‘ಭೌತಶಾಸ್ತ್ರಜ್ಞರ ಕಾಲ’ ಮತ್ತು ‘ತತ್ವಶಾಸ್ತ್ರಜ್ಞರ ಕಾಲ’ ಇವೆರಡೂ ಬೇರೆಯದೇ ಎಂಬುದಾಗಿ ತತ್ವಶಾಸ್ತ್ರಜ್ಞ ಹೆನ್ರಿ ಬೆರ್ಗ್‌ಸನ್ ಪ್ರತಿಪಾದಿಸಿದರೆ, ‘ತತ್ವಶಾಸ್ತ್ರಜ್ಞರ ಕಾಲ ಎನ್ನುವುದು ಇಲ್ಲ; ಇರುವುದು ಮಾನಸಿಕ ಮತ್ತು ಭೌತಿಕ ಕಾಲಗಳ ವ್ಯತ್ಯಾಸ ಅಷ್ಟೇ’ ಎಂದು ವಿಜ್ಞಾನಿ ಐನ್ ಸ್ಟೈನ್ ವ್ಯಾಖ್ಯಾನಿಸುತ್ತಾನೆ. ಕಾಲದ ಪರಿಕಲ್ಪನೆ ಕುರಿತು ಐನ್ ಸ್ಟೈನ್ ಮತ್ತು ಹೆನ್ರಿ ಬೆರ್ಗ್‌ಸನ್ ನಡುವೆ ನಡೆದ ವಾದ ಸರಣಿಯ ಒಂದು ವಿಶ್ಲೇಷಣೆಯನ್ನು ಶೇಷಾದ್ರಿ ಗಂಜೂರು ಇಲ್ಲಿ ಪ್ರಸ್ತುತಪಡಿಸಿದ್ದಾರೆ.

 

ಐನ್‌ಸ್ಟೈನ್ ೧೯೧೫ರಲ್ಲೇ ತನ್ನ ಕ್ರಾಂತಿಕಾರಕ “ಜೆನೆರಲ್ ಥಿಯರಿ ಆಫ್ ರಿಲೆಟಿವಿಟಿ”ಯನ್ನು ಪ್ರಕಟಿಸಿದ್ದರೂ, ಅದು ಲೋಕ ಪ್ರಸಿದ್ಧವಾಗಿದ್ದು ಬ್ರಿಟಿಷ್ ವಿಜ್ಞಾನಿ ಆರ್ಥರ್ ಎಡ್ಡಿಂಗ್ಟನ್ ೧೯೧೯ರಲ್ಲಿ ಆ ಸಿದ್ಧಾಂತಕ್ಕೆ ಸಾಕ್ಷ್ಯವನ್ನು ಒದಗಿಸಿದ ನಂತರವೇ. (ಈ ಸರಣಿಯ ಹಿಂದಿನ ಲೇಖನ ನೋಡಿ).

೧೯೨೨ರ ಮಾರ್ಚ್ ಅಂತ್ಯದ ವೇಳೆಗೆ ಐನ್‌ಸ್ಟೈನ್ ಜರ್ಮನಿಯ ಬರ್ಲಿನ್ ನಿಂದ ಫ್ರಾನ್ಸಿನ ಪ್ಯಾರಿಸ್ ಕಡೆಗೆ ಪ್ರಯಾಣ ಬೆಳೆಸಿದ. ಆ ಹೊತ್ತಿಗೆ, ಐನ್‌ಸ್ಟೈನ್ ಮತ್ತು ಆತನ ರಿಲೆಟಿವಿಟಿ ಸಿದ್ಧಾಂತ ಸುವಿಖ್ಯಾತವಾಗಿತ್ತು. ನಾವು ಯಾವುದನ್ನು ವಾಸ್ತವ ಎನ್ನುತ್ತೇವೋ ಅದಕ್ಕೊಂದು ಹೊಸ – ಗಣಿತ ಮತ್ತು ವೈಜ್ಞಾನಿಕ ಆಧಾರಗಳುಳ್ಳ – ವ್ಯಾಖ್ಯಾನ ಒದಗಿಸಿದ ಅವನ ಈ ಥಿಯರಿ, ವಿಜ್ಞಾನಿಗಳಲ್ಲಷ್ಟೇ ಅಲ್ಲ, ಜನ-ಸಾಮಾನ್ಯರಲ್ಲೂ ಅಪಾರ ಕುತೂಹಲ ಕೆರಳಿಸಿತ್ತು. ಅವನು ಅಷ್ಟು ಹೊತ್ತಿಗಾಗಲೇ ಬ್ರಿಟನ್, ಅಮೆರಿಕಗಳನ್ನು ಸುತ್ತಿ ಬಂದಾಗಿತ್ತು; ಅಲ್ಲಿನ “ಹೌಸ್-ಫುಲ್” ಸಭಾಂಗಣಗಳಲ್ಲಿ ಉಪನ್ಯಾಸಗಳನ್ನು ನೀಡಿಯೂ ಆಗಿತ್ತು. ಆದರೂ, ಅವನ ಈ ಫ್ರೆಂಚ್ ಯಾತ್ರೆ ಆ ಕಾಲಘಟ್ಟದಲ್ಲಿ ವಿಶೇಷವಾಗಿತ್ತು.

ಪ್ರಥಮ ಮಹಾಯುದ್ಧ ಮುಗಿದು ಹಲವು ವರ್ಷಗಳೇ ಆಗಿದ್ದರೂ, ಫ್ರೆಂಚ್ ಮತ್ತು ಜರ್ಮನರ ಮಧ್ಯದ ವೈಮನಸ್ಯ ಪೂರ್ಣವಾಗಿ ಮಾಸಿರಲಿಲ್ಲ. ವೈಜ್ಞಾನಿಕ ಕಾನ್ಫರೆನ್ಸ್‌ಗಳಿಂದ ಜರ್ಮನ್ ವಿಜ್ಞಾನಿಗಳನ್ನು ಹೊರಗಿಡುವುದು ಸರ್ವೇಸಾಮಾನ್ಯವಾಗಿತ್ತು. ಐನ್‌ಸ್ಟೈನ್‌ನ ಈ ಯಾತ್ರೆಗೆ ಫ್ರಾನ್ಸ್ ಮತ್ತು ಜರ್ಮನಿ ಎರಡರಲ್ಲೂ ವಿರೋಧಗಳು ವ್ಯಕ್ತವಾಗಿದ್ದವು. ಆ ಮುನ್ನ ಫ್ರಾನ್ಸಿನಿಂದ ಬಂದಿದ್ದ ಎಷ್ಟೋ ಆಮಂತ್ರಣಗಳನ್ನು ಐನ್‌ಸ್ಟೈನ್ ತಾನೇ ಸ್ವತಃ ನಿರಾಕರಿಸಿದ್ದ. ಆದರೆ, ೧೯೨೨ರ ಮಾರ್ಚಿನಲ್ಲಿ ಬಂದ ಈ ಆಮಂತ್ರಣವನ್ನು, ಫ್ರಾನ್ಸ್-ಜರ್ಮನಿಗಳ ನಡುವಿನ ಸಂಬಂಧವನ್ನು ಹಸನಾಗಿಸುವ ಒಂದು ಪ್ರಯತ್ನವೆಂದೇ ಐನ್‌ಸ್ಟೈನ್ ತಿಳಿದಿದ್ದ. ಹೀಗಾಗಿಯೇ ಅವನು ಅದನ್ನು ಒಪ್ಪಿಕೊಂಡಿದ್ದ.

ಐನ್‌ಸ್ಟೈನ್ ಪ್ಯಾರಿಸ್‌ನ ರೈಲು ನಿಲ್ದಾಣ ತಲುಪಿದಾಗ, ಅಲ್ಲಿ ದೊಡ್ಡದೊಂದು ಜನಜಂಗುಳಿಯೇ ನಿರ್ಮಾಣವಾಗಿತ್ತು. ಪತ್ರಿಕೆಗಳ ವರದಿಗಾರರು, ಫೋಟೋಗ್ರಾಫರ್‌ಗಳಲ್ಲದೇ, ವಿಜ್ಞಾನಾಸಕ್ತರು, ಜನ-ಸಾಮಾನ್ಯರು ತಂಡೋಪತಂಡವಾಗಿ ನೆರೆದಿದ್ದರು. ವಾಸ್ತವದ ಬಗೆಗೆ ನಮ್ಮ ಅನುಭವ ಜನ್ಯ ಆಲೋಚನೆಗಳನ್ನು ತಲೆಕೆಳಗು ಮಾಡಿದ್ದ ಈ ಜರ್ಮನ್ ಯೆಹೂದ್ಯ ವಿಜ್ಞಾನಿ, ಜನಮಾನಸದಲ್ಲಿ ಒಬ್ಬ ಮೂವಿ-ಸ್ಟಾರ್‌ನಂತಾಗಿದ್ದ. ಜನರ ಮುತ್ತಿಗೆಯಿಂದ ತಪ್ಪಿಸಲು, ಆ ದಿನ ಅವನನ್ನು ರೈಲು ನಿಲ್ದಾಣದ ಹಿಂಬಾಗಿಲಿನಿಂದ ಕರೆದೊಯ್ಯಲಾಯಿತು. ಅಷ್ಟೇ ಅಲ್ಲ, ಪ್ಯಾರಿಸಿನಲ್ಲಿ ಅವನಿಗೆ ಒದಗಿಸಿದ್ದ ವಸತಿ ಗೃಹದ ಮಾಹಿತಿಯನ್ನೂ ಗುಪ್ತವಾಗಿಡಲಾಗಿತ್ತು.
ಮುಂದಿನ ಹಲವು ದಿನಗಳಲ್ಲಿ, ಐನ್‌ಸ್ಟೈನ್ ಪ್ಯಾರಿಸಿನ ಹಲವಾರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉಪನ್ಯಾಸಗಳನ್ನು ನೀಡಿದ. ಎಲ್ಲೆಲ್ಲೂ ತುಂಬಿದ ಸಭೆಗಳು. ಕಿವಿಗಡಚಿಕ್ಕುವ ಚಪ್ಪಾಳೆ.

ಏಪ್ರಿಲ್ ೨೨, ೧೯೨೨ರಂದು, ಪ್ಯಾರಿಸಿನ ಫಿಲಾಸಫಿಕಲ್ ಸೊಸೈಟಿಯಲ್ಲಿ ಒಂದು ಕಾರ್ಯಕ್ರಮ ಏರ್ಪಾಡಾಗಿತ್ತು. ಆ ಕಾರ್ಯಕ್ರಮದಲ್ಲಿ, ತನ್ನ ಜೀವನದಲ್ಲಿ ಎಂದೂ ಮರೆಯಲಾಗದ ವ್ಯಕ್ತಿಯೊಬ್ಬನನ್ನು ಭೇಟಿಯಾದ. ಆ ವ್ಯಕ್ತಿಯ ಹೆಸರು ಹೆನ್ರಿ ಬೆರ್ಗ್‌ಸನ್. ಇಂದು ಆತನ ಹೆಸರು ಹೆಚ್ಚಿನವರಿಗೆ ಅಪರಿಚಿತವೆನಿಸಿದರೂ, ಆ ಕಾಲದಲ್ಲಿ ಅವನೊಬ್ಬ ಜಗದ್ವಿಖ್ಯಾತ ತತ್ವಶಾಸ್ತ್ರಜ್ಞ. ಹಲವರ ಪ್ರಕಾರ, ತತ್ವಶಾಸ್ತ್ರದಲ್ಲಿ ಅವನ ಹೆಸರು ಸಾಕ್ರೆಟೆಸ್, ಪ್ಲೇಟೋ ಅಂತಹವರ ಸಾಲಿನಲ್ಲಿ ನಿಲ್ಲುವಂತದು. ಪ್ರಥಮ ಮಹಾಯುದ್ಧದ ನಂತರದಲ್ಲಿ ಜಾಗತಿಕ ಶಾಂತಿಗೆಂದು ಸೃಷ್ಟಿಯಾದ “ಲೀಗ್ ಆಫ್ ನೇಷನ್ಸ್”ನ ಕಾರಣ ಕರ್ತೃಗಳಲ್ಲಿ ಈತನೂ ಒಬ್ಬ. ಅಮೆರಿಕದ ಅಧ್ಯಕ್ಷ ವುಡ್ರೋ ವಿಲ್ಸನ್ ಸೇರಿದಂತೆ ಆ ಕಾಲದ ಹಲವಾರು ವಿಶ್ವನಾಯಕರ ಮೇಲೆ ಪ್ರಭಾವ ಹೊಂದಿದ್ದ ರಾಜಕೀಯ ಮುತ್ಸದ್ಧಿಯೂ ಸಹ. ಐನ್‌ಸ್ಟೈನ್‌ನಂತೆ ಅವನೂ ಸಹ ಯೆಹೂದಿಯೇ ಆಗಿದ್ದರೂ, ಬೆರ್ಗ್‌ಸನ್ ಫ್ರೆಂಚ್ ಪ್ರಜೆಯಾಗಿದ್ದವನು.

ಫಿಲಾಸಫಿಕಲ್ ಸೊಸೈಟಿಯ ಆ ಕಾರ್ಯಕ್ರಮದಲ್ಲಿ, ಐನ್‌ಸ್ಟೈನ್‍ನಗಿಂತ ಮೊದಲು ಭಾಷಣ ಮಾಡಿದ ಬೆರ್ಗ್‌ಸನ್, ಐನ್‌ಸ್ಟೈನ್ ಮತ್ತು ಆತನ ವೈಜ್ಞಾನಿಕ ಸಿದ್ಧಾಂತಗಳನ್ನು ಹೊಗಳಿ ಮಾತನಾಡಿದನಾದರೂ, “ಕಾಲ”ದ ಪರಿಕಲ್ಪನೆಯ ಕುರಿತು ಮಾತನಾಡುತ್ತಾ “ಭೌತಶಾಸ್ತ್ರಜ್ಞರ ಕಾಲ” ಮತ್ತು “ತತ್ವಶಾಸ್ತ್ರಜ್ಞರ ಕಾಲ” ಇವೆರಡೂ ಬೇರೆಯದೇ ಎಂದು ತನ್ನ ಅಭಿಪ್ರಾಯ ವ್ಯಕ್ತಪಡಿಸಿದ.

ಅವನ ನಂತರ ಭಾಷಣ ಮಾಡಿದ ಐನ್‌ಸ್ಟೈನ್ ಹೆಚ್ಚು ಹೊತ್ತು ಮಾತನಾಡಲಿಲ್ಲ. ಬೆರ್ಗ್‌ಸನ್‌ನ “ಕಾಲ”ದ ಪರಿಕಲ್ಪನೆಗಳಿಗೆ ಪ್ರತಿಕ್ರಿಯಿಸಿದ ಐನ್‌ಸ್ಟೈನ್, “ತತ್ವಶಾಸ್ತ್ರಜ್ಞರ ಕಾಲ ಮತ್ತು ಭೌತಶಾಸ್ತ್ರಜ್ಞರ ಕಾಲ ಎರಡೂ ಒಂದೇ ಇರಬಹುದೇ?” ಎಂದು ಪ್ರಶ್ನೆ ಮಾಡಿದನಲ್ಲದೆ, “ತತ್ವಶಾಸ್ತ್ರಜ್ಞರ ಕಾಲ ಎನ್ನುವುದು ಮಾನಸಿಕವೂ, ಭೌತಿಕವೂ ಆದದ್ದು” ಎಂದು ಉತ್ತರಿಸಿ, “ತತ್ವಶಾಸ್ತ್ರಜ್ಞರ ಕಾಲ ಎನ್ನುವುದು ಇಲ್ಲ; ಇರುವುದು ಮಾನಸಿಕ ಮತ್ತು ಭೌತಿಕ ಕಾಲಗಳ ವ್ಯತ್ಯಾಸ ಅಷ್ಟೇ” ಎಂದು ವ್ಯಾಖ್ಯಾನಿಸಿದ.

ಕಾಲದ ಪರಿಕಲ್ಪನೆಯ ಕುರಿತು, ಮಹಾನ್ ಬುದ್ಧಿವಂತರೆನಿಸಿದ ಈ ಈರ್ವರ ನಡುವಿನ ಈ ಸಣ್ಣದೊಂದು ಮಾತುಕತೆ, ಆ ಕಾಲದಲ್ಲಿ ಒಂದು ಮಹತ್ವದ ಚರ್ಚೆಯಾಗಿ ಬದಲಾಯಿತು. ಐನ್‌ಸ್ಟೈನ್ ಭೇಟಿಯ ನಂತರದಲ್ಲಿ, ಬೆರ್ಗ್‌ಸನ್ ತನ್ನ ವಾದವನ್ನು ಮುಂದುವರೆಸಿ, “ಅವಧಿ ಮತ್ತು ಏಕಕಾಲತೆ” (Duration and Simultaneity) ಎಂಬ ಪುಸ್ತಕವನ್ನೇ ಬರೆದ. ಆ ಪುಸ್ತಕದ ಪೀಠಿಕೆಯಲ್ಲಿ, “ನಾವು ಅನುಭವಿಸುವ ಕಾಲ ಪ್ರಜ್ಞೆ ಐನ್‌ಸ್ಟೈನ್‌ನ ಕಾಲದ ಪರಿಕಲ್ಪನೆಗೆ ಎಷ್ಟರ ಮಟ್ಟಿಗೆ ಹೊಂದುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕಿದೆ” ಎನ್ನುವ ಬೆರ್ಗ್‌ಸನ್, ಕಾಲದ ಬಗೆಗೆ “ಹೊಸ ಆಲೋಚನೆಯನ್ನೇ ಸೃಷ್ಟಿಸಿದ” ಐನ್‌ಸ್ಟೈನ್‌ನ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಲೇ, ಐನ್‌ಸ್ಟೈನ್‌ನ ಪರಿಕಲ್ಪನೆಯನ್ನು “ಎದುರಿಸುವುದು” (Confrontation) ನಮ್ಮ ಕರ್ತವ್ಯ ಎನ್ನುತ್ತಾನೆ.

ಏಪ್ರಿಲ್ ೬ರ ಆ ಭೇಟಿಯ ನಂತರ, ಐನ್‌ಸ್ಟೈನ್, ಬೆರ್ಗ್‌ಸನ್ ಕುರಿತು ಸಾರ್ವಜನಿಕವಾಗಿ ಹೆಚ್ಚಿಗೆ ಮಾತನಾಡದಿದ್ದರೂ, ತನ್ನ ಪತ್ರಗಳಲ್ಲಿ ಒಮ್ಮೊಮ್ಮೆ ಅವನ ಕುರಿತು ಪ್ರಸ್ತಾಪಿಸುತ್ತಾನೆ. ಎಲ್ಲಕ್ಕಿಂತ ಮುಖ್ಯವಾಗಿ, ಅವರಿಬ್ಬರ ಭೇಟಿಯ ಕೆಲವೇ ತಿಂಗಳ ನಂತರ, ಆ ವರ್ಷದ ನವೆಂಬರ್‌ನಲ್ಲಿ ಐನ್‌ಸ್ಟೈನ್‌ಗೆ ನೊಬೆಲ್ ಪ್ರಶಸ್ತಿ ಕೊಟ್ಟಾಗ, ಆ ಪ್ರಶಸ್ತಿ ಅವನ ರಿಲೆಟಿವಿಟಿ ಸಿದ್ಧಾಂತಕ್ಕೆ ನೀಡಲಾಗುವುದಿಲ್ಲ, ಬದಲಿಗೆ ಅವನ ಫೋಟೋ ಎಲೆಕ್ಟ್ರಿಸಿಟಿ ಕುರಿತಾದ ಸಂಶೋಧನೆಯನ್ನು ಮಾತ್ರ ಗುರಿತಿಸಲಾಗುತ್ತದೆ. ಅದರ ಹಿಂದಿನ ಕಾರಣವೂ ಈ ಹೆನ್ರಿ ಬೆರ್ಗ್‌ಸನ್ನೇ ಆಗಿರುತ್ತಾನೆ. ರಿಲೆಟಿವಿಟಿ ಸಿದ್ಧಾಂತದಲ್ಲಿ ತೋರುವ ಕಾಲದ ಪರಿಕಲ್ಪನೆಯನ್ನು ಒಪ್ಪದ ಬೆರ್ಗ್‌ಸನ್, ನೊಬೆಲ್ ಕಮಿಟಿ ಐನ್‌ಸ್ಟೈನ್‌ಗೆ ನೊಬೆಲ್ ಪ್ರಶಸ್ತಿ ನೀಡಿದರೂ, ಅದು, ರಿಲೆಟಿವಿಟಿ ಸಿದ್ಧಾಂತದ ಬದಲು ಫೋಟೋ ಎಲೆಕ್ಟ್ರಿಸಿಟಿ ವಿಷಯಕ್ಕೆ ನೀಡುವಂತೆ ಪ್ರಭಾವ ಬೀರಿರುತ್ತಾನೆ.

ವಾಸ್ತವದ ಬಗೆಗೆ ನಮ್ಮ ಅನುಭವ ಜನ್ಯ ಆಲೋಚನೆಗಳನ್ನು ತಲೆಕೆಳಗು ಮಾಡಿದ್ದ ಈ ಜರ್ಮನ್ ಯೆಹೂದ್ಯ ವಿಜ್ಞಾನಿ, ಜನಮಾನಸದಲ್ಲಿ ಒಬ್ಬ ಮೂವಿ-ಸ್ಟಾರ್‌ನಂತಾಗಿದ್ದ. ಜನರ ಮುತ್ತಿಗೆಯಿಂದ ತಪ್ಪಿಸಲು, ಆ ದಿನ ಅವನನ್ನು ರೈಲು ನಿಲ್ದಾಣದ ಹಿಂಬಾಗಿಲಿನಿಂದ ಕರೆದೊಯ್ಯಲಾಯಿತು.

ನೊಬೆಲ್ ಪ್ರಶಸ್ತಿ ವಿಜೇತರು ಪ್ರಶಸ್ತಿ ಪ್ರದಾನ ಸಮಾರಂಭದ ನಂತರ, ತಮಗೆ ಪ್ರಶಸ್ತಿ ದೊರಕಿಸಿದ ವಿಷಯದ ಕುರಿತು ಉಪನ್ಯಾಸ ನೀಡುವ ಒಂದು ಪರಿಪಾಠವಿದೆ. ರಿಲೆಟಿವಿಟಿ ಸಿದ್ಧಾಂತದ ಕಾಲದ ಪರಿಕಲ್ಪನೆಯ ಕುರಿತಾದ ಆಕ್ಷೇಪಣೆಯಿಂದಲೇ ತನಗೆ ಬೇರೊಂದು ವಿಷಯಕ್ಕೆ ಪ್ರಶಸ್ತಿ ದೊರೆಕಿದೆ ಎಂಬುದರ ಅರಿವಿದ್ದ ಐನ್‌ಸ್ಟೈನ್, ತನ್ನ ನೊಬೆಲ್ ಉಪನ್ಯಾಸದಲ್ಲಿ, ಫೋಟೋ ಎಲೆಕ್ಟ್ರಿಸಿಟಿಯ ಕುರಿತು ಮಾತನಾಡುವುದೇ ಇಲ್ಲ. ಬದಲಿಗೆ, ರಿಲೆಟಿವಿಟಿ ಸಿದ್ಧಾಂತದ ಕುರಿತೇ ಮಾತನಾಡುತ್ತಾನೆ!

*****

ಇಂದು, ವೈಜ್ಞಾನಿಕವಾಗಿ ಮತ್ತು ತಂತ್ರಜ್ಞಾನದ ವಿಚಾರಕ್ಕೆ ಬಂದರೆ, ಐನ್‌ಸ್ಟೈನ್‌ನ “ಭೌತಶಾಸ್ತ್ರಜ್ಞರ ಕಾಲ” ಗೆದ್ದಿದೆ.
ಆದರೂ. ಅಷ್ಟೆಲ್ಲಾ ಕಾಂಟ್ರವರ್ಸಿಗಳಿಗೆ ಕಾರಣವಾದ “ತತ್ವಜ್ಞಾನಿಗಳ ಕಾಲ” ಮತ್ತು “ಭೌತಶಾಸ್ತ್ರಜ್ಞರ ಕಾಲ”ದ ಚರ್ಚೆಯನ್ನು ಕೊಂಚಮಟ್ಟಿಗಾದರೂ ತಿಳಿದುಕೊಳ್ಳುವುದು ಅವಶ್ಯವೆನ್ನಿಸುತ್ತದೆ. ವಿಶ್ವದ ವಾಸ್ತವಕ್ಕೂ, ಅದು ನಮಗೆ ನೀಡುವ ಅನುಭವದ ಪ್ರಜ್ಞೆಗೂ ಇರುವ ವೈರುಧ್ಯಗಳನ್ನು ಈ ಚರ್ಚೆ ಹೊರತರುತ್ತದೆ.

ಬೆರ್ಗ್‌ಸನ್ ಕಾಲವನ್ನು ಎರಡು ಬಗೆಯಲ್ಲಿ ವಿಂಗಡಿಸುತ್ತಾನೆ. ಒಂದು ವೈಜ್ಞಾನಿಕವಾದ ಕಾಲ; ಇನ್ನೊಂದು ನಾವು ಅನುಭವಿಸುವ ಕಾಲ. ವೈಜ್ಞಾನಿಕವಾದ ಕಾಲ ಎನ್ನುವುದು ಗಣಿತದ ಪರಿಕಲ್ಪನೆ. ಗಣಿತದ ಈಕ್ವೇಷನ್‌ಗಳಲ್ಲಿ “t” ಎಂದು ಗುರಿತಿಸಲ್ಪಡುವ ಅದಕ್ಕೆ ಯಾವುದೇ ನಿರ್ದಿಷ್ಟವಾದ ದಿಕ್ಕಿಲ್ಲ. ಅದು ನಿಷ್ಕ್ರಿಯವೂ ಸಹ. ಅದನ್ನು ಗಡಿಯಾರಗಳ ಮೂಲಕ ಮಾಪನ ಮಾಡಬಹುದು. ಈ ಗಡಿಯಾರಗಳು ಆಕಾರವುಳ್ಳ ಬಾಹ್ಯ ಯಂತ್ರಗಳು. ಅವು ಮಾಪನ ಮಾಡುವುದು ಹರಿವನ್ನಲ್ಲ ಬದಲಿಗೆ ಸೆಕೆಂಡು, ನಿಮಿಷ, ಗಂಟೆ… ಹೀಗೆ ಘಳಿಗೆಗಳನ್ನು.


ನಮ್ಮ ಸಾಮಾಜಿಕ ಜೀವನದಲ್ಲಿ ಕಾಲದ ಈ ಯಾಂತ್ರಿಕ ರೂಪವೇ ನಮ್ಮನ್ನು ಬಹುಮಟ್ಟಿಗೆ ಆಳುತ್ತದಾದರೂ, ಆಂತರ್ಯದಲ್ಲಿ ನಾವು ಅನುಭವಿಸುವ ಕಾಲವೇ ಬೇರೆ. ಪ್ರತಿ ಕ್ಷಣವೂ ಮತ್ತೊಂದರ ಜೊತೆ ಬೆಸೆದು ಕೊಂಡು ಹರಿವ ಈ ಕಾಲ ಒಂದು ಪ್ರವಾಹ. ಅದಕ್ಕೊಂದು ನಿರ್ದಿಷ್ಟವಾದ ದಿಕ್ಕೂ ಇದೆ. ಹಾಗೆಯೇ, ಎಲ್ಲವನ್ನೂ ಬದಲಿಸಬಲ್ಲ ಗುಣವುಳ್ಳ ಅದು ಜಡವೂ ಅಲ್ಲ, ನಿಷ್ಕ್ರಿಯವೂ ಅಲ್ಲ. ನಮ್ಮನ್ನು ಕೊಲ್ಲಲೂ ಬಲ್ಲ ಶಕ್ತಿ ಅದಕ್ಕಿದೆ. ಈ ಕಾಲವನ್ನು ಬೆರ್ಗ್‌ಸನ್ “ಅಸಲಿ” ಅಥವಾ “ನಿಜವಾದ” ಕಾಲ ಎನ್ನುತ್ತಾನೆ.

ಬೆರ್ಗ್‌ಸನ್ ಪ್ರಕಾರ ನಮ್ಮ ಈ ಅಂತರ್ಯದ ಈ ಅಸಲಿ ಕಾಲವನ್ನು ಗಡಿಯಾರಗಳ ಯಾಂತ್ರಿಕತೆಯ ಮೂಲಕ ರೂಪಿಸಲು ಹೊರಟಾಗ ನಮಗೆ ದೊರಕುವುದು ನಿಜವಾದ ಕಾಲದ ಸ್ವರೂಪವಲ್ಲ; ಬದಲಿಗೆ ಕೇವಲ ಗಣಿತದ ಅಮೂರ್ತ ಮಾಯೆ. ಐನ್‌ಸ್ಟೈನ್ ಅಂತಹ ಆಧುನಿಕರು ತಮ್ಮ ಆಲೋಚನೆಗಳಲ್ಲಿ ಗಣಿತದ ಈ ಯಾಂತ್ರಿಕ ಮಾಯೆಯನ್ನೇ ಸತ್ಯವೆಂದು ಬಿಂಬಿಸುವುದನ್ನು ವೈಜ್ಞಾನಿಕತೆಯ ದೌರ್ಬಲ್ಯವೆಂದೇ ಬೆರ್ಗ್‌ಸನ್ ಪರಿಗಣಿಸುತ್ತಾನೆ.

ಬೆರ್ಗ್‌ಸನ್ ಪ್ರಕಾರ, ಐನ್‌ಸ್ಟೈನ್ ಸಿದ್ಧಾಂತವನ್ನು ನಾವು ನಿಜವೆಂದು ಒಪ್ಪಿದರೆ ನಮ್ಮನ್ನೂ ಒಳಗೊಂಡಂತೆ ಇಡೀ ವಿಶ್ವವೇ ಗಣಿತದ ಸೂತ್ರಗಳಲ್ಲಿ ಬಂಧಿತವಾದ ಯಂತ್ರವಾಗಿಬಿಡುತ್ತದೆ. ಸಂಕಲ್ಪ ಶಕ್ತಿ (“free will”) ಎಂಬುದೇ ಇಲ್ಲವಾಗಿ ನಮ್ಮ ಬದುಕಿನ ಪ್ರತಿಕ್ಷಣವೂ ಪೂರ್ವನಿರ್ಧಾರಿತ ಎಂದಾಗುತ್ತದೆ.

ಐನ್‌ಸ್ಟೈನ್‌ನ ರಿಲೆಟಿವಿಟಿ ಸಿದ್ಧಾಂತದ ಕುರಿತು ಹಿಂದಿನ ಲೇಖನಗಳಲ್ಲಿ ಚರ್ಚಿಸಲಾಗಿದೆ. ಅದರ ಮೂರು ಮುಖ್ಯ ವಿಚಾರಗಳೆಂದರೆ: ಒಂದು – ಎಲ್ಲರಿಗೂ ಅನ್ವಯವಾಗುವಂತಹ ಸಾರ್ವತ್ರಿಕವಾದ ಸ್ಪೇಸ್ ಮತ್ತು ಟೈಮ್‌ಗಳು ಇಲ್ಲ. ಎರಡು – ಸ್ಪೇಸ್ ಮತ್ತು ಟೈಮ್ ಗಳು ಒಂದಕ್ಕೊಂದು ಹಾಸುಹೊಕ್ಕಾಗಿವೆ. ಮೂರು – ಈ ವಿಶ್ವವನ್ನು ವೈಜ್ಞಾನಿಕವಾಗಿ ವಿವರಿಸಲು ಈಥರ್ ಎಂಬ ಕಾಣದ ವಸ್ತುವಿನ ಅವಶ್ಯಕತೆಯೇ ಇಲ್ಲ. (ಈ ಸರಣಿಯ ಹಿಂದಿನ ಲೇಖನಗಳನ್ನು ಓದಿ)

ಈ ವಿಚಾರಗಳು ಮೇಲ್ನೋಟಕ್ಕೆ ಅಂತಹ ಕ್ರಾಂತಿಕಾರಕ ಎನ್ನಿಸದಿರಬಹುದು. ಮತ್ತು ನಮ್ಮ “ಕಾಮನ್ ಸೆನ್ಸ್” ಅನ್ನು ಚಾಲೆಂಜ್ ಮಾಡದಿರಬಹುದು. ಆದರೆ, ಅವೆಲ್ಲವನ್ನೂ ಒಟ್ಟುಗೂಡಿಸಿ ನೋಡಿದಾಗ, ಸ್ಪೇಸ್‌ನಲ್ಲಿ (ಸ್ಪೇಸ್ ಎಂದರೆ ಇಲ್ಲಿ ಕೇವಲ ಅಂತರಿಕ್ಷವೆಂದಷ್ಟೇ ಅಲ್ಲ, ಬದಲಿಗೆ ಬಾಹ್ಯವೆಲ್ಲವನ್ನೂ ಒಳಗೊಂಡ ಪ್ರದೇಶ) ನಾವು ವೇಗವಾಗಿ ಪ್ರಯಾಣಿಸಿದಷ್ಟೂ ನಮ್ಮ ಟೈಮ್‌ನ ವೇಗ ಕಡಿಮೆಯಾಗುತ್ತಾ ಹೋಗುತ್ತದೆ. ಕೊನೆಗೆ, ಬೆಳಕಿನ ವೇಗವನ್ನು ತಲುಪಿದರೆ, ಟೈಮ್ ಸಂಪೂರ್ಣವಾಗಿ ನಿಂತೇ ಬಿಡುತ್ತದೆ. ಕಾಲದ ಪ್ರವಾಹ ನಿಧಾನವಾಗುವುದು, ನಿಂತೇ ಬಿಡುವುದು ನಮ್ಮ ಸಾಮಾನ್ಯ ಅನುಭವಕ್ಕೆ ನಿಲುಕುವಂತಹವುಗಳಲ್ಲ ಎಂಬುದನ್ನು ಹೇಳಲೇ ಬೇಕಿಲ್ಲ.

(ಹೆನ್ರಿ ಬೆರ್ಗ್‌ಸನ್)

NASAದ ಅವಳಿ-ಜವಳಿ ಅಸ್ಟ್ರೋನಾಟ್‌ಗಳಾದ ಸ್ಕಾಟ್ ಕೆಲ್ಲಿ ಮತ್ತು ಮಾರ್ಕ್ ಕೆಲ್ಲಿ, ಇಬ್ಬರೂ ಬೇರೆ-ಬೇರೆ ಗಗನ ನೌಕೆಗಳಲ್ಲಿ ಪ್ರಯಾಣ ಬೆಳೆಸಿದರೆನ್ನಿ. ಅವರಿಬ್ಬರ ನೌಕೆಗಳು ಬೇರೆ-ಬೇರೆ ವೇಗಗಳಲ್ಲಿ ಸಂಚರಿಸುತ್ತಿದ್ದರೆ, ಇಬ್ಬರ ಟೈಮ್‌ನ ವೇಗದ ಗತಿಯೂ ಬದಲಾಗುತ್ತವೆ. ಒಬ್ಬನ ವಯಸ್ಸು ಇನ್ನೊಬ್ಬನ ವಯಸ್ಸಿಗಿಂತ ಬದಲಾಗುತ್ತದೆ. ಇವರಿಬ್ಬರ ಟೈಮ್‌ಗಳಲ್ಲಿ ಯಾರ ಟೈಮ್ “ಸರಿ”ಯಾದದ್ದು? ಐನ್‌ಸ್ಟೈನ್ ಹೇಳುವಂತೆ ಎರಡೂ ಸರಿಯೇ. ಇಡೀ ವಿಶ್ವದಲ್ಲಿ, ಎಲ್ಲವೂ ಚಲನೆಯಲ್ಲಿ ಇರುವುದರಿಂದ “ಇದೇ ಸರಿಯಾದ ಟೈಮ್” ಎಂಬುದೂ ಇಲ್ಲ, ಏಕಕಾಲತ್ವ (simultaneity) ಎಂಬುದೂ ಇಲ್ಲ. ನಮ್ಮ ಗಡಿಯಾರ ತೋರುವುದಷ್ಟೇ ನಮ್ಮ ಕಾಲ. ಒಂದೇ ದಿನ ಹುಟ್ಟಿದ ಮಾರ್ಕ್ ಮತ್ತು ಸ್ಕಾಟ್‌ಗಳ ವಯಸ್ಸಿನ ಅಂತರ ಬದಲಾಗುತ್ತಿದ್ದರೂ, ಅವರಿಗೆ ಅವರ ಕಾಲ ಸರಿಯೆಂದೇ ತೋರುತ್ತಿರುತ್ತದೆ.

ಬೆರ್ಗ್‌ಸನ್, ಐನ್‌ಸ್ಟೈನ್‌ನ ಈ ಗಡಿಯಾರದ ಕಾಲವನ್ನು ನಿಜವೆಂದು ಒಪ್ಪಿಕೊಳ್ಳುವುದಿಲ್ಲ. ಅವನ ಪ್ರಕಾರ, ನಿಜವಿರುವುದು ನಮ್ಮ ಅನುಭವಕ್ಕೆ ಬರುವ ಕಾಲದಲ್ಲಿ. ಅವನು ಹೇಳುವಂತೆ, ಗಡಿಯಾರವೆಂಬ ಈ ಯಂತ್ರದ ಸೃಷ್ಟಿಯಾದದ್ದೇ ನಮ್ಮ ಅನುಭವದ ಕಾಲವನ್ನು ತಾಳೆ ಹಾಕಲು. ಅದಕ್ಕಿಂತ ಮುಖ್ಯವಾಗಿ, ಏಕಕಾಲತೆ ಎಂಬುದೇ ಇಲ್ಲವೆಂಬ ರಿಲೆಟಿವಿಟಿ ಸಿದ್ಧಾಂತವನ್ನು ಬೆರ್ಗ್‌ಸನ್ ಖಡಾಖಂಡಿತವಾಗಿ ನಿರಾಕರಿಸುತ್ತಾನೆ. ಏಕಕಾಲತೆ ಎಂಬ ಪರಿಕಲ್ಪನೆಯೇ ಅಸತ್ಯವಾದರೆ, “ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ” ಎಂಬ ಮಾತಿಗೆ ಅರ್ಥವೇ ಇಲ್ಲದಂತಾಗುತ್ತದೆ ಎನ್ನುತ್ತಾನೆ ಅವನು.

ನಾವು ವಾಸ್ತವ ಪ್ರಪಂಚವನ್ನು ಗ್ರಹಿಸುವುದೇ ನಮ್ಮ ನೆನಪುಗಳು ನಮಗೆ ದೊರಕಿಸುವ ಅರಿವುಗಳ ಮೂಲಕ. ಭೂತ – ವರ್ತಮಾನಗಳ ನಡುವಿನ ಅಂತರವೇ ಇಲ್ಲದಿದ್ದರೆ, “ನೆನಪು” ಎಂಬುದಾದರೂ ಏನು? ಆ ನೆನಪುಗಳು ತೋರುವ ಅರಿವಾದರೂ ಏನು? ಬೆರ್ಗ್‌ಸನ್, ಐನ್‌ಸ್ಟೈನ್‌ನ ಸಿದ್ಧಾಂತದಲ್ಲಿ ಮಾನವತ್ವದ ತಳಹದಿಯೇ ಅಲುಗಾಡುವುದನ್ನು ಕಾಣುತ್ತಾನೆ.

(ಮುಂದುವರೆಯುವುದು)