ನಮ್ಮ ಬ್ರಿಸ್ಬನ್ ನಗರದ ಪೂರ್ವ ಭಾಗದಲ್ಲಿ ಕಲ್ಲು ಕುಟ್ಟಿ ಒಡೆದು ಅದಕ್ಕೆ ಬಗೆಬಗೆಯ ರೂಪಗಳನ್ನು ಕೊಡುವ ತರಬೇತಿ ಶಿಬಿರಗಳನ್ನು ನಡೆಸುತ್ತಾರೆ. ಓದಿದ ಕ್ಷಣದಲ್ಲಿ ನಗು ಬಂತು. ಅಯ್ಯೋ, ಬೆಂಗಳೂರಿನಲ್ಲಿ ನಮ್ಮವರೆಲ್ಲ ಒಬ್ಬೊಬ್ಬರಾಗಿ ಮನೆ ಕಟ್ಟಿಸುತ್ತಿದ್ದಾಗ ಕಲ್ಲೊಡೆಯುವವರು ಬರುತ್ತಿದ್ದರು. ಅಷ್ಟೇಕೆ, ಪ್ರತಿದಿನವೂ ಬಿಟಿಎಸ್ ಬಸ್ಸಿನಲ್ಲಿ ಓಡಾಡುತ್ತಿದ್ದಾಗ ಹಳೆ ಮದ್ರಾಸ್ ರಸ್ತೆ ಬದಿಯಲ್ಲಿ ಕಲ್ಲು ಕುಟ್ಟುತ್ತ ರುಬ್ಬುಗುಂಡು ಮತ್ತು ಅದಕ್ಕೆ ಹೊಂದುವ ಚಪ್ಪಟೆ ಕೆಳಭಾಗವನ್ನು ರೂಪಿಸುತ್ತಿದ್ದ ಗಂಡಸರು ಹೆಂಗಸರು ಸದಾ ಇರುತ್ತಿದ್ದರು. ಅವರು ಅಲ್ಲೇ ರಸ್ತೆಬದಿಯಲ್ಲೇ ಒಂದು ತಾತ್ಕಾಲಿಕ ಗುಡಿಸಲು ಅಥವಾ ಬಟ್ಟೆ, ರಗ್ಗು, ತೆಂಗಿನ ಗರಿಗಳನ್ನು ಜೋಡಿಸಿಕೊಂಡು ಮಾಡಿದ್ದ ಶಿಬಿರಗಳಲ್ಲಿ ವಾಸಿಸುತ್ತಿದ್ದರು.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಅಂಕಣ

 

ಈ ವರ್ಷವೇಕೋ ಚಿತ್ರವಿಚಿತ್ರವಾಗಿದೆ. ಹಾಗಂತ ಮತ್ತೆ ಮತ್ತೆ ಅನಿಸುತ್ತಿದೆ. ಕರೋನವಂತೂ ಸಾರ್ವಕಾಲಿಕ ದಾಖಲೆಯನ್ನು ಸ್ಥಾಪಿಸಿ ವಿಶ್ವಕಪ್ ಗೆದ್ದುಕೊಂಡುಬಿಟ್ಟಿದೆ. ಜನರೆಲ್ಲ ‘ನ್ಯೂ ನಾರ್ಮಲ್’ ಗುಂಡಿ ಒತ್ತಿಕೊಂಡೇ ದಿನ ಕಳೆಯುತ್ತಿದ್ದರೂ ಮನುಷ್ಯ ಮನಸ್ಸಿನ ಚಟಗಳು ಚಡಪಡಿಸುತ್ತಿವೆ. ನಾವೆಲ್ಲಾ ಮನೆಯೊಳಗಡೆ ಸೇರಿಕೊಂಡಿದ್ದರಿಂದ ಪರಿಸರಮಾಲಿನ್ಯ ಕಡಿಮೆಯಾಗಿದ್ದನ್ನ ನೋಡಿ ಹೌದಾ, ಹೀಗೂ ಆಗುವುದುಂಟು, ಎಂದು ಉದ್ಗಾರ ತೆಗೆದರೂ ಅದು ಕ್ಷಣಿಕವಷ್ಟೇ ಅನ್ನೋದನ್ನ ನಾವೇ ಸಾಬೀತು ಮಾಡಿದ್ದೀವಿ. ಹುಟ್ಟುಗುಣ ಸುಟ್ಟರೂ ಹೋಗುವುದಿಲ್ಲ. ಹಳೆಚಟಗಳು ಮೈಮೇಲಿನ ದಪ್ಪ ಚರ್ಮವಾಗಿ ಅಂಟಿಕೊಂಡಿದೆ. ಹೋಗಲಿ ಬಿಡಿ, ಅವಲ್ಲಿ ಕೆಲವಕ್ಕಾದರೂ ಒಂದಷ್ಟು ಸದ್ಗುಣಗಳಿವೆ.

ಇಲ್ಲಿನ ಜನರು ಈ ವರ್ಷವೂ ಬಿಡದೆ ಎಂದಿನಂತೆ ಜಾಮ್, pickling, kombucha ಮಾಡುವುದರಲ್ಲಿ ನಿರತರಾಗಿದ್ದಾರೆ. ಪ್ರಕೃತಿಗೇನೂ ಕರೋನ ಕಾಟ ಬಡಿದಿಲ್ಲವಲ್ಲ! ಜನಲೋಕಕ್ಕೆ ಬಡಿದ ಕರೋನ ಗ್ರಹಣದ ಪರಿಣಾಮದ ತೀವ್ರತೆಯನ್ನು ಕಡಿಮೆ ಮಾಡಲು ಬಹಳಷ್ಟು ಮಂದಿ ಕೈತೋಟದ ಮತ್ತು ತೋಟಗಾರಿಕೆ ಕೆಲಸಕ್ಕೆ ಇಳಿದಿದ್ದಾರೆ. ಪ್ರತಿವರ್ಷಕ್ಕಿಂತಲೂ ಈ ಬಾರಿ ಚಳಿಗಾಲದ ಹಣ್ಣು ತರಕಾರಿಗಳ ಉತ್ಪಾದನೆ ಹೆಚ್ಚಾಗಿದೆ. ಸಹಜವಾಗಿಯೇ ಈ ಹಣ್ಣು ತರಕಾರಿಗಳ ನಾನಾ ವಿಧದ ಅಡುಗೆಗಳು, ಶೇಖರಣಾ ವಿಧಾನಗಳು ಇನ್ನಷ್ಟು ಪ್ರಚಲಿತವಾಗಿವೆ. ನಮ್ಮ ಹಿರೀಕರ ಕಾಲದಲ್ಲಿದ್ದ ಪ್ರಯೋಗಗಳಿಗೆ ಮರುಜೀವ ಬಂದಿದೆ.

ಈ ವರ್ಷ ನಮ್ಮ ನಿಂಬೆಮರ ಅಮೃತವರ್ಷಿಣಿಯಾಗಿದೆ. ಹನ್ನೊಂದು ವರ್ಷಗಳ ಹಿಂದೆ ಇಪ್ಪತ್ತು ಡಾಲರ್ ಕೊಟ್ಟು ಎರಡಡಿ ಉದ್ದದ ನಿಂಬೆಗಿಡವನ್ನು ಖರೀದಿಸಿದ್ದು. ಅದೀಗ ಒಂಭತ್ತಡಿ ಬೆಳೆದು ಹರೆಯದ ವಯಸ್ಸಿನ ತಾಯಿಯಾಗಿದೆ. ವರ್ಷದ ಆರಂಭದಲ್ಲಿ ಮರದಿಂದ ನಾಲ್ಕಡಿ ದೂರದಲ್ಲಿ ಒಂದು ಗೊಬ್ಬರದ ಪೆಟ್ಟಿಗೆಯನ್ನಿಟ್ಟು ಅದರೊಳಗೆ ಹೇರಳವಾಗಿ ಗೊಬ್ಬರ ಶೇಖರಣೆಯಾಗುತ್ತಿತ್ತು. ಹೋದವರ್ಷವೆ ಮರಕ್ಕೆ ಸೊಗಸಾದ ಹೇರ್ ಕಟ್ ಮಾಡಿದ್ದೆ. ತರುಣಿ ನಿಂಬೆಮರಕ್ಕೆ ಬಲು ಖುಷಿಯಾಗಿರಬೇಕು. ಐದು ನೂರಕ್ಕೂ ಹೆಚ್ಚು ಹಣ್ಣು ಬಿಟ್ಟಿದೆ. ನೂರೈವತ್ತು ಹಣ್ಣು ಪಕ್ಕದ ಮನೆಯವರಿಗೆ ದಕ್ಕಿದೆ. ಇನ್ನೊಂದು ನೂರರಷ್ಟು ನಮ್ಮ ಕುಟುಂಬ ಸ್ನೇಹಿತರಿಗೆ ಉಡುಗೊರೆಯಾಯ್ತು. ಮಿಕ್ಕದ್ದು ನಿಂಬೆ marmalade ಮತ್ತು ನಿಂಬೆ ಉಪ್ಪಿನಕಾಯಿಯಾಗಿದೆ.

ನಮ್ಮ ಕರ್ನಾಟಕ ಶೈಲಿಯ ಉಪ್ಪಿನಕಾಯಿ ಮತ್ತು ಬ್ರಿಟನ್ನಿನ ಮಾದರಿಯ marmalade ತಯಾರಿಸುವಾಗ ಎರಡು ವಿಭಿನ್ನ ಸಾಮಾಜಿಕ, ಸಂಸ್ಕೃತಿ, ಭಾಷೆ, ಹಿರಿಯ ಪೀಳಿಗೆಯವರ ಅನುಭವ ಕಥನಗಳು ನೆನಪಿನಂಗಳದಿಂದ ಹೊರಜಿಗಿದವು. ಅವನ್ನು ಆಸ್ಟ್ರೇಲಿಯನ್ ಮನೆಯಲ್ಲಿ ಮಕ್ಕಳ ಜೊತೆ ಹಂಚಿಕೊಂಡಾಗ ಡೈವರ್ಸಿಟಿ ಅನ್ನೋ ಪದಕ್ಕೆ ಹೊಸ ಅರ್ಥ ಸಿಕ್ಕಿತ್ತು.

ನನ್ನ ಗಾರ್ಡನಿಂಗ್ ಗುಂಪುಗಳಲ್ಲಿ ಮೇ ತಿಂಗಳಿಂದ ತಯಾರಾಗುತ್ತಿರುವ ವಿಧವಿಧದ ಜಾಮ್, marmalade, kombucha, ಪಾನೀಯಗಳ ಯಥೇಚ್ಛ ಮಾತುಕತೆಗಳಿಂದ ಅಚ್ಚರಿಗೊಂಡಿದ್ದೀನಿ. ಜನರು ಈ ನಾನಾ ನಮೂನೆಗಳ ಶೇಖರಣೆಯಲ್ಲಿ ಅದೆಷ್ಟು ಆಸಕ್ತಿಯಿಟ್ಟಿದ್ದಾರೆ! ಅವರ ಹಿಂದಿನ ಪೀಳಿಗೆಗಳಿಂದ ಹರಿದುಬಂದಿರುವ ರೆಸಿಪಿಗಳನ್ನು ಜೋಪಾನವಾಗಿ ಬರೆದಿಟ್ಟುಕೊಂಡು, ಕಾಪಾಡುತ್ತಾ ಅದನ್ನು ಹಂಚುತ್ತಾರೆ. ತಯಾರಿಸುವ ವಿಧಾನಗಳಲ್ಲಿ, ರುಚಿಗಳಲ್ಲಿ, ಬಳಸುವ ಆಹಾರವಸ್ತುಗಳಲ್ಲಿ ಇರುವ ವ್ಯತ್ಯಾಸಗಳನ್ನು, ಸಾಮ್ಯತೆಗಳನ್ನು ಹೋಲಿಸಿ ನೋಡಿ ಚರ್ಚಿಸುತ್ತಾರೆ. ಅವನ್ನು ಗಮನಿಸಿದರೆ ಈ ಜನಸಂಸ್ಕೃತಿಗಳಲ್ಲಿ ಪೀಳಿಗೆಯಿಂದ ಪೀಳಿಗೆಗೆ ಹರಿಯುತ್ತಿರುವ ಅನೇಕ ನದಿಗಳು ಇನ್ನೂ ಜೀವಂತವಾಗಿರುವುದು ಕಾಣುತ್ತದೆ.

ಹಿಂದೊಮ್ಮೆ ಪಾಶ್ಚಾತ್ಯ ಸಂಸ್ಕೃತಿಯನ್ನು ಆಡಿಕೊಂಡು ತೆಗಳಿದ್ದನ್ನ ಜ್ಞಾಪಿಸಿಕೊಂಡು ಥೂ ನನ್ನ ಎಂದುಕೊಳ್ಳುತ್ತೀನಿ. ಎಲ್ಲರ ಸಂಸ್ಕೃತಿಯೂ ಭಿನ್ನವಾದದ್ದು, ಭಿನ್ನತೆ ಅರ್ಥವಾಗಬೇಕಿದ್ದರೆ ಅದರ ಒಳಹೊಕ್ಕು ನೋಡಬೇಕು. ಹಾಗೆಂದುಕೊಳ್ಳುತ್ತಲೇ, ಅದರ ಜೊತೆ ಜೊತೆಗೆ ಏನೇ ಆದರೂ ಇವೇ ಪಾಶ್ಚಾತ್ಯ ದೇಶಗಳು ಹುಟ್ಟುಹಾಕಿದ ಕ್ಯಾಪಿಟಲಿಸಂ ಪದ್ಧತಿಯನ್ನು ಒಪ್ಪಲಾಗದು ಎಂದೂ ಹೇಳಿಕೊಳ್ಳುತ್ತೀನಿ. ಅದರಿಂದ ಈ ಸಮಾಜಗಳ ಸಮಷ್ಟಿ ಜನಜೀವನ ಮುಗ್ಗುರಿಸಿದ್ದು, ಕ್ಯಾಪಿಟಲಿಸಂ ಹೇಗೆ ಸಾಮಾನ್ಯರ ಜೀವನದಲ್ಲಿ ತೊಡಕಾಗಿದೆ, ಅಸಮಾನತೆಗಳನ್ನು ಉಂಟುಮಾಡಿದೆ ಎನ್ನುವ ಸಂವಾದ ಶುರುವಾಗುತ್ತದೆ. ಅದನ್ನ ಪಕ್ಕಕ್ಕೆ ಸರಿಸಿ ಉಪ್ಪಿನಕಾಯಿ, ಜಾಮ್ ಕಥೆಗೆ ಮರಳೋಣ.

ರಾಸಾಯನಿಕಗಳ ಸಹಾಯವಿಲ್ಲದೆ ಮರದಲ್ಲೇ ಮಾಗಿ ಹಣ್ಣಾಗಿ ಉದುರಿದ ರಸಭರಿತ ಆರೋಗ್ಯವಾದ ತಾಜಾ ಹಳದಿಬಣ್ಣದ ನಿಂಬೆಹಣ್ಣುಗಳನ್ನು ಶೇಖರಿಸುವ ಪ್ರಶ್ನೆ ಎದುರಾದಾಗ ಸಹಜವಾಗಿಯೇ ಉಪ್ಪಿನಕಾಯಿ ಮಾಡುವುದು ಎಂದಾಯ್ತು. ಈ ಬಾರಿ ಕಲ್ಲಿನ ಅಥವಾ terracotta ಜಾಡಿಯನ್ನು ಹುಡುಕಲೇಬೇಕು ಎಂದು ಹೊರಟೆ. ಎಲ್ಲಿಗೆ? ಗೂಗಲ್ ಲೋಕಕ್ಕೆ. ಒಂದೆರೆಡು ಅಂಗಡಿಗಳಲ್ಲಿ ಮಾತ್ರ ಒಳ್ಳೆ ಗುಣಮಟ್ಟದ ಯುರೋಪಿನಿಂದ ಆಮದಾಗಿ ಬಂದಿರುವ ಗಾಜಿನ ಜಾಡಿಗಳು ಸಿಗುತ್ತವೆ ಎಂದಾಯ್ತು. ಆಸ್ಟ್ರೇಲಿಯಾ ದೇಶದಲ್ಲಿ ಗಾಜು ತಯಾರಿಕೆ ಮತ್ತು ಗುಣಮಟ್ಟ ಅಷ್ಟಕ್ಕಷ್ಟೇ ಎಂದು ಅರಿವಾಯಿತು. ಆಗ ನೆನಪಿಗೆ ಬಂದದ್ದು ಯಾವಾಗಲೋ ಒಮ್ಮೆ ಭೇಟಿಕೊಟ್ಟಿದ್ದ ಗೋಲ್ಡ್ ಕೋಸ್ಟ್ ಕಾರಿಡಾರ್ ದಾಟಿ ಕೆಳಗಿಳಿದರೆ ಇರುವ ಕುರುಮ್ಬಿನ್ ಅನ್ನೋ ಸ್ಥಳದಲ್ಲಿರುವ stained glass ತಯಾರಿಕಾ ಮತ್ತು ಪ್ರದರ್ಶನ ಘಟಕ. ಅದರ ಸ್ಥಾಪಕ ಒಬ್ಬ ಯುರೋಪಿಯನ್. ಅವನೊಡನೆ ಮಾತನಾಡುವಾಗ ಅವನು ‘ಇಲ್ಲಿನ ಜನರಿಗೆ ಇಂದಿಗೂ ಕೂಡ stained glass ಕಲೆ ಮತ್ತು ಅದರಲ್ಲಿರುವ ಸೌಂದರ್ಯ ಎರಡೂ ಅರ್ಥವಾಗಿಲ್ಲ’ ಎಂದಿದ್ದ. ನನ್ನನ್ನು ‘ಇಲ್ಲಿನ ಜನರಿಂದ’ ಬೇರ್ಪಡಿಸಿ ಅವನು ಇಲ್ಲಿನವರ ಬಗ್ಗೆ ಸಿಡುಕಿನಿಂದ ಗೊಣಗಾಡಿದ್ದು ತಮಾಷೆ ಅನಿಸಿತ್ತು. ಬೆಲ್ಜಿಯಂ ದೇಶಕ್ಕೆ ಭೇಟಿಕೊಟ್ಟಾಗ ಅಲ್ಲಿನ stained glass ಮ್ಯೂಸಿಯಂಗಳನ್ನು ನಾನು ಕಂಡಾಪಟ್ಟೆ ಮೋಹಿಸಿದ್ದು, stained glass ಕಲೆಯ ಬಗ್ಗೆ ನನಗಿರುವ ಪ್ರೀತಿಯನ್ನು ಹೇಳಿದಾಗ ಅವನು ನನ್ನನ್ನ ನಂಬಲೇ ಇಲ್ಲ.

ವರ್ಷದ ಆರಂಭದಲ್ಲಿ ಮರದಿಂದ ನಾಲ್ಕಡಿ ದೂರದಲ್ಲಿ ಒಂದು ಗೊಬ್ಬರದ ಪೆಟ್ಟಿಗೆಯನ್ನಿಟ್ಟು ಅದರೊಳಗೆ ಹೇರಳವಾಗಿ ಗೊಬ್ಬರ ಶೇಖರಣೆಯಾಗುತ್ತಿತ್ತು. ಹೋದವರ್ಷವೆ ಮರಕ್ಕೆ ಸೊಗಸಾದ ಹೇರ್ ಕಟ್ ಮಾಡಿದ್ದೆ. ತರುಣಿ ನಿಂಬೆಮರಕ್ಕೆ ಬಲು ಖುಷಿಯಾಗಿರಬೇಕು. ಐದು ನೂರಕ್ಕೂ ಹೆಚ್ಚು ಹಣ್ಣು ಬಿಟ್ಟಿದೆ.

ಉಪ್ಪಿನಕಾಯಿ ಹಾಕಿಡಲು ಇಂಡಸ್ಟ್ರಿಯಲ್ ಗಾಜು ಬೇಡ, ಕಲ್ಲಿನ ಜಾಡಿ ಎಲ್ಲಿಯಾದರೂ ಸಿಗುತ್ತದೆಯೇ ಎಂದು ಹುಡುಕಿದೆ. ಎಲ್ಲೂ ಮಾಹಿತಿಯಿರಲಿಲ್ಲ. ಆ ಹುಡುಕಾಟದಲ್ಲಿ ಅಂದುಕೊಳ್ಳದ ಅಪರೂಪದ ಮಾಹಿತಿ ಸಿಕ್ಕಿದ್ದು ನನಗೆ ಬಹಳ ಖುಷಿಯಾಯ್ತು. ಅದೇನೆಂದರೆ, ನಮ್ಮ ಬ್ರಿಸ್ಬನ್ ನಗರದ ಪೂರ್ವ ಭಾಗದಲ್ಲಿ ಕಲ್ಲು ಕುಟ್ಟಿ ಒಡೆದು ಅದಕ್ಕೆ ಬಗೆಬಗೆಯ ರೂಪಗಳನ್ನು ಕೊಡುವ ತರಬೇತಿ ಶಿಬಿರಗಳನ್ನು ನಡೆಸುತ್ತಾರೆ. ಓದಿದ ಕ್ಷಣದಲ್ಲಿ ನಗು ಬಂತು. ಅಯ್ಯೋ, ಬೆಂಗಳೂರಿನಲ್ಲಿ ನಮ್ಮವರೆಲ್ಲ ಒಬ್ಬೊಬ್ಬರಾಗಿ ಮನೆ ಕಟ್ಟಿಸುತ್ತಿದ್ದಾಗ ಕಲ್ಲೊಡೆಯುವವರು ಬರುತ್ತಿದ್ದರು. ಅಷ್ಟೇಕೆ, ಪ್ರತಿದಿನವೂ ಬಿಟಿಎಸ್ ಬಸ್ಸಿನಲ್ಲಿ ಓಡಾಡುತ್ತಿದ್ದಾಗ ಹಳೆ ಮದ್ರಾಸ್ ರಸ್ತೆ ಬದಿಯಲ್ಲಿ ಕಲ್ಲು ಕುಟ್ಟುತ್ತ ರುಬ್ಬುಗುಂಡು ಮತ್ತು ಅದಕ್ಕೆ ಹೊಂದುವ ಚಪ್ಪಟೆ ಕೆಳಭಾಗವನ್ನು ರೂಪಿಸುತ್ತಿದ್ದ ಗಂಡಸರು ಹೆಂಗಸರು ಸದಾ ಇರುತ್ತಿದ್ದರು. ಅವರು ಅಲ್ಲೇ ರಸ್ತೆಬದಿಯಲ್ಲೇ ಒಂದು ತಾತ್ಕಾಲಿಕ ಗುಡಿಸಲು ಅಥವಾ ಬಟ್ಟೆ, ರಗ್ಗು, ತೆಂಗಿನ ಗರಿಗಳನ್ನು ಜೋಡಿಸಿಕೊಂಡು ಮಾಡಿದ್ದ ಶಿಬಿರಗಳಲ್ಲಿ ವಾಸಿಸುತ್ತಿದ್ದರು. ಅವರ ವಂಶಪಾರಂಪರ್ಯ ಕಲೆ ಕಲ್ಲುಕುಟ್ಟಿ ಜಾಡಿ, ಮರಿಗೆ, ರುಬ್ಬುಕಲ್ಲು ಇತ್ಯಾದಿಗಳನ್ನು ಮಾಡುವುದು. ಅತ್ಯಂತ ಬಡತನದಲ್ಲಿ ಬದುಕುತ್ತಿದ್ದ ಜನ. ಅವರ ಕಲೆಗೆ ಸಿಕ್ಕುತ್ತಿದ್ದ ಬೆಲೆ ಕನಿಷ್ಠ ಮಟ್ಟದ್ದು, ಅದರಲ್ಲೂ ಚೌಕಾಶಿ ಮಾಡುವವರು, ಕದಿಯುವ ಜನರಿಗೇನೂ ಕೊರತೆಯಿರಲಿಲ್ಲ!! ಬಡತನ ಅವರ ಕೆಲ ಹೆಂಗಸರನ್ನು ಹಗಲು ಕಲ್ಲುಕುಟ್ಟುವ ಕೆಲಸಕ್ಕೆ, ರಾತ್ರಿ ಗಂಡಸರನ್ನು ತಣಿಸುವ ಕೆಲಸಕ್ಕೆ ದೂಡುತ್ತಿತ್ತು. ಮಕ್ಕಳು ಅಲ್ಲೇ ರಸ್ತೆ ಬದಿಯಲ್ಲೇ ಬೆಳೆಯುತ್ತಿದ್ದರು. ಅವೆಲ್ಲ ನೆನಪಿನ ಸಮುದ್ರದಲ್ಲಿ ಅಲೆಗಳನ್ನೆಬ್ಬಿಸಿದಾಗ ಈ ತಲೆಯೆನ್ನುವುದೊಂದಿದೆಯಲ್ಲಾ! ಅನ್ನಿಸಿ ವಿಷಾದವಾಯಿತು.

ಉಪ್ಪಿನಕಾಯಿ ವಿಷಯ ಆ ಪಕ್ಕಕ್ಕೆ ಬಿಟ್ಟುಹೋಯಿತು. ವಿದ್ಯೆ, ಹಣ, ಕಾಲಕಾಲಕ್ಕೆ ಊಟಬಟ್ಟೆ ಎಲ್ಲವನ್ನೂ ಪಡೆದು ಭಾಗ್ಯವಂತಳಾದ ನಾನು ಆ ಜನರಿಗೇನೋ ಮೋಸ ಮಾಡಿದ್ದೀನಿ, ಅವರ ಸಾಲವನ್ನು ತೀರಿಸಬೇಕು ಎನ್ನುವ ಚಿಂತೆ ಹುಟ್ಟಿತು. ನಾನೂ ಕೂಡ ಯಾಕೆ ಕಲ್ಲು ಕುಟ್ಟುವ ಕಲೆಯನ್ನು ಕಲಿಯಬಾರದು, ಕಲಿತರೆ ಅದೊಂದು ಜೀವನಾನುಭವ, ಕಲ್ಲು ಕುಟ್ಟಿಕುಟ್ಟಿ ಕಲಿತು ನಾನೇ ಒಂದು ರುಬ್ಬುಕಲ್ಲನ್ನು ಮಾಡಬಹುದು. ಅರೆರೇ, ಆಸ್ಟ್ರೇಲಿಯಾದಲ್ಲಿ ರುಬ್ಬುಕಲ್ಲು ತಯಾರಿಸುವ ಘಟಕವನ್ನೇ ಸ್ಥಾಪಿಸಬಹುದು ಎಂದು ಹೊಸ ಆಲೋಚನೆ ಹೊಳೆಯಿತು.

ರುಬ್ಬುಕಲ್ಲಿನ ಜೊತೆ ಹಾಗೇ ಹಿಟ್ಟು ಮಾಡುವ ಕಲ್ಲು ಕೂಡ ಸೇರಬಹುದು. ಸರಿ, ಗೂಗಲ್ಲಿಗೆ ಮರಳಿ ಇನ್ನೊಂದಷ್ಟು ಶೋಧನವನ್ನು ಮಾಡಿದೆ. ನಿಜವಾಗಿಯೂ ಹೇಳುವುದಾದರೆ ಯಾವುದೇ ಯಂತ್ರಸಹಾಯವಿಲ್ಲದೆ ನಮ್ಮ ತೋಳ್ಬಲದ ಮೇಲೆ ಅವಲಂಬಿತವಾಗಿರುವ ಅನೇಕ ಸಾಧನಗಳ ಕಲೆಗಳು ಮತ್ತೆ ಚಾಲ್ತಿಗೆ ಬಂದು ಅಲ್ಲಲ್ಲಿ ಸಮುದಾಯ ಗುಂಪುಗಳು ಅವನ್ನು ಅಭ್ಯಸಿಸುತ್ತಾ ತರಬೇತಿ ಶಿಬಿರಗಳನ್ನು ನಡೆಸುತ್ತಾರಂತೆ. ಹಿಂದಿನ ಕಾಲದ ಕಮ್ಮಾರ ಇತ್ಯಾದಿ ಕೆಲಸಗಳನ್ನು, ಗುಡಿಕೈಗಾರಿಕೆಗಳನ್ನು ಉದ್ಧಾರಮಾಡುವ ಜನರು ಇದ್ದಾರಂತೆ.

ಸದ್ಯಕ್ಕೆ ಕಲ್ಲು ಕುಟ್ಟುವ ತರಬೇತಿಗೆ ಸೇರಿ, ಆ ಒಂದು ಕಲೆಯನ್ನಾದರೂ ಕಲಿತು ಕಲ್ಲಿನ ಮರಿಗೆ ಅಥವಾ ಜಾಡಿಯನ್ನು ತಯಾರಿಸುತ್ತೀನಿ ಎಂದು ಮನೆಯವರಿಗೆಲ್ಲಾ ಹೇಳಿದೆ. ಮಾಮೂಲಿನಂತೆ ಜೀಬಿ ಕಕ್ಕಾಬಿಕ್ಕಿಯಾದರು. ಮಕ್ಕಳಿಗೆ ಅಪಮಾನವಾಯ್ತೋ ಇಲ್ಲಾ ಅನುಮಾನವಾಯ್ತೋ ಗೊತ್ತಾಗಲಿಲ್ಲ. ‘ದಯವಿಟ್ಟು ಹಾಗೆ ಮಾಡಬೇಡವಮ್ಮ’ ಎಂದಷ್ಟೇ ಹೇಳಿ ಸುಮ್ಮನಾದರು.

ತರಬೇತಿ ಬಗ್ಗೆ ಇನ್ನಷ್ಟು ತಿಳಿಯಲು ಕಲ್ಲು ಕುಟ್ಟುವ ಕುಶಲಕಲೆ ತರಬೇತಿದಾರರಿಗೆ ಫೋನ್ ಮಾಡಿದೆ. ತರಬೇತಿ ನಡೆಯುವುದು ಕೆಲ ನಿಗದಿತ ತಿಂಗಳುಗಳಲ್ಲಿ ಮಾತ್ರ. ‘ಅದಕ್ಕೆ ಮುನ್ನ ನೀನು ಸುರಕ್ಷಣಾ ವಿಷಯದಲ್ಲಿ ಒಂದು ಸರ್ಟಿಫಿಕೇಟ್ ಕೋರ್ಸ್ ಮಾಡಬೇಕು. ತರಬೇತಿಗೆ ಬೇಕಿರುವ ವಿಶೇಷ gloves, ಉಡುಪು, ಕಣ್ಣಿಗೆ ದೊಡ್ಡನೆ ಗಾತ್ರದ ಕನ್ನಡಕ, ತಲೆಗೆ ಹೆಲ್ಮೆಟ್, ಪಾದಕ್ಕೆ ಕೆಲಸಗಾರರ ವಿಶೇಷ ಶೂಸ್ – ಇವೆಲ್ಲವನ್ನೂ ಖರೀದಿಸಬೇಕು. ತರಬೇತಿಯ ಫೀಸ್ ಇಷ್ಟು, ಎಂದರು. ಅಷ್ಟರಲ್ಲೇ ಮೈ ಬೆವರು ಇಳಿಯುತ್ತಿತ್ತು. ಮುಂದಿನ ಬಾರಿ ಬೆಂಗಳೂರಿಗೆ ಹೋದಾಗ ಅಲ್ಲೇ ಕಲ್ಲು ಕುಟ್ಟುವ ಕಲೆಯನ್ನ ಕಲಿಯುತ್ತೀನಿ, ಎಂದು ಜೋರಾಗಿ ಗೊಣಗಿದಾಗ ಯಾರೋ ಕಿಸಕ್ಕಂದಿದ್ದು ಕೇಳಿಸಿತು.

‘ಹಾ ವಿಧಿಯೇ, ಎಂದುಕೊಂಡು ಗಾಜಿನ ಜಾಡಿಗಳನ್ನ ಖರೀದಿಸಿ ನಿಂಬೆ ಉಪ್ಪಿನಕಾಯಿ ಹಾಕಿದ್ದಾಯ್ತು. ಅದಿನ್ನು ಕಳಿತು ಮಾಗುವ ದಿನಕ್ಕಾಗಿ ಕಾಯುತ್ತಿದ್ದೀನಿ. ಆಗಾಗ ನಾನು ಕಲ್ಲು ಕುಟ್ಟುವ ಕುಶಲಕಲೆ ಕಲಿತಿದ್ದು, ನಮ್ಮಮ್ಮನ ಬಳಿಯಿದ್ದ ಕಲ್ಲಿನ ಮರಿಗೆಯಂಥದ್ದೇ ಒಂದು ಮರಿಗೆಯನ್ನು ನಾನೂ ಕೂಡ ಮಾಡಿದಂತೆ ಕನಸು ಬೀಳುತ್ತಿದೆ.