ಶಿವಪ್ರಕಾಶ ಅವ್ರೆ, ಧರ್ಮ ಅನ್ನೋ ವಿಷಯ ಒಂದು ಕಾಲದಾಗ ಮಲ್ಲಿಗೆ ಹೂವಿನ ಬಳ್ಳಿ ಆಗಿತ್ತು. ಈಗದು ಜೇನು ಹುಟ್ಟು ಆಗೇತಿ. ಹಂಗಾಗಿ ಜನ್ರು ಅದಕ್ಕ ಕೈ ಹಾಕೋದಕ್ಕ ಮೊದಲ ಭಾಳ ಯೋಚನೆ ಮಾಡಬೇಕಾಗೇತಿ. ಧರ್ಮದ ಬೆಂಕಿಯನ್ನ ದೇಶದ ಉದ್ದಗಲಕ್ಕೂ ಹೊತ್ತಿಸಿ ಅದರಾಗ ಅನ್ನಾ ಬೇಯಿಸಿಕೊಂಡು ಉಣ್ಣೋರು ಗಲ್ಲಿ ಗಲ್ಲಿಯೊಳ ಹುಟ್ಟಿಕೊಂಡಾರ. ಧರ್ಮ ಅಂದ್ರ ಎಂಥವ್ರ ಮನಸು ಸಂವೇದನಾಶೀಲ ಆಗತೈತಿ. ಹಂಗಾಗಿ ಧರ್ಮದ ಹೆಸರಿನ್ಯಾಗ ಜನರ ಮನಸು ಒಡದು ಓಟ್ ಪಡಿಯೋ ರಾಜಕಾರಣಿಗಳು ಹೆಜ್ಜೆ ಹೆಜ್ಜೆಗೂ ಸಿಗತಾರ. ಅವರಿಗೆ ಅಧಿಕಾರ ಹಿಡಿಯೋದು ಮುಖ್ಯ ಹೊರತು ಜನರು ಮುಖ್ಯ ಅಲ್ಲ.
ಕುಮಾರ ಬೇಂದ್ರೆ ಬರೆದ ಹೊಸ ಕಾದಂಬರಿ ‘ದಾಳಿ’ ಯ ಆಯ್ದ ಭಾಗ ನಿಮ್ಮ ಓದಿಗೆ

 

ಸತ್ಯಗುಣ ಮಠದ ಆಶ್ರಮದ ಪರಿಸರದಲ್ಲಿ ಸತ್ಯಗುಣ ಸ್ವಾಮೀಜಿ ಒಂದು ಮರದಡಿಯ ಕಟ್ಟೆಯ ಮೇಲೆ ವಿರಾಮ ಆಸನದಲ್ಲಿ ಗಂಭೀರವಾಗಿ ಕುಳಿತಿದ್ದಾರೆ. ಸಂಜೆಯ ಆಹ್ಲಾದಕರ ಪರಿಸರದಲ್ಲಿ ಮೌನ, ಏಕಾಂತವಿತ್ತು. ಶಿವಪ್ರಕಾಶ ಮತ್ತು ವೀರೇಂದ್ರ ಒಂದು ಬಂದಿಯಿಂದ ಬಂದು ಸ್ವಾಮೀಜಿಗೆ ನಮಿಸಿದರು. ಬಳಿಕ ಸ್ವಾಮೀಜಿ ಮಂದಹಾಸ ಬೀರಿ, ಅವರೆದುರು ಇಬ್ಬರಿಗಾಗಿ ಹಾಕಿದ್ದ ಆಸನದಲ್ಲಿ ಕುಳಿತುಕೊಳ್ಳುವಂತೆ ಕೈಯಿಂದ ಸಂಜ್ಞೆ ಮಾಡಿದರು. ಇಬ್ಬರು ಕುಳಿತುಕೊಂಡರು.

`ಸ್ವಾಮೀಜಿ, ಇವ್ರೇ ಶಿವಪ್ರಕಾಶ ಅಂತ, ಸಾಹಿತಿಗಳು’ ಎಂದು ವೀರೇಂದ್ರ ಪರಿಚಯಿಸಿದ. ಶಿವಪ್ರಕಾಶ ಅವರು ಸ್ವಾಮೀಜಿಗೆ ಮತ್ತೊಮ್ಮೆ ವಂದಿಸಿದರು.

`ನಿಮ್ಮ ಹೆಸರು ಕೇಳಿದ್ದೆ. ಮುಖಾಮುಖಿ ಆಗಿದ್ದು ಛೊಲೊ ಆತು’ ಎಂದರು ಸ್ವಾಮೀಜಿ.

ಶಿವಪ್ರಕಾಶ ಮುಗುಳ್ನಕ್ಕು `ಇವು ನನ್ನ ಕೃತಿಗಳು ಸ್ವಾಮೀಜಿ’ ಎಂದು ಕೆಲವು ಪುಸ್ತಕಗಳನ್ನು ಸ್ವಾಮೀಜಿಗೆ ಕೊಟ್ಟರು. ಅವರು ಅವನ್ನು ತೆಗೆದುಕೊಂಡು ಶೀರ್ಷಿಕೆ ಗಮನಿಸಿ, `ಒಳ್ಳೆದು’ ಎಂದು, ಬಳಿಕ ಪುಸ್ತಕ ಪಕ್ಕಕ್ಕಿಟ್ಟು `ನೀವೇನೊ ಮಾತಾಡಬೇಕು ಅಂತ ವೀರೇಂದ್ರ ಹೇಳಿದ್ರು’ ಎಂದು ಕೇಳಿದರು.

`ಹೌದ್ರಿ ಸ್ವಾಮೀಜಿ. ದೊಡ್ಡ ದೊಡ್ಡ ವೇದಿಕೆಯೊಳಗ ನೀವು ಮಾತಾಡಿದ ಹರಿತವಾಗಿರೊ ಮಾತುಗಳನ್ನ ಕೇಳಿ ಅದರಿಂದ ನಾನು ಭಾಳ ಪ್ರಭಾವಿತನಾಗಿದ್ದೆ. ಕೆಳ ವರ್ಗದವರು, ಹಿಂದುಳಿದವರು ಬಡವರ ಬಗ್ಗೆ ನಿಮಗಿರೊ ಕಾಳಜಿ ಕಂಡು ಮೆಚ್ಚಿಕೊಂಡಿದ್ದೆ. ನಿಮ್ಮ ಓದು, ಅರಿವಿನ ವಿಸ್ತಾರ ತಿಳದು ನಾನು ನಿಮ್ಮ ಅಭಿಮಾನಿಯಾದೆ’ ಎಂದು ಶಿವಪ್ರಕಾಶ ಹೇಳಿದರು.

ಅವರ ಮಾತು ಕೇಳಿ ಸ್ವಾಮೀಜಿ ಮಂದಹಾಸ ಬೀರಿ, `ಹ್ಞೂಂ..’ ಎಂದರು.

(ಕುಮಾರ ಬೇಂದ್ರೆ)

`ಸ್ವಾಮಿಗಳು ಅಂದ್ರ ಮಠಾ ಕಟ್ಟಿಕೊಂಡು, ಶಿಕ್ಷಣ ಸಂಸ್ಥೆ ಕಟ್ಟಿ ವ್ಯಾಪಾರ ಮಾಡೋದು, ಜನರ ತೆಲಿಯೊಳಗ ಮೌಢ್ಯದ ಹೊಟ್ಟು ತುಂಬಿ ಮೂಢರನ್ನಾಗಿ ಮಾಡೋದು; ಪಲ್ಲಕ್ಕಿಯೊಳಗ ಕುಂತು ಮೆರೆಯೋದು, ರಾಜಕಾರಣಿಗಳ ನಡುವ ಜಗಳ ಹತ್ತಿದಾಗ ಮಧ್ಯಸ್ಥಿಕೆ ವಹಿಸಿ ರಾಜಕೀಯ ಮಾಡೋದು; ಒಂದು ಪಂಥ ಪಂಗಡದ ಪರಾ ನಿಂತು ಎತ್ತಿ ಕಟ್ಟಿ ಮಾತಾಡೊರು ಮಾತ್ರ ಅಲ್ಲ. ಮತ-ಮೌಢ್ಯ ಅನ್ನೋ ಹೊಟ್ಟು ತೂರಿ, ಹಸದವರ ಹೊಟ್ಟಿಗೆ ಅನ್ನ ಹಾಕೋದ ಧರ್ಮ ಅನ್ನೋದನ್ನ ಪ್ರತಿಪಾದಿಸಿದವ್ರು ನೀವು. 12ನೇ ಶತಮಾನದಾಗ ಬಸವಣ್ಣನವರು ಬದುಕಿದಂಗ, 18ನೇ ಶತಮಾನದಾಗ ಅಂಬೇಡ್ಕರ್ ಅವರು ಬದುಕಿದಂಗ, 21ನೇ ಶತಮಾನದಾಗ ನೀವು ದೀನ ದಲಿತರ ಉದ್ಧಾರನ ಧರ್ಮ, ಹಸದು ಬಂದವರಿಗೆ ಅನ್ನ ಹಾಕೋದ ಧರ್ಮ ಅಂತ ಬದುಕಿ ತೋರಿಸಿದವ್ರು ನೀವು. ಧರ್ಮಾ ಅಂದ್ರ, ತನ್ನ ನಂಬಿಕೆಗೆ ಭಂಗ ಆದಾಗ ಇನ್ನೊಬ್ಬರ ಜೀವಾ ತಗಿಯೋದು, ಸಮಾಜದಾಗ ದೊಂಬಿ ಎಬ್ಬಿಸಿ ಭಯೋತ್ಪಾದನೆ ಮಾಡೋದು, ಪರಂಪರೆ ಉಳಿಸೊ ನೆಪದಾಗ ಪ್ರಗತಿಶೀಲ ಮನಸ್ಸುಗಳ ಮ್ಯಾಲೆ ಆಕ್ರಮಣ ಮಾಡೋದ ಧರ್ಮ ಅಂತ ತಿಳದಿರೊ ಈ ವರ್ತಮಾದಾಗ, ಧರ್ಮಾ ಅಂದ್ರ ಏನು ಅನ್ನೋದಕ್ಕ ನೀವು ಏನು ಹೇಳಾಕ ಬಯಸ್ತಿರಿ ಸ್ವಾಮೀಜಿ?’ ಎಂದು ಶಿವಪ್ರಕಾಶ ಕೇಳಿದರು.

`ಶಿವಪ್ರಕಾಶ ಅವ್ರೆ, ಧರ್ಮ ಅನ್ನೋ ವಿಷಯ ಒಂದು ಕಾಲದಾಗ ಮಲ್ಲಿಗೆ ಹೂವಿನ ಬಳ್ಳಿ ಆಗಿತ್ತು. ಈಗದು ಜೇನು ಹುಟ್ಟು ಆಗೇತಿ. ಹಂಗಾಗಿ ಜನ್ರು ಅದಕ್ಕ ಕೈ ಹಾಕೋದಕ್ಕ ಮೊದಲ ಭಾಳ ಯೋಚನೆ ಮಾಡಬೇಕಾಗೇತಿ. ಧರ್ಮದ ಬೆಂಕಿಯನ್ನ ದೇಶದ ಉದ್ದಗಲಕ್ಕೂ ಹೊತ್ತಿಸಿ ಅದರಾಗ ಅನ್ನಾ ಬೇಯಿಸಿಕೊಂಡು ಉಣ್ಣೋರು ಗಲ್ಲಿ ಗಲ್ಲಿಯೊಳ ಹುಟ್ಟಿಕೊಂಡಾರ. ಧರ್ಮ ಅಂದ್ರ ಎಂಥವ್ರ ಮನಸು ಸಂವೇದನಾಶೀಲ ಆಗತೈತಿ. ಹಂಗಾಗಿ ಧರ್ಮದ ಹೆಸರಿನ್ಯಾಗ ಜನರ ಮನಸು ಒಡದು ಓಟ್ ಪಡಿಯೋ ರಾಜಕಾರಣಿಗಳು ಹೆಜ್ಜೆ ಹೆಜ್ಜೆಗೂ ಸಿಗತಾರ. ಅವರಿಗೆ ಅಧಿಕಾರ ಹಿಡಿಯೋದು ಮುಖ್ಯ ಹೊರತು ಜನರು ಮುಖ್ಯ ಅಲ್ಲ. ಹಿಂಗಾಗಿ ಇವತ್ತ ಜನರೊಳಗ ಶಾಂತಿ ಬೀಜ ಬಿತ್ತಬೇಕಾಗಿದ್ದ ದೇಶದ ಶ್ರದ್ಧಾಕೇಂದ್ರಗಳು ಕೋಟಿ ಕೋಟಿ ಜನರ ರೊಕ್ಕಾ ಎಣಿಸೊ ವ್ಯಾಪಾರಿ ಕೇಂದ್ರ ಆಗ್ಯಾವು. ಇವರಿಗೆಲ್ಲಾ ಧರ್ಮದ ಸಾರ್ಥಕತೆ ಅಂದ್ರ ಗೋಪರಾ ಕಟ್ಟಿ ಕಳಸಾ ಇಡೋದು. ರಸ್ತೆ ಬಂದ್ ಮಾಡಿ ಉತ್ಸವ ಮಾಡೋದು. ಆಚರಣೆಗಳ ಹೆಸರಿನ್ಯಾಗ ಅಮಾಯಕರ ನೆಮ್ಮದಿ ಹಾಳು ಮಾಡೋದು. ಇದರ ವಿರುದ್ಧ ದನಿ ಎತ್ತಿದವ್ರ ಹುಟ್ಟು ಅಡಗಿಸೋದು. ಇದು ಇವತ್ತಿನ ಮಾತಷ್ಟ ಅಲ್ಲ. ಶತಶಮಾನಗಳಿಂದ ನಡಕೊಂಡು ಬಂದಿರುವಂಥಾದ್ದು ಇದು. ಇದಕ್ಕೆಲ್ಲಾ ಮೂಲ ಕಾರಣ ನಮ್ಮ ಜನರಿಗೆ ಶಿಕ್ಷಣದ ಮೌಲ್ಯ ಗೊತ್ತಿಲ್ಲದಿರೋದು. ಅವರೊಳಗ ವಿಚಾರ ಪ್ರಜ್ಞೆ ಹುಟ್ಟದಿರೋದು’ ಎಂದು ಸತ್ಯಗುಣ ಸ್ವಾಮೀಜಿ ಹೇಳಿದರು.

`ಸ್ವಾಮೀಜಿ, ಧರ್ಮ ಅಂದ್ರ ನಮ್ಮ ದೇಶದ ಸಂಪ್ರದಾಯ, ಪರಂಪರೆ ಹೇಳಿಕೊಟ್ಟಿರೊ ಆಚರಣೆಗಳಲ್ಲ. ಧರ್ಮ ಅಂದ್ರ ನಮಗ ನಾವೇ ಹಾಕ್ಕೊಳ್ಳೊ ಒಂದು ಮನುಷ್ಯತ್ವದ ಚೌಕಟ್ಟು ಅಂತ ನಾನು ಅಂದುಕೊಂಡೇನಿ. ಅದಕ್ಕ ಧರ್ಮ ಅನ್ನೋ ಶಬ್ದಕ್ಕಿಂತ ಮಾನವೀಯತೆ ಅನ್ನೋದು ಭಾಳ ಸೂಕ್ತ ಶಬ್ದ ಆಗತೈತಿ. ನೀವೇನಂತಿರಿ?’ ಎಂದು ಶಿವಪ್ರಕಾಶ ಕೇಳಿದರು.

`ಖರೆ ಐತಿ ನೀವು ಹೇಳೋದು. ಎಲ್ಲೆಲ್ಲಿ ಮಾನವೀಯತೆ ಬೆಳಗತೈತಿ ಅಲ್ಲೆಲ್ಲಾ ಧರ್ಮ ಇದ್ದ ಇರತೈತಿ. ಮನುಷ್ಯ ಮಾನವೀಯ ಸಂಸ್ಕಾರಗಳನ್ನ ಅಳವಡಿಸಿಕೊಂಡು ಬದುಕೋದ ಧರ್ಮ. ಅದು ವ್ಯಕ್ತಿಗೆ ಚೌಕಟ್ಟು ಆಗಬಾರದು, ವ್ಯಕ್ತಿತ್ವದ ವಿಸ್ತಾರಕ್ಕ ವಿಶಾಲ ಅವಕಾಶ ಆಗಬೇಕು. ಅದಕ್ಕ ಮಠಾ, ಮಂದಿರ, ಮಸೀದಿ, ಪ್ರಾರ್ಥನಾಲಯ ಗಳಿಗಿಂತ ಪಕೃತಿನ ಕೇಂದ್ರ ಆಗಬೇಕು. ಈ ಎಲ್ಲಾ ಆಡಂಬರಗಳ ಬೆನ್ನು ಹತ್ತಿ ನಾವು ಪ್ರಕೃತಿಯಿಂದ ದೂರ ಹೋಗಿವಿ. ಗರ್ಭಗುಡಿಯೊಳಗ ಕಲ್ಲು ದೇವರನ್ನ ಸೃಷ್ಟಿ ಮಾಡಿ, ವೃದ್ಧರು, ನಿರ್ಗತಿಕರು, ಭಿಕ್ಷೆ ಬೇಡೋದನ್ನ ನಿರ್ಲಕ್ಷ್ಯ ಮಾಡಿ ಕೋಟಿ ಲೆಕ್ಕದಾಗ ವ್ಯವಹಾರ ಮಾಡಾಕತ್ತೇವಿ. ಧರ್ಮದ ಇಂಥಾ ಕ್ಯಾನ್ಸರನ್ನ ವಾಸಿ ಮಾಡೋದು ಅಷ್ಟು ಸುಲಭ ಅಲ್ಲ’ ಎಂದು ಸತ್ಯಗುಣ ಸ್ವಾಮೀಜಿ ಹೇಳಿದರು.

`ಖರೆ ಸ್ವಾಮೀಜಿ, ಇವತ್ತ ಧರ್ಮ ಅನ್ನೋ ಬಂಡವಾಳ ವ್ಯಾಪಾರಿಗಳ ಸರಕು ಆಗೇತಿ. ರಾಜಕೀಯ ಪಕ್ಷಗಳಿಗೆ ಓಟ್ ಬ್ಯಾಂಕ್ ಆಗೇತಿ. ಈ ಬಂಡವಾಳ ಬಳಸಿ ಜನರ ತಲಿಯೊಳಗ ಭ್ರಮೆ ತುಂಬಿದವ್ರು ಅಧಿಕಾರ ಹಿಡದಾರ. ಆಧಿಕಾರದಾಗ ಇರವ್ರ ಆಶ್ರಯದಾಗ ಇರೋರು ಪ್ರಗತಿಪರರನ್ನ ಹಾಡು ಹಗಲ ಬೇಟೆ ಆಡಾಕತ್ಯಾರ. ತಮ್ಮಂಥಾ ಮಠಾಧೀಶರು ಜನಶಕ್ತಿಯೊಂದಿಗೆ ಇದರ ವಿರುದ್ಧ ಹೋರಾಟ ಮಾಡಬೇಕು’ ಎಂದು ಶಿವಪ್ರಕಾಶ ಹೇಳಿದರು.

`ಇವತ್ತ ಅಂಥಾ ಹೋರಾಟಗಳು ಸಹಿತ ಅರ್ಥ ಕಳಕೊಂಡಾವು. ಧರ್ಮ ನಿರಪೇಕ್ಷರಾಗಿ, ಮಾನವೀಯ ಕಳಕಳಿಗಾಗಿ ಹೋರಾಟ ಮಾಡತೀವಿ ಅಂದ್ರ ಅದಕ್ಕ ರಾಜಕೀಯ ಬಣ್ಣ ಬಳೀತಾರ. ಅಪವಾದ ಹೊರಸ್ತಾರ. ಅಪರಾಧ ಪ್ರಕರಣ ದಾಖಲಿಸಿ ಅವರು ಸೊಲ್ಲೆತ್ತದಂಗ ಮಾಡತಾರ. ಅದಕ್ಕ ಇರೋದು ಒಂದ ದಾರಿ `ಅಕ್ಷರ’. ನಿಮ್ಮಂಥ ಲೇಖಕರು ಮನಿಗೊಬ್ಬರು ಹುಟ್ಟಿಕೊಳ್ಳಬೇಕು. ಆಗ ಊರಿಗೊಬ್ಬಬ್ಬ ಬಸವಣ್ಣ, ಅಂಬೇಡ್ಕರ್ ಹುಟ್ಟಿಕೊಳ್ಳತಾರ. ಧರ್ಮದ ಹೊಟ್ಟು ತೂರಿ, ಶಾಂತಿ ಬೀಜ ಬಿತ್ತತಾರ’ ಎಂದು ಸ್ವಾಮೀಜಿ ಹೇಳಿದರು.

`ಬಸವ ತತ್ವ ನಂಬಿ, ಸಮಾಜದಾಗ ಪ್ರಗತಿಪರ ವಿಚಾರಗಳನ್ನ ಬಿತ್ತತಿದ್ದ ಚಿಂತಕ ಡಾ.ಮಲ್ಲೇಶಪ್ಪ ಅವರ ಹತ್ಯೆ ಮಾಡಿದ್ದರ ಬಗ್ಗೆ ನೀವೇನು ಹೇಳಕಾ ಬಯಸ್ತಿರಿ ಸ್ವಾಮೀಜಿ?’

`12ನೇ ಶತಮಾನದಾಗ ಯಾವ ಕಾರಣಕ್ಕ ಶರಣರು ಕ್ರಾಂತಿ ಮಾಡಿದ್ರೋ, ಯಾವ ಕಾರಣಕ್ಕ ಕೋಮುವಾದಿಗಳು ಶರಣರನ್ನ ಚದುರಿಸಿ ಹತ್ಯೆ ಮಾಡಿದ್ರೋ ಅದ ಕಾರಣಕ್ಕ ಇವತ್ತ ದೇಶದೊಳಗ ಮಲ್ಲೇಶಪ್ಪ ಅವರಂತಹ ಚಿಂತಕರ ಹತ್ಯೆ ನಡದಾವು. ದೇವರು, ಧರ್ಮ ಅನ್ನೋ ವಿಷಯಗಳನ್ನ ತಮ್ಮ ಸ್ವಂತ ಆಸ್ತಿ ಅಂತ ತಿಳಕೊಂಡಿರೋ ಮತಾಂಧರು ಮಾಡಿರೊ ಸಂಚು ಇದು. ಜನರೊಳಗ ವಿಚಾರ ಪ್ರಜ್ಞೆ ಬೆಳದ್ರ ತಾವು ಬೌದ್ಧಿಕವಾಗಿ ಆಳೋದಾದ್ರೂ ಯಾರನ್ನ ಅನ್ನೋ ಭಯಾ ಅವರಿಗೆ. ಹಂಗಾಗಿ ದೇಶದೊಳಗ ಅಂಧಕಾರ ಇರಲಿ, ವೈಚಾರಿಕತೆ ಬ್ಯಾಡ ಅನ್ನೋ ಕ್ಷುದ್ರರು ಇಂಥಾ ಕೃತ್ಯಕ್ಕ ಇಳದಾರ’

`ನೀವು ಹೇಳಿದ್ದು ಖರೆ ಐತಿ ಸ್ವಾಮೀಜಿ. ಚಿಂತಕರ ವಿಚಾರ ಪ್ರಭೆಯನ್ನ ಎದುರಿಸಾಕಾಗದವ್ರು ಗನ್ ಎತ್ತಿಕೊಂಡಿದಾರ. ಮಲ್ಲೇಶಪ್ಪಅವರ ನಂತ್ರ ಇನ್ನೂ ಹಲವಾರು ಪ್ರಗತಿಪರ ಚಿಂತಕರನ್ನ ಹಿಂಗ ಹತ್ಯೆ ಮಾಡಬೇಕು ಅಂತ ಸಂಚು ಐತಿ ಅನ್ನೋ ಮಾಹಿತಿ ತನಿಖೆಯಿಂದ ತಿಳದು ಬಂದೈತಿ. ಅದರೊಳಗ ನಿಮ್ಮ ಹೆಸರೂ ಇರೋದರ ಸುಳಿವು ಸಹಿತ ಸಿಕ್ಕೈತ್ಯಂತ. ಇದಕ್ಕ ನಿಮ್ಮ ಅಭಿಪ್ರಾಯ ಏನು?’

ಸ್ವಾಮೀಜಿ ನಸುನಕ್ಕು, `ಶರಣರು `ಮರಣವೇ ಮಹಾನವಮಿ’ ಅಂತ ಹೇಳ್ಯಾರ. ಬದುಕನ್ನ ಪ್ರೀತಿಸಿ, ಸಾವನ್ನ ಸಂಭ್ರಮಿಸೊ ನನ್ನಂಥ ಫಕೀರ ಸಾವಿಗೆ ಹೆದರತಾನೇನು?. ನನ್ನ ಜೀವ ಇರೋತನಕ ನಾನು ನಂಬಿದ ಸಿದ್ಧಾಂತಗಳಿಗೆ ಬದ್ಧನಾಗಿರತಿನಿ. ಬಡವರು, ದೀನ ದಲಿತರ ಪರ ದನಿ ಎತ್ತತಿನಿ. ಬೂಟಾಟಿಕೆ, ಕಪಟತನ, ಡಂಬಾಚಾರದ ವಿರುದ್ಧ ಹೋರಾಟ ಮಾಡೇ ಮಾಡತಿನಿ. ನಾನು ಕಾವಿ ಹಾಕಿದ್ದು ಮಠದಾಗಿದ್ದು, ಭಕ್ತರಿಂದ ಪಾದ ಸೇವೆ ಮಾಡಿಸಿಕೊಳ್ಳಾಕ ಅಲ್ಲ. ಬಡವರ ಪರ ದುಡಿಯೋದಕ್ಕ ಅನ್ನೋದನ್ನ ಮಾಡಿ ತೋರಸ್ತಿನಿ’ ಎಂದರು.

`ಕಾವಿಗೆ ಇರೋ ನಿಜವಾದ ಶಕ್ತಿ ಏನು ಅನ್ನೋದನ್ನ ನೀವು ತೋರಿಸಿಕೊಟ್ರಿ ಸ್ವಾಮೀಜಿ. ನಮ್ಮ ನಡುವ ನಿವು ಅದೀರಿ ಅನ್ನೋದ ಧೈರ್ಯದ ವಿಷಯ’ ಎಂದು ವೀರೇಂದ್ರ ಹೇಳಿದ.

`ಹೌದು ಸ್ವಾಮೀಜಿ, ನಮ್ಮ ನೈತಿಕ ಹೋರಾಟಕ್ಕ ನೀವ ಶಕ್ತಿ. ನಿಮ್ಮ ಮಾತುಗಳನ್ನ ಕೇಳಿದ ಮ್ಯಾಲೆ ನಮಗ ಆತ್ಮವಿಶ್ವಾಸ ಹೆಚ್ಚಾಗೈತಿ’ ಎಂದರು ಶಿವಪ್ರಕಾಶ.

ಅದಕ್ಕೆ ಸ್ವಾಮೀಜಿ, `ಆಗಲಿ ಆಗಲಿ. ಜೀವ ತಗದು ವಿಚಾರಗಳನ್ನ ಕೊಲ್ಲತಿವಿ ಅನ್ನೋರಿಗೆ, ಅಕ್ಷರದೊಳಗ ವಿಚಾರಗಳು ಜೀವಂತ ಇರತಾವು ಅನ್ನೋದನ್ನ ತೋರಸ್ರಿ ನೀವು. ಹುಟ್ಟಿದವ್ರು ಒಮ್ಮೆ ಸಾಯಲೇ ಬೇಕು ಅನ್ನೋದನ್ನ ತಿಳದು, ಇರೋ ತನಕ ಸತ್ಯದ ಮಾರ್ಗದಾಗ ಬದುಕ್ರಿ. ಸುಳ್ಳು ಎಷ್ಟ ವೈಭವದಿಂದ ಮೆರದ್ರೂ ಕಡೆಗೆ ಗೆಲ್ಲೋದು ಸತ್ಯನ ಅನ್ನೋದು ಗೊತ್ತಿರಲಿ’ ಎಂದರು.

`ಆಗಲಿ ಸ್ವಾಮೀಜಿ, ನಾವಿನ್ನ ಬರ್ತಿವಿ’ ಎಂದರು ಶಿಪ್ರಕಾಶ.

ವೀರೇಂದ್ರ ಕೂಡ `ಬರ್ತಿವಿ ಸ್ವಾಮೀಜಿ’ ಎಂದನು.

`ಒಳ್ಳೆದಾಗಲಿ’ ಎಂದು ಸ್ವಾಮೀಜಿ ಹಾರೈಸಿದರು.
ಶಿಪ್ರಕಾಶ, ವೀರೇಂದ್ರ ಅಲ್ಲಿಂದ ನಿರ್ಗಮಿಸಿದರು.

 

(ಕೃತಿ: ದಾಳಿ (ಕಾದಂಬರಿ), ಲೇಖಕರು: ಕುಮಾರ ಬೇಂದ್ರೆ, ಪ್ರಕಾಶಕರು: ಸಾಗರಿ ಪ್ರಕಾಶನ, ಮೈಸೂರು)