ಎರಡನೇ ಮಹಾಯುದ್ಧದಲ್ಲಿ ಸ್ಟ್ಯಾಲಿನ್ ವಿಶಿಷ್ಟವಾದ ಯುದ್ಧತಂತ್ರಗಳಿಂದ ಫ್ಯಾಸಿಸ಼ಂ ಸೋಲಿಸಿದ್ದು ರೋಮಾಂಚನಕಾರಿಯಾಗಿದೆ. ಎಂಥ ಪ್ರಸಂಗದಲ್ಲೂ ಉತ್ಪಾದನೆ ನಿಲ್ಲಲಿಲ್ಲ. ಫ್ಯಾಸಿಸ್ಟ್ ಸೈನ್ಯ ದೇಶದೊಳಗೆ ನುಗ್ಗಿದಂತೆಲ್ಲ ಆ ಪ್ರದೇಶದಲ್ಲಿನ ಕಾರ್ಖಾನೆಗಳನ್ನು ಮೊದಲೇ ಮುಂದಿನ ಪ್ರದೇಶದಲ್ಲಿ ಶಿಫ್ಟ್ ಮಾಡಲಾಗುತ್ತಿತ್ತು. ಹೀಗಾಗಿ ವೈರಿಗಳಿಗೆ ಸಿಗದಂತೆ ಮತ್ತು ಉತ್ಪಾದನೆ ಸಂಪೂರ್ಣ ಸ್ಥಗಿತಗೊಳ್ಳದಂತೆ ಸ್ಟ್ಯಾಲಿನ್ ನೋಡಿಕೊಂಡಿದ್ದ. ಭಾರಿ ಹಿಮ ಬೀಳುವ ಸಂದರ್ಭದಲ್ಲೇ ಹಿಟ್ಲರನ ಸೈನ್ಯ ಮಾಸ್ಕೋ ಪ್ರವೇಶಿಸುವಂತೆ ಯೋಜನೆ ರೂಪಿಸಿದ್ದ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 55ನೇ ಕಂತು ನಿಮ್ಮ ಓದಿಗೆ.

ಲೆನಿನ್‌ಗ್ರಾಡ್ (ಈಗ ಅದರ ಹೆಸರು ಸೇಂಟ್ ಪೀಟರ್ಸ್‌ಬರ್ಗ್)ನಲ್ಲಿರುವ ‘ಪೀಟರ್ ದ ಗ್ರೇಟ್ ಬೇಸಗೆ ಅರಮನೆ’ಯ ಪಶ್ಚಿಮಕ್ಕೆ ಬಾಲ್ಟಿಕ್ ಸಮುದ್ರದ ಗಲ್ಫ್ ಆಫ್ ಫಿನ್‌ಲ್ಯಾಂಡ್ ಹತ್ತಿಕೊಂಡಿದೆ. ಈ ಅರಮನೆಯ ಬಳಿಯೆ ನೇವಾ ನದಿ ಸಮುದ್ರವನ್ನು ಸೇರುವುದು. ಉತ್ತರ ಯುರೋಪಿನ ಫಿನ್‌ಲ್ಯಾಂಡ್ ರಾಜಧಾನಿ ಹೆಲ್ಸಿಂಕಿಯನ್ನು ಇಲ್ಲಿಂದ ಮಸಕು ಮಸಕಾಗಿ ನೋಡಬಹುದು. ಸೋವಿಯತ್ ದೇಶದ ಕೆಲ ರಾಜಕಾರಣಿಗಳು ಅಲ್ಲಿ ಗುಪ್ತವಾಗಿ ಧನ ಶೇಖರಿಸಿಡುತ್ತಾರೆ ಎಂಬುದು ನನಗೆ ಆ ಸಮರ್ ಪ್ಯಾಲೇಸ್ ನೋಡಲು ಬಂದ ವಿದೇಶಿ ಪ್ರವಾಸಿಯೊಬ್ಬರು ತಿಳಿಸಿದಾಗ ಬಹಳ ಬೇಸರವಾಯಿತು. ಅಂಥವರು ತಮ್ಮ ಪೂರ್ವಜರ ಹೋರಾಟ ಮತ್ತು ತ್ಯಾಗವನ್ನು ಮರೆತಿರುತ್ತಾರೆ.

(ಪೀಟರ್ ದ ಗ್ರೇಟ್ ಸಮರ್ ಪ್ಯಾಲೇಸ್)

ಲೆನಿನ್‌ಗ್ರಾಡನ್ನು ೯೦೦ ದಿನಗಳವರೆಗೆ ಫ್ಯಾಸಿಸ್ಟರು ಮುತ್ತಿಗೆ ಹಾಕಿದಾಗ ಅಲ್ಲಿನ ಬೀಜಸಂರಕ್ಷಣಾ ಕೇಂದ್ರದ ಸಿಬ್ಬಂದಿಯಲ್ಲಿ ಅನೇಕರು ಹಸಿವಿನಿಂದ ಸತ್ತರು ಹೊರತಾಗಿ ವಿವಿಧ ತಳಿಯ ಬೀಜಗಳನ್ನು ಆಹಾರಕ್ಕೆ ಬಳಸಲಿಲ್ಲ. (ಇಂಥದೆ ಒಂದು ಪ್ರಸಂಗವನ್ನು ವಿಶ್ವವಿಖ್ಯಾತ ಕೃಷಿತಜ್ಞೆ ವಂದನಾ ಶಿವಾ ಅವರು ನನಗೆ ತಿಳಿಸಿದ್ದರು. ಅಸ್ಸಾಂ ರಾಜ್ಯದಲ್ಲಿ ಬರಗಾಲ ಬಿದ್ದಾಗ, ಒಬ್ಬ ರೈತನ ಮನೆಯಲ್ಲಿ ಎಲ್ಲರೂ ಹಸಿವಿನಿಂದ ಸತ್ತಿದ್ದರು. ಅವರ ಮನೆ ಹೊಕ್ಕು ಹೆಣಗಳನ್ನು ಹೊರತೆಗೆಯುವಾಗ ಆಶ್ಚರ್ಯಕರವಾದ ಅಂಶವೊಂದು ಕಂಡುಬಂದಿತು. ಮನೆಯ ಮೂಲೆಯೊಂದರಲ್ಲಿ ಅಡಕಲಿಟ್ಟ ಪ್ರತಿ ಗಡಿಗೆಗಳಲ್ಲಿ ಬೀಜೋಪಚಾರ ಮಾಡಿದ ಬೀಜಗಳು ತುಂಬಿದ್ದವು! ಹಾಗೇ ಬುಂದೇಲಖಂಡದ ಕಲಾವಿದರೊಬ್ಬರು ಬರಗಾಲದ ವೇಳೆ ತಮ್ಮ ಊರಿನಿಂದ ನಗರಗಳ ಕಡೆಗೆ ಕೆಲಸ ಹುಡುಕಿಕೊಂಡು ಗುಳೆ ಹೋಗುತ್ತಿದ್ದ ರೈತರ ಬಗ್ಗೆ ತಿಳಿಸಿದ್ದರು. ಅವರು ಚಕ್ಕಡಿಯಲ್ಲಿ ಹೋಗುವಾಗ ಒಂದಿಷ್ಟು ಬೀಜಗಳನ್ನು ಒಣಭೂಮಿಯಲ್ಲಿ ಚೆಲ್ಲುತ್ತ ಹೋಗುತ್ತಿದ್ದರು. ‘ಮಳೆ ಬಂದು ಭೂಮಿ ಬೆಳದು ಹಳ್ಳಿಯಲ್ಲಿ ಇದ್ದವರ ಹಸಿವು ಹಿಂಗಿಸಲಿ’ ಎಂಬುದು ಅವರ ಆಶಯವಾಗಿತ್ತು. ಭೂಮಿಯ ಜೊತೆಗಿನ ಮಾನವ ಸಂಬಂಧ ಸಕಲ ಜೀವಾತ್ಮರಿಗೆ ಲೇಸನೆ ಬಯಸುವಂಥದ್ದಾಗಿರುತ್ತದೆ. ಆದರೆ ಅಲ್ಲಿ ಶೋಷಕರು ಸೇರಿದಾಗ ತದ್ವಿರುದ್ಧವಾಗುತ್ತದೆ.)

ಲೆನಿನ್‌ಗ್ರಾಡ್‌ನಿಂದ ವಾಪಸಾಗುವ ಹಿಂದಿನ ದಿನ ದೇಗಿಸ್ತಾನ್ ಗಣರಾಜ್ಯದ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆ ವಿಶಾಲವಾದ ರಂಗಮಂದಿರದಲ್ಲಿ ಜಗತ್ತಿನ ವಿವಿಧ ದೇಶಗಳ ಪ್ರವಾಸಿಗರು ಕಿಕ್ಕಿರಿದು ತುಂಬಿದ್ದರು. ಕಲಾವಿದರು ನಮ್ಮ ಕಾಶ್ಮೀರಿಗಳ ಹಾಗೆ ಇದ್ದರು. ವೇಶಭೂಷಣ ಕೂಡ ಅದೇ ತೆರನಾಗಿತ್ತು. ಅವರ ಕಲಾಪ್ರಕಾರಗಳನ್ನು ನೋಡುವುದೇ ಒಂದು ಸುಯೋಗ. ರಂಗಮಂಚದ ಮೇಲಿನ ನೆಳಲು ಬೆಳಕಿನ ವ್ಯವಸ್ಥೆ, ಸಂಗೀತ, ನಟನೆ, ಸಮೂಹ ನೃತ್ಯ ಹೀಗೆ ಎಲ್ಲವೂ ಮನಮೋಹಕವಾಗಿದ್ದವು. ಅವರ ಕಲಾಪ್ರತಿಭೆಗೆ ಸಹಸ್ರಾರು ಪ್ರೇಕ್ಷಕರು ಹರ್ಷಗೊಂಡು ಚಪ್ಪಾಳೆ ತಟ್ಟುತ್ತಿದ್ದರು. ಪಾದರಸದಂತೆ ಕ್ರಿಯಾಶೀಲವಾಗಿದ್ದ ಆ ಕಲಾವಿದರ ನಟನೆಯ ಚಾಕಚಕ್ಯತೆ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಅವರು ಕಲಾಪ್ರದರ್ಶನದ ಕಾರ್ಯಕ್ರಮದಲ್ಲಿ ಒಂದು ರೂಪಕದ ಬಗ್ಗೆ ಹೇಳಲೇಬೇಕು.

ಆ ರೂಪಕ ಒಬ್ಬ ಸ್ತ್ರೀಲೋಲುಪ ಮತ್ತು ಏಳು ಮಂದಿ ಮುಗ್ಧೆಯರ ಕುರಿತದ್ದು. ಆತ ಒಬ್ಬ ಯುವತಿಗೆ ಉದ್ಯಾನವನದಲ್ಲಿ ಭೇಟಿಯಾಗುತ್ತಾನೆ. ಮನಸೂರೆಗೊಳ್ಳುವಂತೆ ಭಾವಪೂರ್ಣವಾಗಿ ನಟಿಸುತ್ತ ಉತ್ಕಟ ಪ್ರೇಮದ ಮಾತುಗಳನ್ನಾಡುವ ಮೂಲಕ ಅವಳನ್ನು ಒಲಿಸಿಕೊಳ್ಳುತ್ತಾನೆ. ಅವಳಿಗೆ ಪ್ರೇಮದ ಕಾಣಿಕೆಯಾಗಿ ಕರವಸ್ತ್ರವೊಂದನ್ನು ಕೊಡುತ್ತಾನೆ. ಇದೇ ರೀತಿ ಇತರ ಆರು ಯುವತಿಯರಿಗೆ ಪುಸಲಾಯಿಸುತ್ತಾನೆ. ಈತ ಏಳನೆಯ ಹುಡುಗಿಯನ್ನು ತನ್ನತ್ತ ಸೆಳೆಯುವ ಸಂದರ್ಭದಲ್ಲಿ ಈಗಾಗಲೇ ಬೇಸ್ತುಬಿದ್ದ ಒಬ್ಬ ಯುವತಿ ಆಕಸ್ಮಿಕವಾಗಿ ನೋಡುತ್ತಾಳೆ. ಅವಳು ಹೀಗೆ ತನ್ನಂತೆ ಮೋಸಹೋದ ಯುವತಿಯರನ್ನೆಲ್ಲ ಒಂದೆಡೆ ಸೇರಿಸುತ್ತಾಳೆ. ಎಲ್ಲ ಯುವತಿಯರು ಜಾಗೃತರಾಗುತ್ತಾರೆ. ಆತ ಏಳನೆಯ ಯುವತಿಗೆ ಉದ್ಯಾನದಲ್ಲಿ ಭೇಟಿಯಾಗಲು ತಿಳಿಸಿದ್ದನ್ನು ಆಕೆ ಉಳಿದ ಆರು ಜನ ಯುವತಿಯರಿಗೆ ತಿಳಿಸುತ್ತಾಳೆ. ಅವರೆಲ್ಲ ಮಾತನಾಡಿಕೊಂಡು ಆತ ಕೊಟ್ಟ ಕರವಸ್ತ್ರಗಳನ್ನು ಹಿಡಿದುಕೊಂಡು ಉದ್ಯಾನವನಕ್ಕೆ ಬರುತ್ತಾರೆ.

(ನಮ್ಮ ಕಾಶ್ಮೀರದಂತೆ ಇರುವ ದೇಗಿಸ್ತಾನ ಗಣರಾಜ್ಯದ ಸುಂದರಿಯರು)

ಏಳನೆಯ ಯುವತಿಗಾಗಿ ಕಾಯುತ್ತಿದ್ದ ಆತ ಎಲ್ಲರನ್ನು ಏಕಕಾಲಕ್ಕೆ ನೋಡಿ ಗಾಬರಿಗೊಳ್ಳುತ್ತಾನೆ. ಅವರೆಲ್ಲ ಬಂದು ಆತನನ್ನು ತರಾಟೆಗೆ ತೆಗೆದುಕೊಳ್ಳುವ ರೀತಿ ಮನಂಬುಗುವಂತಿದೆ. ಕೊನೆಗೆ ಆ ಎಲ್ಲ ಏಳೂ ಜನ ಯುವತಿಯರು ಆತ ಕೊಟ್ಟ ಕರವಸ್ತ್ರಗಳನ್ನು ಅವನ ಮುಖದ ಮೇಲೆ ಎಸೆದು ಒಗ್ಗಟ್ಟಾಗಿ ಹೋಗುತ್ತಾರೆ. ಆತ ಇಂಗು ತಿಂದ ಮಂಗನಂತೆ ನಿಲ್ಲುತ್ತಾನೆ. ಇದನ್ನೆಲ್ಲ ಕಲಾವಿದರು ಬಹಳ ಕಲಾತ್ಮಕವಾಗಿ ಪ್ರಸ್ತುತಪಡಿಸುತ್ತಾರೆ. ಆ ಝಗಮಗಿಸುವ ವಾತಾವರಣ, ಆಕರ್ಷಕ ಉಡುಪು ಮತ್ತು ನಟನೆಯಿಂದಾಗಿ ಆ ಸುಂದರ ನಟ ನಟಿಯರೆಲ್ಲ ಯಾವುದೋ ಲೋಕದಿಂದ ಬಂದವರ ಹಾಗೆ ಕಾಣುತ್ತಿದ್ದರು. ವಿವಿಧ ದೇಶಗಳ ಜನರು ತಮ್ಮ ದೇಶ ಭಾಷೆಗಳನ್ನು ಮರೆತು ಏಕಾಗ್ರಚಿತ್ತದಿಂದ ಪುಳಕಿತರಾಗಿ ಹಷೋದ್ಗಾರಗೈಯ್ಯುತ್ತಿದ್ದರು.

ಮರುದಿನ ನಾವು ಮಾಸ್ಕೊಗೆ ಮರಳಿದೆವು. ಅಂದು ರಾತ್ರಿ ಮಾಸ್ಕೊದಿಂದ ದೆಹಲಿಗೆ ವಾಪಸಾಗಬೇಕಿತ್ತು. ರಾತ್ರಿ ಏರ್‌ಪೋರ್ಟ್‌ಗೆ ಹೋಗುವಾಗ ನಮಗೆಲ್ಲ ಕಾಣಿಕೆ ಕೊಟ್ಟು ಕಳಿಸಿದರು. ರಷ್ಯನ್ನರು ಕೊಡುವ ಮುಖ್ಯ ಕಾಣಿಕೆ ಎಂದರೆ ವೋಡ್ಕಾ ಬಾಟಲಿ. ಅದು ಹಳೆಮೈಸೂರಿನವರಿಗೆ ಕಾಫಿ, ಉತ್ತರ ಕರ್ನಾಟಕದವರಿಗೆ ಚಹಾ, ಕರಾವಳಿಯ ಜನರಿಗೆ ಬಂಗಡೆ ಮೀನು ಹಾಗೂ ಗೋವಾದವರಿಗೆ ಫೆನ್ನಿ ಇದ್ದ ಹಾಗೆ ರಷ್ಯನ್ನರಿಗೆ ಓಡ್ಕಾ. ಅದು ಅವರ ಪ್ರೀತಿಯ ಮದ್ಯ. ಬಹುಶಃ ಬಾರ್ಲಿಯಿಂದ ಮಾಡುತ್ತಾರೆಂಬ ನೆನಪು. ಎಷ್ಟೇ ಉತ್ಕೃಷ್ಟ ಮದ್ಯ ಇದ್ದರೂ ವೋಡ್ಕಾ ಇಲ್ಲದೆ ಅವರಿಗೆ ತೃಪ್ತಿ ಸಿಗದು.

ವಿಮಾನ ನಿಲ್ದಾಣಕ್ಕೆ ಹೋಗುವ ಆ ರಾತ್ರಿಯ ವೇಳೆ ಮೋಡ ಮುಸುಕಿದ ವಾತಾವರಣದಲ್ಲಿ ಜಿಟಿಜಿಟಿ ವಾತಾವರಣದಲ್ಲಿ ಎಲ್ಲೆಡೆ ಬೀದಿದೀಪಗಳಿದ್ದರೂ ನಗರ ಮಸಕು ಮಸಕಾಗಿ ಕಾಣುತ್ತಿತ್ತು. ಒಂದು ಕಡೆ ಇಂಗ್ಲಿಷ್ ಎಕ್ಸ್ ಆಕಾರದಲ್ಲಿ ಒಂದಿಷ್ಟು ಎತ್ತರದ (ಬಹುಶಃ ಸಿಮೆಂಟಿಂದ ಮಾಡಿದ್ದಿರಬಹುದು) ಸಂಕೇತಗಳಿದ್ದವು. ಅವುಗಳನ್ನೇಕೆ ನಿಲ್ಲಿಸಿದ್ದಾರೆ ಎಂದು ನಮ್ಮ ಗೈಡ್‌ಗೆ ಕೇಳಿದೆ. ಹಿಟ್ಲರನ ಸೈನಿಕರನ್ನು ನಮ್ಮ ಕೆಂಪುಸೇನೆ ತಡೆದ ಸಂಕೇತಗಳವು ಎಂದು ಅವರು ತಿಳಿಸಿದರು.

ಎರಡನೇ ಮಹಾಯುದ್ಧದಲ್ಲಿ ಸ್ಟ್ಯಾಲಿನ್ ವಿಶಿಷ್ಟವಾದ ಯುದ್ಧತಂತ್ರಗಳಿಂದ ಫ್ಯಾಸಿಸ಼ಂ ಸೋಲಿಸಿದ್ದು ರೋಮಾಂಚನಕಾರಿಯಾಗಿದೆ. ಎಂಥ ಪ್ರಸಂಗದಲ್ಲೂ ಉತ್ಪಾದನೆ ನಿಲ್ಲಲಿಲ್ಲ. ಫ್ಯಾಸಿಸ್ಟ್ ಸೈನ್ಯ ದೇಶದೊಳಗೆ ನುಗ್ಗಿದಂತೆಲ್ಲ ಆ ಪ್ರದೇಶದಲ್ಲಿನ ಕಾರ್ಖಾನೆಗಳನ್ನು ಮೊದಲೇ ಮುಂದಿನ ಪ್ರದೇಶದಲ್ಲಿ ಶಿಫ್ಟ್ ಮಾಡಲಾಗುತ್ತಿತ್ತು. ಹೀಗಾಗಿ ವೈರಿಗಳಿಗೆ ಸಿಗದಂತೆ ಮತ್ತು ಉತ್ಪಾದನೆ ಸಂಪೂರ್ಣ ಸ್ಥಗಿತಗೊಳ್ಳದಂತೆ ಸ್ಟ್ಯಾಲಿನ್ ನೋಡಿಕೊಂಡಿದ್ದ. ಭಾರಿ ಹಿಮ ಬೀಳುವ ಸಂದರ್ಭದಲ್ಲೇ ಹಿಟ್ಲರನ ಸೈನ್ಯ ಮಾಸ್ಕೋ ಪ್ರವೇಶಿಸುವಂತೆ ಯೋಜನೆ ರೂಪಿಸಿದ್ದ. ಹೀಗೆ ಆತ ತನ್ನ ಯುದ್ಧತಂತ್ರದಲ್ಲಿ ನಿಸರ್ಗವನ್ನು ಕೂಡ ಬಳಸಿ ಫ್ಯಾಸಿಸ಼ಂ ನಿರ್ನಾಮವಾಗುವ ಹಾಗೆ ಮಾಡಿದ. ಇಷ್ಟೆಲ್ಲ ಪ್ರಯತ್ನ ಮಾಡಿ ಫ್ಯಾಸಿಸ಼ಂ ಮೇಲೆ ವಿಜಯ ಸಾಧಿಸಿದರೂ ಆತನ ಕಟ್ಟುನಿಟ್ಟಿನ ಆಡಳಿತದಲ್ಲಿ ಹಿಂಸೆಯೂ ಸೇರಿತ್ತು ಎಂಬ ಆಪಾದನೆಗಳಿವೆ. ಭಯಂಕರವಾದ ಎರಡನೇ ಮಹಾಯುದ್ದದಲ್ಲಿ ಜನ ಮತ್ತು ಸಂಪತ್ತಿನ ವಿಚಾರದಲ್ಲಿ ಎಲ್ಲ ದೇಶಗಳಿಗಿಂತ ಅತಿ ಹೆಚ್ಚು ಹಾನಿಗೊಳಗಾದ ಸೋವಿಯತ್ ದೇಶದ ನಾಯಕನಾದ ಸ್ಟ್ಯಾಲಿನ್ ನಿಭಾಯಿಸಿದ್ದರ ಮುಂದೆ ಆತನ ಆಡಳಿತಾವಧಿಯ ಅಹಿತಕರ ಘಟನೆಗಳು ಗಣನೆಗೆ ಬಾರದಂಥ ಸ್ಥಿತಿ ಆಗ ನಿರ್ಮಾಣವಾಗಿತ್ತು.

(ಮಾಸ್ಕೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಂದು ಟರ್ಮಿನಲ್)

ವಿಮಾನ ಮಾಸ್ಕೊದಿಂದ ನೇರವಾಗಿ ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಏಳೆಂಟು ಗಂಟೆಯ ಪ್ರಯಾಣ ಅದಾಗಿತ್ತು. ಮರುದಿನ ದೆಹಲಿಯಲ್ಲಿ ಒಂದಿಷ್ಟು ಸಮಯ ಕಳೆದು ಎಲ್ಲರನ್ನು ಬೀಳ್ಕೊಂಡು ನಾನು ಮತ್ತು ಡಾ|| ಪಿ.ಎಸ್. ಶಂಕರ ಅವರು ರೇಲ್ವೆ ನಿಲ್ದಾಣಕ್ಕೆ ಬಂದೆವು. ಅವರು ಗುಲ್ಬರ್ಗಾಕ್ಕೆ ಹೋಗಬೇಕಿತ್ತು. ಗ್ರ್ಯಾಂಡ್ ಟ್ರಂಕ್ ಎಕ್ಸ್ಪ್ರೆಸ್ ಎಂಬ ಹಳೆಯ ರೈಲು ನಿಂತಿತ್ತು. ಅದು ವಾಯಾ ಮದ್ರಾಸ್ ಬೆಂಗಳೂರಿಗೆ ಹೋಗುವ ರೈಲು. ಮನೆ ಸೇರುವ ತವಕ ಹೆಚ್ಚಾಗಿದ್ದರಿಂದ ‘ಸಿಕ್ಕಿದ್ದೇ ಶಿವಾ’ ಎಂದು ಭಾವಿಸಿದ ನಾನು ಟಿಕೆಟ್ ಪಡೆದು ಆ ರೈಲು ಹತ್ತಿದೆ. ನನಗೆ ಸಿಕ್ಕ ಬೋಗಿಯ ಅನೇಕ ಸ್ಲೀಪರ್‌ಗಳು ಖಾಲಿ ಇದ್ದವು. ಹಾಗೇ ಅಡ್ಡಾದೆ. ದುಡಿಯುವ ಜನರ ತತ್ತ್ವಜ್ಞಾನವನ್ನೊಳಗೊಂಡ ಕಮ್ಯುನಿಸ಼ಂ ಮೂಲಕ ಜನರು ಅಭಿವೃದ್ಧಿಪಡಿಸಿದ ಮಹಾನ್ ದೇಶದ ನೆನಪುಗಳನ್ನು ಮೆಲಕು ಹಾಕುತ್ತ, ಬೋಗಿಯಲ್ಲಿ ಅದು ಇದು ಮಾರಲು ಬರುವವರಿಂದ ಕೊಂಡು ತಿನ್ನುತ್ತ ಮಲಗಲು ಸಿದ್ಧತೆ ಮಾಡಿಕೊಂಡೆ. ನನ್ನ ಬಿಳಿ ಅಂಗಿಯ ಮೇಲೆ ಕಪ್ಪು ಕಲೆಗಳು ಕಾಣತೊಡಗಿದವು. ರೈಲಿನದು ಡೀಸ಼ಲ್ ಎಂಜಿನ್ ಎಂಬುದರ ಕಡೆಗೆ ಗಮನ ಹರಿಯಿತು. ಅದು ಒಂದಿಷ್ಟು ಕರ್ವ್ ಬಂದಾಗಲೆಲ್ಲ ಎಂಜಿನ್ ಹೊಗೆ ಕಿಟಕಿಯಿಂದ ಹೊರ ಬರುವುದರ ಕಡೆಗೆ ಲಕ್ಷ ಹರಿಯಿತು. ಕಿಟಕಿಗಳನ್ನು ಭದ್ರವಾಗಿ ಮುಚ್ಚಿದರೂ ರೈಲಿನ ಧಡಕಿಯಿಂದ ಅವು ಸರಿದಾಡುವಷ್ಟು ದುರ್ಬಲವಾಗಿದ್ದವು.

ಬೆಳಗಾಯಿತು ಸ್ವಲ್ಪ ತಡಮಾಡಿ ಎದ್ದೆ. ಬೋಗಿ ಖಾಲಿ ಖಾಲಿ ಇತ್ತು. ಷರ್ಟ್ ಪ್ಯಾಂಟ್ ಕಪ್ಪಾಗಿದ್ದವು. ಗಡಿಬಿಡಿಯಿಂದ ಶೌಚಾಲಯಕ್ಕೆ ಹೋಗಿ ಕನ್ನಡಿ ಮುಂದೆ ನಿಂತೆ. ಗಾಬರಿಯಾದೆ. ನನ್ನ ಇಡೀ ಮುಖ ಡೀಸ಼ಲ್ ಹೊಗೆ ಮೆತ್ತಿ ಕಪ್ಪಾಗಿತ್ತು. ಬರಿ ಎರಡು ಕಣ್ಣುಗಳು ಮಾತ್ರ ಕಾಣುತ್ತಿದ್ದವು. ಎಂಥ ಸುಂದರ ನೆನಪುಗಳನ್ನು ಧ್ಯಾನಿಸುತ್ತ ಮಲಗಿದ್ದೆ. ಇದೆಂಥ ಅವಸ್ಥೆ ಎಂದು ಮನದಲ್ಲೇ ಒದ್ದಾಡಿದೆ.

ಮದ್ರಾಸ್ ರೇಲ್ವೆ ನಿಲ್ದಾಣಕ್ಕೆ ಬಂದ ಟ್ರೇನ್ ಗಂಟೆಗಟ್ಟಲೆ ನಿಂತಿತು. ಏನೂ ತಿನ್ನಲು ಮನಸ್ಸಾಗಲಿಲ್ಲ. ನಿಲ್ದಾಣದಲ್ಲಿನ ಹಳಿಗಳ ಮಧ್ಯೆ ಮಲಮೂತ್ರದ ಗುಡ್ಡೆಗಳು ಕಂಡು ಬಹಳ ಹೇಸಿಕೆಯಾಯಿತು. ಅಂತೂ ಕೊನೆಗೆ ರೈಲು ಬಿಟ್ಟಿತು. ಒಂದಿಷ್ಟು ಸಮಾಧಾನವಾಯಿತು ಆ ಕಾಲದಲ್ಲಿ ಮನೆಯಲ್ಲಿ ಲ್ಯಾಂಡ್ ಫೋನ್ ಇರಲಿಲ್ಲ. ಮೊಬೈಲ್ ಜಗತ್ತಿನಲ್ಲೇ ಇರಲಿಲ್ಲ. ರಾತ್ರಿ ಬೆಂಗಳೂರಿನ ಮನೆ ಹೊಕ್ಕಾಗ ಮನೆಯವರೆಲ್ಲ ಗಾಬರಿಯಿಂದ ನೋಡಿದರು. ಏನೂ ಆಗಿಲ್ಲ ಎಂದು ಹೇಳಿದವನೇ ಸ್ನಾನದ ಕೋಣೆಗೆ ನುಗ್ಗಿದೆ. ಆ ಬಿಸಿ ನೀರು ನನಗೆ ಮರುಜನ್ಮ ನೀಡಿದಂತೆ ಭಾಸವಾಯಿತು.

ನಾನು ಸೋವಿಯತ್ ದೇಶದಲ್ಲಿ ಎರಡು ಪುಸ್ತಕಗಳನ್ನು ಬಿಟ್ಟರೆ ಏನನ್ನೂ ಖರೀದಿಸಿರಲಿಲ್ಲ. ಮನೆಯವರಿಗೆ ಬೇಸರವಾಗಿದ್ದರಿಂದ ಬೆಂಗಳೂರಿನಲ್ಲೇ ಕೆಲ ಸ್ವೆಟರ್ ಮುಂತಾದವುಗಳನ್ನು ತಂದು ಸಂಬಂಧಿಕರಿಗೆ ಕೊಟ್ಟೆ.

ಸ್ವಲ್ಪ ದಿನಗಳ ನಂತರ ಧಾರವಾಡ ಮತ್ತು ವಿಜಾಪುರಕ್ಕೆ ಹೋದೆ. ಆ ಕಾಲದಲ್ಲಿ ವಿದೇಶಕ್ಕೆ ಹೋಗುವುದೆಂದರೆ ದೊಡ್ಡ ಸಾಧನೆ ಆಗಿತ್ತು. ಹೊರ ದೇಶಗಳು ಹೇಗಿರುತ್ತವೆ. ಜನರು ಹೇಗಿರುತ್ತಾರೆ ಎಂಬುದನ್ನು ತಿಳಿದುಕೊಳ್ಳುವ ತವಕ ಎಲ್ಲರಿಗೂ ಇರುವಂಥ ಕಾಲವದು.

ಧಾರವಾಡದಲ್ಲಿ ನಡೆದ ಸಭೆಯಲ್ಲಿ ಬಹಳಷ್ಟು ಯುವಕರು ಸೇರಿದ್ದರು. ನನ್ನ ಅನುಭವಗಳನ್ನು ಕುತೂಹಲದಿಂದ ಕೇಳಿದರು. ಪ್ರೊ. ಜಿ.ಬಿ. ಸಜ್ಜನ ಅವರು ಆಗ ವಿಜಾಪುರದ ಚಡಚಣದಲ್ಲಿರುವ ಕಾಲೇಜಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲಿನ ವಿದ್ಯಾರ್ಥಿಗಳಿಗಾಗಿ ನನ್ನ ಪ್ರವಾಸ ಕಥನದ ಸಭೆ ಏರ್ಪಡಿಸಿದ್ದರು. ಖ್ಯಾತ ಜನಪದ ಸಾಹಿತಿ ಸಿಂಪಿ ಲಿಂಗಣ್ಣನವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಿಮಾನದ ಅನುಭವದಿಂದಲೇ ಶುರು ಮಾಡಿರಿ ಎಂದು ವಿದ್ಯಾರ್ಥಿಯೊಬ್ಬ ಕೇಳಿಕೊಂಡ. ‘ಯಾವುದೂ ದೊಡ್ಡದಲ್ಲ, ಯಾವುದೂ ಚಿಕ್ಕದಲ್ಲ’ ಎಂಬುದು ನನ್ನ ಜೀವನದ ಮೂಲ ಸಿದ್ಧಾಂತವಾಗಿರುವುದರಿಂದ ವಿಮಾನಯಾನವನ್ನು ಬಹಳ ಸರಳ ರೀತಿಯಲ್ಲಿ ವಿವರಿಸ ಬಯಸಿದೆ. ನೀವು ಗೋಲಗುಮ್ಮಟ ಹತ್ತಿದೀರಾ? ಚಕ್ಕಡಿ ಹತ್ತಿದೀರಾ? ಚಿಮಣಿ ಎಣ್ಣೆ ಬಳಸಿದ್ದೀರಾ? ಎಂದು ಮುಂತಾಗಿ ಕೇಳಿದೆ. ಅವಕ್ಕೆಲ್ಲ ಸಕಾರಾತ್ಮಕ ಉತ್ತರ ಬಂದಿತು.

(ದೇಗಿಸ್ತಾನದ ಪುರುಷ ಮತ್ತು ಮಹಿಳೆ)

ವಿಮಾನ ಮೇಲೆ ಹಾರಿದಾಗ ಕೆಳಗೆ ಭೂಮಿ, ಕಟ್ಟಡಗಳು, ವಾಹನಗಳು ಮತ್ತು ಜನ ಹೇಗೆ ಕಾಣುತ್ತಾರೆ ಎಂದರೆ, ನೀವು ಗೋಲಗುಮ್ಮಟ ಹತ್ತಿದಾಗ ಯಾವರೀತಿ ಕಾಣುವುದೋ ಹಾಗೆ ಎಂದೆ. ವಿದ್ಯಾರ್ಥಿಗಳಿಗೆ ಖುಷಿ ಎನಿಸಿತು. ನೀವು ಓದಲು ಚಿಮಣಿ ಬಳಸುತ್ತೀರಿ. ಅದಕ್ಕೆ ಕೆರೊಸಿನ್ ಅಂದರೆ ಚಿಮಣಿ ಎಣ್ಣಿ ಹಾಕುತ್ತೀರಿ. ಅದೇರೀತಿ ವಿಮಾನ ಹಾರಲು ಬಿಳಿ ಕೆರೊಸಿನ್ ಹಾಕುತ್ತಾರೆ ಎಂದು ಹೇಳಿದೆ. ನೀವು ಎತ್ತಿನಗಾಡಿಯಲ್ಲಿ ಕುಳಿತು ಹೋಗುವಾಗ, ಅದು ಓಡುವ ಸಮಯದಲ್ಲಿ ಹೇಗೆ ಧಡಕಿಯಾಗುವುದೋ ಹಾಗೆ ವಿಮಾನ ಆಕಾಶದಿಂದ ಇಳಿದು ಭೂಮಿಯನ್ನು ಸ್ಪರ್ಶಿಸಿ ಜೋರಾಗಿ ರನ್‌ವೇನಲ್ಲಿ ಓಡುವಾಗ ಅದೇ ರೀತಿ ಧಡಕಿಯಾಗುವುದು. ಸಿನಿಮಾದಲ್ಲಿ ಹನುಮಂತ ಸಂಜೀವಿನಿ ಬೆಟ್ಟವನ್ನು ಎತ್ತಿಕೊಂಡು ಸ್ಪೀಡಾಗಿ ಆಕಾಶ ಮಾರ್ಗವಾಗಿ ಹೋಗುವಾಗ ಯಾವರೀತಿ ಮೋಡಗಳು ಕಾಣಿಸಿಕೊಳ್ಳುವವೋ ಹಾಗೆ ವಿಮಾನದಲ್ಲಿ ಕುಳಿತಾಗ ಮೊಡಗಳು ವಿಮಾನ ಪಕ್ಕದಲ್ಲೇ ಕಾಣಿಸುವವು ಎಂದು ಮುಂತಾಗಿ ಹೇಳುವಾಗ ವಿದ್ಯಾರ್ಥಿಗಳ ತದೇಕಚಿತ್ತದಿಂದ ಕೇಳುತ್ತಿದ್ದರು. ಸೋವಿಯತ್ ದೇಶದ ಶಾಲೆಗಳು, ಮಕ್ಕಳ ವಿದ್ಯಾಭ್ಯಾಸ ಕ್ರಮ, ಮಕ್ಕಳ ಬಗ್ಗೆ ಪಾಲಕರಿಗೆ ಮತ್ತು ಶಿಕ್ಷಕರಿಗೆ ಇರುವ ಕಾಳಜಿ. ಅವರ ಜೀವನದಲ್ಲಿನ ಶಿಸ್ತು, ಸಮಯ ಪಾಲನೆ ಮುಂತಾದವುಗಳ ಕುರಿತು ವಿವರಿಸಿದೆ. ಹಿರಿಯರು ಕಿರಿಯರು ಎಲ್ಲರೂ ಖುಷಿಪಟ್ಟರು.

ವಿಜಾಪುರ ನಗರದಲ್ಲೂ ನನ್ನ ಪ್ರವಾಸ ಕಥನದ ಒಂದು ಕಾರ್ಯಕ್ರಮವಾಯಿತು. ಸಭಾಭವನ ಕಿಕ್ಕಿರಿದು ತುಂಬಿತ್ತು. ಬಾಗಿಲಲ್ಲಿ ನಿಲ್ಲಲೂ ಜಾಗವಿರಲಿಲ್ಲ. ಆ ಗದ್ದಲದಲ್ಲಿ ಒಬ್ಬ ವ್ಯಕ್ತಿ ತೂರಿಕೊಂಡು ಒಳಗೆ ಬರಲು ಹವಣಿಸುತ್ತಿದ್ದ. ಅವನ ಬಟ್ಟೆಗಳು ಮಾಸಿದ್ದವು. ಮುಖದ ನೋಡಿದರೆ ಜೀವನದಲ್ಲಿ ಸೋತುಹೋದವರಂತೆ ಕಾಣುತ್ತಿದ್ದ. ಫಕ್ಕನೆ ನನ್ನ ಬಾಲ್ಯದ ನೆನಪಾಯಿತು.

(ವಿಜಾಪುರದ ನೆಹರೂ ಮಾರ್ಕೆಟ್ ಕಟ್ಟಡ. (ಚಿತ್ರ: ಸುನೀಲಕುಮಾರ ಸುಧಾಕರ)

ಆಗ ನಾನು ೭ನೇ ತರಗತಿ ಪಾಸಾಗಿದ್ದೆ. ರಜೆಯಲ್ಲಿ ಯಾವುದಾದರೂ ಕೆಲಸ ಹಿಡಿದು ಒಂದಿಷ್ಟು ಹಣ ಸಂಪಾದಿಸಿ ೮ನೇ ಇಯತ್ತೆ ಸೇರುವ ಕನಸಿತ್ತು. ಆಗ ಯಾವುದಾದರೂ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದರೆ ದಿನಕ್ಕೆ ಒಂದು ರೂಪಾಯಿಯಂತೆ ತಿಂಗಳಿಗೆ ೩೦ ರೂಪಾಯಿ ಕೊಡುತ್ತಿದ್ದರು. ಆ ಹಣ ೮ ನೇ ಇಯತ್ತೆಯ ಸೆಕೆಂಡ್ ಹ್ಯಾಂಡ್ ಪುಸ್ತಕ ಮತ್ತು ನೋಟ್ ಬುಕ್ ಕೊಳ್ಳಲು ಸಾಕಾಗುತ್ತಿತ್ತು. ಮನೆಯವರ ಮೇಲಿನ ಭಾರವನ್ನು ಇಷ್ಟಾದರೂ ಕಡಿಮೆ ಮಾಡಬೇಕೆಂಬ ಬಯಕೆಯಿಂದ ಬೆಳಿಗ್ಗೆ ಎದ್ದು ನಾಷ್ಟಾ ಮಾಡಿದವನೇ ಬಜಾರದಲ್ಲಿನ ಅಂಗಡಿಗಳಿಗೆ ಹೋಗಿ ಕೆಲಸ ಕೇಳುತ್ತಿದ್ದೆ. ಹೆಚ್ಚಾಗಿ ರೆಡಿಮೇಡ್ ಅಂಗಡಿಗಳಲ್ಲಿ ಕೇಳುತ್ತಿದ್ದೆ. ಕೆಲವರಂತೂ ನನ್ನಂಥವರಿಂದ ಬೇಸರಗೊಂಡು “ಕೆಲಸ ಖಾಲಿ ಇಲ್ಲ” ಎಂಬ ಬೋರ್ಡ್ ಹಾಕಿರುತ್ತಿದ್ದರು!

ಒಂದು ದಿನ ಎಷ್ಟೇ ಅಂಗಡಿಗಳಲ್ಲಿ ಕೆಲಸ ಕೇಳಿದರೂ ಎಂದಿನಂತೆ ಪ್ರಯೋಜನವಾಗಲಿಲ್ಲ. ಹತಾಶನಾಗಿ ಹೋಗುತ್ತಿರುವಾಗ ಮಳೆ ಶುರುವಾಯಿತು. ಆಶ್ರಯಕ್ಕೆ ಸಮೀಪದಲ್ಲೇ ಇದ್ದ ವಿಶಾಲವಾದ ಕಲ್ಲಿನ ಕಟ್ಟಡವಾದ ನೆಹರೂ ಮಾರ್ಕೆಟ್ ಸೇರಿದೆ. ಆ ಕಟ್ಟಡದಲ್ಲಿ ಸಾಲಾಗಿ ಇದ್ದ ಅಂಗಡಿಗಳಲ್ಲಿ ಬಾಟಾ ಶೋ ರೂಂ ಕೂಡ ಇತ್ತು. ಅಲ್ಲಿಯಾದರೂ ಕೇಳಿನೋಡೋಣವೆಂದು ಹೋಗಿ ಕೆಲಸ ಕೇಳಿದೆ. ಆ ಶೋ ರೂಮಲ್ಲಿ ಇದ್ದಾತ ಬುಲ್ಗಾನಿನ್ ದಾಡಿ ಬಿಟ್ಟುಕೊಂಡು ಠಾಕುಠೀಕಾಗಿ ಇದ್ದ. ನೋಡಿದರೆ ಮುಸ್ಲಿಂ ಎಂಬುದು ಗೊತ್ತಾಗುತ್ತಿತ್ತು. ಆದರೆ ಬ್ರಿಟಿಷರ ತುಂಡಿನಂತೆ ಕಾಣುತ್ತಿದ್ದ. ಆತ ನನ್ನನ್ನು ಅಡಿಯಿಂದ ಮುಡಿಯವರೆಗೆ ನೋಡಿದ. ಮಳೆಯಲ್ಲಿ ಸಿಕ್ಕಿ ನನ್ನ ಕೂದಲು ಅಸ್ತವ್ಯಸ್ತವಾಗಿದ್ದವು. ಕಟಿಂಗ್ ಮಾಡಿಸಿಕೊಳ್ಳಲು ತಡವಾಗಿದ್ದರಿಂದ ವಿಕಾರವಾಗಿ ಕೂದಲು ಕಾಣುತ್ತಿದ್ದವು. ಮುಖ ಜೋಲುಮುಖವಾಗಿತ್ತು. ಬಟ್ಟೆಗಳು ಮಾಸಿದ್ದವು. ಕಾಲಲ್ಲಿ ಹರಕು ಹವಾಯಿ ಚಪ್ಪಲಿಗಳಿದ್ದವು. ಎಲ್ಲ ನೋಡಿದ ಆತ ನನ್ನ ಕೂಡ ಮಾತನಾಡಲಿಲ್ಲ. ಆದರೆ “ಕಾಲೇ ಕೋ ಜಿಂದಗಿ ನಹಿ” ಎಂದು ಹೇಳಿದ. ಅಪಮಾನಕ್ಕೆ ಒಗ್ಗಿ ಹೋಗಿದ್ದ ನನಗೆ ಏನೂ ಅನಿಸಲಿಲ್ಲ. ಆದರೆ ನಾನು ಅಂದು ಯಾವ ಸ್ಥಿತಿಯಲ್ಲಿ ಇದ್ದೆನೊ ಅದೇ ಸ್ಥಿತಿಯಲ್ಲಿ ಇಂದು ಅದೇ ವ್ಯಕ್ತಿ ನನ್ನ ಭಾಷಣ ಕೇಳಲು ಕೊಸರಾಡುತ್ತ ಬರುತ್ತಿದ್ದಾನಲ್ಲ ಎಂದು ಗಲಿಬಿಲಿಗೊಂಡೆ. ಏಕೆಂದರೆ ಅವನಿಗೆ ನೌಕರಿ ಕೇಳುವಾಗ ನಾನು ಯಾವ ಸ್ಥಿತಿಯಲ್ಲಿದ್ದೆನೊ ಅವನು ಇಂದು ಆ ಸ್ಥಿತಿಯಲ್ಲಿದ್ದಾನೆ! ಎಂಬುದರ ಬಗ್ಗೆ ಬೇಸರವಾಯಿತು. ಅಂದು ಆತ ಯಾವ ಸ್ಥಿತಿಯಲ್ಲಿದ್ದನೋ ಇಂದು ನಾ ಆ ಸ್ಥಿತಿಯಲ್ಲಿದ್ದೇನೆ ಎಂಬುದರ ಬಗ್ಗೆಯೂ ಮುಜುಗರವಾಯಿತು. ರಷ್ಯಾಗೆ ಹೋಗುವುದಕ್ಕಾಗಿ ಹೊಲಿಸಿದ ಆ ಹೊಸ ಸೂಟು ಬೂಟಿನಲ್ಲಿದ್ದ ನಾನು ಈ ಘಟನೆ ನಂತರ ಮತ್ತೆ ಎಂದೂ ಅವುಗಳನ್ನು ಧರಿಸಲಿಲ್ಲ. ಮುಂದೊಂದು ದಿನ ನನ್ನ ಕ್ಯಾಮರಾ ರಿಪೇರಿ ಮಾಡಿದ ವ್ಯಕ್ತಿಗೆ ಕಾಣಿಕೆಯಾಗಿ ಕೊಟ್ಟೆ. (ಬಾಟಾ ಷೂ ಶೋರೂಮಿನಲ್ಲಿದ್ದ ಆ ವ್ಯಕಿತ ಯಾವುದೋ ಕಾರಣಕ್ಕೆ ನೌಕರಿ ಕಳೆದುಕೊಂಡು ಬಹಳ ಕಷ್ಟದಲ್ಲಿದ್ದಾನೆಂದು, ಆ ಸಭೆ ನಡೆದ ಸ್ವಲ್ಪ ದಿನಗಳ ನಂತರ ವಿಜಾಪುರದ ಗೆಳೆಯರೊಬ್ಬರು ಹೇಳಿದರು. ಜೀವ ಮರುಗಿತು.)