ಮೊಬೈಲ್ ಕಳ್ಳನನ್ನು ಬೆನ್ನತ್ತಿದ ತಕ್ಷಣ ಅದೆಲ್ಲ ನೆನಪಾಗಿ, ನಾನೊಬ್ಬ ಖೋ ಖೋ ಆಟದ ರೈಡರ್ ಆಗಿ ಬದಲಾಗಿಬಿಟ್ಟಿದ್ದೆ. ಆತ, ಎಡ-ಬಲ ತಡಕುತ್ತ, ಹೊಯ್ದಾಡುತ್ತ ಒಂದೇ ಸಮ ಓಡುತ್ತಿದ್ದ; ನಾನು ಅವನನ್ನಷ್ಟೇ ದಿಟ್ಟಿಸುತ್ತ ನೇರದಿಕ್ಕಿನಲ್ಲಿ ಓಡುತ್ತಿದ್ದೆ. ಇಬ್ಬರ ವೇಗವೂ ನೂರು ಮೀಟರ್ ಓಟಗಾರರ ವೇಗದಷ್ಟೇ ಇತ್ತು. ಇನ್ನೂರೈವತ್ತು ಮೀಟರ್ ಓಡಿರಬಹುದು. ಕಳ್ಳ ಓಡುತ್ತಲೇ ಹಿಂದಕ್ಕೊಮ್ಮೆ ತಿರುಗಿನೋಡಿದ. ಆತನ ಮೊಗದಲ್ಲಿ ಭಯ ಕಡಿಮೆ ಆದಂತಿತ್ತು. ಎರಡೂ ಬದಿ ಕಣ್ಣಾಡಿಸಿದೆ. ಬಲಕ್ಕೊಂದು ಖಾಲಿ ಸೈಟು, ಅದರ ಪಕ್ಕ ಹತ್ತು ಅಡಿ ಎತ್ತರದ ಕಾಂಪೌಂಡಿರುವ ಖಾಲಿ ಸೈಟು.
-‘ಸೊಗದೆ’ ಅಂಕಣದಲ್ಲಿ ಕಳ್ಳರ ಚಮತ್ಕಾರಗಳನ್ನು ಬರೆದಿದ್ದಾರೆ ಸಹ್ಯಾದ್ರಿ ನಾಗರಾಜ್

 

ನನ್ನೊಟ್ಟಿಗೆ ಏನೆಲ್ಲ ಹೊತ್ತು ತಿರುಗುತ್ತಿದ್ದ ನನ್ನ ಅಮಾಯಕ ಬ್ಯಾಗಿಗೆ, ಚಾಕು ಎಂದು ಕರೆಯಲಾಗುವ ಅಪಾಯಕಾರಿ ಆಯುಧ ಕೂಡ ಸೇರಿಕೊಳ್ಳಬಹುದು ಅಂತ ನಾನಾಗಲೀ, ನನ್ನ ಬ್ಯಾಗಾಗಲೀ ಯಾವತ್ತೂ ಅಂದುಕೊಂಡಿರ್ಲಿಲ್ಲ. ಇದೆಲ್ಲ ಆಗಿದ್ದು ಬೆಂಗಳೂರಿನಲ್ಲಿ ಇಬ್ಬರು ಕಳ್ಳರು ಸಿಕ್ಕ ನಂತರ.

‘ವಿಜಯ ಕರ್ನಾಟಕ’ದಲ್ಲಿ ಕೆಲಸ ಮಾಡುತ್ತಿದ್ದ ಶುರುವಿನ ದಿನಗಳವು. ಜನರಲ್ ಡೆಸ್ಕಿನ ಸುದ್ದಿ ಅನುವಾದದ ಅಸೈನ್ಮೆಂಟುಗಳನ್ನು ಮುಗಿಸಿ ಹೊರಡುವಷ್ಟೊತ್ತಿಗೆ ರಾತ್ರಿ ಎಂಟು. ಚಾಮರಾಜಪೇಟೆಯ ಸಾಹಿತ್ಯ ಪರಿಷತ್ ಎದುರಿನ ನಮ್ಮ ಆಫೀಸಿನಿಂದ ಹೊಂಟು, ಅಪೆಕ್ಸ್ ಬ್ಯಾಂಕ್ ಬಳಸಿ, ರಾಯನ್ ಸರ್ಕಲ್‌ ತಲುಪಿ ಬಸ್ ಹತ್ತುವುದು ರೂಢಿ. ಅಂದು ರೂಟ್ ಬದಲಿಸುವ ಮನಸ್ಸಾಯ್ತು. ಮಕ್ಕಳ ಕೂಟ ಬಳಸಿ, ಸೀದಾ ಕೆ ಆರ್ ಮಾರ್ಕೆಟ್ ನಿಲ್ದಾಣ ತಲುಪಿ, ಬಸ್‌ನಲ್ಲಿ ನಂಗೆ ಬೇಕಾದ ಸೀಟು ಹಿಡಿದು ಆರಾಮ ಪಯಣಿಸುವ ಪ್ಲಾನು.

ಮಕ್ಕಳ ಕೂಟ ದಾಟಿ, ಎಡಕ್ಕೆ ತಿರುಗಿ, ನನ್ನಷ್ಟಕ್ಕೆ ಯಾವ್ಯಾವುದೋ ಕನಸಿನ ಲೋಕದಲ್ಲಿ ಮುಳುಗೇಳುತ್ತ ನಡೀತಿದ್ದೆ. ಚಳಿಗಾಲ ಮುಗೀತಾ ಬಂದಿತ್ತಾದರೂ, ಗಾಳಿಗೆ ಅದರ ಅರಿವು ಇನ್ನೂ ಆದಂತಿರ್ಲಿಲ್ಲ. ಕೋಟೆ ಹೈಸ್ಕೂಲು ಗೇಟಿನ ಬಳಿ ಬಿಳಿಯಲ್ಲದ ಬಿಳಿ ಬಣ್ಣದ ಟೀಶರ್ಟ್ ಹಾಕಿದ್ದ ಹುಡುಗನೊಬ್ಬ ಅತ್ತ ಎಲ್ಲೋ ನೋಡುತ್ತ ನಿಂತಿದ್ದ. ಗೇಟಿನ ಬಳಿ ಇದ್ದ ಬೀದಿ ದೀಪ ಉರಿಯುತ್ತಿರಲಿಲ್ಲ. ಹಾಗಾಗಿ ಆತನ ಮುಖವನ್ನು ಮಸುಕು ಬೆಳಕು ಗುತ್ತಿಗೆ ಪಡೆದಿತ್ತು. ಯಾವುದೂ ದನಿ ಹೊರಡಿಸದೆ, ಮಿಸುಕಾಡದೆ ನಿಂತಿದ್ದ ಅವನು ಆ ಕ್ಷಣಕ್ಕೆ ವಿಚಿತ್ರ ಅನ್ನಿಸಿದರೂ, ನಂಗ್ಯಾಕೆ ಅನ್ನಿಸಿ ನಡೆಯುತ್ತಲೇ ಇದ್ದೆ.

ಆ ಹುಡುಗ ನಿಂತಿದ್ದ ಜಾಗ ದಾಟಿ, ಹೈಸ್ಕೂಲಿನ ಗೇಟು ಇನ್ನೇನು ತಡಾಯಬೇಕು… ಹಿಂದಿನಿಂದ ಯಾರೋ ಧುತ್ತನೆ ಮುಂದೆ ಬಂದು ಮುಖದೆದುರು ನಿಂತಂತಾಯ್ತು! ಗಾಬರಿಯಾಗಿ ಚೂರು ಹಿಂದೆ ಸರಿಯುವಷ್ಟರಲ್ಲಿ, ಮುಂದಿದ್ದ ವ್ಯಕ್ತಿ ನನ್ನ ಎರಡೂ ರಟ್ಟೆ ಹಿಡಿದು, ಅರ್ಧ ತೆರೆದಿದ್ದ ಗೇಟಿನೊಳಕ್ಕೆ ಎಳೆದೊಯ್ಯಲು ಶುರುಮಾಡಿತು. ಅನಿರೀಕ್ಷಿತ ದಾಳಿಗೆ ಕಂಗೆಟ್ಟಿದ್ದರಿಂದಾಗಿ ಕಣ್ಣಿಗೆ ಅಡರಿದ್ದ ಮಂಕು ಸ್ವಲ್ಪ ಹೊತ್ತಿಗೆಲ್ಲ ದೂರಾಗಿ, ದೇಹ ಸಂಪೂರ್ಣ ಎಚ್ಚರಾದಾಗಲೇ ಗೊತ್ತಾದದ್ದು, ಆ ವ್ಯಕ್ತಿ ಅದೇ ಗೇಟಿನೆದುರು ಈ ಮೊದಲು ನಿಂತಿದ್ದ ಹುಡುಗ!

ಏನಾಗುತ್ತಿದೆ ಎಂದು ಗೊತ್ತಾಗದೆ ಅದುವರೆಗೂ ಅಸಹಾಯಕವಾಗಿದ್ದ ನನ್ನ ದೇಹ ಇದ್ದಕ್ಕಿದ್ದಂತೆ ಚುರುಕಾಯ್ತು. ಕೊಸರಿ ರಟ್ಟೆ ಬಿಡಿಸಿಕೊಳ್ಳೋಕೆ ಯತ್ನಿಸಿದೆ. ಒಂದು ರಟ್ಟೆ ಬಿಡಿಸಿಕೊಂಡದ್ದೂ ಆಯ್ತು. ಈಗ ಗಾಬರಿಯಾಗುವ ಸರದಿ ಅವನದ್ದು. ಅದುವರೆಗೂ ಅಷ್ಟೇನೂ ಜೋರಾಗಿ ಉಸಿರಾಡದ ಆತ, ನನ್ನ ಮೊಗದ ಮೇಲೆ ವಾಹನವೊಂದರ ಬಿಸಿಗಾಳಿ ತೂರುತ್ತಿದೆಯೇನೋ ಎನ್ನುವಷ್ಟು ಉದ್ದದ ಉಸಿರು ಬಿಡತೊಡಗಿದ. ಜೊತೆಗೆ, ನನ್ನ ಜೇಬುಗಳನ್ನು ತಡಕುತ್ತಲೇ, ಅವನಿಗಷ್ಟೇ ಪರಿಚಿತವಾದ ಕೂಗೊಂದನ್ನು ಮೆತ್ತಗೆ ಕೂಗತೊಡಗಿದ. ಆತನ ಕೂಗು ಹೊರಡುತ್ತಲೇ, ನನ್ನ ಎಡಭಾಗಕ್ಕಿದ್ದ ಗೇಟಿನ ಒಳಗೊಂದು ಆಕೃತಿ ಕಾಣಿಸಿಕೊಂಡಿತು. ಗಮನಿಸಿದರೆ, ಅಲ್ಲೊಬ್ಬ ಹುಡುಗ. “ಹುಮ್ಮ್… ತಳ್ಳು… ಬೇಗ ತಳ್ಳು,” ಅನ್ನೋ ಆವೇಶದ ದನಿ.

ಬಲಬದಿಯಲ್ಲಿ ಕರ್ಚೀಫು ಇದ್ದ ಜೇಬು, ಹಿಂಬದಿಯ ಎರಡು ಖಾಲಿ ಜೇಬುಗಳನ್ನು ತಡಕಾಡಿದ ನಂತರ, ಬಹುಶಃ ಅವನಿಗೆ ಜ್ಞಾನೋದಯ ಆಗಿರಬೇಕು; ತಡಕಾಡುವುದನ್ನು ಬಿಟ್ಟು, ಎರಡೂ ರಟ್ಟೆ ಹಿಡಿದು ಜೋರಾಗಿ ಎಳೆದೊಯ್ಯತೊಡಗಿದ. ಎಡಬದಿಯ ಜೇಬಿನಲ್ಲಿದ್ದ ಹೊಚ್ಚಹೊಸ ನೋಕಿಯಾ ಕ್ವರ್ಟಿ ಕೀಪ್ಯಾಡ್ ಮೊಬೈಲ್ ಅಂತೂ ಬಚಾವಾಯ್ತು ಅಂತ ಸಮಾಧಾನ ಆಯ್ತು. ಆ ಸಮಾಧಾನವೇ ಹುಮ್ಮಸ್ಸಾಗಿ, ಎರಡೂ ಕೈಯಿಂದ ಗೇಟಿನ ಕಂಬಿಗಳನ್ನು ಬಲವಾಗಿ ಹಿಡಿದುನಿಂತೆ. ತಕ್ಷಣ ನನ್ನ ಹಿಂಬದಿಗೆ ಸರಿದ ಹುಡುಗ, ಹುರುಳಿ ಮೂಟೆ ತಳ್ಳುವಂತೆ ತಳ್ಳತೊಡಗಿದ, ಒಳಗಿದ್ದ ಹುಡುಗ ನನ್ನ ಸೊಂಟ ಬಳಸಿ ಗೇಟಿನೊಳಕ್ಕೆ ಎಳೆಯತೊಡಗಿದ. ಬೇರೆ ದಾರಿ ಕಾಣದೆ, “ಹೆಲ್ಪ್… ಹೆಲ್ಪ್‌…” ಅಂತ ಅರಚತೊಡಗಿದೆ. ಅದೇ ಸಮಯಕ್ಕೆ ಸರಿಯಾಗಿ ಬೈಕುಗಳ ಸದ್ದು. ಬೆಳಕು ಹತ್ತಿರಾಗುತ್ತಲೇ ಇಬ್ಬರೂ ನನ್ನನ್ನು ಬಿಟ್ಟು, ಗೇಟಿನೊಳಕ್ಕೆ ನುಸಿದು ಕಾಣೆ. ಬೈಕಿನವರು ತಮ್ಮ ಪಾಡಿಗೆ ತಾವು ಹೊರಟುಹೋದರು. ನಾನೂ ಏನೂ ಆಗಿಲ್ಲವೆಂಬಂತೆ ಮುಂದೆ ನಡೆದು, ಕೋಟೆ ಸರ್ಕಲ್ಲಿನ ಬೀದಿ ದೀಪದಡಿ ನಿಂತು, ಅರೆಬರೆ ಹರಿದಿದ್ದ ಷರ್ಟ್ ಜೇಬನ್ನು ಪೂರಾ ಹರಿದು, ಬ್ಯಾಗಿನೊಳಕ್ಕೆ ಹಾಕಿ, ಮೈ-ಕೈನತ್ತ ಒಮ್ಮೆ ಕಣ್ಣಾಡಿಸಿ, ಬಸ್ ನಿಲ್ದಾಣದತ್ತ ನಡೆಯತೊಡಗಿದೆ. ಗಾಳಿ ತನ್ನಷ್ಟಕ್ಕೆ ತಂಪಾಗುತ್ತಲೇ ಇತ್ತು.

ಕೇವಲ ಒಂದೂವರೆ ನಿಮಿಷದ ಈ ಪ್ರಸಂಗದಿಂದಾಗಿ, ಇನ್ನೂರೈವತ್ತು ರುಪಾಯಿಯ ಹರಿತವಾದ ಚಾಕುವೊಂದು ನನ್ನ ಬ್ಯಾಗು ಸೇರಿತು. ಮತ್ಯಾವತ್ತಾದರೂ ಕಳ್ಳರು ಎದುರಾದರೆ, ಚಾಕು ಬಳಸಿ ಸಮ್ಮಾ ಹಲ್ಲೆ ಮಾಡಿ, ಪೊಲೀಸ್ ಸ್ಟೇಷನ್‌ಗೆ ಎಳೆದೊಯ್ಬೇಕು ಅಂದ್ಕೊಂಡು ತಗೊಂಡ ಚಾಕು ಅದು. ಆಮೇಲೆ ಆದದ್ದೇ ಬೇರೆ. ಆ ಚಾಕು ಅಲಂಕರಿಸಿದ್ದ ಬ್ಯಾಗನ್ನು ರೂಮಿನಲ್ಲಿ ಒಂದೆಡೆ ಒಗೆದು, ಸ್ಟೈಲಾಗಿ ಒಂದು ಡೈರಿ ಹಿಡ್ಕೊಂಡು ಕೈಬೀಸಿ ನಡೆಯಲು ಶುರುಮಾಡಿದ್ದೆ. ಇದರಿಂದ ಚಾಕಿಗೆ ಸಿಟ್ಟು ಬಂದು, ಕಳ್ಳರಿಗೆ ಸಂದೇಶ ಕಳಿಸಿತೋ ಏನೋ; ಕೋಟೆ ಹೈಸ್ಕೂಲಿನ ಪ್ರಸಂಗ ಎದುರಾದ ಐದು ವರ್ಷದ ನಂತರ ಅಂಥದ್ದೇ ಮತ್ತೊಂದು ಅದ್ಭುತ ಕಳ್ಳತನ ನನಗಾಗಿ ಕಾದಿತ್ತು!

‘ಲೈವ್ ಡೇ’ ಹೆಸರಿನ ವೆಬ್‌ಸೈಟಿಗೆ ಕೆಲಸ ಮಾಡುತ್ತಿದ್ದ ದಿನಗಳವು. ಮಧ್ಯಾಹ್ನದ ಶಿಫ್ಟು. ಗಡದ್ದಾಗಿ ಮುದ್ದೆ ಊಟ ಬಾರಿಸ್ಕೊಂಡು, (ಮೈಸೂರು ರಸ್ತೆಯ ಬ್ಯಾಟರಾಯನಪುರ ಬಳಿ) ನನೆಗುದಿಗೆ ಬಿದ್ದಿರುವ ನೈಸ್ ರೋಡಿನಲ್ಲಿ ಯಾವತ್ತಿನಂತೆ ಆರಾಮ ಹೆಜ್ಜೆ ಹಾಕುತ್ತಿದ್ದೆ. ಹೊಟ್ಟೆಯೊಳಗೆ ಮುದ್ದೆಯ ತಂಪು. ನೆತ್ತಿ ಮೇಲೆ ಬಿಸಿಲಿನ ತಾಂಡವನೃತ್ಯ. ನೈಸ್ ರೋಡಿನ ಈ ತುಂಡು, ಪೋಲಿ ಹೈಕಳ ಅಡ್ಡೆ. ಎಣ್ಣೆ ಹೊಡೆಯೋದು, ಅಲ್ಲಿಯೇ ಬಾಟಲಿಯನ್ನೂ ಚಚ್ಚುವುದು, ಗಾಂಜಾ ಎಳೆಯೋದು… ಹಿಂಗೆ ಸಣ್ಣ ಹುಡುಗರಿಂದ ಕಾಲೇಜು ವಯಸ್ಸಿನ ಹುಡುಗರವರೆಗೆ ರಸ್ತೆಯ ಅಲ್ಲಲ್ಲಿ ದೂರದೂರಕ್ಕೆ ಕಾಣಿಸ್ತಿದ್ದದ್ದು ಉಂಟು. ಆದರೂ, ಜನ ತಮ್ಮ ಪಾಡಿಗೆ ತಾವು ಆ ರಸ್ತೆಯಲ್ಲಿ ನಡೆಯುತ್ತಿದ್ದರು, ನಾ ಕೂಡ. ಆಗಾಗ, ನೈಸ್ ಹೈವೇ ಪ್ಯಾಟ್ರೋಲ್ ವೆಹಿಕಲ್ ಬರ್ತಿತ್ತು, ಆಗ ಪಡ್ಡೆಗಳೆಲ್ಲ ಎದ್ದು ಓಡ್ತಿದ್ವು, ಸ್ವಲ್ಪ ಹೊತ್ತಿಗೆ ಯಥಾಸ್ಥಿತಿ.

ಆತನ ಮುಖವನ್ನು ಮಸುಕು ಬೆಳಕು ಗುತ್ತಿಗೆ ಪಡೆದಿತ್ತು. ಯಾವುದೂ ದನಿ ಹೊರಡಿಸದೆ, ಮಿಸುಕಾಡದೆ ನಿಂತಿದ್ದ ಅವನು ಆ ಕ್ಷಣಕ್ಕೆ ವಿಚಿತ್ರ ಅನ್ನಿಸಿದರೂ, ನಂಗ್ಯಾಕೆ ಅನ್ನಿಸಿ ನಡೆಯುತ್ತಲೇ ಇದ್ದೆ.

ಎಂದಿನಂತೆ ನನ್ನದೇ ಲೋಕದಲ್ಲಿ ಮುಳುಗಿ ನಡೀತಾ ಇದ್ದೆ. ರಸ್ತೆಯ ಬಲಬದಿಯ ಸೀಮೆಸೀಗೆ ಪೊದೆಯ ಬಳಿ ಎಂಟು ಮಂದಿ ಪಡ್ಡೆಹುಡುಗರು ಗಾಂಜಾ ಎಳೆಯುತ್ತಿದ್ದರು. ಮುಖ ಸಿಂಡರಿಸಿ, ಒಳಗೊಳಗೇ ಬೈಯುತ್ತ ಮುಂದೆ ಸರಿಯತೊಡಗಿದೆ. ಅದರಲ್ಲಿ ಇಬ್ಬರು ಹುಡುಗರು, “ಅಣ್ಣಾ… ಮೊಬೈಲ್ ಇದ್ಯಾ?” ಅನ್ನುತ್ತಲೇ ವೇಗವಾಗಿ ಬಂದು ನನ್ನ ಪಕ್ಕ ಗಕ್ಕನೆ ನಿಂತರು. ನಾನು ದೂರ ಸರಿದು ನಿಂತು, “ಇಲ್ಲ,” ಎಂದೆ. “ಇಲ್ಲಣ್ಣ… ಒಂದೇ ಒಂದು ಕಾಲ್ ಮಾಡ್ಬೇಕಿತ್ತು,” ಅನ್ನುತ್ತ, ಪ್ಯಾಂಟ್ ಜೇಬಿನತ್ತ ಕೈ ಬಂತು. ಕಳ್ಳತನ ಆಗಲಿದೆ ಅಂತ ಅಂದಾಜಾಗಿದ್ದೇ ಆಗ. ತಪ್ಪಿಸಿಕೊಳ್ಳಲು ನೋಡಿದೆ. ಅಷ್ಟರಲ್ಲಿ ಇಬ್ಬರೂ ನನ್ನನ್ನು ಬಿಗಿಯಾಗಿ ಹಿಡ್ಕೊಂಡಾಗಿತ್ತು. ಎಷ್ಟು ಕೊಸರಿದರೂ ಬಿಡಿಸಿಕೊಳ್ಳಲೇ ಆಗ್ತಿಲ್ಲ. ಕಾಲು ಬಳಸಿ ಬಲಕ್ಕೆ ಇದ್ದವನನ್ನು ಇನ್ನೇನು ಕೆಳಕ್ಕೆ ಬೀಳಿಸಬೇಕು, ಉಳಿದ ಆರೂ ಮಂದಿ ಧಾವಿಸಿ ಬಂದು, ಜೇಬೆಲ್ಲ ತಡಕಿ, ಎರಡು ಮೊಬೈಲ್ ಎಗರಿಸಿಕೊಂಡು, ಬಂದಷ್ಟೇ ವೇಗದಲ್ಲಿ ಓಡತೊಡಗಿದರು.

ನನ್ನನ್ನು ಹಿಡಿದುಕೊಂಡಿದ್ದ ಇಬ್ಬರೂ ಪರಸ್ಪರ ಸನ್ನೆ ಮಾಡ್ಕೊಂಡು, ಒಟ್ಟಿಗೇ ನನ್ನನ್ನು ಪೊದೆಯತ್ತ ದೂಡಿ ಓಟ. ಒಬ್ಬ ನೈಸ್ ರೋಡಿನಲ್ಲೇ ಮೈಸೂರು ರಸ್ತೆ ಕಡೆಗೆ, ಮತ್ತೊಬ್ಬ ಹೊಸಕೆರೆಹಳ್ಳಿ ಮುಖ್ಯ ರಸ್ತೆ ಕಡೆಗೆ. ಪೊದೆಯಿಂದ ಹಿಂದಿನ ಖಾಲಿ ಜಾಗಕ್ಕೆ ನುಗ್ಗಿದವನೇ, ಹೊಸಕೆರೆಹಳ್ಳಿ ಮುಖ್ಯರಸ್ತೆಯತ್ತ ಓಡುತ್ತಿದ್ದವನ ಬೆನ್ನತ್ತಿದೆ. ಹೊಸಕೆರೆಹಳ್ಳಿ ಮುಖ್ಯ ರಸ್ತೆ ನಂಗೆ ಶ್ಯಾನೆ ಪರಿಚಿತ. ದಿನವೂ ಅದೇ ರಸ್ತೆಯಲ್ಲಿ ಓಡಾಟ. ಹಂಗಾಗಿ, ತಿರುವು, ರಸ್ತೆ ಬದಿ ಆತ ತಪ್ಪಿಸಿಕೊಳ್ಳಬಹುದಾದ ಅಡ್ಡದಾರಿಗಳು, ಅಡಗಿಕೊಳ್ಳಬಹುದಾದ ಜಾಗಗಳೆಲ್ಲ ಕಣ್ಮುಂದೆ ಚಕಾಚಕ್ ಬರತೊಡಗಿದವು. ರಸ್ತೆಗೆ ಸೇರಿಕೊಳ್ಳುತ್ತಲೇ, ಮೈಸೂರು ರೋಡ್ ಕಡೆಗಿನ ದಿಕ್ಕಿನಲ್ಲಿ ಓಡತೊಡಗಿದ.

ಮಿಡ್ಲಿಸ್ಕೂಲಿನಲ್ಲಿದ್ದಾಗ ನಾನು ಖೋ ಖೋ ಪ್ಲೇಯರ್. ಈ ಆಟದ ಹಲವು ತಂತ್ರಗಳು ಬಹಳ ಘಮ್ಮತ್ತಿನವು. ಎದುರಾಳಿಯಾದವರು ಆಚೀಚೆ ಹೊಯ್ದಾಡಿ ಓಡುತ್ತ, ರೈಡರ್ ಆದವರಿಗೆ ಚಳ್ಳೆಹಣ್ಣು ತಿನ್ನಿಸುವುದು ಮತ್ತು ರೈಡರ್ ಕೂಡ ಆ ದಾಳಕ್ಕೆ ಬಲಿಯಾಗಿ ಆಚೀಚೆ ಹೊಯ್ದಾಡಿ, ರೆಫ್ರಿಯಿಂದ ವಿಷಲ್ ಹಾಕಿಸಿಕೊಂಡು, ಅನಿವಾರ್ಯವಾಗಿ ಯಾವುದಾದರೊಂದು ತುದಿಯ ಗೆರೆ ಮುಟ್ಟಿ ಬರಬೇಕಾದ ಅಥವಾ ಬೇರೆಯವರಿಗೆ ಖೋ ಕೊಡಬೇಕಾದ ಪರಿಸ್ಥಿತಿ ಎದುರಾಗುವುದು ಸಹಜ. ಇಂಥ ಪರಿಸ್ಥಿತಿಯನ್ನು ರೈಡರ್ ಆದವರು ಸುಲಭವಾಗಿ ನಿಭಾಯಿಸಬಹುದಾದ ತಂತ್ರವೊಂದಿದೆ. ಎದುರಾಳಿಯು ತಾನಿನ್ನೇನು ಬೇರೆ ದಿಕ್ಕಿಗೆ ಓಡುತ್ತೇನೆ ಎನ್ನುವಂತೆ ಪದೇಪದೇ ಹೊರಳಿದರೂ, ರೈಡರ್ ಆದವರು ಅದನ್ನು ತಲೆಗೆ ತೆಗೆದುಕೊಳ್ಳದೆ, ಗೆರೆ ಹಾಕಿದಂತೆ ನೇರ ದಿಕ್ಕಿನಲ್ಲೇ ಓಡಿದರೆ, ಆಚೀಚೆ ದಿಕ್ಕು ಹೊರಳಿಸಿ ಅಡ್ಡಾದಿಡ್ಡಿ ಓಡುತ್ತ ತಾನೇ ಗೊಂದಲಕ್ಕೆ ಒಳಗಾಗುವ ಎದುರಾಳಿಯು ತಾನಾಗಿಯೇ ರೈಡರ್ ಕೈಗೆ ಧಾರಾಳ ಸಿಕ್ಕಿಬೀಳುತ್ತಾನೆ! ಅಂದರೆ, ರೈಡರ್‌ನನ್ನು ದಿಕ್ಕು ತಪ್ಪಿಸಲು ಹೂಡುವ ‘ಗೊಂದಲದ ಸ್ಟ್ರಾಟಜಿ’ಗೆ ಸ್ವತಃ ಎದುರಾಳಿಯೇ ತುತ್ತಾಗುವ ಸೊಗಸಿನ ಕ್ಷಣವದು.

ಮೊಬೈಲ್ ಕಳ್ಳನನ್ನು ಬೆನ್ನತ್ತಿದ ತಕ್ಷಣ ಅದೆಲ್ಲ ನೆನಪಾಗಿ, ನಾನೊಬ್ಬ ಖೋ ಖೋ ಆಟದ ರೈಡರ್ ಆಗಿ ಬದಲಾಗಿಬಿಟ್ಟಿದ್ದೆ. ಆತ, ಎಡ-ಬಲ ತಡಕುತ್ತ, ಹೊಯ್ದಾಡುತ್ತ ಒಂದೇ ಸಮ ಓಡುತ್ತಿದ್ದ; ನಾನು ಅವನನ್ನಷ್ಟೇ ದಿಟ್ಟಿಸುತ್ತ ನೇರದಿಕ್ಕಿನಲ್ಲಿ ಓಡುತ್ತಿದ್ದೆ. ಇಬ್ಬರ ವೇಗವೂ ನೂರು ಮೀಟರ್ ಓಟಗಾರರ ವೇಗದಷ್ಟೇ ಇತ್ತು. ಇನ್ನೂರೈವತ್ತು ಮೀಟರ್ ಓಡಿರಬಹುದು. ಕಳ್ಳ ಓಡುತ್ತಲೇ ಹಿಂದಕ್ಕೊಮ್ಮೆ ತಿರುಗಿನೋಡಿದ. ಆತನ ಮೊಗದಲ್ಲಿ ಭಯ ಕಡಿಮೆ ಆದಂತಿತ್ತು. ಎರಡೂ ಬದಿ ಕಣ್ಣಾಡಿಸಿದೆ. ಬಲಕ್ಕೊಂದು ಖಾಲಿ ಸೈಟು, ಅದರ ಪಕ್ಕ ಹತ್ತು ಅಡಿ ಎತ್ತರದ ಕಾಂಪೌಂಡಿರುವ ಖಾಲಿ ಸೈಟು. ಬಲಕ್ಕೆ ಹಾರುವುದು ಖಚಿತವಾಯ್ತು. ಅಂದುಕೊಂಡಂತೆಯೇ ಚರಂಡಿ ಹಾರಿ, ಖಾಲಿ ಸೈಟಿನಲ್ಲಿ ಓಡತೊಡಗಿದ. ನಾನೂ ಓಡಿದೆ. ಆದರೆ, ಆ ಖಾಲಿ ಸೈಟಿನಲ್ಲಿ ಗಾಜಿನ ಚೂರುಗಳು, ಸವರಿ ಹಾಕಿದ ಜಾಲಿಮರದ ಕಸ ಜೋರಿತ್ತು. ಮುಳ್ಳಿನಿಂದ ಬಚಾವಾಗುವ ಸಲುವಾಗಿ ಆತ, ಕಾಂಪೌಂಡು ಏರಿ ಪಕ್ಕದ ಸೈಟಿನ ಒಳಕ್ಕೆ ಹಾರಿದ. ನಾನು ಜೋರು ಉಸಿರೆಳೆದುಕೊಳ್ಳುತ್ತ ಅಲ್ಲಿಯೇ ಕುಂತೆ.
ಜನ ಜಮಾಯಿಸಿದ್ರು. ಗಂಟಲು ಕಟ್ಟಿಕೊಂಡೇ ಎಲ್ಲ ವಿವರಿಸಿದೆ. ಆತ ಹಾರಿದ್ದ ಎತ್ತರದ ಕಾಂಪೌಂಡಿನ ಖಾಲಿ ಸೈಟಿನ ಓನರ್ ಅಲ್ಲಿಯೇ ಇದ್ದವರು, “ಮಗಾ… ಆ ***ಮಗ ಸರ್ಯಾಗ್ ಸಿಕ್ಕಾಕ್ಕಂಡವ್ನೆ. ತಡಿ, ಗೇಟಿನ ಬೀಗ ತತ್ತೀನಿ,” ಅಂತ ಘೋಷಿಸಿದರು. ಒಂದಿಬ್ಬರು ಕಾಂಪೌಂಡ್ ಹತ್ತಿ ಇಣುಕಿ, “ಒಳಗೇ ಇದ್ದಾನೆ ಕಳ್ಳ,” ಅಂದ್ರು. ಮತ್ಯಾರೋ ತಮ್ಮ ಬ್ಯಾಗೊಳಗಿಂದ ವಾಟರ್ ಬಾಟಲ್ ಕೊಟ್ಟು, “ನೀರು ಕುಡೀರಿ,” ಅಂದ್ರು. ಅಷ್ಟೊತ್ತಿಗೆ, ಆ ಸೈಟಿನ ಯಜಮಾನ ಇಬ್ಬರನ್ನು ಗೇಟಿನ ಎರಡೂ ಬದಿ ಸೈನಿಕರಂತೆ ನಿಲ್ಲಿಸಿ, “ಹೊರಗ್ ಬಂದ್ ತಕ್ಷಣ ಎರ್ಡು ಬಡ್ದು ಹಿಡ್ಕಳಿ,” ಅಂತ ಸೂಚನೆ ಕೊಟ್ಟು, ಬೀಗ ತೆರೆದರು. ನನ್ನ ಎದುರಾಳಿ ಎಷ್ಟು ಚುರುಕಿದ್ದ ಅಂದ್ರೆ, ಗೇಟಿನ ಬದಿ ಹಿಡೀಲಿಕ್ಕೆ ನಿಂತಿದ್ದ ಇಬ್ಬರನ್ನೂ ದೂಡಿಕೊಂಡು ನೆಗೆದು ಓಡತೊಡಗಿದ. ಇದನ್ನೆಲ್ಲ ದೂರದಿಂದ ನೋಡುತ್ತ ನಿಂತಿದ್ದವನೊಬ್ಬ ಆತನನ್ನು ತಬ್ಬಿ ಹಿಡಿದುಕೊಂಡ. ಸೈಟಿನ ಯಜಮಾನ ಓಡಿಹೋಗಿ, ಕೆನ್ನೆಗೆರಡು ಬಾರಿಸಿದರು. ನಾನು ಆತನ ಬಳಿ ಹೋಗಿ, ಮತ್ತೆ ತಪ್ಪಿಸಿಕೊಳ್ಳದಂತೆ ಪ್ಯಾಂಟಿನ ಸೊಂಟದ ಪಟ್ಟಿ ಹಿಡಿದು ನಿಂತೆ. ಅಷ್ಟೊತ್ತಿಗೆ ಪೊಲೀಸರಿಗೆ ಕರೆ ಹೋಗಿ, ಬ್ಯಾಟರಾಯನಪುರ ಸ್ಟೇಷನ್ನಿನ ಇಬ್ಬರು ಪೊಲೀಸರು ಬೈಕಿನಲ್ಲಿ ಬಂದು, ಆತನಿಗೆರಡು ಬಿಗಿದು, ಮಧ್ಯದಲ್ಲಿ ಕೂರಿಸಿಕೊಂಡು, ನನಗೆ ಸ್ಟೇಷನ್‌ಗೆ ಬರುವಂತೆ ಹೇಳಿ ಹೋದರು.

ಅಲ್ಲಿದ್ದವರಿಗೆಲ್ಲ ನನ್ನಿ ಹೇಳಿ, ಹಿಂದಕ್ಕೆ ನಡೆದು, ದಾರಿಯಲ್ಲಿ ಬಿಟ್ಟು ಓಡಿದ್ದ ಚಪ್ಪಲಿಗಳನ್ನು ಹುಡುಕಿ ಹಾಕಿಕೊಂಡು, ಆ ಸೀಮೆಸೀಗೆ ಮೆಳೆ ಬಳಿ ಹೋಗಿ, ನನ್ನ ಡೈರಿ ಎತ್ಕೊಂಡು ಸ್ಟೇಷನ್ ತಲುಪಿದೆ. ಆತನಿಗೆ ಸೇವೆ ನಡೀತಾ ಇತ್ತು. ಇನ್ಸ್‌ಪೆಕ್ಟರ್ (ಶಿವಕುಮಾರ್) ಇದ್ದವರು, “ಓದೋ ಹುಡುಗ ಅಂತೆ ನೋಡಿ. ಕಂಪ್ಲೇಂಟೇನೂ ಬ್ಯಾಡ ಅನ್ಸುತ್ತೆ. ಇವ್ನ ಜೊತೆ ಇದ್ದೋರ್ನ ಹುಡ್ಕಿ ಮೊಬೈಲ್ ತರಿಸೋ ಜವಾಬ್ದಾರಿ ನಂದು. ನಿಮ್ಮ ಅಡ್ರೆಸ್, ಕಾಂಟ್ಯಾಕ್ಟ್ ಮಾಡಬಹುದಾದ ನಂಬರ್ ಕೊಟ್ಟು ಹೋಗಿ. ಆಗಬಹುದಾ?” ಎಂದು ನನ್ನ ಮೊಗವನ್ನೇ ದಿಟ್ಟಿಸಿದರು. “ಸರಿ ಸರ್” ಹೇಳಿ, ಆಚೆ ಬಂದು, ಆಫೀಸಿಗೆ ತಡ ಆಯ್ತಲ್ಲ ಅಂದ್ಕೊಂಡು ಬಿರಬಿರನೆ ನಡೆಯತೊಡಗಿದೆ. ಬಿಸಿಲು ಲೆಕ್ಕಕ್ಕೇ ಇರಲಿಲ್ಲ. ನಾಲ್ಕನೇ ದಿನದ ಸಂಜೆ ಎರಡೂ ಮೊಬೈಲ್ ಸಿಕ್ಕವು. ಮೊಬೈಲ್ ಸ್ಕ್ರೀನಿನಲ್ಲಿದ್ದ, ಕೋವಲಂ ಪುಟಾಣಿಯ ಮುದ್ದು ಮೊಗವ ಕಂಡೊಡನೆ ನೆಮ್ಮದಿಯ ನಿಟ್ಟುಸಿರು. ಇನ್ಸ್‌ಪೆಕ್ಟರಿಗೆ ಥ್ಯಾಂಕ್ಸ್ ಹೇಳಿ ಆಚೆ ಬಂದು, ಘಮ್ಮತ್ತಿನ ಮಸಾಲಾ ಪುರಿ ಬಾರಿಸತೊಡಗಿದೆ. ಹಣೆಯುದ್ದಕ್ಕೂ ಬೆವರುಹನಿಗಳು ಮೂಡಿ, ತಲೆ ಇನ್ನಷ್ಟು ತಣ್ಣಗಾಗುವ ಹೊತ್ತಿಗೆ ಆಕಾಶದಲ್ಲಿ ಮಿಣುಕುದೀಪಗಳು ಕಾಣಿಸತೊಡಗಿದವು.