ಕತೆಯ ಒಳವಿವರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಆರಂಭದಲ್ಲಿ ಅವನ ಆಕಾರ ಭಾಷೆ ವೇಷ ಭೂಷಣಗಳ ಕಾರಣದಿಂದ ಕೇವಲ ಕಾಬೂಲಿವಾಲನಾಗಿದ್ದ ವ್ಯಕ್ತಿ ನಿಧಾನವಾಗಿ ರಹಮತಖಾನನಾಗಿದ್ದಾನೆ. ಕಾಬೂಲಿವಾಲ ಹಾಗೂ ಮಿನಿಯ ನಡುವೆ ನಿಧಾನವಾಗಿ ಗಟ್ಟಿಗೊಳ್ಳುತ್ತಿರುವ ಸ್ನೇಹಕ್ಕೆ ಅವಳ ತಂದೆಯ ಸಮ್ಮತಿ ಇಲ್ಲದಿದ್ದರೂ ಮಿನಿಯ ತಾಯಿಯಂತೆ ಬಲವಾದ ವಿರೋಧವಿಲ್ಲ. ನಿತ್ಯವೂ ಕಾಬೂಲಿವಾಲ ಬಂದು ಮಿನಿಯ ಜೊತೆ ಆಟವಾಡುತ್ತ ಅವಳಿಗೆ ದ್ರಾಕ್ಷಿ ಗೋಡಂಬಿ ನೀಡುತ್ತ ಇನ್ನಷ್ಟು ಆತ್ಮೀಯವಾಗುತ್ತಿರುವ ಹೊತ್ತಿನಲ್ಲಿ ಕಾಬೂಲಿವಾಲ ತನಗೆ ಸಾಲ ನೀಡಬೇಕಾಗಿದ್ದ ವ್ಯಕ್ತಿಯೊಬ್ಬನ ಬಳಿ ಜಗಳವಾಡಿ- ಈ ಜಗಳ ವಿಕೋಪಕ್ಕೆ ತಿರುಗಿ ಹಣ ವಾಪಸು ಕೊಡದ ವ್ಯಕ್ತಿಗೆ ಕಾಬೂಲಿವಾಲ ಚಾಕುವಿನಿಂದ ಇರಿದು ಜೈಲು ಸೇರುವಂತಾಗುತ್ತದೆ.
ಎಸ್.‌ ಸಿರಾಜ್‌ ಅಹಮದ್‌ ಬರೆಯುವ ಅಂಕಣ

 

ಟ್ಯಾಗೋರರಂಥ ಮಹಾ ಬರಹಗಾರ ರೂಪುಗೊಳ್ಳಲು ಅವರು ಬದುಕಿದ್ದ ಕಾಲವೇ ಬಹುಪಾಲು ಪೂರಕವಾಗಿದೆ. ಹಲವಾರು ಸಮಾಜಸುಧಾರಕರ ನೇತೃತ್ವದಲ್ಲಿ ಬಂಗಾಲದಲ್ಲಿ ಬಿರುಸಾಗಿದ್ದ ಸುಧಾರಣಾ ಚಳವಳಿ, ಸ್ವಾತಂತ್ರ್ಯ ಚಳವಳಿ, ಆಧುನಿಕ ಇಂಗ್ಲಿಶ್ ಶಿಕ್ಷಣಕ್ರಮ, ಪಾಶ್ಚಿಮಾತ್ಯ ಆಧುನಿಕತೆ ನಿಧಾನವಾಗಿ ಚಾಲನೆ ನೀಡಿದ್ದ ನಿರಂತರ ಚಲನೆ-ನಿತ್ಯಸಂಕ್ರಮಣಗಳ ಕಾಲದ ನಡುವೆ ನಿಂತು ಬರೆದ ಟ್ಯಾಗೋರರು ಪರಂಪರೆ, ಆಧುನಿಕತೆ, ವ್ಯಕ್ತಿಯ ಅಸ್ಮಿತೆ, ದೇಶಪ್ರೇಮ, ರಾಷ್ಟ್ರೀಯತೆಗಳಂಥ ದೊಡ್ಡ ಸಂಗತಿಗಳಿಗೆ ಮುಖಾಮುಖಿಯಾಗುವಂತಹ ಬರಹಗಳನ್ನು ಬರೆದರು.

ಭಾರತೀಯ ಸಮಾಜದಲ್ಲಿ ಕುಸಿಯುತ್ತಿದ್ದ ಜಮೀನ್ದಾರಿ ವ್ಯವಸ್ಥೆ, ಆವರಿಸಿಕೊಳ್ಳುತ್ತಿದ್ದ ಹೊಸಮೌಲ್ಯಗಳು, ಶಿಕ್ಷಣವ್ಯವಸ್ಥೆ, ಸ್ವಾತಂತ್ರ್ಯದ ಹಂಬಲ, ರಾಷ್ಟ್ರೀಯತೆಯ ಕಲ್ಪನೆಗಳ ನಡುವೆ ವ್ಯಕ್ತಿಯೊಬ್ಬ ನಾನು ಯಾರು? ಸ್ವಾತಂತ್ರ್ಯ-ಸಂಸ್ಕೃತಿಗಳ ಅರ್ಥವೇನು ಎಂಬ ಗಂಭೀರ ಪ್ರಶ್ನೆಗಳನ್ನು ಕೇಳುವ ಕಾರಣದಿಂದ ಟ್ಯಾಗೋರರ ಬರಹಗಳಿಗೆ ವಿಶಾಲವಾದ ಭಿತ್ತಿಯೊಂದು ಒದಗಿ ಬಂದಿದೆ.

ಟ್ಯಾಗೋರರ ಬಹುಚರ್ಚಿತ “ಕಾಬೂಲಿವಾಲ” ಕತೆಯನ್ನು ಮಿನಿಯೆಂಬ ಪುಟ್ಟ ಹುಡುಗಿ ಹಾಗೂ ಕಾಬೂಲಿವಾಲನೆಂಬ ನಡುಪ್ರಾಯದ ತಂದೆಯ ಕತೆಯಂತೆ ಓದಿದಂತೆ ಹಾಗೆಯೇ ಅದನ್ನು ಎರಡು ದೇಶಗಳ-ಸಂಸ್ಕೃತಿಗಳ ನಡುವಿನ ಕತೆಯಾಗಿ, ನಾವು-ಅವರುಗಳ (ಸ್ವ-ಅನ್ಯ) ನಡುವಿನ ತಿಕ್ಕಾಟದ ಕತೆಯಾಗಿ ಅರ್ಥಮಾಡಿಕೊಳ್ಳಲಾಗಿದೆ. ಅದೇ ರೀತಿ ಈ ಕತೆಯನ್ನು ವ್ಯಕ್ತಿ-ಸಮಾಜಗಳು ಬೆಳೆಯುತ್ತಾ ನಾನಾ ಬಗೆಯ ವಿಕಾರಗಳನ್ನು ಹೇಗೆ ಮೈಗೂಡಿಸಿಕೊಳ್ಳುತ್ತವೆ ಎಂಬುದರ ಉದಾಹರಣೆಯಾಗಿಯೂ ನೋಡಬಹುದು.

ಆರಂಭದಿಂದಲೇ ಮಿನಿ ಎಂಬ ಹುಡುಗಿ ಹೇಗೆ ಮಹಾ ಮುಗ್ಧೆಯೂ ಮಹಾ ವಾಚಾಳಿಯೂ ಆಗಿದ್ದಾಳೆ ಎಂಬುದನ್ನು ʼಕಾಬೂಲಿವಾಲʼ ಕತೆ ವಿವರಿಸುತ್ತದೆ. “ಅಪ್ಪಾ ನಿನಗೆ ಅಮ್ಮ ಏನಾಗಬೇಕು?” ಎಂದು ಪುಟ್ಟ ಮಿನಿ ತನ್ನ ತಂದೆಯನ್ನು ಬಹಳ ಮುಗ್ಧವಾಗಿ ಕೇಳುತ್ತಾಳೆ. ಒಬ್ಬರು ಇನ್ನೊಬ್ಬರಿಗೆ ಏನಾಗಬೇಕು ಎಂಬ ಪರಸ್ಪರ ಸಂಬಂಧದ ಸ್ವರೂಪದ ಮೇಲೆಯೇ ಎಲ್ಲ ವ್ಯವಹಾರಗಳೂ-ಎಲ್ಲ ಮೌಲ್ಯಗಳೂ ನಿರ್ಧಾರವಾಗುವ ಸಂದರ್ಭದಲ್ಲಿ ಮಿನಿ ಎಂಥವಳು ಎಂದರೆ ಯಾರು ಯಾರಿಗೆ ಏನಾಗಬೇಕು ಎಂಬುದರ ಬಗ್ಗೆ ಯಾವ ಖಚಿತತೆ ಇಲ್ಲದೆಯೂ ಎಲ್ಲರೂ ಎಲ್ಲರಿಗೂ-ಎಲ್ಲವೂ ಆಗಬಹುದು ಆಗಬಹುದು ಎಂದು ನಂಬಿರುವವಳು.

(ರವೀಂದ್ರನಾಥ ಟ್ಯಾಗೋರ್)

ಸಂಬಂಧಗಳ ಸ್ವರೂಪ ಸ್ಪಷ್ಟವಾಗುವುದೇ ನಾನು ನಿನಗೇನಾಗಬೇಕು, ಅವನು ಅವಳಿಗೇನಾಗಬೇಕು, ನೀನು ದೇಶಕ್ಕೇನಾಗಬೇಕು ಎಂಬ ಸ್ವ ನಿರೂಪಣೆಯ (self definition) ವಿವರಣೆಗಳಿಂದ. ಅದರೆ ಮಿನಿಗೆ ಇಂಥ ಸ್ವನಿರೂಪಣೆಯ ಹಂಗುಗಳಿಲ್ಲ. ಹಾಗಾಗಿ ಯಾರು ಯಾರಿಗೂ ಏನೂ ಆಗದೆಯೇ ಎಲ್ಲವೂ ಆಗಬಹುದು- ಆಗಬೇಕು ಎಂದು ಯೋಚಿಸುವುದೇ ಬಹಳ ಅದ್ಭುತವಾದ ಸಂಗತಿಯಾಗಿ ಕಾಣುತ್ತದೆ.

ಇಂತಿರುವಾಗ ಇನ್ನೊಂದು ಕಡೆ ಮಿನಿಯ ತಂದೆ ಒಬ್ಬ ಕತೆಗಾರ/ಕಾದಂಬರಿಕಾರ ಎಂಬ ಅಂಶ ಮೊದಲಿಗೇ ಕತೆಯಲ್ಲಿ ಸೂಚಿತವಾಗಿದೆ. ಅವನು ಎಂಥ ಕತೆಗಾರನೆಂದರೆ- ತಾನು ಬರೆಯುತ್ತಿರುವ ಕಾದಂಬರಿಯ 17 ನೇ ಅಧ್ಯಾಯದಲ್ಲಿ ಪ್ರತಾಪಸಿಂಹನೆಂಬುವವನು ತನ್ನ ಪ್ರೇಯಸಿ ಕಾಂಚನಮಾಲೆಯನ್ನು ಹೇಗೆ ರಕ್ಷಿಸಬೇಕು ಎಂಬ ಬಗ್ಗೆ ಬಹು ಕಾಳಜಿಯಿಂದ ಯೋಚಿಸುವವನೇ ಹೊರತು, ಒಬ್ಬ ವ್ಯಕ್ತಿಯಾಗಿ ಸಮಾಜದ ಇತರ ವ್ಯಕ್ತಿಗಳ ಜೊತೆ ಹೇಗೆ ಸಹಜವಾದ ಸೌಹಾರ್ದಪೂರ್ಣವಾದ ಸಂಬಂಧಗಳನ್ನು ರೂಢಿಸಿಕೊಳ್ಳಬೇಕು ಎಂಬುದರ ಬಗ್ಗೆ ಅಷ್ಟೇನೂ ಚಿಂತಿಸುವ ವ್ಯಕ್ತಿಯಂತೆ ಕಾಣುವುದಿಲ್ಲ. ಹಾಗಾಗಿ ಆತ ಬರಹಗಾರನಾಗಿದ್ದರೂ ನಮ್ಮ ನಿಮ್ಮಂಥ ಮಧ್ಯಮವರ್ಗದ ಮಾಮೂಲಿ ಪ್ರಜೆಯೇ. ಹೋಲಿಕೆಯಲ್ಲಿ ಕತೆಗಾರನ ಹೆಂಡತಿಯೂ ಆಗಿರುವ ಮಿನಿಯ ತಾಯಿ ಅವನಿಗಿಂತ ಹೆಚ್ಚು ಭಿನ್ನವಾಗಿಲ್ಲ. ಆಕೆ ತನ್ನ ಮನೆಮಾರು, ಮಕ್ಕಳ ಲೋಕದಲ್ಲಿ ಎಷ್ಟು ನೆಲೆಯೂರಿದ್ದಾಳೆಂದರೆ, ತಾನಲ್ಲದೆ ಇನ್ನೊಬ್ಬರನ್ನು ಕಂಡರೆ ಅವನು ತನ್ನ ಕುಟುಂಬವೆಂಬ ಸುಮಧುರ ಕನಸನ್ನು ಭಂಗಗೊಳಿಸುವ ಅಥವಾ ಮಗಳು ಮಿನಿಯನ್ನು ಕಂಡೊಡನೆ ಜೋಳಿಗೆಯಲ್ಲಿ ಹಾಕಿಕೊಂಡು ಕದ್ದೊಯ್ಯುವ ಕ್ರೂರ ವ್ಯಕ್ತಿಯಂತೆ ಕಾಣುತ್ತಾನೆ.

ಹೀಗಿರುವಾಗ ಮಿನಿಯ ಮನೆಗೆ, ಮನೆ ಮನೆಗೆ ದ್ರಾಕ್ಷಿ ಖರ್ಜೂರ ಬಾದಾಮಿಗಳನ್ನು ಮಾರುವ ಧಡೂತಿ ದೇಹದ ಆಫ್ಘಾನಿಸ್ತಾನದ ಕಾಬೂಲಿವಾಲ ಬರುತ್ತಾನೆ. ಮಿನಿಗೂ ಸಹ ಕಾಬೂಲಿವಾಲನನ್ನು ಕಂಡರೆ ಅನುಮಾನ ಭಯಗಳಿದ್ದರೂ ಅದು ಕ್ರಮೇಣ ಸ್ನೇಹವಾಗಿ ಪರಿಣಮಿಸಿದೆ. ನಿಧಾನವಾಗಿ ಮಿನಿ ಕಾಬೂಲಿವಾಲನ ನಡುವಣ ಸ್ನೇಹ ಕಾಲದೇಶ ವಯಸ್ಸು ಸಂಬಂಧಗಳ ಗಡಿತಡೆಗಳಾಚೆ ಬಹಳ ನಿರ್ಮಮವಾಗಿ ಸಹಜವಾಗಿ ರೂಪುಗೊಂಡಿದೆ.

ಟ್ಯಾಗೋರರ ಪ್ರಮುಖ ಕೃತಿಗಳಲ್ಲಿ ವ್ಯಕ್ತಿ-ದೇಶ, ಪೂರ್ವ-ಪಶ್ಚಿಮ, ಸಂಪ್ರದಾಯ-ಆಧುನಿಕತೆಗಳ ವೈರುಧ್ಯಗಳ ನಡುವೆ ವ್ಯಕ್ತಿಯ ಅಸ್ತಿತ್ವ-ನಂಬಿಕೆಗಳು, ಸಾಮಾಜಿಕ ಮೌಲ್ಯಗಳು, ಸಿದ್ಧಾಂತಗಳು ಹಾಗೂ ಸಂಸ್ಕೃತಿಯ ರೂಢಿಗತ ವಿಚಾರಗಳನ್ನು ಪರೀಕ್ಷಿಸಿ ನೋಡುವ ಮಾದರಿಯನ್ನು ಕಾಣುತ್ತೇವೆ. “ಗೋರಾ” ಕಾದಂಬರಿಯಲ್ಲಿ ವ್ಯಕ್ತಿ ಹಾಗೂ ರಾಷ್ಟ್ರೀಯತೆಯ ಮೌಲ್ಯಗಳ ನಡುವೆ, “ಮನೆ ಮತ್ತು ಜಗತ್ತು”, “ಚಾರ್ ಅಧ್ಯಾಯ್” ಗಳಲ್ಲಿ ಪೂರ್ವಪಶ್ಚಿಮದ ನಡುವಣ ನಂಬಿಕೆಗಳ ನಡುವೆ, “ಮುಕ್ತಧಾರಾ”, “ಕೆಂಪುಕಣಗಿಲೆ”ಯಂಥ ನಾಟಕಗಳಲ್ಲಿ ಆಧುನಿಕತೆ, ವಿಜ್ಞಾನ, ಸಂಪ್ರದಾಯಗಳ ನಡುವಿನ ಸಂಘರ್ಷವನ್ನು ಕಾಣಬಹುದು.

ಇವೆಲ್ಲವುಕ್ಕಿಂತ ಭಿನ್ನವಾಗಿ ಈ ಕತೆಯಲ್ಲಿ ಟ್ಯಾಗೋರರು ಮಿನಿಯ ನಿಷ್ಕಲ್ಮಷವಾದ ಆದಿಮ ಮುಗ್ಧತೆಯ ಮೂಲಕ ಸಮಾಜದ ಬಿರುಕುಗಳನ್ನು, ಧರ್ಮ, ದೇಶ, ಭಾಷೆ, ಗಡಿಗಳ ವಿಂಗಡಣೆಗಳನ್ನು ಮೀರುವ ಪ್ರಯತ್ನ ಮಾಡಿದ್ದಾರೆ. ಟ್ಯಾಗೋರರು 1907 ರಲ್ಲಿ ಬರೆದ “ಗೋರಾ” ಕಾದಂಬರಿಗಿಂತ ಮೊದಲು, 1916 ರಲ್ಲಿ ಬರೆದ “ಮನೆ ಮತ್ತು ಜಗತ್ತು”, 1934 ರಲ್ಲಿ ಬರೆದ “ಚಾರ್ ಅಧ್ಯಾಯ್” ಕಾದಂಬರಿಗಳಿಗಿಂತ ಬಹುಮುಂಚೆಯೇ 1892ರಲ್ಲಿ ಬರೆದ “ಕಾಬೂಲಿವಾಲಾ” ಕತೆಯಲ್ಲಿ ಮಿನಿಯ ಅಪಾರ ಮುಗ್ಧತೆಯ ಮೂಲಕ, ಅತ್ಯುತ್ತಮ ಮಾನವೀಯ ಸಂಬಂಧಗಳ ಮೂಲಕ ದೇಶ ಭಾಷೆ ಧರ್ಮದ ಗಡಿಗಳನ್ನು ಮೀರಲು ಸಾಧ್ಯವೇ ಎಂದು ಯೋಚಿಸಿದಂತೆ ಇದೆ.
ಕತೆಯ ಒಳವಿವರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಆರಂಭದಲ್ಲಿ ಅವನ ಆಕಾರ ಭಾಷೆ ವೇಷ ಭೂಷಣಗಳ ಕಾರಣದಿಂದ ಕೇವಲ ಕಾಬೂಲಿವಾಲನಾಗಿದ್ದ ವ್ಯಕ್ತಿ ನಿಧಾನವಾಗಿ ರಹಮತ್ ಖಾನನಾಗಿದ್ದಾನೆ. ಕಾಬೂಲಿವಾಲ ಹಾಗೂ ಮಿನಿಯ ನಡುವೆ ನಿಧಾನವಾಗಿ ಗಟ್ಟಿಗೊಳ್ಳುತ್ತಿರುವ ಸ್ನೇಹಕ್ಕೆ ಅವಳ ತಂದೆಯ ಸಮ್ಮತಿ ಇಲ್ಲದಿದ್ದರೂ ಮಿನಿಯ ತಾಯಿಯಂತೆ ಬಲವಾದ ವಿರೋಧವಿಲ್ಲ.

ನಿತ್ಯವೂ ಕಾಬೂಲಿವಾಲ ಬಂದು ಮಿನಿಯ ಜೊತೆ ಆಟವಾಡುತ್ತ ಅವಳಿಗೆ ದ್ರಾಕ್ಷಿ ಗೋಡಂಬಿ ನೀಡುತ್ತ ಇನ್ನಷ್ಟು ಆತ್ಮೀಯವಾಗುತ್ತಿರುವ ಹೊತ್ತಿನಲ್ಲಿ ಕಾಬೂಲಿವಾಲ ತನಗೆ ಸಾಲ ನೀಡಬೇಕಾಗಿದ್ದ ವ್ಯಕ್ತಿಯೊಬ್ಬನ ಬಳಿ ಜಗಳವಾಡಿ- ಈ ಜಗಳ ವಿಕೋಪಕ್ಕೆ ತಿರುಗಿ ಹಣ ವಾಪಸು ಕೊಡದ ವ್ಯಕ್ತಿಗೆ ಕಾಬೂಲಿವಾಲ ಚಾಕುವಿನಿಂದ ಇರಿದು ಜೈಲು ಸೇರುವಂತಾಗುತ್ತದೆ. ರಹಮತ್ ಖಾನನನ್ನು ಪೊಲೀಸರು ಜೈಲಿಗೆ ಕರೆದೊಯ್ಯುವಾಗ ಏನನ್ನೂ ಅರಿಯದ ಮಿನಿ ‘ಮಾವನ ಮನೆಗೆ ಹೋಗುತ್ತೀಯಾ’ ಎಂದು ಅವನನ್ನೇ ಕೇಳುತ್ತಾಳೆ. ಹಾಗೆ ನೋಡಿದರೆ ಕಾಬೂಲಿವಾಲ ಮಿನಿಯನ್ನು ಭೇಟಿ ಮಾಡಿದಾಗಲೆಲ್ಲ ‘ಮಾವನ ಮನೆಗೆ ಹೋಗುತ್ತೀಯಾ’ ಎಂದು ಮತ್ತೆ ಮತ್ತೆ ಛೇಡಿಸುತ್ತಲೇ ಬಂದಿದ್ದಾನೆ. ಹೀಗೆ ಒಬ್ಬರನ್ನೊಬ್ಬರು ಛೇಡಿಸಿಕೊಳ್ಳುತ್ತಿರುವ ಕಾಬೂಲಿವಾಲ ಮತ್ತು ಮಿನಿಯರನ್ನು ನೋಡಿದರೆ ಅವರು ಸಮಾಜದ ಎಲ್ಲವನ್ನೂ ವಿಂಗಡಿಸಿ ನೋಡುವ ಬಗೆದು ಇಬ್ಭಾಗ ಮಾಡುವ ಇತರರಿಗಿಂತ ಬಹಳ ಭಿನ್ನವಾದ ವ್ಯಕ್ತಿಗಳಾಗಿದ್ದಾರೆ.

ಮಿನಿಗೂ ಸಹ ಕಾಬೂಲಿವಾಲನನ್ನು ಕಂಡರೆ ಅನುಮಾನ ಭಯಗಳಿದ್ದರೂ ಅದು ಕ್ರಮೇಣ ಸ್ನೇಹವಾಗಿ ಪರಿಣಮಿಸಿದೆ. ನಿಧಾನವಾಗಿ ಮಿನಿ ಕಾಬೂಲಿವಾಲನ ನಡುವಣ ಸ್ನೇಹ ಕಾಲದೇಶ ವಯಸ್ಸು ಸಂಬಂಧಗಳ ಗಡಿತಡೆಗಳಾಚೆ ಬಹಳ ನಿರ್ಮಲವಾಗಿ ಸಹಜವಾಗಿ ರೂಪುಗೊಂಡಿದೆ.

ಮೊದಲೇ ಹೇಳಿದಂತೆ ಅವರು ಧರ್ಮಭಾಷೆ ವಯಸ್ಸು ದೇಶ ಕೋರ್ಟು ಜೈಲುಗಳನ್ನು ಮೀರಿದ ಶುದ್ಧ ಮನುಷ್ಯರಾಗಿದ್ದಾರೆ. ಬಹಳ ವಿಶೇಷವಾದ ಸಂಗತಿಯೆಂದರೆ, ಹೊಸ ಸಮಾಜ, ಹೊಸ ದೇಶ, ಹೊಸ ರಾಷ್ಟ್ರದ ಹೊಸ್ತಿಲಲ್ಲಿ ನಿಂತು ಕಾಬೂಲಿವಾಲ ಮಿನಿಯರಂಥ ಸಹಜೀವಿಗಳನ್ನು ಟ್ಯಾಗೋರರು ಸೃಷ್ಟಿಸುತ್ತಿರುವುದು ಬಹಳ ವಿಶೇಷವಾದ ಸಂಗತಿಯಾಗಿದೆ.

ದುರಂತವೆಂದರೆ, ಕಾಬೂಲಿವಾಲ ಮಿನಿಯರು ಎಲ್ಲ ಕಾಲದಲ್ಲಿಯೂ ಹಾಗೆಯೇ ಇರಲು ಸಾಧ್ಯವಿಲ್ಲ ಎಂಬ ದುರಂತ ಸತ್ಯವನ್ನು ಕತೆ ತನ್ನ ಉತ್ತರಾರ್ಧದಲ್ಲಿ ಹೇಳುತ್ತದೆ. ಕಾಬೂಲಿವಾಲ ಜೈಲು ಸೇರಿ ಎಷ್ಟೋ ವರ್ಷಗಳಾದ ಮೇಲೆ ಜೈಲುವಾಸ ಮುಗಿಸಿ ಮಿನಿಯ ಜೊತೆಗಿನ ಹಳೆಯ ಸ್ನೇಹ, ಬಾಂಧವ್ಯವನ್ನು ಬಯಸಿ ಮತ್ತೆ ಹುಡುಕಿಕೊಂಡು ಅವಳ ಮನೆಗೆ ಬರುತ್ತಾನೆ. ಆದರೆ ಅವನು ಬಂದ ದಿನವೇ ಮಿನಿಯ ಮದುವೆ ನಡೆಯುತ್ತಿರುವ ಕಾರಣದಿಂದ ಅವನ ಆಗಮನ ವಿಚಿತ್ರ ಸಂದಿಗ್ಧಗಳನ್ನು ಹುಟ್ಟುಹಾಕಿದೆ. ಅದರಲ್ಲೂ ಮದುವೆಯ ಶುಭದಿನದಂದು ಕಾಬೂಲಿವಾಲನಂಥ ಕೊಲೆಗಡುಕನೊಬ್ಬ ತನ್ನ ನೆಂಟರಿಷ್ಟರ ಬಿರಾದರಿಯ ನಡುವೆ ಬಂದುಬಿಟ್ಟನಲ್ಲ ಎಂದು ಕತೆಗಾರನಾಗಿರುವ ಮಿನಿಯ ತಂದೆಗೆ ಬಹಳ ಕಸಿವಿಸಿಯಾಗಿದೆ. ಆದ್ದರಿಂದಲೇ ಮಿನಿಯನ್ನು ನೋಡಿ ಮಾತಾಡಿಸಬೇಕೆಂಬ ಕಾಬೂಲಿವಾಲನ ಆಸೆಯನ್ನು ಈಡೇರಿಸಲು ಅವನು ಸಿದ್ಧನಾಗಿಲ್ಲ.

ಮಿನಿಯನ್ನು ನೋಡಲು ಸಾಧ್ಯವಾಗುವುದಿಲ್ಲ ಎಂದು ಗೊತ್ತಾದ ಮೇಲೆ ಕಾಬೂಲಿವಾಲ ಇನ್ನೇನು ಹೊರಡಬೇಕು ಎನ್ನುವಾಗ ಅವಳಿಗಾಗಿ ತಂದಿದ್ದ ಹಣ್ಣುಗಳ ಪೊಟ್ಟಣವೊಂದನ್ನು ಅವಳ ತಂದೆಯ ಕೈಗಿಡುತ್ತಾನೆ. ಅದಕ್ಕೆ ಹಣ ಕೊಡಲು ಹೋದ ಮಿನಿಯ ತಂದೆಗೆ ಮಿನಿ ತನ್ನ ಮಗಳಿದ್ದ ಹಾಗೆ ಅವಳಿಗೆ ನೀಡುವ ಉಡುಗೊರೆಯನ್ನು ಹಣದಿಂದ ಅಳೆದು ಅವಳ ಬಗೆಗಿನ ಪ್ರೀತಿಯ ಮೌಲ್ಯವನ್ನು ನಿಕೃಷ್ಟಗೊಳಿಸಬೇಡಿ ಎಂದು ಹೇಳುತ್ತಾನೆ. ಹೀಗೆ ಹೇಳುವ ಮೂಲಕ ಕಾಬೂಲಿವಾಲ ಹಾಗೂ ಮಿನಿ ಕಾಲ ದೇಶ ಧರ್ಮ ಭಾಷೆಗಳನ್ನು ಮೀರಿದ ನೆಲೆಯಲ್ಲಿ ತಂದೆ-ಮಗಳಾಗಿ ರೂಪಾಂತರಗೊಳ್ಳುತ್ತಾರೆ.

ಕತೆಯ ನಿಜವಾದ ವ್ಯಂಗ್ಯ ಇರುವುದು, ಕಾಬೂಲಿವಾಲ ಮತ್ತು ಮಿನಿಯ ಭೇಟಿಯಲ್ಲಿ. ಮದುವೆಯ ಸಡಗರದಲ್ಲಿರುವ ಮಿನಿಯನ್ನು ಕಾಬೂಲಿವಾಲ ಭೇಟಿಯಾಗಿ ಅವಳನ್ನು ಮೊದಲಿನ ಅಕ್ಕರೆಯಿಂದ ‘ಮಾವನ ಮನೆಗೆ ಹೋಗ್ತಿಯಾ?’ ಎಂದು ಮಾತಾಡಿಸುತ್ತಾನೆ. ಆದರೆ ಅವಳಿಂದ ಮೊದಲಿನಂತೆ ಯಾವುದೇ ಉತ್ಸಾಹಪೂರ್ಣ ಉತ್ತರ ಬರುವುದಿಲ್ಲ. ಗಮನಿಸಬೇಕಾದ ಸಂಗತಿಯೇನೆಂದರೆ ಈಗ ಮಿನಿ ಮೊದಲಿನ ಮಿನಿಯಾಗಿ ಉಳಿದಿಲ್ಲ. ಹಾಗಾಗಿ ಆಕೆ ಕಾಬೂಲಿವಾಲನ ಜೊತೆ ಮೊದಲಿನ ಆತ್ಮೀಯತೆಯಿಂದ ಮಾತನಾಡಲು ಸಾಧ್ಯವಿಲ್ಲ. ಅವರಿಬ್ಬರ ನಡುವೆ ಅಂತರವೊಂದು ಬಾಯ್ದೆರೆದು ಇಬ್ಬರ ಸಂಬಂಧ ನೀಟಾಗಿ ವಿಭಜನೆಗೊಂಡು ಸ್ಪಷ್ಟವಾದ ವಿಂಗಡಣೆಗೆ ಒಳಗಾಗಿದೆ. ಅಷ್ಟೇ ಅಲ್ಲ ಮಿನಿ ಕೇವಲ ಕಾಬೂಲಿವಾಲನ ಜೊತೆ ಮಾತ್ರವಲ್ಲ, ಸ್ವತಃ ತಂದೆಯ ಜೊತೆಗೂ ಆಕೆ ಒಂದು ಬಗೆಯ ಸದೂರವನ್ನು ಕಾಯ್ದುಕೊಂಡು ಪರಸ್ಪರ ಮನೆಯೊಳಗಿದ್ದೇ ಇಬ್ಬರೂ ಒಬ್ಬರಿಗೊಬ್ಬರು ಅಪರಿಚಿತರಂತಾಗಿದ್ದಾರೆ. ಮಿನಿಯಂಥ ಮುಗ್ಧಜೀವಿ ತನ್ನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಸಮಾಜದ ರೀತಿನೀತಿ, ಕೃತಕ ವಿಂಗಡಣೆಗಳ ಉಸುಕಿನಲ್ಲಿ ಹೇಗೆ ಕಾಣೆಯಾಗುತ್ತಾಳೆ ಎಂಬುದರ ಉದಾಹರಣೆಯಾಗಿ ಕತೆ ನಮಗೆ ಕಾಣಿಸುತ್ತದೆ.

ಬೆಳೆಯುತ್ತ ಬೆಳೆಯುತ್ತ ವ್ಯಕ್ತಿ ಸಮಾಜಗಳು ಪ್ರಪಂಚದ ನಾನಾ ವಿಕಾರಗಳನ್ನು ಮೈಗಂಟಿಸಿಕೊಂಡು ವಿಕರಾಳ ಸ್ವರೂಪ ಪಡೆದುಕೊಳ್ಳುತ್ತವೆ ಎಂಬುದನ್ನು ಕತೆ ಸೂಚಿಸುತ್ತದೆ. ಹಾಗಾಗಿ “ಕಾಬೂಲಿವಾಲಾ” ಕತೆ ಬೆಳೆಯುವವರಿಗೂ ಬೆಳೆದು ನಿಂತಿರುವವರಿಗೂ ಏಕಕಾಲಕ್ಕೆ ಸಹಭಾವದ ಅಗತ್ಯವನ್ನು ತೋರಿಸುತ್ತದೆ.

ಕಾಬೂಲಿವಾಲಾ ಹಾಗೂ ಮಿನಿಯ ನಡುವಿನ ಸಂಬಂಧದ ಸ್ವರೂಪದಲ್ಲಿ ಆಗಿರುವ ಬದಲಾವಣೆಯನ್ನು ಚರ್ಚಿಸಿದಂತೆಯೇ ಕತೆಯ ನಿರೂಪಕ ಮಿನಿಯ ತಂದೆಯ ವ್ಯಕ್ತಿತ್ವದಲ್ಲಿ ಆಗಿರುವ ಒಟ್ಟಾರೆ ಬದಲಾವಣೆಯನ್ನು ವಿವರವಾಗಿ ಉಲ್ಲೇಖಿಸಬೇಕಾಗಿದೆ. ಆರಂಭದಲ್ಲಿ ತನ್ನ ಕಾದಂಬರಿಯ ಕಥಾನಾಯಕ, ನಾಯಕಿಯನ್ನು ಹೇಗೆ ರಕ್ಷಿಸಬಹುದು ಎಂಬುದರ ಬಗ್ಗೆ ಮಾತ್ರ ಚಿಂತಿತನಾಗಿರುವ ನಿರೂಪಕ ತನ್ನ ಕುಟುಂಬದವರಿಗೆ, ಸುತ್ತಲಿನ ಸಮಾಜದಲ್ಲಿರುವ ಪಾತ್ರಗಳಿಗೆ ಅವುಗಳ ಸಾಮಾಜಿಕ ಹಾಗೂ ಮಾನಸಿಕ ವಿಕಾಸಕ್ಕೆ ಬಂದೊದಗುತ್ತಿರುವ ಆತಂಕಗಳ ಬಗ್ಗೆ ಯೋಚಿಸುತ್ತಿಲ್ಲ. ಅವನು ಆರಂಭದಿಂದಲೂ ಮಿನಿಯಷ್ಟು ಮುಗ್ಧವಾಗಿ, ತೆರೆದ ಮನಸಿನಿಂದ ಕಾಬೂಲಿವಾಲನನ್ನು ಒಪ್ಪಿಕೊಂಡಿಲ್ಲ ಎಂಬುದನ್ನು ಗಮನಿಸಬೇಕು.

ಅವನಿಗೆ ತನ್ನ ಹೆಂಡತಿಯಷ್ಟಲ್ಲದಿದ್ದರೂ ಅದೇ ರೀತಿಯ ಗುಮಾನಿಗಳು ಇದ್ದೇ ಇವೆ. ಎಷ್ಟಾದರೂ ಅವನು ಕಾಬೂಲಿವಾಲಾನನ್ನು ನೋಡಿ ಆಫ್ಘಾನಿಸ್ತಾನದ ರಮ್ಯಕಣಿವೆಗಳು, ಕಾಡು ನದಿಗಳನ್ನು ತನ್ನ ಕೋಣೆಯಲ್ಲಿಯೇ ಕಲ್ಪಿಸಿಕೊಂಡು “ಚಿರಪ್ರವಾಸಿ”ಯಾಗಿ ಬಿಡುವಂಥವನು. ಅಂಥ ಮಧ್ಯಮವರ್ಗದ ರಮ್ಯಮನೋವೃತ್ತಿಯ ನಿರೂಪಕನಿಗೆ ಕಾಬೂಲಿವಾಲ ಮಿನಿಯಲ್ಲಿ ತನ್ನ ಮಗಳನ್ನು ಕಾಣುತ್ತಿದ್ದಾನೆ ಎಂದು ಅರಿತಾಗ “ನನ್ನ ಕಣ್ಣು ತಕ್ಷಣ ಒದ್ದೆಯಾಯಿತು. ಅವನು ದ್ರಾಕ್ಷಿ ಬಾದಾಮಿ ಮಾರುವ ಕಾಬೂಲಿ ಮತ್ತು ನಾನೊಬ್ಬ ಬಂಗಾಳಿ ಸದ್ಗೃಹಸ್ತ ಎಂಬುದನ್ನು ಮರೆತುಬಿಟ್ಟೆ. ಆಗ ನಾನು ಅರ್ಥ ಮಾಡಿಕೊಂಡೆ. ನಾನು ಹೇಗೋ ಅವನೂ ಹಾಗೆಯೇ. ನಾನೂ ತಂದೆ ಅವನೂ ತಂದೆ” ಎಂಬ ಅರಿವನ್ನು ಪಡೆದುಕೊಳ್ಳುತ್ತಾನೆ. ಅದಕ್ಕಾಗಿಯೇ “ಕಾಬೂಲಿವಾಲ” ಕತೆ ಬೆಳೆಯುವವರಿಗಾಗಿ, ಬೆಳೆದಿರುವವರಿಗಾಗಿ ಬರೆದಿರುವ ಕತೆ.


ಹಲವು ಬಗೆಯ ತರತಮಗಳು, ಭೇದಭಾವವನ್ನು ಅರಿಯದ ಆದಿಮ ಸಮಾಜಗಳು ತಮ್ಮ ವಿಕಾಸದ ಹಲವು ಹಂತಗಳಲ್ಲಿ ನಿಧಾನಕ್ಕೆ ಭಾಷೆ ಆಹಾರ, ಸಂಸ್ಕೃತಿ, ರಾಷ್ಟ್ರ, ಪ್ರಭುತ್ವ, ದೇಶ, ಧರ್ಮ, ಗಡಿಗಳೆಂಬ ವಿಂಗಡಣೆಗಳನ್ನು ರೂಢಿಸಿಕೊಂಡು ತಮ್ಮೊಳಗೆ ಅನೂಚಾನವಾಗಿ ನೆಲೆಯೂರಿದ್ದ ಮುಗ್ಧತೆಯನ್ನು ಕಳೆದುಕೊಂಡು ವಿಕಾರ ಸ್ವರೂಪವನ್ನು ಪಡೆದುಕೊಳ್ಳುತ್ತವೆ ಎಂದು ಹಲವು ಚಿಂತಕರು ಅಭಿಪ್ರಾಯಪಡುತ್ತಾರೆ. ಪುತಿನ ಅವರ “ಗೋಕುಲ ನಿರ್ಗಮನ” ನಾಟಕವೂ ನಂದನವನದ ಆದಿಮ ಮಗ್ಧತೆಯನ್ನು ಕಳೆದುಕೊಂಡು ಹಸ್ತಿನಾಪುರದ ರಾಜಕಾರಣದ ಕುಟಿಲ ತಂತ್ರಗಳಲ್ಲಿ ಕಳೆದುಹೋಗುವ ಕೃಷ್ಣನ ದುರಂತದ ಕತೆ. ಹಾಗೆಯೇ ಟ್ಯಾಗೋರರ “ಕಾಬೂಲಿವಾಲ” ಕತೆಯೂ.