ಈ ಸಂಕಲದಲ್ಲಿನ ಪುಟ್ಟ ಪುಟ್ಟ ಕವಿತೆಗಳಾದ ‘ಕೃಷ್ಣ ಪದ್ಯಗಳು’, ‘ಬಿಡಿ, ಬರೀ ಪದ್ಯಗಳು’, ‘ಹಕ್ಕಿ, ಅವಳು ಮತ್ತು ನಕ್ಷತ್ರ ಮೀನು’ ಕವಿತೆಗಳಲ್ಲಿ ಭಾವ ಮತ್ತು ಭಾವನೆಗಳು ಅಷ್ಟೇ ಉತ್ಕಟವಾಗಿವೆ. ಇವುಗಳ ಹಿಂದೆ ನೀಲು ನೆರಳು ಇದ್ದರೂ ಇವು ಕವಿಯ ಸ್ವಂತಿಕೆಯನ್ನು ಬಿಟ್ಟುಕೊಡುವುದಿಲ್ಲ. ಇವುಗಳಲ್ಲಿ ತನ್ನದೇ ಆದ ಭಾಷೆ ಮತ್ತು ನಿರೂಪಣೆಗಳ ಮೂಲಕ ಸೌಪಜ್ಞತೆಯನ್ನು ಮರೆಯುತ್ತಾನೆ ಕವಿ. ಹಾಗೆ ನೋಡಿದರೆ ನೀಲು ಕವಿತೆಗಳ ಹಿಂದೆ ಝೆನ್ ಉವಾಚ, ಹಾಯ್ಕುಗಳು, ವಚನಗಳ ವೈಚಾರಿಕತೆ, ಸೂಫಿಸಂತರ ತಾತ್ವಿಕತೆ, ಲೌಕಿಕ ಮತ್ತು ಅಲೌಕಿಕ ಬದುಕಿನ ವಾಸನೆ ಬೆರೆತಿರುವುದನ್ನು ನಿಚ್ಚಳವಾಗಿ ಕಾಣಬಹುದು. ಈ ಪದ್ಯಗಳಿಗೆ ಮಿಂಚಿನ ಥರ ಕ್ಷಣ ಕಾಲ ಬೆಳಗಿ ಮನಸ್ಸಿನೊಳಗೆ ಇಳಿದು ಹೋಗುವಂತಹ ಗುಣವಿದೆ.
ಶಶಿಸಂಪಳ್ಳಿ ಕವಿತಾ ಸಂಕಲನದ ಕುರಿತು ಎಚ್.ಆರ್. ರಮೇಶ್.

 

O gracious Lord, with whom disguise is vain,/Mask not our evil, let us see it plain!/But veil the weakness of our good desire,/Lest we lose heart and falter and expire.

ರೂಮಿಯ ಈ ಸಾಲುಗಳು ಈ ಕವಿತೆಗಳನ್ನು ಓದುವಾಗ ನೆನಪಾದವು. ಕವಿತೆ ಸತ್ಯವನ್ನು ಬೆತ್ತಲಾಗಿಸುವ ದಾಷ್ಟ್ರ್ಯ ತೋರದಿದ್ದರೆ ಅದು ಸ್ವಮರುಕದಿಂದ ಪಾರಾಗುವುದಿಲ್ಲ. ಒಳಗಿನ ಬೇಗುದಿಗಳನ್ನು ಮತ್ತು ಆಂತರ್ಯದ ಪಿಸುಮಾತುಗಳನ್ನು ಹೇಳುತ್ತಲೇ ಹೊರಗಿನ ಸುಡುವಾಸ್ತವ ಬದುಕಿನ ಸತ್ಯಗಳಿಗೆ ಮುಖಾಮುಖಿಯಾಗಲೇಬೇಕು. ಇದು ಇಲ್ಲದಿದ್ದರೆ ಕವಿತೆ ಸಾವಿರ ಕವಿತೆಗಳ ಥರ ಹೀಗೆ ಬಂದು ಹಾಗೆ ಹೋಗುತ್ತದೆ. ಸ್ವಲ್ಪ ಮಟ್ಟಿಗಾದರೂ ಕವಿತೆ ಕಾಲದ ಜೊತೆ ಸೆಣೆಸಾಟವಾಡದಿದ್ದರೆ ಅದು ಗಾಳಿಯಲ್ಲಿ ಹಾರಿಹೋಗುತ್ತದೆ ನೆನಪಿನಲ್ಲಿ ಉಳಿಯದೆ ಮತ್ತು ನಮ್ಮ ಮನಸ್ಸುಗಳ ಕದವನ್ನು ತಟ್ಟದೆ. ಪೋಸ್ಟ್ ಟ್ರುತ್ (ಸತ್ಯೋತ್ತರ)ನ ನಿಗಿ ನಿಗಿ ಸುಳ್ಳುಗಳ ನಡುವೆ ಕವಿತೆ ತನ್ನ ಹೊಸ ರೂಪಕ ಮತ್ತು ಇಮೇಜ್ ಗಳ ಮೂಲಕ ಸತ್ಯದ ಹುಡುಕಾಟವನ್ನು ಮಾಡುವ ಅನಿವಾರ್ಯತೆ ಹಿಂದೆಂದಿಗಿಂತಲೂ ಇಂದು ತುಂಬಾ ಅವಶ್ಯಕತೆಯಾಗಿದೆ.

ಶಶಿ ಸಂಪಳ್ಳಿಯ ಕವಿತೆಗಳು ಈ ನಿಟ್ಟಿನಲ್ಲಿ ತಮ್ಮ ದೃಷ್ಟಿಯನ್ನು ನೆಟ್ಟಿವೆ. ಇಲ್ಲಿ ಕೆಲವು ಕವಿತೆಗಳು ತುಸು ರೊಮ್ಯಾಂಟಿಕ್ ಎನ್ನಿಸಿದರೂ ಅವುಗಳೊಳಗೆ ಇರುವ ಮಿಂಚು ಅಚ್ಚ ಹೊಸದೆನ್ನಿಸುತ್ತದೆ ಹೊಸ ರೂಪಕಗಳಿಂದಾಗಿ. ಉದಾ- ಶ್ರಾವಣದ/ ಇರುಳಲ್ಲೂ ಮೋಡ/ ಗಳು ಚೆದುರಿವೆ/ ರಾಧೆಯ/ ಕೆನ್ನೆಯಗುಂಟ/ ಹರಿದಿರಬೇಕು/ ಜಡಿಮಳೆ! ಇಂತಹ ಮೋಹಕ ಕವಿತೆಗಳ ಜೊತೆ ಕಾಲವನ್ನು ವಿಕ್ಷಿಪ್ತವಾಗಿಸಿರುವ ಮತ್ತು ಧರ್ಮವನ್ನು ಮನಸ್ಸಿಗೆ ಬಂದಂತೆ ತಿರುಚುತ್ತಿರುವ ರಾಜಕೀಯ ಸನ್ನಿವೇಶದ ಚಿತ್ರಣಗಳು ಈ ಸಂಕಲನವನ್ನು ಸಮಕಾಲೀನಗೊಳಿಸುತ್ತವೆ.

(ಶಶಿ ಸಂಪಳ್ಳಿ)

ಈ ಸಂಕಲನ ‘ಮುತ್ತುಗ’ ಡಿಸೆಂಬರಿನ ಮಾಗಿಯ ಕಾಲದಲ್ಲಿ ಬೆಂಕಿಯಂತೆ ಹೊಳೆಯುತ್ತಿರುವ ಮುತ್ತುಗದ ಹೂವುಗಳ ಜೊತೆ ಲೋಕದ ಕೈಯಿಗಳಿಗೆ ಸಿಕ್ಕಿರುವುದು ಕಾಕತಾಳೀಯವಾದರೂ ಇಲ್ಲಿನ ಕವಿತೆಗಳಿಗೆ ಮುತ್ತುಗದ ಹೂವಿನ ಪ್ರತಿಮಾತ್ಮಕ ಅರ್ಥಗಳು ತಮಗೆ ತಾವೇ ಬಂದು ಅಪ್ಪಿಕೊಂಡಿವೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡಿರುವ ನನ್ನ ‘ಅದರ ನಂತರ’ ಸಂಕಲನದಲ್ಲೂ ‘ಮುತ್ತುಗ’ ಎನ್ನುವ ಕವಿತೆಯಿದ್ದು, ಅದನ್ನು ಇಲ್ಲಿ ಸುಮ್ಮನೆ ನೆನಪಿಸಿಕೊಂಡು ನನ್ನ ಈ ಸಂಕಲನದ ಕುರಿತು ಅನಿಸಿಕೆಗಳನ್ನು ಮುಂದುವರೆಸುವೆ.

ಅವನು ಮರವಾಗಿದ್ದಾನೆ/ಒಣಗಿ/ಅವಳು/ವೀರ್ಯ ವರ್ಣದಿ ಮಂಜು/ಆವರಿಸಿ/ಲೋಕವು ನಡುಗುವಾಗ/ಸೂರ್ಯನ ಚಿಲ್ಲೆಂದು/ಎಬ್ಬಿಸಿದ್ದಾಳೆ/ಕೆಂಪಗೆ/ಅರಳಿ/ಅವನು ಒಣಗಿ/ಮರವಾಗಿರುವಲ್ಲಿ/ಗಲ್ಲಿಗಳಲ್ಲಿ ಚೆಲ್ಲಿರುವ ನೆತ್ತರು/ಥೇಟ್ ಇದೇ ತರವಾಗಿದೆ/ಅವಳ ಹೂವು ಕೆಂಪನೆ/ಕತ್ತಲ ನಕ್ಷತ್ರಗಳಿಗೂ ಮುಟ್ಟುತ್ತಿದೆ/ಮತ್ರ್ಯದ ಮಣ್ಣ ನೆತ್ತರು/ಅಂಟಿದೆ/ಒಣಗಿರುವಲ್ಲೆಲ್ಲ ಒದ್ದೆ ಮಾಡುತ್ತಿದೆ/ಮುತ್ತುಗ/ಬಳ್ಳದ ರಾಶಿಯ ತುದಿಯಲ್ಲಿ/ಬೆವರ ನೆತ್ತರಂತಿದೆ/ಮುತ್ತುಗ/ಮುತ್ತಿನಂತೆ/ಅವಳ
(‘ಅದರ ನಂತರ’ ಎಚ್.ಆರ್.ರಮೇಶ)

ಶಶಿ ಸಂಪಳ್ಳಿ ತಮ್ಮ ಹಿಂದಿನ ‘ಚರಿತ್ರೆಯ ಜಾಡಿನಾಚೆಗೆ’ ಗಿಂತಲೂ ತುಂಬಾ ಭಿನ್ನವಾಗಿಯೇ ಸ್ಪಂದಿಸಿದ್ದಾರೆ ಮತ್ತು ಅನುಭವವನ್ನು ನಿರೂಪಿಸಿದ್ದಾರೆ. ಯಾವ ಹಿಂಜರಿಕೆಯು ಇಲ್ಲದೆ ತುಂಬಾ ಮುಕ್ತವಾಗಿ, ಕೆಲವು ಸಂದರ್ಭಗಳಲ್ಲಿ ಬೋದಿಲೇರ್ ಮತ್ತು ನೀಲು ಕವಿಯ ಥರ ಜೀವ ಪುಳಕಗೊಳ್ಳುವ ಹಾಗೆ ಬರೆಯುತ್ತಾರೆ. ಆಧುನಿಕ ಕನ್ನಡ ಕಾವ್ಯದ ಸಂದರ್ಭದಲ್ಲಿ ಇವರ ಕವಿತೆಗಳು ತುಂಬಾ ಗಮನಾರ್ಹ. ರಚನೆ, ನಿರೂಪಣೆ, ಅಭಿವ್ಯಕ್ತಿ, ಅನುಭವಗಳಿಗೆ ಕೊಡುವ ಸ್ಪಂದನೆ ಮತ್ತು ಬದುಕಿನ ಸತ್ಯಗಳಿಗೆ ಎದುರಾಗುವ ನೇರವಂತಿಕೆ ಇವೆಲ್ಲವು ಕನ್ನಡ ಕಾವ್ಯಪರಂಪರೆಯ ರಿಲೆಯ ಕೋಲನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದಾವೆ. ಸಂಕಲನದ ಮೊದಲ ಕವಿತೆಯೇ (ಅನವರತ ಪ್ರೀತಿಗಾಗಿ) ಓದುಗರನ್ನು ಆಕರ್ಷಿಸದೆ ಇರಲಾರದು. ಅಷ್ಟರಮಟ್ಟಿಗೆ ಇದು ತುಂಬಾ ಸೊಗಸಾದ ಕವಿತೆ. ಇಲ್ಲಿ ಕವಿಯ ನಿಲುವು ಮತ್ತು ಕವಿತೆಗೆ ಇರಬೇಕಾದ ಎಚ್ಚರ ಹಾಗೂ ಪರಂಪರೆಯ ಜೊತೆಗಿನ ಅನುಸಂಧಾನಗಳು ಮಿಳಿತಗೊಂಡು ಆಧುನಿಕ ಕನ್ನಡ ಕಾವ್ಯ ಸನ್ನಿವೇಶದಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದಂತಹ ಕವಿತೆಯಾಗಿ ನಿಲ್ಲುತ್ತದೆ-

ಮಣಭಾರದ ಸಕ್ಕರೆಯ ಕಚ್ಚಿ/ದೂರದ ಗೂಡಿಗೆ ಸಾಗುವ/ಪುಟ್ಟ ಇರುವೆಯ ಕಾಲು ಎಂದಿಗೂ ಸೋಲದಿರಲಿ/ ಪ್ರೀತಿ ನಿರಂತರ ಕಸುವಾಗಿರಲಿ ಬರೀ ಮಣ್ಣು -ನೀರು ತನ್ನೊಳು ಹದಗೊಳಿಸಿ ಬಗ್ಗಡದಲ್ಲೇ/ ಸುಗಂಧಿ ಹೂವ ಅರಳಿಸುವ/ಹುಲ್ಲುಗಿಡಕ್ಕೆ ಎಂದೂ/ದಣಿವಾಗದಿರಲಿ ಪ್ರೀತಿ ನಿರಂತರ ಬಲವಾಗಿರಲಿ.

ಹೀಗೆ ಸಾಗುವ ಕವಿತೆ ಮೇಲ್ನೋಟಕ್ಕೆ ಎಮೋಷನಲ್ ಆಗಿ ಕಂಡರೂ ಅದು ಬಿಚ್ಚಿಕೊಳ್ಳುವ ಅರ್ಥಗಳು ಅದನ್ನು ಬೇರೆಯದೇ ನೆಲೆಯಲ್ಲಿ ನಿಲ್ಲಿಸುತ್ತವೆ. ಇಲ್ಲಿ ಬದುಕೂ ಇದೆ. ಕವಿಯೊಬ್ಬನ ಒಳ ಪ್ರಯಾಣವೂ ಇದೆ. ದೇವನೂರು ಮಹಾದೇವ ಅವರು ಹೇಳುವಂತೆ ಸತ್ಯವನ್ನು ಪದೇ ಪದೇ ಹೇಳುವುದು ಕ್ಲೀಷೆಯಾದರೂ ಬೇಸರವಿಲ್ಲದೆ ಹೇಳಲೇಬೇಕು. ಆ ತುಡಿತ ಮತ್ತು ಹಂಬಲ ಈ ಕವಿತೆಯಲ್ಲಿದೆ. ಕಾಣುವುದಷ್ಟೇ ಸತ್ಯ ಮತ್ತು ‘ಮಾಡು’ (roof) ಇದ್ದರೆ ಮಾತ್ರ ಮನೆ ಎನ್ನಿಸಿಕೊಳ್ಳುವಂತಹ ಈ ಕಾಲದಲ್ಲಿ , ಇಲ್ಲಿನ ಕವಿ ಕಾಣದ ಹಗುರದ ಬಗ್ಗೆ ಮತ್ತು ಮಾಡು ಇಲ್ಲದ ಬಯಲನ್ನೇ ಮನೆಮಾಡಿಕೊಂಡ ಬದುಕುತ್ತಿರುವುದನ್ನು ಧೇನಿಸುತ್ತಾನೆ. ಮತ್ತು ಕವಿಯ ಜವಾಬುದಾರಿಯನ್ನು ಸಹ ಹೇಳಲಾಗುತ್ತಿದೆ. ಕನ್ನಡ ಕಾವ್ಯ ಪರಂಪರೆಯಲ್ಲಿ ಇಂತಹ ಕವಿತೆಯು ಕಣ್ಣಿಗೆ ಕಾಣದಂತಹ ಪುಟ್ಟ ಇರುವೆಯ ಕಾಲು ಇದ್ದ ಹಾಗೆ. ಆದರೆ ಅದು ಎತ್ತಿ ಸಾಗಿಸುತ್ತಿರುವುದು ಏನನ್ನು ಅಂದರೆ ಜಗದ ಜಂಜಡಗಳಿಗೆ ದಿವ್ಯ ಔಷಧಿಯಾದ ‘ಪ್ರೀತಿ’ಯೆಂಬ ಸಕ್ಕರೆಯನ್ನು. ಹಾಗಾಗಿ ಕವಿ ತುಂಬಾ ವಿನಯದಿಂದ ಕೇಳಿಕೊಳ್ಳುತ್ತಿದ್ದಾನೆ. ‘ಕಾಲು ಎಂದಿಗೂ ಸೋಲದಿರಲಿ’ ಎಂದು.

‘ನೆತ್ತರ ಕಾಲದಲ್ಲಿ ಪ್ರೀತಿ’, ‘ಇದು ಅನಿರೀಕ್ಷಿತ ಕಾಲ’ ಮತ್ತು ‘ಇವಳೇ ಸದಾ ವತ್ಸಲೇ’ಎನ್ನುವ ಕವಿತೆಗಳು ಯಾವ ಮುಲಾಜಿಲ್ಲದೆ ಒಂದು ದಿಟ್ಟ ನಿಲುವಿನ ರಾಜಕೀಯ ಪದ್ಯ. ಪ್ರಸ್ತುತದ ಸಮಾಜದಲ್ಲಿ ಶಾಪವಾಗಿ ಕಾಡುತ್ತಿರುವ ಅಸಹಿಷ್ಣುತೆಯನ್ನು ಮುಖಕ್ಕೆ ರಾಚುವಂತೆ ಹೇಳುತ್ತದೆ ಮತ್ತು ತೋರಿಸುತ್ತವೆ. ಇಂದು ರಾಜಕೀಯ ಎನ್ನುವುದು ನೆಗೇಟಿವ್ ಅರ್ಥದಲ್ಲಿಯೇ ಉಳಿದಿದೆಯೋ ಧರ್ಮವನ್ನೂ ಸಹ ಅದರ ಅಲೌಕಿಕ ಮತ್ತು ಅಧ್ಯಾತ್ಮಿಕ ಸ್ಪರ್ಶ, ಗಂಧ, ಗುಣಗಳಿಲ್ಲದೆ ಟಿ.ವಿ.ಡಿಬೇಟಿನ ವಿಷಯದಂತಾಗಿದೆ. ಸಹಜ ಸಾಮಾನ್ಯ ಮನುಷ್ಯರಂತೆ ಬದುಕಿದ ಪುರಾಣದವರು ಕೆಲವೇ ಕೆಲವರ ಕೈಯಲ್ಲಿ ದೈವ ಪುರುಷರಾಗಿ ಪ್ರಶ್ನಾತೀತರಾಗಿರುವುದನ್ನು ತಮ್ಮ ಮೊನಚು ಪದಗಳಲ್ಲಿ ಈ ಕವಿತೆಗಳು ತಿವಿಯುತ್ತವೆ.

ಅವರು ಹೇಳುತ್ತಿದ್ದರು;/ಪ್ರೀತಿಯಿಂದ ಎಲ್ಲವನ್ನೂ/ಜಯಿಸಬಹುದು ಎಂದು./ಆದರೆ,/ಈಗ ಇಲ್ಲಿ ಗೆಲುವಿನ ಅರ್ಥ/ ಎಕೆ 47, ಬಾಂಬು, ಗ್ರನೇಡುಗಳ ನಚ್ಚಿ ಕೂತಿದೆ. (ನೆತ್ತರ ಕಾಲದಲ್ಲಿ ಪ್ರೀತಿ)
ಇದು ಅನಿರೀಕ್ಷಿತ ಕಾಲ;/ಈಗ, ಮಳೆ ಬರುವುದು,/ಬರ ಬೀಳುವುದು,/ಚಳಿ ಕೊರೆಯುವುದು,/ಎಲ್ಲವೂ ವೈಪರೀತ್ಯ/ಸೇಡು-ಸೆಳೆತದಂತೆಯೇ./ ಸಿಡಿವ ಬಾಂಬೂ,/ಸೇಡನ್ನಷ್ಟೇ ಸ್ಫೋಟಿಸದು/ ನೆತ್ತರ ದಾಹವನ್ನೂ.. ಇದು ಅನಿರೀಕ್ಷಿತ ಕಾಲ;/ದ್ವೇಷ-ಅಸೂಯೆ ಹಗೆಯನ್ನಷ್ಟೇ ಅಲ್ಲ,/ದುಷ್ಟ ಪ್ರೀತಿಯನ್ನೂ ಸಲಹುತ್ತವೆ. (ಇದು ಅನಿರೀಕ್ಷಿತ ಕಾಲ)

ಇಟ್ಟಿಗೆ ಒಟ್ಟಿ,/ಗಾರೆ ಪೇರಿಸಿ ಇಟ್ಟಾಗಿದೆ ಆಗಲೇ!/ ಗಿಲೀಟು-ಗಿಲಾವಿಗೆ/ಮೇಸ್ತ್ರಿಗೆ ಸಿಕ್ಕಿಲ್ಲ/ಇನ್ನೂ/ರಾಜಕೀಯದ ನಡುವೆ ಬಿಡುವು
(ಇವಳೇ ಸದಾ ವತ್ಸಲೇ}

ಭಾರತದ ಡೆಮಕ್ರಸಿಗೆ ಧರ್ಮದ ಮತೀಯ ಬಣ್ಣ ಬಳಿದು ಹಾದಿ ಬೀದಿಯಲ್ಲೆಲ್ಲ ಸಂಭ್ರಮಿಸುತ್ತಿರುವ ಇಂದು ಕಲೆಯ ಬಗೆಗೆ ಪೂರ್ವಾಗ್ರಹ ಪೀಡಿತ ಮತ್ತು ರೋಗಿಷ್ಟ ಮನಸ್ಸುಗಳ ಸಂವೇದನಾ ರಹಿತ ಮನಸ್ಥಿತಿಯನ್ನು ವ್ಯಂಗ್ಯದ ಧಾಟಿಯಲ್ಲಿ ‘ಖಾವಂದರು ಪದ್ಯ ಓದಿದರೆ’ ಎನ್ನುವ ಕವಿತೆಯಲ್ಲಿ ಹೇಳಿರುವುದು ಚೇತೋಹಾರಿಯಾಗಿದೆ.

ಖಾವಂದರು ಪದ್ಯ ಓದಿದರೆ;/ಗೂಢಚಾರಿಗಳ ಕಣ್ಣು/ಇನ್ನಷ್ಟು ಚುರುಕಾಗಬಹುದು/ಕವಿತೆಗೂ ಆಧಾರ್ ಕಡ್ಡಾಯವಾಗಬಹುದು!/ ಸಮವಸ್ತ್ರಧಾರಿ ದಾಳಿಗಳು/ಇನ್ನಷ್ಟು ತೀವ್ರಗೊಳ್ಳಬಹುದು/ನಗರ ನಕ್ಸಲರ ಪಟ್ಟಿ ಬೆಳೆಯಬಹುದು!

‘ಹೆಣ್ಣು’ ಮತ್ತು ‘ಪ್ರೀತಿ’ ಇಲ್ಲಿನ ಎರಡು ಸ್ಥಾಯಿ ಭಾವಗಳು. ಅವುಗಳ ಮೂಲಕವೇ ಜಗವನ್ನು ಕವಿ ನೋಡುತ್ತಿರುವುದು. ಇಂಗ್ಲಿಷ್ ನ ರೊಮ್ಯಾಂಟಿಕ್ ಕವಿ ಕೀಟ್ಸ್ ಗೆ ಕವಿತೆಯೆಂದರೆ ಅದೊಂದು ಜೀವನ್ಮರಣದ ಪ್ರಶ್ನೆ. ತನ್ನ ವೈದ್ಯಕೀಯ ವೃತ್ತಿಯನ್ನು ತೊರೆದು ಕಾವ್ಯಬರೆಯಲು ತೊಡಗಿದ ಅವನು ಕಾವ್ಯದ ಕಡು ವ್ಯಾಮೋಹಿ. ತನ್ನ ಸ್ನೇಹಿತ ಕ್ಲಾರ್ಕ್ ನ ಜೊತೆಗೂಡಿ ಇಂಗ್ಲೆಡ್ ನ ಬಹುಪಾಲನ್ನು ಸುತ್ತುತ್ತಾನೆ. ಬದುಕಿನ ಅನುಕ್ಷಣವೂ ಕಾವ್ಯವನ್ನೇ ಧೇನಿಸಿದ ಅವನು ಹೆಣ್ಣು, ಪ್ರೀತಿ, ಕಲೆ ಮತ್ತು ಸಮಾಜಗಳನ್ನು ತನ್ನದೇ ಆದ ವಿಶಿಷ್ಟ ನೆಲೆಗಟ್ಟಿನಲ್ಲಿ ಕಾವ್ಯದಲ್ಲಿ ಹಿಡಿದಿಡುವಲ್ಲಿ ಯಶಸ್ಸನ್ನು ಕಾಣುತ್ತಾನೆ. ಒಂದು ದಿನ ರಾತ್ರಿ ತನ್ನ ಸ್ನೇಹಿತನೊಡನೆ ಕೂಡಿ ಇಲಿಯಡ್ ಮತ್ತು ಒಡಿಸ್ಸಿ ಮಹಾಕಾವ್ಯಗಳನ್ನು ಓದುತ್ತಾನೆ. ಇಡೀ ರಾತ್ರಿ ನಿದ್ರಿಸದೆ ಓದಿದ ಅವನು ಮರುದಿನ ಬೆಳಗ್ಗೆ ಆರು ಗಂಟೆಗೆ ಹೋಮರ್ ನ ಕಾವ್ಯದಿಂದ ಪ್ರೇರೇಪಿತಗೊಂಡು Much have I travelled in the realms of gold ಎಂದು ಪ್ರಾರಂಭವಾಗುವ ಒಂದು ಅಧ್ಬುತವಾದ ಸಾನೆಟ್ಟನ್ನು ಬರೆಯುತ್ತಾನೆ. ಇದು ಏನನ್ನು ತೋರಿಸುತ್ತದೆ ಎಂದರೆ ಅವನು ಕಾವ್ಯದ ಬಗ್ಗೆ ಎಂತಹ ವ್ಯಾಮೋಹಿಯಾಗಿದ್ದ ಎನ್ನುವುದು. ಇಂತಹ ಒಂದು ಒತ್ತಾಸೆ, ಒತ್ತಡ ಮತ್ತು ಪರಂಪರೆಯ ಜ್ಞಾನ, ತಿಳುವಳಿಕೆ ಕವಿಯಾದವನಿಗೆ ಇಲ್ಲದಿದ್ದರೆ ಅವನು ಬರೆಯುವ ಕಾವ್ಯ ಕೇವಲ ಒಂದು ‘ಚಂದದ ರೈಮ್’ ಆಗಬಹುದು ಅಷ್ಟೆ. ಅಂತಹ ತೀವ್ರತೆಯನ್ನು ಈ ಸಂಕಲದಲ್ಲಿನ ಪುಟ್ಟ ಪುಟ್ಟ ಕವಿತೆಗಳಾದ ‘ಕೃಷ್ಣ ಪದ್ಯಗಳು’, ‘ಬಿಡಿ, ಬರೀ ಪದ್ಯಗಳು’, ‘ಹಕ್ಕಿ, ಅವಳು ಮತ್ತು ನಕ್ಷತ್ರ ಮೀನು’ ಕವಿತೆಗಳಲ್ಲಿ ಭಾವ ಮತ್ತು ಭಾವನೆಗಳು ಅಷ್ಟೇ ಉತ್ಕಟವಾಗಿವೆ. ಇವುಗಳ ಹಿಂದೆ ನೀಲು ನೆರಳು ಇದ್ದರೂ ಇವು ಕವಿಯ ಸ್ವಂತಿಕೆಯನ್ನು ಬಿಟ್ಟುಕೊಡುವುದಿಲ್ಲ. ಇವುಗಳಲ್ಲಿ ತನ್ನದೇ ಆದ ಭಾಷೆ ಮತ್ತು ನಿರೂಪಣೆಗಳ ಮೂಲಕ ಸೌಪಜ್ಞತೆಯನ್ನು ಮರೆಯುತ್ತಾನೆ ಕವಿ. ಹಾಗೆ ನೋಡಿದರೆ ನೀಲು ಕವಿತೆಗಳ ಹಿಂದೆ ಝೆನ್ ಉವಾಚ, ಹಾಯ್ಕುಗಳು, ವಚನಗಳ ವೈಚಾರಿಕತೆ, ಸೂಫಿಸಂತರ ತಾತ್ವಿಕತೆ, ಲೌಕಿಕ ಮತ್ತು ಅಲೌಕಿಕ ಬದುಕಿನ ವಾಸನೆ ಬೆರೆತಿರುವುದನ್ನು ನಿಚ್ಚಳವಾಗಿ ಕಾಣಬಹುದು. ಈ ಪದ್ಯಗಳು ಮಿಂಚಿನ ಥರ ಕ್ಷಣ ಕಾಲ ಬೆಳಗಿ ಮನಸ್ಸಿನೊಳಗೆ ಇಳಿದು ಹೋಗುವಂತಹ ಗುಣವಿದೆ.

(ಎಚ್.ಆರ್.ರಮೇಶ)

ಪ್ರೀತಿಯ ವಿಸ್ಮಯವನ್ನು ಹೇಗೆ ಹೇಳಲಾಗಿದೆ ನೋಡಿ- …ಆ ಕೃಷ್ಣ ಮೋಹ ಬತ್ತಲಾರದ/ಯಮುನೆ. ಅವಳೋ ವಸಂತನ ಪರಾಕಾಷ್ಠೆ.. ನಾನೋ ಶರದೃತುವಿನ ಶರ. ಮನಸ್ಸಿಗೆ ಕಚಗುಳಿಯನ್ನು ಕೊಡುವಂತಹ ಮತ್ತೊಂದು ಸಾಲು- ಮಾಗಿ ಚಳಿಯ/ನಡುವೆ ಮೈ/ನೆರೆದ/ಮುತ್ತುಗದಂತೆ/ದಿಗ್ಗನೆ ಪ್ರೇಮ/ಹೊತ್ತಿ ಉರಿವ/ಮೈಮನ… ಗೀಜಗನ ಗೂಡಿನ ಚೆಲುವು,/ಬೆಚ್ಚನೆಯ ಒಲವು/ಅರಮೆನಯ ಸುಖಕ್ಕೆ/ವೈರಾಗ್ಯ ಹುಟ್ಟಿಸಿತು. ಇಲ್ಲಿನ ಸಾಲುಗಳಿಗೆ ಅರ್ಥ ಹುಡುಕಿದರೆ ನಾವು ಅರಸಿಕರಾದಂತೆ. ಬೆಟ್ಟನೋಡಿದರೆ, ಹರಿವ ನದಿಯ ನೋಡಿದರೆ ನಮ್ಮೊಳಗೆ ಅವ್ಯಕ್ತವಾದಂತಹ ಒಂದು ಅಲೌಕಿಕ ಅನುಭವವಾದಂತೆ ಇಲ್ಲಿನ ಈ ಕವಿತೆಗಳು ಮಿನುಗುತ್ತವೆ.

ಕೊನೆಯದಾಗಿ ಮತ್ತೊಂದು ಕವಿತೆ ತುಂಬಾ ಗಮನಸೆಳೆಯುವಂಥದ್ದು. ಇದರಲ್ಲಿ ಕವಿಯ ಸಾಮಾಜಿಕ ಬದ್ಧತೆಯ ಜೊತೆಗೆ ಅವನ ಸೌಂದರ್ಯ ಪ್ರಜ್ಞೆಯೂ ಅನಾವರಣಗೊಂಡಿದೆ. ಮತ್ತು ಮಾಕ್ರ್ಸಿಸ್ಟ್ ಎನ್ನಬಹುದಾದ ಧೋರಣೆಯು ಈ ಪುಟ್ಟ ಕವಿತೆಯಲ್ಲಿ ಪ್ರಜ್ಞಾಪೂರ್ವಕವಾಗಿಯೋ ಅಥವಾ ಅಪ್ರಜ್ಞಾಪೂರ್ವಕವಾಗಿಯೋ ವ್ಯಕ್ತಗೊಂಡಿದೆ –ಹಣತೆ/ಮಾಡುವವನ ಮನೆಯಲ್ಲೂ/ಸಾಲು ದೀಪ/ಬೆಳಗಿದ ದಿನ/ನಿನ್ನ /ಲಕ್ಷ ದೀಪೋತ್ಸವಕ್ಕೆ /ಅರ್ಥ.


ಇಂತಹ ಸುಂದರ ಕವಿತೆಗಳ ಕಣಜವಾದ ‘ಮುತ್ತುಗ:ನಿಸ್ತೇಜ ಬಯಲ ಹಾಡು’ನ್ನು ಈ ಕಾಲವೇ ದಕ್ಕಿಸಿಕೊಂಡಿದೆ ಎಂದು ಹೇಳಿದರೆ ಅತಿಶಯೋಕ್ತಿಯಾಗಿ ಕಾಣುವುದಿಲ್ಲ ಎಂದು ಅನ್ನಿಸುತ್ತದೆ. ಆದರೂ ಇಲ್ಲಿನ ಕವಿತೆಗಳು ಒರಟುತನವಿಲ್ಲದೆ ನಯವಾಗಿರುವುದು ಅವುಗಳ ಸಾಮರ್ಥ್ಯದಂತೆ ಒಮ್ಮೊಮ್ಮೆ ದೌರ್ಬಲ್ಯವಾಗಿಯೂ ಕಾಣಬಹುದು. ಕಾಣಲಿ. ಯಾಕಂದರೆ ಪ್ರಕೃತಿ ಮತ್ತು ಸೃಷ್ಟಿಯು ಪರಿಪೂರ್ಣತೆಯನ್ನು ಇಷ್ಟಪಡುವುದಿಲ್ಲ. ಹಾಗಾಗಿ ಇನ್ನೂ ಚೆನ್ನಾಗಿ ಬರೆಯಬೇಕಿತ್ತು ಎನ್ನುವ ಒಂದು ಬಗೆಯ ಸಂಕಟ ಇರಬೇಕು. ಅದೇ ಮುಂದಿನ ಅನೂಹ್ಯ ದಾರಿಯೆಡೆಗೆ ಕೊಂಡೊಯ್ಯುವುದು.