ನೆಲದ ಹೆಗಲೂರಿದ ಗುರುತು

ಇಳಿಬಿದ್ದ ಮುಗಿಲು
ಎದಿಯಾಗ ಹೊಕ್ಹಂಗ
ಗುಡಾರದ ಕಾಲುಗಳು ತಲೆಯ ನೇವರಸಿ
ಪಕ್ಕೆಲುಬಲಿ ಸೆಳೆತಗೊಂಡು ಉರುಳಿದಂತೆ

ಈ ಕತ್ತಲ ಸರಳ ಬಂದಿ ಹುಣ್ಣಿಗೆ
ಎಚ್ಚೆರಗೊಂಡ ಕಣ್ಣೆವೆಗಳಲಿ
ಜಾಲಿಗಂಟಿದ ಜೋಳಿಗೆಗೆ
ಕರುಳುಣಿಸಿದ ಬೀದಿ ಬದಲಿಯಾದ ಸುದ್ದಿ!

ಎದೆಯಬ್ಬಿಸಿ ಬೆವರ ಕುಡಿದ ನೆಲ
ಒಡಲಿಗೆ ಕಪ್ಪು ಬಟ್ಟೆ ಬಿಗಿಸಿಕೊಂಡು
ಕಣ್ಣೀರ ಕಡಲುರಿತದ ರೆಪ್ಪೆಗೆ
ಅಹವಾಲು ಹೊರಡಿಸಿದೆ
ಗುರುತಿನ ಸಾಕ್ಷಿಗಾಗಿ

ಬೇರಿನ್ಹಂಗ ಆಳ ಹೊಕ್ಕ ನೆನಪು
ಚಂದ್ರನ್ಹಂಗ ಇರುಳ ಕುಡಿದ ಕನಸು
ಬೀದಿ ಬದಿಯಲಿ ನೆಲೆಯೂರಿವೆ
ಇರುಳ ಹಕ್ಕಿಯಾಗಿ
ಹೆಜ್ಜೆಗೆ ಗೆಜ್ಜೆ ಕಟ್ಟಿ
ಕುಣಿದು ಕುಪ್ಪಳಿಸಿದ ತಮಟೆಗಳು
ಹಾಡಿಗೆ ಕಣ್ಣಾದ ಢಮರುಗದ ಕೋಲ್ಮಿಂಚುಗಳು
ಮೈಯೋಲೆಗಳಾಗಿ ಇಳಿಬಿದ್ದು
ಉಯ್ಯಾಲೆಯಾದ ಬಿಸಿಯುಸಿರು
ಹೊರಳಾಡಿದವು
ನಿತ್ಯ ಚಕ್ರದ ಸುರುಳಿಯಲಿ

ತಲೆಮಾರುಗಳ ಕಾವುಂಡ ನೆಲೆ
ಹಲವು ಬುರುಡೆಗಳ ಜೀವ ಮಿಡಿತಕ್ಕೆ
ಶತಮಾನದ ಕಸೂತಿಯಾಗಿ
ವಂಶವೃಕ್ಷ ಚಿತ್ರಿಸಿ
ಹದವಾದ ಮಣ್ಣೊಳಗೆ
ಬೆಸೆದುಕೊಂಡ ಬೀಜಗಳಾಗಿವೆ

ಸಾಲು ದೀಪದ ನಕ್ಷತ್ರಗಳ್ಹಂಗ
ನೆಲದ ಹೆಗಲೂರಿದ ಪುರಾವೆಗಳು
ವಸಂತದ ಅಕ್ಕರೆಯಲಿ ನಿತ್ಯನೂತನದ ಘೋಷಗಳು

 

ಕಿರಸೂರ ಗಿರಿಯಪ್ಪ ಬಾಗಲಕೋಟ ಜಿಲ್ಲೆಯ, ಕಿರಸೂರ ಮೂಲದವರು.
ಸಧ್ಯ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ನಾಭಿಯ ಚಿಗುರು’  ಇವರ ಪ್ರಕಟಿತ ಕವನ ಸಂಕಲನ.