ನೆಬ್ಬೂರರ ಬದುಕನ್ನು ಬಲ್ಲವರು, ಸುಮಾರು ಅರ್ಧ ಶತಮಾನಗಳ ಕಾಲ ಒಂದೇ ಮೇಳಕ್ಕೆ ಅಂಟಿಕೊಂಡು ಇವರು ಹೇಗೆ ಕಳೆದರೋ ಎಂದು ಅಚ್ಚರಿ ಪಟ್ಟಿದ್ದಿದೆ. ದೊರೆಯಬಹುದಾದ ಸ್ವಲ್ಪ ಆರ್ಥಿಕ ಲಾಭಕ್ಕಾಗಿ ಎಲ್ಲೋ ಹೋಗಿ ಅಹಿತಕರವಾದ ಸ್ಥಳದಲ್ಲಿ ಸ್ನೇಹ ಮಾಡುವುದಕ್ಕಿಂತ ಗಂಧದ ಜೊತೆಗೆ ಹೋರಾಡುತ್ತ ಬದುಕುವುದೇ ಲೇಸು ಎಂದು ಅದಕ್ಕೆ ನೆಬ್ಬೂರರು ಉತ್ತರಿಸುತ್ತಿದ್ದರು. ಶಿವರಾಮ ಹೆಗಡೆಯವರಿಂದ ದೊರೆಯುತ್ತಿದ್ದ ಶಿಕ್ಷಣ ಮಾರ್ಗದರ್ಶನ ಅವರ ಜೊತೆ ಮಾಡುತ್ತಿದ್ದ ಚರ್ಚೆ ವಿಮರ್ಶೆಗಳೆಲ್ಲ ಸೇರಿ ಗಂಧದ ಜೊತೆಗಿನ ಹೋರಾಟದಂತೆ ನೆಬ್ಬೂರರಿಗೆ ಕಾಣುತ್ತಿತ್ತು.
ಯೋಗೀಂದ್ರ ಮರವಂತೆ ಬರೆವ ಇಂಗ್ಲೆಂಡ್ ಲೆಟರ್

 

ಕನ್ನಡ ನಾಡಿನಿಂದ ಇಂಗ್ಲಿಷ್ ನಾಡಿಗೆ ಸುಮಾರು ಐದು ಸಾವಿರ ಮೈಲುಗಳು. ವಿಮಾನ ಹತ್ತಿ ಹೊರಟರೆ ಹತ್ತೋ ಹನ್ನೆರಡೋ ಗಂಟೆಗಳ ಪ್ರಯಾಣ. ಹಾಗಂತ ಕನ್ನಡ ನಾಡಿನ ಯಾವ ಮೂಲೆಯ ಸುದ್ದಿ ವಿಚಾರಗಳೂ ಇಂಗ್ಲೆಂಡ್ ಅನ್ನು ತಲುಪಲು ಬೇಕಾಗುವುದು ಬರೇ ಅರೆಕ್ಷಣ. ಚುನಾವಣೆ ರಾಜಕೀಯ ಅಪಘಾತ ಸಾಹಿತ್ಯ ಕ್ರೀಡೆ ಸಿನೆಮಾ ಸಂಬಂಧಿ ವಿಷಯಗಳು, ಕಟು ಸತ್ಯಗಳು ಕೆಟ್ಟ ಸುಳ್ಳುಗಳು ಕರ್ನಾಟಕದಲ್ಲಿ ಬಿತ್ತರವಾಗುವ ಹೊತ್ತಿನಲ್ಲೇ ಇಷ್ಟು ದೂರದ ಇಲ್ಲಿಗೂ ತಲುಪಿರುತ್ತವೆ, ಇಲ್ಲಿಯೂ ಚರ್ಚೆ ಚಿಂತನೆಗಳಿಗೆ ಕಾರಣವಾಗಿರುತ್ತವೆ. ಇಲ್ಲಿನ ಮೂಗಿನಡಿಯ ಸುದ್ದಿಗಳ “ಇಂಗ್ಲೆಂಡ್ ಲೆಟರ್” ಬರೆಯುವಾಗ ಅಲ್ಲಿನ ವಿಚಾರಗಳು ಮನಸ್ಸನ್ನು ತುಂಬುವುದೂ ಇದೆ. ಇಂಗ್ಲೆಂಡ್ ನಲ್ಲಿ ಕುಳಿತು ಇಂಗ್ಲೆಂಡ್ ಅನ್ನು “ಇಲ್ಲಿ” ಎಂತಲೂ ಕರ್ನಾಟಕವನ್ನು “ಅಲ್ಲಿ” ಎಂದೂ ಸಂಬೋಧಿಸುವ ಕಾಲವೂ ಇದಲ್ಲವೇನೊ ಎಂದೆನಿಸುವುದೂ ಇದೆ, ಎರಡು ತೀರಗಳ ನಡುವೆ ನಿರಂತರ ಹರಿದಾಡುವ ಸುದ್ದಿ ಸಮಾಚಾರಗಳು “ಅಲ್ಲಿ ಇಲ್ಲಿ” ಗಳ ನಡುವಿನ ದೂರವನ್ನು ಕಡಿಮೆ ಮಾಡಿರುವುದರಿಂದ.

ಎರಡು ವಾರಗಳ ಹಿಂದೆ “ಇಂಗ್ಲೆಂಡ್ ಪತ್ರ” ಬರೆದ ಮೇಲೆ ಇಲ್ಲಿ ಆಗಿಹೋದ ಘಟನೆಗಳು, ಗೋಟಾಳಿಗಳು ಬರೆಯಬಹುದಾದ ತಾಪತ್ರಯಗಳು, ಕೋಲಾಹಲಗಳು ಸುಮಾರಿದ್ದರೂ ಈ ವಾರ ಹೇಳಲೇಬೇಕೆನಿಸುತ್ತಿರುವುದು ನೆಬ್ಬೂರರ ಬಗ್ಗೆ. ನೆಬ್ಬೂರು ನಾರಾಯಣ ಭಾಗವತರು ಇನ್ನಿಲ್ಲ ಅಂತಾದದ್ದು ಕಳೆದ ವಾರ. ಅವರು ಇಲ್ಲ ಎನ್ನುವುದೇ ಅವರನ್ನು ಮೆಚ್ಚಿದವರ ಹಚ್ಚಿಕೊಂಡವರ ಸದ್ಯದ ಸಂಕಟ.

ಭಾಗವತರು ಎಂದರೆ ಯಕ್ಷಗಾನದ ವ್ಯಾಖ್ಯಾನದಲ್ಲಿ ಹಾಡು ಹೇಳುವವರು, ಕಥೆಯ ಸೂತ್ರಧಾರರು, ರಂಗ ನಿರ್ದೇಶಕರು, ಯಕ್ಷಗಾನ ಅಥವಾ ಆಟವೊಂದರ ಗತಿ, ಮತಿ, ಮಿತಿಯನ್ನು ನಿಯಂತ್ರಿಸುವವರು. ನೆಬ್ಬೂರರು ಯಕ್ಷಗಾನ ರಂಗದ ಸಮರ್ಥ ಭಾಗವತರಲ್ಲಿ ಒಬ್ಬರು ಎಂದು ಗುರುತಿಸಿಕೊಂಡವರು. ನೆಬ್ಬೂರು ಎನ್ನುವುದು ನೆಬ್ಬೂರರ ಹುಟ್ಟೂರು, ಉತ್ತರ ಕನ್ನಡದ ಘಟ್ಟದ ಮೇಲಿನ ಹಸಿರು ಊರು. ಹುಟ್ಟೂರು ಬಿಟ್ಟು ವಾಸ್ತವ್ಯಕ್ಕೆ ಬೇರೆ ಊರಿನಲ್ಲಿದ್ದರೂ ಅವರು ಯಕ್ಷಗಾನ ಶ್ರೋತೃಗಳ ಪಾಲಿಗೆ ಕೊನೆಯ ತನಕವೂ ನೆಬ್ಬೂರರೇ ಆಗಿದ್ದರು.

ಯಕ್ಷಗಾನದ ಹೆಸರು ಕೇಳಿದವರಿಗೆಲ್ಲ ಇಡಗುಂಜಿ ಮೇಳದ ಬಗ್ಗೆ, ಕೆರೆಮನೆಯ ಪರಂಪರೆಯ ಬಗ್ಗೆ ಗೊತ್ತು. ಅರ್ಧ ಶತಮಾನಕ್ಕಿಂತ ಹೆಚ್ಚು ಕಾಲ ಇಡಗುಂಜಿ ಮೇಳದ ಪ್ರಧಾನ ಭಾಗವತರಾಗಿ, ಕೆರೆಮನೆಯ ದಿಗ್ಗಜ ಕಲಾವಿದರ ಸಮ್ಮೋಹಕ ಅಭಿನಯ, ಮನಮೋಹಕ ನೃತ್ಯಾಭಿವ್ಯಕ್ತಿ, ಪರಿಣಾಮಕಾರಿ ಪಾತ್ರಚಿತ್ರಣ, ವಿಶಿಷ್ಟ ಪ್ರಸಂಗ ಕಲ್ಪನೆ ಇವೆಲ್ಲದರ ಹಿಂದೆ ಬೆನ್ನೆಲುಬಾಗಿ ಜೀವಾಳವಾಗಿದ್ದವರು ನೆಬ್ಬೂರರು. ಇಂಪಾದ ಸ್ವರಸಂಪತ್ತು, ಭಾವಪೂರ್ಣ ರಾಗಗಳ ಆಯ್ಕೆ, ಅಪ್ಪಟ ಯಕ್ಷಗಾನೀಯ ಗಾಯನ ಶೈಲಿ, ಪ್ರತಿ ಸಂದರ್ಭದಲ್ಲೂ ಪ್ರಸಂಗ ರಸ ಪಾತ್ರ ಪ್ರಜ್ಞೆಗಳಿಂದ ತುಂಬಿತುಳುಕುವ ಹಾಡುಗಳು ನೆಬ್ಬೂರರ ಸಿದ್ಧಿ ಹಾಗು ಪ್ರಸಿದ್ಧಿ. ನೆಬ್ಬೂರರನ್ನು ಯಕ್ಷಗಾನ ರಂಗದ ಪ್ರತಿಭಾನ್ವಿತ ಸಾಧಕ, ಮೇರು ಭಾಗವತ, ನಿಷ್ಕಲ್ಮಶ ವ್ಯಕ್ತಿ, ನಿಷ್ಠಾವಂತ ಕಲಾರಾಧಕ, ಸರಳ ಜೀವಿ, ಶುದ್ಧ ಚರಿತ ಎನ್ನುತ್ತಾ ಶಬ್ದಗಳನ್ನು ಜಾಗರೂಕತೆಯಿಂದ ಆಯ್ದು ಹೆಕ್ಕಿಜೋಡಿಸುತ್ತ ಯಕ್ಷಗಾನ ಲೋಕದ ಹೊರಗಿನವರಿಗೆ ಪರಿಚಯಿಸಬಹುದು.

ಯಕ್ಷಗಾನದ ಇತಿಹಾಸದಲ್ಲಿ ಚಿರಂತನ ಎನ್ನುವ ಜೋಡಿ ನೆಬ್ಬೂರರು ಹಾಗು ಕೆರೆಮನೆ ಶಂಭು ಹೆಗಡೆಯವರದು. ಭಾಗವತ ಹಾಗು ವೇಷಧಾರಿಗಳ ನಡುವಿನ ಹೆಸರಾಂತ ಜೋಡಿಗಳು ಯಕ್ಷಗಾನದಲ್ಲಿ ಹಲವು ಆಗಿ ಹೋಗಿದ್ದರೂ ಅವರ್ಯಾರೂ ನೆಬ್ಬೂರು-ಶಂಭು ಜೋಡಿಯಂತೆ ಅಸೀಮ ಹೊಂದಾಣಿಕೆ ಹಾಗು ಅಪ್ರತಿಮ ಪ್ರಸ್ತುತಿಯನ್ನು ದಶಕಗಳಕಾಲ ಪ್ರೇಕ್ಷಕರಿಗೆ ನಿರಂತರವಾಗಿ ಕಟ್ಟಿಕೊಟ್ಟವರಲ್ಲ. ಇನ್ನು ಎರಡರ ಬದಲಿಗೆ ಮೂರು ಕಲಾವಿದರ ಹೊಂದಾಣಿಕೆ ಹಾಗು ನಿರೂಪಣೆಗಳ ಬಗ್ಗೆ ಹೇಳ ಹೊರಟರೂ ಅಜರಾಮರ ಎನ್ನುವ ಸಾಲಿನಲ್ಲಿ ನೆಬ್ಬೂರು, ಶಂಭು ಹೆಗಡೆ ಹಾಗು ಮಹಾಬಲ ಹೆಗಡೆಯವರ ಹೆಸರುಗಳೇ ಉಲ್ಲೇಖಿಸಲ್ಪಡುತ್ತದೆ. ಕೃಷ್ಣ ಸಂಧಾನ ಪ್ರಸಂಗದ ಕೃಷ್ಣ -ಕೌರವರಾಗಿ, ಸುಭದ್ರಾ ಕಲ್ಯಾಣದ ಕೃಷ್ಣ-ಬಲರಾಮರಾಗಿ, ಚಂದ್ರಹಾಸದ ದುಷ್ಟಬುದ್ಧಿ-ಮದನರಾಗಿ, ಗದಾಯುದ್ಧದ ಕೌರವ-ಭೀಮರಾಗಿ ಶಂಭು-ಮಹಾಬಲರು ಮತ್ತೆ ಹಿನ್ನೆಲೆಯಲ್ಲಿ ಭಾಗವತರಾಗಿ ನೆಬ್ಬೂರರು ಯಕ್ಷಗಾನದ ಸಾರ್ವಕಾಲಿಕ “ಜೀನಿಯಸ್ ಜೊತೆಗಾರಿಕೆ” ಯ ಉಪಮೆಗಳು. ಈ ಮೂವರು ಸೇರಿ ಮಾಡಿದ ರಸಸೃಷ್ಟಿ ಅಸಾದೃಶವಾದುದು. ನೆಬ್ಬೂರರ ಭಾಗವತಿಕೆ ಜನರನ್ನು ರಂಜಿಸಿದ್ದಕ್ಕಿಂತ ಕಾಡಿದ್ದು ಹೆಚ್ಚು, ಆಟ ನೋಡಿ ಮನೆಗೆ ಮರಳಿದ ಪ್ರೇಕ್ಷಕರು ಅವರ ಹಾಡನ್ನು ಗುನುಗುನಿಸಿದ್ದಕ್ಕಿಂತ ಹಾಡಿನ ಭಾವದಗುಂಗಿನಲ್ಲಿ ತೇಲಿದ್ದು ಹೆಚ್ಚು.

(ಶಿವರಾಮ ಹೆಗಡೆ ಮತ್ತು ಶಂಭುಹೆಗಡೆಯವರೊಟ್ಟಿಗೆ)

ನೆಬ್ಬೂರರ ಭಾಗವತ ಬದುಕಿನ ಸಾಧನೆಯ ಬಣ್ಣದ ಪರದೆಯ ಹಿನ್ನೆಲೆಯಲ್ಲಿ ಕಡುಬಡತನದ ಹುಟ್ಟು, ನಾಲ್ಕನೆಯ ತರಗತಿಗೆ ಮೊಟಕಾದ ವಿದ್ಯಾಭ್ಯಾಸ, ಕುಟುಂಬಕ್ಕೆ ಆಧಾರವಾಗಲು ಸಣ್ಣ ಪ್ರಾಯದಲ್ಲೇ ಅಡಿಕೆ ಮರ ಹತ್ತಿಳಿದು ಶ್ರಮಿಸಬೇಕಾದ ಅನಿವಾರ್ಯತೆ, ತೀವ್ರವಾದ ಸಾಂಸಾರಿಕ ನೋವುಗಳು ಹುದುಗಿದ್ದವು. ಯಕ್ಷಗಾನದ ಬಣ್ಣ ಹಚ್ಚಿ ವೇಷಕಟ್ಟುವ ಚೌಕಿಮನೆಯಲ್ಲಿ ಸಾಮಾನ್ಯರು ತಮ್ಮ ದೈನಿಕದ ನೋವುಬೇನೆ, ಸಾಲಸೋಲ, ಇತಿಮಿತಿಗಳನ್ನು ಮೀರಿ ರಾಜ-ರಾಣಿ, ದೇವದೇವಿ, ಚಕ್ರವರ್ತಿ, ಸಾರ್ವಭೌಮರಾಗಿ ಅಸಾಮಾನ್ಯರಾಗಿ ರೂಪಾಂತರಗೊಂಡು ಕತ್ತಲೆಯಲ್ಲಿ ಬೆಳಕಿನ ಹೊಸಲೋಕ ಸೃಷ್ಟಿಸಿ ಮತ್ತೆ ಹಗಲು ಹೊತ್ತಿನಲ್ಲಿ ತಮ್ಮ ನಿಜ ಬದುಕಿನ ಕೋಟಲೆಗಳಲ್ಲಿ ಎಲ್ಲೋ ಕರಗಿ ಹೋಗುತ್ತಾರೆ.

ನೆಬ್ಬೂರರೂ ಪ್ರತಿ ರಾತ್ರಿಯೂ ರಂಗಸ್ಥಳಕ್ಕೆ ಪ್ರವೇಶವಾಗುವ ಹೊತ್ತಿನಲ್ಲಿ ಆಕರ್ಷಕ ಕೆಂಪು ಪೇಟ ತಲೆಗೆ ಸುತ್ತಿ, ಹಣೆಗೆ ಮಿರಗುಡುವ ತಿಲಕ ಇಟ್ಟು, ಕುತ್ತಿಗೆಯ ಸುತ್ತಿಗೆ ಚಿನ್ನದ ಹೊಳಪಿನ ಮಣಿ ಸರ ತೊಟ್ಟು, ಹೆಗಲ ಮೇಲೆ ಜರಿ ಶಾಲು ಹೊದ್ದು ರಂಗಕ್ಕೆ ಶಿಸ್ತಿನಲ್ಲಿ ಏರಿ ಎತ್ತರದ ಮಂಚದಲ್ಲಿ ಕೂರುವವರು ಮತ್ತೆ ಸಂಗೀತದ ಎಂತಹ ಅರಸಿಕರ ಮೈಮನಗಳಿಗೂ ಮುಟ್ಟುವ ತಟ್ಟುವ ಕರ್ಣಾನಂದಕರ ಭಾವಪೂರ್ಣ ಗಾಯನದಲ್ಲಿ ಹೊಸಲೋಕವನ್ನು ಕಡೆದು ಕಟ್ಟುತ್ತಿದ್ದವರು. ಮತ್ತೆ ಬೆಳಗಿನ ಹೊತ್ತಿಗೆ ಮಹಾನ್ ಕಲಾವಿದ ಎನ್ನುವುದನ್ನು ಮರೆತು ವಾಸ್ತವದ ಏರಿಳಿತಗಳಲ್ಲಿ ಏಳುಬೀಳುಗಳಲ್ಲಿ ಕಳೆದು ಹೋಗುತ್ತಿದ್ದವರು.

ನಾಲ್ಕು ಹುಲು ಕಂಬಗಳ ನಡುವೆ ಇರುಳಿನ ಮಂಪರಿನಲ್ಲಿ ಸ್ವರ್ಗ ನರಕ, ಹುಟ್ಟು ಸಾವು, ಧರ್ಮ ಅಧರ್ಮ, ಇಹ ಪರಗಳು ಜಿಜ್ಞಾಸೆಗಳಾಗಿ ಕಾಡುವ ಪ್ರಸಂಗಗಳಿಗೆ, ತಾತ್ವಿಕ ಸಂಘರ್ಷಗಳು ಆತ್ಮಾವಲೋಕನಗಳು ತುಂಬಿ ರಮಿಸಿ ತಣಿಸಿ ಮೈಮರೆಸುವ ಕಥಾನಕಗಳನ್ನು ಹೊಂದಿದ ಪ್ರದರ್ಶನಗಳಿಗೆ ತಮ್ಮ ಸ್ವರದಿಂದ ಜೀವಂತಿಕೆ ಹಾಗು ಧೀಮಂತಿಕೆಯನ್ನು ತುಂಬುತ್ತಿದ್ದವರು.

(ಶಿವಾನಂದ ಹೆಗಡೆ ಮತ್ತು ಪ್ರಭಾಕರ ಭಂಡಾರಿಯವರೊಟ್ಟಿಗೆ ‘ಗದಾಯುದ್ಧ’ದಲ್ಲಿ…)

ಕೃಷ್ಣ ಸಂಧಾನ ಪ್ರಸಂಗದ ಕೃಷ್ಣ -ಕೌರವರಾಗಿ, ಸುಭದ್ರಾ ಕಲ್ಯಾಣದ ಕೃಷ್ಣ-ಬಲರಾಮರಾಗಿ, ಚಂದ್ರಹಾಸದ ದುಷ್ಟಬುದ್ಧಿ-ಮದನರಾಗಿ, ಗದಾಯುದ್ಧದ ಕೌರವ-ಭೀಮರಾಗಿ ಶಂಭು-ಮಹಾಬಲರು ಮತ್ತೆ ಹಿನ್ನೆಲೆಯಲ್ಲಿ ಭಾಗವತರಾಗಿ ನೆಬ್ಬೂರರು ಯಕ್ಷಗಾನದ ಸಾರ್ವಕಾಲಿಕ “ಜೀನಿಯಸ್ ಜೊತೆಗಾರಿಕೆ” ಯ ಉಪಮೆಗಳು. ಈ ಮೂವರು ಸೇರಿ ಮಾಡಿದ ರಸಸೃಷ್ಟಿ ಅಸಾದೃಶವಾದುದು.

ಯಕ್ಷಗಾನ ರಂಗದಲ್ಲಿ ಶೋಕ ಹಾಗು ಕರುಣ ರಸಗಳ ಹಾಡುಗಳನ್ನು ಅಪ್ರತಿಮವಾಗಿ ಪ್ರದರ್ಶಿಸುತ್ತಿದ್ದ ನೆಬ್ಬೂರರು ತನ್ನ ಈ ಸಿದ್ಧಿಯ ಹಿಂದೆ ತನ್ನ ಬದುಕಿನ ನೋವು ಬಡತನಗಳು ಇವೆಯೇನೋ ಎಂದು ತಣ್ಣಗೆ ನಕ್ಕಿದ್ದು ಇದೆ. ಸುಖಪುರುಷನಾಗಿ ಬೆಳೆದಿದ್ದರೆ ಶೃಂಗಾರ ರಸದ ಹಾಡುಗಳ ತನಗೆ ಹೆಚ್ಚು ಒಲಿಯುತ್ತಿರಲಿಲ್ಲವೇನೋ ಎಂದು ಹಾಸ್ಯ ಮಾಡುತ್ತಿದ್ದುದೂ ಇದೆ. ಕಲೆಯೊಂದರ ಉಳಿವು ಮುಂದುವರಿಕೆಗೆ ಆ ಕಲೆಯ ಸತ್ವ, ಸಾಧ್ಯತೆ, ಸಂವಹನಗಳು, ಮಾರ್ಪಾಡುಗಳು ಮುಖ್ಯವಾದಂತೆಯೇ ಆ ಕಲೆಯನ್ನು ನಂಬಿದ ಕಲಾವಿದರ ಬದುಕಿನ ಗುಣಮಟ್ಟ, ಕಲೆ ಅವರಿಗೆ ಮರಳಿಸುವ ಜೀವನೋಪಾಯ, ಆಧಾರಗಳೂ ಕೂಡ ಮುಖ್ಯವಾಗುತ್ತವೆ. ನೆಬ್ಬೂರರ ಮಟ್ಟಿಗೆ ಯಕ್ಷಗಾನ ಕಲೆ ಎನ್ನುವುದು ಒಂದು ತಪಸ್ಸು ಆಗಿತ್ತು, ಯಕ್ಷಗಾನಕ್ಕೆ ತಾನು ಕೊಟ್ಟದ್ದಕ್ಕಿಂತ ಪಡೆದದ್ದು ಕಡಿಮೆ ಆದಾಗಲೇ ತನಗೆ ಮೋಕ್ಷ ಎಂದು ನಂಬಿದ ಅಪೂರ್ವ ಯಕ್ಷಸಂತರು ಅವರು. ಅವರ ಮಾತಿನಲ್ಲಿಯೇ ಹೇಳುವುದಾದರೆ ಅರ್ಧ ಶತಮಾನಕ್ಕಿಂತ ಹೆಚ್ಚು ಕಾಲದ ತಮ್ಮ ತಿರುಗಾಟದ ಜೀವನದಲ್ಲಿ ತನಗೆ ವರ್ಷಕ್ಕೆ ಇಷ್ಟು ಪಗಾರ (ಸಂಬಳ) ಕೊಡಿ ಎಂದು ಮೇಳದ ಯಜಮಾನರನ್ನು ಕೇಳಿದವರಲ್ಲ ಮತ್ತೆ ತನಗೆ ಸಿಗುತ್ತಿರುವುದು ಹೆಚ್ಚಾಯಿತೋ ಕಮ್ಮಿಯಾಯಿತೋ ಎನ್ನುವ ವಿಮರ್ಶೆಗೆ ಹೋಗದೇ ತನ್ನ ಕಲಾಯಾನ ಆರಂಭಿಸಿದ ಮೇಳದಲ್ಲಿಯೇ ತಮ್ಮ ಆರೋಗ್ಯ ಮತ್ತು ದೇಹ ಸಹಕರಿಸಿದಷ್ಟು ದಿನ ದುಡಿದವರು.

2005ರಲ್ಲಿ ಇಡಗುಂಜಿ ಯಕ್ಷಗಾನ ಮೇಳದ ಎಪ್ಪತ್ತು ವರ್ಷಗಳ ಸಂಭ್ರಮ ಕಾರ್ಯಕ್ರಮ ಬೆಂಗಳೂರಲ್ಲಿ ನಡೆದಿತ್ತು. ಆ ಕಾಲದಲ್ಲಿ ನನ್ನಂತಹ ಅನೇಕರು ರವೀಂದ್ರ ಕಲಾಕ್ಷೇತ್ರದ ಭೇಟಿ ಮಾಡುವುದು ಯಕ್ಷಗಾನ ನೋಡುವ ಕಾರಣಕ್ಕೆ ಆಗಿರುತ್ತಿತ್ತು. ಇಡಗುಂಜಿ ಮೇಳ ಬಡಗು ತಿಟ್ಟಿನ ಮೇಳಗಳಲ್ಲಿ ಸುಧೀರ್ಘ ಹಾಗು ಸುವರ್ಣಾಕ್ಷರದಲ್ಲಿ ಬರೆದಿಡಬಹುದಾದ ಇತಿಹಾಸ ಹೊಂದಿದ ಮೇಳಗಳಲ್ಲೊಂದು. ಆ ಮೇಳದ ಸ್ಥಾಪಕರಾಗಿದ್ದ ಕೆರೆಮನೆ ಶಿವರಾಮ ಹೆಗಡೆಯವರು ಯಕ್ಷಗಾನ ಜಗತ್ತಿನ ಅತಿ ದೊಡ್ಡ ಪ್ರತಿಭೆಗಳಲ್ಲಿ ಒಬ್ಬರು. 70ರ ಸಂಭ್ರಮದ ಅಂದಿನ ಕಾರ್ಯಕ್ರಮದಲ್ಲಿ ಇಡಗುಂಜಿ ಮೇಳದಲ್ಲಿ ಅತಿ ದೀರ್ಘ ಕಾಲ ಅತಿ ವಿನಮ್ರರಾಗಿ ಭಾಗವತರಾಗಿ ಸೇವೆ ಸಲ್ಲಿಸಿದ ನೆಬ್ಬೂರು ನಾರಾಯಣ ಭಾಗವತರಿಗೆ “ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ” ನೀಡಿ ಗೌರವಿಸಿದ್ದರು. ಈ ಪ್ರಶಸ್ತಿಯನ್ನು ಮೊದಲ ಬಾರಿಗೆ 2004ರಲ್ಲಿ, ಪ್ರಸಿದ್ಧ ನೃತ್ಯನಿಯೋಜಕಿ ಡಾ. ಮಾಯಾ ರಾವ್ ಅವರಿಗೆ ನೀಡಲಾಗಿತ್ತು.

ಶಿವರಾಮ ಹೆಗಡೆಯವರನ್ನು ನೆಬ್ಬೂರರು “ಯುಗಕ್ಕೆ ಒಬ್ಬ” ಮಾತ್ರ ಹುಟ್ಟಬಲ್ಲ ಕಲಾವಿದ ಎಂದು ವಿಶೇಷವಾಗಿ ಗೌರವಿಸುತ್ತಿದ್ದವರು. ತನ್ನ ಕಲಾಜೀವನದ ಗುರು, ತಾನು ಸುಮಾರು ಅರ್ಧ ಶತಮಾನ ಕೆಲಸ ಮಾಡಿದ ಮೇಳದ ಸ್ಥಾಪಕ ಯಜಮಾನ ಎಲ್ಲಕ್ಕಿಂತ ಹೆಚ್ಚಾಗಿ ಯಕ್ಷ ಲೋಕದ ಯುಗಪುರುಷ ಶಿವರಾಮ ಹೆಗಡೆಯವರ ಹೆಸರಲ್ಲಿ ದೊರಕಿದ ಪ್ರಶಸ್ತಿಯನ್ನು ಅತ್ಯಂತ ಸಂತಸದಲ್ಲಿ ಗದ್ಗದಿತರಾಗಿ ನೆಬ್ಬೂರರು ಅಂದು ಸ್ವೀಕರಿಸಿದ್ದರು. ತನಗೆ ಪ್ರಶಸ್ತಿ ಅಂತ ಚಿನ್ನದ ತಾಳವನ್ನು ಕೊಡಲಿಲ್ಲ,ಕೊಟ್ಟಿದ್ದರೆ ಮಾರಿ ಬಿಡುತ್ತಿದ್ದೆನೋ ಏನೋ ಅನ್ನುವ ಅನುಮಾನ ತನಗೆ ಅಂತ ಅಂದು ನಗುತ್ತ ಹೇಳಿದ್ದರು.

ಕಡು ಬಡತನದಿಂದ ಯಕ್ಷಗಾನ ಕ್ಷೇತ್ರಕ್ಕೆ ಬಂದು ದಶಕಗಳ ಕಾಲ ಅಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿ, ರಂಗದಲ್ಲಿ ಅತ್ಯಂತ ಉನ್ನತ ಸಾಧನೆ ಮಾಡಿದಾಗಲೂ ಅವರನ್ನು ಬಿಡದ ಬಡತನವನ್ನು ಉದ್ದೇಶಿಸಿ ನೆಬ್ಬೂರರು ಆಗಾಗ ವ್ಯಂಗ್ಯ ಮಾಡಿದ್ದು ಇದೆ. ಯಾವಾಗಲು ಕುಶಾಲು (ತಮಾಷೆ) ಮಾಡುತ್ತಾ ಮಾತಾಡುವ ನೆಬ್ಬೂರರು ಹೀಗೆ ತಮ್ಮ ಬದುಕಿನ ನೋವುಗಳನ್ನೂ ನಗೆಯೊಡನೆ ಬಳಸಿ ಬೆರಸಿ ಬಡಿಸುತ್ತಿದ್ದರು. ತಮಾಷೆಯನ್ನು ಬದಿಗಿಟ್ಟು ಗಂಭೀರವಾಗಿ ಮಾತನಾಡುವಾಗ, ತನಗೆ ಬರಬಹುದಾದ ಅತಿ ದೊಡ್ಡ ಪ್ರಶಸ್ತಿ ಎಂದರೆ ಅದು ಶಿವರಾಮ ಹೆಗಡೆಯವರ ಹೆಸರಿನ ಪ್ರಶಸ್ತಿ, ತನ್ನ ಜನ್ಮ ಸಾರ್ಥಕವಾಯಿತು ಎಂದು ಖುಷಿ ಪಟ್ಟಿದ್ದರು.

ನೆಬ್ಬೂರರ ಬದುಕನ್ನು ಬಲ್ಲವರು, ಸುಮಾರು ಅರ್ಧ ಶತಮಾನಗಳ ಕಾಲ ಒಂದೇ ಮೇಳಕ್ಕೆ ಅಂಟಿಕೊಂಡು ಇವರು ಹೇಗೆ ಕಳೆದರೋ ಎಂದು ಅಚ್ಚರಿ ಪಟ್ಟಿದ್ದಿದೆ. ದೊರೆಯಬಹುದಾದ ಸ್ವಲ್ಪ ಆರ್ಥಿಕ ಲಾಭಕ್ಕಾಗಿ ಎಲ್ಲೋ ಹೋಗಿ ಅಹಿತಕರವಾದ ಸ್ಥಳದಲ್ಲಿ ಸ್ನೇಹ ಮಾಡುವುದಕ್ಕಿಂತ ಗಂಧದ ಜೊತೆಗೆ ಹೋರಾಡುತ್ತ ಬದುಕುವುದೇ ಲೇಸು ಎಂದು ಅದಕ್ಕೆ ನೆಬ್ಬೂರರು ಉತ್ತರಿಸುತ್ತಿದ್ದರು. ಶಿವರಾಮ ಹೆಗಡೆಯವರಿಂದ ದೊರೆಯುತ್ತಿದ್ದ ಶಿಕ್ಷಣ ಮಾರ್ಗದರ್ಶನ ಅವರ ಜೊತೆ ಮಾಡುತ್ತಿದ್ದ ಚರ್ಚೆ ವಿಮರ್ಶೆಗಳೆಲ್ಲ ಸೇರಿ ಗಂಧದ ಜೊತೆಗಿನ ಹೋರಾಟದಂತೆ ನೆಬ್ಬೂರರಿಗೆ ಕಾಣುತ್ತಿತ್ತು.

(ಚಿತ್ರಗಳು: ಕೆರೆಮನೆ ಶಿವಾನಂದ ಹೆಗಡೆ)

ಶಿವರಾಮ ಹೆಗಡೆ, ಶಂಭು ಹೆಗಡೆ, ಶಿವಾನಂದ ಹೆಗಡೆ, ಶ್ರೀಧರ ಹೆಗಡೆ.. ಹೀಗೆ ಕೆರೆಮನೆ ಕುಟುಂಬದ ನಾಲ್ಕು ನೇರ ತಲೆಮಾರುಗಳನ್ನು ಕುಣಿಸಿದ, ಇನ್ನು ಅದೇ ಕುಟುಂಬದ ಅಡ್ಡ ತಲೆಮಾರಿನಲ್ಲಿ ಗಜಾನನ ಹೆಗಡೆ ಹಾಗು ಮಹಾಬಲ ಹೆಗಡೆಯವರಂತಹ ಶ್ರೇಷ್ಠ ಕಲಾವಿದರಿಗೆ ಪದ ಹೇಳಿದ ಮಹಾಭಾಗ್ಯ ಸಂಪನ್ನ ತಾನು ಎಂದು ಹೆಮ್ಮೆಪಡುತ್ತಿದ್ದರು. ಯಕ್ಷಗಾನದಲ್ಲಿ ಇಷ್ಟು ಜನ ಮಹಾನ್ ಕಲಾವಿದರಿಗೆ ಹೀಗೆ ದೀರ್ಘಾವಧಿಗೆ ಭಾಗವತರಾದವರು ವಿರಳ ಅಥವಾ ಇನ್ನೊಬ್ಬರು ಇರಲಿಕ್ಕಿಲ್ಲ. ಮೇರು ಕಲಾವಿದರ ಸಹಯೋಗ ಕಲಾಸಂಪನ್ನತೆಯೇ ತನ್ನ ಐಶ್ವರ್ಯ ಎಂದು ನಂಬಿ ನಡೆದವರು ನೆಬ್ಬೂರರು. ಮನೆಯಲ್ಲಿರುವ ಸಮಯವಾಗಲಿ ತಿರುಗಾಟಕ್ಕೆ ಹೊರಟಾಗಲಾಗಲಿ ತನ್ನ ಹೆಗಲ ಮೇಲೆ ಖಾಯಂ ಇರುವ ಶಾಲನ್ನು ತೋರಿಸಿ, “ಹೆಗಲಿಗೆ ಶಾಲು, ಬಾಯಲ್ಲಿ ಕುಶಾಲು”, ಅದೇ ನನ್ನ ಸಂಪತ್ತು ಎಂದು ಚಟಾಕಿ ಹಾರಿಸುತ್ತಿದ್ದರು.

ಹಾಡುತ್ತ, ನಗುತ್ತ,ನಗಿಸುತ್ತಾ ಯಕ್ಷಗಾನವೇ ನೆಬ್ಬೂರರ ಬಳಿ ಮಾಡಿದ ಕೈಗಡ ಬಾಕಿ ಇರುವಾಗಲೇ ಇದೀಗ ನೆಬ್ಬೂರರು ತಣ್ಣಗೆ ಕಣ್ಮರೆಯಾಗಿದ್ದಾರೆ. “ಜನನ ಮೃತ್ಯುವ ಗೆಲ್ದು… ಜನುಮ ಸಾರ್ಥಕಗೈದು” ಎಂದು ಹಾಡುತ್ತ ಯಕ್ಷಗಾನ ಕಲೆಗೆ, ಒಡನಾಡಿ ಕಲಾವಿದರಿಗೆ, ಮೆಚ್ಚಿದ ಪ್ರೇಕ್ಷಕರಿಗೆ ಕಲೆಯ ಸಾಲ ಕೊಟ್ಟು ಮೋಕ್ಷದೇವತೆಯನ್ನು ಹುಡುಕುತ್ತ ನಡೆದಿದ್ದಾರೆ.

ಹೊರಟು ಹೋಗುವ ಮೊದಲು ನೆಬ್ಬೂರರನ್ನು ತಡೆದು ನಿಲ್ಲಿಸಿ ಒಂದು ಹಾಡು ಹೇಳಿ ಎಂದಿದ್ದರೆ, ಯಕ್ಷಗಾನಕ್ಕೆ ಅವರೇ ಅಳವಡಿಸಿ ಪ್ರಯೋಗಿಸಿದ ಈ ಹಾಡನ್ನು ಹಾಡುತ್ತಿದ್ದರೇನೊ (ಬವಳಾಡಿ ಹಿರಿಯಣ್ಣ ಹೆಬ್ಬಾರರು ಬರೆದದ್ದು )….

“ನೀನೇ ಕುಣಿಸುವೆ ಜೀವರನು
ಶಂಕರ ನಾರಾಯಣ ನೀನೆ ಕುಣಿಸುವೆ ಜೀವರನು
ನೀನೆ ಕುಣಿಸಿ ದಣಿಸಿ ಉಣಿಸಿ ತಣಿಸುವೆ
ನೀನೇ ಬೆಳೆಸಿ ಬಳಸಿ ಅಳಿಸಿ ಉಳಿಸುವೆ
ನೀನೇ ಕುಣಿಸುವೆ ಜೀವರನು
ಶಂಕರ ನಾರಾಯಣ ನೀನೆ ಕುಣಿಸುವೆ ಜೀವರನು… ”

(ಈ ಸಾಲುಗಳನ್ನು ನೆಬ್ಬೂರರ ದನಿಯಲ್ಲಿ ಕೇಳಲು ಕೆಳಗಿನ ಲಿಂಕ್ ಅನ್ನು ಒತ್ತಿ)

WhatsApp Audio 2019-05-15 at 5.52.09 PM