಟ್ಟರು. ಹೋಗಲೀ ಕನಿಷ್ಠ ಮುಖ-ಕೈ-ಕಾಲಿಗೆ ಬಳಸೋ ನೀರು ಕೊಡಿ, ಗುಡಿಗೆ ಹೋಗಬೇಕು ಎಂದು ಕೇಳಿಕೊಂಡಾಗ, ಉದ್ದ ನಾಮವನ್ನು ಬಳಿದುಕೊಂಡಿದ್ದ ವ್ಯಕ್ತಿ ಈಚೆ ಬಂದು “ಏಮಯ್ಯ? ಕುಡಿಯಾಕೆ ಒಂದು ತಂಬಿಗೆ ನೀರು ಅಷ್ಟೇ ಇರಾದು, ಮುಖಕ್ಕೆ-ತೋಕೇಗೆ ಎಲ್ಲಿಂದಾವು ತರೋದು. ನಿಮ್ಮ ಗುಡಿಯಾಗ್ ಕಲ್ಯಾಣಿ ಇಲ್ಲವೋ?” ಎಂದು ವ್ಯಂಗ್ಯವಾಡಿದನು. ಬಾಗಿಲು ಮುಂದಕ್ಕೆ ಹಾಕುವಾಗ “ಮಲ್ಲಲಿಂಗನಂತೆ, ಅದೊಂದು ದೇವರಂತೆ, ಈತನೊಬ್ಬ ಅರ್ಚಕನಂತೆ ಮುಂಡಾ ಕೊಡಕು…ಲು” ಎಂದೇನೋ ಗೊಣಗಿಕೊಂಡ. ಇನ್ಯಾವತ್ತು ಈತನ ಮನೆಗೆ ಊಟಕ್ಕೆ ಬರಬಾರದು ಎಂದು ಪದ್ದಣ್ಣ ಆಯಾಸದಲ್ಲೂ ನಿಶ್ಚಯಿಸಿಕೊಂಡ.

ನಾರಾಯಣ ಭಟ್ಟನ ಆಣತಿಯಂತೆ ಬೇಗನೇ ಗುಡಿ ಮುಚ್ಚಿದ ಪದ್ದಣ್ಣ, ಮೈಮೇಲಿನ ಉರಿ ತಡೆಯಲಾರದೆ, ಕುಂಟೆಯ ನೀರಿನಲ್ಲಿ ಮಡಿಪಂಚೆ ಅದ್ದಿ, ಅದನ್ನು ಮೈಮೇಲೆ ಹಾಕಿಕೊಂಡು ಗುಡಿಯ ಜಗುಲಿಯಲ್ಲೇ ಮಲಗಿದ್ದ. ಇತ್ತ ನಾರಾಯಣ ಭಟ್ಟ ಕೊತ್ತಪಾಳ್ಯದಲ್ಲಿ ಅಮೀರ್ ಸಾಬನ ಮಾಂಸದ ಅಂಗಡಿಗೆ ಬಂದಿದ್ದ. ನಾರಾಯಣ ಭಟ್ಟನನ್ನು ತನ್ನ ಮಾಂಸದಂಗಡಿಯಲ್ಲಿ ಕಂಡದ್ದೇ ಕಂಡದ್ದು “ಏಮಯ್ಯವಾರು, ಮೀರಿಕ್ಕಡ? ಏಂಟಿ ಮೇಕ ಕಾವಾಲ?” ಎಂದು ಪರಿಚಯದ ಲಘು ದನಿಯಲ್ಲಿ ಅಮೀರ್ ಸಾಬಿ ಗಹಗಹಿಸಿ ಕೇಳಿದ. “ಅವುನಯ್ಯ ಮೇಕ ಕಾವಾಲಿ” ಸುಸ್ತಾದ ದನಿಯಲ್ಲಿ ನಾರಾಯಣ ಭಟ್ಟ ಮಾಂಸದಂಗಡಿಯ ಮಾಂಸದ ತೂಗು ಪ್ರದರ್ಶನದ ಸಾಲಿನಿಂದ ದೂರ ನಿಂತು ಹೇಳಿದ. ಅಮೀರ್ ಸಾಬನಿಗೆ ಅದು ನಿಜ ಅನ್ನಿಸಲಿಲ್ಲ. ಮಾಂಸ ಬೇಕೋ? ಪೂಜೆ ಮಾಡೋಕೆ ಬೇಕೋ? ಎಂದು ಗೇಲಿ ಮಾಡಿದ. ಇಲ್ಲಯ್ಯ ಜೀವಂತ ಮೇಕೆ ಬೇಕು ಎಂದಾಗ, ಅವನಿಗೆ ಆಶ್ಚರ್ಯ. ಅಂಗಡಿಯಲ್ಲಿ ಸದ್ಯಕ್ಕೆ ಇಲ್ಲ, ಮನೆಯ ಬಳಿ ಇರುತ್ತದೆ. ಹೋಗಿ ತರಬೇಕು, ಬಂದರೆ ಅಲ್ಲಿಯೇ ನಿಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಅವನು ವಿವರಿಸಿದಾಗ, ಅವನ ಜೊತೆಗೂಡಿ ನಾರಾಯಣ ಭಟ್ಟ ಅವನ ಮೊಹಲ್ಲಾಕ್ಕೇ ಹೋದ.

ನಾಲ್ಕಾರು ಮೇಕೆ ಅಲ್ಲಿದ್ದವು. ಯಾವುದನ್ನು ಕಡಿಮೆ ಬೆಲೆಗೆ ಕೊಡುತ್ತೀಯೋ, ಯಾವುದರಿಂದ ಪ್ರಯೋಜನವಿಲ್ಲವೋ ಅಂಥಾ ಒಂದು ಮೇಕೆಯನ್ನು ಸೈಕಲ್ ಕ್ಯಾರಿಯರ್ರಿಗೆ ಕಟ್ಟು ಎಂದು ಆಜ್ಞಾಪಿಸಿದ. ಅದರಂತೆ ಕಪ್ಪು-ಬಿಳಿ ಬಣ್ಣದ ಒಂದು ಬಡಕಲು ಮೇಕೆಯನ್ನು ಕ್ಯಾರಿಯರ್ರಿಗೆ ಕಟ್ಟಿಸಿಕೊಂಡ ನಾರಾಯಣ ಭಟ್ಟ, ವ್ಯವಹಾರ ಮುಗಿಸಿ, ಪೆದ್ದಂಪಲ್ಲಿಗೆ ಶರವೇಗದಲ್ಲಿ ಸೈಕಲ್ ತುಳಿದ. ತಲುಪಿದ್ದೇ ತಡ ಮಡಿಪಂಚೆಯೊದ್ದು ಮಲಗಿದ್ದ ಪದ್ದಣ್ಣನನ್ನು ತಿವಿದು, “ಉಂಡಾಡಿ ಗುಂಡ ಮಲಗಿಬಿಟ್ಟ. ಏಳೋ. ನಾನು ಕಷ್ಟಪಟ್ಟು ತುಳ್ಕೊಂಡು ಬಂದಿದೀನಿ. ಇವನು ಬಿದ್ಕೊಂಡಿದ್ದಾನೆ” ಎನ್ನುತ್ತಾ ತಾನು ತಂದಿದ್ದ ಮೇಕೆಯನ್ನು ಕ್ಯಾರಿಯರ್ರಿನಿಂದ ಇಳಿಸಲು ಹೇಳಿದ. ಪ್ರಯಾಣದಲ್ಲಿ ಆ ಬಡಕಲು ಮೇಕೆ ಕ್ಯಾರಿಯರ್ರಿನಲ್ಲಿ ಹೇಗೇಗೋ ಹೊರಳಿ ಅದರ ಕಾಲುಗಳಿಗೆ ಪೆಟ್ಟಾಗಿದ್ದವು. ಆ ನೋವನ್ನು ತೀರಿಸಿಕೊಳ್ಳಲಾಗದೆ, ಮುಂದೇನಾಗುತ್ತದೆ ಎಂಬ ಸೂಚನೆಯಿಲ್ಲದೆ ಪಿಳಿಪಿಳಿ ಕಣ್ಣನ್ನು ಅದು ಬಿಡುತ್ತಿದ್ದದ್ದು ಗುಡಿಯ ದೀಪದಲ್ಲಿ ಮಂದವಾಗಿ ಕಾಣುತ್ತಿದ್ದವು. “ಹಿಡ್ಕಳೋ ಬಿಡಬೇಡ” ಎಂದು ಕೂಗಿದಾಗ, ಪದ್ದಣ್ಣ ಮೇಕೆಯನ್ನು ಗಟ್ಟಿಯಾಗಿ ಹಿಡಿದುಕೊಂಡ.

ಗುಡಿಯ ದೀಪದಿಂದ ಇನ್ನೊಂದು ಬತ್ತಿ ಹೊತ್ತಿಸಿಕೊಂಡು ಕಲ್ಯಾಣಿಯ ಕಡೆಗೆ ನಡೆಯತ್ತಿದ್ದಂತೆ, ಪದ್ದಣ್ಣ ಮೇಕೆಯನ್ನು ನಡೆಸಿಕೊಂಡು ಅತ್ತ ಕಡೆ ನಡೆದ. ಈತ ಏನು ಮಾಡುತ್ತಿದ್ದಾನೆ? ಎಂದು ಕೇಳುವ ಮನಸ್ಸು ಬಂದರೂ, ಪದ್ದಣ್ಣನಲ್ಲಿ ಆ ತ್ರಾಣ ಉಳಿದಿರಲಿಲ್ಲ. ಕಲ್ಯಾಣಿಯ ಎರಡನೇ ಮೆಟ್ಟಿಲಲ್ಲಿ ಮೇಕೆಯನ್ನು ಕಸಿದುಕೊಂಡ ನಾರಾಯಣ ಭಟ್ಟ ದೀಪವನ್ನು ಹಿಡಿಯುವಂತೆ ಪದ್ದಣ್ಣನಿಗೆ ಸೂಚಿಸಿದ. ಸುತ್ತೆಲ್ಲಾ ಗವ್ ಎನ್ನುವ ಕತ್ತಲು. ತಕ್ಷಣ ಏನೋ ಯೋಚನೆ ಬಂದಂತೆ ಮೇಕೆಯನ್ನು ನೋಡಿಕೊಳ್ಳುವಂತೆ ಹೇಳಿ, ತನ್ನ ಪಂಚೆ ಎತ್ತಿಕೊಂಡು ಮೇಲಕ್ಕೆ ನಡೆದು ಅಲ್ಲಲ್ಲಿ ತಡಕಾಡಿ ಒಂದು ದಪ್ಪ ಕಲ್ಲನ್ನು ಕೈಗಳಲ್ಲಿ ಎತ್ತಿಕೊಂಡು ಪುನಃ ಅಲ್ಲಿಗೇ ಬಂದಿಳಿದ. “ಮಾವ, ಯಾಕೆ? ಅದನ್ನು ಸಾಯಿಸ್ತಿರ?” ಪದ್ದಣ್ಣನ ದನಿಯಲ್ಲಿ ಆತಂಕ, ಕರುಣೆ ಎಲ್ಲವೂ ಇತ್ತು. “ನುವ್ವು ನೋರುಮುಸ್ಕೋನಿ, ಪನಿ ಚೂಡು” ಮೇಕೆಯ ಕತ್ತು ಹಿಡಿದಿದ್ದ ನಾರಾಯಣ ಭಟ್ಟ ಬಗ್ಗುತ್ತಾ ತಲೆಯನ್ನು ಮೇಲೆತ್ತಿ ಅಂದ. ಮೇಕೆ ತನ್ನ ಕತ್ತನ್ನು ಸಡಿಲ ಮಾಡಿಕೊಳ್ಳಲು ವ್ಯರ್ಥ ಪ್ರಯತ್ನ ನಡೆಸುತ್ತಿತ್ತು.

ನೊಡುನೋಡುತ್ತಿದ್ದಂತೆ ನಾರಾಯಣ ಭಟ್ಟ ದಪ್ಪಗಲ್ಲನ್ನು ಅದರ ತಲೆಗೆ ಬಡಿದ. ಅದು ನೋವಿನಿಂದ “ಮ್ಯಾ…” ಎಂದು ಕೂಗಾಡಿತು. ಈ ಬಾರಿ ಅದರ ತಲೆಯನ್ನು ಮೆಟ್ಟಿಲಿಗೆ ಇಟ್ಟು ಇನ್ನೊಮ್ಮೆ ಕುಟ್ಟಿದ. ಪದ್ದಣ್ಣ ಗಾಬರಿಯಿಂದ ಹತ್ತಿರಕ್ಕೆ ಬಂದು ನೋಡುವಾಗ ಅದರ ಪಿಳಿಪಿಳಿ ಕಣ್ಣುಗಳು ಸ್ತಬ್ಧವಾಗಿತ್ತು. ಒಂದನ್ನು ಇನ್ನೊಂದು ತಿಂದು ಬದುಕಬೇಕು ಎಂಬ ಪ್ರಕೃತಿ ಧರ್ಮವೂ ಅಲ್ಲದ, ಕೇವಲ ಹಿತಾಸಕ್ತಿಗಾಗಿ ಆದ ಪ್ರಾಣಿ ಕೊಲೆಯನ್ನು ಕಂಡ ಪದ್ದಣ್ಣ ನಿಂತಿದ್ದ ಮೆಟ್ಟಿಲಲ್ಲೇ ಕುಸಿದ. ಅವನಿಗೆ ಮಾತುಗಳೇ ಹೊರಡಲಿಲ್ಲ. ಆ ಮೇಕೆಯನ್ನು ತುಂಬಾ ಕೆಳಕ್ಕೆ ಎಸೆಯದೆ, ಕಲ್ಯಾಣಿಯ ನೀರಿನ ಒಳಗೆ ಮೂರನೇ ಮೆಟ್ಟಿಲಿಗೆ ಮುಳುಗಿ ಹೋಗದಂತೆ ಒತ್ತರಿಸಿ ಇಟ್ಟು, ಕಲ್ಯಾಣಿಯ ನೀರಿನಲ್ಲೇ ಮೆಟ್ಟಿಲ ಮೇಲೆ ಆಗಿದ್ದ ರಕ್ತವನ್ನು ಒರೆಸಿದ ನಾರಾಯಣ…

ಈ ಮನುಷ್ಯನ ಕ್ರೌರ್ಯವನ್ನು ಗಮನಿಸುತ್ತಾ ಕುಳಿತಿದ್ದ ಪದ್ದಣ್ಣನಿಗೆ “ಆಯ್ತು, ನಾಳೆ ಊರು ಜನರಿಗೆ ಕಲ್ಯಾಣೀಲಿ ಮೇಕೆ ಸತ್ತಿದೆ ಅಂತ ಬಾಯಿ ಬಡುಕೋ, ಅವರೇ ಬಂದು ತೆಗಿತಾರೆ. ಅದರದೇ ವಾಸನೆ ಅನ್ನು. ಯಾವಾನರ ಹೆಚ್ಚು ಮಾತಾಡಿದ್ರೆ ನಾನಿದೀನಿ. ನನಗೆ ಹೇಳು. ಆಮೇಲೆ ಕಲ್ಯಾಣಿ ನೀರು ಶುದ್ಧಿ ಮಾಡಿ, ಪುಣ್ಯಾಹ ಗಂಗಾಪೂಜೆ ಮಾಡಿ ಶುಚಿ ಮಾಡೋಣ. ಅವರೇ ರೆಡ್ಡಿಗಳಿಗೂ ತಿಳಿಸ್ತಾರೆ. ನೀನು ಹೆಚ್ಚೇನು ಹೇಳಬೇಡ ಗೊತ್ತಾಯ್ತಾ?” ಎಂದು ಹೇಳಿ ಕಲ್ಯಾಣಿಯ ಮೆಟ್ಟಿಲಲ್ಲೇ ಕುಳಿತ. ಪದ್ದಣ್ಣ ಮರು ಮಾತಾಡಲಿಲ್ಲ. ಮೈಮೇಲಿನ ರಣಗಾಯಗಳು ಅವನಿಗೆ ಬಾಧಿಸುತ್ತಿರಲಿಲ್ಲ. ಎದೆ ಢವಗುಡುತ್ತಿತ್ತು. ಒಳಗೇ ಅಳು ಒತ್ತರಿಸಿಕೊಂಡು ಬರುತ್ತಿತ್ತು. ಆದರೂ ಎಲ್ಲೋ ಅಡಗಿಸಿಟ್ಟಿದ್ದ ನೋವನ್ನೆಲ್ಲಾ ಒಂದು ಮಾಡಿ ಪದ್ದಣ್ಣ “ಅವನ್ಯಾವನೋ ರೆಡ್ಡಿಗೇನು ಹೆದರೋದು? ಇದು ನಮ್ಮ ಭೂಮಿ ನಮ್ಮ ಕಲ್ಯಾಣಿ, ಯಾರನ್ನಾದ್ರೂ ಇಲ್ಲಿಗೆ ಕರೆದುಕೊಂಡು ಬರ್ತೀನಿ” ಎಂದು ದಬಾಯಿಸಿದ. ಸರಕ್ಕನೇ ತಿರುಗಿದ ನಾರಾಯಣ ಭಟ್ಟ
“ಯಾವನು ಹೇಳಿದ್ದು? ಈ ಭೂಮಿ, ಅದರ ಬದಿಗಿರೋ ಈ ಕಲ್ಯಾಣಿ, ಈ ಗುಡಿ ಎಲ್ಲಾ ರೆಡ್ಡೀದೆ. ನಿಮ್ಮಪ್ಪ ಅವರಿಗೆ ಮಾರಿ ಒಂದು ವರ್ಷ ಆಯ್ತು. ಆ ದಾಸು ಜನ ಇಲ್ಲಿಗೆ ಬಂದು ಕಾಲಿಟ್ಟಿದ್ರು ಅಂತ ಗೊತ್ತಾದ್ರೆ ನಿನ್ನೂ ನನ್ನೂ ಸಿಗಿದು ಕಟ್ತಾರೆ ತಿಳ್ಕಾ”.

“ಈ ಇನಾಮು ಭೂಮಿ ಎಲ್ಲಾ ನೀನೇ ಹೊಡ್ಕೊಬಿಟ್ಟೆ ಅಂತ ಅಮ್ಮ ಹೇಳ್ತಿದ್ಳು.”

“ಓಹೋ ಆಗಲೇ ನಿಮ್ಮಮ್ಮ ಗುನುಗುಬಿಟ್ಳ? ಹೌದು ಕಣೋ ನಾನೇ ರೆಡ್ಡಿಗೆ ಮಾರ್ಕೊಂಡುಬಿಟ್ಟೆ. ನೀನು ಅಷ್ಟೇ ಇಲ್ಲಿ ಇರೋಂಗಿದ್ರೆ ಮಂಗಳಾರತಿ ಎತ್ಕೊಂಡು ಇರು. ಇಲ್ಲ ಹೋಗು” ಎಂದವನೇ ನಾರಾಯಣ ಭಟ್ಟ ಮೇಲೆದ್ದು ಹೋದ. ಈಗಲೇ ಅವನ ಜುಟ್ಟು ಹಿಡಿದು ರಪರಪ ಬಾರಿಸಿ ಕಲ್ಯಾಣಿಗೆ ನೂಕಿಬಿಡಬೇಕು ಎಂದು ಪದ್ದಣ್ಣನಿಗೆ ಅನ್ನಿಸಿತು. ಆದರೆ ಆಗಲಿಲ್ಲ. ಹಲ್ಲನ್ನು ಬಿಗಿಹಿಡಿದುಕೊಂಡು ಅತ್ತುಬಿಟ್ಟ.

(ಪುಸ್ತಕ: ರಾಯಕೊಂಡ (ಕಾದಂಬರಿ), ಲೇಖಕರು- ಕರಣಂ ಪವನ್ ಪ್ರಸಾದ್, ಪ್ರಕಾಶಕರು- ಕಾನ್ಕೇವ್ ಮೀಡಿಯಾ ಅಂಡ್ ಪಬ್ಲಿಷರ್, ಬೆಲೆ-200)