ಇಲ್ಲೊಂದು ಕಡೆ ಕಾವೇರಿ ತೀರದ ನಡು ಗುಡ್ಡೆಯಲ್ಲಿ ಜೇನು ಕುರುಬರ ವರ್ಷಾವಧಿ ಜಾತ್ರೆ ನೆರವೇರುತ್ತದೆ. ಅದು ಅಮ್ಮಾಳೆಯಮ್ಮನ ಹಬ್ಬ. ಯಾರೋ ಕಾಡೊಳಗೆ ಅನಾಥರನ್ನಾಗಿ ಬಿಟ್ಟು ಹೋದ ಏಳು ಜನ ಅಣ್ಣ ತಂಗಿಯರನ್ನು ಈಕೆ ಬೆಳಸಿ ದೊಡ್ಡವರನ್ನಾಗಿ ಮಾಡಿದಳಂತೆ.

ಆ ಏಳು ಜನ ಅಣ್ಣ ತಂಗಿಯರು ಕಾಲಾಂತರದಲ್ಲಿ ಈ ಸೀಮೆಯ ದೇವದೇವತೆಯರಾಗಿ ಆಳುತ್ತಿದ್ದರಂತೆ. ಈಗಲೂ ಈ ಅಮ್ಮಾಳೆಯಮ್ಮನೇ ತಮ್ಮನ್ನೂ ಉಳಿದ ದೇವಾನುದೇವತೆಯರನ್ನೂ ಪೊರೆಯುವಳು ಎಂಬ ನಂಬಿಕೆಯಿಂದ ಅವರು ಈ ನಡುಗುಡ್ಡೆಯ ತಾರಿ ಮರವೊಂದರ ಕೆಳಗೆ ಕಲ್ಲಾಗಿ ಕುಳಿತಿರುವ ಅಮ್ಮಾಳೆಯಮ್ಮನನ್ನು ವರ್ಷಕ್ಕೊಮ್ಮೆ ನೋಡಿ ಬರುತ್ತಾರೆ. ಅವರೆಲ್ಲಾ ಸಾಲುಸಾಲಾಗಿ ಅಮ್ಮಾಳೆಯಮ್ಮನನ್ನು ನೋಡಲು ತೆರಳುವಾಗ ಅವರೊಡನೆ ನದಿದಾಟಿ, ಅವರೊಡನೆ ಮೊಣಕಾಲವರೆಗೆ ತೊಯ್ಯಿಸಿಕೊಂಡು, ಅವರೊಡನೆ ಏಕಕಾಲದಲ್ಲಿ ಭಕ್ತಿಯನ್ನೂ, ತಮಾಷೆಯ ಮಾತುಗಳನ್ನೂ ಹಂಚಿಕೊಂಡು ನಡೆಯುವುದು ಒಂಥರಾ ಚಂದ.

ಅಕೋ ಅಲ್ಲಿ ನೋಡಿ ಕಂಠಪೂರ್ತಿ ಕುಡಿದ ಜೇನುಕುರುಬ ಮುದುಕಿಯೊಬ್ಬಳು ನದಿಯಲ್ಲಿ ಡ್ಯಾನ್ಸ್ ಮಾಡಲು ಹೋಗಿ ಜಾರಿ ಬಿದ್ದು ನದಿಯನ್ನೇ ಬೈಯುತ್ತಾ ಮತ್ತೆ ಕುಣಿಯತೊಡಗುವಳು. ಅದಾ ಇಲ್ಲಿ ನೋಡಿ, ತಂದೆಯೊಬ್ಬನ ಹೆಗಲ ಮೇಲೆ ಕುಳಿತು ನದಿ ದಾಟುತ್ತಿದ್ದ ಜೇನುಕುರುಬ ಮಗುವೊಂದರ ಹೊಸಾ ಚಪ್ಪಲಿಯೊಂದು ಕಾಲು ಜಾರಿ ನದಿಯ ನೀರಿಗೆ ಬಿದ್ದು ತೇಲುತ್ತಾ ದೋಣಿಯಂತೆ ಕಣ್ಣ ಮರೆಯಾಗುವುದು. ಅದಾ ಇನ್ನೊಂದು ಕಡೆ ಕೈಗೆ ಕೈ ಕೋಸಿಕೊಂಡು ನಡೆಯುವ ಜೇನುಕುರುಬರ ಎಳೆಯ ಜೋಡಿಯೊಂದು ಕೈಯಲ್ಲಿ ಬಣ್ಣ ಬಣ್ಣದ ಐಸ್ ಕ್ಯಾಂಡಿ ಹಿಡಿದುಕೊಂಡು ಒಬ್ಬರನ್ನೊಬ್ಬರು ತಿಂದೇ ಬಿಡುವ ಹಾಗೆ ಆಸೆಯಿಂದ ನೋಡುತ್ತಾ ನದಿ ದಾಟುವುದನ್ನೇ ಮರೆತು ಬಿಟ್ಟಿರುವರು.

ಇದರ ನಡುವೆ ನದಿಯ ನಡುಗುಡ್ಡೆಯ ಪುಟ್ಟ ಕಲ್ಲೊಂದರ ಮೇಲೆ ಕುಕ್ಕುರುಗಾಲಲ್ಲಿ ಕೂತು ಕುರುಡಿಯಂತೆ ಬಿಕ್ಷೆ ಬೇಡುತ್ತಾ ಕಣ್ಣು ಮುಚ್ಚಿಕೊಂಡಿರುವ ಜೇನುಕುರುಬರ ಕಾಳಿ ನನ್ನ ಕಂಡೊಡನೆ ಕಣ್ಣನ್ನು ತೆರೆದು ಅಷ್ಟು ಅಗಲ ಮಾಡಿಕೊಂಡು, ‘ಓ ಯಜಮಾನಾ, ಇಲ್ಲಿಗೂ ಬಂದೆಯಾ. ಬಾ ನನ್ನ ಕಾಸು ಇಲ್ಲಿ ಮಡಗು’ ಎಂದು ಸಾಲ ಕೊಟ್ಟವಳಂತೆ ವಸೂಲಿಗೆ ತೊಡಗುವಳು. ಇವಳು ಸಣ್ಣದಿರುವಾಗ ಇವಳ ಕೈಯಿಂದ ಒಂದು ಕಟ್ಟು ಕಾಗೆ ಸೊಪ್ಪು ಕೊಂಡುಕೊಂಡ ನನ್ನ ತಂದೆಯ ತಾಯಿ ಆಗ ಕಾಸು ಕೊಟ್ಟೇ ಇರಲಿಲ್ಲವಂತೆ. ಅದನ್ನು ಈಕೆ ಕಂಡಾಗಲೆಲ್ಲ ವಸೂಲಿ ಮಾಡುತ್ತಿರುತ್ತಾಳೆ. ಕೊಟ್ಟರೆ ಆ ಮೂಲ ಸಾಲದ ಬಡ್ಡಿ ಮಾತ್ರ ಇದು ಅಸಲಿ ಹಾಗೇ ಉಳಿದಿದೆ ಎಂದು ಪ್ರತಿ ಸಾರಿಯೂ ಕೇಳುತ್ತಲೇ ಇರುತ್ತಾಳೆ. ಈಗ ನೋಡಿದರೆ ಹರಿಯುತ್ತಿರುವ ನದಿಯ ನಡುವಿನ ನೆಲದಲ್ಲಿ ಉರುಟು ಕಲ್ಲಿನ ಮೇಲೆ ಕುರುಡಿಯ ಹಾಗೆ ಭಿಕ್ಷೆಗೆ ಕುಳಿತಿದ್ದವಳು .‘ಏ ಯಜಮಾನಾ ಬಾ ಇಲ್ಲಿ’ ಎಂದು ಕರೆದು ನನ್ನ ಮುಂದೆ ನೆಲದಲ್ಲಿ ಕುಕ್ಕರಗಾಲಲ್ಲಿ ಕುಳಿತಳು.

‘ಏನಾಗಬೇಕು ಈ ಸಲ’ ಎಂಬಂತೆ ಹತ್ತಿರ ಹೋದೆ. ‘ಯಜಮಾನಾ. ನಾನು ಸಾಯುತ್ತೀನಲ್ಲ.ಆಗ ನೀನು ನನ್ನ ಹೆಣ ನೋಡಲು ಬರುತ್ತೀಯಲ್ಲಾ. ಆಗ ಏನೇನು ತರುತ್ತೀಯಾ’ ಎಂದು ಕೇಳಿದಳು. ‘ಒಂದು ಕಟ್ಟು ಅಗರಬತ್ತಿ.ಒಂದು ಬೆಂಕಿಪೆಟ್ಟಿಗೆ, ಕಾಲು ಬಾಟಲು ತೆಂಗಿನ ಎಣ್ಣೆ, ಒಂದು ಬಿಳಿ ಬಟ್ಟೆ. ಮತ್ತು ಒಂದು ರಮ್ಮಿನ ಬಾಟಲು ತರುತ್ತೀಯೋ ಇಲ್ಲವೋ’ ಎಂದು ಕೇಳಿದಳು. ‘ಮುದುಕಿ ಮೊದಲು ನೀನು ಸತ್ತು ನೋಡು. ಆಮೇಲೆ ತರುವ ವಿಷಯ ಅಂದೆ.

‘ಸಾಯಲಿಕ್ಕೆ ಇನ್ನು ಏನಿದೆ. ಕಣ್ಣು ಮುಚ್ಚಿದರೆ ನಾನು ಸಾಯುವುದೇ. ಇಕಾ ಇಲ್ಲಿ ನೋಡು ದೊಡ್ಡ ಕುರ. ಇದು ಬಂದ ಮೇಲೆ ಸಾಯುವುದೇ’ ಎಂದು ತನ್ನ ಒಣಗಿಹೋಗಿದ್ದ ತೊಡೆಯ ನಡುವೆ ಚಂದ್ರನಂತೆ ಬೆಳಗುತ್ತಿದ್ದ ಕುರವೊಂದನ್ನು ತೋರಿಸಿದಳು. ‘ಮುದುಕಿ ಕುರ ಈಗ ಎಲ್ಲರಿಗೂ ಮಾಮೂಲು. ನನ್ನ ಪರಿಚಯದವರಿಗೇ ಎಂಟು ಮಂದಿಗೆ ಕುರ ಆಗಿದೆ. ಅವರು ಒಬ್ಬರೂ ಸಾಯುವುದಿಲ್ಲ. ಸಾಯುವುದಾದರೆ ಕುರ ಇರದ ನಮ್ಮಂತವರೇ ಸಾಯಬೇಕು. ಈಗ ನನಗೆ ದಾರಿ ಬಿಡು’ ಎಂದು ನನ್ನ ಮುಂದೆ ಕುಕ್ಕರಗಾಲಲ್ಲಿ ಕುಳಿತಿದ್ದವಳಿಂದ ತಪ್ಪಿಸಿಕೊಳ್ಳಲು ನೋಡಿದೆ. ‘ಯಜಮಾನಾ ಸತ್ತ ಹೆಣಕ್ಕೆ ಯಾಕೆ ಅಗರಬತ್ತಿ? ಯಾಕೆ ಬಿಳಿ ಬಟ್ಟೆ? ಆಗ ಯಾಕೆ ಅದಕ್ಕೆಲ್ಲಾ ಸುಮ್ಮನೇ ರೂಪಾಯಿ ಖರ್ಚು ಮಾಡುತ್ತೀಯಾ. ಆಗ ಅದು ನನಗೂ ಪ್ರಯೋಜನವಿಲ್ಲ. ನಿನಗೂ ಪ್ರಯೋಜನವಿಲ್ಲ. ಆ ಕಾಸು ಈಗಲೇ ಇಲ್ಲಿ ಮಡಗು’ ಎಂದು ತನ್ನ ಬೊಗಸೆಯನ್ನು ಒಡ್ಡಿದಳು.

ಲೋಕದ ಮಹಾಮಹಾ ಅರ್ಥಶಾಸ್ತ್ರಜ್ಞರಿಗೂ ತಲೆಗೆ ಹೋಗದ ಹಣದ ಲೆಕ್ಕಾಚಾರ! ಕಾಳಿಯ ಕೈಯಲ್ಲಿ ಅಷ್ಟೂ ಕಾಸು ಮಡಗಿ ಮನಸ್ಸಿನಲ್ಲೇ ಕೈಮುಗಿದು ಅಲ್ಲಿಂದ ಇನ್ನೂ ನದಿದಾಟಿ ತಾರಿ ಮರದ ಕೆಳಗಿದ್ದ ಅಮ್ಮಾಳಮ್ಮನಿಗೂ ನಮಸ್ಕರಿಸಿ, ಜೇನು ಕುರುಬರು ಬಡಿಸಿದ ಅನ್ನ ಪ್ರಸಾದವನ್ನೂ ಹೊಟ್ಟೆ ತುಂಬಾ ಉಂಡು ಅಲ್ಲಿಂದ ಹಿಂತಿರುಗಿದ್ದೆ. ವಾಪಾಸು ಬರುವ ದಾರಿಯಲ್ಲಿ ಅದೇ ಕಲ್ಲಿನ ಮೇಲೆ ಅದೇ ಕಾಳಿ ಅದೇ ಸ್ಟೈಲಿನಲ್ಲಿ ಕಾಸು ವಸೂಲಿ ಮಾಡುತ್ತಿದ್ದಳು.

ನನ್ನ ತರಹದ್ದೇ ಇನ್ನೊಬ್ಬ ಮನುಷ್ಯ ಮುದುಕಿಯ ಹಠಮಾರಿತನಕ್ಕೆ ಕರಗಿ ತನ್ನ ಶರಟಿನ ಜೇಬಿನಲ್ಲಿರುವುದನ್ನೆಲ್ಲ ಆಕೆಯ ಬೊಗಸೆಗೆ ಸುರಿಯುತ್ತಿದ್ದ. ಬೆವರಿದ್ದ ಅವನ ಮೈಯಿಂದ ಹೊರ ಸೂಸುತ್ತಿದ್ದ ನಾಡ ಸಾರಾಯಿಯ ಪರಿಮಳ ಅವನ ಔದಾರ್ಯಕ್ಕೆ ಒಂದು ರೀತಿಯ ತಾತ್ವಿಕ ತಳಹದಿಯನ್ನು ನೀಡಿ ಆ ನದೀ ತೀರದ ಸೌಂದರ್ಯ ಇನ್ನಷ್ಟು ಸೊಬಗಿನಿಂದ ಕಂಗೊಳಿಸುವಂತೆ ಮಾಡುತ್ತಿತ್ತು. ಮೊಣಕಾಲವರೆಗೆ ನೀರಿದ್ದ ನದಿಯನ್ನು ದಾಟಿ ಕೆಸರು ನೆಲದಲ್ಲಿ ಕಾಲಿಡುತ್ತಿದ್ದಂತೆ ಕಾಡೊಳಗಿನ ದೇವತೆಯೊಬ್ಬಳು ಉದ್ವಿಗ್ನಳಾಗಿ ಚಾಟಿ ಬೀಸಿ ದಂತೆ ಮಿಂಚೊಂದು ನದಿಯ ನೀರಿನ ಮೇಲೆ ಹಾದು ಹೋಯಿತು. ಆಗ ಸುರಿಯಲು ತೊಡಗಿದ ಮಳೆ ಬಹಳ ಹೊತ್ತು ಸುರಿಯುತ್ತಲೇ ಇತ್ತು.

ಹೂ ಬಿಟ್ಟು ಸತ್ತು ಹೋಗಿರುವ ಬಿದಿರು ಮೆಳೆಗಳ ಮೇಲೆ ವಿನಾಕಾರಣ ಸುರಿಯುತ್ತಿರುವ ಮಳೆ. ಕಾಡಾನೆಗಳು ಅದಾಗ ತಾನೇ ಹಾಕಿ ಹೋಗಿದ್ದ ಬಿಸಿಬಿಸಿ ಲದ್ದಿಯ ಮೇಲಿಂದ ಮನೋಹರವಾಗಿ ಏಳುತ್ತಿದ್ದ ಹೊಗೆಯೂ ಆ ಮಳೆಯಲ್ಲಿ ಇಲ್ಲದಾಗುತ್ತಿತ್ತು. ಬಂದ ದಾರಿ ಯಾವುದೆಂದು ಗೊತ್ತಾಗದಂತೆ ಸುರಿಯುತ್ತಿರುವ ಮಳೆಯಲ್ಲಿ ಯಾವ ದಾರಿ ಹಿಡಿದು ಹೋದರೂ ಆ ದಾರಿ ಮತ್ತೆ ನದಿಯ ತೀರದಲ್ಲೇ ಕೊನೆಯಾಗುತ್ತಿತ್ತು.

ದಾರಿ ಅರಿಯದೆ ಇನ್ನೇನು ಈ ಮಳೆಯಲ್ಲಿ ತೀರಿಯೇ ಹೋಗುವೆ ಎಂದು ಮುಂದೆ ಹೋದರೆ ಕಾಫಿ ತೋಟವೊಂದರ ಕಾಲು ದಾರಿ. ಆ ದಾರಿ ಸುತ್ತಿ ಸುಳಿದಾಡಿಸಿ ಎಲ್ಲೋ ಒಯ್ದು ಮತ್ತೆ ನದಿಯ ತೀರಕ್ಕೇ ಆ ಮಳೆಯಲ್ಲಿ ತಂದು ಬಿಸಾಕುತ್ತಿತ್ತು. ನದಿಯ ಮುಂದೆ ಜೀಪು ನಿಲ್ಲಿಸಿ ಮಳೆ ನಿಲ್ಲಲು ಕಾಯುತ್ತಿದ್ದೆ. ನದಿಯ ಮೇಲೆ ಸುರಿಯುವ ಮಳೆ ಹನಿಗಳನ್ನು ಹಿಡಿಯಲೋ ಎಂಬಂತೆ ನೀರಿಂದ ಮೇಲಕ್ಕೆ ಹಾರುತ್ತಿರುವ ಯಾವುದೋ ಜಾತಿಯ ಮೀನುಗಳು. ನದಿಯ ಮೇಲಿನ ಭಾರೀ ವೃಕ್ಷವೊಂದರಿಂದ ಮಳೆಗೆ ಬೇಸತ್ತು ಕಿರುಚುತ್ತಿರುವ ಮರ್ಕಟ ಸಮೂಹ. ಸುರಿಯುತ್ತಿರುವ ಮಳೆ ಸಾಲದೆಂಬಂತೆ ವಟಗುಟ್ಟುತ್ತಿರುವ ಡೋಂಕುರು ಕಪ್ಪೆಗಳು.

‘ಆಹಾ ಕಳೆದು ಹೋದರೆ ನಿನ್ನ ಹಾಗೆ ಕೊಡಗಿನ ಕಾಡಲ್ಲಿ ಸುರಿಯುವ ಮಳೆಯಲ್ಲಿ ಕಳೆದು ಹೋಗಬೇಕು ಮಾರಾಯ, ನೀನೇ ಲಕ್ಕಿ’ ಎಂದು ಬೆಂಗಳೂರೆಂಬ ಬೃಹಧಾರಣ್ಯದಿಂದ ಮೊಬೈಲಿನಲ್ಲಿ ಉಲಿಯುತ್ತಿರುವ ಕವಯಿತ್ರಿ. ‘ಮಾರಾಯ್ತಿ ದಾರಿ ಕಾಣದಾಗಿದೆ ಎಂದು ರಾಘವೇಂದ್ರರಲ್ಲಿ ಮೊರೆಯಿಡುತ್ತಿರುವೆ. ದಯಮಾಡಿ ಫೋನು ಇಡು’ ಎಂದು ಬೇಡಿಕೊಂಡು ಹಾಗೇ ಕತ್ತಲಾಗುತ್ತಿರುವ ಕಾವೇರಿ ನದಿಯನ್ನು ನೋಡುತ್ತಿದ್ದೆ. ‘ಇದೇನು ಯಜಮಾನಾ, ಇನ್ನೂ ಹೋಗಿಲ್ಲವಾ? ನಾನೂ ಬರಲಾ ನನ್ನನ್ನೂ ಕರೆದುಕೊಂಡು ಹೋಗುತ್ತೀಯಾ’ ಎಂದು ಜೇನುಕುರುಬರ ಕಾಳಿ ಮುದುಕಿ ಮಳೆಯಲ್ಲಿ ನೆನೆದುಕೊಂಡು ಜೀಪಿನ ಗಾಜಿನ ಮುಂದೆ ನಿಂತುಕೊಂಡಿದ್ದಳು.

‘ಬಾ ಮುದುಕಿ, ನನಗೆ ದಾರಿ ತೋರಿಸು’ ಎಂದು ಕೂರಿಸಿಕೊಂಡೆ. ‘ಆಹಾ ಯಜಮಾನಾ ಎಷ್ಟು ಬಿಸಿ ಇದೆ ಇದರೊಳಗೆ’ ಎಂದು ಜೋರಾಗಿ ಉಸಿರು ಬಿಟ್ಟ ಆಕೆ ‘ಒಂದು ತಿಂಗಳಿಗೆ ಈ ಮುದುಕಿಗೆ ಇಷ್ಟು ಕಾಸು ಸಾಕು’ ಎಂದು ತನ್ನ ಸಂಚಿಯಿಂದ ನೋಟುಗಳನ್ನೂ ಚಿಲ್ಲರೆಗಳನ್ನೂ ಎಣಿಸತೊಡಗಿದಳು. ‘ಏ ಮುದುಕಿ ಮೊದಲು ದಾರಿ ಹೇಳು ಆಮೇಲೆ ಕಾಸು ಎಣಿಸು. ಬರುವ ವರ್ಷ ನಾವಿಬ್ಬರೂ ಬದುಕಿದ್ದರೆ ಆ ಕಲ್ಲಿನ ಮೇಲೆ ನಾನೂ ನಿನ್ನ ಜೊತೆ ಭಿಕ್ಷಕ್ಕೆ ಕೂರುತ್ತೇನೆ’ ಎಂದು ಜೀಪು ಓಡಿಸತೊಡಗಿದೆ.