ನಾವು ಬರೆದದ್ದನ್ನು ಯಾರಾದರೂ ಓದಲಿ ಅಂತ ಬಯಸುವ ಎಲ್ಲ ಕವಿಗಳು ಪರಂಪರೆಯನ್ನು ಹಾಗೆ ಭಾವಿಸಿ ಓದಲೇಬೇಕು. ಹಾಗೆ ನನ್ನನ್ನೂ ಯಾರೂ ಓದಬೇಕಿಲ್ಲ ಎನ್ನುವವರೂ ಪರಂಪರೆಯನ್ನು ಇನ್ನೂ ಗಂಭೀರವಾಗಿ ಓದಬೇಕು. ಯಾಕೆಂದರೆ ಈ ಇಬ್ಬರಿಗೂ ತಮ್ಮ ತಮ್ಮ ಬರಹಗಳನ್ನು ತಾವೇ ವಿಮರ್ಶಿಸಿಕೊಳ್ಳಲು ಇರುವ ಸಮರ್ಪಕವಾದ ಮಾನದಂಡ ಅದೊಂದೆ.
ಕೃಷ್ಣ ದೇವಾಂಗಮಠ ಅಂಕಣ

 

ಯಾವಾಗಲೂ ಪ್ರಶ್ನೆಗಳಂತೆ ತೋರುವ ಕೆಲವೊಂದಕ್ಕೆ ಸರಳವಾಗೇ ಉತ್ತರಿಸುವುದು ಬಹಳ ಸೂಕ್ತ. ಉತ್ತರವೂ ಮತ್ತೆ ಪ್ರಶ್ನೆಯೇ ಆಗಿ ಎದುರುಗೊಳ್ಳುವ ಪರಿ ನಿಜಕ್ಕೂ ಉತ್ತಮವಾದುದು ಆದರೂ ಅದು ಕೇಳುಗರಿಗೆ ಮತ್ತೂ ಉರಿಯುತ್ತಿರುವ ಅರಗಿನ ಕಂಬದ ಮೇಲೆ ಕೂತ ಹಂಸದಂತೆ ಕಾಣಬಾರದು. ಹಾಗೆ ಪ್ರಶ್ನೆಗೆ ಪ್ರಶ್ನೆಯೇ ಉತ್ತರವಾಗುವಿಕೆಯು ಅದೊಂದು ಆರೋಗ್ಯಪೂರ್ಣ ಚರ್ಚೆಯೂ ಅತಿಯಾದರೆ ರೇಜಿಗೆಯೂ ಆದೀತು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಸಮಸ್ಯೆಯನ್ನು ಜಟಿಲವಾಗಿಸದೆ ಬಗೆಹರಿಸುವುದೇ ಉತ್ತಮ. ಸಾಹಿತ್ಯ ಅಂತ ಬಂದೊಡನೆಯೇ ನಾವು ಮತ್ತೆ ಮತ್ತೆ ಮಾತಾಗುವುದು ಕಾವ್ಯದ ವಿಚಾರವಾಗಿಯೇ.

ಹೀಗೆ ಕಾವ್ಯದ ಕುರಿತು ಸಂವಹನ ಸಾಧ್ಯವಾದಾಗಲೇ ಹುಟ್ಟಿಕೊಳ್ಳುವ ಬಗೆ ಬಗೆಯ ಕಾವ್ಯದ ಸಾಧ್ಯಾಸಾಧ್ಯತೆಗಳ ಕುರಿತ ಪ್ರಶ್ನೆಗಳು, ಸರಳ ಸಂಕೀರ್ಣತೆಯ ಕುರಿತಾದವು, ಹೀಗೆ ಹಲವನ್ನು ಈ ಮೂಲಕ ವಿಮರ್ಶಿಸಿಕೊಳ್ಳಲು ಕವಿತೆಯ ಬಿಂದುವಿನಿಂದ ಅದರ ಪರಿಧಿಯ ಸಂಚಾರವನ್ನು ಅಂಗುಲದ ಹುಳದಂತೆ ಸಾಧ್ಯವಾಗಿಸಿಕೊಳ್ಳುತ್ತಿರುವೆ.

ಮೊದಮೊದಲು ಕವಿತೆ ಹುಟ್ಟುವ ಬಗೆಯೇ ಒಂದು ರೋಮಾಂಚನ ಅನುಭವ. ನಮ್ಮನ್ನು ಕಳೆದುಕೊಂಡು ಮತ್ತೆ ಪಡೆದುಕೊಳ್ಳುವ ಇದ್ದಂತೆಯೇ ಇದ್ದು ಇರದುದ, ಇರುವುದ, ಇರಲಾರದ್ದನ್ನೆಲ್ಲಾ ಪಡೆದಂತೆ ಪಡೆದು ನಿಬ್ಬೆರಗಾಗುವ ಆ ನಿಜದ ಜಾದು ಕವಿ ಮನಸ್ಸಿಗೆ ದಕ್ಕಿಬಿಡುತ್ತದೆ. ಆ ಜಾದೂವನ್ನು ಜನಕ್ಕೆ ಹತ್ತಿರವಾಗಿಸುತ್ತಾ ಆಗಿಸುತ್ತಾ ಇರಬಹುದಾದ ಈ ಪ್ರಯತ್ನದಲ್ಲೇ ಅದು ನಿಧಾನಕ್ಕೆ ಯಾಂತ್ರಿಕವಾದ ಹಾದಿ ಹಿಡಿದು ಸಾಗಿಬಿಡುತ್ತದೆ. ಇಲ್ಲಿಯೇ ಕವಿ ಜನಕ್ಕೆ ಹತ್ತಿರವಾಗುತ್ತಾ ತನ್ನಿಂದ ತಾನು ಕಳಚಿಕೊಳ್ಳುವ ಹಂತಕ್ಕೆ ಅರಿವಿಲ್ಲದೆ ಪ್ರಯಾಣ ಶುರುಮಾಡಿಬಿಟ್ಟಿರುತ್ತಾನೆ. ಈ ಅಪಾಯದಿಂದ ಕವಿ ಕವಿತ್ವವನ್ನು ಕಾಪಾಡಿಕೊಳ್ಳುವುದೇ ಆತನ ಅಸಲಿ ಕರ್ತವ್ಯ. ಹೀಗಿರುವ ಕವಿ ಮಾತ್ರ ಸಮಾಜದ ಜೊತೆ ನೈತಿಕವಾಗಿ ನಿಲ್ಲಬಲ್ಲ. ಹಾಗೆ ನಿಂತಾಗಲೇ ಆತ ತನ್ನ ಸ್ವಂತ ಆಲೋಚನೆಗಳನ್ನು ಯಾವುದೇ ಬಿಡೆ ಇಲ್ಲದೆ ಮಾತನಾಡಬಲ್ಲ. ಹಾಗೆ ಆಡುವ ಮಾತುಗಳೇ, ಬರಹಗಳೇ ಮಾದರಿಯಾಗಬಲ್ಲವು.


ಹೀಗಲ್ಲದೇ ಇದ್ದರೆ ಅವು ಖಂಡಿತ ಅದೇ ಗೆದ್ದಲು, ಜಂಗು ತಿಂದ ಯಾರದೋ ಯಾರೋ ಎಂದೋ ಆಡಿದ ಮಾತುಗಳನ್ನು ನಮ್ಮದೇ ಎಂದು ಭ್ರಮಿಸಿ ಸ್ವತಃ ನಮ್ಮನ್ನು ನಾವೇ ವಂಚಿಸಿಕೊಂಡು ಆಡುತ್ತಿರಬೇಕಾದೀತಷ್ಟೇ. ಹೀಗೆ ನಾವಲ್ಲದ ನಾವು ಎಷ್ಟು ದಿನ ಬದುಕಬಲ್ಲೆವು? ಪ್ರಾಣವಾಯು ತೀರಿಹೋಗಿ ಉಸಿರುಗಟ್ಟುವವರೆಗೆ ಅಷ್ಟೇ ಅಲ್ಲವೆ.

ಕವಿತೆ ಹುಟ್ಟುವುದಾ ಇಲ್ಲಾ ಕಟ್ಟುವುದಾ?

ಇದು ಹಿರಿಯರು ಮತ್ತು ನನ್ನದೇ ತಲೆಮಾರಿನ ಹಲವರು ಆಗಾಗ ತಮ್ಮ ಭಾಷಣಗಳಲ್ಲಿ, ಬರಹಗಳಲ್ಲಿ ಎತ್ತುವ ಪ್ರಶ್ನೆ. ನನಗೂ ಈ ಪ್ರಶ್ನೆ ಅನೇಕ ಬಾರಿ ಎದುರಾಗಿದೆ. ಒಬ್ಬ ಬರಹಗಾರನಿಗೆ ಈ ಪ್ರಶ್ನೆ ಯಾಕಾಗಿ ಮೂಡುತ್ತದೆ. ಆತ ಕವಿತೆ ಬರೆದದ್ದಾದರೆ ಇದರ ಉತ್ತರವನ್ನು ಸರಾಗವಾಗಿ ಆತನೇ ಖಚಿತವಾಗಿ ಕಂಡುಕೊಳ್ಳಬಲ್ಲ, ಅದಾಗ್ಯೂ ಯಾಕೆ ಇದು ಮತ್ತೆ ಮತ್ತೆ ತಲೆದೋರುತ್ತದೆ. ವೈಯಕ್ತಿಕವಾಗಿ ನನಗನ್ನಿಸೋದು ಕವಿತೆ ಹುಟ್ಟುವುದು ಅನ್ನುವ ಬಹಳ ಕವಿಗಳು ತಮ್ಮ ಬಗೆಗೆ ತಾವೇ ಹೆಮ್ಮೆ ಹೊಂದಿರುವ ಗುಣದವರೇ ಜಾಸ್ತಿ. ಯಾಕೆ ಈ ಮಾತನ್ನು ಹೇಳುತ್ತಿದ್ದೇನೆಂದರೆ ಹೀಗೆ ಹೇಳುವಾಗ ಅವರು ತಾವು ಸಹಜ ಕವಿ ಅನ್ನುವ ಅದೆಂತದೋ ಭಾವವನ್ನು ಒಳಗೊಳಗೆ ಆನಂದಿಸುತ್ತಿರುತ್ತಾರಾದ್ದರಿಂದ ಹೀಗೆ ಬಣ್ಣಿಸಬೇಕಾಯಿತು. ಇನ್ನು ಕವಿತೆ ಕಟ್ಟುವುದು ಅನ್ನುವವರಲ್ಲಿ ಅನೇಕರು ತಿಣುಕು ಕವಿಗಳು ಜಾಸ್ತಿ. ಅವರು ಶಬ್ಧಗಳ ಅರಮನೆಗೆ ಭಾವನೆಗಳ ಅರಿವೆ ತೊಡಿಸಿ ಕೆಲಸ ಮುಗಿಯಿತು ಎನ್ನುವ ಜಾಯಮಾನದವರು. ಇವರದು ದೈಹಿಕ ಕಸರತ್ತಿನ ಒಳಗೆಲ್ಲಾ ಪೊಳ್ಳಾದ ಶೋಕಿ ದೇಹದ ರಚನೆ.

ನಿಜವಾಗಿ ಲೋಕವನ್ನು ತನ್ನದೇ ದೃಷ್ಟಿ ಕೋನದಿಂದ ನೋಡುವ ಯಾವ ಕವಿಯೂ ಗ್ರಹಿಸಬಹುದಾದ ಸತ್ಯವೆಂದರೆ ಕವಿತೆಯ ಮೊದಲ ಭಾಗ ತಾನೇ ತಾನಾಗಿ ಹುಟ್ಟುವುದು. ಮುಂದೆ ಹೀಗೆ ಹುಟ್ಟಿದ ಭಾವವನ್ನು ಕವಿತೆಯ ಕೊನೆಯವರೆಗೆ ಆಶಯಕ್ಕನುಗುಣವಾಗಿ ಹೆಣಿಗೆಯ ರೀತಿಯಲ್ಲಿ ಕಟ್ಟುವುದೇ ಆಗಿದೆ ಅನ್ನುವುದು. ಎಲ್ಲೋ ಒಬ್ಬಂಟಿಯಾಗಿ ಯೋಚಿಸುತ್ತ ನಿಂತಾಗ, ಮಾತನಾಡುವಾಗ, ಘಟಿಸುತ್ತಿರುವ ಯಾವುದನ್ನೊ ನೋಡುತ್ತಿರುವಾಗ, ಅಥವಾ ಇವೆಲ್ಲಾ ಆಗಿ ಹೋಗಿರುವುದು ಒಮ್ಮೆಲೆ ನೆನಪಾದಾಗ ಬೇರೆ ಬೇರೆ ರೀತಿಯಲ್ಲಿ ಕವಿ ಅರ್ತಮುಖಿಯೋ, ಬಹಿರ್ಮುಖಿಯೋ ಅನ್ನುವ ಆಧಾರದ ಮೇಲೆ ಸ್ಪೂರ್ತಿಗೊಳ್ಳುತ್ತಾನೆ. ಆ ಸ್ಥಾನದಲ್ಲಿ ಕಥೆಗಾರನಿದ್ದರೆ ಕಥೆಯ ಎಳೆಯೋ, ಪಾತ್ರವೋ, ಮೂಡುತ್ತಿತ್ತು. ಕವಿತೆಯ ಪ್ರೀತಿಯ ಕಾರಣಕ್ಕಾಗಿ ಕವಿತೆಯ ಆಶಯವೂ ಸೇರಿ ಒಂದೆರಡು ಸಾಲು ತತ್ ಕ್ಷಣಕ್ಕೆ ಪ್ರಾಪ್ತಿಯಾಗಿಬಿಡುತ್ತವೆ. ಸದಾ ಜೀವಂತ ಕವಿಗೆ ಇದು ಅನುದಿನದ ಅನುಭವದ ಅಡುಗೆ. ರುಚಿಕಟ್ಟಾಗಿಯೂ, ತೇವವಾಗಿಯೂ, ಪೌಷ್ಟಿಕವಾಗಿಯೂ ಆಹಾರ ತಯಾರಿಸಿದರೆ ಅದು ಎಲ್ಲರಲ್ಲೂ ತನ್ನ ಸವಿಯನ್ನು ಕಾಪಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ.

ಎಂದೋ ಒಮ್ಮೆ ಯಾವುದೋ ಊರಿನ ಯಾವುದೋ ಅಂಗಡಿಯಲ್ಲಿ ತಿಂದ ರುಚಿ ನೆನಪಿಸಿಕೊಂಡು ಮತ್ತೆಂದೋ ಆ ಊರಿಗೆ ಹೋದರೂ ಅಲ್ಲಿಗೇ ಹುಡುಕಿಕೊಂಡು ಹೋಗುವಂತೆ, ಓದುಗ, ವಿಮರ್ಶಕ ಕವಿಯ ಬೆನ್ನಿಗೆ ನಿಂತುಬಿಡುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ಹೀಗೆ ನಿಮ್ಮ ಕವಿತೆಗಳೊಡನೆ ಸಂಬಂಧ ಹೊಂದಿದ ಎಲ್ಲಾ ಓದುಗರು ಕವಿಗೆ ನೇರವಾಗಿರುತ್ತಾರೆ. ಅಡುಗೆ ರುಚಿ ಕಳೆದುಕೊಂಡಿದೆ ಅಂದರೆ ಅವರ್ಯಾರು ಸಹಿಸಲ್ಲಾ. ಇನ್ನೂ ಆತ್ಮಕ್ಕೆ ಹತ್ತಿರವಾಗುವಂತೆಯೋ ಇಲ್ಲಾ ಮತ್ತೆ ಮುಂಚಿನಂತೆಯೋ ಬರೆಯುವಂತೆ ನಿಮ್ಮನ್ನು ಪೀಡಿಸಿ ನಿಮ್ಮೊಳಗೆ ನೀವು ಅಣಿಯಾಗಲು ಪ್ರೇರೇಪಿಸುತ್ತಾರೆ. ಇಂಥ ಓದುಗರಿಂದಲೂ ಕವಿ ಯಾವಾಗಲೂ ಜೀವಂತವಾಗಿರಲು ಸಾಧ್ಯ.

ಸರಳವಾಗಿ ಬರೆಯುವುದು ತುಂಬಾ ಕಷ್ಟ ಅನ್ನುವ ಮಾತನ್ನು ಮೇಲಿಂದ ಮೇಲೆ ಆಡುತ್ತಿರುತ್ತಾರೆ. ಅದೇನೆ ಇರಲಿ ಕವಿತೆ ಬರೆಯಲು ಪ್ರಾರಂಭಿಸಿದ ಪ್ರತಿ ಓರ್ವರೂ ಸರಳವಾಗಿಯೇ ಬರೆಯಲು ಪ್ರಾರಂಭಿಸುವುದು. ಹಾಗಾಗಿ ಸರಳವಾಗಿ ಬರೆಯುವುದು ಎಂದಿಗೂ ಕಷ್ಟವಲ್ಲ ಅನ್ನುವುದಕ್ಕೆ ಯಾವ ಉದಾಹರಣೆಗಳೂ ಬೇಕಿಲ್ಲವೇನೋ. ಸಂಕೀರ್ಣವಾಗಿ ಬರೆಯಲು ದೀರ್ಘವಾದ ಕಾವ್ಯದ ಒಡನಾಟದ ಅಗತ್ಯವಿದೆ. ಈ ಸಂಕೀರ್ಣತೆ ಅಂದರೆ ಏನು ಅನ್ನುವುದೇ ಬಹುತೇಕರಿಗೆ ಸಂಶೋಧನೆಯ ಅಧ್ಯಯನವಿದ್ದಂತಿದೆ. ಪ್ರತೀ ಲೇಖಕನೂ ಭಿನ್ನ ಹಾದಿಯಲ್ಲಿ ಸಾಗುವುದಕ್ಕಾಗಿಯೇ ಬರಹಗಳುದ್ದಕ್ಕೂ ತನ್ನದೇ ಆದ ಹೊಸ ರೂಪಕಗಳನ್ನು ಸೃಷ್ಟಿಸುತ್ತಿರುತ್ತಾನೆ. ಪ್ರತಿಮೆಗಳನ್ನು ತಂದು ಕಾವ್ಯವನ್ನು ಸಂಕೀರ್ಣತೆಗೆ ಒಳಪಡಿಸುತ್ತಿರುತ್ತಾನೆ. ರೂಪಕಗಳನ್ನು ಸೃಜಿಸಲು ಕವಿಗೆ ಅಪಾರವಾದ ಓದು, ತಾಳ್ಮೆ, ಶ್ರದ್ಧೆ, ಸಮಗ್ರ ನೋಟದ ಅವಶ್ಯಕತೆ ಇದೆ. ಈ ರೂಪಕಗಳನ್ನು ಬಗೆಯಲು ಸಾಧ್ಯವಾದವರಿಗೆ ಮಾತ್ರವೇ ಆ ಕಾವ್ಯ ಕಲ್ಲುಸಕ್ಕರೆ. ಬರಿಯ ರೂಪಕಗಳನ್ನು ಸೃಜಿಸುವುದಷ್ಟೇ ಅಲ್ಲ ಅವುಗಳ ನಿರ್ವಹಣೆಯೂ ಅಷ್ಟೇ ಪ್ರಧಾನವಾದುದು. ನಾನು ಕಂಡಂತೆಯೇ ಹಲವರು ರೂಪಕಗಳಲ್ಲದ ರೂಪಕಗಳನ್ನು ಕವಿತೆಯಲ್ಲಿ ಕಾಣಿಸುತ್ತಾರೆ. ಅವು ಕವಿತೆಗೆ ಸಂಭಂದವಿಲ್ಲದೇ ನುಸುಳಿರುತ್ತವೆ. ಬಹಳ ಬಾರಿ ಅವು ಏನನ್ನೂ ಸೂಚಿಸುತ್ತಿರುವುದೇ ಇಲ್ಲ. ಕವಿ ಕಾವ್ಯದ ಆಶಯಕ್ಕೆ ಸಲ್ಲುವಂತೆ ಎಷ್ಟು ಸಶಕ್ತ ರೂಪಕಗಳನ್ನು ಸಂಕಲಿಸಬಲ್ಲನೋ ಆತ ಕಾವ್ಯದಲ್ಲಿ ಅಷ್ಟು ಪ್ರಖರನಾಗಬಲ್ಲ. ಹಾಗಾಗಿಯೇ ನಮಗೆ ಇಂದಿಗೂ ಅಲ್ಲಮ, ಬೇಂದ್ರೆ, ಅಡಿಗರು ಇನ್ನು ಮುಂತಾದವರು ನಮ್ಮ ಓದನ್ನು ಕೆಣುಕುತ್ತಲೇ ಓದಿಸಿಕೊಳ್ಳುತ್ತಾರೆ. ಹಾಗಾಗಿ ಸರಳವಾಗಿ ಬರೆಯುವುದು ಕಷ್ಟ ಅಂತ ಹೇಳುವುದರ ಬದಲಾಗಿ ಸರಳವಾಗಿ ಬರೆದು ಸಂಕೀರ್ಣತೆಯನ್ನು ಕಾಣಿಸುವುದು ತುಸು ಕಷ್ಟ ಎಂದರಾಯಿತು.

ಪರಂಪರೆಯ ಓದಿನ ಅವಶ್ಯಕತೆ ಏನು?

ನಾವು ಬರೆದದ್ದನ್ನು ಯಾರಾದರೂ ಓದಲಿ ಅಂತ ಬಯಸುವ ಎಲ್ಲ ಕವಿಗಳು ಪರಂಪರೆಯನ್ನು ಹಾಗೆ ಭಾವಿಸಿ ಓದಲೇಬೇಕು. ಹಾಗೆ ನನ್ನನ್ನೂ ಯಾರೂ ಓದಬೇಕಿಲ್ಲ ಎನ್ನುವವರೂ ಪರಂಪರೆಯನ್ನು ಇನ್ನೂ ಗಂಭೀರವಾಗಿ ಓದಬೇಕು. ಯಾಕೆಂದರೆ ಈ ಇಬ್ಬರಿಗೂ ತಮ್ಮ ತಮ್ಮ ಬರಹಗಳನ್ನು ತಾವೇ ವಿಮರ್ಶಿಸಿಕೊಳ್ಳಲು ಇರುವ ಸಮರ್ಪಕವಾದ ಮಾನದಂಡ ಅದೊಂದೆ. ತಾನು ಬರೆದದ್ದನ್ನು ಹಿಂದೆ ಯಾರು ಯಾರು ಇದೇ ಮಾದರಿಯಲ್ಲಿ ದಾಖಲಿಸಿದ್ದಾರೆ ಅನ್ನುವ ಕನಿಷ್ಟ ಪ್ರಜ್ಞೆಗಾದರೂ ಪರಂಪರೆಯ ಓದು ಅತ್ಯಗತ್ಯವಾದದ್ದು. ಯಾರ ಮಾತಿಗೂ ಕಿವಿ ಕೊಡದೆ ಯಾವುದು ಮೌಲಿಕವಾದದ್ದು ಯಾವುದು ಅಲ್ಲ ಅನ್ನುವುದನ್ನು ನೀವೆ ಖುದ್ದಾಗಿ ಮನಗಾಣಬಲ್ಲಿರಿ. ವಿವಿಧ ಸಾಹಿತ್ಯ ಕಾಲದಿಂದ ಕಾಲಕ್ಕೆ ಬದಲಾದ ರೀತಿ, ಪ್ರಕಾರಗಳಲ್ಲಿ ತನ್ನನ್ನು ತಾನು ಹೊಸದಾಗಿ ರೂಪಿಸಿಕೊಂಡ ಬಗೆ, ವಚನಗಳು – ದಾಸರ ಪದಗಳಲ್ಲಿ, ದಾಸರಪದಗಳು – ತತ್ವಪದಕಾರರಲ್ಲಿ ಹೇಗೆ ಮುಂದುವರೆಯುತ್ತಾ ಬಂದಿವೆ. ಗುರುತಿಸುವಿಕೆಗಾಗಿ ಹೆಸರಿಟ್ಟ ನವೋದಯ, ಪ್ರಗತಿಶೀಲ, ಬಂಡಾಯ, ಮಹಿಳಾ, ನವ್ಯ, ನವ್ಯೋತ್ತರ ಇವುಗಳ ಸವಿವರ ಪರಿಚಯ, ಪಂಪನಾದಿಯಾಗಿ ಇಂದಿನ ವರೆಗಿನ ಕವಿಗಳ ಮತ್ತು ಅವರು ಇಲ್ಲಿಯವರೆಗೂ ಸೃಜಿಸಿದ ಮೇರು ಕೃತಿಗಳ ತಿಳಿವು ಎಲ್ಲವೂ ಸಂಕ್ಷಿಪ್ತವಾಗಿಯಾದರೂ ತಿಳಿದಿರಬೇಕಾಗುತ್ತವೆ. ಹೇಗೆ ಇತಿಹಾಸ ಗೊತ್ತಿಲ್ಲದವ ಇತಿಹಾಸ ಸೃಷ್ಟಿಸಲಾರನೋ ಹಾಗೆಯೇ ಪರಂಪರೆ ತಿಳಿಯದವನು ತನ್ನ ಪರಂಪರೆಗೆ ಜೊತೆಯಾಗಿ ಮುನ್ನಡೆಸಲಾರ. ಯಾವುದು ಹೇಗೆ ತಪ್ಪು ಅನ್ನುವುದನ್ನು ಸರಿಯಾಗಿ ತಿಳಿದಾಗಲೇ ಅದನ್ನು ಸರಿಪಡಿಸಿಕೊಳ್ಳಲು ಸಾಧ್ಯ ಅನ್ನುವುದನ್ನು ಮರೆಯಕೂಡದು. ಮುರಿದು ಕಟ್ಟುವುದು ಅನ್ನುವುದು ಹೀಗೆ ಪರಂಪರೆಯ ಆಳ ಅರಿವು ಇರುವವರಿಂದಲೇ ಸಾಧ್ಯವಾಗಬಹುದಾದದ್ದು.

ಕವಿತೆಯ ಹುಟ್ಟು, ಬೆಳವಣಿಗೆ ಅದರ ಹಿಂದಿನ ಅಧ್ಯಯನಶೀಲತೆಯನ್ನು ತಕ್ಕಮಟ್ಟಿಗೆ ತಿಳಿದಂತಾಯ್ತು ಅಂತಾದರೆ ಸ್ವಲ್ಪ ಮುಂದುವರಿದು ಚರ್ಚಿಸಬಹುದೆನ್ನಿಸುತ್ತದೆ.

ಯಾವುದು ಕವಿತೆ ?

ನನಗೂ ಗೊತ್ತಿಲ್ಲ ಕವಿತೆ ಯಾವುದು ಹೇಗಿರುತ್ತದೆ. ಬರಹ ಕಣ್ಣ ಮುಂದಿದ್ದರೆ ಅಥವಾ ಕಿವಿಗೆ ಕೇಳಿದರೆ ಅದು ಕವಿತೆ ಆಗಿದೆಯೋ ಆಗಬೇಕಿತ್ತೋ ಆಗಿಲ್ಲವೋ ಅನ್ನುವುದನ್ನು ನಿರ್ಧರಿಸಬಹುದು. ಒಂದು ಕವಿತೆ ಗಪದ್ಯವಾಗಿದ್ದರೆ ಅಲ್ಲಿ ಹೆಚ್ಚು ವಿವರಣೆ ಕಾಣಿಸುತ್ತಾ ಹೋದರೆ ಅದು ಕಥೆಯಾಗಿದೆ ಅಂತರ್ಥ; ಆದರೆ ಕಟ್ಟಿಕೊಟ್ಟ ಸಂವೇದನೆಯಲ್ಲಿ ಮಾತ್ರ ಅದು ಕವಿತೆಯಾಗಿ ಗೆದ್ದಿದೆ ಎಂದು ಭಾವಿಸಬಹುದು. ಕನ್ನಡದಲ್ಲಿ ಗಪದ್ಯಗಳನ್ನು ಬಹುತೇಕರು ಬರೆದಿದ್ದಾರೆ ಆದರೆ ಆ ಪ್ರಕಾರದಲ್ಲಿ ತಮ್ಮ ಇರುವಿಕೆಯನ್ನು ಕಾಣಿಸಿದವರಲ್ಲಿ ಪ್ರಮುಖರು ಅಂದರೆ ಎ.ಕೆ. ರಾಮಾನುಜನ್ ಮತ್ತು ಸುರಂ ಎಕ್ಕುಂಡಿ ಇಬ್ಬರೇ. ಇವರನ್ನೂ ನಕಲು ಮಾಡಲು ಹೋಗಿ ನಪಾಸಾದವರ ಯಾದಿ ಬಹಳ ಹಿರಿದಿದೆ.

ಇನ್ನು ಪದ್ಯವಾಗಿದ್ದರೆ ಹೊಸ ನುಡಿಗಟ್ಟುಗಳಿರಬೇಕು, ಭಾಷೆ ಹದವಾಗಿರಬೇಕು, ಪ್ರತಿಮೆ ರೂಪಕಗಳು ದಕ್ಕಿರಬೇಕು, ಹೊಸ ಪದಗಳ ಶೋಧವಿರಬೇಕು, ಬಂಧವಿರಬೇಕು, ಅನುಭವ ಜನ್ಯ ಮತ್ತು ಕಲ್ಪನೆ ಸೇರಿ ಬೆರೆತಿರಬೇಕು.

ಬರೀ ಅನುಭವ ಜನ್ಯವಾದದ್ದು ಬರೀ ಅನುಭವವನ್ನು ಮಾತ್ರ ದಾಖಲಿಸುತ್ತದೆ. ಅನುಭವದ ವಿಸ್ತಾರವನ್ನು ಒಂದು ಕ್ರಮಕ್ಕೆ ಒಗ್ಗಿಸಿ ಅದನ್ನು ಕಾವ್ಯಾನುಭವವಾಗಿ ಕಟ್ಟಿಕೊಡುವುದರ ಮೂಲಕ ಅಭಿವ್ಯಕ್ತಿಸುತ್ತಾನೋ ಆಗ ಮಾತ್ರ ಅದು ಕವಿತೆಯಾಗುತ್ತದೆ ಬರಿದೇ ಅನುಭವವಾಗಿರುವುದಿಲ್ಲ. ಇಷ್ಟೆಲ್ಲಾ ಇದ್ದರೂ ಅದು ಪ್ರಾಥಮಿಕ ಹಂತದ ಭಾಗಶಃ ಕವಿತೆ ಮಾತ್ರ.

ಮುಂದುವರೆದು ಕವಿತೆಯ ತಾತ್ವಿಕತೆ, ದರ್ಶನ ಮತ್ತು ಕಾಣ್ಕೆಗಳು ಕವಿಯ ಒಟ್ಟು ದಿಗ್ದರ್ಶನವನ್ನು ಕಂಡುಕೊಳ್ಳಲು ಸಹಾಯಕವಾಗುತ್ತವೆ. ಇಷ್ಟೆಲ್ಲಾ ಇದ್ದರೂ ಕವಿತೆ ಅಪೂರ್ಣ ಕವಿತೆಯ ನಿಜದ ಆತ್ಮ ಅದರ ಜೀವಂತಿಕೆ.

ನಾನಂತು ಯಾರ ಕವಿತೆ ಕೈಗೆ ಸಿಕ್ಕರೂ ಅದು ಈ ಎಲ್ಲಾ ಅಂಶಗಳನ್ನು ಒಳಗೊಂಡು ಅಥವಾ ಕೆಲವಾದರೂ ಒಳಗೊಂಡು ಇಲ್ಲವೇ ಹಾಗೇ ಕವಿತೆಯಾಗಿದೆಯೇ ಎಂದೇ ಗಮನಿಸುತ್ತೇನೆ. ಯಾವಾಗಲೂ ಎಲ್ಲವೂ ಸಾರ್ವಕಾಲಿಕವೇ ಆಗಿ ಹುಟ್ಟಲಿ ಅನ್ನುವ ಮಹತ್ವಾಕಾಂಕ್ಷೆಯವನು ನಾನು. ನೀವು ಏನನ್ನೆ ಬರೆಯಿರಿ ಕಾವ್ಯ ಕಥನ ಗದ್ಯ ಹಾಸ್ಯ ಯಾವುದಾದರೂ ಸರಿ ಅವುಗಳ ಕಾಲಾತೀತದ ನೆಲೆಯೇ ಸಾರ್ವಕಾಲಿಕತೆ. ನೀವು ಹಾಗೆ ಬರೆಯದಿದ್ದರೆ ನಮ್ಮ ಸಾಹಿತ್ಯದಲ್ಲಿ ಗುರುತಿಸಬಹುದಾದಂತೆ ಮೊದಲ, ಎರಡನೇ, ಮೂರನೇ ದರ್ಜೆಯ ಕವಿಗಳ ಪಂಕ್ತಿಯಲ್ಲಿ ನಿಮ್ಮನ್ನು ಮೂರನೇ ದರ್ಜೆಯ ಕವಿಯಾಗಿ ಗುರುತಿಸಬಹುದು. (ಕೀಟ್ಸ್ ನ ಕಥೆ ಬೇರೆ) ಹಾಗೆ ಗುರುತಿಸಿಕೊಳ್ಳಲು ಯಾವ ಕವಿಗೆ ತಾನೇ ಇಷ್ಟವಿರುತ್ತದೆ. ಕವಿ ಯಾವಾಗಲೂ ಗುಣಮಟ್ಟದಲ್ಲಿ ಮೊದಲ ಸಾಲಿನಲ್ಲಿರಲೇಬೇಕು ಎಂದು ನಾನು ಅಂದುಕೊಳ್ಳುವುದು.

ಕವಿತೆಯು ಮಮ್ಮಟ ಹೇಳಿದಂತೆಯೂ, ಎಲಿಯೆಟ್, ಎಜ್ರಾ ಪೌಂಡ್ ಹೇಳಿದಂತೆಯೂ, ಪುತಿನ, ಕುವೆಂಪು ಹೇಳಿದಂತೆಯೂ ಇದ್ದು ನೀವು ಕಂಡುಕೊಂಡ ಸತ್ಯವಾಗಿರಬೇಕು.

ಹಾಗೆ ನಾನು ಕಂಡುಕೊಂಡ ಸತ್ಯ ಕವಿತೆಯೆಂದರೆ “ಎಲ್ಲವೂ ಹೌದು ಮತ್ತು ಏನೂ ಅಲ್ಲ”