ನೊಬೆಲ್ ಪ್ರಶಸ್ತಿ ಪುರಸ್ಕೃತ ಲೇಖಕಿ ಟೋನಿ ಮಾರಿಸನ್. ಸಿಂಗಲ್ ಮದರ್ ಆಗಿದ್ದ ಆಕೆ, ‘ತನ್ನ ಜೀವನದಲ್ಲಿ ಇರುವ ಆದ್ಯತೆಯ ವಿಷಯಗಳು ಎರಡೇ. ಮೊದಲನೆಯದು, ಮಕ್ಕಳನ್ನು ಚೆನ್ನಾಗಿ ಬೆಳೆಸುವುದು ಮತ್ತು ಎರಡನೆಯದು ಕಾದಂಬರಿಗಳನ್ನು ಬರೆಯುವುದು’ ಎಂದು ಹೇಳಿಕೊಂಡಿದ್ದರು. ಅಂದರೆ ಬರವಣಿಗೆ ಕುರಿತು ಅವರ ಆಸಕ್ತಿ ಎಷ್ಟು ತೀವ್ರವಾಗಿತ್ತು ಎಂಬುದು ಅವರ ಈ ಮಾತುಗಳಿಂದ ಸ್ಪಷ್ಟವಾಗುತ್ತದೆ ಅಲ್ಲವೇ. ವರ್ಣಭೇದ ನೀತಿ, ಗುಲಾಮಗಿರಿಯ ವಿರುದ್ಧ ತಮ್ಮ ಬರವಣಿಗೆಯ ಮೂಲಕವೂ ದನಿಯೆತ್ತಿದವರು. ಅವರು ಬರೆದ ‘ಬಿಲವೆಡ್’ ಕಾದಂಬರಿಯ ಕುರಿತು ವಿಶ್ಲೇಷಿಸಿದ್ದಾರೆ ಕಾವ್ಯಾ ಕಡಮೆ.

 

ಜಗತ್ತಿನ ಸಾಹಿತ್ಯ ಪ್ರೇಮಿಗಳಿಗೆ ಟೋನಿ ಮಾರಿಸನ್ ಸುಪರಿಚಿತ ಹೆಸರು. ತಮ್ಮ ಮೂವತ್ತೊಂಬತ್ತನೆಯ ಹರೆಯದಲ್ಲಿ ಮೊದಲ ಪುಸ್ತಕ ಪ್ರಕಟಿಸಿ ಅರವತ್ತೆರಡನೆಯ ವಯಸ್ಸಿನಲ್ಲಿ ನೊಬೆಲ್ ಪಡೆದಾಕೆ. 2019 ರಲ್ಲಿ ಈ ಲೋಕದಿಂದ ಎದ್ದು ನಡೆವ ತನಕವೂ ಹೊಸ ಕಾದಂಬರಿಯ ಧ್ಯಾಸದಲ್ಲೇ ಇದ್ದಾಕೆ. ಬರವಣಿಗೆಯ ಕುರಿತು, ಕಪ್ಪು ಜನರ ಅಸ್ಮಿತೆಯ ಕುರಿತು ನೂರಾರು ಕಡೆ ಉಪನ್ಯಾಸಗಳನ್ನು ಕೊಟ್ಟು ಯುವಜನರಲ್ಲಿ, ಕಪ್ಪು ಮಹಿಳೆಯರಲ್ಲಿ ಪ್ರಜ್ಞೆಯ ಬೆಳಕನ್ನು ಜೀವಂತವಾಗಿಟ್ಟವರು. ಹದಿಮೂರೇ ಕಾದಂಬರಿಗಳನ್ನು ಪ್ರಕಟಿಸಿಯೂ ಅಮೆರಿಕನ್ ಕ್ಲಾಸಿಕ್ ಸಾಹಿತ್ಯದಲ್ಲಿ ಬಹುಮುಖ್ಯ ಸ್ಥಾನವನ್ನು ಪಡೆದವರು.

ಅವರ ‘ಬಿಲವೆಡ್’ ಕಾದಂಬರಿ ಸೆಥಾ ಎಂಬ ಹೆಂಗಸಿನ ತಾಯಿತನವನ್ನು ಪುಟಕ್ಕಿಡುವ ಕಥೆ. ಅಮೆರಿಕದಲ್ಲಿ ಇನ್ನೂ ಗುಲಾಮಗಿರಿ ಜೀವಂತವಾಗಿದ್ದಾಗ ತನ್ನ ಮೂವರು ಮಕ್ಕಳು, ಗಂಡ, ಅತ್ತೆಯೊಂದಿಗೆ ಕೆಂಟುಕಿ ಊರಿನ ಪ್ಲಾಂಟೇಷನ್ನೊಂದರಲ್ಲಿ ಗುಲಾಮಳಾಗಿ ಇರುವಾಕೆ ಈಕೆ. ದಿನವಿಡೀ ಹೊಲದಲ್ಲಿ ಜೀತದಾಳಿನ ದುಡಿಮೆ, ರಾತ್ರಿ ಮಾಲಿಕನ ರೋಗಿಷ್ಟ ಹೆಂಡತಿಯ ಆರೈಕೆ ಅವಳ ದಿನಚರಿ. ಮಾಲಿಕರ ಕೂಸಿಗೆ ಹಾಲು ಕಡಿಮೆಯಾದಾಗ ಸೆಥಾಳನ್ನು ಬಗ್ಗಿಸಿ ಅವಳೊಂದು ಪ್ರಾಣಿಯೋ ಎನ್ನುವ ಹಾಗೆ ಅನಾಮತ್ತಾಗಿ ಅವಳ ಸ್ತನಗಳಿಂದ ಹಾಲು ಕರೆದುಕೊಂಡು ಹೋಗಲಾಗಿದೆ. ದಾಸಿಯಾಗಿ ಹುಟ್ಟಿದವಳ ಸ್ವಂತ ದೇಹವೂ ಸ್ವತಃ ಆಕೆಯದಲ್ಲ. “ಅವರು ನನ್ನ ಹಾಲು ಕದ್ದೊಯ್ದರು. ನನ್ನ ಮಗುವಿಗೆಂದು ಉಳಿಸಿಕೊಂಡಿದ್ದ ಹಾಲನ್ನು ಕದ್ದೊಯ್ದರು” ಎಂದು ಬಡಬಡಿಸಿದರೂ ಆಕೆಯ ಅಳಲನ್ನು ಅಲ್ಲಿ ಕೇಳುವವರೇ ಇಲ್ಲ.

ಒಮ್ಮೆ ಮಾಲಿಕ ತನ್ನ ಮಕ್ಕಳಿಗೆ ಪಾಠ ಹೇಳಿಕೊಡುವಾಗ ಅವರ ಮಾತುಗಳಲ್ಲಿ ತನ್ನ ಹೆಸರು ಕೇಳಿದಂತಾಗಿ, ಕೆಲಸ ಮಾಡುತ್ತಿದ್ದ ಸೆಥಾಳಿಗೆ ಅತ್ತ ಕಡೆಯೇ ಲಕ್ಷ್ಯ ಹೋಗುತ್ತದೆ. ಮಾಲಿಕ ಅವರಿಗೆ ಎರಡು ಕಾಲಂಗಳನ್ನು ಮಾಡಲು ಹೇಳಿ ಕಪ್ಪು ಜನರ ಸಾಧು ಗುಣಗಳು ಮತ್ತು ಕ್ರೂರ ಗುಣಗಳನ್ನು ಪಟ್ಟಿ ಮಾಡಲು ಹೇಳಿರುತ್ತಾನೆ. “ಮತ್ತು ಸೆಥಾ? ಅವಳಲ್ಲಿ ಕಂಡು ಬರುವ ಸಾಧು ಮತ್ತು ಕ್ರೂರ ಗುಣಗಳಾವುವು?” ಎಂತ ಕೇಳಿದಾಗ ಆ ಎಂಟ್ಹತ್ತು ವರ್ಷದ ಮಕ್ಕಳು ಪಟ್ಟಿ ಮಾಡಲು ತೊಡಗುತ್ತಾರೆ. ತಾನೇ ಹಾಲೂಡಿಸಿ, ಎತ್ತಾಡಿಸಿದ ಮಕ್ಕಳು ದೊಡ್ಡವರಾಗಿ ಹೀಗೆ ಭವಿಷ್ಯದ ಒಡೆಯರಾಗುವ ತಯಾರಿಯಲ್ಲಿರುವುದನ್ನು ಕಂಡು ಸೆಥಾಳ ಚಿತ್ತಸ್ಥಿಮಿತ ಛಿದ್ರವಾಗಿದೆ. ಹೇಗಾದರೂ ಮಾಡಿ ಈ ನರಕದಿಂದ ಪಾರಾಗಬೇಕೆಂದು ಅಂದೇ ನಿರ್ಧರಿಸುತ್ತಾಳೆ. ತನ್ನ ಮೂವರು ಮಕ್ಕಳೂ ತನ್ನಂಥದೇ ಬದುಕು ಬಾಳುವುದನ್ನು ಕಲ್ಪಿಸಲಾರಳು ಆಕೆ.

(ಟೋನಿ ಮಾರಿಸನ್)

ಆಗಲೇ ಉತ್ತರದ ರಾಜ್ಯಗಳಲ್ಲೆಲ್ಲ ಬದಲಾವಣೆಯ ಗಾಳಿ ಬೀಸುತ್ತಿದೆ. ದಕ್ಷಿಣದ ರಾಜ್ಯಗಳು ಗುಲಾಮಗಿರಿಯನ್ನು ಕೈಬಿಡಬೇಕು ಮತ್ತು ಒತ್ತೆಯಾಳಾಗಿ ಇಟ್ಟುಕೊಂಡಿರುವ ಕಪ್ಪು ಜನರನ್ನೆಲ್ಲ ಸ್ವತಂತ್ರಗೊಳಿಸಬೇಕು ಎಂಬ ಕೂಗು ದೇಶದೆಲ್ಲೆಡೆ ಏಳುತ್ತಿದೆ. ಸೆಥಾಳ ಅತ್ತೆ ಬೇಬಿ ಸಗ್ಸ್ ಕೆಂಟುಕಿಯ ಉತ್ತರಕ್ಕಿರುವ ಸಿನ್ಸಿನಾಟಿ ಪ್ರದೇಶದಲ್ಲಿ ಗುಲಾಮಗಿರಿಯಿಂದ ಮುಕ್ತಳಾಗಿ ಬಾಳುವೆ ನಡೆಸುತ್ತಿದ್ದಾಳೆ.

ತನ್ನ ಮೂವರು ಮಕ್ಕಳನ್ನು ಅತ್ತೆಯ ಬಳಿ ತಲುಪಿಸಿ ನಾಲ್ಕನೆಯದನ್ನು ಬಸಿರಿನಲ್ಲಿ ಹೊತ್ತು ಹೊಲಗಳನ್ನು ಕತ್ತಲಿನಲ್ಲಿ ದಾಟುತ್ತ ಸೆಥಾ ಸಿನ್ಸಿನಾಟಿಯ ದಿಕ್ಕಿನಿಡೆಗೆ ಪ್ರಯಾಣ ಬೆಳೆಸುತ್ತಾಳೆ. ದಾರಿ ಮಧ್ಯದಲ್ಲೇ ನಾಲ್ಕನೆಯ ಮಗುವಾದ ಡೆನ್ವರಳನ್ನು ಹೆತ್ತು ಅತ್ತೆಯ ಮನೆ ಸೇರಿ ತನ್ನ ಗಂಡನ ಹಾದಿ ಕಾಯುತ್ತಾಳೆ. ಅವಳ ದುರಾದೃಷ್ಟಕ್ಕೆ ಅವನು ಎಂದಿಗೂ ಮರಳುವುದಿಲ್ಲ. ಅಷ್ಟರಲ್ಲಿ ಮಾಲಿಕ ಮತ್ತು ಅವನ ಕಡೆಯವರು ಇವಳ ಪತ್ತೆ ಹಚ್ಚಿ ಸೆಥಾಳನ್ನೂ ಆಕೆಯ ಮಕ್ಕಳನ್ನೂ ಪುನಃ ತಮ್ಮ ಪ್ಲಾಂಟೇಷನ್ನಿಗೆ ಕರೆದೊಯ್ಯಲು ಬರುತ್ತಾರೆ. ಅದನ್ನು ತಿಳಿದ ಸೆಥಾ ತನಗೆ ಬಂದ ಪಾಡು ತನ್ನ ಮಕ್ಕಳಿಗೂ ಬರಬಾರದೆಂದು ಅವರನ್ನು ಕೊಲ್ಲಲು ನಿರ್ಧರಿಸುತ್ತಾಳೆ. ದೊಡ್ಡವರಿಬ್ಬರು ಗಂಡು ಮಕ್ಕಳು ಅವಳಿಂದ ತಪ್ಪಿಸಿಕೊಳ್ಳುತ್ತಾರೆ. ಮೂರನೆಯ ಮಗು, ಎರಡು ವರ್ಷದ ಬಿಲವೆಡ್‌ಳ ಕತ್ತನ್ನು ಕತ್ತಿಯಿಂದ ಕುಯ್ದು ಸಾಯಿಸುತ್ತಾಳೆ. ನಾಲ್ಕನೆಯ ಮಗು ಡೆನ್ವರ್‌ಳನ್ನು ಸಾಯಿಸುವ ಮೊದಲು ಅವಳನ್ನು ಬಂಧಿಸಲಾಗುತ್ತದೆ.

“ಸಾವು ಗುಲಾಮಗಿರಿಗಿಂಥ ಸುರಕ್ಷಿತ” ಎನ್ನುವುದು ಸೆಥಾಳ ನಂಬಿಕೆ. ತನ್ನ ಒಂದು ಮಗುವನ್ನಾದರೂ ಈ ನರಕದಿಂದ ಪಾರು ಮಾಡಿದೆ ಎಂಬ ಸಮಾಧಾನ ಆಕೆಯದು. ಅವಳ ಈ ಕ್ರೌರ್ಯ ಕಂಡು ಮಾಲಿಕ ಈಕೆಯನ್ನು ತನ್ನ ಪ್ಲಾಂಟೇಷನ್ನಿಗೆ ಕರೆದೊಯ್ಯಲು ಹೆದರಿ ಪರಾರಿಯಾಗುತ್ತಾನೆ. ಸೆಥಾಳನ್ನು ಜೈಲಿಗೆ ಕಳಿಸಲಾಗುತ್ತದೆ, ಆಕೆಯ ಮೂರು ಮಕ್ಕಳು ಅಜ್ಜಿಯ ಜೊತೆ ಬೆಳೆಯುತ್ತಾರೆ.

ಬಿಲವೆಡ್ ಕಾದಂಬರಿ ಶುರುವಾಗುವುದೇ ಜೈಲಿನಿಂದ ಬಿಡುಗಡೆಯಾಗಿ ಬಂದ ಸೆಥಾ ತನ್ನ ಕೊನೆಯ ಮಗಳು ಹದಿನೆಂಟು ವರ್ಷದ ಡೆನ್ವರ್‌ಳೊಂದಿಗೆ ಸಿನ್ಸಿನಾಟಿಯ ಮನೆಯಲ್ಲಿ ವಾಸಿಸುವುದರ ಜೊತೆಗೆ. ಸಮೀಪದ ಹೊಟೇಲೊಂದರಲ್ಲಿ ಕೆಲಸ ಮಾಡುತ್ತ ಮನೆಯ ಖರ್ಚು ನಿಭಾಯಿಸುತ್ತಿದ್ದಾಳೆ. ಗಂಡು ಮಕ್ಕಳಿಬ್ಬರೂ ಮನೆಯಿಂದ ಓಡಿ ಹೋಗಿಯಾಗಿದೆ. ಕೆಂಟುಕಿಯ ಪ್ಲಾಂಟೇಷನ್ನಿನಲ್ಲಿ ತನ್ನೊಟ್ಟಿಗೆ ಕೆಲಸ ಮಾಡಿದ ಪಾಲ್‌ಡಿ ಎಂಬ ಸ್ನೇಹಿತನನ್ನು ಎದುರುಗೊಳ್ಳುತ್ತಲೇ ಸೆಥಾಳಿಗೆ ಹಿಂದಿನ ದಿನಗಳೆಲ್ಲ ಮರುಕಳಿಸಿವೆ.

ಆಗಲೇ ಆ ವಿಚಿತ್ರ ನಡೆಯುವುದು. ಒಂದು ರಾತ್ರಿ ಅಂಗಳದಲ್ಲಿ ಏನೋ ಸದ್ದು ಕೇಳಿ ಸೆಥಾ, ಪಾಲ್‌ಡಿ ಮತ್ತು ಡೆನ್ವರ್ ಬಾಗಿಲು ತೆರೆದರೆ ಅಲ್ಲಿ ಸುಮಾರು ಇಪ್ಪತ್ತು ವರ್ಷದ ಹುಡುಗಿಯೊಬ್ಬಳು ನಿಂತಿದ್ದಾಳೆ. ಅವಳ ವಸ್ತ್ರಗಳು, ಪಾದರಕ್ಷೆ ಎಲ್ಲ ಹೊಸತಾಗಿವೆ. ಅವಳು ಈ ಪ್ರದೇಶಕ್ಕೆ ಸೇರಿದವಳಲ್ಲ ಅಂತ ಅವು ಸಾರಿ ಹೇಳುತ್ತಿವೆ. “ಯಾರು?” ಎಂದು ಕೇಳಿದಾಗ “ನಾನು, ಬಿಲವೆಡ್” ಎನ್ನುತ್ತಾಳೆ. ಮಾತನಾಡುವಾಗ ಮುಂದೆ ಮೂವರಿದ್ದರೂ ಸೆಥಾಳನ್ನೇ ದುರುಗುಟ್ಟಿಕೊಂಡು ನೋಡುತ್ತಿದ್ದಾಳೆ. “ನೀರು, ನೀರು ಬೇಕು” ಅಂತ ಕೇಳಿ ಇಸಿದುಕೊಂಡು ಒಂದೇ ಉಸಿರಲ್ಲಿ ಇಡೀ ಬಾಂಡಲೆ ನೀರನ್ನು ಕುಡಿದು ಮುಗಿಸುತ್ತಾಳೆ. ಸೆಥಾಳಿಗೆ ಅದನ್ನು ಕಂಡು ಎಷ್ಟೋ ವರ್ಷಗಳ ಬಾಯಾರಿಕೆಯನ್ನು ನೀಗಿಸಿಕೊಳ್ಳುವಂತೆ ಆ ನೀರನ್ನು ಕುಡಿಯುತ್ತಿದ್ದಾಳಲ್ಲ ಈಕೆ ಅಂತನ್ನಿಸುತ್ತದೆ. ನೀರು ಕುಡಿದು ಮುಗಿಸಿದವಳೇ ಬಿಲವೆಡ್ ಮೂರ್ಛೆ ಹೋಗುತ್ತಾಳೆ.

ಸೆಥಾಳಿಗೆ ಈ ಹೊಸ ಅತಿಥಿಯನ್ನು ತನ್ನ ಬದುಕಿನಲ್ಲಿ ಹೇಗೆ ಬರಮಾಡಿಕೊಳ್ಳಬೇಕೆಂದೇ ತಿಳಿಯದು. ಬಿಲವೆಡ್ ಎಂಬ ಹೆಸರು ಹಾಗೆಲ್ಲ ಸಾಮಾನ್ಯವಲ್ಲ. ಅದನ್ನು ಈಕೆಗೆ ಇಟ್ಟಿದ್ದು ಯಾರು ಹಾಗಾದರೆ? ಇವಳು ಅವಳೇ ಇರಬಹುದೇ? ನಾನು ಕತ್ತು ಸೀಳಿ ಕೊಂದ ಮಗಳು? ನನ್ನ ಬಿಲವೆಡ್? ಅಥವಾ ಯಾರೋ ದಾರಿಹೋಕಳು? ಎಚ್ಚರಾದಕೂಡಲೆ ಎದ್ದು ನಡೆದು ಬಿಟ್ಟಾಳು.

“ಇವಳು, ಅವಳೇ ಇವಳು. ನನ್ನ ಮಗಳು. ನನಗಾಗಿ ಬಂದಿದ್ದಾಳೆ. ಇವಳೇ ಬಂದಿದ್ದಾಳೆ ಎಂದರೆ ಓಡಿಹೋದ ನನ್ನೆರಡು ಗಂಡುಮಕ್ಕಳೂ ಬರುತ್ತಾರೆ. ಮತ್ತೆ ನಾವೆಲ್ಲ ಒಟ್ಟಾಗಿ ಬಾಳುವೆ ಮಾಡುತ್ತೇವೆ” ಎಂದು ಕನಸು ಕಾಣಲು ತೊಡಗುತ್ತಾಳೆ. ಆ ಕನಸು ಮುಂದೆ ಮುಂದೆ ಹೋಗುತ್ತ ಭ್ರಮೆಯ ರೂಪ ಪಡೆಯುತ್ತದೆ.

ಆದರೆ ಮರುದಿನ ಮುಂಜಾನೆ ಬಿಲವೆಡ್‌ಳಿಗೆ ಎಚ್ಚರವಾದಾಗ ಅವಳೇನೂ ಅಲ್ಲಿಂದ ಹೋಗುವವಳಂತೆ ಕಾಣುವುದಿಲ್ಲ. ಸೆಥಾ ಕೂಡ ಅವಳನ್ನು ಹೋಗು ಎನ್ನುವುದಿಲ್ಲ. ಬಿಲವೆಡ್ , ಸೆಥಾಳನ್ನೇ ನೋಡುತ್ತ “ನಿನ್ನ ಹರಳಿನ ಕಿವಿಯೋಲೆ ಎಲ್ಲಿ ಹೋಯಿತು?” ಅಂತ ಕೇಳುತ್ತಾಳೆ. ಈ ಹದಿನೆಂಟು ವರ್ಷಗಳಲ್ಲಿ ಸೆಥಾ ಹರಳಿನ ಕಿವಿಯೋಲೆ ಧರಿಸಿಯೇ ಇಲ್ಲ. ಅವುಗಳನ್ನು ಕೆಂಟುಕಿಯ ಪ್ಲಾಂಟೇಷನ್ನಿನ ಮಾಲಿಕನ ಹೆಂಡತಿ ಸೆಥಾಳಿಗೆ ಉಡುಗೊರೆಯಾಗಿ ಕೊಟ್ಟಿದ್ದು. ಆಗ ಎರಡು ವರ್ಷದ ಬಿಲವೆಡ್ ಎದೆಹಾಲು ಕುಡಿಯುತ್ತ ಆ ಹರಳಿನ ಕಿವಿಯೋಲೆಯೊಂದಿಗೆ ಆಟವಾಡುತ್ತಿದ್ದಳು ಎಂಬುದು ಸೆಥಾಳಿಗೆ ನೆನಪಾಗುತ್ತದೆ.

“ಇವಳು, ಅವಳೇ ಇವಳು. ನನ್ನ ಮಗಳು. ನನಗಾಗಿ ಬಂದಿದ್ದಾಳೆ. ಇವಳೇ ಬಂದಿದ್ದಾಳೆ ಎಂದರೆ ಓಡಿಹೋದ ನನ್ನೆರಡು ಗಂಡುಮಕ್ಕಳೂ ಬರುತ್ತಾರೆ. ಮತ್ತೆ ನಾವೆಲ್ಲ ಒಟ್ಟಾಗಿ ಬಾಳುವೆ ಮಾಡುತ್ತೇವೆ” ಎಂದು ಕನಸು ಕಾಣಲು ತೊಡಗುತ್ತಾಳೆ. ಆ ಕನಸು ಮುಂದೆ ಮುಂದೆ ಹೋಗುತ್ತ ಭ್ರಮೆಯ ರೂಪ ಪಡೆಯುತ್ತದೆ. ಬಿಲವೆಡ್‌ಳ ಕತ್ತಿನ ಮೇಲಿನ ಗಾಯವನ್ನು ನೋಡಿ “ಅಯ್ಯೋ, ಬಹಳ ನೋವಾಯಿತೇ ನನ್ನ ಕಂದ” ಎನ್ನುತ್ತಾಳೆ. ದಿನವಿಡೀ ಬಿಲವೆಡ್‌ಳ ಸೇವೆ ಮಾಡುತ್ತಲೇ ಕಳೆದರೂ ಆಕೆಯ ಹರಿತ ನೋಟ, ಒರಟು ಮಾತು, ಸೆಥಾಳಲ್ಲಿ ಅಂತಃಸಾಕ್ಷಿಯನ್ನು ಕಲುಕಿದೆ.

ಇದು ಮಗಳು ಡೆನ್ವರ್‌ಳಲ್ಲಿ ಮತ್ತು ಊರ ಜನರಲ್ಲಿ ಸಂದೇಹ ಹುಟ್ಟಿಸಿದೆ. ಸತ್ತು ಹುಗಿದ ಮಗಳು ವಾಪಸ್ಸು ಬಂದಿದ್ದಾಳೆಂದರೆ ಅರ್ಥವೇನು? ಅದೂ ಮರಳಿದ್ದು ಆತ್ಮವಲ್ಲ, ಕೊಲೆಯಾದ ಸಮಯದಲ್ಲಿದ್ದಂತೆ ಪುಟ್ಟ ಬಾಲೆಯಲ್ಲ. ಆಕೆ ಬದುಕಿದ್ದರೆ ಎಷ್ಟಿರುತ್ತಿದ್ದಳೋ ಆ ಹರೆಯದವಳು. ಸೆಥಾಳ ಹಿಂದಿನ ಕಥೆ ಈ ಭಾಗದ ಜನರಿಗೆಲ್ಲ ಗೊತ್ತಿರುವ ಸಂಗತಿಯೇ. ಯಾರೋ ಬೇಕಂತಲೇ ಅವಳನ್ನು ಹೀಗೆ ಮೋಸ ಮಾಡುತ್ತಿರಬಹುದೇ ಎಂಬ ಸಂಶಯ ಅವರನ್ನೆಲ್ಲ ಕಾಡಿದೆ.

ಕಾದಂಬರಿಯುದ್ದಕ್ಕೂ ಸೆಥಾಳ ಮನಸ್ಥಿತಿ ಆಳವಾಗಿ ಚಿತ್ರಣಗೊಂಡಿದೆ. ಇಷ್ಟು ವರ್ಷ ಮರೆತೇ ಹೋಗಿದ್ದ, ಮಗಳನ್ನು ಕೊಂದ ಸುಪ್ತ ಪಾಪಪ್ರಜ್ಞೆ ಸಹೃದಯರನ್ನೂ ನಡುಗಿಸುವಷ್ಟು ಶಕ್ತವಾಗಿದೆ. ಅಂತಃಕರಣವನ್ನು ನಿಭಾಯಿಸಲು ಹೆಣಗುವ ಸೆಥಾ ಓದುಗರಲ್ಲೂ ಉಮ್ಮಳ ಉದ್ದೀಪಿಸುತ್ತಾಳೆ.

ತಮ್ಮ ಬರವಣಿಗೆಯ ಶೈಲಿಯ ಬಗ್ಗೆ ಮಾರಿಸನ್ ಒಂದು ಕಡೆಗೆ “ನನ್ನ ಮೊದಲ ಡ್ರಾಫ್ಟು ಬಹಳ ಕಠಿಣವಾಗಿರುತ್ತದೆ. ಆ ನಂತರ ಅದನ್ನು ನಾನೆಷ್ಟು ತಿದ್ದುತ್ತೇನೆಂದರೆ ಒಂದೇ ಸಿಟ್ಟಿಂಗಿನಲ್ಲಿ ಬರೆದಷ್ಟು ಸರಳವೆನಿಸಿರಬೇಕು, ಹಾಗೆ ಎಡಿಟ್ ಮಾಡುತ್ತೇನೆ” ಎನ್ನುತ್ತಾರೆ. ಅವರ ಕಾದಂಬರಿಗಳನ್ನು ಓದಿದಾಗ ಈ ಶೈಲಿಯ ಶಕ್ತಿಯ ಮತ್ತು ಟೋನಿ ಮಾರಿಸನ್‌ರ ದೈತ್ಯ ಪ್ರತಿಭೆಯ ಅರಿವಾಗುವುದು. ಅವರ ಕಾದಂಬರಿಗಳೆಲ್ಲ ಮಿಕ್ಕ ಮುಖ್ಯ ಬರಹಗಾರರ ಪುಸ್ತಕಗಳಿಗೆ ಹೋಲಿಸಿದರೆ, ತೀರ ಚಿಕ್ಕವು. ‘ಹೋಮ್’ ಎಂಬ ಕಾದಂಬರಿಯಂತೂ ನೂರೈವತ್ತು ಪುಟಗಳಷ್ಟು ಸಣ್ಣದು. ಆದರೆ ಪ್ರತಿಯೊಂದು ಸಾಲು ಕಡೆದಿಟ್ಟ ಶಿಲ್ಪದಂತಿರುತ್ತದೆ.

ಟೋನಿ ಮಾರಿಸನ್ ಕಾದಂಬರಿಗಳನ್ನು ಬರೆಯಲು ಶುರುಮಾಡುವ ಮೊದಲು ಪೆಂಗ್ವಿನ್ ಎಂಬ ಪಬ್ಲಿಷಿಂಗ್ ಕಂಪನಿಯಲ್ಲಿ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದರು. “ಚಿಕ್ಕ ವಯಸ್ಸಿನಲ್ಲೇ ಡಿವೋರ್ಸ್ ಆಗಿ ಇಬ್ಬರು ಮಕ್ಕಳನ್ನು ಒಂಟಿಯಾಗಿ ಬೆಳೆಸುವ ಪಣ ತೊಟ್ಟಿದ್ದೆ. ಮಕ್ಕಳು ರಾತ್ರಿ ಎಂಟು ಘಂಟೆಗೆಲ್ಲ ನಿದ್ದೆ ಹೋಗಿಬಿಡುತ್ತಿದ್ದರು. ಮರುದಿನ ಮುಂಜಾನೆಯ ಕೆಲಸಗಳು ಶುರುವಾಗುವ ತನಕ ದೀರ್ಘ ರಾತ್ರಿಗಳ ಏಕಾಂತದಲ್ಲಿ ಬರೆದದ್ದು ನಾನು ಮೊದಮೊದಲ ಕಾದಂಬರಿಗಳನ್ನು.”

“ಸಿಂಗಲ್ ಮದರ್ ಒಬ್ಬಳ ಆತಂಕ ಅದನ್ನು ಅನುಭವಿಸಿದವರಿಗೇ ಗೊತ್ತು. ಒಮ್ಮೆ ನಾನು ಮಾಡಬೇಕಾದ ಕೆಲಸಗಳ ಪಟ್ಟಿಗಳನ್ನು ಬರೆಯುತ್ತ ಹೋದೆ. ಅದೇ ಒಂದು ದೊಡ್ಡ ಲಿಸ್ಟ್ ಆಯಿತು. ಈ ಕೆಲಸಗಳನ್ನೆಲ್ಲ ಪೂರ್ಣವಾಗಿ ನಿರ್ವಹಿಸಲು ನನಗೆ ಇದೊಂದು ಜೀವನ ಸಾಲುವುದಿಲ್ಲ ಅನ್ನಿಸಿತು. ಆ ನಂತರ ಇನ್ನೊಂದು ಪುಟ ತಿರುಗಿಸಿ ನಾನು ನಿಜವಾಗಿ ಮಾಡಬೇಕಾಗಿರುವುದು ಏನು ಎಂದು ಕೇಳಿಕೊಂಡೆ. ಆಗ ನಾನು ಪಟ್ಟಿ ಮಾಡಿದ್ದು ಎರಡೇ ಅಂಶಗಳು. ಒಂದು- ನನ್ನ ಮಕ್ಕಳನ್ನು ಚೆನ್ನಾಗಿ ಬೆಳೆಸಬೇಕು, ಎರಡು- ಕಾದಂಬರಿಗಳನ್ನು ಬರೆಯಬೇಕು. ಹಾಗೆಂದುಕೊಂಡಿದ್ದೇ ಉಳಿದ ಎಲ್ಲ ಅಮೌಲಿಕ ವಿಷಯಗಳೂ ಹಿಂದೆ ಸರಿದು ಕೆಲಸದ ಮೇಲೆ ನನ್ನ ದೃಷ್ಟಿಯನ್ನು ಕೇಂದ್ರೀಕರಿಸಲು ಸಾಧ್ಯವಾಯಿತು” ಎನ್ನುತ್ತಾರೆ ಟೋನಿ.

ಬಿಲವೆಡ್ ಕಾದಂಬರಿಯ ಸೆಥಾಳ ಪಾತ್ರ ಮಾರ್ಗರೆಟ್ ಗಾರ್ನರ್ ಎಂಬ ಗುಲಾಮಳ ಸತ್ಯಕತೆಯಿಂದ ಸ್ಫೂರ್ತಿ ಪಡೆದದ್ದು. ಪೆಂಗ್ವಿನ್ ಕಂಪನಿಯಲ್ಲಿ ಟೋನಿ ಕೆಲಸ ಮಾಡುತ್ತಿದ್ದಾಗ “ದಿ ಬ್ಲಾಕ್ ಬುಕ್” ಎಂಬ ಪುಸ್ತಕವನ್ನು ಸಂಪಾದಿಸಿದ್ದರು. ಅಮೆರಿಕದಲ್ಲಿ ಗುಲಾಮಗಿರಿಯ ವಾಸ್ತವವನ್ನು ಚಿತ್ರಗಳ ಮೂಲಕ ಕಟ್ಟಿಕೊಡುವ ಯೋಜನೆಯಾಗಿತ್ತು ಅದು. ಆ ಪುಸ್ತಕಕ್ಕೆ ಬೇಕಾದ ಸಂಶೋಧನೆ ಮಾಡಿದಾಗ ತನ್ನ ಮಾಲಿಕರಿಂದ ತಪ್ಪಿಸಿಕೊಂಡು ಓಡುತ್ತಿದ್ದ ಮಾರ್ಗರೆಟ್ ಗಾರ್ನರ್ ಎಂಬಾಕೆ ನಂತರ ಸಿಕ್ಕಿಬಿದ್ದಾಗ ತನ್ನ ಮಕ್ಕಳನ್ನು ಗುಲಾಮಗಿರಿಗೆ ಮರಳಿಸುವ ಬದಲು ಅವರ ಕೊಲೆಗೆ ಯತ್ನಿಸಿ ಯಶಸ್ವಿಯೂ ಆಗುತ್ತಾಳೆ. ‘ಈ ಪ್ರವರವನ್ನು ಓದಿದಾಗ ಬಿಲವೆಡ್ ಕಾದಂಬರಿ ನನ್ನಲ್ಲಿ ಚಿಗುರೊಡೆಯಿತು’ ಅಂತ ಟೋನಿ ತಮ್ಮ ಮುನ್ನುಡಿಯಲ್ಲಿ ಹೇಳಿಕೊಂಡಿದ್ದಾರೆ.

ಕೇವಲ ಮುನ್ನೂರೇ ಪುಟಗಳ ಈ ಬಿಲವೆಡ್ ಕಾದಂಬರಿಯನ್ನು ಎಷ್ಟು ಬಾರಿ ಓದಿ ಎತ್ತಿಟ್ಟಿದ್ದರೂ ಮತ್ತೆ ಹೊಸತಾಗಿ ತೆರೆದಾಗ ನೂತನ ವಿವರಗಳು, ಒಳನೋಟಗಳು ಮನಸ್ಸಿನ ಕಣ್ಣಿಗೆ ಬೀಳುತ್ತಲೇ ಇರುತ್ತವೆ. ಒಂದು ಮಹಾಕಾವ್ಯವನ್ನು ಓದಿದ ಅನುಭವ ಕೊಡುತ್ತದೆ. ಆದರೆ ಈ ಮಹಾಕಾವ್ಯದಲ್ಲಿ ಗುಂಡಿಗೆ ಬಡಿದು ಪೌರುಷ ಪ್ರದರ್ಶಿಸುವ ಪರಾಕ್ರಮಿಗಳಿಲ್ಲ, ಕಲ್ಪಿತ ವಿವರಗಳನ್ನು ವಾಸ್ತವವೆಂದು ಪ್ರತಿಪಾದಿಸಿ ಪಾತಿವ್ರತ್ಯದ ಬಗೆಗೆ ಯಾರೂ ಉದ್ದುದ್ದ ಭಾಷಣ ಬಿಗಿಯುವುದಿಲ್ಲ. ಇಲ್ಲಿರುವುದು ಮನುಷ್ಯ ಪ್ರಪಂಚದ ಅತಿ ಪುರಾತನ ಸತ್ಯವಾದ ತಾಯಿ- ಮಗುವಿನ ವಾತ್ಸಲ್ಯದ ಕಥೆ. ಆ ಸಂಬಂಧದ ಕೊಂಡಿ ಒಮ್ಮೆ ಕಳಚಿಹೋದಾಗ ಗಾಳಿಯಲ್ಲಿ ತಪ್ಪಿಹೋದ ಹಗ್ಗದ ಅಂಚುಗಳನ್ನು ಪ್ರಯಾಸದಲ್ಲಿ ಹುಡುಕಿ ಮತ್ತೆ ಸೇರಿಸುವ ಪಾಡು ಸುಲಭವಾದುದಲ್ಲ.


ಕಲ್ಪಿತ ಪರಾಕ್ರಮ ವೈಭವಿಸುವ ವೀರ ಕಥನಗಳಿಗೆ ಸವಾಲು ಹಾಕಬಹುದೇನೋ, ಆದರೆ ವಾಸ್ತವದ ಹೋರಾಟಗಳ ಹೃದ್ಯ ಚಿತ್ರಣಕ್ಕೆ ಹೇಗೆ ತಲೆದೂಗದೇ ಇರುವುದು?