‘ಕಳ್ಳಿಗಾಡಿನ ಇತಿಹಾಸ’ ಎಂಬ ಶೀರ್ಷಿಕೆಯಿದ್ದರೂ, ಇದು ಪ್ರಪಂಚದ ಯಾವುದೇ ಅಭಿವೃದ್ಧಿ ಹೊಂದದ ಅಥವಾ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ನಡೆಯುವ ಶೋಷಿತ ಸಮುದಾಯದ ಇತಿಹಾಸವೇ ಆಗಿದೆ. ಯಾವುದೇ ರಾಜಕೀಯ ವ್ಯವಸ್ಥೆಯಾದರೂ ಶೋಷಿತವರ್ಗದ ನೋವು ನಲಿವುಗಳನ್ನು ಅರ್ಥ ಮಾಡಿಕೊಳ್ಳದೇ ಹೋದಾಗ, ಆ ಜನರು ಅನುಭವಿಸುವ ಕಷ್ಟಕಾರ್ಪಣ್ಯಗಳನ್ನು ಹೇಳತೀರದು. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಡೆದಂಥ ಇಂಥ ಅನೇಕ ಕಥೆಗಳು ಕರ್ನಾಟಕದ ಮಣ್ಣಿನಲ್ಲೂ ದಾಖಲಾಗಿರುತ್ತವೆ.
ತಮಿಳಿನ ವೈರಮುತ್ತು ಬರೆದಿರುವ “ಕಳ್ಳಿಕಾಟ್ಟು ಇತಿಹಾಸಂ” ಕಾದಂಬರಿಯನ್ನು ಡಾ. ಮಲರ್‌ವಿಳಿ ‘ಕಳ್ಳಿಗಾಡಿನ ಇತಿಹಾಸ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದು, ಈ ಕೃತಿಯ ಕುರಿತು ಕೆ. ಪ್ರಭಾಕರನ್ ಬರಹ

 

ತಮಿಳು ಸಾಹಿತ್ಯಕ್ಕೆ ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆಯೆಂದು ಹೇಳಲಾಗುತ್ತಿದ್ದು, ದ್ರಾವಿಡ ಭಾಷೆಗಳಲ್ಲಿ ತಮಿಳು ಅತ್ಯಂತ ಪ್ರಮುಖ ಸ್ಥಾನವನ್ನು ಹೊಂದಿರುತ್ತದೆ. ತಮಿಳಿನಲ್ಲಿ ಹಲವಾರು ಮಹತ್ವದ ಕೃತಿಗಳು ರಚನೆಗೊಂಡಿದ್ದು, ಕೆಲವು ಅತ್ಯುತ್ತಮ ಕೃತಿಗಳು ಕನ್ನಡಕ್ಕೂ ಅನುವಾದಗೊಂಡಿವೆ. ಇತ್ತೀಚಿನ ತಮಿಳು ಸಾಹಿತ್ಯದ ಅತ್ಯುತ್ತಮ ಕೃತಿಯೆಂದು ಪರಿಗಣಿಸಲ್ಪಟ್ಟ “ಕಳ್ಳಿಕಾಟ್ಟು ಇತಿಹಾಸಂ”ವನ್ನು ರಚಿಸಿದ ವೈರಮುತ್ತು ನಮ್ಮೆಲ್ಲರನ್ನು ಹುಬ್ಬೇರಿಸುವಂತೆ ಮಾಡಿಬಿಟ್ಟಿದ್ದಾರೆ. ಅವರು ಸಿನಿಮಾಗಳಿಗೆ ಹಾಡುಗಳನ್ನು, ಸಾಹಿತ್ಯವನ್ನು ರಚಿಸಿ ಸಿನಿಮಾ ಕ್ಷೇತ್ರದಲ್ಲಿ ಪ್ರಸಿದ್ಧಿಯಾಗಿದ್ದರೂ ಕವಿಯಾಗಿಯೇ ಖ್ಯಾತಿ ಪಡೆದಿದ್ದು, ಅವರ ಈ ಕಾದಂಬರಿ ಅವರೊಬ್ಬ ಸಮರ್ಥ ಕಾದಂಬರಿಕಾರರೂ ಹೌದೆನ್ನುವುದನ್ನು ಸಾಬೀತುಪಡಿಸಿದೆ.  ಅವರ ಜೀವನಾನುಭವ ಜೊತೆಗೆ ದ್ರಾವಿಡ ಚಳುವಳಿಯ ದಿಗ್ಗಜರಾದ ಪೆರಿಯಾರ್, ಅಣ್ಣಾದುರೈ, ಕರುಣಾನಿಧಿ ಮೊದಲಾದವರ ಒಡನಾಟದ  ಅನುಭವ ಹೊಂದಿದವರು. ಈ ಒಡನಾಟವು  ಅವರನ್ನು ಸಮಾಜದ ಆಗುಹೋಗುಗಳ ಬಗ್ಗೆ ಚಿಂತಿಸುವ ಒಬ್ಬ ಮಾನವೀಯ ನೆಲೆಯ ವ್ಯಕ್ತಿಯನ್ನಾಗಿ ರೂಪಿಸಿದ್ದು, ಇಂಥ ಒಂದು ಶಕ್ತವಾದ ತಮ್ಮದೇ ಜೀವನದ ಕಟುವಾಸ್ತವದ ಚಿತ್ರಣವನ್ನು ಕಟ್ಟಿಕೊಡಲು ಅವರಿಂದ ಸಾಧ್ಯವಾಗಿಸಿದೆ.

ಅವರ ಈ ಕಾದಂಬರಿಯನ್ನು ಬೆಂಗಳೂರಿನ ಪ್ರೆಸಿಡೆನ್ಸಿ ಯೂನಿವರ್ಸಿಟಿಯ ಕನ್ನಡ ವಿಭಾಗದ ಮುಖ್ಯಸ್ಥೆಯಾದ ಡಾ. ಮಲರ್‌ವಿಳಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಹೀಗೆ ಸಶಕ್ತವಾಗಿ ಕನ್ನಡಕ್ಕೆ ಅನುವಾದಿಸಿ, ಕನ್ನಡ ಓದುಗರಿಗೆ ತಮಿಳುನಾಡಿನಲ್ಲಿ ನಡೆದ ಘಟನೆಯನ್ನು ಇಲ್ಲೇ ನಮ್ಮ ಕರ್ನಾಟಕದ ಭಾಗದಲ್ಲೇ ನಡೆದ ಘಟನೆಯಂತೆ ಚಿತ್ರಿಸಿಕೊಟ್ಟಿದ್ದಾರೆ. ಈ ಕಾದಂಬರಿಯನ್ನು ಸಾಹಿತ್ಯ ಅಕಾಡೆಮಿಯು 2021ರಲ್ಲಿ ಪ್ರಕಟಿಸಿತು.

(ವೈರಮುತ್ತು)

“ಕಳ್ಳಿಗಾಡಿನ ಇತಿಹಾಸ”ದ ಕೇಂದ್ರ ಬಿಂದು ಕಳ್ಳಿಪಟ್ಟಿ ಎನ್ನುವ ಅತ್ಯಂತ ಹಿಂದುಳಿದ ಗ್ರಾಮ. ಸುಮಾರು ಎಂಭತ್ತು ಕುಟುಂಬಗಳು ಜೀವನ ನಡೆಸುತ್ತಿರುವ ಒಂದು ಕುಗ್ರಾಮವಾದರೂ ಅಲ್ಲಿ ರೈತರು ಮಾತ್ರವಲ್ಲದೆ ಜೀವನದ ವಿವಿಧ ವೃತ್ತಿಗಳನ್ನು ನಡೆಸುವ ಕಮ್ಮಾರ, ಚಮ್ಮಾರ, ಅಗಸ, ನಾಪಿತ, ಕುಂಬಾರ ಮುಂತಾದ ಹಲವಾರು ಕಸುಬಿನ ಜನರ ಒಂದು ದೊಡ್ಡ ಗ್ರಾಮೀಣ ಸಮುದಾಯವೇ ಅಲ್ಲಿ ಇತ್ತು. ರೈತ ಕಟುಂಬದ ಪೇಯತ್ತೇವರ್ ಅವರೆಲ್ಲರ ನಡುವೆ ಒಬ್ಬ ಗೌರವಾನ್ವಿತ ವ್ಯಕ್ತಿ. ಇವರೆಲ್ಲರ ನಡುವಿನಲ್ಲಿ ನಡೆಯುವ ಕಥೆಯೇ ಈ “ಕಳ್ಳಿಗಾಡಿನ ಇತಿಹಾಸ”ದ ದಾರುಣ ಕಥೆ.

“ಕಳ್ಳಿಗಾಡಿನ ಇತಿಹಾಸ” ಎಂದು ಇದನ್ನು ಹೆಸರಿಸಿದ್ದರೂ ಇದು ಪ್ರಪಂಚದ ಯಾವುದೇ ಅಭಿವೃದ್ಧಿ ಹೊಂದದ ಅಥವಾ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ನಡೆಯುವ ಶೋಷಿತ ಸಮುದಾಯದ ಇತಿಹಾಸವೇ ಆಗಿದೆ. ಯಾವುದೇ ರಾಜಕೀಯ ವ್ಯವಸ್ಥೆಯಾದರೂ ಶೋಷಿತವರ್ಗದ ನೋವು ನಲಿವುಗಳನ್ನು ಅರ್ಥ ಮಾಡಿಕೊಳ್ಳದೇ ಹೋದಾಗ, ಆ ಜನರು ಅನುಭವಿಸುವ ಕಷ್ಟಕಾರ್ಪಣ್ಯಗಳನ್ನು ಹೇಳ ತೀರದು. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಡೆದಂಥ ಇಂಥ ಅನೇಕ ಕಥೆಗಳು ಸಹ ಕರ್ನಾಟಕದ ಮಣ್ಣಿನಲ್ಲೂ ದಾಖಲಾಗಿವೆ.

ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದ ಮೇಲೂ ಅಭಿವೃದ್ಧಿಯ ಹೆಸರಿನಲ್ಲಿ ನಡೆಸುವ ಅನೇಕ ಕಾರ್ಯಕ್ರಮಗಳು ಆ ಪ್ರದೇಶದವರ ಮೂಲಭೂತ ವ್ಯವಸ್ಥೆಯಲ್ಲಿ ಉಂಟಾಗುವ ಏರುಪೇರುಗಳಿಂದಾಗಿ ಆ ಭಾಗದ ಜನರು ಅನುಭವಿಸುವ ದಾರುಣತೆಗಳು ಈ ದೇಶದ ಚರಿತ್ರೆಯುದ್ದಕ್ಕೂ ಕಾಣುತ್ತಲೇ ಬಂದಿದ್ದೇವೆ. ಕರ್ನಾಟಕದ ಶರಾವತಿ, ಚಕ್ರ, ವಾರಾಹಿ ಯೋಜನೆಗಳಿಗಾಗಿ ಕಟ್ಟಲಾದ ಅಣೆಕಟ್ಟುಗಳಿಂದಾಗಿ ಮುಳುಗಡೆಗೊಂಡ ಪ್ರದೇಶಗಳ ಜನರ ನಿರ್ವಸತಿ ಕಾರ್ಯಕ್ರಮ ಸಮಂಜಸವಾಗಿ ನಡೆಯದೆ, ಆ ಭಾಗದ ಜನರು ಇಂದಿಗೂ ಹೋರಾಟದ ಮುಂಚೂಣಿಯಲ್ಲೇ ಇದ್ದಾರೆ. ಅನೇಕ ಸರ್ಕಾರಗಳು ಬಂದು ಹೋದರೂ ಜನರ ಸಮಸ್ಯೆಗೆ ಯಾವುದೇ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿರುವುದಿಲ್ಲ. ಲಕ್ಷಾಂತರ ಕುಟುಂಬಗಳು ಭೂಮಿಯ ಹಕ್ಕಿಗಾಗಿ ಹೋರಾಟ ನಡೆಸುತ್ತಿವೆ.  ಇದರಲ್ಲಿ ಅರಣ್ಯವಾಸಿಗಳು, ಸಣ್ಣ ರೈತರು, ಭೂಹೀನ ದಲಿತರು, ಬುಡಕಟ್ಟು ಜನರು ನಿರಂತರವಾಗಿ ಹೋರಾಟ ನಡೆಸಿದ್ದಾರೆ. ಆದರೆ ರಾಜ್ಯ ಸರ್ಕಾರ ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಯನ್ನಾಗಲೀ, ಬಕುರ್ ಹುಕುಂ ಸಾಗುವಳಿದಾರರ ಅಕ್ರಮ ಸಕ್ರಮ ಕಾಯ್ದೆಯನ್ನಾಗಲೀ ಜಾರಿಗೊಳಿಸಲು ಯಾವುದೇ ಇಚ್ಛಾಶಕ್ತಿಯನ್ನು ತೋರಿಸುತ್ತಿಲ್ಲ. ಶಿವಮೊಗ್ಗ ಜಿಲ್ಲೆಯ ವಿವಿಧ ಯೋಜನೆಗಳಿಂದಾಗಿ ಅನೇಕ ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿರುತ್ತಾರೆ. ಅಂಥವರು ಮಾಡಿಕೊಂಡಿರುವ ಅರಣ್ಯ ಭೂಮಿ, ಕೆಪಿಸಿ, ಆಕ್ರಮಿತ ಭೂಮಿ ಅಥವಾ ಸರ್ಕಾರಿ ಭೂಮಿಗಳಲ್ಲಿ ಅವರಿಗೆ ಹಕ್ಕುಪತ್ರ ದೊರೆಯದೆ ಐವತ್ತು ವರ್ಷಗಳೇ ಕಳೆದು ಹೋಗಿವೆ.

ಇಲ್ಲಿ ವೈರಮುತ್ತು ಹೇಳುತ್ತಾ ಹೋಗಿರುವುದು ಸಹ ಇಂಥ ದಾರುಣ ವ್ಯವಸ್ಥೆಯ ವಾಸ್ತವದ ಕರಾಳ ಭಾಗವನ್ನೇ. ಅದು ನಡೆದದ್ದು 1958ರಲ್ಲಿ. ತಮಿಳು ನಾಡಿನ ತೆನಿ, ದಿಂಡಿಗಲ್, ಮಧುರೈ ನಗರಗಳ ಮೂಲಕ ಹರಿದು ಹೋಗುವ ವೈಗೆ ನದಿಯು, ಪಶ್ಚಿಮ ಘಟ್ಟದ ವರುಸನಾಡು ಬೆಟ್ಟದಿಂದ ಉಗಮಗೊಳ್ಳುತ್ತದೆ. ಈ ನದಿಗೆ ಅಣೆಕಟ್ಟು ಕಟ್ಟಿದಾಗ ಸುಮಾರು ಹತ್ತು ಹದಿನೈದು ಗ್ರಾಮಗಳು ಮುಳುಗಡೆಗೊಂಡು ಉಂಟಾಗುವ ದಾರುಣ ಚಿತ್ರಣವೇ ಈ ಕಾದಂಬರಿಯ ಕಥಾವಸ್ತು. ಅನೇಕ ತಲೆಮಾರುಗಳಿಂದ ಹುಟ್ಟಿ ಬೆಳೆದು ಬಂದ ಜನರು, ಇದ್ದಕ್ಕಿಂದ್ದಂತೆ ಎಲ್ಲವನ್ನೂ ತೊರೆದು ಸರಿಯಾದ ನೆಲೆ ಸಿಗದೆ ಹೊರಟು ಬಿಡಬೇಕಾದ ಅನಿವಾರ್ಯತೆಯ ಸಂದರ್ಭವು ಕರುಳು ಹಿಂಡುವಂತೆ ಮಾಡಿಬಿಡುತ್ತದೆ. ಈ ಕಾದಂಬರಿಯ ಪ್ರಮುಖ ವ್ಯಕ್ತಿಯಾಗಿ ಕಾಣಿಸಿಕೊಳ್ಳುವ ಪೇಯತ್ತೇವರ್ ಕೊನೆಗೂ ಆ ಮಣ್ಣಿನ ಸಂಬಂಧವನ್ನು ಕಳಚಿಕೊಳ್ಳಲಾಗದೆ, ತನ್ನದೇ ಮನೆಯ ಬಾಗಿಲನ್ನು ಕಳಚಿಕೊಳ್ಳುವಾಗ ಶಿಥಿಲಗೊಂಡ ಗೋಡೆಯು ಕುಸಿಯುತ್ತಾ ಸಾಗಿ ತನ್ನ ಒಡೆಯನಾದ ಪೇಯತ್ತೇವರ್‌ನ ಪ್ರಾಣಕ್ಕೆ ಸಂಚಕಾರ ತರುತ್ತದೆ.

ಲೇಖಕರು ಈ ಕಥೆಯನ್ನು ನಿರೂಪಿಸುವುದರೊಂದಿಗೆ ಜೀವನದ ಹಲವು ಮಜಲುಗಳನ್ನು ಕಣ್ಣಿಗೆ ಕಟ್ಟುವಂತೆ ಮಾಡುವುದರ ಮೂಲಕ ಅವರು ತಮ್ಮ ಜೀವನದಲ್ಲಿ ಅನುಭವಿಸಿದ್ದನ್ನು ಕಾದಂಬರಿಯುದ್ದಕ್ಕೂ ಧಾರೆಯೆರೆದಿದ್ದಾರೆ. ನಾಯಕನಾಗಿ ಕಾಣಿಸಿಕೊಳ್ಳುವ ಕಾದಂಬರಿಯ ಪ್ರಮುಖ ವ್ಯಕ್ತಿ ಪೇಯತ್ತೇವರ್‌ನನ್ನು  ಆವಾಹನೆ ಮಾಡಿಕೊಂಡಂತೆ ಲೇಖಕರು ಆತನ ಪಾತ್ರವನ್ನು ಚಿತ್ರಿಸಿದ್ದಾರೆ. ಜೊತೆಯಲ್ಲಿ ಕಾಣಿಸಿಕೊಳ್ಳುವ ಪ್ರಮುಖ ಪಾತ್ರಗಳಾದ ಜೀವನದ ಆಪ್ತ ಸಂಗಾತಿ ಅಳಗಮ್ಮಾಳ್, ಸೌಂದರ್ಯದ ಖನಿಯಾಗಿದ್ದೂ ನತದೃಷ್ಟಳಾಗಿ ಪೇಯತ್ತೇವರ್ ಕುಟುಂಬದಲ್ಲಿ ಕಾಣಿಸಿಕೊಳ್ಳುವ ನಾಪಿತನ ಮಗಳಾದ ಮುರುಗಾಯಿ, ಗಂಡನಿದ್ದರೂ ಸುಖ ಕಾಣದೆ ತಂದೆಯನ್ನು ಸದಾ ಸತಾಯಿಸುತ್ತಿದ್ದ ಸೆಲ್ಲತ್ತಾಯ್, ಜೀವದ ಗೆಳೆಯನಂತಿದ್ದ ವಂಡಿನಾಯಕ್ಕರ್, ಮಗಳ ಮಗ ಅದೃಷ್ಟಹೀನ ಮೊಮ್ಮೊಗ ಮೊಕ್ಕರಾಜು, ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗುವ ಎರಡನೇ ಅಳಿಯ ಕರುತ್ತಕಣ್ಣನ್, ಮನೆಮಗಳಾಗಿದ್ದ ಅನಾಥೆ ಮಿನ್ನೆಲ್, ಕೆಟ್ಟ ಚಾಳಿಗೆ ಬಿದ್ದು ಅಪ್ಪನಿಗೆ ಶನಿಯಂತೆ ಕಾಡುತ್ತಿದ್ದ ಮಗ ಚಿನ್ನು, ಇವರಲ್ಲದೆ ಗ್ರಾಮದ ವಿವಿಧ ಕಾಯಕಗಳಲ್ಲಿ ತೊಡಗಿಕೊಂಡ ಬಹಳಷ್ಟು ಪಾತ್ರಗಳು ಕಾದಂಬರಿಯ ವಿಸ್ತಾರಕ್ಕೆ ಹೆಚ್ಚಿನ ರೀತಿಯಲ್ಲಿ ಸಹಕಾರವಾಗಿರುವುದಲ್ಲದೆ ಕಾದಂಬರಿಯನ್ನು ಕಟ್ಟಿಕೊಡುವಲ್ಲಿ ಗಂಭೀರ ಪಾತ್ರಗಳಾಗಿ ಕಾದಂಬರಿಯುದ್ದಕ್ಕೂ ಕಾಣಿಸಿಕೊಳ್ಳುತ್ತಾರೆ.

ಕಾದಂಬರಿಯ ವಿಚಾರದಲ್ಲಿ ನನಗೆ ಅತ್ಯಂತ ಕುತೂಹಲ ಮೂಡಿಸಿದ್ದು ಮತ್ತು ಆಶ್ಚರ್ಯ ಚಕಿತನನ್ನಾಗಿಸಿದ್ದು, ಕಾದಂಬರಿಯ ಪಾತ್ರಗಳ ವೈವಿಧ್ಯತೆಗಳೊಂದಿಗೆ ವಿವಿಧ ಪಾತ್ರಗಳ ವಿನ್ಯಾಸ, ಕಾದಂಬರಿಯ ವಿಸ್ತರಣೆಯಲ್ಲಿ ಪ್ರಯೋಗಿಸಿದ ತಂತ್ರಗಾರಿಕೆ, ಮತ್ತು ಭಾಷಾ ಪ್ರಯೋಗ. ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ನಡೆಸುವ ವಿವಿಧ ಆಚಾರ ವಿಚಾರಗಳನ್ನು ಮನ ಮುಟ್ಟುವಂತೆ ತಾವೇ ಅನುಭವಿಸಿ ಚಿತ್ರಿಸಿದ ರೀತಿ ನಿಜಕ್ಕೂ ಓದುಗರನ್ನು ವಿಸ್ಮಯಗೊಳಿಸಿಬಿಡುತ್ತದೆ. ಅದು ಗ್ರಾಮದಲ್ಲಿ ನಡೆಯುವ ವಿವಿಧ ಕರ್ಮಗಳಾದ ಹೆಣ ಸುಡುವಿಕೆ, ಹೆರಿಗೆ ಮಾಡಿಸುವ ರೀತಿ, ಹಸು ಹೆರುವ ಸಂದರ್ಭದ ವರ್ತನೆ, ನಾಪಿತನು ಕೂದಲುಗಳೊಂದಿಗೆ ನಡೆಸುವ ಚಮತ್ಕಾರ ಇವೇ ಮುಂತಾದವುಗಳಲ್ಲದೆ, ಹುಡುಗಿ ಮೈನೆರೆದ ಸಂದರ್ಭಗಳಲ್ಲಿ ಅನುಸರಿಸುವ ಪದ್ಧತಿ, ಹುಡುಗರಿಗೆ ಮಾಡುವ ಮಾರ್ಗ ಕಲ್ಯಾಣ (ಸಾಮಾನ್ಯವಾಗಿ ಮುಸ್ಲಿಮರಲ್ಲಿ ಕಂಡು ಬರುವ ಈ ಪದ್ಧತಿ ಇಲ್ಲಿ ಕಾಣಿಸಿಕೊಂಡಿದ್ದು ನಿಜಕ್ಕೂ ಅತ್ಯಂತ ಕುತೂಹಲಕಾರಕ), ಬಾವಿ ತೋಡಿಸುವ ಕ್ರಮ, ನೀರೆತ್ತುವ ಕಪಿಲೆಯ ಕಾರ್ಯ ವಿಧಾನ, ಮನುಷ್ಯರ ಮೇಲೆ ನಡೆಸುವ ನಾಟಿ ಔಷಧಿ ಪ್ರಯೋಗ, ಜಾನುವಾರುಗಳ ರೋಗಗಳಿಗೆ ನಡೆಸುವ ಮನೆ ಮದ್ದು ಪ್ರಯೋಗ, ಇವೆಲ್ಲವನ್ನೂ ಓದುತ್ತಿರುವಾಗ ನಾವು ಸಹ ಆ ಗ್ರಾಮದ ಒಬ್ಬ ಗ್ರಾಮಸ್ಥರೇ ಆಗಿಬಿಟ್ಟಿರುತ್ತೇವೆ. ಬೇರೆ ಬೇರೆ ಸಮುದಾಯ, ಕುಲಕಸುಬುಗಳನ್ನು ಮಾಡಿಕೊಂಡು ಬರುತ್ತಿದ್ದರೂ ಅಲ್ಲಿಯ ಜನ ಪರಸ್ಪರ ಸೌಹಾರ್ದತೆಯನ್ನು ಕಾಪಾಡಿಕೊಂಡು ಬರುವವರಾಗಿದ್ದಾರೆ. ಲೇಖಕರು ಇಲ್ಲಿಯ ವಿವಿಧ ಸಮುದಾಯ ಅಥವಾ ಕುಲಕಸುಬುದಾರರ ವಿಷಯಗಳನ್ನು ಕಣ್ಣಲ್ಲಿ ಕಂಡಂತೆ ಚಿತ್ರಿಸಿರುವುದನ್ನು ಗಮನಿಸಿದಾಗ ಅವರ ಜೀವನಾನುಭವದ ಸೂಕ್ಷ್ಮತೆ ಅರ್ಥವಾಗುತ್ತಾ ಹೋಗುತ್ತದೆ. ಅಂತಹ ಅನೇಕ ವಿಚಾರಗಳು  ಕಾದಂಬರಿಯುದ್ದಕ್ಕೂ ಓದುಗರಿಗೂ ಅರಿವಾಗುತ್ತದೆ.

ಯಾವುದೇ ರಾಜಕೀಯ ವ್ಯವಸ್ಥೆಯಾದರೂ ಶೋಷಿತವರ್ಗದ ನೋವು ನಲಿವುಗಳನ್ನು ಅರ್ಥ ಮಾಡಿಕೊಳ್ಳದೇ ಹೋದಾಗ, ಆ ಜನರು ಅನುಭವಿಸುವ ಕಷ್ಟಕಾರ್ಪಣ್ಯಗಳನ್ನು ಹೇಳ ತೀರದು. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಡೆದಂಥ ಇಂಥ ಅನೇಕ ಕಥೆಗಳು ಸಹ ಕರ್ನಾಟಕದ ಮಣ್ಣಿನಲ್ಲೂ ದಾಖಲಾಗಿವೆ.

ಇಲ್ಲಿಯ ನಿವಾಸಿಗಳು ಕಾಯಾಂಪುತ್ತು ಎಂಬ ಊರಿನಿಂದ ವಲಸೆ ಬಂದವರೆನ್ನುವುದೊಂದು ಪ್ರತೀತಿ. ಅದರ ಹಿನ್ನಲೆಯಾಗಿ ಒಂದು ಕಥೆ ಇದೆ. ಅಲ್ಲಿದ್ದ ಒಂದು ದೊಡ್ಡ ಕುಟುಂಬ ಒಂದು ಗಂಡಾಂತರದಲ್ಲಿ ಸಿಕ್ಕಿಕೊಂಡು ಇಡೀ ಕುಟುಂಬವೇ ನಾಶವಾಗಿಬಿಡುತ್ತದೆ. ಅಲ್ಲಿಯ ಜನರು ಊರು ಬಿಡಬೇಕಾಗಿ ಬಂದಾಗ ಅವರೆಲ್ಲರೂ ಈ ಕಳ್ಳಿಪಟ್ಟಿಗೆ ಬಂದು ನೆಲೆಸುತ್ತಾರೆ. ದುರಂತಕ್ಕೆ ಸಿಕ್ಕಿ ಹಾಕಿಕೊಂಡ ದೊಡ್ಡ ಕುಟುಂಬದ ಮಗಳು ಮುತ್ತುಕಣ್ಣಿ ಇಲ್ಲಿಯ ನಾಡದೇವತೆ ಮುತ್ಯಾಲಮ್ಮ ಆಗಿ, ತಮ್ಮ ದೇವರನ್ನು ತಾವೇ ಕಂಡುಕೊಳ್ಳುತ್ತಾರೆ.

ತಾನು ಬೆವರನ್ನೂ ರಕ್ತವನ್ನೂ ಸುರಿಸಿ ದುಡಿಯುವ ಮಣ್ಣಿನ ಬಗ್ಗೆ ಪೇಯತ್ತೇವರ್‌ಗೆ ಎಲ್ಲಿಲ್ಲದ ಅಭಿಮಾನ. ನೇಗಿಲಿನಿಂದ ಗಾಯಗೊಂಡು ರಕ್ತ ಸುರಿದಾಗಲೂ, ದುಡಿಯುವಾಗ ಬೆವರು ಸುರಿಸುವಾಗಲೂ ಖುಷಿ ಕೊಡುವ ಒಂದೇ ಅನುಭವ ಪೇಯತ್ತೇವರದ್ದು. ಈ ಕಾದಂಬರಿಯ ಆರಂಭದ ಘಟನೆ ಇದಕ್ಕೆ ಸಾಕ್ಷಿಯಾದರೆ, ಅಣೆಕಟ್ಟಿನ ನೀರು ಆವರಿಸಿಕೊಳ್ಳುತ್ತಾ ಬರುವಾಗ, ಗ್ರಾಮವು ಪ್ರತಿ ಹಂತವೂ ಕುಸಿತಕ್ಕೆ ಒಳಗಾಗುತ್ತಾ ಹೋಗಿ, ಜನರು ತಮ್ಮ ಗಂಟು ಮೂಟೆ, ಜಾನುವಾರುಗಳನ್ನು ಕಟ್ಟಿಕೊಂಡು ಎದ್ದು ಬಿದ್ದು ಹೋಗುತ್ತಿರುವಾಗ, ಪೇಯತ್ತೇವರ್‌ಗೆ ತನ್ನ ಸ್ವಂತ ಮನೆಯ ಮಣ್ಣಿನ ನೆನಪಾಗಿ ಅದನ್ನು ತರಲು ಪ್ರಾಣವನ್ನೂ ಲೆಕ್ಕಿಸದೆ ಹಿಂತಿರುಗಿ ಈಜುತ್ತಾ ಹೋಗುತ್ತಾನೆ. ಗೋಡೆಯ ಮಣ್ಣಿಗಾಗಿ ಪರಿತಪಿಸುತ್ತಾನೆ. ಅಪೂರ್ವವಾದ ಅಂತ್ಯವನ್ನು ಕಾಣುವ ಕಾದಂಬರಿಯಲ್ಲಿ ಕತೆಯು ದಟ್ಟವಾಗಿ ಹಬ್ಬಿದೆ.  ನಾ.ಡಿಸೋಜ  ಅವರ ಕಾದಂಬರಿ ಆಧಾರಿತ ದ್ವೀಪ ಸಿನಿಮಾವನ್ನು ನೆನಪಿಸುವ ದೃಶ್ಯಗಳು ಅಕ್ಷರ ರೂಪದಲ್ಲಿ ಕಣ್ಣಿಗೆ ಕಟ್ಟುವಂತಿವೆ.

ಅನುವಾದಕರು ತಮ್ಮ ಅನಿಸಿಕೆಯಲ್ಲಿ ಹೇಳಿಕೊಂಡಂತೆ, ಈ ಕಾದಂಬರಿಯಲ್ಲಿ ಹಳ್ಳಿಯ ಜನ-ಜೀವನ, ಬಂಜರು ಭೂಮಿ, ಬೇಸಾಯ ಬಡತನ, ಸಾವು-ನೋವು, ಸಂಕಟ, ದಾಂಪತ್ಯ, ಪ್ರೇಮ, ಶ್ರಮ, ಶ್ರದ್ಧೆ, ಸೋಮಾರಿತನ, ಮೋಸ, ಕಳ್ಳತನ, ಕೊಲೆ, ಶೋಷಣೆ, ಸರ್ಕಾರದ ಬೇಜವಾಬ್ದಾರಿತನ, ಕೌಟುಂಬಿಕ ಜಗಳ, ಬಡತನದ ಹೋರಾಟದ ಬದುಕು, ಮಾನವೀಯತೆ, ಪ್ರಾಮಾಣಿಕತೆ, ತಾಳ್ಮೆ-ಸಹನೆ, ಆತ್ಮಗೌರವ, ಒಗ್ಗಟ್ಟು, ಹುಟ್ಟಿದ ನೆಲದ ಮೇಲಿನ ಅದಮ್ಯ ಪ್ರೀತಿ ಇವೆಲ್ಲವೂ ಈ ಕಾದಂಬರಿಯ ಕಳ್ಳಪ್ಪಟ್ಟಿ ಎಂಬ ಗ್ರಾಮಕ್ಕೆ ಮಾತ್ರ ಸೀಮಿತವಾಗದೆ, ಎಲ್ಲ ನಾಡಿನ, ಎಲ್ಲ ಕಾಲಗಳ ಕಟು ವಾಸ್ತವ ಜೀವನ ಚಿತ್ರಣವೇ ಆಗಿದೆ.

(ಡಾ. ಮಲರ್‌ವಿಳಿ)

ಲೇಖಕರು ಮಧುರೈ ಸುತ್ತಮುತ್ತಲಿನ ಆಡು ಭಾಷೆಯನ್ನು ಹೇಗೆ ಆವಾಹಿಸಿಕೊಂಡಿದ್ದಾರೋ ಹಾಗೆಯೇ ಅದನ್ನು ಕನ್ನಡಕ್ಕೆ ತರುವಲ್ಲಿ ಡಾ. ಮಲರ್‌ವಿಳಿಯವರ ಪ್ರಯತ್ನ ನಿಜಕ್ಕೂ ಚೇತೋಹಾರಿಯಾಗಿದೆ. ಬಹಳಷ್ಟು ಶ್ರಮ ಪಟ್ಟಿದ್ದಾರೆ ಎನ್ನುವುದಕ್ಕೆ ಅವರು ಕನ್ನಡದ ಈ ಕೃತಿಗಾಗಿ ವಿವಿಧ ಮೂಲಗಳಿಂದ ಪ್ರತಿಯೊಂದು ಶಬ್ದವನ್ನೂ ಸಂಗ್ರಹ ಮಾಡಿಕೊಂಡಿರುವ ವಿವರಗಳನ್ನು ನೋಡುವಾಗ ನಮಗೆ ತಿಳಿದು ಬರುತ್ತದೆ. ಒಬ್ಬ ಸಮರ್ಥ ಅನುವಾದಕರಾಗ ಬೇಕಾದರೆ, ತಾವು ಸಾಹಿತ್ಯಕೃಷಿ ಮಾಡುವ ಎರಡೂ ಭಾಷೆಗಳಲ್ಲಿ ಇರಬೇಕಾದ ಪಾಂಡಿತ್ಯವನ್ನು ಧಾರೆಯೆರೆಯಬೇಕಾಗುತ್ತದೆ. ಎರಡೂ ಸಂಸ್ಕೃತಿಗಳ ಬಗ್ಗೆ ಅಪಾರವಾದ ತಿಳುವಳಿಕೆ ಇರಬೇಕಾಗುತ್ತದೆ. ಈ ಕಾದಂಬರಿಯನ್ನು ಓದಿ ಮುಗಿಸುವಾಗ ಉಂಟಾಗುವ ಅನುಭವ ಎರಡು ಮಹಾ ಪಾಂಡಿತ್ಯಗಳ ಆಳ ನಮಗೆ ಅರಿವಾಗುತ್ತದೆ.

ವೈರಮುತ್ತು ಅವರು ಕಾದಂಬರಿಯ ಆರಂಭದಲ್ಲಿ ಹೇಳಿಕೊಳ್ಳುವ ಸಾಲುಗಳು ಇಂತಿವೆ:
“ಕಳ್ಳಿಗಾಡಿನ ಇತಿಹಾಸದ ಕೊನೆಯ ಅಧ್ಯಾಯವನ್ನು ಬೆಳಿಗ್ಗೆ ವರಾಹ ನದಿಯಲ್ಲಿ ಆರಂಭಿಸಿ ಸಂಜೆಯಲ್ಲಿ ವೈಗೈ ನದಿಯ ಅಣೆಕಟ್ಟಿನಲ್ಲಿ ಮುಗಿಸಿದೆ.
ಬರೆಯಲು ತೊಡಗುವ ಮುನ್ನ ಕಣ್ಣೀರು ಜಿನುಗುತ್ತಿರುವ ಕಂಗಳಿಗೆ ಹೇಳಿಕೊಂಡೆ.

“ಈ ಅಧ್ಯಾಯ ಬರೆದು ಮುಗಿಸುವ ಮುನ್ನ ನನ್ನ ಹೃದಯ ಒಡೆದು ಹೋಗದಿರಲಿ; ನನ್ನ ಕಂಗಳು ಕಣ್ಣೀರಿನಲ್ಲಿ ಸಂಕಟವನ್ನು ನೀಡಿದ್ದಿಲ್ಲ”
ನಾನು ರಚಿಸಿದ ಯಾವ ಸಾಹಿತ್ಯಕೃತಿಯೂ ನನ್ನನ್ನು ಹೀಗೆ ಕಂಗೆಡಿಸಿದುದಿಲ್ಲ. ನನ್ನ ಹೃದಯಕ್ಕೆ ಸಂಕಟವನ್ನು ನೀಡಿದ್ದಿಲ್ಲ.
ನನ್ನ ಮನ, ಒಡಲು, ಸಮಯ ಮುಂತಾದವುಗಳ ಮೇಲೆ ಇಷ್ಟೊಂದು ಅಧಿಕಾರ ಚಲಾಯಿಸಿದ್ದಿಲ್ಲ.

ದುಃಖದ ಗಂಟು-ಸಿಕ್ಕುಗಳು ಹೃದಯಕ್ಕೆ ಹೀಗೆ ತೀವ್ರವಾಗಿ ತಾಕಿದುದಿಲ್ಲ.

ಯಾವುದೇ ಕಾದಂಬರಿಕಾರರಿಗೆ ತಮ್ಮ ಕೃತಿಯ ಬಗ್ಗೆ ಇಷ್ಟೊಂದು ಉತ್ಕಟತೆಯ ವೇದನೆ ಆವರಿಸಿಕೊಳ್ಳುವುದು ಅಪರೂಪ. ಒಂದು ಅಪೂರ್ವ ಕೃತಿ ಸೃಷ್ಟಿಯಾಗುವಾಗಷ್ಟೆ ಆ ಉತ್ಕಟತೆ ಉಂಟಾಗುವುದು.

ನಾನು ಈ ಕಾದಂಬರಿಯನ್ನು ಓದಿ ಮುಗಿಸಿದಾಗ ಉತ್ಕಟವಾದ ವೇದನೆ ಅನುಭವಿಸಿದ್ದೆ. ಅದನ್ನು ಹೀಗೆಯೇ ಒಂದು ಕಡೆ ಟಿಪ್ಪಣಿಯನ್ನೂ ಮಾಡಿಟ್ಟುಕೊಂಡಿದ್ದೆ:

‘…ಕೊನೆಯ ಭಾಗವನ್ನು ಓದುತ್ತಿರುವಾಗ ಉಂಟಾಗುವ ಉದ್ವಿಗ್ನತೆ ಹೇಳ ತೀರದು. ವೈಗೈ ನನ್ನನ್ನೂ ತನ್ನೊಡಲಿನಲ್ಲಿ ಸೇರಿಸಿಕೊಂಡುಬಿಟ್ಟಿತೆ ಎಂದನಿಸುತ್ತಿತ್ತು. ನಾನೇ ಪೇಯತ್ತೇವರ್ ಆಗಿ ಮಾರ್ಪಾಡಾಗಿಬಿಟ್ಟ ಅನುಭವ. ಕಾದಂಬರಿಯುದ್ದಕ್ಕೂ ಜೀವನದ ಕಠಿಣವಾದ ಸಂಕಷ್ಟಗಳನ್ನೇ ಧೈರ್ಯವಾಗಿ ಎದುರಿಸಿಕೊಂಡು, ಎಳೆದಾಡಿಕೊಂಡೇ ಬಂದ ದೈತ್ಯ ಮನುಷ್ಯನ ಅಂತ್ಯ ಹೀಗಾದದ್ದು ಅಮಾನವೀಯ ವ್ಯವಸ್ಥೆಗೆ ಹಿಡಿದ ಕನ್ನಡಿ. ಮನುಷ್ಯರನ್ನು ಮನುಷ್ಯರ ವಿರುದ್ಧ ಎತ್ತಿಕಟ್ಟಿ ಪ್ರಜಾಪ್ರಭುತ್ವದ ಅಡಿಯಲ್ಲಿ ಕ್ರೂರ ವ್ಯವಸ್ಥೆ ನಡೆಸಿದ ಮಾರಣ ಹೋಮ.  ದುಃಖ ಉಮ್ಮಳಿಸಿ ಉಮ್ಮಳಿಸಿ ಬಂದು ಬಿಡುತ್ತದೆ’.

ಮಲರ್‌ವಿಳಿ ಅವರು ವಜ್ರದ ಮುತ್ತಿನ ಆಭರಣವೊಂದನ್ನು ಬಂಗಾರದ ಆವರಣದೊಳಗಿಟ್ಟು ಅಪ್ಪಟ ಕನ್ನಡದ ಗ್ರಾಮೀಣ ಸೊಗಡನ್ನು ಓದುಗರಿಗೆ ಉಣಬಡಿಸಿದ್ದಾರೆ. ಅವರು ಕನ್ನಡಕ್ಕೆ ದೊರಕಿಸಿಕೊಟ್ಟ ಅಪೂರ್ವ ಸಾಹಿತ್ಯ ಕೃತಿಯಿದು. ಓದುಗರ ಮನದಲ್ಲಿ ಬಹಳ ಕಾಲ ಉಳಿದುಬಿಡುವಂಥ ಕಠಿಣ ಪರಿಶ್ರಮ ಇದರಲ್ಲಿದೆ.

(ಕೃತಿ: ಕಳ್ಳಿಗಾಡಿನ ಇತಿಹಾಸ (ಕಾದಂಬರಿ), ತಮಿಳು ಮೂಲ:  ವೈರಮುತ್ತು, ಕನ್ನಡಕ್ಕೆ: ಡಾ. ಮಲರ್‌ವಿಳಿ, ಪ್ರಕಾಶಕರು: ಸಾಹಿತ್ಯ ಅಕಾಡೆಮಿ, ಪುಟಗಳು: 267, ಬೆಲೆ:  275/-)