ನಮ್ಮ ಸಂವಿಧಾನಕ್ಕೆ 60 ವರ್ಷಗಳ ಇತಿಹಾಸ. ಆದರೆ ಸಾವಿರಾರು ವರ್ಷಗಳ ಇತಿಹಾಸವಿರುವ ಇಂದೂ ಕೂಡ ಅಗೋಚರವಾಗಿ ಆಳ್ವಿಕೆ ನಡೆಸುತ್ತಿರುವ ಅಲಿಖಿತ ಸಂವಿಧಾನವೂ ಒಂದಿದೆ. ಇದು ಭಾರತದ ಮನೋಭೂಮಿಕೆಯಲ್ಲಿದೆ. ಇದು ಭೂತಕಾಲದ ಸಂವಿಧಾನ. ಇದು ಭಾರತದ ಸುಪ್ತಪ್ರಜ್ಞೆಯ ಆಳದಲ್ಲಿದೆ.  ಈ ಎರಡರ ನಡುವೆ ಯುದ್ಧ ಜರುಗುತ್ತಿದೆ. ಭೂತಕಾಲದ ಸಂವಿಧಾನವೂ ಇಲ್ಲಿ ಬಲವಾಗಿದೆ. ಹಾಗಾಗಿ ನಮ್ಮ ವರ್ತಮಾನ ಸಂವಿಧಾನದ ಆಸೆಗಳು ತೆವಳುತ್ತಿವೆ.

ಈ ನನ್ನ ಮಾತುಗಳಲ್ಲಿ ಹೊಸತೇನೂ ಇಲ್ಲ. ನಿಮ್ಮ ನಡುವೆ ನಾನೇ ಸ್ಪಷ್ಟ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವೆ. ಈ ಚಿಂತೆ ಮತ್ತು ಚಿಂತನೆಗಳನ್ನು ಉದಾಹರಣೆಗಳ ಮೂಲಕ ಸ್ಪಷ್ಟ ಮಾಡಿಕೊಳ್ಳಲು ಪ್ರಯತ್ನಿಸುವೆ.

ಬಹಳ ಹಿಂದೆ, ಡಾ.ಯು.ಆರ್.ಅನಂತಮೂರ್ತಿಯವರು ಇಂಗ್ಲಿಷ್ ವಿಭಾಗದಲ್ಲಿದ್ದಾಗ, ಅವರನ್ನು ಭೇಟಿ ಮಾಡಲು ಹಿರಿಯರೊಬ್ಬರು ಬಂದಿದ್ದರು. ತುಂಬಾ ಶುಭ್ರವಾಗಿದ್ದರು. ಮೈತುಂಬಾ ಬಿಳಿ ಬಟ್ಟೆ. ಜುಟ್ಟು ನಾಮ ಇತ್ತು. ಅವರು ಮಾತಾಡಿ ಹೋದ ಮೇಲೆ ಅನಂತಮೂರ್ತಿಯವರು “ಈಗ ಬಂದಿದ್ದವರು ವೇದ ಉಪನಿಷತ್ ಪುರಾಣ ಪಾರಂಗತರು” ಎಂದರು. ಜೊತೆಗೆ- “ಇವರು ತಾವೇ ತಮ್ಮ ಅಡಿಗೆ ಮಾಡಿಕೊಂಡು ಊಟ ಮಾಡುವುದು” ಎಂದೂ ಹೇಳಿದರು. ಇದು ಯಾಕೋ ನನ್ನ ಮನಸ್ಸಲ್ಲಿ ಉಳಿಯಿತು. ತನ್ನ ಕೈಯಾರ ಮಾಡಿದ್ದನ್ನು ಮಾತ್ರ ಊಟ ಮಾಡುವ ಇವರಿಗೆ ವೇದ ಉಪನಿಷತ್ಗಳು ಹೇಳಿಕೊಟ್ಟಿದ್ದೇನು ಎಂಬ ಪ್ರಶ್ನೆ ನನ್ನೊಳಗೆ ಉಳಿದುಬಿಟ್ಟಿತು. ಈಗ ಅನ್ನಿಸುತ್ತ್ತಿದೆ- ಇವರ ಕಠೋರ ಮಡಿಯ ಅಸ್ತಿತ್ವದಲ್ಲೆ ಅಸ್ಪೃಶ್ಯತೆಯ ಪ್ರಚಾರ ಕಾರ್ಯವೂ ಅಂತರ್ಗತವಾಗಿದೆ ಅಂತ. ಇವರನ್ನು ಅರ್ಥ ಮಾಡಿಕೊಳ್ಳೋಣ. ಅಂದರೆ ಇವರನ್ನು ಪಳೆಯುಳಿಕೆ ಎಂದು ಭಾವಿಸಿದರೆ ಸಮಸ್ಯೆ ಇಲ್ಲ. ಆದರೆ ಅವರ ಮಡಿಯನ್ನು ಪಾರಂಪರಿಕ ಮೌಲ್ಯ ಎಂದು ಗೌರವಿಸಿದರೆ- ನಾವು ಎಚ್ಚರದಲ್ಲಿ ಇಲ್ಲ ಎಂದೇ ಅರ್ಥ- ಅನ್ನಿಸುತ್ತದೆ.

ಇನ್ನೊಂದು ಭೀಕರ ಉದಾಹರಣೆ ಕೊಡುತ್ತೇನೆ. ಪುರಿ ಜಗದ್ಗುರು ಅಸೃಶ್ಯತೆಯನ್ನು ಎತ್ತಿ ಹಿಡಿದಾಗ ಭಾರತ ತಲ್ಲಣಿಸಲಿಲ್ಲ. ಭೀಕರ ಉದಾಹರಣೆ ಎಂದು ನನ್ನ ಸಮಾಧಾನಕ್ಕಾಗಿ ಹೇಳಿಕೊಂಡೆ ಅಷ್ಟೆ. ಆದರೆ ಅದು ಭೀಕರವಾಗಿ ಸಮಾಜಕ್ಕೆ ತಟ್ಟಲೇ ಇಲ್ಲ. ಪುರಿ ಜಗದ್ಗುರು ಅಸಹ್ಯವಾಗಿ ನಮಗೆ ಕಾಣಲೇ ಇಲ್ಲ. ಯಾಕೆಂದರೆ ನಮ್ಮ ವರ್ತಮಾನದ ಪ್ರಜ್ಞೆಯ ಸಂವಿಧಾನವು ಸಮಾನತೆಯನ್ನು ಮೌಲ್ಯ ಮಾಡಿದರೆ, ಭೂತಕಾಲದ ಸುಪ್ತಪ್ರಜ್ಞೆಯ ಸಂವಿಧಾನಕ್ಕೆ ಶ್ರೇಣಿಕೃತ ಸಮಾಜದ ಅಸ್ಪೃಶ್ಯತೆ, ಜಾತಿತಾರತಮ್ಯಗಳೇ ಮೌಲ್ಯವಾಗಿದೆ. ಭೂತದ ಕಪ್ಪುಹಣ ಇಂದೂ ಚಲಾವಣೆಯಲ್ಲಿದೆ. ಹೀಗಿರುವಾಗ ಸಮಾಜ ಯಾಕಾಗಿ ತಲ್ಲಣಿಸಬೇಕು? ಹೀಗಿದ್ದಾಗ ವರ್ತಮಾನದ ಸಂವಿಧಾನದ ಆಸೆಗಳು ತೆವಳದೆ ಮತ್ತೇನು ಮಾಡಲು ಸಾಧ್ಯ?

ಹಾಗೆ ಇಂದು ಚರ್ಚಿತವಾಗುತ್ತಿರುವ ಮತಾಂತರ ನಿಷೇಧದ ಪ್ರಸ್ತಾಪಕ್ಕೆ ಬಂದರೂ ಇಲ್ಲೂ ಕಾಣುವುದು ಇದನ್ನೇ. ಹಾಲಿ ಬಿಜೆಪಿ ಕರ್ನಾಟಕ ಸರ್ಕಾರ ಹಾಗೂ ಪೇಜಾವಾರ ಮಠಾಧೀಶರಾದಿಗಳು ಈ ಮತಾಂತರ ನಿಷೇಧಕ್ಕಾಗಿ ಹಾತೊರೆಯುತ್ತಿದೆ. ಶೂದ್ರನೊಬ್ಬ ನಿಮ್ಮ ಬ್ರಾಹ್ಮಣ ಜಾತಿಗೆ ಸೇರುತ್ತೇನೆಂದರೆ ಆಕಾಶ ನೋಡುವ ಮಠಾಧಿಪತಿಗಳು ಹಾಗೆ ಬ್ರಾಹ್ಮಣ ಜಾತಿಗೆ ನನ್ನನು ವರ್ಗಾವಣೆ ಮಾಡಿ ಎಂದು ಶೂದ್ರ ಕೇಳಿದರೆ ಇದು ತನ್ನ ವ್ಯಾಪ್ತಿಗೆ ಬರುವುದಿಲ್ಲವೆನ್ನುವ ಸರ್ಕಾರ ಮತಾಂತರ ನಿಷೇಧಕ್ಕೆ ಚಿಂತಿಸುತ್ತಿರುವ ಕ್ರೌರ್ಯವು ಗಾಬರಿ ಹುಟ್ಟಿಸುತ್ತದೆ, ಇರಲಿ, ಜಗತ್ತಿನಾದ್ಯಾಂತ ಎರಡೊ ಮೂರೊ ಧರ್ಮಗಳಿದ್ದರೆ ಭಾರತದ ಪರಂಪರೆಯಲ್ಲಿ ನಾಲ್ಕಾರು ಧರ್ಮಗಳಿವೆ. ಮತಾಂತರದ ಚಲನೆಯು ಭಾರತದಲ್ಲಿ ಇದ್ದುದರಿಂದಲೇ ಇದಾಗಿರುವುದು. ಈಗ ಹಾಲಿ ಭಾರತದಲ್ಲಿ ಜೈನ, ಬೌದ್ಧ, ಸಿಖ್ ಹಾಗೂ ಮತಾಂತರದ ಅವಕಾಶವಿರುವ ಕೆಲವಾದರೂ ಲಿಂಗಾಯತ ಪರಂಪರೆಯ ಧರ್ಮಗಳಿವೆ. ಲಿಂಗಾಯತ ತನ್ನ ಜಾತಿ ಬಿಟ್ಟರೆ ಭಾರತದ ದುಡಿಯುವ ವರ್ಗದ ಅಂದರೆ ಶೂದ್ರರ ಅಸ್ಪೃಶ್ಯರ ಧರ್ಮವಾಗಬಹುದಾದ ಸತ್ವವು ಅದರೊಳಗೆ ಇನ್ನೂ ಗುಟುಕುಜೀವದಂತೆ ಹುದುಗಿದೆ. ಇವುಗಳಲ್ಲಿ ನಿಧಾನವಾಗಿಯಾದರೂ ಮತಾಂತರ ಜರಗುತ್ತಲೇ ಇದೆ.

ಇದರ ನಡುವೆ ಹಿಂದೂ ಎಂಬ ಧರ್ಮದ ಹೆಸರನ್ನು ಪಡೆದುಕೊಂಡು ಸ್ಥಗಿತಗೊಂಡ ಸಾಮಾಜಿಕ ಪದ್ಧತಿಯೇ ಧರ್ಮವಾಗಿ ಇದು ಎಲ್ಲಾ ಧರ್ಮಗಳಿಗಿಂತಲೂ ಪ್ರಬಲವಾಗಿದೆ. ಶ್ರೇಣಿಯ ಸಮಾಜಕ್ಕಾಗಿ ಇರುವ ಕಾನೂನು ಕಟ್ಟಳೆಗಳೇ- ಹಿಂದು ಎಂದಾಗಿದೆ, ಈ ಶ್ರೇಣಿಯ ಕಾನೂನು ಕಟ್ಟಳೆಗಳೇ ಇಲ್ಲಿ ಧರ್ಮವಾಗಿದೆ. ಇದು ಸಾವಿರಾರು ವರ್ಷಗಳಿಂದಲೂ ಧರ್ಮದ ವೇಷ ಹಾಕಿಕೊಂಡು ವಂಚಿಸಿ ವಂಚಿಸಿ ತನ್ನನ್ನು ಧರ್ಮವೆಂದೇ ಭಾವಿಸುವಂತೆ ಮಾಡಿಬಿಟ್ಟಿದೆ. ತನ್ನ ವಂಚನೆಗಳಿಗೆ ಭಾರತದ ಮಹೋನ್ನತ ಜ್ಞಾನಶಾಖೆಗಳಾದ ದರ್ಶನಗಳನ್ನೂ ಬೌದ್ಧ ಜೈನ ಧರ್ಮಗಳನ್ನೂ ಮಾತಾಡುವ ವಸ್ತುವಾಗಿ ಬಳಸಿಕೊಂಡಿದೆ. ದೇವರನ್ನೂ ಅವತಾರ ಎತ್ತಿಸಿದೆ- ಇದೆಲ್ಲಾ ಯಾತಕ್ಕಾಗಿ ಅಂದರೆ- ಶ್ರೇಣೀಕೃತ ಜಾತಿ ವರ್ಣ ಕಟ್ಟುಪಾಡುಗಳನ್ನು ಸುಪ್ತಪ್ರಜ್ಞೆಯಲ್ಲಿ ಸ್ಥಾಪಿಸುವುದಕ್ಕಾಗಿ. ಅದಕ್ಕಾಗೇ ಯಾವ ರಾಜ ಬಂದರೂ ರಾಜಧರ್ಮ ಅಂದರೆ ವರ್ಣವ್ಯವಸ್ಥೆಯನ್ನು ಕಾಪಾಡುವುದೇ ಆಗಿತ್ತು. ಹಿಂದುವಾಗಿ ಇರುವುದು ಅಂದರೆ- ಇದ್ದ ಕಡೆ ಇರುವ ಶ್ರೇಣಿಯಲ್ಲಿ ಬಿದ್ದಿರು- ಎಂದೇ ಅರ್ಥ. ಇಲ್ಲಿರಬೇಕೆ? ಇಲ್ಲಿ ಅಸಮಾನತೆ ಕಟ್ಟಳೆಗಳ ವ್ಯಾಘ್ರನು ಧರ್ಮದ ಗೋಮುಖ ವೇಷದಲ್ಲಿದ್ದಾನೆ. ಹಿಂದೂ ಗೋಮುಖ ವ್ಯಾಘ್ರನಲ್ಲಿ ವ್ಯಾಘ್ರನ ಸಾಯಿಸಿದರೆ- ಅಂದರೆ ಶ್ರೇಣೀಕೃತ ಜಾತಿ ಕಟ್ಟಳೆ, ಅಸ್ಪೃಶ್ಯತೆಗಳ ಸಾಯಿಸಿದರೆ- ಇದೂ ಒಂದು ಧರ್ಮವಾಗಬಹುದು. ಇದು ಸಾಧ್ಯವೆ? ಸಾಧ್ಯವಾಗುವುದಾದರೆ ಮಾತ್ರ ಸಂವಿಧಾನದ ಆಶಯಗಳು ನಡೆಯಬಹುದು.

ಆದರೆ ಇದು ಸಾಧ್ಯವೇ ಎಂದು ಶ್ರೀ ಪೇಜಾವರರನ್ನು ಪ್ರಾತಿನಿಧಿಕ ಮಾಡಿಕೊಂಡು ಕೇಳುತ್ತಿದ್ದೇನೆ. ಅವತಾರ ಎತ್ತಿಸಿಯಾದರೂ ಜಾತಿಯ ಶ್ರೇಣಿಯು ಇಲ್ಲದಂತೆ ಹಿಂದೂ ಸಮಾಜ ರೂಪಿಸಿ ಅದನ್ನು ಧರ್ಮ ಮಾಡಲು ಸಾಧ್ಯವಿದೆಯೆ? ಇದಾಗದಿದ್ದರೆ, ಹಿಂದೂ ಸಮಾಜದ ದೇವಸ್ಥಾನ, ಮಠ, ಇತ್ಯಾದಿಗಳಲ್ಲಿ ಮಠಾಧೀಶ ಸ್ಥಾನ ಪೂಜೆ ಕಾರ್ಯ ಇತ್ಯಾದಿ ನಿರ್ವಹಣೆಗಳಲ್ಲಿ ಸಕಲೆಂಟು ಜಾತಿಗೂ ಪರ್ಯಾಯ ವ್ಯವಸ್ಥೆ ತರಲಾದರೂ ಸಾಧ್ಯವಿದೆಯೆ? ಉಡುಪಿಯಲ್ಲಿ ಅಷ್ಟಮಠಗಳ ಬದಲು ನವ ಮಠಗಳ ಪರ್ಯಾಯಕ್ಕಾಗಿ, ಡಿಮ್ಯಾಂಡ್ ಇಟ್ಟು ಕಾಯುತ್ತಿರುವವನಂತೆ ಇರುವ ಕನಕ ಇನ್ನೆಷ್ಟು ದಿನ ಕಾಯಬೇಕು? ಅಥವಾ ಅವನು ಹೊರಗಿರುವುದೇ ಧರ್ಮವೆ? ನೀವು ದಲಿತ ಕೇರಿಗೆ ಪಾದವಿಟ್ಟರೆ ಅದನ್ನೆ ಧನ್ಯ ಎಂದುಕೊಳ್ಳುವ ಆ ದಲಿತ ಕೇರಿಯ ಮಗುವೊಂದು ನಿಮ್ಮನ್ನು ಪ್ರೀತಿಸಿ `ನಾನೂ ನಿಮ್ಮೊಡನೆ ಬರುತ್ತೇನೆ, ನನಗೂ ನೀವಾಗುವ ಆಸೆ’ ಎಂದರೆ ನೀವೇನು ಮಾಡುತ್ತೀರಿ? ಇಲ್ಲಿ ನೀವು ಅಂದರೆ ನೀವೇ ಅಲ್ಲ. ನಿಮ್ಮಂತೆ ಇರುವ ಎಲ್ಲರಿಗೂ ಇದು ಎದುರಾಗುತ್ತಿಲ್ಲ ಯಾಕೆ? ನಿಮ್ಮದೂ ಪತನದ ಸ್ಥಿತಿಯಲ್ಲವೇ? ನಿಮ್ಮಂಥವರಿಗೆ ಇಂಥವುಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಯಾಕೆಂದರೆ ಇಂಥವರ ದೇಹದೊಳಗಿನ ಆತ್ಮಸಾಕ್ಷಿ ಅಥವಾ ಸಾಕ್ಷಿ ಪ್ರಜ್ಞೆಯು ನೇಣಿಗೆ ಹಾಕಲ್ಪಟ್ಟಿರುತ್ತದೆ.

ಏಕೆಂದರೆ ಭಾರತದ ಸಮಾಜದ ಸುಪ್ತ ಮನಸ್ಸು ಅಸ್ಪೃಶ್ಯತೆ, ಶ್ರೇಣಿಕೃತ ಜಾತಿ ಪದ್ಧತಿ, ತಾರತಮ್ಯಗಳ ಅಪಮೌಲ್ಯಗಳನ್ನೆ ಮೌಲ್ಯ ಮಾಡಿಬಿಟ್ಟಿದೆ. ಇದನ್ನು ಬಿತ್ತುವವರನ್ನು ಪೂಜ್ಯರು, ಶ್ರೀಶ್ರೀಶ್ರೀ, ಮಾತಾಡಿದರೆ ಆಶೀರ್ವಚನ, ಆಧ್ಯಾತ್ಮಿಕ ಚಿಂತಕರು, ಪರಮ ಪೂಜ್ಯರು ಇತ್ಯಾದಿ ಪಟ್ಟಕಟ್ಟಿದೆ. ಈ ಪ್ರಭಾವಕ್ಕೆ ಒಳಗಾದವರೇ ಭಾರತದ ಸಂವಿಧಾನದ ಆಶಯಗಳನ್ನು ನಿರ್ಧರಿಸುವ ನಿರ್ವಹಿಸುವ ನಿರ್ಣಾಯಕ ಸ್ಥಾನಗಳಲ್ಲಿ ಹೆಚ್ಚಾಗಿ ಇರುವಾಗ, ಕಳೆದ ವರ್ಷದ ರಾಜ್ಯ ಬಜೆಟ್ನಲ್ಲಿ ದಲಿತರಿಗೆ ಮೀಸಲಿಟ್ಟ 4 ಸಾವಿರ ಕೋಟಿಗಳಲ್ಲಿ ಅರ್ಧದಷ್ಟನ್ನು ಕಾಟಾಚಾರಕ್ಕೆ ಖರ್ಚುಮಾಡಿ ಉಳಿಕೆ ಅರ್ಧವನ್ನು ಲ್ಯಾಪ್ಸ್ ಮಾಡಿರುವ ಕ್ರಿಯೆ ಇಲ್ಲಿ ಸಹಜವಲ್ಲವೆ? ದಲಿತರ ಮೀಸಲಾತಿ ಉದ್ಯೋಗದಲ್ಲಿ ದಲಿತೇತರು ನುಸುಳಿ ಪಡಯುತ್ತಿರುವುದು ಇಲ್ಲಿ ಸಹಜ ಕ್ರಿಯೆ ತಾನೆ? ನಮಗೆ ಅನ್ಯಾಯಗಳು, ಅನ್ಯಾಯಗಳಾಗಿ ಬಂದು ಮುಟ್ಟುತ್ತಿಲ್ಲ.

ಕನ್ನಡದಲ್ಲಿ ಒಂದು ಪದ ಇದೆ- `ಪಾಪ’ ಅಂತ. ಇದನ್ನು ಪಾಪ(Sin)ಕ್ಕೂ ಬಳಸುತ್ತಾರೆ, ಹಾಗೇ ಕರುಣೆ(pity)ಗೂ ಬಳಸುತ್ತಾರೆ. ಪಾಪಕ್ಕೆ ಬಳಸಿದರೆ ಪಾಪಿಷ್ಟ ಆಗುತ್ತಾನೆ. ಕರುಣೆಗೆ ಬಳಸಿದರೆ ಪಾಪದವನು ಆಗುತ್ತಾನೆ. ಪಾಪದವನು ಒಂದು ಪಟ್ಟು ಪತನಗೊಂಡವನಾಗಿದ್ದರೆ ಪಾಪಿಷ್ಟನು ನೂರು ಪಟ್ಟು ಪತನಗೊಂಡವನಾಗಿರುತ್ತಾನೆ. ಅಸ್ಪೃಶ್ಯತೆಗೆ ಅಥವಾ ತಾರತಮ್ಯಕ್ಕೆ ಒಳಗಾದವರು ಪಾಪದವರು ಆಗುತ್ತಾರೆ. ಯಾಕೆಂದರೆ ಇವರ ಮನೋಭೂಮಿಕೆಯಲ್ಲಿ ಅಸ್ಪೃಶ್ಯತೆ ತಾರತಮ್ಯ ಇರುವುದಿಲ್ಲ. ಆದರೆ ಯಾರು ಅಸ್ಪೃಶ್ಯತೆ, ತಾರತಮ್ಯ ಆಚರಿಸುತ್ತಾರೋ ಅವರ ಮನೋಭೂಮಿಕೆಯಲ್ಲಿ ಅಸ್ಪೃಶ್ಯತೆ ತಾರತಮ್ಯಗಳೇ ತುಂಬಿರುತ್ತವೆ. ಈ ನಿಜದ ಎದುರು ಅಸ್ಪೃಶ್ಯತೆ ತಾರತಮ್ಯ ಆಚರಿಸುವವರು ಪಾಪಿಷ್ಟರಾಗುತ್ತಾರೆ. “ಗುಲಾಮನನ್ನು ಪಳಗಿಸಲು ಹೆಣಗುವ ಮಾಲೀಕನ ಮನಸ್ಸಿನ ತುಂಬಾ ಗುಲಾಮತನ ತುಂಬಿರುತ್ತದೆ” -ಎಂಬ ಹೆಗಲ್ ನ ನುಡಿಯ ನಿಜದಂತೆ. ನಾವು ನಮ್ಮ ಸಮಾಜವನ್ನು ನೋಡುವ ನೋಟಕ್ಕೆ ಈ ನಿಜದ ದರ್ಶನವಾದರೆ ಇದು ಸಂವಿಧಾನದ ಆಶಯಗಳತ್ತ ನಾವಿಟ್ಟ ಮೊದಲ ಹೆಜ್ಜೆಯಾಗುತ್ತದೆ.

ಆದರೆ ಈ ಪಾಪದವರೂ ಎಚ್ಚರದ ಸ್ಥಿತಿಯಲ್ಲಿ ಇಲ್ಲ. ಮಧ್ಯಮ ಜಾತಿಗೆ ಸೇರಿದ ನನ್ನ ಗೆಳೆಯನೊಬ್ಬ- “ಒಂದು ಚೋಟುದ್ದ ಬ್ರಾಹ್ಮಣ ಹುಡುಗ ಅವನು. ನಮ್ಮ ವಯಸ್ಸಾದ ಅಪ್ಪನಿಗೇನೆ `ಏನಯ್ಯ ಗೌಡ, ಚೆನ್ನಾಗಿದ್ದೀಯಾ?’ ಅಂತ ಏಕವಚನದಲ್ಲಿ ಕೇಳ್ತಾನಲ್ಲಯ್ಯ!” ಎಂದು ಕುಪಿತನಾಗಿ ಹೇಳಿದ. ನಾನು ಅವನಿಗೆ ಅಂದೆ- “ಸರಿಯಪ್ಪ, ನೀನು ಚಿಕ್ಕವನಾಗಿದ್ದಾಗ ನಮ್ಮ ಜಾತಿಯ ವಯಸ್ಸಾದವರಿಗೆ ಯಾವ ವಚನದಲ್ಲಿ ಕರೆಯುತ್ತಿದ್ದೆ?” ಎಂದು ಕೇಳಿದೆ. ಇಂಥವರಲ್ಲಿ ಸ್ವಾಭಿಮಾನದ ಎಚ್ಚರ ಅಂದರೆ ತನ್ನದು ಮಾತ್ರ ಆಗಿರುತ್ತದೆ, ಇನ್ನೊಂದರ ಪರಿವೆ ಇರುವುದಿಲ್ಲ. ಹಾಗೇ ದಲಿತರ ಮನಸ್ಥಿತಿಗೆ ಬಂದರೂ- ಉದಾಹರಣೆಗೆ ಮರಿಸ್ವಾಮಿಯವರು ಅಂತ, ಇವರು ಹಿಂದಿ ಅಧ್ಯಾಪಕರಾಗಿ ಕೊನೆಗೆ ಬೌದ್ಧಭಿಕ್ಕುವಾಗಿ ಇತ್ತೀಚೆಗೆ ನಿಧನರಾದರು. ಇವರು ಒಂದು ಕಡೆ ಬರೆಯುತ್ತಾರೆ- “ಚಿಕ್ಕವನಿದ್ದಾಗ ನಾನು ಅನುಭವಿಸುತ್ತಿದ್ದ ಅಸ್ಪೃಶ್ಯತೆಯ ಅವಮಾನಕ್ಕೆ ಜಗತ್ತು ಇರುವುದೇ ಹೀಗೆ ಅಂದುಕೊಂಡಿದ್ದೆ. ಯಾವಾಗ ಅಂಬೇಡ್ಕರ್ ಓದಿದೆನೊ ಆವಾಗಲೇ ನನಗೆ ಅಸ್ಪೃಶ್ಯತೆಯು ಅಸ್ಪೃಶ್ಯತೆ ಅನ್ನಿಸಿದ್ದು. ಆಗಲೇ ನನಗೆ ಅಸ್ಪೃಶ್ಯತೆಯ ಗಾಯವು ಗಾಯ ಅನ್ನಿಸಿದ್ದು” -ಎನ್ನುತ್ತಾರೆ. ಭಾರತದ ಬಹುತೇಕ ಸಮುದಾಯಗಳು ಹೀಗೇ ಇವೆ. ರಸಾಯನ ಶಾಸ್ತ್ರದಲ್ಲಿ ಬರುವ ಪರ್ಯಾಪ್ತ ದ್ರಾವಣ (Saturated solution)ದಂತೆ ಎಲ್ಲಾ ಜಾತಿಗಳು ತಂತಮ್ಮ ಕೊನೆ ಸ್ಥಿತಿ ತಲುಪಿ ಅಸ್ಪೃಶ್ಯತೆ ತಾರತಮ್ಯಗಳು ನಡೆದು ಬಂದ ಪದ್ಧತಿಗಳಾಗಿ ಎಚ್ಚರವಿಲ್ಲದೆ ತಮಗೆ ತಾವೇ ನಡೆದುಕೊಂಡು ಬರುತ್ತಿವೆ. ನಾವು ಅದೊರಳಗೇ ಸಂಪೂರ್ಣ ಮುಳುಗಿಹೋಗಿರುವುದರಿಂದ ಅದರ ಐಬನ್ನು ಅರಿವಿಗೆ ತಂದುಕೊಳ್ಳುವುದಕ್ಕೆ ಹರಸಾಹಸ ಪಡಬೇಕಿದೆ.

ಇಂತಹ ಸ್ಥಿತಿಯಲ್ಲಿರುವ ಭಾರತದಲ್ಲಿ ವರ್ತಮಾನದ ಸಂವಿಧಾನವೇನೊ ಪಾಪದವರನ್ನು ಮೇಲೆತ್ತಲು ಕೈಚಾಚಿದೆ. ಆದರೆ ಭೂತಕಾಲದ ಸಂವಿಧಾನ ಕಾಲೆಳೆಯುತ್ತಿದೆ. ಈ ಪಾಪದವರೂ ಎಚ್ಚರದಲ್ಲಿಲ್ಲ. ಸಂವಿಧಾನದ ಆಶಯಗಳ ಕಾಲೆಳೆಯುವ ಪಾಪಿಷ್ಟರಾದರೋ ಸಮಾಜದಲ್ಲಿ ಗಣ್ಯರೆನ್ನಿಸಿಕೊಂಡಿದ್ದಾರೆ. ಇವರ ವಂಶಸ್ಥರೇ ಇವರ ಪ್ರಭಾವದಲ್ಲಿರುವವರೇ ನಿರ್ಧರಿಸುವವರು ನಿರ್ವಹಿಸುವವರು ಆಗಿದ್ದಾರೆ. ಸಂವಿಧಾನದ ಆಸೆಗಳು ಈಡೇರುವುದಾದರೂ ಹೇಗೆ? ಬಸ್ಸು ರೈಲು ಕಾರಣಕ್ಕಾಗಿ ಅಕ್ಕಪಕ್ಕ ಕೂತಿದ್ದೇವೆ. ಹೊಟೇಲ್ ಕಾರಣಕ್ಕಾಗಿ ಸಹಪಂಕ್ತಿ ಭೋಜನ ಮಾಡಿದ್ದೇವೆ. ನೌಕರಿ ಕಾರಣಕ್ಕಾಗಿ ಒಟ್ಟಾಗಿ ಓಡಾಡಿದ್ದೇವೆ, ಅಲ್ಲಿ ಇಲ್ಲಿ ಮದುವೆಗಳೂ ಆಗಿವೆ. ಇಲ್ಲಿ ಆಗುತ್ತಿರುವ ಬದಲಾವಣೆಗಳು ಹೆಚ್ಚಾಗಿ ಬಹಿರಂಗ ಒತ್ತಡದವು. ಅಂತರಂಗ ಕತ್ತಲಲ್ಲೆ ಇದೆ.

ಏನೇನು ಮಾಡಬಹುದಿತ್ತು? ಮೊದಲ ಹೆಜ್ಜೆಯಾಗಿ, ವರ್ತಮಾನದ ಸಂವಿಧಾನದ ಆಶಯಗಳಿಗೆ ತಕ್ಕಂತೆ ಪ್ರಜೆಗಳನ್ನು ರೂಪಿಸಲು ಶಿಕ್ಷಣ ಕ್ಷೇತ್ರವನ್ನು ತೆಪ್ಪ ಮಾಡಿಕೊಳ್ಳಬಹುದಿತ್ತು. ಶಿಕ್ಷಣ ಪಡೆಯುವ ಎಳೆಯರು ಆ ವಿದ್ಯೆಯಲ್ಲೆ ನಾಗರಿಕರೂ ಆಗುವಂತೆ ಶಿಕ್ಷಣವನ್ನೂ ರೂಪಿಸಬಹುದಿತ್ತು. ಸಮಾಜದಲ್ಲಿ ಅಸ್ಪೃಶ್ಯತೆ ತಾರತಮ್ಯ ಆಚರಿಸುವವರ ಬಗ್ಗೆ ಆ ಪದ್ಧತಿಗಳ ಬಗ್ಗೆ ಇರುವ ಭಯ ಭಕ್ತಿಗಳಲ್ಲಿ- ಭಯ ಇರಲಿ, ಆದರೆ ಭಕ್ತಿಯನ್ನು ಇಲ್ಲದಂತೆ ಮಾಡಬೇಕಿತ್ತು. ಭಕ್ತಿಯು ಅಪಮೌಲ್ಯವನ್ನೇ ಮೌಲ್ಯವಾಗಿಸಿ ಬಿಡುತ್ತದೆ. ಈ ಅಪಾಯದ ಅರಿವು ನಮಗಿರಬೇಕಿತ್ತು. ಈ ಅರಿವು ನಮಗೆ ಇದ್ದಿದ್ದರೆ… ನಮ್ಮ ಶಿಕ್ಷಣದ ಪಠ್ಯ, ನಾವು ನೋಡುವ ದೃಷ್ಟಿಕೋನ ಎಲ್ಲವೂ ಹೊಸತಾಗಿ ಬಿಡುತ್ತಿತ್ತು. ಆಗ ಕೇವಲ ಮನುಷ್ಯ ಪ್ರಜ್ಞೆ ಕೆಲಸ ಮಾಡುತ್ತದೆ. ಆಗ ತಾರತಮ್ಯ ಮೌಲ್ಯವಾಗಿಸುವವರು ಪಳೆಯುಳಿಕೆಗಳಂತೆ ನಮ್ಮ ಸಮಾಜ ಶಾಸ್ತ್ರಜ್ಞರಿಗೆ ಕಾಣಬಹುದು. ಆಗ ಇಂಥವು ಸಾಮಾಜಿಕ ಸಾಂಸ್ಕೃತಿಕ ಅನಿಷ್ಟ ಪದ್ಧತಿಗಳು ಎಂದೋ ಅಥವಾ ಸಾಮಾಜಿಕ ಸಮಸ್ಯೆಗಳು ಎಂದೋ ಅಧ್ಯಯನದ ವಸ್ತುವಾಗುತ್ತಿತ್ತು. ರಾಜ್ಯಶಾಸ್ತ್ರದಲ್ಲಿ- ಸಂವಿಧಾನ ಅನುಷ್ಠಾನಕ್ಕೆ ಇರುವ ತೊಡಕುಗಳ ಪಟ್ಟಿಯಲ್ಲಿ ಇದೂ ಸೇರ್ಪಡೆಯಾಗುತ್ತಿತ್ತು. ಮನಃಶಾಸ್ತ್ರದ ಸಮ್ಮೋಹಿನಿ ತಜ್ಞರು ಈ ಸುಪ್ತಪ್ರಜ್ಞೆಯ ತಾರತಮ್ಯಗಳನ್ನು ತಮ್ಮ ಅಧ್ಯಯನದ ವಿಷಯ ಎಂದು ಪರಿಗಣಿಸಿ ಭೂತೋಚ್ಛಾಟನೆಯ ವಿಧಿವಿಧಾನಗಳನ್ನು ಕಂಡು ಹಿಡಿಯುವ ಪ್ರಯತ್ನಗಳೂ ಆಗುತ್ತಿದ್ದವು. ಶಿಕ್ಷಣ ತಜ್ಞರಿಂದ ಸಂವಿಧಾನದ ಆಶಯಗಳಿಗೆ ಪಠ್ಯ ರಚನೆಯಾಗುತ್ತಿತ್ತು.  -ಹೀಗೆ.

ಆದರೆ ಭಾರತದ ಶಿಕ್ಷಣ ಕ್ಷೇತ್ರಕ್ಕೆ ಬಂದರೆ ಇಲ್ಲೂ ಏನಾಗಿದೆ? ಹಿಂದೆ ದ್ವಿಜರಲ್ಲದವರಿಗೆ ವಿದ್ಯೆ ವಂಚಿಸಲ್ಪಟ್ಟಿತ್ತು. ಈಗ ವರ್ತಮಾನದ ಸಂವಿಧಾನದಲ್ಲಿ ವಿದ್ಯೆ ಎಲ್ಲರಿಗೂ ಮುಕ್ತವಾಗಿದೆ. ನಿಜ, ಆದರೆ ಕೊಟ್ಟಂತೆ ಕಾಣಿಸುತ್ತ ಸಹಜವಾಗೇ ಹೊರಗಿಡುವುದೂ ಜೊತೆಗೇ ಜರುಗುತ್ತಿದೆ. ಏಕರೂಪದ ಶಿಕ್ಷಣ ಪದ್ಧತಿ ಇಲ್ಲದೆ, ಮಾತೃಭಾಷೆ ಶಿಕ್ಷಣ ಮಾಧ್ಯಮವಾಗದೆ, ಕಡ್ಡಾಯ ಶಿಕ್ಷಣದಲ್ಲಿ ಕಡ್ಡಾಯ ಇಲ್ಲದೆ- ಮುಖ್ಯವಾಗಿ ಗ್ರಾಮೀಣ ಭಾರತವು ಸಹಜವೊ ಎಂಬಂತೆ ಹೊರ ಹಾಕಲ್ಪಡುತ್ತಿದೆ. ಎಲ್ಲರಿಗೂ ಶಿಕ್ಷಣ ನೀಡಬೇಕೆಂಬ ಆಧುನಿಕ ಪ್ರಜ್ಞೆಯನ್ನು ಶಿಕ್ಷಣ ಕೊಡಬಾರದೆನ್ನುವ ಸನಾತನ ಸುಪ್ತಪ್ರಜ್ಞೆಯೂ ನಿಯಂತ್ರಿಸುತ್ತಿರುವುದರ ಪರಿಣಾಮದಿಂದ ಇದಾಗುತ್ತಿರಬಹುದೇನೊ. ಇಲ್ಲೂ ತಾರತಮ್ಯವೇ. ಇದಕ್ಕೆ ನಾವು ಬೆಚ್ಚುತ್ತಿಲ್ಲ, ಬೆದರುತ್ತಿಲ್ಲ. ಮೊದಲು ಶಿಕ್ಷಣ ಕ್ಷೇತ್ರದಲ್ಲಿ ನಾವು ಎಚ್ಚೆತ್ತುಕೊಂಡು ಮನುಷ್ಯರಾದರೆ ಉಳಿದುದೆಲ್ಲಾ ತಂತಾನೆ ಕಾಣಬಹುದೇನೋ.

ಭಾರತದ ಇಂದಿನ ಸ್ಥಿತಿಗೆ ಒಂದು ಚಿತ್ರಣ ಕೊಟ್ಟು ಮುಗಿಸುತ್ತೇನೆ. ತುಂಬಾ ಹಿಂದೆ- ಹಳ್ಳಿಯೊಂದರಲ್ಲಿ ದಲಿತರಿಗೆ ಪ್ರವೇಶವಿಲ್ಲದ ಕಾರಣಕ್ಕೆ ಗಲಾಟೆಯಾಗಿ ಅಲ್ಲಿಗೆ ಹೋಗಿದ್ದೆವು. ಹೋಗಿ ನೋಡಿದರೆ- ಆ ಹೊಟೇಲ್ ಅಂದರೆ ಅದು ಜಗಲಿ ಮೇಲೆ ತೆಂಗಿನ ಗರಿ ಕಟ್ಟಿದ ಒಂದು ಕತ್ತಲು ತುಂಬಿದ ನೆರಕೆಯಾಗಿತ್ತು. ಅಲ್ಲಿ ನೊಣಗಳ ಸಾಮ್ರಾಜ್ಯವಿತ್ತು. ಬಚ್ಚಲು ಪಕ್ಕದಲ್ಲೆ ಹರಿಯುತ್ತ ಮೂಗು ಮುಚ್ಚಿಕೊಂಡು ಏನಾರು ತಿನ್ನಬೇಕಿತ್ತು. ಈ ಹೊಟೇಲ್ ಪ್ರವೇಶಕ್ಕೆ ದಲಿತರು ಹಾತೊರೆಯುತ್ತಿದ್ದರು. ಆ ದೃಶ್ಯ ನೋಡಿದ ನನ್ನ ಜೊತೆಗಿದ್ದ ಶ್ರೀಕೃಷ್ಣ ಆಲನಹಳ್ಳಿ “ಅಯ್ಯೋ ಮಾದೇವ, ಇಲ್ಲಿ ದಲಿತರು ಏನನ್ನೂ ತಿನ್ನದಿದ್ದರೇನೇ ಆರೋಗ್ಯವಲ್ಲವೆ?” ಎಂದಿದ್ದರು. ಅದಕ್ಕೆ ನಾನು “ಪ್ರವೇಶ ಕೇಳುತ್ತಿರುವುದು ಮನಸ್ಸಿನ ಒಳಕ್ಕೆ” ಎಂದಿದ್ದೆ.

ಭಾರತದ ಸ್ಥಿತಿಯೂ ಹೆಚ್ಚುಕಮ್ಮಿ ಆ ಹೊಟೇಲ್ ನ  ಕತೆಯಂತೆಯೇ ಇದೆ. ಇಲ್ಲಿ ಕೊಳಕುತನವಿದೆ, ಅನಾರೋಗ್ಯವಿದೆ, ಬಡತನವಿದೆ, ಅಜ್ಞಾನವು ತುಂಬಿದೆ. ಜೊತೆಗೆ ಸಾಲದೆಂಬಂತೆ, ಭಾರತದ ಮೇಲೆ ದಾಳಿ ಮಾಡಿ ಸಂಪತ್ತು ದೋಚಿಕೊಂಡು ಹೋಗುತ್ತಿದ್ದ ಆ ದಾಳಿಕೋರರು ಆ ಕಾಲಮಾನದಲ್ಲಿ ಏನಾರು ಹೆಚ್ಚೂಕಮ್ಮಿ ಮಾಡಿ ಹುಟ್ಟಿದ ಸಂತಾನವೇನೊ ಎಂಬಂತೆ ಸೆಜ್, ರಿಯಲ್ ಎಸ್ಟೇಟ್ ಹೆಸರಲ್ಲಿ ಭೂಮಿಯ ಹೊರ ಮೈಯನ್ನೂ ಮತ್ತು ಗಣಿಗಾರಿಕೆ ಹೆಸರಲ್ಲಿ ಭೂಮಿಯ ಒಳ ಮೈಯನ್ನೂ ದೋಚುತ್ತಿದ್ದಾರೆ.  ಈ ನವದಾಳಿಕೋರರು ಮತದಾರರನ್ನೂ  ಶಾಸಕರನ್ನೂ ಕೊಂಡುಕೊಳ್ಳ ಬಹುದಾದ ವಸ್ತುವಾಗಿಸಿಬಿಟ್ಟಿದ್ದಾರೆ. ಈಗ ಗಣತಂತ್ರ ವ್ಯವಸ್ಥೆಗೇ ಗಂಡಾಂತರ ಎದುರಾಗಿದೆ. ಇಂಥ ಭೀಕರ ಪರಿಸ್ಥಿತಿಯಲ್ಲಿ ನಾವಿದ್ದೇವೆ.

ಇಷ್ಟಿದ್ದೂ ಹೀಗಿದ್ದೂ ಭಾರತವು ಸ್ವಾತಂತ್ರ್ಯ ಪಡೆದ ನಂತರ ರಾಜರ ಆಳ್ವಿಕೆ ಕೊನೆಗೊಳಿಸಿದ್ದೂ, ವಯಸ್ಕರ ಮತದಾನ ಪದ್ಧತಿ ತಂದಿದ್ದೂ, ತನ್ನ ಮಿತಿಗಳೊಡನೆ ಶಿಕ್ಷಣವನ್ನು ಸರ್ವರಿಗೂ ಮುಕ್ತಗೊಳಿಸಿದ್ದೂ, ಭೂಸುಧಾರಣೆ, ಮೀಸಲಾತಿ ಇತ್ಯಾದಿ ಈ ನೆಲದಲ್ಲಿ ಸಂಭವಿಸಿರುವುದು  ಸಾಮಾನ್ಯ ಸಂಗತಿಗಳೇನೂ ಅಲ್ಲ. ಅಂದರೆ ಭಾರತದಲ್ಲಿ ಬುದ್ಧ ವಚನಕಾರರಂಥವರ ಮಹೋನ್ನತ ಪರಂಪರೆಯ ಬೆಳಕೂ ಇದೆ. ಅವರು ಉಸಿರಾಡಿದ ಗಾಳಿ ಅವರಿಟ್ಟ ಹೆಜ್ಜೆ ಗುರುತುಗಳೂ ಇಲ್ಲಿವೆ. ಆ ಹೆಜ್ಜೆಗಳನ್ನು ಗುರುತಿಸಿ ನಾವು ಹೆಜ್ಜೆ ಇಟ್ಟರೆ ಆ ಹವಾದಲ್ಲಿ ಆಗ ಸಂವಿಧಾನದ ಆಸೆಗಳು ಕೈಗೂಡಲೂಬಹುದು.

( ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ. ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ, ಬೆಂಗಳೂರು ಇವರು ಆಯೋಜಿಸಿದ್ದ ‘ಭಾರತೀಯ ಸಂವಿಧಾನಕ್ಕೆ 60 ವರ್ಷ-ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯ ನಡೆದು ಬಂದ ದಾರಿ: ನೆನ್ನೆ, ಇಂದು ಮತ್ತು ನಾಳೆ’ -ವಿಚಾರ ಸಂಕಿರಣದ ‘ಸಾಮಾಜಿಕ ಪ್ರತ್ಯೇಕತೆ’ಗೆ ಸಂಬಂಧಿಸಿದ ಭಾಷಣ )