“ಸಾಂಪ್ರದಾಯಿಕ ಓದು ಬರಹವೆಂಬ ವಿದ್ಯೆಗಳನ್ನು ಪಕ್ಕಕ್ಕಿಟ್ಟು ನೋಡಿದರೆ ಭೂಮಿಗೆ ಹತ್ತಿರವಾಗಿ ವಾಸಿಸುತ್ತಿದ್ದ ಅಬರಿಜಿನಲ್ ಹೆಂಗಸರು ಮತ್ತು ಈಗಿನ ಹೊಸಪೀಳಿಗೆಯ ಹೆಂಗಸರಿಗೂ ನಡುವೆ ಒಂದು ಶತಮಾನದ ದೀರ್ಘ ಮೌನವಿದೆ. ಆ ಮೌನದಲ್ಲಿ ಅತೀವ ನೋವು, ಕಿಬ್ಬೊಟ್ಟೆಯಲ್ಲಿ ಹುದುಗಿಹೋಗಿರುವ ಆಕ್ರಂದನ, ಹೊಟ್ಟೆಸೀಳಿಕೊಂಡು ಬರದೇ ಅಲ್ಲೇ ಒಳಗೆ ಶರಣಾದ ದನಿಗಳಿವೆ. ಯಾಕೆಂದರೆ ಅದು ‘ಕಳೆದು ಹೋದವರ’, ಕಾಣೆಯಾದವರ ಶತಮಾನ!”
ಮೂಲನಿವಾಸಿ ಬರಹಗಾರ್ತಿ ಊಡ್ಜರೂ ನೂನುಕ್ಕಲ್ ಕುರಿತು ಡಾ.ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಅಂಕಣ.

 

ಓದುಗರೇ, ಹಿಂದಿನ ಲೇಖನದಲ್ಲಿ ಇಪ್ಪತ್ತನೇ ಶತಮಾನದ ವಿವಿಧ ಕಾಲಘಟ್ಟಗಳಲ್ಲಿ ಆಸ್ಟ್ರೇಲಿಯ ದೇಶದ ಮಹಿಳೆಯರು ಹೇಗೆ ಬದುಕುಗಳನ್ನ ರೂಪಿಸಿಕೊಳ್ಳುತ್ತಾ ಹೋದರು ಎಂಬುದರ ಬಗ್ಗೆ ಬರೆದಿದ್ದೆ. ‘ಸ್ವೀಟ್ ಸಿಸ್ಟರ್ಸ್ ಅಂಡ್ ಅದರ್ ಸೀಕ್ರೆಟ್ಸ್’ ಪುಸ್ತಕದಲ್ಲಿನ ಕಥಾನಕಗಳನ್ನು ಪರಿಚಯಿಸುತ್ತಾ ಸಾಮಾನ್ಯ ಹೆಂಗಸರ ಜೀವನಗಳಲ್ಲಿ, ಸಮಾಜದಲ್ಲಿ ಆಗುತ್ತಿದ್ದ ಮತ್ತು ಆಗಬೇಕಿದ್ದ ಬದಲಾವಣೆಗಳಲ್ಲಿ ತಮ್ಮ ಪಾತ್ರಗಳನ್ನು ಹೇಗೆ ಅವರೇ ರೂಪಿಸಿಕೊಳ್ಳುತ್ತಾ ಹೋದರು ಎಂದು ಹೇಳಿದ್ದೆ. ತಮ್ಮಗಳ, ಅವರ ಅಮ್ಮಂದಿರ ಮತ್ತು ಅಜ್ಜಿಯಂದಿರ ಜೀವಗಾಥೆಯ ತುಣುಕನ್ನು ಹಂಚಿಕೊಂಡ ಆ ಮಹಿಳಾ ಬರಹಗಾರರಲ್ಲಿ ಹೆಚ್ಚಿನವರು ಆಸ್ಟ್ರೇಲಿಯನ್ ಬಿಳಿ ಹೆಂಗಸರು-ಬ್ರಿಟಿಷರ ವಸಾಹತುಶಾಹಿಗಳ ಕುಟುಂಬಗಳವರು, ನೆಲೆ ಹುಡುಕುತ್ತಾ ಬ್ರಿಟನ್ನಿನಿಂದ ಇಪ್ಪತ್ತನೇ ಶತಮಾನದಲ್ಲಿ ಬಂದವರು. ಕೆಲವರು ಯುರೋಪಿನ ಭಾಗಗಳಿಂದ ವಲಸೆ ಬಂದು ನೆಲೆಸಿದವರು. ಒಂದೆರಡು ಅಪವಾದವೆಂದರೆ ಚೀನೀಮೂಲದ ಒಬ್ಬರು, ನ್ಯೂಜಿಲ್ಯಾಂಡ್ ಕಡೆಯವರು. ಅಲ್ಲಿ ಕಾಣದಾಗಿದ್ದವರು ಆಸ್ಟ್ರೇಲಿಯನ್ ಅಬರಿಜಿನಲ್ ಮಹಿಳೆಯರು.

ಅಬರಿಜಿನಲ್ ಮಹಿಳೆಯರಲ್ಲಿ ಅನೇಕ ಮಂದಿ ತಮ್ಮ ಕುಲಗಳಿಗೆ ವಿಶಿಷ್ಟವಾದ ಚಿತ್ರಕಲೆ, ಸಾವಯವ ಪದಾರ್ಥಗಳಿಂದ ಮಾಡುವ ನೇಯ್ಗೆ, ಡ್ರೀಮ್ ಟೈಮ್ (Dreamtime) ಕಥೆಗಳನ್ನು ಹೇಳುವುದು, ಹಾಡು-ನೃತ್ಯಗಳಲ್ಲಿ ಪರಿಣಿತರು. ಅಷ್ಟಲ್ಲದೆ ಆಸ್ಟ್ರೇಲಿಯನ್ ಬುಶ್ ಎಂಬ ಕಠಿಣ ಮತ್ತು ಪ್ರತಿಕೂಲ ನೈಸರ್ಗಿಕ ಪರಿಸರದಲ್ಲಿ ಆಹಾರವನ್ನು ಬೇಟೆಯಾಡಿ ಕುಟುಂಬವನ್ನು ಪೋಷಿಸುವುದು, ಮರುಭೂಮಿ ವಾತಾವರಣದ ನಿಷ್ಕರುಣೆಯ ಭೂಮಿಯಲ್ಲಿ ಸಿಕ್ಕುವ ಗೆಡ್ಡೆಗೆಣಸುಗಳನ್ನು ಜಾಣತನದಿಂದ ಗುರ್ತಿಸಿ, ಅದನ್ನು ಅಗೆದು ಸಂಪಾದಿಸುವುದು, ಪ್ರಕೃತಿಯಲ್ಲಿ ಒಂದಾಗಿ ಬದುಕುವ ಸಾಮರ್ಥ್ಯಗಳನ್ನು ಪಡೆದಿದ್ದರು ಅನ್ನುವುದನ್ನು ಈಗೀಗ ಜನರು ಶ್ಲಾಘಿಸುತ್ತಿದ್ದಾರೆ. ಅದಕ್ಕೂ ಮುಂಚೆ ಅವರ ಕಲೆಯನ್ನು, ಕೌಶಲ್ಯಗಳನ್ನು ಹೊರಪ್ರಪಂಚದವರು ಉಪಯೋಗಿಸಿಕೊಂಡಿದ್ದೋ ಇಲ್ಲವೋ ಅವರನ್ನು ಲಾಭದಾಯಕವಾಗಿ ನೋಡುತ್ತಿದ್ದದ್ದೇ ರೂಢಿಯಾಗಿಹೋಗಿತ್ತು.

ಸಾಂಪ್ರದಾಯಿಕ ಓದು-ಬರಹವೆಂಬ ವಿದ್ಯೆಗಳನ್ನು ಪಕ್ಕಕ್ಕಿಟ್ಟು ನೋಡಿದರೆ ಕಣ್ಣಿಗೆ ಕಾಣುವ ಅಬರಿಜಿನಲ್ ಮಹಿಳೆಯರ ಸ್ವಾಯತ್ತೆ, ಮುಂದಾಳತ್ವ, ಅವರ ಚತುರತೆ, ಸಾತ್ವಿಕತೆ ಮತ್ತು ಕೌಶಲ್ಯಗಳ ಬಗ್ಗೆ ಈಗೀಗ ಹೆಚ್ಚು ತಿಳಿದುಬರುತ್ತಿದೆ. ದೇಶದಲ್ಲಿರುವ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಅಬರಿಜಿನಲ್ ಮಹಿಳಾ ಅಧ್ಯಾಪಕರೂ, ಪ್ರಾಧ್ಯಾಪಕರೂ ಇದ್ದಾರೆ; ಬರೆಯುತ್ತಿದ್ದಾರೆ, ದನಿಯೆತ್ತಿದ್ದಾರೆ. ಅವರು ಗಮನಾರ್ಹ ಶೈಕ್ಷಣಿಕ ಅಧ್ಯಯನಗಳನ್ನು, ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ರಾಜಕೀಯ ರಂಗದಲ್ಲಿ ಅಲ್ಲದೇ ಪಾರ್ಲಿಮೆಂಟ್ ನಲ್ಲೂ ಅವರಿದ್ದಾರೆ. ತಮ್ಮದೇ ಛಾಪನ್ನು ಮೂಡಿಸುತ್ತಿದ್ದಾರೆ. ಆದರೆ, ಆ ಕೌಶಲ್ಯಗಳು, ವಿದ್ಯೆಗಳನ್ನು ಹೊಂದಿದ್ದು, ಭೂಮಿಗೆ ಹತ್ತಿರವಾಗಿ ವಾಸಿಸುತ್ತಿದ್ದ ಅಬರಿಜಿನಲ್ ಹೆಂಗಸರು ಮತ್ತು ಈಗಿನ ಹೊಸಪೀಳಿಗೆಯ ಹೆಂಗಸರಿಗೂ ನಡುವೆ ಒಂದು ಶತಮಾನದ ದೀರ್ಘ ಮೌನವಿದೆ. ಆ ಮೌನದಲ್ಲಿ ಅತೀವ ನೋವು, ಕಿಬ್ಬೊಟ್ಟೆಯಲ್ಲಿ ಹುದುಗಿಹೋಗಿರುವ ಆಕ್ರಂದನ, ಹೊಟ್ಟೆಸೀಳಿಕೊಂಡು ಬರದೇ ಅಲ್ಲೇ ಒಳಗೆ ಶರಣಾದ ದನಿಗಳಿವೆ. ಯಾಕೆಂದರೆ ಅದು ‘ಕಳೆದು ಹೋದವರ’, ಕಾಣೆಯಾದವರ ಶತಮಾನ!

ಆ ಬೃಹತ್ಕಾಲದ ಅಂತರದಲ್ಲಿ ಕಳೆದುಹೋದ ಮಕ್ಕಳು, ತಂದೆತಾಯಿಯರಿಂದ ಬಲವಂತವಾಗಿ ಬೇರ್ಪಡಿಸಲ್ಪಟ್ಟ ಮಕ್ಕಳು, ಅನಾಥಗೃಹಗಳಲ್ಲಿ ತಳ್ಳಲ್ಪಟ್ಟ ಮಕ್ಕಳು, ಮಿಷನರಿಗಳು ಬೆಳೆಸಿದ, ಊಳಿಗ ವರ್ಗಕ್ಕೆಂದೇ ಮೀಸಲಾದ ಮಕ್ಕಳು ಇದ್ದಾರೆ. ಅವರಿಗೆ ತಮ್ಮ ತಂದೆತಾಯಿಯರ, ಅವರ ರಕ್ತಕುಲಗಳ ಜಾಣ್ಮೆ, ಕೌಶಲ್ಯ, ವಿದ್ಯೆಗಳು ದೊರೆಯಲೇ ಇಲ್ಲ. ತಮ್ಮ ಭಾಷೆ, ಸಂಸ್ಕೃತಿ, ಆಚಾರ-ವಿಚಾರ, ಕಲೆ, ಆಹಾರ, ಒಟ್ಟಾಗಿ ಹೇಳಬೇಕೆಂದರೆ ತಮ್ಮದೇ ಜೀವನದಿಂದ ಅವರನ್ನು ವಸಾಹತುಶಾಹಿಗಳು ಹೊರಗೆಳೆದು ಬೇರೆ ಅಸ್ಮಿತೆ, ವ್ಯಕ್ತಿತ್ವ ಮತ್ತು ಮನಷ್ಯತ್ವವನ್ನು ಕೊಟ್ಟುಬಿಟ್ಟರು. ಒಂದು ಕ್ಷಣ ಊಹಿಸಿಕೊಳ್ಳಿ – ನಮ್ಮ ಮನೆ, ಕುಲ, ಅಪ್ಪ-ಅಮ್ಮ, ಭಾಷೆ, ಆಹಾರ ಎಲ್ಲದರಿಂದ ನಮ್ಮನ್ನು ಬೇರ್ಪಡಿಸಿ ಬಲವಂತದಿಂದ ‘ಅಪರಿಚಿತ’ ರನ್ನಾಗಿ ಮಾಡಿದರೆ ಏನಾಗುತ್ತದೆ? ಊಹಿಸಿಕೊಳ್ಳಲೂ ಕಷ್ಟ! ಆ ಕಳೆದುಹೋದ ಸಂತತಿಗಳ ಕೆಲ ಹಿರಿಯರನ್ನು ನಾನು ಮಾತನಾಡಿಸಿದಾಗ ಹೊರಬರುತ್ತಿದ್ದ ಕಥೆಗಳು ಒಮ್ಮೊಮ್ಮೆ ವಿಚಿತ್ರವೆನಿಸುತ್ತಿತ್ತು. ಇರಲಿ, ಮುಂದೆ ಎಂದಾದರೂ ಅವರ ಕಥೆಗಳನ್ನು ಹೇಳಬಹುದಾದ ಸಂದರ್ಭ ಬರಬಹುದು.

ಹೆಚ್ಚಿನವರಿಗೆ ಅಪ್ಪಅಮ್ಮಂದಿರು ಎಲ್ಲಿದ್ದಾರೆ ಹೇಗಿದ್ದಾರೆ ಎಂಬ ಸುಳಿವೇ ಇರದೇಹೋದ ಕರಾಳ ಕಾಲದಲ್ಲಿ ಕೂಡ ಒಂದೆರಡು ಮಿಣುಕುಹುಳುಗಳು ಬೆಳಕನ್ನ ಚೆಲ್ಲಿದ್ದು ಭಾಗ್ಯವಶಾತ್ ಅದನ್ನು ಕ್ವೀನ್ಸ್ ಲ್ಯಾಂಡ್ ರಾಜ್ಯ ಕಂಡಿದೆ. ಮಾರ್ಪಾಡುಗಳು ಬರಲು, ಜನರ ಮನಸ್ಸಿನಲ್ಲಿ ಬದಲಾವಣೆಗಳು ಆಗಬೇಕಿವೆ ಎನ್ನುವ ಅಪೇಕ್ಷೆಯನ್ನು ಮೂಡಿಸಲು ಬೆರಳೆಣಿಕೆಯಷ್ಟು ಮಂದಿ ಅಬರಿಜಿನಲ್ ಮಹಿಳೆಯರು ಹೋರಾಡಿದ್ದಾರೆ. ಅವರಲ್ಲಿ ಬಹುಮುಖ್ಯವಾದ ಹೆಸರು ಊಡ್ಜರೂ ನೂನುಕ್ಕಲ್ (Oodgeroo Noonuccal).  “ನಿನ್ನ ಹೆಸರನ್ನು ಹೇಗೆ ಉಚ್ಚರಿಸಬೇಕೆಂದು ಹೇಳಿಕೊಡು” ಎಂದು ಹೇಳುವ ಜನರು ನನಗೆ ಆಗಾಗ್ಗೆ ಸಿಗುತ್ತಾರೆ. ಕರ್ನಾಟಕದಲ್ಲೇ ನನ್ನ ಹೆಸರನ್ನು ಕೇಳಿ ಅಂಥದ್ದೊಂದು ಹೆಸರಿದೆಯಾ ಎಂದು ಬಹಳಷ್ಟು ಜನರು ಕೇಳುವವರು. ಕಾಲೇಜಿನಲ್ಲಿದ್ದಾಗ ಎಸ್.ಎಲ್. ಭೈರಪ್ಪನವರ ಕಾದಂಬರಿಯಲ್ಲಿ ವಿನತೆ ಎಂಬ ಹೆಸರಿನ ಪಾತ್ರವಿರುವುದು ಹೆಮ್ಮೆಯೆನಿಸಿತ್ತು. ನನ್ನ ಹೆಸರಿನ ಅರ್ಥ, ಅದಕ್ಕೆ ಜೋಡಿತವಾದ ವಿನತೆ-ಕದ್ರು-ಹಾವುಗಳು-ಗರುಡ-ಅಮೃತ ಇವರುಗಳ ಕಥೆಯನ್ನು ಕೇಳಿದ್ದು, ಓದಿದ್ದೂ, ಸಂಸ್ಕೃತ ಮತ್ತು ಕನ್ನಡ ಭಾಷಾವಿದ್ವಾಂಸರಿಂದ ನನ್ನ ಹೆಸರಿನ ವಿವಿಧ ಸ್ವಾರಸ್ಯಕರ ಅರ್ಥವಿವರಣೆಗಳನ್ನು ಕೇಳಿಸಿಕೊಂಡದ್ದೂ ಆಗಿದೆ. ಒಮ್ಮೊಮ್ಮೆ ಬೇಸೆತ್ತುಹೋಗಿ ನನ್ನ ಹೆಸರನ್ನು ಬದಲಿಸಿಕೊಳ್ತೀನಿ ಅಂತ ನಿರ್ಧರಿಸಿದರೂ ಮನಸ್ಸು ಬದಲಾಯಿಸಿದ್ದಿದೆ.

ಸಾಂಪ್ರದಾಯಿಕ ಓದು-ಬರಹವೆಂಬ ವಿದ್ಯೆಗಳನ್ನು ಪಕ್ಕಕ್ಕಿಟ್ಟು ನೋಡಿದರೆ ಕಣ್ಣಿಗೆ ಕಾಣುವ ಅಬರಿಜಿನಲ್ ಮಹಿಳೆಯರ ಸ್ವಾಯತ್ತೆ, ಮುಂದಾಳತ್ವ, ಅವರ ಚತುರತೆ, ಸಾತ್ವಿಕತೆ ಮತ್ತು ಕೌಶಲ್ಯಗಳ ಬಗ್ಗೆ ಈಗೀಗ ಹೆಚ್ಚು ತಿಳಿದುಬರುತ್ತಿದೆ. ದೇಶದಲ್ಲಿರುವ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಅಬರಿಜಿನಲ್ ಮಹಿಳಾ ಅಧ್ಯಾಪಕರೂ, ಪ್ರಾಧ್ಯಾಪಕರೂ ಇದ್ದಾರೆ; ಬರೆಯುತ್ತಿದ್ದಾರೆ, ದನಿಯೆತ್ತಿದ್ದಾರೆ.

ಯೂನಿವರ್ಸಿಟಿಯಲ್ಲಿದ್ದ ಊಡ್ಜರೂ ಹೆಸರಿನ ಒಂದು ವಿಭಾಗದಲ್ಲಿ ಕೆಲಕಾಲ ಕೆಲಸಮಾಡುತ್ತಿದ್ದಾಗ ಆ ಪದವನ್ನು ಹೇಗೆ ಉಚ್ಚರಿಸುವುದು ಹೇಳಿಕೊಡಿ ಎಂದು (ನನ್ನ ಸರದಿ ಕಡೆಗೂ ಬಂತು ಅನ್ನೋ ಥರ) ನಾನು ಕೂಡ ಕೇಳಿದ್ದೆ. ಹಾಗೇ ಪ್ರಯತ್ನಪಟ್ಟು ಊಡ್ಜರೂ ಪದದ ಬಳಕೆಯನ್ನು ರೂಢಿ ಮಾಡಿಕೊಂಡೆ. ಬಾಯಿ ತಿರುಗುತ್ತಾ ಹೋದಹಾಗೆ ಎಂಥ ಸುಂದರ ಹೆಸರು ಅಂದೆನಿಸಿತ್ತು. ಆಗ ಈ ಊಡ್ಜರೂ ಯಾರು ಏನು ಎಂಬ ಪರಿಚಯವಾಯ್ತು. ಅಬರಿಜಿನಲ್ ಮಹಿಳೆ ಕ್ಯಾತ್ ರಸ್ಕಾ ಮುಂದೆ ಕ್ಯಾತ್ ವಾಕರ್ ಎಂದು ಪ್ರಸಿದ್ಧಿಯಾದದ್ದು, ತಾನು ಕ್ಯಾತ್ ವಾಕರ್ ಆಗಿರಬೇಕಿಲ್ಲ, ಬದಲಾಗಿ ತನ್ನ ಕುಲದ ಹೆಸರನ್ನು (Noonuccal) ಇಟ್ಟುಕೊಂಡರೂ ಅದು ಹೆಮ್ಮೆಯೇ ಸರಿ ಎಂದು ಸಾರಿ ತೋರಿದ್ದು ಆ ಕಾಲಕ್ಕೆ ಅವರು ನಡೆದ ಹೋರಾಟದ ಹಾದಿಯ ಮೈಲಿಗಲ್ಲಾಗಿತ್ತು. ಅಂದರೆ ಇಂಗ್ಲಿಷ್ ಹೆಸರು ಇರದಿದ್ದರೂ ಕ್ವೀನ್ಸ್ ಲ್ಯಾಂಡಿನಲ್ಲಿ ಜೀವಿಸಬಹುದು ಅನ್ನೋ ಎದೆಗಾರಿಕೆ! ಅಂದಹಾಗೆ ಊಡ್ಜರೂ ಅಂದರೆ ಪೇಪರ್ ಬಾರ್ಕ್ (Paper Bark), ಆಸ್ಟ್ರೇಲಿಯಾದ ಉದ್ದಗಲ ಕಾಣಸಿಗುವ ಉದ್ದನೆ ಮರ. ಅದರ ಪದರಪದರವಾಗಿ ಬಿಚ್ಚಿಕೊಳ್ಳುವ ತೊಗಟೆಯನ್ನು ಹಿಂದೆ ಅಬರಿಜಿನಲ್ ಜನರು ಬಹುಉಪಯೋಗಿ ಸಂಪನ್ಮೂಲವಾಗಿ ಬಳಸುತ್ತಿದ್ದರು.

ಆಸ್ಟ್ರೇಲಿಯಾದಲ್ಲಿ ‘ಮುಂದುವರೆದ’ ರಾಜ್ಯಗಳು ಎಂದು ಕರೆಸಿಕೊಳ್ಳುವುದು ಮೊದಲಿಗೆ ವಿಕ್ಟೊರಿಯಾ ರಾಜ್ಯ (ಮೆಲ್ಬರ್ನ್ ನಗರ ರಾಜಧಾನಿ) ನಂತರ ನ್ಯೂ ಸೌತ್ ವೇಲ್ಸ್ (ಸಿಡ್ನಿ ನಗರ ರಾಜಧಾನಿ), ಆನಂತರ ಬರುವುದು ಟಾಸ್ಮೆನಿಯಾ, ಸೌತ್ ಆಸ್ಟ್ರೇಲಿಯಾ. ಹಿಂದುಳಿದ ರಾಜ್ಯಗಳು ಎಂದು ಹಣೆಪಟ್ಟಿ ಹೊತ್ತಿರುವುದು ವೆಸ್ಟರ್ನ್ ಆಸ್ಟ್ರೇಲಿಯಾ, ಕ್ವೀನ್ಸ್ ಲ್ಯಾಂಡ್ ಮತ್ತು ಕಟ್ಟಕಡೆಗೆ ನಾರ್ಧರ್ನ್ ಟೆರಿಟರಿ. ಈ ಕಡೆಯ ಮೂರು ರಾಜ್ಯಗಳಲ್ಲಿ ಬಿಳಿ ಆಸ್ಟ್ರೇಲಿಯನ್ನರ ಕೈ ಮೇಲು, ಬಾಯಿ ದೊಡ್ಡದು, ಜಬರ್ದಸ್ತಿ ಜಾಸ್ತಿ. ಕ್ವೀನ್ಸ್ ಲ್ಯಾಂಡ್ ರಾಜ್ಯದ ಅಬೊರಿಜಿನಿಗಳಿಗೆ, ಬ್ರಿಸ್ಬನ್ ನಗರದ ನಿವಾಸಿಗಳಿಗೆ ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಚಿರಪರಿಚಿತವಾದ ಹೆಸರು ಕ್ಯಾತ್ ವಾಕರ್ ಮತ್ತು ಊಡ್ಜರೂ ನೂನುಕ್ಕಲ್. ಆ ಎರಡೂ ಹೆಸರುಗಳು ಒಬ್ಬಾಕೆಗೇ ಸೇರಿದ್ದು ಎನ್ನುವುದನ್ನು ಜನ ಸರಿಯಾಗಿ ಗುರ್ತಿಸುತ್ತಾರೆ. ಒಂದುರೀತಿಯಲ್ಲಿ ಅದು ಈಗಿನ ಆಸ್ಟ್ರೇಲಿಯಾದ ಅಸ್ಮಿತೆಯೂ ಹೌದು – ವಸಾಹತುಶಾಹಿಗಳ ಯೂನಿಯನ್ ಜಾಕ್ ನೆರಳಿನಲ್ಲಿ ಅಬರಿಜನಲ್ ಜನರು ತಮ್ಮ ಕೆಂಪುಸೂರ್ಯನನ್ನು ಜ್ವಲಂತವಾಗಿಸಿದ್ದಾರೆ.

ಕ್ಯಾತ್ ರಸ್ಕಾ ಹುಟ್ಟಿದ್ದು ೧೯೨೦ನೇ ವರ್ಷದಲ್ಲಿ; ಸತ್ತದ್ದು ೧೯೯೩ರಲ್ಲಿ. ಸತ್ತಾಗ ಅವರಿಗೆ ಎಪ್ಪತ್ತೆರಡು ವರ್ಷ ವಯಸ್ಸಾಗಿತ್ತು. ಆ ಎಪ್ಪತ್ತೆರಡು ವರ್ಷಗಳಲ್ಲಿ ಸುಮಾರು ಅರವತ್ತು ವರ್ಷಗಳು ಆಕೆ ತಮ್ಮ ಜನರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಲೇ ಸಾಗಿದರು. ಬರೆಯುತ್ತಲೇ ಹೋದರು. ಪ್ರಶಸ್ತಿಗಳನ್ನು ಪಡೆದರು, ಕೆಲವನ್ನು ಹಿಂದಿರುಗಿಸಿದರು. ಹೋರಾಟದ ಕ್ರಾಂತಿಯ ಕಿಚ್ಚುಹಚ್ಚುವ ಹಾಡುಗಳನ್ನು ಜನಪ್ರಿಯಗೊಳಿಸಿದರು. ಕ್ಯಾತ್ ರ ಬಾಲ್ಯದಲ್ಲಿ ಆಕೆ ತನ್ನ ಎಡಗೈನಲ್ಲಿ ಬರೆಯುತ್ತಿದ್ದಳು ಎಂದು ಕೈಮೇಲೆ ಹೊಡೆದೂ ಹೊಡೆದೂ, ಕಡೆಗೆ ಆ ಬಾಲಕಿ ಹೈಸ್ಕೂಲು ಮುಗಿಸುವ ಮುನ್ನವೇ ಶಾಲೆ ಬಿಟ್ಟಿದ್ದಳು. ಅಷ್ಟರಲ್ಲೇ ಆಕೆಗೆ “ನೀನು ದಾಸ್ಯಕ್ಕೆ ಸೇರಿದವಳು, ಮನೆಕೆಲಸದವಳಾಗಿ ಕೆಲಸ ಮಾಡಲು ಎಷ್ಟು ಬೇಕೋ ಅಷ್ಟು ತಯಾರಾಗು ಸಾಕು” ಎನ್ನುವುದನ್ನು ಶಾಲೆಯಲ್ಲಿ ಮನದಟ್ಟು ಮಾಡಿಸಿದ್ದರಂತೆ. ಅದಕ್ಕೆ ವ್ಯತಿರಿಕ್ತವಾಗಿ ಆಕೆಯ ತಾಯಿ ತನ್ನ ಮಕ್ಕಳು ಶಾಲೆಗೆ ಹೋಗಿ ಕಲಿತು ಶಿಕ್ಷಣವಂತರಾಗಬೇಕು ಎಂದು ಶ್ರಮಪಟ್ಟರಂತೆ. ಆ ತಾಯಿ ಶಾಲಾಶಿಕ್ಷಣವನ್ನು ಪಡೆಯದಂತೆ ಮಾಡಿದ್ದರಂತೆ. ಬಾಲಕಿಯ ತಂದೆಯೂ ಕೂಡ ಕನಿಷ್ಠ ಓದು-ಬರಹವನ್ನು ಪಡೆದು, ಒಳ್ಳೆ ಕೆಲಸಗಾರರಾಗಿದ್ದರೂ ಅವರಿಗೆ ಗುಲಾಮರಿಗೆ ಕೊಡುವ ಒಂದೆರಡು ಕಾಸು ಸಿಗುತ್ತಿತ್ತಂತೆ. ಸರಕಾರ ತಮಗೆ ಬಳುವಳಿಯಾಗಿ ಬಡತನವನ್ನು ಕೊಟ್ಟಿದ್ದರೂ ಸ್ವಾಭಿಮಾನಿ ಕುಟುಂಬ ತಮ್ಮ ಹಸಿವನ್ನು ನಿಯಂತ್ರಿಸಿಕೊಂಡು ಬದುಕಿದವರು. ಧೃತಿಗೆಡದ ಆ ತಂದೆತಾಯಿಯರು ಮಕ್ಕಳಲ್ಲಿ ಕನಸುಗಳನ್ನು, ಧೈರ್ಯವನ್ನು ತುಂಬಿದರು. ಆ ಹನಿಹನಿ ತುಂತುರು ಸೇರಿ ಅವರ ಮಗಳು ಕ್ಯಾತ್ ತಾನು ಹುಟ್ಟಿದ ಮಿಂಜೆರಿಬ (North Stradbroke ದ್ವೀಪ) ಸಮುದ್ರದ ಮೊರೆತವಾಗುವಂತೆ ಮಾಡಿತು.

ಮುಂದೆ ಹದಿನಾರು ವರ್ಷದ ಹುಡುಗಿ ಕ್ಯಾತ್ ತಾನು ನರ್ಸಿಂಗ್ ಓದಬೇಕೆಂದು ಕೇಳಿಕೊಂಡರೂ ಜನಾಂಗೀಯ ಧೋರಣೆಯಿಂದ ಅದನ್ನು ನಿರಾಕರಿಸಲಾಯ್ತು. ಎರಡನೇ ಪ್ರಾಪಂಚಿಕ ಮಹಾಯುದ್ಧದ ಸಮಯದಲ್ಲಿ (೧೯೪೧-೪೪) ಆಸ್ಟ್ರೇಲಿಯನ್ ವಿಮೆನ್ಸ್ ಆರ್ಮಿ ಸರ್ವಿಸ್ ಸೇರಿ ಸ್ವಿಚ್ ಆಪರೇಟರ್ ಆದ ಬಳಿಕ ಅವರು ಹಿಂದೆ ನೋಡಲಿಲ್ಲ. ಅದೇ ವೇಳೆಯಲ್ಲೇ ಬ್ರೂಸ್ ವಾಕರ್ ರನ್ನು ಮದುವೆಯಾಗಿ ಕ್ಯಾತ್ ವಾಕರ್ ಆದರು. ಇಬ್ಬರು ಮಕ್ಕಳಾದ ನಂತರ, ೧೯೬೦ರ ದಶಕದಲ್ಲಿ ಕ್ಯಾತ್ ರಾಜಕೀಯ ಪಕ್ಷವನ್ನು ಸೇರಿ ಮುಂದಾಳತ್ವವನ್ನು ತೋರಿದರು. ತಮ್ಮ ಜನರ ಹಕ್ಕುಗಳಿಗಾಗಿ ಹೋರಾಡುತ್ತಾ ಸಂವಿಧಾನದಲ್ಲಿ ಅವರ ಸೇರ್ಪಡೆಯಾಗುವ ನಿಟ್ಟಿನ ಗಟ್ಟಿದನಿಯಾದರು. ೧೯೬೭ರಲ್ಲಿ ಅಬರಿಜಿನಲ್ ಜನರನ್ನು ಕಾನೂನುಬದ್ಧವಾಗಿ ಸಂವಿಧಾನದಲ್ಲಿ ಸೇರಿಸಲಾಯ್ತು. ತನ್ನ ಸಕ್ರಿಯ ಪಾತ್ರದಿಂದ ಆಕೆ ರಾಜಕೀಯ ನಾಯಕರೊಂದಿಗೆ, ಆಡಳಿತಾರೂಢರೊಂದಿಗೆ ಮಾತನಾಡುವ ಆತ್ಮವಿಶ್ವಾಸವನ್ನು ತೋರಿದರು.

ಕ್ಯಾತ್ ರ ಬಾಲ್ಯದಲ್ಲಿ ಆಕೆ ತನ್ನ ಎಡಗೈನಲ್ಲಿ ಬರೆಯುತ್ತಿದ್ದಳು ಎಂದು ಕೈಮೇಲೆ ಹೊಡೆದೂ ಹೊಡೆದೂ, ಕಡೆಗೆ ಆ ಬಾಲಕಿ ಹೈಸ್ಕೂಲು ಮುಗಿಸುವ ಮುನ್ನವೇ ಶಾಲೆ ಬಿಟ್ಟಿದ್ದಳು. ಅಷ್ಟರಲ್ಲೇ ಆಕೆಗೆ “ನೀನು ದಾಸ್ಯಕ್ಕೆ ಸೇರಿದವಳು, ಮನೆಕೆಲಸದವಳಾಗಿ ಕೆಲಸ ಮಾಡಲು ಎಷ್ಟು ಬೇಕೋ ಅಷ್ಟು ತಯಾರಾಗು ಸಾಕು” ಎನ್ನುವುದನ್ನು ಶಾಲೆಯಲ್ಲಿ ಮನದಟ್ಟು ಮಾಡಿಸಿದ್ದರಂತೆ.

ಬದಲಾವಣೆಗಳನ್ನು ತರುವ ಅವರ ಶ್ರಮ ಪ್ರಸಿದ್ಧಿಯಾಗಿತ್ತು. ಅದಕ್ಕೆ ಕಾರಣ ಆಕೆಯ ಬರವಣಿಗೆ-ಮುಖ್ಯವಾಗಿ ಅವರ ಕವನಗಳು. ೧೯೬೪ರಲ್ಲಿ ಪ್ರಕಟವಾದ ‘ವಿ ಆರ್ ಗೋಯಿಂಗ್’ (We are going) ಕವನಸಂಕಲನ ಅವರ ಜನರ ಸ್ಥಿತಿಗೆ ಕನ್ನಡಿ ಹಿಡಿದು ತೋರಿದ್ದು ಅಲ್ಲದೆ ತಾವು ಇತರೇ ಜನಾಂಗವಲ್ಲ, ಆಸ್ಟ್ರೇಲಿಯನ್ ಮಣ್ಣಿನಮಕ್ಕಳು ಎಂದು ಜಗತ್ತಿಗೆ ಸಾರಿತು. ಅವರು ಬರೆದಿದ್ದು ಇಂಗ್ಲಿಷ್ ಭಾಷೆಯಲ್ಲಿ. ಓದುಗರಾದ ಬಿಳಿಯರು ಅವರ ಕವನಗಳನ್ನು ಮೆಚ್ಚಿಕೊಂಡರು. ಕವನಗಳನ್ನು ಬರೆದು ಪ್ರಕಟಿಸಿದ ಮೊಟ್ಟಮೊದಲ ಆಸ್ಟ್ರೇಲಿಯನ್ ಅಬರಿಜಿನಲ್ ಬರಹಗಾರ್ತಿ ಎಂಬ ಹೆಗ್ಗಳಿಕೆ ಅವರದ್ದು. ಕ್ಯಾತ್ ರ ಬರವಣಿಗೆಗಳು ದೂರದ ಇಂಗ್ಲೆಂಡ್, ಅಮೇರಿಕ ಮತ್ತು ಯೂರೋಪ್ ಗಳನ್ನ ತಲುಪಿತು. ಇಂಗ್ಲೆಂಡಿನಲ್ಲಿ ಆಕೆಯನ್ನು ಮೆಚ್ಚುವ ಓದುಗರು ಹೆಚ್ಚಾದರು. ಪ್ರಶಸ್ತಿಗಳು ಹುಡುಕಿಕೊಂಡು ಬಂದವು. ೧೯೭೦ರಲ್ಲಿ ಅವರಿಗೆ ‘ಮೆಂಬರ್ ಆಫ್ ದ ಆರ್ಡರ್ ಆಫ್ ದ ಬ್ರಿಟಿಷ್ ಎಂಪೈರ್’ (Member of the Order of the British Empire-MBE) ಅತ್ಯುಚ್ಚ ಗೌರವ ಲಭಿಸಿತು. ಅದೇ ವರ್ಷ ತಮ್ಮ ಹುಟ್ಟಿದ ಊರಿಗೆ (North Stradbroke) ಬಂದು, ಅಲ್ಲಿ ಭೂಮಿ ಖರೀದಿಸಿ, ಅಲ್ಲಿ ಮೂನ್ಗಾಲ್ಬ ಎಂಬ ಹೆಸರಿನ ಸಾಂಸ್ಕೃತಿಕ ಕೇಂದ್ರವನ್ನು ಆರಂಭಿಸಿದರು. ಸಾವಿರಾರು ಜನರು ಬಂದು ಆಕೆಯ ಬಾಯಿಂದ ಅವರ ಜನರ ಕಥೆಗಳನ್ನು, ಡ್ರೀಮ್ ಟೈಮ್ Dreamtime ಕಥೆಗಳನ್ನು ಕೇಳಿದರು; ಅವರ ಜನರ ಸಂಸ್ಕೃತಿಯ ಆಳ ಅಗಲಗಳನ್ನು ತಿಳಿದರು. ಇನ್ನೂ ಹೆಚ್ಚು ಬರೆಯುತ್ತಲೇ, ಪ್ರಶಸ್ತಿಗಳು ಬರುತ್ತಿದ್ದಾಗಲೇ ಅವರು ಫುಲ್ ಬ್ರೈಟ್ ಫೆಲೋಶಿಪ್ ಪಡೆದು ಅಮೆರಿಕೆಯ ಪ್ರವಾಸವನ್ನು ಕೈಗೊಂಡು (೧೯೭೮-೭೯) ಆ ದೇಶದ ಉದ್ದಗಲಕ್ಕೂ ಸಂಚರಿಸುತ್ತಾ ತಮ್ಮ ಜನರ ಕಥೆಗಳನ್ನು, ವ್ಯಥೆಯನ್ನೂ, ಹೋರಾಟವನ್ನು, ಸ್ವಾಭಿಮಾನವನ್ನು ಹೇಳಿದರು. ಇನ್ನೂ ಬರೆಯುತ್ತಾ, ಮಕ್ಕಳ ಕತೆಗಳನ್ನು, ಮತ್ತಷ್ಟು ಕವನಗಳನ್ನು, ಕಥೆಗಳನ್ನು, ಪ್ರಬಂಧಗಳನ್ನು, ಲೇಖನಗಳನ್ನು ಒಟ್ಟುಹಾಕಿದರು. ಮಧ್ಯದಲ್ಲಿ ಬಿಡುವುಮಾಡಿಕೊಂಡು ತಮ್ಮ ಕುಲದ ಚಿತ್ರಕಲೆಯನ್ನು ಅಭ್ಯಸಿಸಿ, ಪ್ರಕಟಿಸಿದರು. ಅನೇಕ ಸಂಸ್ಥೆಗಳಿಗೆ ಜೀವಕೊಟ್ಟು, ಅವರ ದನಿಯನ್ನು ದೊಡ್ಡದಾಗಿಸಿದರು. ಶಾಲೆಗಳನ್ನು ಮುನ್ನಡೆಸಿದರು; ಯೂನಿವರ್ಸಿಟಿಗಳಲ್ಲಿ ಪಾಠ ಹೇಳಿದರು. ಹಲವಾರು ಗೌರವ ಡಾಕ್ಟರೇಟ್ ಗಳನ್ನ ಪಡೆದರು.

ಎಲ್ಲರಿಗೂ ಆಶ್ಚರ್ಯವಾಗುವಂತೆ ೧೯೮೮ರಲ್ಲಿ ರಾಣಿ ಎರಡನೇ ಎಲಿಜಬೆತ್ ನೀಡಿದ್ದ ಗೌರವವನ್ನು ವಾಪಸ್ ಮಾಡಿದರು. ಆಗ ಅವರು ಹೇಳಿದ್ದು – ‘ಎರಡು ಶತಮಾನಗಳ ಕಾಲದ ನಮ್ಮ ಜನರ ನೋವನ್ನು, ಸಾವನ್ನು, ಎಲ್ಲದರಿಂದ ವಂಚಿತರಾಗಿ ನಮ್ಮದೇ ನೆಲದಲ್ಲಿ ನಾವು ಪರದೇಶಿಗಳು, ಅನಾಥರೂ ಆದದ್ದನ್ನ ಈ ವರ್ಷ ನೆನಪಿಸುತ್ತದೆ. ಆಸ್ಟ್ರೇಲಿಯನ್ ಮತ್ತು ಬ್ರಿಟಿಷ್ ಸರಕಾರಗಳು ನಮ್ಮ ಅಬರಿಜನಲ್ ಜನರ ಎಲ್ಲಾ ಹಕ್ಕುಗಳನ್ನು ಅವರಿಗೆ ಕೊಟ್ಟು, ನಮ್ಮ ಪೂರ್ವಜರಿಂದ ಪಡೆದ ನೆಲವನ್ನು, ಅದರ ಹಕ್ಕನ್ನೂ ವಾಪಸ್ ಕೊಡಬೇಕು. ಅವರು ನಡೆಸಿದ ನರಮೇಧ, ಕೊಲೆಗಳು, ಸುಲಿಗೆ, ನಮ್ಮ ಭಾಷೆಗಳನ್ನು ಸಂಸ್ಕೃತಿಯನ್ನು ನಾಶಮಾಡಿದ್ದು ಎಲ್ಲವನ್ನೂ ಅವರು ಒಪ್ಪಿಕೊಳ್ಳಬೇಕು. ಹಿಂದೆ ನಾನು ಈ ಗೌರವವನ್ನು ಸ್ವೀಕರಿಸಿದಾಗ ಅದರಿಂದ ನಮ್ಮ ಜನರಿಗೆ ಮತ್ತಷ್ಟು ಧೈರ್ಯ, ಗುರುತಿಸುವಿಕೆ, ಪ್ರೋತ್ಸಾಹ ಸಿಗುತ್ತದೆ, ಅದರಿಂದ ಹಲವಾರು ಬಾಗಿಲುಗಳು ತೆರೆಯುತ್ತವೆ ಎಂದು ಭಾವಿಸಿದ್ದೆ. ಪರಿಸ್ಥಿತಿ ನಾನಂದುಕೊಂಡಂತೆ ಸುಧಾರಿಸಲಿಲ್ಲ, ಅವರು ಕ್ಷಮಾಪಣೆ ಕೇಳಿಲ್ಲ, ನಮ್ಮ ನೆಲವನ್ನು ಇನ್ನೂ ಕೊಟ್ಟಿಲ್ಲ. ಎಷ್ಟೋ ಸುಧಾರಣೆಗಳು ಇನ್ನೂ ಆಗಬೇಕಿವೆ’ ಎಂದಿದ್ದರು. ಅದೇ ವರ್ಷ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡು ಊಡ್ಜರೂ ನೂನುಕ್ಕಲ್ ಆದರು, ತಮ್ಮ ಕುಲದ (ನೂನುಕ್ಕಲ್) ಹೆಸರನ್ನು ತಮ್ಮ ಕವನಗಳಂತೆಯೇ ಅಜರಾಮರಗೊಳಿಸಿದರು. ಅವರ ಅತ್ಯಂತ ಹೆಸರಾಂತ ಕವನವಾದ ‘ವೀ ಆರ್ ಗೋಯಿಂಗ್’ (We are going) ನ ಕನ್ನಡದ ಭಾವಾನುವಾದ ಇಲ್ಲಿದೆ.

ನಾವು ಹೊರಟಿದ್ದೀವಿ

ಈ ಚಿಕ್ಕ ಪಟ್ಟಣಕ್ಕೆ ಬಂದರವರು
ಶಾಂತರಾಗಿ, ಮೌನದಿಂದ ಅರೆ-ನಗ್ನ ಜನರು
ಅವರ ಕುಲದ ಉಳಿದೊಂದಿಷ್ಟು ಮಂದಿ
ಬಂದರವರು ತಮ್ಮ ಪವಿತ್ರ ದೀಕ್ಷಾಭೂಮಿಗೆ
ಅಲ್ಲೀಗ ಬಿಳಿಯರು ಇರುವೆಗಳಂತೆ ಓಡಾಡುವರು
ಅಲ್ಲೊಂದು ರಿಯಲ್ ಎಸ್ಟೇಟ್ ಬೋರ್ಡ್ ಹೇಳುತ್ತದೆ ‘ಇಲ್ಲಿ ಕಸ ಬಿಸಾಡಬಹುದು’
ಪವಿತ್ರ ದೀಕ್ಷಾಭೂಮಿಯಲ್ಲಿ ನಾವೆಲ್ಲರೂ ಸೇರುವ ವೃತ್ತದರ್ಧ ಮಲಿನವಾಗಿದೆ
ಅಯ್ಯೋ ಅಪರಿಚಿತರಾದವೇ ಇಂದು ನಾವಿಲ್ಲಿ, ಇಲ್ಲ ಬಿಳಿಯರು ಇಲ್ಲಿನ ಅಪರಿಚಿತರು.
ಇಲ್ಲಿ ದಕ್ಕಿಸಿಕೊಂಡವರು ನಾವು, ಹಳಬರು, ಪುರಾತನರು
ಇಲ್ಲಿನ ಕಲಾಮೂಲಗಳು ನಾವು, ನಾವೇ ದೀಕ್ಷಾನೆಲ ಕೂಡ
ನಾವು ಹಿರಿಯರ ಆಚರಣೆಗಳು, ಅವರ ನಿಯಮನೀತಿಗಳು
ಕುಲವರಿಷ್ಟರು ಹೇಳಿದ ಸ್ವಪ್ನಕಾಲದ ಬೆರಗಿನ ಕಥೆಗಳು ನಾವು
ನಾವು ಗತಿಸಿದ ಕಾಲ, ನಾವು ಬೇಟೆಗಳು, ನಾವು ನಗುತ್ತಿದ್ದ ಪ್ರಾಣಿಗಳು, ಅಲೆದಾಡುವ ಶಿಬಿರಾಗ್ನಿ
ಗಫೆಂಬ ಬೆಟ್ಟದ ಮೇಲೆ ಅಪ್ಪಳಿಸುವ ಮಿಂಚು ಸಿಡಿಲಿನ ಕಿಡಿ ನಾವು
ಕ್ಷಿಪ್ರವೂ, ಘೋರವೂ
ಹಿಂಬಾಲಿಸುವ ಗುಡುಗು, ಆ ಅಬ್ಬರದ ಆಸಾಮಿಗಳು
ಕಪ್ಪು ನೀರಕೊಳಕ್ಕೆ ಬೆಳಕಾಗುವ ಮೌನದಿಂದ ಎದ್ದೇಳುವ ಉದಯ,
ಶಿಬಿರಾಗ್ನಿ ತಣ್ಣಗಾದಂತೆಲ್ಲಾ ಮರುಕಳಿಸುವ ನೆರಳದೆವ್ವಗಳು
ನಾವು ಪ್ರಕೃತಿ, ನಾವು ಗತಕಾಲ, ನಾವು ಪುರಾತನವಾದ್ದೆಲ್ಲಾ
ಎಲ್ಲವೂ ನಿರ್ಗಮಿಸಿವೆ, ಎಲ್ಲಕಡೆಯೂ ಚೆಲ್ಲಿದೆ
ಪೊದೆಯಿಲ್ಲ, ಬೇಟೆಯಿಲ್ಲ, ಅವುಗಳ ನಗುವಿಲ್ಲ
ಗರುಡಪಕ್ಷಿಯಿಲ್ಲ, ಇಮ್ಯೂ ಮತ್ತು ಕಾಂಗರೂ ಕೂಡ ಇಲ್ಲಿಲ್ಲ
ನಮ್ಮ ದೀಕ್ಷಾಭೂಮಿಯ ವೃತ್ತವಿಲ್ಲ
ನಮ್ಮ ಕರೊಬೊರಿ ಆಚರಣೆಯಿಲ್ಲ
ಹೌದು ನಾವು ಹೊರಟಿದ್ದೀವಿ.