ತೋಟ ಹಾದು ಬರಲು ಹೋದರೆ ಮಳೆಹದ ಸಾಲದೆ ಅಲ್ಲಲ್ಲೇ ಬರಕಲಾಗಿರುವ ತೋಟ ಕಾಣಿಸಿತು. ಈ ವರ್ಷದ ಮಳೆಗಾಲದ ಅಧಿಕ ವೃಷ್ಟಿಯಲ್ಲಿ ಕೊಳೆತ ಕೆಲವು ಎತ್ತರದ ಒಣಗಿದ ಮೆಣಸಿನ ಬಳ್ಳಿಯೂ ಕಂಡವು. ಅಷ್ಟರಲ್ಲಿ ಕಟು ವಾಸನೆ ಬಡಿಯಿತು. ಜೇನ್ನೊಣದ ಝೇಂಕಾರ. ಗಂಧ ಹುಡುಕಿ ಹೋದರೆ ಓಡುತ್ತಿದ್ದ ಸ್ಪ್ರಿಂಕ್ಲರ್. ತಣ್ಣಗೆ ಚಿಮ್ಮುತ್ತಿದ್ದ ಸ್ಪ್ರಿಂಕ್ಲರ್ ನೀರಿನ ಪಟ್ಟೆಯ ಅಂಚುಕಟ್ಟಿ ದಪ್ಪ ಮೊಗ್ಗಿನ ಜಡೆಯಂಥ ಮೊಗ್ಗೆದ್ದು ನಿಂತಿದ್ದವು.ಇನ್ನೂ ನೀರು ಹನಿಸದ ಪಟ್ಟೆಯಲ್ಲಿ ಸಣ್ಣ ಪೀಚು ಮೊಗ್ಗು ಮಳೆ ಕಾಯುತ್ತ ನಿಂತಿದ್ದವು.
ಸುಜಾತಾ ತಿರುಗಾಟ ಕಥನ

ನಿನ್ನೆ ಮೊನ್ನೆ ಊರಿನ ಪ್ರಯಾಣವಿತ್ತು. ವರುಷ ವರುಷಕ್ಕೂ ಇಳಿಮುಖವಾಗುತ್ತಿರುವ ರೈತರು, ಕೂಲಿಯವರು, ಎಲ್ಲರ ದಟ್ಟ ಅನುಭವಕ್ಕೆ ಬರುತ್ತಿದೆ. ಅದಕ್ಕೆ ಭೂಮಿಗೆ ಬೆಲೆ ಬಂದಿರುವುದು ಕಾರಣ. ರೈತನ ಬದುಕು ಈಗ ಜೂಜಿಗೆ ಬಿದ್ದಿದೆ. ಮೂವತ್ತು ವರುಷದಿಂದ ನಮ್ಮೂರಿನ ಕಾಫಿ ಹೂವನ್ನು ಆಸೆಯಿಂದ ನೋಡಲೆಂದು ಹೋಗುವ ನಾನು ಎರಡು ಪ್ರಯಾಣದ ಅನುಭವವನ್ನು ನಿಮ್ಮೊಡನೆ ಹೇಳಿಕೊಳ್ಳುತ್ತಿದ್ದೇನೆ.

ಹಳೆಯದೊಂದು ಸಕಲೇಶಪುರದ ಸರ್ಕೀಟಿನ ನೆನಪು

ಯುಗಾದಿಗೆ ಮುಂದೆ ಮಳೆ ಬರೋದೇನು ಹೊಸದಲ್ಲ. ಬರಗೆಟ್ಟು ಒಣಗಿ ನಿಂತಿದ್ದ ಮರಗಿಡ ಒಂದ್ನಾಕು ದಿನದಲ್ಲಿ ತಳಿರುತೋರಣ ಕಟ್ಟಿ ನಿಂತವು. ಬೆಂಗಳೂರಿನಲ್ಲಿರುವ ಅಣ್ಣ, ನಾನು ಪ್ರತೀ ವರುಷದ ವಾಡಿಕೆಲಿ ಊರಿಗೆ ಹೊರಟು ನಿಂತ್ವಿ. ಮೊದಲನೇ ಮಳೆಗೆ ಇಡೀ ಕಾಫಿ ಸೀಮೆ ಚಾತಕ ಪಕ್ಷಿಯಾಗಿರುತ್ತೆ. ಯಾಕಪ್ಪಾ ಅಂದ್ರೆ ಮಲೆನಾಡು ಅನ್ನೋದೇ ಮಳೆ ನಾಡು. ಮಳೆ ನೀರಿನ ಮೇಲೆ ಅದರ ವ್ಯವಸಾಯ. ಜನಜೀವನ.

ಅಲ್ಲಿ ಕಾಡುಮೇಡು ಅಲ್ಲದೆ ಕಾಸು ಕರೀಮಣಿನೂ ಆಯಾ ಕಾಲದಲ್ಲಿ ಸುರ್ಯೋ ಮಳೇನೆ ನಂಬ್ಕೊಂಡಿರುತ್ತೆ. ಓಂ ನಾಮದಲ್ಲಿ ಮಳೆ ಮಾತಾಡದೆ ಅಲ್ಲಿನ ಜನ ಮುಂದಿನ ಮಾತನ್ನ ಆಡೋದಿಲ್ಲ. ಮಖ ನೋಡಿದ ಕೂಡಲೇ ಅದೇ ಮೊದಲನೇ ಮಾತು. ಏನ ಭರಣಿ ಮಳೆ ಹಿಡದೀತಾ? ಮಿಸ್ಕಿರಿ ಮಳಿಗೆ ಏನಾತು? ರೋಣಿ ಮಳೆ….. ಹಿಂಗೆ ಮಳೆ ನಕ್ಷತ್ರ ಹಿಡದ ಮಾತೆ ಮೊದ್ಲು. ಬ್ಯಾರೆ ಮಾತು ಕೊನಿಗೆ.

“ಹೊಡಿತೇತೆ. ಹೊಡಿತೇತೆ… ಮೂಡಗೆರಿಗೆ ಮೂರು ದಿಸದಿಂದ…. ಚಿಕ್ಕಮಂಗಳೂರಿಗೆ ೩ ಇಂಚು ಆತು. ಯಾಕೆಳ್ತೀರಾ? ನಮಗೂ ಒಂದೆ ದಿಸಕ್ಕೆ ಎರಡಿಂಚು ಆತು. ಸಾಕು ಬೇಕಾದಷ್ಟು ನಮ್ಗೆ ಹೂವಾಗಕ್ಕೆ. ಇನ್ನ ಹದ್ನೈದು ದಿಸಕ್ಕೆ ಯೋಚ್ನಿಲ್ಲ. ಹೂವಿಗೆ ಒಳ್ಳೆ ಮಳೆ ಇದು ರಾಜಣ್ಣ. ಈ ಸಲದಂಗೆ ಆಗಿರೋ ‘ಬ್ಲಾಸ್ಸಮ್’ ಇತ್ತೀಚಿಗೆ ಆಗೇ ಇರನಿಲ್ಲ. ಏನು ಹೂವು ಅಂದ್ರೆ ಈ ಸಲ. ನಮ್ಮ ಕಡೇರು ಹಬ್ಬ ಮಾಡವರು ಮಾಡತಾವರೆ. ಪಾರ್ಟಿ ಮಾಡರು ಮಾಡ್ತವರೆ. ಪೂಜೆ ಮಾಡರು ತ್ವಾಟದಲ್ಲಿ ಮಾಡ್ತಾವರೆ.

ಇನ್ನೆರಡು ದಿಸ ಮಳೆ ಬರಬಾರದು. ತೊಟ್ಟಲ್ಲಿ ಮಳೆ ಹನಿ ನಿಂತ್ರೆ ಈಚು ಉದ್ರುತವೆ. ಈ ಸಲ ಫಷ್ಟ್ ಕ್ಲಾಸ್ ಹೂವಾಗೀತೆ, ಮಳೆ ನಡಿಸಿಕೊಟ್ರೆ ಮಲ್ನಾಡರು ಬದುಕುಬುಡ್ತಾರೆ. ಕಾಯಿ ಕಚ್ಚಿದ್ ಮ್ಯಾಲೆ ಇನ್ನೆರಡು ಮಳೆ ಆದ್ರೆ ಸಾಕು. ಆಮೇಲೆ ಹೆಂಗೂ ಮಳೆಗಾಲ” ಜೊತೆಲಿ ಬಂದಿದ್ದ ನೆಂಟ ಭಾವಾರ ಮಾತು ನಡೀತಿತ್ತು.

ಹಿಂಗೆ ನಾವು ಬೆಂಗಳೂರಲ್ಲಿ ಇದ್ದರೂ ಸೈತ ಮೊದಲನೇ ಮಳೆ ಕಾಯ್ಕಂಡಿದ್ದು ಊರಿನ ಸುದ್ದಿ ತಗಂದೆ ೯ ನೇ ದಿನಕ್ಕೆ ಪ್ರತಿ ವರುಷದಂಗೆ ಈ ವರ್ಶವೂ ಊರಿಗೆ ಹೊರಟಿದ್ವಿ. ಉತ್ತಮ ಮಳೆಯ ಕಾರಣ ಅಣ್ಣನ ಮುಖದ ಮೇಲೆ ಸಂತೃಪ್ತಿ ಇತ್ತು. ಸಧ್ಯ ಊರಲ್ಲಿರ ತಮ್ಮದಿರು, ನೆಂಟರ ಪಾಡು ಕೊಂಚ ಸುಧಾರುಸ್ತಲ್ಲ ಅಂತ. ಅದೂ ಇದೂ ಮಾತಾಡಕಂಡು ಬೆಳಬೆಳಗ್ಗೇನೇ ಎಂಟಕ್ಕೆಲ್ಲಾ ಪಾಳ್ಯ ದಾಟಿ ಕಾಫಿ ನಾಡಿಗೆ ಕಾರು ಹಾಯುತಿದ್ದಂಗೆ ಗಂಧ, ಸುಗಂಧ, ಊದು ಬತ್ತಿಯ ಪರಿಮಳ ಮೂಗಿಗೆ ತಾಕಿದ್ದೆ ಕಣ್ಣು ಕಿಟಕಿ ಕಡೆಗೆ ತಿರುಗಿತು.

ತೊಳೆದಿಟ್ಟ ಹಸಿರು ಕಾಪಿ ನಾಡಿಗೆ ಬೆಳ್ಳನೆ ಮಂಜು ಗೊನೆಗೊನೇಲಿ ಇಳುದು ಹೂವಾಗಿ ಅರಳಿ ಸುರಿದಿತ್ತು. ಚೆಲ್ಲಿದ ಪುರಿಕಾಳಿನಂಗೆ. ಮೊಗ್ಗಿನ ಜಡೆಯಂಗೆ ಹೂವಿನ ಕೊಂಡೆ ಗೆಣ್ಣುಗೆಣ್ಣಿಗೂ ಹೂವಿನ ಜೇನುಗೊಂಡೆ ಕಟ್ಟಿ ಮದುವೆ ಹೆಣ್ಣಿನ ಹೂವಿನ ಜಡೆಯಂಗೆ ಹತ್ತಿರಕ್ಕೆ ಕಂಡರೆ…. ಕಾಪಿ ರೆಕ್ಕೆ ದೂರದಿಂದ ಹೆಂಗಿದ್ವು ಅಂದ್ರೆ ಕಾಪಿ ತೋಟ ಅಲ್ಲ, ಅದು ಮಲ್ಲಿಗೆ ತೋಟದಂಗೆ ಕಾಣೀಸ್ತಾ ಇತ್ತು.

ದಾರಿ ಸಾಗತಾ ೫೦ ಕಿ.ಮಿ. ಹೂವಿನ ಹಾದೀಲಿ ಹಾದು ಮನೆಗೆ ಹೋದ್ರೆ ಮನೆ ಸುತ್ತ ನೆತ್ತಿಗೆ ಹಾಕಿ ತಿಕ್ಕುವಂಥ ಘಾಟು. ಮೊದಮೊದಲು ಮೂಗಿಗೆ ತಾಗಿದ ಗಂಧ ಸುಗಂಧವಾಗಿ ಬರಬರತಾ ಮೂಗನ್ನೇ ಸೊಕ್ಕಿಸಿ ಮೊಂಡು ಮಾಡಿತ್ತು. ಮನೇಲಿ ಹಂದಿಕರಿ ಅಕ್ಕಿ ರೊಟ್ಟಿ, ಕಡಬು, ಕೋಳಿಗೊಜ್ಜಿನ ರುಚಿಗೆ ದಿನಕ್ಕಿಂತ ಎರಡು ಪಟ್ಟು ಉಂಡು ತೋಟದಲ್ಲಿ ಅಡ್ಡಾಡುವಾಗ ಕೆಲ್ಸದವರು….

“ಹೂವಿನ ತ್ವಾಟದಲ್ಲಿ ಒಬ್ರೇ ಸುಳದಾಡಬಾರದು ಅಮ್ಮಾರೇ, ನಾಗರಹಾವು ಇರ್ತವೆ. ಗಾಳಿ ಸುಳ್ದಾಡತಿರ್ತೀತೆ ಘಮನಕ್ಕೆ. ಹೂವಿನ ಘಮನಕ್ಕೆ ಎಲ್ಲಾ ಎಚ್ಚೆತ್ಕಂದಿರ್ತವೆ. ಬ್ಯಾಡ, ವಾಪಾಸ್ ಹೋಗುಬುಡಿ ದಮ್ಮಯ್ಯ” ಅನ್ನೋ ಅವಳ ಕಕ್ಕುಲಾತಿಗೆ ಹಿಂತಿರುಗಿ ಬಂದೆ. ತೋಟದ ಕೆಲಸಗಾರರಿಗೆ ಒಂದು ವಾರ ರಜೆ. ಅಡ್ಡಾಡುವಾಗ ಹೂವುದರದಿರ್ಲಿ ಅಂತ ಹಿರಿಯರ ನಿಯಮ ಇರಬೇಕು.

ಮೊಗ್ಗು ನೂಕಿ ತಿಂಗಳು ಕಾಲ ಮೊದಲ ಮಳೆಗೆ ಕಾಯುತ್ತಾ ನಿಲ್ಲುವ, ಮಳೆ ಬಂದು ೯ನೆ ದಿನಕ್ಕೆ ಹೂವು ಜೇನ್ನಾಗುವ, ಜೇನು ಗೂಡಾಗುವ, ನಂತರ ಕಾಯಿಕಟ್ಟಿ ಕೆಂಪನೆ ಜೊಂಪೆಜೊಂಪೆ ಹಣ್ಣಾಗಿ ಕಪ್ಪನೆ ಸಿಪ್ಪೆಯ ಬೀಜವಾಗಿ ಮತ್ತೊಂದು ಹೊಸ ಮರ ಚಿಗುರುವ ಆಸೆ ಹೊತ್ತು ನಿಲ್ಲುವ ಪ್ರಕ್ರಿಯೆ ಕಂಡ ಮನುಷ್ಯ ತನ್ನ ವರಮಾನಕ್ಕೆ ಬದುಕನ್ನು ಪ್ರಕೃತಿಯ ನಿಯಮಕ್ಕೆ ಹೊಂದಾಣಿಕೆ ಮಾಡಿಕೊಂಡಿದ್ದಾನೆ. ಅವನು ಕಾಪಿ ಗೋಟನ್ನ ಹರಿ ನೀರಲ್ಲಿ ಬಿಟ್ಟು ಸಿಪ್ಪೆಯಿಂದ ಅಗಲಿಸಿ ಹದವಾಗಿಸಿ ಕಾಪಿ ಬೀಜದ ದಳವಾಗಿಸಿ ಮತ್ತೆ ಅದನ್ನು ಹುರಿದು ಪುಡಿಮಾಡಿ, ಚಿಕೋರಿಯ ಸಾಂಗತ್ಯದಲ್ಲಿ ಕುದಿಸಿ ಹಾಲು ಸಕ್ಕರೆ ಮಿಳಿತವಾಗಿ ಕಾಫಿ ಲೋಟ ಕೈಗೆತ್ತಿಕೊಳ್ಳುವ ಸಾಹಸಿ.

ಅದೇನೆ ಇರಲಿ. ನೋಡಿ ನೋಡಿ ತಣಿಯಿತ್ತು ಜೀವ. ಬೇಕಾದವರನ್ನು ಕರೆತಂದು ಈ ಮರುಳು ಹಿಡಿಸುವ ಚಂದವನ್ನು ತೋರಿಸಬೇಕು ಎಂದು ನೆನೆಯಿತ್ತು ಎಂದರೆ ತಪ್ಪಾಗಲಾರದು. ಮೂಗಂತು ಸೊಕ್ಕಿತ್ತು. ಮತ್ತೆ ಪ್ರಯಾಣ ತವರ ಮನೆ ಕಡೆಗೆ ಸಾಗಿ ಒಂದೆಪ್ಪತ್ತು ಮೈಲಿ ಹೂವಿನ ಹಾದಿಯಲ್ಲಿ ಮನಸ್ಸು ಹೂವಾಗಿ ಹಾರಿ ಅಣ್ಣನ ಕಾಪಿ ತೋಟ ಸೇರಿ ಮಲಗಿದಾಗ ಜೀವ ಧನ್ಯವಾಗಿತ್ತು.

ಆದರೆ….. ಎರಡು ವರುಷದಿಂದ ಸರಿಯಾಗಿ ಮಳೆಯಿರದ ಊರಲ್ಲಿ ಕೆರೆ ಕಟ್ಟೆ ಹಳ್ಳಗಳೆಲ್ಲಾ ಬತ್ತಿದ್ದವು. ಚಂಡಮಾರುತದ ಬೀಸಿಗೆ, ಮೋಡದ ವಾತಾವರಣಕ್ಕೆ ಸಧ್ಯಕ್ಕೆ ಮಲೆಸೀಮೆ ಹಸಿರು ಹೊದ್ದು ಬಿಸಿಲಿಗೆ ಮೈ ನೆರೆದ ಮಲ್ಲಿಗೆ ಹೂ ನಗೆಯ ಹೊತ್ತು….ಆ ನಗೆಯಲ್ಲಿ ಮನತಣಿಸಿ, ತಂಪಾದ ರಾತ್ರಿಗೆ ರಗ್ಗು ಹೊದ್ದಿಸಿ ಮಲಗಿಸಿದ್ದಳು.

ಆದರೆ ಎಂದೂ ಬತ್ತದಿರುವ ಹೇಮಾವತಿಯಂಥ ಚಿರಯೌವ್ವನೆಯ ಸೇತುವೆ ಮೇಲೆ ಕಾರು ಸಾಗುವಾಗ ಕಿಟಕಿಯಲ್ಲಿ ಹೇಮೆ ಭಣಗುಡುತಿದ್ದಳು. ಅಗಾಧ ನೀರ ಪಾತ್ರದ ಮೇಲೆ ಸಾಗುವ ಕಾರಿನಲ್ಲಿ ಒಮ್ಮೊಮ್ಮೆ ಭಯವಾಗುವಂತೆ ನೀರಿರುತಿತ್ತು. ಎತ್ತ ತಿರುಗಿದರೂ ಹಸಿರು ಹಾಸಿದ್ದ ತಾಯಿ ಬರಿದಾಗಿ ಗುಂಡಿಯಲ್ಲಿ ನೀರು ಕೆಸರಂತೆ ನಿಂತಿತ್ತು. ಇದು ಮರಳು ಉತ್ಖನನದ ಪರಿಣಾಮ.

ಈಗಲೂ ನೆನೆದರೆ ಸಕಲೇಶನನ್ನೇ ಮುಳುಗಿಸಿ ಭೋರ್ಗರೆಯುತಿದ್ದ ಹೊಳೆಯೊಡಲು ನೆನಪಾಗುತ್ತದೆ. ಅವಳೀಗ ಬರಿದಾಗಿ ಮಳೆಗೆ ಭಿಕ್ಷೆಯೊಡ್ಡಿ ನಿಂತಂತೆ ಅನ್ನಿಸುತ್ತದೆ. ಆದರೆ ಕಾಪಿ ನಾಡಿಗೆ ಕಾಪಿ ನಾಡೇ ಹೂ ಮೈ ನೆರೆದದ್ದನ್ನು ನೆನೆದಾಗ ಇನ್ನೂ ಜೇನು ಕರೆಯುವ ನೆಲದ ತಾಕತ್ತನ್ನು ಕಂಡಾಗ ಆ ತಾಯಿಗೆ ಮಳೆಹೊಳೆಯನ್ನು ತಂದು ತನ್ನೊಳಗೆ ಮುಳುಗಿಸಿಕೊಳ್ಳುವ ಆಶಯದ ಸಾಧ್ಯತೆಯೂ ಇದೆ ಎಂಬ ನಂಬಿಕೆ ಬರುತ್ತದೆ.

ತೊಳೆದಿಟ್ಟ ಹಸಿರು ಕಾಪಿ ನಾಡಿಗೆ ಬೆಳ್ಳನೆ ಮಂಜು ಗೊನೆಗೊನೇಲಿ ಇಳುದು ಹೂವಾಗಿ ಅರಳಿ ಸುರಿದಿತ್ತು. ಚೆಲ್ಲಿದ ಪುರಿಕಾಳಿನಂಗೆ. ಮೊಗ್ಗಿನ ಜಡೆಯಂಗೆ ಹೂವಿನ ಕೊಂಡೆ ಗೆಣ್ಣುಗೆಣ್ಣಿಗೂ ಹೂವಿನ ಜೇನುಗೊಂಡೆ ಕಟ್ಟಿ ಮದುವೆ ಹೆಣ್ಣಿನ ಹೂವಿನ ಜಡೆಯಂಗೆ ಹತ್ತಿರಕ್ಕೆ ಕಂಡರೆ…. ಕಾಪಿ ರೆಕ್ಕೆ ದೂರದಿಂದ ಹೆಂಗಿದ್ವು ಅಂದ್ರೆ ಕಾಪಿ ತೋಟ ಅಲ್ಲ, ಅದು ಮಲ್ಲಿಗೆ ತೋಟದಂಗೆ ಕಾಣೀಸ್ತಾ ಇತ್ತು.

ದುಡ್ಡಿರುವವರು ಹುಡುಕಿಕೊಂಡು ಹೋಗಿ ಮಲೆನಾಡ ಸೆರಗಿನ ಹೋಂಸ್ಟೇನಲ್ಲಿ ಮಲಗಿ ಎದ್ದು ಬರುವಾಗ ಗಾಜು ಗೊಸರನ್ನು ಸ್ವಚ್ಚ ಹಸಿರು ನೀರು ನೆಲದಲ್ಲಿ ಸುರಿದು ಹೇತು ಬರದಿರಲಿ. ಕೋತಿ ತಾನು ಕೆಡುವುದಲ್ಲದೆ ವನವನ್ನೆಲ್ಲಾ ಕೆಡಿಸಿತಂತೆ…. ಕಟುವಾಗಿದೆ ಮಾತು ಅನ್ನಿಸಿದರೆ ಅನ್ನಿಸಲಿ. ಜಗತ್ತು ಉಳಿಯಬೇಕೆಂದರೆ ಮಳೆಬೆಳೆ ಬಂದು ಜನ-ಬನ ಬದುಕಬೇಕೆಂದರೆ ಅದು ಶುಭ್ರತೆಯನ್ನು ಬೇಡುತ್ತದೆ. ಹಾಗೆಯೇ ಹಸಿರನ್ನು, ಅದರ ಉಸಿರಾದ ನೀರನ್ನು ಜಿಪುಣತನದಿಂದ ಬಳಸಬೇಕಾಗುತ್ತದೆ.
“ಗಿಣಿ ಮಾತು ಕಲ್ತು ತನ್ನ ಹೇಲು ತಾನು ತಿನ್ಕಂತಂತೆ” ಅನ್ನೋ ಗಾದೆ ನಿಜವಾಗುವ ಕಾಲ ದೂರವಿಲ್ಲ. ಜನ ಕೊಂಚ ಜಾಗ್ರತೆಯಾದರೆ….. ಹಸಿರನ್ನು ಮತ್ತೆ ಚಿಗುರಿಸಲು ಭೂಮಿ ಅನುವಾಗುತ್ತದೆ. ಅದು ಭೂಮಿ ತೂಕದ ಗುಣ.

ಪ್ರತಿ ವರುಶವೂ ಈ ಚಿತ್ರಗಳನ್ನು ತೆಗೆವ ಸಂಭ್ರಮ ಇರಲಿ. ಹಚ್ಚ ಹಸಿರನ್ನು ಹರಿಸುವ ಹೇಮಾವತಿ, ಕೆಂಪು ಹೊಳೆ, ಎತ್ತಿನ ಹಳ್ಳ, ಯಗಚಿ, ವಾಟೆ ಹೊಳೆಗಳು ಮೊದಲಿನಂತೆ ತುಂಬಿ ಹರಿಯಲಿ. ಪ್ರಾಣಿ ಪಕ್ಷಿಗಳಿಗೆ ನಮಗೆ ನೆರಳು ಒದಗಲಿ. ಇದು ನಮ್ಮೆಲ್ಲರ ಆಶಯವಾಗಲಿ.

ಈ ವರುಷದ ಸರ್ಕೀಟು

ಈ ಬಾರಿ ಊರಿಗೆ ಹೋದದ್ದು ತಿರುಗಾಟಕಲ್ಲ. ಬೇರೆಯದೇ ಕಾರಣವಿದ್ದ ಕೆಲಸಕ್ಕಾಗಿ. ಮೊದಲ ಮಳೆ ಇನ್ನೂ ಆಗಿಲ್ಲ. ಕಾಪಿ ಹೂವು ಆಗಿಲ್ಲ. ಆದರೆ ಹಾಸನ ಜಿಲ್ಲೆಯ ಮೂರು ದಿಕ್ಕಿಗೂ ಅಂದರೆ, ಬಯಲು, ಮಲೆನಾಡು, ಅರೆಮಲೆನಾಡು, ಸುತ್ತಿ ಬರುವಾಗ ಕಂಡದ್ದನ್ನ ಹೇಳಲೇಬೇಕಲ್ಲ. ಮೊದಲು ಹೋದದ್ದು ಆಲೂರು ತಾಲ್ಲೂಕಿನ ನನ್ನ ತಾಯಿ ಮನೆ. ಮೂರು ವರುಷದ ಹಿಂದೆ ಇದ್ದಂತೆ ಅಲ್ಲಿ ಸಧ್ಯಕ್ಕೆ ಇನ್ನೂ ಈ ವರ್ಷ ನೀರು ಬತ್ತಿಲ್ಲ. ಅಡಿಕೆ ಕೊಯ್ಲು ಆಗಿದೆ. ಮೆಣಸು ಕಟ್ಟಿಟ್ಟಿದೆ. ಕಾಫಿ ಗೋಡೌನಿಗೆ ಬಿದ್ದಿದೆ. ಯಾಕೆಂದರೆ ಅರೆಮಲೆನಾಡಿನ ಜಾಗದಲ್ಲಿ ಮಲೆನಾಡಿಗಿಂತ ಬೆಳೆಗಳೆಲ್ಲ ಬೇಗ ರೈತನ ಕೈ ಸೇರುತ್ತವೆ.

ಬಿರು ಬಿಸಿಲು. ಎಂಥ ಬಿಸಿಲಿದ್ದರೂ ಮನೆ ಒಳಗೆ ಹೋದೊಡನೆ ತಣ್ಣಗಾಗುವ ನಮ್ಮ ಹೆಂಚು ಹಾಗೂ ಮರದ ಮಾಡಿನ ಮನೆಗಳು ಇಂದು ಸೆಖೆಯನ್ನು ತೋರುತ್ತಿವೆ. ತಣ್ಣನೆ ಹಾಸನ ಜಿಲ್ಲೆ ಮೊದಲು ದಟ್ಟ ಬಣ್ಣದ ರಾಶಿ ಹೂವು ಹಾಗೂ ಹಣ್ಣು ತರಕಾರಿ ಬೆಳೆಗೆ ಹೆಸರುವಾಸಿಯಾದ ನಾಡು. ಈಗ ಅದಕ್ಕೆ ಕಾರಣವಾಗಿರುವ ಗಾಳಿಯ ತೇವಾಂಶವನ್ನು ಊರಿನ ಗಾಳಿ ಕಳೆದುಕೊಳ್ಳುತ್ತಿದೆ.

ಹಾಸನದ ಅಣ್ಣನ ಮಗಳ ಮನೆಯಲ್ಲೂ ಇದೇ ಸೆಕೆ. ಇನ್ನು ಗೊರೂರು ರಸ್ತೆಯಲ್ಲಿನ ಇನ್ನೊಂದು ಅಣ್ಣನ ಮನೆಗೆ ಹೋದೆವು. ಮನೆಯ ಮಾರು ದೂರದಲ್ಲಿ ಕೆಳಗೆ ಯಗಚಿ ನೀರು ಬತ್ತದೆ ಹರಿಯುತ್ತಿದೆ. ಅದು ಮಡುವಿರುವ ಜಾಗವಾದ್ದರಿಂದ ಅಲ್ಲಿ ವರ್ಷಪೂರ್ತಿ ನೀರಿಗೆ ಕೊರತೆಯಿಲ್ಲ. ಆದರೂ ನೀರ ಹರಿವು ತೆಳ್ಳಗಿದೆ. ಹಾಸನದ ಗಲೀಜು ನೀರು ಸೇರುವ ಕಾರಣ ಕುಡಿಯಲು ಬೇರೆ ಬೋರ್ವೆಲ್ ಕೊರೆದಿದೆ. ಆದರೂ ಹಣ್ಣಿನ ತೋಟ ಬತ್ತಿಲ್ಲ. ತೆಂಗು ತೊಂದರೆ ಇಲ್ಲ. ಅಡಿಕೆ ಕುಯ್ಲು ಮುಗಿದು ನಿರಾಳವಾಗಿದೆ.

ಆಲೂರಿನಿಂದ ಬಿಕ್ಕೋಡು ಹಾದು ಅರೆಹಳ್ಳಿಯ ಬದಿಯ ಇನ್ನೊಂದು ಅಣ್ಣನ ತೋಟಕ್ಕೆ ನಮ್ಮ ಪ್ರಯಾಣ ಹೊರಟಿತ್ತು. ಎಲ್ಲೆಲ್ಲೂ ರಾಜಾ ರಸ್ತೆಗಳು. ಅಕ್ಕಪಕ್ಕದಲ್ಲಿ ಕೋತಿ ದಂಡಿಗೆ, ಬಡವರ ಸಣ್ಣ ಆದಾಯಕ್ಕೆ ಕಾರಣವಾಗಿದ್ದ ದೊಡ್ದ ಕಾಡು ಮಾವು, ನೇರಳೆ, ಆಲ, ಮತ್ತಿ, ಸಂಪಿಗೆ, ದಿಂಡಗದ ಮರಗಳು ಉರುಳಿ ಹೋಗಿವೆ.

ಕೇವಲ ಮೂವತ್ತು ವರ್ಷದ ಹಿಂದೆ ಕಣತೂರಿನಿಂದ ಶುರುವಾಗುತ್ತಿದ್ದ ತಣ್ಣನೆ ಕಾಡಿನ ದಟ್ಟ ನೆರಳು, ಇದೀಗ ನಾಶವಾಗಿ ಮರಗಳು ಉಳಿದಿರುವ ಕೆಲವು ಜಾಗಗಳಲ್ಲಿ ಮಲೆನಾಡಿನ ಹಳೆ ಮುಖಚರ್ಯೆ ಕಾಣುತ್ತದೆ. ನಡುಮಧ್ಯೆ ದೊಡ್ಡ ಎತ್ತಿನಹಳ್ಳದ ಕಾಮಗಾರಿ ನಡೆಯುತ್ತಿದೆ.

ಎತ್ತಿನಹಳ್ಳದ ನೀರು ತಿರುವಿಗೆ ಘನ ಸರ್ಕಾರ ತೋಡಿರುವ ಹಳ್ಳಗಳು ದೊಡ್ದ ಕಾಡು ಕಣಿವೆಯನ್ನು ನೆನಪಿಸುತ್ತಿವೆ. ಆಷ್ಟು ದೊಡ್ಡ ಪ್ರಮಾಣದ ನೀರು ಹರಿಸಲು ಸಾಧ್ಯವೇ ಸರ್ಕಾರಕ್ಕೆ. ಗೊತ್ತಿಲ್ಲ. ಎತ್ತಿನ ಹಳ್ಳದ ಪಕ್ಕದಲ್ಲೇ ಸಕಲೇಶಪುರದ ಗಡಿಯಲ್ಲಿ ನಮ್ಮ ಇನ್ನೊಂದು ಜಮೀನು ಇರುವುದರಿಂದ ನಮಗೆ ಅದರ ಬಂಡವಾಳ ಗೊತ್ತಿದೆ. ಅದೂ ಕೂಡ ಸಣ್ಣ ಹೊಳೆಯೇ. ಮಳೆಗಾಲದಲ್ಲಿ ಮಾತ್ರ ಇವುಗಳ ಆರ್ಭಟವಿರುತ್ತದೆ. ಆದರೆ ಅವುಗಳಿಗೆ ಜೋಡಿಸುತ್ತಿರುವ ಕೊಳವೆಗಳು ಎಷ್ಟು ದೊಡ್ದವು! ದೇವಾ!

ಅದಕ್ಕೊಂದು ತಮಾಷೆ ಮಾತು ಅಣ್ಣನದು. “ಎತ್ತಿನ ಹಳ್ಳದಲ್ಲಿ ನೀರಂತೂ ಇಷ್ಟು ದಪ್ಪ ಹರಿಯದು ಆಗದ ಮಾತು. ಕೋಲಾರಕ್ಕೆ ಈಗ ಆನೆ ಕಾರಿಡಾರ್ ಮಾಡದಂಗಾತು. ಇಲ್ಲಿಂದ ಆನೆ ಈ ಕೊಳವೇಲಿ ನುಗ್ಗಿ ಕೋಲಾರದ ದಾರಿಗೆ ಹೋಗುವಾಗ… ಬಿಸ್ಲಿಗೆ ಹೆದ್ರಿ ಇದೇನು ಇಷ್ಟು ಬಿಸಿ ಅಂತ ಮತ್ತೆ ವಾಪಾಸ್ ಇದೇ ಕೊಳವೆಲಿ ತಿರುಗಿ ಬರ್ತವೆ ಅಂತ”

ತಮಾಷೆಯಾದರೂ ಇದು, ಅಸಂಭವ ಕಾರ್ಯವೈಖರಿಯ ವಿಶ್ಲೇಷಣೆಯ ಮಾತು. ಕಾಫಿ ತೋಟ ತಲುಪಿದೆವು. ಕಣದಲ್ಲಿ ಕಾಪಿ ಕೆಲಸ ಮುಗಿದು ಪಲ್ಪರ್ ಸಿಪ್ಪೆಯ ದೊಡ್ದ ತೊಟ್ಟಿಗಳಲ್ಲಿ ಕೋಳಿಯ ಜೊತೆಗೆ ಬೆಳ್ಳಕ್ಕಿಗಳು ಮೇಯುತ್ತಿದ್ದವು. ನಮ್ಮನ್ನು ಕಂಡ ಕೂಡಲೇ ಅವು ಹಾರಿ ಒಂದು ನೋಟ ಕಟ್ಟಿ ಮರದ ಮೇಲೆ ಹೋಗಿ ಕೂತವು.

ಕೋಳಿ ಭಯವಿಲ್ಲದೆ ಮೇಯುತ್ತಿದ್ದವು. ನೀರಿರುವ ಆಳ ತಿಳಿಯದೆ ಹಾಗೇ ಮುಂದೆ ಮೇಯುತ್ತ, ಹೋಗುತ್ತ, ಕಾಫಿ ಸಿಪ್ಪೆಯ ನಡುವೆ ಸಿಕ್ಕಿಬಿದ್ದು ಮುಳುಗಿ, ಕೋಳಿಗಳು ಸತ್ತೂ ಹೋಗುತ್ತವೆ. ಹೀಗೆ ಸರ್ಕಾರದ ಜೊತೆ ತಮ್ಮನ್ನು ಹೆಣೆದುಕೊಂಡ ಜಾಲದಲ್ಲಿ ಸಿಕ್ಕಿ ರೈತರೂ ನಾಶವಾಗುತ್ತಿದ್ದಾರೆ. ಮನೆ ಮುಂದೆ ಮೆಣಸು ಕಣದಲ್ಲಿತ್ತು.

ದಿನಕ್ಕೆ ಒಬ್ಬರಿಗೆ ಮೆಣಸು ಕೊಯ್ಯುವ ಕೂಲಿ 580 ರೂ.. ಬೆಳಿಗ್ಗೆ ವಾಹನದಲ್ಲಿ ಕರೆತರುವ ಮಾಲೀಕ ಹಿಂದೆ ನಿಲ್ಲದೆ ಏನಾದರೂ ಕಣ್ಮರೆಯಾದರೆ ಕುಂತು ನೆರಳಲ್ಲಿ ಮನೆಗೆ ಹೋಗುವ ಆಳುಗಳೂ ಸಹಿತ ಈಗ ಹಣಕ್ಕೆ ಸರಿಯಾಗಿ ದುಡಿಯುವುದಿಲ್ಲ. ಬಂದ ಕೆಲಸಗಾರರೊಂದಿಗೆ ಮರು ಮಾತಾಡದೆ ಕೆಲಸ ತೆಗೆದು ಕಳಿಸಬೇಕು. ಅಡ್ವಾನ್ಸಿನೊಂದಿಗೆ ಹಣ ಸಂದಾಯವಾಗದಿದ್ದರೆ ಬರುವ ಬೆರಳೆಣಿಕೆಯ ಜನವೂ ನಾಪತ್ತೆಯಾಗುತ್ತಾರೆ.

ತೋಟ ಹಾದು ಬರಲು ಹೋದರೆ ಮಳೆಹದ ಸಾಲದೆ ಅಲ್ಲಲ್ಲೇ ಬರಕಲಾಗಿರುವ ತೋಟ ಕಾಣಿಸಿತು. ಈ ವರ್ಷದ ಮಳೆಗಾಲದ ಅಧಿಕ ವೃಷ್ಟಿಯಲ್ಲಿ ಕೊಳೆತ ಕೆಲವು ಎತ್ತರದ ಒಣಗಿದ ಮೆಣಸಿನ ಬಳ್ಳಿಯೂ ಕಂಡವು. ಅಷ್ಟರಲ್ಲಿ ಕಟು ವಾಸನೆ ಬಡಿಯಿತು. ಜೇನ್ನೊಣದ ಝೇಂಕಾರ. ಗಂಧ ಹುಡುಕಿ ಹೋದರೆ ಓಡುತ್ತಿದ್ದ ಸ್ಪ್ರಿಂಕ್ಲರ್. ತಣ್ಣಗೆ ಚಿಮ್ಮುತ್ತಿದ್ದ ಸ್ಪ್ರಿಂಕ್ಲರ್ ನೀರಿನ ಪಟ್ಟೆಯ ಅಂಚುಕಟ್ಟಿ ದಪ್ಪ ಮೊಗ್ಗಿನ ಜಡೆಯಂಥ ಮೊಗ್ಗೆದ್ದು ನಿಂತಿದ್ದವು.

ಇನ್ನೂ ನೀರು ಹನಿಸದ ಪಟ್ಟೆಯಲ್ಲಿ ಸಣ್ಣ ಪೀಚು ಮೊಗ್ಗು ಮಳೆ ಕಾಯುತ್ತ ನಿಂತಿದ್ದವು. ಇನ್ನೂ ಮುಂದಕ್ಕೆ ಹೋದಾಗ ಘಮದ ಘಾಟು ಮೂಗಿಗೆ ಬಂತು. ಮೊದಲು ನೀರು ಹಾಯಿಸಿದ್ದ ನೆಲ ನೆಂದ ಪಟ್ಟೆಯಲ್ಲಿ ಕಾಪಿ ಹೂವು ಅರಳಿ ನಿಂತಿದ್ದವು.

ಹೂವು ನೋಡಿ ಕಣ್ಣರಳಿದರೂ ವಿಷಾದದ ಎಳೆ ಒಳಗೊಳಗೆ ಆಡುತ್ತಲೇ ಇತ್ತು. ತೋಟ ಮಾರಿಕೊಂಡು ಪ್ಯಾಟೆ ಬಿದ್ದವರೆಲ್ಲ ನೆನಪಾದರು. ಆಗ ನನ್ನ ತಾಯಿಯ ಒಂದು ಮಾತು ನೆನಪಾಯಿತು. “ಹುಯ್ ಹಾಲ್ ಹೂದು ಒಂದು ಎರಡು ಮಕ್ಕಳು ಸಾಕಬೋದು. ಹುಟ್ಟಿದ್ದ ಮಕ್ಳಿಗೆಲ್ಲ ತಾಯ್ ಹಾಲೇ ಬೇಕು”

ಈ ರೀತಿ ಹದ ನೀರು ಕೊಟ್ಟು ಕಷ್ಟದಲ್ಲಿ ಹೂವರಳಿಸಿ ರೈತ ಬದುಕುವುದು, ತನ್ನ ತೋಟವನ್ನು ಸಾಕುವುದು ಎಷ್ಟು ವರ್ಷ ಸಾಧ್ಯವಾಗುತ್ತದೆ? ಇನ್ನೂ ಮಳೆ ಬರುವ ಕಾಲ ಮುಂದಿದೆ. ಅದರೊಳಗೊಂದು ನನ್ನಣ್ಣಂದಿರ ಬಿಡದೆ ಮಾಡುವ ಬೇಸಾಯದ ಪ್ರಯತ್ನ. ನೋಡೋಣ…

ಪ್ರತಿ ವರುಷವೂ ಕಾಫೀ ಹೂವಾದಾಗ ಊರಿಗೆ ಬರುವ ನನ್ನ ನೆನಪುಗಳು ಬೆನ್ನತ್ತಿ ಬಂದವು.