ಒಮ್ಮೆ ನಿಕ್‌ನ ಉಪಸ್ಥಿತಿಯಲ್ಲೇ ಗ್ಯಾಟ್ಸ್‌ಬಿ ಮತ್ತು ಡೇಸಿ ಟಾಮ್‌ನೊಂದಿಗೆ ಮಾತಿನ ಚಕಮಕಿ ನಡೆಸಿ ಕಾರನ್ನು ಡ್ರೈವ್ ಮಾಡಿಕೊಂಡು ಹೊರಟುಬಿಡುತ್ತಾರೆ. ಆ ಕಾರು ರಸ್ತೆಯಲ್ಲಿ ಹೊರಟ ಹೆಂಗಸೊಬ್ಬಳಿಗೆ ಢಿಕ್ಕಿ ಹೊಡೆದು ಆಕೆ ಸ್ಥಳದಲ್ಲಿ ಮೃತಪಡುತ್ತಾಳೆ. ಎಫ್ ಸ್ಕಾಟ್ ಫಿಡ್ಜರಾಲ್ಡ್ ಇಪ್ಪತ್ತನೆಯ ಶತಮಾನದ ಕಾದಂಬರಿಕಾರರಲ್ಲಿ ಬಹುಮುಖ್ಯ ಹೆಸರು. ಅವರ ‘ದಿ ಗ್ರೇಟ್ ಗ್ಯಾಟ್ಸ್‌ಬಿ’ ಕಾದಂಬರಿ ಇಂದಿಗೂ ಗ್ರೇಟ್ ಅಮೆರಿಕನ್ ನಾವೆಲ್ ಎಂದು ಪ್ರಸಿದ್ಧವಾಗಿದೆ. ವಿಭಿನ್ನ ಚಿತ್ರಾಕೃತಿಯ ಈ ಕಾದಂಬರಿಯ ಕುರಿತು ಈ ಬಾರಿಯ ಅಂಕಣದಲ್ಲಿ ಕಾವ್ಯಾ ಕಡಮೆ ದಾಖಲಿಸಿದ್ದಾರೆ.

 

ಅಮೆರಿಕದಲ್ಲಿ ಪ್ರಕಟವಾಗುವ ಪುಸ್ತಕಗಳಲ್ಲಿ ಕೆಲವೇ ಕೆಲವು ಕಾದಂಬರಿಗಳು ಗ್ರೇಟ್ ಅಮೆರಿಕನ್ ನಾವೆಲ್ ಎಂಬ ಬಿರುದಿಗೆ ಪಾತ್ರವಾಗಿವೆ. ಈ ಮನ್ನಣೆಯನ್ನು ಯಾವುದೋ ಸಂಸ್ಥೆ ಕೊಡುವುದಲ್ಲ. ಪ್ರಕಟವಾಗಿ ವರ್ಷಗಳು ಕಳೆದ ಮೇಲೆ ಒಂದು ಕೃತಿ ಜನಮಾನಸದಲ್ಲಿ ಬೆರೆತುಹೋಗಿ ‘ಕ್ಲಾಸಿಕ್’ ಎನ್ನಿಸಿಕೊಂಡು ನಾಡಿನ ಮತ್ತದರ ಜನರ ಮೌಲ್ಯಗಳನ್ನೂ, ಸಂಸ್ಕೃತಿ- ಮನೋಗುಣಗಳನ್ನೂ ಆಳವಾಗಿ ಬಿಂಬಿಸುತ್ತದೆ ಎಂದಾಗ ಅಂಥ ಬರಹ ಗ್ರೇಟ್ ಅಮೆರಿಕನ್ ನಾವೆಲ್ ಅನ್ನಿಸಿಕೊಳ್ಳುತ್ತದೆ. ಹರ್ಮನ್ ಮೆಲ್ವಿಲ್ ಬರೆದ ಮೋಬಿ ಡಿಕ್, ವಿಲಿಯಮ್ ಫಾಕ್ನ್‌ರ್‌ ಬರೆದ ಅಬ್ಸಲಾಮ್ ಅಬ್ಸಲಾಮ್!, ನಬಕೋವ್‌ರ ಲೋಲಿಟಾ, ಹಾರ್ಪಪ್ ಲೀ ಬರೆದ ಟು ಕಿಲ್ ಅ ಮಾಕಿಂಗ್ ಬರ್ಡ್, ಟೋನಿ ಮಾರಿಸನ್‌ರ ಬಿಲವೆಡ್ ಈ ವರ್ಗದಲ್ಲಿ ಮುಖ್ಯ ಹೆಸರುಗಳು.

ಅಂಥದೇ ಇನ್ನೊಂದು ಪ್ರಮುಖ ಹೆಸರು ಎಫ್ ಸ್ಕಾಟ್ ಫಿಡ್ಜರಾಲ್ಡ್ ಬರೆದ ದಿ ಗ್ರೇಟ್ ಗ್ಯಾಟ್ಸ್‌ಬಿ. ಈ ಪುಸ್ತಕ ಪ್ರಕಟವಾಗಿದ್ದು 1925ರಲ್ಲಿ. ಇನ್ನೂರು ಪುಟಗಳ ಒಳಗೇ ಇರುವ ಈ ಕಾದಂಬರಿಯಲ್ಲಿ ಫಿಡ್ಜರಾಲ್ಡ್ ಆಗಷ್ಟೇ ಮುನ್ನಲೆಗೆ ಬಂದಿದ್ದ ‘ಲೆಸ್ ಈಸ್ ಮೋರ್’ ಶೈಲಿಯನ್ನೇ ಆಯ್ದುಕೊಳ್ಳುತ್ತಾರೆ. ಐದಾರೇ ಪಾತ್ರಗಳನ್ನಿಟ್ಟುಕೊಂಡು ಒಂದು ಕಾಲದ ಅಮೆರಿಕಾದ ಮೇಲ್ವರ್ಗದ ಜನರ ಜೀವನದ ವೈಭವದ ದರ್ಶನ ಕಾಣಿಸುತ್ತಾರೆ. ಇಡೀ ಕಥೆ ನಡೆಯುವುದು ನ್ಯೂಯಾರ್ಕ್ ರಾಜ್ಯಕ್ಕೆ ಅಂಟಿಕೊಂಡಿರುವ ಲಾಂಗ್ ಐಲ್ಯಾಂಡ್ ಎಂಬ ದ್ವೀಪದಲ್ಲಿ.

ಈ ಕಾದಂಬರಿಯನ್ನು ಓದುವ ಮೊದಲು ಅಮೆರಿಕಾ ಹಾಯ್ದು ಬಂದ ಎರಡು ಐತಿಹಾಸಿಕ ಮೈಲಿಗಲ್ಲುಗಳನ್ನು ಇಲ್ಲಿ ಸ್ಮರಿಸಲೇಬೇಕು. ಅಂದರೇ ಇಲ್ಲಿನ ಪಾತ್ರಗಳನ್ನೂ, ಸನ್ನಿವೇಶಗಳನ್ನೂ ವಿವರವಾಗಿ ಅರ್ಥೈಸಲು ಸಾಧ್ಯವೇನೋ. ಅಮೆರಿಕದಲ್ಲಿ 1920ನೇ ಇಸವಿಯಿಂದ 1933ರ ತನಕ ಎಲ್ಲ ಬಗೆಯ ಮದ್ಯದ ಮೇಲೆ ಸರ್ಕಾರ ನಿಷೇಧ ಹೇರಿತ್ತು. ಈ ವರ್ಷಗಳಿಗೆ ‘ಪ್ರೊಹಿಬಿಷನ್ ಎರಾ’ ಎಂದು ಹೆಸರು. ಹೀಗೆ ನಿಷೇಧವಿತ್ತು ಎಂದ ಮಾತ್ರಕ್ಕೆ ಜನ ಕುಡಿಯುವುದನ್ನೇನೋ ಕಡಿಮೆ ಮಾಡಿರಲಿಲ್ಲ. ಮದ್ಯದ ಕಳ್ಳ ಸಾಗಾಣಿಕೆ, ಲಂಚ ವಿಪರೀತವಾಗಿತ್ತು. ಹೀಗೆ ಕಳ್ಳತನದಲ್ಲಿ ಮದ್ಯ ಸಾಗಿಸುವ ‘ಬೂಟ್‌ಲೆಗ್ಗರ್’ಗಳು ದಿಢೀರ್ ಶ್ರೀಮಂತರಾದರು. ಅಜ್ಜ- ಮುತ್ತಜ್ಜನ ಕಾಲದಿಂದಲೂ ಸಿರಿವಂತರಾಗಿದ್ದವರಿಗೆ ಈ ಹಠಾತ್ ಐಶ್ವರ್ಯವಂತರ ಕುರಿತು ಜಿಗುಪ್ಸೆ ಹುಟ್ಟಿತ್ತು.

(ಎಫ್ ಸ್ಕಾಟ್ ಫಿಡ್ಜರಾಲ್ಡ್)

ಆ ಕಾಲದಲ್ಲಿ ಅಮೆರಿಕದಲ್ಲಾದ ಇನ್ನೊಂದು ಚಾರಿತ್ರಿಕ ಬದಲಾವಣೆಯೆಂದರೆ ಸಂವಿಧಾನದ ಹತ್ತೊಂಬತ್ತನೆಯ ತಿದ್ದುಪಡಿಯ ಪ್ರಕಾರ 1920ನೇ ಇಸವಿಯಿಂದ ಮಹಿಳೆಯರಿಗೂ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ದೊರಕಿತು. ಈ ಮೂಲಭೂತ ಬದಲಾವಣೆಯಿಂದ ದೇಶದ ಮಹಿಳೆಯರಲ್ಲಿ ಹೊಸ ಚೈತನ್ಯ ಉಕ್ಕಿತು. ಸಮಾನತೆ ಸಾಧಿಸುವಲ್ಲಿ ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದು ನಡೆ- ನುಡಿಗಳಲ್ಲಿ, ಸೂಕ್ಷ್ಮವಾಗಿ ಬದಲಾದ ವ್ಯಕ್ತಿತ್ವಗಳಲ್ಲಿ ಹೊಮ್ಮುತ್ತಿತ್ತು. ವ್ಯಕ್ತಿ ಸ್ವಾತಂತ್ರ್ಯವು ಹಿಂದೆಂದೂ ಕಾಣದಷ್ಟು ವಿಭಿನ್ನವಾಗಿ ನಳನಳಿಸಿದ ಈ ಕಾಲಕ್ಕೆ ‘ಜಾಝ್ ಏಜ್’ ಎಂದು ಕರೆದರು.

ದಿ ಗ್ರೇಟ್ ಗ್ಯಾಟ್ಸ್‌ಬಿ ಕಾದಂಬರಿ ಅರಳುವುದು ಇಂಥದೇ ಜಾಝ್ ಯುಗದಲ್ಲಿ. ವಾದ್ಯವೃಂದದವರೆಲ್ಲ ಪ್ರತ್ಯೇಕವಾಗಿ ನುಡಿಸುತ್ತಲೇ ಒಟ್ಟಾಗಿ ಕೇಳಿದಾಗ ಒಂದು ವಿಶಿಷ್ಟ, ಸಮಗ್ರ ಅನುಭೂತಿಯನ್ನು ನೀಡುವ ಸಂಗೀತಕ್ಕೆ ‘ಜಾಝ್’ ಎನ್ನುತ್ತಾರೆ. ಈ ಬಗೆಯ ಸಂಗೀತ 1920ರ ಸಮಯದಲ್ಲಿ ಲೋಕಪ್ರಿಯವಾಗಿತ್ತು. ಕಾದಂಬರಿಯ ನಿರೂಪಕ ನಿಕ್ ಕ್ಯಾರವೇ ಬಾಂಡ್‌ಗಳ ಮಾರಾಟಗಾರ. ಲಾಂಗ್ ಐಲ್ಯಾಂಡಿನ ಪಶ್ಚಿಮ ದಿಕ್ಕಿಗಿರುವ ಒಂದು ಮನೆಯಲ್ಲಿ ಬಾಡಿಗೆಗಿರುತ್ತಾನೆ. ಅವನ ಮನೆಯ ಪಕ್ಕ ಜೇ ಗ್ಯಾಟ್ಸ್‌ಬಿ ಎಂಬ ವ್ಯಕ್ತಿಗೆ ಸೇರಿದ ಪುರಾತನ ಬಂಗಲೆಯಿದೆ. ಈ ಪ್ರಾಂತ್ಯದಲ್ಲೆಲ್ಲ ಬೃಹತ್ತಾದ ಪಾರ್ಟಿಗಳನ್ನು ಆಯೋಜಿಸುತ್ತಾನೆ ಎಂದು ಹೆಸರಾದ ಈ ನಿಗೂಢ ಮನುಷ್ಯನ ಬಗ್ಗೆ ನಿಕ್‌ನಿಗೆ ಕುತೂಹಲ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಕಲಿತು ಬಂದಿದ್ದಾನೆ ಎಂದು ಎಲ್ಲರ ಹಾಗೆ ನಿಕ್‌ನಿಗೂ ಗ್ಯಾಟ್ಸ್‌ಬಿಯ ಕುರಿತು ಗೌರವ. ಆದರೆ ಒಮ್ಮೆಯೂ ಆತನನ್ನು ಭೇಟಿಯಾಗುವ ಸಂದರ್ಭ ಒದಗಿ ಬಂದಿರುವುದಿಲ್ಲ.

ನಿಕ್‌ನಿಗೆ ಲಾಂಗ್ ಐಲ್ಯಾಂಡಿನಲ್ಲೇ ಇರುವ ತನ್ನ ದೂರದ ಸಂಬಂಧಿ ಡೇಸಿ ಮತ್ತವಳ ಗಂಡ ಟಾಮ್‌ನೊಂದಿಗೆ ನಿಕಟ ಒಡನಾಟವಿರುತ್ತದೆ. ಅವರಿಂದಲೇ ಪರಿಚಯವಾದ ಜಾರ್ಡನ್ ಬೇಕರ್ ಎಂಬ ಗಾಲ್ಫ್ ತಾರೆಯ ಪರಿಚಯವೂ ಆಗುತ್ತದೆ. ಡೇಸಿಯ ಗಂಡ ಟಾಮ್‌ನಿಗೆ ಮಾರ್ಟೆಲ್ ಎಂಬ ಮಹಿಳೆಯ ಜೊತೆ ವಿವಾಹೇತರ ಸಂಬಂಧವಿರುವುದು ಜಾರ್ಡನ್‌ಳಿಂದ ತಿಳಿದುಬರುತ್ತದೆ. ಈ ಮಾರ್ಟೆಲ್ ಜಾರ್ಜ್ ವಿಲ್ಸನ್ ಎಂಬ ಕಾರ್ಮಿಕನ ಹೆಂಡತಿ. ಇವಿಷ್ಟು ಕಾದಂಬರಿಯ ಮುಖ್ಯ ಪಾತ್ರಗಳು.

ಹೀಗಿದ್ದಾಗ ಒಮ್ಮೆ ನಿಕ್‌ನಿಗೆ ಗ್ಯಾಟ್ಸ್‌ಬಿಯ ಮನೆಯಿಂದ ಪಾರ್ಟಿಯೊಂದಕ್ಕೆ ಆಮಂತ್ರಣ ಬರುತ್ತದೆ. ಪಾರ್ಟಿಯಲ್ಲಿ ಸಿಕ್ಕ ಒಬ್ಬ ಉತ್ಸಾಹಿ ಯುವಕನೊಬ್ಬನ ಜೊತೆ ಮಾತನಾಡುತ್ತ ನಂತರ ಅವನೇ ಜೇ ಗ್ಯಾಟ್ಸ್‌ಬಿ ಎಂದು ತಿಳಿದು ನಿಕ್ ಚಕಿತನಾಗಿದ್ದಾನೆ. ಎಲ್ಲರನ್ನೂ ಆತ್ಮೀಯವಾಗಿ “ಓಲ್ಡ್ ಸ್ಪೋರ್ಟ್” ಎಂದು ಕರೆಯುತ್ತ ಲವಲವಿಕೆಯಿಂದ ಓಡಾಡುವ ಗ್ಯಾಟ್ಸ್‌ಬಿಯ ಬಗ್ಗೆ ನಿಕ್‌ನಿಗೆ ಅಭಿಮಾನವಾಗುತ್ತದೆ. ಆದರೆ ಅವನ ದಿಢೀರ್ ಶ್ರೀಮಂತಿಕೆಯ ಬಗ್ಗೆ ಈಗಾಗಲೇ ಲಾಂಗ್ ಐಲ್ಯಾಂಡಿನ ಮೇಲ್ವರ್ಗದವರಲ್ಲಿ ಗುಮಾನಿ ಉಂಟಾಗಿದೆ. ಅವನೊಬ್ಬ ಬೂಟ್‌ಲೆಗ್ಗರ್ ಇರಬಹುದು ಎಂಬ ಸಂಶಯವೂ ಗುಟ್ಟಿನ ಮಾತುಕತೆಗಳಲ್ಲಿ ತಲೆದೂರಿದೆ. ಗ್ಯಾಟ್ಸ್‌ಬಿಯ ವ್ಯಕ್ತಿತ್ವದ ಇನ್ನೊಂದು ಮಗ್ಗುಲನ್ನು ಪರಿಶೀಲಿಸಲು ನಿಕ್‌ನಿಗೆ ಕುತೂಹಲ ಉಂಟಾಗಿದೆ.

ಆದರೆ ನಿಕ್ ಹೆಚ್ಚೇನೂ ಮಾಹಿತಿಗಾಗಿ ತಡಕಾಡಬೇಕಾಗುವುದಿಲ್ಲ. ಗ್ಯಾಟ್ಸ್‌ಬಿಯೇ ನಿಕ್‌ನಿಗೆ ತನ್ನ ಕಥೆ ಹೇಳಿಕೊಳ್ಳುತ್ತಾನೆ. ಒಂದಿಷ್ಟು ವಿವರಗಳನ್ನು ತಿಳಿಸಲು ಇಬ್ಬರಿಗೂ ಸ್ನೇಹಿತೆಯಾದ ಜಾರ್ಡನ್ ಬೇಕರಳ ಸಹಾಯವನ್ನೂ ತೆಗೆದುಕೊಳ್ಳುತ್ತಾನೆ. ಅವರಿಬ್ಬರ ಮಾತುಗಳಿಂದ ನಿಕ್‌ನಿಗೆ ಚದುರಿದ ಮಾಹಿತಿಯನ್ನೆಲ್ಲ ಒಂದೇ ಕಥೆಯಲ್ಲಿ ಪೋಣಿಸುವುದು ಸಾಧ್ಯವಾಗುತ್ತದೆ.

ಐದಾರೇ ವರ್ಷಗಳ ಹಿಂದೆ ಗ್ಯಾಟ್ಸ್‌ಬಿ ಒಬ್ಬ ಸಾಮಾನ್ಯ ಸಿಪಾಯಿ. ಡೇಸಿಯ ಸೌಂದರ್ಯಕ್ಕೆ ಮರುಳಾದವನು. ಅವನು ಹಣವಂತನಲ್ಲವೆಂದೂ ಸಮಾಜದ ಮೇಲ್ವರ್ಗಕ್ಕೆ ಸೇರಿದವನಲ್ಲವೆಂದೂ ಡೇಸಿ ಅವನನ್ನು ವರಿಸಲು ಒಪ್ಪುವುದಿಲ್ಲ. ಹೀಗಾಗಿ ಗ್ಯಾಟ್ಸ್‌ಬಿ ತನ್ನ ವ್ಯಕ್ತಿತ್ವವನ್ನೇ ಬದಲಿಸಿಕೊಳ್ಳುತ್ತಾನೆ. ತನಗೊದಗಿದ ದಿಢೀರ್ ನಿಧಿಯ ಮೂಲದ ಗುಟ್ಟನ್ನು ಮಾತ್ರ ತಪ್ಪಿಯೂ ಬಿಟ್ಟುಕೊಡುವುದಿಲ್ಲ. ಇಷ್ಟಪಟ್ಟವಳಿಗಾಗಿ ತನ್ನ ಚರಿತ್ರೆಯನ್ನು ತಾನೇ ಹೊಸದಾಗಿ ಬರೆದುಕೊಂಡಿದ್ದಾನೆ.

ನಿಷೇಧವಿತ್ತು ಎಂದ ಮಾತ್ರಕ್ಕೆ ಜನ ಕುಡಿಯುವುದನ್ನೇನೋ ಕಡಿಮೆ ಮಾಡಿರಲಿಲ್ಲ. ಮದ್ಯದ ಕಳ್ಳ ಸಾಗಾಣಿಕೆ, ಲಂಚ ವಿಪರೀತವಾಗಿತ್ತು. ಹೀಗೆ ಕಳ್ಳತನದಲ್ಲಿ ಮದ್ಯ ಸಾಗಿಸುವ ‘ಬೂಟ್‌ಲೆಗ್ಗರ್’ಗಳು ದಿಢೀರ್ ಶ್ರೀಮಂತರಾದರು.

ಒಮ್ಮೆ ನಿಕ್ ಗ್ಯಾಟ್ಸ್‌ಬಿಯ ಒತ್ತಾಯದ ಮೇರೆಗೆ ಡೇಸಿಯನ್ನು ಮನೆಗೆ ಕರೆದು ಅವರಿಬ್ಬರಿಗೂ ಏಕಾಂತ ಒದಗಿಸಿ ಕೊಡುತ್ತಾನೆ. ನಂತರ ಗ್ಯಾಟ್ಸ್‌ಬಿಯ ಮನೆಯನ್ನು ಮೊದಲ ಬಾರಿಗೆ ನೋಡಿದಾಗ ಮೂಲೆಯಲ್ಲೆಲ್ಲ ಧೂಳಾಗಿರುವುನ್ನು ನಿಕ್ ಸೂಕ್ಷ್ಮವಾಗಿ ಗಮನಿಸುತ್ತಾನೆ. ತನ್ನ ಕಪಾಟಿನಲ್ಲಿ ಮಡಿಸಿಟ್ಟ ದುಬಾರಿ ಶರ್ಟುಗಳನ್ನು ಗ್ಯಾಟ್ಸ್‌ಬಿ ಡೇಸಿಯ ಮುಂದೆ ತೆರೆತೆರೆದು ಎಸೆಯುವುದು, ಅದಕ್ಕೆ ಉತ್ತರವಾಗಿ ಡೇಸಿಯ ಮುಖ ಅರಳುವುದು ಎಲ್ಲ ಕಾಣಿಸುವ ಚಿತ್ರಕ್ಕಿಂಥ ಬೇರೆಯದೇ ಎಳೆಗಳನ್ನು ನಿಕ್‌ನಿಗೆ ಸೂಚಿಸುತ್ತವೆ.

ಒಮ್ಮೆ ನಿಕ್‌ನ ಉಪಸ್ಥಿತಿಯಲ್ಲೇ ಗ್ಯಾಟ್ಸ್‌ಬಿ ಮತ್ತು ಡೇಸಿ ಟಾಮ್‌ನೊಂದಿಗೆ ಮಾತಿನ ಚಕಮಕಿ ನಡೆಸಿ ಕಾರನ್ನು ಡ್ರೈವ್ ಮಾಡಿಕೊಂಡು ಹೊರಟುಬಿಡುತ್ತಾರೆ. ಆ ಕಾರು ರಸ್ತೆಯಲ್ಲಿ ಹೊರಟ ಹೆಂಗಸೊಬ್ಬಳಿಗೆ ಢಿಕ್ಕಿ ಹೊಡೆದು ಆಕೆ ಸ್ಥಳದಲ್ಲಿ ಮೃತಪಡುತ್ತಾಳೆ. ಆ ಹೆಂಗಸು ಇನ್ನ್ಯಾರೂ ಅಲ್ಲ, ಟಾಮ್‌ನ ಪ್ರೇಯಸಿ ಮಾರ್ಟೆಲ್!

ಒಂದು ಸಾವು ಹೇಗೆಲ್ಲ ಸುತ್ತಲಿನವರ ಬದುಕನ್ನು ಬದಲಿಸಬಹುದು, ಅವರ ಇಲ್ಲಿನ ತನಕದ ನಂಬಿಕೆಗಳನ್ನು ಧ್ವಂಸಗೊಳಿಸಬಹುದು ಎಂಬುದು ಬೇರೆ ಬೇರೆ ಕೋನಗಳಲ್ಲಿ ಚಿತ್ರಿತವಾಗಿದೆ. ಮಾರ್ಟೆಲ್‌ಳನ್ನು ಕೊಂದಿದ್ದು ಗ್ಯಾಟ್ಸ್‌ಬಿಯ ಕಾರು, ಓಡಿಸುತ್ತಿದ್ದುದು ಡೇಸಿ. ಸತ್ತ ಮಾರ್ಟೆಲ್ ಡೇಸಿಯ ಗಂಡ ಟಾಮ್‌ನ ಪ್ರೇಯಸಿ. ಈ ಅಪಘಾತ ಆಕಸ್ಮಿಕವಾಗಿದ್ದರೂ ಅದರ ಹಿಂದೆ ಕಾಣದ ಎಳೆಗಳು ಕೆಲಸ ಮಾಡಿವೆಯೇ? ಮಾರ್ಟೆಲ್ಲಳ ಸಾವಿನಿಂದಾಗಿ ಕಥೆಯ ಗತಿಯೇ ಬದಲಾಗಿಬಿಡುತ್ತದೆ. ಡೇಸಿ ಮತ್ತು ಟಾಮ್‌ರ ನಿಜವಾದ ಮುಖ ಅನಾವರಣಗೊಳ್ಳುತ್ತದೆ. ಗ್ಯಾಟ್ಸ್‌ಬಿ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಕುಣಿದು ಹೋಗುತ್ತಿದ್ದ ನೂರಾರು ಜನ ಅವನ ಬಗ್ಗೆ ಎಂಥ ಅಭಿಪ್ರಾಯ ಇಟ್ಟುಕೊಂಡಿದ್ದರು ಎಂಬುದು ಇನ್ನೊಂದು ಆಯಾಮದಲ್ಲಿ ಕಾಣಲು ಸಾಧ್ಯವಾಗುತ್ತದೆ.

‘ದಿ ಗ್ರೇಟ್ ಗ್ಯಾಟ್ಸ್‌ಬಿ’ ಕಥೆಯನ್ನು ಮೂರು ಬಾರಿ ಹಾಲಿವುಡ್ ನಿರ್ದೇಶಕರು ಸಿನಿಮಾಕ್ಕೆ ಅಳವಡಿಸಿದ್ದಾರೆ. ಒಂದೆರಡು ಬ್ರಾಡ್‌ವೇ ನಾಟಕ ಪ್ರದರ್ಶನಗಳೂ ಆಗಿವೆ. ಇಷ್ಟದ ಪುಸ್ತಕವನ್ನು ದೃಶ್ಯಮಾಧ್ಯಮಕ್ಕೆ ಅಳವಡಿಸಿದಾಗ ಆ ಚಿತ್ರವನ್ನು ವೀಕ್ಷಿಸುವ ಆಸೆಯನ್ನು ನಿಯಂತ್ರಿಸಿಕೊಳ್ಳುವುದು ಸುಲಭವಲ್ಲ. ಆದರೂ ಅವುಗಳಿಂದ ದೂರ ಉಳಿಯುವುದೇ ಸೂಕ್ತವೇನೋ. ಅದೇಕೋ ಎಂಥದೇ ಪ್ರತಿಭಾವಂತ ನಿರ್ದೇಶಕರ ಕೈಯಲ್ಲಿ ಅರಳಿದ ಸಿನಿಮಾ ಕೂಡ ಪುಸ್ತಕ ಕೊಟ್ಟ ಸಮಗ್ರತೆಯನ್ನು ಕೊಡುವುದಿಲ್ಲ ಎಂದು ಅನುಭವದಿಂದ ಕಲಿತಿದ್ದೇನೆ. ನಮ್ಮದೇ ಕಾನೂರು ಹೆಗ್ಗಡತಿಯೋ, ಕಿರಯೂರಿನ ಗೈಯ್ಯಾಳಿಗಳೋ ಸಿನಿಮಾ ಆದಾಗಲೂ ಅದೇ ಅನುಭವವಾಗಿದೆ. ಸಿನಿಮಾ ಆಗಿ ಅತ್ಯುತ್ತಮ ಎನ್ನಿಸಿಕೊಂಡಿದ್ದೂ ಮೂಲ ಕೃತಿ ತೆರೆದು ನೋಡಿದರೆ ನಿರಾಸೆ ಮೂಡಿಸುತ್ತದೆ. ಎಲ್ಲ ಮಾಧ್ಯಮಗಳಂತೆ ದೃಶ್ಯ ಮಾಧ್ಯಮಕ್ಕೂ ಅದರದೇ ಆದ ಮಿತಿಗಳಿರುತ್ತವಲ್ಲ, ಆ ಕಾರಣವಾಗಿ ಹಾಗನಿಸುತ್ತದೋ ಏನೋ.

ದೃಶ್ಯ ಮಾಧ್ಯಮದ ಬಗ್ಗೆ ಇರುವ ಇನ್ನೊಂದು ಫಿರ್ಯಾದೆಂದರೆ ಕೃತಿಯೊಂದು ಸಿನಿಮಾ ಆದಾಗ ಎಲ್ಲ ಪಾತ್ರಗಳಿಗೂ ಒಂದೊಂದು ಸ್ಪಷ್ಟ ಚಹರೆ ದೊರೆತು ಬಿಡುತ್ತದೆ. ಬೀದಿಗಳು, ಮನೆಗಳು, ಒಳಾಂಗಣ ವಿನ್ಯಾಸ, ವಸ್ತ್ರ ವಿನ್ಯಾಸ ಎಲ್ಲವೂ ನಿಜವಾಗಿಬಿಡುತ್ತವೆ. ಆದರೆ ಕೃತಿ ಓದುವಾಗ ಹಾಗಾಗುವುದಿಲ್ಲ. ಗ್ಯಾಟ್ಸ್‌ಬಿಯ ಒಂದು ಸ್ಥೂಲ ಚಿತ್ರವಷ್ಟೇ ತಲೆಯಲ್ಲಿ ಹುಟ್ಟಿ ಆ ಪಾತ್ರ ಮನಸ್ಸಿನಲ್ಲೂ ಬೆಳೆಯತೊಡಗುತ್ತದೆ. ಮರು ಓದಿಗೆ ಬದಲಾಗುತ್ತ ಸಾಗುತ್ತದೆ. ಆದರೆ ಗ್ಯಾಟ್ಸ್‌ಬಿಯ ಪಾತ್ರವನ್ನು ಟೈಟಾನಿಕ್ ಖ್ಯಾತಿಯ ನಟ ಲಿಯನಾರ್ಡೋ ಡಿ ಕ್ಯಾಪ್ರಿಯೋ ನಿರ್ವಹಿಸಿದ್ದಾರೆ ಎಂದು ಗೊತ್ತಾದ ತಕ್ಷಣ ಮನಸ್ಸಿನಲ್ಲಿ ಬೆಳೆಯುತ್ತಿದ್ದ ಗ್ಯಾಟ್ಸ್‌ಬಿಯ ಚಹರೆ ಮಾಯವಾಗಿ, ಅವನು ಡಿ ಕ್ಯಾಪ್ರಿಯೋರ ಮುಖ ಧರಿಸಿ ನಿಂತುಬಿಡುತ್ತಾನೆ. ಕಾನೂರು ಹೆಗ್ಗಡತಿಯ ಹೂವಯ್ಯ ಅಂದಾಗಲೆಲ್ಲ ಸುಚೇಂದ್ರಪ್ರಸಾದರ ಮುಖ ನೆನಪಾದರೆ ಏನು ಮಾಡುವುದು? ಆದರೆ ಈ ಸಮಸ್ಯೆಯ ಬಗ್ಗೆ ಏನೂ ಮಾಡಲು ಸಾಧ್ಯವಿಲ್ಲ ಎನ್ನುವುದೂ ಸತ್ಯ, ಒಳ್ಳೆಯ ಕಾದಂಬರಿಗಳನ್ನು ಆಧರಿಸಿದ ಸಿನಿಮಾಗಳನ್ನು ನೋಡುವುದಿಲ್ಲ ಎಂಬ ಪ್ರತಿಜ್ಞೆಯೊಂದನ್ನು ಬಿಟ್ಟು.

ತಮ್ಮ ನಲವತ್ನಾಲ್ಕನೆಯ ವಯಸ್ಸಿನಲ್ಲಿ ವಿಧಿವಶರಾದ ಫಿಡ್ಜರಾಲ್ಡ್ ಬರೆದದ್ದು ಐದೇ ಕಾದಂಬರಿಗಳನ್ನು. ಜೊತೆಗೆ ಅಂದಿನ ಪ್ರಮುಖ ಪತ್ರಿಕೆಗಳಲ್ಲಿ ನೂರಾರು ಸಣ್ಣ ಕತೆಗಳನ್ನೂ, ಲೇಖನಗಳನ್ನೂ, ಕೆಲವು ಪದ್ಯಗಳನ್ನೂ ಪ್ರಕಟಿಸಿದ್ದರು. 1940ಯಲ್ಲಿ ವಿಪರೀತ ಕುಡಿತದಿಂದ ಮತ್ತದರ ಮುಂದುವರಿಕೆಯಂತೆ ತೀವ್ರ ಹೃದಯಾಘಾತದಿಂದ ತೀರಿಕೊಳ್ಳುವ ಮೊದಲು ತಾವೊಬ್ಬ ‘ಫೇಲ್ಡ್’ ಲೇಖಕ ಎಂದೇ ಬೇಸರಿಸಿದ್ದರಂತೆ. ಅದಕ್ಕೆ ಕಾರಣ ಫಿಡ್ಜರಾಲ್ಡ್‌ರ ಯಾವ ಕಾದಂಬರಿಯೂ ಅವರಿಗೆ ನಿರೀಕ್ಷಿಸಿದಷ್ಟು ಹೆಸರು ನೀಡಿರಲಿಲ್ಲ. ಈಗ ಮಾಡರ್ನ್ ಕ್ಲಾಸಿಕ್ ಎಂದು ಮನ್ನಣೆ ಗಳಿಸಿರುವ ದಿ ಗ್ರೇಟ್ ಗ್ಯಾಟ್ಸ್‌ಬಿ ಕಾದಂಬರಿಯೂ ಇದಕ್ಕೆ ಹೊರತಲ್ಲ.

ಒಂದು ಚಿತ್ರ, ಕಲಾಕೃತಿ ಅಥವಾ ಪುಸ್ತಕ ನೂರು ವರ್ಷಗಳ ನಂತರವೂ ನಿತ್ಯನೂತನವಾಗಿರುತ್ತದೆ ಎಂದರೆ, ಆ ಕೃತಿಯ ಸತ್ವ ಪರೀಕ್ಷೆಯಾಗಿದೆ ಅಂತಲೇ ಅರ್ಥ. ಮೊದಲು ಪ್ರಕಟವಾದ ತೊಂಬತ್ತಾರು ವರ್ಷಗಳ ನಂತರವೂ ಇಂದಿಗೂ ಅಮೆರಿಕದ ಹೈಸ್ಕೂಲು ವಿದ್ಯಾರ್ಥಿಗಳು ಓದಲೇಬೇಕಾದ ‘ಅವಶ್ಯ ಓದು ಪಟ್ಟಿ’ಯಲ್ಲಿ ದಿ ಗ್ರೇಟ್ ಗ್ಯಾಟ್ಸ್‌ಬಿ ಕಾದಂಬರಿ ಮೊದಲ ಸ್ಥಾನದಲ್ಲಿರುತ್ತದೆ. ಇಂದಿಗೂ ಈ ಕಾದಂಬರಿ ಹೊಸ ಓದುಗರ ಮನೋವಲಯದಲ್ಲಿ ಹಬ್ಬುತ್ತಲೇ ನವೀನ ವ್ಯಾಖ್ಯಾನಗಳಿಗೆ ಒಡ್ಡಿಕೊಳ್ಳುತ್ತ ತಾಜಾ ಅರ್ಥವಿಸ್ತರಣೆಯನ್ನು ಸಾಧಿಸುತ್ತಿದೆ.

ಬದುಕಿರುವಾಗಲೇ ಫಿಡ್ಜರಾಲ್ಡ್‌ರಿಗೆ ಈ ಕಾದಂಬರಿ ಪಡೆದುಕೊಳ್ಳುವ ಭವಿಷ್ಯದ ವೈಭವ ತಿಳಿದಿದ್ದರೆ ಸಾಕಿತ್ತು.