ಆಗ ತುಡುಗು ಮಾಡುವುದು ಅವರ ಆರ್ಥಿಕತೆಯ ಪ್ರಧಾನ ಮೂಲವಾಗಿತ್ತು. ಅಂತೆಯೇ ಹಣ ಬಂಗಾರ ಮಾತ್ರವಲ್ಲದೆ ದಿನಬಳಕೆಯ ವಸ್ತುಗಳನ್ನು ಹೆಚ್ಚು ತುಡುಗು ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಈ ಸಮುದಾಯವು ಮುಖ್ಯವಾಗಿ ತುಡುಗು ಮಾಡುವ ಉದ್ದೇಶದಲ್ಲಿ ಹೊಟ್ಟೆಪಾಡಿನ ಅನಿವಾರ್ಯತೆ ಇತ್ತು. ಹಾಗಾಗಿ ಹಿಂದೆಯೂ ಕೂಡ ಈ ಸಮುದಾಯದಲ್ಲಿ ತುಡುಗುತನ ಇದ್ದದ್ದು ಹೆಚ್ಚಾಗಿ ಹಸಿವನ್ನು ನೀಗಿಸುವ ವಸ್ತುಸಂಗತಿಗಳಿಗೆ ಸಂಬಂಧಿಸಿದ್ದು ಎನ್ನುವುದನ್ನು ಗಮನಿಸಬೇಕು.
ಡಾ.ಅರುಣ್ ಜೋಳದ ಕೂಡ್ಲಿಗಿ ಬರೆಯುವ ‘ಗಂಟಿಚೋರರ ಕಥನಗಳು’ ಸರಣಿಯ ಹತ್ತನೆಯ ಕಂತು.

 

ಗಂಟಿಚೋರ ಸಮುದಾಯದಲ್ಲಿ ತುಡುಗು ಮಾಡುವ ಪ್ರವೃತ್ತಿಯನ್ನು ಹಿಂದಿನ ಅಂದರೆ ಸ್ವತಂತ್ರಪೂರ್ವ ಮತ್ತು ಸ್ವಾತಂತ್ರ್ಯಾ ನಂತರದ ಒಂದೆರಡು ದಶಕಗಳಲ್ಲಿ ನಾವು ಮುಖ್ಯವಾಗಿ ಕಾಣಬಹುದಾಗಿದೆ. ಆಗ ತುಡುಗು ಮಾಡುವುದು ಅವರ ಆರ್ಥಿಕತೆಯ ಪ್ರಧಾನ ಮೂಲವಾಗಿತ್ತು. ಅಂತೆಯೇ ಹಣ ಬಂಗಾರ ಮಾತ್ರವಲ್ಲದೆ ದಿನಬಳಕೆಯ ವಸ್ತುಗಳನ್ನು ಹೆಚ್ಚು ತುಡುಗು ಮಾಡುತ್ತಿದ್ದರು. ಇದಕ್ಕಾಗಿಯೇ ಈ ಸಮುದಾಯವನ್ನು ಸಂತೆಕಳ್ಳರೂ ಎಂತಲೂ ಕರೆಯುತ್ತಿದ್ದರು. ಆ ಸಂದರ್ಭದಲ್ಲಿ ಈ ಸಮುದಾಯವು ಮುಖ್ಯವಾಗಿ ತುಡುಗು ಮಾಡುವ ಉದ್ದೇಶದಲ್ಲಿ ಹೊಟ್ಟೆಪಾಡಿನ ಅನಿವಾರ್ಯತೆ ಇತ್ತು. ಹಾಗಾಗಿ ಹಿಂದೆಯೂ ಕೂಡ ಈ ಸಮುದಾಯದಲ್ಲಿ ತುಡುಗುತನ ಇದ್ದದ್ದು ಹೆಚ್ಚಾಗಿ ಹಸಿವನ್ನು ನೀಗಿಸುವ ವಸ್ತುಸಂಗತಿಗಳಿಗೆ ಸಂಬಂಧಿಸಿದ್ದು ಎನ್ನುವುದನ್ನು ಗಮನಿಸಬೇಕು.

ಆದರೆ ಇಂದು ಈ ಸಮುದಾಯ ಹಲವು ಆರ್ಥಿಕ ಸಂಗತಿಗಳಲ್ಲಿ ತೊಡಗಿಸಿಕೊಂಡಿದೆ. ಎಲ್ಲಾ ಕೆಳಜಾತಿಗಳು ಅವಲಂಬಿಸಬಹುದಾದ ಉದ್ಯೋಗಗಳಲ್ಲಿ ತಮ್ಮ ಆರ್ಥಿಕ ಮೂಲವನ್ನು ಕಂಡುಕೊಳ್ಳುತ್ತಿದೆ. ಸೆಟ್ಲಮೆಂಟ್ ವಾಸಿಗಳಾದಾಗ ಮೊದಲ ಬಾರಿಗೆ ಈ ಸಮುದಾಯದ ಸದಸ್ಯರು ಕಾರ್ಮಿಕರಾಗಿ ಹೊಸ ಬದುಕಿಗೆ ಹೊಂದಿಕೊಂಡರು. ಗ್ರಾಮೀಣ ಪ್ರದೇಶದವರು ನಿಧಾನಕ್ಕೆ ಕೃಷಿಕೂಲಿಗಳಾಗಿ ಅದರಲ್ಲಿ ಕೆಲವರು ಕೃಷಿಕರಾಗಿಯೂ ಬದಲಾದರು. ಹೀಗೆ ಈ ಸಮುದಾಯದ ಆರ್ಥಿಕತೆಯ ಪಯಣ ಕುತೂಹಲಕಾರಿಯಾಗಿದೆ. ಅಂತೆಯೇ ಅದರ ನಡಿಗೆಯು ಸಮುದಾಯದ ಮೂಲಚಹರೆಗಳನ್ನು ಬದಲಾಯಿಸಿದೆ.

ಸೆಟ್ಲಮೆಂಟ್ ಸ್ಥಾಪನೆಯ ಆಂತರಿಕ ಸಂಗತಿಗಳು ಹಲವಿದ್ದರೂ, ಸಾರ್ವಜನಿಕವಾಗಿ ಇದರ ಮೂಲ ಉದ್ದೇಶ ಅಪರಾಧಿಗಳ ಸುಧಾರಣೆ ಎನ್ನುವುದಾಗಿತ್ತು. ಈ ಸುಧಾರಣೆಗಾಗಿ ಒಬ್ಬ ಅಧಿಕಾರಿಯನ್ನು ನೇಮಿಸಲಾಯಿತು. ಅಧಿಕಾರಿಯ ಹೆಸರು ರ್ಹೆ.ಎ.ಎಲ್.ಬ್ರಾಡ್‌ಬರಿ. ಈತ 1920 ರಿಂದ 1938 ರವರೆಗೆ ಹುಬ್ಬಳ್ಳಿಯಲ್ಲಿ ನೆಲೆಸಿದ್ದ. ಈತನು ಸೆಟ್ಲಮೆಂಟ್‌ಗಳಲ್ಲಿ ವಿವಿಧ ವೃತ್ತಿಗಳ ತರಬೇತಿ ನೀಡಲು 80 ಜನ ತರಬೇತುದಾರರನ್ನು ನೇಮಿಸಿದ್ದನು. ಇದರಲ್ಲಿ ಮಿಷನರಿ, ಕಾರ್ಪೆಂಟರಿ, ಸ್ಟೀಲ್ ವರ್ಕ್‌, ರೈಲ್ವೆ ಮಿಷನರಿಗಳ ತಯಾರಿಕೆ ಇತ್ಯಾದಿ. ಹೀಗೆ ತರಬೇತಿ ನೀಡುತ್ತಲೆ ಸೆಟ್ಲಮೆಂಟ್ ವಾಸಿಗಳನ್ನು `ಕೂಲಿ’ಗಳನ್ನಾಗಿ ದುಡಿಸಿಕೊಳ್ಳಲಾಗುತ್ತಿತ್ತು. ಇದು ಗಂಟಿಚೋರ ಸಮುದಾಯದ ವೃತ್ತಿ ಪಲ್ಲಟಕ್ಕೆ ಮುಖ್ಯ ಕಾರಣವಾಯಿತು. ಬ್ರಾಡ್ ಬರಿಯು `ಇನ್ ಪ್ಯಾಂಟ್ ವೆಲ್ ಫೇರ್ ಸೆಂಟರ್’ ಸ್ಥಾಪಿಸಿದನು.(ಆರ್.ಎಸ್. ಸಂಕೇಶ್ವರ್:1996:219)

ಕೃಷಿ/ವ್ಯವಸಾಯ

ಗಂಟಿಚೋರ್ಸ್ ಸಮುದಾಯದಲ್ಲಿ ಈ ಮೊದಲೆ ಚರ್ಚಿಸಿದಂತೆ `ಭೂಮಿನೋರ್’ ಎನ್ನುವ ಬೆಡಗೊಂದಿದೆ. ಇದು ತನ್ನ ಹೆಸರಲ್ಲೇ `ಭೂಮಿ ಉಳುಮೆ ಮಾಡುವವರು’ ಎನ್ನುವುದನ್ನು ಸೂಚಿಸುತ್ತಿದೆ. ಲಕ್ಷ್ಮಣ್ ಗಾಯಕವಾಡ ಅವರು ಉಚಲ್ಯಾ ಕೃತಿಯಲ್ಲಿ ಹೇಳುವ ಊಳೋನೋರು, ಬೂಮೋನೀರು ಬೆಡಗುಗಳು ಇದನ್ನೇ ಸೂಚಿಸುತ್ತಿವೆ. ಹಾಗಾಗಿ ಇದು ಗಂಟಿಚೋರ ಸಮುದಾಯದ ಸ್ಥಿತ್ಯಂತರಕ್ಕೆ ಗುರುತಾಗಿದೆ. ಅಂದರೆ ತುಡುಗು ಅಥವಾ ಕಳ್ಳತನದಿಂದ ಈ ಸಮುದಾಯ ಭೂಮಿಯನ್ನು ಉಳಲು ಆರಂಭಿಸಿದ್ದರ ಸಂಕೇತವೆಂಬಂತೆ ಕಾಣುತ್ತದೆ. ಹಾಗಾಗಿ ಗಂಟಿಚೋರರಲ್ಲಿ ಭೂ ಉಳುಮೆ ಮಾಡುವವರನ್ನು ಈ ಹೆಸರಿನಿಂದ ಗುರುತಿಸಿರಲಿಕ್ಕೆ ಸಾಧ್ಯವಿದೆ.

ಹಾಗಾಗಿ ಈ ಸಮುದಾಯ ತುಡುಗುತನಕ್ಕೆ ಪರ್ಯಾಯವಾಗಿ ಅವಲಂಬಿಸಿದ್ದು ವ್ಯವಸಾಯವನ್ನು. ಇದರಲ್ಲಿ ಮುಖ್ಯವಾಗಿ ಗ್ರಾಮೀಣ ಭಾಗದವರಲ್ಲಿ ಈ ಬದಲಾವಣೆ ಹೆಚ್ಚಾಗಿ ಕಂಡುಬಂದಿತು. ಸಮೀಕ್ಷೆಯ ಪ್ರಕಾರ ಈಗಲೂ ವ್ಯವಸಾಯ ಗ್ರಾಮೀಣ ಭಾಗದಲ್ಲಿ ಹೆಚ್ಚಿದೆ. ಎಂಥೋವನ್ (1920) ಗಂಟಿಚೋರ್ಸ್ ಸಮುದಾಯದ ಕೆಲವರು ವ್ಯವಸಾಯ ಮಾಡುತ್ತಾರೆ, ಬಹುಪಾಲು ಜನರು ಕೃಷಿಕೂಲಿಗಳಾಗಿ ದುಡಿಯುವ ಬಗ್ಗೆ ತನ್ನ `ದ ಟ್ರೈಬ್ಸ್ ಅಂಡ್ ಕಾಸ್ಟ್ಸ್ ಆಫ್ ಬಾಂಬೆ’ ಕೃತಿಯಲ್ಲಿ ಉಲ್ಲೇಖಿಸುತ್ತಾರೆ. ಜನಗಣತಿಯನ್ನು ಆಧರಿಸಿ ನೋಡುವುದಾದರೂ ಕೂಡ ಈ ಉಲ್ಲೇಖ ನಿಜವಾಗಿದೆ.

1961 ರ ಜನಗಣತಿಯಲ್ಲಿ ದಾಖಲಾದಂತೆ ವ್ಯವಸಾಯ ಮಾಡುವವರು ಒಟ್ಟು 207(ಗಂ-121,ಹೆ-76) ಜನರಿದ್ದಾರೆ. ಈ ಸಂಖ್ಯೆ 1971 ರ ಜನಗಣತಿಯಲ್ಲಿ 103 ಕ್ಕಿಳಿದಿದೆ. 1981 ರಲ್ಲಿ 311 ಕ್ಕೇರಿದೆ. ಇದು 1991 ರ ಜನಗಣತಿಯಲ್ಲಿ 256 ರಷ್ಟಿದ್ದು, 2001 ರ ಜನಗಣತಿಯಲ್ಲಿ 363 ಕ್ಕೇರಿದೆ. ಹೀಗೆ ಜನಗಣತಿಯ ಅಂಕಿ ಸಂಖ್ಯೆಗಳು ಕನಿಷ್ಠ ಒಂದು ಅಂದಾಜನ್ನು ಗುರುತಿಸಲಿಕ್ಕೆ ನೆರವಾಗುತ್ತದೆ. ಅಂತೆಯೇ ಈ ಸಮುದಾಯದ ವ್ಯವಸಾಯದ ಅವಲಂಬನೆಯ ಸ್ವರೂಪದ ಒಂದು ಚಿತ್ರಣ ಸಿಗುತ್ತದೆ.

ಪ್ರಸ್ತುತ ಈ ಅಧ್ಯಯನದ ಸಮೀಕ್ಷೆಯು ಮೊದಲ ಬಾರಿಗೆ ಹೆಚ್ಚು ವಾಸ್ತವವಾದ ವ್ಯವಸಾಯ ಅವಲಂಬಿತರ ಚಿತ್ರಣವನ್ನು ಕೊಡುತ್ತಿದೆ. ಸಮೀಕ್ಷೆಯ ಪ್ರಕಾರ ನೋಡುವುದಾದರೆ, ಉಳುವ ಭೂಮಿ ಇದ್ದು ವ್ಯವಸಾಯದಲ್ಲಿ ತೊಡಗಿಕೊಂಡವರ ಸಂಖ್ಯೆ 370 ( ಗಂ-196, ಹೆ-176) ಜನರಿದ್ದಾರೆ. ಇದು ಒಟ್ಟು ಗಂಟಿಚೋರ ಸಮುದಾಯದ ಶೇ 13.38 ರಷ್ಟಿದೆ. ಉಳುವ ಭೂಮಿ ಇರುವ ಚಿತ್ರಣವೂ ಲಭ್ಯವಾಗಿದೆ. ಇದನ್ನು ನೋಡುವುದಾದರೆ 0.5 ಎಕರೆಯಿಂದ 2.50 ಎಕರೆ ಭೂಮಿ ಇರುವ ಕುಟುಂಬಗಳ ಸಂಖ್ಯೆ 168 ರಷ್ಟಿದೆ. 2.50 ರಿಂದ 5 ಎಕರೆ ಇರುವ ಕುಟುಂಬಗಳ ಸಂಖ್ಯೆ 139 ರಷ್ಟಿದೆ. 5.1 ರಿಂದ 10 ಎಕರೆವರೆಗೆ ಭೂಮಿ ಇರುವ ಕುಟುಂಬಗಳ ಸಂಖ್ಯೆ 39 ರಷ್ಟಿದೆ. 10 ರಿಂದ 25 ಎಕರೆ ಒಳಗೆ ಭೂಮಿ ಇರುವ ಕುಟುಂಬಗಳ ಸಂಖ್ಯೆ 4 ರಷ್ಟಿದೆ. ಈ ಭೂಮಿಯಲ್ಲಿ ಶೇ 83.37 ರಷ್ಟು ಒಣ ಭೂಮಿಯಾಗಿದ್ದರೆ, 16.63 ರಷ್ಟು ನೀರಾವರಿ ಭೂಮಿಯಾಗಿದೆ. ಪ್ರಾದೇಶಿಕವಾಗಿ ಭೂಮಿ ಇರುವ ರೈತರು ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಕಂಡುಬಂದರೆ ಎರಡನೆಯದಾಗಿ ಗದಗ ಜಿಲ್ಲೆಯಲ್ಲಿ ಕಂಡುಬರುತ್ತಾರೆ.

ಈ ಸಮುದಾಯ ತುಡುಗುತನಕ್ಕೆ ಪರ್ಯಾಯವಾಗಿ ಅವಲಂಬಿಸಿದ್ದು ವ್ಯವಸಾಯವನ್ನು. ಇದರಲ್ಲಿ ಮುಖ್ಯವಾಗಿ ಗ್ರಾಮೀಣ ಭಾಗದವರಲ್ಲಿ ಈ ಬದಲಾವಣೆ ಹೆಚ್ಚಾಗಿ ಕಂಡುಬಂದಿತು. ಸಮೀಕ್ಷೆಯ ಪ್ರಕಾರ ಈಗಲೂ ವ್ಯವಸಾಯ ಗ್ರಾಮೀಣ ಭಾಗದಲ್ಲಿ ಹೆಚ್ಚಿದೆ.

ಕೃಷಿ ಕೂಲಿ

ಗ್ರಾಮೀಣ ಪ್ರದೇಶದಲ್ಲಿ ವ್ಯವಸಾಯ ಮಾಡುವ ಗಂಟಿಚೋರರಲ್ಲಿ ಹೊಲ ಇಲ್ಲದ ಕಾರಣಕ್ಕೆ ಕೆಲವರು ಕೃಷಿ ಕೂಲಿಗಳಾಗಿಯೂ ದುಡಿಯುತ್ತಿದ್ದಾರೆ. ಇವರು ಸಾಮಾನ್ಯವಾಗಿ ಚೂರು ಪಾರು ಭೂಮಿಯನ್ನು ಹೊಂದಿ ಕೃಷಿ ಮಾಡುವ ಗಂಟಿಚೋರರಿಗಿಂತಲೂ ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ಈಗ ಗಂಟಿಚೋರ ಸಮುದಾಯದಲ್ಲಿ ಇರುವ ಶ್ರೇಣೀಕರಣದಲ್ಲಿ ಕಟ್ಟಕಡೆಗೆ ಬರುವ ವರ್ಗದಲ್ಲಿ ಇವರೂ ಸೇರ್ಪಡೆಗೊಳ್ಳುತ್ತಾರೆ. ಅಂತೆಯೇ ಗಂಟಿಚೋರ್ಸ್ ಸಮುದಾಯದಲ್ಲಿ ಹೆಚ್ಚು ಜನರು ತೊಡಗಿಕೊಂಡಿರುವ ವಲಯವೆಂದರೆ ಕೃಷಿಕೂಲಿಗಳದೇ ಆಗಿದೆ. ಈ ಸಂಖ್ಯೆಯೂ 1961 ರ ಜನಗಣತಿಯಿಂದ ದಾಖಲಾಗುತ್ತಾ ಬಂದಿದೆ.

1961 ರ ಜನಗಣತಿಯಲ್ಲಿ ದಾಖಲಾದಂತೆ ಕೃಷಿ ಕೂಲಿ ಮಾಡುವವರ ಸಂಖ್ಯೆ 45 ರಷ್ಟಿದೆ. ಈ ಸಂಖ್ಯೆ 1971 ರ ಜನಗಣತಿಯಲ್ಲಿ 155 ಕ್ಕೇರಿದೆ. 1981 ರಲ್ಲಿ 314 ಕ್ಕೂ, 1991 ರ ಜನಗಣತಿಯಲ್ಲಿ 468 ಕ್ಕೂ, 2001 ರ ಜನಗಣತಿಯಲ್ಲಿ 618 ಕ್ಕೇರಿದೆ. ಈ ಅಂಕೆ ಸಂಖ್ಯೆಯನ್ನು ನೋಡಿದರೆ ಪ್ರತೀ ಹತ್ತು ವರ್ಷಕ್ಕೊಮ್ಮೆ ಗಂಟಿಚೋರ್ಸ್ ಸಮುದಾಯದ ಕೃಷಿ ಕೂಲಿಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಕಾಣಬಹುದು. ಇದು ಈ ಸಮುದಾಯ ತುಡುಗುತನದಿಂದ ದೂರವಾಗುತ್ತಿರುವ ಲಕ್ಷಣವಾಗಿಯೂ ಕಾಣುತ್ತಿದೆ.

ಪ್ರಸ್ತುತ ಸಮೀಕ್ಷೆಯಲ್ಲಿ ಗಂಟಿಚೋರ್ಸ್ ಸಮುದಾಯದ 1201 ರಷ್ಟು ಭೂರಹಿತ ಕುಟುಂಬಗಳು ದಾಖಲಾಗಿದೆ. ಗ್ರಾಮೀಣ ಪ್ರದೇಶದ ಭೂರಹಿತ ಕುಟುಂಬಗಳೆಲ್ಲಾ ಸಮಾನ್ಯವಾಗಿ ಕೃಷಿ ಕೂಲಿಯನ್ನು ಅವಲಂಬಿಸಿರುವುದು ಕಾಣುತ್ತದೆ. ಅಂತೆಯೇ ಕ್ಷೇತ್ರಕಾರ್ಯದ ಸಂದರ್ಭದಲ್ಲಿಯೂ ಈ ಸಂಖ್ಯೆ ಹೆಚ್ಚಾಗಿ ಬೆಳಗಾವಿ ಜಿಲ್ಲೆಯ ಹಳ್ಳಿಗಳು ಮತ್ತು ಗದಗ ಜಿಲ್ಲೆ ಬಾಲೆಹೊಸೂರು, ಬಿಜಾಪುರ ಜಿಲ್ಲೆಯ ಬರಗುಡಿ ಮುಂತಾದ ಕಡೆ ಪ್ರಧಾನವಾಗಿ ಕಂಡುಬಂದಿತು. ಸದ್ಯಕ್ಕೆ 1982 (ಗಂ-1036, ಹೆ-953) ಜನರು ಕೃಷಿ ಕೂಲಿಗಳಾಗಿ ದುಡಿಯುತ್ತಿದ್ದಾರೆ. ಈ ಪ್ರಮಾಣ ಒಟ್ಟು ಜನಸಂಖ್ಯೆಯ ಶೇ 71.68 ರಷ್ಟಿರುವುದನ್ನು ಗಮನಿಸಬೇಕು. ಅಂತೆಯೇ ಕೃಷಿ ಕೂಲಿಗಳು ಪಶುಪಾಲನೆಯನ್ನು ಅವಲಂಬಿಸಿರುವುದೂ ಕಂಡುಬರುತ್ತದೆ.

ಪಶುಪಾಲನೆ

ಪಶುಪಾಲನೆ ಈ ಸಮುದಾಯದ ಪ್ರತ್ಯೇಕ ವೃತ್ತಿಯಾಗಿ ಕಂಡುಬರುವುದಿಲ್ಲ. ಬದಲಾಗಿ ವ್ಯವಸಾಯ ಮತ್ತು ಕೃಷಿ ಕೂಲಿಯ ಜತೆಗೆ ಸಾವಯವ ಸಂಬಂಧವನ್ನು ಹೊಂದಿದ ಉಪವೃತ್ತಿಯಾಗಿ ಬಹುಪಾಲು ಗ್ರಾಮೀಣ ಪ್ರದೇಶದಲ್ಲಿ ಕಂಡುಬರುತ್ತದೆ. ತುಡುಗುತನದ ನೆನಪುಗಳನ್ನು ಈ ಸಮುದಾಯ ಹಿಂದೆ ಕುರಿ, ಕೋಳಿ, ಆಕಳು, ದನ ಇತ್ಯಾದಿಗಳನ್ನೂ ತುಡುಗು ಮಾಡುತ್ತಿದ್ದುದಾಗಿ ಹೇಳುತ್ತಾರೆ. ಇದರಲ್ಲಿ ಪಶುಗಳನ್ನು ತುಡುಗು ಮಾಡುವುದರಲ್ಲಿಯೇ ವಿಶೇಷ ಪರಿಣಿತಿ ಹೊಂದಿದ ಕಳ್ಳರು ಇದ್ದರು ಎಂದು ಸಮುದಾಯದ ಹಿರಿಯರು ನೆನಪಿಸಿಕೊಳ್ಳುತ್ತಾರೆ. ಹೀಗೆ ತುಡುಗು ಮಾಡಿ ತಂದ ಪ್ರಾಣಿಗಳನ್ನು ಸಹಜವಾಗಿ ಮಾಂಸಹಾರಕ್ಕೆ ಬಳಸುವುದೋ ಮಾರುವುದೋ ಮಾಡುತ್ತಿದ್ದರು. ಅದರಲ್ಲಿ ಮಿಕ್ಕವು ಪಶುಪಾಲನೆಯ ಭಾಗವಾಗಿ ಈ ಸಮುದಾಯದ ಮನೆಗಳಲ್ಲಿ ಅಪರೂಪಕ್ಕೆ ಪಾಲನೆಗೊಳ್ಳುವುದೂ ಇತ್ತು. ಈ ಸಂಗತಿ ಕೂಡ ಈ ಸಮುದಾಯ ಪಶುಪಾಲನೆಯಲ್ಲಿ ತೊಡಗಲು ಒಂದು ಸಣ್ಣ ಕಾರಣವಾದಂತಿದೆ.

ಪ್ರಸ್ತುತ ಅಧ್ಯಯನದ ಸಮೀಕ್ಷೆಯ ಪ್ರಕಾರ ಒಟ್ಟು ಗಂಟಿಚೋರ ಸಮುದಾಯದಲ್ಲಿ 174 ಎತ್ತುಗಳು, 207 ಆಕಳಗಳು, 234 ಎಮ್ಮೆಗಳು, 453 ರಷ್ಟು ಕುರಿಗಳು, 291 ಮೇಕೆಗಳು, 742 ಕೋಳಿಗಳು ಸಾಕುಪ್ರಾಣಿಗಳಾಗಿ ಸಮುದಾಯದಲ್ಲಿರುವುದು ದಾಖಲಾಗಿದೆ. ಎತ್ತುಗಳ ಸಂಖ್ಯೆಯು ವ್ಯವಸಾಯ ಮತ್ತು ಕೃಷಿಕೂಲಿಯನ್ನೂ, ಆಕಳು ಎಮ್ಮೆಗಳ ಸಂಖ್ಯೆಯೂ ಈ ಸಮುದಾಯ ಹೈನುಗಾರಿಕೆಯನ್ನೂ, ಕುರಿ, ಆಡು, ಕೋಳಿಗಳ ಸಂಖ್ಯೆಯು ಸಮುದಾಯದ ಮಾಂಸಹಾರದ ಅಗತ್ಯದ ಸಾಕುವಿಕೆ ಮತ್ತು ವಾಣಿಜ್ಯ ಉದ್ದೇಶದ ಸಾಕುವಿಕೆ ಎರಡನ್ನೂ ಕಾಣಿಸುತ್ತಿದೆ. ಇದರಲ್ಲಿ ಶೇ 35 ರಷ್ಟು ಕೋಳಿಸಾಕಣೆ ಹೆಚ್ಚು ಕಂಡುಬಂದರೆ, ಶೇ 22 ರಷ್ಟು ಕುರಿಸಾಕಣೆ ಪ್ರಧಾನವಾಗಿ ಕಂಡುಬರುತ್ತದೆ.

ಕಟ್ಟಡ ಕೆಲಸ

ಈ ಮೊದಲೇ ಹೇಳಿದಂತೆ ಸೆಟ್ಲಮೆಂಟ್ ಸುಧಾರಣಾಧಿಕಾರಿ ರ್ಹೆ.ಎ.ಎಲ್.ಬ್ರಾಡ್‌ಬರಿ ಅವರು ಸೆಟ್ಲಮೆಂಟ್ ವಾಸಿಗಳಿಗೆ ಹಲವು ಉದ್ಯೋಗಗಳ ತರಬೇತಿ ನೀಡಿದರು. ಇದರಲ್ಲಿ ಕಾರ್ಪೆಂಟರಿಯೂ ಒಂದಾಗಿತ್ತು. ಹುಬ್ಬಳ್ಳಿಯ ಕಥಡ್ರಲ್ ಚರ್ಚನ್ನು ಈತ ಒಬ್ಬೇ ಒಬ್ಬ ಎಂಜಿನಿಯರ್ ಇಲ್ಲದೆ, ಒಬ್ಬರೂ ಕೂಲಿಗಳಿಲ್ಲದೆ ಯಾವ ಗುತ್ತಿಗೆದಾರರಿಲ್ಲದೆ ಬರಿ ಸೆಟ್ಲಮೆಂಟ್ ಬುಡಕಟ್ಟುಗಳಿಂದಲೇ ಈ ಚರ್ಚನ್ನು ಕಟ್ಟಿಸಿದನು. ಮುಂದೆ ಹುಬ್ಬಳ್ಳಿ ಮತ್ತು ಗದಗ ಸೆಟ್ಲಮೆಂಟಿನ ಮಾರುತಿ ದೇವಸ್ಥಾನಗಳನ್ನು ಇದೇ ತರಬೇತಿದಾರರಿಂದ ಕಟ್ಟಿಸಲಾಯಿತು.

ಮುಂದೆ ಬ್ರಿಟೀಷರು ಸೆಟ್ಲಮೆಂಟಿನಲ್ಲಿರುವವರನ್ನು ಮಾನವ ಸಂಪನ್ಮೂಲವನ್ನಾಗಿ ರೂಪಿಸಿ ಕೆಲಸ ತೆಗೆಯತೊಡಗಿದ್ದರು. ಹಾಗೆ ಬ್ರಿಟೀಷ್ ಅಧಿಕಾರಿಗಳ ಕಛೇರಿಗಳು, ಮನೆ, ಚರ್ಚು, ಶಾಲೆ ಮುಂತಾದ ಕಟ್ಟಡ ಕಾಮಗಾರಿಗಳು ನಡೆಯುತ್ತಿದ್ದವು. ಇಂತಹ ಕಟ್ಟಡಗಳ ಕೆಲಸಕ್ಕೆ ಸೆಟ್ಲಮೆಂಟ್ ವಾಸಿಗಳನ್ನೆ ಬಳಸಿಕೊಳ್ಳಲಾಗುತ್ತಿತ್ತು. ಹೀಗಾಗಿ ಸೆಟ್ಲಮೆಂಟಲ್ಲಿರುವ ಗಂಟಿಚೋರ ಸಮುದಾಯವನ್ನು ಕಟ್ಟಡ ಕೆಲಸಕ್ಕೂ ತಮ್ಮನ್ನು ಅಣಿಗೊಳಿಸಿಕೊಂಡರು. ಹೀಗೆ ಗಂಟಿಚೋರರು ಕಟ್ಟಡ ಕೆಲಸ ಕಲಿತದ್ದಕ್ಕೂ ಒಂದು ಚಾರಿತ್ರಿಕ ಹಿನ್ನೆಲೆ ಇದೆ.

ಗಂಟಿಚೋರ ಸಮುದಾಯದಲ್ಲಿ `ಕಲ್ಲು ಹೊಡೆಯುವ’ ಕೆಲಸವನ್ನೂ ಮಾಡುತ್ತಾರೆ. ಹೀಗೆ ಕಲ್ಲುಹೊಡೆದು ಕೆಲಸ ಮಾಡುವವವರು ಕಲ್ಲು ವಡ್ಡರ್ ಎಂದು ಗುರುತಿಸಿಕೊಳ್ಳುತ್ತಾರೆ. ಮುಖ್ಯವಾಗಿ ಗ್ರಾಮೀಣ ಭಾಗದ ಗಂಟಿಚೋರ ಸಮುದಾಯದಲ್ಲಿ ಇವರು ಕಾಣುತ್ತಾರೆ. ನರಗುಂದ, ಶಾಹುಪಾರ್ಕ, ಬಿಜಾಪುರದ ಬರಗುಡಿ, ಗೋಕಾಕ ನಗರ, ರಾಯಭಾಗ ತಾಲೂಕಿನ ಕೆಲವು ಹಳ್ಳಿಗಳಲ್ಲಿ ಹೀಗೆ ಕಲ್ಲು ಹೊಡೆಯುವ ಕೆಲಸದಲ್ಲಿ ನಿರತರಾದವರು ಸಿಗುತ್ತಾರೆ. ಕಲ್ಲುಹೊಡೆದು ಕೆಲಸ ಮಾಡುತ್ತಾ ಕಲ್ಲು ವಡ್ಡರ್ ಎಂದು ಗುರುತಿಸಿಕೊಳ್ಳುವವರಲ್ಲಿ ಕೆಲವರು ಈ ವೃತ್ತಿಯ ಅವಲಂಬನೆ ಕಡಿಮೆಯಾದಂತೆ ಕಾಲಾನಂತರದಲ್ಲಿ ಕಟ್ಟಡ ಕಾರ್ಮಿಕರಾಗಿಯೂ ರೂಪಾಂತರ ಹೊಂದಿದ್ದಾರೆ.

ನಗರಕ್ಕೆ ಹೊಂದಿಕೊಂಡ ಹಳ್ಳಿಗಳಲ್ಲಿ ಇಂದು ಸಹಜವಾಗಿ ಕಟ್ಟಡ ಕೆಲಸಕ್ಕೆ ಹೋಗುವವರ ಸಂಖ್ಯೆ ದೊಡ್ಡದಿದೆ. ಸದ್ಯಕ್ಕೆ ಈ ವೃತ್ತಿ ಜಾತಿಯೊಂದನ್ನು ಕಳಚಿಕೊಂಡು ಸಾಮಾನ್ಯ ವೃತ್ತಿಯಂತಾಗಿದೆ. ಹಾಗಾಗಿ ಇಂದು ನಗರಕ್ಕೆ ಹೊಂದಿಕೊಂಡ ಸುತ್ತಮುತ್ತಲ ಹಳ್ಳಿಗಳಲ್ಲಿ ಕಟ್ಟಡ ಕೆಲಸಕ್ಕೆ ಜಾತಿ ಬೇದವಿಲ್ಲದೆ ಹೋಗುತ್ತಾರೆ. ಇದರಲ್ಲಿ ದಲಿತ ಕೆಳಜಾತಿಯವರ ಸಂಖ್ಯೆ ದೊಡ್ಡದಿರಬಹುದು. ಆದರೆ ಆರ್ಥಿಕವಾಗಿ ಕೆಳಸ್ಥರದಲ್ಲಿರುವ ಮೇಲುಜಾತಿಯವರು ಕೂಡ ಇಂದು ಕಟ್ಟಡ ಕೆಲಸಕ್ಕೆ ಹೋಗುವುದು ಸಾಮಾನ್ಯ ವಿದ್ಯಮಾನವಾಗಿದೆ. ಈ ಮಾತುಗಳು ಗಂಟಿಚೋರ ಸಮುದಾಯಕ್ಕೂ ಅನ್ವಯವಾಗುತ್ತದೆ. ಸಾಮಾನ್ಯವಾಗಿ ನಗರಕ್ಕೆ ಹೊಂದಿಕೊಂಡ ಹಳ್ಳಿಗಳಲ್ಲಿ ನೆಲೆಸಿದ ಗಂಟಿಚೋರ ಸಮುದಾಯದವರು ಕಟ್ಟಡ ಕೆಲಸಕ್ಕೆ ಹೋಗುತ್ತಿದ್ದಾರೆ. ಹೀಗೆ ಕಟ್ಟಡ ಕೆಲಸದಲ್ಲಿ ಕೆಳಹಂತದ ಕೆಲಸಕ್ಕಿಂತ ಮೇಲುಹಂತದ ಕೆಲಸಗಳಲ್ಲಿಯೂ ಗಂಟಿಚೋರ ಸಮುದಾಯ ಸಕ್ರಿಯವಾಗಿದೆ.

ಹುಬ್ಬಳ್ಳಿ ಗದಗ ರಾಯಭಾಗ ಗೋಕಾಕ ಮುಂತಾಡ ಕಡೆಗಳಲ್ಲಿ ಸಣ್ಣಪುಟ್ಟ ಕಟ್ಟಡಗಳನ್ನು ಗುತ್ತಿಗೆ ಹಿಡಿದು ಕೆಲಸ ಮಾಡುವ ಮೇಸ್ತ್ರಿಗಳೂ ಇದ್ದಾರೆ. ಈ ಕೆಲಸದಲ್ಲಿ ತೊಡಗಿದವರಲ್ಲಿ ಗ್ರಾಮೀಣ ಭಾಗದವರಿರುವಂತೆ ನಗರ ಭಾಗದಲ್ಲಿಯೂ ಇದ್ದಾರೆ. ಕಟ್ಟಡ ಕೆಲಸ ವರ್ಷದ ಹೆಚ್ಚು ದಿನಗಳು ನಗರದಲ್ಲಿಯೇ ಉದ್ಯೋಗ ಸಿಗುವ ಕೆಲಸವಾಗಿದ್ದರಿಂದಲೂ ಗ್ರಾಮೀಣ ಗಂಟಿಚೋರರು ನಗರಕ್ಕೆ ವಲಸೆ ಬರಲೂ ಈ ವೃತ್ತಿಯೂ ಕಾರಣವಾಗಿದೆ. ಹುಬ್ಬಳ್ಳಿ, ಗದಗ, ಬಿಜಾಪುರ, ಬಾಗಲಕೋಟೆ, ನರಗುಂದ, ಶಾಹುಪಾರ್ಕ, ಬಿಜಾಪುರದ ಮರಗುಡಿ, ಗೋಕಾಕ ನಗರ, ರಾಯಭಾಗ ತಾಲೂಕಿನ ಕೆಲವು ಹಳ್ಳಿಗಳಲ್ಲಿ ಕಟ್ಟಡ ಕೆಲಸದಲ್ಲಿ ತೊಡಗಿದವರು ಸಿಗುತ್ತಾರೆ.

(ಫೋಟೊಗಳು: ಕೃಷಿ ಮತ್ತು ಪಶುಪಾಲನೆ ಕೆಲಸದಲ್ಲಿ ತೊಡಗಿದ ಗಂಟಿಚೋರ ಕುಟುಂಬಗಳ ಚಿತ್ರಗಳು, ಲೇಖಕರ ಸಂಗ್ರಹದಿಂದ)