ಅಡುಗೆ ಮಾಡುತ್ತೇವೆ….

ಹೌದು, ಅಡುಗೆ ಮಾಡುತ್ತೇವೆ ನಾವು
ಹೊತ್ತಿಗೆ ಸರಿಯಾಗಿ ಗಂಜಿಬೀಳದಿದ್ದಾಗ
ಪತರುಗುಟ್ಟುವ ಹೊಟ್ಟೆ ತುಂಬುವುದು
ಬಣ್ಣದ ಮಾತುಗಳಿಂದಲೋ
ಬರಿಯ ಬೆರಳುಗಳ ಕಸರತ್ತಿನಿಂದಲೋ ಅಲ್ಲವಾದ್ದರಿಂದ
ರಟ್ಟೆಯ ಕಸುವ ಕರಗಿಸಿ
ಒಡಲ ಕಿಚ್ಚಿನಿಂದ ಒಲೆಹೊತ್ತಿಸಿ
ಅಡುಗೆ ಮಾಡುತ್ತೇವೆ ಮತ್ತು
ಕಾಲುಚಾಚಿ ಕೂತಲ್ಲಿಯೇ ಬೇರಿಳಿಸಿಕೊಂಡವರಿಗೂ
ಪ್ರೀತಿಯಿಂದಲೇ ಬಡಿಸುತ್ತೇವೆ

ಒಳಹೊರಗಿನ ದುಡಿಮೆಯಾಚೆಗೂ
ಮುಸುರೆ ತಿಕ್ಕುವುದಕೇ ಲಾಯಕ್ಕೆಂದಿರಾ?
ಹೊಟ್ಟೆತಣ್ಣಗಿಟ್ಟ ಪಾತ್ರೆ ತೊಳೆಯಲು
ಉಂಡತಟ್ಟೆ ತೊಳೆದಿಡಲು ನಾಚಿಕೆಯೇನೂ ಇಲ್ಲ ನಮಗೆ
ರಾಶಿಬಿದ್ದ ಪಾತ್ರೆಗಳ ಸನಿಹವೂ ಸುಳಿಯದ
ಉಂಡತಟ್ಟೆಯನ್ನೂ ಅಲ್ಲೇ ಬಿಟ್ಟೇಳುವ
ನಿಮ್ಮ ದೇಹದಾರಿದ್ರ್ಯಕೆ ಮುಸುರೆಯವರೇ ಆಗುತ್ತೇವೆ ನಾವು

ಬಿದ್ದ ಕಸ,ಕಟ್ಟಿಕೊಂಡ ಸಿಂಕು,ಕೊಳೆಯಾದ ಟಾಯ್ಲೆಟ್ಟು
ಪಾಪವಿಮೋಚನೆಗಾಗಿ ನಮ್ಮನ್ನೇ ಕಾಯುತ್ತವೆ ಅನವರತ
ಹೊಟ್ಟೆಯ ಮಕ್ಕಳ ವಾಂತಿಗೆ ಕೈಯೊಡ್ಡುತ್ತೇವೆ
ಮಕ್ಕಳ ಕಕ್ಕಸು ಬಾಚುತ್ತೇವೆ,ಅಗತ್ಯಬಿದ್ದರೆ ನಿಮ್ಮದೂ
ಮೀಯಿಸಿ ಮೈಯೊರೆಸಿ ಬೊಟ್ಟಿಟ್ಟು ಕಳಿಸಿದ ಮಗು
ತೊಡೆಯೇರಿ ಒದ್ದೆಮಾಡಿದ ನಿಮ್ಮ ಬಟ್ಟೆಯ
ಪುನಃ ಒಗೆಯುವಾಗ ಜಲಗಾರ್ತಿಯರೇ ನಾವಾಗುತ್ತೇವೆ

ಚಿಮ್ಮುವ ಚೈತನ್ಯದಲ್ಲೂ
ತೊಟ್ಟಿಕ್ಕುವ ತಿಂಗಳ ನೋವಿನಲ್ಲೂ
ದಿನತುಂಬಿದ ಬಸಿರಿನ ಭಾರದಲ್ಲೂ
ಬಾಗಿದಬೆನ್ನ ಜಾರಿಹೋಗುತ್ತಿರುವ ಜೀವದಲ್ಲೂ
ಅಡುಗೆ ಮಾಡುತ್ತಲೇ, ಮುಸುರೆ ತಿಕ್ಕುತ್ತಲೇ, ಜಲಗಾರ್ತಿಯರಾಗಿಯೇ
ಎಂದೆಂದಿಗೂ ಇರಲು ಉಪದೇಶಿಸುವ ನಿಮಗೆ
ನಾಚಿಕೆಯ ಲವಲೇಶವೂ ಆಗದಿರುವಾಗ….
ಹೌದು, ನಾವು ಅಡುಗೆ ಮಾಡುತ್ತಲೇ ಇರುತ್ತೇವೆ.

ಕಾವ್ಯಾ ಹೊನ್ನಾವರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿ.
ಸಾಹಿತ್ಯ, ಫೋಟೋಗ್ರಫಿ, ಅಭಿವೃದ್ಧಿ ಮತ್ತು ಮಹಿಳಾ ಅಧ್ಯಯನ ಆಸಕ್ತಿಯ ವಿಷಯಗಳು.