ಮನಸ್ಸು ಮಾಡಿದ್ದರೆ ಅಥವಾ ಹಣಸಂಪಾದನೆಯ ಮಾರ್ಗ ಹಿಡಿದದ್ದರೆ ದೊಡ್ಡ ಶ್ರೀಮಂತರಾಗಬಹುದಿತ್ತು. ಅವರು ಒಂದು ಕಾಲದಲ್ಲಿ ಸ್ಥಾಪಿಸಿದ್ದ ಪ್ರೆಸ್ಸಿನ ಮೂಲಕವೋ ಇಲ್ಲಾ ಕೃಷಿಯ ಮೂಲಕವೋ ಧಾರಾಳ ಹಣಗಳಿಕೆ ಮಾಡಬಹುದಾಗಿತ್ತು. ಅಥವಾ ಸಂಗೀತದಲ್ಲಿ ಮುಂದುವರೆದಿದ್ದರೆ ಸರೋದ್‌ನಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಬಹುದಾಗಿತ್ತು. ಹೋರಾಟದ ಹಾದಿಯಲ್ಲಿ ನಡೆಯುತ್ತಿರುವಾಗ ತಾನಾಗಿಯೇ ಬಂದ ಅವಕಾಶವನ್ನು ನಿರಾಕರಣೆ ಮಾಡದಿದ್ದರೆ ಶಾಸಕರಾಗಬಹುದಾಗಿತ್ತು ಅಥವಾ ಕಾಲೇಜು ಉಪನ್ಯಾಸಕರಾಗಬಹುದಾಗಿತ್ತು. ಆದರೆ ಅದ್ಯಾವುದೂ ಆಗದೇ ಸಾಮಾನ್ಯ ರೈತನ ಜೀವನ ನಡೆಸಿದರು. ಅತ್ಯಂತ ಕಠಿಣವಾದ ಹಾದಿಯಲ್ಲಿ‌ ನಡೆದು ತೋರಿಸಿದರು..
“ಓದುವ ಸುಖ” ಅಂಕಣದಲ್ಲಿ ಕಡಿದಾಳು ಶಾಮಣ್ಣನವರ ಆತ್ಮಕತೆ ‘ಕಾಡ ತೊರೆಯ ಜಾಡು’ ಕುರಿತು ಗಿರಿಧರ್‌ ಗುಂಜಗೋಡು ಬರಹ

ತೇಜಸ್ವಿಯವರ ‘ಅಣ್ಣನ‌ ನೆನಪು’ ಪುಸ್ತಕದಲ್ಲಿ ಕಡಿದಾಳು ಶಾಮಣ್ಣನವರ ಹೆಸರಿನ ಪ್ರಸ್ತಾಪ ಬಂದಿದ್ದರೂ ಅದನ್ನು ಓದಿ ಬಹಳ ಸಮಯವಾಗಿದ್ದ ಕಾರಣ ಅವರ ಹೆಸರು ನನ್ನ ಮನಃಪಟಲದಿಂದ ಮರೆಯಾಗಿತ್ತು. ಅದಾದಮೇಲೆ ನಾನು ಕಡಿದಾಳು ಶಾಮಣ್ಣನವರ ಹೆಸರು ಕೇಳಿದ್ದು ಆತ್ಮೀಯ ಗೆಳೆಯನಾದ‌ ನಿರಂಜನನ ಮೂಲಕ. ಆತ ಅವರಲ್ಲಿಗೆ ಕಾರ್ಯನಿಮಿತ್ತವಾಗಿ, ವೈಯಕ್ತಿಕ ಭೇಟಿಗಾಗಿ ಆಗಾಗ ಹೋಗುತ್ತಾ ಅವರ ಕುಟುಂಬದ ಜೊತೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದ. ನಾವು ಮಾತನಾಡುವಾಗಲೆಲ್ಲಾ ಆಗಾಗ ಅವರ ಉಲ್ಲೇಖ ಮಾಡುತ್ತಿದ್ದ. ಅವರಿಂದ ಎಷ್ಟೋ ವಿಷಯಗಳ ಅರಿತ ಬಗೆಯನ್ನು ಹೇಳುತ್ತಿದ್ದ.

ಮೊನ್ನೆ ಕ್ರಿಸ್‌ಮಸ್ ರಜೆಯ ಸಮಯದಲ್ಲಿ ಶಿವಮೊಗ್ಗಕ್ಕೆ ಹೋದಾಗ ನಾನು ಮತ್ತು ನಿರಂಜನ್ ಅವನ ತೋಟದ ಕಡೆ ಹೊರಟಿದ್ದೆವು‌. ಹೀಗೆ ಮಾತನಾಡುತ್ತಾ ಹೋಗುತ್ತಿರಬೇಕಾದರೆ ಕಡಿದಾಳು ಶಾಮಣ್ಣನವರ ಮನೆ ಇಲ್ಲೇ ಹತ್ತಿರ ಇರೋದು ಕಣಾ ಅಂದ. ಆದರೆ ಅವರ ಆರೋಗ್ಯ ಸರಿಯಿರದ ಕಾರಣ ಹೋಗುವುದೋ ಬೇಡವೋ ಅನ್ನುವ ಗೊಂದಲದಲ್ಲೇ ಕಾಲುಗಂಟೆ ಕಳೆದಿತ್ತು. ಇಲ್ಲಿವರೆಗೆ ಬಂದಿದ್ದೇವೆ, ಹೋಗಿಯೇ ಬಿಡೋಣ ಅಂತ ತೀರ್ಮಾನಿಸಿ ಒಂದು ಕಲ್ಲಂಗಡಿ ಹಣ್ಣನ್ನು ಖರೀದಿಸಿ ಹೊರಟೆವು.

ಅವರ ಊರಾದ ‘ಭಗವತಿ ಕೆರೆ’ಗೆ ಬಂದಾಗ ಬೆಳಗ್ಗೆ ಹತ್ತರ ಸಮಯ. ಭಗವತಿ ಕೆರೆ ಅನ್ನುವ ಹೆಸರೇ ನನಗೆ ಆಕರ್ಷಕವಾಗಿ ಕಂಡಿತು. ಕುವೆಂಪು ಅವರ ಪತ್ನಿ ಹೇಮಾವತಿಯವರು ಶಾಮಣ್ಣನವರಲ್ಲಿ ‘ಈ ಹೆಸರನ್ನೂ ನೀವೇ ಇಟ್ಟಿದ್ದಾ?’ ಅಂತ ಕೇಳಿದ್ದ ವಿಷಯವನ್ನು ನಿರಂಜನ್ ಹೇಳಿದ. ಅವರ ಮನೆ ತಲುಪಿದಾಗ ಅಪ್ಪಟ ಮಲೆನಾಡಿನ ಕಡೆ ಬಂದ ಹಾಗೇ ಭಾಸವಾಯಿತು. ಅವರ ಜಾಗದ ಗೇಟಿನಿಂದ ಮನೆಯವರೆಗೆ ಹಾಸಿದ ಬಿಳಿಕಲ್ಲುಗಳು, ಹಸಿರಿನಿಂದ ಕಂಗೊಳಿಸುತ್ತಿರುವ ಹಲವಾರು ಗಿಡ ಮರಗಳು ಮನಸ್ಸಿಗೆ ಮುದ ನೀಡುವಂತಿದ್ದವು. ಆಗಷ್ಟೇ ಅಡಿಕೆ ಕೊಯ್ಲಾಗಿತ್ತು. ಅಡಿಕೆ ಕೊಯ್ಲಿನ ಸಮಯ ಮಲೆನಾಡಿನ ಮನೆಗಳಿಗೆ ಒಂದು ವಿಶೇಷ ಸೊಬಗನ್ನು ತಂದುಕೊಡುತ್ತದೆ. ಚಂದದ ಪರಿಸರ, ಚಿಕ್ಕದಾದ ಚೊಕ್ಕದಾದ ಮನೆ. ಮನೆಯ ತುಂಬಾ ಅಮೂಲ್ಯ ಪುಸ್ತಕಗಳ, ಕೊಳಲು, ಸರೋದ್ ಮೊದಲಾದ ವಾದ್ಯಗಳ ಸಂಗ್ರಹ. ಒಟ್ಟಿನಲ್ಲಿ ಬಹಳ ಪ್ರಶಾಂತತೆಯಿಂದ ಕೂಡಿದ ವಾತಾರವಣವಿತ್ತು.

ನಾವು ಹೋದಾಗ ಶಾಮಣ್ಣನವರು ಆಯಾಸವಿದ್ದ ಕಾರಣ ಮಲಗಿದ್ದರು. ಅವರ ಪತ್ನಿ ಶ್ರೀದೇವಿ ಮತ್ತು ಮಗಳು ಲಾಜವಂತಿಯವರು ಬಹಳ ಆತ್ಮೀಯವಾಗಿ ಮಾತನಾಡಿದರು. ನನ್ನಲ್ಲಿದ್ದ ಸಂಕೋಚ‌ ಬಹಳ ಬೇಗ ದೂರವಾಗಿತ್ತು. ಅಷ್ಟರಲ್ಲಿ ಶಾಮಣ್ಣನವರು ಎದ್ದು ಬಂದಿದ್ದರು. ಅವರ ಭೇಟಿ ಸಾಧ್ಯವಾಗದೇನೋ ಅನ್ನುವ ಆತಂಕ ದೂರವಾಗಿತ್ತು. ಆಯಾಸದ ನಡುವೆಯೇ ನಿಧಾನಕ್ಕೆ ನಮ್ಮೊಂದಿಗೆ ಮಾತನಾಡಿದರು. ಸ್ವಲ್ಪ ಹೊತ್ತು ಕೊಳಲು‌ ಮತ್ತು ಸರೋದ್ ಅನ್ನು ನುಡಿಸಿದರು. ಅವರ ಮನೆಗೆ ಹೊರಟಾಗಲೇ ನಿರಂಜನನಿಂದ ಆ ಪುಸ್ತಕ ತೆಗೆದುಕೊಂಡು ಓದುವ ಯೋಚನೆ ಮಾಡಿಯಾಗಿತ್ತು. ಮನೆಯವರು ಪ್ರೀತಿಯಂದ ಕೊಟ್ಟ ಕಾಫಿ, ಪಪ್ಪಾಯಿ ಹಣ್ಣು ಇತ್ಯಾದಿಗಳನ್ನು ಸೇವಿಸಿ ಹೊರಡುವಾಗ ಅವರ ಆತ್ಮಕಥೆ ‘ಕಾಡ ತೊರೆಯ ಜಾಡು’ ಪುಸ್ತಕವನ್ನು ಕೊಟ್ಟರು. ಅದಕ್ಕೆ ಅವರ ಹಸ್ತಾಕ್ಷರವನ್ನು ಪ್ರೀತಿಯಿಂದ ಹಾಕಿಕೊಟ್ಟರು. ಪುಸ್ತಕವನ್ನು ಹಣಕೊಟ್ಟೆ ಓದಬೇಕೆನ್ನುವುದು ನನ್ನ ಅಭಿಪ್ರಾಯವಾದರೂ ಇಲ್ಲಿ ಆ ಅಧಿಕಪ್ರಸಂಗ ಮಾಡಹೋಗಲಿಲ್ಲ.

ಹೊರಡುವ ಗಡಿಬಿಡಿಯಲ್ಲಿ ಪುಸ್ತಕವನ್ನು ನಿರಂಜನನ ಕಾರಿ‌ನಲ್ಲೇ ಬಿಟ್ಟ ಕಾರಣ ಪುಸ್ತಕ ಓದಲು ಶುರುಮಾಡುವುದು ಒಂದೆರಡು ವಾರ ತಡವಾಯಿತು. ಅವನು ಕಳುಹಿಸಿದ ಕೋರಿಯರ್ ಬಂದಿದ್ದೇ ಕಾತರದಿಂದ ಓದಲು ಆರಂಭಿಸಿದೆ.

(ಕಡಿದಾಳು ಶಾಮಣ್ಣ)

ಕರ್ನಾಟಕ ಕಂಡ ಮಹನೀಯರ ಪಟ್ಟಿಯಲ್ಲಿ ಶಾಮಣ್ಣನವರದ್ದು ಅತ್ಯಂತ ವಿಶಿಷ್ಟವಾದ ವ್ಯಕ್ತಿತ್ವ ಅನ್ನಬಹುದು. ಆದರೆ ಪುಸ್ತಕ ಓದಿದಾಗ ಅನ್ನಿಸಿದ್ದು ಹೆಚ್ಚು ಲೈಂ ಲೈಟಿಗೆ ಬಾರದೇ ಎಲೆಮರೆಯ ಕಾಯಂತೆ ಇದ್ದೇ ಎಷ್ಟು ಸಾಧನೆ ಮಾಡಿದರು ಎಂದು. ಆದರ್ಶವನ್ನು ಅವರು ಬಾಯಲ್ಲಿ ಹೇಳಿದ್ದಕ್ಕಿಂತ ಬದುಕಿ ತೋರಿಸಿದ್ದೇ ಜಾಸ್ತಿ. ಒಬ್ಬರಿಗೆ ಒಂದೇ ಕೆಲದ ಇರಬೇಕು, ಸರಕಾರಿ ಉದ್ಯೋಗ ಜಮೀನು ಹೀಗೆ ಎರಡೆರಡು ಕೆಲಸವಿರುವುದು ನ್ಯಾಯಸಮ್ಮತವಲ್ಲ ಎಂದು ಭಾಷಣಗಳ ಮೂಲಕ ಕರೆಕೊಡುತ್ತಿದ್ದ, ಹೈಸ್ಕೂಲಿನ ಶಿಕ್ಷಕರೂ ಆಗಿದ್ದ ಶಾಮಣ್ಣನವರು ಕೃಷಿಭೂಮಿ ತೆಗೆದುಕೊಳ್ಳುತ್ತಾರೆ. ಆ ಸಮಯದಲ್ಲಿ ಶಾಂತವೇರಿ ಗೋಪಾಲ ಗೌಡರ ಚಿಕ್ಕ ಮಾತಿನ ಏಟಿಗೇ ಜ್ಞಾನೋದಯವಾಗಿ ಉದ್ಯೋಗ ಬಿಡುವ ಯೋಜನೆ ಮಾಡುತ್ತಾರೆ. ಹೇಳಿದ ಆದರ್ಶವನ್ನು ಪಾಲಿಸುವುದು ಎಲ್ಲರಿಂದಲೂ ಸಾಧ್ಯವಿಲ್ಲದ‌ ವಿಚಾರ.

ಪೂರ್ಣ ಪ್ರಮಾಣದ ಕೃಷಿಕರಾಗಿ ಭಗವತಿಕೆರೆಗೆ ಬಂದ ಶಾಮಣ್ಣನವರು ಮತ್ತು ಶ್ರೀದೇವಿಯವರು ಭೂಮಿಯಲ್ಲಿ ಮೈಮುರಿದು ದುಡಿಯುವುದರ ಜೊತೆಗೆ ಗ್ರಾಮದಲ್ಲಿ ಹಲವಾರು ಕ್ರಾಂತಿಕಾರಿ ಬದಲಾವಣೆ ತರಲು ಕಾರಣರಾಗುತ್ತಾರೆ. ರಾತ್ರಿ ಶಾಲೆ ಆರಂಭಿಸಿ ಶಿಕ್ಷಣಿಕ ಅರಿವನ್ನು ಮೂಡಿಸಿದ್ದು, ಚೂರೂ ಭ್ರಷ್ಟಾಚಾರವಾಗದಂತೆ ಜನತಾ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಸರಕಾರದ ಮೂಲಕ ಒದಗಿಸಿದ್ದು, ಹಾಗೂ ಫಲಾನುಭವಿಗಳಿಗೆ‌ ಮನೆ ಒದಗಿಸುವಾಗ ಜಾತಿಗೊಂದು ಕೇರಿ ಮಾಡದೇ ಎಲ್ಲಾ ಒಂದಾಗಿ ಇರುವಂತೆ ನೋಡಿಕೊಂಡಿದ್ದು ಇತ್ಯಾದಿ. ಅನೇಕ ವಿಷಯಗಳಲ್ಲಿ ಭಗವತಿಕೆರೆ ಆದರ್ಶಗ್ರಾಮವಾಗಲು ಇವರ ಪಾತ್ರವಿದೆ.

ಅವರು ಮನಸ್ಸು ಮಾಡಿದ್ದರೆ ಅಥವಾ ಹಣಸಂಪಾದನೆಯ ಮಾರ್ಗ ಹಿಡಿದದ್ದರೆ ದೊಡ್ಡ ಶ್ರೀಮಂತರಾಗಬಹುದಿತ್ತು. ಅವರು ಒಂದು ಕಾಲದಲ್ಲಿ ಸ್ಥಾಪಿಸಿದ್ದ ಪ್ರೆಸ್ಸಿನ ಮೂಲಕವೋ ಇಲ್ಲಾ ಕೃಷಿಯ ಮೂಲಕವೋ ಧಾರಾಳ ಹಣಗಳಿಕೆ ಮಾಡಬಹುದಾಗಿತ್ತು. ಅಥವಾ ಸಂಗೀತದಲ್ಲಿ ಮುಂದುವರೆದಿದ್ದರೆ ಸರೋದ್‌ನಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಬಹುದಾಗಿತ್ತು. ಹೋರಾಟದ ಹಾದಿಯಲ್ಲಿ ನಡೆಯುತ್ತಿರುವಾಗ ತಾನಾಗಿಯೇ ಬಂದ ಅವಕಾಶವನ್ನು ನಿರಾಕರಣೆ ಮಾಡದಿದ್ದರೆ ಶಾಸಕರಾಗಬಹುದಾಗಿತ್ತು (ಶಾಂತವೇರಿ ಗೋಪಾಲಗೌಡರು ಅನಾರೋಗ್ಯದ ಕಾರಣ ಚುನಾವಣಾ ಕಣದಿಂದ ಹಿಂದೆ ಸರಿದಾಗ ತೇಜಸ್ವಿ, ಶಾಮಣ್ಣ, ಸುಂದರೇಶ್ ಮೊದಲಾದವರ ಪ್ರಸ್ತಾಪ ಬಂದಾಗ ಅವರ್ಯಾರೂ ಒಪ್ಪುವುದಿಲ್ಲ. ಆಮೇಲೆ ಯಾವುದೇ ಹಣಬಲ ತೋಳ್ಬಲ ಜಾತಿಬಲವಿಲ್ಲದ ಕೋಣಂದೂರು ಲಿಂಗಪ್ಪನವರನ್ನು ಬೆಂಬಲಿಸಿ ಶಾಸಕರನ್ನಾಗಿ ಆಯ್ಕೆ ಮಾಡಲು ಶ್ರಮಿಸುತ್ತಾರೆ. ಚುನಾವಣೆ ಖರ್ಚಿಗೆ ಹಣವನ್ನು ಕೂಡಾ ಸಾರ್ವಜನಿಕರಿಂದಲೇ ಸಂಗ್ರಹಿಸುತ್ತಾರೆ) , ಅಥವಾ ಕಾಲೇಜು ಉಪನ್ಯಾಸಕರಾಗಬಹುದಾಗಿತ್ತು. ಆದರೆ ಅದ್ಯಾವುದೂ ಆಗದೇ ಸಾಮಾನ್ಯ ರೈತನ ಜೀವನ ನಡೆಸಿದರು. ಅತ್ಯಂತ ಕಠಿಣವಾದ ಹಾದಿಯಲ್ಲಿ‌ ನಡೆದು ತೋರಿಸಿದರು. ಅಂದಿನ ಸಮಾಜವಾದಿ ಮತ್ತು ರೈತ ಚಳುವಳಿಯ ಕೊನೆಯ ಕೊಂಡಿ ಇವರು.

ಕರ್ನಾಟಕದ‌ಲ್ಲಿ ಸಮಾಜವಾದಿ ಚಳವಳಿಗಳು ಮತ್ತು ರೈತ ಚಳವಳಿಗಳು ಅಚ್ಚಳಿಯದ ಅಧ್ಯಾಯಗಳಾಗಿವೆ. ಅತ್ಯಂತ ಗಾಢವಾಗಿಲ್ಲದಿದ್ದರೂ ಸಮಾಜವಾದದ ಪ್ರಭಾವ ನನ್ನ ಕುಟುಂಬದ ಮೇಲೂ ಇತ್ತು. ಆದರೆ ನಾನೊಬ್ಬ ಕ್ಯಾಪಟಲಿಸ್ಟ್ ಅಥವಾ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯ ಫಲಾನುಭವಿ. ಈ ವ್ಯವಸ್ಥೆಯ ಅನೇಕ ಅಂಶಗಳನ್ನು ಮನಸಾರೆ ಒಪ್ಪಿದ್ದೇನೆ ಕೂಡಾ. ಆದರೆ ಸಮಾಜವಾದದ ಕೆಲ ಅಂಶಗಳನ್ನು ಎಂದೂ ಮರೆಯಬಾರದು ಹಾಗೂ ಜೀವನದಲ್ಲಿ ಸ್ವಲ್ಪವಾದರೂ ಅಳವಡಿಸಿಕೊಳ್ಳುವುದು ಅಗತ್ಯವೆಂದೇ ಭಾವಿಸುತ್ತೇನೆ. ಬಂಡವಾಳಶಾಹಿ ವ್ಯವಸ್ಥೆಯ ಕೆಲ ದೌರ್ಬಲ್ಯಗಳನ್ನು ಅದು ಸರಿಮಾಡಿಕೊಳ್ಳಲು ಸಹಾಯಕವಾಗಿದೆ.

ಇನ್ನುಳಿದಂತೆ ಅವರ ಬಾಲ್ಯ, ಕಾಲೇಜು ದಿನಗಳು, ಅವರು ಮುಂಬೈಗೆ ಸರೋದ್ ಕಲಿಯಲು ಹೋಗಿದ್ದು, ತೇಜಸ್ವಿಯವರೊಂದಿಗಿನ ಅವರ ಒಡನಾಟ, ಶಿಕ್ಷಕ ವೃತ್ತಿಯ ದಿನಗಳು, ಮಂತ್ರಮಾಂಗಲ್ಯಕ್ಕಾಗಿ ನಡೆಸಿದ ಹೋರಾಟ ಇತ್ಯಾದಿಗಳ ಕುರಿತ ಭಾಗಗಳೂ ಬಹಳ ಸುಂದರವಾಗಿ ಮೂಡಿಬಂದಿವೆ. ಎಷ್ಟೇ ಆದರೂ ಮಲೆನಾಡಿನವರ ಆತ್ಮಕತೆ ಅಂದಾಕ್ಷಣ ಮನಸ್ಸಿಗೆ ಒಂದು ಬಯಾಸ್ ಬೇಡವೆಂದರೂ ಬಂದುಬಿಡುತ್ತದೆ, ವಿಶೇಷವಾಗಿ ಬಾಲ್ಯಕಾಲದ ಘಟನೆಗಳ ಕುರಿತು ಓದುವಾಗ. ಲಂಕೇಶರ, ಕುಂವೀಯವರ, ಭೈರಪ್ಪನವರ ಆತ್ಮಕತೆಗಳ ಓದುವಾಗ ನೆನಪಿನ ದೋಣಿಯಲ್ಲಿ ಅಥವಾ ಇದನ್ನು ಓದುವಾಗ ಸಿಕ್ಕ ಕಂಫರ್ಟ್ ಸಿಕ್ಕಿಲ್ಲ. ನನ್ನ ಬಾಲ್ಯಕಾಲದ ನೆನಪುಗಳೊಂದಿಗೆ ಸಾಮ್ಯತೆ ಇರುವುದು ಕಾರಣವೇ ಹೊರತು ಬೇರೇನಿಲ್ಲ.

(ಅಕ್ಷತಾ ಹುಂಚದಕಟ್ಟೆ)

ನಾವು ಶಾಮಣ್ಣನವರೊಂದಿಗೆ ಕೆಲ ಸಮಯ ಕಳೆದು ಹೊರಟಾಗ ಅವರು, ಅವರ ಪತ್ನಿ ಹಾಗೂ ಮಗಳು ಕಾರಿನವರೆಗೆ ಬಂದು ಬೀಳ್ಕೊಟ್ಟರು. ಇದೇ ಪ್ರೀತಿಯನ್ನು ನಾನು ಬೊಳುವಾರು ಸರ್ ಮತ್ತು ಜುಬೇದಾ ಮೇಡಂ ಮನೆಗೆ ಹೋದಾಗಲೂ ಕಂಡಿದ್ದೆ. ಎಷ್ಟೋ ಬಾರಿ ನಾನು ಮನೆಗೆ ಅತಿಥಿಗಳು ಬಂದಾಗ ನನ್ನ ಅಪಾರ್ಟ್ಮೆಂಟಿನಿಂದ ಕೆಳಗಿಳಿದು ಬೀಳ್ಕೊಡಲು ಉದಾಸೀನ ಮಾಡುತ್ತೇನೆ. ಆದರೆ ಇಂತಹ ಹಿರಿಯರು ತಮಗೆ ಯಾವ ರೀತಿಯೂ ಸಮನಲ್ಲದ ನಮ್ಮಂತವರನ್ನು ನಡೆಸಿಕೊಳ್ಳುವ ರೀತಿ ನೋಡಿದಾಗ ನನ್ನ ಉದಾಸೀನತೆಗೆ ಚಾಟಿಏಟು ಕೊಟ್ಟಂತೆ ಆಗುತ್ತದೆ.

ಪುಸ್ತಕವು ಮನಸ್ಸಿಗೆ ತಟ್ಟುವಂತಿದೆ. ಇಂತಹ ಒಂದು ಮಹತ್ವದ ಕೃತಿ ತರುವಲ್ಲಿ ಅಕ್ಷತಾ ಹುಂಚದಕಟ್ಟೆಯವರ ಪಾತ್ರ ಮಹತ್ವದ್ದೆಂದು ಗೆಳೆಯ ನಿರಂಜನ ತಿಳಿಸಿದ್ದ. ಅನೇಕ ಬಾರಿ ಬಂದು ಅವರ ಮಾತುಗಳನ್ನು ರೆಕಾರ್ಡ್ ಮಾಡಿ ಅಥವಾ ಬರೆದುಕೊಂಡು ಬಹಳ‌ ಶ್ರಮವಹಿಸಿ ತಂದಿದ್ದಾರೆ ಎಂದು ಹೇಳಿದ. ಅವರ ಪ್ರಯತ್ನ ಅಭಿನಂದನಾರ್ಹವಾಗಿದೆ.

ಎಲ್ಲಾ ರೀತಿಯಿಂದಲೂ ಸಂಗ್ರಹಯೋಗ್ಯವಾದ ಪುಸ್ತಕ. ಮರೆಯದೇ ಓದಿರಿ.