ನಮ್ಮ ಕಣ್ಣೆದುರಿಗೇ, ದಿನದಿಂದ ದಿನಕ್ಕೆ ಬದಲಾಗುವ ಚಂದ್ರ ನಮಗೆ ಕ್ಯಾಲೆಂಡರ್ ಒದಗಿಸಿದರೆ, ನಾವು ಕಣ್ಣೆತ್ತಿ ನೋಡಲಾಗದ ಸೂರ್ಯ, ಗಡಿಯಾರ ಒದಗಿಸಿದ; ತನ್ನ ನೆರಳಿನ ಮೂಲಕ. ಬೆಳಗಿನಿಂದ ಸಂಜೆಯವರೆಗೆ ಆಕಾಶದಲ್ಲಿ ಸೂರ್ಯನ ಸ್ಥಾನ ಬದಲಾದಂತೆ, ಅವನ ಬೆಳಕಿನಿಂದ ಮೂಡುವ ನೆರಳಿನ ಸ್ಥಾನವೂ ಬದಲಾಗುವುದನ್ನು ಕಂಡ ನಮಗೆ, “ಸನ್ ಡಯಲ್”‌ಗಳನ್ನು ನಿರ್ಮಿಸುವುದು ಕಷ್ಟವೆನಿಸಲಿಲ್ಲ. ನೆರಳೇ ಗಡಿಯಾರದ ಮುಳ್ಳಾಗಿ ಕೆಲಸ ಮಾಡುವ ಈ ಸನ್ ಡಯಲ್ ಗಳೇ ಮಾನವರು ನಿರ್ಮಿಸಿದ ಪ್ರಪ್ರಥಮ ಕೃತಕ ಗಡಿಯಾರಗಳು ಎನ್ನಬಹುದು. ಈಜಿಪ್ಟಿನಲ್ಲಿ ಐದೂವರೆ ಸಾವಿರ ವರ್ಷಗಳ ಹಿಂದೆಯೇ ಇಂತಹ ಸನ್ ಡಯಲ್‌ ಗಳನ್ನು ನಿರ್ಮಿಸುತ್ತಿದ್ದರೆಂದು ಇತಿಹಾಸ ತಜ್ಞರು ಹೇಳುತ್ತಾರೆ.
ಶೇಷಾದ್ರಿ ಗಂಜೂರು ಬರೆಯುವ ಅಂಕಣ

 

ನಾನು ಎಂಜಿನಿಯರಿಂಗ್ ಮುಗಿಸಿದ ಮೇಲೆ, ೧೯೮೭ರಲ್ಲಿ, ಸೆಂಟ್ರಲ್ ಮೈನ್ ಪ್ಲಾನಿಂಗ್ ಅಂಡ್ ಡಿಸೈನ್ ಇನ್ಸ್ಟಿಟ್ಯೂಟ್ (CMPDI) ಎಂಬ ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿ ಉದ್ಯೋಗಿಯಾಗಿ ಕೆಲಸಕ್ಕೆ ಸೇರಿದೆ. ಆ ಸಂಸ್ಥೆಯ ಮುಖ್ಯ ಕಛೇರಿ, ಅಂದಿನ ಬಿಹಾರದ ರಾಂಚಿ ನಗರದಲ್ಲಿತ್ತು. ಆ ಕಛೇರಿ ಇಂದೂ ಇದೆ. ಆದರೆ ರಾಂಚಿ ಮಾತ್ರ ಈಗ ಇಂದಿನ ಜಾರ್ಖಂಡ್ ರಾಜ್ಯದ ರಾಜಧಾನಿಯಾಗಿದೆ. ಆ ಕಛೇರಿಯ ಅಡ್ರೆಸ್‌ನಲ್ಲಿ “ಗೊಂಡ್ವಾನಾ ಪ್ಲೇಸ್” ಎಂಬ ವಿವರ ಇತ್ತು. ನನ್ನ ಉದ್ಯೋಗ ಪತ್ರದಲ್ಲಿ ಅದನ್ನು ಮೊದಲ ಬಾರಿಗೆ ನೋಡಿದಾಗಲೇ, “ಇದೇನಿದು ಗೊಂಡ್ವಾನಾ ಪ್ಲೇಸ್?” ಎಂಬ ಸಣ್ಣ ಕುತೂಹಲ ಒಂದು ಮನಸ್ಸಿನಲ್ಲಿ ಮೂಡಿತ್ತು. ಆದರೆ, ಅದು, “ಗೊಂಡ” ಬುಡಕಟ್ಟಿನವರಿದ್ದ ಜಾಗವಿರಬಹುದೆಂದು ಊಹಿಸಿಕೊಂಡು ಸುಮ್ಮನಾಗಿದ್ದೆ.

ಕೆಲಸಕ್ಕೆ ಸೇರಿದ ಕೆಲ ವಾರಗಳ ನಂತರ, ಅಲ್ಲಿದ್ದ ನನ್ನ ಸಹೋದ್ಯೋಗಿ ಮಿತ್ರರೊಡನೆ, ಈ “ಗೊಂಡ್ವಾನಾ ಪ್ಲೇಸ್” ವಿಷಯದ ಕುರಿತು ವಿಚಾರಿಸಿದೆ. ಆದರೆ, ಅವರಾರಿಗೂ ಇದರ ವಿವರ ಗೊತ್ತಿರಲಿಲ್ಲ. ಕೊನೆಗೆ, ನಮ್ಮ ಸಂಸ್ಥೆಯ ಭೂಗರ್ಭಶಾಸ್ತ್ರಜ್ಞರೊಬ್ಬರೊಡನೆ ಇದರ ವಿವರ ಮಾತನಾಡುತ್ತಿರುವಾಗ, ಅವರು ಅದರ ವಿಷಯವನ್ನು ಕೊಂಚ ಮಟ್ಟಿಗೆ ತಿಳಿಸಿ ಭೂಗರ್ಭಶಾಸ್ತ್ರಕ್ಕೆ ಸಂಬಂಧಿಸಿದ ಒಂದು ಪುಸ್ತಕ ನೀಡಿದರು. ಅವರು ತಿಳಿಸಿದಂತೆ, ಮತ್ತು ಆ ಪುಸ್ತಕದಲ್ಲಿದ್ದಂತೆ, “ಗೊಂಡ್ವಾನಾ” ಎಂಬುದು ಜಾಗದ ಅಥವಾ ಬುಡಕಟ್ಟಿನವರ ಹೆಸರಲ್ಲ; ಬದಲಿಗೆ, ನಮ್ಮ ಭೂಮಿಯ ಒಂದು ಕಾಲಘಟ್ಟದ ಹೆಸರು.

ನಮ್ಮ ಭೂಮಿಗೆ ಈಗ ಸುಮಾರು ೪೫೦ ಕೋಟಿ ವರ್ಷ. ಮಾನವರ ಜೀವನದಲ್ಲಿ, ಶೈಶವ, ಬಾಲ್ಯ, ಯೌವ್ವನ ಇತ್ಯಾದಿ ಕಾಲಘಟ್ಟಗಳಿರುವಂತೆಯೇ, ನಮ್ಮ ಈ ಭೂಮಿಗೂ ಇಂತಹ ಹಲವಾರು ಕಾಲಘಟ್ಟಗಳಿವೆ. ಅದರಲ್ಲಿ, “ಗೊಂಡ್ವಾನ” ಎಂಬುದು ಸಹ ಒಂದು. ಇಂದಿಗೆ ಸುಮಾರು ೫.೫ ಕೋಟಿ ವರ್ಷಗಳ ಹಿಂದಿನಿಂದ, ಎರಡು ಕೋಟಿ ವರ್ಷಗಳ ನಡುವಿನ ಈ ಅವಧಿಯನ್ನು ಭೂಗರ್ಭ ಶಾಸ್ತ್ರಜ್ಞರು “ಗೊಂಡ್ವಾನಾ ಯುಗ” ಎನ್ನುತ್ತಾರೆ. ಇಂದಿನ ಭಾರತ ಉಪಖಂಡ, ಅರೇಬಿಯನ್ ಪ್ರದೇಶಗಳು, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಅಮೆರಿಕಾ ಖಂಡಗಳ ಭೂಭಾಗಗಳು ಇನ್ನೂ ಒಟ್ಟಿಗೇ ಇದ್ದಂತಹ ಸಮಯವದು. ಹಲವಾರು ತಜ್ಞರ ಪ್ರಕಾರ, ಭಾರತದ ಈಶಾನ್ಯ ಪ್ರದೇಶಗಳಲ್ಲಿ (ಪೂರ್ವ ಬಿಹಾರ, ಜಾರ್ಖಂಡ್, ಒರಿಸ್ಸಾ, ಅಸ್ಸಾಂ ಇತ್ಯಾದಿ) ಕಂಡುಬರುವ ಕಲ್ಲಿದ್ದಿಲಿನ ಉಗಮ ಆ ಕಾಲಕ್ಕೆ ಸೇರಿದಂತಹುದು. ಸುಮಾರು ಐದರಿಂದ ಎರಡು ಕೋಟಿ ವರ್ಷಗಳ ಹಿಂದಿನ ಈ ಗೊಂಡ್ವಾನ ಅವಧಿಯಲ್ಲಿ ಭೂಮಿ ನುಂಗಿದ ಗಿಡಮರಗಳು, ಅದರ ಒಡಲಿನ ತಾಪ ಮತ್ತು ಒತ್ತಡಕ್ಕೆ ಬೆಂದು ಕಲ್ಲಿದ್ದಲಾಗಿವೆ. ನಾವದನ್ನು ಇಂದು ಹೊರ ತೆಗೆಯುತ್ತಿದ್ದೇವೆ. ಇದನ್ನು ತಿಳಿದ ನಂತರ, ಗಣಿಗಾರಿಕೆ ಯೋಜನೆಯಲ್ಲಿ ತೊಡಗಿಕೊಂಡಿರುವ ಸಂಸ್ಥೆಯ ಅಡ್ರೆಸ್‌ ನಲ್ಲಿ ಈ “ಗೊಂಡ್ವಾನಾ” ಕಂಡಿದ್ದು ಅಂತಹ “ಮಿಸ್ಟೆರಿ”ಯಾಗಿ ಉಳಿಯಲಿಲ್ಲ.

ಜಾಗವೊಂದಕ್ಕೆ ಕಾಲದ/ಅವಧಿಯೊಂದರ ಹೆಸರನ್ನಿಡುವುದು, ಕುತೂಹಲಕರ ಎನ್ನಿಸಿತಾದರೂ, ನಾನು ಬೆಂಗಳೂರಿನಲ್ಲಿದ್ದಾಗ, ನನ್ನ ಎಲೆಕ್ಟ್ರಾನಿಕ್ಸ್ ಪ್ರಾಜೆಕ್ಟ್ ಗಳಿಗಾಗಿ ಬೇಕಾದ ಬಿಡಿ-ಭಾಗಗಳಿಗಾಗಿ ಅಲೆದಾಡುತ್ತಿದ್ದ “ಸಿಲ್ವರ್ ಜ್ಯೂಬಿಲಿ ಪಾರ್ಕ್ ರೋಡ್” ಸುತ್ತಮುತ್ತಲ ಪ್ರದೇಶಗಳು ನೆನಪಾದವು.

ಈ ಅವಧಿಗೆ “ಗೊಂಡ್ವಾನಾ” ಎಂದು ಏಕೆ ಕರೆಯಲಾಯಿತೆಂಬ ಪ್ರಶ್ನೆ ಮನಸ್ಸಿನಲ್ಲಿ ಇತ್ತಾದರೂ, ಮುಂದೊಮ್ಮೆ ಅದಕ್ಕೂ ಉತ್ತರ ದೊರಕಿತು. ಈ ಅವಧಿಗೆ “ಗೊಂಡ್ವಾನಾ” ಎಂದು ಹೆಸರಿಟ್ಟವನು ಎಡ್ವರ್ಡ್ ಸುಯೆಸ್ ಎನ್ನುವ ಆಸ್ಟ್ರಿಯನ್ ಭೂಗರ್ಭಶಾಸ್ತ್ರಜ್ಞ. ಅದಕ್ಕೆ ಪ್ರೇರಕವಾದದ್ದು, ಹೆನ್ರಿ ಮೆಡ್ಲಿಕಾಟ್ ಎಂಬ ಬ್ರಿಟಿಷ್ ಭೂಗರ್ಭಶಾಸ್ತ್ರಜ್ಞ ಬರೆದಿದ್ದಂತಹ ಪುಸ್ತಕ. ಭಾರತದಲ್ಲಿ ಸುತ್ತಾಡಿ, ವಿಂಧ್ಯ ಪರ್ವತದ ಭೂ ಪದರಗಳ ಸುಧೀರ್ಘ ಅಧ್ಯಯನ ನಡೆಸಿದ್ದ ಮೆಡ್ಲಿಕಾಟ್, ಪ್ರಪ್ರಥಮ ಬಾರಿಗೆ ತನ್ನ ಈ ಪುಸ್ತಕದಲ್ಲಿ ಈ “ಗೊಂಡ್ವಾನಾ” ಪದವನ್ನು ಬಳಕೆಗೆ ತಂದಿದ್ದ. ಅದರ ಹಿಂದಿನ ಪ್ರೇರಣೆ, ಅವನು ಸುತ್ತಾಡುತ್ತಿದ್ದ ವಿಂಧ್ಯ ಪರ್ವತಗಳ ಅಡವಿಗಳಲ್ಲಿ “ಗೊಂಡ” ಬುಡಕಟ್ಟಿನವರಿದ್ದರು. ಅವರಿದ್ದ ವನ: “ಗೊಂಡ ವನ”.

ನಾವು ಮೊದಲೇ ಊಹಿಸಿದ್ದನ್ನು ಖಚಿತಪಡಿಸಿಕೊಳ್ಳುವಾಗ ಊಹೆಗೂ ನಿಲುಕದ ಎಷ್ಟೋ ವಿಷಯಗಳು ತಿಳಿಯುತ್ತವೆ.

******

“ಕಾಲ ಎಂದರೆ ಏನು?” ಎಂಬ ಪ್ರಶ್ನೆಗೆ ಉತ್ತರಿಸಲು ನಮಗೆ ಕಷ್ಟವಾದರೂ, ಅದನ್ನು ಕತ್ತರಿಸಿ, ಪ್ರತಿ ತುಂಡಿಗೂ ಹೆಸರಿಡುವುದರಲ್ಲಿ ನೈಪುಣ್ಯತೆಯನ್ನು ಬೆಳೆಸಿಕೊಂಡಿದ್ದೇವೆ. “ಕಾಲ” ಎನ್ನುವುದು “ಸರ್ವಕಾಲಿಕ”, ಅದಕ್ಕೊಂದು ಆದಿಯಿಲ್ಲ, ಅಂತ್ಯವಿಲ್ಲ ಎನ್ನಿಸಿದರೂ, ವಿಜ್ಞಾನಿಗಳು ಹೇಳುವಂತೆ ಅದಕ್ಕೊಂದು ಆದಿಯಿದೆ. (ಈ “ಮೊನ್ನೆ ಇಲ್ಲದ ನಿನ್ನೆ”ಯ ಕುರಿತು ಕೊಂಚ ವಿಸ್ತಾರವಾಗಿ ನಾಳೆಯೊಂದರ ಲೇಖನದಲ್ಲಿ ವಿಚಾರ ಮಾಡೋಣ) ಹಲವಾರು “ಅಂತ್ಯ” ಗಳೂ ಇವೆ.

ಭೂಮಿ “ಹುಟ್ಟಿ” ಸುಮಾರು ೪೫೦ ಕೋಟಿ ವರ್ಷಗಳಾಗಿದ್ದರೆ, ಈ ಅನಂತ ವಿಶ್ವದ ಸೃಷ್ಟಿಯಾಗಿ ಸುಮಾರು ೧೪೦೦ ಕೋಟಿ ವರ್ಷಗಳೇ ಆಗಿವೆ. ಈ ಸೃಷ್ಟಿಯಲ್ಲಿನ ಪ್ರತಿ ವಸ್ತುವಿನಲ್ಲೂ ಗಡಿಯಾರಗಳಿವೆ. ಆ ವಸ್ತುಗಳು ಪಲ್ಸಾರ್ (PULSAR – Pulsating Radio Star) ನಂತಹ ಮಹಾ ಘನಕಾಯಗಳು – ಈ ಪಲ್ಸಾರು ತಿಳಿಸಾರಿನಂತಹುದಲ್ಲ; ಒಂದೇ ಒಂದು ಸೌಟು ಪಲ್ಸಾರಿನ ಭಾರ, ಮಹಾ ಪರ್ವತಗಳ ಭಾರಕ್ಕಿಂತ ಹೆಚ್ಚು! – ಇರಬಹುದು ಅಥವಾ ಪರಮಾಣು ಒಂದು ಇರಬಹುದು. ಎಲ್ಲಕ್ಕೂ ತಮ್ಮದೇ ಆದ ಲಯಗಳಿವೆ. ನಾವು ಗಮನಿಸಬೇಕು ಅಷ್ಟೇ!

ಉದಾಹರಣೆಗೆ, ಈ ಪಲ್ಸಾರ್‌ ಗಳನ್ನೇ ನೋಡೋಣ. ಪೋರ್ಟೊ ರೀಕೋದಲ್ಲಿ ೧೯೮೨ರ ಸೆಪ್ಟೆಂಬರ್‌ ನ ಒಂದು ರಾತ್ರಿ, ಒಬ್ಬ ಖಗೋಳ ಶಾಸ್ತ್ರದ ವಿದ್ಯಾರ್ಥಿ, ತನ್ನ ರೇಡಿಯೋ ಟೆಲೆಸ್ಕೋಪ್ ಮೂಲಕ, ಈ ಪಲ್ಸಾರ್‌ ಗಳಿಗಾಗಿ ಆಕಾಶದಲ್ಲಿ ಹುಡುಕಾಡುತ್ತಿದ್ದ. ಈ ಪಲ್ಸಾರ್‌ ಗಳು ಘನಕಾಯಗಳಾದರೂ, ಗಾತ್ರದಲ್ಲಿ ಹೆಚ್ಚೇನೂ ಇರುವುದಿಲ್ಲ. ಒಂದು ಸಾಮಾನ್ಯ ಪಲ್ಸಾರಿನ ಸುತ್ತಳತೆ, ಬೆಂಗಳೂರಿನ ಸುತ್ತಳತೆಗಿಂತಲೂ ಕಡಿಮೆ. ಇವುಗಳನ್ನು ಆಕಾಶದಲ್ಲಿ ಹುಡುಕುವುದು ಸುಲಭವೇನಲ್ಲ. ಆ ವಿದ್ಯಾರ್ಥಿ ಅಂತಹ ಪಲ್ಸಾರ್ ಒಂದನ್ನು ಅಲ್ಲಿಯವರೆಗೆ ಕಂಡೂ ಇರಲಿಲ್ಲ. ಆದರೂ, ಆ ರಾತ್ರಿ, ಅವನ ಅದೃಷ್ಟ ಚೆನ್ನಾಗಿತ್ತು. ಒಂದು ಪಲ್ಸಾರ್ ಅವನ ಟೆಲೆಸ್ಕೋಪಿಗೆ ಸಿಕ್ಕಿ ಬಿತ್ತು. ಆ ಪಲ್ಸಾರ್, ಸೆಕೆಂಡಿಗೆ ೬೪೧ ಸಾರಿ ಸುತ್ತುತ್ತಿತ್ತು. ಅವನು, ತನ್ನ ಪ್ರೊಫೆಸರ್‌ ಗೆ ಫೋನ್‌ಮಾಡಿ ತಾನು ಕಂಡದ್ದನ್ನು ತಿಳಿಸಿದ. ಅವನ ಮಾತನ್ನು ಕೇಳಿದ ಆತನ ಪ್ರೊಫೆಸರ್ ಕೆಲ ಕ್ಷಣ ಮಾತನಾಡಲಿಲ್ಲ. ಅನಂತರ, ಅವರು ಅವನು ಕಂಡದ್ದರ ಮಹತ್ವವನ್ನು ಅವನಿಗೆ ವಿವರಿಸಿದರು.

ಪಲ್ಸಾರ್‌ ನಂತಹ ಮಹಾಕಾಯವೊಂದು ಅಷ್ಟೊಂದು ವೇಗವಾಗಿ ಸುತ್ತುವುದನ್ನು ಅಲ್ಲಿಯವರೆಗೆ ಯಾರೂ ಕಂಡಿರಲಿಲ್ಲ. ಅದು ಸಾಧ್ಯವಿಲ್ಲವೆಂದೇ ಅಭಿಪ್ರಾಯ ವಿಜ್ಞಾನಿಗಳಲ್ಲಿ ಸಾಮಾನ್ಯವಾಗಿತ್ತು. ಆದರೆ, ಈಗ, ವಿಜ್ಞಾನಿಗಳ ಪ್ರಕಾರ, ಇಂತಹ ಪಲ್ಸಾರ್‌ ಗಳು ಪ್ರಕೃತಿಯಲ್ಲಿ ಸಿಗುವ ಅತ್ಯಂತ ಕರಾರುವಕ್ಕಾದ ಮಹಾನ್ ಗಡಿಯಾರಗಳು. ಕೋಟಿ, ಕೋಟಿ ವರ್ಷಗಳಾದರೂ, ಅವುಗಳ ಲಯ ಬದಲಾಗುವುದಿಲ್ಲ. ಇಂತಹ ಅತಿ ವೇಗದಿಂದ ಸುತ್ತುವ ಪಲ್ಸಾರ್‌ ಗಳನ್ನು “ಮಿನಿಸೆಕೆಂಡ್ ಪಲ್ಸಾರ್” ಎನ್ನುತ್ತಾರೆ. ಇಂದು ಇಂತಹ “ಮಿನಿಸೆಕೆಂಡ್ ಪಲ್ಸಾರ್”ಗಳನ್ನು ವಿಶ್ವಾದ್ಯಂತ ಖಗೋಳಶಾಸ್ತ್ರಜ್ಞರು ವಿಷದವಾಗಿ ಅಧ್ಯಯನ ಮಾಡುತ್ತಿದ್ದಾರೆ. ಅಂದು, ಪ್ರಪ್ರಥಮ ಬಾರಿಗೆ ಇಂತಹದೊಂದನ್ನು ಹುಡುಕಿದ ವಿದ್ಯಾರ್ಥಿ, ಇಂದು ಒಬ್ಬ ಹೆಸರಾಂತ ಖಗೋಳಶಾಸ್ತ್ರಜ್ಞನಾಗಿದ್ದಾನೆ. ಆತನ ಹೆಸರು ಶ್ರೀನಿವಾಸ ಕುಲಕರ್ಣಿ. ಶ್ರೀಮತಿ ಸುಧಾಮೂರ್ತಿಯವರ ಸಹೋದರ.

******

ಟೆಲೆಸ್ಕೋಪಿನಿಂದ ಕಾಣುವ ಪಲ್ಸಾರ್‌ ಗಳು ಅತಿ ದೊಡ್ಡ ಗಡಿಯಾರಗಳಾದರೆ, ಮೈಕ್ರೋಸ್ಕೋಪ್‌ ಗಳಿಂದ ಕಾಣುವ ಜೀವಕೋಶಗಳೂ ಸಹ ಗಡಿಯಾರಗಳೇ. “ಬಯಲಾಜಿಕಲ್ ಕ್ಲಾಕ್” ಎನ್ನುವ ನಮ್ಮ ಜೈವಿಕ-ಗಡಿಯಾರಗಳ ಹಿಂದೆ ಕೆಲಸ ಮಾಡುವಂತಹವು ಈ ಗಡಿಯಾರಗಳೇ. ಅವುಗಳ ಬಡಿತವನ್ನು ನಾವು ಪ್ರಜ್ಞಾಪೂರ್ವಕವಾಗಿ ಗಮನಿಸದಿರಬಹುದು, ಆದರೆ ನಮ್ಮ ಮಿದುಳು ಇವುಗಳನ್ನು ಸದಾ ಗಮನಿಸುತ್ತಲೇ, ನಿಯಂತ್ರಿಸುತ್ತಲೇ ಇರುತ್ತದೆ. ಹೃದಯದ ಬಡಿತಕ್ಕೆ ಪಲ್ಸಾರ್‌ ನ ಕರಾರುವಕ್ಕಾದ ಲಯವಿರದಿರಬಹುದು, ಆದರೆ, ಅದರ ಬಡಿತದಲ್ಲಿ ಏರು-ಪೇರಾದರೆ, ಅದನ್ನು ನಮ್ಮ ಮಿದುಳು ಗಮನಿಸದೆ ಇರುವುದಿಲ್ಲ.

ನಿಮಗೆ ತಿಳಿಯದಂತೆ, ನಿಮ್ಮ ಬಲಬದಿಯಲ್ಲಿ ಯಾರಾದರೂ ಲಕ್ಷೀ ಪಟಾಕಿ ಸಿಡಿಸಿದರೆ, ಅದರ ಶಬ್ದ ನಿಮ್ಮ ಎರಡೂ ಕಿವಿಗಳಿಗೂ ಕೇವಲ ಮಿಲಿ ಸೆಕೆಂಡುಗಳ ಅಂತರದಲ್ಲಿ ಕೇಳಿಸುತ್ತದೆ. ಆದರೂ, ನೀವು ಬಲ ಬದಿಗೆ ತಿರುಗಿ ನೋಡುತ್ತೀರಿ. ಉಸೇನ್ ಬೋಲ್ಟ್, ಒಲಿಂಪಿಕ್ಸ್ ನಲ್ಲಿ ಉಳಿದ ಓಟಗಾರರಿಗಿಂತ ಮೊದಲು ಗುರಿಯನ್ನು ತಲುಪಿದನೆಂದು ತಿಳಿಸುವ ಸೂಕ್ಷ್ಮ ಗಡಿಯಾರದಂತೆ, ನಿಮ್ಮ ಮಿದುಳೂ ಸಹ, ಶಬ್ದ ಯಾವ ದಿಕ್ಕಿನಿಂದ ಮೊದಲು ತಲುಪಿತೆಂದು ನಿರ್ಧರಿಸುವ ಕೆಲಸ ಮಾಡುತ್ತದೆ. (ಹಾಗೆಂದು, ಅದು ತಪ್ಪೇ ಮಾಡುವುದಿಲ್ಲ ಎಂದೇನೂ ಅಲ್ಲ)

ನಿಮ್ಮೆದುರಿಗೆ ಯಾರಾದರೂ ಚಪ್ಪಾಳೆ ತಟ್ಟಿದರೆ, ಆ ದೃಶ್ಯ, ಬೆಳಕಿನ ವೇಗ ಶಬ್ದದ ವೇಗಕ್ಕಿಂತ ಎಷ್ಟೋ ಬಾರಿ ಹೆಚ್ಚಿರುವುದರಿಂದ, ನಿಮ್ಮ ಕಣ್ಣನ್ನು ಬಹುಬೇಗ ತಲುಪುತ್ತದೆ, ಅದರ ಶಬ್ದ ನಿಮ್ಮ ಕಿವಿಗೆ ತಲುಪುವ ಎಷ್ಟೋ ಮೈಕ್ರೋ ಸೆಕೆಂಡುಗಳ ಮುನ್ನವೇ. ಆದರೆ, ನಿಮ್ಮ ಮಿದುಳು, ಇವೆರಡನ್ನೂ ಒಟ್ಟುಗೂಡಿಸಿ ಇದನ್ನು ನಾವು ಕಂಡು-ಕೇಳುವ “ಚಪ್ಪಾಳೆ”ಯನ್ನಾಗಿಸುತ್ತದೆ. ದೃಶ್ಯ ಮತ್ತು ಶಬ್ದವನ್ನು ಒಟ್ಟುಗೂಡಿಸಲು ಒಂದು ಸೊಫಿಸ್ಟಿಕೇಟೆಡ್ ಗಡಿಯಾರ ಬೇಕು. ನಮಗೇ ತಿಳಿಯದಂತೆ ನಮ್ಮ ಮಿದುಳು ಆ ಕೆಲಸ ಮಾಡುತ್ತದೆ. ಅದರಲ್ಲಿ ಕೊಂಚ ಹೆಚ್ಚೂ-ಕಡಿಮೆಯಾದರೂ, ಕೆಲವೊಮ್ಮೆ ನಾವು ಟಿ.ವಿ.- ಸಿನೆಮಾಗಳನ್ನು ನೋಡುವಾಗ ಕಾಣುವ ತಾಳೆ ತಪ್ಪುವ ಸೀನ್-ಡಯಲಾಗ್ ಮಿಸ್ ಮ್ಯಾಚ್ ನಂತಾಗುತ್ತದೆ.

ಇವೆಲ್ಲಾ ನಾವು ಪ್ರಜ್ಞಾಪೂರ್ವಕವಾಗಿ ಗಮನಿಸದ ಗಡಿಯಾರಗಳಾದರೆ, ಪ್ರಕೃತಿಯಲ್ಲಿ, ಇನ್ನೂರು ಸಾವಿರ ವರ್ಷಗಳ ಹಿಂದಿನಿಂದ ನಾವು ಗಮನಿಸುತ್ತಿರುವ ಎಷ್ಟೋ ಗಡಿಯಾರಗಳಿವೆ. ಪ್ರತಿ ದಿನ ಚಾಚೂ ತಪ್ಪದೇ ಕಂಡು ಮರೆಯಾಗುವ ಸೂರ್ಯನಿಗಿಂತ ಬೇರೆ ಗಡಿಯಾರ ಬೇಕೆ? ಹುಣ್ಣಿಮೆ-ಅಮಾವಾಸ್ಯೆಗಳ ಲಯವನ್ನು ಒಮ್ಮೆಯೂ ತಪ್ಪದೆ ಪರಿಪಾಲಿಸುತ್ತಾ ಬಂದಿರುವ ಚಂದ್ರನಿಲ್ಲವೇ?

ಭಾಷೆ ಸೂಕ್ಷ್ಮತೆ ಪಡೆದಂತೆ, ನಾವು ಗಡಿಯಾರ ಮತ್ತು ಕ್ಯಾಲೆಂಡರ್‌ ಗಳ ನಡುವೆ ವ್ಯತ್ಯಾಸ ಮಾಡಿಕೊಂಡಿದ್ದೇವೆ. ಹೀಗಾಗಿ, ಚಂದ್ರನ ಆಗಮನ-ನಿರ್ಗಮನಗಳು, ಅವು ಕಾಲ ಮಾಪನ ಮಾಡಿದರೂ, ನಮಗೆ ಗಡಿಯಾರ ಎನ್ನಿಸುವುದಿಲ್ಲ. ಬದಲಿಗೆ, ದಿನ-ವಾರಗಳನ್ನು ಸೂಚಿಸುವ ಕ್ಯಾಲೆಂಡರ್ ಆಗುತ್ತದೆ.

ನಮ್ಮ ಕಣ್ಣೆದುರಿಗೇ, ದಿನದಿಂದ ದಿನಕ್ಕೆ ಬದಲಾಗುವ ಚಂದ್ರ ನಮಗೆ ಕ್ಯಾಲೆಂಡರ್ ಒದಗಿಸಿದರೆ, ನಾವು ಕಣ್ಣೆತ್ತಿ ನೋಡಲಾಗದ ಸೂರ್ಯ, ಗಡಿಯಾರ ಒದಗಿಸಿದ; ತನ್ನ ನೆರಳಿನ ಮೂಲಕ. ಬೆಳಗಿನಿಂದ ಸಂಜೆಯವರೆಗೆ ಆಕಾಶದಲ್ಲಿ ಸೂರ್ಯನ ಸ್ಥಾನ ಬದಲಾದಂತೆ, ಅವನ ಬೆಳಕಿನಿಂದ ಮೂಡುವ ನೆರಳಿನ ಸ್ಥಾನವೂ ಬದಲಾಗುವುದನ್ನು ಕಂಡ ನಮಗೆ, “ಸನ್ ಡಯಲ್”‌ಗಳನ್ನು ನಿರ್ಮಿಸುವುದು ಕಷ್ಟವೆನಿಸಲಿಲ್ಲ. ನೆರಳೇ ಗಡಿಯಾರದ ಮುಳ್ಳಾಗಿ ಕೆಲಸ ಮಾಡುವ ಈ ಸನ್ ಡಯಲ್ ಗಳೇ ಮಾನವರು ನಿರ್ಮಿಸಿದ ಪ್ರಪ್ರಥಮ ಕೃತಕ ಗಡಿಯಾರಗಳು ಎನ್ನಬಹುದು. ಈಜಿಪ್ಟಿನಲ್ಲಿ ಐದೂವರೆ ಸಾವಿರ ವರ್ಷಗಳ ಹಿಂದೆಯೇ ಇಂತಹ ಸನ್ ಡಯಲ್‌ ಗಳನ್ನು ನಿರ್ಮಿಸುತ್ತಿದ್ದರೆಂದು ಇತಿಹಾಸ ತಜ್ಞರು ಹೇಳುತ್ತಾರೆ. ಈ ಈಜಿಪ್ಟಿನವರು, ತಮ್ಮ ಡಯಲ್‌ ಗಳನ್ನು ನಿರ್ಮಿಸುವಾಗ, ದಿನವನ್ನು, ಹನ್ನೆರಡು ಅವಧಿಗಳ ಎರಡು ಭಾಗಗಳಾಗಿ ವಿಭಾಗಿಸಿದ್ದರು. ನಮ್ಮ ಆಧುನಿಕ ಗಡಿಯಾರಗಳು ಇಂದೂ ಸಹ ಹನ್ನೆರಡು ಗಂಟೆಗಳನ್ನು ತೋರಿಸುತ್ತಿದ್ದರೆ, ಅದಕ್ಕೆ ಕಾರಣ ಈ ಈಜಿಪ್ಷಿಯನ್ನರೇ! ಆಧುನಿಕತೆಯ ಹರಿಕಾರರೆನ್ನಿಸಿದ ಫ್ರೆಂಚರು, ಫ್ರೆಂಚ್ ಕ್ರಾಂತಿಯ ನಂತರ, ದಿನವನ್ನು ಹತ್ತು ಗಂಟೆಗಳಾಗಿ ವಿಭಜಿಸಿ, ಪ್ರತಿ ಗಂಟೆಗೂ ನೂರು ನಿಮಿಷಗಳಿರುವ, “ಡೆಸಿಮಲ್ ಟೈಮ್” ಪದ್ಧತಿಯನ್ನು ಪ್ರಾರಂಭಿಸಿದರಾದರೂ, ಅದು ಅಂತಹ ಮಾನ್ಯತೆ ಪಡೆಯಲಿಲ್ಲ.

ಪಲ್ಸಾರ್ ಅವನ ಟೆಲೆಸ್ಕೋಪಿಗೆ ಸಿಕ್ಕಿ ಬಿತ್ತು. ಆ ಪಲ್ಸಾರ್, ಸೆಕೆಂಡಿಗೆ ೬೪೧ ಸಾರಿ ಸುತ್ತುತ್ತಿತ್ತು. ಅವನು, ತನ್ನ ಪ್ರೊಫೆಸರ್‌ ಗೆ ಫೋನ್‌ಮಾಡಿ ತಾನು ಕಂಡದ್ದನ್ನು ತಿಳಿಸಿದ. ಅವನ ಮಾತನ್ನು ಕೇಳಿದ ಆತನ ಪ್ರೊಫೆಸರ್ ಕೆಲ ಕ್ಷಣ ಮಾತನಾಡಲಿಲ್ಲ. ಅನಂತರ, ಅವರು ಅವನು ಕಂಡದ್ದರ ಮಹತ್ವವನ್ನು ಅವನಿಗೆ ವಿವರಿಸಿದರು.

ಫ್ರೆಂಚ್ ಕ್ರಾಂತಿಯ ನಂತರ, ಅಲ್ಲಿನ ನ್ಯಾಷನಲ್ ಅಸೆಂಬ್ಲಿಯಲ್ಲಿ, ಮುಖ್ಯವಾಗಿ ಎರಡು ಗುಂಪುಗಳಿದ್ದವು. ಒಂದು ಗುಂಪು ರಾಜನ ಆಡಳಿತ ಶಕ್ತಿಯನ್ನು ಕಡಿಮೆ ಮಾಡಬೇಕೆಂದು ಆಗ್ರಹಿಸುತ್ತಿತ್ತು. ಇನ್ನೊಂದು ಅದನ್ನು ವಿರೋಧಿಸುತ್ತಿತ್ತು. ಮೊದಲ ಗುಂಪಿನವರು, ಅಸೆಂಬ್ಲಿ ಭವನದಲ್ಲಿ ಅಧ್ಯಕ್ಷನ ಎಡಗಡೆಯ ಕುರ್ಚಿಗಳಲ್ಲಿ ಕುಳಿತಿರುತ್ತಿದ್ದರು. ಹೀಗಾಗಿ, ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ಬಯಸುವವರನ್ನು “ಎಡ ಪಂಥೀಯ”ರೆನ್ನುವ ವಾಡಿಕೆ ಫ್ರಾನ್ಸ್ ನಲ್ಲಿ ಶುರುವಾಗಿ, ಮುಂದೆ, ಯೂರೋಪ್, ಅಮೆರಿಕ, ಭಾರತವೂ ಸೇರಿದಂತೆ ವಿಶ್ವಾದ್ಯಂತ ಹರಡಿದೆ.

ಗಡಿಯಾರದ ಗಂಟೆಗಳ ವಿಚಾರದಲ್ಲೂ, ಫ್ರೆಂಚ್ ಕ್ರಾಂತಿಯ ಪದ್ಧತಿಯೇ ಮಾನ್ಯತೆ ಪಡೆದಿದ್ದರೆ, ನಾನೂ ಸೇರಿದಂತೆ, ಎಷ್ಟೋ ಜನ ಬಾಲಕ-ಬಾಲಕಿಯರ ಬದುಕು ಕೊಂಚ ಮಟ್ಟಿಗೆ ಸುಲಭವಾಗುತ್ತಿತ್ತೇನೋ. ಟೈಮ್‌ ಗೆ ಮಾತ್ರ ಇರುವ ಈ ೧೨-೬೦ರ ಪದ್ಧತಿಯಿಂದ, ಭೌತಶಾಸ್ತ್ರದ ಪರೀಕ್ಷೆಯಲ್ಲಿ ಉಳಿದೆಲ್ಲಾ ಲೆಕ್ಕಾಚಾರ ಸರಿ ಇದ್ದರೂ, ಕಡೆಯ ಉತ್ತರ ಮಾತ್ರ ತಪ್ಪಿರುವ ಸೋಲನ್ನು ನಾನು ಅನೇಕ ಬಾರಿ ಅನುಭವಿಸಿದ್ದೇನೆ. ಶಾಲಾ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಅನುಭವಿಸುವ ಇಂತಹ ಕಷ್ಟಗಳನ್ನು ಯಾವುದೇ ಕ್ರಾಂತಿಗಳೂ ನಿವಾರಿಸುವುದಿಲ್ಲವೇನೋ.

ಸನ್-ಡಯಲ್‌ಗಳನ್ನು ಪುರಾತನ ಈಜಿಪ್ಷಿಯನ್ನರಷ್ಟೇ ಅಲ್ಲ, ಬ್ಯಾಬಿಲೋನಿಯಾದವರು, ಮೆಸಪಟೋಮಿಯಾದವರು, ಚೈನಾದವರು, ರೋಮನ್ನರು, ಭಾರತೀಯರೂ ಸಹ ನಿರ್ಮಿಸಿದ್ದಾರೆ. ರಾಜಾ ಮಾನ್ ಸಿಂಗ್, ದೆಹಲಿ, ಜಯಪುರ್, ಉಜ್ಜಯನಿ, ಮಥುರಾ, ವಾರಣಾಸಿಗಳಲ್ಲಿ, ಹದಿನೆಂಟನೆಯ ಶತಮಾನದ ಆದಿಯಲ್ಲಿ ನಿರ್ಮಿಸಿದ “ಜಂತರ್ ಮಂತರ್”ಗಳನ್ನು ತಿಳಿಯದವರು ಯಾರು?! ಈ ಜಂತರ್-ಮಂತರ್‌ ಗಳು ಪುರಾತನ ಈಜಿಪ್ಟಿನ ಸನ್-ಡಯಲ್‌ ಗಳಂತಹ ಸರಳ ನೆರಳು-ಬೆಳಕಿನಾಟದ ಗಡಿಯಾರಗಳಲ್ಲ. ಕಾಲವನ್ನು ಸೆಕೆಂಡುಗಳಷ್ಟು ಕತ್ತರಿಸಬಲ್ಲ ಸೊಫಿಸ್ಟಿಕೇಟೆಡ್ ಗಡಿಯಾರಗಳು.

ಆಧುನಿಕ ಗಡಿಯಾರಗಳ ಮುಳ್ಳುಗಳು ಬಲದಿಂದ ಎಡಕ್ಕೆ ಚಲಿಸುವ ಈ “ಕ್ಲಾಕ್ ವೈಸ್” ಪದ್ಧತಿಯ ಕುರಿತು ಎಂದಾದರೂ ಕುತೂಹಲಿಸಿದ್ದೀರಿಯೇ? ಈ ಸನ್-ಡಯಲ್ ನಿರ್ಮಿಸಿದವರ ಪಟ್ಟಿಯನ್ನು ಇನ್ನೊಮ್ಮೆ ಗಮನಿಸಿ ನೋಡಿ. ಈ ದೇಶಗಳೆಲ್ಲವೂ ಇರುವುದು ಭೂಗೋಳದ ಉತ್ತರಾರ್ಧದಲ್ಲಿಯೇ. ಈ “ಕ್ಲಾಕ್ ವೈಸ್” ಪ್ರಶ್ನೆಗೆ ಉತ್ತರ ಇದರಲ್ಲಿದೆ. ಭೂಗೋಳದ ಉತ್ತರಾರ್ಧದಲ್ಲಿ ನಿರ್ಮಿಸಿದ ಸನ್-ಡಯಲ್‌ ಗಳಲ್ಲಿ ನೆರಳು ಬಲದಿಂದ ಎಡಕ್ಕೆ ಚಲಿಸುತ್ತದೆ. ಹದಿನೈದನೆಯ ಶತಮಾನದ ಯೂರೋಪಿನಲ್ಲಿ ಮುಳ್ಳುಗಳಿರುವ ಮೆಕಾನಿಕಲ್ ಗಡಿಯಾರಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣ ಮಾಡತೊಡಗಿದಾಗ, ಅವರು, ಅದಕ್ಕೆ ಮುನ್ನ ಸಾಮಾನ್ಯವಾಗಿದ್ದ ಸನ್-ಡಯಲ್‌ ನ ಎಡದಿಂದ ಬಲಕ್ಕೆ ಚಲಿಸುವ ನೆರಳಿನ ಪದ್ಧತಿಯನ್ನೇ ಅನುಕರಿಸಿದರು. ಮೆಕಾನಿಕಲ್ ಗಡಿಯಾರಗಳ ಬಳಕೆ ಹೆಚ್ಚಾದಂತೆ, ಗಡಿಯಾರದ ಮುಳ್ಳುಗಳೂ ಸಹ ವಿಶ್ವಾದ್ಯಂತ ಒಂದೇ ದಿಕ್ಕಿನಲ್ಲಿ ಚಲಿಸಲು ಆರಂಭಿಸಿದವು. ಇಂದು, ನೀವು ಯಾವುದೇ ದೇಶಕ್ಕೆ ಹೋದರೂ, ಈ “ಕ್ಲಾಕ್‌ ವೈಸ್”ಗೆ ಒಂದೇ ಅರ್ಥವಿದೆ. ಇದನ್ನು ಯೂರೋಪಿಯನ್ನರು ವಿಶ್ವದ ಮೇಲೆ ಹೇರಿದ ಗಡಿಯಾರ-ಸಾರ್ವಭೌಮತ್ವ ಎನ್ನಬಹುದೇನೋ.

ಭೂಮಂಡಲದ ದಕ್ಷಿಣಾರ್ಧ ಗೋಳದಲ್ಲಿರುವ ಬೊಲಿವಿಯಾದಲ್ಲಿ, ಕೆಲ ವರ್ಷಗಳ ಹಿಂದೆ, ಎಡ ಪಂಥೀಯ ಇವೋ ಮೊರಾಲೆಸ್ ಅಧಿಕಾರದಲ್ಲಿದ್ದಾಗ, ಅಲ್ಲಿನ ಪಾರ್ಲಿಮೆಂಟ್ ನಾಯಕರು, ಉತ್ತರಾರ್ಧ/ಯೂರೋಪಿಯನ್ ದೇಶಗಳ ಈ ಗಡಿಯಾರ-ಸಾರ್ವಭೌಮತ್ವವನ್ನು ಪ್ರತಿಭಟಿಸಿ, ಪಾರ್ಲಿಮೆಂಟ್ ಭವನದ ಗೋಪುರದಲ್ಲಿರುವ ಗಡಿಯಾರದ ದಿಕ್ಕನ್ನು ಬದಲಿಸಿದರು. ಆ ಗಡಿಯಾರ ಈಗ ಸರಿಯಾದ ಸಮಯವನ್ನೇ ತೋರುತ್ತದೆ, ಆದರೆ, ಚಲಿಸುವ ದಿಕ್ಕು ಮಾತ್ರ ಎಡದಿಂದ ಬಲಕ್ಕೆ!

ಆದರೆ, ಎಡ ಪಂಥೀಯರ ಈ ಅಪ್ರದಕ್ಷಿಣೆಯ ಗಡಿಯಾರ, ಕೇವಲ ಒಂದು ಕುತೂಹಲದ ವಿಷಯ ಮಾತ್ರ. ಅಲ್ಲಿನ ಜನರ ಕೈ ಗಡಿಯಾರಗಳ ಚಲಿಸುವ ದಿಕ್ಕೇನೂ ಬದಲಾಗಿಲ್ಲ.

******

ಕೆಲ ವರ್ಷಗಳ ಹಿಂದೆ, ನಾನು ಇಟಲಿಯ ರೋಮ್ ನಗರದ ಸಬ್-ವೇ ಟ್ರೇನ್‌ ನಲ್ಲಿ ಚಲಿಸುವಾಗ, ಒಂದು ವಿಷಯ ಕುತೂಹಲವೆನ್ನಿಸಿತು. ಟ್ರೇನಿನಲ್ಲಿ, “ಮುಂದಿನ ನಿಲ್ದಾಣ …”, “ಎಡಗಡೆಯ ಬಾಗಿಲು ತೆರೆಯಲಿದೆ” ಎಂದು ಅನೌನ್ಸ್ ಮಾಡುವಾಗೆಲ್ಲಾ, “ಎಡಗಡೆ” ಎನ್ನಲು ಅವರು ಬಳಸುತ್ತಿದ್ದ ಪದ “ಸಿನಿಸ್ಟ್ರಾ”. ಇಟಾಲಿಯನ್/ಲ್ಯಾಟಿನ್ ಭಾಷೆಯಲ್ಲಿ “ಸಿನಿಸ್ಟ್ರಾ” ಎಂದರೆ “ಎಡ” ಎನ್ನುವ ಅರ್ಥವಿದೆ. ಅದರ ಇನ್ನೊಂದು ಅರ್ಥ “ಅಮಂಗಳ”,”ಅಶುಭ” ಅಥವಾ “ದುಷ್ಟ”. ಇಂಗ್ಲೀಷ್ ಭಾಷೆಯ “ಸಿನಿಸ್ಟರ್” (sinister) ಪದದ ಮೂಲವೂ ಅದೇ. ಹಾಗೆಯೇ, ಇಂಗ್ಲೀಷ್ ಪದ “ರೈಟ್” (right) ಗೆ “ಬಲ ಬದಿ” ಮತ್ತು “ಸರಿಯಾದ” ಎಂಬ ಎರಡೂ ಅರ್ಥವಿರುವುದರ ಹಿಂದೂ ಇದೇ ಕಾರಣವಿದೆ. ಹಿಂದೂಗಳಂತೆಯೇ, ರೋಮನ್ ಕ್ಯಾಥಲಿಕ್ಕರೂ, ಬಲದಿಂದ ಎಡಕ್ಕೇ ಪ್ರದಕ್ಷಿಣೆ ಹಾಕುತ್ತಾರೆ.

ಎಡ-ಬಲದಂತಹ ದಿಕ್ಸೂಚಿಯ ಪದಗಳು ಮಂಗಳ-ಅಮಂಗಳವಾಗಿ, ರಾಜಕೀಯ ಗುಂಪುಗಳ ಲೇಬಲ್‌ಗಳಾಗಿ ಭಾಷೆಯ ಬಳಕೆಯಲ್ಲಿ ಉಪಯೋಗವಾಗುವುದು ಕುತೂಹಲವೆನಿಸಿದರೂ, ಅದಕ್ಕಿಂತ ಕುತೂಹಲದ ವಿಷಯವೂ ಒಂದಿದೆ. ಅದು “ಕಾಲಕ್ಕೆ ದಿಕ್ಕಿದೆಯೇ?” ಎಂಬ ಪ್ರಶ್ನೆ. ಇಲ್ಲಿ ನಾನು ಪ್ರಶ್ನಿಸುತ್ತಿರುವುದು “ಭೂತದಿಂದ ಭವಿಷ್ಯಕ್ಕೆ” ಕಾಲ ಚಲಿಸುತ್ತದೆ ಎಂಬ ನಮ್ಮ ಅನುಭವ-ನಂಬಿಕೆಗಳ ಮಾತಲ್ಲ. ಬದಲಿಗೆ, ಗಡಿಯಾರದ ಮುಳ್ಳುಗಳೇನೋ ಬಲದಿಂದ-ಎಡಕ್ಕೆ ಚಲಿಸುತ್ತದೆ ಎಂದು ಎಲ್ಲರೂ ಒಪ್ಪಿಕೊಂಡಿದ್ದಾಗಿದೆ – ಬೊಲಿವಿಯಾದ ಎಡಪಂಥೀಯರನ್ನು ಬಿಟ್ಟು. ಆದರೆ, ಕಾಲ ಚಲಿಸುವುದು “ಬಲದಿಂದ ಎಡಕ್ಕೋ” ಅಥವಾ “ಎಡದಿಂದ ಬಲಕ್ಕೋ”?

ಈ ಪ್ರಶ್ನೆಗೆ ಉತ್ತರವೂ, ಬಹು ಮಟ್ಟಿಗೆ ಭಾಷೆ ಮತ್ತು ಅದಕ್ಕಿಂತ ಮುಖ್ಯವಾಗಿ ಆ ಭಾಷೆಗೆ ಬಳಸುವ ಲಿಪಿಯ ಮೇಲೆ ಅವಲಂಬಿತವಾಗಿದೆ. ಕನ್ನಡ, ಇಂಗ್ಲೀಷ್, ಸೇರಿದಂತೆ ಜಗತ್ತಿನ ಬಹುತೇಕ ಭಾಷೆಗಳಲ್ಲಿ ನಮ್ಮ ಬರಹ-ಓದುಗಳು ಎಡದಿಂದ ಬಲಕ್ಕೆ ಮುಂದುವರೆಯುತ್ತದೆ. ಅರಾಬಿಕ್, ಹೀಬ್ರೂ ಭಾಷೆಗಳ ಲಿಪಿಗಳಲ್ಲಿ ಅದು ಬಲದಿಂದ ಎಡಕ್ಕೆ ಚಲಿಸುತ್ತದೆ. ಬರೆಯುವ/ಓದುವ ಲಿಪಿಯೊಂದು, ಕಾಲಕ್ಕೆ ಹೇಗೆ ದಿಕ್ಕನ್ನು ನೀಡುತ್ತದೆ ಎಂಬುದಕ್ಕೆ, ಸುಧಾ ವಾರಪತ್ರಿಕೆಯಲ್ಲಿ ನಾನು ಚಿಕ್ಕಂದಿನಲ್ಲಿ ಓದುತ್ತಿದ್ದ ಡಾಬೂ ಕಾಮಿಕ್ಸ್ ಅನ್ನೇ ಮತ್ತೊಮ್ಮೆ ಪ್ರಸ್ತಾಪಿಸುತ್ತೇನೆ. (ನಮ್ಮ ಕಾಲಯಾತ್ರೆಗೆ ಕಾರಣ ಕರ್ತನಾದ ಡಾಬೂವನ್ನು ನೀವು ಮರೆತಿರಬಹುದಾದರೂ ನಾನು ಮರೆತಿಲ್ಲ!) ಈ ಕಾಮಿಕ್ಸ್ ನಾನು ಓದಿದ್ದು ಕನ್ನಡದಲ್ಲಿ. ಹೀಗಾಗಿ, ಆ ಕಾಮಿಕ್ಸ್ ನಲ್ಲಿನ ಕತೆಯನ್ನು ಮುನ್ನಡೆಸಲು, ನಾವು ಎಡ ತುದಿಯ ಬಾಕ್ಸ್ ನಿಂದ ಬಲ ತುದಿಯ ಬಾಕ್ಸ್ ವರೆಗೂ ಓದಬೇಕು. ಅಲ್ಲಿ ಕಾಲಕ್ಕೆ ಒಂದು ದಿಕ್ಕನ್ನು ನೀಡಲಾಗಿದೆ. ಅದು ಎಡದಿಂದ ಬಲಕ್ಕೆ ಚಲಿಸುತ್ತದೆ. ಆದರೆ, ಅದೇ ಕಾಮಿಕ್ಸ್ ಅನ್ನು, ನಾನು ಅರಾಬಿಕ್ ಲಿಪಿ ಬಳಸುವ ಉರ್ದು ಭಾಷೆಯಲ್ಲಿ ಓದಿದ್ದಿದ್ದರೆ, ಅದರ ದಿಕ್ಕು ತದ್ವಿರುದ್ಧ!

ಈ ಎಡದಿಂದ ಬಲಕ್ಕೆ ಚಲಿಸುವ ಕಾಲದ ದಿಕ್ಕು ಎಷ್ಟರ ಮಟ್ಟಿಗೆ, ನಮ್ಮ ಮನಸ್ಸಿನೊಳಕ್ಕೆ ನಾಟಿದೆ ಎಂದರೆ, ಕಾಲದಿಂದಲೇ ಅಳೆಯುವ ಕ್ರೀಡಾ ಸ್ಪರ್ಧೆಗಳ ಟಿ.ವಿ. ಕವರೇಜ್ ಗಮನಿಸಿ. ಉಸೇನ್ ಬೋಲ್ಟ್‌, ಸ್ಟೇಡಿಯಂ‌ನಲ್ಲಿ ಯಾವ ದಿಕ್ಕಿನಲ್ಲಿ ಓಡುತ್ತಾನೋ, ತಿಳಿಯದು. ಆದರೆ, ಅವನ ಮಾಂಸಲ ಕಾಲುಗಳು ಎಷ್ಟೇ ವೇಗವಾಗಿ ಓಡಿದರೂ, ನಮ್ಮ ಟಿ.ವಿ. ಸ್ಕ್ರೀನ್‌ ‌ಗಳಲ್ಲಿ ಅವುಗಳ ದಿಕ್ಕು ಮಾತ್ರ ಎಡದಿಂದ ಬಲಕ್ಕೇ!

ಉಸೇನ್ ಬೋಲ್ಟ್ ನಂತಹ ಕ್ರೀಡಾಪಟುವಿನ ವೇಗವನ್ನು ಅಳೆಯಲು, ಕಾಲವನ್ನು ಅತಿ ಸೂಕ್ಷ್ಮವಾಗಿ ಕತ್ತರಿಸುವ ಗಡಿಯಾರಗಳು ಬೇಕು. ಹಾಗೆಯೇ ಎಲ್ಲರೂ ಒಪ್ಪಿಕೊಳ್ಳುವಂತಹ ಒಂದು ಮಾನದಂಡ ಬೇಕು. ಇದರ ಹಿಂದಿನ ತಂತ್ರಜ್ಞಾನ ಮತ್ತು ರಾಜಕೀಯದ ಮಜಲುಗಳೂ ಸಹ ಕುತೂಹಲಕಾರಿ ವಿಷಯಗಳೇ!

(ಮುಂದುವರೆಯುವುದು)