”ನಮಗೆ ಶಿಶ್ವಾರ ಇದೆ, ನಾವೂ ಅಲ್ಲಿ ಕೂತು ಅಕ್ಷರ ಕಲಿಯಬಹುದು ಎಂಬ ಪರಿಜ್ಞಾನವೂ ಇರಲಿಲ್ಲ.ಯಾಕೆಂದರೆ, ಮನೆಯಲ್ಲಿ ಯಾರೂ ನಮ್ಮನ್ನು ತಾವಾಗೇ ಶಿಶ್ವಾರಕ್ಕೆ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಿರಲಿಲ್ಲ.ಆಯಾ ಬಂದು ಎಲ್ಲರ ಮನೆ ಮನೆಗೆ ತೆರಳಿ ನಾಳೆಯಿಂದ ಮಕ್ಕಳನ್ನು ಶಿಶ್ವಾರಕ್ಕೆ ಕಳಿಸಬೇಕೆಂದು ಮನೆಯ ಹಿರಿಯರಿಗೆ ತಾಕೀತು ಮಾಡಿದಾಗಲೇ ನಮಗೆ ಅರಿವಾದದ್ದು, ಶಿಶ್ವಾರ ಅಂತ ಒಂದಿದೆ ಅಂತ! ಅದಕ್ಕೆ ಹೋಗುವುದಕ್ಕೂ ನಮಗೆ ಹಿಂಜರಿಕೆ.”
ಕಾವೇರಿ ಎಸ್.ಎಸ್. ಬರೆದ ‘ಒಡಲ ಖಾಲಿ ಪುಟ’ ಕೃತಿಯ ಕೆಲವು ಹಾಳೆಗಳು.

 

ಬಾಲ್ಯದ ನೆನಪು ಪ್ರತಿಯೊಬ್ಬರನ್ನೂ ಕ್ಷಣಕಾಲವಾದರೂ ತನ್ನ ಬಾಹುಬಂಧನದಲ್ಲಿ ಹಿಡಿದಿಟ್ಟು, ನಮ್ಮ ಮುಂದೆ ಕಣ್ಣು ಮಿಟುಕಿಸುತ್ತಾ ಹಾದು ಹೋಗುವಾಗ ಮನಸ್ಸಿಗೆ ಮುದ ನೀಡುವುದಂತೂ ಸುಳ್ಳಲ್ಲ. ಹಠ, ಸೋಮಾರಿತನ, ಕೋಪ, ಅಸಹನೆ, ನಿಷ್ಕಲ್ಮಶ ನಗು, ಪೆಟ್ಟಾದಾಗಿನ ನೋವು, ಸಂಕಟ ಹಾಗೇ ಆರೋಗ್ಯ ಹದಗೆಟ್ಟಾಗ ಕಂಬಳಿ ಹೊದ್ದು ನಡುಗುವುದರಲ್ಲೂ ಎಲ್ಲರ ಗಮನ ಸೆಳೆಯುವಿಕೆ, ಕನಸಿನ ಕನವರಿಕೆಗಳು, ತಾನು ಕಂಡ ಸಿನಿಮಾಗಳಲ್ಲಿನ ನಟ-ನಟಿಯರ ಹಾವಭಾವದ ನಂಟು, ಪ್ರಮಾಣದ ಹಿಂತೆಗೆಯುವಿಕೆ, ಆಟ-ಪಾಠ, ಸುಳ್ಳಿನ ಕಂತೆಯಲ್ಲೂ ನಿಜದ ನೆರಳ ತೋರುವಿಕೆ, ಕದ್ದು ಮುಚ್ಚಿ ಆಡಿದ ಆಟಗಳು, ಬಿದ್ದ ನೋವಿನಲ್ಲೂ ಸ್ವಾಭಿಮಾನದ ಬಿಗುಮಾನ… ಸಕಲ ಕಲಾ ಪಾರಂಗತರಂತೆ ತಮ್ಮ ಸಹಪಾಠಿಗಳೊಂದಿಗೆ ತೋರುವ ಭಂಡ ಧೈರ್ಯ… ಹೀಗೆ ಒಂದೇ ಎರಡೇ… ಚಿಕ್ಕಂದಿನಲ್ಲಿ ಒಡಮೂಡಿದ ಭಾವ ತರಂಗಗಳು. ಹೌದು, ಪ್ರತಿಯೊಂದರಲ್ಲೂ ಹೊಸತನದ ತುಡಿತ, ಕನವರಿಕೆಗಳು ನಮ್ಮನ್ನು ಸೆಳೆಯುತ್ತಿದ್ದದ್ದು ನಿಜ. ಆ ಹೊಸತನದಲ್ಲೂ ನೋವು-ನಲಿವಿನ ಮಿಲನ ನಮ್ಮಲ್ಲಿ ಬೆಳಗಾಗುವಷ್ಟರಲ್ಲಿ ಜೀವಕಳೆಯ ಚಿಗುರೊಂದಿಗೆ ಅರಳಿರುತ್ತಿತ್ತು ಅಲ್ಲವೇ? ಅದಕ್ಕೇ ನಾವು ಯಾವಾಗಲೂ ಬಯಸುವುದು ಮಕ್ಕಳೊಂದಿಗಿನ ಸಾಂಗತ್ಯವನ್ನು!

ನಮ್ಮ ಊರಿನಲ್ಲಿ ಈಗಿನಂತೆ ಗಲ್ಲಿಗೊಂದು ಎಲ್ ಕೆ ಜಿ/ಯು ಕೆ ಜಿ ಖಾಸಗಿ ನರ್ಸರಿ ಶಾಲೆಗಳಿರಲಿಲ್ಲ. ಇದ್ದರೂ ನಗರಗಳ ಸಿರಿವಂತ ಮಕ್ಕಳಿಗೆ ಮಾತ್ರ. ಸರ್ಕಾರಿ ಶಿಶ್ವಾರ(ಆಡುಭಾಷೆಯಲ್ಲಿ)ವೇ ನಮಗೆ ಎಲ್ಕೆಜಿ/ಯುಕೆಜಿಯ ನರ್ಸರಿ ಶಾಲೆಗಳು! ಶಿಶುವಿಹಾರದಲ್ಲಿ ಜಯಮ್ಮ ಎಂಬ ಮೇಡಂ ಇದ್ದರು. ಆಗ ಶಿಶ್ವಾರಕ್ಕೆ ಮಕ್ಕಳು ಹೋಗುತ್ತಿದ್ದದ್ದು ಕಡಿಮೆ. ಮನೆ ಹತ್ತಿರವೇ ಅದು ಇದು ಆಡಿಕೊಂಡು ಸುಮ್ಮನಿದ್ದು ಬಿಡುತ್ತಿದ್ದರು. ಆದರೆ ಜಯಮ್ಮ ಮೇಡಂ, ಅಡುಗೆಯವರು ಮತ್ತು ಆಯಾರನ್ನು ಎಲ್ಲರ ಮನೆಗೆ ಕಳುಹಿಸಿ ಮಕ್ಕಳನ್ನು ಬಿಡದೆ ಕರೆದುಕೊಂಡು ಬರುವಂತೆ ವಾರ್ನ್ ಮಾಡಿದರು.

ನಮಗೆ ಶಿಶ್ವಾರ ಇದೆ, ನಾವೂ ಅಲ್ಲಿ ಕೂತು ಅಕ್ಷರ ಕಲಿಯಬಹುದು ಎಂಬ ಪರಿಜ್ಞಾನವೂ ಇರಲಿಲ್ಲ. ಯಾಕೆಂದರೆ, ಮನೆಯಲ್ಲಿ ಯಾರೂ ನಮ್ಮನ್ನು ತಾವಾಗೇ ಶಿಶ್ವಾರಕ್ಕೆ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಿರಲಿಲ್ಲ. ಆಯಾ ಬಂದು ಎಲ್ಲರ ಮನೆ ಮನೆಗೆ ತೆರಳಿ ನಾಳೆಯಿಂದ ಮಕ್ಕಳನ್ನು ಶಿಶ್ವಾರಕ್ಕೆ ಕಳಿಸಬೇಕೆಂದು ಮನೆಯ ಹಿರಿಯರಿಗೆ ತಾಕೀತು ಮಾಡಿದಾಗಲೇ ನಮಗೆ ಅರಿವಾದದ್ದು, ಶಿಶ್ವಾರ ಅಂತ ಒಂದಿದೆ ಅಂತ! ಅದಕ್ಕೆ ಹೋಗುವುದಕ್ಕೂ ನಮಗೆ ಹಿಂಜರಿಕೆ. ಯಾರೂ ಗೊತ್ತಿಲ್ಲ. ಎಲ್ಲರನ್ನೂ ಕೂಡಿಕೊಂಡು ಇವರು ಏನು ಮಾಡಿಬಿಡುವರೋ ಎಂಬ ಭಯ ಬೇರೆ! ದಿನವೂ ಬೆಳಿಗ್ಗೆ ಟೀಚರ್ ಜಯಮ್ಮ, ಆಯಾ ಮತ್ತು ಅಡುಗೆಯವರನ್ನು ಕಳುಹಿಸಿ ಮನೆಯಲ್ಲಿ ಆಟವಾಡುವ ಮಕ್ಕಳನ್ನು ಹಿರಿಯರಿಗೆ ತಿಳಿಸಿ ಒಪ್ಪಿಗೆ ಪಡೆದು ಕರೆದುಕೊಂಡು ಹೋಗಿ ಊಟ, ತಿಂಡಿ ಕೊಟ್ಟು ಕಳುಹಿಸುತ್ತಿದ್ದರು.

ಒಂದಿನ ನಾನೂ ಸಹ ಮಕ್ಕಳೊಂದಿಗೆ ಅಂಜಿಕೆಯಿಂದಲೇ ಶಿಶ್ವಾರಕ್ಕೆ ಕಾಲಿಟ್ಟೆ. ಮಕ್ಕಳೆಲ್ಲ ಇದ್ದರೂ ನನ್ನ ಮನದಲ್ಲಿ ಒಂಥರ ದುಗುಡ ಮನೆ ಮಾಡಿ ಕೊರೆಯಹತ್ತಿತು. ಮೊದಲನೇ ದಿನವೇ, ಯಾವುದೇ ಕಾರಣಕ್ಕೂ ಹಿಂದಿನ ಬೆಂಚಿ(ಮಣೆ)ಗೆ ಹೋಗಿ ಕುಳಿತುಕೊಳ್ಳಬಾರದೆಂದು ತೀರ್ಮಾನಿಸಿ ಬಿಟ್ಟಿದ್ದೆ. ಯಾಕೆಂದರೆ ಇವರಿಂದ ತಪ್ಪಿಸಿಕೊಂಡು ಮನೆಗೆ ಓಡಿ ಹೋಗಲು ಸಾಧ್ಯವಾಗಬೇಕಲ್ಲ?! ಹೀಗೆ ಓಡಿ ಹೋಗಲು ಇನ್ನೊಂದು ಕಾರಣವಿದೆ. ನನ್ನ ಸ್ನೇಹಿತರು (ಪೆದ್ದು ಮುದ್ದುಗಳು) ಶಿಶ್ವಾರಕ್ಕೆ ಹೋದರೆ ಮಕ್ಕಳಿಗೆ ಚಾಕಲೇಟ್, ತಿಂಡಿ ಆಸೆ ತೋರಿಸಿ ತಿನ್ನಿಸಿ ಮಕ್ಕಳನ್ನೆಲ್ಲ ಮಲಗಿಸಿ ಇಂಜೆಕ್ಷನ್ ಕೊಡುತ್ತಾರೆಂಬ ಹುಯಿಲೆಬ್ಬಿಸಿದ್ದರು! ಮೊದಲೇ ನಾ ಪುಕ್ಕಲಿ. ನನ್ನ ಪರಿಸ್ಥಿತಿ ಕೇಳಬೇಕೇ! ಟೀಚರ್ ನಮ್ಮನ್ನು ಪ್ರೀತಿಯಿಂದ ಮಾತನಾಡಿಸಿ ಚಾಕಲೇಟ್, ಬಿಸ್ಕತ್, ಅದು ಇದೂ ಕೊಟ್ಟಾಗ ಅದನ್ನು ತಿಂದರೂ ನನಗೆ ನೆಮ್ಮದಿ ಇರುತ್ತಿರಲಿಲ್ಲ. ಎಲ್ಲವನ್ನೂ ಅನುಮಾನದಿಂದಲೇ ನೋಡುವ ಪೊಲೀಸ್ ಬುದ್ಧಿ ಹೆಗಲೇರಿರುತ್ತಿತ್ತು.

ಶಿಶ್ವಾರದ ಹತ್ತಿರಕ್ಕೆ ಹೋದಂತೆ ಅಲ್ಲಿ ತಿಂಡಿ ಮಾಡುವ ವಾಸನೆ ಮೂಗಿಗೆ ಬಡಿದು ಬಾಯಲ್ಲಿ ನೀರೂರಿಸಿ, ಇವತ್ತೇನು ತಿಂಡಿ ಮಾಡಿರಬಹುದು ಎನ್ನುವ ಲೆಕ್ಕಾಚಾರ ನಮ್ಮ ಮನಗಳಲ್ಲಿ ಆಗಲೇ ಆಗಿ ಹೋಗಿರುತ್ತಿತ್ತು. ಅವತ್ತಿನ ತಿಂಡಿಯನ್ನು ವಾಸನೆಯಿಂದಲೇ ಪಕ್ಕಾ ಗುರುತು ಹಚ್ಚಿರುತ್ತಿದ್ದೆವು. ಅಷ್ಟು ಪಫರ್ೆಕ್ಟ್ ಆಗಿತ್ತು ನಮ್ಮ ಮೂಗು. ಆದರೆ ಅದರ ಒಳ ಹೊಕ್ಕ ತಕ್ಷಣ ಆತಂಕ, ಭಯ ನನ್ನ ಮನಸ್ಸಿನಲ್ಲಿ ತಾಂಡವವಾಡುತ್ತಿತ್ತು. ಅವರು ಊಟ ಅಥವಾ ತಿಂಡಿ ಕೊಟ್ಟು, ಅಕ್ಷರಾಭ್ಯಾಸ ಮಾಡಿಸಿ, ಇಲ್ಲವೇ ಮಗ್ಗಿ ಹೇಳಿಸಿ ಸ್ವಲ್ಪ ಹೊತ್ತು ಮಲ್ಕೊಳ್ಳಿ ಅಂತ ಹೇಳುದ್ರೆ ಸಾಕು, ನನ್ನ ಅನುಮಾನದ ಗಂಟೆ ಬಾರಿಸುತ್ತಿತ್ತು! ಅಯ್ಯೋ ಇವತ್ತೇನು ಮಾಡುತ್ತಾರೋ ಎಂಬ ಭಯ ನನ್ನ ನಿದ್ದೆಯನ್ನು ಕಿತ್ತುಕೊಂಡು ಬೇಸ್ತು ಬೀಳುತ್ತಿದ್ದೆ.

ಶಿಶ್ವಾರ ರಸ್ತೆಯ ಬದಿಯಲ್ಲಿದ್ದ ಕಾರಣ, ಮಕ್ಕಳೆಲ್ಲ ಎಲ್ಲಿ ರಸ್ತೆಗಿಳಿಯುತ್ತಾರೋ ಎಂಬ ಆತಂಕದಿಂದ ನಾವು ತಿಂಡಿ ತಿಂದು ಕೈ ತೊಳೆದುಕೊಳ್ಳಲು ನಿಂತರೆ ನಮ್ಮನ್ನೆಲ್ಲ ಕಾಯುತ್ತಾ, ಯಾರನ್ನೂ ಮನೆಗೆ ಓಡಿ ಹೋಗದಂತೆ ತಡೆಯುತ್ತಾ ನಿಂತಿರುತ್ತಿದ್ದ ಆಯಾ, ಮನೆಗೋಡಿ ಹೋಗೋ ವಿಚಾರ ಗೊತ್ತಾದ ತಕ್ಷಣ, ಏಯ್ ಎಲ್ಲೂ ಹೋಗ್ಬೇಡ್ರೋ ನಡೀರಿ ಒಳಿಕೆ, ಇವತ್ತು ಮನೆಗೆ ಕಳ್ಸಲ್ಲ ನಿಮ್ಮನ್ನ ಅಂತ ಗದರುತ್ತಿದ್ದರಿಂದ ಆಯಾ ಮತ್ತು ಅಡುಗೆಯವರು ನಮಗೆ ಯಮದೂತರಂತೆ ಕಾಣಿಸುತ್ತಿದ್ದರು. ಇಂಥ ಸಂದರ್ಭದಲ್ಲಿ ನನಗೆ ತಿಂದದ್ದು ಗಂಟಲಲ್ಲೇ ಸಿಕ್ಕಿ ಹಾಕಿಕೊಂಡಂತಾಗಿ ಎಷ್ಟೊತ್ತಿಗೆ ಮನೆಗೆ ಹಿಂತಿರುಗುತ್ತೇನೋ ಎಂದು ಕಾದು ಕುಳಿತಿರುತ್ತಿದ್ದೆ. ಅವರು ಟೀಚರ್ ಜತೆ ಅದು ಇದು ಮಾತಾಡುತ್ತಾ ನಿಂತಿರುವುದನ್ನು ಗಮನಿಸಿ, ಜೀವ ಕೈಯಲ್ಲಿಡಿದು ಒಂದೇ ಉಸಿರಿಗೆ ಓಟ ಕಿತ್ತವರು ಮನೆಯ ಜಗಲಿಯಲ್ಲಿ ಕುಳಿತು ನಿಟ್ಟುಸಿರು ಬಿಡುತ್ತಿದ್ದೆವು. ಒಟ್ಟಿನಲ್ಲಿ ಆ ಗುಹೆಯಿಂದ ತಪ್ಪಿಸಿಕೊಂಡೆ ಎನ್ನುವ ಭಾವ ನನ್ನಲ್ಲಿ ನೆಮ್ಮದಿ ಮೂಡಿಸುತ್ತಿತ್ತು.

ಆಯಾ, ದಿನಂಪ್ರತಿ ಮನೆ ಮನೆಗೆ ತೆರಳಿ ಮಕ್ಕಳನ್ನು ಕರೆದುಕೊಂಡು ಅಥವಾ ಕೆಲವೊಮ್ಮೆ ಒತ್ತಾಯ ಪೂರ್ವಕವಾಗಿ ಅತ್ತರೂ ಬಿಡದೆ ಎಳೆದೊಯ್ಯುತ್ತಿದ್ದರಿಂದ ನಾನು ಅವರ ಕಂಡರೆ ಭಯ ಬೀಳುತ್ತಿದ್ದೆ. ಎಷ್ಟೋ ದಿನ ಅವರಿಂದ ತಪ್ಪಿಸಿಕೊಳ್ಳಲು ಕದ್ದು ಕುಳಿತಿರುವುದೂ ಇದೆ. ಕೆಲವೊಮ್ಮೆ ನನ್ನ ಸ್ನೇಹಿತರು ಶಿಶ್ವಾರಕ್ಕೆ ಹೋಗಿ ಬಂದು, ಇವತ್ತು ಟೀಚರ್ ಈ ತಿಂಡಿ ಕೊಟ್ರು ಗೊತ್ತಾ? ನೀ ಬರ್ಲೆ ಇಲ್ಲ. ಚೆನ್ನಾಗಿತ್ತು ಕಣೆ. ಮತ್ತೆ ಹಾಡು, ಡ್ಯಾನ್ಸು ಮಾಡ್ಸಿ ಕಥೆ ಹೇಳುದ್ರು ಅಂತ ಹೇಳಿದಾಗ ನಾನೂ ಹೋಗಬೇಕಾಗಿತ್ತು ಛೇ! ಅಂತ ಎಷ್ಟೋ ದಿನ ಅಂದುಕೊಳ್ಳುತ್ತಿದ್ದೆ.

ಒಂದು ದಿನ ಎಲ್ಲರಿಗೂ ತಿಂಡಿ ನೀಡಿದ ಮೇಲೆ ಯಾರನ್ನೂ ಹೊರಕ್ಕೆ ಹೋಗದಂತೆ ಆಯಾ ಕೂಡಿ ಹಾಕಿದರು. ನನಗೆ ದಿಕ್ಕೇ ತೋಚದಾಗಿತ್ತು. ಅಯ್ಯೋ! ಈಗೇನ್ ಮಾಡ್ತಾರೋ ಏನೋ ಎಂಬ ಅಳುಕು ನನ್ನನ್ನು ಗೊಂದಲಕ್ಕೀಡು ಮಾಡಹತ್ತಿತ್ತು. ಬಾಗಿಲ ಜಡಿದು ಟೀಚರ್ ಕಥೆ ಹೇಳಿದ ನಂತರ ಮಲಗಲು ಹೇಳಿದರು. ನನಗೆ ನಿದ್ದೆ ಬಂದೀತೆ? ಮೊದಲೇ ಅರ್ಧ ಸತ್ತಂತಾಗಿದ್ದ ನಾನು, ಅರ್ಧಂಬರ್ಧ ಕಣ್ಣು ಬಿಟ್ಟು ತೂಕಡಿಸುತ್ತಾ ಬೆಂಚಿನ ಮೇಲೆ ಮಲಗಿದ್ದೆ. ಸ್ವಲ್ಪ ಶಬ್ದವಾದರೂ ದಢಕ್ಕನೆದ್ದು ಕಣ್ಣು ತೆರೆದು ನೋಡುತ್ತಿದ್ದೆ, ಎಲ್ಲರೂ ಕ್ಷೇಮದಿಂದಿದ್ದಾರೆಯೇ ಎಂದು! ಆ ದಿನ ಹೇಗೋ ದೂಡಿದ ನಂತರ ದಿನ ಕಳೆದಂತೆ ಶಿಶ್ವಾರ ನನಗೆ ಹತ್ತಿರಾಗುತ್ತಾ ಬಂತು. ದಿನಾ ಹೋಗಲು ಬಯಸದಿದ್ದರೂ ವಾರಕ್ಕೆ ಒಮ್ಮೆ ಭೇಟಿ ನೀಡುವ ಅತಿಥಿಯಾದೆ. ಒಟ್ಟಿನಲ್ಲಿ ಶಿಶ್ವಾರದಲ್ಲಿ ಕೊಡುತ್ತಿದ್ದ ಚಾಕಲೇಟುಗಳು, ತಿಂಡಿಗಳು ನಮ್ಮ ಬಾಯಲ್ಲಿ ನೀರೂರಿಸಿ ನಮ್ಮ ಸೆಳೆಯುತ್ತಿದ್ದ ಪರಿ ನಿಜಕ್ಕೂ ತಮಾಷೆಯ ಸಂಗತಿ. ಬರುಬರುತ್ತಾ ಶಿಶ್ವಾರ ತನ್ನ ಮಡಿಲಿಗೆ ನಮ್ಮನ್ನೆಲ್ಲಾ ಆಲಂಗಿಸಿಕೊಂಡು ಸಿಹಿ ನೆನಪುಗಳ ಅಚ್ಚೊತ್ತತೊಡಗಿತು.

ಶಿಶ್ವಾರದ ಹಂತ ಮುಗಿದ ಮೇಲೆ ನಮ್ಮನ್ನು ಒಂದನೇ ತರಗತಿಗೆ ಸರ್ಕಾರಿ ಶಾಲೆಗೆ ವರ್ಗಾಯಿಸಲಾಯಿತು. ಅಷ್ಟು ದಿನ ತುಂಟಾಟವಾಡುತ್ತಾ, ಸ್ಲೇಟು ಬಳಪ ಹಿಡಿಯದೇ ಗೋಡೆಗೆ ನೇತಾಕಿರುತ್ತಿದ್ದ ಚಾರ್ಟಿನ ಹೂ, ಹಣ್ಣು, ಪ್ರಾಣಿ-ಪಕ್ಷಿಗಳ ಚಿತ್ರಗಳನ್ನು ನೋಡಿ ಬಾಯಿಪಾಠದಲ್ಲೇ ಕಲಿಯುತ್ತಾ ಓಡಾಡುತ್ತಿದ್ದವರಿಗೆ ಒಂದನೇ ತರಗತಿಯ ಹೊಸ ಅನುಭವ. ಮೊದಲನೇ ದಿನ ಹೊಸ ಸ್ಲೇಟು, ಬಳಪ ಕೈಯಲ್ಲಿಡಿದಿರುವ ಖುಷಿ. ಆದರೆ, ತರಗತಿಯ ಒಳಗೆ ಹೋಗಿ ಕುಳಿತವರನ್ನು ಕಂಡಾಗ ನನಗೆ ಕಸಿವಿಸಿಯಾಗತೊಡಗಿತು. ತರಗತಿಯಲ್ಲಿ ಕುಳಿತವರಲ್ಲಿ ಕೆಲವರು ಅಳುಮುಂಜಿ ಮುಖ ಮಾಡಿ ತುಟಿಯನ್ನು ಕಚ್ಚಿಡಿದು ಎಲ್ಲರನ್ನೂ ಬೆಪ್ಪಾಗಿ ನೋಡುತ್ತಾ ಕುಳಿತರೆ, ಮತ್ತೆ ಕೆಲವರು ಹೊಸ ಸ್ಲೇಟು, ಬಳಪದ ಗುಂಗಿನಲ್ಲಿ ತೇಲುತ್ತಾ ಸ್ಲೇಟಿನ ಮೇಲೆ ಗೀಜುತ್ತಾ, ಅದನ್ನು ಎಂಜಲಾಕಿ ಅಳಿಸುತ್ತಾ ಕುಳಿತಿದ್ದರು. ಇನ್ನೂ ಕೆಲವರೋ ಮನೆಯವರು ಶಾಲೆಗೆ ಕಳಿಸಲು ಪೂಸಿ ಹೊಡೆದು ಕೈಗೆ ಕೊಟ್ಟ ಚಾಕಲೇಟನ್ನು ಬೇಕಂತಲೇ ಎಲ್ಲರಿಗೂ ತೋರಿಸುವಂತೆ ಕೈಯಲ್ಲಿ ಮುರುಮುರು ಅಂತ ಶಬ್ದ ಮಾಡಿ, ಬಾಯಲ್ಲಿ ಹಾಕಿಕೊಂಡು ಕೆನ್ನೆ ಊದಿಸಿ ಚೀಪಿ ಎಲ್ಲರ ಗಮನ ಸೆಳೆಯುತ್ತಿದ್ದರೆ, ಮತ್ತೆ ಕೆಲವರು ಈ ದಿನ ಕಳೆದು ಮನೆ ಸೇರಿದರೆ ಸಾಕೆಂಬ ಮೂಕವೇದನೆಯಲ್ಲಿ ಅಂದಿನ ದಿನ ದೂಡುತ್ತಿದ್ದರು. ಮೇಷ್ಟ್ರು ಬಂದು ಒಬ್ಬೊಬ್ಬರಾಗಿ ಹೆಸರೇಳುವಂತೆ ಹೇಳಿದಾಗ, ಎಲ್ಲರ ಎದೆಯಲ್ಲಿ ಡವಡವ ಶುರುವಾಗಿ ತಮ್ಮ ಸರದಿ ಎಷ್ಟೊತ್ತಿಗೆ ಮುಗಿಯುತ್ತೋ ಎಂದು ನಮ್ಮ ಮುಂದಿದ್ದ ಮಕ್ಕಳನ್ನು ಎಣಿಸುತ್ತಾ, ತನ್ನ ಸರದಿ ಬಂದಾಗ ಹೇಗೋ ಹೇಳಾಯ್ತಲ್ಲ ಎಂಬ ನೆಮ್ಮದಿಯಿಂದ ಕುಳಿತಿರುತ್ತಿದ್ದೆವು. (ನಾನಂತೂ ನಡುಗುತ್ತಲೇ ಎದ್ದು ಹೆಸರೇಳಿ ಕೂರುತ್ತಿದ್ದೆ. ಮೇಷ್ಟ್ರು ಎದ್ದು ಹೊರ ಹೋದರೂ ನನ್ನ ನಡುಕ, ಎದೆಬಡಿತ ಮಾತ್ರ ನಿಂತಿರುತ್ತಿರಲಿಲ್ಲ!)

ಮೇಷ್ಟ್ರು ಹೊಡೆಯುವುದಿಲ್ಲ ಎಂಬ ಅರಿವಾದ ಕ್ಷಣ ಎಲ್ಲರ ಹಾವಭಾವದಲ್ಲಿ ಬದಲಾವಣೆ ಗಾಳಿ ಬೀಸಿದರೂ, ಮೊದಲಿನಂತೆಯೇ ಅಕ್ಕಪಕ್ಕದವರನ್ನು ದಿಟ್ಟಿಸುತ್ತಾ ಮೇಷ್ಟ್ರು ಕೇಳುವ ಪ್ರಶ್ನೆಗೆ ಉತ್ತರಿಸುವುದಕ್ಕಾಗಿ ಕೈ ಎತ್ತಿದವರನ್ನು ಯಾವುದೋ ದಿವ್ಯಶಕ್ತಿಯ ಹಾಗೆ ಪುಳಕಿತರಾಗಿ ನೋಡುತ್ತಿದ್ದೆವು. ಉತ್ತರ ನನಗೆ ಗೊತ್ತಿದ್ದರೂ ಹಿಂಜರಿಕೆಯಿಂದ ಕೈ ಎತ್ತುತ್ತಿರಲಿಲ್ಲ. ಏನೋ ಒಂಥರ ಅಂಜಿಕೆಯಿಂದ ಕೈ ಎತ್ತಿದರೂ ಎಲ್ಲರ ಕಣ್ಣು ನನ್ನ ಮೇಲಿರುತ್ತಿದ್ದರಿಂದ ಇದ್ಯಾರಿಗೆ ಬೇಕು ಈ ಸಹವಾಸ ಅಂತ ಸುಮ್ಮನಿದ್ದು ಬಿಡುತ್ತಿದ್ದೆ. ಆದರೂ ಅದರಲ್ಲೊಂಥರ ಖುಷಿ ಇರುತ್ತಿತ್ತು ಎನ್ನುವುದು ಮಾತ್ರ ಸುಳ್ಳಲ್ಲ. ಮೊದಲನೇ ದಿನ ಹೇಗೋ ಕಳೆದದ್ದಾಯಿತು. ಈಗ ಎರಡನೇ ದಿನದ ಸರದಿ. ಮೊದಲನೇ ದಿನದ ಹಾಗೆ ಎಲ್ಲರ ಮುಖ ಕಳೆಗುಂದದಿದ್ದರೂ ಸ್ವಲ್ಪಮಟ್ಟಿಗೆ ಸುಧಾರಣೆ ಕಂಡಿತ್ತು. ಆದರೆ ಯಾರಿಗೂ ಮೇಷ್ಟ್ರು ಹೇಳಿಕೊಡುತ್ತಿದ್ದ ಮಗ್ಗಿಯ ಮೇಲೆ ಗಮನವಿರದೆ, ಎಷ್ಟೊತ್ತಿಗೆ ಮನೆಗೆ ತಲುಪುತ್ತೇವೋ ಅನ್ನುವ ಚಿಂತೆ ಎಲ್ಲರ ಮುಖ ಕಪ್ಪಾಗಿಸಿತ್ತು. ಮೂರನೆಯ ದಿನ ಅವರವರ ಮುಖ ನೋಡಿಕೊಂಡು ತಮ್ಮ ಪಾಡಿಗೆ ತಾವಿದ್ದು ಕಳೆದದ್ದಾಯಿತು. ನಾಲ್ಕನೇ ದಿನ ಬಳಪ ಮುಗಿದಾಗ ಅಕ್ಕಪಕ್ಕದವರ ಕಡೆಗೆ ಧನ್ಯತೆಯಿಂದ ನೋಡಿ ಕೇಳಲಾಗದ ಪರಿಸ್ಥಿತಿಯಲ್ಲಿ ತಲೆ ತಗ್ಗಿಸಿ ಸುಮ್ಮನೆ ಸ್ಲೇಟಿನ ಮೇಲೆ ಕೈಯಾಡಿಸುತ್ತಾ ಕುಳಿತಿರುತ್ತಿದ್ದೆ. ಐದನೇ ದಿನಕ್ಕೆ ನಮ್ಮಲ್ಲಿ ಚೇತರಿಕೆ ಕಂಡು ಗೆಲುವು ಮುನ್ನುಗ್ಗುತ್ತಿರಲು, ಯಾರಿದ್ದರೇನು ನಾವೇ ರಾಜ-ರಾಣಿ ಎನ್ನುವ ತರ್ಲೆ ಆಟಗಳು ತಮ್ಮ ಮೊದಲಿನ ಛಾಪು ಹೊತ್ತಲು ಶುರುವಿಟ್ಟವು. ಇನ್ನ ಕೇಳಬೇಕೇ? ನಮ್ಮ ನಮ್ಮಲ್ಲಿ ಅಡಗಿದ್ದ ವರಸೆಗಳು ಒಂದೊಂದಾಗಿ ಹೊರಗೆ ಹೆಜ್ಜೆ ಇಡಲಾರಂಭಿಸಿದವು.

ಕೀಟಲೆ, ತರಲೆಗಳು, ವ್ಯಂಗ್ಯ, ಅಳು, ನಗು ಎಲ್ಲವೂ ಎಲ್ಲರೊಂದಿಗೆ ಬೆರೆಯುವ ಸ್ನೇಹಪರತೆ ಮೂಡಿಸಿದವು. ಅಕ್ಕಪಕ್ಕದವರ ಬಳಿ ಬಳಪ ಕೇಳುವ ನೆಪದಲ್ಲಿ ಕಿರುನಗೆ ಮೂಡಿ ಒಬ್ಬರಿಗೊಬ್ಬರು ಮುಖ ಪರಿಚಯ ಸ್ವಲ್ಪಮಟ್ಟಿಗೆ ಆಗುವ ಮೂಲಕ ತೆರೆದುಕೊಂಡ ಸ್ನೇಹದ ಪುಟ, ಮಾತುಕತೆ, ಬಳಪದ ಅದಲು ಬದಲಿನ ವಹಿವಾಟಿಗೂ ಅಡಿಪಾಯ ಹಾಕಿತು. ನಂತರ ನಮ್ಮ ಧೈರ್ಯ ಹಿಮ್ಮಡಿಗೊಂಡು ನಾವು ಜೊತೆಗೂಡುವುದರಿಂದ ಶುರುವಾಗಿ ಒಟ್ಟಿಗೆ ಆಟೋಟಗಳಲ್ಲಿ ಪಾಲ್ಗೊಂಡು, ಮೇಷ್ಟ್ರು ಕುರ್ಚಿಯವರೆಗೂ ಮುಂದುವರೆಯಿತು! ಈ ಸ್ನೇಹ ಮೇಷ್ಟ್ರು ಇಲ್ಲದಿದ್ದಾಗ ಡಸ್ಟರ್ ತೆಗೆದುಕೊಂಡು ಬೋರ್ಡ್ ಸ್ವಚ್ಛಗೊಳಿಸುವುದು, ಬೋರ್ಡ್ ಮೇಲೆ ಕಾಗುಣಿತ, ಮಗ್ಗಿ, ಹೆಸರಲ್ಲೇ ಚಿತ್ರ ಬಿಡಿಸುವುದಕ್ಕೂ ಪೈಪೋಟಿಯಾಗಿ ನಮ್ಮಲ್ಲಿ ಮುನ್ನುಗ್ಗುವ ಎದೆಗಾರಿಕೆಗೆ ನಾಂದಿ ಹಾಡಿತು.

ನನ್ನ ತರಗತಿಯಲ್ಲಿ ಇದ್ದ ಕೆಲವರಿಗೆ ಬಳಪ ತಿನ್ನುವ ಅಭ್ಯಾಸ. ಅಂತಹವರು ಕದ್ದಾದರೂ ಬಳಪ ತಿನ್ನುತ್ತಿದ್ದರು. ಇಂಥವರ ಹತ್ತಿರ ಬಳಪದ ಡಬ್ಬವೇ ಇರುತ್ತಿತ್ತು. ಅದರಲ್ಲಿ ಬರೆದು ಬರೆದೂ ಸವೆದ ಚಿಕ್ಕ ಚಿಕ್ಕ ಬಳಪದ ತುಣುಕುಗಳು, ಹೊಸದಾದ ಉದ್ದವಾದ ಬಳಪ, ಬಣ್ಣ ಬಣ್ಣದ ಚಾಕ್ಪೀಸ್ಗಳು, ಒಂದಿಂಚಿನ ಬಳಪ, ಎರಡಿಂಚಿನ ಬಳಪ, ಗುಂಡಾಕಾರದ ಬಳಪ, ಸಣಕಲು ಬಳಪ, ಮೆದುವಾದ ಬಳಪ, ಗಡಸಾದ ಬಳಪ ಹೀಗೆ ವಿಧ ವಿಧವಾದ ಕಲೆಕ್ಷನ್ನೇ ಇರುತ್ತಿತ್ತು. ನಾನು ನನ್ನ ಸ್ಲೇಟಿನಲ್ಲಿ ಬರೆಯದಂತಹ ಬಳಪವನ್ನು ಅವರಿಗೆ ನೀಡಿ ನಮಗೆ ಇಷ್ಟವಾಗುವ ಬಳಪವನ್ನು ಅವರಿಂದ ಪಡೆದುಕೊಂಡು ಬೀಗುತ್ತಿದ್ದೆ.

(ಕಾವೇರಿ ಎಸ್ ಎಸ್)

ಅಂತಹವರ ಜೊತೆ ಕೋಪಗೊಂಡಿದ್ದರೆ ಯಾವುದೇ ಕಾರಣಕ್ಕೂ ಬಳಪ, ಸ್ಕೇಲು ನಮಗೆ ಸಿಗುತ್ತಿರಲಿಲ್ಲ. ಸುಮ್ಮನೆ ನಮ್ಮ ಪಾಡಿಗೆ ನಾವು ಏನೂ ತಿಳಿಯದ ಹಾಗೆ ಕುಳಿತು ಮೆಲ್ಲಗೆ ಕೇಳಿದರೆ ಮಾತ್ರ ಅವು ನಮಗೆ ದಕ್ಕುತ್ತಿದ್ದವು. ಕೆಲವೊಮ್ಮೆ ಕೇಳಲಾಗದೆ ನಮಗೆ ಬರೆಯೋದಿಕ್ಕೆ ಬೆರಳಿನಲ್ಲಿ ಹಿಡಿದುಕೊಳ್ಳಲೂ ಆಗದಂತಹ ಬಳಪಗಳನ್ನು ಸ್ಲೇಟಿನ ಮೇಲೆ ಒತ್ತಿ ಹಿಡಿದು ಬರೆಯುತ್ತಿದ್ದದ್ದು ನಮಗೆ ಮೋಜು ನೀಡುತ್ತಿತ್ತು.

ಇಷ್ಟಕ್ಕೇ ಈ ಪೈಪೋಟಿ ನಿಲ್ಲುತ್ತಿರಲಿಲ್ಲ. ಯಾವ ರೀತಿಯ ಸ್ಲೇಟು, ಸ್ಕೇಲು ಯಾವ ಬಣ್ಣದಲ್ಲಿದೆ, ಅದರ ಸೈಡಿನಲ್ಲಿ ಯಾವ ಡಿಸೈನ್ ಇದೆ, ನೈಸಾಗಿದೆಯಾ, ಹೊರಟಾಗಿದೆಯಾ, ಕಿತ್ತೋಗಿದೆಯಾ ಅಥವಾ ದೊಡ್ಡದಾ, ಚಿಕ್ಕದಾ ಎನ್ನುವುದನ್ನು ನಮ್ಮ ಕಣ್ಣುಗಳು ತೂಕ ಮಾಡುತ್ತಿದ್ದವು. ಅವು ಇಷ್ಟವಾದರೆ ಎಲ್ಲಿ ತಗೊಂಡೆ? ಅಂತ ಕೇಳಿ ಮುಟ್ಟಿ ಚೆನ್ನಾಗಿದೆ ಅಂತ ಅದರ ಮೇಲೆ ನಮಗಿಷ್ಟವಾದ ಬಳಪದಲ್ಲಿ ಬರೆಯುತ್ತಿದ್ದೆವು. ಆದರೆ ಆ ಸ್ಲೇಟಿಗೆ ನಮ್ಮ ಬಳಪ ಹತ್ತದಿದ್ದರೆ, ಇದೆಷ್ಟು ಚೆನ್ನಾಗಿದೆ ಬಳಪ, ನಿನ್ನ ಸ್ಲೇಟಿಗೆ ಬರೆಯಲ್ಲ. ಇದು ಚೆನ್ನಾಗಿಲ್ಲ ಎನ್ನುವ ತೀಮರ್ಾನ ನಮ್ಮ ಮನಸ್ಸು ಕೈಗೊಳ್ಳುತ್ತಿತ್ತು! ಯಾರಾದರೂ ಒಳ್ಳೆ ಬಟ್ಟೆ, ಚಪ್ಪಲಿ, ಶೂ (ಶೂವನ್ನು ಹಣಕಾಸಿನಲ್ಲಿ ಉತ್ತಮವಾಗಿದ್ದವರು ಹಾಕಿಕೊಂಡು ಬರುತ್ತಿದ್ದರು. ಇಲ್ಲವಾದಲ್ಲಿ ಹವಾಯ್ ಚಪ್ಪಲಿಯೇ ನಮಗೆಲ್ಲ ಉತ್ತಮ ಮಟ್ಟದ ಚಪ್ಪಲಿಯಾಗಿತ್ತು) ಹಾಕಿಕೊಂಡಿದ್ದರಿಂದ ಹಿಡಿದು ಹೂ ಮುಡಿದುಕೊಂಡು ಬಂದರೆ, ಅವನ್ನು ದಿಟ್ಟಿಸಿ ಅವುಗಳನ್ನೆಲ್ಲ ನೋಡಿ ಕೈಯಾಡಿಸಿ ಅವರೊಂದಿಗೆ ನಾವೂ ಖುಷಿಗೊಳ್ಳುತ್ತಿದ್ದೆವು.

ಶಾಲೆಗೆ ಬರುವ ದಾರಿಯಲ್ಲಿ ಅಥವಾ ಅಕ್ಕಪಕ್ಕದವರ ಮನೆಯ ಹತ್ತಿರ ಬಿಟ್ಟಿರುತ್ತಿದ್ದ ಹೂಗಳ ಕಡೆಗೆ ನಮ್ಮ ಗಮನ ಹರಿಯುತ್ತಿತ್ತು. ಅವು ಮೊಗ್ಗಾಗಿ ಅರಳುವುದನ್ನೇ ಕಾಯುತ್ತಿದ್ದೆವು. ಅರಳಿದ ಬೆಳಿಗ್ಗೆ ಗಿಡದಲ್ಲಿ ಹೂವು ಮಾಯವಾಗಿ ನಮ್ಮ ತರಗತಿಯ ಟೀಚರ್ ಮುಡಿಯಲ್ಲಿರುತ್ತಿತ್ತು. ನಾವೇ ತಂದುಕೊಟ್ಟಿದ್ದೆನ್ನುವ ಬಿಗುಮಾನದಲ್ಲಿ ಟೀಚರ್ ಜೊತೆ ಮಾತನಾಡುತ್ತಾ ಹಿಂದೆ ಮುಂದೆ ಸುತ್ತುತ್ತಿದ್ದೆವು. ಹೂವನ್ನು ಮನೆಯಲ್ಲಿ ಮುಡಿಯಲು ಕೊಟ್ಟರೆ ಅದನ್ನು ಮುಡಿಯದೆ ಕೈಯಲ್ಲಿಡಿದು ತಂದು ಟೀಚರ್ಗೆ ಒಪ್ಪಿಸುವ ಹಂತಕ್ಕೂ ಇದು ತಲುಪಿತು. ಹೂ ತಂದುಕೊಡುವುದಕ್ಕೂ ಪೈಪೋಟಿಗಿಳಿಯುತ್ತಿದ್ದ ನಾವು, ನಮ್ಮ ಎದುರಾಳಿಯ ಗುಂಪು ತಂದುಕೊಟ್ಟರೆ, ನಾಳೆ ನಾವು ತಂದುಕೊಡುವ ಉಪಾಯ ಹೂಡುತ್ತಿದ್ದೆವು! ಹೀಗೆ ದಿನಂಪ್ರತಿ ಪೈಪೋಟಿಗಿಳಿಯುತ್ತಿದ್ದ ನಾವು ಕೆಲವೊಮ್ಮೆ ವೈಮನಸ್ಸು ಮರೆತು ಜೊತೆಗೂಡಿ ಆಡುತ್ತಿದ್ದೆವು. ನಮ್ಮ ತರಗತಿಯ ಯಾರನ್ನೇ ಆದರೂ ಬೇರೆ ತರಗತಿಯವರು ಅವಮಾನ ಮಾಡಿದರೆ ಸಹಿಸುತ್ತಿರಲಿಲ್ಲ. ಅವರಿಗೆ ಸರಿಯಾದ ಬುದ್ಧಿ ಕಲಿಸಲು ಕಾಯುತ್ತಿದ್ದೆವು.

ಯಾವುದಾದರೂ ಹೊಸ ವಸ್ತು ತೆಗೆದುಕೊಂಡರಂತೂ ನಮ್ಮನ್ನು ಹಿಡಿಯೋದಿಕ್ಕೆ ಆಗುತ್ತಿರಲಿಲ್ಲ. ಎಷ್ಟೊತ್ತಿಗೆ ಎಲ್ಲರಿಗೂ ತೋರಿಸಿಕೊಂಡು ಬರುವುದೋ ಎಂದು ಗೋಳಾಡುತ್ತಿದ್ದೆವು. ಹೊಸ ಬಟ್ಟೆ ಹಾಕಿಕೊಂಡು, ಮೇಕಪ್ ಮಾಡಿಕೊಂಡು ಸ್ಟೈಲಾಗಿ ತರಗತಿಗೆ ಬಂದು ಟೀಚರ್ಗೆ ತೋರಿಸಿ ಚೆನ್ನಾಗಿದೆ ಅಂತ ಹೇಳಿಸಿಕೊಂಡ ಮೇಲೆ ನಮಗೆ ಸಮಾಧಾನವಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ಕೆಲವರಿಗೆ ಹೊಟ್ಟೆ ಉರಿಸಲು ಕೂಡ ನುಲಿಯುತ್ತಾ ನಲಿಯುತ್ತಾ ಮೂತಿ ಸೊಟ್ಟ ಮಾಡಿಕೊಂಡು ಓಡಾಡಿಕೊಂಡಿರುತ್ತಿದ್ದೆವು. ಹೊಸತೆನ್ನುವ ಉತ್ಸಾಹ ನಮ್ಮನ್ನು ಅಟ್ಟಕ್ಕೇರಿಸಿ ಹಾಗೆ ಮಾಡಿಸುತ್ತಿತ್ತು!

ಹೀಗೆ ತೆರೆದುಕೊಳ್ಳುತ್ತಲೇ ಸಾಗುವ ನಲಿವು-ನೋವಿನ ತುಣುಕುಗಳನ್ನು ಹೆಕ್ಕಿದಂತೆ ಖಾಲಿಯಾಗದಿರುವ ಅಕ್ಷಯಪಾತ್ರೆಯೇ ಬಾಲ್ಯ. ಪುಟ್ಟ ಪುಟ್ಟ ಕನಸುಗಳೊಂದಿಗೆ ಈಡೇರದ ಆಸೆಗಳಿಗಾಗಿ ಅತ್ತು ಕರೆದು ಸುಸ್ತಾಗಿ ಬೇಸ್ತು ಬಿದ್ದು ಬಿಕ್ಕುತ್ತ ನಿದ್ದೆಗೈದು… ಪೂಸಿಯ ಚೌಕಟ್ಟಿಗೆ ಬೆರಗಾಗಿ ಮತ್ತೆ ಪುಟಿಯುವ ಮುದ್ದು ಮನಗಳ ಆಲಂಗಿಸಿಕೊಂಡ ಬಾಲ್ಯ, ಮತ್ತೆ ಹಿಂತಿರುಗಿ ಬರಲಾರದ ಬದುಕಿನ ಅಪೂರ್ವ ಅಧ್ಯಾಯವೇ ಸರಿ.

 

(ಪುಸ್ತಕದ ಹೆಸರು: ಒಡಲ ಖಾಲಿ ಪುಟ, ಲೇಖಕರು: ಕಾವೇರಿ ಎಸ್ ಎಸ್. ಪ್ರಕಾಶನ: ಪ್ರಜೋದಯ ಪ್ರಕಾಶನ, ಹಾಸನ, ಪುಟಗಳು: 152, ಬೆಲೆ: 120/-)