ಕೇವಲ ಎರಡೇ ಆಯಾಮಗಳಿರುವ ನೆರಳಿನಂತಹ ವಸ್ತುವಿಗೆ ಕಾಲಯಂತ್ರದ ಬಟನ್ ಒತ್ತುವುದು ಸಾಧ್ಯವೇ? ಎರಡೇ ಆಯಾಮದ ವಸ್ತುವಿಗೂ ಜೀವ ಇರುವುದು ಸಾಧ್ಯವೇ? ಅದು ನಿಜವೇ ಆದರೆ, ನಮ್ಮ ನೆರಳುಗಳಿಗೆ ತಮ್ಮದೇ ಆದ ಜೀವ ಇಲ್ಲವೆನ್ನುವುದಾದರೂ ಹೇಗೆ? ಜೀವ ಇರುವುದು ನಿಜವಾದಲ್ಲಿ ಅವುಗಳಿಗೂ ಯೋಚನಾ ಶಕ್ತಿ – ನೆನಪುಗಳೂ ಇರಬೇಕಲ್ಲವೇ? ಈ ಯೋಚನಾ ಶಕ್ತಿ – ನೆನಪುಗಳು ಇಲ್ಲದಿದ್ದರೆ, ಪ್ರೊ.ಭೂಸನೂರಮಠರವರ ಕಾಲಯಂತ್ರದಲ್ಲಿ ಭೂತಕ್ಕೋ-ಭವಿಷ್ಯತ್ತಿಗೋ ಪ್ರಯಾಣ ಮಾಡಿದವರು ವರ್ತಮಾನಕ್ಕೆ ವಾಪಸಾಗುವುದಾದರೂ ಹೇಗೆ? ಇಂತಹ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ. ಕಾಲಯಾನ ನಮ್ಮೆದುರಿಗೆ ತಂದೊಡ್ಡುವ ಪ್ರಶ್ನೆಗಳನ್ನು ಗಮನಿಸಿದಾಗ, ಕಾಲಯಾನ ಮಹಾ ಕಷ್ಟವೆಂದೆನಿಸಬಹುದು.
ಶೇಷಾದ್ರಿ ಗಂಜೂರು ಬರೆಯುವ ಅಂಕಣ

 

ನಮ್ಮೂರು ಚಿಂತಾಮಣಿಯಿಂದ ಬೆಂಗಳೂರಿಗೆ ಸುಮಾರು ಐವತ್ತು ಮೈಲಿ ದೂರ. ಐವತ್ತು ವರ್ಷಗಳ ಹಿಂದೆಯೂ ಅಷ್ಟೇ ದೂರವಿದ್ದರೂ, ಅದೊಂದು ಬೇರೆಯದೇ ಆದ ಪ್ರಪಂಚವೆನ್ನಿಸುತ್ತಿತ್ತು. ಆ ಕಾಲದಲ್ಲಿ, ಚಿಂತಾಮಣಿಯಿಂದ ಬೆಂಗಳೂರಿಗೆ ಪ್ರಯಾಣಮಾಡುವಾಗ ಮಧ್ಯದಲ್ಲಿ ನಾವು ಹೊಸಕೋಟೆ ಕೆರೆಯನ್ನು ಹಾದುಹೋಗಬೇಕಿತ್ತು. ವಿಶಾಲವಾಗಿದ್ದ ಆ ಕೆರೆಯನ್ನು ನೋಡಿದಾಗ ಅದೊಂದು ಮಹಾಸಾಗರವೆಂದೇ ನಾನು ಭಾವಿಸುತ್ತಿದ್ದೆ. ಹೀಗಾಗಿ ಅದನ್ನು ನೋಡಲು ಬಸ್ಸಿನಲ್ಲಿ ಕಿಟಕಿ ಪಕ್ಕ ಕುಳಿತುಕೊಳ್ಳಬೇಕೆಂದು ನಾನೂ ಸಹ ಎಲ್ಲ ಮಕ್ಕಳಂತೆ ಹಟಮಾಡುತ್ತಿದ್ದೆ.

ಆಗಿನ ಕಾಲದ ಬಸ್ಸುಗಳಲ್ಲಿ, ಕಿಟಕಿಯಿಂದ ಕೈ, ತಲೆ ಹೊರಹಾಕದಂತೆ ಸೂಚನೆಗಳನ್ನು ಬರೆದಿರುತ್ತಿದ್ದರು. ಇಂತಹ ವಿಷಯಗಳಲ್ಲಿ ಭಯಸ್ತನಾಗಿದ್ದ ನಾನು, ಈ ಸೂಚನೆಗಳನ್ನು ಆಜ್ಞೆಗಳಂತೆಯೇ ಪರಿಪಾಲಿಸುತ್ತಿದ್ದೆ. ವಾಹನಗಳ ಕಿಟಕಿಗಳಿಂದ ತಲೆ-ಕೈ ಹೊರಹಾಕಿದರೆ ಆಗುವ ಅನಾಹುತಗಳನ್ನು ನಾನೆಂದೂ ಕಂಡಿರದಿದ್ದರೂ, ಆ ಸೂಚನೆಗಳು ತರ್ಕಬದ್ಧವಾಗಿಯೇ ಇವೆ ಎಂಬ ಭಾವನೆ ನನಗಿತ್ತು. ಹಾಗೊಮ್ಮೆ ಕೆಲವು ಮಕ್ಕಳು ಕೈ-ತಲೆ ಹೊರಹಾಕಿದರೆ, ಹಿಂದಿನ ಸೀಟಿನಲ್ಲಿ ಕುಳಿತಿದ್ದ ವಯಸ್ಕರು, ಆ ಮಕ್ಕಳ ತಲೆ-ಕೈಗಳನ್ನು ಒಳಗೆಳೆಯುವುದನ್ನೂ ಅಥವಾ ಆ ಮಕ್ಕಳ ಪೋಷಕರನ್ನು ಎಚ್ಚರಿಸುವುದನ್ನು ನಾನು ಹಲವು ಬಾರಿ ಗಮನಿಸಿದ್ದೆ.

ಈಗ “motion sickness” ಎಂದು ಕರೆಯುವ ಇಂಗ್ಲೀಷ್ ಹೆಸರು ಆಗ ನನಗೆ ತಿಳಿದಿರಲಿಲ್ಲವಾದರೂ, ಬಸ್‌ ನಲ್ಲಿ ಪ್ರಯಾಣಮಾಡುವಾಗ ಹೊಟ್ಟೆ ತೊಳಸು – ತಲೆ ತಿರುಗು ಇತ್ಯಾದಿಗಳ ಬಗೆಗೆ ಹಲವರು ದೂರುವುದು ನನಗೆ ಹೊಸತೇನೂ ಆಗಿರಲಿಲ್ಲ. ಆದರೆ, ನನಗೆಂದೂ ಅಂತಹ ಅನುಭವವಾಗಿರಲಿಲ್ಲವಾದ್ದರಿಂದ, ನನ್ನ ದೃಷ್ಟಿಯಲ್ಲಿ ಇದೆಲ್ಲಾ ಕಿಟಕಿಯ ಪಕ್ಕ ಕುಳಿತುಕೊಳ್ಳಲು ಮಾಡುವ ಆವುಟ – ಸಂಚು ಎಂದೇ ನಾನು ಭಾವಿಸುತ್ತಿದ್ದೆ. ಆದರೂ, ಇದನ್ನು “ನಿರಾಧಾರ” ಎಂದು ಸಂಪೂರ್ಣವಾಗಿ ತಿರಸ್ಕರಿಸಲು ನಾನು ಸಿದ್ಧನಿರಲಿಲ್ಲ. ಇದಕ್ಕೆ ಮುಖ್ಯ ಕಾರಣ, ಕಿಟಕಿಯ ಪಕ್ಕ ಕುಳಿತುಕೊಳ್ಳಬೇಕೆಂದು ಎಂದೂ ಹಟಮಾಡದ ನಮ್ಮ ಅಜ್ಜಿ ಸಹ ಒಮ್ಮೊಮ್ಮೆ ಈ ಮೋಷನ್ ಸಿಕ್‌ನೆಸ್ ವಿಷಯ ಹೇಳುತ್ತಿದ್ದರು. ಅದಕ್ಕಿಂತ ಮುಖ್ಯವಾಗಿ, ಅವರು ಪ್ರಯಾಣ ಮಾಡುವಾಗ “ಸೆಲೀನ್” ಹೆಸರಿನ ಹುಳಿ ಮಾತ್ರೆಗಳನ್ನು ಇಟ್ಟುಕೊಂಡಿರುತ್ತಿದ್ದರು. ಹೊಟ್ಟೆ ತೊಳಸದಿದ್ದರೂ, ಆ ಹುಳಿ ಮಾತ್ರೆಗಾಗಿ ನಾನು ಪ್ರಯಾಣದ ಈ ಅಸೌಖ್ಯವನ್ನು ನಂಬಲೇ ಬೇಕಿತ್ತು.

ಎಚ್.ಜಿ.ವೆಲ್ಸ್‌ ನ ಪುಸ್ತಕದ ಕಾಲಯಾತ್ರಿ ಸಹ, ಕಾಲಪ್ರಯಾಣದಲ್ಲಿ ಇಂತಹ ಅನುಭವ ಆಗುವ ಕುರಿತು ಹೇಳುತ್ತಾನೆ. ಆದರೆ ಅವನ ಪ್ರಕಾರ, ಬಸ್ ಪ್ರಯಾಣದಲ್ಲಿ ನೀವು ಕೇವಲ ಹೊಟ್ಟೆತೊಳಸು/ತಲೆ ತಿರುಗು (“nausea”) ಅನುಭವಿಸಿದರೆ, ನೀವು ಟೈಮ್ ಮಷೀನ್‌ ನಲ್ಲಿ ಪ್ರಯಾಣಿಸಿದಾಗ, ಇವುಗಳ ಜೊತೆಗೇ, ತಬ್ಬಿಬ್ಬನ್ನೂ (“confusion”) ಸಹ ಅನುಭವಿಸುವ ಸಾಧ್ಯತೆಗಳಿವೆ. ಈ ತಬ್ಬಿಬ್ಬಿನ ವಿಷಯವನ್ನು ಮುಂದೆ ವಿಚಾರ ಮಾಡೋಣ. ಆದರೆ, ಕಾಲಯಂತ್ರದ ಕಿಟಕಿಯಲ್ಲಿ ಕೈ ಇಟ್ಟರೆ, ಏನಾಗಬಹುದು? ಅದನ್ನು ಅವನು ಹೇಳುವುದಿಲ್ಲ.

ನಾನು ಮುಂದೊಮ್ಮೆ ಓದಿದ ಜೋಕ್ ಹೇಳುವಂತೆ, ಕಾಲಯಂತ್ರ ಭವಿಷ್ಯದೆಡೆಗೆ ಪ್ರಯಾಣಿಸುತ್ತಿರುವಾಗ, ನಿಮ್ಮ ಕೈಯನ್ನು ಕಾಲಯಂತ್ರದ ಕಿಟಕಿಯ ಹೊರಗೆ ಇಡದಿರುವುದು ಒಳಿತು. ಇಲ್ಲದಿದ್ದರೆ, ನಿಮ್ಮ ಕೈ ಪಳೆಯುಳಿಕೆ (“fossil”) ಆಗುವ ಸಂಭವವಿದೆ.

******

(ಎಚ್.ಜಿ.ವೆಲ್ಸ್)

ಎಚ್.ಜಿ.ವೆಲ್ಸ್‌ ನ ಟೈ ಮಷೀನ್ ಕತೆಯನ್ನು (ಇನ್ನೂ ಬಾಲಕನಿದ್ದಾಗಲೇ) ಪ್ರಥಮ ಬಾರಿಗೆ ಕೇಳಿದಾಗ ನನಗೆ, ಮನದಲ್ಲಿಯೇ ಒಂದು ಸಂದೇಹ ಮೂಡಿತು. ವೆಲ್ಸ್ ನೀಡಿದ್ದ ತರ್ಕಬದ್ಧವೆನಿಸಿದ್ದ ವಾದದಿಂದ ಕಾಲಪ್ರಯಾಣ ಮಾಡುವುದು ಸಾಧ್ಯ ಎಂದು ಒಪ್ಪಿಕೊಂಡಿದ್ದ ನನಗೆ, ಈ ಸಂದೇಹ ಯೋಚಿಸಿದಷ್ಟೂ ಗಲಿಬಿಲಿ ಮಾಡತೊಡಗಿತು. ನಾನು ಆ ಟೈಮ್ ಮಷೀನ್‌ ನಲ್ಲಿ ಪ್ರಯಾಣ ಮಾಡದಿದ್ದರೂ, ಒಂದು “confusion” ಅನುಭವಿಸಲಾರಂಭಿಸಿದೆ.

ಈ ಗಲಿಬಿಲಿಗೆ ಎಷ್ಟೋ ಅವತಾರಗಳಿದ್ದರೂ, ಅದರ ಮುಖ್ಯ ರೂಪವನ್ನು ಈ ರೀತಿ ಹೇಳಬಹುದು: ನೀವು ಕಾಲಯಂತ್ರದಲ್ಲಿ ಕುಳಿತು ನಿಮ್ಮ ತಾತನ ಕಾಲಕ್ಕೆ ಹೋಗಿ, ನಿಮ್ಮ ಅಜ್ಜಿ-ತಾತನ ವಿವಾಹವನ್ನು ತಡೆಗಟ್ಟಿದರೆ, ಈಗಿನ ನಿಮಗೆ ಏನಾಗುತ್ತದೆ? ಕಾಲಯಾನ ಸಾಧ್ಯವಿದ್ದರೆ, ಕ್ಷಣಾರ್ಧದಲ್ಲಿಯೇ ನಾವು ಇಲ್ಲವಾಗುತ್ತೀವೇ?

ಇಂಗ್ಲೀಷಿನಲ್ಲಿ ಇದನ್ನು “Grandfather Paradox” ಎನ್ನುತ್ತಾರೆ. ಕಾಲ ಇಂತಹ ಎಷ್ಟೋ ವಿರೋಧಾಭಾಸ – ಅಸಂಗತೋಕ್ತಿಗಳನ್ನು ನಮ್ಮೆದುರಿಗೆ ತಂದಿಡುತ್ತದೆ. ಇದು ಕೇವಲ, ಕಾಲ್ಪನಿಕ ಮತ್ತು ತಾತ್ವಿಕ ವಿಷಯಗಳಲ್ಲ. ಭೌತಶಾಸ್ತ್ರದಲ್ಲೂ ಇದು ನಮಗೆದುರಾಗುತ್ತದೆ. ಕಾಲ ನಮ್ಮ ಮುಂದೆ ತಂದೊಡ್ಡುವ ಇಂತಹ ಸಂದಿಗ್ಧತೆಗಳನ್ನು ಅರ್ಥೈಸಿಕೊಳ್ಳಲು, ಪರಿಹರಿಸಲು ಹಲವಾರು ಮಹತ್ವದ ತತ್ವಶಾಸ್ತ್ರಜ್ಞರು, ಸಾಹಿತಿಗಳು, ವಿಜ್ಞಾನಿಗಳು ಪ್ರಯತ್ನಿಸಿದ್ದಾರೆ ಮತ್ತು ಪ್ರಯತ್ನಿಸುತ್ತಲೇ ಇದ್ದಾರೆ.

ಆದರೆ, ಈ ವಿಚಾರದ ಗಹನತೆಯ ಅರಿವು ಇನ್ನೂ ಬಾಲಕನಾಗಿದ್ದ ನನಗೆ ಇರಲಿಲ್ಲ. ಆದರೆ, ಅದು ನನ್ನ ಇರುವಿಕೆಯ ಬಗೆಗೇ ಒಂದು ಆತಂಕವನ್ನು ಮೂಡಿಸಿತ್ತು. ನನ್ನ ಈ ಆತಂಕಕ್ಕೆ ಉತ್ತರ ಎಚ್.ಜಿ.ವೆಲ್ಸ್‌ ನ ಪುಸ್ತಕದಲ್ಲಿ ಇದ್ದೇ ಇರಬೇಕೆಂದು ನಾನು ನಂಬಿದ್ದೆ. ಆ ಪುಸ್ತಕ ನಮ್ಮ ಮನೆಯಲ್ಲಿಯೇ ಇದ್ದರೂ, ಅದನ್ನು ಓದುವುದು ನನ್ನಿಂದ ಸಾಧ್ಯವಿರಲಿಲ್ಲ. ನಾನು ಆಗ ಓದುತ್ತಿದ್ದುದು ಕನ್ನಡ ಶಾಲೆಯಲ್ಲಿ. ಇಂಗ್ಲೀಷ್ ಸಹ ಒಂದು ಪಠ್ಯದ ವಿಷಯವಾಗಿದ್ದರೂ, “ದ ಟೈಮ್ ಮಷೀನ್” ಪುಸ್ತಕವನ್ನು ಓದುವಷ್ಟು ಪರಿಣಿತಿ ನನಗಿರಲಿಲ್ಲ.

(ನನಗೆ ಶಾಲೆಯಲ್ಲಿ ಇಂಗ್ಲೀಷ್ ಶಿಕ್ಷಕಿಯಾಗಿದ್ದವರು, ಹೇಳಿಕೊಟ್ಟಿದ್ದ ಒಂದು ಪಾಠ ಇನ್ನೂ ನೆನಪಿನಲ್ಲಿದೆ:
Question: Where is your classroom?
Answer: My classroom is next to the last room.)

ನನ್ನ ಈ ಸಂದೇಹವನ್ನು ನಿವಾರಿಸಿಕೊಳ್ಳಲು ನನಗೆ ಎರಡು ವಿಧಾನಗಳಿದ್ದವು. ಒಂದು, ಇಂಗ್ಲೀಷ್ ಚೆನ್ನಾಗಿ ಕಲಿಯುವುದು. ಇನ್ನೊಂದು “ದ ಟೈಮ್ ಮಷೀನ್”ನ ಕನ್ನಡ ಅನುವಾದಕ್ಕಾಗಿ ಹುಡುಕುವುದು. ನಾನು, ಈ ಎರಡೂ ವಿಧಾನಗಳಲ್ಲಿ ತೊಡಗಿಕೊಂಡೆ.

******

ಶಾಲೆಗೆ ಹೋಗುವಾಗ ನನ್ನ ದಿನಚರಿ ಹೀಗಿತ್ತು. ಬೆಳಿಗ್ಗೆ ಎದ್ದ ತಕ್ಷಣವೇ, ಹಲ್ಲೂ ಉಜ್ಜದೆ, “ಪ್ರಜಾವಾಣಿ” ಓದುವುದು. ಆದರೆ, ಅಷ್ಟು ಹೊತ್ತಿಗೆ, ಮನೆಯ ಹಿರಿಯರಿಂದ ಪೇಪರ್‌ ಗೆ ಡಿಮ್ಯಾಂಡ್ ಇರುತ್ತಿದ್ದರಿಂದ, ಅದನ್ನು ಸಾವಧಾನವಾಗಿ ಓದಲು ಸಾಧ್ಯವಿರುತ್ತಿರಲಿಲ್ಲ. ಹೀಗಾಗಿ, ಬೇಗ-ಬೇಗ “ಮಾಡೆಸ್ಟಿ ಬ್ಲೇಸ್” ಕಾಮಿಕ್ಸ್ ಓದಿ, ಕ್ರೀಡಾ ಪುಟವನ್ನು ನೋಡಿ, ಸ್ನಾನ ಇತ್ಯಾದಿಗಳ ಸಿದ್ಧತೆ ನಡೆಸುತ್ತಿದ್ದೆ.

ಸ್ನಾನದ ನಂತರ, ತಿಂಡಿಯ ತಟ್ಟೆ ಹಿಡಿದು, ರೇಡಿಯೋದಲ್ಲಿ ವಿವಿಧ ಭಾರತಿಯಲ್ಲಿ ಬರುತ್ತಿದ್ದ ಚಿತ್ರಗೀತೆಗಳನ್ನು ಕೇಳುತ್ತಾ, ಪ್ರಜಾವಾಣಿಯನ್ನು ನಿಧಾನವಾಗಿ ತಿರುವಿಹಾಕುವುದು ನನ್ನ ಅಭ್ಯಾಸವಾಗಿತ್ತು.

ಆಗ ರೇಡಿಯೋದಲ್ಲಿ ಬರುತ್ತಿದ್ದ ಜನಪ್ರಿಯ ಹಾಡುಗಳಲ್ಲಿ ಒಂದು: “ಯೌವ್ವನದ ಹೊಳೆಯಲ್ಲಿ ಈಜಾಟ ಆಡಿದರೆ.. ಸೋಲು ನಿನ್ನದೇ…”.

ನಾನಿನ್ನು ಯೌವ್ವನಕ್ಕೆ ಬಂದಿರಲಿಲ್ಲವಾಗಿದ್ದರಿಂದ, ಆ ಹಾಡಿನ ಅಂತರಾರ್ಥ ನನಗೆ ಗೊತ್ತಿರಲಿಲ್ಲ. “ಯೌವ್ವನ” ಎಂದರೆ ನನ್ನ ದೃಷ್ಟಿಯಲ್ಲಿ ಆಗ ಕೇವಲ ಒಂದು ಕಾಲ ಘಟ್ಟ ಮಾತ್ರ. ಕಾಲದ ಬಗೆಗೆ ಮತ್ತು ಕಾಲಯಾನದ ಬಗೆಗೆ ತಲೆ ಕೆಡಿಸಿಕೊಂಡಿದ್ದ ನನಗೆ, ಕಾಲಘಟ್ಟ ಎನ್ನುವುದು “ಹೊಳೆ” ಹೇಗಾಗುತ್ತದೆ? ಅದು ಹೊಳೆಯೇ ಆದರೆ, ಅದರಲ್ಲಿ ಈಜುವುದು ಬಿಟ್ಟು ಮುಳುಗಬೇಕೇ? ಈಜಿದರೆ ಸೋಲುವುದಾದರೆ, ಮುಳುಗುವುದರಿಂದ ಗೆಲ್ಲಬಹುದೇ? ಈ ಹೊಳೆಯ ದಡಗಳಾವುವು? ಎಂತೆಲ್ಲಾ ಪ್ರಶ್ನೆಗಳು ಮೂಡುತ್ತಿದ್ದವು. (ಆ ಹಾಡು ಹೆಣ್ಣನ್ನು ಉದ್ದೇಶಿಸಿದ್ದಾದರೂ, ನನಗಾಗ ಹಾಗೆನ್ನಿಸಿರಲಿಲ್ಲ)

ಕಾಲವನ್ನು ವ್ಯಾಖ್ಯಾನಿಸುವಲ್ಲಿ, ಕವಿಗಳು ತೋರುವ ಇಂತಹ ಖಚಿತತೆ, ನಾನು ಗಮನಿಸಿದಂತೆ ತತ್ವಶಾಸ್ತ್ರಜ್ಞರು, ವಿಜ್ಞಾನಿಗಳು ತೋರುವುದಿಲ್ಲ.

******

ಆಗ ನಮ್ಮೂರಿನ ಸಾರ್ವಜನಿಕ ಲೈಬ್ರರಿ, ಬಸ್ ನಿಲ್ದಾಣದ ಬಳಿಯಲ್ಲಿಯೇ ಇತ್ತು. ಅದರ ಎದುರಿಗೇ ನಮ್ಮ ಶಾಲೆ. ನಮ್ಮ ಚಿಕ್ಕಪ್ಪ ನನ್ನನ್ನು ಈ ಲೈಬ್ರರಿಗೆ ಕರೆದುಕೊಂಡು ಹೋಗುತ್ತಿದ್ದರು. ಮೊದ-ಮೊದಲು ನಾನು ಈ ಲೈಬ್ರರಿಗೆ ಹೋಗುತ್ತಿದ್ದುದು ನಮ್ಮ ಚಿಕ್ಕಪ್ಪನೊಂದಿಗೆ ಮಾತ್ರ. ಆದರೆ, ನಾನು ಆರು-ಏಳನೆಯ ಕ್ಲಾಸಿಗೆ ಬರುವ ವೇಳೆಗೆ ನಾನೊಬ್ಬನೇ ಲೈಬ್ರರಿಗೆ ಹೋಗುವ ಅಭ್ಯಾಸ ಶುರುವಾಗಿತ್ತು. ಕೆಲವೊಮ್ಮೆ ನಮ್ಮ ಚಿಕ್ಕಪ್ಪ ಅವರಿಗೆ ಬೇಕಾದ ಪುಸ್ತಕಗಳ ಹೆಸರಿನ ಪಟ್ಟಿಯೊಂದನ್ನು ಚೀಟಿಯೊಂದರಲ್ಲಿ ಬರೆದು ಕೊಡುತ್ತಿದ್ದರು. ನಾನು ಅದನ್ನು ಲೈಬ್ರೇರಿಯನ್ನರಿಗೆ ಕೊಡುತ್ತಿದ್ದೆ. ಅವರು ಆ ಪುಸ್ತಕಗಳನ್ನು ಹುಡುಕಿ ನನಗೆ ಕೊಡುತ್ತಿದ್ದರು. ಒಮ್ಮೆಗೆ ಐದು ಪುಸ್ತಕಗಳನ್ನು ಮನೆಗೆ ಕೊಂಡೊಯ್ಯುವ ಸೌಲಭ್ಯ ನಮ್ಮ ಚಿಕ್ಕಪ್ಪನಿಗಿತ್ತು. ಅದರಲ್ಲಿ ಒಂದು ಪುಸ್ತಕ ನನಗೆ ಬೇಕಾದಂತುಹುದು. (ಈ ಸರ್ವೀಸ್ ನೀಡಲಾರಂಭಿಸಿದ ಕೆಲವೇ ತಿಂಗಳುಗಳಲ್ಲಿ, ನಾನು ನನ್ನ ಈ ಸರ್ವೀಸ್ ಶುಲ್ಕವನ್ನು ಎರಡು ಪುಸ್ತಕಗಳಿಗೇರಿಸಿಕೊಂಡೆ!)

ಆ ಕಾಲದಲ್ಲಿ, ನಮ್ಮೂರಿನ ಲೈಬ್ರರಿಯಲ್ಲಿ ಮಕ್ಕಳ ಪುಸ್ತಕಗಳು ಹೆಚ್ಚಾಗಿ ಇರಲಿಲ್ಲ. ಅದರಲ್ಲೂ ಕನ್ನಡದಲ್ಲಿ ಮಕ್ಕಳಿಗಾಗಿ ಬರೆದಿದ್ದ ಪುಸ್ತಕಗಳಂತೂ ಅತಿ ಕಡಿಮೆ; ಕೇವಲ ೪೦-೫೦ ಪುಸ್ತಕಗಳಿದ್ದಿರಬಹುದು ಅಷ್ಟೇ. ನಮ್ಮ ಮನೆಯಲ್ಲೇ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಪುಸ್ತಕಗಳು ಲಭ್ಯವಿದ್ದವು. ತರಾಸು, ತ್ರಿವೇಣಿ, ಟಿ.ಕೆ. ರಾಮರಾವ್, ಹೀಗೆ ಹಲವಾರು ಕನ್ನಡ ಲೇಖಕ-ಲೇಖಕಿಯರ ದೊಡ್ಡವರಿಗಾಗಿ ಬರೆದಿದ್ದ ಪುಸ್ತಕಗಳು ಅಲ್ಲಿದ್ದರೂ, ಅವುಗಳನ್ನು ಓದುವ ಕುತೂಹಲ ನನಗಿರಲಿಲ್ಲ. (ಹೀಗಿದ್ದರೂ, ಇನ್ನೇನೂ ಸಿಕ್ಕದಿದ್ದಲ್ಲಿ ಆ ಪುಸ್ತಕಗಳನ್ನೂ ಓದುತ್ತಿದ್ದೆ. ಟಿ.ಕೆ. ರಾಮರಾವ್ ಬರೆದಿರುವ ಅವರ ಅಮೆರಿಕ ಯಾತ್ರೆಯ ಪುಸ್ತಕವನ್ನು ಓದಿದ ನೆನಪು ಇಂದಿಗೂ ಇದೆ. ಆದರೆ, ಅವರ ಕಾದಂಬರಿಗಳ ನೆನಪಿಲ್ಲ)

ನಾನು ಮುಂದೊಮ್ಮೆ ಓದಿದ ಜೋಕ್ ಹೇಳುವಂತೆ, ಕಾಲಯಂತ್ರ ಭವಿಷ್ಯದೆಡೆಗೆ ಪ್ರಯಾಣಿಸುತ್ತಿರುವಾಗ, ನಿಮ್ಮ ಕೈಯನ್ನು ಕಾಲಯಂತ್ರದ ಕಿಟಕಿಯ ಹೊರಗೆ ಇಡದಿರುವುದು ಒಳಿತು. ಇಲ್ಲದಿದ್ದರೆ, ನಿಮ್ಮ ಕೈ ಪಳೆಯುಳಿಕೆ (“fossil”) ಆಗುವ ಸಂಭವವಿದೆ.

ನನಗೆ ಬೇಕಿದ್ದುದು “ದ ಟೈಮ್ ಮಷೀನ್”ನ ಕನ್ನಡ ಅನುವಾದ. ಅದು ದೊರಕದಿದ್ದರೂ, ಪ್ರತಿ ಸಾರಿ ಲೈಬ್ರರಿಗೆ ಹೋದಾಗಲೂ ಅದಕ್ಕಾಗಿ ಹುಡುಕುತ್ತಲೇ ಇದ್ದೆ. ಹೀಗೊಮ್ಮೆ ಹುಡುಕುತ್ತಿದ್ದಾಗ ನನಗೆ ಸಿಕ್ಕಿದ್ದು, ಪ್ರೊ.ರಾಜಶೇಖರ ಭೂಸನೂರಮಠ ಬರೆದಿದ್ದ ವೈಜ್ಞಾನಿಕ ಕತೆಗಳ ಪುಸ್ತಕ. ಈ ಪುಸ್ತಕದಲ್ಲಿ ಕಾಲಯಾನದ ವಿಚಾರ ಇರದಿದ್ದರೂ, ಆ ಪುಸ್ತಕವನ್ನು ಓದಿದ ನಂತರ, ಪ್ರೊ.ಭೂಸನೂರಮಠ, ನನ್ನ ಮೆಚ್ಚಿನ ಲೇಖಕರಾಗಿಬಿಟ್ಟರು.

ನಮ್ಮ ಮನೆಗೆ ಆಗ “ಮಯೂರ” ಮಾಸ ಪತ್ರಿಕೆಯನ್ನೂ ತರಿಸುವ ಪದ್ಧತಿ ಇತ್ತು. ಆಗಿನ ನನ್ನ ವಯಸ್ಸಿನ ಮಕ್ಕಳಿಗೆ, “ಮಯೂರ”, “ಸುಧಾ” ವಾರಪತ್ರಿಕೆಯಷ್ಟು ಪ್ರಿಯವಾಗಿತ್ತೆಂದು ಹೇಳಲು ಬರುವುದಿಲ್ಲ. “ಸುಧಾ”ದ ಕಾಮಿಕ್ಸ್ ಮೊದಲು ಓದಲು ನನ್ನ ತಮ್ಮನೊಡನೆ ಜಗಳವಾಡಿದ್ದ ನೆನಪಿದೆಯಾದರೂ, “ಮಯೂರ”ಕ್ಕಾಗಿ ಕಿತ್ತಾಡಿದ್ದು ನೆನಪಿನಲ್ಲಿಲ್ಲ. ಆದರೂ, “ಮಯೂರ”ದ ಪುಟಗಳನ್ನು ನಾನು ತಿರುವದೇ ಬಿಡುತ್ತಿರಲಿಲ್ಲ.

ಹೀಗೊಮ್ಮೆ, “ಮಯೂರ”ದ ಪುಟಗಳನ್ನು ತಿರುವುತ್ತಿರುವಾಗ ಕಂಡದ್ದು, ಪ್ರೊ.ಭೂಸನೂರಮಠ ಬರೆದಿದ್ದ ಒಂದು ನೀಳ್ಗತೆ. ಆ ವೇಳೆಗಾಗಲೇ, ಅವರ ಅಭಿಮಾನಿಯಾಗಿದ್ದ ನಾನು, ಆ ಕತೆಯನ್ನು ಓದದಿರುವುದು ಸಾಧ್ಯವೇ ಇರಲಿಲ್ಲ. ಆ ಕತೆ, ಕಾಲಯಾನಕ್ಕೆ ಸಂಬಂಧಿಸಿದ್ದಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, ಅದು ನನ್ನ ಮನಸ್ಸಿನಲ್ಲಿದ್ದ ಈ “Grandfather Paradox” ಆತಂಕವನ್ನು ತರ್ಕಬದ್ಧವಾಗಿ ನಿವಾರಿಸಿತು.

(ಪ್ರೊ.ರಾಜಶೇಖರ ಭೂಸನೂರಮಠ)

ಈ ಕತೆಯಲ್ಲಿ, ಟೈಮ್ ಮಷೀನ್ ಒಂದು “ಲಿಫ್ಟ್” ತರಹ ಕೆಲಸಮಾಡುತ್ತದೆ. ಅದರಲ್ಲಿನ ಬಟನ್‌ ಗಳನ್ನು ಒತ್ತಿ ಮೇಲಕ್ಕೆ (ಎಂದರೆ ಭವಿಷ್ಯತ್ತಿಗೆ) ಅಥವಾ ಕೆಳಗೆ (ಎಂದರೆ ಭೂತ ಕಾಲಕ್ಕೆ) ಪ್ರಯಾಣ ಮಾಡಬಹುದು. ಆದರೆ, ನೀವು ನಿಮ್ಮ ಕಾಲವನ್ನು ಮೀರಿ ಪ್ರಯಾಣ ಮಾಡುವಾಗ, ನಿಮ್ಮ ಆಕಾರದ ಒಂದು ಆಯಾಮ (“spatial dimension”) ಕಳೆದುಕೊಳ್ಳುತ್ತೀರಿ. ಒಂದು ರೀತಿಯಲ್ಲಿ, ನೀವು ಕೇವಲ ನಿಮ್ಮ ನೆರಳಾಗಿಬಿಡುತ್ತೀರಿ. ಹೀಗಾಗಿ, ನೀವು ಭೂತ ಅಥವಾ ಭವಿಷ್ಯತ್ತಿಗೆ ಹೋದರೂ, ಅಲ್ಲೇನೂ ಬದಲಾವಣೆ ಮಾಡಲು ಸಾಧ್ಯವಿಲ್ಲ; ನಿಮ್ಮ ತಾತ-ಅಜ್ಜಿಯ ವಿವಾಹವನ್ನು ನೀವು ಅವರಿಗೆ ತಿಳಿಯದಂತೆ ನೋಡಬಹುದು ಅಷ್ಟೇ – ಆದರೆ ಅದನ್ನು ತಡೆಯಲು ನಿಮಗೆ ಸಾಧ್ಯವಿರುವುದಿಲ್ಲ.

ಭವಿಷ್ಯದ ಯಾವುದೇ ಕಾಲಯಾನಿ ನನ್ನ ಇರುವಿಕೆಯನ್ನು ಇಲ್ಲವಾಗಿಸುವುದು ಸಾಧ್ಯವಿಲ್ಲ ಎಂಬುದು ಮನದಟ್ಟಾಯಿತು.
ನನ್ನ existential anxiety ಬಹುಮಟ್ಟಿಗೆ ಮಾಯವಾಯಿತು.

******

ಪ್ರೊ.ಭೂಸನೂರಮಠ ತಮ್ಮ ಕತೆಯಲ್ಲಿ ತೋರಿದ ತರ್ಕ ನನ್ನ ಮನಸ್ಸಿನಲ್ಲಿದ್ದ ಒಂದು ಮಹಾ ಆತಂಕವನ್ನು ನಿವಾರಿಸಿತಾದರೂ, ಕೆಲವೇ ದಿನಗಳಲ್ಲೇ ಹೊಸದಾದ ಸಂದೇಹ-ಪ್ರಶ್ನೆಗಳನ್ನು ಸೃಷ್ಟಿಸಲಾರಂಭಿಸಿತು.

ಕೇವಲ ಎರಡೇ ಆಯಾಮಗಳಿರುವ ನೆರಳಿನಂತಹ ವಸ್ತುವಿಗೆ ಕಾಲಯಂತ್ರದ ಬಟನ್ ಒತ್ತುವುದು ಸಾಧ್ಯವೇ? ಎರಡೇ ಆಯಾಮದ ವಸ್ತುವಿಗೂ ಜೀವ ಇರುವುದು ಸಾಧ್ಯವೇ? ಅದು ನಿಜವೇ ಆದರೆ, ನಮ್ಮ ನೆರಳುಗಳಿಗೆ ತಮ್ಮದೇ ಆದ ಜೀವ ಇಲ್ಲವೆನ್ನುವುದಾದರೂ ಹೇಗೆ? ಜೀವ ಇರುವುದು ನಿಜವಾದಲ್ಲಿ ಅವುಗಳಿಗೂ ಯೋಚನಾ ಶಕ್ತಿ – ನೆನಪುಗಳೂ ಇರಬೇಕಲ್ಲವೇ? ಈ ಯೋಚನಾ ಶಕ್ತಿ – ನೆನಪುಗಳು ಇಲ್ಲದಿದ್ದರೆ, ಪ್ರೊ.ಭೂಸನೂರಮಠರವರ ಕಾಲಯಂತ್ರದಲ್ಲಿ ಭೂತಕ್ಕೋ-ಭವಿಷ್ಯತ್ತಿಗೋ ಪ್ರಯಾಣ ಮಾಡಿದವರು ವರ್ತಮಾನಕ್ಕೆ ವಾಪಸಾಗುವುದಾದರೂ ಹೇಗೆ?

ಇಂತಹ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ. ಕಾಲಯಾನ ನಮ್ಮೆದುರಿಗೆ ತಂದೊಡ್ಡುವ ಪ್ರಶ್ನೆಗಳನ್ನು ಗಮನಿಸಿದಾಗ, ಕಾಲಯಾನ ಮಹಾ ಕಷ್ಟವೆಂದೆನಿಸಬಹುದು. ಕೋವಿಡ್ ಪಿಡುಗು ತಡೆಯೊಡ್ಡುವ ಮುನ್ನ, ಅಮೆರಿಕದ ನ್ಯೂಯಾರ್ಕ್‌ ನಿಂದ ಆಸ್ಟ್ರೇಲಿಯಾದ ಸಿಡ್ನಿವರೆಗಿನ ೧೦,೦೦೦ ಮೈಲುಗಳನ್ನು, ನಾನ್-ಸ್ಟಾಪ್ ಪ್ಲೇನ್‌ ನಲ್ಲಿ ಕುಳಿತು ಆರಾಮವಾಗಿ (?) ಕೇವಲ ಹತ್ತೊಂಭತ್ತು ಗಂಟೆಗಳಲ್ಲಿ ದಾಟಬಹುದಿತ್ತು. ಹೀಗಿರುವಾಗ, ಕಾಲಯಾನಕ್ಕೆ ಕಂಪೇರ್ ಮಾಡಿದರೆ, ನಮ್ಮ ಎಂದಿನ ಪ್ರಯಾಣಗಳೇ ಸುಲಭ ಎಂದೆನ್ನಿಸದೇ ಇರಲಾರದು.

ಆದರೆ, ಇಡೀ ಅನಂತದ ವೈಶಾಲ್ಯವನ್ನು ಗಮನಿಸಿದರೆ, ಮಾನವನ ೨೦೦,೦೦೦ ವರ್ಷಗಳ ಇತಿಹಾಸದಲ್ಲಿ ನಾವು ಕ್ರಮಿಸಿರುವ ದೂರವಾದರೂ ಎಷ್ಟು?!

ಇತ್ತೀಚಿನ ವೈಜ್ಞಾನಿಕ ಅಧ್ಯಯನಗಳ ಪ್ರಕಾರ, ಭೂಮಿಯಿಂದ ಕಾಣುವ ಅತ್ಯಂತ ದೂರದ ಗೆಲಾಕ್ಸಿ ಸುಮಾರು ನೂರಾಇಪ್ಪತೈದು ಕೋಟಿ, ಕೋಟಿ, ಕೋಟಿ ಕಿ.ಮಿ. ದೂರದಲ್ಲಿದೆ. ಇಡೀ ಅನಂತ ವೈಶಾಲ್ಯ ಇದರ ಏಳರಷ್ಟು ಇದೆ. ಇಲ್ಲಿಯವರೆಗೆ, ಮನುಷ್ಯ ಕಾಲಿಟ್ಟಿರುವ ಅತ್ಯಂತ ದೂರದ ವಸ್ತುವೆಂದರೆ, ಚಂದ್ರ. ಭೂಮಿಯಿಂದ ಚಂದ್ರನ ದೂರ ನಾಲ್ಕು ಲಕ್ಷ ಕಿ.ಮಿ.ಗೂ ಕಡಿಮೆ. ಅನಂತದ ಅಗಾಧತೆಗೆ ಹೋಲಿಸಿದರೆ, ನಮ್ಮ ಚಂದ್ರಯಾನ ಒಂದು ಪ್ರಯಾಣವೇ ಅಲ್ಲ; ಪ್ರಯಾಣ ಮಾಡುವುದಿರಲಿ, ನಾವೊಂದು ಅಂಬೆಗಾಲನ್ನೂ ಇಟ್ಟಿಲ್ಲ.

ಅನಂತದ ದೂರದ ಮೂಲೆ ಮೂಲೆಗಳಿಗೆ ಪ್ರಯಾಣ ಮಾಡುವುದು ಸುಲಭವೇನಲ್ಲ. ಅಂತಹ ಪ್ರಯಾಣಗಳು ತಂದೊಡ್ಡುವ ಪ್ರಶ್ನೆಗಳಿಗೂ ಉತ್ತರಿಸುವುದು ಕಷ್ಟವೇ. ಆ ಪ್ರಶ್ನೆಗಳ ಸ್ವರೂಪ-ಲಕ್ಷಣಗಳು ಬೇರೆಯೇ ಇರುತ್ತವೆ ಅಷ್ಟೇ.

******

ಪ್ರೊ.ಭೂಸನೂರುಮಠರ ಕತೆಯ ಎರಡೇ ಆಯಾಮದ ವಸ್ತುವೊಂದು ಇರಲು ಸಾಧ್ಯವೇ? ನಾವು ಅತ್ಯಂತ ಸರಳ ಜೀವಿ ಎನ್ನುವ ಬ್ಯಾಕ್ಟೀರಿಯಾಗಳೂ ಸಹ, ವಾಸ್ತವದಲ್ಲಿ ಮೂರು ಆಯಾಮಗಳಿರುವ (+ ೧ ಕಾಲದ ಆಯಾಮ) ಸಂಕೀರ್ಣ ವಸ್ತುಗಳು. ಹಾಗೊಮ್ಮೆ ಇದ್ದರೂ, ಅದಕ್ಕೆ ಜೈವಿಕ ವಸ್ತುವಿಗೆ ಬೇಕಾದ ಸಂಕೀರ್ಣತೆ (“complexity”) ಇರಲು ಸಾಧ್ಯವೇ? ಇವೆಲ್ಲಾ ನನ್ನ ಹಳೆಯ ಪ್ರಶ್ನೆಗಳ ಹೊಸ ರೂಪಗಳು. ಆಧುನಿಕ ಭೌತಶಾಸ್ತ್ರ ಇಂತಹ ಪ್ರಶ್ನೆಗಳಿಗೆ ಉತ್ತರ ನೀಡಲಾರಂಭಿಸಿದೆ.

೧೯೯೦ರಲ್ಲಿ ಮ್ಯಾಕ್ಸ್ ಟೆಗ್‌ಮಾರ್ಕ್ ಎಂಬ ಸ್ವೀಡನ್ ಮೂಲದ ಅಮೆರಿಕನ್ ವಿಜ್ಞಾನಿ (ಇವನು ಕೃತಕ ಬುದ್ಧಿಮತ್ತೆಯ ವಿಷಯದಲ್ಲೂ ಭಾರಿ ಹೆಸರು ಮಾಡಿದವನು), ತನ್ನ ಅಧ್ಯಯನಗಳ ಮೂಲಕ, ಮೂರಕ್ಕಿಂತ ಹೆಚ್ಚಿನ ಆಯಾಮವಿರುವ ವಸ್ತುವೊಂದು ಇರಬಹುದಾದರೂ, ಅದಕ್ಕೆ ಅಣು-ಪರಮಾಣುಗಳಿಗೆ ಬೇಕಿರುವ ಸ್ಥಿರ ಸ್ವರೂಪ (“stable structure”) ಇರಲಿಕ್ಕೆ ಸಾಧ್ಯವಿಲ್ಲ ಎಂಬುದನ್ನು ತೋರಿಸಿಕೊಟ್ಟ.

ಆದರೆ ಎರಡೇ ಆಯಾಮದ ವಸ್ತುವಿಗೆ ಅಂತಹ ಸ್ಥಿರ ಸ್ವರೂಪ ಇರಲು ಸಾಧ್ಯವೇ? ಕಳೆದ ವರ್ಷದ (೨೦೧೯ರ) ಜೂನ್‌ ನಲ್ಲಿ ಪ್ರಕಟಿಸಿದ ವೈಜ್ಞಾನಿಕ ಅಧ್ಯಯನವೊಂದು, “ಇದು ಸಾಧ್ಯ” ಎನ್ನುತ್ತದೆ. ಈ ಅಧ್ಯಯನವನ್ನು ಮಾಡಿರುವ ಅಮೆರಿಕದ ವಿಜ್ಞಾನಿ, ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ಜೇಮ್ಸ್ ಸ್ಕಾರ್ಗಿಲ್, ಎರಡೇ ಆಯಾಮವಿರುವ ವಸ್ತುವೊಂದು ಸ್ಥಿರತೆ ಅಷ್ಟೇ ಅಲ್ಲ, ಸಜೀವ ವಸ್ತುವಿಗೆ ಬೇಕಾದ ಸಂಕೀರ್ಣತೆಯನ್ನೂ ಹೊಂದಿರಬಲ್ಲದು ಎಂದು ತೋರಿಸಿಕೊಟ್ಟಿದ್ದಾನೆ.

ಇವೆಲ್ಲಾ ಭೌತಶಾಸ್ತ್ರದ ವಿಚಾರಗಳೇ ಆದರೂ, ಪ್ರಯೋಗಗಳಿಂದ ಪ್ರಮಾಣೀಕರಿಸಿರುವ ಸತ್ಯಗಳೇನಲ್ಲ. ಗಣಿತದ ಸಹಾಯದಿಂದ ನಿರ್ಮಿಸಿರುವ ಥಿಯರಿಗಳು. ಗಣಿತ ಎನ್ನುವುದು ನಮ್ಮ ಪ್ರಪಂಚವನ್ನು, ಯಾವುದೇ ಸಂದಿಗ್ಧತೆ ಇಲ್ಲದೆ, ಖಚಿತತೆಯಿಂದ ವಿವರಿಸಲು ನಾವು ನಿರ್ಮಿಸಿಕೊಂಡಿರುವ ಒಂದು ಭಾಷೆ. ಆದರೆ, ಅದೂ ಸಹ ಭಾಷೆಯೇ. ಎಚ್.ಜಿ.ವೆಲ್ಸ್‌ ನ ಇಂಗ್ಲೀಷ್ ಭಾಷೆಯ, ಪ್ರೊ.ಭೂಸನೂರುಮಠರವರ ಕನ್ನಡ ಕತೆಗಳಂತೆಯೇ ಈ ಥಿಯರಿಗಳೂ (ಪ್ರಯೋಗಗಳ ಮೂಲಕ ಸಾಬೀತಾಗುವವರೆಗೂ) ಅದ್ಭುತ ಎನ್ನಿಸುವ ಗಣಿತ-ವಿಜ್ಞಾನದ ಕತೆಗಳೇ.

ಎರಡೇ ಆಯಾಮವಿರುವ ಜೀವಿಯೊಂದು ಹಾಗೊಂದು ವೇಳೇ ಇದ್ದರೂ, ಅದಕ್ಕೆ, ಕಾಲಯಾನ ಮಾಡಲು ಬೇಕಿರುವ ನೆನಪು, ಅರಿವುಗಳು ಇರಲು ಸಾಧ್ಯವೇ? ಇದಕ್ಕೆ ಗಣಿತದ ಭಾಷೆಯಲ್ಲಿ ನಿರ್ದಿಷ್ಟ ಉತ್ತರ ನೀಡುವುದು ಕಷ್ಟವಾದರೂ, ಸಂತ-ಕವಿ ಕಬೀರ್‌ನಂತಹ ಆಧ್ಯಾತ್ಮಿಕ ಭಾಷೆಯ ಸಂಪೂರ್ಣ ಅರಿವಿರುವ “ನಿರಾಕಾರ ಸ್ವರೂಪ”ವನ್ನು ಉತ್ತರವೆಂದೇ ಪರಿಗಣಿಸಬಹುದು – ನಮಗೆ ಇಷ್ಟವಿದ್ದರೆ. (ಇಲ್ಲಿ ಮತ್ತೊಮ್ಮೆ ಈ ಮಾತನ್ನು ಹೇಳುವುದು ಉಚಿತವೆನ್ನಿಸುತ್ತದೆ. ಕಬೀರ್ ಅಥವಾ ಬೇರೆ ಸಂತರ ಮಾತುಗಳಲ್ಲಿ, ವೇದ-ಪುರಾಣಗಳಲ್ಲಿ, ಆಧುನಿಕ ವಿಜ್ಞಾನ ಮತ್ತು ಗಣಿತಗಳು ಇವೆಯೆಂದು ವಾದಮಾಡುವುದು ಸರಿಯಲ್ಲ. ನಾನು ಇಲ್ಲಿ ಕಬೀರನ ಹೆಸರನ್ನು ಉಲ್ಲೇಖಿಸಿರುವುದು ಅವನ ಪದಗಳಲ್ಲಿ ಗಣಿತದ ಖಚಿತತೆ ಇದೆ ಎಂದಲ್ಲ. ಬದಲಿಗೆ, ಕಾವ್ಯಕ್ಕೆ ಬೇಕಾದ ಹೊಸ ಅರ್ಥಗಳನ್ನು ಕಂಡುಕೊಳ್ಳಬಲ್ಲ ವೈಶಾಲ್ಯತೆ ಇದೆಯೆಂದು)

ಕಾಲ ನಮಗೆ ಮುಂದಿಡುವ ಅನರ್ಥ, ತೊಡಕು, ಸಂದಿಗ್ಧತೆ, ಪ್ಯಾರಾಡಾಕ್ಸ್‌ ಗಳು ಅನೇಕ. ಕಾಲ ನಮಗೆ ಅರ್ಥವಾಗದಿದ್ದರೂ, ಅದನ್ನು ಕತ್ತರಿಸುವಲ್ಲಿ ನಾವು ಪರಿಣತಿ ಪಡೆದುಕೊಂಡಿದ್ದೇವೆ. ಕಾಲವನ್ನು ಮತ್ತಷ್ಟು ವಿಚಾರಿಸುವ ಮುನ್ನ, ಈ ಕತ್ತರಿಸುವಿಕೆಯಿಂದ ದೊರಕುವ, ಕಾಲದ ಒಂದು ಸ್ವರೂಪವಾದ “ಅವಧಿ”ಯನ್ನು ಕೊಂಚ ಮಟ್ಟಿಗೆ ಅವಲೋಕಿಸೋಣ.

(ಮುಂದುವರೆಯುವುದು)