ಒಟ್ಟಿನಲ್ಲಿ ಸೆನ್ಸಾರ್ ಶಿಪ್ ಬ್ಯೂರೋದ ಡಾಬರ್ ಮನ್ ಗಳು ಅಂದಿನ ಅಧಿಕಾರಶಾಹಿಯ ಕೈಗೊಂಬೆಯಾಗಿದ್ದರು ಎನ್ನುವುದಂತೂ ಸತ್ಯ. ಸಮಯದ ಕೈಗೊಂಬೆಯಾಗಿ ಸ್ವಂತಿಕೆಯಿಲ್ಲದ ಒಬ್ಬ ಅಧಿಕಾರಿಶಾಹಿ ಮನುಷ್ಯನಿಗಿಂತ ಅಪಾಯಕಾರಿ ಮತ್ತೊಬ್ಬರಿಲ್ಲ. ನಾಜಿ ಯುಗದಲ್ಲಿ ಹಿಟ್ಲರ್ ಹುಚ್ಚುಮನುಷ್ಯ. ಆದರೆ ಅವನ ಹಿಂದಿದ್ದ ಹಿಮ್ಲರ್ ಮತ್ತು ಈಚಮನ್ ನಂತಹವರನ್ನು ನೋಡಿದಾಗ ಆ ಕ್ರೌರ್ಯದ ಹಿಂದಿದ್ದ ವ್ಯಕ್ತಿಗಳು ಎಂಥವರು ಎನ್ನುವುದು ತಿಳಿಯುತ್ತದೆ. ಕಾನ್ಸನ್ಟ್ರೇಶನ್ ಕ್ಯಾಂಪಿನ ಜೈಲರುಗಳು ಮತ್ತು ನಿರ್ವಾಹಕರನ್ನು ನೋಡಿದಾಗ ಅವರ ರಾಕ್ಷಸಿ ಮನೋಭಾವದ ಅರಿವಾಗುತ್ತದೆ. ಅವರು ನಿಜಕ್ಕೂ ಏನನ್ನಾದರೂ ಸೃಷ್ಟಿಸುವ ಕಲ್ಪಿಸುವ ಸಾಮರ್ಥ್ಯವನ್ನೇ ಕಳೆದುಕೊಂಡುಬಿಟ್ಟಿದ್ದರು.
ಹೇಮಾ.ಎಸ್. ಅನುವಾದಿಸಿರುವ ಅಕಿರ ಕುರಸೋವನ ಆತ್ಮಕತೆಯ ಮತ್ತೊಂದು ಅಧ್ಯಾಯ

 

Horses ಚಿತ್ರ ಪೂರ್ಣಗೊಂಡ ಬಳಿಕ ಸಹಾಯಕ ನಿರ್ದೇಶಕನ ಕರ್ತವ್ಯಗಳಿಂದ ನನ್ನನ್ನು ಮುಕ್ತಗೊಳಿಸಲಾಯಿತು. ಆ ಬಳಿಕ ಯಮಾ ಸಾನರಿಗೆ ಎಲ್ಲೋ ಕೆಲವೊಮ್ಮೆಯಷ್ಟೇ ಎರಡನೇ ಯೂನಿಟ್ ಚಿತ್ರೀಕರಣ ಮಾಡಿದೆ. ಬಹುಪಾಲು ನನ್ನ ಸಮಯವನ್ನು ಚಿತ್ರಕತೆ ಬರೆಯುವುದರಲ್ಲಿ ತೊಡಗಿಸಿದೆ. ವಾರ್ತಾ ಸಚಿವಾಲಯದವರು ಪ್ರಾಯೋಜಿಸಿದ್ದ ಸ್ಪರ್ಧೆಯೊಂದಕ್ಕೆ ಎರಡು ಚಿತ್ರಕತೆಗಳನ್ನು ಕಳಿಸಿದೆ. ಶಿಜುಕ ನಾರಿ (Shizuka nari – All Is Quiet) ಎರಡನೆಯ ಬಹುಮಾನ 300 ಯೆನ್ (ಸುಮಾರು $6,000) ಮತ್ತು ಯೂಕಿ (Yuki – Snow) ಮೊದಲನೆಯ ಬಹುಮಾನ 2,000 ಯೆನ್ (($40,000) ಪಡೆದುಕೊಂಡಿತು. ಆಗ ನನ್ನ ತಿಂಗಳ ಸಂಬಳ ಕೇವಲ 48 ಯೆನ್ (ಸುಮಾರು $960). ಇದು ಯಾವುದೇ ಸಹಾಯಕ ನಿರ್ದೇಶಕ ಪಡೆಯುತ್ತಿದ್ದಕ್ಕಿಂತ ಹೆಚ್ಚಾಗಿತ್ತು. ವಾರ್ತಾ ಸಚಿವಾಲಯದ ಬಹುಮಾನದ ಹಣ ನನ್ನ ಪಾಲಿಗೆ ಬಹುದೊಡ್ಡ ಮೊತ್ತವಾಗಿತ್ತು.

ಪ್ರತಿ ದಿನ ನನ್ನ ಸ್ನೇಹಿತರನ್ನು ಕುಡಿಯಲು ಕರೆದುಕೊಂಡು ಹೋಗುತ್ತಿದ್ದೆ. ಆಗಿನ ದಿನಚರಿ ಹೀಗಿತ್ತು : ಮೊದಲು ಶಿಬುಯಾ ನಿಲ್ದಾಣದ ಬಳಿ ಬೀರ್ ಕುಡಿದು ಗಿನ್ಜಾ ಸಮೀಪದ ಸುಕಿಯಬಾಶಿಗೆ ಹೋಗಿ ಜಪಾನಿ ಖಾದ್ಯಗಳ ಜೊತೆಗೆ ಸೇಕ್ (ಅಕ್ಕಿಯಿಂದ ಮಾಡಿದ ಮದ್ಯ) ಕುಡಿಯುತ್ತಿದ್ದೆವು. ಅಂತಿಮವಾಗಿ ಗಿಂಜಾದ ಬಾರುಗಳಿಗೆ ಹೋಗಿ ವಿಸ್ಕಿ ಕುಡಿಯುತ್ತಿದ್ದೆವು. ಎಲ್ಲ ಸಮಯದಲ್ಲೂ ಕೇವಲ ಸಿನೆಮಾಗಳ ಕುರಿತು ಮಾತಾಡುತ್ತಿದ್ದೆವು. ಆದ್ದರಿಂದ ಆ ಸಮಯ ಸಂಪೂರ್ಣ ವ್ಯರ್ಥಮಾಡಿದೆವು ಎಂದು ಹೇಳುವುದಿಲ್ಲ. ಆದರೆ ಸ್ವಲ್ಪ ಕೂಡ ಯೋಚಿಸದೆ ನಮ್ಮ ಜೀರ್ಣಾಂಗಗಳನ್ನು ಹಾಳುಮಾಡಿಕೊಂಡೆವು.

ಕುಡಿದು ಎಲ್ಲ ಹಣ ಖಾಲಿಯಾದ ಮೇಲೆ ಮತ್ತೆ ಬರೆಯಲು ಕೂತೆ. ಆಗ ಹಣದ ಸಲುವಾಗಿಯೇ ಬರೆದೆ. ಆ ಸಮಯದಲ್ಲಿ ಡೇಯ್ ಮೋಷನ್ ಪಿಚ್ಚರ್ ಕಂಪನಿ (Daiei Motion Picture Company)ಗಾಗಿ ಬರೆಯುತ್ತಿದ್ದೆ. ದೊಹ್ಯೊಸಾಯಿ (Dohyosai – Wrestling Ring Festival) ಮತ್ತು ಜಜೌಮಾ ಮೊನೊಗಾತಾರಿ (Jajauma monogatari – The Story of a Bad Horse) ಎನ್ನುವ ಚಿತ್ರಕತೆಗಳನ್ನು ಬರೆದುಕೊಟ್ಟೆ. ಅವರು ನಾನು ಕೆಲಸ ಮಾಡುತ್ತಿದ್ದ ತೊಹೊಗೆ ನನ್ನ ಹಣವನ್ನು ಪಾವತಿಸಿದರು. ಆದರೆ ತೊಹೊ ಅದರಲ್ಲಿ ಅರ್ಧ ಭಾಗವನ್ನು ತಾನಿಟ್ಟುಕೊಂಡಿತು. ನಾನವರನ್ನು ಕೇಳಿದಾಗ ತೊಹೊನವರು “ನೀವು ತೊಹೊದೊಂದಿಗೆ ಒಪ್ಪಂದದಡಿಯಲ್ಲಿ ಕೆಲಸ ಮಾಡುತ್ತಿರುವಿರಿ. ನಾವು ನಿಮಗೆ ನಿಯಮಿತವಾಗಿ ವೇತನವನ್ನು ನೀಡುತ್ತಿದ್ದೇವೆ. ಹಾಗಾಗಿ ನೀವು ಹೊರಗೆ ಮಾಡುವ ಕೆಲಸದಲ್ಲಿ ಗಳಿಸಿದ್ದರಲ್ಲಿ ನಮಗಿಂತಿಷ್ಟು ಭಾಗವನ್ನು ನೀಡಬೇಕು” ಎಂದು ಹೇಳಿದರು.

ಆದರೆ ನನಗಿದು ಅರ್ಥವಾದದ್ದೇ ಬೇರೆ ತರಹ. ಡೇಯ್ ನವರು ನನಗೆ ಪ್ರತಿ ಚಿತ್ರಕತೆಗೆ 200 ಯೆನ್ ಕೊಡುತ್ತಿದ್ದರು. ತೊಹೊದಲ್ಲಿ ನನ್ನ ಸಂಬಳ ತಿಂಗಳಿಗೆ 48 ಯೆನ್ ಅಥವ ವರ್ಷಕ್ಕೆ 576 ಯೆನ್. ಡೇಯ್ ನವರಿಗೆ ವರ್ಷಕ್ಕೆ 3 ಚಿತ್ರಕತೆಗಳನ್ನು ಬರೆದಲ್ಲಿ ತೊಹೊನವರು ನನ್ನಿಂದ ಸರಾಸರಿ 25 ಯೆನ್ ಅಂದರೆ ನನ್ನ ಅರ್ಧದಷ್ಟು ಸಂಬಳವನ್ನು ಸಂಪಾದಿಸುತ್ತಿದ್ದರು. ನನಗನ್ನಿಸಿದ್ದು ತೊಹೊನವರು 48 ಯೆನ್ ಕೊಟ್ಟು ನನ್ನನ್ನು ಕೆಲಸಕ್ಕೆ ಇಟ್ಟುಕೊಂಡಿಲ್ಲ, ಬದಲಿಗೆ ನಾನೇ ತೊಹೊನವರಿಗೆ 25 ಯೆನ್ ಕೊಟ್ಟು ಸಂಬಳಕ್ಕಿಟ್ಟುಕೊಂಡಿದ್ದೀನಿ ಅಂತ. ಇದು ವಿಚಿತ್ರ ಅನ್ನಿಸಿದರೂ ಏನೂ ಮಾತಾಡಲಿಲ್ಲ. ಡೇಯ್ ಕಂಪನಿಯ ನಿರ್ವಾಹಕರು ನನ್ನ ಹಣ ನನಗೆ ಸಂದಾಯವಾಗುತ್ತಿದೆಯೇ ಎಂದು ಕೇಳಿದಾಗ ಅವರಿಗೆ ನೇರವಾಗಿ ಇದ್ದದ್ದನ್ನು ಇದ್ದ ಹಾಗೆಯೇ ಹೇಳಿದೆ. ಅವರು ಒಂದು ಕ್ಷಣ ದಿಗ್ಭ್ರಾಂತರಾಗಿ “ಥತ್!” ಎಂದು ಹಣಕಾಸು ವಿಭಾಗದೊಳಗೆ ಹೋಗಿ 100 ಯೆನ್ ತಂದು ನೇರವಾಗಿ ನನ್ನ ಕೈಗಿತ್ತರು.

ಆಮೇಲೆ ಡೇಯ್ ಗಾಗಿ ಚಿತ್ರಕತೆ ಬರೆದಾಗಲೆಲ್ಲ ಇದೇ ಕತೆ ಪುನರಾವರ್ತನೆಯಾಗುತ್ತಿತ್ತು. ಬಹುಶಃ ತೊಹೊನವರಿಗೆ ನನಗೆ ಹೆಚ್ಚು ಹಣ ಸಿಕ್ಕರೆ ನಾನು ಹೆಚ್ಚು ಕುಡಿದು ಬಿಡುತ್ತೇನೆ ಎನ್ನುವ ಚಿಂತೆ ಕಾಡುತ್ತಿರಬಹುದು.

ಹೆಚ್ಚು ಕುಡಿದ ಪರಿಣಾಮವಾಗಿ ಹೊಟ್ಟೆಯೊಳಗೆ ಹುಣ್ಣುಗಳಾಗಿಬಿಟ್ಟವು. ತನಿಗುಚಿ ಸೇನ್ಕುಚಿ (Taniguchi Senkichi) ಜೊತೆಯಲ್ಲಿ ಬೆಟ್ಟ ಹತ್ತಲು ಹೋಗಿಬಿಟ್ಟೆ. ದಿನವೆಲ್ಲ ಬೆಟ್ಟ ಹತ್ತಿ ಸುತ್ತಾಡಿ ಸಂಜೆಯ ಹೊತ್ತಿಗೆ ಸುಸ್ತಾಗಿ ಮಲಗಿಬಿಡುತ್ತಿದ್ದೆ. ಸೇಕ್ (ಅಕ್ಕಿ ಹೆಂಡ) ಕುಡಿಯಲು ಆಗುತ್ತಿರಲಿಲ್ಲ. ಆದ್ದರಿಂದ ಹುಣ್ಣುಗಳು ವಾಸಿಯಾದವು. ವಾಸಿಯಾದ ಮೇಲೆ ಮತ್ತೆ ಕುಡಿಯಲು ಹಣ ಬೇಕೆಂದು ಚಿತ್ರಕತೆ ಬರೆಯಲು ಶುರುಮಾಡಿದೆ.

ಹಾರ್ಸಸ್ (Horses) ನೊಂದಿಗೆ ಕುಡಿತ ಆರಂಭವಾಯಿತು. ಸಹಾಯಕ ನಿರ್ದೇಶಕರು ಬ್ಯುಸಿಯಾಗಿರುತ್ತಿದ್ದರಿಂದ ನಮಗೆ ಊಟದ ಜೊತೆಗೆ ಸೇಕ್ ಕುಡಿಯಲು ಸಮಯವೇ ಸಿಗುತ್ತಿರಲಿಲ್ಲ. ಬೇಗ ಊಟ ಮುಗಿಸಿ ಮಾರನೆಯ ದಿನದ ಶೂಟಿಂಗ್ ಸಿದ್ಧತೆಗೆ ಓಡಬೇಕಿತ್ತು. ನಾವು ಬರೋಹೊತ್ತಿಗೆ ಎಲ್ಲರೂ ಮಲಗಿರುತ್ತಿದ್ದರು. ನಾವು ಕುಡಿಯಲಾಗುತ್ತಿಲ್ಲವಲ್ಲ ಎಂದು ಬೇರೆಯವರು ಅಯ್ಯೋ ಪಾಪ ಎಂದುಕೊಂಡು ನಮ್ಮ ತಲೆದಿಂಬಿನಡಿಯಲ್ಲಿ ಸೇಕ್ ಬಾಟಲಿಗಳನ್ನು ಇಟ್ಟಿರುತ್ತಿದ್ದರು. ಜೊತೆಗೆ ಬಿಸಿ ಮಾಡಿಕೊಂಡು ಕುಡಿಯಲಿ ಎಂದು ಪಾತ್ರೆಯನ್ನು ಕೆಂಡದೊಟ್ಟಿಗೆ ಇಟ್ಟಿರುತ್ತಿದ್ದರು. ಪ್ರತಿ ರಾತ್ರಿ ಹಾಸಿಗೆಯಲ್ಲಿ ಮಲಗಿ ತಲೆಯನ್ನಷ್ಟೇ ಹೊದಿಕೆಯಿಂದ ಹೊರಹಾಕಿ ಕುಡಿಯುತ್ತಿದ್ದೆವು. ಚಿಪ್ಪಿನಿಂದ ಹೊರಗಿಣುಕುತ್ತಿರುವ ಆಮೆಗಳಂತೆ ಕಾಣುತ್ತಿದ್ದೆವು. (ಒಂದು ರೀತಿಯಲ್ಲಿ ಬೆಂದ ಆಮೆಗಳಾಗಿಬಿಟ್ಟಿದ್ದೆವು.)

ನನ್ನ ಬರವಣಿಗೆ ಮತ್ತು ಕುಡಿತದ ಜೀವನ ಒಂದು ವರ್ಷ ಹೀಗೆ ಸಾಗಿತು. ಅಂತೂ ಕಡೆಗೆ ನನ್ನದೇ ಚಿತ್ರಕತೆ Daruma-dera no doitsujin (A German at Daruma Temple) ನಿರ್ದೇಶಿಸುವ ಅವಕಾಶ ಒದಗಿತು. ಆದರೆ ಪ್ರಿ ಪ್ರೊಡಕ್ಷನ್ ಆರಂಭವಾಗುತ್ತಿದ್ದಂತೆ ಸಿನೆಮಾದ ವಿತರಣೆಗೆ ಸಂಬಂಧಿಸಿದಂತೆ ನಿರ್ಬಂಧನೆಗಳು ಎದುರಾದ್ದರಿಂದ ಸಿನೆಮಾವನ್ನು ಕೈಬಿಡಬೇಕಾಯಿತು. ಪೆಸಿಫಿಕ್ ಯುದ್ಧ ಆರಂಭವಾಯಿತು. ಇಂತಹ ಕೆಟ್ಟಗಳಿಗೆಯಲ್ಲೇ ನಿರ್ದೇಶಕನಾಗಬೇಕೆಂಬ ನನ್ನ ಹಂಬಲದ ಹೋರಾಟ ಕೂಡ ಮೊದಲಾಯಿತು.

ಪೆಸಿಫಿಕ್ ಯುದ್ಧದ ಸಮಯದಲ್ಲಿ ಜಪಾನಿನಲ್ಲಿ ವಾಕ್ ಸ್ವಾತಂತ್ರ್ಯದ ಮೇಲೆ ದಿನೇ ದಿನೇ ನಿರ್ಬಂಧಗಳು ಹೆಚ್ಚಾದವು. ನಿರ್ಮಾಣ ಸಂಸ್ಥೆ ನನ್ನ ಚಿತ್ರಕತೆಯನ್ನು ಸಿನೆಮಾ ಮಾಡಲು ಆಯ್ಕೆ ಮಾಡಿಕೊಂಡರೂ ಆಂತರಿಕ ಸಚಿವಾಲಯದ ಸೆನ್ಸಾರ್ ಶಿಪ್ ಬ್ಯೂರೊ ಅದನ್ನು ತಿರಸ್ಕರಿಸುತ್ತಿತ್ತು. ಸೆನ್ಸಾರ್ ನವರು ಹೇಳಿದ್ದೇ ಅಂತಿಮವಾಗಿದ್ದು ಎರಡನೆಯ ಬಾರಿಗೆ ಅವಲೋಕಿಸುವ ಅವಕಾಶವಿರಲಿಲ್ಲ.

ಸೆನ್ಸಾರ್ ನಲ್ಲಿ ಸಡಿಲಿಕೆಯಿರಲಿಲ್ಲ. ಆ ಸಮಯದಲ್ಲಿ ಅರಸುಮನೆತನದ ಲಾಂಛನ ಅಥವ ಅದನ್ನು ಹೋಲುವ ಯಾವುದೇ ವಿನ್ಯಾಸವನ್ನು ಕೂಡ ಬಳಸುವಂತಿರಲಿಲ್ಲ. ಆದ್ದರಿಂದ ಸಿನೆಮಾದಲ್ಲಿ ಬಳಸುವ ಬಟ್ಟೆಬರೆಗಳ ಮೇಲೆ ಆ ರೀತಿಯ ಯಾವುದೇ ವಿನ್ಯಾಸಗಳು ಇರದಂತೆ ಬಹಳ ಎಚ್ಚರ ವಹಿಸುತ್ತಿದ್ದೆವು. ಆ ರೀತಿ ಎಚ್ಚರಿಕೆ ವಹಿಸಿದ್ದರೂ ಕೂಡ ನನಗೆ ಸೆನ್ಸಾರ್ ಶಿಪ್ ಬ್ಯೂರೊದವರು ಲಾಂಛನದ ವಿನ್ಯಾಸವನ್ನು ನಾನು ಬಳಸಿರುವುದಾಗಿ ಆ ಇಡೀ ದೃಶ್ಯವನ್ನೇ ತೆಗೆದುಹಾಕಬೇಕೆಂದು ಸಮನ್ಸ್ ನೀಡಿದರು.

ಆ ತರಹದ ಯಾವುದೇ ವಿನ್ಯಾಸವನ್ನು ಬಳಸಿರಲು ಸಾಧ್ಯವಿಲ್ಲ ಎನ್ನುವ ಖಾತ್ರಿಯಿದ್ದು ಮತ್ತೊಮ್ಮೆ ಎಲ್ಲವನ್ನೂ ಪರೀಕ್ಷಿಸಿದೆ. ಸಶ್ (ಮೇಲು ಹೊದಿಕೆ ವಸ್ತ್ರ)ದ ಮೇಲೆ ಎತ್ತಿನಗಾಡಿ ವಿನ್ಯಾಸವಿತ್ತು. ಅವರು ವಿರೋಧ ವ್ಯಕ್ತಪಡಿಸುತ್ತಿರುವುದು ಇದಕ್ಕೆ ಎಂದು ಅರ್ಥವಾಯಿತು. ನಾನು ಆ ವಸ್ತ್ರವನ್ನು ತೆಗೆದುಕೊಂಡು ಸೆನ್ಸಾರ್ ಆಫೀಸಿಗೆ ಆ ವ್ಯಕ್ತಿಗೆ ತೋರಿಸಲು ಹೋದೆ. ಆದರೆ ಆತ “ಅದು ವಾಸ್ತವವಾಗಿ ಎತ್ತಿನಗಾಡಿಯೇ ಇರಬಹುದು. ಆದರೆ ಅದು ಲಾಂಛನದ ಹಾಗೆ ಕಾಣಿಸುತ್ತಿರುವುದರಿಂದ ಅದು ಲಾಂಛನವೇ. ಆ ದೃಶ್ಯವನ್ನು ಕತ್ತರಿಸಿ” ಎಂದ. ಸೆನ್ಸಾರ್ ಶಿಪ್ ಬ್ಯೂರೊ ಇಂತಹ ಮೂರ್ಖತನದ ಗಣಿಯೇ ಆಗಿದ್ದರಿಂದ ಅಲ್ಲಿ ಈ ತರಹದ ಘಟನೆಗಳು ವಿರಳವಾಗಿರಲಿಲ್ಲ.

ಸೆನ್ಸಾರಿನ ಅಧಿಕಾರಿಗಳಲ್ಲಿ ಯುದ್ಧ ಸಮಯದಲ್ಲಿ ಕಾಣಿಸಿಕೊಳ್ಳುವ ಜೆನೊಫೋಬಿಯಾ (ಮತ್ತೊಂದು ದೇಶದ ಜನರ ಕುರಿತ ಅಸಹನೆ) ಇತ್ತು. ಅವರಿಗೇನಾದರೂ “ಬ್ರಿಟೀಷ್ – ಅಮೆರಿಕನ್” ಮಾದರಿಯದು ಕಂಡರೆ ತಕ್ಷಣ ಅದನ್ನು ನಾಶ ಮಾಡಲು ಉತ್ಸುಕರಾಗುತ್ತಿದ್ದರು. ಮೊರಿ ನೊ ಸೆನಿಷಿಯಾ (Mori no sen’ichiya – A Thousand and One Nights in the Forest) ಮತ್ತು ಸ್ಯಾನ್ಪಗುತ ನೋ ಹಾನಾ (San Paguita no hana – The San Paguita Flower) ಎನ್ನುವ ನನ್ನೆರಡು ಚಿತ್ರಕತೆಗಳನ್ನು ಸೆನ್ಸಾರ್ ನವರು ಗುಂಡಿ ತೋಡಿ ಮುಚ್ಚಿಬಿಟ್ಟರು.

ಹೆಚ್ಚು ಕುಡಿದ ಪರಿಣಾಮವಾಗಿ ಹೊಟ್ಟೆಯೊಳಗೆ ಹುಣ್ಣುಗಳಾಗಿಬಿಟ್ಟವು. ತನಿಗುಚಿ ಸೇನ್ಕುಚಿ (Taniguchi Senkichi) ಜೊತೆಯಲ್ಲಿ ಬೆಟ್ಟ ಹತ್ತಲು ಹೋಗಿಬಿಟ್ಟೆ. ದಿನವೆಲ್ಲ ಬೆಟ್ಟ ಹತ್ತಿ ಸುತ್ತಾಡಿ ಸಂಜೆಯ ಹೊತ್ತಿಗೆ ಸುಸ್ತಾಗಿ ಮಲಗಿಬಿಡುತ್ತಿದ್ದೆ. ಸೇಕ್ (ಅಕ್ಕಿ ಹೆಂಡ) ಕುಡಿಯಲು ಆಗುತ್ತಿರಲಿಲ್ಲ. ಆದ್ದರಿಂದ ಹುಣ್ಣುಗಳು ವಾಸಿಯಾದವು. ವಾಸಿಯಾದ ಮೇಲೆ ಮತ್ತೆ ಕುಡಿಯಲು ಹಣ ಬೇಕೆಂದು ಚಿತ್ರಕತೆ ಬರೆಯಲು ಶುರುಮಾಡಿದೆ.

The San Paguita Flower ಎನ್ನುವುದರಲ್ಲಿ ಒಂದು ದೃಶ್ಯವಿತ್ತು. ಕೈಗಾರಿಕೆಯೊಂದರ ಜಪಾನಿ ಕಾರ್ಮಿಕರು ಫಿಲಿಪಿನೊ ಎನ್ನುವ ಹುಡುಗಿಯ ಹುಟ್ಟುಹಬ್ಬವನ್ನು ಆಚರಿಸಲು ಸೇರುತ್ತಾರೆ. ಸೆನ್ಸಾರ್ಷಿಪ್ ಬ್ಯೂರೊನವರಿಗೆ ಇದು “ಬ್ರಿಟೀಷ್ – ಅಮೆರಿಕನ್ ಸಂಸ್ಕೃತಿ”ಯಂತೆ ಕಂಡಿತು. ಅವರು ನನ್ನನ್ನು ವಿಚಾರಣೆಗೆ ಒಳಪಡಿಸಿದರು. ‘ಹುಟ್ಟುಹಬ್ಬವನ್ನು ಆಚರಿಸುವುದು ತಪ್ಪೇ’ ಎಂದು ಕೇಳಲು ಪ್ರಯತ್ನಿಸಿದೆ. ಸೆನ್ಸಾರ್ ನವರು ‘ಹೌದು ಅದು ಬ್ರಿಟೀಷ್ ಅಮೆರಿಕನ್ ಸಂಪ್ರದಾಯ ಇಂತಹ ಸಮಯದಲ್ಲಿ ಆ ರೀತಿಯ ದೃಶ್ಯವನ್ನು ಬರೆಯುವುದು ಅಪರಾಧ’ ಎಂದರು. ಈ ಸೆನ್ಸಾರ್ ಅಧಿಕಾರಿ ತನ್ನ ಸೆನ್ಸಾರ್ ತರ್ಕದಿಂದಾಗಿ ನಾನು ನೇಯ್ದ ಪ್ರಶ್ನೆಯ ಬಲೆಯೊಳಗೆ ಸಿಕ್ಕಿಹಾಕಿಕೊಂಡ. ಮೊದಲು ಹುಟ್ಟುಹಬ್ಬದ ಕೇಕಿಗೆ ಆಕ್ಷೇಪಣೆ ವ್ಯಕ್ತಪಡಿಸಿ ವಾದಿಸಿದಾತ ಆಮೇಲೆ ಇಡೀ ಹುಟ್ಟುಹಬ್ಬದ ಆಚರಣೆಯೇ ತಪ್ಪು ಎಂದು ವಾದಿಸಲಾರಂಭಿಸಿದ. ತಕ್ಷಣ “ಹಾಗಿದ್ದರೆ ಮಹಾರಾಜರ ಹುಟ್ಟಿದಹಬ್ಬ ಆಚರಿಸುವುದು ಕೂಡ ತಪ್ಪಲ್ಲವೇ? ಜಪಾನಿನಲ್ಲಿ ಮಹಾರಾಜರ ಹುಟ್ಟುಹಬ್ಬದಂದು ರಾಷ್ಟ್ರೀಯ ರಜೆ ಘೋಷಿಸಲಾಗುತ್ತದೆ. ಇದು ನಿಜಕ್ಕೂ ಬ್ರಿಟೀಷ್ – ಅಮೆರಿಕನ್ ಸಂಪ್ರದಾಯವಾಗಿದ್ದಲ್ಲಿ ಖಂಡಿತವಾಗಿಯೂ ಇದು ದೊಡ್ಡ ಅಪರಾಧ” ಎಂದೆ. ಆ ಸೆನ್ಸಾರ್ ಅಧಿಕಾರಿಯ ಮುಖ ಬಿಳುಚಿಕೊಂಡಿತು. ಆತ ನನ್ನ ಚಿತ್ರಕತೆಯನ್ನು ತಿರಸ್ಕರಿಸಿದ.

ಆ ಸಮಯದಲ್ಲಿ ಆಂತರಿಕ ಸಚಿವಾಲಯದಲ್ಲಿದ್ದ ಸೆನ್ಸಾರ್ ನವರು ಬುದ್ಧಿಮಾಂದ್ಯರಂತೆ ಕಾಣುತ್ತಿದ್ದರು. ಅವರೆಲ್ಲ ಪರಹಿಂಸೆಯಲ್ಲಿ ವಿಕೃತಾನಂದ ಕಾಣುವ ಮನಸ್ಥಿತಿಯಿಂದ ಮತ್ತು ವಿವಿಧ ಲೈಂಗಿಕ ಭಯಗಳಿಂದ ನರಳುತ್ತಿರುವವರಂತೆ ವರ್ತಿಸುತ್ತಿದ್ದರು. ವಿದೇಶಿ ಸಿನೆಮಾಗಳಲ್ಲಿರುತ್ತಿದ್ದ ಪ್ರತಿಯೊಂದು ಚುಂಬನದ ದೃಶ್ಯವನ್ನು ಕತ್ತರಿಸುತ್ತಿದ್ದರು. ಹೆಂಗಸರ ಮೊಣಕಾಲು ಕಾಣಿಸಿದರೆ ಸಾಕು ಆ ದೃಶ್ಯವನ್ನು ಕತ್ತರಿಸುತ್ತಿದ್ದರು. ಅವೆಲ್ಲ ವಿಕೃತ ಲೈಂಗಿಕ ಬಯಕೆಗಳನ್ನು ಉದ್ದೀಪಿಸುತ್ತದೆ ಎನ್ನುತ್ತಿದ್ದರು.

“ತೆರೆದಿದ್ದ ಕಾರ್ಖಾನೆಯ ಗೇಟು ವಿದ್ಯಾರ್ಥಿ ಕಾರ್ಮಿಕರಿಗಾಗಿ ಆಸೆಯಿಂದ ಕಾಯುತ್ತಿತ್ತು” ಎನ್ನುವ ವಾಕ್ಯ ಅಶ್ಲೀಲವಾದದ್ದು ಎಂದು ಸೆನ್ಸಾರ್ ರವರಿಗೆ ಅನ್ನಿಸಿದ ಮೇಲೆ ಏನು ಹೇಳಲು ಸಾಧ್ಯ? 1944ರ ಇಚಿಬಾನ್ ಉತ್ಸುಕುಸ್ಕು (Ichiban utsukushiku – The Most Beautiful) ಎನ್ನುವ ಚಿತ್ರಕತೆಯಲ್ಲಿನ ಈ ಸಾಲಿನ ವಿರುದ್ಧ ಅಶ್ಲೀಲತೆಯ ಆರೋಪವನ್ನು ಹೊರಿಸಿದರು. ಅವರಿಗೆ ಈ ವಾಕ್ಯದಲ್ಲಿ ಅಂತಹ ಅಶ್ಲೀಲವಾದದ್ದು ಏನು ಕಾಣಿಸಿತು ಎಂದು ನನಗರ್ಥವಾಗಲಿಲ್ಲ. ಬಹುಶಃ ನಿಮಗೂ ಅಂತಹದ್ದೇನು ಕಾಣಿಸಿರುವುದಿಲ್ಲ. ಆದರೆ ಮಾನಸಿಕವಾಗಿ ಅಸ್ವಸ್ಥವಾಗಿದ್ದ ಸೆನ್ಸಾರ್ ನವರಿಗೆ ಇದು ಅಶ್ಲೀಲ. “ಗೇಟ್” ಎನ್ನುವುದು ಅವನಿಗೆ ಯೋನಿ ಎಂದು ಭಾಸವಾಯಿತೆಂದು ಹೇಳಿದ! ಲೈಂಗಿಕ ವಿಕೃತಿಗಳಿಂದ ಬಳಲುತ್ತಿರುವ ಈ ಜನಕ್ಕೆ ಎಲ್ಲವೂ ವಿಕೃತ ಲೈಂಗಿಕ ಬಯಕೆಗಳನ್ನೇ ಉದ್ದೀಪಿಸುತ್ತಿದ್ದವು. ಅವರು ಸ್ವತಃ ಅಶ್ಲೀಲ ಮನಸ್ಥಿತಿಯವರಾದ್ದರಿಂದ ಸಹಜವಾಗಿ ನೋಡಿದ್ದೆಲ್ಲವೂ ಅಶ್ಲೀಲವಾಗಿಯೇ ಕಾಣುತ್ತಿತ್ತು. ಇದು ಲೈಂಗಿಕ ಮನೋವ್ಯಾಧಿಯಲ್ಲದೆ ಮತ್ತೇನೂ ಅಲ್ಲ.

ಒಟ್ಟಿನಲ್ಲಿ ಸೆನ್ಸಾರ್ ಶಿಪ್ ಬ್ಯೂರೋದ ಡಾಬರ್ ಮನ್ ಗಳು ಅಂದಿನ ಅಧಿಕಾರಶಾಹಿಯ ಕೈಗೊಂಬೆಯಾಗಿದ್ದರು ಎನ್ನುವುದಂತೂ ಸತ್ಯ. ಸಮಯದ ಕೈಗೊಂಬೆಯಾಗಿ ಸ್ವಂತಿಕೆಯಿಲ್ಲದ ಒಬ್ಬ ಅಧಿಕಾರಿಶಾಹಿ ಮನುಷ್ಯನಿಗಿಂತ ಅಪಾಯಕಾರಿ ಮತ್ತೊಬ್ಬರಿಲ್ಲ. ನಾಜಿ ಯುಗದಲ್ಲಿ ಹಿಟ್ಲರ್ ಹುಚ್ಚುಮನುಷ್ಯ. ಆದರೆ ಅವನ ಹಿಂದಿದ್ದ ಹಿಮ್ಲರ್ ಮತ್ತು ಈಚಮನ್ ನಂತಹವರನ್ನು ನೋಡಿದಾಗ ಆ ಕ್ರೌರ್ಯದ ಹಿಂದಿದ್ದ ವ್ಯಕ್ತಿಗಳು ಎಂಥವರು ಎನ್ನುವುದು ತಿಳಿಯುತ್ತದೆ. ಕಾನ್ಸನ್ಟ್ರೇಶನ್ ಕ್ಯಾಂಪಿನ ಜೈಲರುಗಳು ಮತ್ತು ನಿರ್ವಾಹಕರನ್ನು ನೋಡಿದಾಗ ಅವರ ರಾಕ್ಷಸಿ ಮನೋಭಾವದ ಅರಿವಾಗುತ್ತದೆ. ಅವರು ನಿಜಕ್ಕೂ ಏನನ್ನಾದರೂ ಸೃಷ್ಟಿಸುವ ಕಲ್ಪಿಸುವ ಸಾಮರ್ಥ್ಯವನ್ನೇ ಕಳೆದುಕೊಂಡುಬಿಟ್ಟಿದ್ದರು.

ಯುದ್ಧ ಸಮಯದಲ್ಲಿ ಆಂತರಿಕ ಸಚಿವಾಲಯದ ಸೆನ್ಸಾರ್ ಇದಕ್ಕೊಂದು ಉದಾಹರಣೆ ಅನ್ನಿಸುತ್ತದೆ. ಅವರನ್ನು ಜೈಲಿಗಟ್ಟಬೇಕು. ಇದನ್ನು ಬರೆಯುತ್ತಿರುವ ಹೊತ್ತಿನಲ್ಲಿ ಅವರ ಮೇಲಿನ ಸಿಟ್ಟನ್ನು ಅದುಮಿಟ್ಟುಕೊಂಡಿದ್ದೇನೆ. ಅವರ ನೆನಪಾದರೂ ಸಾಕು ಮೈಯೆಲ್ಲ ಉರಿದುಹೋಗುತ್ತದೆ. ಅವರ ಬಗ್ಗೆ ಅಷ್ಟು ಆಳವಾದ ದ್ವೇಷ ನನ್ನಲ್ಲಿ ಬೇರೂರಿದೆ. ಯುದ್ಧದ ಕೊನೆಗೆ ನನ್ನ ಕೆಲವು ಸ್ನೇಹಿತರೊಡನೆ ಒಂದು ಒಪ್ಪಂದ ಸಹ ಮಾಡಿಕೊಂಡಿದ್ದೆ: ಒಂದು ವೇಳೆ ನೂರು ಮಿಲಿಯನ್ ಮಂದಿ ಸ್ವಯಂಪ್ರೇರಿತರಾಗಿ ಸಾವನ್ನು ಅಪ್ಪಿಕೊಳ್ಳಬೇಕು ಎಂದಾದಲ್ಲಿ ಪ್ರತಿ ಜಪಾನಿಯನೂ ಆತ್ಮಹತ್ಯೆ ಮಾಡಿಕೊಳ್ಳಬೇಕಾದಲ್ಲಿ ನಾವೆಲ್ಲ ಆಂತರಿಕ ಸಚಿವಾಲಯದ ಮುಂದೆ ಭೇಟಿಯಾಗಬೇಕು. ನಾವು ಸಾಯುವುದಕ್ಕೆ ಮೊದಲು ಸೆನ್ಸಾರ್ ನವರನ್ನು ಕೊಲ್ಲಬೇಕು.

ಸೆನ್ಸಾರ್ ನವರನ್ನು ಕುರಿತ ಚರ್ಚೆಯನ್ನು ಇಲ್ಲಿಗೆ ಮುಗಿಸಬೇಕು. ಅದರ ಬಗ್ಗೆ ಮಾತಾಡುತ್ತಾ ಹೆಚ್ಚು ಉದ್ವಿಗ್ನನಾಗಿಬಿಟ್ಟೆ. ಅದು ನನಗೆ ಒಳ್ಳೆಯದಲ್ಲ. ನನ್ನ ಮೆದುಳಿನ ನರಮಂಡಲದ ಎಕ್ಸ್ ರೇ ತೆಗೆದಾಗ ಅಲ್ಲಿನ ರಕ್ತನಾಳವೊಂದು ವಿಚಿತ್ರವಾಗಿ ಬಾಗಿಕೊಂಡಿದೆ ಎನ್ನುವ ವಿಷಯ ತಿಳಿಯಿತು. ಸಾಮಾನ್ಯವಾಗಿ ಆ ನಾಳ ನೇರವಾಗಿರುತ್ತದಂತೆ. ಈ ಸ್ಥಿತಿಯನ್ನು ಜನ್ಮಜಾತ ಅಪಸ್ಮಾರ ಎನ್ನುವರಂತೆ. ಮಗುವಾಗಿದ್ದಾಗ ಹಲವು ಬಾರಿ ಮೂರ್ಛೆರೋಗಕ್ಕೆ ತುತ್ತಾಗಿದ್ದೆ. ಯಮಾಸಾನ್ “ನೀನು ಇದ್ದಕ್ಕಿದ್ದಂತೆ ಅನ್ಯಮನಸ್ಕನಾಗಿಬಿಡುವೆ” ಎಂದು ಹೇಳುತ್ತಿದ್ದರು. ನಾನಿದನ್ನು ಗಮನಿಸಿರಲಿಲ್ಲ. ಬಹುಶಃ ಕೆಲಸ ಮಾಡುವಾಗ ಇದ್ದಕ್ಕಿದ್ದಂತೆ ನಾನೇನು ಮಾಡುತ್ತಿದ್ದೆ ಎನ್ನುವುದನ್ನೇ ಸಂಪೂರ್ಣ ಮರೆತುಹೋಗಿ ಒಂದು ರೀತಿ ಭ್ರಮಾಧೀನ ಸ್ಥಿತಿ ತಲುಪಿಬಿಡುತ್ತಿದ್ದೆ ಎಂದು ಕಾಣುತ್ತದೆ. ಮೆದುಳಿಗೆ ಸಾಕಷ್ಟು ಆಮ್ಲಜನಕ ಬೇಕು. ಅದು ಕಮ್ಮಿಯಾದಲ್ಲಿ ಅಪಾಯಕಾರಿ. ಕೆಲಸದ ಒತ್ತಡ ಹೆಚ್ಚಾದಾಗ ಅಥವ ಹೆಚ್ಚು ಉದ್ವಿಗ್ನನಾದಾಗ ಬಹುಶಃ ಆ ಬಾಗಿದ ರಕ್ತನಾಳ ಮೆದುಳಿಗೆ ರಕ್ತ ಪೂರೈಕೆಯನ್ನು ಸ್ಥಗಿತಗೊಳಿಸಿಬಿಡುತ್ತದೆ. ಹಾಗಾಗಿ ನಾನು ಆ ರೀತಿ ಆಡುತ್ತಿದ್ದೆ.

ಒಟ್ಟಿನಲ್ಲಿ ಸೆನ್ಸಾರ್ ನವರಿಂದ ಭಯಾನಕ ಅನುಭವಗಳಾದವು. ಅವರನ್ನು ವಿರೋಧಿಸುತ್ತಿದ್ದೆನಾದ್ದರಿಂದ ಅವರು ನನ್ನನ್ನು ಶತ್ರುವಿನಂತೆ ನೋಡುತ್ತಿದ್ದರು. ಅವರು ನನ್ನ ಎರಡು ಚಿತ್ರಕತೆಗಳನ್ನು ಒಂದಾದ ಮೇಲೆ ಒಂದರಂತೆ ಗೋರಿಗೆ ಹಾಕಿದರೂ ಕೂಡ ಮತ್ತೊಂದನ್ನು ಬರೆಯಲು ಹೊರಟೆ. ತೆಕಿಚೊ ಒಡಾನ್ ಸಾನ್ಬ್ಯಾಕುರಿ (Tekichu odan sanbyakuri – Three Hundred Miles Through Enemy Lines). ಇದು ಯಮಾಂಕ ಹೊಟಾರೊ ಅವರ ಕಾದಂಬರಿಯನ್ನು ಆಧರಿಸಿದ ಬಹುದೊಡ್ಡ ಸಾಹಸಮಯ ಚಿತ್ರ. ರೂಸೊ-ಜಪಾನಿಸ್ ಯುದ್ಧ ಸಮಯದಲ್ಲಿನ ತಾತೆಕಾವ ಪಾರ್ಟಿ ಕುರಿತ ಕತೆಯಾಗಿತ್ತು. ತಾತೆಕಾವ ಆ ಸಮಯದಲ್ಲಿ ಎರಡನೆ ಲೆಫ್ಟಿನೆಂಟ್ ಆಗಿದ್ದರು. ನಲವತ್ತು ವರ್ಷಗಳ ತರುವಾಯ ಆತ ಫೆಸಿಫಿಕ್ ಯುದ್ಧದ ಸಮಯದಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಸೋವಿಯತ್ ಯೂನಿಯನ್ ಗೆ ರಾಯಭಾರಿಯಾಗಿದ್ದರು. ತಮ್ಮ ಪಾರ್ಟಿಯ ಕುರಿತು ಚಿತ್ರ ತೆಗೆಯುವ ಕುರಿತು ಬಹಳ ಉತ್ಸುಕರಾಗಿದ್ದರು. ಈ ರೀತಿಯ ವಸ್ತು ಮತ್ತು ಸಹಕಾರ ಇರುವುದರಿಂದ ಸೆನ್ಸಾರ್ ನವರು ಯಾವುದೇ ಕ್ಯಾತೆ ತೆಗೆಯುವುದಿಲ್ಲ ಎಂದುಕೊಂಡೆ.

ಆ ಸಮಯದಲ್ಲಿ ಮಂಚೂರಿಯಾದ ಹರ್ಬಿನ್ ನಗರದ ಸುತ್ತಮುತ್ತ ಅನೇಕ ರಷ್ಯನ್ನರಿದ್ದರು. ಅವರಲ್ಲಿ ಬಹುಪಾಲು ಮಂದಿ ಕಾಸ್ಯಾಕರು (Cossacks). ಕ್ರಾಂತಿಗೂ ಮುನ್ನಿನ ತಮ್ಮ ಮಿಲಿಟರಿ ಯೂನಿಫಾರಂಗಳು ಮತ್ತು ಬಾವುಟಗಳನ್ನು ಜತನದಿಂದ ಎತ್ತಿಟ್ಟುಕೊಂಡಿದ್ದರು. ಚಿತ್ರೀಕರಣಕ್ಕೆ ಅಗತ್ಯವಾದ ಎಲ್ಲವೂ ಸಿದ್ಧವಾಗಿತ್ತು. ಕಂಪನಿಯೊಂದರ ಮುಂದೆ ಈ ಯೋಜನೆಯ ಪ್ರಸ್ತಾವನೆ ಇರಿಸಿದೆ.

ಮೊರಿಟ ನೊಬುಯೊಶಿ ಆಗಿನ ತೊಹೊ ಯೋಜನಾ ವಿಭಾಗದ ಮುಖ್ಯಸ್ಥರಾಗಿದ್ದರು. ಆತ ನಾನು ಭೇಟಿ ಮಾಡಿದ ಚಿತ್ರರಂಗದ ಅತ್ಯುತ್ತಮ ವ್ಯಕ್ತಿಗಳಲ್ಲಿ ಒಬ್ಬರು. ನನ್ನ ಚಿತ್ರಕತೆಯನ್ನು ನೋಡಿ “ಚೆನ್ನಾಗಿದೆ, ಬಹಳ ಚೆನ್ನಾಗಿದೆ.. ಆದರೆ…” ಎಂದು ಗೊಣಗಿದರು. ಚಿತ್ರಕತೆಯೇನೋ ಚೆನ್ನಾಗಿದೆ. ಅವರು ಅದನ್ನು ಸಿನೆಮಾ ಮಾಡಲು ಇಚ್ಛಿಸಿದ್ದಾರೆ. ಆದರೆ ಅಷ್ಟು ದೊಡ್ಡ ಬಜೆಟ್ ನ ಚಿತ್ರವನ್ನು ಇನ್ನೂ ಮೊದಲ ಬಾರಿ ನಿರ್ದೇಶನ ಮಾಡುತ್ತಿರುವವನಿಗೆ ನೀಡಲು ಸಾಧ್ಯವಿಲ್ಲ ಎಂದು ಹೇಳಲು ಪ್ರಯತ್ನಿಸುತ್ತಿದ್ದರು.

ಅದರಲ್ಲಿ ಯುದ್ಧದ ದೃಶ್ಯಗಳು ಇಲ್ಲದಿದ್ದರೂ ಮುಕಡೆನ್ ಯುದ್ಧದ ನಂತರ ಎರಡೂ ಕಡೆಗಳ ಯುದ್ಧದ ಕ್ಯಾಂಪುಗಳ ಸೆಟ್ ಹಾಕಲೇಬೇಕಿತ್ತು. ಕಡೆಗೆ ಆ ಚಿತ್ರಕತೆಗೂ ಗುಡ್ ಬೈ ಹೇಳಿದೆ. (ಇದಾದ ಬಹುಕಾಲದ ನಂತರ ೧೯೫೭ರಲ್ಲಿ ನಿರ್ದೇಶಕ ಕಜುವೊ ಮೋರಿ ಈ ಚಿತ್ರವನ್ನು ನಿರ್ದೇಶಿಸಿದರು).

ಬಹಳ ವರ್ಷಗಳು ಕಳೆದ ನಂತರ ಮೊರಿಟಾ ಈ ಘಟನೆಯನ್ನು ನೆನಪಿಸಿಕೊಂಡು ಅದು ತಮ್ಮ ಜೀವನದ ಬಹುದೊಡ್ಡ ತಪ್ಪು ಎಂದು ಹೇಳಿದರು. “ನಾನಾಗ ನಿನಗೆ ಸಿನೆಮಾ ಮಾಡಲು ಅವಕಾಶ ಕೊಡಬೇಕಿತ್ತು. ಅದು ಸಾಧ್ಯವಾಗದೆ ಹೋದ ಬಗ್ಗೆ ಆಗಲೂ ನನಗೆ ಬೇಸರವಿತ್ತು. ಆದರೆ ನನಗೆ ಬೇರೆ ದಾರಿಯಿರಲಿಲ್ಲ”. ಅವರ ಪರಿಸ್ಥಿತಿ ನನಗರ್ಥವಾಯಿತು. ಯುದ್ಧದ ಸಮಯದಲ್ಲಿ ಚಿತ್ರರಂಗ ಕೂಡ ಕಷ್ಟದ ದಿನಗಳನ್ನು ಎದುರಿಸುತ್ತಿತ್ತು. ಹೆಸರೇ ಗೊತ್ತಿಲ್ಲದ ನಿರ್ದೇಶಕನಿಗೆ ಯಾರೂ ಅಷ್ಟು ದೊಡ್ಡ ಬಜೆಟ್ ನ ಚಿತ್ರ ಕೊಡುವುದು ಸಾಧ್ಯವಿರಲಿಲ್ಲ. ಸಿನೆಮಾ ಮಾಡಲು ಸಾಧ್ಯವಾಗದಿದ್ದರೂ ಯಮಾ ಸಾನ್ ಮತ್ತು ಮೊರಿಟಾ ಅವರ ಪ್ರಯತ್ನದಿಂದ ಆ ಚಿತ್ರಕತೆ ಈಗ ಹೈಡ್ರೊನ್ ಪತ್ರಿಕೆಯಲ್ಲಿ ಪ್ರಕಟವಾದಾಗ ಸಮಾಧಾನವಾಯಿತು.

ಇದೇ ಸಮಯದಲ್ಲಿ ಒಂದು ದಿನ ನಿಹೊನ್ ಇಗಾ (ಜಪಾನಿ ಸಿನೆಮಾ) ಎನ್ನುವ ಪತ್ರಿಕೆಯಲ್ಲಿನ ಜಾಹಿರಾತಿನಲ್ಲಿ ವೆಕ್ಸಾ ಕಿಯೊನೊಸ್ಕೆಯ ಹೆಸರನ್ನು ನೋಡಿದೆ. ನನ್ನ ಹಳೆಯ ಸಹಪಾಠಿಯ ಚಿತ್ರಕತೆ ಹಾಹಾ ನೊ ಚಿಜು (Haha no chizu -A Mother’s Map)ವನ್ನು ಈ ಪತ್ರಿಕೆ ಪ್ರಕಟಿಸಿದೆ ಎಂದು ತಿಳಿಯಿತು. ಗಿನ್ಜಾದಲ್ಲಿನ ಪುಸ್ತಕದಂಗಡಿಗೆ ಹೋಗಿ ಆ ಪತ್ರಿಕೆಯನ್ನು ತಂದೆ. ಅಲ್ಲಿಂದ ಹೊರಟು ನೇರವಾಗಿ ವೆಕ್ಸಾನನ್ನು ಭೇಟಿಯಾದೆ. ಅವನು ಈಗ ಹೈರೂನಿನಲ್ಲಿ ಪ್ರಕಟವಾಗಿದ್ದ ನನ್ನ ಚಿತ್ರಕತೆಯನ್ನು ಜೇಬಿನಲ್ಲಿಟ್ಟುಕೊಂಡು ತಿರುಗುತ್ತಿದ್ದ. ಅಂದು ನಾವೇನು ಮಾತಾಡಿದೆವು ಏನು ಮಾಡಿದೆವು ನೆನಪಿಲ್ಲ. ಆದರೆ ವೆಕ್ಸಾ ತೊಹೊದ ಚಿತ್ರಕತೆರಚನಾ ವಿಭಾಗಕ್ಕೆ ಸೇರಿಕೊಂಡ. ಕಡೆಗೂ ನಮ್ಮಿಬ್ಬರಿಗೂ ಒಟ್ಟಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು.