ನಾನು ದಾರಿ ತಡವರಿಸುತ್ತ ಇದ್ದೇನೆ. ಈ ಅನುವಾದ ಮಾಡುತ್ತ ಇರುವಾಗ, ಇದುವರೆಗೆ ಅನುವಾದದ ಕುರಿತು ನಾನು ಅರಿತುಕೊಂಡಿದ್ದೇನೆ ಎನ್ನುವುದೆಲ್ಲವೂ ಅಮಾನತಿನಲ್ಲಿರುತ್ತದೆ. ಇಂಗ್ಲಿಷ್‍ ನಲ್ಲಿ ಮಂತ್ರಗಳಿಲ್ಲ. ಇಂಗ್ಲಿಷ್ ಯಾವತ್ತೂ ಮಂತ್ರಿಸುವ ಭಾಷೆಯಾಗಿರಲಿಲ್ಲ, ಆದ್ದರಿಂದ ಬಳಸಬಹುದಾದ ಅಥವಾ ವಿಸ್ತರಿಸಬಹುದಾದ ಪರಂಪರೆಯಿಲ್ಲ. ನಾವು ಹಿಂದೆ ಮಾತಾಡಿದ ಮೌಖಿಕ ಪರಂಪರೆಯ ಮೇಲೆ ಕೆಲಸ ಮಾಡಬೇಕೆಂಬ ನನ್ನ ದೀರ್ಘಕಾಲಿಕ ಬಯಕೆಯಿದೆ, ಹಾಗೂ ಈ ಪರಂಪರೆ ಈಗ ನಾಶವಾಗುತ್ತಿರುವ ಸಂಸ್ಕೃತಿಯ ಭಾಗವಾಗಿದೆ ಎನ್ನುವ ತುರ್ತಾದ ಅನಿಸಿಕೆ.
ಈಚೆಗೆ ತೀರಿಕೊಂಡ ಅಮೇರಿಕಾದ ಕವಿ ಡಬ್ಲ್ಯೂ. ಎಸ್. ಮರ್ವಿನ್ ಜೊತೆ ಎಡ್ವರ್ಡ್ ಹರ್ಷ್ ನಡೆಸಿದ್ದ ಸಂದರ್ಶನವನ್ನು ಕೆ.ವಿ. ತಿರುಮಲೇಶ್ ಕನ್ನಡಕ್ಕೆ ಅನುವಾದಿಸಿದ್ದಾರೆ

 

ಅಮೇರಿಕದಲ್ಲಿ ವಿದ್ಯಾಭ್ಯಾಸ ಮುಗಿಸಿ ಯುರೋಪಿನಲ್ಲಿ ಕೆಲವು ವರ್ಷ ಸುತ್ತಾಡಿದ ಮರ್ವಿನ್ 1970ನೇ ದಶಕದ ಮಧ್ಯ ಭಾಗದಿಂದ ಹವಾಯಿಯಲ್ಲಿ ಮನೆಮಾಡಿಕೊಂಡು ಇಳಿವಯಸ್ಸಿನಲ್ಲೂ ಸಾಹಿತ್ಯ ಮತ್ತು ಕೃಷಿಯಲ್ಲಿ ತೊಡಗಿಕೊಂಡು ತನ್ನ ನಂಬಿಕೆಗೆ ಸರಿಯಾಗಿ ಜೀವನ ನಡೆಸುತ್ತ ಇದ್ದ. .

ಸಂದರ್ಶಕ: ಕಳೆದ 34 ವರ್ಷಗಳಲ್ಲಿ ನೀವು 12 ಕವನ ಸಂಕಲನಗಳನ್ನು ಪ್ರಕಟಿಸಿದ್ದೀರಿ, ಮತ್ತು 12 ಅನುವಾದ ಪುಸ್ತಕಗಳನ್ನು ಕೂಡಾ. ಆದರೂ ಈಚೆಗೆ ನೀವು ಹೇಳಿದಿರಿ, `ಬರೆಯುವುದೆಂದರೆ ನನಗೇನೂ ಗೊತ್ತಿರದ ಸಂಗತಿ’ ಎಂಬುದಾಗಿ. ಇದು ಹೇಗೆ ಸಾಧ್ಯ?

ಡಬ್ಲ್ಯೂ. ಎಚ್. ಮರ್ವಿನ್: ನನಗೆ ಮುಖ್ಯವೆನಿಸುವ ರೀತಿಯ ಬರವಣಿಗೆ ಏನೆಂದು ಗೊತ್ತಾಗುವಂಥದಲ್ಲ. ಅದು ನನಗೆ ಗೊತ್ತಿರದ ಸಂಗತಿಗಳಿಂದ ನಿರಂತರ ಹುಟ್ಟಿಬರುತ್ತದೆ, ಗೊತ್ತಿರುವ ಸಂಗತಿಗಳಿಂದಲ್ಲ. ನಾನು ಮುಂದುವರಿದಂತೆ ಅದು ಕಾಣಿಸಿಕೊಳ್ಳುವುದು, ಒಂದು ರೀತಿಯಲ್ಲಿ. ಕಲಿತುದರಲ್ಲಿ ಹೆಚ್ಚಿನವೂ ಚಟಗಳಾಗಿರುತ್ತವೆ. ಪ್ರತಿ ಸಲವೂ ಪ್ರಾರಂಭವೇ.

ಸಂದರ್ಶಕ: ನೀವು ಪ್ರತಿ ದಿನ ಬರೀತಾ ಇರ್ತೀರಾ? ಎಝ್ರಾ ಪೌಂಡ್ ನಿಮಗೆ ದಿನಾ 75 ಸಾಲು ಬರೆಯಲು ಹೇಳಿದ್ದರು. ಅವರ ಸಲಹೆ ಪಾಲಿಸುತ್ತಿದ್ದೀರಾ?

ಮರ್ವಿನ್: ನಾನು ದಿನಾ 75 ಸಾಲು ಬರೆದಿಲ್ಲ, ಆದರೆ ವರ್ಷಾನುಗಟ್ಟಳೆ ಖಾಲಿ ಹಾಳೆ ನೋಡುತ್ತ ಕುಳ್ಳಿರಲು ಯತ್ನಿಸಿದ್ದೇನೆ. ಅದು ಮನುಷ್ಯನನ್ನು ಪೆಡಂಬೂತ ಮಾಡಬಲ್ಲುದು.

ಸಂದರ್ಶಕ: ಅದು ಹೇಗೆ?

ಮರ್ವಿನ್: ಬೇರೆ ಸಂಗತಿಗಳನ್ನು ದಾರಿಯಿಂದ ನೀವು ಆಚೆಗೆ ತಳ್ಳುತ್ತಲೇ ಇರುತ್ತೀರಿ, ಯಾವುದೇ ಕರುಣೆಯಿಲ್ಲದೆ. ಈ ಬರೆಯುವ ಕ್ರಿಯೆಯಿದೆಯಲ್ಲ, ಯಾವುದೇ ವಾಗ್ದಾನವೂ ಅಂಟಿಕೊಂಡಿಲ್ಲದ ಅದಕ್ಕೊಂದು ನಿರುದ್ದಿಶ್ಯ ಆದರೆ ನಿರಂತರ ಪ್ರಾಮುಖ್ಯತೆ ಪ್ರಾಪ್ತವಾಗಿರುತ್ತದೆ.

ಸಂದರ್ಶಕ: ನಿಮಗೆ ತುಂಬಾ ಬೆಳವಣಿಗೆಗೊಂಡ ಪರಿಸರ ವೈಜ್ಞಾನಿಕ ಮತ್ತು ಪರ್ಯಾವರಣ ಪ್ರಜ್ಞೆಯಿದೆ. ಅದು ಯಾವಾಗ ಮೊದಲಾಯಿತು?

ಮರ್ವಿನ್: ಅದು ಯಾವಾಗ ಹೇಗೆ ಮೊದಲಾಯಿತು ಎಂದು ತಿಳಿಯಲು ನಾನು ಪದೇ ಪದೇ ಪ್ರಯತ್ನಿಸಿದ್ದೇನೆ. ಪ್ರಾಯಶಃ ಹೇಳುವುದು ಕಷ್ಟ. ನಮ್ಮ ಹೆಚ್ಚಿನ ನಿರ್ಣಯಗಳಿಗೆ ಮೊದಲೇ ಅಂಥ ಮನೋಧರ್ಮಗಳು ಬರುತ್ತವೆ ಎಂದು ನನಗನಿಸುತ್ತದೆ. ಆದರೆ ಎರಡು ವಿಷಯಗಳು ನನಗೆ ನೆನಪಿವೆ. ಮೊದಲನೆಯದಾಗಿ, ದಮನತೆಗೆ ಒಳಗಾದ ಬಾಲ್ಯ ನನ್ನದು. ಯಾರಿಗೂ ಇಲ್ಲವೆನ್ನದ, ಯಾವುದನ್ನೂ ಮೆಚ್ಚೆನೆನ್ನದ, ಯಾರಿಗೂ ತಿರುಗಿ ನುಡಿಯದ ರೀತಿಯಲ್ಲಿ ನನ್ನನ್ನು ಬೆಳೆಸಿದ್ದು. ಆದರೆ ಒಂದು ದಿನ—ಆಗ ನನ್ನ ವಯಸ್ಸು ಮೂರು ವರ್ಷ ಇದ್ದಿರಬಹುದು—ಇಬ್ಬರು ವ್ಯಕ್ತಿಗಳು ಬಂದು ನಮ್ಮ ಹಿತ್ತಿಲ ಮರಗಳ ಕೊಂಬೆಗಳನ್ನು ಸವರತೊಡಗಿದರು, ಮತ್ತು ನನಗೆ ಥಟ್ಟನೇ ಸಿಟ್ಟು ಬಂದು ನಾನು ಹೋಗಿ ಅವರನ್ನು ಬಡಿಯತೊಡಗಿದೆ. ನನ್ನ ಈ ನಿಜವಾದ ಸಿಟ್ಟು ಮಂದಿಗೆ ಎಷ್ಟು ತಾಕಿತೆಂದರೆ, ಅಪ್ಪ ನನ್ನನ್ನು ಅದಕ್ಕಾಗಿ ಎಂದೂ ಶಿಕ್ಷಿಸಲಿಲ್ಲ. ಇನ್ನು ಎರಡನೆಯ ಸಂಗತಿ: ಅಮೇರಿಕನ್ ಇಂಡಿಯನರ ಕುರಿತಾದ ಪುಸ್ತಕವೊಂದರಲ್ಲಿದ್ದ ಜಲವರ್ಣದ ಚಿತ್ರಗಳು ನನ್ನ ಮನಸ್ಸನ್ನು ಎಷ್ಟು ತಾಕಿದುವೆಂದರೆ, ಅವುಗಳ ಶೀರ್ಷಿಕೆಗಳನ್ನು ಓದಲು ನಾನು ಕಲಿತುಕೊಂಡೆ. ಆ ಇಂಡಿಯನರು ಬದುಕಿರುವ ಜಾಗ ಮತ್ತು ರೀತಿ ನನಗೆ ತುಂಬಾ ಮಹತ್ವದ್ದು ಎನಿಸಿತು. ಆದ್ದರಿಂದ ಓದಿನ ಕಲಿಕೆಯನ್ನು—ವಿಲಕ್ಷಣವೆಂದರೆ ಇಂಗ್ಲಿಷ್ ಓದಿನ ಕಲಿಕೆಯನ್ನು—ನಾನು ಇಂಡಿಯನರ ಕುರಿತು ತಿಳಿದುಕೊಳ್ಳುವ ಬಯಕೆಯೊಂದಿಗೆ ಮಿಳಾಯಿಸಿದ್ದು. ನಾನಿನ್ನೂ ಆ ದಿಕ್ಕಿನ ಬೆಳವಣಿಗೆಯಲ್ಲೇ ಇದ್ದೇನೆ. ಅದನ್ನು ಮೀರಿ ಬೆಳೆದಿದ್ದೇನೆ ಎನಿಸುವುದಿಲ್ಲ. ಆ ಇಂಡಿಯನರು ನನಗೆ ಹೆಚ್ಚು ವಿಶಾಲವೂ ಸುಸಂಗತವೂ ಆದ ಜಗತ್ತನ್ನು ಪ್ರತಿನಿಧೀಕರಿಸುವಂತೆ ಕಾಣಿಸತೊಡಗಿದರು—ಎಂದರೆ ನನ್ನ ಸುತ್ತಲಿನ ಎಲ್ಲರೂ ಪ್ರಶ್ನಾತೀತವಾಗಿ ತೆಗೆದುಕೊಂಡ ಜಗತ್ತಿಗಿಂತ ಹೆಚ್ಚು. ನಾನು ನ್ಯೂಯಾರ್ಕ್ ಸಿಟಿಯ ಕಣ್ಣಳತೆಯಲ್ಲಿ ಬೆಳೆದೆ, ಮತ್ತು ಏನು ಮಾಡಬೇಕೆಂದಿದ್ದೀಯಾ ಎಂದು ಯಾರಾದರೂ ಕೇಳಿದಾಗಲೆಲ್ಲಾ ಹಳ್ಳಿಗೆ ಹೋಗುತ್ತೇನೆ ಎನ್ನುತ್ತಿದ್ದೆ. ನಾನು ತುಂಬಾ ಚಿಕ್ಕವನಿದ್ದಾಗ ನನ್ನ ಹಿರಿಯರು ನನ್ನನ್ನು ಹಳ್ಳಿಗೆ ಕರೆದುಕೊಂಡು ಹೋದುದಿತ್ತು, ಮತ್ತು ಅಲ್ಲಿಗೆ ಮರಳುವುದು ಯಾವಾಗಲೂ ನನ್ನ ಆಸೆಯಾಗಿತ್ತು. ಆ ಆಸೆಯ ನಿರ್ದಿಷ್ಟ ಮೂಲ ನನಗೆ ಗೊತ್ತಿರಲಿಲ್ಲ, ಆದರೆ ಅದು ಬಹಳ ಹಿಂದಕ್ಕೆ ಹೋಗುತ್ತದೆ ಎಂದು ಮಾತ್ರ ಗೊತ್ತಿತ್ತು.

`ಹಳ್ಳಿ’ಯ ಕುರಿತಾಗಿ ಹಾಗೆ ಭಾವಿಸುವುದು ನನ್ನನ್ನು ನನ್ನ ಹಲವಾರು ಸಮಕಾಲೀನರಿಗೆ ವಿಲಕ್ಷಣವೆನಿಸುವ ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ, ಆದರೆ ನಮ್ಮ ಈ ಮನುಷ್ಯವರ್ಗದ ಅವಸ್ಥೆ ಹೆಚ್ಚೆಚ್ಚು ದಾರುಣವಾಗುತ್ತ ಹೋಗುತ್ತಿರುವಂತೆ, ಮತ್ತು ನಾವು ಅದಕ್ಕೆ ಅನುಗುಣವಾಗಿ ವರ್ತಿಸುತ್ತಿರುವಂತೆ, ಈ ಪ್ರಶ್ನೆಗಳು ಕಡಿಮೆ ವಿಲಕ್ಷಣವಾಗುತ್ತ ಬರುತ್ತಿವೆ. ಮಗುವಾಗಿದ್ದಾಗ ನನಗೊಂದು ಗುಪ್ತ ಭಯವಿತ್ತು—ಅದೊಂದು ಆಗಾಗ ಆವರ್ತಿಸುತ್ತಿದ್ದ ದುಃಸ್ವಪ್ನ—ಇಡೀ ಜಗತ್ತೇ ಒಂದು ನಗರವಾಗಿಬಿಡುವ ಸ್ವಪ್ನ ಅದು, ಸಿಮೆಂಟಿನಿಂದ, ಕಟ್ಟಡಗಳಿಂದ, ಮತ್ತು ಬೀದಿಗಳಿಂದ ಸುತ್ತುವರಿದು. ಹಳ್ಳಿಯೇ ಇಲ್ಲ. ಕಾಡುಗಳೇ ಇಲ್ಲ. ಇದೇನೂ ದೂರವಿದೆಯೆಂದು ನನಗೆ ಅನಿಸುತ್ತಿಲ್ಲ, ಅಂಥದೊಂದು ಜಗತ್ತು ಉಳಿದೀತೆಂದು ನಾನು ಅಂದುಕೊಳ್ಳುವುದಿಲ್ಲವಾದರೂ; ಅದರಲ್ಲಿ ಬದುಕುವುದಂತೂ ನನಗೆ ಬೇಡ.

ಸಂದರ್ಶಕ: ನಿಮ್ಮ ತಂದೆ ಒಬ್ಬ ಪ್ರೆಸ್ಬಿಟೇರಿಯನ್ ಪುರೋಹಿತರಾಗಿದ್ದರು. ಜಗತ್ತನ್ನು ಉದ್ಧರಿಸುವ ಪ್ರೆಸ್ಬಿಟೇರಿಯನ್ ಪ್ರೇರಣೆಯನ್ನು ನೀವು ಅವರಿಂದ ಪಡೆದಿದ್ದೀರಿ ಅನಿಸುತ್ತದೆಯೇ?

ಮರ್ವಿನ್: ಜಗತ್ತನ್ನು ಉದ್ಧರಿಸುವ ಪ್ರೇರಣೆಯಾಗಿತ್ತು ಅದು ಎನಿಸುವುದಿಲ್ಲ. ಅದೊಂದು ಜಗತ್ತಿನಲ್ಲಿ ನಾನು ವಿವರಿಸಲು ಸಾಧ್ಯವಿರುವುದಕ್ಕಿಂತಲೂ ಹೆಚ್ಚು ಸುಂದರವೂ, ಅಪರೂಪವೂ, ಭವ್ಯವೂ ಎಂದು ನನಗನಿಸಿದ, ಹಾಗೂ ಆ ಕಾಲಕ್ಕೆ ಕಡೆಗಣಿಸಲ್ಪಟ್ಟಿದೆಯೆಂದೂ ನಾಶವಾಗುತ್ತಿದೆಯೆಂದೂ ಅನಿಸಿದ, ಅದೇನನ್ನೋ ಪ್ರೀತಿಸುವ ನುತಿಸುವ ಪ್ರೇರಣೆಯಾಗಿತ್ತು. ನನಗೆ ಹಾಗೆ ತುಂಬಾ ಚಿಕ್ಕಂದಿನಲ್ಲೇ ಅನಿಸಿತೆಂದು ಕಾಣುತ್ತದೆ. ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯ ಬೀದಿಗಳಲ್ಲಿ ನಡೆಯುತ್ತ, ನನಗೆ ನಾನೇ ಭರವಸೆ ನೀಡುವ ರೀತಿಯಲ್ಲಿ ಅಂದುಕೊಂಡದ್ದು ನೆನಪಿದೆ, ಕೆಳಗಡೆ ನೆಲವಿದೆ ಎಂಬುದಾಗಿ. ಅದರ ಬಗ್ಗೆ ಮಾತಾಡಲು, ಬರೆಯಲು ನಾನು ಪ್ರಯತ್ನಿಸಿದ್ದೇನೆ, ಆದರೆ ನಾನಿನ್ನೂ ಅದರ ಆರಂಭ ಕೂಡಾ ಮಾಡಿಲ್ಲ ಅನಿಸುತ್ತದೆ. ಆದರೆ ಆ ಹಸಿವು, ಆ ರೂಪಕ, ಅದರ ವಿನಾ ನಾವು ಜೀವಿಸಲಾರೆವು ಎಂದು ನನ್ನ ನಂಬಿಕೆ, ನಾವೇನು ಕಳಕೊಂಡಿದ್ದೇವೆ ಎನ್ನುವುದರ ಅರಿವು ನಮಗೆ ಇಲ್ಲದೆ ಇದ್ದರೂ, ಮತ್ತು ಈಗಲಾದರೆ ನಮ್ಮಲ್ಲಿ ಹಲವರಿಗೆ ಅದು ಗೊತ್ತಿಲ್ಲದೆ ಇದ್ದರೂ. ಏನಿದ್ದರೂ ನಾವು ಕಳಕೊಂಡಿರುವುದು ನಿಜ. ಅತ್ಯಂತ ಅಗತ್ಯವಾದ್ದರಿಂದ ನಾವು ವಂಚಿತರಾಗಿದ್ದೇವೆ.

ಸಂದರ್ಶಕ: ಅದು ನೈಸರ್ಗಿಕ ಜಗತ್ತಿನೊಂದಿಗೆ ಯಾವುದೋ ಒಂದು ಸಂಬಂಧವೇ?

ಮರ್ವಿನ್: ಸಂಬಂಧ ಇದೆ—ನಮ್ಮ ರಕ್ತಕ್ಕೂ ಸಮುದ್ರಕ್ಕೂ ಸಂಬಂಧ ಇದೆ. ಈ ಸಂಬಂಧವನ್ನು ಕಂಡುಕೊಳ್ಳುವಿಕೆ ಅದು. ಪ್ರತಿಯೊಂದು ಜೀವದೊಂದಿಗೂ ನಾವು ಪೂರ್ತಿಯಾಗಿಯೂ ಆಪ್ತವಾಗಿಯೂ ಸಂಬಂಧ ಹೊಂದಿರುವೆವು ಎಂಬುದರ ಅರಿವು. ನಾವಿದರ ಬಗ್ಗೆ ಭಾವುಕರಾಗುವುದೋ ಸಾಧುಗಳಾಗುವುದೋ ಬೇಡ, ಆದರೆ ಈ ಸತ್ಯಕ್ಕೆ ಬೆನ್ನು ಹಾಕಿ ನಾವು ಬದುಕಲಾರೆವು. ನಮ್ಮ ಸುತ್ತಲಿನ, ನೈಸರ್ಗಿಕ ಜಗತ್ತು ಎಂಬುದನ್ನು ನಾಶಪಡಿಸಿದಾಗ ನಾವು ನಮ್ಮನ್ನೇ ನಾಶಪಡಿಸಿದಂತೆ. ಅದನ್ನು ಮತ್ತೆ ಮೊದಲಿನ ಹಾಗೆ ಮಾಡಲು ಬರುವುದಿಲ್ಲ ಅನಿಸುತ್ತದೆ ನನಗೆ.

ಸಂದರ್ಶಕ: ಕವಿತೆ ಮತ್ತು ಪ್ರಾರ್ಥನೆಯ ನಡುವೆ ಸಂಬಂಧವಿದೆ ಎಂದು ನಿಮಗೆ ತೋರುತ್ತದೆಯೇ?

ಮರ್ವಿನ್: ಸರಳವಾಗಿ ಹೇಳುವುದಿದ್ದರೆ, ಹೌದು. ಬೇರೇನು ಕಾರಣಕ್ಕಲ್ಲದಿದ್ದರೂ, ಕವಿತೆಯೆಂದರೆ ಭಾಷೆಯನ್ನು ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಸಂಪೂರ್ಣವಾಗಿ ಬಳಸುವುದು ಎಂಬ ಕಾರಣಕ್ಕೆ. ಅದನ್ನು ಮಾಡಬೇಕಿದ್ದರೆ ಭಾಷೆಯನ್ನೊಂದು ಅಲಂಕಾರವಾಗಿಯೋ ಮನೋರಂಜನೆಯಾಗಿಯೋ ನೀವು ಯೋಚಿಸಬಾರದು, ಭಾಷೆ ಸಂತೋಷದಾಯಕವಾಗಿ ಇರಬೇಕೆಂದು ಬಯಸಿದರೂ ಸಹಾ. ಸಂತೋಷವೆಂದರೆ ಪೂರ್ಣತೆಯ ಭಾಗ. ಕವಿತೆಯ ಸಂಬಂಧ ಇರುವುದು ಜೀವನದ ಪೂರ್ಣತೆಯ ಜತೆ ಎಂದುಕೊಳ್ಳುತ್ತೇನೆ, ಮತ್ತು ಸ್ವಂತ ಅನುಭವದ ಸಂಬಂಧದ ಪೂರ್ಣತೆಯ ಜತೆ, ಸ್ವಂತ ಅನುಭವವನ್ನು ಪೂರ್ತಿಗೊಳಿಸುತ್ತಲೂ, ಅದನ್ನು ಅಭಿವ್ಯಕ್ತಿಗೊಳಿಸುತ್ತಲೂ, ಅರ್ಥಪೂರ್ಣಗೊಳಿಸುತ್ತಲೂ.

ಸಂದರ್ಶಕ: ನಿಮ್ಮ ಕವಿತೆಗಳ ಮೇಲಿನ ಝೆನ್ ಪ್ರಭಾವ?

ಮರ್ವಿನ್: ಯೆಹೂದಿ-ಕ್ರಿಶ್ಚಿಯನ್ ಪರಿಭಾಷೆಯಲ್ಲಿ ಪ್ರಾರ್ಥನೆಯ ಬಗ್ಗೆ ಮಾತಾಡುವಾಗ, ಪ್ರಾರ್ಥನೆಯನ್ನು ಸಾಧಾರಣವಾಗಿ ದ್ವೈತ ಕ್ರಿಯೆಯಾಗಿ ಪರಿಭಾವಿಸಲಾಗುತ್ತದೆ. ನೀವು ಇನ್ನು ಯಾರನ್ನೋ ಯಾವುದಕ್ಕೋ ಪ್ರಾರ್ಥಿಸುತ್ತೀರಿ. ಪಾಶ್ಚಾತ್ಯ ಅರ್ಥದಲ್ಲಿ ಪ್ರಾರ್ಥನೆಯೆಂದರೆ ಒಂದು ಸಂಬಂಧವಾಗಿ ಪರಿಭಾವಿಸುವುದು ಸಾಮಾನ್ಯ. ಆ ಸಂಬಂಧವನ್ನು ಮಾಡಬೇಕು ಎಂದು ನನಗನಿಸುವುದಿಲ್ಲ, ಅದು ಈಗಾಗಲೇ ಇದೆ. ಕವಿತೆಯ ಕೆಲಸ ಬಹುಶಃ, ಇಲ್ಲದಿರುವ ಒಂದನ್ನು ಸೃಷ್ಟಿಸಲು ಪ್ರಯತ್ನಿಸುವುದಕ್ಕಿಂತಲೂ, ಈಗಾಗಲೇ ಇರುವ ಆ ಸಂಬಂಧವನ್ನು ಗುರುತಿಸುವುದು.

ಸಂದರ್ಶಕ: ಜಾನ್ ಬೆರಿಮನ್ ಬಗ್ಗೆ ಬರೆದ ಸಂಸ್ಮರಣ ಕವಿತೆಯಲ್ಲಿ ನೀವು `ಆತ ನನಗೆ ಸಲಹೆ ಮಾಡಿದ್ದು ನಾನು ಕಾವ್ಯದೇವತೆಯನ್ನು ಪ್ರಾರ್ಥಿಸಲು | ಮೊಣಕಾಲೂರಿ | ಆ ಅಲ್ಲೇ ಮೂಲೆಯಲಿ ಮತ್ತು | ತಾನದನ್ನು ಉದ್ದೇಶಿಸಿದ್ದು ಅಕ್ಷರಶವೆಂದು’ ಎಂಬುದಾಗಿ ನೆನಪಿಸಿಕೊಳ್ಳುತ್ತೀರಿ. ಆ ಸಲಹೆಯ ಕುರಿತು ನೀವೇನು ಹೇಳುತ್ತೀರಿ?

ಮರ್ವಿನ್: ಅದೊಂದು ಉತ್ತಮ ಸಲಹೆ ಎಂದು ನನ್ನ ಭಾವನೆ. ಕವಿತೆ ಬರೆಯುವುದೆಂದರೆ ನೀವು ನಿಯಂತ್ರಿಸುವ ಪೂರ್ತಿ ಉದ್ದೇಶಪೂರ್ಣ ಕ್ರಿಯೆ ಅಲ್ಲ. ಬರೆಯುವುದೆಂದರೆ ಎಲ್ಲಾ ತರದ ಶಕ್ತಿಗಳ ಕೈಯಲ್ಲಿರುವಂಥದು, ಇವುಗಳಲ್ಲಿ ಕೆಲವರ ಬಗ್ಗೆ ನಮಗೇನೂ ಗೊತ್ತಿರುವುದಿಲ್ಲ. ಬೇಕಾದರೆ ನೀವವನ್ನು ನಿಮ್ಮದೇ ಮನಸ್ಸಿನ ಭಾಗಗಳಾಗಿ ವಿವರಿಸಬಹುದು, ಪ್ರಾಯಶಃ ಅವು ಹಾಗೇನೇ; ಆದರೆ ಅವುಗಳನ್ನು ವಿವರಿಸುವ ಬೇರೆ ವಿಧಾನಗಳೂ ಇವೆ, ಇಷ್ಟೇ ಸರಿಯಾಗಿ ಅಥವಾ ಇದಕ್ಕಿಂತಲೂ ಉತ್ತಮವಾಗಿ—ಕಾವ್ಯದೇವತೆಗಳೆಂದು (Muses), ಅಥವಾ ಸಾಮೂಹಿಕ ಪ್ರಜ್ಞೆಯೆಂದು (collective unconscious). ಹೆಚ್ಚು ಧ್ವನಿಪೂರ್ಣವಾದುವು, ಆದ್ದರಿಂದ ಹೆಚ್ಚು ಸಮಂಜಸವಾದುವು. ಈ ಶಕ್ತಿಗಳನ್ನೆಬ್ಬಿಸುವ ಯಾವುದೇ ದಾರಿಯೂ ಒಳ್ಳೆಯದೇ, ನನ್ನ ಮಟ್ಟಿಗೆ.

ಸಂದರ್ಶಕ: ಪ್ರಿನ್ಸ್‍ಟನಿನ ನಿಮ್ಮ ಸ್ನಾತಕಪೂರ್ವ ದಿನಗಳಲ್ಲಿ ಬೆರಿಮನ್‍ನಿಂದ ನೀವು ಕಲಿತುದೇನು?

ಮರ್ವಿನ್: ಆತನ ಕುರಿತು ಬರೆದ ಕವಿತೆಯಲ್ಲಿ ಅಂಥ ಕೆಲವೊಂದನ್ನು ತರಲು ನಾನು ಯತ್ನಿಸಿದ್ದೇನೆ, ಆತ ಕೊಟ್ಟ ಕೆಲವು ಪ್ರಮುಖ ನಿರ್ದೇಶನಗಳನ್ನು, ರಾಜಿಮಾಡಿಕೊಳ್ಳದಿರುವಿಕೆ ಅವುಗಳಲ್ಲಿ ಒಂದು. ಕವಿತೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಕುರಿತು ಅವನು ನನಗೆ ಅದೇನನ್ನೋ ಕಲಿಸಿದ. ನನಗೆ ಗೊತ್ತಿರುವ ಎರಡೋ ಮೂರೋ ಪ್ರತಿಭಾವಂತರಲ್ಲಿ ಅವನು ಒಬ್ಬನಾಗಿದ್ದ. ಅವನ ಭಾಷಾಪ್ರಜ್ಞೆ ಉತ್ತಮವಾಗಿತ್ತು, ಹಾಗೂ ಅದಕ್ಕೆ ಭಾರೀ ವೇಗಶಕ್ತಿಯಿತ್ತು. ಅವನ ಪ್ರಾಮಾಣಿಕತೆ ಪರಿಪೂರ್ಣವಾಗಿತ್ತು. ಅವನೊಬ್ಬ ವಿಚಿತ್ರ ವ್ಯಕ್ತಿ, ಆದರೆ ಅವನ ನಿಷ್ಠೆ ಎಲ್ಲಾ ಕಾಲದಲ್ಲೂ ಶುದ್ಧ ಜ್ವಾಲೆಯಂತೆ, ಅದು ನನಗೊಂದು ಮಾದರಿಯಾಗಿತ್ತು.

ಸಂದರ್ಶಕ: ಆರ್.ಪಿ. ಬ್ಲ್ಯಾಕ್‍ ಮರ್ ಬಗ್ಗೆ “ಅಪೇಬ್ಲ್ ಇರ್ರೆಗ್ಯುಲರ್” ಎಂಬ ಸ್ನೇಹದ ಸ್ಮೃತಿಲೇಖನವೊಂದನ್ನು ನೀವು ಬರೆದಿದ್ದೀರಿ. ಆತ ನಿಮಗೊಬ್ಬ ಲೇಖಕನಾಗಿ, ಬುದ್ಧಿಜೀವಿಯಾಗಿ ಒಂದು ಆದರ್ಶವಾಗಿದ್ದನೇ?

ಮರ್ವಿನ್: ಬ್ಲ್ಯಾಕ್‍ ಮರ್ ನನ್ನು ನಾನು ಆರಾಧಿಸಿದೆ. ಅವನು ನನಗೆ ಒಂದು ತರದ ಗುರು, ತಂದೆ, ಆದರೆ ಒಂದೇ ವ್ಯತ್ಯಾಸವೆಂದರೆ ಅದು ಅಷ್ಟೊಂದು ಆತ್ಮೀಯದ್ದಾಗಿರಲಿಲ್ಲ. ಅದರಲ್ಲಿ ತುಂಬ ಮೂಕವಿಸ್ಮಯವಿತ್ತು. ನನಗನಿಸುತ್ತದೆ ಬ್ಲ್ಯಾಕ್‍ ಮರ್ ನಲ್ಲಿ ಅತ್ಯಂತ ಕಾಡುವ ಸಾಹಿತ್ಯಿಕ ಪ್ರಭಾವವಿತ್ತು. ನಾನು ನಿಜಕ್ಕೂ ಪೂಜಿಸುವ ತರದ ವಿಮರ್ಶಕನೂ ಆಗಿದ್ದ ಅವನು. ಆ ಲೇಖನಗಳನ್ನು ಇಷ್ಟು ವರ್ಷಗಳಲ್ಲಿ ನಾನು ಮತ್ತೊಮ್ಮೆ ಓದಿಲ್ಲವಾದರೂ, ಆತ ಹೇಳಿದ ಸಂಗತಿಗಳನ್ನು ಮತ್ತು ಮೈಗೂಡಿಸಿಕೊಂಡ ಧೋರಣೆಗಳನ್ನು ನಾನು ಮರೆತಿಲ್ಲ. ಆತನಲ್ಲಿ ಆಳವಾದ ಅನಿಶ್ಚಿತತೆಗಳಿದ್ದುವು ಎನ್ನುವುದು ನನಗೆ ಗೊತ್ತು. ಆದರೂ ಆತ ಸ್ವತಂತ್ರ ಮನೋಧರ್ಮದವನಾಗಿದ್ದು, ನನ್ನದೇ ಸ್ವಾತಂತ್ರ್ಯದ ಹಂಬಲ ಸರಿಯಾದುದೆಂದು ನಾನು ನಂಬುವಂತೆ ಪ್ರೇರೇಪಿಸಿದ.

ಸಂದರ್ಶಕ: ಹಾಗಿದ್ದರೆ ನಿಮ್ಮದೇ ದಾರಿಯಲ್ಲಿ ಸಾಗಲು ಆತ ಪ್ರೋತ್ಸಾಹಿಸಿದ?

ಮರ್ವಿನ್: ಅನೇಕ ಜನರ ಜತೆ ಅವನು ಹಾಗೆ ಮಾಡಿದ ಅಂತ ಅನಿಸುತ್ತದೆ. ಎಷ್ಟು ಜನ ಅದನ್ನು ಪಾಲಿಸಿದರೋ ನನಗೆ ತಿಳಿಯದು. ಆತನ ಸಲಹೆ ಇಲ್ಲದಿದ್ದರೂ ಸಹಾ ನಾನು ಅಕಾಡೆಮಿಗೆ ಹೊಂದಿಕೊಳ್ಳುತ್ತಿದ್ದೆ ಅನಿಸುವುದಿಲ್ಲ. ಸಂಸ್ಥೆಗಳ ದೀರ್ಘಾವಧಿ ಸಂಪರ್ಕದಲ್ಲಿ ಇರುವುದಕ್ಕೆ ನನ್ನಿಂದ ಆಗುವುದಿಲ್ಲ. ಕಸಿವಿಸಿಯಾಗುತ್ತದೆ. ಕೂಡಿಹಾಕಿದಂತೆ.

ಸಂದರ್ಶಕ: ನಿಮ್ಮದೇ ವಯಸ್ಸಿನ ಕವಿಗಳಲ್ಲಿ ನಿಮಗೆ ಮೊದಲಿಗೆ ಗೊತ್ತಿದ್ದ ಕವಿಗಳು ಯಾರು?

ಮರ್ವಿನ್:ಪ್ರಿನ್ಸ್‍ ಟನ್‍ ನಲ್ಲಿ ನನಗೆ ಗಾಲ್ವೇ ಕಿನೆಲ್‍ನ ಪರಿಚಯವಿತ್ತು. ಆದರೆ ನಾವು ಒಬ್ಬರೊಬ್ಬರ ಕವಿತೆಗಳನ್ನು ಹೆಚ್ಚು ಓದಿದುದಿಲ್ಲ. ಒಮ್ಮೆ ಬ್ಲ್ಯಾಕ್‍ಮರ್‍ ನ ನೋಡುವುದಕ್ಕೆಂದು ಜೇಮ್ಸ್ ಮೆರಿಲ್ ಬಂದಿದ್ದ. ನಾನು ಇಂಗ್ಲೆಂಡಿನಿಂದ ಮರಳಿ ಬೋಸ್ಟನ್‍ ನಲ್ಲಿ ನೆಲಸುವ ತನಕ ನನ್ನ ಸಮಕಾಲೀನರ ಕವಿತೆಗಳ ಪರಿಚಯ ನನಗೆ ನಿಜಕ್ಕೂ ಇರಲಿಲ್ಲ. ನನಗಾಗ ಮೂವತ್ತರ ಸಮೀಪದ ವಯಸ್ಸು.

ಸಂದರ್ಶಕ: ಹಾಗಿದ್ದರೆ ನೀವು ಆಗಲೇ ಒಂದು ರೀತಿಯಲ್ಲಿ ಕವಿಯಾಗಿ ಬೆಳೆದಿದ್ದಿರಿ.

ಮರ್ವಿನ್: ಒಂದು ರೀತಿಯಲ್ಲಿ. ಅಲ್ಲಿಯ ತನಕ ನನ್ನ ಮೇಲಿನ ಪ್ರಮುಖ ಪ್ರಭಾವ ಪೌಂಡ್, ಮತ್ತು ಆತನ ತಲೆಮಾರಿನ ಎಲ್ಲಾ ಕವಿಗಳು, ಆ ಕಾಲದ ಗಣ್ಯರೆಲ್ಲರೂ. ಹಾಗೂ ಪೌಂಡ್ ನನ್ನನ್ನು ಮಧ್ಯಯುಗದ ಕವಿತೆಯ ಕಡೆಗೆ ತಿರುಗಿಸಿದ.

ಸಂದರ್ಶಕ: ನಿಮ್ಮ ಆರಂಭದ ಕೃತಿಗಳಲ್ಲಿ ಹಲವು ಪೌಂಡಿಯನ್ ಯೋಜನೆಯನ್ನು ಅನುಸರಿಸಿದ ಹಾಗೆ ಕಾಣುತ್ತವೆ.

ಮರ್ವಿನ್: ಆತ ಬಹಳಾನೇ ಮುಖ್ಯವಾಗಿದ್ದ. ನಾನು ಹದಿನೆಂಟು ಹತ್ತೊಂಭತ್ತು ವಯಸ್ಸಿನವನಿದ್ದಾಗ ಪೌಂಡ್‍ ನ ಶ್ರವಣ ನನಗೊಂದು ದರ್ಶನವೆನಿಸಿತ್ತು. ಪೌಂಡ್‍ ನ ನಂತರದ ಕವಿಗಳು ಅವನ ರಚನೆಗಳಲ್ಲಿ ಅದೇನೋ ಪರಿಶುದ್ಧವೂ ಅಗಾಧವೂ ಆದುದನ್ನು ಆಲಿಸಿದ್ದಾರೆ. ಪೌಂಡ್‍ ನ ಕುರಿತಾದ ಹಲವು ದಂತಕತೆಗಳನ್ನು ನಾನೀಗ ನಂಬುವುದಿಲ್ಲ. ನಂಬಲು ನಾನು ಯತ್ನಿಸಿದ್ದಿದೆ. ಅವನು ನನಗೆ ಎಷ್ಟು ಮುಖ್ಯನೆಂದರೆ, ಅವನನ್ನು ಮೆಚ್ಚಲು ನಾನು ಬಹಳ ಬಯಸಿದ್ದೆ. ಪೌಂಡ್‍ ನ ಕೃತಿಗಳ ಬೌದ್ಧಿಕ ಸಾಂಗತ್ಯದಲ್ಲಿ ನನಗೀಗ ವಿಶ್ವಾಸವಿಲ್ಲ. ಆತ ನಿಜಕ್ಕೂ ಒಬ್ಬ ತೀರಾ ಗೊಂದಲದ, ಭಗ್ನ, ಉದ್ವಿಗ್ನ ಮನುಷ್ಯನೆಂದು ನನಗನಿಸುತ್ತದೆ. ಇದು ಹ್ಯೂ ಕೆನ್ನರ್ ಮತ್ತಿತರರು ಅವನ ಕೃತಿಗಳಲ್ಲಿ ಓದಲು ಯತ್ನಿಸಿದ ಪೂರ್ವಜ್ಞಾನದ, ಆಳದ, ವಾಸ್ತು ಪರಿಪೂರ್ಣತೆಯಾಗಿ ಮೂಡಿಬರುವುದಿಲ್ಲ. ನನಗವನು ಒಂದು ನಿಮಿಷ ಉಜ್ವಲವಾಗಿ ಹೊಳೆಯುತ್ತಾನೆ, ಮರು ನಿಮಿಷವೇ ನಿರಾಶಾದಾಯಕವಾಗಿ ಮತ್ತು ಹಲವು ಸಲ ಸುಸ್ತಾಗಿಸುವಂತೆ ಕಾಣಿಸುತ್ತಾನೆ. ಸ್ವಂತ ಯೋಚನೆಗಳಿಂದ ಅಲ್ಲ, ಬದಲು ಆಲಿಕೆಯಿಂದ ಬರೆಯುವ ಅವನ ಈ ಬದಿ ನನಗೆ ಇಷ್ಟವಾದುದು; ಆದರೆ ತಮಾಷೆಯೆಂದರೆ ಪೌಂಡ್ ಬಹಳ ಆತ್ಮ ಸಮರ್ಥಕನಾಗಿದ್ದ. ಅವನ ಈ ಆಲಿಸಿ ಬರೆಯುವ ರೀತಿ ಅಪೂರ್ವವಾದುದು ಎಂದುಕೊಂಡಿದ್ದೆ. ಆದರೆ ಈಗ ಹಾಗನಿಸುವುದಿಲ್ಲ. ಈಗ ನನಗನಿಸುತ್ತದೆ, ಎಲ್ಲಾ ಕವಿಗಳೂ ಆಲಿಸುತ್ತಲೇ ಮುಂದರಿಯುತ್ತಾರೆ. ನನ್ನನ್ನು ಸೆಳೆದುದು ಪೌಂಡ್ ಭಾಷೆಗೆ ತನ್ನನ್ನು ತಾನು ಅರ್ಪಿಸಿಕೊಂಡದ್ದು, ಹಾಗೂ ಕವಿತೆಗೆ, ಮತ್ತು ಆ ಅನನ್ಯವಾದ ಶ್ರವಣ ಗುಣ.

ಸಂದರ್ಶಕ: 1940ರಲ್ಲಿ ನೀವು ಸೈಂಟ್ ಎಲಿಝಬೆತ್‍ ನಲ್ಲಿ ಪೌಂಡ್‍ ನ ನೋಡಲು ನಡೆಸಿದ ಭೇಟಿಯ ಬಗ್ಗೆ ಹೇಳುವಿರ? ನೀವದನ್ನೊಂದು ತೀರ್ಥಯಾತ್ರೆಯೆಂದು ಕರೆದಿದ್ದಿರಿ.

ಮರ್ವಿನ್: ಪೌಂಡ್‍ ನ ಕಾಣಲು ಹೋದಾಗ ನಾನು ವಾಷಿಂಗ್‍ಟನ್‍ ನಲ್ಲಿ ಕೆಲವು ಗೆಳೆಯರ ಜತೆ ಇಳಿದುಕೊಂಡಿದ್ದೆ. ಈಸ್ಟರ್ ರಜಾಕಾಲವಾಗಿತ್ತು ಅದು. ಪೌಂಡ್ ನನ್ನನ್ನು ತೆರೆದ ವಾರ್ಡಿನಲ್ಲಿ ಬರಮಾಡಿಕೊಂಡ. ಜನ ಆಚೀಚೆ ಓಡಾಡುತ್ತಿದ್ದರು, ಕಾಲ್ಪನಿಕ ಟಾಯ್‍ಲೆಟ್‍ಗಳಿಗೆ ನೀರು ಬಿಡುತ್ತ. ಅವನು ಹೊಂಡದ ಕುರ್ಚಿಯೊಂದರಲ್ಲಿ ಆಸೀನನಾಗಿ ಮಾತುಕತೆ ನಡೆಸಿದ್ದ. ನನಗಾಗ ಹದಿನೆಂಟು—ಪೌಂಡ್‍ ಗೆ ಹೇಳಲು ನನ್ನ ಬಳಿ ಹೆಚ್ಚೇನೂ ಇರಲಿಲ್ಲ. ತಾನು ನೂರನೇ ಕ್ಯಾಂಟೋ ಬರೆದು ಮುಗಿಸಿದಾಗ ಹೇಗೆ ಎಲ್ಲವೂ ಆಯಾ ಸ್ಥಾನದಲ್ಲಿ ಸೇರಿಕೊಳ್ಳುತ್ತವೆ ಎಂದು ಮುಂತಾಗಿಯೆಲ್ಲ ನನಗೆ ತಿಳಿಸಿದ. ಅದು ಕಮಾನಿನ ಮೇಲೆ ಮುಖ್ಯ ಕಲ್ಲು ಇರಿಸಿದ ಹಾಗೆ, ಅಥವಾ ದಾರಂದದ ಮೇಲೆ ತೊಲೆ ಇರಿಸಿದ ಹಾಗೆ. ಅವನು ತುಂಬಾ ಧಾರಾಳಿಯೂ ಆಗಿದ್ದ; ನಂತರ ನನಗೆ ಹಲವು ಪೋಸ್ಟ್‍ ಕಾರ್ಡುಗಳನ್ನು ಬರೆದ. ಮತ್ತು ಅನುವಾದದ ಬಗ್ಗೆ ನನಗೆ ಚೂರು ಕಿವಿಮಾತುಗಳನ್ನು ಹೇಳಿದ, ಅನುವಾದವನ್ನೊಂದು ಅಭ್ಯಾಸದ ಹಾಗೆ ತೆಗೆದುಕೊಳ್ಳುವಂತೆ, ಭಾಷೆಗಳನ್ನು ಕಲಿಯುವಂತೆ, ಮತ್ತು ಮೂಲದ ಅರ್ಥ ಮತ್ತು ಸ್ವರೂಪಕ್ಕೆ ಎಷ್ಟು ಸಾಧ್ಯವೋ ಅಷ್ಟೂ ಹತ್ತಿರವಾಗಲು ಪ್ರಯತ್ನಿಸುವಂತೆ. ಕೆಲವು ಕಾಲ ನಾನೇ ಅಭ್ಯಾಸ ಮಾಡುವ, ನಾನೇ ಪ್ರಯತ್ನಿಸುವ ತನಕ ಅವನು ಹೇಳಿದ ಹೆಚ್ಚಿನ ಸಂಗತಿಗಳೂ ನನಗೆ ಗೊತ್ತಾಗಲಿಲ್ಲ.

ಸಂದರ್ಶಕ: ನಿಮ್ಮನ್ನು ಮೊದಲಿಗೆ ಅನುವಾದದತ್ತ ಆಕರ್ಷಿಸಿದುದು ಯಾವುದು?

ಮರ್ವಿನ್:ಹದಿನೆಂಟನೇ ವಯಸ್ಸಿನಲ್ಲಿ ಬರೆಯುವುದಕ್ಕೆ ವಸ್ತು ಸಿಗುವುದು ತುಂಬಾ ಕಷ್ಟ. ನಾನು ಬಹಳಷ್ಟು ಬರೆಯುತ್ತಿದ್ದೆ. ಆದರೆ ನಾನು ಬರೆಯುತ್ತಿರುವುದು ಮಹತ್ವದ್ದಲ್ಲ ಎನ್ನುವುದು ನನಗೆ ಸ್ಪಷ್ಟವೇ ಇತ್ತು. ನೀವು ಹದಿನೇಳು ಹದಿನೆಂಟರಲ್ಲಿ ಭಾವನೆಗಳೆಂದು ಅಂದುಕೊಳ್ಳುವುದು ನೀವೇನು ಅಂದುಕೊಳ್ಳುತ್ತೀರೋ ಅವನ್ನೇ, ಹಾಗೂ ಅವು ನಿಮ್ಮವೇ. ಆದರೆ ಅವು ನಿಮ್ಮ ಪದಗಳಿಂದ ತುಂಬಾ ದೂರ ಅನ್ನುವುದು ನಿಮಗೆ ಗೊತ್ತಿರುತ್ತದೆ, ಪದಗಳೊಂದು ಗೋಜಲು. ಅನುವಾದದಲ್ಲಾದರೆ ಹಾಗಲ್ಲ, ಏನಾದರೊಂದರ ಕುರಿತು ಕೆಲಸ ಮಾಡುವುದು ಸಾಧ್ಯವಿತ್ತು—ಮತ್ತು ಬರೆಯುವುದಕ್ಕೆ ಮಾತ್ರ ಗಮನವೀಯುವುದು, ಏನನ್ನಾದರೂ ಬರೆಯುವುದಕ್ಕೆ; ಹಾಗೂ ಸರಿಯಾದ ಪದಗಳನ್ನು ಸಾಧಿಸುವುದಕ್ಕೆ, ಅದಕ್ಕೆ ಆಚೆ ಬದಿಯಿಂದ ಬರುವುದಕ್ಕೆ, `ಹೇಗೆ’ ಎಂಬ ಬದಿಯಿಂದ.

ಸಂದರ್ಶಕ: ಪ್ರಾಕೃತಿಕ ಅಥವಾ ಪುರಾ ಕಾವ್ಯವನ್ನು ಅನುವಾದಿಸಲು ಆರಂಭಿಸಿದ್ದು ಯಾವಾಗ?

ಮರ್ವಿನ್: ನನಗೆ ಮೂವತ್ತಾಗುವವರೆಗೆ ನಾನದನ್ನು ಆರಂಭಿಸಲಿಲ್ಲ ಎಂದು ಕಾಣುತ್ತದೆ. ಒಂದು ಮೌಖಿಕ, ಅನಕ್ಷರ ಭಾಷೆಯನ್ನು ಕಲಿಯಲು ನಾನು ಯಾವತ್ತಿನಿಂದಲೂ ಇಷ್ಟಪಡುತ್ತಿದ್ದೆ. ಹಾಗೆ ಮಾಡುವುದಕ್ಕೆ ನನ್ನನ್ನು ಅಷ್ಟೂ ಕಾಲ ತಡೆದುದು ನನ್ನ ಶಿಕ್ಷಣವೋ, ಮನೋಧರ್ಮವೋ, ಸ್ವಭಾವವೋ ಗೊತ್ತಿಲ್ಲ. ಉದಾಹರಣೆಗೆ, ಆ ಕ್ರೋ (Crow) ಆವೃತ್ತಿಗಳನ್ನು ನಾನು ಮಾಡಿದ್ದು, 1970 ಅಥವಾ 71ರಲ್ಲಿ, ಎಲ್ಲವೂ ರಾಬರ್ಟ್ ಲೋವಿ (Robert Lowie) ಮೂವತ್ತರ ದಶಕದಲ್ಲಿ ಮಾಡಿದ ಸಂಶೋಧನೆಯಿಂದ. ಮತ್ತು ನನಗೆ ಕ್ರೋ ಬಗ್ಗೆ, ಅಮೇರಿಕನ್ ಇಂಡಿಯನ್ ಕಾವ್ಯದ ಬಗ್ಗೆ ಸಾಧಾರಣವಾಗಿಯೂ, ಹಾಗೂ ಇನ್ನಿತರ ಅನಕ್ಷರ ಕಾವ್ಯದ ಬಗ್ಗೆ ಕೂಡಾ—ನಾವು ಮಾತಾಡುತ್ತಿದ್ದಂತೆಯೇ ಅವು ನಾಶವಾಗುತ್ತವೆ ಎನ್ನುವ ಭಾವನೆಯಿತ್ತು. ಅದು ಪ್ರಾಮುಖ್ಯತೆಯಲ್ಲಿ ಅಲೆಕ್ಝಾಂಡ್ರಿಯಾದ ಲೈಬ್ರರಿಯನ್ನು ಉರಿಸಿದ್ದಕ್ಕೆ ಸಮಾನವಾಗಿತ್ತು. ಆದರೆ ಅಂಥ ಭಾಷೆಗಳಲ್ಲೊಂದನ್ನು ಕಲಿಯಲು ತೀರಾ ಇತ್ತೀಚಿನ ವರೆಗೂ ನಾನು ಹೊರಡಲಿಲ್ಲ. ಆ ಅನುವಾದಗಳನ್ನು ಮಾಡುತ್ತಿರುವಾಗ ನಾನು ಕ್ರೋ ಪ್ರದೇಶಕ್ಕೆ ಭೇಟಿ ನೀಡಿದೆ. ರಾಬರ್ಟ್ ಲೋವಿಯ ನಂತರ ಬೇರೆ ಯಾವ ಕೆಲಸ ಈ ಭಾಷೆಯಲ್ಲಿ ನಡೆದಿದೆ ಎನ್ನುವುದನ್ನು ಕಂಡುಹಿಡಿಯಲು ಪ್ರಯತ್ನಿಸಿದೆ. ತೀರಾ ಕಡಿಮೆ ಕೆಲಸ ನಡೆದಿದೆ ಎನ್ನುವುದು ಕಂಡುಬಂತು. ವ್ಯಾಕರಣದ ಬಗ್ಗೆ ಸ್ವಲ್ಪ ಕೆಲಸ ನಡೆದಿತ್ತು, ಆದರೆ ವಸ್ತುಸಂಗ್ರಹವೇನೂ ಆಗಿರಲಿಲ್ಲ; ಲೋವಿ ಸ್ವತಃ ಸಂಗ್ರಹಿಸಿದ್ದು ಕೆಲವೇ ಪುಟಗಳಷ್ಟು ಹಾಡುಗಳನ್ನು. ಹೀಗೆ ವ್ಯಾಪಕವಾದೊಂದು ಪರಂಪರೆಯಿಂದ ಉಳಿದದ್ದು ಇಷ್ಟೇ. ಎಂದರೆ, ಇಡೀ ಇಂಗ್ಲಿಷ್ ಸಾಹಿತ್ಯದಲ್ಲಿ ಹೆರಿಕ್‍ ನ ಕವಿತೆಗಳಿಂದ ಒಂದೆರಡು ಪುಟಗಳು, ಡನ್‍ ನ ಕವಿತೆಗಳಿಂದ ಒಂದು ಪುಟ, ಕೀಟ್ಸ್‍ ನಿಂದ ಎರಡೋ ಮೂರೋ ಪುಟಗಳು ಉಳಿದಂತೆ. ಇವುಗಳಿಗಾಗಿ ನೀವು ಕೃತಜ್ಞರಾಗಿದ್ದೀರಿ ಎನ್ನುವುದು ನಿಮಗೆ ಗೊತ್ತು, ಆದರೆ ಎಷ್ಟೊಂದು ನಷ್ಟವಾಗಿದೆ ಎಂದು ಯೋಚಿಸಿದಾಗ ತೆಲೆಸುತ್ತು ಬರುತ್ತದೆ. ಕ್ರೋ ಜನರದು ಮಾತ್ರವಲ್ಲ, ಕ್ರೋ ಜನಪದವು ನಷ್ಟಗೊಂಡ ಹಲವು ಸಂಸ್ಕೃತಿಗಳಲ್ಲಿ ಒಂದು. ಆ ಕ್ರೋ ಹಾಡುಗಳನ್ನು ನೋಡಿರಿ, ಆಗ ಗೊತ್ತಾಗುತ್ತದೆ ನಿಮಗೆ ಅವು ಒಂದು ವಿಶಾಲವೂ, ಗಹನವೂ, ಪ್ರಬಲವೂ ಆಗಿದ್ದ ಪರಂಪರೆಯೊಂದರ ಕೊನೆಯುಳಿಕೆಗಳು ಎನ್ನುವುದು. ಅವುಗಳ ನಾಶಕ್ಕೆ ನಾವು ಕಾರಣರು. ಅವೀಗ ಕಳೆದುಹೋಗಿವೆ, ಅವನ್ನು ಮತ್ತೆ ಸೃಷ್ಟಿಸುವುದಕ್ಕೆ ನಮ್ಮಿಂದ ಆಗದು.

ಸಂದರ್ಶಕ: ನಿಮ್ಮ ಆರಂಭದ ಕೃತಿಗಳು, ಮತ್ತು ಅನುವಾದದಲ್ಲಿನ ನಿಮ್ಮ ಗಾಢವಾದ ಆಸಕ್ತಿ, ಒಬ್ಬ ಅಮೇರಿಕನ್ ಕವಿಯಾಗಿ ನಿಮ್ಮ ದ್ವಂದ್ವವನ್ನು ತೋರಿಸುತ್ತದೆಯೇ?

ಮರ್ವಿನ್: ಇಲ್ಲ, ನಾನೆಂದೂ ಆ ಕುರಿತು ಹಾಗೆ ಯೋಚಿಸಿದ್ದಿಲ್ಲ. ಈ ಪ್ರಶ್ನೆಯನ್ನು ಬಗೆಹರಿಸಲು ನಾನು ನಿಜಕ್ಕೂ ಯತ್ನಿಸಿದ ಕಾಲವೊಂದು ಇತ್ತು. ಆದರೆ ಅನುವಾದ ಎಂದೂ ಅದನ್ನು ಪ್ರವೇಶಿಸಿರಲಿಲ್ಲ—ಎಂದರೆ, ಅನುವಾದ ಯಾವತ್ತೂ ಸಾಧ್ಯತೆಗಳನ್ನು ವಿಸ್ತರಿಸುವ, ಒಂದೇ ಕಡೆ ನಿಂತುಬಿಡುವುದರಿಂದ ತಪ್ಪಿಸಿಕೊಳ್ಳುವ, ದಾರಿಯಾಗಿತ್ತು. ನಾನು ಬೆಳೆದುಬಂದಂಥ ನಲುವತ್ತರ ದಶಕದ ಅಮೇರಿಕನ್ ಕವಿತೆ ಮರಗಟ್ಟಿದ ಹಾಗೆ ನನಗೆ ಅನಿಸುತ್ತಿತ್ತು. ಎಂದರೆ ಒಂದು ಪೆಟ್ಟಿಗೆಯಲ್ಲಿ ಜೀವಿಸುವಂತೆ; ಅದರಿಂದ ನಾನು ಹೊರಬರಬೇಕು ಎನ್ನುವುದು ನನಗೆ ಗೊತ್ತಿತ್ತು. ಒಬ್ಬ ಅಮೇರಿಕನ್ ಕವಿಯಾಗಿರುವುದೆಂದರೆ ಏನು ಎನ್ನುವುದನ್ನು ನಾನು ತಿಳಿಯಲು ಯತ್ನಿಸಿದ್ದು ಇಂಗ್ಲೆಂಡಿನಲ್ಲಿ ನೆಲಸಿದ್ದ ವರ್ಷಗಳಲ್ಲಿ, ಅಮೇರಿಕಕ್ಕೆ ಮರಳಬೇಕೆಂದು ಹಂಬಲಿಸುತ್ತಿದ್ದ ಸಮಯದಲ್ಲಿ. ನಾನೊಬ್ಬ ಇಂಗ್ಲಿಷ್ ಕವಿಯಲ್ಲ ಎನ್ನುವುದು ನನಗೆ ನಿಜಕ್ಕೂ ಗೊತ್ತಿತ್ತು. ಆದರೆ ಅಮೇರಿಕನ್ ಕವಿಯಾಗಿರುವುದು ಎಂದರೆ ಏನು ಎನ್ನುವುದು ನನಗೆ ಈಗಲೂ ಗೊತ್ತಿಲ್ಲ. ಆ ಬಗ್ಗೆ ನಾವೀಗ ಚಿಂತಿಸಬೇಕಾದ್ದಿಲ್ಲ ಎನ್ನುವುದು ಸಮಾಧಾನಕರ. ನಲವತ್ತರ ದಶಕದಲ್ಲಿ ನಾವು ಆ ಬಗ್ಗೆ ಇನ್ನೂ ಚಿಂತಿಸಬೇಕಾಗಿತ್ತು.

ಸಂದರ್ಶಕ: ರಾಬರ್ಟ್ ಗ್ರೇವ್ಸ್ (Robert Graves) ನಿಮಗೆ ಪರಿಚಯವಾದ್ದು ಯಾವಾಗ? ಆತನ ಮನೆಯಲ್ಲಿ ಮನೆಪಾಠದವನಾಗಿ (tutor) ಕೆಲಸ ಮಾಡುತ್ತಿದ್ದಾಗ ಅವನ ಜತೆಗಿನ ನಿಮ್ಮ ಸಂಬಂಧ ಹೇಗಿತ್ತು?

ಮರ್ವಿನ್: ಅದೊಂದು ಕೌಟುಂಬಿಕ ಸಂಬಂಧವಾಗಿತ್ತು. ನನ್ನ ಎರಡನೇ ಮನೆಪಾಠ ಪೋರ್ಚುಗಲ್‍ ನಲ್ಲಿ, ಪೋರ್ಚುಗೀಸ್ ರಾಜಮನೆತನದಲ್ಲಿ ಇತ್ತು. ನನಗೆ ತಿಂಗಳಿಗೆ ನಲುವತ್ತು ಡಾಲರ್ ಸಿಗುತ್ತಿತ್ತು. ವಸತಿ, ಊಟ ಇತ್ಯಾದಿ ದೊರಕುತ್ತಿದ್ದುವು, ಖರ್ಚು ಏನೇನೂ ಇರಲಿಲ್ಲ. ಬೇಸಿಗೆಯಲ್ಲಿ ನಾನು ಹಾಲಿನ ಟ್ರೇನುಗಳಲ್ಲಿ ಸ್ಪೇನಿಗೆ ಹೋಗುತ್ತಿದ್ದೆ. ಮತ್ತು ರಾಬರ್ಟ್ ಗ್ರೇವ್ಸ್‍ ನ ಭೇಟಿಯಾಗಲು ನಿರ್ಧರಿಸಿದ್ದೆ. ಆದ್ದರಿಂದ ನಾನು ಸುಮ್ಮನೆ ಹೋಗಿ ಅವನ ಮನೆಬಾಗಿಲು ತಟ್ಟಿದೆ. ಸೋಲರ್ ಬಂದರಿನ ಮನೆಯೊಂದರಲ್ಲಿ ನಾನು ವಾಸಮಾಡುತ್ತಿದ್ದೆ, ಗ್ರೇವ್ಸ್ ನನ್ನನ್ನು ಊರ ಒಂದಾನೊಂದು ಮನೆಗೆ ವರ್ಗಾಯಿಸಿದ; ನಾವು ಒಟ್ಟಿಗೆ ಸ್ವಲ್ಪ ಕಾಲ ಕಳೆಯಬಹುದು ಎನ್ನುವುದು ಅವನ ಉದ್ದೇಶವಾಗಿತ್ತು. ನಾನು ಅಲ್ಲಿರುವಾಗ, ಅವನ ಮನೆಗೆ ಬರುತ್ತಿದ್ದ ಟ್ಯೂಟರ್ ತಾನು ಬರಲಾಗುವುದಿಲ್ಲ ಎಂದು ಹೇಳಿಕಳಿಸಿದ. `ಈ ಕೆಲಸ ನಿನಗೆ ಇಷ್ಟವೇ?’ ಎಂದು ಗ್ರೇವ್ಸ್ ನನ್ನನ್ನು ಕೇಳಿದ. `ಖಂಡಿತಾ’ ಎಂದೆ ನಾನು. ಹೀಗೆ ನನಗೆ ಕೆಲಸ ಸಿಕ್ಕಿದ್ದು. ಅದೊಂದು ಅದೃಷ್ಟ.

ಸಂದರ್ಶಕ: ಹೀಗೆ ಎಷ್ಟು ಕಾಲ ಅವನಲ್ಲಿ ಕೆಲಸ ಮಾಡಿದಿರಿ?

ಮರ್ವಿನ್: ನಾನವನಲ್ಲಿ ಕೆಲಸ ಮಾಡಿದುದು ಒಂದೇ ವರ್ಷ. ಆದರೆ ಆ ನಂತರ ಚಳಿಗಾಲದ ಒಂದು ಭಾಗವನ್ನು ಹಳ್ಳಿಗೆ ಮರಳಿ ಅಲ್ಲಿ ಕಳೆದೆ, ಬಿ.ಬಿ.ಸಿ.ಗೆ ಸಿದ್‍ ನ ಹಾಡನ್ನು (The Song of Cid) ಭಾಷಾಂತರ ಮಾಡುತ್ತ. ರಾಬರ್ಟ್ ತೀರಿಕೊಂಡ ನಂತರ ನಾನು ಕೆಲವು ವಿಷಯಗಳನ್ನು ಕೂಡಿ ಹಾಕಿ ಬರೆಯಲು ಯತ್ನಿಸುತ್ತ ಬಂದಿದ್ದೇನೆ. ಹೊಂದಿಕೊಳ್ಳುವುದಕ್ಕೆ ಅವನು ಜಗತ್ತಿನಲ್ಲಿ ಅತ್ಯಂತ ಸುಲಭದ ಮನುಷ್ಯನೇನೂ ಆಗಿರಲಿಲ್ಲ. ನಮ್ಮಿಬ್ಬರಿಗೆ ನಿಜಕ್ಕೂ ಸರಿಹೊಂದಲಿಲ್ಲ—ಎಂದರೆ ಅಷ್ಟೊಂದು ಚೆನ್ನಾಗಿ ಹೊಂದಲಿಲ್ಲ ಎಂದು ಅರ್ಥ. ಹಲವು ಯುವಜನರೊಂದಿಗೆ ನಮಗೆ ಸರಿಬರುತ್ತಿರಲಿಲ್ಲ, ಮುಖ್ಯವಾಗಿ ಇತರ ಕವಿಗಳ ಜತೆ. ಮತ್ತು ನಾವು ಮಿತ್ರರಾಗಿ ಬೀಳ್ಕೊಡಲಿಲ್ಲ.

ಸಂದರ್ಶಕ: ಸಮಸ್ಯೆ ಏನಾಗಿತ್ತು?

ಮರ್ವಿನ್: ಅದೆಲ್ಲಾ ಚಿಕ್ಕದೊಂದು ವರ್ತುಲವಾಗಿತ್ತು, ಹಾಗೂ ಯಾವುದೇ ಒರಸು ನಿಜಕ್ಕೂ ಭಾರೀ ಒರಸಾಗುತ್ತಿತ್ತು. ರಾಬರ್ಟ್ ಗ್ರೇವ್ಸ್‍ ನಿಂದ ಬಿಟ್ಟು ಬಂದ ನಂತರ ನಾನು ಒಂದೆರಡು ಬಾರಿ ಈ ಬಿರುಕನ್ನು ಸರಿಪಡಿಸಲು ಪ್ರಯತ್ನಿಸಿದ್ದಿದೆ; ಆದರೆ ತಾನು ರಿವರ್ಸ್ ಗೀಯರ್ ರಹಿತವಾಗಿ (ಹಿನ್ನಡೆ ಇಡದವನಾಗಿ) ಹುಟ್ಟಿದ್ದು ಎಂದ ಅವನು. ಇತರ ಹಲವರಿಗೂ ಇದೇ ಅನುಭವ ಆಗಿರದೇ ಇದ್ದ ಪಕ್ಷ ನನಗೆ ಇನ್ನಷ್ಟು ವ್ಯಥೆಯೆನಿಸುತ್ತಿತ್ತು.

ಸಂದರ್ಶಕ: ಎಲಿಯೆಟ್‍ನ (T. S. Eliot) ಪ್ರಭಾವ ನಿಮ್ಮ ಕೆಲವು ಕೃತಿಗಳ ಮೇಲೆ ನಾನು ಕಂಡಿದ್ದೇನೆ. ನಿಮಗವನ ಪರಿಚಯವಿತ್ತೆ?

ಕವಿತೆಯೆಂದರೆ ಭಾಷೆಯನ್ನು ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಸಂಪೂರ್ಣವಾಗಿ ಬಳಸುವುದು ಎಂಬ ಕಾರಣಕ್ಕೆ. ಅದನ್ನು ಮಾಡಬೇಕಿದ್ದರೆ ಭಾಷೆಯನ್ನೊಂದು ಅಲಂಕಾರವಾಗಿಯೋ ಮನೋರಂಜನೆಯಾಗಿಯೋ ನೀವು ಯೋಚಿಸಬಾರದು, ಭಾಷೆ ಸಂತೋಷದಾಯಕವಾಗಿ ಇರಬೇಕೆಂದು ಬಯಸಿದರೂ ಸಹಾ. ಸಂತೋಷವೆಂದರೆ ಪೂರ್ಣತೆಯ ಭಾಗ.

ಮರ್ವಿನ್: ಹೌದು, ಐವತ್ತರ ದಶಕದ ಆದಿಯಲ್ಲಿ, ಲಂಡನ್‍ನಲ್ಲಿ. ಎಲಿಯೆಟ್ ತುಂಬಾ ದಯಾಳು ವ್ಯಕ್ತಿಯಾಗಿದ್ದ. ಆ ದಿನಗಳಲ್ಲಿ ನಾನು ಫ್ರೆಂಚ್ ಸಿಗರೇಟು ಇಷ್ಟಪಡುತ್ತಿದ್ದೆ. ಜನ ಎಲಿಯೆಟ್‍ ಗೆ ಫ್ರೆಂಚ್ ಸಿಗರೇಟು ಕೊಡುತ್ತಿದ್ದರು. ಅವನಾದರೆ ಅವುಗಳನ್ನು ಸೇದುವುದನ್ನು ನಿಲ್ಲಿಸಿದ್ದ. ಆದ್ದರಿಂದ ಅವನನ್ನು ನೋಡಲು ನಾನು ಹೋದಾಗಲೆಲ್ಲ ಡ್ರಾವರ್ ತೆಗೆದು ಮೂಟೆ ಮೂಟೆ ಫ್ರೆಂಚ್ ಸಿಗರೇಟುಗಳನ್ನು ನನಗೆ ಕೊಡೋನು. ಐವತ್ತರ ದಶಕದ ಮೊದಲಲ್ಲಿ ಲಂಡನ್‍ ನಲ್ಲಿ ಇದು ದೊಡ್ಡ ಸಂಗತಿಯಾಗಿತ್ತು. ಅವನಿಗೆ ನನ್ನ ನೆನಪಿತ್ತು ಎನ್ನುವುದು ನನ್ನ ಮನಸ್ಸನ್ನು ತಟ್ಟಿದ ಸಂಗತಿ. ನಾವು ಕೂತು ಅಮೇರಿಕದ ಬಗ್ಗೆ ಮಾತಾಡಿಕೊಳ್ಳುತ್ತಿದ್ದೆವು. ಎಲಿಯೆಟ್‍ ನದೊಂದು ಮಗ್ಗುಲಿತ್ತು, ಯುನೈಟೆಡ್ ಸ್ಟೇಟ್ಸ್ ಕುರಿತು ತುಂಬಾ ವ್ಯಸನಿಯಾಗಿದ್ದ ಮಗ್ಗುಲು ಅದು, ಮತ್ತು ನಾನು ಸಹಾ ಲಂಡನಿನಲ್ಲಿ ಊರ ಕುರಿತು ನೆನೆದುಕೊಳ್ಳುತ್ತಿದ್ದೆ. ನಮ್ಮ ನಡುವೆ ಹಲವಾರು ಸ್ವಾರಸ್ಯಕರ ಮಾತುಕತೆಗಳು ನಡೆದುವು—ಒಹಾಯೋ ನದಿಯ ಬಗ್ಗೆ ಮತ್ತು ಮಿಸಿಸಿಪಿ ದಡದ ಸೈಂಟ್ ಲೂಯಿಸ್‍ನಲ್ಲಿದ್ದ ಅವನ ಕುಟುಂಬದ ಬಗ್ಗೆ. ನದೀನೌಕೆಗಳ ಬಗ್ಗೆ. ಆ ಜಗತ್ತಿನ ಕುರಿತು ಸಂಬಂಧವಿರುವ ಅವನನ್ನು ಕಲ್ಪಿಸುವುದೆಂದರೆ ಅದು ವಿಚಿತ್ರವೇ ಸರಿ. ಅವನು ಡೆಲ್ಟಾ ಕ್ವೀನ್ (Delta Queen) ಬಗ್ಗೆ ಮಾತಾಡುತ್ತಿದ್ದ—ಅದು ಈಚೆಗೆ ಕೆಲವು ವರ್ಷಗಳ ಹಿಂದಿನ ತನಕ ಜನರನ್ನು ನದಿಯಲ್ಲಿ ಆಚೀಚೆ ಸಾಗಿಸುತ್ತಿದ್ದ ಸಾರಿಗೆ ಉಗಿಹಡಗ. ಅವನಿಗೆ ನಿಜಕ್ಕೂ ಆ ಹಡಗದಲ್ಲೊಂದು ಪ್ರಯಾಣ ನಡೆಸಬೇಕೆಂಬ ಆಸೆಯಿತ್ತು. ಆ ದಿನಗಳಲ್ಲಿ ನನಗೆ ಪದ್ಯನಾಟಕಗಳನ್ನು ಬರೆದರೆ ಆಗಬಹುದು ಎಂಬ ಇರಾದೆಯಿತ್ತು, ಆಗ ನನಗೆ ಇಪ್ಪತ್ತರ ಹರಯದ ಆರಂಭ. ಆದರೆ ಕೆಲವು ಸಮಯದ ನಂತರ ನನಗನಿಸಿತು ಅವು ಚೆನ್ನಾಗಿ ಬರುತ್ತಿಲ್ಲ, ಹಾಗೂ ಪದ್ಯದಿಂದ ಅವಕ್ಕೆ ಏನೂ ಸಹಾಯ ಆಗುತ್ತ ಇಲ್ಲ ಎಂದು. ಪದ್ಯನಾಟಕಗಳಲ್ಲಿ ನನ್ನ ಮನಸ್ಸು ನಟ್ಟಿದ್ದ ವರೆಗೆ ನಾಟಕ ರಚನೆಯಲ್ಲಿ ನಾನೇನೂ ಕಲಿಯುತ್ತ ಇರಲಿಲ್ಲ. ಆ ಕುರಿತು ನಾನು ಎಲಿಯೆಟ್ ಜತೆ ಮಾತಾಡಿದೆ. ನಾನು ಅವುಗಳನ್ನು ಪದ್ಯದಲ್ಲಿ ಬರೆಯುವ ಯೋಚನೆಯನ್ನೇ ಬಿಟ್ಟುಬಿಡುತ್ತೇನೆ, ಗದ್ಯದಲ್ಲಿ ಬರೆಯಲು ಪ್ರಯತ್ನಿಸುತ್ತೇನೆ ಎಂದೆ. `ಸರಿ’, ಎಂದ ಅವನು. `ನಾನೂ ಸಹಾ ಹಾಗೆ ಮಾಡಲು ಯೋಚಿಸಿದ್ದಿದೆ, ಆದರೆ ನಾನು ನನ್ನ ನಾಟಕಗಳನ್ನು ಪದ್ಯದಲ್ಲಿ ಬರೆಯುವುದಾದರೆ, ನನಗಿಂತಲೂ ಚೆನ್ನಾಗಿ ಆ ಕೆಲಸ ಮಾಡಬಲ್ಲವರು ಬೇರೆ ಎಷ್ಟೋ ಜನ ಇದ್ದಾರೆ.’

ಸಂದರ್ಶಕ: ಒಬ್ಬ ಕವಿಯಾಗಿ, ವ್ಯಕ್ತಿಯಾಗಿ ಆಡೆನ್ (W. H. Auden) ನಿಮಗೆ ಎಷ್ಟು ಮುಖ್ಯವಾಗಿದ್ದ?

ಮರ್ವಿನ್: ಆಡೆನ್‍ನ್ನ ನಾನು ತುಂಬಾ ಆರಾಧಿಸುತ್ತಿದ್ದೆ. ಅವನ ಕೆಲವು ಕವಿತೆಗಳು ನನಗೆ ತುಂಬಾ ಮೆಚ್ಚುಗೆಯಾದಂಥವು. ವೈಯಕ್ತಿಕವಾಗಿ ನಾವು ಒಬ್ಬರನ್ನೊಬ್ಬರು ಪರಿಚಯ ಅಂತ ಮಾಡಿಕೊಂಡದ್ದೇ ಇಲ್ಲ. ನಾವು ಪರಸ್ಪರ ಭೇಟಿಯಾದುದು ಎರಡೇ ಎರಡು ಬಾರಿ ಅನಿಸುತ್ತದೆ. ನನ್ನ ಯೇಲ್ ಯುವಕವಿಗಳ ಪುಸ್ತಕಕ್ಕೆ ಅವನು ಮುನ್ನುಡಿ ಬರೆದ ಕಾಲಕ್ಕೆ ಅವನು ನನಗೆ ಹಿರಿಯನ ಸ್ಥಾನದಿಂದ ಬರೆದ ಕೆಲವು ವಿಸ್ಮಯಕಾರಿ ಪತ್ರಗಳಿವೆ. ಆದರೆ ನಾವೆಂದೂ ಗೆಳೆಯರಾಗಲಿಲ್ಲ. ನಮ್ಮ ಹಾದಿಗಳು ಸಂಧಿಸಲೇ ಇಲ್ಲ, ಅಷ್ಟೆ. ನಾನವನ ಕುರಿತು ಮೂಕವಿಸ್ಮಿತನಾಗಿದ್ದೆ. ನಾಚಿಕೆ ಸ್ವಭಾವದ ನಾನು ಅವನ ಮೇಲೆ ಹೇರಿಕೊಳ್ಳುವುದಕ್ಕೆ ಹಿಂಜರಿಯುತ್ತಿದ್ದೆ. ನಾವಿಬ್ಬರೂ ವಿಲ್ಲೇಜಿನಲ್ಲಿದ್ದಾಗ, ಅಲೆನ್ ಗಿನ್ಸ್‍ಬರ್ಗ್ (Allen Ginsberg) ಜತೆ ಅವನು ನಡೆದಾಡುವುದನ್ನು ನಾನು ನೋಡುತ್ತಿದ್ದೆ. ಅಲೆನ್ ಹೇಳಿಕೊಳ್ಳುತ್ತಿದ್ದ, ತನ್ನಲ್ಲಿ ಆಡೆನ್ ಮನೆಯ ಬೀಗದ ಕೈಯಿದೆ ಎಂಬುದಾಗಿ. `ನಾವು ಆಡೆನ್ ಮನೆಗೆ ಹೋಗೋಣವೇ?’ ಎನ್ನುತ್ತಿದ್ದ ಅವನು. `ಆ ಮನುಷ್ಯನೆಂದರೆ ನನಗೆ ಭಕ್ತಿ.’ `ನನಗೂ ಸಹಾ. ಸರಿ, ಹೋಗೋಣ’, ಎಂದೆ ನಾನೊಮ್ಮೆ. ನಾವು ಹೋದೆವು ಕೂಡ, ದೇವರೇ ದಿಗ್ಭ್ರಮೆ ಪಡುವ ಅಸ್ತವ್ಯಸ್ತತೆ ಅಲ್ಲಿತ್ತು ಎನ್ನುವುದನ್ನು ಹೇಳಲೇಬೇಕು. ಅಂಥ ಅವ್ಯವಸ್ಥೆಯನ್ನು ನಾನು ಇನ್ನೆಲ್ಲೂ ಕಂಡುದಿಲ್ಲ. ಯಾವುದನ್ನೂ ಎಂದೂ ಒರೆಸಿರಲಿಲ್ಲ, ಧೂಳು ಹೊಡೆದಿರಲಿಲ್ಲ. ಕೆಲವು ಜನರಿಗೆ ಅಲ್ಲಿ ಉಳಿದುಕೊಳ್ಳಲು ಬಿಟ್ಟಿದ್ದ. ಅವರೂ ಆತನಷ್ಟೇ ಗೋಜಲಾಗಿದ್ದರು. ಯಾರೋ ಕೇಳಿದ್ದರು ಅವನಿಗೆ, ನೀನು ಮರಳಿದಾಗ ಏನು ಮಾಡುತ್ತೀ ಎಂದು. ಮೇಲಿನ ಪರೆಯನ್ನು ಕೆರೆದು ಅದನ್ನವರು ಒಯ್ಯಬಹುದು, ಎಂದಿದ್ದ ಆಡೆನ್.

ಸಂದರ್ಶಕ: ನೀವು ಬೆಳೆದುಬಂದ ರೀತಿಯಲ್ಲಿ ಅಲೆಮಾರಿ ಎಳೆಯೊಂದು ಸೃಷ್ಟಿಯಾಯಿತು ಎನ್ನುವಿರಾ?

ಮರ್ವಿನ್: ಬಹುಶಃ. ಆದರೆ ನಾನು ಎಂದಿನಿಂದಲೂ ಪ್ರವಾಸ ಮಾಡಲು ಬಯಸಿದ್ದೆ. ಎಂದರೆ, ನಾನು ಚಿಕ್ಕವನಿದ್ದಾಗ, ನನ್ನ ತಂದೆಯ ಚರ್ಚಿನ ಒಳ ಹೋಗಿ ನನಗಾಗುತ್ತಿದ್ದ ಮಹದಾನಂದದ ನೆನಪಿದೆ, ಅಲ್ಲಿ ಒಳಕ್ಕೆ ತಂದೆಯ ಅಧ್ಯಯನ ಕೊಠಡಿಗೆ ಪ್ರವೇಶ ಗಿಟ್ಟಿಸುವುದು, ಅಲ್ಲಿಂದ ನದೀ ಮೇಲಣ ದೋಣಿಗಳನ್ನು ನೋಡುವುದು, ಮತ್ತು ಸಮುದ್ರಯಾನದ ಕಲ್ಪನೆ ಮಾಡುವುದು. ಸರ್ ವಾಲ್ಟರ್ ರಾಲೆಯ (Sir Walter Raleigh) ಹಳೇ ಕನಸು ಅದು—ಹಡಗದಲ್ಲಿ ಹೊರಡುವುದು. ಅದೇ ನನ್ನನ್ನು ನನಗೆ ಹನ್ನೆರಡಾದಾಗ ಕಾನ್ರಾಡನನ್ನು (Joseph Conrad) ಓದುವಂತೆ ಮಾಡಿದುದು. ನನ್ನನ್ನು ಬರೆಯುವಂತೆ ಮಾಡಿದ ಪ್ರಪ್ರಥಮ ಲೇಖಕರಲ್ಲಿ ಕಾನ್ರಾಡ್ ಒಬ್ಬ.

ಸಂದರ್ಶಕ: ನಿಮ್ಮ ಕೃತಿಗಳಿಂದ `ಕೈಗಾರಿಕಾ ಕ್ರಾಂತಿಯ ಪರಿಕರ’ವನ್ನು ದೂರವಿರಿಸಿದ್ದಕ್ಕೆ ನೀವು ಟೀಕೆಗೆ ಒಳಗಾಗಿದ್ದೀರಿ.

ಮರ್ವಿನ್: ಟೀಕೆ ಸರಿಯಿರಬಹುದು. ನಾವು ಏನು ಬರೆಯುತ್ತೇವೆ ಎನ್ನುವುದು ಸಂಪೂರ್ಣವಾಗಿ ವೈಚಾರಿಕ ಅಥವಾ ಉದ್ದಿಶ್ಯವಾದ ಆಯ್ಕೆಯಲ್ಲ. ಚರಿತ್ರೆಯ ಸದ್ಯತೆಗಳು ನನಗಿಂತ ಹೆಚ್ಚಾಗಿ ಕಣ್ಣಿಗೆ ಬೀಳುವ ಕವಿಗಳ ಕುರಿತಾಗಿ ನನಗೆ ಅಸೂಯೆಯಿದೆ. ನನ್ನ ಸಮಸ್ಯೆಗಳು ಬಹುಶಃ ಈ ರೀತಿ: ನಾನು ಮಗುವಾಗಿ ನಗರಗಳಲ್ಲಿ ಜೀವಿಸಿದ್ದರೂ, ನನಗೆ ಅವುಗಳ ಜತೆ ವ್ಯವಹರಿಸಲು ನನಗೆ ಎಂದೂ ಪರವಾನಗಿ ಇರಲಿಲ್ಲ, ಆದ್ದರಿಂದ ನಾನು ಅನ್ಯತೆಯ ಭಾವ ಅನುಭವಿಸಬೇಕಾಯಿತು. ನಗರಗಳಿಂದ ಹೊರಬಿದ್ದ ಇಲ್ಲವೇ ಅವುಗಳಿಗೆ ಮರಳಿದ ಕೂಡಲೆ ನಾನು ಭಿನ್ನ ವ್ಯಕ್ತಿಯಂತೆ ಎನಿಸಿದ್ದಿದೆ. ಅದರೆ ಹಲವು ವರ್ಷಗಳ ವರೆಗೆ ಅದೊಂದು ದ್ವಂದ್ವಕ್ಕೆ ಸರಿಯಾಗಿತ್ತು ನಿಜ. ಯಾಕೆಂದರೆ ಅಂತಿಮ ನಗರದ ಅಗತ್ಯ ನನಗೆ ಅನಿಸಿತ್ತು, ನನಗದು ನ್ಯೂ ಯಾರ್ಕ್, ಆದರೂ ಸಹಾ ತೀರಾ ವಿರುದ್ಧವಾದ್ದನ್ನೂ ನಾನು ಬಯಸುತ್ತಿದ್ದೆ, ಎಂದರೆ ಗ್ರಾಮೀಣ ಪರಿಸರವನ್ನು, ಅದು ಕಾಣಲು ಸಾಧ್ಯವಾದಲ್ಲೆಲ್ಲ, ಹಾಗೂ ಇವು ಸದಾ ನನ್ನನ್ನು ವಿರುದ್ಧ ದಿಕ್ಕುಗಳಲ್ಲಿ ಸೆಳೆಯುತ್ತಿದ್ದುವು.

ಸಂದರ್ಶಕ: ನಿಮ್ಮ ಐದನೆಯ ಮತ್ತು ಆರನೆಯ ಪುಸ್ತಕಗಳು, The Moving Target ಮತ್ತು The Lice, ಅವುಗಳ ಹಿಂದಣ ಪುಸ್ತಕಗಳಿಗಿಂತ ತೀರಾ ಭಿನ್ನವಾಗಿವೆ. ತಾಂತ್ರಿಕ ನೆಲೆಯಲ್ಲಿ ಅವು ನಲವತ್ತರ ಮತ್ತು ಐವತ್ತರ ದಶಕಗಳ ರೂಪಶೈಲಿಯಿಂದ ಬೇರಾಗಿವೆ, ಸಾಲುಗಳನ್ನು ಮತ್ತು ಚರಣಗಳನ್ನು ತುಂಡರಿಸುವ, ಪದಗಳನ್ನು ಮತ್ತು ವಾಕ್ಯಗಳನ್ನು ಸಡಿಲಗೊಳಿಸುವ ರೀತಿಯಲ್ಲಿ. The Moving Target ನ ಮೂರನೇ ಎರಡು ಭಾಗ ತಲಪುವ ಹೊತ್ತಿಗೆ ನೀವು ವಿರಾಮ ಚಿಹ್ನೆಗಳನ್ನು ಥಟ್ಟನೇ ಕೈಬಿಡುತ್ತೀರಿ. ಏನಾಯಿತು?

ಮರ್ವಿನ್: ಐವತ್ತರ ದಶಕದ ಕೊನೆಯಲ್ಲಿ ನನಗನಿಸತೊಡಗಿತು, ನಾನು ನನ್ನ ಬರೆಯುವ ರೀತಿಯ ಕೊನೆ ಮುಟ್ಟಿದ ಹಾಗೆ. ನಾನದನ್ನು ತಿರಸ್ಕರಿಸಲಿಲ್ಲ. ಆದರೆ ಅದಿನ್ನು ನನಗೆ ತೃಪ್ತಿ ಕೊಡಲಿಲ್ಲ. ಆದ್ದರಿಂದ ಸುಮಾರು ಎರಡು ವರ್ಷಗಳ ಹತ್ತಿರ ಹತ್ತಿರ ನಾನು ಕವಿತೆ ಬರೆಯಲಿಲ್ಲ. ನಂತರ, ಥಟ್ಟೆಂದು, The Moving Target ನ ಮೊದಲ ಕವಿತೆಗಳು ಬಂದವು, ಎಕದೇಶ ಅರ್ಧ ಪುಸ್ತಕದಷ್ಟು ಕವಿತೆಗಳನ್ನು ನಾನು ಕೆಲವು ವಾರಗಳಲ್ಲಿ ಬರೆದೆ—ಅದೆಲ್ಲವೂ ಬೇರೊಂದು ತರದ ತುಡಿತದಿಂದ ಬಂದವು, ಅದು ಸಿದ್ಧಗೊಳ್ಳುತ್ತಿತ್ತು ಎಂಬ ಅರಿವು ನನಗೆ ಇರಲಿಲ್ಲ. ನಾನು ಯರೋಪಿನಲ್ಲಿದ್ದೆ. ಅಮೇರಿಕೆಗೆ ಮರಳಿದರೆ ಅಕಡೆಮಿಕ್ ಉದ್ಯೋಗದಲ್ಲಿ ನಾನು ತೊಡಗಿಸಿಕೊಳ್ಳಬೇಕಾಗುವುದು, ಅಥವಾ ಅಂಥದೇ ಇನ್ನೊಂದರಲ್ಲಿ. ಅದು ನನಗೆ ಬೇಕಿರಲಿಲ್ಲ, ಆದರೂ ಇಂಗ್ಲೆಂಡಿನಲ್ಲಿ ಇನ್ನು ಇರುವುದು ಬೇಡವಾಗಿ, ನನ್ನ ಜೀವನವನ್ನು ಬದಲಿಸುವ, ಆದರೆ ಹೇಗೆಂದು ತಿಳಿಯದ, ತಲ್ಲಣ ಬೆಳೆದು ಬಂತು, ಪರಿಣಾಮವೆಂದರೆ ಹೊಸ ತರಹದ ಒಂದು ಬರಹದ ಬಿಡುಗಡೆ, The Moving Target ನ ಮೊದಲ ಭಾಗದ ಹಲವಾರು ರೂಪಕಗಳು, ಕವಿತೆಗಳು. ಪುಸ್ತಕದ ಎರಡನೆಯ ಭಾಗವನ್ನು ನಾನು ನ್ಯೂ ಯಾರ್ಕಿಗೆ ಮರಳಿದ ನಂತರ, ಲೋವರ್ ಈಸ್ಟ್ ಸೈಡಿನಲ್ಲಿ ನೆಲಸಿದ್ದ ಕಾಲದಲ್ಲಿ, ಬರೆದುದು. ವಿರಾಮ ಚಿಹ್ನೆಗಳನ್ನು ಕೈಬಿಟ್ಟುದಕ್ಕೆ ಕಾರಣ ಬಹುಶಃ ನಾನು ಹಲವು ವರ್ಷಗಳ ಕಾಲ ಸ್ಪ್ಯಾನಿಶ್ ಮತ್ತು ಫ್ರೆಂಚ್ ಕವಿತೆಗಳನ್ನು ಓದುತ್ತಿದ್ದುದು. ಫಕ್ಕನೆ ನನಗನಿಸಿದ್ದು ಅದೊಂದು ಪರಂಪರೆಯ ಭಾಗ; ಆ ಪರಂಪರೆಯನ್ನು ನಾನು ಬಯಸಿದರೆ ಅದು ನನ್ನದೇ. ಅಲ್ಲದೆ ಗದ್ಯಕ್ಕೆ ಇರುವುದಕ್ಕಿಂತಲೂ ಹೆಚ್ಚು ಗಟ್ಟಿಯಾಗಿ ಪದ್ಯಕ್ಕೆ ಮಾತಿನ ಜತೆ ಸಂಬಂಧವಿದೆ ಎಂದು ನಾನು ನಂಬಿದೆ. ವಿರಾಮಚಿಹ್ನೆಯ ಸಂಬಂಧವಿರುವುದು ಗದ್ಯದ ಜತೆ, ಅದರಲ್ಲೂ ಮುದ್ರಣದ ಜತೆ. ವಿರಾಮಚಿಹ್ನೆಯೆಂದರೆ ಶಬ್ದಗಳನ್ನು ಪುಟದ ಮೇಲಿರಿಸಿ ಮೊಳೆ ಹೊಡೆದ ಹಾಗೆ. ನನಗೆ ಆಡುಮಾತಿನ ಚಲನೆ ಮತ್ತು ಹಗುರ ಬೇಕಾದ್ದರಿಂದ, ಅದರ ಕಡೆಗಿನ ಒಂದು ಹೆಜ್ಜೆಯೆಂದರೆ ವಿರಾಮಚಿಹ್ನೆಯನ್ನು ಬಿಟ್ಟುಬಿಡುವುದು, ಶಬ್ದಗಳ ಚಲನೆಯೇ ತಮ್ಮ ವಿರಾಮಗಳನ್ನು ತಾವಾಗಿ ಪಡೆದುಕೊಳ್ಳುವಂತೆ ಮಾಡುವುದು, ಸಾಮಾನ್ಯ ಮಾತಿನಲ್ಲಿ ಆಗುವ ಹಾಗೆ.

ಸಂದರ್ಶಕ: ಜೇಮ್ಸ್ ರೈಟ್ (James Wright) ಕೂಡ ಅದೇ ಕಾಲಕ್ಕೆ ತನ್ನ ಕೃತಿಗಳಲ್ಲಿ ಇಂಥದೇ ತಲ್ಲಣ ಅನುಭವಿಸಿದ್ದ. ನಿಮಗೂ ಅವನಿಗೂ ಆದ ಸಂಗತಿಗಳ ನಡುವೆ ಒಂದು ಸಂಬದ್ಧ ನಿಮಗೆ ಕಂಡುಬರುವುದೇ?


ಮರ್ವಿನ್:  ಓಹ್, ನಿಜ. ಆದರೆ ನಾವು ಒಬ್ಬರಿಗೆ ಇನ್ನೊಬ್ಬರು ಏನು ಮಾಡುತ್ತಿದ್ದೆವು ಎನ್ನುವುದು ಗೊತ್ತಿರಲಿಲ್ಲ. ಹಲವಾರು ಜನ—ಲೂಯಿ ಸಿಂಪ್ಸನ್ (Louis Simpson), ರಾಬರ್ಟ್ ಬ್ಲೈ (Robert Bly)ಯಂಥವರು—ಆ ದಿಕ್ಕಿನಲ್ಲಿ ಚಲಿಸುತ್ತಿದ್ದರು. ಬೀಟ್ಸ್ (Beats) ಕವಿಗಳೂ ಇದ್ದರು. ನಾವು ಪರಸ್ಪರ ಪ್ರಭಾವಿಸಿದೆವು ಎನ್ನುವುದಕ್ಕಿಂತಲು ಹೆಚ್ಚಾಗಿ, ಒಂದೇ ರೀತಿ ಭಾವಿಸಿದೆವು ಎನ್ನುವುದು ಒಳ್ಳೆಯದು. ನಾನು ಯಾವುದನ್ನು ಕಟ್ಟುನಿಟ್ಟೆಂದು ತಿಳಿದುಕೊಂಡಿದ್ದೆನೋ ಅದನ್ನು ಮುರಿಯಲೂಬಹುದು ಎನ್ನುವುದು ಸುಸ್ಪಷ್ಟವಾಗಿತ್ತು. ಕಟ್ಟುನಿಟ್ಟು ಎನ್ನುವುದು ನಿಜಕ್ಕೂ ಇರಲೇ ಇಲ್ಲ. ಆ ಕಾಲದ ಕುರಿತಾದ ಇನ್ನೊಂದು ವಿಷಯವೆಂದರೆ—ಇದನ್ನು ಯಾರಾದರೂ ಸಂಪೂರ್ಣವಾಗಿ ವಿವರಿಸಿದ್ದಾರೆಯೇ ಎನ್ನುವುದು ನನಗೆ ಗೊತ್ತಿಲ್ಲ, ಬಹುಶಃ ಯಾರಿಂದಲೂ ಅದು ಸಾಧ್ಯವಿಲ್ಲ—ವಸ್ತುಗಳ ಗೌರವಾನ್ವಿತ ವಿಧಾನಗಳನ್ನು ಸಹಾ ಬಿಸಾಕಿಬಿಡುವುದು. ನಾವು ಸಾಹಿತ್ಯ ಜೀವನದ ಪರಿಕರಗಳನ್ನು ಮತ್ತು ಸಕಲವನ್ನೂ ಎತ್ತಿಬಿಸಾಕುತ್ತಿದ್ದೆವು, ಹ್ಹಾ ಅದೇನೂ ಮುಖ್ಯವಲ್ಲ ಎನ್ನುತ್ತ; ಏನು ಮುಖ್ಯವೆಂದರೆ ಭಿನ್ನವಾದ ಒಂದು ಕವಿತೆ ಬರೆಯುವುದು. ಅದು ಅದ್ಭುತವಾದ್ದು. ನಮಗಿಂತಲೂ ಚಿಕ್ಕವರಾದ ಕವಿಗಳು, ಕೆಲವು ರೀತಿಗಳಲ್ಲಿ, ಈ ಅನುಭವ ಪಡೆದಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಅಂದುಕೊಳ್ಳುತ್ತೇನೆ. ಬಿಟ್ಟುಬಿಡುವ ವಿಚಾರವನ್ನು ನಾನು ಪ್ರೀತಿಸುತ್ತೇನೆ—ಕೆಲವೇ ಕೆಲವು ತಿಂಗಳಿಗಾದರೂ—ಕವಿತೆಗಳನ್ನು ಯಾವುವು ಮಾಡುತ್ತವೆ, ಸಾಹಿತ್ಯ ಜೀವನಗಳನ್ನು ಯಾವುವು ಮಾಡುತ್ತವೆ, ಮತ್ತು ಯಾವುವು ಈ ಯಾವುವೇ ಸಂಗತಿಗಳನ್ನು ಮಾಡುತ್ತವೆ ಎನ್ನುವುದರ ಕುರಿತಾದ ನಮ್ಮ ಎಲ್ಲಾ ಕಲ್ಪನೆಗಳನ್ನೂ ಬಿಟ್ಟುಬಿಡುವುದು, ಅದಿಲ್ಲದೆ ಸ್ವಲ್ಪ ಕಾಲ ಬದುಕುವುದು.

ಸಂದರ್ಶಕ: ಒಂದೇ ತರದ ಅನುಭವಗಳನ್ನು ಹಂಚಿಕೊಳ್ಳುವ ಒಂದು ಪ್ರತ್ಯೇಕ ಗುಂಪಿಗೆ ನೀವು ಸೇರಿದ್ದಾಗಿ ನೀವು ನಿಮ್ಮನ್ನು ಎಷ್ಟರ ಮಟ್ಟಿಗೆ ಅಂದುಕೊಳ್ಳುತ್ತೀರೋ ತಿಳಿಯದು. ಉದಾಹರಣೆಗೆ, ನೀವು ನಿಮ್ಮ ಕೃತಿಗಳನ್ನು ಗಾಲ್ವೆ ಕಿನೆಲ್ (Galway Kinnell), ರಿಚರ್ಡ್ ಹೋವರ್ಡ್ (Richard Howard), ಆಂಥನಿ ಹೆಕ್ಟ್ (Anthony Hecht) ಮುಂತಾದವರಿಗೆ ಅರ್ಪಣೆ ಮಾಡಿದ್ದೀರಿ, ಮತ್ತು ಜೇಮ್ಸ್ ರೈಟ್‍ ಗೆ ನೀವೊಂದು ಮನಕರಗುವ ಹಾಯಿಕು ತರದ ಶೋಕಗೀತೆ ಬರೆದಿದ್ದೀರಿ.

ಮರ್ವಿನ್: ನಾನು ಆ ತಲೆಮಾರಿಗೆ ಸೇರಿದವನೆಂದು ಭಾವಿಸುತ್ತೇನೆ. ಆದರೆ ನಾನು ಯಾವುದೇ ಒಂದು ಪಂಥದ ಅಥವಾ ಚಳುವಳಿಯ ಅಥವಾ ಅಂಥ ಯಾವುದರದ್ದೂ ಭಾಗವೆಂದು ಅನಿಸುವುದಿಲ್ಲ. ನಾನೆಂದೂ ಹಾಗೆ ಆಗಿಲ್ಲ. ಐವತ್ತನೇ ದಶಕದ ಕೊನೆಯಲ್ಲಿ ಎಲ್ಲಾ ಅಮೇರಿಕನ್ ಕವಿತೆಯೂ ಎರಡು ಪಂಗಡಗಳಾಗಿ ಒಡೆದಿತ್ತು. ನನಗದು ಎಂದೂ ಅರ್ಥವಾಗಿಲ್ಲ. ನನಗೆ ಯಾವಾಗಲೂ ಭಿನ್ನ ಭಿನ್ನ ಕವಿಗಳು ಇಷ್ಟ—ರಾಬರ್ಟ್ ಕ್ರೀಲಿ (Robert Creeley) ಮತ್ತು ಡೆನಿಸ್ ಲೆವರ್‍ಟೋಲ್ (Denise Levertole) ಮತ್ತು ಜೆರಾಲ್ಡ್ ಸ್ಟರ್ನ್ (Gerald Stern) ಮತ್ತು ರಿಚರ್ಡ್ ಹೋವರ್ಡ್ ಮತ್ತು ಆಂಥನಿ ಹೆಕ್ಟ್ ಮುಂತಾದವರು—ಅದರಲ್ಲೇನಾದರೂ ಅವಿಧೇಯತೆಯೋ ಅಸಾಧ್ಯತೆಯೋ ಇದೆಯೆಂದು ನನಗೆ ಅನಿಸದೆ. ಕವಿತೆ ಒಂದು ವಿಶಿಷ್ಟ ತರದ್ದಾಗಿರಬೇಕು, ಅಲ್ಲದಿದ್ದರೆ ಅದು ಕವಿತೆಯೇ ಅಲ್ಲ ಎನ್ನುವ ಇತರ ಕವಿಗಳನ್ನು, ವಿಮರ್ಶಕರನ್ನು ಕಂಡರೆ ನನಗೆ ಬೇಸರವಾಗುತ್ತದೆ.

ಸಂದರ್ಶಕ: ಯು.ಎಸ್. ನಲ್ಲಿ ಮತ್ತು ವಿದೇಶಗಳಲ್ಲಿರುವ ಭ್ರೂಣರೂಪದ ಶಾಂತಿ ಚಳುವಳಿ ಮತ್ತು ಅಣುಶಕ್ತಿ ವಿರೋಧಿ ಚಳುವಳಿ ಕುರಿತು ನಿಮ್ಮ ಅನುಭವಗಳನ್ನು ಹೇಳುವಿರಾ?

ಮರ್ವಿನ್: ಸಂಬಂಧಗಳಿವೆ ಎನ್ನುವುದು ನನಗೆ ಯಾವತ್ತೂ ಗೊತ್ತಿತ್ತು. ಅವುಗಳನ್ನು ವಿಭಿನ್ನ ರೀತಿಗಳಲ್ಲಿ ಕಂಡುಕೊಳ್ಳಲು ಯತ್ನಿಸಿದ್ದೇನೆ, ಆದರೆ ನಾನದನ್ನು ಚೆನ್ನಾಗಿ ಮಾಡುತ್ತ ಇಲ್ಲವೆಂದು ಗೊತ್ತಾಯಿತು. ಅರವತ್ತನೇ ದಶಕದ ಆರಂಭದಲ್ಲಿ ನಾನು ರಾಜಕೀಯ ಘಟನೆಗಳ ಕುರಿತು ಒಂದಷ್ಟು ಲೇಖನಗಳನ್ನು ಬರೆದೆ. ನನ್ನ ತೊಡಗಿಸಿಕೊಳ್ಳುವಿಕೆ ಐವತ್ತರ ದಶಕದಲ್ಲಿ ಶುರುವಾಗಿತ್ತು. ಪ್ರತಿಭಟನೆಗಳಲ್ಲಿ ನಾನು ಮೊದಲು ಸೇರಿಕೊಂಡದ್ದು ಐವತ್ತರ ದಶಕದ ಕೊನೆಗೆ ಮತ್ತು ಅರುವತ್ತರ ಆರಂಭದಲ್ಲಿ, ಅಮೇರಿಕದಲ್ಲಿ. ಮೊದಲನೇದು ಒಂದು ಫೋರ್ಟ್ ಡಿಟ್ರೀಚ್‍ ನ ಹೊರಗೆ, ಮೇರಿಲ್ಯಾಂಡಿನಲ್ಲಿ. ಅಲ್ಲಿ ಜೀವರಾಸಾಯನಿಕ ಯುದ್ಧ ನೆಲೆಯೊಂದು ಇತ್ತು. ನಾವು ಆರೋ ಏಳೋ ಮಂದಿ ಗೇಟಿನ ಹೊರಗೆ ನಿಂತಿರುತ್ತಿದ್ದೆವು. ನಾವದಕ್ಕೆ `ಜಾಗರಣೆ’ (Vigil) ಎನ್ನುತ್ತಿದ್ದೆವು. ಅಮೇರಿಕದಲ್ಲಿ ಆ ದಿನಗಳಲ್ಲಿ ಪ್ರತಿಭಟನೆಗಳೆಂದರೆ ಅವು ಚಿಕ್ಕದಾಗಿರುತ್ತಿದ್ದುವು—ಎಂದರೆ, ಕೆಲವೊಮ್ಮೆ ಹನ್ನೆರಡು ಮಂದಿಯಿದ್ದರೆ ಭಾಗ್ಯ. ಬದಲಾಗಿ, 1958ರಲ್ಲಿ, ನಾನು ಇಂಗ್ಲೆಂಡಿನಲ್ಲಿದ್ದಾಗ, ಮೂರನೇ ಆಲ್ಡರ್‍ ಮಾಸ್ಟನ್ (Aldermaston) ಮೆರವಣಿಗೆಯಲ್ಲಿ ಭಾಗವಹಿಸಿದ್ದೆ, ಚಾರ್ಟಿಸ್ಟರ (Chartists) ನಂತರದ ಅತಿದೊಡ್ಡ ಮೆರವಣಿಗೆಯಾಗಿತ್ತು ಅದು, ಲೇಬರ್ ಪಕ್ಷವನ್ನು ಒಡೆಯುವುದರಲ್ಲಿತ್ತು. ಬೃಹತ್ತಾಗಿತ್ತದು. ಮತ್ತು ಮೆರವಣಿಗೆಯ ಅಂತ್ಯದಲ್ಲಿ ಇಡೀ ಸೆಂಟ್ರಲ್ ಲಂಡನ್ ಮೌನ ಪ್ರತಿಭಟನಕಾರರಿಂದ ನಿಬಿಡವಾಗಿತ್ತು. ಅದನ್ನು ಮರೆಯುವುದು ಸಾಧ್ಯವಿಲ್ಲ. ಟೆಡ್ ಹ್ಯೂಸ್ (Ted Hughes) ಮತ್ತು ಸಿಲ್ವಿಯಾ ಪ್ಲಾತ್ (Sylvia Plath) ಬಂದು ಅದರ ಮುಕ್ತಾಯವನ್ನು ನೋಡಿದರು ಎನ್ನುವುದೂ ನನಗೆ ನೆನಪಿದೆ. ಟೆಡ್ ಮತ್ತು ಸಿಲ್ವಿಯಾರಿಗೆ ಅಂಥಾದ್ದರಲ್ಲೆಲ್ಲ ಭಾಗವಹಿಸುವುದಕ್ಕೆ ಇಷ್ಟವಿರಲಿಲ್ಲ, ಆದರೆ ಅವರು ಖಂಡಿತಾ ಬಂದು ನೋಡಿದರು.

ಸಂದರ್ಶಕ: The Lice ನಿಮ್ಮ ಅತ್ಯಂತ ದಾರುಣವೂ, ಅತ್ಯಂತ ಪ್ರಳಯಾತ್ಮಕವೂ, ಮತ್ತು ವೇದನಾತ್ಮಕವೂ ಆದ ಪುಸ್ತಕ. ಪರ್ಯಾವರಣೀಯ ಮತ್ತು ರಾಜಕೀಯ ದ್ವೇಷದ ಇಂಧನದಿಂದ ದಹಿಸುವಂಥದು. `ವ್ಯಕ್ತವಾಗಿಯೂ ಮಾನವದ್ವೇಷ’ವೆಂದು The Lice ನೀವು ಕರೆದಿರುವ ಬಗ್ಗೆ ನಿಮ್ಮ ಇಂದಿನ ಭಾವನೆಗಳು ಏನೋ?

ಮರ್ವಿನ್: ನಾನು The Lice ಬರೆದಾಗ ಸಂಗತಿಗಳು ಎಷ್ಟೊಂದು ಕರಾಳವಾಗಿದ್ದುವು ಎಂದರೆ, ನಾವೊಂದು ಜೀವವರ್ಗವಾಗಿದ್ದು ನಾವು ಮಾಡಿದ್ದು ಅದೆಷ್ಟು ಭಯಂಕರ ಎನಿಸಿತು, ಆಶೆಗೆ ಅವಕಾಶವೇ ಇಲ್ಲ, ಬರೆಯುವುದರಲ್ಲಿ ಅರ್ಥವೇ ಇಲ್ಲ ಎಂದುಕೊಂಡೆ. ಕಲೆಗಳು ಮುಗಿದೇ ಹೋಗಿದ್ದುವು, ನಮ್ಮ ಜೀವನದ ವಂದನೀಯ ಪಾತ್ರವಾದ ಸಂಸ್ಕೃತಿ—ಅದು ಮುಗಿದಿತ್ತು. ಅಲಂಕಾರಗಳಲ್ಲದೆ ಇನ್ನೇನೂ ಉಳಿದಿರಲಿಲ್ಲ. ಕಾಯಿಪಲ್ಲೆಗಳನ್ನು ಬೆಳೆಸುವುದು ನನಗೆ ಹೆಚ್ಚು ಆಸಕ್ತಿದಾಯಕ ವಿಷಯವಾಗಿತ್ತು. ಕೆಲವೊಂದು ವಿಧದಲ್ಲಿ ಇಂದಿನ ಸ್ಥಿತಿ ಅಂದಿಗಿಂತಲೂ ದಾರುಣ ಎನಿಸುತ್ತದೆ. ಆದರೆ ಕೇವಲವಾದ ಸಿಟ್ಟಿಗೆ ಅಂಟಿಕೊಂಡಿರುವುದು ಸಾಧ್ಯವಿಲ್ಲ. ದೀರ್ಘಾವಧಿಯಲ್ಲಿ ಅದೊಂದು ಮುಚ್ಚಿದ ದಾರಿ. ಸಿಟ್ಟಿಗೆ ಅರ್ಥವಿದೆ ಎಂದಾದರೆ ಅದು ವಿನಾಶಗೊಳಿಸಲ್ಪಡುವ ವಸ್ತುಗಳ ಕುರಿತು ಕಾಳಜಿ ವಹಿಸುವತ್ತ ನನ್ನನ್ನು ಒಯ್ಯಬೇಕು. ನೀವು ಯಾವುದರ ಕಾಳಜಿ ವಹಿಸುವಿರೋ ಅದಕ್ಕೆ ಗಮನ ಕೊಡುವುದೇ ಹೆಚ್ಚು ಮುಖ್ಯವಾದ್ದು. ಆ ಬಗ್ಗೆ ಭಾಷಣ ನೀಡಲು ನಾನು ಇಚ್ಛಿಸುವುದಿಲ್ಲ, ಆದರೆ ನನ್ನ ಕಾಳಜಿಯ ವಿಷಯಗಳತ್ತ ಮರಳುವ ಮೂಲಕವೇ ನಾನು ಈ ಅತಂತ್ರದಿಂದ ದಾರಿಯನ್ನು ಕಂಡುಕೊಳ್ಳಲು ಪ್ರಯತ್ನಿಸಿದ್ದು. ಅವು ಇನ್ನೂ ಇವೆ.

ಉದಾಹರಣೆಗೆ, ನನಗೆ ನೆನಪಿದೆ, ನಾನು The Lice ಆರಂಭಿಸುತ್ತಿದ್ದ ವೇಳೆಗೆ ಕ್ಯೂಬನ್ ಕ್ಷಿಪಣಿ ವಿಕೋಪ ಸಂಭವಿಸುತ್ತ ಇತ್ತು. ಅದು ನನಗೊಂದು ಭಾರೀ ಆಘಾತವಾಗಿತ್ತು. ಅಣ್ವಸ್ತ್ರ ವಿರೋಧಿ ಚಳುವಳಿಯಲ್ಲಿ ನಾನು ಸಕ್ರಿಯವಾಗಿದ್ದೆ. ಹಾಗೂ ಬೀದಿಯಲ್ಲಿ ನಡೆಯುತ್ತ, ನನ್ನ ಕಿವಿಗೆ ಬೀಳುತ್ತಿದ್ದುವು, ನಾವು ಕ್ಯೂಬಾದ ಮೇಲೆ ಅಣುಬಾಂಬು ಹಾಕಬೇಕಿತ್ತು, ಈಗಾಗಲೇ ಸಮಯ ಮೀರಿದೆ, ವರ್ಷಗಳಷ್ಟು ಮೊದಲೇ ನಾವಿದನ್ನು ಮಾಡಬೇಕಿತ್ತು, ಮತ್ತು ಇಂಥವೇ ಮಾತುಗಳು. ಮುಂಜಾನೆ ನಾನು ಅಗಾಧ ಸಿಟ್ಟಿನಲ್ಲಿ ಬೀದಿಯಲ್ಲಿ ನಡೆಯುತ್ತಿದ್ದೆ. ಕೊನೆಗೆ ನಾನು ಯೋಚಿಸಿದೆ, ನನಗೆ ಗೊತ್ತಿದೆ ನನಗೆ ಬೇಡದ ಸಂಗತಿಗಳೇನು ಎನ್ನುವುದು, ಏನು ತಪ್ಪಾಗಿದೆ, ಸಮಸ್ಯೆಯೇನು ಇತ್ಯಾದಿ. ಆದರೆ ಜೀವಿಸಲು ಒಳ್ಳೆ ವಿಧಾನ ಯಾವುದು ಎಂದು ಯಾರಾದರೂ ನನ್ನನ್ನು ಕೇಳಿದರೆ? ನನ್ನಲ್ಲಿ ಯಾವುದೇ ಉತ್ತರವಿರಲಿಲ್ಲ. ನಾನದಕ್ಕೆ ಉತ್ತರ ಕಂಡುಹಿಡಿಯಬೇಕು ಎಂದು ಬಯಸಿದೆ. ಫ್ರಾನ್ಸಿನಲ್ಲಿ ನನಗೆ ಇರುವುದಕ್ಕೊಂದು ತಾಣವಿತ್ತು, ಒಂದು ತೋಟದ ಮನೆ. ಅಲ್ಲಿಗೆ ಹೋಗುವುದೆಂದು ಯೋಚನೆ ಮಾಡಿದೆ. ಒಂದು ಬಸಳೆ ಗಿಡ ಸಹಾ ಬೆಳೆಸುವುದು ನನಗೆ ಗೊತ್ತಿರಲಿಲ್ಲ.

ಜೀವನವೆಲ್ಲಾ ಆಹಾರ ತಿನ್ನುತ್ತ ಬಂದಿದ್ದೆ, ಆದರೆ ಅದು ಬೆಳೆಯುತ್ತಿದ್ದ ಹಾಗೆ ಅದನ್ನು ಗುರುತು ಹಿಡಿಯಲಾರದವನಾಗಿ ಇದ್ದೆ. ಈಗ ಸಮಯ ಬಂದಿತ್ತು, ಅಷ್ಟೊಂದು ಸರಳವೂ ಸ್ಪಷ್ಟವೂ ಆದ ಸಂಗತಿಯನ್ನು ಕಲಿಯುವುದಕ್ಕೆ. ಹಾಗೆ ನಾನಲ್ಲಿಗೆ ಹೋಗಿ ಕೆಲವು ವರ್ಷಗಳನ್ನು ಕಳೆದೆ, ನಾನು ತಿನ್ನುತ್ತಿದ್ದ ವಸ್ತುಗಳನ್ನು ಬೆಳೆಯುವುದು ಮಾತ್ರ ಮಾಡುತ್ತ, ಅಂಥ ಸಂಗತಿಗಳನ್ನು ಅರ್ಥಮಾಡಿಕೊಳ್ಳುತ್ತ. ನಾನಿನ್ನೂ ಸಾರ್ವಕಾಲಿಕ ಉತ್ತರಗಳನ್ನು ಕಂಡುಕೊಂಡಿಲ್ಲ. ಜಗತ್ತಿನಲ್ಲಿ ನಡೆಯುತ್ತಿರುವುದು ಘೋರ, ಹಾಗೂ ಹಿಂದಕ್ಕೆ ಹಾಕಲಾರದಂಥದು. ಮತ್ತು ಆ ಇತಿಹಾಸ ಬಹುಶಃ ಒಂದು ಶಾಪಗ್ರಸ್ತ ಕಾರ್ಯಕ್ರಮ. ಆದರೆ ಈ ಮಧ್ಯೆ, ಜಗತ್ತಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ಪೂರ್ಣವಾಗಿ ಬದುಕುವುದು ಮುಖ್ಯ. ಥೊರೋ (Thoreau) ತನ್ನ ದಿನಚರಿ ಪುಸ್ತಕಗಳಲ್ಲಿ ಕಾಂಕಾರ್ಡ್ ಕಾಮನ್ (Concord Common) ಮುಚ್ಚಿದ ಬಗ್ಗೆ ದುಃಖಿಸುತ್ತಾನೆ. ಜನ ಇನ್ನು ಅಲ್ಲಿ ಹೋಗಿ ತಮ್ಮ ಹಸುಗಳನ್ನು ಮೇಯಿಸುವ ಹಾಗಿಲ್ಲ, ನೇರಳೆ ಹಣ್ಣುಗಳನ್ನು ಕೀಳುವ ಹಾಗಿಲ್ಲ ಎನ್ನುತ್ತಾನೆ. ಇದು ಭಯಂಕರ. ಆಮೇಲೆ ಹೇಳುತ್ತಾನೆ, ಅದು ಮುಕ್ತವಾಗಿದ್ದಾಗ ತಾನು ಆ ಕಡೆ ಹೆಚ್ಚು ಗಮನ ಹರಿಸಿರಲಿಲ್ಲ ಎಂದು. ಥೊರೋ ಯಾವಾಗಲೂ ಅನ್ನುತ್ತಿರುವ ಸಂಗತಿಗಳನ್ನೇ ನಾನು ಹುಡುಕುತ್ತಿರುವುದು ಅನಿಸುತ್ತದೆ.

ಸಂದರ್ಶಕ: The Moving Target ನೊಂದಿಗೆ, ಮತ್ತು ಆ ಮೇಲಿನ ಕೆಲವು ಕೃತಿಗಳಲ್ಲಿ, ನಿಮ್ಮ ಕವಿತೆಗಳು ಭಾಷೆಯಲ್ಲಿ ಮೂಲಭೂತವಾದ ಅತೃಪ್ತಿಯನ್ನೂ ಅವಿಶ್ವಾಸವನ್ನೂ ತೋರಿಸುವಂತೆ ಕಾಣಿಸುತ್ತದೆ, ಮಾತಿನ ಅಸಮರ್ಪಕತೆ ಮತ್ತು ಸೋಲಿನ ಭಾವನೆಯನ್ನು. ಒಂದು ಕವಿತೆ ಅನ್ನುವ ಹಾಗೆ, `ಶಬ್ದಗಳನ್ನು ಬಹಳಷ್ಟು ನಂಬು’ವಿರಾ?

ಮರ್ವಿನ್: ಹೌದು. ನನಗೆ ಭಾಷೆಯಲ್ಲಿ ಭರವಸೆಯಿದೆ. ಯಾಕೆಂದರೆ ನಾವೊಂದು ಜೀವವರ್ಗವಾಗಿ ಇದುತನಕ ವಿಕಸನಗೊಂಡ ಪರಮ ಸಾಧನೆಯಾಗಿದೆ ಅದು. (ಭಾಷೆಯಿರುವ ಜೀವವರ್ಗ ನಾವು ಮಾತ್ರವೆಂದು ಇದರ ಅರ್ಥವಲ್ಲ.) ಅದು ನಮ್ಮ ಅನುಭವದ ಅತ್ಯಂತ ಮೆತ್ತಗಿನ ವಾಗ್ ರೂಪವಾಗಿದೆ. ಆದರೆ ಕೊನೆಗೂ, ಆ ಅನುಭವವಕ್ಕೆ ನಿಜಕ್ಕೂ ಮಾತು ಕೊಡಲಾರೆವು. ನಾವು ಹೊರ ದೃಷ್ಟಿ ಹರಿಸಿ ಆ ಮರಗಳಲ್ಲಿನ ಸೂರ್ಯನ ಬೆಳಕನ್ನು ನೋಡಬಲ್ಲೆವು. ಆದರೆ ಆ ಅನುಭವದ ಇಡಿಯಾದ ವಿಶಿಷ್ಟ ಆತ್ಮೀಯತೆಯನ್ನು ನಾವು ಸಂವಹಿಸಲಾರೆವು. ಅದು ಇನ್ನೊಂದು ಬದಿ, ಕವಿತೆಯನ್ನು ಎಲ್ಲಾ ಕಾಲಕ್ಕೂ ಉತ್ಸುಕವಾಗಿಯೂ ವೇದನಕಾರಿಯಾಗಿಯೂ ಮಾಡುವುದು. ಅದು ಮಹತ್ತಾದ ಸಾಧ್ಯತೆ ಮತ್ತು ನಮ್ಮ ಅಸಾಧ್ಯತೆ ಎರಡನ್ನೂ ಸಂವಹಿಸುತ್ತದೆ.

ಸಂದರ್ಶಕ: `ಸಂಪೂರ್ಣ ಹತಾಶೆಯಲ್ಲಿ ಕಲೆಯಿಲ್ಲ. ನನಗನಿಸುತ್ತದೆ, ಯಾವುದೇ ತರದಲ್ಲೂ, ಕವಿತೆಗಳನ್ನು ಬರೆಯುವುದು ಆಶಾದಾಯಕತ್ವದ ಇರವನ್ನು ಸೂಚಿಸುತ್ತದೆ’ ಎಂಬುದಾಗಿ ನೀವೊಮ್ಮೆ ಹೇಳಿದ್ದಿರಿ. The Lice ನ ನಂತರ ಅದು ಹೆಚ್ಚು ಆಶಾದಾಯಕ ಮತ್ತು ಉತ್ಸಾಹಕಾರಿ ತಿರುವಿನ ಭಾಗವಾಗಿ ಗೋಚರಿಸುತ್ತದೆ.

ಮರ್ವಿನ್: ನಾನು ಭಾಷೆಯ ಈ ಎರಡು ಆಯಾಮಗಳ ಬಗ್ಗೆ ಮಾತಾಡುತ್ತ ಇದ್ದ ಹಾಗೆ, ಇದು ಅಸ್ತಿತ್ವ ಮತ್ತು ಜೀವನದ ಬಗ್ಗೆಯೂ ನಿಜ ಎನ್ನುವುದು ನನಗೆ ಮನವರಿಕೆಯಾಯಿತು. ಮರ್ತ್ಯಜೀವನದ ಬಗ್ಗೆ ನಮಗೆ ಅರಿವು ಮೂಡಿದ ಲಾಗಾಯ್ತಿನಿಂದಲೂ ನನಗೆ ಚೆನ್ನಾಗಿ ಗೊತ್ತು ಅದು ಅಮರ್ತ್ಯವಲ್ಲ ಎನ್ನುವುದು, ಎಂದರೆ ಭವಿಷ್ಯವಿಲ್ಲ ಎನ್ನುವುದು—ಸಾವು ನಿಶ್ಚಿತ. ಮತ್ತು, ಹಾಗಿದ್ದೂ ನಾವು ಮುಂದೆ ಸಾಗುತ್ತೇವೆ, ನಮ್ಮ ಆಶೆ ತೊಡಗಿಸಿಕೊಳ್ಳುವುದು ಪ್ರತಿ ದಿನ ಎದ್ದು ಆ ದಿನದ ಜತೆ ಸಾಗುವುದರೊಂದಿಗೆ, ಗೆಳೆಯರ ಭೇಟಿ ಮಾಡುತ್ತ, ಅವರ ಕೂಡೆ ಮಾತಾಡುತ್ತ, ಕವಿತೆಗಳನ್ನು ಓದುತ್ತ, ಬೆಳಕು ಬರುವುದನ್ನು ಹೋಗುವುದನ್ನು ನೋಡುತ್ತ ಇರುವುದರೊಂದಿಗೆ. ನಮ್ಮ ಆಶೆ ಭವಿಷ್ಯದಲ್ಲಿರುವ ಒಂದು ವಸ್ತುವಲ್ಲ; ಅದು ವರ್ತಮಾನವನ್ನು ನೋಡುವ ಒಂದು ಬಗೆ.

ಸಂದರ್ಶಕ: ನಿಮ್ಮ ಇತ್ತೀಚೆಗಿನ ಕವಿತೆಗಳಲ್ಲಿ ನನಗೆ The Lice ನಲ್ಲಿ ಕಂಡುಬರುವ ಆ ಅದೇ ಪ್ರಳಯಾತ್ಮಕ ಛಾತಿ ಕಾಣಿಸುತ್ತದೆ. ` The Inauguration, 1985′ ಎಂಬ ಕವಿತೆಯಲ್ಲಿ ನೀವು ಬರೆಯುತ್ತೀರಿ: `ನಾವು ಅಂತ್ಯವನ್ನು ಆಯ್ದುಕೊಂಡಿದ್ದೇವೆ, ಯಾಕೆಂದರೆ ನಾವು ಜೀವವಿರುವ ಪ್ರತಿಯೊಂದನ್ನೂ ಅದನ್ನು ಕೊಲ್ಲುವ ನೋಟದಿಂದ ನೋಡಿದ್ದೇವೆ, ಅದು ಈಗಾಗಲೇ ಸತ್ತಿರುವುದು ನಮಗೆ ಕಾಣಿಸುತ್ತಿದೆ.’ ಇದೇ ನಿಮ್ಮ ಸದ್ಯದ ರಾಜಕೀಯ ಭಾವನೆಗಳ ಸಾರಾಂಶವೇ?

ಮರ್ವಿನ್: ಬಹಳ ಮಟ್ಟಿಗೆ. ಆ ತರದ ಕವಿತೆಗಳನ್ನು ನಾನು ಬರೆಯುವುದು ಸಾಕಷ್ಟು ಅನುಮಾನದೊಂದಿಗೆ. ಅವು ತತ್ವಬೋಧೆ ಮಾಡುವ, ಅಥವಾ ನೀತಿ ಹೇಳುವ, ಅರಚಾಡುವಿಕೆಯ ಅಪಾಯ ಉಂಟುಮಾಡುತ್ತವೆ ಅಂತ ನನಗನಿಸುತ್ತದೆ. ಬದಲಿಗೆ, ನಮಗೆ ಸಾಧ್ಯವಾದಲ್ಲಿ, ನಾವು ಭಾವಿಸುವುದನ್ನೇ ಬರೆಯಲು ಕಲಿಯಬೇಕು. ನಮಗೇನಾದರೂ ಪ್ರತಿಭೆಯಿದ್ದರೆ, ಸಾಧಾರಣ ಎನ್ನುವುದಕ್ಕಿಂತ ಬೇರೆಯ ಭಾಷಾ ಉಪಯೋಗ ಗೊತ್ತಿದ್ದರೆ, ಅದನ್ನು ಬಳಸಲು ಕಲಿಯುವುದಕ್ಕೆ ಪ್ರಯತ್ನಿಸಬೇಕು. ಮತ್ತು ನಾವದನ್ನು ಬಳಸಬೇಕಾದ್ದು ಅದು ಜರೂರಾಗಿ ಅಗತ್ಯವೆನಿಸಿದ ಕಾಲದಲ್ಲಿ. ಕವಿತೆಯೊಂದು ಚರಿತ್ರೆಯ ಗತಿಯನ್ನು ಬದಲಿಸಬಲ್ಲುದೋ ಎನ್ನುವುದು ನನಗೆ ಗೊತ್ತಿಲ್ಲ, ಆದರೆ ಇದನ್ನೆಲ್ಲ ಮಾಡುವ ಮೊದಲು ಇದರ ಪರಿಣಾಮ ಏನೆನ್ನುವುದರ ಬಗ್ಗೆ ಊಹಿಸದಿರುವುದು, ಯೋಚಿಸದಿರುವುದು ಸಾಧ್ಯವಿಲ್ಲ. ವಿಯೆಟ್ನಾಮ್ ಯುದ್ಧದ ಕಾಲದಲ್ಲಿ ನಮ್ಮಲ್ಲಿ ಹಲವರು ಅದರ ಕುರಿತು ಕವಿತೆಗಳನ್ನು ಬರೆದೆವು; ಆಗ ಈ ಪ್ರಶ್ನೆ ಪದೇ ಪದೇ ಏಳುತ್ತಿತ್ತು. ಆ ಕವಿತೆಗಳಿಂದ ಏನಾದರೂ ಪ್ರಯೋಜನವಾಯಿತೇ? ನಮಗದು ಎಂದಿಗೂ ಗೊತ್ತಾಗದು. ನಾವು ಖಂಡಿತಾ ಕೆಲವು ತುಂಬಾ ಕೆಟ್ಟ ಕವಿತೆಗಳನ್ನು ಬರೆದೆವು, ನಾವಲ್ಲೆರೂ ಕೂಡಾ, ಮತ್ತು ನಮಗಿದು ಗೊತ್ತಿತ್ತು. ಆದರೆ ಬೇರೆ ದಾರಿಯೆಂದರೆ ಬರೆಯದೇ ಇರುವುದಾಗಿತ್ತು. ಹಾಗೆ ಯೋಚಿಸುವುದೂ ಸಾಧ್ಯವಿರಲಿಲ್ಲ. ಹೇಗಿದ್ದರೂ, ಕೆಟ್ಟ ಕವಿತೆಯೊಂದು ಕೆಡುಕನ್ನೇನೂ ಮಾಡುವುದಿಲ್ಲ; ಅದು ಸ್ವಲ್ಪ ಸಮಯದಲ್ಲಿ ಮಾಯವಾಗುತ್ತದೆ.

ಸಂದರ್ಶಕ: ಕಳೆದ ಕೆಲವು ವರ್ಷಗಳಲ್ಲಿ ನೀವು ಹೆಚ್ಚೆಚ್ಚು ಸ್ಮೃತಿಚಿತ್ರಗಳನ್ನು ಬರೆದಿದ್ದೀರಿ. ಅದು ಒಂದು ನಿರ್ದಿಷ್ಟ ಕಾಲಮಾನವನ್ನು ತಲಪಿದುದರ ಚಿಹ್ನೆಯೇ?

ಮರ್ವಿನ್: ನನಗೆ ನಾನೇ ಅದನ್ನು ಕೇಳಿಕೊಂಡಿದ್ದೇನೆ. ಅದಕ್ಕೆ ಕಾರಣ, ಕೆಲವು ಸಂಗತಿಗಳನ್ನು ಬರೆಯುವ ವಿಧಾನ ಕಾಲಮಾನವನ್ನು ವಿವರಿಸುವ ಮಾರ್ಗವಾಗುವುದು ಸಾಧ್ಯ ಎಂದು ಫಕ್ಕನೆ ಅನಿಸಲಿಕ್ಕೆ ಹತ್ತಿದುದು. ಆದರೆ ವಿಷಯಗಳ ಕುರಿತು ಬರೆಯಬೇಕೆನ್ನುವ ಉದ್ದೇಶಕರ ಯೋಜನೆಗಳು ಹೇಗಿರುತ್ತವೆಯೆಂದರೆ, ಬೀದಿಯಲ್ಲಿ ಇಬ್ಬರು ನಡೆದು ಹೋಗುತ್ತಿರುತ್ತಾರೆ, ಆದರೆ ಅವರ ಮಧ್ಯೆ ಪೊದೆಬೇಲಿಯೊಂದು ಇದೆ, ಅವರು ಪರಸ್ಪರರತ್ತ ಕೈಯಾಡಿಸಬಲ್ಲರು, ಅದಕ್ಕಿಂತ ಹೆಚ್ಚಲ್ಲ, ಹಾಗಿರುತ್ತದೆ.

ಕೆಲವೊಮ್ಮೆ ನಾನು ಮೂರು ನಾಲ್ಕು ವರ್ಷ ಏನಾದರೂ ಬರೆಯಲು ಪ್ರಯತ್ನಿಸುತ್ತ ಇರುತ್ತೇನೆ, ನಂತರ ಪೂರ್ವಸೂಚನೆಯಿಲ್ಲದೆ ತೀರಾ ಭಿನ್ನವಾದ್ದೇನೋ ಬರೆಯಲು ತೊಡಗುತ್ತೇನೆ, ಅದು ಸರಿಯಿರುತ್ತದೆ ಅಥವಾ ಹಾಗೆ ಅನಿಸುತ್ತದೆ. ಪ್ರತಿಯಾಗಿ, ಆ ಮೊದಲಿನದು ಹಾಗೆ ಇರುತ್ತಿರಲಿಲ್ಲ. ನಿಮಗೆ ಗೊತ್ತಿದೆ, ನಾನು ಇಂಗ್ಲೆಂಡಿನಲ್ಲಿ ಐದು ವರ್ಷಗಳನ್ನು ಕಳೆದೆ, ನಾಟಕಗಳನ್ನು ಬರೆಯಲು ಪ್ರಯತ್ನ ಮಾಡುತ್ತ, ಆದರೆ ನನಗೆ ಒಂದೂ ಇಷ್ಟವಾಗಲಿಲ್ಲ. ಆದರೆ, ನನಗನಿಸುತ್ತದೆ, ಅವುಗಳ ಮೂಲಕ ನಾನು ಕವಿತೆ ಬರೆಯುವುದರಲ್ಲಿ ಬದಲಾವಣೆಗಳು ಬಂದುವು, ಮತ್ತು The Drunk in the Furnace ಸಂಕಲನದ, ಅದೇ ಹೆಸರಿನ, ಕೊನೆ ಕವಿತೆಯಿಂದ ಮತ್ತು ನಂತರದ ಕೆಲವು ಕವಿತೆಗಳಿಂದ, ತುಂಬಾ ನಂತರ, Unfurled Originals ನ ಗದ್ಯ ಬಂತು ಅನಿಸುತ್ತದೆ. ಇನ್ನೊಂದನ್ನು ಸಾಧ್ಯಗೊಳಿಸುವುದಕ್ಕೆ ಒಂದನ್ನು ಬರೆಯಬೇಕೆನ್ನುವುದು ಸ್ಪಷ್ಟ. ಬೇರೆ ಅನುಕ್ರಮದಲ್ಲಿ ನೀವು ಬರೆಯುವುದು ಸಾಧ್ಯವಿರುತ್ತಿರಲಿಲ್ಲ. ಅದು ಹಾಗೇ ಇರಬೇಕು ಅಂತಲೂ ನನಗನಿಸುತ್ತದೆ.

ಸಂದರ್ಶಕ: ನೀವು ಹವಾಯಿಗೆ ಮೊತ್ತಮೊದಲು ಬಂದುದು ಯಾವಾಗ?

ಮರ್ವಿನ್: ನಾನಿಲ್ಲಿಗೆ ಮೊದಲು ಬಂದುದು ಅರುವತ್ತರ ದಶಕದ ಕೊನೆಗೆ, ಒಂದು ಕಾವ್ಯವಾಚನಕ್ಕೆ. ಇಲ್ಲಿ ಸುಂದರವಾಗಿದೆ ಅನಿಸಿತು. ಆದರೆ ಆ ಕಾಲದ ನನ್ನ ಜೀವನಕ್ಕೆ ಈ ಜಾಗದ ಜತೆ ಹೆಚ್ಚೇನೂ ಸಂಬಂಧವಿದ್ದ ಹಾಗೆ ಅನಿಸಲಿಲ್ಲ. ಆಮೇಲೆ ಎಪ್ಪತ್ತರ ದಶಕದ ಮಧ್ಯಭಾಗದಲ್ಲಿ ನಾನಿಲ್ಲಿಗೆ ಬಂದೆ, ಆಗ ಆ ಸಂಬಂಧ ಅನಿಸಿತು.

ಸಂದರ್ಶಕ: ಇಲ್ಲೇ ಇರುವಿರಿ ಅಂದುಕೊಳ್ಳುವಿರಾ?

ಮರ್ವಿನ್: ಖಂಡಿತಾ.

ಸಂದರ್ಶಕ: ಇತ್ತೀಚೆಗೆ ನೀವು ಹವಾಯಿಯಿಂದ ಹಾಡುಗಳನ್ನೂ ಮಂತ್ರಗಳನ್ನೂ ಅನುವಾದಿಸಲು ತೊಡಗಿದ್ದೀರಿ.

ಮರ್ವಿನ್: ನಾನು ದಾರಿ ತಡವರಿಸುತ್ತ ಇದ್ದೇನೆ. ಈ ಅನುವಾದ ಮಾಡುತ್ತ ಇರುವಾಗ, ಇದುವರೆಗೆ ಅನುವಾದದ ಕುರಿತು ನಾನು ಅರಿತುಕೊಂಡಿದ್ದೇನೆ ಎನ್ನುವುದೆಲ್ಲವೂ ಅಮಾನತಿನಲ್ಲಿರುತ್ತದೆ. ಇಂಗ್ಲಿಷ್‍ ನಲ್ಲಿ ಮಂತ್ರಗಳಿಲ್ಲ. ಇಂಗ್ಲಿಷ್ ಯಾವತ್ತೂ ಮಂತ್ರಿಸುವ ಭಾಷೆಯಾಗಿರಲಿಲ್ಲ, ಆದ್ದರಿಂದ ಬಳಸಬಹುದಾದ ಅಥವಾ ವಿಸ್ತರಿಸಬಹುದಾದ ಪರಂಪರೆಯಿಲ್ಲ. ನಾವು ಹಿಂದೆ ಮಾತಾಡಿದ ಮೌಖಿಕ ಪರಂಪರೆಯ ಮೇಲೆ ಕೆಲಸ ಮಾಡಬೇಕೆಂಬ ನನ್ನ ದೀರ್ಘಕಾಲಿಕ ಬಯಕೆಯಿದೆ, ಹಾಗೂ ಈ ಪರಂಪರೆ ಈಗ ನಾಶವಾಗುತ್ತಿರುವ ಸಂಸ್ಕೃತಿಯ ಭಾಗವಾಗಿದೆ ಎನ್ನುವ ತುರ್ತಾದ ಅನಿಸಿಕೆ. ಆದರೆ ನಾನೊಬ್ಬ ಹೊರಗಿನವ. ಇಂಗ್ಲಿಷಿಗೆ ಹಾಕುವುದರಿಂದ ಅದನ್ನು ಉಳಿಸಿದ ಹಾಗೆ ಆಗುವುದಿಲ್ಲ, ಅದರ ಜೊತೆಗಿನ ಕೊಳಿಕೆಯೊಂದನ್ನು ಉಳಿಸಬಹುದು, ಅದಕ್ಕೂ ಒಂದು ಅರ್ಥವಿದೆ ಎಂದು ಅನಿಸುತ್ತದೆ ನನಗೆ. ಇದಕ್ಕೂ ನಾಶವಾಗುವ ಇತರ ಜೀವವರ್ಗಗಳಿಗೂ ಸಂಬಂಧವಿದೆ. ಪ್ರತಿದಿನವೆಂಬಂತೆ ಹಲವು ಜೀವವರ್ಗಗಳು ಅಂತ್ಯ ಕಾಣುತ್ತಿವೆ, ಹಾಗೂ ಇದೊಂದು ವೇಗವರ್ಧಕ ಪ್ರಕ್ರಿಯೆ. ಇದೆಲ್ಲದಕ್ಕೂ ಕಾರಣ ಮನುಷ್ಯನ ಕಾರ್ಯ, ಇದು ಪೂರ್ತಿಯಾಗಿಯೂ ಮನುಷ್ಯನ ಕೆಲಸವೇ. ಜೀವವರ್ಗಗಳು ಇಲ್ಲದಾಗುವುದು ನೈಸರ್ಗಿಕ ಕ್ರಿಯೆ ನಿಜ, ಆದರೆ ನಾವದನ್ನು ಆಗುಗೊಳಿಸದಷ್ಟು ತ್ವರೆಯಲ್ಲಲ್ಲ. ಭಾಷೆಗಳು, ಸಂಸ್ಕೃತಿಗಳು, ಮತ್ತು ನಮ್ಮದೇ ಭಾಷೆಗಳು ಇದೇ ವಿಧಿಗೆ ಒಳಗಾಗಿವೆ. ಇವು ವಿಭಿನ್ನ ಪ್ರಕ್ರಿಯೆಗಳಲ್ಲ, ಶೆಲ್ಫಿನಲ್ಲಿರುವ ಬೇರೆ ಬೇರೆ ಪುಸ್ತಕಗಳಲ್ಲ, ಎಲ್ಲವೂ ಒಂದೇ ಪುಸ್ತಕ. ಈ ಪ್ರಕ್ರಿಯೆಯನ್ನು ತಿರುಗಿಸುವ ಯಾವುದೇ ದಾರಿಯೂ ಪ್ರಯೋಜನಕಾರಿಯೇ. ಇರುವುದರ ಕುರಿತಾದ ಪ್ರೀತಿ, ಮತ್ತು ಅದಕ್ಕೆ ಮಾತುಕೊಡಲು ನಡೆಸುವ ಪ್ರಂಯತ್ನ, ಅದರ ಜತೆ ಈ ಸಂಬಂಧ ಸ್ಥಾಪಿಸುವ ಪ್ರಯತ್ನವಿದೆಯಲ್ಲಾ, ಅದು, ನಮ್ಮದೇ ಭಾಷೆಯಲ್ಲಿ ಅದನ್ನು ಪೂಜನೀಯ ಮತ್ತು ಸಂಪೂರ್ಣ ರೂಪದಲ್ಲಿ, ಮೂಲಕವಿತೆಯ ಸ್ವಲ್ಪ ಸಂಭ್ರಮವಿರುವ ಶಬ್ದಗಳಲ್ಲಿ ತರುವ ಪ್ರಯತ್ನ, ಇದು ಅದಕ್ಕೆ ಗೌರವ ತೋರಿಸುವ ವಿಧಾನವೂ ಹೌದು—ಜೀವಂತ ಮತ್ತು ಉತ್ಸಾಹೀ ಗೌರವ—ಮತ್ತು ಪ್ರಾಯಶಃ ಅದನ್ನು ಇನ್ನಷ್ಟು ಸ್ವಲ್ಪ ಕಾಲ ಬದುಕಿ ಉಳಿಸುವ ಮಾರ್ಗವೂ ಹೌದು, ಅಥವಾ ಅದು ನಾವು ನಮ್ಮನ್ನೇ ಸ್ವಲ್ಪ ಹೆಚ್ಚು ಕಾಲ ಜೀವಂತ ಉಳಿಸಿಕೊಳ್ಳುವ ರೀತಿ. ಅದೇ ವೇಳೆಗೆ, ನಾನು ಹವಾಯಿಯನ್ ಮತ್ತು ಕ್ರೋ ಭಾಷೆಗಳ ಜತೆ ಕೆಲಸ ಮಾಡುತ್ತ ಬಂದಿದ್ದೇನೆ, ಮತ್ತು ಸ್ಥಳೀಯ ಕವಿತೆ, ಅನುವಾದದಲ್ಲಾದರೂ, ನಮ್ಮ ಭಾಷೆಯ ಸಾರ್ವಭೌಮೀಯ ವರ್ತಮಾನ (imperial present) ನನ್ನಲ್ಲಿ ಕೆಲವು ಸಂದೇಹಗಳನ್ನು ಮೂಡಿಸಿದೆ—ಅದು ಜಾಗದ ಕುರಿತು ನಮ್ಮ ಸಂವೇದನಾ ರಾಹಿತ್ಯವನ್ನು ತೋರಿಸುತ್ತದೆ. ಕೆಲವರಿಗೆ ಇದೊಂದು ಅನುಕೂಲ, ಸಂದೇಹವಿಲ್ಲ.

ಸಂದರ್ಶಕ: ಈಚೆಗೆ ನೀವು ಹೆಚ್ಚೆಚ್ಚು ಅಕಥನ (nonfiction) ಬರೆಯುವುದರಲ್ಲಿ ತೊಡಗಿದ್ದೀರಿ. ಹವಾಯಿಯ ಮೇಲಿನ ನಿಮ್ಮ ಪುಸ್ತಕದ ಹಿಂದಣ ಪ್ರೇರಣೆ ಕುರಿತು ಹೇಳಬಹುದೇ?

(ಎಡ್ವರ್ಡ್ ಹರ್ಷ್ (Edward Hirsch)

ಮರ್ವಿನ್: ಈ ದ್ವೀಪಗಳಿಗೆ ಏನಾಗಿದೆ, ಇನ್ನೂ ಏನಾಗುತ್ತ ಇದೆ, ಎಂಬುದರ ಬಗ್ಗೆ ನಾನು ಬರೆಯುತ್ತಿದ್ದೇನೆ—ಬರೆಯಲು ಯತ್ನಿಸುತ್ತಿದ್ದೇನೆ. ಇಪ್ಪತ್ತೈದು ವರ್ಷಗಳ ಹಿಂದೆ ರಾಜಕೀಯ ವಿಷಯಗಳ ಮೇಲೆ ಲೇಖನಗಳನ್ನು ಬರೆಯಲು ಯತ್ನಿಸಿದೆ. ಆಮೇಲೆ ಅದನ್ನು ನಿಲ್ಲಿಸಿದೆ, ಯಾಕೆಂದರೆ ಕೊನೆಗೂ ಬೇರೆಯವರು ಅದೇ ವಿಷಯಗಳ ಬಗ್ಗೆ ನನಗಿಂತ ಚೆನ್ನಾಗಿ ಬರೆಯಲು ಸುರುಮಾಡಿದರು. ಇದಕ್ಕೆ ವಿಶಿಷ್ಟವಾದ ಪ್ರತಿಭೆಯಿದೆಯೆಂದು ನನಗೆ ಅನಿಸುವುದಿಲ್ಲ. ನನ್ನ ಮನಸ್ಸು ಒಬ್ಬ ಇತಿಹಾಸಕಾರನ ಮನಸ್ಸು ಅಲ್ಲವೇ ಅಲ್ಲ. ನಾನೀ ವಿಷಯಗಳ ಕುರಿತು ಬರೆಯ ಬಯಸುವುದು ಅವು ತುರ್ತಿನವೆಂದು ನನಗೆ ಅನಿಸಿದ ಕಾರಣ. ಈ ವಿಷಯಗಳು ಈ ದ್ವೀಪಗಳಿಂದ ಶೀಘ್ರವಾಗಿ ಮಾಯವಾಗುತ್ತಿವೆ ಮತ್ತು ಇದು ಹೇಗೆ ಮತ್ತು ಯಾಕೆ ಆಗುತ್ತಿದೆ ಎನ್ನುವುದರ ಪರಿಶೀಲಿಸಬೇಕು, ಮತ್ತು ಇವು ಪೂರ್ತಿ ಮಾಯವಾಗುವ ಮೊದಲು ನಾನಿದರ ಕುರಿತು ಬರೆಯಬೇಕು. ನಾನವುಗಳ ಕುರಿತು ಯಾಕೆ ಬರೆಯಬೇಕೆಂದರೆ, ಅವು ಕೆಲವು ಪ್ರಕರಣಗಳಲ್ಲಿ ಇನ್ನೂ ಉಲ್ಬಣಿಸುವ ಪ್ರಶ್ನೆಗಳಾಗಿವೆ, ಮತ್ತು ಅವುಗಳ ಕುರಿತು ಬರೆಯುತ್ತ, ಪ್ರಾಯಶಃ ಈ ಪ್ರವಾಹವನ್ನು ತಡೆಯುವುದಕ್ಕೆ ಏನಾದರೂ ಮಾಡಬಹುದೆಂದು ತೋರುತ್ತದೆ. ಮತ್ತು ನನಗೆ ಈ ಜಾಗದ ಬಗ್ಗೆ, ಈ ಜಾಗದ ಸಂಸ್ಕೃತಿ ಮತ್ತು ಭಾಷೆಯ ಬಗ್ಗೆ ಕಾಳಜಿಯಿರುವುದರಿಂದ. ಅವಿನ್ನೂ ಇಲ್ಲಿ ಇರುವ ತನಕ. ಮತ್ತು ಪ್ರತಿಯೊಂದು ಪ್ರಕರಣದಲ್ಲಿ, ಇಲ್ಲಿನ ಈ ಪ್ರತಿಯೊಂದು ಸಂಗತಿಯೂ ಜಗತ್ತಿನ ಎಲ್ಲೆಡೆಯೂ ಆಗುತ್ತಿರುವ ಸಂಗತಿಗಳಿಗೆ ಒಂದು ದೃಷ್ಟಿಕೇಂದ್ರದಂತೆ (focus), ಒಂದು ಸಂಕೇತದಂತೆ ಅನಿಸುತ್ತಿರುವ ಕಾರಣಕ್ಕಾಗಿ ಕೂಡ. ಮತ್ತು ಬರೆಯುತ್ತಿರುವುದು ಕರಪತ್ರವಾಗಿ ಕಾಣಿಸಿಕೊಳ್ಳುವ ಅಪಾಯ ಯಾವತ್ತೂ ಇದೆ, ಹಾಗೆ ಮಾಡುವುದು ನನಗೆ ಇಷ್ಟವಿಲ್ಲ. ಆದರೆ, ಉದಾಹರಣೆಗೆ, ಕಹೋಲವೆ (Kaho’olawe) ಸಂಸ್ಕೃತಿಯ ಬಗ್ಗೆ ಮಾತಾಡುತ್ತಿರುವಾಗ—ಕಳೆದ ಇನ್ನೂರು ವರ್ಷಗಳ ಕಾಲ ಭತ್ರ್ಸನೆಗೆ ಗುರಿಯಾಗಿರುವ ಸಂಸ್ಕೃತಿಯೊಂದರ ಪವಿತ್ರ ದ್ವೀಪ ಇದು—ಮತ್ತು ಈ ದ್ವೀಪ ಭಿನ್ನವಾದ ಧೋರಣೆಯಿಂದಲೂ ಭಿನ್ನವಾದ ಜನಾಂಗದಿಂದಲೂ ಕೊಳ್ಳೆಹೊಡೆಯಲ್ಪಟ್ಟಿದೆ—ಈ ದ್ವೀಪದ ಕುರಿತು ನೀವು ಬರೆಯಲು ಹೊರಟಾಗ, ಅದಕ್ಕೆ ಸಾಂಕೇತಿಕ ಮತ್ತು ನಿಜವಾದ ಎರಡೂ ಪ್ರಾಮುಖ್ಯತೆ ಇದೆ. ಶಾಂತಸಾಗರದ ಎಲ್ಲೆಡೆಯ ದೇಸೀ ಜನರಿಗೆ ನೀವಿದರ ಕತೆ ಹೇಳಲು ಸುರುಮಾಡಿದರೆ, ಅವರಿಗೆ ಕೂಡಲೇ ಗೊತ್ತಾಗುತ್ತದೆ, ಕತೆ ಯಾವುದರ ಬಗ್ಗೆ ಎನ್ನುವುದು, ಕತೆಯ ವಿವರಗಳನ್ನು ಅವರು ಗುರುತಿಸುತ್ತಾರೆ.

ಜಗತ್ತಿನ ಸುತ್ತಲೆಲ್ಲ ಜನರಿದ್ದಾರೆ, ಕತೆ ಯಾವುದರ ಬಗ್ಗೆ ಎಂದು ಗೊತ್ತಿರುವವರು. ಅದು ಧಾಷ್ಟ್ರ್ಯದ, ಕೊಳ್ಳೆಹೊಡೆಯುವಿಕೆಯ, ಮತ್ತು ಎಡೆಬಿಡದ ವಿನಾಶದ ಕತೆ. ಡೆಲೋಸ್ (Delos) ದ್ವೀಪವನ್ನು, ಈಗ ಕಹೋಲವೆ ಬಳಕೆಯಾಗುತ್ತಿರುವ ಹಾಗೆ, ಬಾಂಬಿನ ಅಭ್ಯಾಸ ಪ್ರದೇಶವಾಗಿ ಬಳಸಿದ್ದರೆ ಯುರೋಪಿಯನ್ ಹಿನ್ನೆಲೆಯ ಹಲವಾರು ಜನರಿದ್ದಾರೆ ಅದೇನೆಂದು ಅರ್ಥವಾಗುವವರು, ಹಾಗೂ ಅವರು ಸಿಡಿದೇಳುತ್ತಾರೆ. ಅದು ಇನ್ನೊಂದು ಜನಾಂಗಕ್ಕೆ ಆಗುತ್ತಿದೆ ಎನ್ನುವ ಸಂಗತಿ ಅದನ್ನೀಗ ಯುರೋಪಿಯನ್ ಮೂಲದ ಜನರಿಗೆ ಅವಾಸ್ತವವಾಗಿ ಮಾಡುತ್ತದೆ. ಈ ಸಾಂಸ್ಕೃತಿಕ ಮೊಂಡುತನ ನನ್ನನ್ನು ಅಕರ್ಷಿಸುತ್ತದೆ, ಮತ್ತು ಅದನ್ನು ನನ್ನಲ್ಲೇ ಹುಡುಕುವಂತೆ, ಹಾಗೂ ನನ್ನ ಸುತ್ತಲಿನ ಜಗತ್ತಿನಲ್ಲಿ ಹುಡುಕುವಂತೆ ಮಾಡುತ್ತದೆ, ಅದರ ಕುರಿತು ಬರೆಯುವಂತೆ ಮಾಡುತ್ತದೆ. ಸರಿದುಹೋಗುತ್ತಿರುವುದನ್ನು ನಾವು ರಕ್ಷಿಸಲು ಪ್ರಯತ್ನಿಸುತ್ತೇವೆ, ಅದನ್ನು ವಿವರಿಸುವ ಮೂಲಕ, ಇದು ಯಾವುದನ್ನೂ ಮಾಡುವುದು ನಮ್ಮಿಂದ ಸಾಧ್ಯವಿಲ್ಲ ಎಂದು ಯಾವಾಗಲೂ ನಮಗೆ ಗೊತ್ತಿದ್ದರೂ ಸಹಾ. ಅದನ್ನು ಹೇಳುವ ಪ್ರೇರಣೆ, ಮತ್ತು ಅದರ ಅಸಾಧ್ಯತೆಯ ಅರಿವು. ನಾವು ಬರೆಯುವ ಒಂದು ಕಾರಣ ಇದೇ ಅಲ್ಲವೇ?

(ಈಚೆಗೆ ತೀರಿಕೊಂಡ ಅಮೇರಿಕದ ರಾಷ್ಟ್ರಕವಿ ಡಬ್ಲ್ಯೂ.ಎಸ್. ಮರ್ವಿನ್‍ನ (W.S. Merwin, 30 ಸೆಪ್ಟಂಬರ್ 1927 – 15 ಮಾರ್ಚ್ 2019) ಜತೆ ಕೆಲವು ವರ್ಷಗಳ ಹಿಂದೆ ಅಮೇರಿಕದ ಇನ್ನೊಬ್ಬ ಕವಿ ಎಡ್ವರ್ಡ್ ಹರ್ಷ್ ನಡೆಸಿದ ಸಂದರ್ಶನ Paris Review (The Art of Poetry No. 38) ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇಂಗ್ಲಿಷ್‍ ನ ಮೂಲ ಸಂದರ್ಶನವನ್ನು ಇಲ್ಲಿ ಕಾವ್ಯಾಸಕ್ತರಿಗಾಗಿ ಕನ್ನಡದಲ್ಲಿ ಅನುವಾದಿಸಿ ಕೊಡಲಾಗಿದೆ)