ಮುಗಿಲು ಮುಟ್ಟುವ ಬಂಡೆಗಳಿಂದ ಧುಮ್ಮಿಕ್ಕುವ ಬಿಳಿಯ ಜಲರಾಶಿಯನ್ನು ನೋಡುತ್ತಾ ಟಾಸ್ಮನ್ ಸಮುದ್ರದವರೆಗೆ ನೌಕಾ ವಿಹಾರ ಮಾಡುತ್ತ ಸಾಗಬಹುದು. ಅಚ್ಚರಿಯ ಸಂಗತಿಯೆಂದರೆ ಖಾರಿಯ ಉಪ್ಪು ನೀರಿನ ಕೆಳ ಪದರದ ಮೇಲೆ ಸುಮಾರು ಹತ್ತು ಅಡಿಗಳಷ್ಟು ಸಿಹಿ ನೀರಿನ ಪದರ ಸದಾ ಕಾಲ ಶೇಖರಣೆಯಾಗಿರುತ್ತದೆ. ಮೇಲಿನ ಮಳೆ ಕಾಡುಗಳಿಂದ ರೆಂಬೆ ಕೊಂಬೆಗಳ ಸಾರವನ್ನು ಹೊತ್ತು ತರುವ ಕಲಗಚ್ಚಿನಂತಹ ಈ ಸಿಹಿ ನೀರಿನ ಪದರ ಸೂರ್ಯ ರಶ್ಮಿಯನ್ನು ಖಾರಿಯ ಒಳ ಹೋಗದಂತೆ ತಡೆಗಟ್ಟುತ್ತದೆ.
ಅಚಲ ಸೇತು ಬರೆದ ‘ಕೀವೀ ನಾಡಿನ ಪ್ರವಾಸ ಕಥನ’

 

ಗಾಜಿನ ಗೋಡೆಗೆ ಮೂಗು ಒತ್ತರಿಸಿ ಕೋಣೆಯ ಮಂದ ಬೆಳಕಿಗೆ ಒಗ್ಗಿಕೊಳ್ಳಲು ಹಿಗ್ಗಿದ ಕಣ್ಣಿನ ಪಾಪೆಗಳನ್ನು ಎಡ ಬಲ ತಿರುಗಿಸುತ್ತಾ ‘ಅದು’ ಕಾಣುವುದೇನೋ ಎಂದು ಕಾಯುತ್ತಿದ್ದೆವು. ಕೃತಕವಾಗಿ ನಿರ್ಮಿಸಿದ ಗಿಡ ಮರಗಳ ಸಂದಿಯಲ್ಲಿ ಪುಟ್ಟ ಗುಮ್ಮನಂತಹ ಪೀಚು ನೆರಳೊಂದು ಸರಪರ ಸದ್ದು ಮಾಡುತ್ತಾ ಓಡಾಡಿ ಕೀಚು ಕಂಠದಲ್ಲೊಮ್ಮೆ ಕೆಟ್ಟದಾಗಿ ಕಿರುಚಿ ಮಾಯವಾಯಿತು. ಉಗುರಿನಿಂದ ಕಪ್ಪು ಹಲಗೆಯ ಮೇಲೆ ಗೀಚಿದಂತಹ ಧ್ವನಿ! ತುಪ್ಪಳದಂತಹ ಮೈ ಹೊಂದಿರುವ ನ್ಯೂಜಿಲ್ಯಾಂಡಿನ ರಾಷ್ಟ್ರಪಕ್ಷಿ ಕೀವೀ ಹಕ್ಕಿಯ ಮುಂದೆ ನಿಂತು ‘ಶುಭ ನುಡಿಯೇ ಶಕುನದ ಹಕ್ಕಿ’ ಕವನ ವಾಚಿಸುವ ಮನಸಾಯಿತು. ಪಾಪ, ಹಾರಲು ಬಾರದ ಈ ನಿಶಾಚರ ಹಕ್ಕಿಗಳಿಗೆ ರಾತ್ರೋರಾತ್ರಿ ಹುಳು ಹುಪ್ಪಡಿಗಳಿಗಾಗಿ ಅಲೆದಾಡುವ ಹಣೆಯ ಬರಹ.

ಕಾಳ ಕಪ್ಪು ಇರುಳುಗಳಲ್ಲಿ ತುತ್ತಿನ ಚೀಲ ತುಂಬಿಕೊಳ್ಳಲು ಅಲೆದಾಡುವಾಗ ಟುವ್ವಿ ಟುವ್ವಿ ಎನ್ನುವ ಹಾಡು ಕಲಿಯಲು ಸಾಧ್ಯವೇ? ಸಾಲದ್ದಕ್ಕೆ ಕೀವೀ ಹಕ್ಕಿಗಳಿಗೆ ಮೂಗಿನ ಹೊಳ್ಳೆಗಳು ಇರುವುದು ಕೊಕ್ಕಿನ ತುಟ್ಟ ತುದಿಯಲ್ಲಿ. ಕೊಕ್ಕನ್ನು ನೆಲಕ್ಕೆ ಆನಿಸಿ ಮೂಸುತ್ತಾ ಇವು ರಾತ್ರಿ ಪಾಳ್ಯಕ್ಕೆ ಹೊರಟಾಗ ಹೊಳ್ಳೆಗಳಿಗೆ ಮಣ್ಣು ಮೆತ್ತಿಕೊಂಡು ಪದೇ ಪದೇ ಸೀನುವ ಕರ್ಮ ಬೇರೆ. ‘ಗದ್ದಲದ ಹೊಳ್ಳೆ’ಗಳನ್ನು(ನಾಯ್ಸಿ ನಾಸ್ಟ್ರಿಲ್ಸ್) ಹೊಂದಿರುವ ಈ ಗೌರವಾನ್ವಿತ ಸಸ್ತನಿಗಳನ್ನು ನ್ಯೂಜಿಲ್ಯಾಂಡಿನ ‘ಕೀವೀ ಪಕ್ಷಿಧಾಮ’ ದಲ್ಲಿ ನೋಡಿ, ಆಲಿಸಿ, ಅನೇಕ ಮಾಹಿತಿಗಳನ್ನು ಪಡೆದು ಹೊರಬಿದ್ದೆವು.

ವಾಕಟಿಪು ಸರೋವರದ ಅಂಚಿನಲ್ಲಿ ಕುಳಿತು ಸಕ್ಕರೆ ನಿದ್ದೆಯ ಮಂಪರಿನಲ್ಲಿ ಎದುರಿನ ಆಲ್ಪ್ಸ್ ಪರ್ವತ ಶ್ರೇಣಿಯನ್ನು ಅನ್ಯಮನಸ್ಕತೆಯಿಂದ ನೋಡುತ್ತಿರುವ ಸುಕುಮಾರಿಯಂತಹ ಊರು ಕ್ವೀನ್ಸ್ ಟೌನ್. ನ್ಯೂಜಿಲ್ಯಾಂಡಿನ ದಕ್ಷಿಣ ದ್ವೀಪದ ಒಟಾಗೊ ಪ್ರದೇಶದಲ್ಲಿರುವ ಒಂದು ಪುಟ್ಟ ನಗರ. ಕ್ರಿಸ್ಮಸ್ ರಜೆಗೆಂದು ಪರಿವಾರಸಮೇತರಾಗಿ ‘ಕೀವೀ’ ದೇಶಕ್ಕೆ ಕಾಲಿಟ್ಟೆವು. ಬಂದ ಮೊದಲೆರಡು ದಿನಗಳಲ್ಲಿ ಕ್ವೀನ್ಸ್ ಟೌನಿನ ಮುಗಿಲು ಮುಟ್ಟುವ ಹಸಿರು ಬೆಟ್ಟ ಗುಡ್ಡಗಳಲ್ಲಿ, ಗಿಜಿಗುಟ್ಟುವ ಮಾರುಕಟ್ಟೆಯ ಬೀದಿಗಳಲ್ಲಿ, ಚಾರಣ ಹೂರಣ ಅಂತೆಲ್ಲ ತಿರುಗಿ ತಿಂದು ಓಡಾಡಿದ್ದಾಯಿತು.

*****

ಮಿಲ್ಫರ್ಡ್ ಸೌಂಡ್

ನ್ಯೂಜಿಲ್ಯಾಂಡಿನ ಪಶ್ಚಿಮ ಕರಾವಳಿಯಲ್ಲಿ ಪುರಾತನ ಹಿಮನದಿಗಳ ಕೊರೆತದಿಂದ ನಿರ್ಮಾಣವಾದ ಹದಿನಾರು ಕಿಲೋ ಮೀಟರ್ ಉದ್ದದ ಮಿಲ್ಫರ್ಡ್ ಸೌಂಡ್ ಎಂಬ ಖಾರಿಯಿದೆ. ವಿಶ್ವ ವಿಖ್ಯಾತ ಜಂಗಲ್ ಬುಕ್ಕಿನ ಲೇಖಕ ರಡ್ಯಾರ್ಡ್ ಕಿಪ್ಲಿಂಗ್ನಿಂದ ಪ್ರಪಂಚದ ಎಂಟನೆಯ ಅದ್ಭುತ ಎಂದು ಹೊಗಳಿಸಿಕೊಂಡಿರುವ ಮಿಲ್ಫರ್ಡ್ ಖಾರಿಯ ಎರಡೂ ಬದಿಗಳಲ್ಲಿ ಹರಿದ್ವರ್ಣ ಕಾಡುಗಳನ್ನು ಹೊತ್ತ ದೈತ್ಯಾಕಾರದ ಪರ್ವತಗಳಿವೆ.

ಮುಗಿಲು ಮುಟ್ಟುವ ಬಂಡೆಗಳಿಂದ ಧುಮ್ಮಿಕ್ಕುವ ಬಿಳಿಯ ಜಲರಾಶಿಯನ್ನು ನೋಡುತ್ತಾ ಟಾಸ್ಮನ್ ಸಮುದ್ರದವರೆಗೆ ನೌಕಾ ವಿಹಾರ ಮಾಡುತ್ತ ಸಾಗಬಹುದು. ಅಚ್ಚರಿಯ ಸಂಗತಿಯೆಂದರೆ ಖಾರಿಯ ಉಪ್ಪು ನೀರಿನ ಕೆಳ ಪದರದ ಮೇಲೆ ಸುಮಾರು ಹತ್ತು ಅಡಿಗಳಷ್ಟು ಸಿಹಿ ನೀರಿನ ಪದರ ಸದಾ ಕಾಲ ಶೇಖರಣೆಯಾಗಿರುತ್ತದೆ. ಮೇಲಿನ ಮಳೆ ಕಾಡುಗಳಿಂದ ರೆಂಬೆ ಕೊಂಬೆಗಳ ಸಾರವನ್ನು ಹೊತ್ತು ತರುವ ಕಲಗಚ್ಚಿನಂತಹ ಈ ಸಿಹಿ ನೀರಿನ ಪದರ ಸೂರ್ಯ ರಶ್ಮಿಯನ್ನು ಖಾರಿಯ ಒಳ ಹೋಗದಂತೆ ತಡೆಗಟ್ಟುತ್ತದೆ. ಹಾಗಾಗಿ ಕಾಳ ಕರಾಳತೆಯಲ್ಲಿ ಹುದುಗಿಕೊಳ್ಳುವ ಆಳ ಸಮುದ್ರದ ಚರಾಚರ ಜೀವಜಂತುಗಳು ಗೊಂದಲಗೊಂಡು ಅಷ್ಟೇನೂ ಆಳವಿಲ್ಲದ ಈ ಖಾರಿಯ ತಳದಲ್ಲೇ ಮನೆ ಮಾಡಿಕೊಂಡಿವೆ.

ಅಕ್ಟೋಪಸ್, ಕಪ್ಪು ಕೋರಲ್, ಸೀ ಆನಿಮೊನಿ ಮುಂತಾದ ಜೀವಿಗಳನ್ನು ಹವ್ಯಾಸಿ ಆಳ ಕಡಲ ಜಿಗಿತಗಾರರು ಮಿಲ್ಫರ್ಡ್ ಸೌಂಡಿನಲ್ಲಿ ಸುಲಭಸಾಧ್ಯದಲ್ಲೆ ಕಂಡು ಪುಳಕಗೊಳ್ಳುತ್ತಾರೆ.

*****

ಟೇ ಅನೌ ಗುಹೆಗಳಲ್ಲಿ ಮಿಂಚಿನ ಸಂಚು

ನಮ್ಮ ಮುಂದಿನ ಗಮ್ಯ ಸ್ಥಾನ ಮಿಲ್ಫೊರ್ಡ್ ಸೌಂಡಿನ ದಕ್ಷಿಣಕ್ಕೆ ಒಂದು ನೂರು ಕಿಲೋ ಮೀಟರ್ಗಳಷ್ಟು ದೂರವಿರುವ ಟೇ ಅನೌ ಎಂಬ ಹಳ್ಳಿಯ ಭೂಗತ ಗುಹೆಗಳು. ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಹಾಗು ರೈತಾಪಿ ಜನರಿರುವ ಈ ಹಳ್ಳಿಯ ಜನಸಂಖ್ಯೆ ಎರಡು ಸಾವಿರಕ್ಕೂ ಕಡಿಮೆ. ಊರ ಹೆಸರೇ ಇಟ್ಟುಕೊಂಡಿರುವ ಕೆರೆಯ ಮೇಲೆ ಪುಟ್ಟ ಹಡಗೊಂದರಲ್ಲಿ ಪಯಣಿಸಿ ಸುಣ್ಣದ ಕಲ್ಲಿನಿಂದ ನಿರ್ಮಿತವಾಗಿರುವ ಟೇ ಅನೌ ಗುಹೆಗಳ ಬಾಯಿ ಬಳಿ ಬಂದೆವು. ನ್ಯೂಜಿಲ್ಯಾಂಡಿನ ಉತ್ತರ ಹಾಗು ದಕ್ಷಿಣ ದ್ವೀಪಗಳೆರಡರಲ್ಲೂ ಅನೇಕ ಭೂಗತ ಗವಿಗಳ ಜಾಲವಿದೆ. ಅಡ್ರೆನಾಲಿನ್ ತುಂಬಿದ ಎಂಟೆದೆಯ ಬಂಟರು ಇಂತಹ ಕತ್ತಲು ತುಂಬಿದ ಗುಹೆಗಳ ತಿರಿಚು ಮುರುಚು ದಾರಿಯಲ್ಲಿ ಸಾಗಲು, ಗುಪ್ತಗಾಮಿನಿಯಂತೆ ಒಳಗೆ ಹರಿಯುವ ನೀರಿನಲ್ಲಿ ಧುಮುಕಿ ಈಜಲು ಆಸೆಪಡುತ್ತಾರಂತೆ!

ಮಾರ್ಗದರ್ಶಿಯೊಬ್ಬನ ಮುಂದಾಳತ್ವದಲ್ಲಿ ನಮ್ಮ ತಂಡ ಗುಹೆಯ ಒಳಗಿನ ಇಕ್ಕಟ್ಟಾದ ಕಿರು ದಾರಿಯಲ್ಲಿ ಒಬ್ಬರ ಹಿಂದೆ ಒಬ್ಬರು ತಗ್ಗಿ ಬಗ್ಗಿ ನಡೆದು, ಭೋರ್ಗರೆವ ಭೂಗತ ಜಲಪಾತ ಒಂದನ್ನು ದಾಟಿ, ಗುಹೆಯ ಒಳಗೆ ಹರಿವ ಕೆರೆಯ ಹೊರಹರಿವಿನ ನೀರಿನ ಮೇಲೆ ನಮಗಾಗಿ ಕಾಯುತ್ತಿದ್ದ ಒಂದು ಪುಟ್ಟ ದೋಣಿಯಲ್ಲಿ ಉಸ್ಸಪ್ಪ ಅಂತ ಕುಳಿತೆವು. ಚಿಕ್ಕಂದಿನಲ್ಲಿ ಬಾಯಿ ಬಾಯಿ ಬಿಟ್ಟುಕೊಂಡು ಓದುತ್ತಿದ್ದ ನಡೆದಾಡುವ ಭೂತಪ್ಪ ಫ್ಯಾಂಟಮ್, ಗೊಂಡಾರಣ್ಯದ ಮಧ್ಯೆ ಇರುವ ತನ್ನ ಕಪಾಲಿ ಗುಹೆಗೆ ಜಲಪಾತದ ತೆರೆಯನ್ನು ದಾಟಿ ಹೋಗುವ ರೀತಿ ನೆನಪಾಯಿತು.

ಫ್ಯಾಂಟಮ್ ಮನೆಯ ಹತ್ತಿರದ ಕೀ-ಲಾ-ವೀ ಸಮುದ್ರ ತೀರದ ಚಿನ್ನ ಬೆರೆತ ಮರಳಿನ ಕಣಗಳನ್ನು ವಂದರಿಯಾಡಿ ಮಣ ಮಣ ಬಂಗಾರದ ಒಡವೆಗಳನ್ನು ಹೇರಿಕೊಳ್ಳುವ ನನ್ನ ಬಾಲ್ಯದ ಸಿಹಿ ಕನಸಿನ ಮೆಲುಕಿನಲ್ಲಿ ಕಳೆದು ಹೋಗಿದ್ದೆ. ಮತ್ತೆ ಇಹ ಲೋಕಕ್ಕೆ ಬಂದಾಗ ಆಗಸದ ತುಂಬಾ ಫಳಗುಟ್ಟುವ ನೀಲಿ ತಾರೆಗಳು! ಹೊಳೆ ಹೊಳೆವ ತಾರೆಗಳ ಅಂದಕ್ಕೆ ಮತ್ತಷ್ಟು ಮೆರಗು ಕೊಡುವಂತೆ ಅವುಗಳ ಸುತ್ತ ತೂಗಾಡುವ ನಾಜೂಕಾದ ಬಿಳಿ ಹರಳುಗಳ ಮಾಲೆಗಳು. ಬಿಟ್ಟ ಬಾಯಿ ಬಿಟ್ಟುಕೊಂಡೇ ತಲೆಯೆತ್ತಿ ನೋಡುತ್ತಿರುವಾಗ ಪಟ್ ಅಂತ ನನ್ನ ಪತಿರಾಯ ನನ್ನ ಬಾಯಿ ಮುಚ್ಚಿ ಹುಳ ಬಾಯೊಳಗೆ ಬಿದ್ದೀತು ಎಂದು ಎಚ್ಚರಿಸಿದ. ಇಶ್ಶೀ! ಕ್ರಿಮಿ ಕೀಟಗಳನ್ನು ತಿನ್ನಲು ಜೊಲ್ಲುದಾರಗಳನ್ನ ನೇತಾಡಿಸುವ ಲೋಳೆ ಮೈಯಿನ ಮಿಂಚು ಹುಳಗಳು ಬಾಯಲ್ಲಿ ಬಿದ್ದು ಗಿದ್ದರೆ ಸದ್ಯ! ಮೈಯೆಲ್ಲಾ ಮುದುಡಿ ಕುಳಿತೆ.

ಜೈವ ದೀಪ್ತಿ ಪ್ರಕ್ರಿಯೆಯಿಂದ ದೇದೀಪ್ಯಮಾನವಾದ ನೀಲಿ ಬೆಳಕು ಮಿನುಗಿಸುತ್ತ ಕತ್ತಲ ಗುಹೆಯಲ್ಲಿ ಫಳಗುಟ್ಟುವ ಗೊಂಚಲು ಗೊಂಚಲು ಮಿಂಚು ಹುಳಗಳ ನೋಟ ನಿಜಕ್ಕೂ ಅದ್ವಿತೀಯ. ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ದೇಶದಲ್ಲಿ ಇಂತಹ ಅನೇಕ ಮಿಂಚು ಹುಳಗಳ ಗುಹೆಗಳಿವೆಯಂತೆ. ಎಂತ ಮರುಳಯ್ಯ ಇದು ಎಂತಾ ಮರಳು?

*****

ಫೆರ್ಗ್ ಬರ್ಗರ್

ರಾತ್ರಿ ಬೆಳಗೆನ್ನದೆ ಕ್ವೀನ್ಸ್ ಟೌನಿನ ಬರ್ಗರ್ ಅಂಗಡಿಯೊಂದರ ಮುಂದೆ ಯಾವಾಗ ನೋಡಿದರು ಜನ ಜಂಗುಳಿಯ ಸಂತೆ. ಅಂಗಡಿ ಮುಂಗಟ್ಟಿನಿಂದ ಬೀದಿಯ ಕೊನಯವರೆಗೂ ತಮ್ಮ ಸರದಿಗಾಗಿ ಕಾಯುತ್ತ ನಿಂತ ಜನ. ಕುತೂಹಲಗೊಂಡು ವಿಚಾರಿಸಿ ನೋಡಿದಾಗ ತಿಳಿದಿದ್ದು ಅದು ದೇಶ ವಿದೇಶಗಳಲ್ಲಿ ಹೆಸರುವಾಸಿಯಾದ, ಕಲ್ಟ್ ಸ್ಥಾನಮಾನಗಳನ್ನು ಹೊಂದಿರುವ ಸುಪ್ರಸಿದ್ಧ ಬರ್ಗರ್ ಜಾಯಿಂಟ್ ಎಂದು. ‘ಫೆರ್ಗ್ ಬರ್ಗರ್’ ಭಕ್ತಗಣದಲ್ಲಿ ಜಾರ್ಜ್ ಲೂಕಸ್, ಎಡ್ ಶಿರನ್, ಜಸ್ಟಿನ್ ಬೀಬರ್ ಮುಂತಾದ ಅಂತಾರಾಷ್ಟ್ರೀಯ ಸೆಲಬ್ರಿಟಿಗಳ ದೊಡ್ಡ ಪಟ್ಟಿಯೇ ಇದೆಯಂತೆ. ಎರಡು ತುಂಡು ಬನ್ನಿನ ಮಧ್ಯೆ ಅದೇನೆಲ್ಲ ತುಂಬಿಕೊಂಡು ಬಿಸಿಲು ಮಳೆಯೆನ್ನದೆ ಕಾಯುವ ಅಭಿಮಾನಿ ದೇವರುಗಳ ಜಿಹ್ವಾ ಚಾಪಲ್ಯವನ್ನು ಫೆರ್ಗ್ ಬರ್ಗರ್ ಅದು ಹೇಗೆ ತಣಿಸುತ್ತದೆಯೋ ನಾ ಕಾಣೆ. ಮೆನು ಕಾರ್ಡಿನಲ್ಲಿ ಸಾಲಾಗಿ ಕಂಡ ಬೀಫ್ ಬರ್ಗರ್‌ಗಳ ತಳದಲ್ಲಿ ಒಂದೆರಡು ಶಾಖಾಹಾರಿ ಆಯ್ಕೆಗಳಿದ್ದರೂ ಯಾಕೋ ಗಂಟೆಗಟ್ಟಲೆ ಕಾಯುವ ಮನಸಾಗದೆ ದಕ್ಷಿಣ ಭಾರತದ ಖಾನಾವಳಿಯ ಕಡೆಗೆ ಕಾಲು ಬೆಳೆಸಿದೆವು.

*****

ಕಾರ್ಡೊನ ಬ್ರಾ ಬೇಲಿ

ಕ್ವೀನ್ಸ್ ಟೌನ್ ಸಿಟಿಯ ಪರಿಮಿತಿಯಿಂದಾಚೆಗೆ ಒಂದು ಅರ್ಧ ಗಂಟೆಯ ದೂರದಲ್ಲಿ ಕಾರ್ಡೊನ ಎಂಬ ಹಳ್ಳಿಯಿದೆ. ಅಲ್ಲಿನ ಸಾರ್ವಜನಿಕ ರಸ್ತೆಯ ಅಂಚಿನಲ್ಲಿ ಓಡುವ ಉದ್ದ ಬೇಲಿಯೊಂದರ ಮೇಲೆ ಒಂದು ದಿನ ಮಹಿಳೆಯರು ಧರಿಸುವ ಬ್ರೇಸಿಯರ್‌ಗಳು ಹಾರಾಡತೊಡಗಿದವು. ಯಾರೋ ಕಿಡಿಗೇಡಿಗಳ ಕೆಲಸವೆಂದು ಮುನಿಸಿಪಾಲಿಟಿಯವರು ಅವನ್ನು ಅಲ್ಲಿಂದ ತೆಗೆದು ಬಿಸಾಡಿದರು. ಮುಂದಿನ ದಿನಗಳಲ್ಲಿ ಮತ್ತೆ ಮತ್ತೆ ಬೇಲಿಯ ಮೇಲೆ ಬ್ರಾ ಸಮೂಹಗಳು ಬೀಡು ಬಿಡಲು ಶುರು ಮಾಡಿದವು. ಕಿತ್ತೊಗೆದಷ್ಟು ಮೇಲಿಂದ ಮೇಲೆ ವಕ್ಕರಿಸತೊಡಗಿದ ಬ್ರಾಗಳ ಸಂಖ್ಯೆ ಇಂದು ಕೂಡಿ ಹಾಕಿಕೊಂಡು ಸಾವಿರಾರು ಸಂಖ್ಯೆಯನ್ನು ದಾಟಿದೆ. ಯಾರೋ ಬುದ್ಧಿವಂತರು ಸ್ತನ ಕ್ಯಾನ್ಸರ್ ಸಂಶೋಧನೆಯ ನಿಧಿಯನ್ನು ಬೇಲಿಯ ಮುಂದೆ ಸ್ಥಾಪಿಸಿ, ಮುನಿಸಿಪಾಲಿಟಿ ಮತ್ತು ಒಳ ಕುಬುಸಗಳ ನಡುವಿನ ಜಗಳಕ್ಕೆ ಬಿಳಿಯ ಬ್ರಾ ಬಾವುಟ ಹಾರಿಸಿ ಕದನ ವಿರಾಮ ತಂದಿದ್ದಾರೆ. ಪ್ರವಾಸಿಗರಿಂದ ಸಹಸ್ರಾರು ಡಾಲರುಗಳ ದೇಣಿಗೆ ಬರಲು ಶುರುವಾಗಿರುವುದರಿಂದ ಎಲ್ಲರ ಸೊಲ್ಲಡಗಿದೆ. ಮೈ ಚಳಿ ಬಿಟ್ಟ ಬ್ರಾಡೋನ ಸಮುದಾಯ ನಿರಾತಂಕವಾಗಿ ಬೆಳೆಯುತ್ತಲಿದೆ.

*****

ಕುರಿಗಳು ಸಾರ್ ಕುರಿಗಳು

ನ್ಯೂಜಿಲ್ಯಾಂಡಿನ ಒಟ್ಟು ಜನಸಂಖ್ಯೆಗಿಂತ ಅಲ್ಲಿರುವ ಕುರಿಗಳ ಸಂಖ್ಯೆ ಆರು ಪಟ್ಟು ಹೆಚ್ಚು! ಅಂದರೆ ದೇಶದ ಎಲ್ಲ ಕುರಿಗಳನ್ನೂ ಕೀವೀ ಪ್ರಜೆಗಳಿಗೆ ಸಮಾನವಾಗಿ ಹಂಚಿ ಕುರಿ ಕಾಯಲು ಬಿಟ್ಟರೆ ಒಬ್ಬೊಬ್ಬನ ಪಾಲಿಗೂ ಆರು ಆರು ಕುರಿಗಳು. ಮುಂದೆ ಬಂದರೆ ಹಾಯದ ಹಿಂದೆ ಬಂದರೆ ಒದೆಯದ ಈ ‘ಕಿರು ಕಾಮಧೇನು’ಗಳನ್ನು ಕ್ಯಾಪ್ಟನ್ ಜೇಮ್ಸ್ ಕುಕ್ ಎನ್ನುವ ಆಂಗ್ಲ ನಾವಿಕ ನ್ಯೂಜಿಲ್ಯಾಂಡಿನ ಸೊಂಪಾದ ಹುಲ್ಲುಗಾವಲುಗಳಿಗೆ ಪರಿಚಯಿಸಿದನಂತೆ. ನಂತರದ ದಶಕಗಳಲ್ಲಿ ಕುರಿ ಸಾಕಾಣಿಕೆಯ ಉದ್ಯಮ ಬೃಹದಾಕಾರವಾಗಿ ಬೆಳೆದು ದೇಶದ ಆರ್ಥಿಕ ಅಭಿವೃದ್ಧಿಗೆ ಬೆನ್ನೆಲುಬಾಗಿದೆ.

ನ್ಯೂಜಿಲ್ಯಾಂಡಿನ ದಕ್ಷಿಣ ದ್ವೀಪದಿಂದ ಹಾರಿ ಉತ್ತರ ದ್ವೀಪದ ರೋಟೋರುವ ಎಂಬ ಊರಿಗೆ ಬಂದಿಳಿದೆವು. ಈ ಊರಿನ ಗುಡ್ಡ ಕಾಡು ಕೆರೆ ಏರಿ ಮೇಲೆ ಕೆಳಗೆ ಎಲ್ಲಿ ನೋಡಿದರಲ್ಲಿ ಕುರಿಗಳು ಸಾರ್ ಕುರಿಗಳು! ಕೊನೆ ಮೊದಲಿಲ್ಲದಂತೆ ಹಚ್ಚಾಗಿ ಹರಡಿರುವ ಹಸಿರು ಕಂಬಳಿಗಳ ಮೇಲೆ ಉರುಟು ಉರುಟಾಗಿರುವ ಹತ್ತಿ ಉಂಡೆಗಳನ್ನು ಹೋಲುವ ಕೆನೆ ಬಣ್ಣದ ಕುರಿಗಳು. ರೋಟೋರುವ ಊರಿನ ಹತ್ತಿರದಲ್ಲಿ ಅಗ್ರೋಡೋಮ್ ಎನ್ನುವ ಕುರಿಗಳ ಹಾಗು ಪಶು ಸಂಗೋಪನೆಯ ಫಾರ್ಮಿದೆ. ಮುನ್ನೂರೈವತ್ತು ಎಕರೆಯ ಫಾರ್ಮಿನಲ್ಲಿ ಸುಮಾರು ಇಪ್ಪತ್ತಾರು ಬಗೆಯ ಕುರಿ ಹಾಗು ಟಗರುಗಳ ತಳಿಗಳು, ಲ್ಲಾಮ, ಆಲ್ಪಾಕ, ಮತ್ತು ಹಸುಗಳ ಸಾಕಾಣಿಕೆ ಮಾಡಲಾಗುತ್ತದೆ. ಕುರಿಗಳ ತುಪ್ಪಳ ತೆಗೆಯುವುದು, ಹಸುಗಳ ಹಾಲು ಕರೆಯುವುದು, ಕ್ಲಾಸ್ ಮಾನಿಟರಿನಂತೆ ಕುರಿಗಳನ್ನು ಹದ್ದುಬಸ್ತಿನಲ್ಲಿಡುವ ಬಾರ್ಡರ್ ಕೊಲಿ ನಾಯಿಗಳ ತರಪೇತಿ ಹೀಗೆ ಹತ್ತು ಹಲವಾರು ಚಟುವಟಿಕೆಗಳಲ್ಲಿ ಸಂದರ್ಶಕರಿಗೆ ಭಾಗವಹಿಸುವ ಅವಕಾಶವಿದೆ. ಪ್ರಾಣಿಗಳಿಗೆ ತಿನಿಸಿ ಉಣಿಸಿ ಮೈಸವರಿ, ನರ್ಸರಿಯಲ್ಲಿನ ಕುರಿ ಮರಿಗಳನ್ನು ಅಪ್ಪಿ ಮುದ್ದಾಡುವ ಅವಕಾಶವಿರುವುದರಿಂದ ಮಕ್ಕಳಿಗಂತೂ ಅಗ್ರೋಡೋಮ್ ಅಚ್ಚುಮೆಚ್ಚಾಗುತ್ತದೆ.

ಮಾ‌ಓರಿ ಬುಡಕಟ್ಟಿನ ಕಥೆ-ವ್ಯಥೆ

ನ್ಯೂಜಿಲ್ಯಾಂಡಿನ ಮಾ‌ಓರಿ ಬುಡಕಟ್ಟು ಜನಾಂಗದ ಪೂರ್ವಜರು ಸುಮಾರು ಹದಿಮೂರನೆಯ ಶತಮಾನದ ಆಸು ಪಾಸಿನಲ್ಲಿ ಪೂರ್ವ ಪಾಲಿನೇಷಿಯಾ ದ್ವೀಪಗಳಿಂದ ವಲಸೆ ಬಂದು ಇಲ್ಲಿ ನೆಲೆ ನಿಂತರಂತೆ. ಇತಿಹಾಸಗಾರರು ಏನೇ ಹೇಳಲಿ, ನನಗಂತೂ ಮಾ‌ಓರಿ ಜನರಿಗೂ ಕನ್ನಡ ನಾಡಿಗೂ ಏನೋ ಸಂಬಂಧವಿದೆ ಎಂದು ಖಚಿತವಾಗಿದೆ. ಕಿವಿ, ಕುರಿ, ತಮ್ಮ, ತಂಗಿ ಮುಂತಾದ ಕನ್ನಡ ಪದಗಳು ಮಾ‌ಓರಿ ಭಾಷೆಯಲ್ಲಿ ಹೇರಳವಾಗಿದೆ. ಆದರೆ ಇಲ್ಲೊಂದು ವಿಚಿತ್ರ ಸಮಸ್ಯೆಯಿದೆ. ಕನ್ನಡದಂತೆ ಕೇಳುವ ಪದಗಳ ಅರ್ಥ ಮಾತ್ರ ಬಲು ಬೇರೆ. ಮಾ‌ಓರಿಯಲ್ಲಿ ಕುರಿ ಎಂದರೆ ನಾಯಿ. ಹಾಗೆಯೇ ತಮ್ಮ‌ ಎಂದರೆ ಮಗ, ಮಂಗ ಎಂದರೆ ತರಕಾರಿ, ಕುಮಾರ(ಗೆಣಸು), ತಂಗಿ( ಅಂತ್ಯ ಸಂಸ್ಕಾರ), ತಪು( ಪವಿತ್ರ), ಕೈ ಎಂದರೆ ತಿನ್ನು! ಕಿಡಿಗೇಡಿ ಕನ್ನಡಿಗನ್ಯಾರೋ ತಮಾಷೆ ನೋಡಲು ತಪ್ಪು ತಪ್ಪಾಗಿ ಮಾ‌ಓರಿ ಜನರಿಗೆ ಕನ್ನಡ ಕಲಿಸಿಹನೆನ್ನುವುದೇ ನನ್ನ ಗುಮಾನಿ! ಇರಲಿ, ಮತ್ತೆ ಪಾಲಿನೇಷಿಯಾದಿಂದ ನ್ಯೂಜಿಲ್ಯಾಂಡಿಗೆ ಬಂದವರ ಕಡೆಗೆ ಗಮನ ಹರಿಸೋಣ.


ತಮ್ಮದೇ ಆದ ರೀತಿ ರಿವಾಜುಗಳಲ್ಲಿ, ಸುಂದರವಾದ ಮರ ಹಾಗು ಕಲ್ಲು ಕೆತ್ತನೆಗಳಲ್ಲಿ, ಆಂತರಿಕ ಕಲಹ ಗುಂಪುಗಾರಿಕೆಗಳಲ್ಲಿ ಮುಳುಗಿಹೋಗಿದ್ದ ಮಾ‌ಓರಿ ಜನರನ್ನು ಅಕ್ಷರಶಃ ಬಡಿದೆಬ್ಬಿಸಿದ್ದು, ಹದಿನೆಂಟನೆಯ ಶತಮಾನದಲ್ಲಿ ಯೂರೋಪಿನ ಜನರ ಆಗಮನ. ೧೮೪೦ ರಲ್ಲಿ ಬ್ರಿಟಿಷ್ ಮತ್ತು ಮಾ‌ಓರಿ ಬಣಗಳ ನಡುವೆ ವಾಯ್ಟಂಗಿಯಲ್ಲಿ ನಡೆದ ಒಪ್ಪಂದದ ಮುಖಾಂತರ ನ್ಯೂಜಿಲ್ಯಾಂಡಿನಲ್ಲಿ ಬ್ರಿಟಿಷ್ ಸಾರ್ವಭೌಮತ್ವದ ಸ್ಥಾಪನೆಯಾಯಿತು. ಯಥಾಪ್ರಕಾರ ಇತಿಹಾಸದುದ್ದಕ್ಕೂ ನಡೆದಂತೆ ಅಲ್ಪಸಂಖ್ಯಾತ ಜನಾಂಗೀಯ ಗುಂಪುಗಳ ನಿರ್ಮೂಲನೆ ಮಾಡುವ ಉಸ್ತುವಾರಿ ಹೊತ್ತಂತೆ ಆಡುವ ವಸಾಹತುಶಾಹಿ ಶಕ್ತಿಗಳ ದಬ್ಬಾಳಿಕೆ, ದೌರ್ಜನ್ಯದಡಿ ನಲುಗಿದ ಮಾ‌ಓರಿ ಜನರ ಸಂಖ್ಯೆ ಬಹುವಾಗಿ ಕುಗ್ಗಿ ಕ್ಷೀಣಿಸಿತು.

ಸಮಾಧಾನದ ಸಂಗತಿಯೆಂದರೆ ವಿನಾಶದಂಚಿಕೆ ಹೋಗಿದ್ದ ಮಾ‌ಓರಿ ಜನಸಂಖ್ಯೆಯನ್ನು, ಅವರ ಸಂಸ್ಕೃತಿಯನ್ನು ಪುನಶ್ಚೇತನಗೊಳಿಸುವ ದಿಶೆಯಲ್ಲಿ ಕೆಲಸ ಕಾರ್ಯಗಳು ಸರಕಾರದ ವತಿಯಿಂದ ನಡೆಯಲು ಆರಂಭವಾಗಿದೆ. ನೆಲವನ್ನು ಕಳೆದುಕೊಂಡ ಮಾವೋರಿ ಬಣದವರಿಗೆ ಹಣ ಕಾಸಿನ ಪರಿಹಾರ, ಮಾ‌ಓರಿ ಭಾಷೆಗೆ ಅಧಿಕೃತ ಪಟ್ಟ, ಬಿಲಿಯನ್‌ಗಟ್ಟಲೆ ಆದಾಯ ತರುವ ಮೀನುಗಾರಿಕೆ ಉದ್ಯಮದಲ್ಲಿ ಗಣನೀಯ ಪ್ರಮಾಣದ ಹಕ್ಕು ಸ್ಥಾಪನೆ ಮುಂತಾದ ಯೋಜನೆಗಳು ಮಾ‌ಓರಿ ಜನರ ಆರ್ಥಿಕ ಹಾಗು ಸಾಮಾಜಿಕ ಪರಿಸ್ಥಿತಿಯನ್ನು ತಕ್ಕಮಟ್ಟಿಗೆ ಸುಧಾರಿಸಿವೆ.