ನಾಯಕನನ್ನು ಪ್ರಾಂತ್ಯವೊಂದರ ಭೂಗತದೊರೆ ಮಾಡಿದೆ. ಅವನ ಪಾತ್ರವನ್ನು ನಿಕಷಕ್ಕೆ ಒಡ್ಡಲು ಅವನ ಎದುರು ಮತ್ತೊಂದು ಪಾತ್ರವನ್ನು ಇಡಲು ನಿರ್ಧರಿಸಿದೆ. ಮೊದಲು ಈ ಪ್ರತಿನಾಯಕ ಮಾನವೀಯ ಅನುಕಂಪವುಳ್ಳ ಆ ಪ್ರದೇಶದಲ್ಲಿ ತನ್ನ ದವಾಖಾನೆಯನ್ನು ತೆರೆಯುತ್ತಿರುವ ಯುವವೈದ್ಯ ಎಂದುಕೊಂಡೆ. ಆದರೆ ನಾನು ಮತ್ತು ವೆಕ್ಸಾ ಎಷ್ಟೇ ಪ್ರಯತ್ನಿಸಿದರೂ ಈ ಪಾತ್ರವನ್ನು ಜೀವಂತಗೊಳಿಸಲು ಸಾಧ್ಯವಾಗಲಿಲ್ಲ. ಈ ಪಾತ್ರದಲ್ಲಿ ಚೈತನ್ಯವೇ ಇರಲಿಲ್ಲ. ಮತ್ತೊಂದೆಡೆ ಭೂಗತದೊರೆಯ ಪಾತ್ರ ಉಸಿರಾಡುವ ಜೀವಂತ ವ್ಯಕ್ತಿಯಂತಾಗಿತ್ತು. ಅವನ ಪ್ರತಿನಡೆ ರಕ್ತಮಾಂಸ ತುಂಬಿದ ಮನುಷ್ಯನ ನಡೆಯಂತಿತ್ತು. ಇದಕ್ಕೆ ಕಾರಣ ಆ ಪಾತ್ರ ವೆಕ್ಸಾ ನಿಯಮಿತವಾಗಿ ಭೇಟಿಮಾಡುತ್ತಿದ್ದ ನಿಜ ಬದುಕಿನ ವ್ಯಕ್ತಿಯೊಬ್ಬನ ಅನುಕರಣೆಯಾಗಿತ್ತು.
ಹೇಮಾ ಎಸ್. ಅನುವಾದಿಸುವ ಅಕಿರ ಕುರಸೋವಾನ ಆತ್ಮಕತೆಯ ಪುಟ

 

ನನ್ನ ಮುಂದಿನ ಚಿತ್ರಕತೆಯನ್ನು ವೆಕ್ಸಾನೊಂದಿಗೆ ಬರೆದೆ. ನಾವು ಅಟಾಮಿಯಲ್ಲಿ ಸಮುದ್ರದ ಹತ್ತಿರವಿದ್ದ ಬಿಸಿ ನೀರಿನ ಬುಗ್ಗೆಯ ರೆಸಾರ್ಟ್ ನಲ್ಲಿ ಉಳಿದುಕೊಂಡೆವು. ನಮ್ಮ ಕೋಣೆಯಿಂದ ಕಡಲನ್ನು ನೋಡಬಹುದಿತ್ತು. ತೀರದಲ್ಲಿ ವಿಚಿತ್ರವಾಗಿದ್ದ ಸರಕು ಸಾಗಣೆ ಹಡಗೊಂದು ಮರಳಿನಲ್ಲಿ ಹೂತುಹೋಗಿರುವುದನ್ನು ನೋಡಿದೆ. ಅದು ಕಾಂಕ್ರೀಟಿನಿಂದ ಮಾಡಿದ ಹಡಗು. ಸೋತ ಜಪಾನಿನ ಯುದ್ಧ ಕೈಗಾರಿಕೆಗಳಲ್ಲಿ ಯುದ್ಧನೌಕೆಗಳನ್ನು ತಯಾರಿಸಲು ಕಬ್ಬಿಣವಿರಲಿಲ್ಲ. ಬೇಸಿಗೆಯಲ್ಲಿ ನೀರಿನತ್ತ ಹೊರಚಾಚಿಕೊಂಡಿದ್ದ ಈ ಹಡಗಿನ ತುದಿಯನ್ನು ಹತ್ತಿ ಮಕ್ಕಳು ಸಮುದ್ರದ ನೀರಿಗೆ ಧುಮುಕುತ್ತಿದ್ದರು. ಅವರು ಆಟವಾಡುತ್ತಿರುವುದನ್ನು ನೋಡುತ್ತಾ ಈ ಸಮುದ್ರದ ತೀರದಲ್ಲಿ ಮುಳುಗಿದ ಕಾಂಕ್ರೀಟ್ ಹಡಗು ಸೋತ ಜಪಾನಿನ ಅಣಕದಂತೆ ಅನ್ನಿಸಿತು. ದಿನವೂ ನೋಡುತ್ತಿದ್ದ ಖಿನ್ನತೆ ಹುಟ್ಟಿಸುತ್ತಿದ್ದ ಈ ಚಿತ್ರ ಯೊಯ್ಡೋರ್ ಟೆನ್ಶಿಯ (ಡ್ರಂಕನ್ ಏಂಜಲ್, 1948) ಚಿತ್ರಕತೆಯಲ್ಲಿನ ಗುಂಡಿಯಾಗಿ ಮೈದಳೆಯಿತು.

ಡ್ರಂಕನ್ ಏಂಜಲ್ ನ ಐಡಿಯಾ ಹೊಳೆದಿದ್ದು ಅದಾಗಲೇ ಹಾಕಿದ್ದ ಸಿನೆಮಾ ಸೆಟ್ ನಲ್ಲಿ. ಯುದ್ಧದ ನಂತರ ಯಮಾ ಸ್ಯಾನ್ ಶಿನ್ಬಾಕ ಜಿದೈ (ದ ನ್ಯೂ ಏಜ್ ಆಫ್ ಫೂಲ್ಸ್) ಎನ್ನುವ ಚಿತ್ರ ಮಾಡಿದರು. ನಾವು ಬದುಕುತ್ತಿದ್ದ ಗೊಂದಲಮಯ ಸಮಯದ ಪರಿಸ್ಥಿತಿಗಳನ್ನು ಅದರಲ್ಲಿ ಚಿತ್ರಿಸಿದ್ದರು. ಈ ಚಿತ್ರಕ್ಕಾಗಿ ಕಂಪನಿಯು ಕಾಳಸಂತೆ ನಡೆಯುವ ಮಾರುಕಟ್ಟೆಯ ಹಾದಿಯ ಬಹುದೊಡ್ಡ ಸೆಟ್ ಹಾಕಿತ್ತು. ನಂತರ ಅವರು ಈ ಸೆಟ್ ಅನ್ನು ನನ್ನ ಯಾವುದಾದರೂ ಚಿತ್ರಕ್ಕಾಗಿ ಬಳಸಲು ಸಾಧ್ಯವೇ ಎಂದು ಕೇಳಿದರು. ಯಾಮಾ ಸಾನರ ಚಿತ್ರ ಯುದ್ಧಾನಂತರದಲ್ಲಿ ಜಪಾನಿನಲ್ಲಿ ಎಲ್ಲೆಡೆ ಬಿದಿರಿನ ಮೆಳೆಗಳಂತೆ ಏಳುತ್ತಿದ್ದ ಕಾಳಸಂತೆ ಮಾರುಕಟ್ಟೆಗಳ ಕುರಿತಾಗಿತ್ತು. ಕಾಳಸಂತೆಯಲ್ಲಿ ಬೇರುಬಿಡುತ್ತಿದ್ದ ಭೂಗತದೊರೆಗಳ ಲೋಕವನ್ನು ಅವರ ಚಿತ್ರ ಒಳಗೊಂಡಿತ್ತು. ಯಾಮಾ ಸಾನಾರಗಿಂತ ಈ ವಿಷಯವನ್ನು ಇನ್ನಷ್ಟು ಆಳವಾಗಿ ತಿಳಿಯಬೇಕೆಂದುಕೊಂಡೆ. ಭೂಗತದೊರೆಗಳ ಬದುಕನ್ನು ಛೇದಿಸಿ ನೋಡಬೇಕೆಂದುಕೊಂಡೆ.

ಅವರು ನಿಜಕ್ಕೂ ಎಂಥ ಮನುಷ್ಯರು? ಅವರ ಸಂಸ್ಥೆಗೆ ಬೆಂಬಲ ನೀಡುವ ಅನಿವಾರ್ಯತೆಗಳು ಯಾವ ಬಗೆಯದು? ಆ ಗುಂಪಿನ ಸದಸ್ಯರಲ್ಲಿ ಪ್ರತಿಯೊಬ್ಬರ ಮಾನಸಿಕ ಲೋಕ ಯಾವ ರೀತಿಯದು? ಅವರು ಹೆಮ್ಮೆಪಡುವ ಹಿಂಸೆಯ ಸ್ವರೂಪ ಯಾವುದು?

ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ನನ್ನ ಚಿತ್ರವನ್ನು ಕಾಳಸಂತೆ ನಡೆಯುವ ಜಿಲ್ಲೆಯೊಂದರಲ್ಲಿ ನಡೆಯುವಂತೆ ಮಾಡಲು ನಿರ್ಧರಿಸಿದೆ. ಚಿತ್ರದ ನಾಯಕನನ್ನು ಪ್ರಾಂತ್ಯವೊಂದರ ಭೂಗತದೊರೆ ಮಾಡಿದೆ. ಅವನ ಪಾತ್ರವನ್ನು ನಿಕಷಕ್ಕೆ ಒಡ್ಡಲು ಅವನ ಎದುರು ಮತ್ತೊಂದು ಪಾತ್ರವನ್ನು ಇಡಲು ನಿರ್ಧರಿಸಿದೆ. ಮೊದಲು ಈ ಪ್ರತಿನಾಯಕ ಮಾನವೀಯ ಅನುಕಂಪವುಳ್ಳ ಆ ಪ್ರದೇಶದಲ್ಲಿ ತನ್ನ ದವಾಖಾನೆಯನ್ನು ತೆರೆಯುತ್ತಿರುವ ಯುವವೈದ್ಯ ಎಂದುಕೊಂಡೆ. ಆದರೆ ನಾನು ಮತ್ತು ವೆಕ್ಸಾ ಎಷ್ಟೇ ಪ್ರಯತ್ನಿಸಿದರೂ ಈ ಪಾತ್ರವನ್ನು ಜೀವಂತಗೊಳಿಸಲು ಸಾಧ್ಯವಾಗಲಿಲ್ಲ. ಈ ಪಾತ್ರದಲ್ಲಿ ಚೈತನ್ಯವೇ ಇರಲಿಲ್ಲ. ಮತ್ತೊಂದೆಡೆ ಭೂಗತದೊರೆಯ ಪಾತ್ರ ಉಸಿರಾಡುವ ಜೀವಂತ ವ್ಯಕ್ತಿಯಂತಾಗಿತ್ತು. ಅವನ ಪ್ರತಿನಡೆ ರಕ್ತಮಾಂಸ ತುಂಬಿದ ಮನುಷ್ಯನ ನಡೆಯಂತಿತ್ತು. ಇದಕ್ಕೆ ಕಾರಣ ಆ ಪಾತ್ರ ವೆಕ್ಸಾ ನಿಯಮಿತವಾಗಿ ಭೇಟಿಮಾಡುತ್ತಿದ್ದ ನಿಜ ಬದುಕಿನ ವ್ಯಕ್ತಿಯೊಬ್ಬನ ಅನುಕರಣೆಯಾಗಿತ್ತು. ವೆಕ್ಸಾ ಈ ಭೂಗತದೊರೆಗಳ ಬದುಕಿನಲ್ಲಿ ಎಷ್ಟು ಮುಳುಗಿಹೋಗಿದ್ದನೆಂದರೆ ಆ ಬದುಕಿನ ಬಗ್ಗೆ ಅವನಲ್ಲಿ ಕರುಣೆಯಿತ್ತು. ಈ ಕುರಿತು ನಾವಿಬ್ಬರೂ ಜಗಳವಾಡಿದ್ದೆವು.

ಈ ಪಾತ್ರಗಳ ಹಿನ್ನಲೆಯಲ್ಲಿ ಜನ ಕಸ ಹಾಕುವಂತಹ ಕಸದಗುಂಡಿಯೊಂದನ್ನು ಸೃಷ್ಟಿಸಲು ನಿರ್ಧರಿಸಿದೆವು. ಸುತ್ತಲ ಪರಿಸರಕ್ಕೆ ಮಾರಕವಾಗಿರುವ ಕಾಯಿಲೆಯನ್ನು ಈ ಗುಂಡಿ ಸೂಚಿಸುತ್ತಿತ್ತು. ಈ ಚಿತ್ರ ನಮ್ಮ ಮನಸ್ಸಿನಲ್ಲಿ ದಿನೇ ದಿನೇ ಸ್ಪಷ್ಟರೂಪ ತಳೆಯಲಾರಂಭಿಸಿತು. ಎಷ್ಟೇ ಪ್ರಯತ್ನಿಸಿದರೂ ನಮ್ಮ ಪ್ರತಿನಾಯಕ ಯುವವೈದ್ಯ ನಿರ್ಜೀವವಾಗೇ ಉಳಿದ. ತನ್ನ ನಡೆಗಳನ್ನು ರೂಪಿಸಿಕೊಳ್ಳದಾದ. ಪ್ರತಿದಿನ ನಾನು ಮತ್ತು ವೆಕ್ಸಾ ಪರಸ್ಪರ ಮುಖ ನೋಡುತ್ತಾ ಕೂರುತ್ತಿದ್ದೆವು. ನಮ್ಮ ಸುತ್ತ ಮುದುರಿ ಎಸೆದ ಕಾಗದಗಳ ರಾಶಿ ಬಿದ್ದಿರುತ್ತಿತ್ತು. ಬಹುಶಃ ಇದಕ್ಕೆ ಯಾವುದೇ ಉಪಾಯ ಹೊಳೆಯಲಾರದು ಅನ್ನಿಸಲಾರಂಭಿಸಿತು. ಈ ಯೋಜನೆಯನ್ನು ಕೈಬಿಡೋಣ ಎಂದು ಕೂಡ ಯೋಚಿಸಲಾರಂಭಿಸಿದೆ.

ಪ್ರತಿ ಚಿತ್ರಕತೆಯನ್ನು ಬರೆಯುವಾಗಲೂ ಯಾವುದೋ ಒಂದು ಹಂತದಲ್ಲಿ ಅದನ್ನು ಬಿಟ್ಟುಬಿಡೋಣ ಅನ್ನಿಸುತ್ತದೆ. ಚಿತ್ರಕತೆಗಳನ್ನು ಬರೆಯುತ್ತಾ ಬರೆಯುತ್ತಾ ಅನುಭವದಿಂದ ನಾನೊಂದು ವಿಷಯವನ್ನು ಕಲಿತುಕೊಂಡಿದ್ದೇನೆ. ಹತಾಶೆ ಮತ್ತು ಶೂನ್ಯತೆ ಆವರಿಸಿದಾಗ ಜೆ಼ನ್ ಪ್ರತಿಪಾದಕ ಬೋಧಿಧರ್ಮನ ವಿಧಾನವನ್ನು ಅಳವಡಿಸಿಕೊಳ್ಳುತ್ತೇನೆ. ಅವನು ತನ್ನ ಕಾಲುಗಳು ನಿರುಪಯುಕ್ತವಾಗಿ ಹಾದಿ ತಾನಾಗಿ ತೆರೆದುಕೊಳ್ಳುವವರೆಗೂ ಗೋಡೆಯನ್ನೇ ನಿಟ್ಟಿಸುತ್ತಾ ನಿಂತಿದ್ದನಂತೆ.

ಈ ಸನ್ನಿವೇಶದಲ್ಲೂ ಇದನ್ನು ಸಹಿಸಿಕೊಳ್ಳಲು ಮನಸ್ಸನ್ನು ಸಿದ್ಧಪಡಿಸಿಕೊಂಡೆ. ಮನಸ್ಸಿನಲ್ಲೇ ಗೊಂಬೆಯಂತೆ ನಿಂತೇ ಇದ್ದ ಪಾತ್ರವಾಗಿ ಬೆಳೆಯಲು ನಿರಾಕರಿಸುತ್ತಿದ್ದ ವೈದ್ಯನನ್ನು ನೋಡುತ್ತಲೇ ಇದ್ದೆ. ಐದು ದಿನಗಳ ನಂತರ ನನಗೆ ಮತ್ತು ವೆಕ್ಸಾಗೆ ಹೆಚ್ಚುಕಡಿಮೆ ಒಂದೇ ಸಮಯದಲ್ಲಿ ವೈದ್ಯನೊಬ್ಬನ ನೆನಪಾಯಿತು. ಚಿತ್ರಕತೆಯನ್ನು ಬರೆಯಲು ಕೂರುವ ಮುಂಚೆ ಅದಕ್ಕಾಗಿ ಹಲವು ಕಾಳಸಂತೆ ನಡೆಯುತ್ತಿದ್ದ ಮಾರುಕಟ್ಟೆಗಳನ್ನು ಸುತ್ತಿದ್ದೆವು. ಯೊಕೊಹಾಮ ನಗರದ ಕೊಳಗೇರಿಯೊಂದರಲ್ಲಿ ನಾವು ಕುಡುಕ ವೈದ್ಯನೊಬ್ಬನನ್ನು ಭೇಟಿಯಾಗಿದ್ದೆವು. ಅವನ ಸೊಕ್ಕಿನ ಸ್ವಭಾವ ನಮ್ಮನ್ನು ಸೆಳೆದಿತ್ತು. ಅವನು ಹೇಳುವ ಕತೆಗಳನ್ನು ಕೇಳಲೆಂದೇ ಅವನನ್ನು ಮೂರೋ ನಾಲ್ಕೋ ಮದ್ಯದಗಂಡಿಗಳಿಗೆ ಕರೆದುಕೊಂಡು ಹೋಗಿದ್ದೆವು. ಅವನು ಲೈಸೆನ್ಸ್ ಇಲ್ಲದೆ ತನ್ನ ದವಾಖಾನೆಯನ್ನು ನಡೆಸುತ್ತಿದ್ದಂತೆ ತೋರಿತು. ಕೊಳಗೇರಿಯ ಹಾದಿಹೋಕರು ಅವನ ರೋಗಿಗಳು. ಅವನು ಅನೈತಿಕವಾಗಿ ಮಾಡಿಸುತ್ತಿದ್ದ ಹೆರಿಗೆಯ ಕುರಿತು ಹೇಳುತ್ತಿದ್ದ ಮಾತುಗಳು ಎಷ್ಟು ಅಶ್ಲೀಲವಾಗಿತ್ತೆಂದರೆ ಕೇಳಲು ಅಸಹ್ಯವಾಗಿತ್ತು. ಅವನು ಮಾನವ ಸ್ವಭಾವದ ಕುರಿತು ವ್ಯಂಗ್ಯವಾಡಿದರೂ ಅದರಲ್ಲಿ ಸತ್ಯದ ಹೊಳಹಿರುತ್ತಿತ್ತು. ಮಾತಿನ ಮಧ್ಯದಲ್ಲಿ ಅವನು ಗಹಗಹಿಸಿ ನಗುತ್ತಿದ್ದ. ದೊಡ್ಡದಾಗಿ ಬಾಯ್ದೆರೆದು ನಗುತ್ತಿದ್ದವನ ಮಾತುಗಳಲ್ಲಿ ಮಾನವೀಯತೆಯ ವಿಚಿತ್ರ ಭಾವವೊಂದು ಕಾಣುತ್ತಿತ್ತು. ಬಹುಶಃ ಅವನೊಬ್ಬ ದಂಗೆಕೋರ ಯುವಕ ಸಿನಿಕತೆಯಲ್ಲಿ ತನ್ನ ದಿನಗಳನ್ನು ಕಳೆಯುತ್ತಿದ್ದ. ನನಗೆ ಮತ್ತು ವೆಕ್ಸಾಗೆ ಅವನ ನೆನಪಾಗಿ ಪರಸ್ಪರ ನೋಡಿಕೊಂಡು ಏಕಕಾಲಕ್ಕೆ “ಹೌದು ಅವನೇ!” ಎಂದುಕೊಂಡೆವು. ಈ ಕುಡುಕವೈದ್ಯ ನೆನಪಾದ ಮೇಲೆ ಮೊದಲೇ ಇವನೇಕೆ ನೆನಪಾಗಲಿಲ್ಲ ಅನ್ನಿಸಿತು.

ಈ ಪಾತ್ರಗಳ ಹಿನ್ನಲೆಯಲ್ಲಿ ಜನ ಕಸ ಹಾಕುವಂತಹ ಕಸದಗುಂಡಿಯೊಂದನ್ನು ಸೃಷ್ಟಿಸಲು ನಿರ್ಧರಿಸಿದೆವು. ಸುತ್ತಲ ಪರಿಸರಕ್ಕೆ ಮಾರಕವಾಗಿರುವ ಕಾಯಿಲೆಯನ್ನು ಈ ಗುಂಡಿ ಸೂಚಿಸುತ್ತಿತ್ತು. ಈ ಚಿತ್ರ ನಮ್ಮ ಮನಸ್ಸಿನಲ್ಲಿ ದಿನೇ ದಿನೇ ಸ್ಪಷ್ಟರೂಪ ತಳೆಯಲಾರಂಭಿಸಿತು.

ತೊಗಲು ಬೊಂಬೆಯಂತಿದ್ದ ಯುವವೈದ್ಯನ ಮಾನವೀಯ ಚಿತ್ರವೂ ಸ್ವಲ್ಪಸ್ವಲ್ಪವಾಗಿ ರೂಪು ತಳೆಯಲಾರಂಭಿಸಿತು. ಕಡೆಗೂ “ಡ್ರಂಕನ್ ಏಂಜಲ್” ರಂಗವೇರಿತು. ಆ ಪಾತ್ರಕ್ಕೆ ಜೀವಬಂದು ಚಲಿಸಲಾರಂಭಿಸಿತು. ಅವನು ಐವತ್ತರ ಆಸುಪಾಸಿನ ಕುಡುಕ ವೈದ್ಯ. ತನ್ನದೇ ದವಾಖಾನೆಯನ್ನು ಹೊಂದಿರುತ್ತಾನೆ. ಪ್ರಸಿದ್ಧಿ ಮತ್ತು ಅದೃಷ್ಟಕ್ಕೆ ಬೆನ್ನುತಿರುಗಿಸಿ ಆತ ಸಾಮಾನ್ಯರ ನಡುವೆ ನೆಲೆಸಿದ್ದಾನೆ. ವೈದ್ಯನಾಗಿ ಆತನ ಹಠಮಾರಿತದಿಂದಲೇ ಪ್ರಸಿದ್ಧನಾಗಿದ್ದಾನೆ. ಸದಾ ಕೆದರಿದ ಕೂದಲು, ಶೇವ್ ಮಾಡದ ಗಡ್ಡದೊಂದಿಗೆ ಅವನೊಂದಿಗೆ ಒರಟಾಗಿ ಮಾತಾಡಿದವರಿಗೆ ಅಷ್ಟೇ ಒರಟಾಗಿ ಟಾಂಗ್ ಕೊಡುತ್ತಾನೆ. ಆದರೆ ಈ ನಿರ್ಲಕ್ಷ್ಯದ ಬಾಹ್ಯ ವ್ಯಕ್ತಿತ್ವದ ಹಿಂದೆ ಪ್ರಾಮಾಣಿಕ ನಿಷ್ಕಲ್ಮಷ ಹೃದಯವಿದೆ.

ಹೊಸದಾಗಿ ರೂಪುಗೊಂಡ ಈ ವೈದ್ಯನ ಪಾತ್ರವನ್ನು ಕಾಳಸಂತೆಯಲ್ಲಿದ್ದ ಕಸದಗುಂಡಿಯ ಎದುರಿಗಿನ ದವಾಖಾನೆಯಲ್ಲಿಟ್ಟೆವು. ಅವನ ದವಾಖಾನೆ ಮತ್ತು ಆ ಗುಂಡಿಯ ಸುತ್ತಲ ಪ್ರದೇಶವನ್ನು ನಿಯಂತ್ರಿಸುತ್ತಿರುವ ಭೂಗತದೊರೆ ಕತೆಗೊಂದು ಸಮತೋಲನ ದಕ್ಕಿ ನಿರಾಯಾಸ ಓಘ ದಕ್ಕಿತು. ನಾಟಕ ರಂಗೇರಲು ಇಬ್ಬರು ವ್ಯಕ್ತಿಗಳು ಎದುರುಬದುರಾಗುವುದನ್ನು ಕಾಯಬೇಕಿತ್ತು.

ವೆಕ್ಸಾ ಮತ್ತು ನಾನು ಭೂಗತದೊರೆ ಮತ್ತು ಆ ವೈದ್ಯ ಮೊದಲನೆಯ ದೃಶ್ಯದಲ್ಲೇ ಎದುರುಬದುರಾಗುವಂತೆ ಮಾಡಿದೆವು. ಆ ಭೂಗತದೊರೆ ಗುಂಪು ಜಗಳದಲ್ಲಿ ಗುಂಡು ತಗುಲಿ ಗಾಯಗೊಂಡು ಕುಡುಕ ವೈದ್ಯನ ಬಳಿ ಗುಂಡನ್ನು ತೆಗೆಸಿಕೊಳ್ಳಲು ಬರುತ್ತಾನೆ. ವೈದ್ಯ ಆ ಗುಂಡಿನಿಂದಾದ ತೂತನ್ನು ಗಮನಿಸುತ್ತಿರುವಾಗಲೇ ಆ ಭೂಗತದೊರೆಗೆ ಕ್ಷಯರೋಗದಿಂದ ಶ್ವಾಸಕೋಶದಲ್ಲಿ ತೂತಾಗಿರುವುದನ್ನು ಗಮನಿಸುತ್ತಾನೆ. ಆ ಕ್ಷಯರೋಗದ ಕ್ರಿಮಿಯೇ ಇವರಿಬ್ಬರನ್ನು ಬೆಸೆಯುವ ತಂತುವಾಗುತ್ತದೆ. ಅಲ್ಲಿಂದ ಮುಂದೆ ಅದಕ್ಕೆ ಏನು ಮಾಡಬೇಕು ಎನ್ನುವುದರ ಕುರಿತು ಇಬ್ಬರ ನಡುವೆ ನಡೆವ ವಾದ ಪ್ರತಿವಾದಗಳೇ ಅಗತ್ಯವಿರುವ ನಾಟಕವನ್ನು ಸೃಷ್ಟಿಸುತ್ತದೆ. ಕ್ಷಯರೋಗವು ಮೀಟುಗೋಲಾಗಿ ಕೆಲಸ ಮಾಡುತ್ತದೆ. ಈ ವಿನ್ಯಾಸದಲ್ಲಿ ಚಿತ್ರಕತೆ ಸಾಗಲಾರಂಭಿಸಿದ ಮೇಲೆ ಒಂದೇ ಪಟ್ಟಿಗೆ ಕೂತು ಅದನ್ನು ಮುಗಿಸಿಬಿಟ್ಟೆವು.

ನಾವು ಬೇಗ ಬರೆದುಮುಗಿಸಿದೆವೆಂದರೆ ಅದರರ್ಥ ನನ್ನ ಮತ್ತು ವೆಕ್ಸಾ ನಡುವೆ ಎಲ್ಲವೂ ಸರಾಗವಾಗಿ ನಡೆಯುತ್ತಿತ್ತು ಎಂದಲ್ಲ. ಕಾರಣವೇನೆಂದೂ ನನಗೂ ಸ್ಪಷ್ಟವಾಗಿ ಗೊತ್ತಿಲ್ಲ. ಬಹುಶಃ ವೆಕ್ಸಾ ಭೂಗತದೊರೆಯ ಪಾತ್ರವನ್ನು ಚಿತ್ರಿಸುವಾಗ ಆ ಪಾತ್ರಕ್ಕೆ ಆದರ್ಶವಾದವನನ್ನು ತೀವ್ರವಾಗಿ ಹಚ್ಚಿಕೊಂಡದ್ದು ಕಾರಣವಿರಬಹುದು. ದುರ್ಬಲರು, ಗಾಯಗೊಂಡವರ ಕುರಿತು ಅವನಲ್ಲಿರುವ ಸಹಜ ಕರುಣೆಯಿಂದ ಹೀಗಾಗಿರಬಹುದು. ಭೂಗತಲೋಕದ ವ್ಯವಸ್ಥೆಯನ್ನು ವಿರೋಧಿಸುವ ನನ್ನ ಮನೋಭಾವವನ್ನು ಅವನು ವಿರೋಧಿಸತೊಡಗಿದ.

ಭೂಗತಲೋಕದವರ ವ್ಯಕ್ತಿತ್ವದಲ್ಲಿನ ಸೋಲುಗಳು ಮತ್ತು ವಿಕೃತಗಳಿಗೆ ಅವರೊಬ್ಬರೆ ಹೊಣೆಗಾರರಾಗುವುದಿಲ್ಲ ಎನ್ನುವುದರ ಕುರಿತ ವಾದದ ಬಗ್ಗೆ ವೆಕ್ಸಾನಿಗೆ ಅಸಮಾಧಾನವುಂಟಾಯಿತು. ಇದು ನಿಜವೇ ಇರಬಹುದು. ಆದರೆ ಇಂಥವರಿಗೆ ಜನ್ಮ ಕೊಡುವ ಸಮಾಜವು ಈ ಭೂಗತಲೋಕದ ಅಸ್ತಿತ್ವದ ಹೊಣೆಯ ಬಹುಭಾಗವನ್ನು ಹೊರಬೇಕಾಗುತ್ತದೆ. ಆದರೂ ಅವರ ನಡವಳಿಕೆಯ ಕುರಿತಂತೆ ನಾನಿದನ್ನು ಒಪ್ಪುವುದಿಲ್ಲ. ಇಂತಹ ಕೆಡುಕರಿಗೆ ಜನ್ಮಕೊಟ್ಟ ಸಮಾಜದಲ್ಲಿಯೇ ಒಳ್ಳೆಯ ಜನರು ಪ್ರಾಮಾಣಿಕತೆಯಿಂದ ಯೋಗ್ಯರೀತಿಯಲ್ಲಿ ಜೀವನ ನಡೆಸುತ್ತಿರುವರು. ಒಳ್ಳೆಯ ಜನರನ್ನು ಹೆದರಿಸುತ್ತಾ ಅವರ ಬದುಕನ್ನು ಹಾಳುಮಾಡುತ್ತಾ ಬದುಕುವುದನ್ನು ಕ್ಷಮಿಸಲಾರೆ. ಶಕ್ತಿವಂತರು ಅಹಂಕಾರದಿಂದ ಭೂಗತಲೋಕದ ಜನರನ್ನು ವಿಮರ್ಶಿಸುವುದನ್ನು ಒಪ್ಪಲಾರೆ. ಸಮಾಜದ ನ್ಯೂನ್ಯತೆಗಳು ಅಪರಾಧಿಗಳಿಗೆ ಜನ್ಮನೀಡುತ್ತದೆ ಎನ್ನುವ ಸಿದ್ಧಾಂತ ಸ್ವಲ್ಪಮಟ್ಟಿಗೆ ನಿಜ. ಅಪರಾಧದ ರಕ್ಷಣೆಯಲ್ಲಿ ಈ ಸಿದ್ಧಾಂತವನ್ನು ಹೇಳುವವರು ಇದೇ ನ್ಯೂನ್ಯತೆಯ ಸಮಾಜದಲ್ಲೇ ಅಪರಾಧಗಳನ್ನು ಎಸಗದೆ ಹಲವು ಜನ ಬದುಕುತ್ತಿದ್ದಾರೆ ಎನ್ನುವುದನ್ನು ನಿರ್ಲಕ್ಷಿಸುತ್ತಾರೆ. ಇದಕ್ಕೆ ವಿರುದ್ಧವಾದ ವಾದವು ಸಂಕೀರ್ಣವಾದುದು.

ನಮ್ಮಿಬ್ಬರದು ಮೂಲಭೂತವಾಗಿ ಭಿನ್ನ ಸ್ವಭಾವ ಎಂದು ವೆಕ್ಸಾ ಹೇಳುತ್ತಾನೆ. ಆದರೆ ನಾವಿಬ್ಬರೂ ಒಂದೇ ತರಹ ಎಂದು ನನಗನ್ನಿಸುತ್ತದೆ. ಮೇಲ್ಪದರದಲ್ಲಿ ಮಾತ್ರ ನಮ್ಮಲ್ಲಿ ಭಿನ್ನತೆಯಿದೆ. ನಾನು ಹುಟ್ಟಿನಿಂದಲೂ ಗಟ್ಟಿವ್ಯಕ್ತಿತ್ವದವನು ಆದ್ದರಿಂದ ನನಗೆ ಹಳಹಳಿಕೆಯಾಗಲಿ, ಹತಾಶೆಯಾಗಲಿ ಅಥವ ಸೋಲಾಗಲಿ ಗೊತ್ತಿಲ್ಲವೆಂದು ಹೇಳುತ್ತಾನೆ. ಅವನು ಹುಟ್ಟಿನಿಂದಲೇ ದುರ್ಬಲ. ಯಾವಾಗಲೂ ಕಣ್ಣೀರು ಮತ್ತು ನೋವಿನ ನಡುವೆಯೇ ಬದುಕುತ್ತಿದ್ದಾನೆ. ಅವನ ಹೃದಯದಲ್ಲಿ ರೋದನೆ ಮತ್ತು ಕಹಿಯಿದೆ ಎಂದು ಅವನು ತನ್ನನ್ನು ತಾನು ವರ್ಣಿಸಿಕೊಳ್ಳುತ್ತಾನೆ. ಆದರೆ ನನಗಿದು ಪೊಳ್ಳು ಅನ್ನಿಸುತ್ತದೆ. ಬದುಕು ಹೊತ್ತುತರುವ ನೋವನ್ನು ಎದುರಿಸಲು ನಾನು ಗಟ್ಟಿವ್ಯಕ್ತಿತ್ವದ ಮುಖವಾಡವನ್ನು ಧರಿಸಿದ್ದೇನೆ. ಅದೇ ರೀತಿ ವೆಕ್ಸಾ ನೋವನ್ನು ಎದುರಿಸಲು ದುರ್ಬಲ ವ್ಯಕ್ತಿಯ ಮುಖವಾಡವನ್ನು ಧರಿಸಿದ್ದಾನೆ. ಮೇಲ್ನೋಟಕ್ಕೆ ನಮ್ಮಿಬ್ಬರಲ್ಲಿ ಭಿನ್ನತೆ ಕಾಣುತ್ತದೆ. ಆದರೆ ಆಂತರ್ಯದಲ್ಲಿ ಇಬ್ಬರೂ ದುರ್ಬಲ ವ್ಯಕ್ತಿಗಳೇ.

ನಮ್ಮಿಬ್ಬರ ನಡುವಿನ ಈ ವೈಯುಕ್ತಿಕ ಭಿನ್ನಾಭಿಪ್ರಾಯಗಳನ್ನು ಇಲ್ಲಿ ಹೇಳುತ್ತಿರುವುದರ ಉದ್ದೇಶ ವೆಕ್ಸಾನನ್ನು ವಿರೋಧಿಸುವುದಲ್ಲ. ಅಥವ ನನ್ನನ್ನು ಸಮರ್ಥಿಸಿಕೊಳ್ಳುವುದೂ ಅಲ್ಲ. ನನ್ನನ್ನು ನಾನು ಅರ್ಥಮಾಡಿಕೊಳ್ಳಲು ಇದೊಂದು ಅವಕಾಶ ಅನ್ನಿಸಿತು ಅಷ್ಟೇ. ನಾನೇನೂ ವಿಶೇಷ ವ್ಯಕ್ತಿಯಲ್ಲ. ನಾನು ಬಹಳ ಗಟ್ಟಿವ್ಯಕ್ತಿತ್ವದವನಾಗಲಿ ಅಥವ ವಿಶೇಷ ವ್ಯಕ್ತಿಯಾಗಲಿ ಅಲ್ಲ. ನನ್ನ ದೌರ್ಬಲ್ಯಗಳನ್ನು ತೋರಿಸಿಕೊಳ್ಳುವುದು ನನಗಿಷ್ಟವಿಲ್ಲ. ಸೋಲುವುದನ್ನು ದ್ವೇಷಿಸುತ್ತೇನೆ. ಆದಷ್ಟು ಶ್ರಮವಹಿಸಿ ಗೆಲ್ಲಲು ಪ್ರಯತ್ನಿಸುತ್ತೇನೆ. ಇದು ನಾನು.

ಡ್ರಂಕನ್ ಏಂಜಲ್ ಬರೆದು ಮುಗಿಸಿದ ನಂತರ ವೆಕ್ಸಾ ಮತ್ತೆ ಕಾಣೆಯಾದ. ವೆಕ್ಸಾ ಹೇಳುವಂತೆ ನಮ್ಮ ಮೂಲಭೂತ ಸ್ವಭಾವಗಳ ಕಾರಣದಿಂದುಂಟಾದ ತುಂಬಲಾರದ ಅಂತರ ಇದಕ್ಕೆ ಕಾರಣವಲ್ಲ. ಅಂತಹ ಗಂಭೀರವಾದ ಕಾರಣವೇನೂ ಇರಲಿಲ್ಲ. ಅದು ಕೇವಲ ಅವನ ನೆಪ. ನಿಜವಾಗಿ ಘಟಿಸಿದ್ದೇನೆಂದರೆ ಅವನು ಚಂಚಲಗೊಂಡು ತನ್ನ ಹಳೆಯ ಚಾಳಿಯಂತೆ ಅಲೆಮಾರಿಯಾದ.

ನಮ್ಮ ಮೂಲಭೂತ ಭಿನ್ನತೆಗಳು ಭಿನ್ನತೆಗಳೇ ಅಲ್ಲ ಎನ್ನುವುದಕ್ಕೆ ಸಾಕ್ಷಿಯಿದೆ. ಈ ಆತ್ಮಕತೆಯಂತಹ ಬರವಣಿಗೆಯನ್ನು ಮಾಡಲು ಕೂತಾಗ ವೆಕ್ಸಾ ಬಂದು ನನ್ನೊಡನೆ ಒಂದು ಸಂಜೆ ಮಾತಾಡುತ್ತಾ ಖುಷಿಯಾಗಿ ಕಳೆದ. ಅವನದನ್ನು ಎಷ್ಟು ಖುಷಿಯಾಗಿ ಅನುಭವಿಸಿದನೆಂದರೆ ಮತ್ತೊಮ್ಮೆ ಬಂದು ಸಮಯವನ್ನೇ ಮರೆತು ಹರಟುತ್ತಾ ಇಡೀ ರಾತ್ರಿಯನ್ನು ಕಳೆದ. ಇದನ್ನೇ ಮತ್ತೊಂದು ರೀತಿಯಲ್ಲಿ ಹೇಳಬೇಕೆಂದರೆ ವೆಕ್ಸಾ ಮತ್ತು ನಾನು ಚಿಕ್ಕಂದಿನಲ್ಲಿ ಕಿತ್ತಾಡುತ್ತಿದ್ದ ಕಾಲದಿಂದಲೂ ಒಳ್ಳೆಯ ಗೆಳೆಯರು. ನಾವು ಜಗಳಗಂಟ ಗೆಳೆಯರು.