ಅಲ್ಲಿ ………

ಅವರಿಂದ ಹೆಜ್ಜೆ ಕಲಿತವರಿದ್ದರು…… ಅವರಿಂದ ಗೆಜ್ಜೆ ಕಟ್ಟಿದವರಿದ್ದರು…… ಅವರ ಸ್ಪೂರ್ತಿಯಿಂದ ಹುಟ್ಟಿದ ಸಂಘಗಳಿದ್ದವು….. ಸಂಘಟನೆಗಳಿದ್ದವು……. ಅವರೊಡನೆ ಪಾತ್ರ ಮಾಡಿದವರಿದ್ದರು….. ಅವರ ಸ್ನೇಹ ಆತ್ಮೀಯತೆಯ ಹೊನಲಲ್ಲಿ ಮುಳುಗಿದವರಿದ್ದರು…… ಆ ಸುಂದರ ಸರಳ ನಗುವಿನ ಮುಖವನ್ನು ಕೊನೆಗೊಮ್ಮೆ ಕಣ್ಣಲ್ಲಿ ತುಂಬಿಕೊಳ್ಳುವವರಂತೆ ಆಬಾಲವೃದ್ಧರಾಗಿ ಎಲ್ಲರೂ ಅಲ್ಲಿ ನೆರೆದಿದ್ದರು. ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿಯೂ ಸೇರಿದಂತೆ ಅವರಿಗೆ ಸಂದ ನೂರಾರು ಪ್ರಶಸ್ತಿ ಫಲಕಗಳು ನಾಗಂದಿಗೆಯ ಮೇಲೆ ಕುಳಿತು ನಿಟ್ಟುಸಿರಿಡುತ್ತಿದ್ದರೆ, ಪಾತ್ರ ಮುಖೇನ ಅವರಾಡಿದ ಮಾತುಗಳ ಎಲ್ಲರ ಬಾಯಲ್ಲೂ ನಲಿಯುತ್ತಿದ್ದವು….. ಎಲ್ಲರ ನೆನಪಿನ ರಂಗಸ್ಥಳದಲ್ಲೂ ಅವರದೇ ಕುಣಿತ.

ಹೀಗೆ ಎಲ್ಲವೂ ಎಲ್ಲರೂ ಇದ್ದರೂ, ಅವರು ಮಾತ್ರ ಅಲ್ಲಿರಲಿಲ್ಲ. ಅವರೇ ಶ್ರೀ ಕೆರಮನೆ ಶಂಭು ಹೆಗಡೆ.

ಶರಣರ ಗುಣವನ್ನು ಮರಣದಲ್ಲಿ ಕಾಣು ಎಂಬ ಮಾತು ಶ್ರೀ ಶಂಭು ಹೆಗಡೆಯವರ ವಿಚಾರದಲ್ಲಿ ನೂರಕ್ಕೆ ನೂರು ಸತ್ಯ. ವೀರನಿಗೆ ರಣರಂಗದಲ್ಲಿ ಮರಣ ಹೇಗೋ ಹಾಗೆ ಕಲಾವಿದನಿಗೆ ರಂಗಸ್ಥಳದಲ್ಲಿ ಮರಣ ಒದಗುವುದು ಅಪರೂಪವೂ, ಅಪೇಕ್ಷಣೀಯವೂ ಆದ ಸಂಗತಿ. ತಮ್ಮ ನೆಚ್ಚಿನ ಕುಲದೇವರ ಸನ್ನಿಧಿಯಲ್ಲಿ ತಮ್ಮ ನೆಚ್ಚಿನ ರಾಮನ ಪಾತ್ರ ನಿಭಾಯಿಸುತ್ತಾ, ಆಟದ ಕೊನೆಯ ಅಂಕದಲ್ಲಿ, ಜೀವನ ನಾಟಕದ ಕೊನೆಯ ಅಂಕ ಮುಗಿಸಿದ ಅಭಿಜಾತ ಕಲಾವಿದ ಅವರು.

ಅಂದು ರಥಸಪ್ತಮಿ ಇಡಗುಂಜಿ ಮಹಾಗಣಪತಿಯ ತೇರಿನ ದಿನ. ಪಾರಂಪರಿಕವಾಗಿ ಕೆರಮನೆಯ ಇಡಗುಂಜಿ ಮೇಳದ ಕಲಾವಿದರು ಅಂದು ಹರಕೆ ಆಟ ಸಲ್ಲಿಸುತ್ತಾರೆ. ಮೊನ್ನೆ ಫೆಬ್ರುವರಿ ಎರಡರಂದು ಕೂಡಾ ಅಂಥದೇ ಒಂದು ಹರಕೆಯಾಟ – ಲವಕುಶ ಕಾಳಗ ಶಂಭುಹೆಗಡೆಯವರ ಶ್ರೀರಾಮ ಬೆಳಗಿನ ಜಾವ ಐದು ಗಂಟೆ ಆಟ ಮುಗಿಯುವ ಹೊತ್ತು. ಕೊನೆಯ ಪದ್ಯವನ್ನು ಭಾಗವತರು ಹಾಡಿದರೂ, ಶಂಭುಹೆಗಡೆಯವರಿಗೆ ವಿಸ್ತರಿಸಲಾಗಲಿಲ್ಲ. ಇನ್ನು ನನ್ನದೆಲ್ಲ ಮುಗಿಯಿತು, ನಿಮ್ಮದೇ ಮುಂದಿನದನ್ನು ವಾಲ್ಮೀಕಿಯ ಬಳಿ ಕೇಳೋಣ ಎನ್ನುತ್ತ ಸೂಚ್ಯವಾಗಿ ಹೇಳಿ ಚೌಕಿಮನೆಗೆ ಮರಳಿದ ಅನನ್ಯ ಕಲಾವಿದ, ಮತ್ತೆಂದೂ ಬರಲಾರರೆಂದು ಯಾರು ತಾನೆ ಭಾವಿಸಿದ್ದರು? ಏನೋ ತೊಂದರೆಯಾಗುತ್ತಿದೆ ಎಂದು ಕಿರೀಟ ಕಳಚಿಟ್ಟು ಮಲಗಿದ ಶ್ರೀ ಶಂಭುಹೆಗಡೆಯವರು ಕೆಲನಿಮಿಷಗಳಲ್ಲೇ ಮೌನವಾದರು. ಶೋಕಗೊಂಡೋ ಎಂಬಂತೆ ಮೂಡಣ ಬಾನು ಕೆಂಪುಕೆಂಪಾಗುತ್ತಿದ್ದ ಹಾಗೇ, ಕರಾವಳಿ ಕಂಡ ಅಪ್ರತಿಮ ಯಕ್ಷಸೂರ್ಯ ಅಸ್ತಮಿಸಿದ್ದ.

ಯಕ್ಷಗಾನವೇ ಪದ್ಯಮಯ. ಪಾತ್ರಧಾರಿಗಳು ಈ ಪದ್ಯಗಳಿಗೆ ಆಗಿಂದಾಗ್ಗೆ ತಾವೇ ಅರ್ಥಹೇಳುವಷ್ಟು, ಮಾತಿಗೆ ಮಾತು ಜೋಡಿಸಿ ಉತ್ತರಿಸುವಷ್ಟು ಬುದ್ಧಿ ಚಾತುರ್ಯವುಳ್ಳವರಾಗಿರಬೇಕು. ಸ್ಕ್ರಿಪ್ಟ್ ಇಲ್ಲದ, ದೃಶ್ಯಫಲಕಗಳಿಲ್ಲದ ಯಕ್ಷರಂಗಸ್ಥಳದಲ್ಲಿ ಕುಣಿತ-ಅರ್ಥ-ಆರ್ಭಟಗಳಿಂದಲೇ ಸೀನರಿ ಸೃಷ್ಟಿಸಬೇಕು. ಆಂಗಿಕ ಅಭಿನಯ, ನಾಟ್ಯ, ಮಾತುಗಾರಿಕೆ ಈ ಎಲ್ಲವನ್ನೂ ಸುಂದರವಾಗಿ ಸಮನ್ವಯಿಸಿ ಪಾತ್ರನಿರ್ವಹಣೆ ಮಾಡುತ್ತಿದ್ದ ಶ್ರೀ ಶಂಭುಹೆಗಡೆಯವರ ನೈಪುಣ್ಯ – ಯಕ್ಷಗಾನದಲ್ಲೇ ಅನನ್ಯ. ಅವರ ಪಾತ್ರಗಳು ಅದರಲ್ಲೂ ರಾಮ -ಬಹಳ ಪ್ರಖ್ಯಾತ. ವಿವಿಧ ಮಜಲುಗಳ ರಾಮ, ಕರ್ಣ, ಭೀಷ್ಮ, ಸುಧನ್ವ, ಕಾರ್ತವೀರ್ಯಾರ್ಜುನ ಇತ್ಯಾದಿ ಪಾತ್ರಗಳಲ್ಲಿ ಅವರನ್ನು ನೋಡಬೇಕೆಂದಲೇ ನೂರಾರು ಮೈಲು ಪ್ರಯಾಣಿಸಿ ಬರುವರಿದ್ದರು. ಪಾತ್ರಗಳ ಒಳಹೊಕ್ಕು ವಿಶ್ಲೇಷಿಸುತ್ತಿದ್ದ ರೀತಿಯನ್ನು ಒಮ್ಮೆ ನೋಡಿದವರಾರೂ ಮರೆಯಲಾರರು.

ಅಸ್ಖಲಿತ ನಿರರ್ಗಳ ಮಾತು, ಸ್ಪಷ್ಟ ಉಚ್ಛಾರ, ದ್ವಿರುಕ್ತಿ,ಪುನರುಕ್ತಿಗಳಿಲ್ಲದ ಎಲ್ಲರೂ ಅರ್ಥಮಾಡಿಕೊಳ್ಳಬಲ್ಲ ಸರಳ ಆಕರ್ಷಕ ಶೈಲಿ ಇವು ಕೆರಮನೆಯ ಕಲಾವಿದರಿಗೆ ಪಾರಂಪರಗತವಾಗಿ ಸಿದ್ಧಿಸಿದ್ದು. ಶ್ರೀ ಶಂಭುಹೆಗಡೆಯವರು ಆ ಪರಂಪರೆಯ ಉತ್ತುಂಗವನ್ನು ಮುಟ್ಟಿದವರು ಮಾತ್ರವಲ್ಲ. ಅವರೊಡನೆ ಒಡನಾಡಿದವರು ಅಭಿಪ್ರಾಯಪಡುವಂತೆ ಮೂಲ ವಿರೂಪಗೊಳಿಸದೆ ಚೌಕಿಮನೆಯಿಂದ ಹಿಡಿದು ಪಾತ್ರ ನಿಭಾವಣೆಯ ತನಕ ಯಕ್ಷಗಾನದಲ್ಲಿ ಹಲವು ಸುಧಾರಣೆ ಬದಲಾವಣೆಗಳ ಪ್ರಯೋಗ ಮಾಡಿದವರು. ಯಕ್ಷಗಾನದ ಆಳ ಅಗಲದ ಅರಿವಿನೊಂದಿಗೇ, ಅವರು ಕಲಿತ ಕೋರಿಯೋಗ್ರಫಿ, ರಾಷ್ಟ್ರೀಯ ಕಲಾಶಾಲೆ (NSD) ಯ ಅನುಭವಗಳು ಅವರನ್ನು ಈ ಬದಲಾವಣೆಗಳಿಗೆ ಪ್ರೇರೇಪಿಸಿರಬಹುದು.

ತೆಂಕುತಿಟ್ಟು-ಬಡಗುತಿಟ್ಟಿನ ಕಲಾವಿದರ ಜೊತೆ ಸಮಾನ ಆತ್ಮೀಯತೆ, ಸಂಪರ್ಕ ಹೊಂದಿದ್ದ ಶ್ರೀ ಶಂಭುಹೆಗಡೆ ಅವರು ಇತ್ತೀಚೆಗೆ ಹಲವರ ಬಳಿ ಈ ವಿಷಯ ಪ್ರಸ್ತಾಪಿಸಿದರು. ತೆಂಕು-ಬಡಗೆಂಬ ಭೇದ, ಸ್ಪರ್ಧೆ ಅಳಿದು, ಯಕ್ಷಗಾನ ಸಮಗ್ರವಾಗಿ ಒಂದು ಕಲೆಯಾಗಬೇಕು, ಆಗಷ್ಟೆ ಪಾಶ್ಚಾತ್ಯೀಕರಣ ಜಾಗತೀಕರಣದ ಯುಗದಲ್ಲೂ ಅದು ಬದುಕಲು ಸಾಧ್ಯ ಎಂದು ಹೇಳುತ್ತಿದ್ದರು. ನಾಲ್ಕೈದು ದಶಕಗಳ ಕಾಲ ಯಕ್ಷಕಲಾಲೋಕದ ಹಲವು ಬಣ್ಣಗಳನ್ನು ಕಂಡ ಕಲಾವಿದನೊಬ್ಬ, ಮುಂದಿನ ಪೀಳಿಗೆಗೂ ಯಕ್ಷಗಾನ ಉಳಿಯಬೇಕಾದರೆ ಏನೆಲ್ಲಾ ಮಾಡಬೇಕೆಂದು ಚಿಂತಿಸಿದ್ದರ ಫಲವಾಗಿ ಹಲವು ಹೊಸ ವಿಚಾರಗಳು ಅವರ ಬಳಿಯಲ್ಲಿದ್ದವು.

ಅವರ ಚಿಂತನೆ-ಪರಂಪರೆಯ ರಕ್ಷಣೆಗಾಗಿಯೋ ಎಂಬಂತೆ ಗುಣವಂತೆಯಲ್ಲಿ ಶ್ರೀಮಯ ಕಲಾಕೇಂದ್ರ ವೆಂಬ ಯಕ್ಷಗಾನ ತರಬೇತಿ ಶಾಲೆ ನಡೆಸುತ್ತಿದ್ದರು. ಉಚಿತ ಊಟ ವಸತಿ ನೀಡಿ, ಕಲಿಯುವ ಆಸಕ್ತಿ ಇರುವ ಎಲ್ಲರಿಗೂ ಯಾವ ಭೇದವಿಲ್ಲದೆ ಅಲ್ಲಿ ಯಕ್ಷಗಾನ ತರಬೇತಿ ಕೊಡುತ್ತಿದ್ದರು. ಆ ಶಾಲೆ ಹಲವು ಹೊಸ ಕಲಾವಿದರನ್ನು ಹುಟ್ಟುಹಾಕಿದೆ. ಅವರ ತಂದೆ ಶ್ರೀ ಕೆರಮನೆ ಶಿವರಾಮಹೆಗಡೆಯವರ ಹೆಸರಲ್ಲಿ ಪ್ರತಿವರ್ಷ ಪ್ರಶಸ್ತಿ ಕೊಡುತ್ತಿದ್ದರು. ಈ ವರ್ಷ ಶಿವರಾಮ ಹೆಗಡೆಯವರ ಜನ್ಮಶತಾಬ್ಧಿಯೂ ಆಗಿದ್ದರಿಂದ ದೊಡ್ಡ ಮಟ್ಟದ ಕಾರ್ಯಕ್ರಮ ನಡೆಸಬೇಕೆಂಬ ಇಚ್ಚೆ ಹೊಂದಿದ್ದರು. ಹೀಗೆ ಅಪೂರ್ಣವಾಗುಳಿದ ನೂರಾರು ಕೆಲಸ, ಸಾವಿರ ಕನಸನ್ನು ಇಲ್ಲೇ ಬಿಟ್ಟು ಎಲ್ಲಿ ನಡೆದು ಬಿಟ್ಟರು ಅವರು?

ಹೋದವಾರವಷ್ಟೇ ಹೊನ್ನಾವರದಲ್ಲಿ ಅವರಿಗೆ ಆಪ್ತರಾಗಿದ್ದ ಸಾಹಿತಿ ಹಾಗೂ ಧೀಮಂತ ಪತ್ರಕರ್ತ ಜಿ. ಆರ್. ಪಾಂಡೇಶ್ವರರ ಜನ್ಮಶತಾಬ್ಧಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜನವರಿ ೨೬ನೇ ತಾರೀಖಿನ ಆ ಸಭೆಯಲ್ಲಿ ಶಂಭು ಹೆಗಡೆಯವರ ಮಾತು ಕೇಳಿದವರಾರೂ ಅವರನ್ನು ಸುಲಭದಲ್ಲಿ ಮರೆಯುವಂತಿಲ್ಲ. ಅತ್ಯಂತ ಆಪ್ತವಾಗಿ ವಿವರವಾಗಿ ಪಾಂಡೇಶ್ವರರ ಜೊತೆ ಒಡನಾಡಿದ ಕ್ಷಣಗಳನ್ನು ಬಾಲ್ಯದಿಂದಲೂ ಹೆಕ್ಕಿ ನೆನಪುಮಾಡಿಕೊಂಡಿದ್ದರು. ಪಾಂಡೇಶ್ವರರೇ ರಚಿಸಿದ ಮಾರಾವತಾರ ಎಂಬ ಏಕವ್ಯಕ್ತಿ ಪ್ರಸಂಗವನ್ನು ಶ್ರೀಮಯ ಕಾಲಾಕೇಂದ್ರ ದ ಕಲಾವಿದರಿಂದ ಮಾಡಿಸಿದ್ದರು. ಪಾಂಡೇಶ್ವರರ ಮತ್ತೊಂದು ಗೀತ ರೂಪಕ ಬಲಿ ವಾಮನ ವನ್ನು ರಂಗದ ಮೇಲೆ ತರಬಹುದೋ ಎಂಬ ಬಗ್ಗೆ ಚಿಂತನೆ ನಡೆಸಿದ್ದರು. ಜನವರಿ ೩೧ ರಂದು ನನ್ನ ಕ್ಲಿನಿಕ್ಕಿಗೆ ಬಂದರು ಅರ್ಧತಾಸು ಕುಳಿತು, ಈ ಎಲ್ಲಾ ಮಾತು ಹೇಳಿ ಮನೆಗೆ ಬಂದು ಹತ್ತಾರೂ ಸಾರಿ ಕರೆದರೂ ‘ಇನ್ನೊಂದ್ಸಲ ಪುರ್ಸತ್ತಾಗಿ ಬರ್‍ತೆ, ಇಂದ ಬೇಡ’ ಅಂತ ಹೋದವರು, ಹೀಗೆ ಹಿಂತಿರುಗಿ ನೋಡದೇ ಹೋಗಿಬಿಡುವುದೇ?

ಯಕ್ಷಗಾನವಲ್ಲದೇ ಸಾಹಿತ್ಯ, ಶಿಲ್ಪಕಲೆ, ನಾಟ್ಯ, ಸಂಗೀತದಲ್ಲೂ ಸಾಕಷ್ಟು ಆಸಕ್ತಿ ಪರಿಶ್ರಮವಿದ್ದವರು ಸೂಕ್ಷ್ಮ ಮನಸ್ಸಿನ ಭಾವಜೀವಿ. ನಿರಂತರ ಸ್ಪರ್ಧೆ, ಹಲವರ ಸಣ್ಣತನ, ಪರಸ್ಪರ ಕೆಸರೆರಚಿಕೊಳ್ಳುವಿಕೆ -ಇವೆಲ್ಲದರಿಂದ ಈಚೆಗೆ ನಲುಗಿದಂತೆ ಕಾಣುತ್ತಿದ್ದರು. ಆದರೂ ಅಪಾರ ದೈವಶ್ರದ್ಧೆ ಹಾಗೂ ಕಲೆಯ ಮೇಲಿನ ಪ್ರೀತಿ-ಈ ಎರಡೂ ಅವರ ಜೀವನ ಪ್ರೀತಿಯನ್ನು ಹೆಚ್ಚಿಸಿದ್ದ ಹಾಗೇ ತೋರುತ್ತದೆ.

ಎಪ್ಪತ್ತು ವಸಂತ ಕಳೆದ ಅವರದು ಸರಳ ನಡೆನುಡಿ, ಸರಳ ಬದುಕು ಎದುರು ಬಂದವನು ಶತ್ರುವಾದರೂ ನಗೆಮೊಗದಲ್ಲೆ ಆಧರಿಸಿ ಅವನನ್ನು ಸೋಲಿಸುವ ಸಾತ್ವಿಕ ಬಲವಿದ್ದವರು ಅವರು. ಹಿರಿಕಿರಿಯರನ್ನದೇ ಎಲ್ಲರನ್ನೂ ಆಧರಿಸುತ್ತ ಸ್ವಂತದ ನೋವುಗಳನ್ನು ನಲಿವಿನ ಹೂವಾಗಿಸಿ ಹಂಚುತ್ತಿದ್ದ ಇಂತಹ ಕಲಾವಿದ ಮತ್ತೊಬ್ಬ ಸಿಗಲಾರ. ಅವರ ಆಪ್ತ ಬಳಗ ಎಷ್ಟು ದೊಡ್ಡದೆನ್ನಲು ನಿನ್ನೆಯ ಅವರ ಮನೆಯೇ ಸಾಕ್ಷಿ. ಅಲ್ಲೊಂದು ಶೃದ್ಧಾಂಜಲಿ ಸಭೆ ನಿರಂತರವಾಗಿ ನಡೆಯುತ್ತಿತ್ತು. ಬಂದವರೆಲ್ಲ ತಾಸೆರಡುತಾಸು ಅಲ್ಲೇ ಕುಳಿತು ಅವರೊಡನೆ ಒಡನಾಡಿದ ತಮ್ಮ ನೆನಪುಗಳನ್ನು ಹಂಚಿಕೊಂಡು ಅತ್ತು ಹಗುರಾಗುತ್ತಿದ್ದ ದೃಶ್ಯ ಅಲ್ಲಿತ್ತು. ಅವರು ಮೃತ್ಯುವಿನಿಂದ ಅಮರತ್ವದೆಡೆಗೆ ನಡೆದಿದ್ದಾರೆ. ಅವರ ಭೌತಿಕ ಶರೀರ ಕಣ್ಮರೆಯಾಗಿದ್ದರೂ ಅವರು ಉಳಿಸಿ ಬೆಳೆಸಿಹೋದ ಕಲೆಯಿದೆ. ಅವರು ರೂಪಿಸಿದ ಕಲಾವಿದರಿದ್ದಾರೆ. ಕೆರಮನೆಯ ಕಲಾಪರಂಪರೆಯನ್ನು ಸಮರ್ಥವಾಗಿ ಮುಂದುವರಿಸಬಲ್ಲ ಪ್ರತಿಭೆಯಿರುವ ಅವರ ಮಗ ಶಿವಾನಂದ ಹೆಗಡೆ ಇದ್ದಾರೆ. ಅಭಿಮಾನಿಗಳಲ್ಲಿ ಕಲಾವಿದರಲ್ಲಿ ಬೀಜರೂಪವಾಗಿಯೂ ಅವರು ಅಡಗಿದ್ದಾರೆ.

ಆ ಒಂದು ದೀಪದಿಂದ ಸಾವಿರಾರು ದೀಪಗಳು ಹೊತ್ತಿಕೊಂಡರೂ, ಆ ದೀಪವಿನ್ನೂ ಉರಿಯುತ್ತಲೇ ಇದೆ…..

[ಚಿತ್ರ: ಚಂದ್ರಶೇಖರ ಐಜೂರು ]