ಕನ್ನಡ ಮತ್ತು ಮರಾಠಿ ಭಾಷೆಯಲ್ಲಿ ಬರೆದ ಜಯದೇವಿ ತಾಯಿ ಲಿಗಾಡೆ ಅವರು ಸೊಲ್ಲಾಪುರದಲ್ಲಿ ಹುಟ್ಟಿದರು.  ಕರ್ನಾಟಕದ  ಏಕೀಕರಣಕ್ಕಾಗಿ ಹೋರಾಡಿದವರು. ಅಧ್ಯಾತ್ಮದತ್ತ ಹೆಚ್ಚು ಒಲವಿದ್ದುದರಿಂದ ಅದೇ ಮಾದರಿ ಸಾಹಿತ್ಯ ಕೃತಿಗಳನ್ನು ರಚಿಸಿದರು. ಸ್ತ್ರೀ ಶಿಕ್ಷಣದ ಕುರಿತು ಜಯದೇವಿ ತಾಯಿಯವರು ಅಪಾರ ಆಸಕ್ತಿ ಕಾಳಜಿ ಹೊಂದಿದ್ದರು. ಸಮಾಜ ಸೇವಕಿಯಾಗಿ, ಶಿಕ್ಷಕಿಯಾಗಿ, ಉತ್ತಮ ವಾಗ್ಮಿಯಾಗಿ ಗುರುತಿಸಿಕೊಂಡಿದ್ದರು.  ಜಯಗೀತೆ, ತಾಯಿಯ ಪದಗಳು, ಶ್ರೀ ಸಿದ್ಧರಾಮ ಪುರಾಣ,ತಾರಕ ತಂಬೂರಿ, ಬಂದೇವು ಕಲ್ಯಾಣಕೆ, ಸಾವಿರದ ಪದಗಳು, ಅರುವಿನಾಗರದಲ್ಲಿ ಅವರ ಪ್ರಮುಖ ಕನ್ನಡ ಕೃತಿಗಳು. ಮರಾಠಿಯಲ್ಲಿಯೂ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರು ಬರೆದ ‘ಬಯಕೆ’ ಕವನವನ್ನು ‘ಸುವರ್ಣ ಸಂಪುಟ’ದಿಂದ ಆಯ್ದುಕೊಂಡಿದ್ದು, ಕನ್ನಡ ಕಾವ್ಯಮಾಲೆಯ ಕಾಣದ ಕುಸುಮಗಳು ಸರಣಿಯಲ್ಲಿ ಇಂದಿನ ಓದಿಗಾಗಿ.

 

ಬಯಕೆ
ಸೊನ್ನಲಿಗೆಯ ಸಿದ್ಧನ
ಕಲ್ಯಾಣ ಬಸವನ
ಶೃಂಗೇರಿ ಶಂಕರನ
ಬುದ್ಧ ಮಹಾವೀರರ
ಬರುವಿಕೆ ಬಯಕೆಯನು
ಬಯಸೇನ, ಬಯಕೆಯನು ಬದುಕುದಕೆ.

ಬರುವಿರಿ ಇನ್ನೊಮ್ಮೆ
ಎಂಬುತ ನಂಬುತ
ದೂಡುವೆ ದೋಣಿಯ
ತೆರೆಯೇನ ?ಬಂಡೇನ ?
ತಡೆಯದು ನನ್ನೇನು
ತಡೆಯೇನು ? ಬಾಳುವೆ ಕಡಲಾಗ-

ನೂಕುವೆ ನೌಕೆಯ
ಬೇಕೇನ ನನಗೇನ
ಕೂಡುವೆ ನಿಮ್ಮನ್ನ
ಅಂಜೇನು ಸಾವೀಗು
ಸಾವೇನು ನಿಮ್ಮ ಉಡಿಯೇನು ?
ಸಾವೇನ ಬೇರೇನ ? ಸಾವೇನ ನನ್ನ ತವರೇನ