ಹೂವು ಎಂದರೆ ಗೆಲುವು, ಕಾಯಿ ಎಂದರೆ ಅಂದಿನ ಕೋಳಿ ಕಾದಾಟದ ಪಂದ್ಯದಲ್ಲಿ ಸೋಲು ಎಂಬುದೊಂದು ಪುರಾತನ ನಂಬಿಕೆ. ಇದು ಅಂಗಾರ ಒಬ್ಬನ ನಂಬಿಕೆಯಲ್ಲ, ಕೋಳಿಅಂಕಕ್ಕೆ ಹೋಗುವ ಎಲ್ಲರೂ ಮನೆಯ ಪುಟ್ಟ ಮಕ್ಕಳ ಬಳಿ ಈ ಪ್ರಶ್ನೆ ಕೇಳಿ‌ ಅಂಕಕ್ಕೆ ಹೊರಡುವುದು ವಾಡಿಕೆ. ಇದರ ಅರ್ಥ ತಿಳಿದ ಮೇಲೆ ಮುತ್ತ, ‘ಕಾಯಿ’ ಎಂದು ಉತ್ತರಿಸಿದ್ದೇ ಇಲ್ಲ. ಈ ದಿನ ಅಂಗಾರ ಬಲ್ನಾಡಿನ ಜಾತ್ರೆಯ ಕೊನೆಯ ದಿನದಂದು ನಡೆಯುವ ಕೋಳಿಅಂಕಕ್ಕೆ ಹೊರಟು ನಿಂತಿದ್ದ.
ಸುಜಯ್ ಪಿ. ಬರೆದ ಈ ಭಾನುವಾರದ ಕತೆ ‘ಕುಕ್ಕುಟ ಕದನ ಕಥನ’ ನಿಮ್ಮ ಓದಿಗಾಗಿ.

 

ಬೆಳ್ಳಂಬೆಳಗ್ಗೆ ಬಂದಿದ್ದ ಎಳೆ ಬಿರುಗಾಳಿಯಂಥ ಗಾಳಿಗೆ ಅಂಗಾರನ ಮನೆಯ ಎದುರಿದ್ದ ಬಿದಿರಿನ ಹಿಂಡಿನಿಂದ ಹಾರಿ ಬಂದ ತರಗೆಲೆಗಳು ಅಂಗಳದಲ್ಲಿ ಚದುರಿ ಬಿದ್ದಿದ್ದವು. ಹರಡಿಕೊಂಡಿದ್ದ ಅಷ್ಟೂ ತರಗೆಲೆಗಳನ್ನು ಸೋಗೆಯ ಪೊರಕೆಯಲ್ಲಿ ಗುಡಿಸಿದ ಸೀತೆ ಅಂಗಳಕ್ಕೆ ಸಗಣಿ ಸಾರಿಸಿದ್ದಳು. ಮಂದವಾಗಿದ್ದ ಸಗಣಿ ಅತ್ತ ಹಿತವೂ ಅಲ್ಲದ ಇತ್ತ ವಾಸನೆಯೂ ಅಲ್ಲದ ವಿಚಿತ್ರ ಪರಿಮಳ ಬೀರಲು ಶುರು ಮಾಡಿತ್ತು. ಅದೇ ಅಂಗಳದಲ್ಲಿ ಅರೆಬರೆ ಒಣಗಿದ್ದ ಸಗಣಿಯನ್ನು ಚಪ್ಪಲಿ ಇಲ್ಲದ ಕಾಲಲ್ಲೇ ಮೆಟ್ಟಿಕೊಂಡು ನಿಂತಿದ್ದ ಅಂಗಾರ ಕಪ್ಪು ಹುಂಜವೊಂದನ್ನು ಕೈಯಲ್ಲಿ ಹಿಡಿದುಕೊಂಡು ಮಗ ಮುತ್ತನ ಬಳಿ “ಹೂವಾ, ಕಾಯಿಯ?” ಎಂದು ಪ್ರಶ್ನಿಸಿದ. ಸಾರಿಸಿದ್ದ ಸೆಗಣಿ ಒಣಗುವವರೆಗೆ ಅಂಗಳದಲ್ಲಿ ಓಡಾಡಬಾರದೆಂದು ಅಮ್ಮ ಸೀತೆ ಎಚ್ಚರಿಸಿದ್ದರಿಂದ ಮನೆಯ ಮೆಟ್ಟಿಲಲ್ಲಿ ಕುಳಿತು ಅಂಗಾರನ ಕೈಯಲ್ಲಿದ್ದ ಹುಂಜವನ್ನೇ ದಿಟ್ಟಿಸಿ ನೋಡುತ್ತಿದ್ದ ಮುತ್ತ “ಹೂವು” ಎಂದು ಉತ್ತರಿಸಿದ.

“ಹೂವಾ, ಕಾಯ?” ಇದು ಕೋಳಿಅಂಕಕ್ಕೆ ಹೊರಡುವಾಗ ಅಂಗಾರ ಮಗ ಮುತ್ತನ ಬಳಿ ಯಾವಾಗಲೂ ಕೇಳುವ ಪ್ರಶ್ನೆ.

ಹೂವು ಎಂದರೆ ಗೆಲುವು, ಕಾಯಿ ಎಂದರೆ ಅಂದಿನ ಕೋಳಿ ಕಾದಾಟದ ಪಂದ್ಯದಲ್ಲಿ ಸೋಲು ಎಂಬುದೊಂದು ಪುರಾತನ ನಂಬಿಕೆ. ಇದು ಅಂಗಾರ ಒಬ್ಬನ ನಂಬಿಕೆಯಲ್ಲ, ಕೋಳಿಅಂಕಕ್ಕೆ ಹೋಗುವ ಎಲ್ಲರೂ ಮನೆಯ ಪುಟ್ಟ ಮಕ್ಕಳ ಬಳಿ ಈ ಪ್ರಶ್ನೆ ಕೇಳಿ‌ ಅಂಕಕ್ಕೆ ಹೊರಡುವುದು ವಾಡಿಕೆ. ಇದರ ಅರ್ಥ ತಿಳಿದ ಮೇಲೆ ಮುತ್ತ, ‘ಕಾಯಿ’ ಎಂದು ಉತ್ತರಿಸಿದ್ದೇ ಇಲ್ಲ. ಈ ದಿನ ಅಂಗಾರ ಬಲ್ನಾಡಿನ ಜಾತ್ರೆಯ ಕೊನೆಯ ದಿನದಂದು ನಡೆಯುವ ಕೋಳಿಅಂಕಕ್ಕೆ ಹೊರಟು ನಿಂತಿದ್ದ.

ಅಪ್ಪನ ‘ಹೂವು, ಕಾಯಿ’ ಪ್ರಶ್ನೆಗೆ ‘ಹೂವು’ ಎಂದೇ ಉತ್ತರಿಸಿದ್ದರೂ ಮೂರನೇ ಕ್ಲಾಸಿನ ಮುತ್ತನ ಮನಸ್ಸು ಎಂದಿನಂತೆ ಇರಲಿಲ್ಲ, ಮನಸ್ಸೊಳಗೆ ಮೂಟೆಗಟ್ಟಲೆ ಆತಂಕ‌ವಿತ್ತು. ಕಾರಣ ಅಂಗಾರ ಇಂದು ಮುತ್ತವಿನ ಪ್ರೀತಿಯ ಹುಂಜ ‘ಕರಿಯ’ನನ್ನು ಕಂಕುಳಲ್ಲಿ ಇಟ್ಟುಕೊಂಡು ಕೋಳಿಅಂಕಕ್ಕೆ ಹೋಗಿದ್ದ. ತನ್ನಂತೇ ಕಪ್ಪು ಕಪ್ಪಾಗಿದ್ದ ಕರಿಯನನ್ನು ಕಂಡರೆ ಮರಿ ಇದ್ದಾಗಿನಿಂದಲೂ ಮುತ್ತುಗೆ ತುಂಬಾ ಪ್ರೀತಿ. ಅದಕ್ಕೆ ಮೂರು ಹೊತ್ತು ಇವನೇ ಆಹಾರ ಹಾಕುತ್ತಿದ್ದ. ಬೇರೆ ಕೋಳಿಗಳು ಬಂದು ಜಗಳವಾಡಿದರೆ ಓಡಿ ಹೋಗಿ ಬಿಡಿಸುತ್ತಿದ್ದ. “ಸದಾ ಕೈಯಲ್ಲಿ ಹಿಡಿದುಕೊಂಡೇ ಇದ್ದರೆ ಹುಂಜ ಹಾಳಾಗುತ್ತದೆ, ಅದರ ಗಡಸುತನ ಹೊರಟುಬಿಡುತ್ತದೆ, ಸಾಧುವಾಗಿಬಿಡುತ್ತದೆ” ಎಂದು ಅಂಗಾರ ಗದರಿಸುತ್ತಿದ್ದರಿಂದ ಅವನು ಇಲ್ಲದಾಗ ಮಾತ್ರ ತೋಳಲ್ಲಿ ಕುಳ್ಳಿರಿಸಿ ಮುದ್ದು ಮಾಡುತ್ತಿದ್ದ, ಅದರ ಜೊತೆ ಮಾತಾಡುತಿದ್ದ. ಮುತ್ತ ಮತ್ತು ಕರಿಯ ಎಂಬ ಹುಂಜದ ನಡುವೆ ಒಂದು ಬಂಧವಿತ್ತು, ಪ್ರೀತಿಯಿತ್ತು. ಕರಿಯನ ರೆಕ್ಕೆಯಿಂದ ಉದುರಿ ಬಿದ್ದಿದ್ದ ಕಪ್ಪು ಮಿಶ್ರಿತ ಕೆಂಬಣ್ಣದ ಗರಿಯೊಂದು ಮುತ್ತನ ಮೂರನೇ ಕ್ಲಾಸಿನ ಸಮಾಜ ವಿಜ್ಞಾನ ಪುಸ್ತಕದ ಒಳಗಿತ್ತು.

ಇಂದು‌ ಅಪ್ಪ ಅಂಕಕ್ಕೆ ಕರಿಯನನ್ನು ಕೊಂಡೊಯ್ದದ್ದು ಮುತ್ತನಿಗೆ ಒಂಚೂರೂ ಇಷ್ಟವಿರಲಿಲ್ಲ. ಎರಡು ಹುಂಜಗಳ ಕಾಲಿಗೆ ಸಣ್ಣ ಗಾತ್ರದ ಅತೀ ಹರಿತವಾದ ಕತ್ತಿಯನ್ನು ಕಟ್ಟಿ, ವೃತ್ತವೊಂದರ ಒಳಗೆ ಅವು ಒಂದಕ್ಕೊಂದು ಹೊಡೆದಾಡುವಂತೆ ಮಾಡಿ, ಕತ್ತಿಯ ಏಟಿಗೆ ಯಾವುದಾದರೊಂದು ಹುಂಜ ಸಾಯುವವರೆಗೆ ನಡೆಯುವ ಈ‌ ಕೋಳಿಅಂಕಕ್ಕೆ ಹೋದ ಕೋಳಿಯ ಭವಿಷ್ಯವನ್ನು ಮನೆಯ ಗೋಡೆಯಲ್ಲಿ ಓರೆಯಾಗಿ ನೇತಾಡಿಸಿದ್ದ ದೇವರುಗಳಿಗೂ ಹೇಳಲು ಸಾಧ್ಯವಿಲ್ಲ. ಇದು ಗೊತ್ತಿದ್ದೇ ಮುತ್ತ ಭಯಪಟ್ಟುಕೊಂಡಿದ್ದು. ವರ್ಷಗಳ ಹಿಂದೊಮ್ಮೆ ಮುಗೇರಡ್ಕದ ಜಾತ್ರೆಗೆ ಹೋದಾಗ ಮುತ್ತ ಅಪ್ಪನ ಹೆಗಲ ಮೇಲೆ ಕುಳಿತೇ ಕೋಳಿಅಂಕದಲ್ಲಿ ಹರಿಯುವ ರಕ್ತದ ಓಕುಳಿಯನ್ನು ನೋಡಿದ್ದ. ಅವತ್ತು ಅಲ್ಲಿ ನಡೆದ ಕೋಳಿ ಕಾದಾಟವೊಂದರಲ್ಲಿ ಕತ್ತಿಯ ಏಟಿಗೆ ಹುಂಜವೊಂದರ ಕುತ್ತಿಗೆ ಕತ್ತರಿಸಿ ಹೋಗಿ ತಲೆ ನೇತಾಡುತ್ತಿದ್ದರೂ ಆ ಹುಂಜ ಮಾತ್ರ ಸಿಕ್ಕಸಿಕ್ಕಲ್ಲಿ ಓಡಾಡಿ ಅಲ್ಲಿ ಸೇರಿದ್ದ ಜನರನ್ನು ಭಯಪಡಿಸಿತ್ತು. ಆ‌ಮೇಲೆ ಹಲವು ಬಾರಿ ಆ ಕುತ್ತಿಗೆ ಇಲ್ಲದ ಕೋಳಿ ಮುತ್ತನ ಕನಸಿನಲ್ಲೆಲ್ಲಾ ಬಂದು ನಿದ್ದೆ ಇಲ್ಲದಂತೆ ಮಾಡಿತ್ತು. ಅದೆಲ್ಲಾ ಮುತ್ತನ ನೆನಪಿನಿಂದ ಇನ್ನೂ ಹೋಗಿರಲಿಲ್ಲ.

ಬಾಗಿಲಲ್ಲಿ‌ ನಿಂತುಕೊಂಡು ಅಪ್ಪ ಕರಿಯನನ್ನು ಎತ್ತಿಕೊಂಡು ಹೋದ ದಾರಿಯನ್ನೇ ದಿಟ್ಟಿಸತೊಡಗಿದ. ಬೆಳಗ್ಗಿನ ಎಳೆ ಬಿಸಿಲು ಮುಗಿಯುತ್ತಿತ್ತು. ಸೂರ್ಯ ಹುಡುಗಾಟಿಕೆ ಬಿಟ್ಟು ವಯಸ್ಸಿಗೆ ಬರುತ್ತಿದ್ದ.

*****

ಅಂದು ನಿಧಾನವಾಗಿ ಸಂಜೆ ಕಳೆದು ಗಂಟೆ ಏಳೂವರೆ ಆದರೂ ಅಂಗಾರ ಕಾಣುತ್ತಿಲ್ಲ. ಮುತ್ತನಂತೆ ಅವನ ಅಮ್ಮ ಸೀತೆಯೂ ಕಾಯುತಿದ್ದಾಳೆ. ಅವಳು ಅಡುಗೆಮನೆಯಲ್ಲಿ ಒಟ್ಟಾಗಿ ಇಟ್ಟು ಬಂದಿದ್ದ ಮಸಾಲೆಗಳು ಕೂಡಾ ಅಂಗಾರನನ್ನು ಕಾಯುತ್ತಿದ್ದಂತೆ ಕಾಣುತ್ತಿತ್ತು. ಅಂಗಾರ ಅಂಕದಲ್ಲಿ ಗೆದ್ದು ಕೋಳಿ ತಂದರೆ ಸೀತೆ ಬೈಗುಳಗಳ ನಡುವೆ ಮಸಾಲೆ ಕಡೆಯಬೇಕಿತ್ತು. ಅವನು ಸೋತು ಬಂದರೂ ಬೈಗುಳಗಳ ಕೇಳಿಕೊಂಡರು ಮಲಗಬೇಕಿತ್ತು.

ಕುಡಿದವನಿಗೆ ಬೈಯಲು ಕಾರಣ ಬೇಕಿರಲಿಲ್ಲ. ಗೆದ್ದರೆ ಖುಷಿಯಿಂದ, ಸೋತರೆ ಬೇಸರದಿಂದ ಸಾರಾಯಿ ಅಂಗಾರನ ಗಂಟಲಿಳಿಯುತಿತ್ತು.

ಮನೆಯ ಮುಂದಿನ ಕಟ್ಟೆಯ ಮೂಲೆಯಲ್ಲಿ ಕುಳಿತ ಮುತ್ತನಿಗೆ ದೂರದಲ್ಲಿ ಕೆಂಪನೆಯ ಬೆಳಕು ಕಾಣತೊಡಗಿತು. ಓಲಾಡಿಕೊಂಡು ಬರುತ್ತಿರುವ ಅದು ತೆಂಗಿನಮರದ ಗರಿಯ ಸೂಟೆಯ ಬೆಳಕು. ಮುತ್ತನಿಗೆ ಗೊತ್ತಾಯಿತು, ಅಂಗಾರ ಬಂದ.

ತೆಂಗಿನ ಮರದ ಒಣ ಗರಿಗಳನ್ನು ಹಿಡಿಯಷ್ಟು ಒಟ್ಟು ಮಾಡಿ, ಮಧ್ಯ ಮಧ್ಯ ಗರಿಯಿಂದಲೇ ನಾಲೈದು ಗಂಟು ಬಿಗಿದು ಮಾಡಿದ ನಾಲ್ಕಡಿ ಉದ್ದದ ಗರಿಗಳ ಉದ್ದನೆಯ ಕಟ್ಟು, ಸೂಟೆ. ಇದರ ತುದಿಗೆ ಬೆಂಕಿ ತಾಗಿಸಿಬಿಡಬೇಕು. ಮಧ್ಯದ ಗಂಟುಗಳು‌ ಗರಿ ಒಮ್ಮೆಲೇ ಉರಿದು‌ ಮುಗಿಯದಂತೆ ನೋಡಿಕೊಳ್ಳತ್ತದೆ. ಹೆಚ್ಚು ಬೆಳಕು ಬೇಕಾದಾಗೆಲ್ಲ‌ ಬೀಸುತ್ತಾ ಸಾಗಿದರೆ ಸಾಕು ಗರಿಗಳು ಉರಿದು ಬೆಳಕು ಬರುತ್ತದೆ.

ಬೆಳಕು ಹತ್ತಿರವಾಯಿತು, ಅಂಗಾರ ಬರುತ್ತಿದ್ದಾನೆ.
ಒಂದು ಕೈಯಲ್ಲಿ ಮುಕ್ಕಾಲು ಮುಗಿದ ಸೂಟೆ‌, ಇನ್ನೊಂದರಲ್ಲಿ ಚೀಲ. ಬಟ್ಟೆಯ ಚೀಲದ ಕೆಳಭಾಗದಲ್ಲಿ ರಕ್ತ ಹನಿಗಟ್ಟಿತ್ತು.

ತನ್ನಂತೇ ಕಪ್ಪು ಕಪ್ಪಾಗಿದ್ದ ಕರಿಯನನ್ನು ಕಂಡರೆ ಮರಿ ಇದ್ದಾಗಿನಿಂದಲೂ ಮುತ್ತುಗೆ ತುಂಬಾ ಪ್ರೀತಿ. ಅದಕ್ಕೆ ಮೂರು ಹೊತ್ತು ಇವನೇ ಆಹಾರ ಹಾಕುತ್ತಿದ್ದ. ಬೇರೆ ಕೋಳಿಗಳು ಬಂದು ಜಗಳವಾಡಿದರೆ ಓಡಿ ಹೋಗಿ ಬಿಡಿಸುತ್ತಿದ್ದ.

ಅಂಗಾರ ಕುಡಿದಿರಲಿಲ್ಲ, ಮುಖದಲ್ಲಿ ಬೇಸರವಿತ್ತು.
ಮುತ್ತ ಆತುರದಿಂದ ಚೀಲ ತೆರೆದರೆ ಪ್ರೀತಿಯ ಕರಿಯ ಚೀಲದೊಳಗೆ ಮಲಗಿದ್ದಾನೆ, ಮೈ ತುಂಬಾ ರಕ್ತ. ಈ ದಿನ ಪಂದ್ಯ ರಾಜಿಯಲ್ಲಿ ಮುಗಿದಿತ್ತು. ಕರಿಯ ಮತ್ತು ಅವನ ಎದುರಾಳಿ ಕೋಳಿ ಎರಡೂ ಮೇಲೇಳಲಾರದಷ್ಟು ಗಾಯಗೊಂಡಿದ್ದವು. ಪಂದ್ಯದ ಪ್ರಕಾರ ಕೋಳಿಗಳೆರಡೂ ಏಳಲಾರದಷ್ಟು ಗಾಯಗೊಂಡಾಗ ಕೋಳಿ ಮಾಲೀಕರಿಬ್ಬರೂ ಪರಸ್ಪರ ಕೋಳಿಗಳನ್ನು ಬದಲಾಯಿಸಿಕೊಳ್ಳಬೇಕು. ಅವರವರ ಕೋಳಿಯನ್ನೇ ಮನೆಗೆ ಕೊಂಡೊಯ್ದು ಕೊಯ್ದು ತಿನ್ನುವುದು ಎಲ್ಲರಿಗೂ ಒಗ್ಗದ ವಿಷಯ ಎಂಬ ಸೂಕ್ಷ್ಮವೂ ಇಲ್ಲಿತ್ತು.

ಇಂದು ಕರಿಯನಿಗೂ ಎದುರಾಳಿ ಕೋಳಿಗೂ ನಡೆದ ಕಾಳಗದಲ್ಲಿ ಎರಡು ಕೋಳಿಗಳೂ ಸತ್ತಿರಲಿಲ್ಲ. ಆದರೆ ಎದ್ದೇಳಲು ಆಗದಷ್ಟು ಗಾಯಗೊಂಡು ಬಿದ್ದಿದ್ದವು. ಕೋಳಿಗಳನ್ನು ಬದಲಾಯಿಸಿಕೊಳ್ಳಲು ಒಪ್ಪದ ಅಂಗಾರ ತನಗೆ ತನ್ನ ಕೋಳಿ ಕರಿಯನೇ ಬೇಕೆಂದು ಹಟ ಹಿಡಿದು ಕರಿಯನನ್ನು ಮನೆಗೆ ತಂದಿದ್ದ. ಕರಿಯನನ್ನು ಬದುಕಿಸಬೇಕೆನ್ನುವುದು ಅಂಗಾರನ ಆಸೆ.

ಚೀಲದಿಂದ ಮೇಲೆತ್ತಿದರೆ, ಕರಿಯನ ಎಡಕಾಲಿನ ತೊಡೆಯ ಬಳಿ ಕತ್ತಿ ನುಗ್ಗಿತ್ತು, ಕತ್ತಿನ ಕೆಳಭಾಗದಲ್ಲೂ ಕೂಡ ಸಣ್ಣ ಏಟಾಗಿತ್ತು. ತುಂಬಾನೇ ರಕ್ತ ಹರಿದಿದ್ದರಿಂದ ನಿತ್ರಾಣಗೊಂಡು ತಲೆ ಎತ್ತಲಾಗುತ್ತಿರಲಿಲ್ಲ.

ಕಣ್ಣು ಕೂಡಾ ಮುಚ್ಚಿತ್ತು. ಮುತ್ತ ಅಳುತ್ತಾ ಕರಿಯನ ಮುಖದ ಮೇಲೆ ನೀರು ಚಿಮುಕಿಸತೊಡಗಿದ.

ಕೋಳಿಅಂಕದಲ್ಲಿ ಗಾಯಗೊಂಡ ಕೋಳಿಯ ಶುಶ್ರೂಷೆಗೆ ಕುಂಜೂರುಪಂಜದಲ್ಲಿ ಹೆಸರುವಾಸಿಯಾಗಿದ್ದವನು ಕುರುಂಬಿಲ. ಅವನ ಮೇಲಿನ ನಂಬಿಕೆಯಿಂದಲೇ ಅಂಗಾರ ಕರಿಯನನ್ನು ಹೊತ್ತು ತಂದಿದ್ದ. ಅವನೊಮ್ಮೆ ವಿಟ್ಲದಲ್ಲಿ ನಡೆದ ಕೋಳಿಅಂಕವೊಂದರಲ್ಲಿ ಎದುರಾಳಿ ಕೋಳಿಯ ಕತ್ತಿಯ ಏಟಿಗೆ ಕುತ್ತಿಗೆಯ ಶ್ವಾಸನಾಳಗಳೆಲ್ಲಾ ತುಂಡಾಗಿ ಮಲಗಿದ್ದ ಕೋಳಿಯೊಂದರ ಬಾಯಿಗೆ ತನ್ನ ಬಾಯಿಂದ ಗಾಳಿ ಊದಿ ಆ ಕೋಳಿಗೆ ಒಂದು ಕ್ಷಣಕ್ಕೆ ಜೀವ ಬರಿಸಿ ಪಂದ್ಯ ನೋಡುತ್ತಿದ್ದವರು ಉಸಿರು ಬಿಗಿ ಹಿಡಿಯುವಂತೆ ಮಾಡಿದ್ದ.

ಅಂಗಾರನ ಮನೆಯ ಎಡಬದಿಗೆ ನಿಂತು ಜೋರಾಗಿ “ಕೂ…” ಹಾಕಿದರೆ ಕುರುಂಬಿಲನಿಗೆ ಕೇಳುತ್ತದೆ. ಅಂಗಾರನ ಎರಡನೇ ಕೂಗಿಗೆ ಕುರುಂಬಿಲನ ಮನೆಯ ದೀಪಗಳು ಉರಿದವು, ಇಷ್ಟು ಹೊತ್ತಿಗೆ ಕರೆದಿದ್ದಾರೆ ಎಂದರೆ ಅದು ಅಂಕದಲ್ಲಿ ಗಾಯಗೊಂಡ ಕೋಳಿಗೆ ಮದ್ದು ಮಾಡಲು ಎಂದು ಅವನಿಗೆ ತಿಳಿಯಿತು, ಕುರುಂಬಿಲ ಬಂದ.

ಬಿಸಿಮಾಡಿದ ಕರಿಬೇವಿನ ಎಣ್ಣೆ ಮತ್ತು ಕೋಳಿಗೂಡಿನ ಮೇಲೆ ಸಂಗ್ರಹಿಸಿಟ್ಟಿದ್ದ ಕೋಳಿಗರಿಗಳಲ್ಲಿ ಉದ್ದನೆಯದೊಂದು ಗರಿ, ಸೂಜಿ, ನೂಲು ಇವಿಷ್ಟು ಕುರುಂಬಿಲನ ಮುಂದೆ ಸಿದ್ಧವಾಯಿತು.
ಅಂಗಾರ ಕರಿಯನನ್ನು ಅಲುಗಾಡದಂತೆ ಹಿಡಿದುಕೊಂಡಿದ್ದ. ಕುರುಂಬಿಲ ನಿಧಾನವಾಗಿ ಗಾಯವನ್ನು  ಸ್ವಚ್ಛ ಮಾಡಿ ತನ್ನ ಬಳಿಯಿದ್ದ ಹಲವು ಕಾಡುಗಿಡಗಳ ಬೇರಿನ ಮಿಶ್ರಣವನ್ನು ಗಾಯದ ಸುತ್ತಲೂ ಹಚ್ಚಿದ. ನಂತರ ನಿಧಾನವಾಗಿ ಗಾಯವನ್ನು ಹೊಲಿಯತೊಡಗಿದ‌. ಕೊನೆಗೆ ಗರಿಯೊಂದರ ಸಹಾಯದಿಂದ ಕರಿಬೇವಿನ ಎಣ್ಣೆಯನ್ನು ಗಾಯದ ಮೇಲೆಲ್ಲಾ ಸೋಕಿಸಿದ. ಇಷ್ಟೆಲ್ಲಾ ನಡೆಯುವಾಗ ಕರಿಯ ಸಣ್ಣಗೆ ನಡುಗುತ್ತಾ ಮಲಗಿದ್ದ‌.

ಬುಟ್ಟಿ ಹೆಣೆಯುವ ಕುರುಂಬಿಲನೊಳಗಿದ್ದ ವೈದ್ಯನೊಬ್ಬ ಸದ್ದಿಲ್ಲದಂತೆ ಹೊರಬಂದಿದ್ದ. ಅದರ ಫಲವಾಗಿ ಅವತ್ತು ಕರಿಯ ಸಾವಿನಿಂದ ಪಾರಾಗಿ ಬದುಕಿದ. ಅಂದಿನಿಂದ ಒಂದು ವಾರಗಳಷ್ಟು ಕಾಲ ಈ ರೀತಿಯ ಆರೈಕೆ ಮಾಡಬೇಕಿತ್ತು. ಗಾಯ ಸ್ವಚ್ಛ ಮಾಡಿ ಕೀವು ತೆಗೆದು ಎಣ್ಣೆ ಹಚ್ಚಬೇಕು, ಹೊಲಿಗೆ ಹೋದರೆ ಹೊಸದಾಗಿ ಹಾಕಬೇಕಿತ್ತು.

ಕುರುಂಬಿಲನ ಹೊಲಿಗೆ ಮುಗಿದು ಕರಿಯ ಬದುಕುತ್ತಾನೆ ಎಂದು ಗೊತ್ತಾದ ಮೇಲೆ ನಿಟ್ಟುಸಿರು ಬಿಟ್ಟ ಅಂಗಾರ ಸೀದಾ ಮನೆಯ ಹಿಂಭಾಗಕ್ಕೆ ಓಡಿದ. ಸ್ನಾನದ ಮನೆಯ ಅಟ್ಟದ ಮೇಲೆ ಬಚ್ಚಿಟ್ಟಿದ್ದ ಗೇರುಹಣ್ಣಿನ ಸಾರಾಯಿ ಹೊರತೆಗೆದು ಎರಡು ಸ್ಟೀಲಿನ ಗ್ಲಾಸಿಗೆ ಹುಯ್ಯತೊಡಗಿದ. ಮುತ್ತುವಿಗೆ ಶಾಲೆಯಲ್ಲಿ ಬಹುಮಾನ ಸಿಕ್ಕ ಗ್ಲಾಸುಗಳು ಅದು. ಕುರುಂಬಿಲ ಅದಾಗಲೇ ಸಾರಾಯಿಯ ಆಲೋಚನೆಯಲ್ಲಿದ್ದುದರಿಂದ ಅವನಿಗೆ ವಾಸನೆ ಜೋರಾಗಿಯೇ ಬಡಿಯತೊಡಗಿತು. ಕರಿಯನನ್ನು ಮೆಲ್ಲಗೆ ಗೂಡೊಳಗೆ ಬಿಟ್ಟು ಅವನೂ ಮನೆಯ ಹಿಂಬದಿಗೆ ಓಡಿದ.

ಅಂಗಾರ ಸೀಮೆಎಣ್ಣೆ ದೀಪದ ಮುಂದೆ ಕುಳಿತಿದ್ದ. ಕುರುಂಬಿಲನೂ ಕುಳಿತುಕೊಂಡ. ಅಂಗಾರ ತೋರುಬೆರಳನ್ನು ಸಾರಾಯಿ ತುಂಬಿದ ಗ್ಲಾಸಿನೊಳಗೆ ಅದ್ದಿ ಬೆರಳನ್ನು ದೀಪದ ಮುಂದೆ ಹಿಡಿದ. ಬೆಂಕಿ ಭಗ್ಗನೆ ಉರಿಯಿತು. ಅಲ್ಲಿಗೆ ಸಾರಾಯಿ ಇನ್ನೂ ಘಾಟು ಕಳೆದುಕೊಂಡಿಲ್ಲ ಎಂದಾಯಿತು. ಇಬ್ಬರೂ ಕುಡಿಯಲು ಶುರು ಮಾಡಿದರು. ಸುಟ್ಟು ಹೋಗುತ್ತೇವೆ ಎಂದು ತಿಳಿಯದ ಒಂದಷ್ಟು ಹಾತೆಗಳು ಅಲ್ಲೇ ಉರಿಯುತಿದ್ದ ದೀಪದ ಮೇಲೆ ಬಿದ್ದು ಸಾಯತೊಡಗಿದವು.

*****

ತನ್ನಿಷ್ಟದ ಕರಿಯನಿಗಾದ ಗಾಯ, ನೋವು ಮುತ್ತನನ್ನು ಇನ್ನಿಲ್ಲದಂತೆ ದುಃಖಕ್ಕೆ ದೂಡಿತ್ತು. ಆ ನೋವು ತನಗೇ ಆದಂತೆ ಅನಿಸಿತ್ತು ಅವನಿಗೆ. ತಾನೊಬ್ಬನೇ ಗೂಡಿನ ಬಳಿ ಹೋಗಿ ಕರಿಯನನ್ನು ಮೆತ್ತಗೆ ಸವರಿದ. ಗಾಯದಿಂದಲೂ, ಹೊಲಿಗೆಯಿಂದಲೂ ಬಸವಳಿದಿದ್ದ ಕರಿಯ ಒಂಚೂರೂ ಅಲ್ಲಾಡದೇ ಸಣ್ಣಗೆ ಸದ್ದು ಮಾಡಿದ. ಅದರ ಮೈಯೆಲ್ಲಾ ಬಿಸಿಯಾಗಿತ್ತು. ಬೇಸರದ ಮುಖದಲ್ಲಿ ಹಿಂತಿರುಗಿ ಊಟವೂ ಮಾಡದೇ ಮಲಗಿದ ಮುತ್ತನಿಗೆ ನಿದ್ದೆಯೇ ಹತ್ತಲಿಲ್ಲ. ಅಲ್ಲಲ್ಲಿ ಗಟ್ಟಿಗಟ್ಟಿಯಾಗಿದ್ದ ತಲೆದಿಂಬು ಎಂದಿಗಿಂತ ತುಸು ಹೆಚ್ಚೇ ಕಿರಿಕಿರಿ ಅನಿಸತೊಡಗಿತು. ದಿಂಬು ತೆಗೆದು ತಲೆಯ ಕೆಳಗೆ ಕೈಯಿಟ್ಟು ಮಲಗಿದ. ಪಕ್ಕದಲ್ಲಿ ಮಲಗಿದ್ದ ಅಮ್ಮ ಆಗಲೇ ನಿದ್ದೆ ಹೋಗಿದ್ದಳು.

ಅಂಗಾರನ ಬೈಗಳವಿಲ್ಲದ ರಾತ್ರಿ ಅವಳಿಗೆ ತುಂಬಾ ಅಪ್ಯಾಯಮಾನವಾಗಿತ್ತು.

******

ಮರುದಿನದಿಂದ ಕುರುಂಬಿಲ ತಪ್ಪದೇ ಕರಿಯನ ಶುಶ್ರೂಷೆ ಮಾಡಿದ. ಪ್ರತಿದಿನವೂ ಮುತ್ತ ಜೊತೆಯಲ್ಲಿದ್ದ. ಕರಿಯ ನಡೆಯುವುದನ್ನು‌ ನೋಡಲು ಮುತ್ತ ತುದಿಗಾಲಲ್ಲಿ ಕಾಯುತ್ತಿದ್ದ. ಗಾಯ ಸ್ವಚ್ಛ ಮಾಡಿ, ಕೀವು ತೆಗೆದು ಶುಶ್ರೂಷೆ ಮಾಡವಾಗ ಕರಿಯನ ಚಡಪಡಿಕೆಯನ್ನು ನೋಡಲಾಗುತ್ತಿರಲಿಲ್ಲ. ಮುತ್ತನಿಗೆ ಕೆಲವೊಮ್ಮೆ ಕಣ್ಣೀರು ಬಂದಂತಾಗುತ್ತಿತ್ತು. ಇನ್ನೊಮ್ಮೆ ಕರಿಯನನ್ನು ಕೋಳಿಅಂಕಕ್ಕೆ ಕೊಂಡೊಯ್ಯದಿರಲಿ‌ ಎಂದು ಆಗಲೇ ಮನದಲ್ಲಿ ಅಂದುಕೊಂಡ. ಆ ಮಾತನ್ನು ಅಪ್ಪನಿಗೆ ಹೇಳುವುದು ತನಗೆ ಸಾಧ್ಯವಿಲ್ಲ ಎನ್ನುವುದೂ ಅವನಿಗೆ ತಿಳಿದಿತ್ತು. ಆದರೂ ಕರಿಯ ಇನ್ನೊಮ್ಮೆ ಅಂಕಕ್ಕೆ ಹೋಗಲೇಬಾರದು ಎಂಬ ಹಠವೊಂದು ಮುತ್ತನ ಮನದೊಳಗೆ ಬೆಳೆಯಿತು.

ಕರಿಯ ಚೇತರಿಸಿಕೊಂಡ. ಎಡಗಾಲಿಗೆ ಆದ ಗಾಯ ಅರಿವಾಗುವಂತೆ ಚೂರು ಎಡವಿಕೊಂಡು ನಡೆಯಲಾರಂಭಿಸಿದ. ದಿನಗಳು ಕಳೆಯಿತು. ಆರೈಕೆಯಿಂದ ಕರಿಯ ಇನ್ನಷ್ಟು ಗಟ್ಟಿಯಾಗಿ ಬೆಳೆದ. ತೆಂಗಿನಮರದಿಂದ ಕಾಯಿ ತೆಗೆಯುವ ಕೆಲಸ ಮಾಡುತ್ತಿದ್ದ ಅಂಗಾರ ಮತ್ತು ಬುಟ್ಟಿ ಹೆಣೆಯುವ ಕುರುಂಬಿಲ ಎಲ್ಲಿ ಸಿಕ್ಕರೂ ಕೋಳಿಅಂಕದ ಮಾತು ಮಾತ್ರ ನಡೆಯುತ್ತಿತ್ತು. ಇಬ್ಬರ ಮನಸ್ಸಿನೊಳಗೂ ಕೂಡಾ ಕರಿಯನನ್ನು ಮುಂದಿನ ಕೊಳಿಅಂಕಕ್ಕೆ ಸಿದ್ಧಗೊಳಿಸುವ ಆಲೋಚನೆ ಓಡುತ್ತಿತ್ತು.

ಇಬ್ಬರಿಗೂ ಸಾವಿನವರೆಗೆ ಹೋಗಿ ಉಳಿದ ಕರಿಯ ಮುಂದಿನ ಪಂದ್ಯದಲ್ಲಿ ಖಂಡಿತವಾಗಿ ಗೆದ್ದೇ ಗೆಲ್ಲುತ್ತಾನೆ ಎಂಬ ಧೈರ್ಯ. ಇನ್ನೊಂದೆಡೆ ಕರಿಯನನ್ನು ಗಾಯದ ಸ್ಥಿತಿಯಲ್ಲಿ ಮುಂದೆ ಎಂದಿಗೂ ನೋಡಲೇಬಾರದು ಎಂದು ಪ್ರಾರ್ಥಿಸುವ ಮುತ್ತನ ಮುಗ್ಧ ಮನಸ್ಸು.

*****

ಮುಂದಿನ ಒಂದು ತಿಂಗಳಲ್ಲಿ ಮುಗೇರಡ್ಕದ ಜಾತ್ರೆ‌ ಶುರುವಾಗಿತ್ತು. ಜಾತ್ರೆ ಮುಗಿದು ಕೊನೆಯ ಮೂರು ದಿನ ಕೋಳಿಅಂಕ. ಸುತ್ತಲಿನ ಊರಲ್ಲಿ ಮುಗೇರಡ್ಕದ ಕೋಳಿಅಂಕದ್ದೇ ಮಾತುಕತೆ. ಆ ಅಂಕಕ್ಕೆ ಪಂದ್ಯ ನೋಡಲು ಬರುವವರ ಸಂಖ್ಯೆಯೂ ದೊಡ್ಡದಾಗಿತ್ತು. ಕರಿಯನನ್ನು ಕೂಡ ಅದೇ ಅಂಕಕ್ಕೆ ಕರೆದೊಯ್ಯುವುದೆಂದು ಅಂಗಾರ ಮತ್ತು ಕುರುಂಬಿಲ ನಿಶ್ಚಯಿಸಿದರು. ಈ ಮಾತು ಕೇಳಿ ಮುತ್ತ ಅಳುವಂತಾದ. ಕರಿಯನನ್ನು ಮತ್ತೊಮ್ಮೆ ಅಂಕಕ್ಕೆ ಕರೆದೊಯ್ಯುವುದು, ಅಲ್ಲಿನ ಹೊಡೆದಾಟ ಮತ್ತು ಎದುರಾಳಿ ಕೋಳಿಯ ಕತ್ತಿಯೇಟು ತಾಗಿ ರಕ್ತದಲ್ಲಿ ಅದ್ದಿದಂತಾಗುವ ಅದರ ದೇಹವನ್ನು ನೆನೆದೇ ಮುತ್ತನಿಗೆ ಗಂಟಲು ಕಟ್ಟಿದಂತಾಗಿತ್ತು. ಮೂರನೇ ಕ್ಲಾಸಿನ ಹುಡುಗ ಮುತ್ತನಿಗೆ ಅವನೇ ಕರಿಯನೆಂದು ಹೆಸರಿಟ್ಟಿದ್ದ. ಕೊಳಿಯೊಡನೆ ಬೆಳೆದಿದ್ದ ಪ್ರೀತಿಯೋ ಅಥವಾ ಅದ್ಯಾವುದೋ ಜನ್ಮದಲ್ಲಿ ಅಳಿದುಳಿದ ಬಂಧವೋ ಒಂಥರಾ ಅಚ್ಚರಿ ಹುಟ್ಟಿಸುವಂತಿತ್ತು.

ಅವನಿಗೆ ಕರಿಯ ಅಂಕಕ್ಕೆ ಹೋಗಬಾರದಿತ್ತು. ಇದನ್ನು ಅಂಗಾರನಲ್ಲಿ ಹೇಳಿ ಬೆನ್ನು ಹುಡಿಯಾಗುವವರೆಗೆ ಪೆಟ್ಟು ತಿನ್ನಲು ಅವನಿಗೆ ಭಯ ಬಿಡಲಿಲ್ಲ. ಕರಿಯನನ್ನು ಅಂಕಕ್ಕೆ ಕರೆದೊಯ್ಯುವ ದಿನ ನಿಗದಿಯಾಯಿತು. ಅದರ ಹಿಂದಿನ ಮುತ್ತ ಮಂಕಾಗಿದ್ದ. ಯಾರ ಜೊತೆಗೂ ಮಾತನಾಡಲೇ ಇಲ್ಲ. ಅಳು ಬಂದಾಗ ಹೇಳಿಕೊಳ್ಳಲು ಯಾರು ಇಲ್ಲದಿದ್ದಾಗ ಮನೆಯೊಳಗೆ ಗೋಡೆಯಲ್ಲಿ ಓರೆಯಾಗಿ ನೇತಾಡುತ್ತಿರುವ ದೇವರುಗಳು ಮಾತ್ರ ನಮ್ಮ ಮಾತನ್ನು ಒಂಚೂರು ಎದುರು ಮಾತನಾಡದೇ ಕೇಳುವರು ಎಂಬುದನ್ನು ಮುತ್ತ ಅಮ್ಮನಿಂದ ಕಲಿತಿದ್ದ. ಸಂಜೆ ಬೇಗ ಸ್ನಾನ ಮಾಡಿದವನೇ ದೇವರಮನೆ ಹೊಕ್ಕಿದ. ತನ್ನೆರಡೂ ಪುಟ್ಟ ಕೈಗಳನ್ನು ಜೋಡಿಸಿ ಕುತ್ತಿಗೆ ಎತ್ತಿದರೆ ಗೋಡೆಯ ಮೇಲೆ ಕಾಣುತ್ತಿದ್ದ ಅದಷ್ಟೂ ದೇವರ ಫೋಟೋಗಳನ್ನು ನೋಡುತ್ತಾ ಕೋಣೆಯಿಂದ ಹೊರಗಡೆ ತನ್ನ ಸದ್ದು ಕೇಳದಂತೆ ಪಿಸುಮಾತಿನಲ್ಲಿ, “ನನ್ನ ಕರಿಯನನ್ನು ಅಂಕಕ್ಕೆ ಕರೆದೊಯ್ಯದಂತೆ ಮಾಡು, ಅವನಿಗೆ ಕತ್ತಿಯ ಏಟಿನ ನೋವು ಇನ್ನೊಮ್ಮೆ ಆಗದಿರಲಿ, ಪ್ಲೀಸ್ ದೇವರೇ…” ಎಂದು ಅಳು ನಿಲ್ಲುವವರೆಗೆ ನೆಲಕ್ಕೆ ನಮಸ್ಕರಿಸಿ ಎದ್ದ‌.

ಮರುದಿನ, ಕೋಳಿಅಂಕದ ದಿನ. ಬೆಳಗಾಯಿತು. ಎಂದಿಗಿಂತ ತುಸು ಬೇಗನೇ ಎದ್ದ ಅಂಗಾರ ಮೈಮುರಿಯತ್ತಾ ಒಂದು ಹಿಡಿ ಹೆಚ್ಚಿನ ಉತ್ಸಾಹದಿಂದ ಕರಿಯನ ಗೂಡಿನ ಬಾಗಿಲು ಸರಿಸುತ್ತಿದ್ದಂತೆ ನಾಗರಹಾವೊಂದು ಸರಸರನೆ ಗೂಡಿನಿಂದ ಹೊರಬಿತ್ತು. ಹೆದರಿದ ಅಂಗಾರ ಚೀರುತ್ತಾ ಹಿಂದಕ್ಕೆ ಬಿದ್ದುಬಿಟ್ಟ. ಗೂಡಿನ ಒಳಗೆ ನೋಡಿದರೆ ಕರಿಯನಿಗೆ ಹಾವು ಕಚ್ಚಿ ವಿಷವೇರಿ ದೇಹ ಸೆಟೆದುಕೊಂಡು ಸತ್ತು ಬಿದ್ದಿದ್ದ.

ಸದ್ದು ಕೇಳಿ ಸೀತೆಯ ಜೊತೆ ಓಡಿಬಂದ ಮುತ್ತು ಗೂಡೊಳಗೆ ಸತ್ತು ಬಿದ್ದಿದ್ದ ಕರಿಯನನ್ನು ನೋಡಿ ಗರಬಡಿದಂತೆ ನಿಂತುಬಿಟ್ಟ.